ಹೊರಗೆ ಸ್ಥಿತಪ್ರಜ್ಞರಂತೆ ಇದ್ದ ಅನಂತಮೂರ್ತಿ ಅವರು ಒಳಗೆ ಸ್ಥಿತಿಪ್ರಜ್ಞರಾಗಿದ್ದರು. ಕುಹಕ ಮಾತುಗಳಿಗೆ ಅವರೆಂದೂ ವಿಚಲಿತರಾಗುತ್ತಿರಲಿಲ್ಲ. ಎಲ್ಲ ಟೀಕೆಗಳನ್ನು ಸಹಿಸಿಕೊಳ್ಳುತ್ತ ಸಮಾಧಾನ ಚಿತ್ತದಿಂದಲೇ ತಾವು ಕಂಡುಕೊಂಡ ನಿಜದ ನಿಲವಿಗೆ ಬದ್ಧರಾಗಿರುತ್ತಿದ್ದರು. ಮನುಷ್ಯನ ಒಳಿತಿಗಾಗಿ ಅವರು ಎಂಥ ಅವಮಾನವನ್ನೂ ಎದುರಿಸಲು ಸಿದ್ಧರಾಗಿದ್ದರು. ಮನುಷ್ಯತ್ವಕ್ಕಿಂತ ಯಾವುದೇ ಧರ್ಮ, ಜಾತಿ, ಕ್ರಾಂತಿ ಮತ್ತು ದೇಶ ಕೂಡ ದೊಡ್ಡದಲ್ಲ ಎಂಬುದರಲ್ಲಿ ಅವರಿಗೆ ಅಚಲವಾದ ವಿಶ್ವಾಸವಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 75ನೇ ಕಂತು ನಿಮ್ಮ ಓದಿಗೆ

ಕನ್ನಡದಲ್ಲಿ ಬರೆಯುತ್ತಿದ್ದ ಮಾನವಕುಲದ ಮಹಾನ್ ಲೇಖಕರಲ್ಲೊಬ್ಬರಾದ ಡಾ. ಯು.ಆರ್. ಅನಂತಮೂರ್ತಿ (21.12.1932 – 22.08.2014) ಅವರ ನೆನಪು ಸದಾ ಹಸಿರು. ವಿನಾಶದ ಅಂಚಿನಲ್ಲಿರುವ ಮಾನವೀಯತೆಯ ಉಳಿವಿಗಾಗಿ ಅವರು ಸದಾ ಹಂಬಲಿಸುತ್ತಿದ್ದರು. ಮನುಷ್ಯತ್ವದ ಮುಂದೆ ಅವರಿಗೆ ಎಲ್ಲವೂ ಗೌಣವಾಗಿತ್ತು.

ಸಾವಿರ ಪರದೆಗಳುಳ್ಳ ಹಾಯಿದೋಣಿಯ ನಾವಿಕನ ಹಾಗೆ ಅವರು ಇದ್ದರು. ಹಾಯಿದೋಣಿಯನ್ನು ತನ್ನ ಗುರಿಯೆಡೆಗೆ ತಲುಪಿಸುವುದೇ ನಾವಿಕನ ಕರ್ತವ್ಯವಾಗಿರುತ್ತದೆ. ಅದಕ್ಕಾಗಿ ಆತ ಗಾಳಿಬೀಸುವ ದಿಕ್ಕಿನತ್ತ ಹೋಗದೆ ಆ ಗಾಳಿಯನ್ನು ತಾನು ಹೋಗಬೇಕೆಂದಿರುವ ದಿಕ್ಕಿನ ಕಡೆಗೆ ಬಳಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡವನಾಗಿರುತ್ತಾನೆ. ಅದಕ್ಕಾಗಿ ಹಾಯಿದೋಣಿಗಳ ಪಟಗಳನ್ನು ಅತ್ತ ಇತ್ತ ಸರಿಸುತ್ತ ಗಾಳಿ ಬೀಸುವಿಕೆಯನ್ನು ತನ್ನ ದೋಣಿ ಗುರಿಯೆಡೆಗೆ ಸಾಗಲು ಬಳಸಿಕೊಳ್ಳುತ್ತಾನೆ. ತಮ್ಮ ಮಾನವೀಯತೆಯ ಹಾಯಿದೋಣಿಯನ್ನು ಮುನ್ನಡೆಸಲು ಅನಂತಮೂರ್ತಿಯವರು ಇದನ್ನೇ ಮಾಡಿದರು. ಎಂಥ ಪ್ರತಿಕೂಲ ವಾತಾವರಣದಲ್ಲೂ ಮಾನವೀಯತೆಯ ಕಡೆಗೇ ಸಾಗಿದರು.

33 ವರ್ಷಗಳ ಅವಧಿಯಲ್ಲಿ ನಾನು ನೂರಾರು ಸಲ ಭೇಟಿಯಾಗಿ ಮತ್ತು ದೂರವಾಣಿ ಮೂಲಕ ಅವರ ಜೊತೆ ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇನೆ. ಈ ಚರ್ಚೆ ಮತ್ತು ವಿಚಾರ ವಿನಿಮಯ ಅವರ ಕೊನೆಯ ದಿನಗಳವರೆಗೂ ಮುಂದುವರಿದಿತ್ತು. ಅವರು ನಿಧನರಾಗುವ ಕೊನೆಯ ವಾರ ಅವರ ಜೊತೆ ಮಾತನಾಡಲಿಕ್ಕಾಗದ ಕಾರಣ ಅವರ ಸಹಾಯಕ ಮಿತ್ರ ನಾಗರಾಜಗೆ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ವಿಚಾರಿಸುತ್ತಿದ್ದೆ.

ಅವರು ಮಾನವೀಯತೆಯ ಸಾಕಾರ ಮೂರ್ತಿಯಾಗಿದ್ದರು. ಕಪ್ಪು-ಬಿಳುಪು ಪ್ರಜ್ಞೆಯ ಅನೇಕ ಅಬ್ರಾಹ್ಮಣ ಚಿಂತಕರು ಮತ್ತು ಮಾನವೀಯತೆಯ ಗಂಧವಿಲ್ಲದ ಮನುವಾದಿಗಳು ಅವರನ್ನು ಕೊನೆಯವರೆಗೂ ಕಾಡಿದರು. ಒಬ್ಬ ಅಬ್ರಾಹ್ಮಣ ಚಿಂತಕರಂತೂ ಅವರು ನಿಧನರಾದ ಮೇಲೂ ಟಿ.ವಿ.ಯೊಂದರ ಸ್ಟುಡಿಯೋದಲ್ಲಿ ಬಹಳ ಸಮಯದವರೆಗೆ ಕುಳಿತು ಅವಕಾಶ ಸಿಕ್ಕಾಗಲೆಲ್ಲ ಆಳವಾದ ವ್ಯಂಗ್ಯದಿಂದ ಅವರ ವ್ಯಕ್ತಿತ್ವವನ್ನು ಘಾಸಿಗೊಳಿಸುವುದರಲ್ಲೇ ತಲ್ಲೀನನಾಗಿದ್ದರು! ಅನಂತಮೂರ್ತಿಯವರು ನಿಧನರಾದ ದಿನ ಪಟಾಕಿ ಹಾರಿಸಿದವರಿಗಿಂತಲೂ ಅವರು ಅಸಹ್ಯವಾಗಿ ಕಾಣುತ್ತಿದ್ದರು. ಇಂಥ ಚಿಂತಕರೆಲ್ಲ ಅನಂತಮೂರ್ತಿ ಅವರನ್ನು ಅನೇಕ ದಶಕಗಳಿಂದಲೂ ದ್ವಂದ್ವಮೂರ್ತಿ ಎಂದೇ ಕರೆಯುತ್ತ ಬಂದಿದ್ದಾರೆ.

ಸದಾ ಜೀವಪರ ನಿಲವು

ಹೊರಗೆ ಸ್ಥಿತಪ್ರಜ್ಞರಂತೆ ಇದ್ದ ಅನಂತಮೂರ್ತಿ ಅವರು ಒಳಗೆ ಸ್ಥಿತಿಪ್ರಜ್ಞರಾಗಿದ್ದರು. ಕುಹಕ ಮಾತುಗಳಿಗೆ ಅವರೆಂದೂ ವಿಚಲಿತರಾಗುತ್ತಿರಲಿಲ್ಲ. ಎಲ್ಲ ಟೀಕೆಗಳನ್ನು ಸಹಿಸಿಕೊಳ್ಳುತ್ತ ಸಮಾಧಾನ ಚಿತ್ತದಿಂದಲೇ ತಾವು ಕಂಡುಕೊಂಡ ನಿಜದ ನಿಲವಿಗೆ ಬದ್ಧರಾಗಿರುತ್ತಿದ್ದರು. ಮನುಷ್ಯನ ಒಳಿತಿಗಾಗಿ ಅವರು ಎಂಥ ಅವಮಾನವನ್ನೂ ಎದುರಿಸಲು ಸಿದ್ಧರಾಗಿದ್ದರು. ಮನುಷ್ಯತ್ವಕ್ಕಿಂತ ಯಾವುದೇ ಧರ್ಮ, ಜಾತಿ, ಕ್ರಾಂತಿ ಮತ್ತು ದೇಶ ಕೂಡ ದೊಡ್ಡದಲ್ಲ ಎಂಬುದರಲ್ಲಿ ಅವರಿಗೆ ಅಚಲವಾದ ವಿಶ್ವಾಸವಿತ್ತು.

ಕನ್ನಡ ನಾಡಿನಿಂದ ರಾಷ್ಟ್ರೀಯ ಮಟ್ಟಕ್ಕೇರಿದ್ದ ಸಮಾಜವಾದಿ ನಾಯಕರೊಬ್ಬರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭೂಗತರಾಗಿದ್ದುಕೊಂಡು ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡುತ್ತಿದ್ದರು. ಅನಂತಮೂರ್ತಿ ಅವರ ಜೊತೆಗಿನ ರಹಸ್ಯ ಭೇಟಿಯ ಸಂದರ್ಭದಲ್ಲಿ ವಿಧಾನಸೌಧಕ್ಕೆ ಬಾಂಬ್ ಇಡುವ ಬಗ್ಗೆ ಮಾತನಾಡಿದರು. ಆಗ ಅವರ ಜೊತೆಗಿದ್ದ ಪ್ರಜ್ಞಾವಂತ ಸಾಹಿತಿಯೊಬ್ಬರು ಒಬ್ಬ ದಲಿತ ಯುವಕನನ್ನು ಈ ಕಾರ್ಯಕ್ಕೆ ಸಿದ್ಧಪಡಿಸುವುದಾಗಿ ತಿಳಿಸಿದರು! ಆಗ ಅನಂತಮೂರ್ತಿಯವರು ಕೂಡಲೆ ನಾವು ಮಾಡಲು ಹಿಂಜರಿಯುವ ಕೆಲಸವನ್ನು ಬೇರೆಯವರಿಗೆ ಹಚ್ಚಬಾರದು ಎಂದು ತಿಳಿಸಿದರು. ಆಗ ಚರ್ಚೆ ಅಲ್ಲಿಗೇ ನಿಂತಿತು. ತುರ್ತುಪರಿಸ್ಥಿತಿ ಕೊನೆಗೊಂಡ ಎಷ್ಟೋ ವರ್ಷಗಳ ನಂತರ ಅನಂತಮೂರ್ತಿ ನನಗೆ ಈ ಪ್ರಸಂಗದ ಕುರಿತು ತಿಳಿಸಿದ್ದರು. ಹೀಗೆ ಅವರು ಯಾವುದೇ ನಿರ್ಧಾರವನ್ನು ಮನುಷ್ಯತ್ವದ ನೆಲೆಯಲ್ಲಿಯೇ ತೆಗೆದುಕೊಳ್ಳುತ್ತಿದ್ದರು ಹೊರತಾಗಿ ಸಮೂಹಸನ್ನಿಗೆ ಒಳಗಾಗುತ್ತಿರಲಿಲ್ಲ.

ಗೋಕಾಕ ಚಳವಳಿ

ಗೋಕಾಕ ಚಳವಳಿಯ ಸಂದರ್ಭದಲ್ಲಿ ನಾನು ಮೈಸೂರಿನಲ್ಲಿದ್ದೆ. ಚಳವಳಿ ತಾರಕಕ್ಕೇರಿದಾಗ ಅನಂತಮೂರ್ತಿ ಅವರು ಅದನ್ನು ಸಮೂಹಸನ್ನಿ ಎಂದು ಕರೆಯಲು ಹಿಂಜರಿಯಲಿಲ್ಲ. ಮೈಸೂರಿನ ಟೌನ್ ಹಾಲ್ ಬಳಿ ಚಳವಳಿಗಾರರನ್ನು ಉದ್ದೇಶಿಸಿ ಡಾ. ಹಾ.ಮಾ. ನಾಯಕ ಅವರು ಮಾತನಾಡುತ್ತ ಕನ್ನಡದ ಅನ್ನ ತಿನ್ನುವ ಮುಸ್ಲಿಮರು ಕನ್ನಡ ಕಲಿಯಬೇಕು ಎಂದು ನುಡಿದದ್ದು ಅನಂತಮೂರ್ತಿ ಅವರಿಗೆ ಬೇಸರವನ್ನುಂಟು ಮಾಡಿತು. ಮುಸ್ಲಿಮರು ಅನ್ನವನ್ನು ದುಡಿದು ತಿನ್ನುತ್ತಾರೆ. ಅವರಿಗೆ ಯಾರೂ ಉಚಿತವಾಗಿ ಕೊಡುವುದಿಲ್ಲ ಎಂದು ಹೇಳಿದರು. ಉರ್ದು ಶಾಲೆಗಳಿಗೆ ಕನ್ನಡ ಶಿಕ್ಷಕರ ಕೊರತೆಯನ್ನು ನೀಗಿಸಲು ಎಲ್ಲ ರಾಜ್ಯ ಸರ್ಕಾರಗಳೂ ವಿಫಲವಾಗಿದ್ದರ ಬಗ್ಗೆ ಅನಂತಮೂರ್ತಿಯವರ ಗಮನಕ್ಕೆ ತಂದೆ. ‘ತರಕಾರಿ ಮಾರುವ ಮುಸ್ಲಿಂ ಮಹಿಳೆಯೊಬ್ಬಳು ಕನ್ನಡ ಬಾರದೆ ತರಕಾರಿ ಮಾರಲಿಕ್ಕಾಗುತ್ತದೇನಯ್ಯಾ’ ಎಂದು ಪ್ರಶ್ನಿಸಿದರು. ಪ್ರತಿಯೊಬ್ಬರು ಕನ್ನಡ ಕಲಿಯುವ ವಾತಾವರಣದ ನಿರ್ಮಾಣವಾಗಬೇಕು. ಇದು ಆವೇಶದ ವಿಚಾರವಲ್ಲ ಚಿಂತನೆಯ ವಿಚಾರ ಎಂದು ತಿಳಿಸಿದರು.

ಮೈಸೂರಿನ ಉದ್ಯಾನವೊಂದರಲ್ಲಿ ಮೈಸೂರಿನ ಬಹುತೇಕ ಎಲ್ಲ ಪ್ರಮುಖ ಲೇಖಕರು ಮತ್ತು ಇತರೆ ಕನ್ನಡ ಅಭಿಮಾನಿಗಳು ಸಭೆ ಸೇರಿದ್ದೆವು. ಅದೇ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಗೋಕಾಕ ಚಳವಳಿ ತಾರಕಕ್ಕೆ ಹೋಗಿ, ಗೋಲಿಬಾರ್ ನಡೆದು ಇಬ್ಬರು ಮುಸ್ಲಿಮರು ಸಾವಿಗೀಡಾದ ಸುದ್ದಿ ಬಂದಿತು. ರಾಮದಾಸ ಮುಂತಾದವರು ಬಹಳ ಸಂಕಟಪಟ್ಟುಕೊಂಡರು. ಎಲ್ಲೆಲ್ಲೂ ಸಮೂಹಸನ್ನಿಯ ವೀರಾವೇಶ. ಅನಂತಮೂರ್ತಿ ಅವರು ಇಂಥ ಸನ್ನಿಯನ್ನು ವಿರೋಧಿಸಿದರೇ ಹೊರತು ಕನ್ನಡ ಚಳವಳಿಯನ್ನಲ್ಲ. ಯಾವುದೇ ಚಳವಳಿ ಮಾನವ ಘನತೆಯನ್ನು ಹೆಚ್ಚಿಸುವಂತಿರಬೇಕು ಎಂಬುದು ಅವರ ವಾದವಾಗಿತ್ತು. ಆದರೆ ಕನ್ನಡದ ಹೆಸರಿನಿಂದ ಹೆಸರು ಪಡೆದವರು, ‘ಅನಂತಮೂರ್ತಿ ಕನ್ನಡ ವಿರೋಧಿʼ ಎಂದು ಟೀಕಿಸಿದರು.

ಏತನ್ಮಧ್ಯೆ ಚಳವಳಿ ಹೆಚ್ಚು ಪ್ರಖರವಾಗುತ್ತಿದ್ದ ಸಂದರ್ಭದಲ್ಲಿ ಕುವೆಂಪು ಅವರನ್ನೂ ಆಹ್ವಾನಿಸಿ ಅವರ ಅಭಿಪ್ರಾಯ ಪಡೆಯಲಾಯಿತು. ಮೈಸೂರು ನಗರದ ತಾತಯ್ಯನ ಮೂರ್ತಿ ಬಳಿ ನಡೆದ ಸಭೆಯಲ್ಲಿ ಅವರು ಬಹಳ ಸ್ಪಷ್ಟವಾಗಿ ಹೇಳಿದರು. ಭಾಷಾನೀತಿ ಒಂದು ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ದೇಶದ ಎಲ್ಲ ರಾಜ್ಯಗಳಿಗೂ ಒಂದೇ ತೆರನಾದ ಭಾಷಾನೀತಿ ಇರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ನಾನಂತೂ ಕುವೆಂಪು ಅವರ ಮಾತಿನಿಂದ ಬಹಳ ಪ್ರಭಾವಿತನಾದೆ.

ಚಳವಳಿಯ ಸಂದರ್ಭದಲ್ಲಿ ಒಂದುದಿನ ಮೈಸೂರು ವಿ.ವಿ. ಇಂಗ್ಲಿಷ್ ವಿಭಾಗದಲ್ಲಿದ್ದ ಅನಂತಮೂರ್ತಿ ಅವರ ಚೇಂಬರ್‌ಗೆ ಹೋದೆ. ಅದೇ ಸಂದರ್ಭದಲ್ಲಿ ಇನ್ನೂ ಹಲವು ಸಾಹಿತಿಗಳು ಬಂದರು. 125 ಅಂಕಗಳ ಕಡ್ಡಾಯ ಕನ್ನಡವನ್ನು 100 ಅಂಕಕ್ಕೆ ಇಳಿಸುವ ಬಗ್ಗೆ ಚಿಂತನೆಯಾಯಿತು. ಆ ದಿನಗಳಲ್ಲಿ ಪೇಜಾವರರೂ ಇಂಥದೇ ಸೂತ್ರವನ್ನು ಹರಿಬಿಟ್ಟಿದ್ದರು. ಆದರೆ ಅನಂತಮೂರ್ತಿ ಅವರು ಹೇಳಿದ್ದು ಹೆಚ್ಚು ರ‍್ಯಾಷನಲ್ ಆಗಿತ್ತು. ಅವರು ಹೇಳಿದ ಹಾಗೆಯೆ ಟೈಪ್ ಮಾಡಿಸಿದ ಜೆರಾಕ್ಸ್ ಪ್ರತಿಗಳನ್ನು ಹಂಚುವ ಉದ್ದೇಶದಿಂದ ಸಾಯಂಕಾಲದ ವೇಳೆ ನಾನು ಮತ್ತು ಮೈಸೂರಿನ ಭಾರತಿ ಪ್ರಕಾಶನದ ಶ್ರೀನಿವಾಸ ಸೇರಿ ತಾತಯ್ಯನ ಮೂರ್ತಿ ಬಳಿ ಸೇರಿದ್ದ ಚಳವಳಿಗಾರರಿದ್ದಲ್ಲಿಗೆ ಹೋಗಿ ಹಂಚತೊಡಗಿದೆವು. ಆಗ ರಾತ್ರಿ ಸುಮಾರು ಏಳು ಗಂಟೆ ಸಮಯ. ನಾವು ಪ್ರತಿಗಳನ್ನು ಹಂಚುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲ ದುಷ್ಕರ್ಮಿಗಳು ಸಿಟ್ಟಿನ ಭರದಲ್ಲಿ ನಮಗೆ ಚಾಕು ಹಾಕಲು ಬಂದರು. ಅದೇ ವೇಳೆಗೆ ಕರೆಂಟ್ ಹೋಗಿದ್ದರಿಂದ ನಾವು ಬಚಾವಾದೆವು. ಜಗನ್ಮೋಹನ ಪ್ಯಾಲೇಸ್ ಕಡೆಗೆ ಹೋದೆವು. ನಂತರ ಅಡ್ಡದಾರಿ ಹಿಡಿದು ಶ್ರೀನಿವಾಸ ಮನೆ ಸೇರಲು ತಡರಾತ್ರಿಯಾಗಿತ್ತು. ಜನರ ಭಾವನೆಗಳನ್ನು ಬಡಿದೆಬ್ಬಿಸುವಂಥ ಭೀಕರ ಭಾಷಣಕಾರರಿಂದ ಮತ್ತು ದುಷ್ಕರ್ಮಿಗಳಿಂದ ಮುಕ್ತವಾದ ಕನ್ನಡ ಚಳವಳಿಯನ್ನು ಅನಂತಮೂರ್ತಿ ಅವರು ಬಯಸಿದ್ದರು.

ಇದು ಆದರ್ಶ

ಸೋಲಾಪುರದಲ್ಲಿ ಹಿಂದೊಮ್ಮೆ ಕೆಲ ಮರಾಠಿ ಪುಂಡರು ಕನ್ನಡ ಮಾಧ್ಯಮದ ಹೈಸ್ಕೂಲೊಂದರ ಕಿಟಕಿಗಳಿಗೆ ಕಲ್ಲೆಸೆದು ಗ್ಲಾಸುಗಳನ್ನೆಲ್ಲ ಒಡೆದು ಹಾಕಿದ್ದರು. ಆಗ ಅಲ್ಲಿನ ಮರಾಠಿ ಸಾಹಿತಿಗಳು ಒಟ್ಟಾಗಿ ಹಣ ಕೂಡಿಸಿ ಆ ಎಲ್ಲ ಕಿಟಕಿಗಳಿಗೆ ಹೊಸ ಗ್ಲಾಸುಗಳನ್ನು ಹಾಕಿಸಿದ್ದರು ಎಂಬ ಘಟನೆಯನ್ನು ಭಾಷೆಯ ಕುರಿತು ಚರ್ಚಿಸುವ ವೇಳೆ ವಿವರಿಸಿದ ಅನಂತಮೂರ್ತಿ ಅವರು, ‘ಇಂಥವರು ನಮಗೆ ಆದರ್ಶವಾಗಬೇಕಯ್ಯಾ’ ಎಂದಿದ್ದರು.

1981ರಲ್ಲಿ ಅವರ ಮೈಸೂರಿನ ಮನೆಯ ಮುಂದೆ ಮಾತನಾಡುತ್ತ ನಿಂತಾಗ ನಡೆದ ಘಟನೆ ಇದು. ರಸ್ತೆಗುಂಟ ಇಬ್ಬರು ಭಿಕ್ಷುಕಿಯರು ಅದಾವುದೋ ಭಾಷೆಯಲ್ಲಿ ಮಾತನಾಡುತ್ತ ಹೊರಟಿದ್ದರು. ಅನಂತಮೂರ್ತಿಯವರಿಗೆ ಬಹಳ ಖುಷಿಯಾಯಿತು. ‘ನೋಡಯ್ಯಾ ಇದಕ್ಕೇ ಅನ್ನೋದು ಭಾಷೆಯ ಖಾಸಗೀತನ ಎಂದು. ನಮಗೆ ಗೊತ್ತಾಗದ ಭಾಷೆಯಲ್ಲಿ ಅವರು ಖುಷಿಯಿಂದ ಗಟ್ಟಿಯಾಗಿ ಮಾತನಾಡುತ್ತ ಹೋಗುತ್ತಿದ್ದಾರೆ. ಜೋರು ಧ್ವನಿ ಅವರ ಖಾಸಗೀತನವನ್ನು ಬಯಲಿಗೆಳೆಯಲಿಲ್ಲ. ಯಾರದೇ ಖಾಸಗೀತನದ ಮೇಲೆ ನಮ್ಮ ಹಕ್ಕು ಸ್ಥಾಪಿಸಲು ಹೋಗಬಾರದು. ಕನ್ನಡಕ್ಕೂ ಖಾಸಗೀತನವಿದೆ ಅದನ್ನು ಉಳಿಸಿಕೊಳ್ಳುವುದರ ಕಡೆಗೆ ನಮ್ಮ ಗಮನವಿರಬೇಕು. ಆ ಖಾಸಗೀತನದಲ್ಲಿ ನಮ್ಮ ಪರಂಪರೆ ಇದೆ, ಸಂಸ್ಕೃತಿ ಇದೆ, ನಮ್ಮ ಪೂರ್ವಸೂರಿಗಳ ಚಿಂತನೆಗಳಿವೆʼ ಎಂದು ಮುಂತಾಗಿ ಕಾವ್ಯಾತ್ಮಕವಾಗಿ ಹೇಳಿದರು. ‘ಸನ್ನಿ ಹಿಡಿದರೆ ಇವೆಲ್ಲ ಅರ್ಥವಾಗುವುದಿಲ್ಲ’ ಎಂದರು.

ಒಂದು ದಿನ ಒಬ್ಬ ಸದ್ಬ್ರಾಹ್ಮಣರೊಬ್ಬರು ಹೀಗೇ ಮಾತನಾಡುತ್ತ. ‘ನೋಡ್ರಿ ಅಕಬರ ಅಲಿ ಅವರು ಎಷ್ಟು ಒಳ್ಳೆಯವರು; ಮುಸ್ಲಿಮರ ಹಾಗೆ ಕಾಣುವುದಿಲ್ಲ’ ಎಂದು ಸಹಜವಾಗಿ ಹೇಳಿದರು. ‘ಹೀಗೆ ಹೇಳುವ ಮೂಲಕ ತಾವು ಒಂದು ಜನಾಂಗವನ್ನು ಮತ್ತು ಒಬ್ಬ ಒಳ್ಳೆಯ ವ್ಯಕ್ತಿಯನ್ನು ಅವಮಾನಿಸಿದಂತಾಗುವುದಿಲ್ಲವೆʼ ಎಂದು ಅನಂತಮೂರ್ತಿ ಅವರು ಕೇಳಿದರು. ಆ ವ್ಯಕ್ತಿ ಅನಂತಮೂರ್ತಿ ಅವರ ಮಾತಿಗೆ ತಲೆದೂಗಿದರು. ಈ ತೆರನಾಗಿ ಅನಂತಮೂರ್ತಿ ಅವರು ಸ್ವೋಪಜ್ಞರಾಗಿದ್ದರು. ಅವರು ಎಂಥ ಪ್ರಸಂಗದಲ್ಲೂ ಸಿಟ್ಟಿಗೆ ಬರುತ್ತಿರಲಿಲ್ಲ. ಮೈಪರಿಚಿಕೊಂಡು ಮಾತನಾಡುತ್ತಿರಲಿಲ್ಲ. ಎಂಥ ಪ್ರತಿಕೂಲ ವಾತಾವರಣದಲ್ಲೂ ಸಂಯಮವನ್ನು ಉಳಿಸಿಕೊಂಡೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು.

ಅನನ್ಯ ಸಂಭ್ರಮ

ಲಂಕೇಶ ಮತ್ತು ಅನಂತಮೂರ್ತಿಯವರು ಒಂದೇ ವೇದಿಕೆಯಲ್ಲಿದ್ದಾಗ ಜನ ಕಿಕ್ಕಿರಿದು ತುಂಬುತ್ತಿದ್ದರು. ಆಗ ಬೆಂಗಳೂರು ವಿ.ವಿ. ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಜಿ.ಎಸ್. ಶಿವರುದ್ರಪ್ಪನವರು ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ವಿಚಾರಸಂಕಿರಣವೊಂದರಲ್ಲಿ ಕನ್ನಡ ಸಾರಸ್ವತಲೋಕದ ಬಹುತೇಕ ಎಲ್ಲ ಅತಿರಥಮಹಾರಥರು ಸೇರಿದ್ದರು. ಆಗ ಅನಂತಮೂರ್ತಿ ಅವರಿಗೆ ಐವತ್ತರ ಸಂಭ್ರಮ. ಶೂದ್ರ ಶ್ರೀನಿವಾಸ ಆ ಸಂದರ್ಭದಲ್ಲಿ ಅನಂತಮೂರ್ತಿ ಅವರ ಕುರಿತಂತೆ ಶೂದ್ರ ವಿಶೇಷ ಸಂಚಿಕೆಯನ್ನು ತಂದಿದ್ದು ನೆನಪಿದೆ. ಆ ವಿಚಾರಸಂಕಿರಣದಲ್ಲಿ ಅನಂತಮೂರ್ತಿ ಮತ್ತು ಲಂಕೇಶರ ಮಾತುಗಳನ್ನು ಕೇಳಲು ಎಷ್ಟು ಜನ ಸೇರಿದ್ದರೆಂದರೆ ಸೆನೆಟ್ ಹಾಲ್‌ನಲ್ಲಿ ಉಸಿರುಗಟ್ಟಿಸುವಂಥ ವಾತಾವರಣ ನಿರ್ಮಾಣವಾಗಿತ್ತು. ಅವರು ಮಾತುಗಳ ಮೂಲಕ ಅನನ್ಯ ಸಂಭ್ರಮವನ್ನು ಸಭಿಕರ ಮನದಲ್ಲಿ ಸೃಷ್ಟಿಸುತ್ತಿದ್ದರು.

ಕಪ್ಪುವಸ್ತು

ವಾಜಪೇಯಿ ಅವರು ತಮಗೆ ಹೇಳಿದ ಕಥೆಯೊಂದನ್ನು ಅನಂತಮೂರ್ತಿಯವರು ಬಹಳ ಮೆಚ್ಚಿಕೊಂಡಿದ್ದರು. ಒಂದು ದಿನ ವಾಜಪೇಯಿ ಅವರ ಜೊತೆ ಮಾತನಾಡುವಾಗ ತಾವು ‘ಸಂಘಾತಿ’ ಆಗಿದ್ದರ ಹಿನ್ನೆಲೆಯನ್ನು ಅವರು ಅನಂತಮೂರ್ತಿ ಅವರಿಗೆ ಒಂದು ಕಥೆಯ ಮೂಲಕ ಮನೋಜ್ಞವಾಗಿ ತಿಳಿಸಿದರು: ಒಂದು ಮುಸ್ಸಂಜೆ ಹೊತ್ತಿನಲ್ಲಿ ಜಿಟಿ ಜಿಟಿ ಮಳೆ ಹಿಡಿದಿತ್ತು. ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮಳೆಯಲ್ಲಿ ತೊಯ್ಸಿಕೊಳ್ಳುತ್ತ ಮರದ ಕೆಳಗಡೆ ನಿಂತಿದ್ದ, ದೂರದಲ್ಲಿ ಒಂದು ಕಪ್ಪುವಸ್ತು ಬಿದ್ದಿತ್ತು ಅದು ಕಂಬಳಿಯ ಹಾಗೆ ಕಾಣುತ್ತಿತ್ತು. ಹೇಗೂ ಕಂಬಳಿ ಸಿಕ್ಕಿತಲ್ಲಾ ಎಂಬ ಖುಷಿಯಿಂದ ಆ ವ್ಯಕ್ತಿ ಗಡಿಬಿಡಿಯಿಂದ ಹೋಗಿ ಅದನ್ನು ಹೊದ್ದುಕೊಂಡ. ಆದರೆ ಅದು ಕರಡಿಯಾಗಿತ್ತು. ಕೊನೆಯವರೆಗೂ ಬಿಡಲೇ ಇಲ್ಲ!

ಪ್ರಧಾನಿಯಾಗಿದ್ದ ವಾಜಪೇಯಿ ಅವರ ಜೊತೆ ಅನಂತಮೂರ್ತಿ ಅವರು ಒಂದು ಸಲ ಬಾಂಗ್ಲಾದೇಶದ ಪ್ರವಾಸಕ್ಕೆ ಹೋಗಿದ್ದರು. ಅವರು ಆ ಸಂದರ್ಭದಲ್ಲಿ ವಾಜಪೇಯಿ ಅವರಿಂದ ಪ್ರಭಾವಿತರಾಗಿದ್ದರು. ನನಗೆ ದೂರವಾಣಿ ಮೂಲಕ ಸಂಪರ್ಕಿಸಿದರು. ಆಗ ನಾನು ಬೆಂಗಳೂರಿನಲ್ಲಿದ್ದೆ. ವಾಜಪೇಯಿ ಕೈ ಬಲಪಡಿಸಬೇಕಯ್ಯಾ, ಇಲ್ಲದಿದ್ದರೆ ಆಡ್ವಾಣಿ ಅಂಥವರು ಪ್ರಧಾನಿ ಆಗುತ್ತಾರೆ ಎಂದರು. ಆಗ ನಾನು ಹೇಳಿದೆ: ನನಗೆ ಆಡ್ವಾಣಿ ಇಷ್ಟ ಸರ್; ಏಕೆಂದರೆ ಅವರು ಮುಸ್ಲಿಮರನ್ನು ನೇರವಾಗಿ ದ್ವೇಷಿಸುತ್ತಾರೆ ಎಂದೆ.

ನಿಧನರಾಗುವುದಕ್ಕೆ ಕೆಲ ವಾರಗಳ ಮೊದಲು ಅವರು ಬರೆದ ಹಿಂದೂತ್ವ ಅಥವಾ ಹಿಂದ್ ಸ್ವರಾಜ್ ಎಂಬ ಕೊನೆಯ ದೀರ್ಘ ಲೇಖನ ಬಹಳ ಮೌಲಿಕವಾಗಿದೆ. ಮನುಷ್ಯರ ಬಗೆಗಿನ ಅತೀವ ಕಾಳಜಿಯ ಆ ಲೇಖನದಲ್ಲಿ ವಾಜಪೇಯಿ ಅವರ ಬಗ್ಗೆ ಭ್ರಮನಿರಸನವಾದುದರ ಬಗ್ಗೆ ಸೂಚಿಸಿದ್ದಾರೆ. ನಿಧನರಾಗುವುದಕ್ಕೆ ಕೆಲ ದಿನಗಳ ಹಿಂದೆ ಅನಂತಮೂರ್ತಿ ಅವರು ಆ ಅಪ್ರಕಟಿತ ಲೇಖನವನ್ನು ಇ-ಮೇಲ್ ಮಾಡಿ ಅಭಿಪ್ರಾಯ ಕೇಳಿದ್ದರು.

ನೈಜ ಕಾಳಜಿ

ಭಾರತೀಯ ಮುಸ್ಲಿಮರ ಬಗ್ಗೆ ಮತ್ತು ದಲಿತರ ಬಗ್ಗೆ ಅವರ ಕಾಳಜಿ ಹೃದಯದಾಳದಿಂದ ಬಂದುದಾಗಿತ್ತು. ಭಾರತೀಯ ಮುಸ್ಲಿಮರು ಎರಡು ಮಹಾನ್ ಸಂಸ್ಕೃತಿಗಳ ಮಧ್ಯೆ ತಮ್ಮತನವನ್ನು ಗುರುತಿಸಿಕೊಂಡವರು. ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಮೂಲಕ ಬೆಳೆದವರು. ಇಂಥ ವೈವಿಧ್ಯ ಅರಬ ಮುಸ್ಲಿಮರಿಗೆ ಇಲ್ಲ. ಭಾರತೀಯ ಮುಸ್ಲಿಮರೇ ಅವರಿಗೆ ಮಾದರಿಯಾಗಿರಬೇಕಾದವರು ಎಂಬುದು ಅವರ ಅನಿಸಿಕೆಯಾಗಿತ್ತು.

ಅತ್ಯಾಧುನಿಕ ಯಂತ್ರನಾಗರೀಕತೆಯ ಬಗ್ಗೆ ಬೇಸರಗೊಂಡಿದ್ದ ಅವರು ಸೆಕೆಂಡರಿ ಟೆಕ್ನಾಲಜಿಯನ್ನು ಬಹಳ ಇಷ್ಟಪಡುತ್ತಿದ್ದರು. ನಮ್ಮ ರೈತರು ಮತ್ತು ವಿವಿಧ ಕೆಲಸಗಾರರು ತಮ್ಮ ಮಾನವ ಸಂಪನ್ಮೂಲದೊಂದಿಗೆ ಯಂತ್ರೋಪಕರಣಗಳನ್ನು ಬಳಸುವುದು ಅವರಿಗೆ ಬೇಕಿತ್ತು. ಇಂಥ ಸೆಕೆಂಡರಿ ಟೆಕ್ನಾಲಜಿಯಿಂದ ಮಾನವಸಂಪನ್ಮೂಲದ ಸದ್ಬಳಕೆಯಾಗುತ್ತದೆ ಮತ್ತು ದುಡಿಯುವ ವರ್ಗದ ಕೆಲಸ ಹಗುರಾಗುತ್ತದೆ ಎಂಬುದು ಅವರ ವಿಚಾರವಾಗಿತ್ತು.
ಕಸಗುಡಿಸುವರ ಕೈಯಲ್ಲಿ ಅತ್ಯಾಧುನಿಕವಾದ ಪೊರಕೆಯನ್ನು ನೋಡಲು ಬಯಸುತ್ತಿದ್ದರು. ಅವರು ದಲಿತರೇ ಆಗಿರಬೇಕೆಂದೇನಿಲ್ಲ ಎನ್ನುತ್ತಿದ್ದರು. ಕಾಯಕ ಕ್ರಿಯೆಟಿವ್ ಎನ್ನಲು ಹೋಗಿ ಜಾತಿ ಕ್ರಿಯೆಟಿವ್ ಎಂದು ಹೇಳಿದ್ದರಿಂದ ಅವರು ಬಹಳ ಕಿರಿಕಿರಿಗೆ ಒಳಗಾಗಬೇಕಾಯಿತು. ಆಗ ನಾನು ಅವರಿಗೆ ಹೇಳಿದ್ದೆ: ಸಮಗಾರ ಹರಳಯ್ಯನವರು ಎಂದರೆ ಸಮಗಾರ ಕಾಯಕದ ಹರಳಯ್ಯನವರು. ಬಸವಣ್ಣನವರು ಕಾಯಕಕ್ಕೆ ಅಂಟಿದ ಜಾತಿಯ ವಿಷವನ್ನು ಈ ರೀತಿ ತೆಗೆದಿದ್ದರು. “ಕುಲವನರಸುವರೆ ಶರಣರಲ್ಲಿ ಜಾತಿ ಸಂಕರವಾದ ಬಳಿಕ” ಎಂದು ಬಸವಣ್ಣನವರು ಪ್ರಶ್ನಿಸಿದ್ದರು.

ರುಜುವಾತು

ರುಜುವಾತು ಸಾಹಿತ್ಯ ಪತ್ರಿಕೆಯನ್ನು ಆರಂಭಿಸುವಾಗ ನಾನೂ ಜೊತೆಯಲ್ಲೇ ಇದ್ದೆ. ಮೊದಲ ಸಂಚಿಕೆಯ ಮುಖಪುಟ ಹೆಬ್ಬೆಟ್ಟಿನ ಗುರುತಿನದಾಗಿತ್ತು. ನಮ್ಮ ನಿರಕ್ಷರಿ ಜನಸಮುದಾಯದ ಪ್ರಾಮಾಣಿಕತೆಯ ಪ್ರತೀಕವಾಗಿ ನನಗೆ ಈ.ಹೆ.ಗು ಕಾಣುತ್ತಿದೆ. ಎಂದು ನಾನು ಅವರಿಗೆ ತಿಳಿಸಿದ್ದೆ. ಆರಂಭದ ಸಂಚಿಕೆಗಳಲ್ಲಿ ನನ್ನ ಎರಡು ಲೇಖನಗಳು ಪ್ರಕಟವಾದವು. ‘ಮುಸ್ಲಿಮನಾಗಿರುವುದೆಂದರೆ’ ಎಂಬ ಲೇಖನ ಮತ್ತು ‘ಮುಂಜಾವಿನ ತಂಗಾಳಿ’ ಎಂಬ ವೃತ್ತಾಂತ ನನಗೆ ಬಹಳ ಹೆಸರನ್ನು ತಂದುಕೊಟ್ಟವು. ಮುಂಜಾವಿನ ತಂಗಾಳಿಯನ್ನು ಮೆಚ್ಚಿ ಬರೆದ ಪತ್ರಗಳನ್ನು ನನ್ನ ಮುಂದೆ ಓದಿ ತೋರಿಸುತ್ತ ಸಂತಸಪಟ್ಟ ಅವರು ‘ನೀನು ಈ ರುಜುವಾತು ಸಂಚಿಕೆಯ ಸ್ಟಾರ್ ಕಣಯ್ಯಾ’ ಎಂದು ಬೆನ್ನು ಚಪ್ಪರಿಸಿದ್ದರು. ಸಣ್ಣವರನ್ನು ನೋಡಿಕೊಳ್ಳುವ ಅವರ ಕ್ರಮ ಇದಾಗಿತ್ತು.

ಆಧುನಿಕತೆಯನ್ನು ತಡೆಯಲಿಕ್ಕಾಗದು

ಒಂದು ಧರ್ಮ ಎಷ್ಟೇ ಕಟ್ಟುಪಾಡುಗಳನ್ನು ಹಾಕಿದ್ದರೂ ಆಯಾ ಧರ್ಮಗಳ ಜನರು ಆಧುನಿಕತೆಯ ಕಡೆಗೆ ವಾಲುವುದನ್ನು ನಿಲ್ಲಿಸಲಿಕ್ಕಾಗುವುದಿಲ್ಲ. ಕಾಲದ ಪರಿಣಾಮವನ್ನು ಗಮನಿಸದ ಧಾರ್ಮಿಕ ನಾಯಕರು ಆಯಾ ಧರ್ಮಗಳ ನಿಷ್ಕ್ರಿಯತೆಗೆ ಕಾರಣವಾಗುತ್ತಾರೆ. ಒಮ್ಮೆ ಎ.ಕೆ. ರಾಮಾನುಜನ್ ಅವರು ಪ್ರಧಾನಿ ಇಂದಿರಾ ಗಾಂಧಿಯವರನ್ನು ಭೇಟಿಯಾದಾಗ ಅವರು ಒಂದು ಘಟನೆ ಕುರಿತು ತಿಳಿಸಿದ್ದನ್ನು ಅನಂತಮೂರ್ತಿ ಅವರು ನನಗೆ ಹೇಳಿದರು. ಇಂದಿರಾ ಗಾಂಧಿಯವರು ಸೌದಿ ಅರೆಬಿಯಾಕ್ಕೆ ಪ್ರವಾಸದಲ್ಲಿದ್ದರು. ಆ ಸಂದರ್ಭದಲ್ಲಿ ಅರಬ ಮಹಿಳಾ ಸಮಾವೇಶದ ಉದ್ಘಾಟನೆಗಾಗಿ ಬೃಹತ್ ಸಭಾಭವನಕ್ಕೆ ಹೋದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಸಹಸ್ರಾರು ಮಹಿಳೆಯರು ತಮ್ಮ ಬುರ್ಖಾಗಳನ್ನು ಪಕ್ಕದಲ್ಲಿಟ್ಟುಕೊಂಡು ಮಿಡಿ, ಸ್ಕರ್ಟ್, ಸ್ಲೀವ್‌ಲೆಸ್ ಟಾಪ್, ಪ್ಯಾಂಟ್ ಮುಂತಾದ ಅತ್ಯಾಧುನಿಕ ಡ್ರೆಸ್ ಹಾಕಿಕೊಂಡು ಕುಳಿತಿದ್ದರು. ಲಿಪ್‌ಸ್ಟಿಕ್, ಪೌಡರ್‌ನಿಂದ ಅವರ ಮುಖಗಳು ಕಂಗೊಳಿಸುತ್ತಿದ್ದವು!

ಅನಂತಮೂರ್ತಿ ಅವರು ಯಾವುದೇ ಧರ್ಮವನ್ನು ವಿರೋಧಿಸಲಿಲ್ಲ. ಶೂದ್ರಸಾಹಿತಿಗಳೇನಕರು ಬ್ರಾಹ್ಮಣರನ್ನು ವಿರೋಧಿಸುವಾಗ ಅನಂತಮೂರ್ತಿ ಅವರು ಬ್ರಾಹ್ಮಣಿಕೆಯನ್ನು ವಿರೋಧಿಸುತ್ತಿದ್ದರು. ಆದರೆ ದುರಂತವೆಂದರೆ ಅನೇಕ ಬ್ರಾಹ್ಮಣ ಬುದ್ಧಿಜೀವಿಗಳೂ ಅವರನ್ನು ವಿರೋಧಿಸುತ್ತಿದ್ದರು. ಶೂದ್ರ ಬುದ್ಧಿಜೀವಿಗಳೂ ವಿರೋಧಿಸುತ್ತಿದ್ದರು.

ಧರ್ಮದೊಳಗಿನ ಹೋರಾಟ

ಸಂಪ್ರದಾಯ ಮತ್ತು ಸೃಜನಶೀಲತೆ ಕುರಿತು ಅವರು ಮಾಡಿದ ಭಾಷಣದಲ್ಲಿ, ಸಂಪ್ರದಾಯ ತನ್ನ ವಿರೋಧಿಗಳನ್ನು ತನ್ನೊಳಿಗಿನಿಂದಲೇ ಸೃಷ್ಟಿಸಿಕೊಳ್ಳುವುದರ ಮೂಲಕ ತನ್ನನ್ನು ಶುದ್ಧೀಕರಿಸಿಕೊಳ್ಳುತ್ತದೆ ಮತ್ತು ಪುನಶ್ಚೇತನ ಪಡೆಯುತ್ತದೆ ಎಂದು ಹೇಳಿದ್ದಾರೆ. ಉಪನಿಷತ್ ಋಷಿಗಳು, ಬಸವಣ್ಣನವರು, ರಾಮಕೃಷ್ಣ ಪರಮಹಂಸರು, ನಾರಾಯಣಗುರುಗಳು ಮುಂತಾದವರು ಸಂಪ್ರದಾಯದ ಒಳಗಿನಿಂದಲೇ ಹುಟ್ಟಿ ಅದನ್ನು ಶುದ್ಧೀಕರಿಸುವುದರ ಮೂಲಕ ಪುನಶ್ಚೇತನಗೊಳಿಸಿದಂಥವರು ಎಂಬುದು ಅವರ ವಾದವಾಗಿತ್ತು.

ಯಾವುದೇ ಧರ್ಮ ಒಂದೇ ದಿನದಲ್ಲಿ ಉದ್ಭವಿಸಿರುವಂಥದ್ದಲ್ಲ ಮತ್ತು ಅದು ತನ್ನ ಮೂಲ ಸ್ವರೂಪದಲ್ಲೇ ಮುಂದುವರಿಯುತ್ತಲಿದೆ ಎಂದೂ ಅಲ್ಲ. ಹೀಗೆ ಅವರು ಧರ್ಮದ ಒಳಗಿನ ಹೋರಾಟವನ್ನು ಅರಿತುಕೊಂಡಿದ್ದರು. ಪರಂಪರೆ (ಸಂಪ್ರದಾಯ ಅಲ್ಲ)ಯ ಬೇರುಗಳಿಂದ ಕೂಡಿರುವ ಆಧುನಿಕತೆಯನ್ನು ಅವರು ಬಯಸಿದ್ದರು. ಕರ್ಮಠ ಸಂಪ್ರದಾಯಗಳನ್ನು ಮತ್ತು ಲಂಗುಲಗಾಮಿಲ್ಲದ ಆಧುನಿಕತೆಯನ್ನು ಅವರು ತಿರಸ್ಕರಿಸಿದ್ದರು.

ಸ್ವತಃ ಧಾರ್ಮಿಕತೆಯಿಂದ ವಿಮೋಚನೆಗೊಂಡಿದ್ದರೂ ಧರ್ಮಗಳ ಆಂತರ್ಯವನ್ನು ಬಲ್ಲವರಾಗಿದ್ದರು. ಅವರನ್ನು ಒಮ್ಮೆ ಉಳಿವಿಯಲ್ಲಿ ನಡೆದ ಬಸವ ಶಾಂತಿಯಾತ್ರೆಯ ಸಭೆಯೊಂದಕ್ಕೆ ಕರೆಸಿದ್ದೆ. ಉಳವಿಯಲ್ಲಿನ ಚೆನ್ನಬಸವಣ್ಣನವರ ಗದ್ದುಗೆಗೆ ಅವರನ್ನು ಕರೆದುಕೊಂಡು ಹೋದೆ. ಚೆನ್ನಬಸವಣ್ಣನವರ ಗದ್ದುಗೆಯ ಮುಂದೆ ಅವರು ತದೇಕಚಿತ್ತರಾಗಿ ಕೈಮುಗಿದು ಬಹಳ ಹೊತ್ತಿನವರೆಗೆ ನಿಂತದ್ದು ಮರೆಯಲು ಸಾಧ್ಯವೇ ಇಲ್ಲ. ನಂತರ ಅವರು ವಜ್ರಾಸನದ ಭಂಗಿಯಲ್ಲಿ ಕುಳಿತು ನೆಲಕ್ಕೆ ಹಣೆ ಹಚ್ಚಿ ಚೆನ್ನಬಸವಣ್ಣನವರ ಗದ್ದುಗೆಗೆ ಗೌರವ ಸಲ್ಲಿಸಿದರು. ಉಳವಿ ಕ್ಷೇತ್ರ ದರ್ಶನ ಮಾಡಿಸಿದ್ದಕ್ಕಾಗಿ ಅವರು ಬಹಳ ಸಂತಸಪಟ್ಟಿದ್ದರು.

ದೊಡ್ಡತನದ ನೆನಪಿನ ಅಂಗಳ

ಹೋಚಿಮಿನ್ ಬಗ್ಗೆ ಅನಂತಮೂರ್ತಿ ಅವರಿಗೆ ಅಪಾರ ಗೌರವ. ಅವರು ವಿಯೆತ್ನಾಂ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜೆ. ಪಾರ್ಥಸಾರಥಿ ಅವರು ಅಲ್ಲಿ ಭಾರತದ ರಾಯಭಾರಿಯಾಗಿದ್ದರು. ಪಾರ್ಥಸಾರಥಿ ಎಂದರೆ ಹೋಚಿಮಿನ್ ಅವರಿಗೆ ಬಹಳ ಇಷ್ಟ. ಹೋಚಿಮಿನ್ ಅವರು ರಾಷ್ಟ್ರಪತಿ ಭವನವನ್ನು ವಿದೇಶಿ ಗಣ್ಯರಿಗಾಗಿ ಬಿಟ್ಟುಕೊಟ್ಟು ತಾವು ಪುಟ್ಟ ಮನೆಯೊಂದರಲ್ಲಿ ಇರುತ್ತಿದ್ದರು. ಸಮಯ ಸಿಕ್ಕಾಗ ಕಾಲೆಳೆದುಕೊಂಡು ಪಾರ್ಥಸಾರಥಿ ಬಳಿ ಬಂದು, ಪಾರ್ಥಸಾರಥಿ ಒಂದು ಸಿಗರೇಟ್ ಕೊಡಿ ಎಂದು ಕೇಳಿ ವಿಚಾರವಿನಿಮಯ ಮಾಡಿ ಹೋಗುತ್ತಿದ್ದರು. ಪಾರ್ಥಸಾರಥಿ ಅವರು ಭಾರತಕ್ಕೆ ಬಂದು ಮರಳುವಾಗ ಹೋಚಿಮಿನ್‌ಗಾಗಿ ಆ ಸಿಗರೇಟ್ ಪ್ಯಾಕೇಟ್‌ಗಳ ಒಂದು ದೊಡ್ಡ ಕಟ್ಟನ್ನೇ ಒಯ್ದರು. ಒಂದು ದಿನ ಹೋಚಿಮಿನ್ ಬಂದಾಗ ಪಾರ್ಥಸಾರಥಿಯವರು ಖುಷಿಯಿಂದ ನೀವು ಇಷ್ಟಪಡುವ ಸಿಗರೇಟಿನ ಒಂದು ದೊಡ್ಡ ಬಂಡಲ್ ತಂದಿರುವೆ ತೆಗೆದುಕೊಳ್ಳಿ ಎಂದರು. ಆಗ ಹೋಚಿಮಿನ್ ಹೇಳಿದರು. ‘ನಾನು ಇಷ್ಟಪಡುವುದು ನಿಮ್ಮನ್ನು. ಆ ಬಂಡಲ್ ನೀವೇ ಇಟ್ಟುಕೊಳ್ಳಿ; ಒಂದು ಸಿಗರೇಟ್ ಕೊಡಿʼ ಎಂದು ಹೇಳಿದರಂತೆ. ಅನಂತಮೂರ್ತಿ ಅವರಿಗೆ ದೇಶದ ಮತ್ತು ಜಗತ್ತಿನ ದೊಡ್ಡ ಜನರ ಸಂಪರ್ಕವಿತ್ತು. ಅನೇಕ ದೊಡ್ಡವರ ದೊಡ್ಡತನದ ಘಟನೆಗಳಿಂದ ಅವರ ನೆನಪಿನ ಅಂಗಳ ತುಂಬಿಹೋಗಿತ್ತು.

ರಾಷ್ಟ್ರೀಯತೆಯ ಎಚ್ಚರಿಕೆ

1991-95ರ ಸಂದರ್ಭದಲ್ಲಿ ನಾನು ಕಾರವಾರದಲ್ಲಿ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಬಾತ್ಮೀದಾರನಾಗಿದ್ದಾಗ ಕರಾವಳಿ ಉತ್ಸವಕ್ಕೆ ಕರೆಸಿದ್ದೆ. ಅವರ ಪತ್ನಿ ಎಸ್ತರ್ ಕೂಡ ಜೊತೆಯಲ್ಲಿ ಬಂದರು. ಅವರು ಮುಖ್ಯ ಅತಿಥಿಯಾಗಿ ಆ ಸಾಯಂಕಾಲ ಸಮುದ್ರ ದಂಡೆಯ ವಿಶಾಲ ಪ್ರದೇಶದಲ್ಲಿನ ಮಯೂರವರ್ಮ ವೇದಿಕೆಯಿಂದ ಅರವತ್ತು ಸಾವಿರಕ್ಕೂ ಹೆಚ್ಚಿನ ಜನಸಾಗರವನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಅವರ ಬದುಕಿನಲ್ಲಿ ಅದೊಂದು ಅಪೂರ್ವ ಘಟನೆಯಾಗಿತ್ತು.

ರವೀಂದ್ರನಾಥ ಟಾಗೋರರ ಅಣ್ಣ ಬ್ರಿಟಿಷ್ ಸರ್ಕಾರದಲ್ಲಿ ಕಾರವಾರ ಜಿಲ್ಲಾ ಅಸಿಸ್ಟಂಟ್ ಕಲೆಕ್ಟರ್ ಆಗಿದ್ದರು. ಅದು ಭಾರತೀಯರು ಆ ಕಾಲದಲ್ಲಿ ಪಡೆಯುತ್ತಿದ್ದ ಅತ್ಯುನ್ನತ ಹುದ್ದೆಯಾಗಿತ್ತು. ಸಮುದ್ರ ದಂಡೆಗೆ ಎದುರಾಗಿ ಈಗಿರುವ ಕಾರವಾರ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಜಾಗದಲ್ಲೇ ಅಸಿಸ್ಟಂಟ್ ಕಲೆಕ್ಟರ್‌ರವರ ಮನೆ ಇತ್ತು. 21 ವರ್ಷ ವಯಸ್ಸಿನ ರವೀಂದ್ರನಾಥ ಟಾಗೋರರು 1907ರಲ್ಲಿ ಕಾರವಾರದಲ್ಲಿ ಉಳಿದುಕೊಂಡಿದ್ದು ಮತ್ತು ಕಾರವಾರದ ಕಡಲತೀರದಲ್ಲಿ ತಮಗೆ ಸೌಂದರ್ಯದ ಸಾಕ್ಷಾತ್ಕಾರವಾಗಿದ್ದರ ಕುರಿತು ಬರೆದದ್ದನ್ನು ಅನಂತಮೂರ್ತಿಯವರಿಗೆ ವಿವರಿಸಿದ್ದೆ. ಟಾಗೋರರು ತಮ್ಮ ಮೊದಲ ‘ಪ್ರಕೃತಿರ್ ಪ್ರತಿರೋಧ’ ಎಂಬ ಬಂಗಾಲಿ ಭಾಷೆಯ ನಾಟಕವನ್ನು ಕಾರವಾರದಲ್ಲೇ ಬರೆದಿದ್ದರು. ಈ ಮಾತುಗಳೆಲ್ಲ ಅನಂತಮೂರ್ತಿ ಅವರಿಗೆ ಆಪ್ಯಾಯಮಾನವಾಗಿದ್ದವು. ಅವರು ಗಾಂಧೀಜಿಯಷ್ಟೇ ಟಾಗೋರ್ ಅವರನ್ನು ಹಚ್ಚಿಕೊಂಡವರಾಗಿದ್ದರು. ರಾಷ್ಟ್ರೀಯತೆಯ ಎಚ್ಚರಿಕೆ ಕುರಿತಂತೆ ಗಾಂಧೀಜಿ ಮತ್ತು ಟಾಗೋರ್ ಅವರ ಮಾತುಗಳು ಅನಂತಮೂರ್ತಿ ಅವರಿಗೆ ಬಹಳ ಹಿಡಿಸಿದ್ದವು. ರಾಷ್ಟ್ರೀಯತೆಯು ಮಾನವೀಯತೆಯನ್ನು ಕಳೆದುಕೊಂಡಾಗ ಫ್ಯಾಸಿಸಂ ಕಡೆಗೆ ಸಾಗುತ್ತದೆ ಎಂಬುದರಲ್ಲಿ ಅವರಿಗೆ ಅಚಲವಾದ ವಿಶ್ವಾಸವಿತ್ತು. ಪ್ರಜಾಪ್ರಭುತ್ವ ಎಂದರೆ ಧ್ವನಿ ಇಲ್ಲದವರ ಧ್ವನಿ ಎಂದು ಅವರು ಹೇಳುತ್ತಿದ್ದರು.

ಗೋಕಾಕ ಚಳವಳಿಯ ಸಂದರ್ಭದಲ್ಲಿ ನಾನು ಮೈಸೂರಿನಲ್ಲಿದ್ದೆ. ಚಳವಳಿ ತಾರಕಕ್ಕೇರಿದಾಗ ಅನಂತಮೂರ್ತಿ ಅವರು ಅದನ್ನು ಸಮೂಹಸನ್ನಿ ಎಂದು ಕರೆಯಲು ಹಿಂಜರಿಯಲಿಲ್ಲ. ಮೈಸೂರಿನ ಟೌನ್ ಹಾಲ್ ಬಳಿ ಚಳವಳಿಗಾರರನ್ನು ಉದ್ದೇಶಿಸಿ ಡಾ. ಹಾ.ಮಾ. ನಾಯಕ ಅವರು ಮಾತನಾಡುತ್ತ ಕನ್ನಡದ ಅನ್ನ ತಿನ್ನುವ ಮುಸ್ಲಿಮರು ಕನ್ನಡ ಕಲಿಯಬೇಕು ಎಂದು ನುಡಿದದ್ದು ಅನಂತಮೂರ್ತಿ ಅವರಿಗೆ ಬೇಸರವನ್ನುಂಟು ಮಾಡಿತು. ಮುಸ್ಲಿಮರು ಅನ್ನವನ್ನು ದುಡಿದು ತಿನ್ನುತ್ತಾರೆ. ಅವರಿಗೆ ಯಾರೂ ಉಚಿತವಾಗಿ ಕೊಡುವುದಿಲ್ಲ ಎಂದು ಹೇಳಿದರು.

ಕರಾವಳಿ ಉತ್ಸವದಲ್ಲಿ ಅವರು ಭಾಷಣ ಮಾಡಿದ ಮರುದಿನ, ಕಾರವಾರ ಜಿಲ್ಲಾಧಿಕಾರಿಯಾಗಿದ್ದ ಮಹೇಂದ್ರ ಜೈನ್ ಅವರು ಅನಂತಮೂರ್ತಿ ಕುಟುಂಬಕ್ಕೆ ಮತ್ತು ನನಗೆ ಬೆಳಗಿನ ಉಪಾಹಾರಕ್ಕೆ ಆಮಂತ್ರಿಸಿದರು. ನಾವು ಹೋದೆವು. ಆಗ ಆಡಳಿತಯಂತ್ರದ ಕುರಿತು ನನ್ನ ಕೂಡ ಅನಂತಮೂರ್ತಿ ಅವರು ಮಾತನಾಡುತ್ತಿದ್ದರು. ಅವರು ಆಡಳಿತಯಂತ್ರದ ಮಹತ್ವದ ಕುರಿತು ತಿಳಿಸಿದರು. ಯಾವುದೇ ಸರ್ಕಾರ ಬಂದರೂ ಸಂವಿಧಾನದ ಆಶಯಗಳೊಂದಿಗೆ ಆಡಳಿತಯಂತ್ರವನ್ನು ನಡೆಸಿಕೊಂಡು ಹೋಗುವುದು ಐಎಎಸ್, ಐಪಿಎಸ್ ಮುಂತಾದ ಉನ್ನತ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ವಿವಿಧ ರಾಜಕೀಯ ಪಕ್ಷಗಳ ಸರ್ಕಾರ ಬಂದರೂ ಅದೇ ಆಡಳಿತಯಂತ್ರವಿರುತ್ತದೆ; ಅದೇ ಸಂವಿಧಾನವಿರುತ್ತದೆ. ಸರ್ಕಾರ ಯಾವುದೇ ಇದ್ದರೂ ಸಂವಿಧಾನ ಬಾಹಿರವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ರಾಜಕೀಯ ನಾಯಕರಿಗೆ ಕಾರ್ಯಾಂಗದ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡುವುದು ಉನ್ನತ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ.

ನಾವು ಎದ್ದು ಹೊರಟಾಗ ಬೇಡ ಬೇಡ ಎಂದು ಅನಂತಮೂರ್ತಿ ಅವರು ಹೇಳಿದರೂ ಆ ಜಿಲ್ಲಾಧಿಕಾರಿ ಬೂಟುಗಳನ್ನು ತಂದು ಅವರ ಕಾಲಮುಂದೆ ಇಟ್ಟರು. ಒಬ್ಬ ದೊಡ್ಡಮನುಷ್ಯನಿಗೆ ಅವರು ಮೌನವಾಗಿ ಗೌರವ ಸಲ್ಲಿಸಿದ್ದರು! ಅನಂತಮೂರ್ತಿಯವರು ಪ್ರೀತಿಯಿಂದ ಗೆಲ್ಲುತ್ತಿದ್ದರು ಮತ್ತು ಪ್ರೀತಿಗೆ ಸೋಲುತ್ತಿದ್ದರು.

ಒತ್ತಾಸೆ

ಅವರು ಸಾಮಾಜಿಕ ಚಳವಳಿಗೆ ಧುಮುಕಬೇಕು ಎಂಬುದು ನನ್ನ ಒತ್ತಾಸೆಯಾಗಿತ್ತು. ಅವರು ಜ್ಞಾನಪೀಠ ಪ್ರಶಸ್ತಿ ಪಡೆಯಲು ದೆಹಲಿಗೆ ಹೋಗುವ ದಿನ ಬೆಂಗಳೂರಿನಲ್ಲಿರುವ ಮಗಳು ಅನುರಾಧಾ ಮನೆಯಲ್ಲಿದ್ದರು. ನಾನು ಅವರ ಜೊತೆ ಇದ್ದೆ. ಅವರು ಏರ್‌ಪೋರ್ಟ್‌ಗೆ ಹೋಗಲು ಕಾರು ಹತ್ತುವ ಸಂದರ್ಭದಲ್ಲಿ ‘ಸರ್ ಇನ್ನು ನಿಮ್ಮ ಆಸೆಗಳೆಲ್ಲ ಮುಗಿದುವಲ್ಲ. ಇನ್ನಾದರೂ ಸಾಮಾಜಿಕ ಚಳವಳಿಯಲ್ಲಿ ತೊಡಗುವುದರ ಮೂಲಕ ನಮ್ಮಂಥವರಿಗೆಲ್ಲ ಮಾರ್ಗದರ್ಶನ ಮಾಡಿ’ ಎಂದೆ. ಅವರು ಎಂದಿನಂತೆ ಪ್ರಸನ್ನವದನರಾಗಿ ಆಯ್ತಿತಯ್ಯಾ ಜೊತೆಗೂಡಿ ಕೆಲಸ ಮಾಡೋಣ ಎಂದು ಕಾರು ಹತ್ತಿದರು.
ತುಮಕೂರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಅವರ ಸಂದರ್ಶನವನ್ನು ಸುಧಾ ವಾರಪತ್ರಿಕೆಯ ಕವರ್ ಸ್ಟೋರಿಗಾಗಿ ಮಾಡಿದೆ. ಆಗ ನಾನು ಕೇಳಿದ ಪ್ರಶ್ನೆಗಳು ಅವರಿಗೆ ಬಹಳ ಹಿಡಿಸಿದವು. ಆ ಸಂದರ್ಶನವನ್ನು ಅವರು ಅನೇಕ ಬಾರಿ ನೆನಪು ಮಾಡಿಕೊಂಡಿದ್ದರು. ‘ಬುದ್ಧಿಜೀವಿಗಳ ಆಸೆ ಮತ್ತು ಸೂಫಿ ಸಂತನ ಆಶಯಗಳನ್ನು ಹೊತ್ತು ತಿರುಗುವ ಅನಂತಮೂರ್ತಿ’ ಎಂದು ನಾನು ಆ ಸಂದರ್ಶನದ ಇಂಟ್ರೊದಲ್ಲಿ ಬರೆದದ್ದು ದೊಡ್ಡದಾಗಿ ಅಚ್ಚಾಗಿತ್ತು. ಭಿನ್ನಾಭಿಪ್ರಾಯಗಳ ಮಧ್ಯೆ ಕೂಡ ಮಾನವೀಯ ಸಂಬಂಧಗಳನ್ನು ಹೃದಯಂಗಮವಾಗಿ ಉಳಿಸಿಕೊಳ್ಳುವಂಥ ಅನನ್ಯ ಮನೋಶಕ್ತಿಯನ್ನು ಅನಂತಮೂರ್ತಿ ಅವರು ಪಡೆದಿದ್ದರು.

ನನ್ನ ಕಮ್ಯೂನಿಸಂ ಅನ್ನು ಅವರ ಸೋಷಿಯಲಿಸಂ ಅನೇಕಬಾರಿ ಸಂಶಯದಿಂದ ನೋಡುತ್ತಿತ್ತು. ನನ್ನ ಕಮ್ಯೂನಿಸಂ ಅವರ ಸೋಷಿಯಲಿಸಂ ಅನ್ನು ದುರ್ಬಲ ಎನ್ನುತ್ತಿತ್ತು. ಇಂಥ ವಾಗ್ವಾದಗಳು ನಮ್ಮ ಮಾನವಸಂಬಂಧಗಳಿಗೆ ಬಾಧೆಯನ್ನುಂಟು ಮಾಡಲಿಲ್ಲ. ಇವು ವಿರೋಧ ನಿಲವು ತಾಳದೆ ಬದುಕನ್ನು ನೋಡುವ ಎರಡು ಕ್ರಮಗಳಾಗಿದ್ದವು. ಅನೇಕ ಬಾರಿ ನನ್ನ ಕಮ್ಯೂನಿಸ್ಟ್ ಇಂಟರ್‌ಪ್ರಿಟೇಶನ್ ಅವರಿಗೆ ಹಿಡಿಸುತ್ತಿತ್ತು. ಅವರ ಸೋಷಿಯಲಿಸ್ಟ್ ಮನೋಭಾವದಿಂದ ನಾನು ಬಹಳಷ್ಟು ಕಲಿತೆ. ಸಿಪಿಐನ ಅಚ್ಯತ್ ಮೆನನ್ ಮತ್ತು ಸಿಪಿಎಂನ ನಂಬೂದಿರಿಪಾಡ್ ಅಂಥವರು ಅವರಿಗೆ ಅಚ್ಚುಮೆಚ್ಚಿನವರಾಗಿದ್ದರು. ವಿಸ್ತಾರವಾದ ನೆಲೆಯಲ್ಲಿ ಅವರು ಎಡ ಮತ್ತು ಪ್ರಜಾಪ್ರಭುತ್ವವಾದಿ ನಿಲವಿಗೆ ಸದಾ ಬದ್ಧರಾಗಿದ್ದರು.

ಪ್ರಜ್ಞಾಪೂರ್ಣ ಮುಗ್ಧತೆ

ಅವರು ಮನುಷ್ಯರನ್ನು ಅವರ ದೌರ್ಬಲ್ಯಗಳ ಜೊತೆಗೇ ಪ್ರೀತಿಸುತ್ತಿದ್ದರು. ಅವರ ಜೊತೆ ಮಾತನಾಡುವಾಗ, ಒಬ್ಬ ದೊಡ್ಡಮನುಷ್ಯನ ಜೊತೆ ಮಾತನಾಡುತ್ತಿದ್ದೇನೆ ಎಂದು ನನಗೆ ಎಂದೂ ಅನಿಸಲಿಲ್ಲ. ಅವರ ಮಾತುಗಳು ಸರಳ ಸಹಜವಾಗಿರುತ್ತಿದ್ದವು. ಜನಸಮುದಾಯಕ್ಕೆ ಗೊತ್ತಿಲ್ಲದ್ದನ್ನು ಗೊತ್ತಾಗದಂತೆ ಹೇಳಿ ಬೆಚ್ಚಿ ಬೀಳಿಸುವ ಜಾಯಮಾನ ಅವರದಾಗಿರಲಿಲ್ಲ. ಜನರಿಗೆ ಗೊತ್ತಿದ್ದನ್ನೇ ಅವರ ಅರಿವಿಗೆ ತಲುಪಿಸುವ ಮಹತ್ ಕಾರ್ಯವನ್ನು ಅವರು ಸದಾ ಮಾಡುತ್ತಲೇ ಬಂದರು. ಅವರು ಎಂದೂ ಭಯಭೀತರಾಗಿ ಮತ್ತು ಜನರನ್ನು ಮೆಚ್ಚಿಸುವ ರೀತಿಯಲ್ಲಿ ಮಾತನಾಡುವುದನ್ನು ಇಷ್ಟಪಡುತ್ತಿರಲಿಲ್ಲ. ಮಗುವಿನಂತಿದ್ದ ಅವರು ನಿರ್ಣಾಯಕ ಸಂದರ್ಭದಲ್ಲಿ ಒಂಟಿಸಲಗದಂತೆ ಹಾದುಹೋಗುತ್ತಿದ್ದರು.

ಒಮ್ಮೆ ರಾತ್ರಿ 10 ಗಂಟೆ ಸಮಯದಲ್ಲಿ ಬೆಂಗಳೂರಿನ ಎಂ.ಜಿ. ರಸ್ತೆ ಬಳಿಯ ಹೊಟೇಲೊಂದರಲ್ಲಿ ಊಟ ಮಾಡುತ್ತಿದ್ದೆವು. ಅದೊಂದು ಪ್ರಶಸ್ತವಾದ ಸ್ಥಳವಾಗಿತ್ತು. ಬಹುಶಃ ನಾವು ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡುತ್ತಿದ್ದ ನೆನಪು. ಮಾತಿನ ಸಂದರ್ಭದಲ್ಲಿ ನಾನು ಹೇಳಿದೆ: ಮಾನವರು ಮುಗ್ಧತೆಯಿಂದ ಪ್ರಜ್ಞಾಪೂರ್ಣವಾದ ಮುಗ್ಧತೆಯ ಕಡೆಗೆ ಸಾಗುವುದೇ ನಿಜವಾದ ವ್ಯಕ್ತಿತ್ವವಿಕಸನ. ಬುದ್ಧ, ಏಸು, ಪೈಗಂಬರ, ಬಸವಣ್ಣ, ಗಾಂಧಿ, ರಾಮಕೃಷ್ಣ ಪರಮಹಂಸ ಮತ್ತು ರಮಣಮಹರ್ಷಿ ಅಂಥವರು ಇಂಥ ಪ್ರಜ್ಞಾಪೂರ್ಣವಾದ ಮುಗ್ಧತೆಯನ್ನು ಹೊಂದಿದ್ದರು. ಆದರೆ ಪ್ರಜ್ಞಾಪೂರ್ವಕವಾಗಿ ಮುಗ್ಧತೆಯನ್ನು ತೋರುವವರು ಖಂಡಿತವಾಗಿಯು ಜನರನ್ನು ಮೋಸ ಮಾಡುತ್ತಲೇ ಇರುತ್ತಾರೆ. ಅವರಿಗೆ ನನ್ನ ಮಾತು ಬಹಳ ಖುಷಿ ಕೊಟ್ಟಿತು. ‘ಇದೇ ಕಣೊ ನಾವೆಲ್ಲ ಸಾಧಿಸಬೇಕಾದುದು’ ಎಂದು ತಿಳಿಸಿದರು.

ಹಿಂದೊಮ್ಮೆ ನಾವಿಬ್ಬರೂ ಬೆಂಗಳೂರಿನ ಯವನಿಕಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಕೂಡಿ ಕುಳಿತಿದ್ದೆವು. ಆಗ ಶಿವರಾಮ ಕಾರಂತರ ನಿಧನದ ವಾರ್ತೆ ಬಂದಿತು. ಅವರು ಬಹಳ ದುಃಖಿಯಾದರು. ‘ಇಂಥ ದೊಡ್ಡವರ ಮುಂದೆ ನನ್ನಂಥವರು ಎಷ್ಟು ಸಣ್ಣವರು’ ಎಂದು ವಿಷಣ್ಣವದನರಾಗಿ ನುಡಿದರು. ದೊಡ್ಡ ಮನುಷ್ಯರು ಇನ್ನೊಬ್ಬ ದೊಡ್ಡ ಮನುಷ್ಯರನ್ನು ಗೌರವಿಸುವ ರೀತಿ ಇದು ಎಂದು ನನಗೆ ಅನಿಸಿತು.

ಅವರ ಜೀವಕಾರುಣ್ಯ ಉಸಿರಾಟದಷ್ಟೇ ಸಹಜವಾಗಿತ್ತು. ಒಮ್ಮೆ ನನಗೆ ಜಿ. ಎಚ್. ನಾಯಕ ಅವರು ಹೇಳಿದ್ದರು. ಅವರಿಬ್ಬರೂ ಒಂದೇ ಹಾಸ್ಟೇಲ್‌ನಲ್ಲಿ ಇದ್ದು ಓದುತ್ತಿದ್ದರು. ನಾಯಕರು ಪೈಲವಾನ ಇದ್ದ ಹಾಗೆ ಇದ್ದಾರೆ. ಉಚಿತ ಪ್ರಸಾದ ನಿಲಯದಲ್ಲಿ ಸಿಗುವಂಥದ್ದು ನಿಯಮಿತ ಆಹಾರ. ತಮ್ಮ ಪಕ್ಕದಲ್ಲಿ ಕುಳಿತ ನಾಯಕರ ಪ್ಲೇಟಿಗೆ ಅನಂತಮೂರ್ತಿ ಅವರು ಒಂದಿಷ್ಟು ಮುದ್ದೆಯನ್ನು ಹಾಕುತ್ತಿದ್ದರು.

ಅನಂತಮೂರ್ತಿ ಅವರು ಕೊಟ್ಟಾಯಂ ಗಾಂಧಿ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಹೋಗುವ ಸಂದರ್ಭದಲ್ಲಿ ಮೈಸೂರಿನಲ್ಲಿ ಬೀಳ್ಕೊಡುವ ಸಮಾರಂಭ ಏರ್ಪಡಿಸಲಾಗಿತ್ತು. ನಾನು ಬೆಂಗಳೂರಿನಿಂದ ಮೈಸೂರಿಗೆ ಹೋಗಿದ್ದೆ. ಸಭೆಯ ನಂತರ ಮನೆಗೆ ಹೋದೆವು. ಸಮಾರಂಭದಲ್ಲಿ ಕೊಟ್ಟ ಹಣ್ಣಿನ ಅಲಂಕೃತ ಬುಟ್ಟಿಯೊಂದು ನನ್ನ ಎದುರಿನಲ್ಲೇ ಇತ್ತು. ಅದರಲ್ಲಿಯ ಒಂದು ಹಣ್ಣನ್ನು ನಾನು ಹಿಂದೆ ಎಂದೂ ನೋಡಿರಲಿಲ್ಲ. ಹೀಗಾಗಿ ಅದನ್ನೇ ನೋಡುತ್ತಿದ್ದೆ. ಅವರು ಈ ದೃಶ್ಯವನ್ನು ನೋಡಿದರು. ಅಲ್ಲಿಗೆ ಬಂದು ನಿನಗೆ ಯಾವ ಹಣ್ಣು ಇಷ್ಟ ಎಂದರು. ಆ ಹೊಸ ಹಣ್ಣು ಯಾವುದು ಎಂದು ಯೋಚಿಸುತ್ತಿದ್ದೇನೆ ಎಂದೆ. ಅವರು ಆ ಹಣ್ಣನ್ನು ತಂದು ನನಗೆ ಕೊಟ್ಟರು. ಅವರ ಒತ್ತಾಯಕ್ಕೆ ತಿಂದೆ. ಆ ಹಣ್ಣು ಹುಳಿಯಾಗಿತ್ತು. ಆದರೆ ವಿಶಿಷ್ಟ ರುಚಿ ಕೊಟ್ಟಿತು!

ಒಂದು ಸಲ ಅನಂತಮೂರ್ತಿಯವರು ರಸ್ತೆಯಲ್ಲಿ ಹೋಗುತ್ತಿರುವಾಗ, ಬಾಲಕಿಯೊಬ್ಬಳು ತನಗಿಂತಲೂ ಸ್ವಲ್ಪ ಚಿಕ್ಕದಾದ ಬಾಲಕನನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಿದರು. ಆಕೆ ಪ್ರಯಾಸಪಡುತ್ತಿರುವುದನ್ನು ಗಮನಿಸಿದ ಅವರು, ಆತ ನಡೆಯುತ್ತಾನೆ ಇಳಿಸಮ್ಮಾ ಎಂದರು. ಆ ಬಾಲಕಿ ಕೃತಜ್ಞತೆಯಿಂದ ಅವರ ಮುಖವನ್ನು ನೋಡುತ್ತ ಇದು ನನ್ನ ತಮ್ಮ ಎಂದಿತು. ಇದನ್ನು ಕೇಳಿ ನನಗೆ ಅಲೌಕಿಕ ಆನಂದವಾಯಿತು. ಪ್ರೀತಿಯ ಭಾರವನ್ನು ಹೊತ್ತುಕೊಂಡು ಸಾಗುವುದರಲ್ಲಿ ಎಷ್ಟೊಂದು ಸುಖವಿದೆ ಎಂದು ನನಗೆ ಅನಿಸಿತು. ಈ ದೃಶ್ಯ ಅನಂತಮೂರ್ತಿಯವರ ಮೇಲೆ ಆಳವಾದ ಪರಿಣಾಮ ಬೀರಿತ್ತು.

ನೀವು ಬ್ರಾಹ್ಮಣರಾ?

ಅವರು ಇಂಗ್ಲೆಂಡಿನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ನಡೆದ ಘಟನೆಯೊಂದನ್ನು ಹೇಳಿದರು. ಪಂಚತಾರಾದಂಥ ಹೋಟೆಲೊಂದರಲ್ಲಿ ಬಫೆ ಸಿಸ್ಟಂ ಡಿನರ್ ವ್ಯವಸ್ಥೆಯಾಗಿತ್ತು. ಇವರು ಒಮ್ಮೆ ಪೋರ್ಕ್ ತಿಂದರು, ಮತ್ತೊಮ್ಮೆ ಬೀಫ್ ತಿಂದರು. ಆಗ ಅಲ್ಲಿದ್ದ ಬ್ರಿಟಿಷ್ ಸಹಪಾಠಿಯೊಬ್ಬ ಇವರಿಗೆ ಕೇಳಿದ ನೀವು ಬ್ರಾಹ್ಮಣರಾ ಎಂದು. ಹೇಗೆ ಗೊತ್ತಾಯಿತು ಎಂದು ಕೇಳಿದ್ದಕ್ಕೆ ಆತ ಹೇಳಿದ: ಮುಸ್ಲಿಮರು ಪೋರ್ಕ್ ತಿನ್ನುವುದಿಲ್ಲ. ಹಿಂದೂಗಳು ಬೀಫ್ ತಿನ್ನುವುದಿಲ್ಲ. ಎರಡೂ ತಿನ್ನುವವರು ಬ್ರಾಹ್ಮಣರು.

ಹೀಗಿತ್ತು ನಮ್ಮ ಅನಂತಮೂರ್ತಿ ಅವರ ಬ್ರಾಹ್ಮಣ್ಯ. ಅವರ ಧರ್ಮ, ಊಟದ ಮತ್ತು ಧಾರ್ಮಿಕ ವಿಧಿವಿಧಾನಗಳ ಧರ್ಮವಾಗಿರಲಿಲ್ಲ. ಪರಧರ್ಮೀಯರನ್ನು ಟೀಕಿಸುತ್ತ ಗವಿಷ್ಠರಾಗುವವರ ಧರ್ಮವಾಗಿರಲಿಲ್ಲ. ಅವರ ಧರ್ಮದ ಪ್ರಜ್ಞೆಯಲ್ಲಿ ಉದಾತ್ತವಾದ ಎಲ್ಲ ಧರ್ಮಗಳ ಆಶಯಗಳು ತುಂಬಿಕೊಂಡಿದ್ದವು. ಅವರು ಹಿಂದೊಮ್ಮೆ ನನಗೆ ಹೇಳಿದ್ದರು, ಪ್ರಜ್ಞಾವಂತ ಮಾನವ ಒಂದೇ ಧರ್ಮವನ್ನು ಅನುಸರಿಸುತ್ತ ಬದುಕಲು ಸಾಧ್ಯವಿಲ್ಲ ಎಂದು. ಅನೇಕ ಧರ್ಮಗಳು, ಅನೇಕ ಚಿಂತನೆಗಳು, ಅನೇಕ ವಾದಗಳು ಮತ್ತು ಮಾನವಕುಲದ ಜೀವಾನನುಭವದ ಒಟ್ಟು ಮೊತ್ತವಾಗಿದ್ದರು ಅನಂತಮೂರ್ತಿ. ಅವರು ಒಳನೋಟಗಳಿಂದ ತುಂಬಿದ್ದ ಪ್ರತಿಭೆಯ ಮೂರ್ತಸ್ವರೂಪವಾಗಿದ್ದರು.

ದೊಡ್ಡ ವಿದ್ವಾಂಸ ಕಣಯ್ಯಾ

ಅನಂತಮೂರ್ತಿ ಅವರು ಡಯಲಿಸಿಸ್ ಮಾಡಿಕೊಳ್ಳುತ್ತಿದ್ದ ಮಣಿಪಾಲ ಆಸ್ಪತ್ರೆಗೆ ಹೋದಾಗ ಡಯಲಿಸಿಸ್ ಇನ್ನೂ ಮುಗಿದಿರಲಿಲ್ಲ. ಕುರ್ಚಿ ಎಳೆದುಕೊಂಡು ಅವರ ಎದುರಿಗೆ ಕುಳಿತೆ. ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ ವಿಚಾರ ಮತ್ತು ದೆವ್ವದ ಕಲ್ಲು, ಮೂರ್ತಿ ಮತ್ತು ಮೂತ್ರಗಳ ಕುರಿತು ಟೀಕೆ ಟಿಪ್ಪಣಿಗಳ ಜೋರಾಗಿದ್ದ ಸಂದರ್ಭ ಅದು. ಅದು ಇದು ಮಾತನಾಡುತ್ತ ‘ಕಲಬುರ್ಗಿ ದೊಡ್ಡ ವಿದ್ವಾಂಸ ಕಣಯ್ಯಾ’ ಎಂದು ಅನಂತಮೂರ್ತಿ ಹೇಳಿದರು. ಸಾವಿನ ಹಾಸಿಗೆಯಲ್ಲಿದ್ದಾಗ ಕಲಬುರ್ಗಿಯವರು ಮಾಡಿದ ಟೀಕೆಗಳಿಂದ ಮನಸ್ಸು ನೊಂದಿದ್ದರೂ ಅವರು ಆ ಕುರಿತು ಮಾತನಾಡಲಿಲ್ಲ. ಇದಕ್ಕಿಂತ ಹೆಚ್ಚಾಗಿ ಅವರ ಪತ್ನಿ ಎಸ್ತರ್ ಹೇಳಿದ್ದು ಇನ್ನೂ ಮಾರ್ಮಿಕವಾಗಿತ್ತು. ‘ಕಲಬುರ್ಗಿ ಅವರು ಏನೋ ಹೇಳಲು ಹೋಗಿ ತೊಂದರೆಗೊಳಗಾಗಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು. ಸಂಸ್ಕಾರ ಅಂದರೆ ಇದೆ ಅಲ್ಲವೆ?

ಮಕ್ಕಳಿಗೆ ನಮಸ್ಕಾರ

ಅನಂತಮೂರ್ತಿ ಅವರು ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದಾಗ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ವೀಕ್ಷಿಸಲು ಅನಾರೋಗ್ಯದ ಮಧ್ಯೆಯೆ ಬಂದಿದ್ದರು. ನಾನು ಸದ್ಯ ಗೌರವ ಮುಖ್ಯ ಆಡಳಿತಾಧಿಕಾರಿಯಾಗಿರುವ ಗುಲ್ಬರ್ಗದ ಸರ್ವಜ್ಞ ಕಾಲೇಜಿಗೆ ಆಹ್ವಾನಿಸಿದೆ. ಅವರು ಪತ್ನೀಸಮೇತರಾಗಿ ಆಗಮಿಸಿದರು. ಕಿಡ್ನಿ ಸಮಸ್ಯೆಯಿಂದಾಗಿ ಬಹಳ ಸುಸ್ತಾಗಿದ್ದರೂ ತಮ್ಮ ಉಜ್ವಲ ಮಾತುಗಳಿಂದ ಮಕ್ಕಳ ಮನಸ್ಸನ್ನು ಗೆದ್ದರು. ಅವರು ಮಕ್ಕಳಿಗೆ ನಮಸ್ಕಾರ ಎಂದು ಕೈಮುಗಿದದ್ದು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ಅವರು ವ್ಯಕ್ತಿತ್ವ ವಿಕಸನದಲ್ಲಿ ಮಾತೃಭಾಷೆಯ ಪಾತ್ರ ಕುರಿತು ಮಾತನಾಡಿದ್ದರು.

ಇದು ದ್ವಂದ್ವ ಅಲ್ಲ

ಆಗಿನ್ನೂ ಜಯದೇವ ಹೃದ್ರೋಗ ಆಸ್ಪತ್ರೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲೇ ಇತ್ತು. ಹೃದ್ರೋಗ ಚಿಕಿತ್ಸೆಗಾಗಿ ಅನಂತಮೂರ್ತಿ ಅವರನ್ನು ಸೇರಿಸಲಾಗಿತ್ತು. ಆಗ ಬೆಂಗಳೂರಿನಲ್ಲೇ ಇದ್ದ ನಾನು ಅವರನ್ನು ಕಾಣಲು ಹೋದೆ. ಸ್ವಲ್ಪ ಹೊತ್ತಿನ ನಂತರ ಬಿ.ಸಿ. ರಾಮಚಂದ್ರ ಶರ್ಮಾ ಅವರು ಬಂದರು. ಅವರಿಬ್ಬರೂ ಕೆಲ ದಿನಗಳ ಹಿಂದೆ ನಿಧನರಾಗಿದ್ದ ಡಿ. ಆರ್. ನಾಗರಾಜ ಬಗ್ಗೆ ಮಾತನಾಡುತ್ತಿದ್ದರು. ಆ ಮಾತುಗಳಲ್ಲಿ ಡಿ. ಆರ್. ಬಗೆಗಿನ ಕೆಲ ಗುಣಗಳ ನಕಾರಾತ್ಮಕ ಪ್ರಸ್ತಾಪವಿತ್ತು. ಮುಂದೆ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಮುಖಪುಟದಲ್ಲಿ ಅನಂತಮೂರ್ತಿ ಅವರ ಲೇಖನ ಪ್ರಕಟವಾಯಿತು. ಡಿ. ಆರ್. ತೃತೀಯ ಜಗತ್ತಿನ ಸಂತ ಎಂದು ಅವರು ಹೊಗಳಿದ್ದರು! ಕೋಲಾರದಂಥ ಹಿಂದುಳಿದ ಜಿಲ್ಲೆಯ ಬಡ ನೇಕಾರನ ಮಗನೊಬ್ಬ ತೀವ್ರ ಹಟದಿಂದ ಕೂಡಿದ್ದ ಮಹತ್ವಾಕಾಂಕ್ಷೆಯೊಂದಿಗೆ ಕನ್ನಡ ಸಾರಸ್ವತ ಲೋಕದಲ್ಲಿ ತನ್ನದೇ ವಿಶಿಷ್ಟವಾದ ಛಾಪು ಮೂಡಿಸಿದ್ದು ಅನಂತಮೂರ್ತಿ ಅವರಿಗೆ ಹೆಮ್ಮೆಯ ವಿಚಾರವಾಗಿತ್ತು. ಕೆಲವರು ಇದಕ್ಕೆ ದ್ವಂದ್ವ ಎಂದು ಕರೆಯುತ್ತಾರೆ. ಆದರೆ ಅನಂತಮೂರ್ತಿಯವರು ಎಲ್ಲ ವೈರುಧ್ಯಗಳ ಮಧ್ಯೆಯೂ ಒಳ್ಳೆಯದನ್ನು ಹುಡುಕುವ ಧೀಮಂತರಾಗಿದ್ದರು. ಅವರು ಕೆಸರಿನಲ್ಲಿ ಕಮಲ ಹುಡುಕುತ್ತಿದ್ದರು. ಕೋಮುಗಲಭೆಗಳಲ್ಲಿ ಕಮಲ ಹುಡುಕುವವರಿಗೆ ಮತ್ತು ಗಾಂಪಾರಂಥ ಕೊಂಕುವಾದಿಗಳಿಗೆ ಅನಂತಮೂರ್ತಿಯವರು ಕೊನೆಯವರೆಗೂ ಅರ್ಥವಾಗದೆ ಹೋದರು.

ಬಸವಭೂಮಿಯಲ್ಲಿ

ಬಸವಕಲ್ಯಾಣದ ಪ್ರಸ್ತುತ ವರ್ಷದ ಬಸವ ಉತ್ಸವದ ಉದ್ಭಾಟನಾ ಸಮಾರಂಭಕ್ಕೆ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಅನಂತಮೂರ್ತಿಯವರನ್ನೇ ಕರೆಸಬೇಕು ಎಂಬುದು ಉತ್ಸವದ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಬೆಲ್ದಾಳ ಶರಣರ ಬಯಕೆಯಾಗಿತ್ತು. ಆಗ ಧಾರವಾಡದಲ್ಲಿದ್ದ ನನಗೆ ದೂರವಾಣಿ ಮೂಲಕ ಸಂಪರ್ಕಿಸಿದರು. ಅನಂತಮೂರ್ತಿ ಅವರು ಕಿಡ್ನಿ ಪೇಷಂಟ್ ಆಗಿರುವುದರಿಂದ ಎಲ್ಲ ರೀತಿಯ ವ್ಯವಸ್ಥೆ ಮಾಡುವುದಾದರೆ ಅವರಿಗೆ ಮನವಿ ಮಾಡುವೆ ಎಂದು ತಿಳಿಸಿದೆ. ಬೀದರ ಜಿಲ್ಲಾಧಿಕಾರಿ ಜಾಫರ್ ಸರ್ವರೀತಿಯ ವ್ಯವಸ್ಥೆ ಮಾಡಿದರು. ಅನಂತಮೂರ್ತಿ ಅವರು ಕುಟುಂಬ ಮತ್ತು ಸಹಾಯಕರೊಂದಿಗೆ ಬೆಂಗಳೂರಿನಿಂದ ಹೈದರಾಬಾದಿಗೆ ವಿಮಾನ ಮೂಲಕ ಬರುವ ವ್ಯವಸ್ಥೆ ಮಾಡಲಾಯಿತು. ಡಯಾಲಿಸಿಸ್ ಮುಂತಾದ ಸುಸಜ್ಜಿತ ವೈದ್ಯಕೀಯ ಯಂತ್ರೋಪಕರಣಗಳಿಂದ ಕೂಡಿದ್ದ ಅಂಬ್ಯೂಲೆನ್ಸ್ ಮತ್ತು ಅನುಭವಿ ವೈದ್ಯರ ವ್ಯವಸ್ಥೆಯಾಯಿತು. ಈ ಎಲ್ಲ ವ್ಯವಸ್ಥೆಯೊಂದಿಗೆ ಅವರನ್ನು ಮತ್ತು ಅವರ ಪರಿವಾರವನ್ನು ಬಸವಕಲ್ಯಾಣಕ್ಕೆ ಕರೆತರಲಾಯಿತು. ಬಸವಣ್ಣನ ಕಾಯಕಭೂಮಿಗೆ ಬಂದದ್ದೊಂದು ಅಪೂರ್ವ ಸಂದರ್ಭ ಎಂದು ಅನಂತಮೂರ್ತಿ ಖುಷಿಪಟ್ಟು ತಿಳಿಸಿದ್ದರು. ಅವರು ಎಂಥ ಪ್ರಸಂಗದಲ್ಲೂ ನಾನು ಮನವಿ ಮಾಡಿದ ಕಡೆಗಳೆಲ್ಲೆಲ್ಲ ಬಂದರು. ಜನರ ಹೃದಯಗಳನ್ನು ಗೆದ್ದರು. ಜನರ ಪ್ರೀತಿಗೆ ಸೋತು ಸಂತಸಪಟ್ಟರು.

ಡಾ. ಶಿವಗಂಗಾ ರುಮ್ಮಾ ನನ್ನ ಕುರಿತು ಪುಸ್ತಕವೊಂದನ್ನು ಬರೆಯುವ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು ಕೆಲವರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಳು. ಅನಂತಮೂರ್ತಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅಭಿಪ್ರಾಯ ಕೇಳಿ, ಮತ್ತೆ ಸಂಪರ್ಕಿಸುವೆ; ತಾವು ಹೇಳಿದ್ದನ್ನು ಬರೆದುಕೊಳ್ಳುವೆ ಎಂದು ತಿಳಿಸಿದಳು. ಆತನ ಬಗ್ಗೆ ಯೋಚಿಸುವುದೇನು ಬಂತು. ಬರಕೋಳಮ್ಮಾ ಎಂದ ಅನಂತಮೂರ್ತಿ ಅವರು ಹೀಗೆ ಹೇಳಿದರು: ರಂಜಾನ್ ದರ್ಗಾ ಕನ್ನಡದಲ್ಲಿ ಜೀವಂತವಾಗಿ ತನ್ನ ಸಂದರ್ಭಕ್ಕೆ ಪ್ರತಿಕ್ರಿಯಿಸುವ ಲೇಖಕ. ಈ ಪ್ರತಿಕ್ರಿಯೆ ತಾತ್ತ್ವಿಕ ಆಯಾಮವುಳ್ಳದ್ದೂ ಆಗಿರುತ್ತದೆ ಮತ್ತು ಅನುಭವದ ಪ್ರಾಮಾಣಿಕತೆಯನ್ನೂ ಪಡೆದಿರುತ್ತದೆ. ಸರ್ವಧರ್ಮ ಸಮನ್ವಯ ಎಂಬ ಪದಕ್ಕೆ ಅರ್ಥವಿದ್ದರೆ ಅದು ದರ್ಗಾರವರು ವಚನ ಸಾಹಿತ್ಯಕ್ಕೆ ಸ್ಪಂದಿಸುವ ರೀತಿಯಲ್ಲಿ ಕಾಣುತ್ತದೆ. ನಮ್ಮ ಕಾಲದಲ್ಲಿ ಮಾರ್ಕ್ಸ್‌ನನ್ನು, ಬಸವಣ್ಣನನ್ನು, ಪೈಗಂಬರರನ್ನು ಒಟ್ಟಿಗೆ ಕೂಡಿಸಿಕೊಂಡಿರುವ ಲೇಖಕ ನನ್ನ ಪ್ರೀತಿಯ ರಂಜಾನ್ ದರ್ಗಾ.