Advertisement
ಜಮೈಕಾ ದೇಶದ ಖ್ಯಾತ ಕವಿ ಮರ್ವಿನ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಜಮೈಕಾ ದೇಶದ ಖ್ಯಾತ ಕವಿ ಮರ್ವಿನ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಉಗ್ರಮನಸ್ಸಿನ ಸಾಹಿತಿಗಳಲ್ಲಿ ಹಾಗೂ ಸಾಹಿತ್ಯಾಭಿಮಾನಿಗಳಲ್ಲಿ ಅವರ ಜನಪ್ರಿಯತೆ ತುಸು ಕಡಿಮೆಯೆಂದೇ ಹೇಳಬೇಕು, ಮತ್ತು ಅವರು ಎಂದಿಗೂ ಮಹಾನ್ ರಾಜಕೀಯ ಕವಿತೆ, ಪ್ರಚಾರಕರ ಸಾಂದರ್ಭಿಕ ಕವಿತೆ ಅಥವಾ ರಾಜಿಯಾಗದ, ಪಟ್ಟುಬಿಡದ ಕ್ರಾಂತಿಕಾರಿಗಳ ಘೋಷಣೆ ತುಂಬಿದ ಕವನಗಳನ್ನು ಬರೆಯುವುದಿಲ್ಲ. ಅವರು ಆಗಾಗ್ಗೆ ನೋವಿನ ಸತ್ಯಗಳನ್ನು ಹೇಳುತ್ತಾರೆ, ಆದರೆ ದ್ವೇಷವಿಲ್ಲದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇದು 50ರ ಬರಹ! ಇಂದಿನ ಸರಣಿಯಲ್ಲಿ ಜಮೈಕಾ (Jamaica) ದೇಶದ ಖ್ಯಾತ ಕವಿ ಮರ್ವಿನ್ ಮೊರಿಸ್-ರವರ (Mervyn Morris, 1937) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಜಮೈಕಾ ದೇಶದ ರಾಜಧಾನಿ ಕಿಂಗ್‌ಸ್ಟನ್‌ ನಗರದಲ್ಲಿ 1937-ರಲ್ಲಿ ಜನಿಸಿದ ಮರ್ವಿನ್ ಮೊರಿಸ್ ಕೆರಿಬಿಯನ್ ಕವಿಗಳಲ್ಲಿ ಅತ್ಯಂತ ತೀಕ್ಷ್ಣಮತಿಯ ಮತ್ತು ತಾಂತ್ರಿಕವಾಗಿ ಪ್ರತಿಭಾನ್ವಿತರಲ್ಲಿ ಒಬ್ಬರಾಗಿದ್ದಾರೆ. ‘ಯೂನಿವರ್ಸಿಟಿ ಕಾಲೆಜ್ ಆಫ್ ವೆಸ್ಟ್ ಇಂಡೀಸ್’-ನಲ್ಲಿ ಅಧ್ಯಯನ ಮಾಡಿದ ನಂತರ ಮತ್ತು ರೋಡ್ಸ್ ವಿದ್ಯಾರ್ಥಿವೇತನವನ್ನು (Rhodes Scholarship) ಗೆದ್ದು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿಸಿದ ನಂತರ ಅವರು ಶೈಕ್ಷಣಿಕ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅದು ಅಂತಿಮವಾಗಿ ಅವರನ್ನು ಜಮೈಕಾದ ಮೋನಾ ನಗರದಲ್ಲಿರುವ ‘ಯೂನಿವರ್ಸಿಟಿ ಆಫ್ ವೆಸ್ಟ್ ಇಂಡೀಸ್’ ಗೆ ಶಿಕ್ಷಕರಾಗಿ, ನಂತರ ಸೃಜನಶೀಲ ಬರವಣಿಗೆಯ ಪ್ರಾಧ್ಯಾಪಕ (Professor of Creative Writing) ಹುದ್ದೆಗೆ ಕರೆದೊಯ್ಯಿತು. ಅವರ ಸ್ವಂತ ಕವನ ಸಂಗ್ರಹಗಳ ಜೊತೆಗೆ ಅವರು ವೆಸ್ಟ್ ಇಂಡೀಸ್ ಸಾಹಿತ್ಯದ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ ಮತ್ತು ವಿವಿಧ ಸಂಕಲನಗಳನ್ನು ಸಂಪಾದಿಸಿದ್ದಾರೆ, ಜೊತೆಗೆ ಜಮೈಕಾದ ಕ್ರಿಯೋಲ್ ಕವಿ ‘ಮಿಸ್ `ಲೌ’ ಲೂಯಿಸ್ ಬೆನೆಟ್ (Louise Bennett) ಅವರ ಆಯ್ದ ಕವಿತೆಗಳನ್ನು ಸಂಪಾದಿಸಿದ್ದಾರೆ. 2009-ರಲ್ಲಿ ಅವರಿಗೆ ಜಮೈಕಾದ ‘ಆರ್ಡರ್ ಆಫ್ ಮೆರಿಟ್’ ನೀಡಲಾಯಿತು. 2014-ರಲ್ಲಿ, ಅವರನ್ನು ಸ್ವಾತಂತ್ರ್ಯಾನಂತರದ ಜಮೈಕಾದ ಮೊದಲ ರಾಷ್ಟ್ರಕವಿಯಾಗಿ ನೇಮಿಸಲಾಯಿತು. ಮಾರ್ಚ್ 2021-ರಲ್ಲಿ, ಮೊರಿಸ್ ಅವರಿಗೆ, ಜಮೈಕಾ ದೇಶದ ಮತ್ತೊಬ್ಬ ಪ್ರಖ್ಯಾತ ಕವಿ, ಎಡ್ವರ್ಡ್ ಬಾ (Edward Baugh) ಜತೆ, 2021-ರ ಬೊಕಾಸ್ ಹೆನ್ರಿ ಸ್ವಾಂಜಿ (Bocas Henry Swanzy Award) ಪ್ರಶಸ್ತಿ ನೀಡಿ ಗೌರವವಿಸಲಾಯಿತು.

ಸಾವಿರದ ಒಂಬೈನೂರ ಅರವತ್ತರ ಮತ್ತು ಎಪ್ಪತ್ತರ ದಶಕದಲ್ಲಿ ಅವರು ಕಿಂಗ್‌ಸ್ಟನ್‌ ನಗರದಲ್ಲಿ ಒಟ್ಟುಗೂಡುತ್ತಿದ್ದ ಯುವ ಕವಿಗಳ ಒಂದು ಸಣ್ಣ ಗುಂಪಿಗೆ ಸೇರಿದವರಾಗಿದ್ದರು, ಪರಸ್ಪರರ ಕೃತಿಗಳನ್ನು ಓದುತ್ತಿದ್ದರು, ರಾಜಕೀಯ ಮತ್ತು ಕಾವ್ಯಾತ್ಮಕ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು, ಭವಿಷ್ಯದ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿದ್ದರು ಮತ್ತು ತಮ್ಮ ಬರವಣಿಗೆಯ ಕಡೆಗೆ ಓದುಗರ ಹಾಗೂ ವಿಮರ್ಶಕರ ಗಮನ ಸೆಳೆಯಲು ಮತ್ತು ಪ್ರಕಟಿಸಲು ಹೆಣಗಾಡುತ್ತಿದ್ದರು. ಹೀಗಾಗಿ, ಮೊರಿಸ್ ಅವರ ಹೆಚ್ಚಿನ ಸಾಹಿತ್ಯಿಕ ಜೀವನವು ಸ್ವಾತಂತ್ರ್ಯದ ನಂತರದ ವಸಾಹತುಶಾಹಿ ಯುಗ ಮತ್ತು ಅದರ ನಂತರದ ರಾಜಕೀಯ ಹೋರಾಟಗಳಲ್ಲಿ ಕಳೆದವು. ಈ ಕಾಲ ವೈಯಕ್ತಿಕ ಮತ್ತು ಸಾಮೂಹಿಕ ಬದ್ಧತೆಯ ನಡುವಿನ ಉದ್ವಿಗ್ನತೆಗಳು ಮತ್ತು ಆಯ್ಕೆಗಳಿಂದ ನಿರೂಪಿಸಲ್ಪಟ್ಟಿದೆ. ಇದನ್ನು ಅವರು ತಮ್ಮ ಸಾಹಿತ್ಯಕಾರ್ಯದ ಉದ್ದಕ್ಕೂ ವಿವಿಧ ರೀತಿಯಲ್ಲಿ ಪರಿಶೋಧಿಸುತ್ತಾರೆ. ನಿರಂತರ ಅನ್ಯಾಯದ ಬಗ್ಗೆ ತೀಕ್ಷ್ಣವಾದ ಅರಿವಿನ ಹೊರತಾಗಿಯೂ, ಅವರು ಯಾವಾಗಲೂ ತಾತ್ವಿಕವಾಗಿ ದೀರ್ಘ ದೃಷ್ಟಿಕೋನವನ್ನು ತೆಗೆದುಕೊಂಡಿದ್ದಾರೆ, ಅಸ್ಮಿತೆಯನ್ನು ಕಂಡುಹಿಡಿಯುವುದು ಅಥವಾ ಮರುಶೋಧಿಸುವುದು ಅದನ್ನು ಛಿದ್ರಗೊಂಡ ದುರಂತ ಭೂತಕಾಲಕ್ಕೆ ಬಂಧಿಸುವುದಕ್ಕಿಂತ ಉತ್ತಮ ಎಂದು ಮನವರಿಕೆ ಮಾಡಿದ್ದಾರೆ. ಹಾಗಾಗಿ, ಉಗ್ರಮನಸ್ಸಿನ ಸಾಹಿತಿಗಳಲ್ಲಿ ಹಾಗೂ ಸಾಹಿತ್ಯಾಭಿಮಾನಿಗಳಲ್ಲಿ ಅವರ ಜನಪ್ರಿಯತೆ ತುಸು ಕಡಿಮೆಯೆಂದೇ ಹೇಳಬೇಕು, ಮತ್ತು ಅವರು ಎಂದಿಗೂ ಮಹಾನ್ ರಾಜಕೀಯ ಕವಿತೆ, ಪ್ರಚಾರಕರ ಸಾಂದರ್ಭಿಕ ಕವಿತೆ ಅಥವಾ ರಾಜಿಯಾಗದ, ಪಟ್ಟುಬಿಡದ ಕ್ರಾಂತಿಕಾರಿಗಳ ಘೋಷಣೆ ತುಂಬಿದ ಕವನಗಳನ್ನು ಬರೆಯುವುದಿಲ್ಲ. ಅವರು ಆಗಾಗ್ಗೆ ನೋವಿನ ಸತ್ಯಗಳನ್ನು ಹೇಳುತ್ತಾರೆ, ಆದರೆ ದ್ವೇಷವಿಲ್ಲದೆ.

ಅವರ ಕಾವ್ಯವು ಸ್ಪಷ್ಟವಾದ ಐತಿಹಾಸಿಕ ಉದ್ದೇಶಗಳನ್ನು ತ್ಯಜಿಸುತ್ತದೆ, ಬದಲಿಗೆ ಎಲ್ಲಾ ಪುರುಷರ ಶಾಶ್ವತ ಕಾಳಜಿಗಳಾದ ಲೈಂಗಿಕ ಬಯಕೆ ಮತ್ತು ಆಧ್ಯಾತ್ಮಿಕ ಪ್ರೀತಿ, ಉತ್ಪರಿವರ್ತನಶೀಲತೆ ಮತ್ತು ಮರಣ, ಸ್ನೇಹ ಮತ್ತು ದ್ರೋಹ, ಸಂತೋಷ ಮತ್ತು ದುಃಖದಂತಹ ವಿಷಯಗಳನ್ನು ತೆಗೆದುಕೊಳ್ಳುತ್ತದೆ. ಅವರು ದೈನಂದಿನ ಜೀವನದ ಸರ್ವೋಚ್ಚ ಕವಿ – ದೈನಂದಿನ ಜೀವನದ ಸುರಕ್ಷತೆ ಮತ್ತು ಅದರ ಮಿತಿಗಳು, ಅದರ ನಿರಾಶೆಗಳು ಮತ್ತು ಸಾಂತ್ವನಗಳೊಂದಿಗೆ ಪರಿಚಿತವಾಗಿರುವ ಸಾಮರ್ಥ್ಯ ತೋರುವ ಕವಿ. ಅವರ ಅನೇಕ ಕವಿತೆಗಳು ವೈಯಕ್ತಿಕ ನೆನಪಿನ ತುಣುಕುಗಳು, ಆತ್ಮಚರಿತ್ರೆಯ ತುಣುಕುಗಳು. ವಿಷಣ್ಣತೆಯ ಹಾಸ್ಯನಟನಂತೆ, ಅವರು ಸಾಮಾಜಿಕ ವೀಕ್ಷಣೆಯಿಂದ ವ್ಯಂಗ್ಯಾತ್ಮಕ ಬೇರ್ಪಡುವಿಕೆಯೊಂದಿಗೆ, ಕ್ಷಣಿಕ ಆತ್ಮಾವಲೋಕನದ ಕಡೆ ಚಲಿಸುತ್ತಾರೆ, ಅವರ ಕುಶಲತೆ ಮತ್ತು ಬುದ್ಧಿಶಕ್ತಿ ಭಾಷೆ ಮತ್ತು ಭಾವನೆಯನ್ನು ಪರಿಷ್ಕರಿಸುವಲ್ಲಿ ಸೇರಿಕೊಳ್ಳುತ್ತದೆ.

ಅವರ ಸಾಂಸಾರಿಕ ಜೀವನದ ಕವಿತೆಗಳು ಅವರ ಕೌಟುಂಬಿಕ ದಿನಚರಿಗಳೊಂದಿಗೆ ಆಳವಾದ ಹತಾಶೆಗಳನ್ನು ಮರೆಮಾಚುವಂತೆ ಒತ್ತಾಯಿಸುತ್ತವೆ; ಆದರೆ ಅವರ ಅನ್ಯೋನ್ಯತೆಯು ಭಾವನಾತ್ಮಕತೆಯನ್ನು ತೊರೆಯುತ್ತದೆ, ಹಾಗೂ ಭಾವನಾತ್ಮಕ ಸತ್ಯವನ್ನು ಹೆರೆದು ಹಾಕುತ್ತಾ, ನಿಕಟ ಸಂಬಂಧಗಳಲ್ಲಿನ ಅಸ್ಪಷ್ಟತೆಗೆ ಯಾವಾಗಲೂ ಜೀವಂತವಾಗಿರುತ್ತದೆ. ಇದು ವಿಶೇಷವಾಗಿ ಅವರ “ಆನ್ ಹೋಲಿ ವೀಕ್” ಕವಿತೆಗಳ ಅನುಕ್ರಮದಲ್ಲಿ ಬಹಿರಂಗಗೊಳ್ಳುತ್ತದೆ. ಅಲ್ಲಿ, ಏಸುವಿನ ಕ್ರೂಶಾರೋಹಣವು ಕೆರಿಬಿಯನ್ ಬಣ್ಣದಿಂದ ಕೂಡಿದೆ ಮತ್ತು ಸ್ಥಳೀಯರಿಂದ ತುಂಬಿರುತ್ತದೆ. ಪವಿತ್ರದಿಂದ ಅಪವಿತ್ರದೆಡೆಗೆ ತಿರುಗುತ್ತಾ, ಮೊರಿಸ್ ತನ್ನ ಶೃಂಗಾರ ಪದ್ಯಗಳನ್ನು ತೀವ್ರವಾದ ಸ್ವಯಂ-ಅರಿವು ಮತ್ತು ಕಾಮಪ್ರಚೋದಕ ಶಕ್ತಿಯೊಂದಿಗೆ ತುಂಬುತ್ತಾರೆ, ಅಂದರೆ ಅವರು ಕಾಮದ ಬಗ್ಗೆ, ಪ್ರೀತಿ, ಪ್ರಲೋಭನೆ, ವಂಚನೆ ಮತ್ತು ವಿಜಯದ ಬಗ್ಗೆ ಶೃಂಗಾರ ಕವಿತೆಗಳನ್ನು ಬರೆಯುತ್ತಾರೆ. ಮತ್ತು, ಸಹಜವಾಗಿ, ಸ್ಟ್ಯಾಂಡರ್ಡ್ ಇಂಗ್ಲಿಷ್‌-ನಿಂದ ಜಮೈಕಾದ ಕ್ರಿಯೋಲ್‌-ನ ಕಡೆ ಹೋಗುವಾಗ ಕಾಣುವ ಸೂಕ್ಷ್ಮ ಬದಲಾವಣೆಗಳನ್ನು ಗುರುತಿಸಲು ಅವರು ತೀಕ್ಷ್ಣ ಕಿವಿಯನ್ನು ಹೊಂದಿದ್ದಾರೆ. ಆ ಕವಿತೆಗಳಿಗೆ ಸ್ಥಳೀಯತೆ ಮತ್ತು ಸಂಗೀತವನ್ನು ನೀಡುವ ಸ್ಥಳಾಂತರಗಳು, ಹಾಗೂ ಅವುಗಳ ಮೂಲದ ಬಗ್ಗೆ ಭಾಷಾಶಾಸ್ತ್ರೀಯವಾಗಿ ಜಾಗೃತವಾಗಿದ್ದರೂ ಅವರ ಕವನಗಳು ಅವುಗಳಿಂದ ನಿರ್ಬಂಧಿಸಲ್ಪಟ್ಟಿಲ್ಲ.

ಹಲವಾರು ಕವನ ಸಂಕಲನಗಳನ್ನು ಪ್ರಕಟಿಸಿದ ಮೊರಿಸ್, ಇತರ ಕೆರಿಬಿಯನ್ ಬರಹಗಾರರ ಕೃತಿಗಳನ್ನು ಸಹ ಸಂಪಾದಿಸಿದ್ದಾರೆ. ಅವರ ಸಂಕಲನಗಳಲ್ಲಿ The Pond (1973; ಪರಿಷ್ಕೃತ ಆವೃತ್ತಿ, 1997), Shadowboxing (1979), Examination Centre (1992), Vestiges (1996), ಹಾಗೂ On Holy Week (1976, 1993, 2016), ಸೇರಿವೆ. ಅವರು The Faber Book of Contemporary Caribbean Short Stories (1990) ಪುಸ್ತಕವನ್ನು ಸಂಪಾದಿಸಿದರು ಮತ್ತು “Is English We Speaking”, and Other Essays (1999) ಮತ್ತು Making West Indian Literature (2005) ವಿಮರ್ಶಾ ಪ್ರಬಂಧ ಸಂಕಲನಗಳನ್ನು ಸಹ ಬರೆದಿರುವರು. 2006-ರಲ್ಲಿ, I been there, sort of: New and Selected Poems ಎಂಬ ಮೊರಿಸ್ ಅವರ ಹೊಸ ಮತ್ತು ಆಯ್ದ ಕವನಗಳ ಸಂಕಲನವನ್ನು Carcanet Press ಪ್ರಕಟಿಸಿತು. 2017-ರಲ್ಲಿ Peelin Orange ಎಂಬ ಹೆಸರಿನ ಅವರ ಸಮಗ್ರ ಕವನಗಳ ಸಂಕಲನ ಪ್ರಕಟವಾಯಿತು.


ಕೊಳ
ಮೂಲ: The Pond

ಆ ಹಳ್ಳಿಯಲ್ಲಿ ಒಂದು ಕೊಳವಿತ್ತು,
ಚಿಕ್ಕ ಹುಡುಗರಿಗೆ ಅದರ ಹತ್ತಿರ
ಹೋಗಲು ಅನುಮತಿಯಿಲ್ಲವಂತೆ,
ವಾಕರಿಕೆ ಬರುವಷ್ಟು ಸಲ ಕೇಳಿದ್ದ ಇದನ್ನು.
ಅಳೆಯಲಾಗದಷ್ಟು ಆಳ ಆ ಕೊಳ, ಎನ್ನುತ್ತಿದ್ದರವರು,
ಹಾಗೇ ನುಂಗುತ್ತಿತ್ತು ಮನುಜರನ್ನು ಮೃಗಗಳನ್ನು ಅದು;
ಮತ್ತೆ, ಅದರ ಆಳದಲ್ಲಿ, ಮುದಿಯರು ಹೇಳುತ್ತಿದ್ದರು,
ಈಜುತ್ತಿದ್ದವು ಬೃಹತ್ ಗ್ಯಾಲಿವ್ಯಾಸ್ಪ್* ಹಲ್ಲಿಗಳು
ಹಾಗೂ ಅಲ್ಲಿದ್ದವು ಅವರ್ಣನೀಯ ಘೋರಗಳು;
ಜಾಣ ಹುಡುಗರು ದೂರವಿರುತ್ತಿದ್ದರು.

ಈ ನಿಬಂಧನೆಗಳು ಬಲು ಜೋರಾಗಿ ಸೆಳೆಯುತ್ತಿದ್ದರೂ,
ಭಯದಿಂದ ಬಿಗಿದ ಆ ಸಣ್ಣ ಹುಡುಗ, ದೂರವೇ ಇದ್ದ;
ಆದರೆ ಆ ಒಂದು ತೊಯ್ದ ಬೇಸಿಗೆಯ ದಿನ,
ಹುಲ್ಲು ಹುಲುಸಾಗಿ ಬೆಳೆದಿತ್ತು,
ದಾರಿಗಳು ಕೆಸರಾಗಿ ಜಾರುತ್ತಿದ್ದವು,
ಅಂದು ಅವನು ತನ್ನನ್ನು ಅಲ್ಲಿ
ಆ ಹೆಸರಾಂತ ಕೊಳದ ಅಂಚಿನಲ್ಲಿ ಕಂಡ.

ಆ ಚಿಂತಾಗ್ರಸ್ತ ಕೊಳ ನಿಗೂಢವಾಗಿತ್ತು.
ಇದ್ದಕ್ಕಿದ್ದಂತೆ, ಮೋಡಗಳಿಂದ ತಪ್ಪಿಸಿಕೊಂಡು
ಸೂರ್ಯ ಬೆಳಗುತ್ತಾ ಬಂದ;
ಪಾಪಪ್ರಜ್ಞೆಯಿಂದ ಮಿನುಗುತ್ತಾ,
ಕೊಳದೊಳಗಿಂದ ನಿಟ್ಟಿಸಿನೋಡುತ್ತಿದ್ದ
ತನ್ನ ಮುಖವನ್ನೇ ಕಂಡ ಅವನು.

*Galliwasp: ಜಮೈಕಾ ಪ್ರದೇಶದಲ್ಲಿ ಕಂಡುಬರುತ್ತಿದ್ದ, ಈಗ ಅಳಿದುಹೋಗಿರುವ, ಒಂದು ಜಾತಿಯ ದೊಡ್ಡ ಆಕಾರದ ಹಲ್ಲಿ (Jamaican Giant Galliwasp).


ಆ ಉಗ್ರಗಾಮಿಗೆ
ಮೂಲ: The Militant

ಚಿಟ್ಟೆಗಳ ಚಿತ್ರಿಸುವ
ಹುಚ್ಚಿತ್ತು ಒಮ್ಮೆ,
ಈಗವನಿಗೆ
ಮಿಲಿಟ್ರಿಬೂಟುಗಳ ಹುಚ್ಚು.
ಅವನ್ನು ತೊಟ್ಟು
ತುಳಿಯುತ್ತಾನವನು
ಚಿಟ್ಟೆಗಳ ಚಿತ್ರಿಸುವ
ಚಿತ್ರಕಾರರನ್ನ.


ಮನೆ
ಮೂಲ: Home

ಅಪ್ಪನಿಗೆ, ಸ್ವಲ್ಪ ಸಮಯದವರೆಗೆ
ಬೇರೆಲ್ಲಿಗಾದರೂ ಹೋಗುವ,
ಒಂದೆರಡು ತಿಂಗಳ ಮಟ್ಟಿಗೆ
ಸ್ವತಂತ್ರವಾಗಿ ಇರುವ
ಅವಕಾಶ ಸಿಗುವುದಾದರೆ
ಗಬಕ್ಕನೆ ಕಸಿದುಕೊಳ್ಳುವನು!

ಆದರೆ, ಸ್ವಾತಂತ್ರ್ಯವೆಂಬುದು
ಇಲ್ಲೂ ಇಲ್ಲ ಅಲ್ಲೂ ಇಲ್ಲದಂತಹ ವಸ್ತು:
ಮನೆಯೆಂಬುದು ಅವನು ಎಂದೂ
ತೊಡುವ ರೂಢಿಯುಡುಪು.


ಜಿರಳೆಗಳು
ಮೂಲ: The Roaches

ನಮ್ಮದೊಂದು ಮನೆಯಿತ್ತು.
ಜಿರಳೆಗಳು ಅಲ್ಲಿಗೆ ಬಂದವು ಉಳಿದುಕೊಳ್ಳಲು.
ಹರಡಿದವು ಅವು ಅಡಿಗೆಮನೆ, ಉಗ್ರಾಣ,
ಓದುವ ಕೋಣೆಗಳಲ್ಲಿ, ಆಮೇಲೆ ಇಡೀ ಮನೆಯನ್ನೇ
ತಮ್ಮ ವಶಮಾಡಿಕೊಂಡವು.
ಹೋರಾಡಿದೆವು ನಾವು ಅವುಗಳೊಂದಿಗೆ,
ಆದರೆ ಆಟ ಮುಗಿದುಹೋಗಿತ್ತು.
ಸಿಂಪಡಿಸಿದೆವು ನಾವು ಕೀಟನಾಶಕವನ್ನು,
ಆದರೂ ಅವು ಹುಟ್ಟುತ್ತಲೇ ಹರಡುತ್ತಲೇ ಹೋದವು.

ಸಿಕ್ಕಿತ್ತು ನಮಗೆ ಸಾಕಷ್ಟು ಜಾಗವಿರುವ ಒಂದು ಮನೆ,
ಚೊಕ್ಕವಾದ, ತೇವರಹಿತ, ಬೆಳಕು ತುಂಬಿದ ಮನೆ.
ನಾವು ಸಿಂಕಿನ ಕೆಳಗೆ ನೋಡಿದೆವು –
ಜಿರಳೆಯಾವುದೂ ಕಾಣಲಿಲ್ಲ.
ನಾವು ಕಪಾಟುಗಳೊಳಗೆ ನೋಡಿದೆವು –
ಜಿರಳೆಗಳ ಯಾವು ಸುಳಿವೂ ಇರಲಿಲ್ಲ.
ಎಲ್ಲಿಯೂ ಯಾವೊಂದು ಜಿರಳೆಯೂ ಇಲ್ಲ.
ಹಾಗಂತ, ನಾವು ಈ ಮನೆಗೆ ಬಂದೆವು.
ಜಿರಳೆಗಳು ಬಂದವು.
ಸಿಂಪಡಿಸಿದೆವು ನಾವು ಕೀಟನಾಶಕವನ್ನು,
ಆದರೆ ಅವು ಹುಟ್ಟುತ್ತಲೇ ಹರಡುತ್ತಲೇ ಹೋದವು.


ಸಾಂಸಾರಿಕ ಚಿತ್ರಗಳು
ಮೂಲ: Family Pictures

ಪ್ರೀತಿಯ ಹೊರತಾಗಿಯೂ
ಒಂಟಿಯಾಗಿರಬೇಕೆಂಬ ಬಯಕೆ
ಅವನನ್ನು ಶಕುನದ ಹಾಗೆ ಕಾಡುತ್ತದೆ.
ಗಮನಿಸಿ: ಮಗುವು ಮೆಲುನಗುತ್ತದೆ,
ನಿಟ್ಟಿಸಲು, ಪರಚಲು,
ಉಗುಳಿಸಿಕೊಳ್ಳಲು
ತನ್ನ ಅಪ್ಪ ತನ್ನ ಪಕ್ಕದಲ್ಲಿದ್ದಾನೆಂದು
ತನ್ನ ಹರ್ಷವನ್ನು ಗುಳಿಗುಳಿಸುತ್ತದೆ;
ಮಗುವಿನ ಅಣ್ಣ
ನಗುತ್ತಾನೆ, ಅಪ್ಪನನ್ನು ಅಪ್ಪುತ್ತಾನೆ, ಮತ್ತೆ
ಪಾಪ್ಕಾರ್ನ್ ಬೇಕೆಂದು, ಪೆನ್ಸಿಲ್ ಬೇಕೆಂದು,
ಹೊರಗೆಲ್ಲಾದರೂ ಕರಕೊಂಡು ಹೋಗೆಂದು ಪೀಡಿಸುತ್ತಾನೆ.

ಮತ್ತೆ ನೋಡಿ: ಬಳಲಿ ಚಿಂದಿಯಾದ ಮಡದಿ
ತನ್ನ ಮುದ್ದು ಮಗುವನ್ನು ಅಪಾಯದ ಅತಿಸಣ್ಣ
ಸಾಧ್ಯತೆಗಳಿಂದ ಸಹ ಉಗ್ರವಾಗಿ ಕಾಪಾಡುತ್ತಾಳೆ,
ಅರ್ಧರಾತ್ರಿಯಲ್ಲಿ ಕೇಳಿಬರುವ ಕೆಮ್ಮುಗಳಿಂದ
ಆತಂಕಿತಳಾಗಿ ಎಚ್ಚರವಾಗುತ್ತಾಳೆ;
ಮತ್ತೆ ನೋಡುತ್ತಾಳೆ, ಪ್ರೀತಿಸುತ್ತಾಳೆ,
ತನ್ನ ನರಗಳನ್ನು ಹರಿದು ಚೀರುತ್ತಾಳೆ;
ಆದರೆ ಅವನನ್ನು ಪ್ರೀತಿಸುತ್ತಾಳೆ
ತಾಳ್ಮೆಯಿದೆ ಇನ್ನೂ: ಮಡದಿ ತನ್ನ ಹಿರೆ ಮಗನನ್ನು
ಮುದ್ದುಮಾಡುತ್ತಾಳೆ, ತಮಾಷೆ ಮಾಡುತ್ತಾ ಅವನ
ಹೋಮ್‌ವರ್ಕ್ ಮಾಡಿಸುತ್ತಾಳೆ, ಲವಲವಿಕೆಯಿಂದ.

ಆದರೆ ನೀವು ಗಮನಿಸದಿರಬಹುದು
(ಇದೊಂದು ಖಾಸಗಿ ಸ್ಥಾನವಾದ್ದರಿಂದ)
ಒಬ್ಬ ಗಂಡು ಎಲ್ಲ ಕಾಲದಲ್ಲೂ
ತಾನು ಪ್ರೀತಿಪಾತ್ರನೆಂದು,
ತಾನು ಅಗತ್ಯನೆಂದು ಭಾವಿಸುವಂತೆ
ಮಾಡಿಸುವ ಸ್ಥಿರವಾಗಿ ಪ್ರಜ್ವಲಿಸುವ ಶಕ್ತಿ;
ಇದರ ಹೊರತಾಗಿಯೂ,
ಇದು ಅವನನ್ನು ಸ್ವತಂತ್ರನಾಗಿಸುತ್ತೆ,
ಆ ಗೂಡಿನಲ್ಲಿ ತನ್ನದೇ ಆದ
ಮೂಲೆಯನ್ನು ನೆಚ್ಚಿಕೊಂಡಿರುವ,
ಅವಳ ಮನದ ಭಾವನೆಗಳ ಅರಸ,
ಅವಳ ತನುವಿನ ಸವಾರ.

ಈ ಎಲ್ಲ ಪ್ರೀತಿಯ ಹೊರತಾಗಿಯೂ
ಇದೊಂದು ಕನಸು:
ಒಂಟಿಯಾಗಿ ಹೋಗಲು,
ಸಮುದ್ರದಡದಲ್ಲಿರುವ ಖಾಲಿ
ಮೀನುದೋಣಿಗಳಿರುವಲ್ಲಿ ಹೋಗಲು,
ಆಗ ಯಾರಿಗೂ ತಿಳಿಯದು
ಈ ಗಂಡಸರಲ್ಲಿ
ತಂದೆಯಾರೆಂದು, ಗಂಡನಾರೆಂದು,
ನೊಂದವನಾರೆಂದು, ಅರಸನಾರೆಂದು,
ಆ ಗೂಡೊಂದರ ಒಡೆಯನಾರೆಂದು.


ನಿರ್ಗಮನ
ಮೂಲ: Checking Out

ದಡಾರನೆ ಬಾಗಿಲು ಮುಚ್ಚುವೆ. ಚಿನ್ನಾ, ಏನೂ
ಉಳಿದಿಲ್ಲ ತಾನೆ? ಹೂಂ, ಇಲ್ಲ:
ಏನೋ ಉಳಿದಿದೆ, ಖಂಡಿತ ಗೊತ್ತಿದೆ ನನಗೆ:

ಈ ಖಾಲಿ ಫ್ಲಾಟಿನಲ್ಲಿ ನಮ್ಮ ಬದುಕಿನ
ಕೆಲ ಕುರುಹುಗಳು ಸುಳಿದಾಡುತ್ತಿರುತ್ತವೆ,
ಕೆಲ ಆವೇಗಗಳು ನಮ್ಮ ನಿರ್ಗಮನವನ್ನು ಮೀರಿ ಬದುಕುತ್ತವೆ,
ಇರುವಿಕೆಯ ಹರಿವಿನಲ್ಲಿ ಪುನರಾವರ್ತನೆಯಾಗುತ್ತಲಿರುತ್ತವೆ.

ನಾವೆಂದೂ ಹೋಗುವುದಿಲ್ಲ,
ಹೋಗಬೇಕಾಗುತ್ತದೆ,
ಯಾವಾಗಲೂ.


ಒಂದು ಯಾನ
ಮೂಲ: A Voyage

‘ಹುಷಾರು, ಅವರ ದುಷ್ಟ ಗಾನಗಳ ಬಗ್ಗೆ ಹುಷಾರಾಗಿರು:
ಅವರು ನಿನ್ನ ಮಾಂಸವನ್ನು ತಿನ್ನುವರು,
ಅವರು ನಿನ್ನ ಮೂಳೆಗಳನ್ನು ನಿರ್ವಾಣವಾಗಿಸುವರು,
ನೀನು ಹೆಚ್ಚುಹೊತ್ತು ಉಳಿಯಲಾರೆ.’

ಅವನ ಹಡಗು ಒಂದು ದ್ವೀಪವನ್ನು ಸಮೀಪಿಸಿತು.
ಮಿನುಗುವ ಶಾಂತತೆ. ನಿಶ್ಚಲ ಗಾಳಿ.
ಹಸಿರು ಕಡಲ ಮೇಲಿಂದ ತೇಲಿ ಬರುತ್ತಿದ್ದ
ಮನಮೋಹಕ ಗಾನ
ಅವನ ಸಂಕಲ್ಪಶಕ್ತಿಯನ್ನು ಸ್ಥಂಬಿಸಿತು.

ಆಹಾ, ಸ್ವರ್ಗ ನನ್ನ ಕೈಗೆಟುಕುವ ದೂರದಲ್ಲಿದೆ
ಅಂತನಿಸಿತು ಅವನಿಗೆ. ದಡದೆಡೆಗೆ ಈಜಿದ.

ಅವನ ಅದೃಷ್ಟ ಕಾಯುತ್ತಿತ್ತು, ಕಡಲ್ಕರೆಯಲ್ಲಿ
ತನ್ನ ಕೈಕಾಲುಗಳನ್ನು ನೀಡಿಕೊಂಡು ಓಲಾಡುತ್ತಿತ್ತು.


ಜಮೈಕಾ 1979
ಮೂಲ: Jamaica 1979

ಕ್ರಾಂತಿಕಾರಿ ಘೋಷಣೆಗಳು
ಬರೆದಿರುವ ಗೋಡೆಯಿಂದ
ಕಲ್ಲೆಸೆಯುವ ದೂರದಲ್ಲಿ

ಕಪ್ಪು ಮುದುಕಿಯೊಬ್ಬಳು
ಹಾಳುಮೂಳುಗಳಲ್ಲಿ
ಕೆದಕುತ್ತಿದ್ದಾಳೆ

ಟ್ರಾಫಿಕ್ ಸಿಗ್ನಲ್‌ಗಳಲ್ಲಿ
ಕಾಯುತ್ತಿವೆ ಕಾರುಗಳು
ದೀಪ ಹಸಿರಾಗಲು


ಒಂದು ವೆಸ್ಟ್ ಇಂಡಿಯನ್ ಪ್ರೇಮಗೀತೆ, ಇಂಗ್ಲೆಂಡಿನಿಂದ
ಮೂಲ: West Indian Love Song, from England

ನಮ್ಮ ಪ್ರೇಮವನ್ನು ಹುಟ್ಟಿಸಿದ ಆ ಚಂದಿರ
ಕಡಲಿನ ಮೇಲಿರುವ ಆ ಚಂದಿರ
ಪ್ರೇಮ ಹೇಗಿರಬೇಕೆಂದು
ಚಂದಿರ ಸಮರ್ಥಿಸುವನೆಂದು ನೀನಂದೆ

ನಮ್ಮ ಪ್ರೇಮವನ್ನು ಭಂಗಗೊಳಿಸುತ್ತೆ ಈ ಕಡಲು
ನನ್ನ ಬದುಕನ್ನು ಕರಗಿಸುತ್ತೆ
ನಮ್ಮ ಪ್ರೇಮವನ್ನು ಹೊಸೆದ ಆ ಚಂದಿರ
ಚಾಕುವನ್ನು ಹರಿತಗೊಳಿಸುತ್ತಿದ್ದಾನೆ

ನನ್ನ ಪ್ರೇಮವನ್ನು ಮರುಪಡೆಯಲು
ನಾನು ಕಡಲ ಏರಿ ಬರುವೆ
ಚಂದಿರನ ಸುತ್ತ ಕೈಗಳ ಬಳಸುವೆ
ಆಗ ನಾವು ಸ್ವತಂತ್ರರಾಗುವೆವು

೧೦
ನನ್ನಪ್ಪ ಸತ್ತ ದಿನ
ಮೂಲ: The Day My Father Died

ನನ್ನಪ್ಪ ಸತ್ತ ದಿನ
ಅಳಲಾಗಲಿಲ್ಲ ನನ್ನಿಂದ;
ನನ್ನಮ್ಮ ಅತ್ತಳು,
ನಾನಳಲಿಲ್ಲ.

ದಿಂಬಿನ ಮೇಲೆ ಅವನ ಮುಖ
ಆ ಮಂದ ಬೆಳಕಿನಲ್ಲಿ
ಶೋಕದ ಬರಹವಾಗಿತ್ತು ನನಗೆ,
ಕಪ್ಪು ಬಿಳುಪಿನಲ್ಲಿ.

ಅವನು ಒದ್ದಾಡುವುದನ್ನು ನೋಡಿದೆವು,
ಸೆಟೆಯುವುದನ್ನು, ಸಡಿಲವಾಗುವುದನ್ನು;
ಅವನ ಮುಖ ಬರಿದಾಯಿತು,
ಮೇಣದಂತೆ ಜೀವಶೂನ್ಯ.

ನಾನು ಸಾವಿನ ಬಗ್ಗೆ ಓದಿದ್ದೆ
ಆದರೆ ನೋಡಿದ್ದಿಲ್ಲ.
ನನ್ನಪ್ಪನ ಮುಖ, ನಿಮ್ಮಾಣೆಗೂ,
ಪ್ರಶಾಂತವಾಗಿರಲಿಲ್ಲ.

ಆ ಹುಸಿಯನ್ನು ಉರುಳಿಸಿ,
ಎಷ್ಟೇ ಆಕರ್ಷಕವಾಗಿದ್ದರೂ:
ಅವನ ಮುಖ ಇಲ್ಲವಾಗಿತ್ತು
ಎಲ್ಲ ಭಾವನೆಗಳಿಂದ.

ನನ್ನಮ್ಮನ ಕಣ್ಣೀರು ನನ್ನ ಕಣ್ಣೀರಾಗಿತ್ತು,
ಒಂದೊಂದು ಬಿಕ್ಕೂ ನನ್ನನ್ನು ನಡುಗಿಸಿತು:
ಸಾವಿನ ನೋವು ಬದುಕಿರುವವರಲ್ಲಿರುತ್ತೆ,
ಸತ್ತವರು ಮುಕ್ತರಾಗುತ್ತಾರೆ.

ನನಗೆ ನನ್ನಪ್ಪನ ಸಾವು
ನನ್ನಮ್ಮನ ದುಃಖವಾಗಿತ್ತು;
ಆ ದಿನ ಅವಳದ್ದಾಗಿತ್ತು,
ನಷ್ಟ ನಾಳೆಯದ್ದಾಗಿತ್ತು.

About The Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ