ಜನಾರ್ಧನ ರಾಯರ ಮೇಲಿನ ಈ ಹಳೆ ದ್ವೇಷವು ನನ್ನನ್ನು ಶ್ರೀಧರ ಮಾವನ ಜೊತೆ ನಿಲ್ಲುವಂತೆ ಮಾಡಿತ್ತು. ಯಾವಾಗ ಶ್ರೀಧರ ಮಾವನು ಕ್ಲಿನಿಕ್ಕಿಗೆ ಹೋಗುವನೋ ಡಾಕ್ಟರನ್ನು ಹಿಡಿದು ಹೊಡೆಯುವನೋ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದೆ. ಇಂಜೆಕ್ಷನ್ನಿನ ವೈಷಮ್ಯ ಒಂದನ್ನು ಬಿಟ್ಟರೆ ನಮಗೆ ಜನಾರ್ಧನ ರಾಯರ ಮೇಲೆ ಮತ್ತಿನ್ಯಾವ ಕೋಪವೂ ಇರಲಿಲ್ಲ. ಬಾಕಿಯಂತೆ ಅವರನ್ನು ಜನಾರ್ಧನ ಮಾವನೆಂದು ಪ್ರೀತಿಯಿಂದಲೇ ಮಾತನಾಡಿಸುತ್ತಿದ್ದೆವು. ಸಂಬೋಧನೆಯ ವಿಷಯಕ್ಕೆ ಬಂದರೆ ನಮ್ಮ ಬಾಲ್ಯದಲ್ಲಿ ಆಂಟಿ ಹಾಗೂ ಅಂಕಲ್ ಎಂಬ ಪದಗಳು ಅಷ್ಟು ಪ್ರಚಲಿತವಿರಲಿಲ್ಲ.
ಮಧುರಾಣಿ ಬರೆಯುವ ಮಠದ ಕೇರಿ ಕಥಾನಕ
ಸುಮಾರು ನಲವತ್ತರ ಆಸುಪಾಸಿನ ಶ್ರೀಧರ ಮಾವನು ಗುಂಗುರು ಕೂದಲಿನ ಚೂಪು ಮೂಗಿನ ಹೆಚ್ಚು ಕಡಿಮೆ ಮಧು ಬಂಗಾರಪ್ಪನವರಂತೆಯೇ ಕಾಣುತ್ತಿದ್ದ ಸುಂದರಾಂಗ. ಚೇಷ್ಟೆಗಳಿಗೇನೂ ಕಡಿಮೆಯಿಲ್ಲದ ಕ್ಯಾತೆ ಆಸಾಮಿ ಅಂತ ಇಡೀ ನೆಂಟರೊಳಗೆ ಪ್ರತೀತಿ. ವಯಸ್ಸು ಮೀರಿದರೂ ಮದುವೆಯಿಲ್ಲದೇ ಗುಂಡರಗೋವಿಯಂತೆ ಊರು ತಿರುಗುವ ಇವನು ತನ್ನನ್ನು ತಾನೇ ದೊಡ್ಡ ರಾಜಕೀಯ ಧುರೀಣನೆಂದು ಪರಿಗಣಿಸಿಕೊಂಡಿದ್ದನು. ಹತ್ತತ್ತಿರ ನಲವತ್ತು ಜನರು ಅಲ್ಲಲ್ಲೇ ಬೀಡು ಬಿಟ್ಟಿದ್ದ ಒಟ್ಟು ಕುಟುಂಬದ ಅಷ್ಟೂ ಸದಸ್ಯರೂ ಸೇರಿ ಇವನಿಗೆ ಒಪ್ಪುವ ಸುಂದರಾಂಗಿಯನ್ನು ಹುಡುಕೀ ಹುಡುಕೀ ಸೋತು ಹೋಗಿದ್ದರು.
ತಂದೆ ಮನೆಯ ವರಸೆಯಿಂದ ಸ್ಮಾರ್ತ ಪಂಗಡಕ್ಕೂ ತಾಯಿ ಮನೆಯಿಂದ ಮಾಧ್ವರೂ ಸೇರುವ ಶ್ರೀಧರನ ಮನೆ ಒಂಥರಾ ತ್ರಿಮತದ ತ್ರಿವೇಣೀ ಸಂಗಮವಾಗಿತ್ತು. ಅದೇ ಸಾಲು ಮನೆಗಳ ಗೊಂಚಲು ಮುಗಿಯುವಲ್ಲಿ ಬೀದಿ ತುದಿಗೆ ಜನಾರ್ಧನ ಡಾಕ್ಟರ ಹಳೇ ಕ್ಲಿನಿಕ್ಕು ಸ್ಥಾಪಿತವಾಗಿತ್ತು. ಇಡೀ ಕೇರಿ ಕೆಮ್ಮಿದರೂ ಸೀನಿದರೂ ಹೂಸಿದರೂ ಅದು ಮೊದಲು ತಲುಪುತ್ತಿದ್ದುದು ಅಲ್ಲಿಗೇ… ಹಾಗಾಗಿ ಕೇರಿಯ ಸಮಸ್ತರ ಸಮಸ್ತ ಲೋಪದೋಷಗಳೂ, ಸಂದಿ-ಸಮಾರಾಧನೆಗಳೂ, ಹುಳುಕುಗಳೂ ಜನಾರ್ದನ ರಾಯರಿಗೆ ಗೊತ್ತೇ ಇತ್ತಾಗಿ, ಎಲ್ಲರೂ ಅವರನ್ನು ಬಹು ಆದರಾಭಿಮಾನದಿಂದ ನೋಡಿಕೊಳ್ಳುತ್ತಿದ್ದರು.
ಇಂತಿಪ್ಪ ಜನಾರ್ಧನ ರಾಯರು ವಿಪರೀತ ಅಹಂಕಾರಿಯೆಂದೂ, ಜನರ ಚರ್ಮದ ಸಿಪ್ಪೆ ಸುಲಿದು ಬದುಕುತ್ತಿರುವನೆಂದೂ, ಶ್ರೀಮಂತಿಕೆ ಅವನ ಕಣ್ಣನ್ನು ಕುರುಡು ಮಾಡಿದೆಯೆಂದೂ, ಈ ಹಗಲು ದರೋಡೆಕೋರನಿಗೆ ತಕ್ಕ ಪಾಠ ಕಲಿಸಿ ಅವನ ದೌರ್ಜನ್ಯವನ್ನು ಹತ್ತಿಕ್ಕಬೇಕೆಂದೂ ಅದ್ಯಾಕೆ ಶ್ರೀಧರನಿಗೆ ಅನ್ನಿಸಿತೋ… ಹೀಗೆ ಹೇಳಿಕೊಂಡು ಅವನು ಕೇರಿಯೆಲ್ಲಾ ತಿರುಗತೊಡಗಿದ. ಆ ಕಾಲಕ್ಕೇ ಶಿವಮೊಗ್ಗದಲ್ಲಿ ಕಾಲೇಜು ಓದಿ ಯೂನಿವರ್ಸಿಟಿಯಲ್ಲಿ ತಿರುಗಾಡಿ ಕ್ಲಾಸಿಗೆ ಹೋಗದೇ ಬರೇ ರಾಜಕೀಯ ಮಾಡಿಯೇ ಎಮ್.ಎ. ಮುಗಿಸಿದ್ದ ಶ್ರೀಧರನಿಗೆ ಅವನ ವಿದ್ಯೆ ಮಾತ್ರವೇ ಮೌಲ್ಯ, ಇಲ್ಲವಾದರೆ ಅವನು ಕೇವಲ ಶುದ್ಧ ಪಡಪೋಶಿ ಪೋಕರಿಯಾಗಿ ಉಳಿದು ಹೋಗುವ ಎಲ್ಲ ಸಾಧ್ಯತೆಗಳಿತ್ತು.
ಕಾಲೇಜು ಕಂಡಿದ್ದ ಇವನು, ಮೇಲ್ವರ್ಗದ ದೌರ್ಜನ್ಯ, ಬಡವರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಪ್ರಗತಿಪರ ಭಾಷಣಗಳನ್ನು ಹೇರಳವಾಗಿ ಬಿಗಿಯುತ್ತಿದ್ದರೂ ಇದಾವುದರ ಪರಿವೆಯಿಲ್ಲದ ಕೇರಿಯು ಇವನೊಬ್ಬ ಓದಿ ತಲೆಕೆಟ್ಟು ತಿರುಗುತ್ತಿರುವ ಹುಚ್ಚನೆಂದೇ ಪರಿಗಣಿಸಿತ್ತು. ಏನೋ ಅವರ ತಾಯಿ ತಂದೆಯರ ಮುಖ ನೋಡಿ ಕೇರಿಯಲ್ಲಿ ಇವನಿಗೊಂದು ಸ್ಥಾನಮಾನ.
ಇಂತಹ ಶ್ರೀಧರನಿಗೆ ಒಂದು ಬೆಳಗು ಇದ್ದಕ್ಕಿದ್ದಂತೆ ಡಾಕ್ಟರು ಜನಾರ್ಧನ ರಾಯರು ದೊಡ್ಡ ಶ್ರೀಮಂತ ಹಿಂಸಕನಂತೆಯೂ ನರರಾಕ್ಷಸನಂತೆಯೂ ಕಂಡರು. ಈ ಸಮಾಜದಲ್ಲಿ ಬೇರೂರಿರುವ ಬಡವ-ಶ್ರೀಮಂತ, ಅಕ್ಷರಸ್ಥ-ಅನಕ್ಷರಸ್ಥ, ಆಳುವವನು-ಆಳಾಗಿ ದುಡಿಯುವವನು, ಇಂತಹ ಅಸಮಾನತೆಯನ್ನು ಕಿತ್ತೊಗೆಯುವ ಸಲುವಾಗಿ ಅವನು ಜನಾರ್ದನ ರಾಯರನ್ನು ಹತ್ತಾರು ಜನರೆದುರು ಅವಮಾನಿಸುವ ತಂತ್ರವನ್ನು ಹೂಡಿಕೊಂಡನು. ಅದೇನೆಂದರೆ ಒಂದು ಶುಭದಿನದಂದು ಅವರನ್ನು ಕ್ಲಿನಿಕ್ಕಿನಿಂದ ಹೊರಗೆಳೆದು ಹಿಗ್ಗಾಮುಗ್ಗಾ ಬೈದು, ಅವರು ಬಡ ಜನರಿಗೆ ಬಗೆದಿರುವ ದ್ರೋಹವನ್ನು ಎಲ್ಲರಿಗೂ ತಿಳಿಯುವಂತೆ ವಿವರಿಸಿ, ಅವರ ಕ್ಲಿನಿಕ್ಕಿಗೆ ಸಾಮೂಹಿಕ ಬಹುಷ್ಕಾರ ಹಾಕಿ, ಆ ಬಹಿಷ್ಕಾರದ ದ್ಯೋತಕವಾಗಿ ಅವರ ತಲೆಗೊಂದು ಹಳೇ ಎಕ್ಕಡವನ್ನು ಕಟ್ಟಿ ಓಡಿಸುವುದು. ಅವರ ಕ್ಲಿನಿಕ್ಕಿನ ಜಾಗದಲ್ಲಿ ಒಬ್ಬ ದಮನಿತನನ್ನು, ಬಡಜನರ ಹಿತ ಕಾಯುವವನನ್ನು ಕರೆದು ತಂದು ಕೂರಿಸುವುದು. ಇಂತಹ ದೊಡ್ಡ ಉಪಾಯವನ್ನು ದಿನವೂ ಸಿಕ್ಕವರಿಗೆಲ್ಲಾ ವಿವರಿಸುತ್ತಾ ಊರೊಳಗೆ ತಿರುಗಾಡತೊಡಗಿದನು. ಕೇರಿಯ ಒಂದಷ್ಟು ಪಡ್ಡೆಗಳನ್ನು ಸೇರಿಸಿಕೊಂಡು ಆಗಾಗ್ಗೆ ಮನೆಯ ಛಾವಣಿಯ ಮೇಲೆ ಸಭೆ ಸೇರಿಸಿ ಇಂತಹ ವಿಚಾರಗಳನ್ನೆಲ್ಲ ಅವರ ತಲೆಗೆ ತುಂಬಲು ನಿರಂತರ ಪ್ರಯತ್ನ ಮಾಡತೊಡಗಿದನು.
ಇವರನ್ನು ಹೀಗೇ ಬಿಟ್ಟರೆ ಇಡೀ ಕೇರಿಯನ್ನಲ್ಲದೇ ಸುತ್ತಮುತ್ತಲ ಕೇರಿಗಳನ್ನೂ ಹಾಳುಗೆಡವುವರೆಂದು ಕೇರಿಯ ಹಿರಿಯರೆಲ್ಲ ಶ್ರೀಧರನ ಮೇಲೆ ಒಂದು ಕಣ್ಣಿಡತೊಡಗಿದರು. ಅದೂ ಅಲ್ಲದೆ ಜನಾರ್ಧನ ರಾಯರಿಗೆ ಇಂತಹ ಅವಮಾನ ಜರುಗಿದರೆ ತಮ್ಮೊಳಗೇ ಒಗ್ಗಟ್ಟಿಲ್ಲ ಎಂಬ ಸತ್ಯ ಹೊರಗಿನವರಿಗೆ ತಿಳಿದುಬಿಡುತ್ತದೆ ಎಂಬ ಭಯ ಅವರನ್ನು ಕಾಡುತ್ತಿತ್ತು. ಇಷ್ಟಲ್ಲದೆ ಇನ್ನೊಂದು ಭಯಾನಕ ವಿಚಾರ ಹೊರಬಿದ್ದಾಗಿನಿಂದ ಎಲ್ಲರ ನಿದ್ದೆ ಕೆಟ್ಟಿತ್ತು.
ಶ್ರೀಧರನು ದಿನ, ಮುಹೂರ್ತಗಳಿಗೆ ಕಾಯದೆ ಆ ದಿನ ಎಂದಾದರೂ ಬಂದುಬಿಡಬಹುದೆಂಬ ನಿರೀಕ್ಷೆಯಲ್ಲಿ ಹಳೆಯ ಮೆಟ್ಟೊಂದನ್ನು ಬಟ್ಟೆಯಲ್ಲಿ ಸುತ್ತಿಕೊಂಡು ತನ್ನ ಕೈಚೀಲದೊಳಗೆ ಇಟ್ಟುಕೊಂಡೇ ತಿರುಗುತ್ತಿರುವುದು ಕೆಲವು ಗೂಢಚಾರ ಮಕ್ಕಳಿಂದ ಕೇರಿಯ ಹಿರಿಯರಿಗೆ ತಿಳಿದುಬಂತು. ಈ ಪಾಖಂಡಿಯು ಏನು ಮಾಡಲೂ ಹೇಸುವುದಿಲ್ಲವೆಂದು ಅವನ ಕಾಲೇಜು ಸ್ನೇಹಿತರಿಂದ ತಿಳಿದು ಗೊತ್ತಿದ್ದ ಕೆಲವರು ಈ ದುರಂತವನ್ನು ಹೇಗಾದರೂ ತಪ್ಪಿಸಬೇಕೆಂದು ಓಡಾಡತೊಡಗಿದರು.
ಸಾಬರ ಆಸಿಫ್ ಮತ್ತವನ ನಟೋರಿಯಸ್ ಗುಂಪಿನ ಪೂರ್ಣ ಸಹಕಾರ ಶ್ರೀಧರನಿಗೆ ಇದ್ದುದರಿಂದ ಎಷ್ಟೇ ಧೈರ್ಯಶಾಲಿಯೂ ಶ್ರೀಧರನನ್ನು ಸಾದಾಸೀದಾ ಮುಟ್ಟುತ್ತಿರಲಿಲ್ಲ. ಹಾಗೂ ಕಾರಣವಲ್ಲದ ಕಾರಣಕ್ಕೆ ನಡುಬೀದಿಯಲ್ಲಿ ಮಾನಹರಣ ಮಾಡಿಸಿಕೊಳ್ಳಲು ಬೇರೆ ಯಾವ ಗಂಡಸೂ ತಯಾರಿರಲಿಲ್ಲ.
ಅಷ್ಟರಲ್ಲಿ ಹೇಗೋ ಈ ವಿಚಾರ ಕಿವಿಯಿಂದ ಕಿವಿಗೆ ಹೋಗಿ ಜನಾರ್ಧನ ರಾಯರನ್ನು ತಲುಪಿ ಅವರು ಕೆಂಡಾಮಂಡಲರಾಗಿ, “ಆ ಅಯೋಗ್ಯ ನನ್ನ ಕ್ಲಿನಿಕ್ಕಿಗೆ ಕಾಲಿಡಲಿ. ಅವನ ಕಾಲು ಮುರಿದು ಕೈಗೆ ಕೊಡದಿದ್ದರೆ ನಾನು ಜನಾರ್ಧನನೇ ಅಲ್ಲ.” ಎಂದು ಪಟ್ಟು ಹಿಡಿದು ಕೂತರು. ಮಕ್ಕಳಾದ ನಮಗೆಲ್ಲಾ ಶ್ರೀಧರನು ಜನಾರ್ಧನರ ತಲೆಗೆ ಮೆಟ್ಟು ಕಟ್ಟುವುದೇ ಸೂಕ್ತವೆಂಬಂತೆ ತೋರುತ್ತಿತ್ತು. ಯಾಕೆಂದರೆ ಆಗತಾನೆ ತಾಯತ ಯಂತ್ರ-ಮಂತ್ರಗಳ ದುನಿಯಾದಿಂದ ಮಾತ್ರೆ ಟಾನಿಕ್ಕು ಸೂಜಿಯ ಪ್ರಪಂಚಕ್ಕೆ ನಮ್ಮ ಕಾಯಿಲೆಯ ಇಲಾಜು ನಡೆದುಬಂದಿತ್ತು. ಈ ಹೊಸ ಪ್ರಪಂಚಕ್ಕೆ ಜನಾರ್ಧನ ಡಾಕ್ಟರೇ ದೊಡ್ಡ ವಿಲನ್ ಆಗಿದ್ದರು. ಕಳೆದ ವಾರವಷ್ಟೇ ಜ್ವರದಿಂದ ಎದ್ದುಕೊಂಡಿದ್ದ ನನಗೆ ಟೈಫಾಯಿಡ್ ಎಂದು ನಂಬಿಸಿ ವಾರಕ್ಕೊಮ್ಮೆ ಅವರು ಕೊಡುತ್ತಿದ್ದ ದಪ್ಪನೆಯ ನುಗ್ಗೆಕಾಯಿ ಗಾತ್ರದ ಇಂಜೆಕ್ಷನ್ನಿನ ನೋವನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ತಡೆದುಕೊಳ್ಳುವುದಿರಲಿ, ಆ ಗಾತ್ರದ ಸೂಜಿಯನ್ನು ನೋಡಿದರೆ ಸಾಕು, ಹೋದ ಜ್ವರ ಮತ್ತೆ ಬರುತ್ತಿತ್ತು.
ಇಡೀ ಕೇರಿ ಕೆಮ್ಮಿದರೂ ಸೀನಿದರೂ ಹೂಸಿದರೂ ಅದು ಮೊದಲು ತಲುಪುತ್ತಿದ್ದುದು ಅಲ್ಲಿಗೇ… ಹಾಗಾಗಿ ಕೇರಿಯ ಸಮಸ್ತರ ಸಮಸ್ತ ಲೋಪದೋಷಗಳೂ, ಸಂದಿ-ಸಮಾರಾಧನೆಗಳೂ, ಹುಳುಕುಗಳೂ ಜನಾರ್ದನ ರಾಯರಿಗೆ ಗೊತ್ತೇ ಇತ್ತಾಗಿ, ಎಲ್ಲರೂ ಅವರನ್ನು ಬಹು ಆದರಾಭಿಮಾನದಿಂದ ನೋಡಿಕೊಳ್ಳುತ್ತಿದ್ದರು.
ಜನಾರ್ಧನ ರಾಯರ ಮೇಲಿನ ಈ ಹಳೆ ದ್ವೇಷವು ನನ್ನನ್ನು ಶ್ರೀಧರ ಮಾವನ ಜೊತೆ ನಿಲ್ಲುವಂತೆ ಮಾಡಿತ್ತು. ಯಾವಾಗ ಶ್ರೀಧರ ಮಾವನು ಕ್ಲಿನಿಕ್ಕಿಗೆ ಹೋಗುವನೋ ಡಾಕ್ಟರನ್ನು ಹಿಡಿದು ಹೊಡೆಯುವನೋ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದೆ. ಇಂಜೆಕ್ಷನ್ನಿನ ವೈಷಮ್ಯ ಒಂದನ್ನು ಬಿಟ್ಟರೆ ನಮಗೆ ಜನಾರ್ಧನ ರಾಯರ ಮೇಲೆ ಮತ್ತಿನ್ಯಾವ ಕೋಪವೂ ಇರಲಿಲ್ಲ. ಬಾಕಿಯಂತೆ ಅವರನ್ನು ಜನಾರ್ಧನ ಮಾವನೆಂದು ಪ್ರೀತಿಯಿಂದಲೇ ಮಾತನಾಡಿಸುತ್ತಿದ್ದೆವು. ಸಂಬೋಧನೆಯ ವಿಷಯಕ್ಕೆ ಬಂದರೆ ನಮ್ಮ ಬಾಲ್ಯದಲ್ಲಿ ಆಂಟಿ ಹಾಗೂ ಅಂಕಲ್ ಎಂಬ ಪದಗಳು ಅಷ್ಟು ಪ್ರಚಲಿತವಿರಲಿಲ್ಲ. ಹಿರಿಯರನ್ನೆಲ್ಲಾ ಅತ್ತೆ-ಮಾವ, ಚಿಕ್ಕಪ್ಪ-ಚಿಕ್ಕಮ್ಮ ದೊಡ್ಡಪ್ಪ-ದೊಡ್ಡಮ್ಮನೆಂದು ಕೂಗುತ್ತಿದ್ದೆವು. ಅದರಲ್ಲೂ ಅವರಿಗೆ ನಮ್ಮ ಸಮವಯಸ್ಕ ಗಂಡುಮಕ್ಕಳು ಇದ್ದರೆ ಅಂಥವರನ್ನು ಅತ್ತೆ-ಮಾವ ಎಂದು ಕೂಗುವುದರಿಂದ ರಿಯಾಯಿತಿ ಕೊಡುತ್ತಿದ್ದೆವು. ಅವರು ಚಿಕ್ಕಪ್ಪ-ಚಿಕ್ಕಮ್ಮನೋ ದೊಡ್ಡಪ್ಪ-ದೊಡ್ಡಮ್ಮನೋ ಆಗುತ್ತಿದ್ದರು. ಹೀಗೆ ಸಂಬೋಧನೆಯು ನಮ್ಮ ಜಾಣ್ಮೆಯ ಪ್ರತೀಕವಾಗಿರುತ್ತಿತ್ತು. ಗಂಡು ಮಕ್ಕಳಿಗೆ ಈ ಜಾಣ್ಮೆಯಿಂದಲೂ ರಿಯಾಯಿತಿ! ಅವರು ಯಾರನ್ನು ಹೇಗೆ ಬೇಕಾದರೂ ಕೂಗಬಹುದಾಗಿತ್ತು.
ಆ ಲೆಕ್ಕದಲ್ಲಿ ಜನಾರ್ಧನ ರಾಯರ ಮಕ್ಕಳು ಓದಿ ಅದಾಗಲೇ ಕೆಲಸದ ಮೇಲೆ ಹೊರದೇಶಗಳನ್ನು ಸೇರಿದ್ದರಿಂದ ನಾವು ಧೈರ್ಯವಾಗಿ ಅವರನ್ನು ಜನಾರ್ಧನ ಮಾವ ಎಂದು ಕೂಗುತ್ತಿದ್ದೆವು. ಹಾಗೆ ಮಾವ ಎಂದು ಪ್ರೀತಿಯಿಂದ ಕೂಗಿದರೂ ಸಹ ನಮ್ಮನ್ನು ಭಯಾನಕ ಇಂಜೆಕ್ಷನ್‌ಗಳಿಗೆ ಗುರಿ ಮಾಡುತ್ತಿದ್ದ ಅವರ ಮೇಲೆ ಕೋಪವೂ ಸಹಜವೇ ಅಲ್ಲವೇ….!?
ಜನಾರ್ಧನ ರಾಯರನ್ನು ಅವರ ಔಷಧಿಗಳನ್ನು ನಾವು ಇಷ್ಟೊಂದು ದ್ವೇಷಿಸಲು ನಮಗೆ ಇನ್ನೊಂದು ಬಲವಾದ ಕಾರಣವಿತ್ತು. ಆರೋಗ್ಯ ಸರಿಯಿಲ್ಲದಿದ್ದರೆ ಬಾಲ್ಯದಲ್ಲಿ ನಮಗೆ ದೊರೆಯುತ್ತಿದ್ದ ಪ್ರಥಮ ಚಿಕಿತ್ಸೆ ಎಂದರೆ ‘ಬಡಾ ಮಖಾನಿ’ ಅಥವಾ ‘ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ’ಗಳ ತೀರ್ಥ ಮತ್ತು ತಾಯತ. ಬಡಾ ಮಕಾನಿಯಲ್ಲಿ ತಾಯತ ಕಟ್ಟುವ ಮೊದಲು ನವಿಲುಗರಿಯ ಪೊರಕೆಯಲ್ಲಿ ತಲೆಯ ಮೇಲೆ ಫಟೀರನೆ ಬಡಿದು ಮುಖಕ್ಕೆ ಹೊಗೆ ಹಾಕುತ್ತಿದ್ದರಾದರೂ ಅದು ನೋಯುತ್ತಿರಲಿಲ್ಲ, ಒಂಥರಾ ಮಜವಾಗಿರುತ್ತಿತ್ತು. ತರಹೇವಾರಿ ಹೂಗಳ ಹಾಗೂ ಅಗರಬತ್ತಿಗಳ ಘಮ, ಚಿತ್ರ-ವಿಚಿತ್ರ ವೇಷಧಾರಿ ಬಾಬಾಗಳು, ಕಂಡು ಕೇಳರಿಯದ ಏನೇನೋ ವಸ್ತುಗಳನ್ನು ಮಾರುತ್ತಿದ್ದ ಸಾಲು ಗೂಡಂಗಡಿಗಳು, ತಮ್ಮ ಮಕ್ಕಳನ್ನೂ ಕುರಿಮರಿಗಳಂತೆ ಹಿಡಿದು ತಂದು ಬಾಬಾರ ಮುಂದೆ ನಿಲ್ಲಿಸುತ್ತಿದ್ದ ಬುರ್ಖಾಧಾರಿ ಹೆಣ್ಣುಮಕ್ಕಳು…
ಹೀಗೆ ಅದೊಂದು ವಿನೂತನ ಪ್ರಪಂಚ. ತಾಯತ ಕಟ್ಟಿಸಿಕೊಂಡು ಬಾಬಾ ಕೊಡುತ್ತಿದ್ದ ವಿಭೂತಿಯನ್ನು ತಂದು ಹೊತ್ತಿಗೊಂದರಂತೆ ಮೂರು ಹೊತ್ತು ನೀರಿನಲ್ಲಿ ಕದರಿ ಕುಡಿದರೆ ಮುಗಿಯಿತು. ಜ್ವರ ಮಂಗಮಾಯ! ಆಂಜನೇಯ ಸ್ವಾಮಿ ದೇವಸ್ಥಾನದ್ದೇನೂ ಬೇರೆ ಕಥೆಯಲ್ಲ. ಅಲ್ಲಿಯೂ ಅದೇ ತಾಯತ, ಮುಖದ ಮೇಲೆ ರಪ್ಪನೆ ಬಡಿಯುತ್ತಿದ್ದ ಅದೇ ತೀರ್ಥ. ಅಲ್ಲೂ ಅರ್ಥವಾಗದ ಏನೇನೋ ಮಂತ್ರಗಳು, ಇಲ್ಲೂ ಏನೇನೋ ಮಂತ್ರಗಳು. ಅಲ್ಲಿ ಬಾಬಾಗಳು, ಇಲ್ಲಿ ಪೂಜಾರಿಗಳು. ಆದರೂ ಅಗರಬತ್ತಿಯ ಘಮದಲ್ಲಿ ಮಾತ್ರ ಅದೇನೋ ವ್ಯತ್ಯಾಸ. ಇಲ್ಲಿ ಮಂಗಳಾರತಿಯ ಹೊಗೆ ಬೆರೆತು ಪರಿಮಳದಲ್ಲಿ ವ್ಯತ್ಯಾಸ ಕಂಡುಬಂದರೂ ತಾಯತಗಳ ಮಹಿಮೆಯಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ. ಜ್ವರ ವಾಂತಿಭೇದಿ ಶೀತ ನೆಗಡಿ ಬಂದರೆ ಇಂಥ ಸುಖವಾದ ವೈದ್ಯವನ್ನು ತೊರೆದುಕೊಂಡು ದೊಡ್ಡವರಾದೆವೆಂಬ ಕ್ಷುಲ್ಲಕ ಕಾರಣಕ್ಕೆ ಜನಾರ್ಧನ ಮಾವನ ಕ್ಲಿನಿಕ್ಕಿಗೆ ಹೋಗುವ ಗ್ರಹಚಾರ ಒದಗಿಬಂದದ್ದು ನಮಗೆ ಸಿಕ್ಕಾಪಟ್ಟೆ ನೋವು.
ಬಾಕಿಯಂತೆ ಲೋಕಾಭಿರಾಮ ಕುಶಲೋಪರಿ ಮಾತನಾಡಿಸುತ್ತಿದ್ದ ಬಂಗಾರದಂಥಾ ಜನಾರ್ಧನ ಮಾವ, ಮೈಯಿಗೆ ಸರಿಯಿಲ್ಲವೆಂದು ಹೋದಕೂಡಲೇ ಪೆಟ್ಟಿಗೆಯೊಳಗೆ ಕುದಿಯುತ್ತಿರುವ ನೀರಿನಿಂದ ದೊಡ್ಡ ದೊಡ್ಡ ಸಿರಿಂಜುಗಳನ್ನು ಹೊರತೆಗೆಯುತ್ತಿದ್ದರು. ನಂತರದಲ್ಲಿ ಕುಂಡೆ ನೋವಿಗೆ ದಿನಗಟ್ಟಲೆ ಉಪ್ಪಿನ ಶಾಖದ ಉಪಚಾರವೂ ನಡೆಯುತ್ತಿತ್ತು. ಜ್ವರ ಬಂತೆಂದರೆ ಜ್ವರಕ್ಕೆ ಹೆದರಿಯೇ ಜ್ವರ ಬರುವ ಕಾಲ ಅದಾಗಿತ್ತು.
ಹೀಗಿರಲು ಅದೊಂದು ದಿನ ಶ್ರೀಧರ ಮಾವನು ತನಗೆ ಹೊಟ್ಟೆನೋವೆಂಬ ನೆಪ ಹೇಳಿಕೊಂಡು ಜನಾರ್ಧನ ರಾಯರ ಕ್ಲಿನಿಕ್‌ಗೆ ದಾಳಿಯಿಡುವ ಯೋಜನೆ ಹಾಕಿಕೊಂಡನು. ಇನ್ನೇನು ನಮ್ಮ ಹಿತಶತ್ರುವಿಗೆ ಕಾಲ ಸನ್ನಿಹಿತವಾಗಿದ್ದು ಕಂಡು ನಮಗೆಲ್ಲಾ ಖುಷಿಯೋ ಖುಷಿ. ಏನೋ ಹೊಸತಕ್ಕೆ ಸಾಕ್ಷಿಯಾಗುವ ರೋಮಾಂಚನ! ಇನ್ನು ಇವರ ನುಗ್ಗೆಕಾಯಿ ಗಾತ್ರದ ಇಂಜೆಕ್ಷನ್ನುಗಳಿಂದ, ಅವರೆಕಾಳು ಗಾತ್ರದ ಮಾತ್ರೆಗಳಿಂದ ಮುಕ್ತಿ ದೊರಕಿದ ಸಂಭ್ರಮ. ಅಂದು ಶ್ರೀಧರ ಮಾವನು ತನ್ನ ಸಂಚು ಜನಾರ್ಧನ ರಾಯರಿಗೆ ತಿಳಿಯದೆಂದು ಭಾವಿಸಿ ಹೊಟ್ಟೆನೋವಿನ ನೆಪದಲ್ಲಿ ಕ್ಲಿನಿಕ್ಕಿಗೆ ಹೋಗಿ ಲೋಕಾಭಿರಾಮ ಮಾತನಾಡುತ್ತ ರೋಗಿಗಳು ಕೂರುವ ಹಾಸಿಗೆ ಮೇಲೆ ಕೂತನು. ತಲೆಗೆ ಮೆಟ್ಟು ಕಟ್ಟುವಾಗ ಅವರ ಎರಡೂ ಕೈಗಳನ್ನೂ ಹಿಂಬದಿಗೆ ಕಟ್ಟಿ ಹಿಡಿಯಲೆಂದು ಜೊತೆಗೆ ಹೋಗಿದ್ದ ಸಂತಿ ಉರುಫ್ ಸಂತೋಷ ಇದನ್ನೆಲ್ಲಾ ಪ್ರತ್ಯಕ್ಷ ನೋಡುವ ಅದೃಷ್ಟವಂತನಾಗಿದ್ದನು.
ಹಾಗೆ ಹೊಟ್ಟೆನೋವಿನ ಬಗೆಗೆ ಹೇಳಲು ತೊಡಗಿದ ಶ್ರೀಧರನು ಮೆಲ್ಲಗೆ ಮಾತನ್ನು ಜನಾರ್ಧನ ರಾಯರ ಮಕ್ಕಳು, ಮನೆ, ಆಸ್ತಿಪಾಸ್ತಿಗಳ ಕಡೆ ತಿರುಗಿಸಿದನು. ಜನಾರ್ಧನ ರಾಯರು ಕೂಡ ಲೋಕಾಭಿರಾಮವಾಗಿ ಉತ್ತರಿಸುತ್ತಾ ಮೆಲ್ಲನೆ ಸೊಂಟ ಹಿಡಿದು ಶ್ರೀಧರನನ್ನು ಗೋಡೆ ಕಡೆ ಹೊರಳಿಸಿ ಮಲಗಿಸಿದರು. ಪರದೆಯ ಆಚೆ ಬದಿಗೆ ಕೂತಿದ್ದ ಸಂತಿಯು ಎಲ್ಲವೂ ತಾವಂದುಕೊಂಡಂತೆ ನಡೆಯುತ್ತಿದೆ ಎಂಬ ಭ್ರಮೆಯಲ್ಲಿ ಹುಳ್ಳಗೆ ನಗುತ್ತಿದ್ದನಂತೆ. ಆದರೆ ಒಳಗೆ ನಡೆದದ್ದೇ ಬೇರೆಯಾಗಿತ್ತು.
ಕಳ್ಳನನ್ನು ಸಾಕ್ಷಿ ಸಮೇತ ಹಿಡಿಯಬೇಕೆಂದು, ಅವರು ಬಡಜನರ ರಕ್ತಹೀರಿ ಸಂಪಾದಿಸಿದ ಒಟ್ಟು ಆಸ್ತಿಯ ವಿವರವನ್ನು ಬಯಲಿಗೆಳೆಯುತ್ತಾ ಗೋಡೆ ಕಡೆ ತಿರುಗಿ ಮಾತಾಡುತ್ತಿದ್ದ ಶ್ರೀಧರನ ಪೈಜಾಮವನ್ನು ಮೆಲ್ಲನೆ ಸಡಿಲಿಸಿದ ಜನಾರ್ಧನರು ಅವನ ಅರಿವಿಗೆ ಬರುವ ಮೊದಲೇ ನುಗ್ಗೆಕಾಯಿ ಗಾತ್ರದ ನಾಲ್ಕಾರು ಸಿರಿಂಜುಗಳನ್ನು ಕುದಿಯುವ ಪಾತ್ರೆಯೊಳಗಿಂದ ತೆಗೆದು ಅವನ ಕುಂಡೆಗೆ ಚುಚ್ಚೇ ಬಿಟ್ಟಿದ್ದರು. ಉಳಿದ ಸಣ್ಣವನ್ನು ತೋಳಿನ ಹಿಂಭಾಗಕ್ಕೂ ನುಣುಪು ಬೆನ್ನಿನ ಮೇಲಕ್ಕೂ ಕ್ಷಣಾರ್ಧದಲ್ಲಿ ತೂರಿಸಿದರು. ಒಳಗಿನಿಂದ ಬಂದ ಚೀತ್ಕಾರವನ್ನು ಅನುಸರಿಸಿ ಸಂತಿಯು ಒಳಗೆ ಬರುವಷ್ಟರಲ್ಲಿ ಅತಿ ಘೋರವೊಂದು ನಡೆದೇಹೋಗಿತ್ತು. ಕೇರಿಯೊಳಗಿನ ನಮ್ಮವರೇ ಬೆನ್ನಿಗೆ ಚೂರಿ ಹಾಕಿದ್ದಕ್ಕೆ ಹಲುಬುವುದನ್ನು ಬಿಟ್ಟು ಶ್ರೀಧರನಿಗೆ ಬೇರೆ ಮಾರ್ಗವೇ ಇರಲಿಲ್ಲ. “____ ಮಕ್ಕಳಾ.. ನಿಮ್ಮ ಕುಕೃತ್ಯಕ್ಕೆ ಬೇರೆ ಯಾರು ಸಿಗಲಿಲ್ಲವೇ… ಬುದ್ಧಿ ಬಂದಾಗಿನಿಂದ ನಿಮ್ಮ ಕೇರಿಯ ಸೇವೆ ಮಾಡ್ತಿದೀನಿ. ಎಂದೂ ಯಾರನ್ನೂ ದುಡ್ಡಿಗಾಗಿ ಪೀಡಿಸಿಲ್ಲ. ಬೇಕಾದ್ರೆ ಹೋಗಿ ಕೇಳಿ. ಈಗಿನ್ನೂ ಕಾಲೇಜು ಮುಖ ನೋಡಿ ಬಂದ ಪೀಚುಗಳು ನೀವು.. ನನ್ನ ವಿರುದ್ಧವೇ ಮಸಲತ್ತು ಮಾಡ್ತೀರಾ.. ನಿಮ್ಮಂಥ ಎಷ್ಟೋ ಮಂಗಗಳನ್ನು ನೋಡಿದ್ದೇನೆ. ಮರ್ಯಾದೆಯಿಂದ ಮನೆಗೆ ಹೋಗ್ರೋ” ಎಂದು ಹಿಗ್ಗಾ ಮುಗ್ಗಾ ಬೈದು ಮನೆಗೆ ಓಡಿಸಿದರು.
ಏನೋ ದೊಡ್ಡ ಕ್ರಾಂತಿಯಾಗುತ್ತದೆ ಎಂದು ಕಾದಿದ್ದ ಕೇರಿಯ ಎಳಸು ಹೈಕಳಿಗೆ, ಒಬ್ಬ ಹುಚ್ಚನಿಂದಾಗಿ ಜನಾರ್ಧನ ರಾಯರ ಮಾನ ಹೋಗಿ ಧನ್ವಂತರಿಯಂತಹ ವೈದ್ಯರನ್ನು ಕಳೆದುಕೊಳ್ಳುವ ತಲೆನೋವಿಗೆ ತುತ್ತಾಗಿದ್ದ ದೊಡ್ಡವರಿಗೆ ಈ ಪ್ರಸಂಗವು ಹೀಗೆ ಮುಗಿದದ್ದು ಆಶ್ಚರ್ಯಕರವಾಗಿತ್ತು. ಇಂತಿಪ್ಪ ‘ಶ್ರೀಧರ ಕಥಾ ಪ್ರಸಂಗ’ವು ಇಲ್ಲಿಗೆ ಮುಗಿಯಲಿಲ್ಲ. ಮತ್ತೆ ಸಿಗುವ.
ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.
ಹಾ..ಹಾ..ಹಾ
ಇಂಜೆಕ್ಷನ್ ಟ್ಯೂಬನ್ನು ದೊಡ್ಡ ಆಯುಧದಂತೆ ಚಿತ್ರಿಸಿರುವುದು ತುಂಬಾ ಮಜವಾಗಿತ್ರು.
ಚೆಂದದ ವಿಡಂಬನೆ.
ಬಡಾ ಮಖಾನಿ ಯ ನವಿಲುಗರಿ ಪೊರೆಕೆ ಮತ್ತು ಕೋಟೇ ಆಂಜನೇಯನ ತೀರ್ಥಪ್ರೋಕ್ಷಣೆಗಳನ್ನು ಸಮಾಂತರದಲ್ಲಿ ವಿವರಿಸುತ್ತಾ ಕಾಯಿಲೆ ಮತ್ತು ಚಿಕಿತ್ಸೆಗಳ ನಡುವಿನ ವಿಚಿತ್ರ ಸಂಬಂಧಗಳನ್ನು ಕಟ್ಟಿದ್ದೀರಿ.
ಚಿಕಿತ್ಸೆಗೆ ಹೆದರಿಯೇ ಜ್ವರ ಬರುವುದು ಎಂಬ ಮಾತು ಬರೆಹದ ಚೌಕಟ್ಟನ್ನು ದಾಟಿ ರೂಪಕವಾಗಿ ನಿಲ್ಲುತ್ತದೆ.
ಚಂದ ಇದೆ… ಬರೆಯಿರಿ
ಡಾಕ್ಟರುಗಳು ದೇವರುಗಳು ಅಂತ ಒಂದ್ಕಡೆ ಹೇಳಿದ್ರೆ ಇನ್ನೊಂದ್ಕಡೆ ಚಿಕಿತ್ಸೆ ನೆಪದಲ್ಲಿ ರಕ್ತ ಹೀರ್ತಾರೆ ಅನ್ನೋ ಮಾತೂ ಇದೆ. ನಮ್ಮ ಮಠದ ಕೇರಿಯಲ್ಲಿ ಪಾತ್ರವಾಗಿ ಕಾಣೋ ಎಲ್ಲಾ ಆಸಾಮಿಗಳು ಸಮಾಜ , ಜನರೊಂದಿಗೆ ಬೆರೆತಿರೋರೇ ಆಗಿದ್ದಾರೆ.
ಹಾಗಾಗಿ , ಜನಾರ್ಧನನಂತಹ ಡಾಕ್ಟರು, ಶ್ರೀಧರನಂತಹ ಪೋಸು ಕೊಡೋ ಸಮಾಜ ಸುಧಾರಕರೂ ಸಿಗ್ತಾರೆ. ನುಗ್ಗೆಕಾಯಿ ಗಾತ್ರದ ಸೂಜಿ ಚುಚ್ಚುವ ಡಾಕ್ಟರ್ ಜನಾರ್ಧನನ ಹುಳುಕನ್ನ ಬಯಲಿಗೆಡುಹಲು ರೋಗಿ ರೂಪದಲ್ಲಿ ಹೋದ ಶ್ರೀಧರ ಭೂತ ಬಿಡಿಸಿಕೊಂಡು ಬಂದಂತಾಗಿದೆ. ಊರತುಂಬಾ ‘ನಾ ಹಂಗ ಮಾಡ್ತೀನಿ ನಾ ಹೀಂಗ ಮಾಡ್ತೀನಿ’ ಎಂದು ಖಾಲಿಪೀಲಿ ಹೇಳ್ತಾ ಸುತ್ತಾಡೋ ಜನ ನೆನಪಿಗೆ ಬರ್ತಾರೆ.
ಸಮಾಜದ ಓರೆಕೋರೆಯನ್ನು ಈ ರೀತಿಯಲ್ಲಿ ಸೊಗಸಾಗಿ ಹೇಳಬಹುದು ಎಂಬುದನ್ನು ಮಧುರಾಣಿ ಚೆನ್ನಾಗಿ ತಿಳಿದಿದ್ದಾರೆ.
Hilarious.