ಮಹಾನ್‌ ಬುದ್ಧರು ತೀರಿಹೋದ ಮೇಲೂ ಭಿಕ್ಷುಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸ್ತೂಪಗಳನ್ನು ವಿಸ್ತರಿಸುವುದಕ್ಕೆ, ಹೊಸದಾಗಿ ನಿರ್ಮಾಣ ಮಾಡುವುದಕ್ಕೆ, ಆಶ್ರಮ, ಉದ್ಯಾನವನಗಳನ್ನು ರೂಪಿಸುವುದಕ್ಕೆ, ವರ್ತಕರಲ್ಲಿ, ಸೇನಾಧಿಪತಿಗಳಲ್ಲಿ, ಚಕ್ರವರ್ತಿಗಳಲ್ಲಿ ಒಂದು ಸ್ಪರ್ಧೆಯೇ ಏರ್ಪಟ್ಟಂತಿತ್ತು. ಇದೆಲ್ಲವನ್ನೂ ನೋಡಿಕೊಳ್ಳುವುದಕ್ಕೆ ಆನಂದನೊಬ್ಬನಿಗೇ ಸಮಯವಿರುತ್ತಿರಲಿಲ್ಲ, ದಣಿವಾಗುತ್ತಿತ್ತು. ಜವಾಬ್ದಾರಿಯನ್ನು ಹಂಚಿಕೊಳ್ಳಲು ನಂಬುಗೆಯ ಜನರು ಸಮೀಪದಲ್ಲಿರಲಿಲ್ಲ. ನೀನೂ ಬಾ; ಗೋದಾವರಿ, ಉಜ್ಜಯನಿ, ವಿದರ್ಭ, ಕೋಸಲ ಪ್ರಾಂತ್ಯಗಳ ಸ್ತೂಪ ನಿರ್ಮಾಣ, ಉದ್ಯಾನವನ, ಆಶ್ರಮಗಳನ್ನು ನೋಡಿಕೊ, ನನಗೆ ನೆರವಾಗು ಎಂದು ಮತ್ತೆ ಮತ್ತೆ ಸಂದೇಶಗಳನ್ನು ಕಳಿಸುತ್ತಲೇ ಇದ್ದ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ ‘ಸಾರಿಪುತ್ರನ ಸಂಸಾರ ಸಾಮ್ರಾಜ್ಯ’

ಈವತ್ತಿಗೂ ನನಗೆ ಕಾರಣ ಏನೆಂದು ಗೊತ್ತಿಲ್ಲ. ಮೂವತ್ತು ವರ್ಷಗಳ ಹಿಂದೆ ನನ್ನನ್ನು ಹುನಗುಂದಕ್ಕೆ ಕಥಾ ಶಿಬಿರದಲ್ಲಿ ಭಾಗವಹಿಸಲು ಕರೆದುಕೊಂಡು ಹೋಗಿದ್ದರು. ಅನ್ಯಥಾ ಭಾವಿಸಿ ಕರೆದುಕೊಂಡು ಹೋಗಿದ್ದರೆಂದು ಕಾಣುತ್ತದೆ. ನಾನು ನಾನಲ್ಲ ಮತ್ತೆ ಯಾರೋ ಎಂದು ಭಾವಿಸಿ, ಬಯಸಿ ಕರೆದಿದ್ದರು. ನನ್ನ ಹೊರತಾಗಿ ಎಲ್ಲರೂ ದಿಗ್ಗಜರೇ, ಕುಲೀನರೇ—ಕುಮಾರವ್ಯಾಸ, ಬೆಟಗೇರಿ, ಶ್ರೀ ಬೇಂದ್ರೆ, ಭೂಸನೂರಮಠ, ದೂರ್ವಾಸಪುರದ ಶ್ರೀಮಠಗಳ ಈಚಿನ ತಲೆಮಾರಿನವರು—ನೂರಾರು ಕತೆಗಳನ್ನು ಬರೆದಿದ್ದವರು. ಸಾವಿರಾರು ಕತೆಗಳನ್ನು ಓದಿದ್ದವರು. ನನ್ನ ಮಾತು ಕತೆ ಅವರಿಗೆ ಬೇಕಿರಲಿಲ್ಲ. ಅವರು ಮಾತನಾಡಿದ್ದು, ಓದಿದ ಕತೆಗಳು ನನಗೆ ಅರ್ಥವಾಗುತ್ತಿರಲಿಲ್ಲ. ಆಯ್ತು, ನಾವು ಕರೆದು ತಪ್ಪು ಮಾಡಿದೆವು, ನೀವು ಬಂದು ತಪ್ಪು ಮಾಡಿದಿರಿ. ನಿಮಗೆ ಬೇಸರವಾದಾಗ ಶಿಬಿರದಿಂದ ಹೊರಹೋಗಿ ಗ್ರಾಮವನ್ನೆಲ್ಲ ಸುತ್ತಿ ಬರಬಹುದು ಎಂದು ವಿನಾಯಿತಿ ನೀಡಿದರು.

*****
ನಾನು ಗ್ರಾಮವನ್ನು ಸುತ್ತುತ್ತಿರುವಾಗ ಒಂದು ದೊಡ್ಡ ಬೀದಿ ಎದುರಾಯಿತು. ಬೀದಿಯ ತುಂಬಾ ಗಾಣಿಗರು. ಅದು ಗಾಣಿಗರ ಕೇರಿಯಂತೆ. ಬೀದಿಯ ಎರಡೂ ಬದಿಯಲ್ಲಿ ಗಾಣಗಳು—ಗೂಟ, ಕಂಭ, ಎತ್ತು, ಕಾಳು, ಕಡ್ಲೆಕಾಯಿ, ಹರಳು, ಒರಳು, ಒನಕೆ, ಗೂಡೆ, ಅಳತೆ ಪಾತ್ರೆಗಳು, ಡಬ್ಬ, ಹೀಗೆ. ಇದೆಲ್ಲದರ ಸುತ್ತ ಕುಳಿತ ಗಂಡಸರು, ಹೆಂಗಸರು, ಮಕ್ಕಳು ಹರಳು ಕುಟ್ಟುತ್ತಾ, ಸಿಪ್ಪೆ ಬಿಡಿಸುತ್ತಾ, ಎಣ್ಣೆ ಸೋಸುತ್ತಾ, ಪಾತ್ರೆಗಳಿಗೆ, ಡಬ್ಬಗಳಿಗೆ ಎಣ್ಣೆ ತುಂಬುತ್ತಾ, ಒಂದಿಬ್ಬರು ಎಮ್ಮೆಗಳಿಗೆ, ಎತ್ತುಗಳಿಗೆ ಮೇವು ಹಾಕುತ್ತಾ ಇದ್ದರು.
ಪದೇ ಪದೇ ಗಾಣಿಗರ ಬೀದಿಗೆ ಹೋಗುತ್ತಿದ್ದ ನನ್ನನ್ನು ಅನ್ಯಗ್ರಹದಿಂದ ಬಂದ ಜೀವಿಯೆಂಬಂತೆ ಕುತೂಹಲದಿಂದಲೂ, ಕುತ್ಸಿತ ಭಾವದಿಂದಲೂ ನೋಡುತ್ತಿದ್ದರು. ನನಗೂ ಹಿಂಸೆ, ಮುಜುಗರ. ಹಾಗೆಂದು ಹೋಗಿ ಶಿಬಿರದಲ್ಲಿ ಕುಳಿತರೆ ಇನ್ನೂ ಹಿಂಸೆ. ಗಾಣಿಗರ ಬೀದಿಯ ಸುತ್ತಲೇ ಓಡಾಡುತ್ತಿದ್ದೆ.
ಬೀದಿಯ ಕೊನೆಯಲ್ಲಿ ಒಂದು ಚಿಕ್ಕ ಕೋಟೆ. ಕೋಟೆ ಒಳಗೆ ಒಂದು ದೊಡ್ಡ ಹಜಾರ. ಅದರಲ್ಲಿ ಮಣ್ಣಿನ ಗುಡ್ಡೆ, ದೊಡ್ಡ ದೊಡ್ಡ ಮಡಕೆ, ಈಳಿಗೆ ಮಣೆ, ಮೊಸರು ಕಡೆಯುವ ಕಂತು, ಯಾವ ಕಾಲದಲ್ಲೋ ಒಲೆ ಉರಿಸಿ ನಂತರ ಅರಿಸಿ ಹೋಗಿದ್ದರ ಕುರುಹು. ಹಜಾರ ಬಹಳ ಶುಭ್ರವಾಗಿದ್ದರೂ ಹಜಾರದ ಸುತ್ತಮುತ್ತ ಬೆಳೆದಿರುವ ಗಿಡ, ಪೊದೆ. ಹಜಾರದ ತುದಿಯಲ್ಲಿದ್ದ ಕಟ್ಟೆಯ ಮೇಲೆ ತಾಳೆಗರಿಗಳ ಕಟ್ಟು.
ಇದೆಲ್ಲ ಏನು ಎಂದು ಅವರನ್ನೆಲ್ಲ ಕೇಳಿದೆ. ನನ್ನ ಪ್ರಶ್ನೆಯ ಬಗ್ಗೆ ಅವರಿಗೆ ಆಸಕ್ತಿಯಿರಲಿಲ್ಲ. ಅವರ ಗಮನವೆಲ್ಲ ಎಮ್ಮೆ, ಎತ್ತುಗಳನ್ನು ಗಾಣಕ್ಕೆ ಕಟ್ಟಿ ಚಾವಟಿ ಬಾರಿಸುತ್ತಾ ಸುತ್ತು ಹೊಡೆಸುವುದರ ಕಡೆಯೇ ಇತ್ತು. ಪದೇ ಪದೇ ಕೇಳಲಾಗಿ, ಕಾಲೇಜು ಮೇಷ್ಟ್ರು ಅರವಿಂದ ಪಾರ್ಶ್ವನಾಥರ ಹತ್ತಿರ ಕರೆದುಕೊಂಡು ಹೋದರು. ಅರವಿಂದರು ನನಗೇ ಕಾಯುತ್ತಿದ್ದಂತೆ, ಆಯಾಸವಾಗದಂತೆ, ನಿಧಾನವಾಗಿ ಕತೆ ಹೇಳಿದರು.
*****
ಇದೆಲ್ಲ ಒಂದು ಕಾಲಕ್ಕೆ ಮೂಲದಲ್ಲಿ ವಿಜಯಪುರದವರಾಗಿದ್ದ ನರಸಿಂಹ ಶರ್ಮ ಬುದ್ಧನ ಬಳಿ ಹೋಗಿ ಸಾರಿಪುತ್ರರಾದರಲ್ಲ ಅವರ ಸಂಸಾರದವರು ವಾಸವಾಗಿದ್ದ ಮನೆ. ಮಹಾನ್‌ ಬುದ್ಧರು ತೀರಿಹೋದ ಮೇಲೆ, ಸಾರಿಪುತ್ರರು ಸ್ವಗ್ರಾಮಕ್ಕೆ ವಾಪಸ್‌ ಬಂದರು. ಹಾಗೆ ವಾಪಸ್‌ ಹೋಗು ಎಂದು ಬುದ್ಧರೇ ಹೇಳಿದ್ದರಂತೆ. ನಾನು ಮಾಡಿದ ತಪ್ಪನ್ನು ನೀನೂ ಮಾಡಬೇಡ ಎಂದು ಶಿಷ್ಯನಿಗೆ ಹೇಳುವಾಗ ಕಿರುನಗೆ ನಕ್ಕಿದ್ದರಂತೆ. ಶರ್ಮರು ಹಿಂತಿರುಗಿ ಬಂದಾಗ ಹೆಂಡತಿಗೆ ವಯಸ್ಸಾಗಿತ್ತು. ಮಗಳಿಗೆ ಮದುವೆ ಆಗಿತ್ತು. ಮೊಮ್ಮಗಳು ಕೂಡ ಏಳೆಂಟು ವರ್ಷದ ಬಾಲಕಿಯಾಗಿದ್ದಳು. ಪರಸ್ಪರ ತಿಳಿದು ಬಳಕೆಗೆ ಬಂತು. ಗ್ರಾಮಸ್ಥರಿಗೂ ಸಂತೋಷವಾಯಿತು. ಗ್ರಾಮದ ಹೊರವಲಯದಲ್ಲಿರುವ ತೋಪಿನಲ್ಲೇ ಉಳಿದರು. ನೆರೆಗ್ರಾಮಗಳ ಭಿಕ್ಷುಗಳೂ ಕೂಡ ಇದೇ ತೋಪಿಗೆ ಬಂದರು. ಎರಡು-ಮೂರು ತಿಂಗಳ ನಂತರ ಸಾರಿಪುತ್ರರ ಪತ್ನಿ ಕೂಡ ಸಂಘವನ್ನು ಸೇರುವುದಾಗಿ ಕೋರಿ ಭಿಕ್ಷಿಣಿ ಆದರು. ಮನೆಯಲ್ಲಿ ಅಡುಗೆ ಮಾಡುವುದನ್ನು ನಿಲ್ಲಿಸಿಬಿಟ್ಟರು. ಮಗಳು, ಮೊಮ್ಮಗಳು, ಅಳಿಯ ಕೂಡ ಆಗಾಗ ಬಂದು ತೋಪಿನಲ್ಲೇ ವಾಸವಾಗಿರುತ್ತಿದ್ದರು. ಒಂದೆರಡು ವರ್ಷ ಹೀಗೇ ನಡೆದುಕೊಂಡುಹೋಯಿತು.
 
ಮಹಾನ್‌ ಬುದ್ಧರು ತೀರಿಹೋದ ಮೇಲೂ ಭಿಕ್ಷುಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸ್ತೂಪಗಳನ್ನು ವಿಸ್ತರಿಸುವುದಕ್ಕೆ, ಹೊಸದಾಗಿ ನಿರ್ಮಾಣ ಮಾಡುವುದಕ್ಕೆ, ಆಶ್ರಮ, ಉದ್ಯಾನವನಗಳನ್ನು ರೂಪಿಸುವುದಕ್ಕೆ, ವರ್ತಕರಲ್ಲಿ, ಸೇನಾಧಿಪತಿಗಳಲ್ಲಿ, ಚಕ್ರವರ್ತಿಗಳಲ್ಲಿ ಒಂದು ಸ್ಪರ್ಧೆಯೇ ಏರ್ಪಟ್ಟಂತಿತ್ತು. ಇದೆಲ್ಲವನ್ನೂ ನೋಡಿಕೊಳ್ಳುವುದಕ್ಕೆ ಆನಂದನೊಬ್ಬನಿಗೇ ಸಮಯವಿರುತ್ತಿರಲಿಲ್ಲ, ದಣಿವಾಗುತ್ತಿತ್ತು. ಜವಾಬ್ದಾರಿಯನ್ನು ಹಂಚಿಕೊಳ್ಳಲು ನಂಬುಗೆಯ ಜನರು ಸಮೀಪದಲ್ಲಿರಲಿಲ್ಲ. ನೀನೂ ಬಾ; ಗೋದಾವರಿ, ಉಜ್ಜಯನಿ, ವಿದರ್ಭ, ಕೋಸಲ ಪ್ರಾಂತ್ಯಗಳ ಸ್ತೂಪ ನಿರ್ಮಾಣ, ಉದ್ಯಾನವನ, ಆಶ್ರಮಗಳನ್ನು ನೋಡಿಕೊ, ನನಗೆ ನೆರವಾಗು ಎಂದು ಮತ್ತೆ ಮತ್ತೆ ಸಂದೇಶಗಳನ್ನು ಕಳಿಸುತ್ತಲೇ ಇದ್ದ. ಇಲ್ಲ, ಈಗ ನಾನು ಒಂದು ರೀತಿಯಲ್ಲಿ ಅರೆಸಂಸಾರಿಯಾಗಿದ್ದೀನಿ. ಮತ್ತೆ ಹಿಂದಿನ ಬದುಕಿಗೆ ಹಿಂತಿರುಗಲಾರೆ ಎಂದು ಎಷ್ಟೇ ಹೇಳಿದರೂ ಆನಂದ ಬಲವಂತ ಮಾಡುವುದು ನಿಲ್ಲುತ್ತಿರಲಿಲ್ಲ. ಸರಿ, ನೀನು ಸಂಸಾರ ಸಮೇತನಾಗಿಯೇ ಬಾ ಎಂದು ಆನಂದನೇ ಉಪಾಯ ಹೇಳಿಕೊಟ್ಟ. ಸಾರಿಪುತ್ರರು ಸಂಸಾರ ಸಮೇತರಾಗಿಯೇ ಹುನಗುಂದ ಮಾರ್ಗವಾಗಿ ಗೋದಾವರಿ ಸೀಮೆಯ ಕಡೆಗೆ ಪ್ರಯಾಣ ಬೆಳೆಸಿದರು.
ಅವರ ಸಂಸಾರ ಹುನಗುಂದ ತಲುಪಿ ನಾಲ್ಕು ದಿನ ವಿಶ್ರಾಂತಿ ಪಡೆದು ಪಯಣವನ್ನು ಮುಂದುವರೆಸುವ ಯೋಚನೆಯಿತ್ತು. ಇದ್ದಕ್ಕಿದ್ದಂತೆ ಇನ್ನಿಲ್ಲದ ಮಳೆ. ಸುತ್ತಮುತ್ತಲ ಗ್ರಾಮಗಳಲ್ಲೆಲ್ಲ ನೆರೆ, ಪ್ರವಾಹ. ದಿನವಾಯಿತು, ವಾರವಾಯಿತು, ಪಕ್ಷ ಕಳೆಯಿತು, ಮಳೆ ನಿಲ್ಲುತ್ತಲೇ ಇಲ್ಲ. ಮಳೆ ಇನ್ನೇನು ಈವತ್ತು ನಿಲ್ಲಬಹುದು ಎಂದುಕೊಂಡರೆ, ಮತ್ತೆ ಧೋ ಎಂದು ಸುರಿಯುವುದು, ಸುರಿಯುತ್ತಲೇ ಇರುವುದು. ಮೊದಲೆರಡು ದಿನ ಮಂಕಾಗಿದ್ದ ಸಾರಿಪುತ್ರರು, ನಂತರ ಉಳಿದುಕೊಂಡಿದ್ದ ಮನೆಯಲ್ಲಿದ್ದ ಮಡಿಕೆ, ಕುಡಿಕೆ, ಬಿಂದಿಗೆ, ಚಂಬುಗಳಲ್ಲೆಲ್ಲ ನೀರು ಸಂಗ್ರಹಿಸುವುದು, ಚೆಲ್ಲುವುದು, ಮತ್ತು ಸಂಗ್ರಹಿಸುವುದು ಚೆಲ್ಲುವುದು ಹೀಗೇ ದಿನದುದ್ದಕ್ಕೂ, ರಾತ್ರಿಯುದ್ದಕ್ಕೂ ಮಾಡುತ್ತಾ ಹೋದರು. ಅವರ ಅನುಕೂಲ-ಅನಾನುಕೂಲಗಳನ್ನು ನೋಡಿಕೊಳ್ಳಲು ಬರುತ್ತಿದ್ದ ಗ್ರಾಮದ ಹಿರಿಯರ ಹತ್ತಿರವೆಲ್ಲ ಮಳೆಯ ಬಗ್ಗೆಯೇ ಮಾತುಕತೆ-ಮಾತುಕತೆ. ಗ್ರಾಮದ ಸೋಮಯಾಜಿಗಳಿಂದ ಹಳೆಯ ಪಂಚಾಂಗಗಳನ್ನು ಪಡೆದು ಮಳೆಯ ನಿಧಾನ, ವಿಧಾನ, ಲಗ್ನ, ಪಾದಗಳನ್ನೆಲ್ಲ ಕುರಿತು ಚರ್ಚಿಸುತ್ತಾ ಹೋದರು. ಗ್ರಾಮದವರು ಈ ಕುಟುಂಬಕ್ಕೂ, ಇವರ ಒಡನಾಡಿಗಳಿಗೂ ಚೆನ್ನಾಗಿ ಒಗ್ಗಿಕೊಂಡರು. ಸಂಸಾರವಂದಿಗರಾಗಿ ಬದುಕುತ್ತಾ ಎಲ್ಲರಿಗೂ ಹಿತವಾಗುವಂತೆ ಧಾರ್ಮಿಕ, ಆಧ್ಯಾತ್ಮಿಕ ಸಂಗತಿಗಳನ್ನು ಸರಳವಾದ ಮಾತುಗಳಲ್ಲಿ ಹೇಳುತ್ತಿದ್ದ ಸಾರಿಪುತ್ರರ ಆತ್ಮೀಯತೆ, ನೆರೆಹೊರೆಯವರ ಧಾಟಿ ತುಂಬಾ ಹಿಡಿಸಿತು. ಇಲ್ಲೇ ಇರಿ. ನಮಗೂ ಇನ್ನೊಂದಿಷ್ಟು ಬುದ್ಧನ ಸಂದೇಶ ಹೇಳಿಕೊಡಿ. ನಾವು ಕೂಡ ಬೌದ್ಧರಾಗುತ್ತೇವೆ, ಮಾಂಡಲಿಕರಿಗೆ ಹೇಳಿ ಉಂಬಳಿ ಕೊಡಿಸುತ್ತೇವೆ ಎಂದು ಪರಿಪರಿಯಾಗಿ ಬೇಡಿದರು.
ಸಾರಿಪುತ್ರರು ಹೇಗೆ ಒಪ್ಪುತ್ತಾರೆ? ಸಂದರ್ಭವನ್ನು, ಆನಂದನ ಒತ್ತಾಯವನ್ನು ವಿವರಿಸಿ ಹೇಳಿದರು. ಗ್ರಾಮಸ್ಥರು ಒಲ್ಲದ ಮನಸ್ಸಿನಿಂದ ಒಪ್ಪಿದರು. ಹಿಂದೆ ಬುದ್ಧನನ್ನು ಕಾಣಲು ಹಂಬಲಿಸಿ, ಹಂಬಲಿಸಿ ಸಂಸಾರ ಬಿಟ್ಟು ಹೊರಟಿದ್ದರು. ಈಗ ಸ್ತೂಪಗಳ ನಿರ್ಮಾಣದ ಮೇಲ್ವಿಚಾರಣೆಗಾಗಿ, ಆನಂದನ ಒತ್ತಾಯಕ್ಕೆ ಗೌರವ ಕೊಟ್ಟು, ಸಂಸಾರ ಸಮೇತರಾಗಿ ಗೋದಾವರಿ ಸೀಮೆಗೆ ಅಭಿಮುಖವಾಗಿ ಪ್ರಯಾಣ ಬೆಳೆಸಿದರು.
ಗ್ರಾಮಸ್ಥರಿಗೆ ಸಾರಿಪುತ್ರರ ವಾಸ, ಒಡನಾಟ, ಯಾವುದನ್ನೂ ಮರೆಯಲು ಸಾಧ್ಯವಾಗಲಿಲ್ಲ. ಮತ್ತೆ ಮತ್ತೆ ಹೇಳಿಕಳಿಸಿದರು. ಸಾರಿಪುತ್ರರು ಈ ಕಡೆ ಬರಲೇ ಇಲ್ಲ. ಗ್ರಾಮಸ್ಥರ ಪ್ರೀತಿ ದೊಡ್ಡದು. ಸಾರಿಪುತ್ರರು ವಾಸವಾಗಿದ್ದ ಮನೆಯನ್ನು, ಆವರಣವನ್ನು ಹಾಗೆ ಉಳಿಸಿಕೊಂಡು, ಅದರ ಸುತ್ತ ರಕ್ಷಣೆ ಕಟ್ಟಿ, ಸ್ಮಾರಕವಾಗಿ ಉಳಿಸಿಕೊಂಡರು.
ಅರವಿಂದ ಪಾರ್ಶ್ವನಾಥರು ಹೇಳಿದ ಕತೆ ಕೇಳಿ ನನ್ನ ಮನಸ್ಸು ಮೂಕವಾಯಿತು. ಅರವಿಂದರನ್ನೇ ನೋಡುತ್ತಾ ಕುಳಿತಿದ್ದೆ. ಮತ್ತೆ ಅವರೇ ಮುಂದುವರೆಸಿದರು—ಈ ದಿನಮಾನದಲ್ಲಿ ಇದನ್ನೆಲ್ಲ ವಿಚಾರಿಸಲು ಯಾರೂ ಬರುವುದಿಲ್ಲ. ಹಿಂದಿನ ತಲೆಮಾರಿನವರು ಇನ್ನೂ ಒಬ್ಬರೋ ಇಬ್ಬರೋ ಇದ್ದಾರೆ. ಅವರ ಕಾಲದಲ್ಲಿ ಸಾರಿಪುತ್ರರೇ ಆಗಾಗ್ಗೆ ಬಂದು ಈ ಮನೆ ನೋಡಿಕೊಂಡು ಯಾರಿಗೂ ಗೊತ್ತಾಗದ ಹಾಗೆ ವಾಪಸ್‌ ಹೊರಟುಹೋಗುತ್ತಿದ್ದರಂತೆ.