ಸಮುದ್ರ ತೀರದಲ್ಲಿ ಗಾಳಿ. ಜನರೆಲ್ಲ ವಾಕಿಂಗ್ ಮಾಡಲು ಬಂದಿದ್ದಾರೆ. ಕರ್ಚೀಫುಗಳನ್ನು ಬೀಸುತ್ತಿದ್ದಾರೆ. ನಾಚಿಕೆಯಿಲ್ಲದ ಜನ. ಅವರನ್ನು ನೋಡುವುದು ನನ್ನ ಕೆಲಸ. ನಾಯಿಗಳೂ ಓಡಾಡುತ್ತಿವೆ. ಶಂಖಗಳನ್ನು ಮೂಸುತ್ತಿವೆ. ಸಮುದ್ರದ ಗಾಳಿ ಮೂಗನ್ನು ಹೊಗುತ್ತಿತ್ತು. ಸಮುದ್ರ ಕಳೆ ನೀರಿನಲ್ಲಿ ತೇಲಾಡುತ್ತಿತ್ತು. ತಿಮಿಂಗಲವೊಂದು ಮೇಲೆ ಬಂಬಂದು ತಿರುಗಿ ಮರಳಿ ಹೋಗುತ್ತಿತ್ತು. ಪಕ್ಕದ ಗುಡ್ಡದ ಮೇಲೆ ಗಾಳಿಗೆ ಮರಗಳು ಓಲಾಡುತ್ತಿದ್ದವು. ಸೂರ್ಯ ಮುಳಗುತ್ತಿದ್ದ. ಬೇಡ ಎಂದರೆ ಜನ ಮನೆಯಲ್ಲಿ ಕೂತಾರೆಯೆ? ಯಾರೋ ಬಲೂನು ಮಾರುತ್ತಿದ್ದಾರೆ.
ಚೈತ್ರ ಬರೆದ ಕತೆ “ಭಾಗ್ಯ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಯಾರಿಗೂ ಇಲ್ಲದ ಭಾಗ್ಯವೊಂದು ನನಗಿದೆ. ಅದೇನೆಂದರೆ ಭಯ ಎನ್ನುವುದು ನನಗಿಲ್ಲ. ಹೀಗೇ ಹೋಗುತ್ತ ಹೋಗುತ್ತ ಎಲ್ಲಿಗೋ ನಡೆದು ಹೋಗಿ ಬಿಡುತ್ತೇನೆ. ಯಾರೂ ಕೇಳುವುದೂ ಇಲ್ಲ, ನಾನು ಹೇಳುವುದೂ ಇಲ್ಲ. ಆದರೆ ಮುಖ್ಯ ವಿಷಯ- ನನಗೆ ಭಯ ಎಂಬುದಿಲ್ಲ. ಜನ ನೋಡಿ ಏನೆಂದಾರು ಎಂದು ನಾನು ಯೋಚಿಸುವುದಿಲ್ಲ. ಯಾರೂ ನನ್ನನ್ನು ಕೇಳುವುದೂ ಇಲ್ಲ.
ಹೀಗೇ ಒಂದು ದಿನ ನಡೆನಡೆದು ಹೋಗುತ್ತಿದ್ದೆ, ದಾರಿಯಲ್ಲಿ ಏನೋ ಕಾಣಿಸಿತು. ಎತ್ತಿ ನೋಡೋಣ ಎಂದರೆ ಯಾರಾದರೂ ನೋಡಿಯಾರು, ಏನೆಂದುಕೊಂಡಾರು ಎಂಬ ಭಯ. ಹಾಗೇ ಮುಂದೆ ನಡೆದುಬಿಟ್ಟೆ. ಆದರೆ ತಲೆಯಲ್ಲಿ ಹುಳ ಕೊರೆಯತೊಡಗಿತು. ತಲೆ ನೋಯಹತ್ತಿತು. ತಿರುಗಿ ಬರಬೇಕೆಂದು ಯೋಚಿಸಿ ಸುಮ್ಮನಿದ್ದೆ, ಅನ್ಯಮನಸ್ಕನಾಗಿ ನಡೆಯತೊಡಗಿದೆ. ನಡೆದುನಡೆದು ಕೆರೆಯ ದಂಡೆ ಮುಟ್ಟಿದೆ. ಅಲ್ಲಿಯೋ ಅನೇಕ ಜನ. ತಲೆಗೆ ಬಂದಂತೆ ಮಾತಾಡುತ್ತ ನಡೆದಾಡುತ್ತಿದ್ದರು. ತಲೆಗೆ ಬಂದಂತೆ ಅಂದರೆ ನಿಜವಾಗಿಯೂ ತಲೆಗೆ ಬಂದಂತೆ. ಯಾರಿಗೂ ನಾಳೆಯ ಚಿಂತೆಯಿಲ್ಲ. ಹೌದು, ಅವರಿಗೆಲ್ಲ ನೌಕರಿ ಇರುವುದಲ್ಲ. ಅಥವಾ ಮನೆ, ಮಕ್ಕಳು. ಹೌದು, ಹೇಳುವುದನ್ನು ಮರೆತೆ. ನನಗೆ ಹೆಂಡತಿ, ಮಕ್ಕಳು, ಮನೆ, ನೌಕರಿ, ಯಾವುದೂ ಇಲ್ಲ.
ಕೆರೆಯ ದಂಡೆಯ ಮೇಲೊಂದು ನವಿಲು, ಕೇಕೆ ಹಾಕುತ್ತಿತ್ತು. ಕೇಕೆ ಹಾಕುತ್ತಿತ್ತೋ, ಯಾರನ್ನು ಕರೆಯುತ್ತಿತ್ತೋ, ಯಾವ ಅಪಾಯದ ಮುನ್ನೆಚ್ಚರಿಕೆಯೋ ಯಾರು ಬಲ್ಲರು? ಹೀಗೇ ನಡೆನಡೆದು ಕೆರೆಯನ್ನು ಸುತ್ತು ಹಾಕಿದೆ. ದಾರಿಯಲ್ಲೊಬ್ಬಳು ಹುಡುಗಿ. ಅವಳ ಜೊತೆ ಮಾತಾಡಿದೆ.
ಮೇಲೆ ಮೋಡ ಕಟ್ಟಿತ್ತು. ಮಳೆ ಬರುವ ಸೂಚನೆ. ಹಾಡು ಮೊಬೈಲಲ್ಲಿ ಯಾರದೋ. ಕಪ್ಪೆಗಳು ಆಗಲೇ ವಟರ್ಗುಟ್ಟಲು ಶುರು ಮಾಡಿದ್ದವು. ಮನೆಗೆ ತಿರುಗಿ ಬಂದೆ.
ಹೌದು, ಆ ಹುಡುಗಿ ಯಾರು? ಕೇಳುವುದಿಲ್ಲವೇ ನೀವು?
ಯಾವುದೋ ಊರಿನಲ್ಲೊಬ್ಬ ಬಡಗಿ. ಕೆಲಸವಿಲ್ಲವೆಂದು ಮನೆಯ ನಲ್ಲಿಗಳನ್ನೆಲ್ಲ ತಿರುತಿರುವಿ ಬಿಚ್ಚಿಬಿಚ್ಚಿ ಮತ್ತೆ ತಿರುಗಿ ಜೋಡಿಸಿದ್ದನಂತೆ.
ಸಮುದ್ರ ತೀರದಲ್ಲಿ ಗಾಳಿ. ಜನರೆಲ್ಲ ವಾಕಿಂಗ್ ಮಾಡಲು ಬಂದಿದ್ದಾರೆ. ಕರ್ಚೀಫುಗಳನ್ನು ಬೀಸುತ್ತಿದ್ದಾರೆ. ನಾಚಿಕೆಯಿಲ್ಲದ ಜನ. ಅವರನ್ನು ನೋಡುವುದು ನನ್ನ ಕೆಲಸ. ನಾಯಿಗಳೂ ಓಡಾಡುತ್ತಿವೆ. ಶಂಖಗಳನ್ನು ಮೂಸುತ್ತಿವೆ. ಸಮುದ್ರದ ಗಾಳಿ ಮೂಗನ್ನು ಹೊಗುತ್ತಿತ್ತು. ಸಮುದ್ರ ಕಳೆ ನೀರಿನಲ್ಲಿ ತೇಲಾಡುತ್ತಿತ್ತು. ತಿಮಿಂಗಲವೊಂದು ಮೇಲೆ ಬಂಬಂದು ತಿರುಗಿ ಮರಳಿ ಹೋಗುತ್ತಿತ್ತು. ಪಕ್ಕದ ಗುಡ್ಡದ ಮೇಲೆ ಗಾಳಿಗೆ ಮರಗಳು ಓಲಾಡುತ್ತಿದ್ದವು. ಸೂರ್ಯ ಮುಳಗುತ್ತಿದ್ದ. ಬೇಡ ಎಂದರೆ ಜನ ಮನೆಯಲ್ಲಿ ಕೂತಾರೆಯೆ? ಯಾರೋ ಬಲೂನು ಮಾರುತ್ತಿದ್ದಾರೆ.
ಅಪರಂಪಾರ ಸಮುದ್ರ. ಅದರ ಆಕಡೆ ಏನಿದೆಯೋ, ಯಾರಿದ್ದಾರೋ ಯಾರು ಬಲ್ಲರು?
ದೋಣಿಯಲ್ಲಿ ಹೋಗಬಹುದು. ಆದರೆ ನನಗೆ ಭಯ. ನೀರೆಂದರೆ ಆಗದು.
ಹುಡುಗರು ಆಟವಾಡುತ್ತಿದ್ದಾರೆ. ಕುಣಿಯುತ್ತಿದ್ದಾರೆ. ನೀರಲ್ಲಿ ಮುಳುಗು ಹಾಕುತ್ತಿದ್ದಾರೆ. ನಾಯಿಗಳು ಕುಣಿಯುತ್ತಿವೆ. ಹುಡುಗರು ನೀರಲ್ಲಿ ಪಲ್ಟಿ ಹೊಡೆಯುತ್ತಿದ್ದಾರೆ.
ಜನ ನೀರಲ್ಲಿ ಹೋಗಲು ಹೆದರುತ್ತಿಲ್ಲ. ತೆರೆಯ ಮೇಲೆ ತೆರೆಗಳು ಬರುತ್ತಿವೆ.
ತೊಡೆಯ ಮಧ್ಯೆ ನೀರು. ಬಾಯಲ್ಲಿ, ಕಣ್ಣಲ್ಲಿ. ಉಪ್ಪು. ಉಸಿರು ಕಟ್ಟಿ……
ಸಂಜೆ ಮುಗಿಯಿತು. ನಾನೂ ಮನೆಗೆ ಬಂದು ಮಲಗಿದೆ.
ರಾತ್ರಿಯೆಲ್ಲ ಕನಸುಗಳು.
ಕನಸಿನಲ್ಲಿ ಯಾರು ಬಂದರೆಂದು ಕೇಳುವುದಿಲ್ಲವೇ ನೀವು?
ಮರುದಿನ ರಸ್ತೆಯಲ್ಲಿ ಹೋಗುವಾಗ ಒಬ್ಬ ಹುಡುಗನನ್ನು ನೋಡಿದೆ. ಎಲ್ಲೋ ನೋಡಿದ್ದೇನಲ್ಲ ಇವನನ್ನು ಎನ್ನಿಸಿತು.
ಮರಳಿ ಬಂದ ಮೇಲೆ ಆ ಹುಣಿಸೇ ಮರ ನೆನಪಾಯಿತು. ಅದರ ಕೆಳಗೆ ನಾವು ಆಡುತ್ತಿದ್ದೆವು.
ಒಬ್ಬಳು ಹುಡುಗಿ, ಆಕೆಯ ಹೆಸರು ಸೀಮಾ.
ಆಕೆಯ ಬಳೆಗಳನ್ನು ಜಜ್ಜಿ ವಜ್ರಗಳನ್ನು ಹೊರತೆಗೆದು ಮಾರಾಟ ಮಾಡುತ್ತಿದ್ದೆವು ನಾವು.
ಆಮೇಲೆ ಆಕೆಯ ಅಜ್ಜಿ ಬೈದಿದ್ದಳು.
ಕಳೆದ ವರ್ಷ ಆಕೆಯ ಅಣ್ಣ ತೀರಿಕೊಂಡ. ಆತನ ಹೆಸರು ಏನೋ ಇತ್ತು. ನಿಮಗೆ ಯಾಕೆ ಬಿಡಿ.
ನಾಳೆ ಮತ್ತೆ ಬೆಳಗಾಗುತ್ತದೆ. ಜನ ಮತ್ತೆ ಸಮುದ್ರಕ್ಕೆ ಹೋಗುತ್ತಾರೆ. ನಾನು ಹೋಗುತ್ತೇನೋ ಇಲ್ಲವೋ ಎಂದು ಯಾರೂ ಕೇಳುವುದಿಲ್ಲ. ಎಲ್ಲರಿಗೂ ಅವರವರ ಜೀವನ ಮುಖ್ಯ ಬಿಡಿ.
ನಾಳೆ ಸೂರ್ಯ ಮತ್ತೆ ಮೇಲೇಳುತ್ತಾನೆ. ಜನ ಮತ್ತೆ ಮುಗಿಲಿನೆಡೆಗೆ ನೋಡುತ್ತಾರೆ. ಕೆಲವು ಜೀವನಗಳಲ್ಲಿ ಆಸಕ್ತಿದಾಯಕವಾದ್ದು ಏನೂ ನಡೆಯುವುದಿಲ್ಲ.
ಸುಮ್ಮನೆ ವ್ಯರ್ಥ ಮುಗಿಲಿನೆಡೆ ನೋಡಬೇಡಿ. ಇದ್ದಕ್ಕಿದ್ದಂತೆ ಏನೂ ಬದಲಾಗದು.
ನಿಮ್ಮ ಮಕ್ಕಳು ಫೇಲಾಗರು, ಇದ್ದಕ್ಕಿದ್ದಂತೆ. ಆದರೂ ಆಗಬಹುದು. ಹೋಪ್, ಭರವಸೆ- ಆಸೆಯ ಬೆಳಕಿನ ಮೇಲೆ ಜೀವನ ನಿಂತಿದೆ.
ನಿಮ್ಮ ಹೆಂಡತಿ ತವರು ಮನೆಗೆ ಇದ್ದಕ್ಕಿದ್ದಂತೆ ಹೋಗಿಬಿಡಬಹುದು.
ಒಬ್ಬ ಯುರೋಪಿಯನ್ ಪೇಂಟರ್ ನಿಮ್ಮ ಮನೆಗೆ ಬಂದು…. ಮುಂದೆ ಹೇಳಲೇ?
ಬೇಡ ಬಿಡಿ… ಬೈಯ್ಯಬೇಡಿ ನನ್ನನ್ನು…. ನಾನೇನೂ ಹೇಳಿಲ್ಲ ಆಗಲೇ…..
ನಿಮ್ಮ ಗಂಡ ಮೀಸೆ ಕತ್ತರಿಸಬಹುದು.
ನಿಮ್ಮ ಮಗಳು ಕಾಲಿಗೆ ಗೆಜ್ಜೆ ಹಾಕಿಕೊಳ್ಳುವುದನ್ನ……
ಕಿಡಕಿಯಿಂದ ಯಾರೋ ನೋಡಬಹುದು ಒಳಗೆ. ಯಾರೋ….
ನ್ಯೂಸ್‌ಪೇಪರಿನಲ್ಲಿ ನಿಮ್ಮ ಮುಖ….
ನಿಮ್ಮ ಹೆಂಡತಿಯ ಮುಖ……
ನ್ಯೂಸ್ ಪೇಪರ್ ಇದ್ದಕ್ಕಿದ್ದಂತೆ ಬರುವುದನ್ನ ನಿಲ್ಲಿಸಿಬಿಡಬಹುದು.
ಇದ್ದಕ್ಕಿದ್ದಂತೆ. ನಾಳೆ ಒಂದು ದಿನಕ್ಕಾದರೂ ಸರಿ? ಇಲ್ಲ, ಎಂದೆಂದಿಗೂ. ಆಗಬಹುದು. ಯಾರಿಗೆ ಗೊತ್ತು?
ಹಂದಿ ಗಟಾರದಿಂದೆದ್ದು ಸಟಕ್ಕನೆ ನಿಮ್ಮ ಮನೆಯ ಒಳಗೆ ಬಂದುಬಿಡಬಹುದು.
ಸೂರ್ಯನ ಬಿಸಿಲು ತೀರಾ ಆಗಿ ನೀವು ಮಧ್ಯಾನ್ಹ ಮಲಗಿಬಿಡಬಹುದು….
ನೀವು ಮಲಗಿದಾಗ……
ಹ್ಮ್………..
ಹಿಮಾಚ್ಛಾದಿತ ಪರ್ವತಗಳ ಮೇಲೆ ನೀರು ಹರಿಯಬಹುದು ಒಂದು ದಿನ.
ಕಾಯೋಣ.
ನಿಮಗೆ ಗೊತ್ತೇ? ನಿನ್ನೆ ನಾನೊಂದು ಅಂಗಡಿಗೆ ಹೋಗಿದ್ದೆ. ಅಲ್ಲಿ ನಾನೇನು ನೋಡಿದೆ ಗೊತ್ತೇ?
ಇದು ಕಾವ್ಯವೋ ಕಥೆಯೋ?