‘ಆಡುವಳ್ಳಿಯ ಇತಿಹಾಸದ ಬಗ್ಗೆ ನನಗೆ ಕುತೂಹಲಕಾರಿಯಾದ ಸುಳಿವು ಆಕಸ್ಮಿಕವಾಗಿ ಸಿಕ್ಕಿದ್ದು ಮರಾಠರ ಇತಿಹಾಸ ಓದುವಾಗ! ಐವತ್ತು ವರ್ಷ ಹಿಂದಿನ ಇಂಗ್ಲಿಷ್ ಲೇಖನವೊಂದರಲ್ಲಿ ಶಿವಾಜಿಯ ಮಗ ರಾಜಾರಾಮನು ಮೊಘಲರಿಂದ ತಪ್ಪಿಸಿಕೊಂಡು, ಆಡುವಳ್ಳಿ ಮಾರ್ಗವಾಗಿ ಹೋಗಿದ್ದನಂತೆ ಎಂಬ ಒಂದು ಸಾಲಿನ ಮಾಹಿತಿ ಸಿಕ್ಕಿತು. ಅರೆ! ಛತ್ರಪತಿಗೂ ಆಡುವಳ್ಳಿಗೂ ಎತ್ತಣಿಂದೆತ್ತ ಸಂಬಂಧ? ಅದರ ಬೆನ್ನತ್ತಿ ಹೋದಾಗ ಸಿಕ್ಕ ಕನ್ನಡ ಕಾವ್ಯದ ಕುರಿತು ಹೇಳುವ ಮುನ್ನ ಇನ್ನೂ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು’ ಎನ್ನುತ್ತಾರೆ ಪ್ರಸನ್ನ ಆಡುವಳ್ಳಿ. ತನ್ನೂರಿನ ಇತಿಹಾಸ ಕೆದಕುತ್ತ ಸಾಗಿದ ಅವರ ಅನುಭವ ಲೇಖನ ಇಲ್ಲಿದೆ.
ಪುಟ್ಟ ಊರಿನಲ್ಲಿ ಹುಟ್ಟಿ ಬೆಳೆದವರ ಒಂದು ಸಮಸ್ಯೆಯೆಂದರೆ ನಮ್ಮದಲ್ಲದ ಊರನ್ನು ನಮ್ಮದಾಗಿಸಿಕೊಳ್ಳುವ ಅನಿವಾರ್ಯತೆ. ‘ಯಾವೂರು’ ಎಂಬ ಪ್ರಶ್ನೆ ಬಂದಾಗಲೆಲ್ಲ ಸಂದರ್ಭಾನುಸಾರವಾಗಿ ಕೇಳುಗರಿಗೆ ತಿಳಿದಿರಬಹುದಾದ ನಮ್ಮ ಹತ್ತಿರದ ಪ್ರಸಿದ್ಧ ಊರೊಂದರ ಹೆಸರು ಹೇಳಿ ನುಣುಚಿಕೊಳ್ಳುತ್ತೇವೆ. ಚಿಕ್ಕಮಗಳೂರು ಜಿಲ್ಲೆಯ ನಡುಮಲೆನಾಡಿನ ‘ಆಡುವಳ್ಳಿ’ ಎಂಬ ಅಜ್ಞಾತ ಊರಿನಲ್ಲಿ ಹುಟ್ಟಿ ಆಯಸ್ಸಿನ ಅರ್ಧದಷ್ಟು ವರ್ಷಗಳನ್ನು ಅಲ್ಲೇ ಕಳೆದವನಾದರೂ ನಾನೂ ಹೀಗೇ ಅನುಕೂಲಕ್ಕಾಗಿ ಆಗಾಗ ಹತ್ತಿರದ ಊರಿನ ಹೆಸರು ಹೇಳಿ ತಪ್ಪಿಸಿಕೊಳ್ಳುವುದಿದೆ. ಕೊಪ್ಪದಲ್ಲಿದ್ದಾಗ ಬಾಳೆಹೊನ್ನೂರಿನವನೆಂದೂ, ಹಾಸನದಲ್ಲಿದ್ದಾಗ ಶೃಂಗೇರಿಯವನೆಂದೂ, ಬೆಂಗಳೂರು ಸೇರಿದ ಮೇಲೆ ಚಿಕ್ಕಮಗಳೂರಿನವನೆಂದೂ, ಭೋಪಾಲದಲ್ಲಿದ್ದಾಗ ಬೆಂಗಳೂರಿನವನೆಂದೂ ಗುರುತಿಸಿಕೊಂಡಿದ್ದೇನೆ. ಹಾಗೆಲ್ಲ ಹೇಳುವಾಗ ನಾನು ಸುಳ್ಳು ಹೇಳುತ್ತಿದ್ದೇನೆಂಬ ಪಾಪಪ್ರಜ್ಞೆಯೂ, ನನ್ನ ಊರು ಅಜ್ಞಾತವೆಂದು ತುಸು ಬೇಸರವೂ ಸುಳಿಯುವುದುಂಟು.
ಕರುನಾಡಿನ ಹೊರಗಿರುವಾಗಲೆಲ್ಲ ‘ನಾನು ಕರ್ನಾಟಕದವನು’ ಎನ್ನುವುದಕ್ಕಿಂತಲೂ, ‘ಬೆಂಗಳೂರಿನವನು’ ಎಂದು ಹೇಳುವುದು ಸಲೀಸಷ್ಟೇ. ರಾಜ್ಯದ ಹೆಸರಿಗಿಂತ ರಾಜಧಾನಿಯೇ ಪ್ರಸಿದ್ಧವಿರುವಾಗ ಹಾಗೆ ಹೇಳುವುದು ಅನಿವಾರ್ಯ ಕೂಡ. ಒಂದೇ ಒಂದು ವರ್ಷ ಅಲ್ಲಿದ್ದರೂ ನಾನು ಬೆಂಗಳೂರಿನವನೆಂದು ಹೇಳಿಕೊಳ್ಳುವ ಅನಿವಾರ್ಯತೆಗೆ ಈಗೀಗ ಒಗ್ಗಿ ಹೋಗಿದ್ದೇನೆ. ವಿದೇಶಿಗರೊಂದಿಗೆ ವ್ಯವಹರಿಸುವಾಗಲೋ, ಅಥವಾ ನಾನೇ ಜಗತ್ತಿನ ಯಾವುದೋ ಮೂಲೆಯಲ್ಲಿದ್ದಗಲೋ ಐಟಿ ನಗರಿಯ ಹೆಸರು ಎಲ್ಲರಿಗೂ ಗೊತ್ತೆಂಬ ಹುಂಬತನದಲ್ಲಿ ಹೆಸರಿನೊಟ್ಟಿಗೇ ನಾನು ಬೆಂಗಳೂರಿಗನೆಂದು ಘೋಷಿಸಿಕೊಂಡುಬಿಡುತ್ತೇನೆ.
ನನ್ನ ಈ ಭ್ರಮೆಯನ್ನು ಕಳಚಿದ್ದು ಸ್ಕಾಟ್ಲೆಂಡಿನಲ್ಲಿ ಸಿಕ್ಕ ಓರ್ವ ಚೀನೀ ಚೆಲುವೆ. ಅವಳು ಬೀಜಿಂಗಿನವಳಂತೆ, ನಾನು ಯಥಾಪ್ರಕಾರ ನನ್ನ ಹೆಸರೂ, ಬೆಂಗಳೂರೂ ಹೇಳಿ ಕೈಕುಲುಕಿದೆ. ಅವಳಿಗೆ ಬೆಂಗಳೂರು ಬೇರೇನೋ ಆಗಿ ಕೇಳಿತು. ನಾನು ‘ಳ’ ತೆಗೆದು ‘ಲ’ ಹಾಕಿ ‘ಬ್ಯಾ… ಬ್ಯಾ…’ ಎಂದಿದ್ದೂ (‘ಬ್ಯಾಂಗಲೂರ್! ‘ಬ್ಯಾಂಗಲೂರ್!’) ಉಪಯೋಗಕ್ಕೆ ಬರಲಿಲ್ಲ. ಕೊನೆಗೆ ‘ಇಂಡಿಯಾ’ ಅಂತಷ್ಟೇ ಹೇಳಿ ಮುಗಿಸಿದೆ. ಅಸಲಿಗೆ ಅವಳಿಗೆ ಭಾರತದ ಒಂದು ನಗರದ ಹೆಸರೂ ಗೊತ್ತಿರಲಿಲ್ಲ. ಇಲ್ಲೇ ನಮ್ಮ ಹಿಮಾಲಯದಾಚೆಗಿನ ದೇಶದವಳೆಂದೂ, ಅವಳಿಗೆ ಬೆಂಗಳೂರು ಗೊತ್ತಿದ್ದೀತೆಂದೂ ಭ್ರಮಿಸಿಕೊಂಡಿದ್ದೇ ತಪ್ಪಾಯಿತು. ಅವಳಿಗೆ ಇಂಡಿಯಾ ಅಂದರೆ ‘ಆಮೀರ್ ಖಾನನ ದೇಶ’ ಅಂತಷ್ಟೇ ಗೊತ್ತಿದ್ದಿದ್ದು. ಚೀನಾದಲ್ಲಿ ಜನಪ್ರಿಯವಾಗಿದ್ದ ‘ದಂಗಲ್’ ಸಿನಿಮಾ ನೋಡಿ ಆಮೀರ್ ಖಾನನಂತಹ ಪೈಲ್ವಾನನನ್ನು ನಿರೀಕ್ಷಿಸುತ್ತಿದ್ದ ಆಕೆಗೆ ನನ್ನಂತಹ ನರಪೇತಲನನ್ನು ನೋಡಿ ನಿರಾಸೆಯಾಯ್ತೆಂದು ಆಮೇಲೆ ಕಾಲೆಳೆದಳು.
ಅನಗತ್ಯವಾದರೂ ಇಲ್ಲೊಂದು ಉಪಕತೆಯನ್ನು ಸೇರಿಸಿಬಿಡುತ್ತೇನೆ. ಎಡಿನ್ ಬರಾದಲ್ಲಿ ಕೆಲಸ ಮಾಡುತ್ತಿರುವಾಗ ಮೊದಲ ಬಾರಿಗೆ ‘ವಿದೇಶೀ ಕ್ಷೌರ’ ಮಾಡಿಸಿಕೊಳ್ಳಲು ನನ್ನ ಆಫೀಸಿಗೆ ಹೋಗುವ ದಾರಿಯಲ್ಲೇ ಇದ್ದ ಒಂದು ಕ್ಷೌರದಂಗಡಿಗೆ ಆನ್ಲೈನ್ ಅಪಾಯಿಂಟ್ಮೆಂಟ್ ಪಡೆದು ಹೊರಟೆ. ಅದೊಂದು ಪುಟ್ಟ ಸಲೂನು. ಚಂದ ಸುಂದರಿಯೋರ್ವಳು ಬಂದು ಕಟಿಂಗ್ ಮಾಡುತ್ತಾಳೆಂಬ ನಿರೀಕ್ಷೆಯಲ್ಲಿದ್ದ ನನಗೆ ಕತ್ತರಿ ಹಿಡಿದು ಬಂದ ಅರವತ್ತೈದರ ಅಜ್ಜಿಯನ್ನು ನೋಡಿ ತುಸು ನಿರಾಸೆಯಾಗಿದ್ದು ಸುಳ್ಳಲ್ಲ. ಹಾಯ್-ಹಲೋಗಳ ಬಳಿಕ ಕ್ಷೌರಸಿಂಹಾಸನ ಹತ್ತಿ ಕುಳಿತೆ. ಅವಳು ಕತ್ತರಿಯಾಡಿಸುತ್ತಾ ಮಾತಿಗೆ ಶುರುವಿಟ್ಟಳು. ಬೆಂಗಳೂರಾದರೇನು, ಬ್ರಿಟನ್ ಆದರೇನು, ತೆಲೆಕೂದಲು ತೆಗೆಯುತ್ತಲೇ ತಲೆ ತಿನ್ನುವ ವಿಚಾರದಲ್ಲಿ ಕ್ಷೌರಿಕರೆಲ್ಲರೂ ಒಂದೇ ಎಂದರಿವಾಗಲು ಬಹಳ ಹೊತ್ತು ಬೇಕಾಗಲಿಲ್ಲ.
ಚೀನೀ ಗೆಳತಿಯ ಪ್ರಸಂಗದ ಬಳಿಕ ಪಾಠ ಕಲಿತಿದ್ದ ನಾನು ಇಂಡಿಯಾದವನು ಎಂದಷ್ಟೇ ಪರಿಚಯಿಸಿಕೊಂಡಿದ್ದೆ, ಅದವಳಿಗೆ ಸಾಕಾಗಲಿಲ್ಲ. ಅವಳಜ್ಜನ ಅಣ್ಣನೋ, ತಮ್ಮನೋ ಬರ್ಮಾದಲ್ಲಿ ಸೈನಿಕನಾಗಿ ಕೆಲಸ ಮಾಡಿದ್ದನಂತೆ. ಹೀಗಾಗಿ ಅವಳಿಗೆ ಮಾಂಡಲೆಯೂ, ಕಲ್ಕತ್ತವೂ ಕೇಳಿ ಗೊತ್ತು. ಆದರೆ ಬೆಂಗಳೂರು, ಮದ್ರಾಸುಗಳೆಲ್ಲ ಅವಳಿಗೆ ಅಪರಿಚಿತ. ನನ್ನ ಬೆಂಗಳೂರು ಕೋಟಿ ಜನರಿರುವ ದೊಡ್ದ ಊರೆಂದೂ, ಐಟಿನಗರಿಯೆಂದೂ ಹೇಳಿದ್ದು ಹೆಚ್ಚು ಉಪಯೋಗಕ್ಕೆ ಬಂದಂತೆ ಕಾಣಲಿಲ್ಲ. ನನ್ನ ರಾಜ್ಯವೊಂದೇ ಅವಳ ದೇಶದಷ್ಟು ದೊಡ್ದದಿದೆಯೆಂದೂ, ಅಲ್ಲೊಂದರಲ್ಲೇ ಇಡೀ ಯೂಕೆಯಷ್ಟು ಜನರಿದ್ದಾರೆಂದೂ ತುಸು ಉತ್ಪ್ರೇಕ್ಷಿಸಿ ಹೇಳಿ ಬೆರಗುಗೊಳಿಸಿದೆ. ತನ್ನೂರೇನೂ ಕಡಿಮೆಯಿಲ್ಲವೆಂಬಂತೆ ಎಡಿನ್ ಬರಾದಲ್ಲಿ ಏನೆಲ್ಲಾ ನೋಡಲಿಕ್ಕೆದೆಯೆಂದು ವಿವರಿಸತೊಡಗಿದಳು. ಅಲ್ಲಿನ ನಗರದೊಳಗಿನ ಹಳೆಯ ಕೋಟೆಯೊಳಗೆ ‘ಸಂಗ್ರಾಮ ಸಂಗ್ರಹಾಲಯ’ ಇದೆಯೆಂದೂ, ಅಲ್ಲೊಬ್ಬ ಇಂಡಿಯಾದ ವೀರ ರಾಜನ ಫೋಟೋ, ಆಭರಣ, ಖಡ್ಗ ಇತ್ಯಾದಿಗಳ ಪ್ರದರ್ಶನವಿದೆ, ನೀನು ನೋಡಲೇಬೇಕೆಂದಳು. ಆಗಲೇ ಗೂಗಲಿಸಿ ನೋಡಿದ್ದೆನಾದ್ದರಿಂದ ನನ್ನ ಟ್ಯೂಬ್ ಲೈಟು ಕೂಡಲೇ ಹೊತ್ತಿಕೊಂಡಿತು! ಆ ರಾಜನ ಹೆಸರು ಟಿಪ್ಪೂ ಅಂತಿರಬೇಕಲ್ಲಾ ಎಂದೆ. ಅವಳು ಹೌದೆನ್ನುತ್ತಲೇ ನಾನು ಅದೇ ಟಿಪ್ಪೂ ಆಳಿದ ಊರಿನವನೆಂದು ಮತ್ತೆ ಪರಿಚಯಿಸಿಕೊಂಡೆ. ಅವಳೋ ಖುಷಿಯಾಗಿ ಬಾಲ್ಯಕ್ಕೆ ಜಾರಿ ಹೋದಳು.
ಪುಟ್ಟವಳಿದ್ದಾಗ ಹಠಮಾಡಿದಾಗ ಅವಳಮ್ಮ ಟಿಪ್ಪೂ ಬರುತ್ತಾನೆಂದು ಹೆದರಿಸುತ್ತಿದ್ದಳಂತೆ! ವಾರದ ಬಳಿಕ ವಾಕಿಂಗಲ್ಲಿ ಸಿಕ್ಕಾಗಲೂ ಆತ್ಮೀಯತೆಯಿಂದ ಮಾತನಾಡಿಸಿ ಜೊತೆಗಿದ್ದ ಗಂಡನಿಗೆ ಇವನು ಟಿಪ್ಪೂ ಊರಿನವನೆಂದು ಪರಿಚಯಿಸಿದಳು. ನಮ್ಮ ಇತಿಹಾಸದಲ್ಲಿ ಆಗಿಹೋದವನೊಬ್ಬ ಹೀಗೆ ದೂರದೇಶದಲ್ಲಿ ನನ್ನ ಐಡೆಂಟಿಟಿಯಾದನೆಂದು ಖುಷಿಯಿಂದ ನಾನೂ ಕೈಕುಲುಕಿದೆ. ಇಂಗ್ಲೀಷರೊಡನೆ ಇನ್ನಿಲ್ಲದಂತೆ ಯುದ್ಧ ಮಾಡಿದ ಟಿಪ್ಪೂ ಸುಲ್ತಾನ ಈಗಲೂ ಹಳೆಯ ಸ್ಕಾಟರ ನೆನಪಲ್ಲಿ ಉಳಿದಿರುವಂತಿದೆ. ನನ್ನದಲ್ಲದ ಬೆಂಗಳೂರಿಗಿಂತಲೂ, ನನ್ನ ಊರನ್ನಾಳಿದ್ದ ರಾಜನೊಬ್ಬನೊಡನೆ ನನ್ನನ್ನು ಗುರುತಿಸಿಕೊಳ್ಳುವುದು, ಸೂಕ್ತವೂ ಆಪ್ತವೂ ಆಗಿ ಕಂಡಿತ್ತು.
ಆಡುವಳ್ಳಿ ಎಂಬ ‘ನಿದ್ರಾಗ್ರಾಮ’
ಊರು ಬಿಟ್ಟರೂ ಬೇರು ಬಿಡಲಾಗದ ನನಗೆ ಆಗಾಗ ಆಡುವಳ್ಳಿ ಎಂಬ ನನ್ನ ಅಜ್ಞಾತ ಊರಿನ ನೆನಪು ಕಾಡುತ್ತಿರುತ್ತದೆ. ಹಿಂದೊಮ್ಮೆ ಅಡಿಕೆ ಪತ್ರಿಕೆಯ ಲೇಖನವೊಂದರಲ್ಲಿ ಪತ್ರಕರ್ತ ಶ್ರೀಪಡ್ರೆಯವರು ಆಡುವಳ್ಳಿಯನ್ನು ‘ನಿದ್ರಾಗ್ರಾಮ’ ಎಂದು ಕರೆದಿದ್ದರು. ನನ್ನೂರನ್ನು ವಿವರಿಸಲಿಕ್ಕೆ ಇದಕ್ಕಿಂತ ಸೂಕ್ತ ಪದ ಸಿಗಲಿಕ್ಕಿಲ್ಲ. ಚಿಕ್ಕಮಗಳೂರು ಜಿಲ್ಲಾಕೇಂದ್ರದಿಂದ ಬಾಳೆಹೊನ್ನೂರಿನ ಮಾರ್ಗವಾಗಿ ಶಿವಮೊಗ್ಗೆಗೆ ಹೋಗುವಾಗ ಸಿಗುವ ನಡುಮಲೆನಾಡಿನ ಪುಟ್ಟ ಊರದು. ಮುಖ್ಯರಸ್ತೆಯ ಬಳಿಯಿರುವ ಗಡಿಗೇಶ್ವರ ಎಂಬ ಊರಲ್ಲಿ ಒಂದು ಹೈಸ್ಕೂಲು, ನಾಲ್ಕಾರು ಅಂಗಡಿಗಳೂ ಇವೆ. ಹತ್ತು ವರ್ಷ ಹಿಂದಿನ ಜನಗಣತಿಯ ಪ್ರಕಾರ ಗ್ರಾಮದಲ್ಲಿ 368 ಮನೆಗಳೂ 1430 ಮಂದಿಯೂ ಇದ್ದಾರಂತೆ.
ಗ್ರಾಮ ದೊಡ್ಡದಿದೆಯಾದರೂ ಭದ್ರಾ ವನ್ಯಜೀವಿ ತಾಣದ ಅಂಚಿನಲ್ಲಿ, ನದಿಯ ತಟದಲ್ಲಿ, ಇರುವ ಒಂದಷ್ಟು ಜಾಗಕ್ಕಷ್ಟೇ ಆಡುವಳ್ಳಿ ಎಂದು ಕರೆಯುವುದು ಈಗ ರೂಢಿ. ಇಂತಿಪ್ಪ ಆಡುವಳ್ಳಿಯ ಮಧ್ಯದಲ್ಲೊಂದು ಸರ್ಕಾರೀ ಪ್ರಾಥಮಿಕ ಪಾಠಶಾಲೆ, ಪಕ್ಕದಲ್ಲೊಂದು ಚಾಕಲೇಟಷ್ಟೇ ಸಿಗುವ ಅಂಗಡಿಯಿದೆ (ಒಂದಿಷ್ಟು ಅನಧಿಕೃತ ಹೆಂಡದಂಗಡಿಗಳೂ ಇವೆಯಾದರೂ ಅವನ್ನೆಲ್ಲ ಇಲ್ಲಿ ಬರೆದರೆ ಊರಿನವರು ನನ್ನನ್ನು ಓಡಿಸಿಕೊಂಡು ಬಂದಾರು!). ಉಳಿದಂತೆ, ಕಾಡಿನ ನಡುವೆ ಅಲ್ಲಲ್ಲಿ ಟಾರಿಲ್ಲದ ರಸ್ತೆ, ಕಾಲುಹಾದಿ, ಅಡಿಕೆ, ಕಾಫಿ, ಭತ್ತದ ಗದ್ದೆಗಳು, ತೋಟದೊಳಗಿನ ಮನೆಗಳು. ಮೂರ್ನಾಲ್ಕು ಮನೆ/ತೋಟಗಳಿರುವ ಜಾಗಕ್ಕೊಂದು ಹೆಸರು- ಸಂಪಿಗೆಮನೆ, ಪಾಂಡ್ಯಾಪುರ, ಮಂಡಲಗಾರು ಇತ್ಯಾದಿ. ಅತ್ತ ಕೊಳಲೆ ಎಂಬ ಪುಟ್ಟ ಊರು, ಇನ್ನಷ್ಟು ಕಾಡಿನ ಒಳಹೊಕ್ಕರೆ ಇತ್ತ ಭದ್ರೆಯ ಮಡಿಲಲ್ಲಿ ಹೆನ್ನಂಗಿ, ಬೆಳ್ಳಂಗಿ. ಇವತ್ತಿಗೂ ನನ್ನೂರಿಗೆ ಪಕ್ಕಾ ರಸ್ತೆಯಿಲ್ಲ, ಬಸ್ ಸಂಪರ್ಕವಿಲ್ಲ. ಊರಿನ ಒಂದೆಡೆ ನಮ್ಮ ಪುಟ್ಟ ತೋಟ ಹಾಗೂ ಅದರೊಳಗೆ ಮನೆ. ಸ್ಥಳೀಯರು ಆ ಜಾಗಕ್ಕೆ ‘ಹೊಸಕೆರೆ‘ ಅಂತಲೂ ಹೇಳುವುದಿದೆ. ಅಸಲಿಗೆ ತೋಟದಾಚೆಯಲ್ಲೊಂದು ಹಳೆಯ ಕೆರೆಯೂ ಇದೆ. ಶತಮಾನಗಳ ಹೂಳು ತುಂಬಿದ ಕೆರೆಯನ್ನು ಜನರಿನ್ನೂ ‘ಹೊಸ’ಕೆರೆ ಅಂತಲೇ ಕರೆಯುತ್ತಾರೆ! ನಮ್ಮನೆಯಿಂದ ಎರಡು ಬೆಟ್ಟ, ಎರಡು ಹಳ್ಳ ದಾಟಿ ಹೈಸ್ಕೂಲಿಗೆ ಹೋಗಬೇಕಿತ್ತು. ಈಗಲೂ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ.
ಪ್ರತೀ ಊರಿಗೂ ತನ್ನದೇ ಆದ ಇತಿಹಾಸ ಇರಲೇಬೇಕಷ್ಟೇ. ನನ್ನ ಅಜ್ಞಾತ ಊರಿಗೂ ಅಂಥದ್ದೇ ಒಂದು ಕಥೆಯಿರಲೇಬೇಕು. ಆದರೆ ಒಂದು ಕಾಲನ್ನು ಊರಲ್ಲೂ, ಮತ್ತೊಂದನ್ನು ಬೆಂಗಳೂರಲ್ಲೂ ಇಟ್ಟ ನನ್ನ ತಲೆಮಾರಿನ ಬಹುತೇಕರಿಗೆ ಊರಿನ ಇತಿಹಾಸದ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಹಳೆಯ ತಲೆಮಾರಿನ ಕೆಲವರು ಈ ಊರು ಹಿಂದೊಮ್ಮೆ ಆಡುವಳ್ಳಿ ಸಂಸ್ಥಾನ ಆಗಿತ್ತೆಂದೂ, ಪಾಳೇಯಗಾರನೊಬ್ಬ ಆಳುತ್ತಿದ್ದನೆಂದು ಹೇಳುತ್ತಾರೆ. ಹಾಗಿದ್ದಿರಬಹುದೆಂಬುದಕ್ಕೆ ಸಾಕಷ್ಟು ಕುರುಹುಗಳೂ ಇವೆ. ಒಂದೆರೆಡು ಪಾಳು ಬಿದ್ದ ದೇವಸ್ಥಾನ, ಅಲ್ಲಲ್ಲಿ ಚದುರಿಬಿದ್ದ ವೀರಗಲ್ಲುಗಳು ಇತ್ಯಾದಿಗಳಿವೆ. ಹೆಚ್ಚಿನವುಗಳನ್ನು ಈಗಾಗಲೇ ಊರಿನ ಜನ ಎತ್ತಿಕೊಂಡು ಹೋಗಿ ಮನೆಯ ಮೆಟ್ಟಿಲಾಗಿಯೋ ಇಲ್ಲಾ ಬಚ್ಚಲ ಮನೆಯ ಕಲ್ಲನ್ನಾಗಿಸಿಕೊಂಡಿದ್ದಾರೆ. ಕಾಡಿನ ನಡುವೆ ಅಲ್ಲಲ್ಲಿ ಕಾಣಸಿಗುವ ದಿಬ್ಬಗಳೂ, ಕಲ್ಲು ಕಟ್ಟಣಗಳೂ ಹಿಂದೊಮ್ಮೆ ಇದ್ದಿರಬಹುದಾದ ಭವ್ಯ ಊರಿನ ಕತೆ ಹೇಳುತ್ತವೆ. ನದಿಯ ಬದಿಯಲ್ಲಂತೂ ಹಲವು ಕಲ್ಲುಗಳೂ, ಮುರಿದು ಬಿದ್ದ ಹಳೆಯ ಮನೆಗಳ ಕುರುಹುಗಳೂ ಇದ್ದವಂತೆ. ಈಗ ಅವೆಲ್ಲ ಯಾರದ್ದೋ ಕಾಫೀ ತೋಟದೊಳಕ್ಕೆ ಸೇರಿಹೋಗಿದೆ.
ನಮ್ಮೂರಿನ ಅಲ್ಲಲ್ಲಿ ಇತಿಹಾಸದ ಕುರುಹುಗಳಿವೆ ಎಂದೆನಷ್ಟೇ? ಹಾಗಂತ ಇತಿಹಾಸದ ಪುಸ್ತಕಗಳನ್ನು ಕೆದಕಿದರೆ ನನ್ನ ಊರಿನ ಬಗ್ಗೆ ಹೆಚ್ಚೇನೂ ದಕ್ಕುವುದಿಲ್ಲ. ಪ್ರಸ್ತುತದಲ್ಲೂ ಇದು ಅಷ್ಟೆಲ್ಲ ಮಹತ್ವದ ಊರೇನೂ ಅಲ್ಲ ಬಿಡಿ. ದಿನಪತ್ರಿಕೆಗಳಲ್ಲಿ ಊರಿನ ಹೆಸರು ಕಾಣಿಸಿಕೊಳ್ಳುವುದೂ ಅಪರೂಪವೇ. ವರ್ಷಕ್ಕೊಮ್ಮೆ ಪಕ್ಕದ ಭದ್ರಾ ವನ್ಯಧಾಮದಿಂದ ಆನೆಗಳು ತೋಟಕ್ಕೆ ಬಂದು, ಬಾಳೇಗಿಡ ತಿಂದು, ಲದ್ದಿ ಹಾಕಿ ಹೋಗಿದ್ದು ಆಗೀಗ ಸುದ್ದಿ ಆಗುತ್ತದೆ, ಅಷ್ಟೇ! ಪ್ರಜೆಗಳಿಗಿಂತ ಗಜಗಳೇ ಹೆಚ್ಚು ಸುದ್ದಿ ಮಾಡುವ ಊರಿದು! ಮಲೆನಾಡಿನ ಮಧ್ಯದ ಪುಟ್ಟ ಊರಿಗೆ ಇತಿಹಾಸಕಾರರ ಕಣ್ಣು ಅಷ್ಟಾಗಿ ಬಿದ್ದಿರಲಿಕ್ಕಿಲ್ಲ. ಆದರೆ ಗೂಗಲೇಶ್ವರನನ್ನು ಕೇಳಿದಾಗ ‘ಆಡುವಳ್ಳಿ’ ಎಂಬ ಹೆಸರಿನ ಊರುಗಳ ಪಟ್ಟಿಯನ್ನೇ ಕೊಟ್ಟ. ಹೆಚ್ಚು ಪ್ರಸಿದ್ದಿಯಾಗಿರುವುದು ಹಾಸನದ ಬಳಿಯಿರುವ ಆಡುವಳ್ಳಿ. ಇಲ್ಲಿ ಹೊಯ್ಸಳರ ಕಾಲದ ಹಲವು ದೇಗುಲಗಳಿವೆ, ಐತಿಹಾಸಿಕ ಶಾಸನಗಳಿವೆ. ಬೇಲೂರು ಬಳಿಯಲ್ಲಿ ಮತ್ತೊಂದು ಪುಟ್ಟ ಆಡುವಳ್ಳಿಯೂ ಇದೆಯಂತೆ.
ಅತ್ತ ಘಟ್ಟದಾಚೆಯೂ ಒಂದು ‘ಆಡುವಳ್ಳಿ’ ಇದೆಯೆಂದು ಶಿವರಾಮ ಕಾರಂತರು ಬರೆಯುತ್ತಾರೆ. ಇದು ಆಡುವಳ್ಳಿಯ ಸುಬ್ಬನೆಂಬ ಹದಿನೆಂಟನೆಯ ಶತಮಾನದ ಯಕ್ಷಗಾನ ಕವಿ ಹಾಗೂ ನಾಟಕಕಾರನ ಹುಟ್ಟೂರು. ಈಗಿನ ಬ್ರಹ್ಮಾವರಕ್ಕೆ ಹಿಂದೆ ಅಜಪುರವೆಂಬ ಹೆಸರಿತ್ತಷ್ಟೇ? ‘ಅಜ’ ಎಂದರೆ ಸಂಸ್ಕೃತದಲ್ಲಿ ಆಡು. ಹೀಗಾಗಿ ಆತ ಇದನ್ನೇ ಕನ್ನಡೀಕರಿಸಿ ಅಜಪುರವನ್ನು ಆಡುವಳ್ಳಿಯೆಂದು ಕರೆದಿದ್ದಾನೆಂಬುದು ಕಾರಂತರ ಅಭಿಮತ. ಈ ಆಡುವಳ್ಳಿ ಸುಬ್ಬ ‘ಪಾರಿಜಾತ’ ಹಾಗೂ ‘ರುಕ್ಮಿಣೀ ಸ್ವಯಂವರ’ವೆಂಬ ಎರಡು ಯಕ್ಷಗಾನ ಪ್ರಸಂಗಗಳ ಕರ್ತೃ. ಹನುದ್ರಾಮಾಯಣವನ್ನು ಕನ್ನಡದಲ್ಲಿ ಬರೆದವನೂ ಇವನೇ ಇದ್ದೀತು ಎಂದು ಹಲವು ವಿದ್ವಾಂಸರ ಅಭಿಮತ. ‘ಆಡುವಳ್ಳಿ ವೆಂಕಾರ್ಯತನುಜ ಸುಬ್ರಹ್ಮಣ್ಯಕವಿ ರಚಿತ ಹನುಮದ್ರಾಮಾಯಣಂ’ ಕೃತಿಯನ್ನು 1914ರಲ್ಲಿ ‘ಉಡುಪಿಯ ಮಿಷನ್ ಹೈಸ್ಕೂಲಿನ ಕರ್ಣಾಟಕ ಪಂಡಿತರಾದ ಮುನ್ನೂರು ಶಿವರಾಮಯ್ಯನವರು’ ಶೋಧಿಸಿ, ತುಸು ಪರಿಷ್ಕರಿಸಿ ಪ್ರಕಟಿಸಿರುವರು. ಈ ಕವಿ ತನ್ನ ಕೃತಿಗಳಲ್ಲಿ ಹೇಳಿಕೊಳ್ಳುವ ಪ್ರಕಾರ ಅವನು ಆಡುವಳ್ಳಿಯ ವೆಂಕಯ್ಯನೆಂಬ ಬ್ರಾಹ್ಮಣನ ಮಗ. ಕೊಲ್ಲೂರು ಮೂಕಾಂಭಿಕೆಯ ಭಕ್ತ. ಕೆಳದಿಯ ರಾಜ ಹಿರಿಯ ಬಸಪ್ಪ ನಾಯಕನ ಆಶ್ರಯದಲ್ಲಿ ಬದುಕಿದವನು. ಈ ಬಸಪ್ಪ ನಾಯಕ ಸ್ವತಃ ಕವಿ. ಶಿವತತ್ವರತ್ನಾಕರ ಅವನ ಕೃತಿ. ಸುಬ್ಬಕವಿ ಅಸಲಿಗೆ ನನ್ನೂರು ಆಡುವಳ್ಳಿಯವನೇ ಆಗಿದ್ದನೇ? ಅವನೇ ಸ್ವತಃ ಆಡುವಳ್ಳಿಯವನೆಂದು ಹೇಳಿಕೊಂಡಿರುವಾಗ ಇದು ಸಂಸ್ಕೃತದಿಂದ ಅವನು ಮಾಡಿಕೊಂಡ ಅನುವಾದ, ಹೀಗಾಗಿ ಅದು ಅಜಪುರ/ಬ್ರಹ್ಮಾವರ ಎಂದು ಭಾವಿಸಲಿಕ್ಕೆ ಹೆಚ್ಚೇನೂ ಕಾರಣಗಳು ನನಗೆ ಕಾಣಿಸುವುದಿಲ್ಲ. ಹಾಸನದ ಆಡುವಳ್ಳಿ ಕೆಳದಿ ಅರಸರ ಕಾಲದಲ್ಲಿ ಅವರ ಆಡಳಿತಕ್ಕೆ ಒಳಪಟ್ಟಿರಲಿಲ್ಲ. ಇನ್ನು ಉಳಿದಿದ್ದು ನನ್ನೂರು-ಅದು ಆ ಕಾಲದಲ್ಲಿ ಪ್ರಮುಖ ಊರಾಗಿತ್ತೆಂಬುದಕ್ಕೆ ಸಾಕ್ಷ್ಯಗಳಿವೆ. ಹೀಗಾಗಿ ಅಸಲಿಗೆ ಸುಬ್ಬ ಕವಿಯ ಹುಟ್ಟೂರು ಬ್ರಹ್ಮಾವರದ ಬದಲಿಗೆ ನನ್ನೂರಾಗಿದ್ದೀತೇ? ವಿದ್ವಾಂಸರು ಇನ್ನಷ್ಟು ವಿಚಾರ ಮಾಡಬೇಕಿದೆ.
ನರಸಿಂಹರಾಜಪುರ ತಾಲ್ಲೂಕಿನ ಕಾಡಿನ ನಡುವೆ ಕಳೆದುಹೋಗಿರುವ ನನ್ನೂರು-ಆಡುವಳ್ಳಿಯ ಬಗ್ಗೆ ಹೆಚ್ಚೇನೂ ಮಾಹಿತಿ ಸುಲಭಕ್ಕೆ ಸಿಗುವುದಿಲ್ಲ. ನನ್ನೂರಿಗೆ ‘ಆಡುವಳ್ಳಿ’ ಎಂಬ ಹೆಸರು ಬಂದಿದ್ದು ಹೇಗಿದ್ದೀತು? ಇದೂ ಅಜಪುರದ ಅಪಭ್ರಂಶವೋ? ಅದು ಆಡುವ ಹಳ್ಳಿಯೋ? ಆಡುಗಳಿರುವ ಹಳ್ಳಿಯೋ? ಹಾಗಂತ ನಡುಮಲೆನಾಡಿನ ಈ ಹಳ್ಳಿಯಲ್ಲಿ ನಿಮಗೆ ಆಡು, ಕುರಿಗಳು ಕಾಣಲಾರವು. ಬದಲಿಗೆ ಸ್ವಚ್ಚಂದವಾಗಿ ಕಾಡಲೆದು ಮರಳಿ ಕೊಟ್ಟಿಗೆಯತ್ತ ಸ್ವಯಂಪ್ರೇರಿತವಾಗಿ ಸಾಗುತ್ತಿರುವ ಮಲೆನಾಡು ಗಿಡ್ಡ ತಳಿಯ ದನಗಳು ನಿಮಗೆ ದರ್ಶನ ನೀಡಬಹುದು. ಆರು ಹಳ್ಳಿಗಳಿದ್ದ ಊರು-ಆರುವಳ್ಳಿ, ಕ್ರಮೇಣ ಆಡುವಳ್ಳಿ ಆಯಿತೆನ್ನುತ್ತಾರೆ ಊರಿನ ಕೆಲವರು. ಹಾಗಿದ್ದರೆ ಹಿಂದೊಮ್ಮೆ ಆಡುವಳ್ಳಿ ಈಗಿರುವುದಕ್ಕಿಂತಲೂ ದೊಡ್ದದಾಗಿತ್ತೇ? ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ದಾಖಲೆಗಳಲ್ಲಿ, ಮೈಸೂರರಸರ ಪತ್ರಾಗಾರದಲ್ಲಿ ನನ್ನೂರಿನ ಬಗ್ಗೆ ಹೆಚ್ಚೇನಾದರೂ ಮಾಹಿತಿ ಸಿಕ್ಕೀತೇ?
ಅಸಲಿಗೆ ಅವಳಿಗೆ ಭಾರತದ ಒಂದು ನಗರದ ಹೆಸರೂ ಗೊತ್ತಿರಲಿಲ್ಲ. ಇಲ್ಲೇ ನಮ್ಮ ಹಿಮಾಲಯದಾಚೆಗಿನ ದೇಶದವಳೆಂದೂ, ಅವಳಿಗೆ ಬೆಂಗಳೂರು ಗೊತ್ತಿದ್ದೀತೆಂದೂ ಭ್ರಮಿಸಿಕೊಂಡಿದ್ದೇ ತಪ್ಪಾಯಿತು. ಅವಳಿಗೆ ಇಂಡಿಯಾ ಅಂದರೆ ‘ಆಮೀರ್ ಖಾನನ ದೇಶ’ ಅಂತಷ್ಟೇ ಗೊತ್ತಿದ್ದಿದ್ದು.
ಸ್ವಾತಂತ್ರ್ಯಾ ಪೂರ್ವದ ಕೊನೆಯ ಜನಗಣತಿಯ ಪ್ರಕಾರ ಆಡುವಳ್ಳಿಯಲ್ಲಿ 49 ಮನೆಗಳೂ 309 ಜನಗಳೂ ಇದ್ದರಂತೆ. ಅದಕ್ಕಿಂತಲೂ ಹಿಂದೆ ಹೋದರೆ, ದೇಶದ ಮೊದಲ ಜನಸಂಖ್ಯಾ ಗಣತಿಯ (1871) ದಾಖಲೆಗಳು ಸಿಗುತ್ತವೆ. ಆಗಿನ ಮೈಸೂರು ರಾಜ್ಯದ, ಕಡೂರು ಜಿಲ್ಲೆಯ ವಸ್ತಾರೆ ತಾಲೂಕು, ಖಾಂಡ್ಯ ಹೋಬಳಿಯ ಆಡುವಳ್ಳಿಯ ಜನಸಂಖ್ಯೆ ನೂರಕ್ಕಿಂತ ಕಡಿಮೆ ಎಂದು ದಾಖಲೆಗಳು ಹೇಳುತ್ತವೆ. ಬ್ರಿಟಿಷ್ ದಾಖಲೆಗಳನ್ನು ಇನ್ನಷ್ಟು ಕೆದಕಿದರೆ ಆಡುವಳ್ಳಿ ಗ್ರಾಮದ ಭದ್ರಾ ನದಿಯಾಚೆಗೆ ಒಂದು ಸುಂಕದ ಕಟ್ಟೆ ಇದ್ದ ಬಗ್ಗೆಯೂ ಮಾಹಿತಿ ಸಿಗುತ್ತದೆ. ಈಗ ಭದ್ರಾ ವನ್ಯಜೀವಿಧಾಮದ ಭಾಗವಾಗಿರುವ ಕಾಡಿನಲ್ಲಿ ಖಾಂಡ್ಯ, ಜಾಗರ, ಮಾದಲ, ಹಿಪ್ಪಲ, ಸೊಗದವಾಣಿಯಂತಹ ಹಲವು ಊರುಗಳೂ ಅದರಾಚೆಗಿನ ವಸ್ತಾರೆ ಪ್ರಮುಖ ತಾಲೂಕು ಕೇಂದ್ರವೂ ಇತ್ತೆಂಬ ಉಲ್ಲೇಖವಿದೆ. ಈಗ ವಸ್ತಾರೆ ಚಿಕ್ಕಮಗಳೂರಿಗೆ ಅಂಟಿಕೊಂಡ ಒಂದು ಸಣ್ಣ ಹಳ್ಳಿ ಆಗಿದೆ ಅಷ್ಟೇ.
ಈಗ ಕಾಡಿನ ನಡುವೆ ಕಳೆದು ಹೋಗಿರುವ ಈ ಊರುಗಳು ಕನ್ನಡ ಸಾಹಿತ್ಯದಲ್ಲೂ ವಿಶಿಷ್ಟ ಸ್ಥಾನ ಪಡೆದಿವೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಮಾಸ್ತಿ ವೆಂಕಟೇಶ ಅಯ್ಯಂಗಾರರು 1920ರ ಸುಮಾರಿಗೆ ಚಿಕ್ಕಮಗಳೂರಿನಲ್ಲಿ ಸಬ್ ಡಿವಿಜನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾಗ ಅಲ್ಲಿನ ಊರುಗಳ ಇತಿಹಾಸವನ್ನು ಆಧರಿಸಿ ‘ಚೆನ್ನಬಸವನಾಯಕ’ ಎಂಬ ಕಾದಂಬರಿ ಬರೆದಿದ್ದಾರೆ. “ಹೃದಯವನ್ನು ಔಕುವ ಈ ಪ್ರಾಂತ್ಯದ ಈ ವಿಜನತೆ ಈಗ ನೂರು ವರ್ಷಗಳ ಇತ್ತೀಚಿನದು. ಈಗೆ ನೂರ ಐವತ್ತು ವರ್ಷಗಳ ಹಿಂದೆ ಈ ನಾಡು ಬಿದನೂರ ನಾಯಕರ ಆಡಳಿತದಲ್ಲಿದ್ದಿತು. ಆಗ್ಗೆ ಈ ಗ್ರಾಮಗಳು ತುಂಬಿ ಬಾಳುತ್ತಿದ್ದವು” ಎಂದು ಮಾಸ್ತಿ ಬರೆಯುತ್ತಾರೆ. ಹಾಗಿದ್ದರೆ ಬಿದನೂರು ಅರಸರ ಕಾಲದಲ್ಲಿ ಭವ್ಯವಾಗಿದ್ದ ಈ ಭದ್ರಾ ನದಿಯ ಇಕ್ಕೆಲದ ಈ ಊರುಗಳು ಈಗೇಕೆ ಹೀಗಾದವು?
ನಮ್ಮೂರಿನ ಶಾಲೆಯ ಪಕ್ಕದಲ್ಲೊಂದು ಪ್ರಾಚೀನವಾದ ವರದರಾಜಸ್ವಾಮಿಯ ದೇವಸ್ಥಾನವಿದೆ. ನಾವು ಶಾಲೆಗೆ ನಡೆದು ಹೋಗುವಾಗ ಇದೇ ಹಾದಿಯಲ್ಲಿ ಹೋಗಬೇಕಿತ್ತು. ವರ್ಷಗಳ ಹಿಂದೆ ಅಲ್ಲೊಂದು ಆರಡಿ ಎತ್ತರದ ಚಂದನೆಯ ವರದರಾಜನ ವಿಗ್ರಹವಿತ್ತು. ಇದರ ಕೈ, ಮೂಗು ಇತ್ಯಾದಿಗಳೆಲ್ಲ ಭಿನ್ನವಾಗಿದ್ದವು. ವಿಗ್ರಹ ಗೋಡೆಗಳಿಲ್ಲದೇ ಬಯಲಲ್ಲಿ, ತುಸು ಎತ್ತರದಲ್ಲಿ ನಿಂತಿತ್ತು. ಆ ಜಾಗದ ಹಿಂದೊಂದು ಕೆರೆ, ಸುತ್ತ ಮುತ್ತ ಮುರಿದು ಬಿದ್ದ ಕಲ್ಲು ಕೆತ್ತನೆಗಳು. ಮರಗಳಡಿಯ ನೆರಳು ಬೆಳಗಿನ ನಡುವೆ ನಿಂತ ಆ ವಿಗ್ರಹ ಒಂದು ಬಗೆಯ ನಿಗೂಢತೆಯನನ್ನೂ, ಕುತೂಹಲವನ್ನೂ ಉಕ್ಕಿಸುತ್ತಿತ್ತು. ಊರವರ ಪ್ರಕಾರ ಇದು ಆಡುವಳ್ಳಿ ಸಂಸ್ಥಾನ ಭವ್ಯವಾಗಿದ್ದ ಕಾಲದ ದೇಗುಲ. ಅನ್ಯಧರ್ಮೀಯರ ಧಾಳಿಸಿ ಸಿಲುಕಿ ದೇಗುಲಕ್ಕೆ ಈ ಗತಿ ಬಂದಿತ್ತು ಎಂಬುದು ಹಳಬರ ಅಂಬೋಣ. ಹಾಗೆ ಧಾಳಿಯಾದಾಗ ಬಹಳಷ್ಟು ಜನ ಪ್ರಾಣ ಉಳಿಸಿಕೊಳ್ಳಲೆಂದು ಊರು ಬಿಟ್ಟು ಹೋಗಿದ್ದರೆಂದೂ, ಅವರ ವಂಶಜರೆಂದು ಹೇಳಿಕೊಳ್ಳುವವರು ಆಗೀಗ ಬಂದು ದೇಗುಲಕ್ಕೆ ನಮಿಸಿ ಹೋಗುವುದಿದೆ. ಆದರೂ ಧಾಳಿಗೆ ಕಾರಣವೇನು, ಮಾಡಿದವರಾರು ಎಂಬ ಬಗ್ಗೆ ಹೆಚ್ಚೇನೂ ವಿವರಗಳು ಜನಪದರಿಗೆ ಗೊತ್ತಿದ್ದಂತಿಲ್ಲ. ಇತ್ತೀಚೆಗೆ ಜೀರ್ಣೋದ್ಧಾರದ ನೆಪದಲ್ಲಿ ಅಲ್ಲಿದ್ದ ಹಳೆಯ ದೇಗುಲದ ಅವಶೇಷಗಳನ್ನೆಲ್ಲ ಕೆಡವಿ ಹೊಸ ಸಿಮೆಂಟಿನ ದೇಗುಲದ ಕಟ್ಟಡ ಎದ್ದು ನಿಂತಿದೆ. ಮಳೆಬಿಸಿಲೆನ್ನದೆ ಮರದಡಿಯಲ್ಲಿ ಶತಮಾನಗಳ ಕಾಲ ನಿಂತಿದ್ದ ಒಂದು ಸುಂದರ ವರದರಾಜನ ವಿಗ್ರಹವನ್ನು ಅಲ್ಲಿಂದ ಸಾಗಹಾಕಲಾಗಿದೆ, ಅಳಿದುಳಿದ ಅವಶೇಷಗಳನ್ನು ಭದ್ರೆಯ ಒಡಲಿಗೆ ಎಸೆಯಲಾಗಿದೆ. ಇತಿಹಾಸ ಪ್ರಜ್ಞೆ ಅಷ್ಟಾಗಿ ಇಲ್ಲದ ನಮ್ಮಲ್ಲಿ ಹೀಗಾಗುವುದು ಸಹಜ ಬಿಡಿ.
ಅಲ್ಲೇ ಹತ್ತಿರದಲ್ಲಿ ಯಾರದ್ದೋ ಗದ್ದೆಯಂಚಿನಲ್ಲಿ ಇದ್ದ ಬಿದಿರಿನ ಮೆಳೆಗಳಡಿಯಲ್ಲಿ ಒಂದು ದೊಡ್ಡ ಕಲ್ಲಿತ್ತು. ಸುಮಾರು ಐದಾರು ಅಡಿ ಎತ್ತರದ ಕಲ್ಲಿನ ಒಂದು ಬದಿಯಲ್ಲಿ ಎಂತೆಂಥದೋ ಉಬ್ಬು ಶಿಲ್ಪದ ಕೆತ್ತನೆ. ಮೇಲಿನ ಸಾಲಿನಲ್ಲಿ ಧ್ಯಾನಸ್ಥ ಭಂಗಿಯಲ್ಲಿ ಕುಳಿತವನ ಆಚೀಚೆ ಸೊಂಡಿಲೆತ್ತಿ ನಿಂತ ಆನೆಗಳು, ಕೆಳಗಿನ ಸಾಲಿನಲ್ಲಿ ಶಿವಲಿಂಗ, ಮತ್ತೊಂದರಲ್ಲಿ ಆಯುಧ ಹೊತ್ತು ನಿಂತ ಸೈನಿಕರು, ಮಧ್ಯದಲ್ಲಿ ತುರುಬು ತೊಟ್ಟು ನಿಂತ ತುಂಬಿದೆದೆಯ ಹೆಂಗಳೆಯರು… ಹೀಗೆ ಏನೇನೋ ವಿಚಿತ್ರ ಶಿಲ್ಪ. ಹಿಂಬದಿಯಲ್ಲಿ ಹಳೆಗನ್ನಡದ ಮೋಡಿ ಅಕ್ಷರಗಳು. ಪಾಚಿ ಬೆಳೆದು ನಿಂತ ಕಲ್ಲನ್ನು ಊರವರು ವೀರಗಲ್ಲು ಎನ್ನುತ್ತಿದ್ದರಾದರೂ ಯಾರಿಗೂ ಹೆಚ್ಚೇನೂ ತಿಳಿದಂತಿಲ್ಲ. ಆಗಷ್ಟೇ ಸಮಾಜ ವಿಜ್ಞಾನದ ಪಾಠದಲ್ಲಿ ಅಶೋಕನ ಶಾಸನಗಳ ಬಗ್ಗೆ ಓದಿದ್ದರಿಂದ ನನಗೆ ನಮ್ಮೂರಿನ ಈ ಶಾಸನವನ್ನೂ ಓದಿ ಅರ್ಥೈಸಿಕೊಳ್ಳುವ ಬಯಕೆ. ಮೇಷ್ಟ್ರಿಗೆ ಈ ಬಗ್ಗೆ ಹೇಳಿದರೆ ಅವರ್ಯಾಕೋ ನಯಾಪೈಸೆ ಆಸಕ್ತಿ ತೋರಿಸಲಿಲ್ಲ. ಇನ್ನು ನಮ್ಮ ಕನ್ನಡ ಮೇಷ್ಟ್ರಿಗೇ ಸರಿಯಾಗಿ ಹಳೆಗನ್ನಡದ ಪಠ್ಯ ಓದಲು ಬರುತ್ತಿರಲಿಲ್ಲ. ಕೊನೆಗೆ ಒಂದು ದಿನ ನಾನೇ ಸಂಜೆ ಶಾಲೆಯ ಬಳಿಕ ಅಲ್ಲಿಗೆ ಗೆಳೆಯರನ್ನು ಕಟ್ಟಿಕೊಂಡು ಹೋದೆ. ಅಲ್ಲಿ ಕೊರೆದಿದ್ದ ಮೋಡಿ ಅಕ್ಷರಗಳನ್ನು ನೋಡಿ ತಲೆಬುಡ ಅರ್ಥವಾಗಲಿಲ್ಲ. ಅಪ್ಪಯ್ಯನನ್ನು ಕೇಳಿದರೆ, ಕಲ್ಲಿನ ಮೇಲೆ ಒಂದು ಕಾಗದವಿಟ್ಟು ಪೆನ್ಸಿಲ್ ನಿಂದ ಅದನ್ನು ಮೊದಲು ಪ್ರತಿ ಮಾಡಿಕೊಳ್ಳಬೇಕೆಂದೂ, ಶಾಸನ ತಜ್ಞರೆಲ್ಲ ಹಾಗೇ ಓದುವುದೆಂದೂ ಹೇಳಿದ. ಆ ರಾತ್ರಿಯೆಲ್ಲ ನನಗೆ ಕಲ್ಲಿನ ಕತೆಯನ್ನು ಭೇದಿಸಿದ ಕನಸು. ಮರುದಿನ ಶಾಲೆಯಿಂದ ಬರುವಾಗ ಮಹಾನ್ ಇತಿಹಾಸಕಾರನ ಹಮ್ಮಿನಲ್ಲಿ ಖಾಲಿ ಕಾಗದ ಪೆನ್ಸಿಲ್ ಹಿಡಿದು ರಹಸ್ಯ ಭೇದಿಸಲು ಹೊರಟೆ. ಶತಮಾನಗಳಿಂದ ಕಲ್ಲಿನ ಮೇಲೆ ಬೆಳೆದಿದ್ದ ಶಿಲಾವಲ್ಕಗಳು ಕಾಗದವನ್ನು ತೂತು ಮಾಡಿದವೇ ಹೊರತು ನನಗೆ ಒಂದಕ್ಷರವನ್ನೂ ಪ್ರತಿ ಮಾಡಿಕೊಳ್ಳಲಾಗಲಿಲ್ಲ. ಕಲ್ಲಿನ ಕತೆ ಕಲ್ಲಿನಲ್ಲಿಯೇ ಉಳಿದುಹೋಯಿತು. ಈ ಭವ್ಯ ವಿಗ್ರಹಗಳನ್ನೂ ಶಾಸನಗಳನ್ನೂ ನೆಟ್ಟವರಾರು? ಆಡುವಳ್ಳಿ ಸಂಸ್ಥಾನ ನಿರ್ನಾಮವಾಗಿ ಹೀಗೆ ಊರೊಂದು ಕಾಡಿನ ನಡುವಿನ ಕೊಂಪೆ ಆಗಿದ್ದಾದರೂ ಹೇಗೆ?
ಆಡುವಳ್ಳಿಯ ಇತಿಹಾಸದ ಬಗ್ಗೆ ನನಗೆ ಕುತೂಹಲಕಾರಿಯಾದ ಸುಳಿವು ಆಕಸ್ಮಿಕವಾಗಿ ಸಿಕ್ಕಿದ್ದು ಮರಾಠರ ಇತಿಹಾಸ ಓದುವಾಗ! ಐವತ್ತು ವರ್ಷ ಹಿಂದಿನ ಇಂಗ್ಲಿಷ್ ಲೇಖನವೊಂದರಲ್ಲಿ ಶಿವಾಜಿಯ ಮಗ ರಾಜಾರಾಮನು ಮೊಘಲರಿಂದ ತಪ್ಪಿಸಿಕೊಂಡು, ಆಡುವಳ್ಳಿ ಮಾರ್ಗವಾಗಿ ಹೋಗಿದ್ದನಂತೆ ಎಂಬ ಒಂದು ಸಾಲಿನ ಮಾಹಿತಿ ಸಿಕ್ಕಿತು. ಅರೆ! ಛತ್ರಪತಿಗೂ ಆಡುವಳ್ಳಿಗೂ ಎತ್ತಣಿಂದೆತ್ತ ಸಂಬಂಧ? ಅದರ ಬೆನ್ನತ್ತಿ ಹೋದಾಗ ಸಿಕ್ಕ ಕನ್ನಡ ಕಾವ್ಯದ ಕುರಿತು ಹೇಳುವ ಮುನ್ನ ರಾಜಾರಾಮನ ಬಗ್ಗೆ ನಿಮಗೆ ಹೇಳಬೇಕು.
ಛತ್ರಪತಿ ಶಿವಾಜಿಯ ಮರಣದ ನಂತರ ಹಿರಿಯ ಮಗ ಸಾಂಭಾಜಿ ಪಟ್ಟಕ್ಕೇರುತ್ತಾನೆ. ಇವನು ಮೈಸೂರು ರಾಜ್ಯದ ಮೇಲೂ ಧಾಳಿ ಮಾಡಿದವನು. ಆದರೆ ಅಧಿಕಾರಕ್ಕೆ ಬಂದ ದಶಕದೊಳಗೇ ಮೊಘಲರ ಕೈಗೆ ಸಿಕ್ಕು ಹತನಾಗುತ್ತಾನೆ. ಸಾಂಭಾಜಿಯ ಸಾವಿನಿಂದ ಮರಾಠರ ಸಾಮ್ರಾಜ್ಯಕ್ಕೆ ದಿಕ್ಕೆಟ್ಟಂತಾಗುತ್ತದೆ. ಶಿವಾಜಿಯ ಎರಡನೆಯ ಮಗನೇ ರಾಜಾರಾಮ ಭೋಸ್ಲೆ. ಆಗವನಿಗೆ ಇನ್ನೂ ಹದಿಹರೆಯ. ಸಾಂಭಾಜಿಯ ಸಾವಿನ ಬಳಿಕ ಅವನು ಮಾರಾಠ ಸಾಮ್ರಾಜ್ಯದ ಮೂರನೆಯ ಛತ್ರಪತಿಯೆಂದು ಪಟ್ಟ ಕಟ್ಟಲಾಗುತ್ತದೆ. ಆದರೆ ಕೆಲವೇ ದಿನಗಳಲ್ಲಿ ರಾಜಧಾನಿ ರಾಯಘಡದ ಕೋಟೆಯೂ ಮೊಘಲರ ವಶವಾಗುತ್ತದೆ. ಮರಾಠರ ಆಶಾಕಿರಣವಾಗಿದ್ದ ರಾಜಾರಾಮನನ್ನು ಶತ್ರುಗಳಿಂದ ರಕ್ಷಿಸಲು ಅಮಾತ್ಯ ರಾಮಚಂದ್ರ ಪಂತರು ಅವನನ್ನು ಹತ್ತಿರದ ಪ್ರತಾಪಘಢ ಕೋಟೆಗೆ ಕಳಿಸುತ್ತಾರೆ. ಶತ್ರುಗಳ ಧಾಳಿಯಿಂದ ಆ ಜಾಗವೂ ಸುರಕ್ಷಿತವಲ್ಲವೆಂದು ಅರಿತ ಮರಾಠರು ತಮ್ಮ ಮಹಾರಾಜನನ್ನು ಈಗಿನ ತಮಿಳುನಾಡಿನಲ್ಲಿರುವ ಜಿಂಜಿ ಕೋಟೆಗೆ ಕರೆದುಕೊಂಡು ಹೋಗಲು ಅನುವಾಗುತ್ತಾರೆ. ಆದರೆ ಈ ಪಯಣ ಅಷ್ಟು ಸುಲಭವಲ್ಲ, ನಡುವೆ ಮೈಸೂರು, ಕೆಳದಿ, ಸೋಂದೆ, ಇತ್ಯಾದಿ ರಾಜ್ಯಗಳನ್ನು, ಜೊತೆಗೆ ಮೊಘಲರು ಆಕ್ರಮಿಸಿಕೊಂಡಿದ್ದ ಹಲವು ಪ್ರದೇಶಗಳನ್ನೂ ಹಾದು ಹೋಗಬೇಕು. ಮೈಸೂರರಸರ ಜೊತೆ ಆಗ ಮರಾಠರ ಸಂಬಂಧ ಹಳಸಿದ್ದರಿಂದ ಅವರು ಸುಲಭಕ್ಕೆ ಬೆಂಬಲಿಸುತ್ತಾರೆಂದು ಹೇಳಲಾಗದು. ಜೊತೆಗೆ ಮೊಘಲರಂಥಾ ಮೊಘಲರನ್ನು ಎದುರು ಹಾಕಿಕೊಂಡು, ಪ್ರಾಣಭಯದಿಂದ ಸೋತು ಓಡುತ್ತಿರುವ ಈ ಯುವರಾಜನನ್ನು ರಕ್ಷಿಸುವ ದುಸ್ಸಾಹಸಕ್ಕೆ ಯಾರು ಮುಂದಾದಾರು?
ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ರಾಜಾರಾಮನ ಪಯಣದ ವಿವರಗಳ ಬಗ್ಗೆ ಒಂದಿಷ್ಟು ಲಿಖಿತ ಇತಿಹಾಸ ಲಭ್ಯವಿದೆ. ಶಿವಾಜಿ ಹಾಗೂ ಅವನ ಮಕ್ಕಳ ಕಾಲದಲ್ಲಿ ರಾಜಪುರೋಹಿತರಾಗಿದ್ದ ಕೇಶವ ಪಂಡಿತರು ಬರೆದ ಸಂಸ್ಕೃತ ಕಾವ್ಯ ‘ರಾಜಾರಾಮ ಚರಿತೆ’ ಈ ನಿಟ್ಟಿನಲ್ಲಿ ಮೊದಲ ಆಕರ. ಕೇಶವ ಪಂಡಿತರು ಸ್ವತಃ ರಾಜಾರಾಮನ ಜೊತೆಗೆ ಜಿಂಜಿ ಕೋಟೆಗೆ ತಲುಪಿದವರು. ಮಾರುವೇಷದಲ್ಲಿ ಅವರಿವರ ಆಶ್ರಯ ಬೇಡಿ, ಮೊಘಲರ ಕಣ್ಣು ತಪ್ಪಿಸಿಕೊಂಡು ತಮಿಳುನಾಡು ತಲುಪಿದ ರಾಜಾರಾಮನ ಕತೆಯನ್ನು ಮಹಾನ್ ವೀರ ಚರಿತ್ರೆಯೆಂಬಂತೆ ಬಣ್ಣಿಸಿದ್ದಾರೆ. ಆಸ್ಥಾನ ಪಂಡಿತರೆಂದೂ ನಿಷ್ಠುರ ಇತಿಹಾಸಕಾರ ಆಗಲಾರರು, ಬಿಡಿ. ಆದರೂ ಈ ಕೃತಿಯಲ್ಲಿ ರಾಜಾರಾಮನು ಮಹಾರಾಷ್ಟ್ರದ ಪನ್ಹಳ ಕೋಟೆಯಿಂದ ಹೊರಟು ಗೋಕರ್ಣ, ಸೋಂದಾ, ಕೆಳದಿ ಸಂಸ್ಥಾನಗಳನ್ನು ದಾಟಿ ಬೆಂಗಳೂರಿನ ಮೂಲಕ ವೆಲ್ಲೂರು ತಲುಪಿದ ಬಗ್ಗೆ ಸ್ಥೂಲವಾದ ವಿವರಗಳು ದಕ್ಕುತ್ತವೆ. ಈ ನಡುವೆ ತುಂಗಭದ್ರಾ ನದೀತೀರದಲ್ಲಿ ಮೊಘಲರ ಸೇನೆಯೊಡನೆ ರಾಜಾರಾಮನ ಪುಟ್ಟ ಸೈನ್ಯ ಕಾದಾಡಿದ್ದನ್ನೂ, ಅಲ್ಲಿಂದ ತಪ್ಪಿಸಿಕೊಂಡು ಹೋದದ್ದನ್ನೂ ದಾಖಲಿಸುತ್ತಾರೆ.
ಈ ಘಟನೆಯ ದಶಕಗಳ ಬಳಿಕ ಕೆಳದಿಯನ್ನಾಳುತ್ತಿದ್ದ ಬಸವರಾಜ ಸಂಸ್ಕೃತದಲ್ಲಿ ಬರೆದ ‘ಶಿವತತ್ವರತ್ನಾಕರ’ ಎಂಬ ಕೃತಿಯಲ್ಲಿಯೂ ರಾಜಾರಾಮನ ಪಯಣದ ಬಗ್ಗೆ ಒಂದಿಷ್ಟು ವಿವರಗಳಿವೆ. ವರಂಗಖಾನನಿಂದ (ಔರಂಗಜೇಬ್) ಸೋತು ಅಲ್ಲಿಲ್ಲಿ ಮಾರುವೇಷದಲ್ಲಿ ಅಲೆಯುತ್ತಿದ್ದ ಛತ್ರಪತಿ ರಾಜಾರಾಮನು ಕೆಳದಿಗೆ ಬಂದಾಗ ರಾಣಿ ಚೆನ್ನಮ್ಮಾಜಿಯು ರಾಜನಿಗೆ ಸೂಕ್ತ ಆತಿಥ್ಯ ನೀಡಿ, ಹಾರ ತುರಾಯಿಗಳನ್ನೂ, ಆಭರಣಗಳನ್ನೂ ನೀಡಿ ಸತ್ಕರಿಸಿದಳಂತೆ.
ಹಾಗಿದ್ದರೆ ಛತ್ರಪತಿಗೂ ಆಡುವಳ್ಳಿಗೂ ಎತ್ತ ಸಂಬಂಧ? ರಾಜಾರಾಮನ ಕೆಳದಿಯ ಪಯಣದ ಇನ್ನಷ್ಟು ವಿವರಗಳು ನಮಗೆ ದಕ್ಕುವುದು ಲಿಂಗಣ್ಣ ಕವಿ ಬರೆದ ‘ಕೆಳದಿ ನೃಪವಿಜಯ’ ಎಂಬ ಚಂಪೂ ಕಾವ್ಯದಲ್ಲಿ. ಇವನು ಹದಿನೆಂಟನೆಯ ಶತಮಾನದಲ್ಲಿ ಕೆಳದಿಯ ದೊರೆ ಎರೆಡನೆಯ ಬಸಪ್ಪ ನಾಯಕನ ಆಡಳಿತಾವಧಿಯಲ್ಲಿ ಆಸ್ಥಾನಕವಿಯಾಗಿದ್ದವನು. ರಾಜಾರಾಮನು ಬಿದನೂರು ರಾಣಿಯಲ್ಲಿ ಆಶ್ರಯ ಬೇಡಿ ಈಗಿನ ಹೊನ್ನಾಳಿಯ ಬಳಿ ರಾಜ್ಯದ ಗಡಿಗೆ ಬಂದಿದ್ದನ್ನೂ, ಶಿವಮೊಗ್ಗೆ ಬಳಿ ಗಾಜನೂರಿನ ಹೊಳೆ ದಾಟಿ, ಬೋರೆ, ನಡೆಹಳ್ಳಿ, ಆಡುವಳ್ಳಿ, ಕಳಸ, ಖಾಂಡ್ಯ, ವಸುಧಾರೆ (ಈಗಿನ ವಸ್ತಾರೆ) ಇತ್ಯಾದಿಗಳನ್ನು ದಾಟಿ ಹೋದದ್ದನ್ನು ದಾಖಲಿಸುತ್ತಾನೆ. ಪುಟ್ಟ ಸಂಸ್ಥಾನದ ಒಡತಿಯಾಗಿದ್ದ ಚೆನ್ನಮ್ಮ ತನ್ನ ಮಂತ್ರಿಮಂಡಲದ ಕೋಳಿವಾಡದ ಬೊಮ್ಮಯ್ಯ, ಬೊಕ್ಕಸದ ಸಿದ್ಧಬಸವಯ್ಯ ಇತ್ಯಾದಿ ಜನರೊಡನೆ ಚರ್ಚಿಸುತ್ತಾಳೆ. ದಿಲ್ಲಿಯ ಔರಂಗಜೇಬನಂತಹ ರಾಜನನ್ನು ಎದುರುಹಾಕಿಕೊಳ್ಳುವುದು ಸುಲಭವಲ್ಲದ್ದಾದರೂ, ಆಶ್ರಯ ಬೇಡಿ ತನ್ನ ಬಳಿಗೆ ಬಂದ ರಾಜಾರಾಮನನ್ನು ಪೊರೆಯುವುದು ರಾಜಧರ್ಮವೆಂದು ನಿರ್ಧರಿಸಿ ತನ್ನ ರಾಜ್ಯದ ಮೂಲಕ ಹಾದುಹೋಗಲು ಅನುವು ಮಾಡಿಕೊಡುತ್ತಾಳೆ. ಈ ವಿಷಯ ತಿಳಿದು ಕೋಪಿಷ್ಟನಾದ ಔರಂಗಜೇಬ ಕೆಳದಿಯನ್ನು ಸದೆಬಡಿಯಲೆಂದು ತನ್ನ ಮಗ ಅಜಮತಾರನೊಂದಿಗೆ ಸೈನ್ಯ ಕಳುಹಿಸಿದನಂತೆ. ಚನ್ನಮ್ಮ ಕೆಳದಿ ತೊರೆದು ಭುವನಗಿರಿ ಕೋಟೆಗೆ ಸ್ಥಳಾಂತರಗೊಂಡು ಅಲ್ಲಿಂದಲೇ ಮೊಘಲರೊಂದಿಗೆ ಯುದ್ಧ ಮಾಡುತ್ತಾಳೆ. ಕಾಡಿನ ದುರ್ಗಮ ಸ್ಥಳಗಳಲ್ಲಿ ಯುದ್ಧ ಮಾಡಿ ಅಭ್ಯಾಸವಿಲ್ಲದ ಮೊಘಲರು ಚನ್ನಮ್ಮನ ಸೈನ್ಯದಿಂದ ಸಾಕಷ್ಟು ನಷ್ಟ ಅನುಭವಿಸುತ್ತಾರೆ. ಕೊನೆಗೆ ಚೆನ್ನಮ್ಮ ಹಾಗೂ ಔರಂಗಜೇಬನ ನಡುವೆ ಕಪ್ಪ-ಕಾಣಿಕೆಗಳ ಒಪ್ಪಂದದ ಏರ್ಪಡುತ್ತದೆ.
ಲಿಂಗಣ್ಣ ಕವಿ ಹೀಗೆ ಬರೆಯುತ್ತಾನೆ:
“…ಮರೆವೊಕ್ಕವನಂ ಕೊಡುವುದು ರಾಜಧರ್ಮಮಲ್ತೆಂದಿಂತು ಮತಮಂ ನಿಶ್ಚಯಂಗೆಯ್ದು ಬಳಿಕ್ಕಾ ರಾಮರಾಜನಂ ಪ್ರಚ್ಛನ್ನವೇಷನಂ ಮಾಡಿ ಸೀಮೊಗ್ಗೆಗಾಗಿ ಗಾಜನೂರ ಪೊಳೆಯಂ ದಾಂಟಸಿ ಪಳುವಮಂ ಮರೆಗೊಂಡೊಳದಾರಿವಿಡಿದು ಬೊರೆನೆಡೆಹಳ್ಳಿ ಅಡುವಳ್ಳಿ ಕಳಸ ಖಾಂಡ್ಯ ವಸುಧಾರೆಗಾಗಿ ಸಾಗಿಸಿ ಕಳುಹಿ ಚಂದಿಯಗಡಮಂ ಪೊಗಿಸಲವರಂಗಜೇಬ ಪಾತುಶಾಹನಿಂದಾ ರಾಜೇರಾಮನಂ ಬೆಂಬತ್ತಿದ ತುರುಷ್ಕಸೈನ್ಯಮತ್ಯಂತಾಟೋಪದಿಂದಾ ರಾಜೇರಾಮನೈದಿದ ಬಳಿವಿಡಿದು ದಾಳಿವರಿಯುತ್ತೈತಂದು
ಚಳಕದೊಳಂ ಪೊನ್ನಾಳಿಯೊ
ಳಿಳಿದಾ ರಣಮಸ್ತಖಾನ ಮುಖ್ಯವಜೀರರ್
ಮುಳಿಸಿಂದೆ ಗನೀಮಂ ನಿ
ಮ್ಮೊಳಪೊಕ್ಕೊಡನಿರ್ಪನವನನೀವುದೆನಿತ್ತುಂ
ಕೇಳಿಸೆ ಚನ್ನಮ್ಮಾಜಿಯು
ಮಾಳೋಚಿಸಿ ತಮ್ಮ ರಾಷ್ಟ್ರಕಾಗಿಯವಂ ಬಿ
ಚ್ಚಾಳಾಗಿ ಪೋದುದಹುದಾ
ವಾಳುತ್ತಿರ್ಪಿಳೆಯೊಳಿಲ್ಲವೆಂದರುಹಿಸಿದಳ್ “
ಒಂದು ಕಾಲದಲ್ಲಿ ಮರಾಠ ಸಾಮ್ರಾಜ್ಯಾಧಿಪತಿಯೇ ನನ್ನೂರು ಆಡುವಳ್ಳಿಯ ಮೂಲಕ ಹಾದು ಹೋಗಿದ್ದಾನೆಂದಾಯ್ತು! ರಾಜಾರಾಮನನ್ನು ಬೆಂಬತ್ತಿ ಬಂದ ಔರಂಗಜೇಬನ ಸೇನೆಯೇ ಆಡುವಳ್ಳಿಯ ದೇಗುಲಗಳನ್ನೂ, ಊರನ್ನೂ ನಿರ್ನಾಮ ಮಾಡಿದ್ದಿರಬಹುದೇ? ನನ್ನೂರಿನ ವರದರಾಜ ಸ್ವಾಮಿ ಮೂರ್ತಿಯ ಮೂಗು ಮುರಿದಿದ್ದು ಇದೇ ಕಾಲದಲ್ಲಿಯೇ ಇದ್ದೀತು. ಏನೇ ಇರಲಿ; ಕೆಳದಿಯ ಹಾಗೂ ಮರಾಠರ ಭವ್ಯ ಇತಿಹಾಸದಲ್ಲಿ ನನ್ನ ಪುಟ್ಟ ಊರಿನ ಹೆಸರೂ ಇದೆಯೆಂಬುದು ನನಗಂತೂ ಸಂತಸದ ಸಂಗತಿ.
ಇತ್ತೀಚೆಗೆ ಆಫೀಸು ಕೆಲಸದ ನಡುವೆ ತುಸು ಸೋಮಾರಿತನ ಸುಳಿದು, ಊರಿನ ನೆನಪಲ್ಲಿ, ‘ಆಡುವಳ್ಳಿ’ ಎಂದು ಬರೆದು ಅಂತರ್ಜಾಲದಲ್ಲಿ ಪಾತಾಳಗರಡಿ ಹಾಕಿ ಹುಡುಕಿದೆ. ಬಿ. ಎಲ್. ರೈಸ್ ಸಂಪಾದಿಸಿದ ಎಪಿಗ್ರಾಫಿಯಾ ಕರ್ನಾಟಿಕಾದ ಕೊನೆ ಪುಟದಲ್ಲಿ ಆಡುವಳ್ಳಿ ಕಂಡಿತು. ಇದು ಹಾಸನ ಜಿಲ್ಲೆಯದ್ದಿರಬೇಕೆಂದು ನಿರ್ಲಕ್ಷ್ಯದಿಂದಲೇ ಪುಟ ಹುಡುಕಿದರೆ ಇದು ಕಡೂರು ಜಿಲ್ಲೆಯ ಆಡುವಳ್ಳಿ, ಅರ್ಥಾತ್ ನನ್ನೂರು! (ಹಿಂದೊಮ್ಮೆ ಕಡೂರು ನಮ್ಮ ಜಿಲ್ಲಾ ಕೇಂದ್ರ ಆಗಿತ್ತು). ಅದೂ ಒಂದಲ್ಲ ಆಡುವಳ್ಳಿಯ ಮೂರು ಶಾಸನಗಳ ವಿವರ ಇದೆ! ಇವೆಲ್ಲವೂ ಪಾಳುಬಿದ್ದಿದ್ದ ವರದರಾಜ ದೇಗುಲದ ಬಳಿ ಇರುವಂಥವು. ನಾನು ಬಾಲಕನಾಗಿದ್ದಾಗ ಓದಲಾಗದೇ ಒದ್ದಾಡಿದ್ದ ಶಾಸನಗಳು. ಈ ಪುಟ್ಟ ಊರಿನ ಕಲ್ಲುಗಳು ಬಿ. ಎಲ್. ರೈಸ್ ಅಂಥಹ ಮಹಾನುಭಾವನ ಕಣ್ಣಿಗೆ ಬಿದ್ದಿದ್ದವೆಂಬುದು ನನಗಂತೂ ಅಚ್ಚರಿಯ ಸಂಗತಿ.
ರೈಸ್ ದಾಖಲಿಸಿದ ಮೊದಲನೆಯದ್ದು ಕ್ರಿಸ್ತ ಶಕ 1437ರದ್ದು. ‘ಖಾಂಡ್ಯ ಹೋಬಳಿ, ಆಡುವಳ್ಳಿ ಪ್ಯಾಟೆಯಲ್ಲಿ ಕಾಳಂಮನ ಉಯ್ಯಾಲೆಯ ಪೂರ್ವಕಡೆ ಕಂಭದಲ್ಲಿ’ ಇರುವ ಬರಹದ ವಿವರ. ಇದು ನಾನು ಮೊದಲು ಉಲ್ಲೇಖಿಸಿದ ವರದರಾಜ ದೇಗುಲದ ಹಿಂಭಾಗದಲ್ಲಿ, ಈಗ ಯಾರದ್ದೋ ಕಾಫೀತೋಟದ ನಡುವೆ ಇದೆ. ಎರೆಡು ಬೃಹತ್ ಕಂಭಗಳು ಉಳಿದಿವೆಯಷ್ಟೇ. “ಶ್ರೀಮಹಂಕಾಳಿದೇವಿಯವರಿಗೆ ಆಡವಳಿಯ ಬೊಂಮದೇವಹೆಗಡೆಯರ ಅಳಿಯಂದಿರು ಪ್ಯಾಟೆ ತಂಮ್ಮಂಣ್ಣಹೆಗ್ಗಡೆಯರು ಮಾಡಿಸಿದ ಉಯ್ಯಾಂಲೆಕಂಭ” ಎಂಬ ಉಲ್ಲೇಖವಿದೆ. ಎರೆಡನೆಯ ಶಾಸನ ಅಲ್ಲೇ ಹತ್ತಿರದ ವೀರಭದ್ರ ದೇಗುಲದ ಬಳಿ ನೆಟ್ಟ ಕಲ್ಲಿನ ಮೇಲಿನ ಬರಹ: “ಹುರಿಸಿಗನಾಡಿಗೆ ಮುಖ್ಯರಾದ ವಾಡುವಳ್ಳಿಯ…” ಎಂದೇನೋ ಇದೆ. ಶಾಸನದ ಪೂರ್ಣ ಬರಹ ಓದಲು ಸ್ವತಃ ರೈಸ್ ಅವರಿಗೂ ಸಾಧ್ಯವಾಗುವಂತಿಲ್ಲ. ಇದರ ಕಾಲ ಕ್ರಿಸ್ತ ಶಕ 1519.
ನಾನು ಬಾಲ್ಯಕಾಲದಲ್ಲಿ ಓದುವ ವ್ಯರ್ಥಪ್ರಯತ್ನ ಮಾಡಿದ್ದೆನಲ್ಲ? ಅದು ಅಸಲಿಗೆ ಒಂದು ವೀರಗಲ್ಲು. ಕ್ರಿಸ್ತ ಶಕ 1162ನೇ ಇಸವಿಯ ಚಿತ್ರಭಾನು ಸಂವತ್ಸರದ ಮಾರ್ಗಶಿರ ದಶಮಿ ಆದಿವಾರದಂದು ನೆಟ್ಟ ಶಾಸನ. “ಸ್ವಸ್ತಿ ಶ್ರೀಮನ್ಮಹಾಮಂಡಳೇಶ್ವರ ಜಗದೇಕವೀರ ಹೊಯ್ಸಳ ಶಾಂತರ ಮಾರುದೇವರು…” ಆಳುತ್ತಿದ್ದ ಕಾಲವೆಂದು ಶಾಸನ ಹೇಳುತ್ತದೆ. ಈ ಮಾರುದೇವನ ತಂಗಿ ಸಾವಿಯಬ್ಬರಸಿ ಹಾಗೂ ಅವಳ ಮಹಾದಾಸಿಯಾದ ಲಕಣ್ಣ ಎಂಬ ಎರೆಡು ಹೆಸರುಗಳಿವೆಯಾದರೂ ಶಾಸನದ ಪೂರ್ಣ ವಿವರಗಳು ಓದಲು ಅಸಾಧ್ಯ. ಈ ಕಲ್ಲಿನ ಹಿಂದೆ ಅದೇನು ಕುತೂಹಲಕಾರಿ ಕತೆ ಅಡಗಿದ್ದೀತೋ ಏನೋ..
ಇಲ್ಲಿಂದ ಕೆಲವೇ ಕಿಲೋಮೀಟರು ದೂರದಲ್ಲಿರುವ ಕೊಳಲೆ ಎಂಬ ಊರಲ್ಲಿಯೂ ಒಂದು ವೀರಗಲ್ಲಿದೆ. ಇದು ಹನ್ನೆರಡನೆಯ ಶತಮಾನದ್ದು. ಸಾಂತರ ಬಲ್ಲಾಳದೇವನ ಆಡಳಿತಕಾಲದಲ್ಲಿ ‘ಕೊಳಲೆಯ ಚಿಣ್ನಮಗವುಣ್ಡ’ ಎಂಬಾತ ಕಾಳಗದಲ್ಲಿ ಬಿದ್ದು ಸ್ವರ್ಗ ಪ್ರಾಪ್ತಿಯಾದದ್ದಕ್ಕೆ ‘ಭೂಪಗವುಣ್ಡನುಂ’ಮಾಡಿಸಿದ ನಿಶಿದಿ ಕಲ್ಲು ಇದು.
ಇನ್ನಷ್ಟು ಕೆದಕಿದರೆ ಹತ್ತಿರದ ಬಾಳೆಹೊನ್ನೂರು ಮಠದ ಆವರಣದಲ್ಲಿರುವ ಹದಿನಾರನೆಯ ಶತಮಾನದ ಶಾಸನವೊಂದರಲ್ಲಿ ಮಠದ ಸಾಲ ತೀರುವಳಿ ಮಾಡಿದ್ದಕ್ಕೆ ಸಾಕ್ಷಿಯಾಗಿ ಆಡುವಳ್ಳಿಯ ಚಿಕ್ಕಣ್ಣಹೆಗ್ಗಡೆಯವರೂ ಇದ್ದರೆಂಬ ದಾಖಲೆಯೂ ಇದೆ. ಇನ್ನು ಕೆಳದಿಯರಸರ ಕಾಲದ ತಾಮ್ರಪತ್ರವೊಂದರಲ್ಲಿ ಆಡುವಳ್ಳಿ ನಾಗಾಭಟರ ಮರಿಮಗನೊಬ್ಬನಿಗೆ ಅಡಿಕೆತೋಟವನ್ನು ದಾನ ಮಾಡಿದ ಬಗ್ಗೆ ಇದೆಯೆಂದು ಬಿ. ಎಲ್. ರೈಸ್ ದಾಖಲಿಸುತ್ತಾರೆ.
ಪ್ರಾಯಶಃ ಔರಂಗಜೇಬನ ಸೈನ್ಯದ ಧಾಳಿಯ ಬಳಿಕ ಅವನತಿಯತ್ತ ಸಾಗಿದ ಊರು ಇನ್ನಷ್ಟು ಕಾಡಿನೊಳಗೆ ಸರಿದಿದ್ದು ಬ್ರಿಟಿಷರ ಕಾಲದಲ್ಲಿ. 1880ರ ಸುಮಾರಿಗೆ ಬ್ರಿಟಿಷರು ಚಿಕ್ಕಮಗಳೂರಿನಿಂದ ಆಲ್ದೂರು, ಬಾಳೆಹೊನ್ನೂರು ಮಾರ್ಗವಾಗಿ ಶೃಂಗೇರಿಗೆ ರಸ್ತೆ ಅಭಿವೃದ್ದಿಪಡಿಸುತ್ತಾರೆ. ಬಾಳೆಹೊನ್ನೂರಿನಲ್ಲಿ ಭದ್ರಾ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಿದಮೇಲೆ ಪ್ರಾಯಶಃ ವಸ್ತಾರೆ, ಖಾಂಡ್ಯ, ಆಡುವಳ್ಳಿ ಮೂಲಕ ಹಾದುಹೋಗುತ್ತಿದ್ದ ರಹದಾರಿಯ ಬಳಕೆ ಕಡಿಮೆಯಾಯ್ತು. ಬಳಿಕ ಜಾಗರ ವನ್ಯಧಾಮ ಇನ್ನಷ್ಟು ಊರುಗಳನ್ನು ಆವರಿಸಿತು. ಭದ್ರಾ ನದಿಗೆ ಅಣೆಕಟ್ಟು ಕಟ್ಟಿದ್ದರಿಂದ ಹತ್ತಿರದಲ್ಲಿದ್ದ ದಾನಿವಾಸದಂತಹ ಊರುಗಳು ಮುಳುಗಡೆಗೆ ಬಲಿಯಾದವು. ಒಂದು ಕಾಲದಲ್ಲಿ ನದೀ ಬದಿಯ ನಾಗರಿಕತೆಯಾಗಿ ಮೆರೆದಿದ್ದ ನನ್ನೂರು ಕಾಲಗರ್ಭಕ್ಕೆ ಸೇರಿಹೋಯಿತು.
ಒಟ್ಟಿನಲ್ಲಿ ಆಡುವಳ್ಳಿಯೆಂಬ ಕಾಡಿನ ನಡುವೆ ಕಳೆದು ಹೋದ ನನ್ನೂರಿಗೆ ಕನಿಷ್ಟ ಸಾವಿರ ವರ್ಷಗಳ ಇತಿಹಾಸವಿದೆ! ಈಗೀಗ ನನ್ನ ಹೆಸರಿನ ಮುಂದಿನ ಆಡುವಳ್ಳಿ ಎಂದರೇನೆಂದು ಕೇಳುವ ಗೆಳೆಯರಿಗೆಲ್ಲ ಸಹಸ್ರ ವರ್ಷಗಳ ಐತಿಹ್ಯದ ಈ ಊರಿನ ಬಗ್ಗೆ ಹೆಮ್ಮೆಯಿಂದ ‘ಛತ್ರಪತಿ ಶಿವಾಜಿ ಮಹಾರಾಜನ ಮಗನು ಆಡುವಳ್ಳಿಗೆ ಓಡಿಬಂದ ಕತೆ’ಯನ್ನು ಹೇಳುತ್ತೇನೆ!
ಪ್ರಸನ್ನ ಆಡುವಳ್ಳಿ ಚಿಕ್ಕಮಗಳೂರು ಜಿಲ್ಲೆಯವರು. ಸದ್ಯ ಮಧ್ಯಪ್ರದೇಶದ ಭೋಪಾಲವಾಸಿ. ವನ್ಯಜೀವಿಗಳ ಬಗ್ಗೆ ಸಂಶೋಧನೆ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ
Great Prasanna
ಆಹಾ ಧನ್ಯ. ಅಡುವಳ್ಳಿ ನನ್ನ ಪೂರ್ವಿಕರ ಊರೂ ಹವುದು.
Prasanna you have really done wonderfull research work.you are one one of genuine researcher. Congrats