ಬಹಳ ಪ್ರೀತಿಯಿಂದ ಸಾಕಿದ ಕುರಿಯೊಂದನ್ನು ನನಗೆ ಗೊತ್ತಿಲ್ಲದೆ ಹಬ್ಬಕ್ಕೆಂದು ಅಪ್ಪ ಮಾರಿಬಿಟ್ಟಿದ್ದ. ನನಗೆ ವಿಪರೀತ ದುಃಖವಾಗಿ ಒಂದು ದಿನ ಊಟವನ್ನೆ ಬಿಟ್ಟಿದ್ದೆ. ಬರುಬರುತ್ತಾ ಪ್ರಾಣಿಗಳನ್ನು ಸಾಕುವುದನ್ನೆ ಬಿಟ್ಟುಬಿಟ್ಟೆ. ಇವೆಲ್ಲವುಗಳ ನನ್ನೊಳಗೊಂದು ಸಂವೇದನೆಯನ್ನು ಹುಟ್ಟಿಹಾಕಿದವು. ಪ್ರಾಣಿಗಳು ಎಷ್ಟು ಅಲ್ಪಾಯುಗಳು ಅಲ್ಲವೆ? ಇನ್ನೊಬ್ಬರಿಗೆ ಆಹಾರವಾಗಲೊ, ಹರಕೆ ತೀರಿಸಲು ಬದುಕುವ ಈ ಪ್ರಾಣಿಗಳನ್ನು ಕುರಿತು ಬಸವಣ್ಣನವರ ವಚನ ನೆನಪಾಗುತ್ತದೆ; “ಹಬ್ಬಕ್ಕೆ ತಂದ ಹರಕೆಯ ಕುರಿ. ತೋರಣಕ್ಕೆ ತಂದ ತಳಿರ ಮೇಯಿತ್ತು.
ಅದಂದೆ ಹುಟ್ಟಿತ್ತು ಅದಂದೆ ಹೋಯಿತು” ಹಾಗಾಗಿ ಸಾಕುವುದೆ ಬೇಡ ಎಂದು ನಿರ್ಧರಿಸಿದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ

ಬದುಕಿನಲ್ಲಿ ನಡೆದ ಪ್ರಸಂಗಗಳು ಕೀಳರಿಮೆಗೆ ಕಾರಣವಾಗುವಂತೆ ಅವಮಾನದ ಸಂದರ್ಭಗಳು ಇನ್ನಷ್ಟು ನಮ್ಮನ್ನು ಖಿನ್ನತೆಗೆ ಒಂಟಿತನಕ್ಕೆ ದೂಡಿಬಿಡುತ್ತವೆ. ಕೆಲವೊಂದು ಮರೆತು ಬಿಡುತ್ತವೆ. ಕೆಲವೊಂದು ಬದುಕಿನುದ್ದಕ್ಕೂ ಕಾಡುತ್ತಿರುತ್ತವೆ. ಅವು ನಮ್ಮನ್ನು ಇನ್ನಷ್ಟು ಸಂವೇದನೆಗೆ ಕಾರಣವಾಗುತ್ತದೆ. ಇದಕ್ಕೆ ಬಾಲ್ಯದಲ್ಲಿನ ಅನೇಕ ಘಟನೆಗಳು ಮರೆಯದೆ ಮನದಲ್ಲಿ ಉಳಿದು ಬಿಟ್ಟಿರುವುದೆ ಕಾರಣವಾಗಿರುತ್ತದೆ. ಅದಕ್ಕೆ ನಮ್ಮ ಸುತ್ತಮುತ್ತಲಿನ ಅನೇಕರು ಕಾರಣವಾಗಿರುತ್ತಾರೆ. ನಮ್ಮ ಬದುಕಿನ ಸ್ಥಿತಿಯೂ ಕಾರಣವಾಗುತ್ತದೆ. ನಮ್ಮ ಕುಲಕಸುಬುಗಳಂತು ಇನ್ನಷ್ಟು ಕಾರಣವಾಗಿರುತ್ತವೆ. ನಮಗೇಕೆ ಹೀಗೆ ಮೇಲಿಂದ ಮೇಲೆ ಅವಮಾನಗಳು ಸವಾರಿ ಮಾಡುತ್ತವೆ ಎಂದು ಪ್ರಶ್ನಿಸಿಕೊಳ್ಳುವ ಹೊತ್ತಿಗೆ ಬದುಕಿನ ದಾರಿಯಲ್ಲಿ ಬಹುದೂರ ಸಾಗಿಬಿಟ್ಟಿರುತ್ತವೆ. ಅವುಗಳ ಮೆಲುಕುಗಳಲ್ಲಿ ನಮ್ಮ ಬದುಕಿನ ಕನಸಿನ ಬಂಡಿ ಸಾಗಬೇಕು. ಇಂತಹ ಸಂದರ್ಭಗಳು ಬದುಕಿನುದ್ದಕ್ಕೂ ನನ್ನನ್ನು ಕಾಡಿವೆ ಕಾಡುತ್ತಲೂ ಇವೆ.

ಹೇಳಿ ಕೇಳಿ ನಾನು ಸಣಕಲು ದೇಹದವನು. ಇದೆ ಕಾರಣಕ್ಕೆ ಬೇರೆಯವರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಹಾಗಂತ ನನಗೇನು ರೋಗವಿರಲಿಲ್ಲ. ನನ್ನ ದೇಹಪ್ರಕೃತಿಯೆ ಆಗಿತ್ತು. ಎಷ್ಟೊ ಬಾರಿ ಮನೆಯಲ್ಲಿ ನಾನೇಕೆ ಹೀಗೆ ಎಂದು ಕೇಳಿದ್ದಿದೆ. ಅವಾಗಲೆಲ್ಲಾ ಅಮ್ಮ ನೀನು ಹುಟ್ಟಿದಾಗ ಬಹಳ ದಪ್ಪವಿದ್ದೆ ಬೆಳೆಯುತ್ತ ಹೀಗಾಗಿದ್ದೀಯಾ ಎನ್ನುತ್ತಿದ್ದರು. ನನಗೂ ಎಲ್ಲಾ ಆಟಗಳನ್ನು ಆಡಬೇಕೆಂಬ ಮನಸ್ಸು ಆದರೆ ಕಬಡ್ಡಿಯಂತಹ ಆಟಗಳನ್ನು ಆಡಬೇಕಾದರೆ ಶಕ್ತಿ ಬೇಕೆಬೇಕು. ಅವಾಗೆಲ್ಲಾ ನಾನು ಖಿನ್ನನಾಗಿದ್ದುದು ಇದೆ. ಕ್ರಿಕೆಟ್ ಆಡುವಾಗ ನಾನೆಷ್ಟು ಬ್ಯಾಟ್ ಬೀಸಿದರೂ ಬಾಲ್ ಹೋಗುತ್ತಿರಲಿಲ್ಲ. ಇದರಿಂದ ಎಷ್ಟೊ ಬಾರಿ ಅವಮಾನಕ್ಕೆ ಒಳಗಾಗಿದ್ದೇನೆ. ನಿಧಾನವಾಗಿ ಕ್ರಿಕೆಟ್ ಆಡುವುದನ್ನೆ ಬಿಟ್ಟೆ. ನಾನು ಎಲ್ಲರಂತೆ ದೃಢಕಾಯನಾಗಬೇಕೆಂಬ ಆಸೆ ನನ್ನನ್ನು ಬಹಳವಾಗಿ ಕಾಡಿದ್ದಿದೆ. ಆದರೆ ಏನು ತಿಂದರು ದಪ್ಪಗಂತು ಆಗಲೆ ಇಲ್ಲ. ನನ್ನನ್ನು ಕಡ್ಡಿ, ಒಣುಗ್ಲ ಅಂತೆಲ್ಲಾ ಕರೆಯುತ್ತಿದ್ದರು. ಮನುಷ್ಯ ಬದುಕಲಿಕ್ಕೆ ಆರೋಗ್ಯವಂತ ದೇಹಮಾತ್ರ ಮುಖ್ಯ. ಸಣ್ಣಗಿದ್ದರೇನು, ಆತ್ಮವಿಶ್ವಾಸ ಮುಖ್ಯ ಅನಿಸಿದ್ದು ಓದಿನ ಜ್ಞಾನ ಹೆಚ್ಚಾದಾಗಲಷ್ಟೇ.

ಮನೆಯಲ್ಲಿ ಪುಷ್ಕಳ ಊಟವೇನು ಇರಲಿಲ್ಲ. ಹಾಗಾಗಿಯೆ ಇವತ್ತಿಗೂ ಊಟವೆಂದರೆ ಬಯಸಿ ತಿನ್ನುವಂತ ಮನಸ್ಥಿತಿ ನನಗಿಲ್ಲ. ಯಾವುದಿದ್ದರೆ ಅದೆ ಸ್ವಲ್ಪ ತಿಂದರೆ ಸಾಕು. ಇದೇ ಬೇಕು, ಅದೇ ಬೇಕು ಅಂತ ಕೇಳುವುದೆ ಇಲ್ಲ. ಆದರೆ ಬಾಲ್ಯದಲ್ಲಿ ಸಣ್ಣಗಿದ್ದೇನೆ ಎಂಬ ಕಾರಣಕ್ಕೆ ಸುತ್ತಲಿನ ಸಮಾಜ ನನ್ನಲ್ಲೊಂದು ವಿಪರೀತವಾದ ಕೀಳರಿಮೆ ಹುಟ್ಟು ಹಾಕಿದ್ದು ನಿಜ. ಬಹುತೇಕ ಆಟಗಳಲ್ಲಿ ನಾನು ಯಾವಾಗಲೂ ಎಕ್ಸ್ಟ್ರಾ ಪ್ಲೇಯರ್. ಓದುವುದರಲ್ಲಿ ಮುಂದಿದ್ದೆನಾದ್ದರಿಂದ ಆಟಕ್ಕೆ ಇರಲೇಬೇಕಾಗಿತ್ತು. ಆಟವೆಂದರೆ ಬಲು ಇಷ್ಟವೆ ಆದರೂ ನನ್ನಿಂದ ಆಗುತ್ತದೆಯೆ ಎಂಬ ಖಿನ್ನತೆ ನನ್ನನ್ನು ಆವರಿಸಿಬಿಟ್ಟಿತ್ತು. ಒಮ್ಮೆ ಶಾಲೆಯಲ್ಲಿ ಅನೇಕ ಆಟಗಳಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದೆವು. ಅಲ್ಲಿಯೂ ನನ್ನನ್ನು ಎಕ್ಸ್ಟ್ರಾ ಪ್ಲೇಯರನ್ನಾಗಿ ಕರೆದುಕೊಂಡು ಹೋಗಿದ್ದರು. ಎಂಟುನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ನನ್ನ ಹಿರಿಯ ವಿದ್ಯಾರ್ಥಿನಿಯೊಬ್ಬಳು ಭಾಗವಹಿಸಿದ್ದಳು. ನಾಲ್ಕೈದು ರೌಂಡ್‌ನ ರನ್ನಿಂಗ್ ಟ್ರ್ಯಾಕ್ ಅದಾಗಿತ್ತು. ಮೂರು ಸುತ್ತುಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿಯೆ ಮುಂದಿದ್ದಳು. ಎಲ್ಲರೂ ಅವಳಿಗೆ ಉತ್ತೇಜನ ನೀಡುತ್ತಿದ್ದರು. ನಾನು ಅವರಂತೆ ಕೇಕೆ ಹಾಕುತ್ತ ಇನ್ನೊಂದು ಸುತ್ತಿನಲ್ಲಿ ಓಡುತ್ತಿದ್ದವಳಿಗೆ ಎನ್ಕರೇಜ್ ಮಾಡುತ್ತ ಇನ್ನೇನು ಕೊನೆಯ ಗೆರೆ ಅಷ್ಟು ದೂರ ಇದೆ ಎನ್ನಬೇಕಾದರೆ ಕೇಕೆ ಹಾಕುತ್ತ ನನಗೆ ಅರಿವಿಲ್ಲದೆ ಟ್ರ್ಯಾಕ್‌ಗೆ ನುಗ್ಗಿದ್ದೆ. ಯಾರೊ ತಳ್ಳಿದರು ಇನ್ಯಾರೋ ಡಿಕ್ಕಿ ಹೊಡೆದರು. ನಾನು ಟ್ರ್ಯಾಕ್‌ನಲ್ಲಿ ಬಿದ್ದೆ. ಹಾಗಾಗಿ ಓಡುತ್ತಿದ್ದವರು ನನ್ನನ್ನು ದಾಟಿಕೊಂಡು ಓಡಿದರು. ನಾನು ಮೂರುಳ್ಳಾಗಿ ಏಳಲಾರದೆ ಬಿದ್ದು ಉರುಳಾಡುತ್ತಿದ್ದೆ. ನೋಡುತ್ತಿದ್ದವರು ಕೆಲವರು ಕೇಕೆ ಹಾಕಿ ನಗುತ್ತಿದ್ದರು. ನಿನ್ಯಾಕೆ ಹೋಗ್ಬೇಕಾಗಿತ್ತು ಅಂದರು. ನನ್ನ ಮೊಣಕಾಲು ಕೆತ್ತಿಕೊಂಡು ಹೋಗಿತ್ತು. ಅದರ ಬಗ್ಗೆ ಯಾರೆಂದರೆ ಯಾರೂ ವಿಚಾರಿಸಲಿಲ್ಲ. ಅವಮಾನದಿಂದ ನಾನು ವಿಪರೀತ ಕುಗ್ಗಿದ್ದೆ. ಬಲಪ್ರದರ್ಶನದ ಆಟಗಳು ಬಂದಂತೆಲ್ಲಾ ನಾನೆ ಹಿಂಜರಿಯುವುದಕ್ಕೆ ಶುರುಮಾಡಿದೆ. ನಾನಾಯಿತು ನನ್ನ ಓದಾಯಿತು. ಹಾಗಾಗಿ, ಸ್ನೇಹಿತರ ಸಹವಾಸವೂ ಇಲ್ಲದೇ ವಿಪರೀತ ಒಂಟಿತನಕ್ಕೆ ಬಿದ್ದೆ. ನನ್ನನ್ನು ಬಹಳ ವರ್ಷ ಕೀಳರಿಮೆ ಕಾಡಿತು. ಅದು ಬದುಕಿನ ಬೇರೆ ಬೇರೆ ಸಂವೇದನೆಗೆ ದಾರಿಯಾಗಿದ್ದಂತೂ ನಿಜ.

ಸಾಕುಪ್ರಾಣಿಗಳೆಂದರೆ ನನಗೆ ತುಂಬಾ ಇಷ್ಟ. ಬೆಕ್ಕು ನಾಯಿಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದೆ. ನಾನು ಸಾಕಿದ ಬೆಕ್ಕೊಂದು ನನ್ನ ಧ್ವನಿ ಕೇಳಿದರೆ ಸಾಕು ಎಲ್ಲಿದ್ದರೂ ಓಡಿಬರುತ್ತಿತ್ತು. ಅದು ನನಗೆ ಖುಷಿಯು ಹೌದು ಆದರೆ ಇದರಿಂದಾಗಿ ಅಪ್ಪನಿಂದ ವಾರಕ್ಕೊಮ್ಮೆಯಾದರೂ ನನಗೆ ಏಟುಗಳು ಕಟ್ಟಿಟ್ಟ ಬುತ್ತಿ. ನಮ್ಮದು ಒಂದು ಕಿರಾಣಿ ಅಂಗಡಿ ಇತ್ತು. ಅದು ಮರದ ಪೆಟ್ಟಿಗೆಯಾದ್ದರಿಂದ ರಾತ್ರಿಹೊತ್ತು ಆ ಬೆಕ್ಕು ಹೇಗೋ ಅದರೊಳಗೆ ನುಸುಳಿ ಹೋಗಿಬಿಡುತ್ತಿತ್ತು. ಒಂದು ದಿನ ಅಂಗಡಿಯ ಒಳಗೆ ಇಲಿಯೊಂದನ್ನು ತಿಂದು ಅರಗಿಸಿ ಕೊಳ್ಳಲಾರದೆ ಮಂಡಕ್ಕಿ ಚೀಲದೊಳಗೆ ಗಲೀಜು ಮಾಡಿಬಿಟ್ಟಿದೆ. ಬೆಳಿಗ್ಗೆ ಅಂಗಡಿ ಬಾಗಿಲು ತೆಗೆದ ಅಪ್ಪನಿಗೆ ಅದನ್ನು ನೋಡಿ ವಿಪರೀತ ಕೋಪ ಬಂದು ಬೆಕ್ಕನ್ನು ಹೊರಗಡೆ ಎಸೆದೆಬಿಟ್ಟ. ಏನಾಯಿತೆಂದು ನೋಡಲು ಬಂದ ನನ್ನನ್ನು ನೋಡಿ ಇನ್ನಷ್ಟು ಕೋಪ ಹೆಚ್ಚಾಗಿ ಬೆಕ್ಕು ಸಾಕಬೇಡ ಎಂದು ಕೇಳಿದರೂ ಇವನು ಕೇಳುವುದಿಲ್ಲ, ಎಂದು ಒಂದೆ ಸಮನೆ ಸಿಟ್ಟು ಇಳಿಯುವವರೆಗೂ ಹೊಡೆದ. ನಂತರ ಅದನ್ನೆಲ್ಲ ಕ್ಲೀನ್ ಮಾಡಬೇಕೆಂದು ತಾಕೀತು ಮಾಡಿದ. ನಾನು ಅಳುತ್ತಲೆ ಅದನ್ನೆಲ್ಲ ಸ್ವಚ್ಛ ಮಾಡಿದೆ. ಅಪ್ಪನಿಗೆ ಕೋಪ ಬರಲು ಇಡೀ ಮಂಡಕ್ಕಿ ಚೀಲವನ್ನೆ ಬಿಸಾಕಬೇಕಾಯಿತಲ್ಲ ಎಂಬುದಾಗಿತ್ತು. ಇಂತಹ ಏಟುಗಳು ನನ್ನನ್ನು ಇನ್ನಷ್ಟು ಖಿನ್ನನನ್ನಾಗಿ ಮಾಡಿದವು.

ಬಹಳ ಪ್ರೀತಿಯಿಂದ ಸಾಕಿದ ಕುರಿಯೊಂದನ್ನು ನನಗೆ ಗೊತ್ತಿಲ್ಲದೆ ಹಬ್ಬಕ್ಕೆಂದು ಅಪ್ಪ ಮಾರಿಬಿಟ್ಟಿದ್ದ. ನನಗೆ ವಿಪರೀತ ದುಃಖವಾಗಿ ಒಂದು ದಿನ ಊಟವನ್ನೆ ಬಿಟ್ಟಿದ್ದೆ. ಬರುಬರುತ್ತಾ ಪ್ರಾಣಿಗಳನ್ನು ಸಾಕುವುದನ್ನೆ ಬಿಟ್ಟುಬಿಟ್ಟೆ. ಇವೆಲ್ಲವುಗಳ ನನ್ನೊಳಗೊಂದು ಸಂವೇದನೆಯನ್ನು ಹುಟ್ಟಿಹಾಕಿದವು. ಪ್ರಾಣಿಗಳು ಎಷ್ಟು ಅಲ್ಪಾಯುಗಳು ಅಲ್ಲವೆ? ಇನ್ನೊಬ್ಬರಿಗೆ ಆಹಾರವಾಗಲೊ, ಹರಕೆ ತೀರಿಸಲು ಬದುಕುವ ಈ ಪ್ರಾಣಿಗಳನ್ನು ಕುರಿತು ಬಸವಣ್ಣನವರ ವಚನ ನೆನಪಾಗುತ್ತದೆ “ಹಬ್ಬಕ್ಕೆ ತಂದ ಹರಕೆಯ ಕುರಿ. ತೋರಣಕ್ಕೆ ತಂದ ತಳಿರ ಮೇಯಿತ್ತು.
ಅದಂದೆ ಹುಟ್ಟಿತ್ತು ಅದಂದೆ ಹೋಯಿತು” ಹಾಗಾಗಿ ಸಾಕುವುದೆ ಬೇಡ ಎಂದು ನಿರ್ಧರಿಸಿದೆ.

ಪ್ರತಿ ದೀಪಾವಳಿಗೆ ಅಜ್ಜಿಯೊಂದಿಗೆ ಊರಾಡುವುದಕ್ಕೆ ಹೋಗಬೇಕಾಗಿತ್ತು. ಹಿಂದಿನಿಂದಲೂ ತಳವಾರ ವೃತ್ತಿ ಮಾಡಿಕೊಂಡು ಬಂದಿದ್ದರಿಂದ ಹಬ್ಬಕ್ಕೆ ಮೂರುದಿನ ಇರುವಾಗ ಮನೆಮನೆಗೆ ಹೂ ಚೆಲ್ಲುವುದು, ಹಬ್ಬದ ದಿನ ಹೀಡಿಗೆ ಬೆಂಕಿಇಟ್ಟು ದನಗಳ ಪ್ರದಕ್ಷಿಣೆ ಮಾಡಿಸಿ ಪಟಾಕಿ ಸಿಡಿಸಿ ಸಂಭ್ರಮವೆಲ್ಲ ಮುಗಿದ ಮೇಲೆ ನಮ್ಮಜ್ಜಿ ಮನೆಮನೆಗೆ ಹೋಗಿ ಅವರು ಕೊಡುವ ಅಷ್ಟಿಷ್ಟು ದವಸ ಧಾನ್ಯವನ್ನು ಪಡೆದು ಬರುವುದು ಅದಕ್ಕಾಗಿ ಒಂದು ಉದ್ದನೆಯ ಸೋರೆ ಬುರುಡೆ ಸಿದ್ಧವಾಗುತ್ತಿತ್ತು. ಅದರೊಳಗೆ ಉರಿಯುವ ಮಣ್ಣಿನ ದೀಪವನ್ನು ಇಟ್ಟುಕೊಂಡು ಎಲ್ಲಾ ಮನೆಗಳು ಮುಗಿಸಿಕೊಂಡು ದೀಪ ಆರದಂತೆ ಕಾಪಾಡಬೇಕು ಕೊನೆಗೆ ದೇವಸ್ಥಾನದ ಹತ್ತಿರ ಹೋಗಿ ಅದೆ ದೀಪದ ಬತ್ತಿಗಳನ್ನು ಉರಿಸಿ ಬರುವುದು ಇದನ್ನು ಊರಾಡುವುದು ಎನ್ನುತ್ತಾರೆ. ಇದನ್ನು ಅಜ್ಜಿ ಇರುವವರೆಗೂ ಆಚರಿಸಿಕೊಂಡು ಬಂದಳು. ಅಪ್ಪ ಇದಕ್ಕೆಲ್ಲ ಕೋಪಗೊಳ್ಳುತ್ತಿದ್ದ. ನಮಗೂ ದುಡಿದು ತಿನ್ನುವಷ್ಟು ಶಕ್ತಿಕೊಟ್ಟಿದ್ದಾನೆ. ಇದನ್ನೆಲ್ಲ ಮಾಡಬೇಡ ಎನ್ನುತ್ತಿದ್ದರು. ಆದರೆ ಅಜ್ಜಿ ಅದಕ್ಕೆಲ್ಲ ಸೊಪ್ಪು ಹಾಕದೇ “ನಾನಿರುವವರೆಗೂ ಇದನ್ನು ಮಾಡಿಕೊಂಡು ಹೋಗ್ತೇನೆ” ಅನ್ನುತ್ತಿದ್ದಳು. “ಹಾಗಿದ್ದರೆ, ಹುಡುಗರನ್ನು ನಿನ್ನನೊಟ್ಟಿಗೆ ಕರೆದುಕೊಂಡು ಹೋಗುವಂತಿಲ್ಲ” ಎಂದು ಅಪ್ಪ ತಾಕೀತು ಮಾಡಿದ್ದ. ಹಾಗಾಗಿ ಅಜ್ಜಿಯೊಟ್ಟಿಗೆ ಹಾಗೆ ಒಂದೆರಡು ಬಾರಿ ನಾನು ಹೋಗಿದ್ದ ನೆನಪು ಇದೆ.

ನಾನು ಸೋರೆ ಬುರುಡೆ ಹಿಡಿದುಕೊಳ್ಳುತ್ತಿದ್ದೆ. ಚಿಕ್ಕ ಮಕ್ಕಳು ನಮ್ಮ ಜೊತೆಗೆ ಬರುತ್ತಿದ್ದರು. ನಮ್ಮ ಓರಗೆಯ ಸ್ನೇಹಿತರ ಮನೆಗಳಿಗೆ ಹೋದಾಗೆಲ್ಲಾ ನನಗೆ ಅವಮಾನವಾದಂತಾಗುತ್ತಿತ್ತು. ಕ್ರಮೇಣ ನಾನು ಬಿಟ್ಟುಬಿಟ್ಟೆ. ಅಪ್ಪ ಗಲಾಟೆ ಮಾಡಿ ಅಜ್ಜಿ ಹೋಗುವುದನ್ನೂ ನಿಲ್ಲಿಸಿದ. ಸಂಪ್ರದಾಯ ಅನ್ನೊ ಕಾರಣಕ್ಕೆ ದೇವಸ್ಥಾನಕ್ಕೆ ಇನ್ನೊಂದೆರಡು ಮುಖ್ಯ ಸ್ಥಳಗಳಿಗೆ ಹೂ ಚೆಲ್ಲುತ್ತಿದ್ದರು. ಕ್ರಮೇಣ ಅದೂ ನಿಂತು ಹೋಯಿತು. ಈಗಲೂ ನೆನಸಿಕೊಂಡರೆ ಇಷ್ಟೆಲ್ಲ ಘಟನೆಗಳು ಎಷ್ಟೊಂದು ಕೀಳರಿಮೆಯನ್ನು ಅವಮಾನವುಂಟು ಮಾಡಿದವಲ್ಲ ಎನಿಸಿದರೂ ನನ್ನೊಳಗೊಂದು ಸಂವೇದನೆಯನ್ನು ಹುಟ್ಟು ಹಾಕಿ ನಿಜ ಮನುಷ್ಯನಾಗಲು ಕಾರಣವಾದವಲ್ಲ.. ಬದುಕಿಗಿನ್ನೇನು ಬೇಕು. ಇಷ್ಟು ಸಾಕಲ್ಲವೇ…

(ಮುಂದುವರಿಯುವುದು)