ಹ್ಯಾಂಗಿಂಗ್ ಒವರ್‌ಲುಕ್ ತಲುಪಲು ಕೆಲವೇ ಹೆಜ್ಜೆಗಳು ಬಾಕಿಯಿದ್ದವು. ಅದನ್ನು ತಲುಪುವವರೆಗೂ ಆಕೆ ‘ನಾವು ಒಬ್ಬರಿಗೊಬ್ಬರು ತಳುಕು ಹಾಕಿಕೊಂಡಿದ್ದೇವೆ’ ಎಂದು ಮತ್ತೆ ಮತ್ತೆ ತನಗೊಬ್ಬಳಿಗೇ ಕೇಳಿಸುವಂತೆ ಹೇಳಿಕೊಂಡಳು. ಜಾನ್ ಬೋಡಮ್ಯಾನ್ ಶಿಥಿಲವಾಗಿದ್ದ ಆ ಗೋಡೆಯ ಮೇಲೆ ಕುಳಿತ. ಕೈಯ್ಯಲ್ಲಿದ್ದ ಕೋಲನ್ನು ಬಂಡೆಯ ಮೇಲಿಟ್ಟು ಆಕೆ ಅತ್ತಿಂದಿತ್ತ ಓಡಾಡಿದಳು. ಅವಳ ಹೆಜ್ಜೆಗಳಲ್ಲಿ ಭಯ ಇಣುಕುತ್ತಿತ್ತು. ಕೈಗಳು ಒಂದಕ್ಕೊಂದು ಗಟ್ಟಿಯಾಗಿ ಬೆಸೆದುಕೊಂಡಿದ್ದವು. ಆ ಭಯಾನಕ ಕ್ಷಣ ಹತ್ತಿರವಾದಂತೆಯೇ ಆಕೆಯ ಗಂಡ ಜೋರಾಗಿ ಉಸಿರೆಳೆದುಕೊಂಡ.
ಸಂಜೋತಾ ಪುರೋಹಿತ್ ಅನುವಾದಿಸಿದ ಸ್ಕಾಟಿಶ್‌- ಕೆನಡಿಯನ್‌ ಕತೆಗಾರ ರಾಬರ್ಟ್‌ ಬಾರ್ರ್ ಕತೆ “ಒಂದು ಆಲ್ಪೈನ್‌ ವಿಚ್ಛೇದನ” ನಿಮ್ಮ ಓದಿಗೆ

ಕೆಲವರ ವ್ಯಕ್ತಿತ್ವವೇ ಹಾಗೆ.. ಅವರ ನಡವಳಿಕೆ, ಭಾವನೆಗಳು, ಗುಣ ಸ್ವಭಾವ ಯಾವುದರಲ್ಲೂ ಮುಸುಕಿನ ಛಾಯೆಯಿಲ್ಲ. ಹೇಳಬೇಕೆಂದ ವಿಷಯಗಳಿಗೆ ಬಣ್ಣ ತಾಗಿಸದೇ ಹೇಳುವ ಕಪ್ಪು ಬಿಳುಪಿನಂತಹ ಪರಿಶುದ್ಧವಾದ, ನೇರವಾದ ಮಾತುಗಳು. ಜಾನ್ ಬೋಡಮ್ಯಾನ್ ಈ ಗುಂಪಿಗೆ ಸೇರಿದ ವ್ಯಕ್ತಿ. ಮಧ್ಯದಲ್ಲಿ ಓಲಾಡದೇ ತನ್ನ ನಿರ್ಧಾರಕ್ಕೆ ಬದ್ಧನಾಗಿ ಅದರಂತೆ ನಡೆದುಕೊಳ್ಳುವ ಮನುಷ್ಯ. ಒಂದು ವೇಳೆ ಅವನು ಥೇಟ್ ತನ್ನಂತಹ ಸ್ವಭಾವ ಹೊಂದಿದ ಹೆಂಗಸಿನ ಜೊತೆಗೆ ಮದುವೆಯಾಗದೇ ಹೋಗಿದ್ದರೆ ಅವನ ಈ ವ್ಯಕ್ತಿತ್ವದ ಪರಿಣಾಮ ಅಷ್ಟಾಗಿ ಬಾಧಿಸುತ್ತಿರಲಿಲ್ಲವೇನೋ…

ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ಗಂಡಸಿಗೆ ಎಲ್ಲ ರೀತಿಯಿಂದಲೂ ಒಪ್ಪುವ, ಪರಿಪೂರ್ಣವಾದ ಹೆಂಗಸು ಇರಬಹುದಾದ ಎಲ್ಲಾ ಸಾಧ್ಯತೆಗಳು ಇವೆ. ಆದರೆ ಕೋಟ್ಯಾಂತರ ಜನರು ಜೀವಿಸುತ್ತಿರುವ ಈ ಜಗತ್ತಿನಲ್ಲಿ ಆತನಿಗೆ ಪರಿಚಯವಿರುವ ಕೆಲವೇ ಕೆಲವು ಹೆಂಗಸರನ್ನು ಅಳೆದು ತೂಗಿ ನೋಡಿದರೆ ಅವನಿಗೆ ಮನಸ್ಸಾಗುವುದು ಹೆಚ್ಚೆಂದರೆ ಒಬ್ಬಳು ಅಥವಾ ಇಬ್ಬರ ಮೇಲೆ ಮಾತ್ರ. ಈ ಸಾಧ್ಯತೆ ಬಾಧ್ಯತೆಗಳನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಭೂಮಿ ಸೃಷ್ಟಿಯಾದ ಕಾಲದಿಂದಲೂ ಗಂಡಸೊಬ್ಬ ಪರಿಪೂರ್ಣವಾದ ಸಂಗಾತಿಯನ್ನು ಭೇಟಿಯಾಗಿದ್ದು ಇಲ್ಲಿಯವರೆಗೆ ನಡೆದೇ ಇಲ್ಲವೆನೋ.. ಆದ್ದರಿಂದಲೇ ನಮ್ಮಲ್ಲಿ ವಿಚ್ಛೇದನದ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಇದಕ್ಕಾಗಿಯೇ ಪ್ರತ್ಯೇಕ ನ್ಯಾಯಾಲಯಗಳಿವೆ. ಮದುವೆಯೆಂಬುದು ಯಶಸ್ವಿಯಾಗಬೇಕೆಂದರೆ ಗಂಡ ಹೆಂಡತಿಯ ಮಧ್ಯೆ ಹೊಂದಾಣಿಕೆಗಳು ಇರಲೇಬೇಕು. ಹಾಗೆ ಹೊಂದಾಣಿಕೆಯಾಗದೇ ಇದ್ದಲ್ಲಿ ಸಮಸ್ಯೆ ಶುರುವಾಗುತ್ತದೆ. ಯುವಕ ಯುವತಿ ಭಾವನಾತ್ಮಕವಾಗಿ ಒಟ್ಟುಗೂಡಿದಾಗ ಅವರಿಬ್ಬರ ಮಧ್ಯದಲ್ಲಿ ಎರಡೇ ಎರಡು ಸಾಧ್ಯತೆಗಳು ಹುಟ್ಟಿಕೊಳ್ಳಲಿಕ್ಕೆ ಸಾಧ್ಯ. ಒಂದು ಗಾಢ ಪ್ರೀತಿ. ಇನ್ನೊಂದು ಅಖಂಡ ದ್ವೇಷ.

ಮದುವೆಯಿಂದ ಒಟ್ಟುಗೂಡಿದ್ದ ಬೋಡಮ್ಯಾನ್ ದಂಪತಿಗಳ ಮಧ್ಯದಲ್ಲಿ ದ್ವೇಷವೇ ಹುಟ್ಟಿ ದಿನಗಳುರುಳಿದಂತೆ ಕಹಿ ಹೆಚ್ಚಾಗುತ್ತಲೇ ಹೋಯಿತು.

ಜಗತ್ತಿನ ಕೆಲವು ಕಡೆಗಳಲ್ಲಿ ಗಂಡ ಹೆಂಡತಿಯ ಮಧ್ಯೆ ಸಾಮರಸ್ಯದ ಕೊರತೆಯಿದ್ದಲ್ಲಿ ಅದು ವಿಚ್ಛೇದನಕ್ಕೆ ಪ್ರಬಲವಾದ ಕಾರಣ ಎಂದು ನ್ಯಾಯಾಲಯವು ಪರಿಗಣಿಸುತ್ತದೆ. ಆದರೆ ಇಂಗ್ಲೆಂಡಿನ ನ್ಯಾಯಾಲಯಗಳಲ್ಲಿ ಮಾತ್ರ ಅಂತಹ ಸೂಕ್ಷ್ಮವನ್ನು ಪರಿಗಣಿಸುವುದಿಲ್ಲ. ಇಲ್ಲಿ ವಿಚ್ಛೇದನ ಪಡೆಯಬೇಕೆಂದರೆ ಗಂಡನೋ ಅಥವಾ ಹೆಂಡತಿಯೋ ಅಪರಾಧಿಯಾಗಿರಬೇಕು. ಅಥವಾ ಗಂಡ ಕ್ರೂರಿಯಾಗಿರಬೇಕು. ಆಗ ಮಾತ್ರ ಅವರನ್ನು ಬೇರ್ಪಡಿಸಲಿಕ್ಕೆ ಸಾಧ್ಯ. ಇಲ್ಲದೇ ಹೋದಲ್ಲಿ ಸಾವು ಅವರನ್ನು ಬೇರ್ಪಡಿಸುವವರೆಗೂ ಜೊತೆಯಲ್ಲಿ ಬದುಕುವ ಅನಿವಾರ್ಯತೆಯನ್ನು ವ್ಯವಸ್ಥೆ ಸೃಷ್ಟಿಸುತ್ತದೆ. ಬೋಡಮ್ಯಾನ್ ದಂಪತಿಗಳ ಜೀವನ ಅಸಹನೀಯವಾಗಿತ್ತು ಎಂಬುದೇ ಪರಿಸ್ಥಿತಿಯನ್ನು ಹದಗೆಡಿಸುತ್ತ ಹೋಯಿತು. ಯಾಕೆಂದರೆ ಪ್ರತ್ಯೇಕವಾಗಿ ನೋಡಿದರೆ ಮಿಸ್ಸೆಸ್ ಬೋಡಮ್ಯಾನ್ ಲೋಕವು ದೂರುವಂತಹ ಕೆಲಸವನ್ನೇನೂ ಮಾಡಿರಲಿಲ್ಲ. ಜಾನ್ ಬೋಡಮ್ಯಾನ್ ಸಹ ಕೆಟ್ಟ ಮನುಷ್ಯನೇನಲ್ಲ. ಬೇರೆ ಎಲ್ಲ ಗಂಡಸರಿಗೆ ಹೋಲಿಸಿದರೆ ಒಳ್ಳೆಯ ವ್ಯಕ್ತಿಯೇ. ಆದರೆ ಈಗ ಅವನ ಮನಸ್ಥಿತಿ ಬದಲಾಗಿದೆ. ಹೆಂಡತಿಯಿಂದ ಬಿಡುಗಡೆ ಹೊಂದಲೇಬೇಕೆಂದು ಅವನು ತೀರ್ಮಾನಿಸಿ ಬಿಟ್ಟಿದ್ದಾನೆ! ಒಂದು ವೇಳೆ ಜಾನ್ ಬೋಡಮ್ಯಾನ್ ಬಡವನಾಗಿದ್ದರೆ, ಅವನು ತನ್ನ ಹೆಂಡತಿಯನ್ನು ತ್ಯಜಿಸಿ ಹೊರಟು ಬಿಡಬಹುದಿತ್ತು. ಅತೃಪ್ತಿಯ ಜೀವನವನ್ನು ಕೊನೆಗೊಳಿಸಬಹುದಿತ್ತು. ಆದರೆ ಅವನ ಶ್ರೀಮಂತಿಕೆ ಮತ್ತು ಮತ್ತು ಯಶಸ್ವಿ ವ್ಯಾಪಾರ ಅವನನ್ನು ಕಟ್ಟಿ ಹಾಕಿತ್ತು. ತನ್ನ ವೈಯಕ್ತಿಕ ಜೀವನಕ್ಕಿಂತ ತನ್ನ ಆರ್ಥಿಕ ಸಮೃದ್ಧಿ ಅವಶ್ಯಕವಾಗಿತ್ತು. ಅದೇ ಆದ್ಯತೆಯಾಗಿತ್ತು. ಇದರಿಂದಾಗಿಯೇ ಎಷ್ಟೇ ಅತೃಪ್ತಿ ಇದ್ದರೂ ತನ್ನ ಹೆಂಡತಿಯನ್ನು ಸುಲಭವಾಗಿ ಬಿಡಲು ಜಾನ್ ಬೋಡಮ್ಯಾನ್‌ಗೆ ಸಾಧ್ಯವಿರಲಿಲ್ಲ.

ಮನುಷ್ಯನ ಮನಸ್ಸು ಒಂದು ವಿಷಯದಲ್ಲಿ ಅತಿಯಾಗಿ ವ್ಯಸ್ತವಾದಾಗ ಅವನು ಅದರೊಳಗೆ ಎಷ್ಟು ಆಳದವರೆಗೆ ಇಳಿಯಲು ಸಾಧ್ಯ ಎಂಬುದನ್ನು ಲೆಕ್ಕ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆ ಇತರ ಎಲ್ಲ ಆದ್ಯತೆಗಳನ್ನು ಬದಿಗಿಟ್ಟು ಅದರೊಳಗೇ ಮುಳುಗಿದಾಗ ಮನಸ್ಸಿನ ಮೇಲೆ ಪರಿಣಾಮವಾಗುತ್ತ ಹೋಗುತ್ತದೆ. ಮನಸ್ಸು ಒಂದು ಸೂಕ್ಷ್ಮ ಸಂಗೀತದ ಉಪಕರಣವಿದ್ದಂತೆ. ಶೃತಿ ಮಾಡಿಟ್ಟ ಸಾಧನದಂತೆಯೇ ಮನಸ್ಸಿಗೂ ನಿರಂತರ ಆರೈಕೆ ಮತ್ತು ಲಕ್ಷ್ಯವಿರಬೇಕು. ಇಲ್ಲದೇ ಹೋದಲ್ಲಿ ಏರುಪೇರಾಗುತ್ತದೆ. ಬೋಡಮ್ಯಾನ್‌ಗಿದ್ದ ಅಷ್ಟೋ ಇಷ್ಟೋ ಸ್ನೇಹಿತರ ಪ್ರಕಾರ ಅವನ ಬುದ್ಧಿ ಅಚಲವಾಗಿತ್ತು. ಆದರೆ ಮುಂದೆ ನಡೆಯಲಿದ್ದ ಆ ಒಂದು ಘಟನೆ ಅವನ ಇಡೀ ಜೀವನದಲ್ಲಿ ಬಹಳ ಮುಖ್ಯ ಮತ್ತು ಭಯಾನಕವಾಗಲಿದೆ ಎಂಬುದನ್ನು ಊಹಿಸಲಿಕ್ಕೆ ಅವನ ಸ್ನೇಹಿತರಿಗಷ್ಟೇ ಯಾಕೆ ಶತ್ರುಗಳಿಗೂ ಸಾಧ್ಯವಿರಲಿಲ್ಲ.

ಜಾನ್ ಬೋಡಮ್ಯಾನ್ ತನ್ನ ಹೆಂಡತಿಯನ್ನು ಕೊಲೆ ಮಾಡುವುದಾಗಿ ನಿರ್ಧರಿಸಿದಾಗ ಅವನ ಬುದ್ಧಿ ಸ್ಥಿಮಿತದಲ್ಲಿತ್ತೋ ಇಲ್ಲವೋ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಆದರೆ ಈ ಕೊಲೆಯನ್ನು ಸ್ವಾಭಾವಿಕ ಎಂದು ತೋರಿಸಲು ಅವನು ಯೋಜಿಸಿದ ಮಾರ್ಗವನ್ನು ಅವಲೋಕಿಸಿದರೆ ಅದರಲ್ಲಿನ ಕುಶಲತೆ ಸ್ಪಷ್ಟವಾಗಿ ಗೋಚರಿಸುತ್ತದೆ. ದಾರಿ ತಪ್ಪಿದ ಮನಸ್ಸು ಕುತಂತ್ರಿಯಾಗಿರುತ್ತದೆ.

ತನ್ನ ಸಾಂಗತ್ಯದಿಂದ ಗಂಡನಿಗೆ ಅದೆಷ್ಟು ಬಾಧೆಯಾಗುತ್ತದೆ, ಕಿರಿಕಿರಿಯಾಗುತ್ತದೆ ಎಂಬ ವಿಚಾರ ಮಿಸ್ಸೆಸ್ ಬೋಡಮ್ಯಾನ್‌ಗೆ ತಿಳಿಯದ ಸಂಗತಿಯೇನಲ್ಲ. ಆದರೆ ಅವಳ ಸ್ವಭಾವವೂ ಅವನಂತೆಯೇ ಕಠೋರವಾಗಿತ್ತು. ನಿರ್ದಾಕ್ಷಿಣ್ಯವಾಗಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಅವನಿಗಿಂತ ಹೆಚ್ಚಾಗಿ ಆಕೆ ಅವನನ್ನು ದ್ವೇಷಿಸುತ್ತಿದ್ದಳು. ಅವನು ಎಲ್ಲೇ ಹೋದರೂ ತಾನೂ ಜೊತೆಯಾಗುತ್ತಿದ್ದಳು. ಯಾವುದೇ ಸಮಯ-ಸಂದರ್ಭವಿರಲಿ ಗಂಡನೊಡನೆ ತಾನು ಇರಲೇಬೇಕಿತ್ತು ಆಕೆಗೆ. ಒಂದು ವೇಳೆ ಆಕೆ ಗಂಡನ ಜೊತೆ ನಿರಂತರವಾಗಿ ಇರಲೇಬೇಕೆಂದು ಇಷ್ಟೊಂದು ಹಠ ಹಿಡಿಯದೇ ಹೋಗಿದ್ದಲ್ಲಿ ಆಕೆಯನ್ನು ಸಾಯಿಸುವ ವಿಚಾರ ಜಾನ್ ಬೋಡಮ್ಯಾನ್‌ಗೆ ಬರುತ್ತಲೇ ಇರಲಿಲ್ಲವೇನೋ.. ಒಂದು ತಿಂಗಳ ಕಾಲ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಸಮಯ ಕಳೆಯಬೇಕೆಂದು ಜಾನ್ ಬೋಡಮ್ಯಾನ್ ಹೇಳಿದಾಗ ಆಕೆ ಬೇರೇನೂ ಹೇಳದೇ ಇದ್ದರೂ, ಅವನ ಜೊತೆಗೆ ಸದಾ ಇರಲೇಬೇಕೆಂಬ ಸ್ವಾಭಾವಿಕವಾದ ಹಠದಿಂದ ಪ್ರಯಾಣಕ್ಕೆ ಸಿದ್ಧಳಾಗತೊಡಗಿದಳು. ಈ ಸಲ ಜಾನ್ ಅವಳು ಜೊತೆ ಬರುವುದನ್ನು ಪ್ರತಿರೋಧಿಸಲಿಲ್ಲ. ಸ್ವಿಟ್ಜರ್ಲ್ಯಾಂಡ್‌ನತ್ತ ಈ ಜೋಡಿ ಮೌನವಾಗಿ ಹೊರಟಿತು.

ಸ್ವಿಟ್ಜರ್ಲ್ಯಾಂಡ್‌ನ ಹಿಮಾಚ್ಛಾದಿತ ಪರ್ವತ ಶಿಖರಗಳ ಬಳಿಯಲ್ಲಿ ಹಿಮನದಿಯ ಮೇಲೆ ಒಂದು ಹೋಟೆಲ್ ಇದೆ. ಸಮುದ್ರಮಟ್ಟದಿಂದ ಸುಮಾರು ಒಂದೂವರೆ ಮೈಲು ಮೇಲೆ ಏಕಾಂಗಿಯಾಗಿ ನಿಂತಿರುವ ಈ ಹೋಟೆಲ್ ಅನ್ನು ತಲುಪಲು ಪರ್ವತದ ಮೇಲೆ ಅಂಕುಡೊಂಕಾದ ದಾರಿಯಲ್ಲಿ ಸುಮಾರು ಆರು ಮೈಲುಗಳಷ್ಟು ಕ್ರಮಿಸಬೇಕು. ಈ ಹೋಟೆಲಿನ ಮೊಗಸಾಲೆಯಲ್ಲಿ ನಿಂತು ನೋಡಿದರೆ ತುದಿಯಲ್ಲಿ ಹಿಮ ಹೊತ್ತು ನಿಂತ ಪರ್ವತ ಶ್ರೇಣಿಗಳನ್ನು, ಹಿಮನದಿಗಳನ್ನು ನೋಡಬಹುದು. ಜೊತೆಗೆ ಹೋಟೆಲಿನ ಸುತ್ತಮುತ್ತ ನಿಸರ್ಗದ ರಮಣೀಯತೆಯನ್ನು ಸವಿಯಲು ಪರ್ವತದ ತುದಿಗಳಿಗೆ ಹೋಗಬಹುದಾದಂತಹ, ಅಪಾಯವಲ್ಲದ ಕಾಲುದಾರಿಗಳು ಇವೆ.

ಜಾನ್ ಬೋಡಮ್ಯಾನ್‌ಗೆ ಈ ಹೋಟೆಲಿನ ನಿಕಟವಾದ ಪರಿಚಯವಿತ್ತು. ಈ ಹಿಂದೆ ಕಾಲ ಕಳೆಯಲಿಕ್ಕೆಂದು ಇಲ್ಲಿಗೆ ಅನೇಕ ಬಾರಿ ಅವನು ಬಂದದ್ದಿತ್ತು. ಈಗ ಮನಸ್ಸಿನಲ್ಲಿ ಕೊಲೆಯ ವಿಚಾರ ಬಂದಿದ್ದೇ ತಡ, ಈ ಹೋಟೆಲಿನಿಂದ ಸುಮಾರು ಎರಡು ಮೈಲುಗಳಷ್ಟು ದೂರದಲ್ಲಿರುವ ಜಾಗ ಅವನ ಮನಸ್ಸಿನಲ್ಲಿ ಸುತ್ತತೊಡಗಿತ್ತು. ಆ ಜಾಗದಲ್ಲಿ ನಿಂತು ನೋಡಿದರೆ ಸುತ್ತಲಿನ ಪ್ರದೇಶವೆಲ್ಲವೂ ಸ್ಪಷ್ಟವಾಗಿ ಕಾಣುತ್ತಿತ್ತು. ಶಿಥಿಲವಾದ ಗೋಡೆಯೊಂದು ಆ ಜಾಗವನ್ನು ಮುಚ್ಚುವಂತಿತ್ತು.

ಒಂದು ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಜಾನ್ ಬೋಡಮ್ಯಾನ್ ಎದ್ದು, ಹೋಟೆಲಿನಲ್ಲಿದ್ದ ಯಾರ ಗಮನಕ್ಕೂ ಬಾರದಂತೆ ‘ಹ್ಯಾಂಗಿಂಗ್ ಓವರ್‌ಲುಕ್’ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಈ ಜಾಗಕ್ಕೆ ಬಂದಿದ್ದ. ಈ ಹಿಂದೆ ಇಲ್ಲಿಗೆ ಬಂದಿದ್ದರಿಂದ ದಾರಿಯ ನೆನಪು ನಿಚ್ಚಳವಾಗಿತ್ತು. ‘ಇದೇ ಸರಿಯಾದ ಜಾಗ!’ ಎಂದು ತನಗೇ ತಾನೇ ಹೇಳಿಕೊಂಡ. ಹಿಂದೆ ದೈತ್ಯವಾಗಿ ನಿಂತಿದ್ದ ಪರ್ವತದ ತುಂಬ ದಟ್ಟ ಕಾಡು ಹಬ್ಬಿದ್ದು ಅದರ ಮುಂದೆ ಭಾರಿ ಪ್ರಪಾತವಿತ್ತು. ಅವನನ್ನು ಹೊರತುಪಡಿಸಿ ಇನ್ನಾವ ಮನುಷ್ಯನೂ ಅಲ್ಲಿರಲಿಲ್ಲ. ದೂರದಲ್ಲಿದ್ದ ಹೋಟೆಲ್ ಅನ್ನು ಭಾರಿ ಗಾತ್ರದ ಬಂಡೆಯೊಂದು ಮರೆ ಮಾಡಿತ್ತು. ಕಣಿವೆಯ ಇನ್ನೊಂದು ಬದಿಯಲ್ಲಿದ್ದ ಪರ್ವತಗಳಲ್ಲಿ ಪ್ರವಾಸಿಗರು ಇರಬಹುದಾದ ಸಾಧ್ಯತೆಯಿದ್ದರೂ ಅವುಗಳೆಲ್ಲ ‘ಹ್ಯಾಂಗಿಂಗ್ ಓವರ್‌ಲುಕ್’ ನಲ್ಲಿ ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣಿಸದಷ್ಟು ದೂರದಲ್ಲಿದ್ದವು. ಕಣಿವೆಯ ಕೆಳಗಿದ್ದ ಪಟ್ಟಣ, ಅಲ್ಲಿದ್ದ ಮನೆಗಳೆಲ್ಲ ಚಿಕ್ಕ ಮಕ್ಕಳ ಆಟಿಗೆಯ ಸಾಮಾನುಗಳಂತೆ ಕಾಣಿಸುತ್ತಿದ್ದವು. ಎಂತಹ ಗಟ್ಟಿ ಗುಂಡಿಗೆಯ ಪ್ರವಾಸಿಗರಿದ್ದರೂ ಕುಸಿಯುತ್ತಿರುವ ಗೋಡೆಯ ಕಡೆಗೆ ನೋಡಿದರೆ ಸಾಕು, ಅಧೀರರಾಗಿ ಬಿಡುತ್ತಾರೆ! ತುದಿಯಲ್ಲಿ ನಿಂತರೆ ನೇರವಾಗಿ ಒಂದು ಮೈಲಿಯಷ್ಟು ಕೆಳಗೆ ಬೀಳುವಂತಹ ಕಡಿದಾದ ಪ್ರಪಾತ. ಕೆಳಗೆ ಬಗ್ಗಿ ನೋಡಿದರೆ ಮೊನಚಾದ ಬಂಡೆಗಳು, ಅರೆಮುರಿದ ಮರಗಳು ಹಬ್ಬಿ ನೀಲಿ ಮಬ್ಬು ಬೆಳಕಿನಲ್ಲಿ ಕುರುಚಲು ಕಾಡಿನ ಹಾಗೆ ಕಾಣಿಸುತ್ತಿತ್ತು.

‘ಇದೇ ಸರಿಯಾದ ಜಾಗ’ ಜಾನ್ ಮತ್ತೊಮ್ಮೆ ಹೇಳಿಕೊಂಡ.

‘ಮತ್ತು ನಾಳೆ ಬೆಳಿಗ್ಗೆಯೇ ಸರಿಯಾದ ಸಮಯ!’

ಸ್ಟಾಕ್ ಎಕ್ಸಚೇಂಜ್‌ನಲ್ಲಿ ಒಪ್ಪಂದವನ್ನು ಮಾಡಿಕೊಳ್ಳುವಾಗ ಇರುತ್ತಿದ್ದ ನಿರ್ದಯತೆ, ನಿರ್ದಾಕ್ಷಣ್ಯದಂತೆಯೇ ಈ ಯೋಜನೆಯನ್ನು ಯೋಜಿಸಿದ್ದ ಜಾನ್ ಬೋಡಮ್ಯಾನ್ ಅಷ್ಟೇ ಶಾಂತಚಿತ್ತದಲ್ಲಿದ್ದ. ಅವನ ಈ ಯೋಜನೆಗೆ ಬಲಿಪಶುವಾಗಲಿದ್ದ ವ್ಯಕ್ತಿಯ ಬಗ್ಗೆ ಅವನ ಯಾವ ಕರುಣೆಯೂ ಇದ್ದಂತಿರಲಿಲ್ಲ. ಅವನ ದ್ವೇಷ ಅವನನ್ನು ಇಲ್ಲಿಯವರೆಗೂ ಎಳೆದುಕೊಂಡು ಬಂದಿತ್ತು.

ಮಾರನೇ ದಿನ ಬೆಳಿಗ್ಗೆ ತಿಂಡಿಯ ನಂತರ ‘ನಾನು ಹೀಗೆ ಒಂದು ವಾಕ್ ಹೋಗಿ ಬರಬೇಕೆಂದುಕೊಂಡಿದ್ದೇನೆ. ನೀನು ಬರುವೆಯಾ?’ ಎಂದು ಜಾನ್ ಬೋಡಮ್ಯಾನ್ ಹೆಂಡತಿಯನ್ನು ಕೇಳಿದ.

‘ಹೂಂ’ ಎಂದು ಆಕೆ ಚುಟುಕಾಗಿ ಉತ್ತರಿಸಿದಳು.

‘ಸರಿ ಹಾಗಿದ್ರೆ. ಒಂಬತ್ತು ಗಂಟೆಯ ಹೊತ್ತಿಗೆ ನಾನು ಸಿದ್ಧವಾಗಿರುತ್ತೇನೆ’ ಎಂದ.

‘ಒಂಬತ್ತು ಗಂಟೆಯ ಹೊತ್ತಿಗೆ ನಾನು ಸಿದ್ಧವಾಗಿರುತ್ತೇನೆ’ ಎಂದು ಆಕೆ ಅವನು ಹೇಳಿದ್ದನ್ನೇ ಪುನರಾವರ್ತಿಸಿದಳು.

ಸರಿಯಾಗಿ ಒಂಬತ್ತು ಗಂಟೆಗೆ ಅವರಿಬ್ಬರು ಹೋಟೆಲಿನಿಂದ ಹೊರಟರು. ಮರಳಿ ಬರುವಾಗ ಅವನು ಒಬ್ಬನೇ ಬರುವವನಿದ್ದ.

ದಾರಿಯಲ್ಲಿ ಅವರಿಬ್ಬರು ಒಂದು ಮಾತನ್ನು ಸಹ ಆಡಲಿಲ್ಲ. ‘ಹ್ಯಾಂಗಿಂಗ್ ಓವರ್‌ಲುಕ್’ ಸಮುದ್ರ ಮಟ್ಟಕ್ಕಿಂತ ಅಷ್ಟೇನೂ ಎತ್ತರವಾಗಿರಲಿಲ್ಲವಾದ್ದರಿಂದ ದಾರಿ ಸಮತಟ್ಟಾಗಿತ್ತು. ಆದರೂ ಆಕೆ ಕೈಯ್ಯಲ್ಲಿ ಪರ್ವತಗಳನ್ನು ಹತ್ತಲು ಸಹಾಯವಾಗುವಂತಹ ಕೋಲನ್ನು ಹಿಡಿದುಕೊಂಡು ಅದರ ಸಹಾಯದಿಂದ ನಡೆಯುತ್ತಿದ್ದಳು.

‘ಹ್ಯಾಂಗಿಂಗ್ ಓವರ್‌ಲುಕ್’ ಇನ್ನೇನು ಹತ್ತಿರವಾದಾಗ ಮುಂದಿನ ಹಂತದ ಬಗ್ಗೆ ಜಾನ್‌ಗೆ ಸ್ಪಷ್ಟವಾದ ಕಲ್ಪನೆಯಿರಲಿಲ್ಲ. ಪರಿಸ್ಥಿತಿಗೆ ತಕ್ಕಂತೆ ನಡೆದುಕೊಳ್ಳುವುದು ಅವನ ಯೋಜನೆಯಾಗಿತ್ತು. ಅವಳು ಕೆಳಕ್ಕೆ ಬೀಳುವಾಗ ತನ್ನನ್ನು ಎಳೆದುಕೊಂಡು ಬಿದ್ದರೆ ಎಂಬ ವಿಚಿತ್ರ ಭಯವೊಂದು ಜಾನ್ ಮನಸ್ಸಿನಲ್ಲಿ ಹುಟ್ಟಿಕೊಂಡಿತು. ಅವಳಿಗೆ ತನ್ನ ಹಣೆಬರಹದ ಬಗ್ಗೆ ಈಗಾಗಲೇ ಗೊತ್ತಾಗಿರಬಹುದೇ ಎಂದು ಜಾನ್ ಆಶ್ಚರ್ಯ ಪಟ್ಟ. ಮಾತನಾಡಿದರೆ ತನ್ನ ಧ್ವನಿಯಲ್ಲಿನ ನಡುಕದಿಂದಾಗಿ ಆಕೆಗೆ ಅನುಮಾನ ಬರಬಹುದೇನೋ ಎಂದೆಣಿಸಿದ ಜಾನ್ ಮೌನವಾಗಿದ್ದ. ತನ್ನ ಕೆಲಸ ಅದೆಷ್ಟು ಕ್ಷಿಪ್ರ ಮತ್ತು ಚುರುಕಾಗಿರಬೇಕೆಂದರೆ ಅವಳಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲಾಗಲಿ ಅಥವಾ ಅವನನ್ನು ತನ್ನೊಡನೆ ಎಳೆದುಕೊಂಡು ಬೀಳಲಿಕ್ಕಾಗಲೀ ಅವಕಾಶವೇ ಸಿಗಬಾರದು ಎಂದು ಜಾನ್ ನಿರ್ಧರಿಸಿದ. ಅದು ನಿರ್ಜನ ಪ್ರದೇಶವಾಗಿದ್ದರಿಂದ ಅವಳ ಕಿರುಚಾಟದ ಬಗ್ಗೆ ಅವನಿಗೆ ಯಾವುದೇ ಭಯವಿರಲಿಲ್ಲ. ಹೋಟೆಲಿನವರನ್ನು ಹೊರತುಪಡಿಸಿ ಆ ಸ್ಥಳಕ್ಕೆ ಬೇರೆ ಯಾರೂ ಬರಲು ಸಾಧ್ಯವಿರಲಿಲ್ಲ. ಈ ಜಾಗದಲ್ಲಿ ಹಿಮನದಿಯ ಆರೋಹಣ ಅತ್ಯಂತ ಸರಳ ಮತ್ತು ಪ್ರಸಿದ್ಧಿಯ ಚಟುವಟಿಕೆಯಾಗಿದ್ದರೂ ಆ ದಿನ ಬೆಳಿಗ್ಗೆ ಯಾರೂ ಮನೆಯಿಂದ ಹೊರ ಬಂದಿರಲಿಲ್ಲ. ಹೀಗಾಗಿ ಸುತ್ತಲೂ ನಿರ್ಜನವಾಗಿತ್ತು.

ಮನಸ್ಸು ಒಂದು ಸೂಕ್ಷ್ಮ ಸಂಗೀತದ ಉಪಕರಣವಿದ್ದಂತೆ. ಶೃತಿ ಮಾಡಿಟ್ಟ ಸಾಧನದಂತೆಯೇ ಮನಸ್ಸಿಗೂ ನಿರಂತರ ಆರೈಕೆ ಮತ್ತು ಲಕ್ಷ್ಯವಿರಬೇಕು. ಇಲ್ಲದೇ ಹೋದಲ್ಲಿ ಏರುಪೇರಾಗುತ್ತದೆ. ಬೋಡಮ್ಯಾನ್‌ಗಿದ್ದ ಅಷ್ಟೋ ಇಷ್ಟೋ ಸ್ನೇಹಿತರ ಪ್ರಕಾರ ಅವನ ಬುದ್ಧಿ ಅಚಲವಾಗಿತ್ತು. ಆದರೆ ಮುಂದೆ ನಡೆಯಲಿದ್ದ ಆ ಒಂದು ಘಟನೆ ಅವನ ಇಡೀ ಜೀವನದಲ್ಲಿ ಬಹಳ ಮುಖ್ಯ ಮತ್ತು ಭಯಾನಕವಾಗಲಿದೆ ಎಂಬುದನ್ನು ಊಹಿಸಲಿಕ್ಕೆ ಅವನ ಸ್ನೇಹಿತರಿಗಷ್ಟೇ ಯಾಕೆ ಶತ್ರುಗಳಿಗೂ ಸಾಧ್ಯವಿರಲಿಲ್ಲ.

ಸುಮ್ಮನೆ ಹೆಜ್ಜೆ ಹಾಕುತ್ತಿದ್ದ ಮಿಸ್ಸೆಸ್ ಬೋಡಮ್ಯಾನ್ ಹ್ಯಾಂಗಿಂಗ್ ಒವರ್‌ಲುಕ್ ಬಂದ ಕೂಡಲೇ ನಿಂತು ಬಿಟ್ಟಳು. ನಿಂತವಳು ನಡುಗಿದಳು. ಜಾನ್ ಬೋಡಮ್ಯಾನ್ ಕಿರುಗಣ್ಣಿನಿಂದ ಆಕೆಯತ್ತ ನೋಡುತ್ತ ಅವಳಿಗೇನಾದರೂ ಅನುಮಾನ ಬಂದಿರಬಹುದೇ ಎಂದು ಆಶ್ಚರ್ಯ ಪಟ್ಟ. ಒಬ್ಬರ ಪಕ್ಕದಲ್ಲಿ ಮತ್ತೊಬ್ಬರು ಕಿರುಬೆರಳು ತಾಗುವಷ್ಟು ಸನಿಹದಲ್ಲಿ ನಡೆಯುತ್ತಿರುವಾಗ ಅವರಿಬ್ಬರ ಮನಸ್ಸುಗಳ ನಡೆಯುತ್ತಿರುವ ಸಂವಹನವನ್ನು ಊಹಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ.

‘ಏನು ವಿಷಯ? ನಿಂಗೆ ಸುಸ್ತಾಗಿದೆಯೇ?’ ಜಾನ್ ಗಡುಸಾಗಿ ಕೇಳಿದ.

‘ಜಾನ್..’ ಎಂದು ನಡುಗುವ ಧ್ವನಿಯಲ್ಲಿ ಕರೆದಳಾಕೆ. ಎಷ್ಟೋ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅವಳು ಅವನ ಹೆಸರನ್ನು ಹಿಡಿದು ಕರೆದಿದ್ದಳು.

‘ನೀನು ಮೊದಲು ನನ್ನ ಮೇಲೆ ಚೂರು ಕರುಣೆ ತೋರಿಸಿದ್ದರೆ ಇವತ್ತು ನಮ್ಮ ಬದುಕು ಬೇರೆ ತರಹ ಇರುತ್ತಿತ್ತು ಎಂದು ನಿನಗನ್ನಿಸುವುದಿಲ್ಲವೇ?’ ಕೇಳಿದಳು.

‘ಇರಬಹುದು..’ ಎಂದವನು ಆಕೆಯತ್ತ ನೋಡದೆಯೇ ಮುಂದುವರೆಸಿದ ‘ಆದರೆ ಈಗ ಅದನ್ನೆಲ್ಲ ಮಾತನಾಡಲಿಕ್ಕೆ ಬಹಳ ತಡವಾಗಿ ಹೋಗಿದೆ’

‘ನನಗೆ ಪಶ್ಚಾತ್ತಾಪವಿದೆ. ನಿನಗಿಲ್ಲವೇ?’ ಆಕೆಯ ಧ್ವನಿ ಇನ್ನೂ ನಡುಗುತ್ತಿತ್ತು.

‘ಇಲ್ಲ’ ಎಂದ ಜಾನ್.

‘ಸರಿ ಹಾಗಿದ್ರೆ..’ ಅವನ ಹೆಂಡತಿ ಉತ್ತರಿಸಿದಳು. ಈಗ ಅವಳ ಧ್ವನಿ ಮತ್ತೆ ಮೊದಲಿನಂತೆ ಗಡುಸಾಗಿತ್ತು. ‘ನಾನು ನಿನಗೊಂದು ಅವಕಾಶ ಕೊಡುತ್ತಿದ್ದೇನೆ. ನೆನಪಿರಲಿ’ ಎಂದಳು.

ಅವನು ಅವಳತ್ತ ಅನುಮಾನದಿಂದ ನೋಡಿದ.

‘ಏನು ಹಾಗಂದ್ರೆ? ನನಗೇ ನೀನು ಅವಕಾಶ ಕೊಡುತ್ತಿದ್ದೀಯಾ?’ ಅವನ ಧ್ವನಿ ಇನ್ನೂ ಗಡುಸಾಗಿತ್ತು.

‘ಅವಕಾಶವಲ್ಲ.. ನನಗೆ ನಿನ್ನಿಂದ ಯಾವುದೂ ಬೇಡ! ದ್ವೇಷಿಸುವವರ ಕಡೆಯಿಂದ ಯಾರೂ ಏನನ್ನೂ ನಿರೀಕ್ಷಿಸುವುದಿಲ್ಲ. ನನಗೆ ನಿನ್ನ ಮೇಲೆ ಇರುವ ಭಾವನೆ ನಿನಗೆ ತಿಳಿದಿದೆಯಲ್ಲ.. ನಾವು ಒಬ್ಬರಿಗೊಬ್ಬರು ತಳುಕು ಹಾಕಿಕೊಂಡಿದ್ದೆವಷ್ಟೇ.. ಈ ಬಂಧವನ್ನು ಬಂಧನವನ್ನಾಗಿ ಮಾಡಲಿಕ್ಕೆ ನೀನು ಎಲ್ಲಾ ರೀತಿಯಿಂದಲೂ ಸಹಾಯ ಮಾಡಿರುವೆ’ ಎಂದ.

‘ಹೌದು.. ನಾವು ಒಬ್ಬರಿಗೊಬ್ಬರು ತಳುಕು ಹಾಕಿಕೊಂಡಿದ್ದೇವೆ’ ಎಂದು ಆಕೆ ನೆಲ ನೋಡುತ್ತ ಹೇಳಿದಳು.

ಹ್ಯಾಂಗಿಂಗ್ ಒವರ್‌ಲುಕ್ ತಲುಪಲು ಕೆಲವೇ ಹೆಜ್ಜೆಗಳು ಬಾಕಿಯಿದ್ದವು. ಅದನ್ನು ತಲುಪುವವರೆಗೂ ಆಕೆ ‘ನಾವು ಒಬ್ಬರಿಗೊಬ್ಬರು ತಳುಕು ಹಾಕಿಕೊಂಡಿದ್ದೇವೆ’ ಎಂದು ಮತ್ತೆ ಮತ್ತೆ ತನಗೊಬ್ಬಳಿಗೇ ಕೇಳಿಸುವಂತೆ ಹೇಳಿಕೊಂಡಳು.

ಜಾನ್ ಬೋಡಮ್ಯಾನ್ ಶಿಥಿಲವಾಗಿದ್ದ ಆ ಗೋಡೆಯ ಮೇಲೆ ಕುಳಿತ. ಕೈಯ್ಯಲ್ಲಿದ್ದ ಕೋಲನ್ನು ಬಂಡೆಯ ಮೇಲಿಟ್ಟು ಆಕೆ ಅತ್ತಿಂದಿತ್ತ ಓಡಾಡಿದಳು. ಅವಳ ಹೆಜ್ಜೆಗಳಲ್ಲಿ ಭಯ ಇಣುಕುತ್ತಿತ್ತು. ಕೈಗಳು ಒಂದಕ್ಕೊಂದು ಗಟ್ಟಿಯಾಗಿ ಬೆಸೆದುಕೊಂಡಿದ್ದವು. ಆ ಭಯಾನಕ ಕ್ಷಣ ಹತ್ತಿರವಾದಂತೆಯೇ ಆಕೆಯ ಗಂಡ ಜೋರಾಗಿ ಉಸಿರೆಳೆದುಕೊಂಡ.

‘ಯಾಕೆ ಮದವೇರಿದ ಪ್ರಾಣಿಯ ಹಾಗೆ ಓಡಾಡುತ್ತಿರುವೆ? ಇಲ್ಲಿ ಬಾ, ನನ್ನ ಪಕ್ಕ ಸುಮ್ಮನೆ ಕುಳಿತುಕೋ’ ಹೆಂಡತಿಯನ್ನು ಕರೆದ.

ಅವಳು ಅವನತ್ತ ತಿರುಗಿದಳು. ಅವಳ ಕಣ್ಣಿನಲ್ಲಿ ಅವನು ಹಿಂದೆಂದೂ ನೋಡಿರದಂತಹ ಬೆಳಕಿತ್ತು. ಹುಚ್ಚುತನವಿತ್ತು. ದ್ವೇಷದಿಂದ ಹೊಳೆಯುತ್ತಿತ್ತು.

(ರಾಬರ್ಟ್‌ ಬಾರ್ರ್)

‘ನಾನು ಮದವೇರಿದ ಪ್ರಾಣಿಯ ಹಾಗೆ ಓಡಾಡುತ್ತೇನೆ. ಯಾಕೆ ಗೊತ್ತಾ? ನಾನು ಮದವೇರಿದ ಪ್ರಾಣಿಯೇ! ಸ್ವಲ್ಪ ಸಮಯದ ಹಿಂದೆ ನೀನು ನಿನಗೆ ನನ್ನ ಮೇಲಿರುವ ದ್ವೇಷದ ಬಗ್ಗೆ ಮಾತನಾಡಿದೆ. ಆದರೆ ನೀನು ಗಂಡಸು. ಒಂದು ಹೆಣ್ಣಿನ ದ್ವೇಷದ ಮುಂದೆ ಗಂಡಸಿನದ್ದು ಏನೇನೂ ಅಲ್ಲ. ನೀನೆಷ್ಟೇ ಕೆಟ್ಟವನಿದ್ದರೂ, ನಮ್ಮ ನಡುವಿನ ಈ ಸಂಬಂಧವನ್ನು ಅಂತ್ಯಗೊಳಿಸಲು ಅದೆಷ್ಟೇ ಪ್ರಯತ್ನ ಪಟ್ಟರೂ ಅತ್ಯಂತ ಹೀನಾಯವಾದ ಹಂತಕ್ಕೆ ಹೋಗುವುದಿಲ್ಲ ಅಂತ ನನಗೆ ಗೊತ್ತು. ನಿನ್ನ ಮನಸ್ಸಿನಲ್ಲಿ ಕೊಲೆಯ ಯೋಜನೆ ಇಲ್ಲ ಅಂತಲೂ ಗೊತ್ತು. ಆದರೆ ನನ್ನ ಮನಸ್ಸಿನಲ್ಲಿದೆ. ಜಾನ್ ಬೋಡಮ್ಯಾನ್, ನಾನು ನಿನ್ನನ್ನು ಅದೆಷ್ಟು ದ್ವೇಷಿಸುತ್ತೇನೆ ಎಂದು ಈಗ ನಾನು ನಿನಗೆ ತೋರಿಸುತ್ತೇನೆ’

ಆಕೆ ಕೊಲೆ ಎಂದು ಹೇಳಿದಾಗ ತನ್ನ ಪಕ್ಕದಲ್ಲಿದ್ದ ಕಲ್ಲನ್ನು ಗಟ್ಟಿಯಾಗಿ ಹಿಡಿದುಕೊಂಡು ಅವಳನ್ನೇ ತಪ್ಪಿತಸ್ಥ ಭಾವನೆಯಲ್ಲಿ ನೋಡತೊಡಗಿದ.

‘ಹೌದು..’ ಆಕೆ ಮುಂದುವರೆಸಿದಳು.

‘ಇಂಗ್ಲೆಂಡಿನಲ್ಲಿರುವ ನನ್ನ ಎಲ್ಲಾ ಸ್ನೇಹಿತರಿಗೆ ನೀನು ನನ್ನನ್ನು ಸ್ವಿಟ್ಜರ್ಲ್ಯಾಂಡಿನಲ್ಲಿ ಕೊಲೆ ಮಾಡುತ್ತೀಯಾ ಎಂದು ಹೇಳಿ ಬಂದಿದ್ದೇನೆ’

‘ಅಯ್ಯೋ ದೇವರೇ!.. ನನ್ನ ಬಗ್ಗೆ ಹೀಗೆಲ್ಲ ಹೇಳಲಿಕ್ಕೆ ನಿನಗೆ ಹೇಗೆ ಸಾಧ್ಯ?’ ಅವನು ಬಡಬಡಿಸಿದ.

‘ಹೇಗೆ ಎಂದರೆ ನಾನು ನಿನ್ನನ್ನು ಅಷ್ಟು ದ್ವೇಷಿಸುತ್ತೇನೆ. ಸೇಡು ತೀರಿಸಿಕೊಳ್ಳಲಿಕ್ಕಾಗಿ ನಾನು ಅದೆಷ್ಟು ಕಾಯುತ್ತಿದ್ದೇನೆ. ಇಲ್ಲಿಗೆ ಬರುವಾಗ ನಾನು ಹೋಟೆಲಿನವರಿಗೂ ಹೇಳಿ ಬಂದಿದ್ದೆ. ಆ ಮಾಲೀಕ ನಿನ್ನ ಜೊತೆ ಹೋಗದಂತೆ ನನ್ನನ್ನು ತಡೆದ. ನಾನು ಒಪ್ಪದೇ ಇದ್ದಾಗ ಇಬ್ಬರನ್ನು ನಮ್ಮನ್ನೇ ಹಿಂಬಾಲಿಸುವಂತೆ ಕಳುಹಿಸಿದ. ಇನ್ನು ಸ್ವಲ್ಪ ಹೊತ್ತಿನಲ್ಲೇ ಆ ಇಬ್ಬರು ವ್ಯಕ್ತಿಗಳು ಇಲ್ಲಿಗೆ ಬರುತ್ತಾರೆ. ಅವರಿಗೆ ಹೇಳು ಇದೊಂದು ಆಕಸ್ಮಿಕ ಅವಘಡ ಎಂದು. ನೋಡು ಅವರು ನಿನ್ನನ್ನು ನಂಬುತ್ತಾರೋ ಇಲ್ಲವೋ..’

ಮನಸ್ಸಿನಲ್ಲಿ ದ್ವೇಷವನ್ನೇ ತುಂಬಿಕೊಂಡಿದ್ದ ಆ ಹುಚ್ಚು ಹೆಂಗಸು ತನ್ನ ಬಟ್ಟೆಯಲ್ಲಿದ್ದ ಲೇಸುಗಳನ್ನು ಕಿತ್ತು ಕೆಳಗೆ ಚೆಲ್ಲಿದಳು. ‘ಏನು ಮಾಡ್ತಾ ಇದ್ದೀಯಾ?’ ಎಂದು ಬೋಡಮ್ಯಾನ್ ಕೇಳುತ್ತ ಏಳುವಷ್ಟರಲ್ಲಿ ಆಕೆ ಗೋಡೆಯ ಬಳಿ ನಡೆದು ಅದರ ಮೇಲಿಂದ ಆಳವಾದ ಪ್ರಪಾತಕ್ಕೆ ಕಿರುಚುತ್ತಾ ಧುಮುಕಿದಳು.

ತಕ್ಷಣವೇ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ಏಕಾಂಗಿಯಾಗಿ ಬಂಡೆಯ ತುದಿಗೆ ನಿಂತಿದ್ದ ಜಾನ್ ಅನ್ನು ನೋಡಿದರು. ಈಗ ತಾನು ಸತ್ಯವನ್ನು ಹೇಳಿದರೂ ಅವರು ನಂಬುವುದಿಲ್ಲವೆಂದು ಅವನಿಗೆ ಆ ದಿಗ್ಭ್ರಮೆಯಲ್ಲಿಯೂ ಅರಿವಾಗಿತ್ತು.