ಪಂದ್ಯದ ಎರಡನೇ ಅರ್ಧದಲ್ಲಿ ಆಸ್ಟ್ರೇಲಿಯಾ ತಂಡವು ಸೋಲುವುದು ಖಚಿತವಾಗಿತ್ತು. ಆದರೆ ನಮ್ಮ ಮಟಿಲ್ಡಾಸ್ ಬಗ್ಗೆ ಇದ್ದ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದರ ಜೊತೆಗೆ ಇಂಗ್ಲಿಷ್ ಪಟುಗಳು ಆಡಿದ ವೈಖರಿಗೆ, ಅವರ ಅಚ್ಚುಕಟ್ಟಾದ ಆಟದ ಶೈಲಿಗೆ ಎಲ್ಲರೂ ಮನಸೋತಿದ್ದರು. ಎರಡು ಬಾರಿ ಸ್ಯಾಮ್ ಕೆರ್ ತಮ್ಮ ಬಳಿಗೆ ಬೀಸಿಬಂದ ಫುಟ್ಬಾಲನ್ನು ತಲೆಯಿಂದ ಡಿಕ್ಕಿಕೊಟ್ಟು ಅದನ್ನು ಗೋಲ್ ನೆಟ್ ಕಡೆಗೆ ಚಿಮ್ಮಿಸಿದಾಗ ಅರೆಕ್ಷಣ ಎಲ್ಲರ ಹೃದಯ ಬಾಯಿಗೆ ಬಂದಿತ್ತು. ಆದರೆ ಗೋಲ್ ಆಗದೇ ನೆಟ್ ತಲೆಯಮೇಲೆ ಬಾಲ್ ಹಾರಿಹೋಗಿತ್ತು. ಸ್ಯಾಮ್ ಮುಖದ ಮೇಲೆ ಮೂಡಿದ ನಿರಾಶಾ ಭಾವವನ್ನು ವರ್ಣಿಸಲು ಪದಗಳಿರಲಿಲ್ಲ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

ಆಸ್ಟ್ರೇಲಿಯಾ ಮಹಿಳಾ ಫುಟ್ಬಾಲ್ ತಂಡದ ನಾಯಕಿ ಸ್ಯಾಮ್ ಕೆರ್ ತಮ್ಮ ಕೃತಜ್ಞತಾ ಭಾವದಿಂದ ಹೇಳಿದ ಹಾಗೆ ದೇಶಕ್ಕೆ ದೇಶವೇ ಅವರ ತಂಡದ ಹಿಂದಿತ್ತು.

ಅವರೊಬ್ಬರೇ ಹೇಳಿದ ಮಾತಲ್ಲ ಅದು. ದೇಶದ ಪ್ರಧಾನಮಂತ್ರಿ, ಅವರ ಮಂತ್ರಿಗಳು, ವಿರೋಧಪಕ್ಷದವರು, ದೊಡ್ಡದೊಡ್ಡ ಕಾರ್ಪೊರೇಟ್ ಕಂಪನಿಗಳು, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಜನಸಾಮಾನ್ಯರು, ಎಲ್ಲರೂ ‘ನಿಮ್ಮ ಜೊತೆಯಲ್ಲಿದ್ದೀವಿ’ ಎಂದರು. ಎಡಬಿಡದೆ ಪ್ರೋತ್ಸಾಹಿಸಿದರು.

ಹೀಗೆ ಇಡೀ ದೇಶ ಪೂರ್ತಿ ಮಹಿಳಾ ಫುಟ್ಬಾಲ್ ಜ್ವರ ಹರಡಿದ್ದು, ಒಂದಿಷ್ಟೂ ಕೂಡ ಬೇಧಭಾವವಿಲ್ಲದೆ ದೇಶದ ಜನರೆಲ್ಲರೂ ಸಮರಸದಿಂದ ಒಗ್ಗಟ್ಟಾಗಿ ‘Matildas Mania’ ಕ್ಕೆ ಇಚ್ಚಾಪೂರ್ವಕವಾಗಿ ಒಟ್ಟಾಗಿಕೊಂಡು ಅದರ ವಶವಾಗಿದ್ದು ಆಸ್ಟ್ರೇಲಿಯಾದ ಕ್ರೀಡಾ ಜಗತ್ತಿನಲ್ಲಿ ಅದೊಂದು ದಾಖಲೆಯಾಗಿದೆ. ಇದು ಬಲು ಗಮನಾರ್ಹ ಐತಿಹಾಸಿಕ ಸಮಯವೆಂದು ಎಲ್ಲರೂ ಗುರುತಿಸುತ್ತಿದ್ದಾರೆ. ಮಹಿಳಾ ಸಬಲತೆಗೆ ಪುಷ್ಟಿ ದೊರೆತಿದೆ.

ಕಳೆದ ಎರಡು ವಾರ ಪೂರ್ತಿ ಎಲ್ಲರ ಬಾಯಲ್ಲೂ ಇದೇ ವಿಷಯ – ನಮ್ಮ Matildas ಈ ಬಾರಿ ವಿಶ್ವ ಮಹಿಳಾ ಫುಟ್ಬಾಲ್ ಅಂತಿಮಸುತ್ತನ್ನು ತಲುಪುತ್ತಾರಾ? ಕಪ್ ಗೆಲ್ಲುತ್ತಾರಾ? ಪ್ರಶ್ನೆಗಳನ್ನು ಕೇಳುವವರಲ್ಲಿ ಪ್ರಾಥಮಿಕ ಶಾಲಾ ಹೆಣ್ಣುಮಕ್ಕಳಿದ್ದರು, ವೃದ್ಧಾಶ್ರಮಗಳಲ್ಲಿರುವ ಅಜ್ಜಿಯರಿದ್ದರು, ಪುರುಷ ಫುಟ್ಬಾಲ್ ಪಟುಗಳಿದ್ದರು, ನಮ್ಮಂಥಾ ಸಾದಾಸೀದಾ ಜನರೂ ಇದ್ದೆವು.

ಆಸ್ಟ್ರೇಲಿಯಾ-ನ್ಯೂಝಿಲ್ಯಾಂಡ್ ಜಂಟಿಯಾಗಿ ಆಯೋಜಿಸಿದ ವಿಶ್ವ ಮಹಿಳಾ ಫುಟ್ಬಾಲ್ ೨೦೨೩ ಪಂದ್ಯಗಳು ಜುಲೈ ತಿಂಗಳಲ್ಲಿ ಆರಂಭವಾಗಿದ್ದು. ಪಂದ್ಯಗಳನ್ನು ನ್ಯೂಝಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದ ಮುಖ್ಯನಗರಗಳಲ್ಲಿ ಆಡುವುದೆಂದು ಮಾತಾಗಿದ್ದು, ಫುಟ್ಬಾಲ್ ಪ್ರಿಯರು ಮೊದಲೇ ಟಿಕೆಟ್ ಕಾದಿರಿಸಲು ಸಾಧ್ಯವಾಗಿತ್ತು. ಮೊದಲ ಸುತ್ತುಗಳಲ್ಲೇ ನ್ಯೂಝಿಲ್ಯಾಂಡ್ ನಿರ್ಗಮಿಸಿದಾಗ ನಿಧಾನವಾಗಿ ಎಲ್ಲರ ಕಣ್ಣು ಆಸ್ಟ್ರೇಲಿಯಾದತ್ತ ತಿರುಗಿತ್ತು. ತಮ್ಮ ಮನೆಯಂಗಳದಲ್ಲಿಯೇ ಆಟ ಕಟ್ಟಿದಾಗ ಆಟ ನೋಡುವುದರ ಜೊತೆಗೆ ಅದನ್ನು ಸಮರ್ಥವಾಗಿ ಆಡಬೇಕು, ಎದುರಾಳಿಗಳು ಅಬ್ಬಾ ಭಲಿರೆ! ಎಂದು ಮೆಚ್ಚಿಕೊಳ್ಳುವಂತೆ ಅವರಿಗೆ ನೀರು ಕುಡಿಸಬೇಕು ಎಂದೆಲ್ಲಾ ಅಪೇಕ್ಷೆ ಹುಟ್ಟಿತ್ತು. ನೋಡನೋಡುತ್ತಿದ್ದಂತೆ ಆಸ್ಟ್ರೇಲಿಯಾ ಮಹಿಳಾ ಫುಟ್ಬಾಲ್ ತಂಡ Matildas ಪಟುಗಳ ಹೆಗಲೇರಿತ್ತು ನಿರೀಕ್ಷೆಗಳ ಬುಟ್ಟಿಗಳ ದೊಡ್ಡ ಗಂಟು!

(ಸಮಂತಾ ಕೆರ್)

ಬಹುಮುಖ್ಯವಾಗಿ ಆ ಬುಟ್ಟಿಯಲ್ಲಿದ್ದದ್ದು ಪುಟಾಣಿ ಶಾಲಾ ಹೆಣ್ಣುಮಕ್ಕಳ ಆಕಾಂಕ್ಷೆಗಳು! ನಮ್ಮ Matildas ಗೆದ್ದರೆ ಅಥವಾ ಅಂತಿಮ ಸುತ್ತಿಗೆ ಬಂದರೆ ಅವರಂತೆ ತಾವೂ ಫುಟ್ಬಾಲ್ ಆಡುವ ಕನಸನ್ನು ಕಂಡವರು ಈ ಸಾವಿರಾರು ಶಾಲಾಹುಡುಗಿಯರು. ಹಾಗಾಗಿ ಇದ್ದಕ್ಕಿದ್ದಂತೆ ನಮ್ಮ ಮಹಿಳಾಮಣಿಯರು ನಿದರ್ಶನ ಚಿಹ್ನೆಗಳೂ, ಆತ್ಮವಿಶ್ವಾಸ ಹೆಚ್ಚಿಸುವ ನಾಯಕಿಯರೂ ಆಗಿಬಿಟ್ಟು ಮನೆಮನೆ ಮಾತಾದರು. ಫ್ರಾನ್ಸ್ ತಂಡದ ವಿರುದ್ಧ penultimate ಗೋಲ್ ಗಳಿಸಿ ಸೆಮಿ-ಫೈನಲ್ ಹಂತವನ್ನು ತಲುಪಿ, ಬಲಿಷ್ಠ ಇಂಗ್ಲಿಷ್ ತಂಡವನ್ನು ಎದುರಿಸುವುದು ಎಂದಾದಾಗ ಸ್ವಲ್ಪ ಆತಂಕದೊಡನೆ ಹೆಮ್ಮೆಯೂ ಆಗಿತ್ತು.

ಎಲ್ಲರಿಗೂ ಕಳಶಪ್ರಾಯವಾಗಿ ಇದ್ದದ್ದು ತಂಡದ ನಾಯಕಿ ಸಮಂತಾ ಕೆರ್. ಇಪ್ಪತ್ತೊಂಭತ್ತು ವರ್ಷ ಪ್ರಾಯದ ಈ ಹೆಣ್ಣು ವಿಶ್ವ ಫುಟ್ಬಾಲ್ ಕ್ರೀಡೆಗಳಲ್ಲಿ ಮಿಂಚಿ, ಜಾಗತಿಕವಾಗಿ ಮುಂಚೂಣಿಯಲ್ಲಿದ್ದಾರೆ. ಹಲವಾರು ವಿಶ್ವ ಪ್ರಶಸ್ತಿಗಳನ್ನು ಗಳಿಸಿರುವವರು ಇವರು. ಈಕೆಯ ಅಜ್ಜಿ (ತಂದೆಯ ತಾಯಿ) ಭಾರತೀಯರು ಎನ್ನುವುದು ವಿಶೇಷ. ನಮ್ಮ ಮನೆಯಲ್ಲಿ ‘ಇಂಗ್ಲಿಷ್ ತಂಡವನ್ನು ಪ್ರೋತ್ಸಾಹಿಸುವುದೋ, ಆಸ್ಟ್ರೇಲಿಯಾ ತಂಡಕ್ಕೆ ಜೈಕಾರ ಹಾಕುವುದೋ’ ಎಂದು ವಾಗ್ವಾದ ನಡೆದಾಗ ನಾನು ತಮಾಷೆಗೆ ನಾನಂತೂ ಸ್ಯಾಮ್ ಕೆರ್ ಹಿಂಬಾಲಕಿ, ಏಕೆಂದರೆ ಅವಳಲ್ಲೊಬ್ಬ ಭಾರತೀಯಳಿದ್ದಾಳೆ ಎಂದಿದ್ದೆ.

ಕಳೆದ ಬುಧವಾರ ರಾತ್ರಿ ನಡೆದ ಸೆಮಿ-ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನೆದುರಿಸುತ್ತಾ ಆಸ್ಟ್ರೇಲಿಯನ್ ಪಟುಗಳು ಮೈದಾನಕ್ಕಿಳಿದಾಗ ಅವರ ಪರವಾಗಿದ್ದ ಘೋಷಣೆಗಳು ಮುಗಿಲೇರಿದ್ದವು. ನಮ್ಮ ಬ್ರಿಸ್ಬೇನ್ ನಗರದ ಕೇಂದ್ರಭಾಗದಲ್ಲಿರುವ ಕಿಂಗ್ ಜಾರ್ಜ್ ಸ್ಕ್ವೇರ್ ಮತ್ತು ಸೌತ್ ಬ್ಯಾಂಕ್ ಪ್ರದೇಶದಲ್ಲಿ ಬೃಹದಾಕಾರದ ಟಿವಿ ಪರದೆಗಳಿದ್ದವಂತೆ. ಹೀಗೆಯೇ ದೇಶದ ಅನೇಕ ಕಡೆಗಳಲ್ಲಿ ಜನರು ದೊಡ್ಡ ಟಿವಿ ಪರದೆಗಳ ಮೇಲೆ ಪಂದ್ಯವನ್ನು ವೀಕ್ಷಿಸಲು ಏರ್ಪಾಡಾಗಿತ್ತು. ನಮ್ಮ ವಿಶ್ವವಿದ್ಯಾಲಯದಲ್ಲಿ ಕೂಡ ಇತ್ತು. ಪಂದ್ಯ ನಡೆದ ಸಿಡ್ನಿ ಸ್ಟೇಡಿಯಂನಲ್ಲಿ ಬರೋಬ್ಬರಿ ಎಂಭತ್ತು ಸಾವಿರ ಜನರಿದ್ದರು. ಅವರಲ್ಲಿ ಅರ್ಧಕ್ಕೂ ಹೆಚ್ಚಿನವರು ಆಸ್ಟ್ರೇಲಿಯಾ ದೇಶದ ಬಣ್ಣಗಳಾದ ‘ಗ್ರೀನ್ ಅಂಡ್ ಗೋಲ್ಡ್’ ಧರಿಸಿದ್ದರು. ಮಕ್ಕಳು ಹಾಕಿಕೊಂಡಿದ್ದ ‘ಗ್ರೀನ್ ಅಂಡ್ ಗೋಲ್ಡ್’ ಟೋಪಿಗಳು ಬಲು ಮುದ್ದಾಗಿದ್ದವು.

ಪಂದ್ಯದ ಎರಡನೇ ಅರ್ಧದಲ್ಲಿ ಆಸ್ಟ್ರೇಲಿಯಾ ತಂಡವು ಸೋಲುವುದು ಖಚಿತವಾಗಿತ್ತು. ಆದರೆ ನಮ್ಮ ಮಟಿಲ್ಡಾಸ್ ಬಗ್ಗೆ ಇದ್ದ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದರ ಜೊತೆಗೆ ಇಂಗ್ಲಿಷ್ ಪಟುಗಳು ಆಡಿದ ವೈಖರಿಗೆ, ಅವರ ಅಚ್ಚುಕಟ್ಟಾದ ಆಟದ ಶೈಲಿಗೆ ಎಲ್ಲರೂ ಮನಸೋತಿದ್ದರು. ಎರಡು ಬಾರಿ ಸ್ಯಾಮ್ ಕೆರ್ ತಮ್ಮ ಬಳಿಗೆ ಬೀಸಿಬಂದ ಫುಟ್ಬಾಲನ್ನು ತಲೆಯಿಂದ ಡಿಕ್ಕಿಕೊಟ್ಟು ಅದನ್ನು ಗೋಲ್ ನೆಟ್ ಕಡೆಗೆ ಚಿಮ್ಮಿಸಿದಾಗ ಅರೆಕ್ಷಣ ಎಲ್ಲರ ಹೃದಯ ಬಾಯಿಗೆ ಬಂದಿತ್ತು. ಆದರೆ ಗೋಲ್ ಆಗದೇ ನೆಟ್ ತಲೆಯಮೇಲೆ ಬಾಲ್ ಹಾರಿಹೋಗಿತ್ತು. ಸ್ಯಾಮ್ ಮುಖದ ಮೇಲೆ ಮೂಡಿದ ನಿರಾಶಾ ಭಾವವನ್ನು ವರ್ಣಿಸಲು ಪದಗಳಿರಲಿಲ್ಲ.

ಆದರೇನು, ದೇಶದಾದ್ಯಂತ ಮಟಿಲ್ಡಾಸ್ ಮಣಿಗಳಿಗೆ ಸಂದ ಪ್ರಶಂಸೆಗೇನೂ ಕೊರತೆಯಾಗಲಿಲ್ಲ. ಇಡೀ ದೇಶವನ್ನು ನೀವು ಒಗ್ಗೂಡಿಸಿದಿರಿ, ಎಂದು ಕೇಂದ್ರ ಸಚಿವೆ ಹೇಳಿದ್ದಾರೆ. ಹಲವಾರು ತಿಂಗಳುಗಳಿಂದ ದೇಶದಲ್ಲಿ ಸ್ವಲ್ಪ ಮಟ್ಟಿಗೆ ಕ್ಷೋಭೆಯುಂಟಾಗಿದೆ. ಸದ್ಯಕ್ಕೆ ನಡೆಯುತ್ತಿರುವ ‘ವಾಯ್ಸ್ ಟು ದಿ ಪಾರ್ಲಿಮೆಂಟ್’ – ದೇಶದ ಮೂಲನಿವಾಸಿಗಳ ಸಮಿತಿಯನ್ನು ಪಾರ್ಲಿಮೆಂಟಿಗೆ ಸೇರಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವ – ವಿಷಯದ ಬಗ್ಗೆ ಬಹಳಷ್ಟು ಚರ್ಚೆಗಳಾಗುತ್ತಿವೆ. ಇದೇ ಕಾರಣಕ್ಕೆ ದೇಶದ ಜನರಲ್ಲಿ ಒಡಕುಗಳಾಗಿವೆ. ಅನೇಕರ ಮನಃಶಾಂತಿ ಕೆಟ್ಟಿದೆ. ಪರಿಸ್ಥಿತಿ ಹೀಗಿರುವಾಗ ಈ ಒಂದು ಫುಟ್ಬಾಲ್ ಪಂದ್ಯ ನಡೆಯಬೇಕಿತ್ತು. ಆ ನೆಪದ ಮೂಲಕ ಜನರಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು ನೆನಪಾಗಬೇಕಿತ್ತು. ದೇಶಕ್ಕೆ ದೇಶವೇ ‘ನಿಮ್ಮ ಜೊತೆ ನಾವಿದ್ದೇವೆ’ ಎಂದು Matildas ತಂಡಕ್ಕೆ ಹೇಳಿದಾಗ ಕ್ರೀಡೆಗೆ ಇಷ್ಟು ಬಲವಿರುವುದು ಆಸ್ಟ್ರೇಲಿಯಾದಲ್ಲಿ ಮಾತ್ರ ಎನ್ನುವುದು ಸ್ಪಷ್ಟವಾಗಿತ್ತು.

ಈ ಒಂದು ವಿಶ್ವ ಕಪ್ ಮಹಿಳಾ ಫುಟ್ಬಾಲ್ ಪಂದ್ಯವೆಂಬ ಹೆಸರಿನಿಂದ ಅನೇಕ ಹೆಣ್ಣುಮಕ್ಕಳು ಫುಟ್ಬಾಲ್ ಆಡುವ ಇಚ್ಛೆ ತೋರಿದ್ದಾರೆ. ಹಿಂದೊಮ್ಮೆ ಆಶ್ ಬಾರ್ಟಿ ವಿಂಬಲ್ಡನ್ ಟೆನಿಸ್ ಟ್ರೋಫಿ ಗಳಿಸಿದಾಗ ಹೀಗೆಯೇ ಆಗಿತ್ತು. ಅನೇಕ ಪುಟ್ಟ ಹೆಣ್ಣುಮಕ್ಕಳು ಟೆನಿಸ್ ಲೋಕವನ್ನು ಪ್ರವೇಶಿಸಿದ್ದರು. Matildas ನಾಯಕಿ ಸ್ಯಾಮ್ ಕೆರ್ ಕೂಡ ಮಹಿಳಾ ಫುಟ್ಬಾಲ್ ಕ್ರೀಡೆಯ ತರಬೇತಿಗೆ ಬೇಕಾದ ಸಾಧನಗಳು, ಜಾಗದ ಅನುಕೂಲ, ಹೆಣ್ಣುಮಕ್ಕಳ ಭಾಗವಹಿಸುವಿಕೆಗೆ ಪ್ರೋತ್ಸಾಹ ಮುಂತಾದ ವಿಷಯಗಳಲ್ಲಿ ಸರಕಾರವು ಆಸಕ್ತಿ ತೋರಿಸಿ ಧನಸಹಾಯ ಮಾಡಬೇಕು ಎಂದಿದ್ದಾರೆ. ‘ಹಾರುತ ದೂರಾ ದೂರಾ, ಮೇಲೇರುತ ಸಾಗುವ ಬಾರಾ…’ ಪುಟಾಣಿಗಳ ಕನಸಿನ ರೆಕ್ಕೆಗಳು ಬಿಚ್ಚಿಕೊಂಡಿವೆ.