ನನಗೆ ಎಲ್ಲಕ್ಕಿಂತ ಇಷ್ಟವಾದದ್ದು ಲೈಲ್ಸ್‌ನ ಖತರ್ನಾಕ್ ಎಂಟ್ರಿ. ಅವನು ಟ್ರ್ಯಾಕ್‌ಗೆ ಬರುವ ಕಾನ್ಫಿಡೆನ್ಸನ್ನು ನೀವೊಮ್ಮೆ ನೋಡಬೇಕು. ಆ ಕಾಂಫಿಡೆನ್ಸಿನಿಂದಲೇ ಅವನು ಅರ್ಧ ಪಂದ್ಯವನ್ನು ಗೆಲ್ಲುತ್ತಾನೆ ಎಂದು ನನಗನ್ನಿಸುತ್ತದೆ. ಹೆಸರು ಕೂಗಿದೊಡನೆ ವೇಗವಾಗಿ ಓಡಿ ಬಂದು, ಕುದುರೆಯಂತೆ ನೆಗೆದು ಇಡೀ ಪ್ರಪಂಚದ ಗಮನವನ್ನು ತನ್ನತ್ತ ಸೆಳೆಯುವ ಅವನ ಆತ್ಮವಿಶ್ವಾಸ ಎಂತವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ನೂತನ ಒಲಿಂಪಿಕ್ ಚಾಂಪಿಯನ್ ನೋಅ ಲೈಲ್ಸ್ ನಮ್ಮ ಆತ್ಮವಿಶ್ವಾಸವನ್ನೂ ಒಂದಷ್ಟು ಹೆಚ್ಚಿಸಲಿ ಅಲ್ಲವೇ?
ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿಯಲ್ಲಿ ಅಮೆರಿಕಾದ ಓಟಗಾರ ನೋಅ ಲೈಲ್ಸ್ ಕುರಿತ ಬರಹ

“ನಾನು ಅಸ್ತಮಾ, ಡಿಸ್ಲೆಕ್ಸಿಯಾ, ಎಡಿಡಿ, ಅಂಕ್ಸೈಟಿ ಹಾಗು ಖಿನ್ನತೆಯಿಂದ ಬಳಲುತ್ತಿದ್ದೇನೆ.. ಆದರೆ ನಮ್ಮಲ್ಲಿರುವ ನೂನ್ಯತೆಗಳು ನಾವು ಮುಂದೆ ಏನಾಗಬಲ್ಲೆವು ಎಂಬುದನ್ನು ನಿರ್ಧರಿಸುವುದಿಲ್ಲ..” – ಇದು ಅಮೆರಿಕಾದ ಓಟಗಾರ ನೋಅ ಲೈಲ್ಸ್ ಅವರ ಟ್ವೀಟ್. ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ 100ಮೀ ಓಟದಲ್ಲಿ ಚಿನ್ನ ಗೆದ್ದುಕೊಂಡ ಮೇಲೆ ಅವರು ಹೀಗೆ ಟ್ವೀಟಿಸಿದ್ದರು. ಈ ಒಲಿಂಪಿಕ್ಸ್‌ನ ಐಕಾನಿಕ್ ಮೊಮೆಂಟ್ ಎಂದೇ ಕರೆಯಲ್ಪಡುತ್ತಿರುವ ಈ ಓಟದಲ್ಲಿ ಲೈಲ್ಸ್ ವಿಜೇತರಾಗಿದ್ದೇ ಒಂದು ವಿಸ್ಮಯ! ಉಸೈನ್ ಬೋಲ್ಟ್ ನಿವೃತ್ತರಾದ ಮೇಲೆ ಕಳೆಗುಂದಿದ್ದ 100 ಮೀಟರ್ ರೇಸ್‌ಗೆ ಮತ್ತೆ ಜೀವ ಬಂದಂತೆ ವೀಕ್ಷಕರನ್ನು ಕೊನೆಯ ಮೈಕ್ರೋ ಸೆಕೆಂಡಿನ ತನಕ ಕಣ್ಣುಮಿಟುಕಿಸಿದೆ ಹಿಡಿದಿಟ್ಟ ರೇಸಿನಲ್ಲಿ ವಿಜೇತರು ಯಾರು ಎಂದು ನಿರ್ಧರಿಸಲು ಕೆಲ ನಿಮಿಷಗಳೇ ಬೇಕಾಗಿತ್ತು. ಓಡುತ್ತಿದ್ದ ಎಲ್ಲರೂ ಜನ ಹೆಚ್ಚುಕಮ್ಮಿ ಒಟ್ಟಿಗೇ ಎಂಬಂತೆ ಗುರಿ ಮುಟ್ಟಿ, ಕ್ರೀಡಾಪಟುಗಳೊಂದಿಗೆ ನೆರೆದಿದ್ದ ಪ್ರೇಕ್ಷಕರೂ ದೊಡ್ಡ ಪರದೆಯ ಮೇಲೆ ಫಲಿತಾಂಶ ಬರುವುದನ್ನೇ ಕಾಯುತ್ತಾ ನಿಲ್ಲುವಂತೆ ಮಾಡಿದ್ದು ಈ ಬಾರಿಯ ಒಲಂಪಿಕ್ಸಿನ ಹಿರಿಮೆ!

ಅಂದ ಹಾಗೆ ಲೈಲ್ಸ್‌ನ ಆರಂಭಿಕ ಓಟ ಅಷ್ಟೊಂದು ಚೆನ್ನಾಗಿರಲಿಲ್ಲ. ಮಂದಗತಿಯ ಆರಂಭ ಪಡೆದ ಲೈಲ್ಸ್ ನನ್ನು ಹಿಂದೆ ಹಾಕಿ ಅದಾಗಲೇ ಜಮೈಕಾದ ಕಿಶೇನ್ ಹಾಗು ಅಮೆರಿಕಾದ ಕೆರ್ಲೇ ಸಾಕಷ್ಟು ಮುಂದೆ ಹೋಗಿದ್ದರು. ನಾಲ್ಕೈದು ಚೀತಾಗಳನ್ನು ಓಡಲು ಬಿಟ್ಟರೆ ಹೇಗಿದ್ದಿತೋ, ಹಾಗಿತ್ತು ಇವರ ಓಟದ ಚಮತ್ಕಾರ. ಸ್ಟೇಡೆ ಡಿ ಫ್ರಾನ್ಸ್ ನಲ್ಲಿ ಪ್ರೇಕ್ಷಕರ ಅಬ್ಬರದ ಡೆಸಿಬಲ್ಸ್ ಅದೆಷ್ಟಿತ್ತೋ! ಲೈಲ್ಸ್ ನ ಓಟ ತೀವ್ರವಾಗಿದ್ದೇ ಕೊನೆಯ ಹಂತದಲ್ಲಿ. ಅದೆಲ್ಲಿ ಅಡಗಿಸಿಕೊಂಡಿದ್ದನೋ ಆ ಸ್ಟ್ಯಾಮಿನಾವನ್ನು.. ಇನ್ನೇನು ಗುರಿ ತಲಪುತಿದ್ದ ಕಿಶೇನ್ ಹಾಗೂ ಕೆರ್ಲೇ ಅವರ ಜೊತೆ ಜೊತೆಗೆ ಇವನೂ ಗುರಿಮುಟ್ಟಿದ್ದ. ಸ್ಟೇಡೆ ಡಿ ಫ್ರಾನ್ಸ್ ಅಕ್ಷರಶಃ ಸ್ತಬ್ದವಾಗಿತ್ತು. ಅತ್ತ ಮೊದಲು ಗುರಿ ಮುಟ್ಟಿದ್ದು ತಾನೇ ಎಂದು ಅಂದುಕೊಂಡು ಸಂಭ್ರಮಿಸುತಿದ್ದ ಕಿಶೇನ್… ಇತ್ತ ಏನೂ ಅರಿಯದವನಂತೆ ಅತ್ತಿತ್ತ ನೋಡುತ್ತಿದ್ದ ಲೈಲ್ಸ್! ಫಲಿತಾಂಶ ಇನ್ನೂ ಪ್ರಕಟವಾಗದಿದ್ದುದನ್ನು ಕಂಡ ಕಿಶೇನ್, ‘ಬೇಗ ರಿಸಲ್ಟ್ ಹೇಳ್ರಪ್ಪ’ ಎಂದು ಅರಚುತಿದ್ದದ್ದು, ಒಲಿಂಪಿಕ್ ಚಾಂಪಿಯನ್ ಆಗುವ ಅವನ ಉತ್ಸುಕತೆಯನ್ನು ಸಾರಿ ಹೇಳುತ್ತಿತ್ತು. ಆದರೆ ಕ್ರೀಡೆಗಳೆಂದರೆ ಹೀಗೆಯೇ ನೋಡಿ… ಗುರಿ ಮುಟ್ಟಿದ ಎಲ್ಲರೂ ವಿಜೇತರಾಗುವುದಿಲ್ಲ. ಕೆಲವರಿಗೆ ಬೇವು, ಕೆಲವರಿಗೆ ಬೆಲ್ಲ! ದೊಡ್ಡ ಪರದೆಯ ಮೇಲೆ ಪ್ರಕಟವಾದ ಫಲಿತಾಂಶದಲ್ಲಿ ಲೈಲ್ಸ್‌ನನ್ನು ವಿಜೇತನೆಂದು ಘೋಷಿಸಲಾಗಿತ್ತು. ಗುರಿ ಮುಟ್ಟಿದವರ ಭಂಗಿಯನ್ನು ಹತ್ತು ಹಲವು ದಿಕ್ಕಿನಿಂದ ವಿಶ್ಲೇಷಿಸಿ ಈ ಫಲಿತಾಂಶವನ್ನು ನೀಡಲಾಗಿತ್ತು.

‘ಫೋಟೋ ಫಿನಿಷ್’ ಎಂದು ಕರೆಯಲ್ಪಡುವ ಇಂತಹ ಓಟಗಳಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದವರ ನಡುವೆ ಮಿಲಿ ಸೆಕೆಂಡುಗಳ ಅಂತರವಿರುತ್ತದೆ. ಪ್ಯಾರಿಸ್ ಒಲಿಂಪಿಕ್ಸ್ ನ ಈ 100 ಮೀ ಓಟದಲ್ಲಿ ಗುರಿ ಮುಟ್ಟಲು ಲೈಲ್ಸ್ 9.784 ನಿಮಿಷ ತೆಗೆದುಕೊಂಡರೆ ಕಿಶಾನೆ 9.789 ನಿಮಿಷ ತೆಗೆದುಕೊಂಡಿದ್ದ. ಅಂದರೆ ಇವರಿಬ್ಬರ ನಡುವಿನ ಅಂತರ ಕೇವಲ 0.005 ಸೆಕೆಂಡುಗಳು! ಮಿಲಿ ಸೆಕೆಂಡುಗಳು ಒಬ್ಬನನ್ನು ಚಾಂಪಿಯನ್ ಪಟ್ಟಕ್ಕೆ ತಂದು ಕೂರಿಸಿ, ಇನ್ನೊಬ್ಬನನ್ನು ನೇಪಥ್ಯಕ್ಕೆ ಸರಿಸುತ್ತದೆಯೆಂದರೆ, ಸಮಯದ ಬಗ್ಗೆ ಇದಕ್ಕಿಂತ ದೊಡ್ಡ ಪಾಠ ಬೇರೊಂದು ಬೇಕೇ?

ನನಗೆ ಎಲ್ಲಕ್ಕಿಂತ ಇಷ್ಟವಾದದ್ದು ಲೈಲ್ಸ್‌ನ ಖತರ್ನಾಕ್ ಎಂಟ್ರಿ. ಅವನು ಟ್ರ್ಯಾಕ್‌ಗೆ ಬರುವ ಕಾನ್ಫಿಡೆನ್ಸನ್ನು ನೀವೊಮ್ಮೆ ನೋಡಬೇಕು. ಆ ಕಾಂಫಿಡೆನ್ಸಿನಿಂದಲೇ ಅವನು ಅರ್ಧ ಪಂದ್ಯವನ್ನು ಗೆಲ್ಲುತ್ತಾನೆ ಎಂದು ನನಗನ್ನಿಸುತ್ತದೆ. ಹೆಸರು ಕೂಗಿದೊಡನೆ ವೇಗವಾಗಿ ಓಡಿ ಬಂದು, ಕುದುರೆಯಂತೆ ನೆಗೆದು ಇಡೀ ಪ್ರಪಂಚದ ಗಮನವನ್ನು ತನ್ನತ್ತ ಸೆಳೆಯುವ ಅವನ ಆತ್ಮವಿಶ್ವಾಸ ಎಂತವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ನೂತನ ಒಲಿಂಪಿಕ್ ಚಾಂಪಿಯನ್ ನೋಅ ಲೈಲ್ಸ್ ನಮ್ಮ ಆತ್ಮವಿಶ್ವಾಸವನ್ನೂ ಒಂದಷ್ಟು ಹೆಚ್ಚಿಸಲಿ ಅಲ್ಲವೇ?