ಆಗ ಶಾಲೆಗೆ ಬರುತ್ತಿದ್ದ ಹೆಣ್ಣು ಮಕ್ಕಳ ಸಂಖ್ಯೆ ಹುಡುಗರ ಅರ್ಧದಷ್ಟಿರುತ್ತಿತ್ತು. ಹಾಗಾಗಿ ಕೆಲವು ಗಂಡು ಮಕ್ಕಳು ಹೆಣ್ಣು ಮಕ್ಕಳು ಕೂತ ಭಾಗದಲ್ಲಿನ ಕೊನೆಯ ಬೆಂಚ್‌ಗಳಲ್ಲಿ ಕೂರಬೇಕಿತ್ತು. ಅವರ ಪೆನ್ನಿನಲ್ಲಿ ಇಂಕ್ ಖಾಲಿಯಾದಾಗ, ಒಬ್ಬಳು ಇನ್ನೊಬ್ಬಳಿಂದ ಸಾಲ ಪಡೆಯುತ್ತಿದ್ದಳು. ಅದು ಹೇಗೆಂದರೆ, ಪೆನ್ನಿನ ಮೇಲ್ ಭಾಗದ ತಿರುಪು ತಿರುಗಿಸಿಕೊಂಡು, ಕೆಳಮುಖವಾಗಿ ಇಟ್ಟುಕೊಂಡು ಪುನಃ ತಿರುಪು ಟೈಟ್ ಮಾಡುವಾಗ ಒಂದೊಂದೇ ತೊಟ್ಟು ಇಂಕ್ ಕೆಳಗೆ ಬೀಳುತ್ತಿತ್ತು, ಅದನ್ನು ಇಂಕ್ ಬೇಕಾದವರು ತಮ್ಮ ಪೆನ್ನನ್ನು ಸಿದ್ಧವಾಗಿಟ್ಟುಕೊಂಡು ನಾಜೂಕಾಗಿ ಒಳಗೆ ಬೀಳುವಹಾಗೆ ಮಾಡಿಕೊಂಡು, ಎಷ್ಟು ತೊಟ್ಟು ಬಿತ್ತು ಗಮನಿಸಿ, ಪುನಃ ಸಾಲ ವಾಪಸ್ ಮಾಡಬೇಕು.
ಹಳೆಯ ಕಾಲದ ಇಂಕ್‌ ಪೆನ್ನುಗಳ ಕುರಿತು ವಸಂತಕುಮಾರ್‌ ಕಲ್ಯಾಣಿ ಬರಹ

ಮುಳ್ಳು, ನಾಲಿಗೆ… ಇವು ನಾನ್ ವೆಜ್ ಪದಗಳಲ್ಲ. ಇಂಕು ತುಂಬಿಸುವ ಪೆನ್ನಿಗೆ ಸಂಬಂಧಿಸಿದುದು. ಅದು ಈಗಿನ ಸಾಫ್ಟ್‌ವೇರ್ ಹಾರ್ಡ್‌ವೇರ್‌ಗಳ ಕಲ್ಪನೆಯೂ ಇಲ್ಲದ ಪಟ್ಟಾಪಟ್ಟಿ ಅಂಡರ್‌ವೇರ್‌ಗಳ ಕಾಲ ನಮ್ಮ ಕ್ಲಾಸಿನಲ್ಲಿ – ಬಹುಶಃ ಐದನೆಯದೊ ಆರನೆಯದೋ ಕ್ಲಾಸ್‌ನಲ್ಲಿ ನೀಲಕಂಠ ಎಂಬ ಹುಡುಗನಿದ್ದ. ಯಾವಾಗ ನೋಡಿದರೂ ಅವನ ಬಾಯಿ, ತುಟಿ, ಮೂಗು ನೀಲಿಯಾಗಿರುತ್ತಿತ್ತು. ಅವನೊಂಥರಾ ಪೆನ್ ಮ್ಯೆಕಾನಿಕ್. ಪೆನ್ನಿನ ಮುಳ್ಳು, ನಾಲಗೆಯನ್ನು ಹಲ್ಲಿನಲ್ಲೇ ಕಚ್ಚಿ ಎಳೆದು, ನಂತರ ಮುಂದಿನ ಭಾಗವನ್ನ ಪುನಃ ಕಚ್ಚಿ ತಿರುಪು ಸಡಿಲ ಮಾಡಿ ಬೇರೆ ಮಾಡುತ್ತಿದ್ದ. ನೀರಿನಲ್ಲಿ ತೊಳೆದು ಚಿಂದಿ ಬಟ್ಟೆಯಲ್ಲಿ ಒರೆಸಿ, ಪುನಃ ರಿ ಅಸೆಂಬಲ್ ಮಾಡುತ್ತಿದ್ದ. ಪೆನ್ನಿನ ಮುಳ್ಳಿನ ತುದಿಯಲ್ಲಿ ಹಾವಿನ ನಾಲಿಗೆಯ ಹಾಗೆ ಎರಡು ಭಾಗ ಒಟ್ಟಿಗೆ ಸೇರಿರುತ್ತಿತ್ತು. ಮದ್ಯೆ ಬ್ಲೇಡ್ ತೂರಿಸಿ ಅಗಲ ಮಾಡಿಕೊಂಡರೆ ಅಕ್ಷರ ದಪ್ಪವಾಗುತ್ತಿತ್ತು.

ಹೆಚ್ಚು ದಪ್ಪ ಎನಿಸಿದರೆ ಸರಿ ಮಾಡಲು ಹೋಗಿ ಒಂದು ಕಾಲ ಮೇಲೆ ಇನ್ನೊಂದು ಹಾಕಿದ ಹಾಗೆ ಆಗಿಬಿಡುತ್ತಿತ್ತು. ಇನ್ನಷ್ಟು ಬಲಪ್ರಯೋಗ ನಡೆಸಿದರೆ ಎರಡು ನಾಲಿಗೆಯ ಹಾವು ಒಂದು ನಾಲಿಗೆಯದಾಗಿ ಸಪೂರ ಬರೆಯುತ್ತಿತ್ತು. ಈ ಮುಳ್ಳನ್ನು (nib) ಕೂರಿಸಲು ಹಾಗೂ ಇಂಕ್ ಸರಾಗವಾಗಿ ಹರಿಯಲು ನಾಲಿಗೆ -(tongue) ಸಹಕಾರ ಬೇಕೇ ಬೇಕಿತ್ತು. ನೀಲಕಂಠನ ನೆನಪಾದೊಡನೆ, ಅವನ ಮನೆಯವರು ನಡೆಸುತ್ತಿದ್ದ ‘ಅಕ್ಕನ ಬಳಗ’ ಎನ್ನುವ ಶಿಶುವಿಹಾರವೂ, ಜೊತೆ ಜೊತೆಗೆ ನಮ್ಮ ಕ್ಲಾಸಿನಲ್ಲಿ ಎರಡು-ಮೂರು ವರ್ಷ ಝಾಂಡ ಹಾಕಿಕೊಂಡು ಮೀಸೆ ಬಲಿತ ಪುಂಡರು” ಏನೋ ನೀಲಕಂಠ ನಿನ್ ಅಕ್ಕನ್ ಬಳಗ ಹೆಂಗೈತೋ” ಅಂತ ಕಿಚಾಯಿಸಿತ್ತಿದ್ದುದು ನೆನಪಿಗೆ ಬರುತ್ತದೆ. ನಮ್ಮ ಬಳಿ ಇರುತ್ತಿದ್ದ ಕಡಿಮೆ ಬೆಲೆಯ ಪೆನ್ನುಗಳು ನಮ್ಮ ರಫ್ ಹ್ಯಾಂಡಲಿಂಗ್‌ಗೆ ಗುರಿಯಾಗಿ ಅದರ ಬಾಡಿಯಲ್ಲಿ ಸಣ್ಣಪುಟ್ಟ ಬಿರುಕು ಕಂಡು ಲೀಕ್ ಆಗುತ್ತಿದ್ದವು. ನಮ್ಮ ಶಾಲೆಯ ಮೈದಾನದ ಇನ್ನೊಂದು ತುದಿಯಲ್ಲಿ ರೈಲ್ವೆ ಸ್ಟೇಷನ್ ಇದ್ದುದರಿಂದ ಅಲ್ಲದೆ ಅದು ಜಂಕ್ಷನ್ ಕೂಡ ಆಗಿದ್ದುದರಿಂದ, ಒಂದಲ್ಲ ಒಂದು ರೈಲುಗಳೋ, ಗೂಡ್ಸ್ ಗಾಡಿಗಳೋ ಇರುತ್ತಿದ್ದವು. ಸಾಮಾನ್ಯವಾಗಿ ಅವುಗಳ ಇಂಜಿನ್ ಡ್ರೈವರ್‌ಗಳು, ಅವರ ಸಹಾಯಕರು ತಮಿಳರೇ ಆಗಿರುತ್ತಿದ್ದರು. ತಮಿಳು ಮಾತೃಭಾಷೆಯ ಹುಡುಗರು ಅವರನ್ನು ಪುಸಲಾಯಿಸಿ ಸ್ವಲ್ಪ ಗ್ರೀಸ್ ಪಡೆದು ನಮಗೂ ಕೊಡುತ್ತಿದ್ದರು. ಅದನ್ನು ತೆಳುವಾಗಿ ಬೆನ್ನಿನ ಸುತ್ತ ಬಳಿದರೆ ಲೀಕ್ ನಿಲ್ಲುತ್ತದೆಂಬ ಭ್ರಮೆ ನಮ್ಮದಾಗಿತ್ತು. ಕೆಲವು ಸಲ ಇದು ಸಾಧ್ಯವೂ ಆಗಿತ್ತು.

ಇನ್ನೇನು ಬರೆಯಲು ಸಾಧ್ಯವೇ ಇಲ್ಲ ಎನಿಸಿದಾಗ, ಸ್ಪೇರ್ ಸಿಗುವ ಸೂಕ್ತ ಮುಳ್ಳನ್ನು ತಂದು ಕೋರಿಸಬೇಕಾಗಿತ್ತು. ದಪ್ಪ ಪೆನ್ನಿಗೆ ದಪ್ಪ ಮುಳ್ಳು, ಸಪೂರ ಪೆನ್ನಿಗೆ ಸಪೂರ ಮುಳ್ಳು. ಅವುಗಳಿಗೆ ಬೇರೆಬೇರೆಯ ನಂಬರ್ ಹೀಗೆ. ಏಕೆಂದರೆ ವಿಲ್ಸನ್, ಪ್ರೆಸಿಡೆಂಟ್ ಮುಂತಾದ ಪೆನ್ನುಗಳು ಡುಮ್ಮಕ್ಕೆ ಇರುತ್ತಿದ್ದವು. ಆ ಕಾಲಕ್ಕೆ ಅದು ನಮಗೇ ತುಸು ದುಬಾರಿ ಎನಿಸಿದರೆ, ‘ಹೀರೋ’ ಇಟ್ಟುಕೊಂಡವರು ಅತಿ ಶ್ರೀಮಂತರು, ಅದರಲ್ಲೂ ಅದು ವಿದೇಶದಿಂದ ಬಂದದ್ದು ಎಂಬ ಭಾವನೆ ಇತ್ತು. ಅದೇ ಸಂದರ್ಭದಲ್ಲಿದ್ದ ಸ್ವಾನ್ ಕಂಪನಿಯವರು ತಯಾರಿಸುತ್ತಿದ್ದ ಸ್ವಾನ್ ‘swan’ ಪೆನ್ನುಗಳು ಹೆಚ್ಚು ಬಳಕೆಯಲ್ಲಿ ಬಂದವು. ಆ ಪೆನ್ನುಗಳಲ್ಲಿ ಕಾವ್ಯ, ಕವನ ರಚಿಸಿ ಖ್ಯಾತರಾಗಿ ಕೊನೆಗೆ ಅದನ್ನೇ ತಮ್ಮ ಕಾವ್ಯನಾಮವನ್ನಾಗಿ ಮಾಡಿಕೊಂಡು, ಸಂಭಾಷಣೆ, ಗೀತರಚನೆ ಹಾಗೂ ಸಂಗೀತ ನೀಡಿ ಖ್ಯಾತರಾದ ಹಂಸಲೇಖ ನಮ್ಮ ಕಣ್ಣ ಮುಂದೆ ಇದ್ದಾರೆ.

ಇದು ಪಡ್ಡೆ ಹುಡುಗರ ಕಥೆಯಾದರೆ, ಇನ್ನು ಹೆಣ್ಣು ಮಕ್ಕಳ ನಡುವಿನ ‘ಯವಾರ’ ಬೇರೆ ತರಹ ಇತ್ತು. ಹೌದು ನಮ್ಮದು ‘ಕಂಬೈನ್ಡ್’ ಸ್ಕೂಲ್. ಹೆಣ್ಣು ಮಕ್ಕಳೂ ಇದ್ದರು. ಕ್ಲಾಸ್ ರೂಮ್‌ನಲ್ಲಿ, ಮಧ್ಯದಲ್ಲಿ ಓಡಾಡಲು ಜಾಗಬಿಟ್ಟು ಎರಡೂ ಬದಿ ಸಾಲಾಗಿ ಬೆಂಚ್‌ಗಳು. ಡೆಸ್ಕ್ ನಾವು ನೋಡಿದ್ದೇ ಹೈಸ್ಕೂಲ್‌ಗೆ ಹೋದಮೇಲೆ. (ಒಂದರಿಂದ ನಾಲ್ಕರವರೆಗೆ ಮಣೆಯ ಮೇಲೆ, ಐದರಿಂದ ಏಳರವರೆಗೆ ಬೆಂಚ್) ಒಂದು ಬದಿ ಗಂಡುಮಕ್ಕಳು, ಇನ್ನೊಂದು ಬದಿ ಹೆಣ್ಣು ಮಕ್ಕಳು. ಸಹಜವಾಗಿಯೇ ಶಾಲೆಗೆ ಬರುತ್ತಿದ್ದ ಹೆಣ್ಣು ಮಕ್ಕಳ ಸಂಖ್ಯೆ ಹುಡುಗರ ಅರ್ಧದಷ್ಟಿರುತ್ತಿತ್ತು. ಹಾಗಾಗಿ ಕೆಲವು ಗಂಡು ಮಕ್ಕಳು ಹೆಣ್ಣು ಮಕ್ಕಳು ಕೂತ ಭಾಗದಲ್ಲಿನ ಕೊನೆಯ ಬೆಂಚ್‌ಗಳಲ್ಲಿ ಕೂರಬೇಕಿತ್ತು. ಆಗ ಗಮನಿಸಿದ್ದೇ ಈ ‘ಯವಾರ’. ಪೆನ್ನಿನಲ್ಲಿ ಇಂಕ್ ಖಾಲಿಯಾದಾಗ, ಒಬ್ಬಳು ಇನ್ನೊಬ್ಬಳಿಂದ ಸಾಲ ಪಡೆಯುತ್ತಿದ್ದಳು. ಅದು ಹೇಗೆಂದರೆ, ಪೆನ್ನಿನ ಮೇಲ್ ಭಾಗದ ತಿರುಪು ತಿರುಗಿಸಿಕೊಂಡು, ಕೆಳಮುಖವಾಗಿ ಇಟ್ಟುಕೊಂಡು ಪುನಃ ತಿರುಪು ಟೈಟ್ ಮಾಡುವಾಗ ಒಂದೊಂದೇ ತೊಟ್ಟು ಇಂಕ್ ಕೆಳಗೆ ಬೀಳುತ್ತಿತ್ತು, ಅದನ್ನು ಇಂಕ್ ಬೇಕಾದವರು ತಮ್ಮ ಪೆನ್ನನ್ನು ಸಿದ್ಧವಾಗಿಟ್ಟುಕೊಂಡು ನಾಜೂಕಾಗಿ ಒಳಗೆ ಬೀಳುವಹಾಗೆ ಮಾಡಿಕೊಂಡು, ಎಷ್ಟು ತೊಟ್ಟು ಬಿತ್ತು ಗಮನಿಸಿ, ಪುನಃ ಸಾಲ ವಾಪಸ್ ಮಾಡಬೇಕು.

ನಮ್ಮಂತಹ ಸಾಮಾನ್ಯರು, ಐದು ಪೈಸೆ ಕೊಟ್ಟು ‘ಕಾಕಾ’ ಅಂಗಡಿಯಲ್ಲಿ ಇಂಕ್ ತುಂಬಿಸಿಕೊಂಡರೆ, ಹಣವಿದ್ದವರ ಮನೆಯಲ್ಲಿ ‘ಶಾಂತಿ’ ಇಂಕ್ ಬಾಟಲ್ ಇರುತ್ತಿತ್ತು. ನಂತರ ಬಂದ ‘ಬ್ರಿಲ್’ ಇಂಕ್ ಆಮೇಲೆ ಖ್ಯಾತಿ ಪಡೆಯಿತು. ಅಲ್ಲದೇ ಹೀರೋ ಮುಂತಾದ ಪೆನ್‌ಗಳ ಒಳಗೆ ಇಂಕು ತುಂಬಿಸಿಕೊಳ್ಳುವ ರಬ್ಬರ್ ಟ್ಯೂಬ್‌ಗಳು ಸ್ಥಾನ ಪಡೆದವು.

ಮುಂದೆ ಬಾಲ್ ಪೆನ್‌ಗಳಲ್ಲಿ ಬರೆಯುವಾಗ, ಈಗಂತೂ ಮೊಬೈಲ್, ಲ್ಯಾಪ್ ಟಾಪ್‌ಗಳಲ್ಲಿ ಟೈಪಿಸುವಾಗ ಮುಳ್ಳು ನಾಲಿಗೆಯ ನೆನಪಾಯಿತು.