ಕೇವಲ ಕೆಲ ಬೇಸಿಗೆ ಶಿಬಿರಗಳು, ಅರೆ ವಾರ್ಷಿಕ ಕೋರ್ಸುಗಳು, ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳು ಆಡುವ ನಾಟಕಗಳು ಮಾತ್ರವಿದ್ದರೆ ಸಾಲದು. ಇದನ್ನೂ ಮೀರಿ ಮಕ್ಕಳ ರಂಗಭೂಮಿ ಬೆಳೆಯಬೇಕಿದೆ. ಕೇವಲ ಕಲೆಯ ದೃಷ್ಟಿಯಿಂದ ಮಾತ್ರವಲ್ಲ, ಮಕ್ಕಳೊಳಗಿನ ಆತ್ಮವಿಶ್ವಾಸ ಹೆಚ್ಚಾಗಲು, ಭಾಷಾ ಕಲಿಕೆಗೆ, ಸ್ಪಷ್ಟ ಉಚ್ಚಾರಣೆಗೆ, ಪಾತ್ರಗಳ ಮೂಲಕ ಭಿನ್ನ ವ್ಯಕ್ತಿತ್ವಗಳನ್ನು ಅರಿಯುವುದಕ್ಕೆ, ನಾಲ್ಕು ಜನರೊಂದಿಗೆ ಬೆರೆಯುವುದಕ್ಕೆ, ಆರೋಗ್ಯಕರ ಮನಸ್ಥಿತಿ ಬೆಳೆಸಿಕೊಳ್ಳುವುದಕ್ಕೆ ಮಕ್ಕಳ ರಂಗಭೂಮಿ ಪೂರಕವಾಗಬಲ್ಲದು. ಬಣ್ಣ ಮತ್ತು ಬೆಳಕಿನ ಜೋಡಿಯ ಮೋಡಿ ಸಮಸ್ತ ಪ್ರಜೆಗಳ ಮೇಲಾಗಲಿ.
ಜಯಲಕ್ಷ್ಮಿ ಪಾಟೀಲ್ ಬರೆಯುವ ಹೊಸ ಅಂಕಣ “ಗರ್ದಿ ಗಮ್ಮತ್ತು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ
ಮಿಸ್ ನಂಗೆ ಡೈಲಾಗ್ ಮರ್ತೋಯ್ತು
“ಮಿಸ್ ಮಿಸ್ ನನಗೆ ಡೈಲಾಗ್ ಮರೆತುಹೋಯ್ತು…” ಸ್ಟೇಜಿಂದ ಸೈಡ್ ವಿಂಗಿಗೆ ಬಂದ ಹತ್ತು ವರ್ಷದ ಮಗು ಲಕ್ಷ್ಮಿ, ತಪ್ಪು ಮಾಡಿಬಿಟ್ಟಿದ್ದೇನೆ ಮುಂದೇನು ಕಾದಿದೆಯೋ ಎನ್ನುವಂತೆ ಅಳುತ್ತಾ ಹೇಳುತ್ತಿದ್ದರೆ ಆ ಮಗುವಿನ ಅವಸ್ಥೆ ಕಂಡು, ಅಯ್ಯೋ ನನ್ನ ಮುದ್ದು ಎನ್ನುತ್ತಾ ಅವಳನ್ನು ಬರಸೆಳೆದು ಅಪ್ಪಿಕೊಂಡೆ.
“ಏನಾಗಲ್ಲ ಪುಟ್ಟಿ. ಮರ್ತುಬಿಡು ಅದನ್ನ. ಏನೂ ತಪ್ಪಾಗಿಲ್ಲ. ಮುಂದಿನ ಡೈಲಾಗ್ ಸರಿಯಾಗ್ ಹೇಳು ಆಯ್ತಾ? ಎಲ್ರಿಗಿಂತ ನೀನೇ ಜಾಣೆ ಅಲ್ವಾ, ಇನ್ನು ಎಲ್ಲಾ ನೆನಪಿರುತ್ತೆ ಹೆದರಬೇಡ” ಎಂದು ಮುದ್ದಿಸಿದಾಗ ಆ ಕಣ್ಣುಗಳಲ್ಲಿ ಕಂಡ ಹೊಳಪು ಈಗಷ್ಟೇ ಕಂಡಿರುವೆ ನಾನು ಅನ್ನುವಷ್ಟು ಗಾಢವಾಗಿ ಮನದಲ್ಲಿ ಅಚ್ಚಾಗಿದೆ. ನಂತರದ ಸನ್ನಿವೇಶಗಳಲ್ಲಿ ನಿಜಕ್ಕು ತುಂಬಾ ಸರಾಗವಾಗಿ ಅಭಿನಯಿಸಿದ್ದಳು. ಇದು ನಡೆದಿದ್ದು ಮುಂಬೈನ ಮೈಸೂರು ಅಸೋಸಿಯೇಶನ್ನಲ್ಲಿ. ನಾನು 2002ರಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಪ್ರಾಯೋಜಕತ್ವದ ಅಡಿಯಲ್ಲಿ, ಅಲ್ಲಿನ ಮುನ್ಸಿಪಾಲ್ಟಿ ಕನ್ನಡ ಶಾಲೆಯ ಮಕ್ಕಳಿಂದ ವೈದೇಹಿಯವರ, ‘ಡಾಣಾ ಡಂಗುರ’ ನಾಟಕವನ್ನು ಮಾಡಿಸಿದ್ದೆ. ಐದು ಮತ್ತು ಆರನೇ ತರಗತಿಯ ಮಕ್ಕಳು ಅವರು. ಅಲ್ಲಿ ಕಲಿಯುತ್ತಿರುವ ಹೆಚ್ಚಿನ ಮಕ್ಕಳ ಮನೆಯ ಭಾಷೆ ತುಳುವಾಗಿತ್ತು. ಒಂದಿಬ್ಬರು ಮಾತ್ರ ಮನೆಯಲ್ಲಿ ಕನ್ನಡ ಮಾತಾಡುತ್ತೇವೆ ಎಂದರು. ಅವರಿಬ್ಬರು ಉತ್ತರ ಕರ್ನಾಟಕ ಭಾಗದವರು. ಆರಂಭದಲ್ಲಿ ಒಬ್ಬರಿಗೂ ನಾಟಕದಲ್ಲಿರುವ ಶೈಲಿಯ ಸಂಭಾಷಣೆ ಓದಲೂ ಬರುತ್ತಿಲ್ಲ! ಮುನ್ಸಿಪಾಲ್ಟಿ ಶಾಲೆಗೆ ಹೋಗುವ ಮಕ್ಕಳು ಎಂದರೆ ನೀವೀಗಾಗಲೇ ಅರ್ಥ ಮಾಡಿಕೊಂಡಿರುತ್ತೀರಿ; ಅವರೆಲ್ಲ ಕೂಲಿನಾಲಿ ಮಾಡುವವರ/ಬಡವರ ಮಕ್ಕಳು ಎಂದು. ಶುರುವಾತಿಗೆ ನಾನು ನಾಟಕವೆಂದರೆ ಮಕ್ಕಳು ಖುಷಿಯಿಂದ ಭಾಗವಹಿಸ್ತವೆ ಎಂದುಕೊಂಡಿದ್ದೆ. ದೊಡ್ಡವರಿಗಿಂತ ಹೆಚ್ಚು ಸಂಕೋಚ, ಹಿಂಜರಿತ ಮಕ್ಕಳಲ್ಲಿರುತ್ತದೆ ಎನ್ನುವುದು ಆ ಶಾಲೆಗೆ ಹೋಗಿ ಮಕ್ಕಳನ್ನು ಮಾತಾಡಿಸಿದಾಗಲೇ ಗೊತ್ತಾಗಿದ್ದು. ಮೊದಮೊದಲು, ಹಿಂಜರಿಕೆ, ಹೆದರಿಕೆಯಿಂದಿದ್ದ ಮಕ್ಕಳು ನಾಟಕ, ಸಂಭಾಷಣೆಗಳು ಅರ್ಥವಾಗುತ್ತಾ ಹೋದಂತೆ ಉತ್ಸಾಹದಿಂದ ರಿಹರ್ಸಲ್ ಮಾಡತೊಡಗಿದ್ದು ದೊಡ್ಡ ಧೈರ್ಯ ಕೊಟ್ಟಿತ್ತಾದರೂ, ನಾಟಕದ ದಿನ ವೇದಿಕೆಯ ಮೇಲೆ ಎದುರಿಗಿರುವ ಪ್ರೇಕ್ಷಕರನ್ನು ಕಂಡು ಎಲ್ಲಿ ಹೆದರಿ ಸುಮ್ಮನೆ ನಿಂತುಬಿಡುತ್ತಾರೋ ಅನ್ನುವ ಅಂಜಿಕೆ ನನ್ನದು. ನಾಟಕ ಪ್ರದರ್ಶನದ ದಿನ ಗೋರೆಗಾಂವ್ ನಿಂದ ಮಾಟುಂಗಾ ಈಸ್ಟ್ ತಲುಪುವವರೆಗೆ ಬಸ್ಸಲ್ಲಿ ಅವರನ್ನೆಲ್ಲ ಚಿಯರಪ್ ಮಾಡಿದ್ದೇ ಮಾಡಿದ್ದು ನಾನು, ಅಕ್ಷತಾ ದೇಶಪಾಂಡೆ ಮತ್ತು ಅವಿನಾಶ್ ಕಾಮತ್! ಮಕ್ಕಳು ನಮ್ಮನ್ನು ನಿರಾಸೆ ಮಾಡಲಿಲ್ಲ. ತುಂಬಾ ಲವಲವಿಕೆಯಿಂದ ನಾಟಕವಾಡಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.
ಮೊನ್ನೆ ೮ನೇ ತಾರೀಖು ರವೀಂದ್ರ ಕಲಾಕ್ಷೇತ್ರದಲ್ಲಿ, ಎ ಎಂ ಪ್ರಕಾಶ್ ಅವರು ರಚಿಸಿ ನಿರ್ದೇಶಿಸಿದ ‘ಕಾಡುವ ಧ್ವನಿ’ ಎನ್ನುವ ಮಕ್ಕಳು ಅಭಿನಯಿಸಿದ ನಾಟಕವನ್ನು ನೋಡಿದಾಗ, ನಾನು ೨೪ ವರ್ಷಗಳ ಹಿಂದೆ ಮುಂಬಯಿ ಕನ್ನಡ ಮಕ್ಕಳಿಗೆ ಮಾಡಿಸಿದ್ದ ನಾಟಕದ ಈ ನೆನಪು ತಾಜಾ ಆಯಿತು.
ಹನುಮಂತನಗರದಲ್ಲಿರುವ ‘ಬಿಂಬ’ದಲ್ಲಿ ೬ ತಿಂಗಳ ಅಭಿನಯ ಕೋರ್ಸ್ ಮಾಡಿದ್ದ ಮಕ್ಕಳು ‘ಕಾಡುವ ಧ್ವನಿ’ ನಾಟಕದಲ್ಲಿ ಅಭಿನಯಿಸಿದ್ದರು. ನಾಲ್ಕೈದು ವರ್ಷದ ಮಕ್ಕಳಿಂದ ಮೊದಲುಗೊಂಡು ಹದಿನಾಲ್ಕು ವರ್ಷದವರೆಗಿನ ಮಕ್ಕಳು ಈ ನಾಟಕದಲ್ಲಿದ್ದರು. ಯಾವ ಮಕ್ಕಳೂ ಎಲ್ಲೂ ಸಂಭಾಷಣೆ ಮತ್ತು ಚಲನೆಗಳನ್ನು ತಪ್ಪಿಸಲಿಲ್ಲ. ಕೆಲವು ಮಕ್ಕಳಂತೂ ತಾವು ಮಾಡುತ್ತಿದ್ದ ಪಾತ್ರವನ್ನು ಅದೆಷ್ಟು ಎಂಜಾಯ್ ಮಾಡುತ್ತಿದ್ದರೆಂದರೆ, ಕಲಾವಿದ ಪಾತ್ರವಾಗುವುದು ಎಂದರೆ ಬೇರೇನೂ ಅಲ್ಲ ಇದೇ ಎಂದು ಎದುರಿನವರಿಗೆ ಮನವರಿಕೆ ಆಗುವಷ್ಟು. ‘ಕಾಡುವ ಧ್ವನಿ’ ನಾಟಕ ಈ ಎಐ ಯುಗದಲ್ಲಿ ಮನುಷ್ಯ ಮತ್ತೆ ಪ್ರಕೃತಿ ಸಹಜವಾದುದ್ದಕ್ಕೆ ಕನೆಕ್ಟ್ ಆಗಬೇಕಾದ ತುರ್ತನ್ನು, ಮನುಷ್ಯರ ಲಾಭಕೋರತನವನ್ನು ತುಂಬಾ ಚೆನ್ನಾಗಿ ಬಿಂಬಿಸಿದೆ. ಈ ನಾಟಕದಲ್ಲಿ ಅಭಿನಯಿಸಿದ ಮಕ್ಕಳಿಗೆ ವಿಷಯದ ಘನ ಉದ್ದೇಶ ಅದೆಷ್ಟು ನಿಲುಕಿದೆಯೋ ಗೊತ್ತಿಲ್ಲ. ಆದರೆ ಇಂದು ಬಿಂಬ ಅವರಲ್ಲಿ ಬಿತ್ತಿದ ವೈಚಾರಿಕ ಬೀಜ ಅವರೊಂದಿಗೆನೇ ಬೆಳೆಯುತ್ತ, ಈ ಮಕ್ಕಳು ದೊಡ್ಡವರಾದ ಮೇಲೆ ಎಂದೋ ಒಮ್ಮೆ ಟಿಸಿಲೊಡೆಯುತ್ತದೆ. ಆಗ ಈ ಮಕ್ಕಳಲ್ಲಿ ಕೆಲವರಾದರೂ ತಮ್ಮ ಪಾತ್ರ, ಸಂಭಾಷಣೆ ನೆನೆಯುತ್ತ ಜಗತ್ತನ್ನು, ತಮ್ಮ ಬದುಕನ್ನು ಆರೋಗ್ಯಕರ ದೃಷ್ಠಿಯಿಂದ ನೋಡುವ, ಹಾಗೆ ಬದುಕುವ ಸಾಧ್ಯತೆ ಇದೆ. ಇನ್ನುಳಿದವರು ತಾವಾಡಿದ ಈ ನಾಟಕವನ್ನು ಕೇವಲ ಮನರಂಜನೆಯಾಗಿ ಸುಂದರ ನೆನಪಾಗಿ ಮನದಲ್ಲುಳಿಸಿಕೊಳ್ಳುತ್ತಾರೆ. ಅದೂ ಸಹ ಹಿತವಾದುದು. ಈ ತಂಡದಲ್ಲಿ ನನ್ನ ಪರಿಚಯದ ಆತ್ಮೀಯರಾದ ಪತ್ರಕರ್ತೆ ವಿದ್ಯಾರಶ್ಮಿ ಅವರ ಮಗಳು ಬೆಳಕು ಮತ್ತು ‘ಅಮ್ಮಾವ್ರ ಗಂಡ’ ನಾಟಕದಲ್ಲಿ ನನ್ನ ಜೊತೆಯಲ್ಲಿ ನಟಿಸಿದ್ದ ಉತ್ತಮ ನಟಿ ಸಿಂಧು ಅವರ ಮಗ ಅಥರ್ವ ಇದ್ದಿದ್ದು ಗೊತ್ತಾಗಿದ್ದೇ ಅಲ್ಲಿಗೆ ಹೋದ ಮೇಲೆ. ಖುಷಿಯಾಯಿತು ಅವರನ್ನಲ್ಲಿ ಕಂಡು.
‘ಬಿಂಬ’ ದಿ. ಎ ಎಸ್ ಮೂರ್ತಿ ಅವರ ಕನಸಿನ ಕೂಸು. ಅದು ಜನ್ಮ ತಳೆದಿದ್ದು ೧೦೮೯ರಲ್ಲಿ. ಆಗಿನಿಂದ ಈಗಿನವರೆಗೆ ಮೂರ್ತಿಯವರ ಮಗ ಎ ಎಂ ಪ್ರಕಾಶ್ ಮತ್ತವರ ಪತ್ನಿ ವನಮಾಲ ಜೊತೆಯಾಗಿ ಹನುಮಂತನಗರದ ‘ಬಿಂಬ’ವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಪ್ರತೀ ವರ್ಷ ಅಲ್ಲಿ ನೂರಾರು ಮಕ್ಕಳ ಪ್ರತಿಭೆ ಫತಿಫಲಿಸಿದ್ದನ್ನು ಈ ದಂಪತಿ ಕಂಡಿದ್ದಾರೆ. ಅಂದಿನಿಂದ ಇಂದಿನವರೆಗೆ ಹನುಮಂತನಗರದ ಬಿಂಬ ವರ್ಷಕ್ಕೆರೆಡು ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಒಂದು ಈ ೬ ತಿಂಗಳ ಆಕ್ಟಿಂಗ್ ಕೋರ್ಸ್, ಮತ್ತೊಂದು ೧೫ ದಿನಗಳ ಬೇಸಿಗೆ ಶಿಬಿರ ‘ಕಲಾಭಿರುಚಿ’. ಪ್ರತೀ ಕೋರ್ಸಿಗೂ ಹೊಸದೇ ನಾಟಕ ರಚಿಸಲ್ಪಡುತ್ತದಂತೆ! ಬಿಂಬದ್ದೇ ಇನ್ನೊಂದು ಬ್ರಾಂಚ್, ವಿಜಯನಗರದಲ್ಲಿನ ‘ಬಿಂಬ’. ಅದನ್ನು ಎ ಎಸ್ ಮೂರ್ತಿಯವರ ಹಿರಿಯ ಮಗಳು ಶೋಭಾ ವೆಂಕಟೇಶ್ ಮತ್ತು ಕುಟುಂಬದವರು ಇಷ್ಟೇ ಸಮರ್ಥವಾಗಿ ನಡೆಸಿಕೊಂಡುಬರುತ್ತಿದ್ದಾರೆ. ಇಡೀ ಎ ಎಸ್ ಮೂರ್ತಿಯವರ ಇಡೀ ಕುಟುಂಬವೇ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ಕನ್ನಡ ಆಧುನಿಕ ರಂಗಭೂಮಿಯಲ್ಲಿ ಅಪರೂಪದ ವಿಚಾರ.

(ಎ ಎಂ ಪ್ರಕಾಶ್ ಅವರು ರಚಿಸಿ ನಿರ್ದೇಶಿಸಿದ ಮಕ್ಕಳ ನಾಟಕ ‘ಕಾಡುವ ಧ್ವನಿ’ಯ ಫೋಟೊ)
ನಾನು ಚಿಕ್ಕವಳಿದ್ದಾಗ ಆರನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ, ಬೇಸಿಗೆ ರಜೆಗೆ ನಿಂಬಾಳಕ್ಕೆ ಹೋದಾಗಿನ ಒಂದು ಘಟನೆ ಚೆನ್ನಾಗಿ ನೆನಪಿದೆ ನನಗೆ. ರಂಗಭೂಮಿ ಪದದ ಪರಿಚಯವೇ ಇರಲಿಲ್ಲ. ಆದರೆ ಮೋರತಗಿಯಲ್ಲಿ ಊರವರು ಪೇಟಿ ಮಾಸ್ತರ್ ಅವರ ಮುಂದಾಳತ್ವದಲ್ಲಿ ತಾವುಗಳೇ ಪಾತ್ರ ಹಂಚಿಕೊಂಡು ಆಡುವ ನಾಟಕವನ್ನು ನೋಡಿದ್ದೆ. ಅದನ್ನು ನೋಡಿದಾಗಿನಿಂದ ನನ್ನಲ್ಲಿ ನಟಿಸಬೇಕೆಂಬ ಹುಕಿ ಹುಟ್ಟಿಕೊಂಡಿತ್ತು. ಹಾಗಾಗಿ ನಾನಾಗಿಯೇ ಅಂಥದ್ದೊಂದು ಅವಕಾಶವನ್ನು ಅನ್ನಿ ಇಲ್ಲಾ ಪ್ರಸಂಗವೆನ್ನಿ ಈ ರಜಾ ದಿನಗಳಲ್ಲಿ ಸೃಷ್ಠಿಸಿಕೊಂಡಿದ್ದೆ. ನಿಂಬಾಳದಲ್ಲಿ ಸಂಜೆ ಹೊಲದ ಕೆಲಸ ಮನೆಗೆಲಸ ಎಲ್ಲ ಮುಗಿದ ಮೇಲೆ ಮನೆಯವರು, ಆಳುಕಾಳುಗಳೆಲ್ಲ ಮನೆಯ ಹೊರಗೆ ಕಟ್ಟೆಯ ಮೇಲೆ, ಅಂಗಳದಲ್ಲಿ ಕುಳಿತುಕೊಳ್ಳುವುದು ವಾಡಿಕೆ. ಉತ್ತರ ಕರ್ನಾಟಕದಲ್ಲಿ ಆ ಧಗೆಯ ದಿನಗಳಲ್ಲಿ ಮನೆಯೊಳಗೆ ಇರಲು ಯಾರಿಗಾದರೂ ಸಾಧ್ಯವೆ? ಹೀಗಾಗಿ ಎಲ್ಲರೂ ಆಚೆ ಇರುತ್ತಿದ್ದರು. ಅಂದು ಎಲ್ಲರಿಗೂ ಕೇಳುವಂತೆ, “ನಾನು ಇವತ್ತ ನಾಟ್ಕ ಮಾಡ್ತೀನಿ. ಯಾರ್ಯಾರ್ ಬರ್ತೀರಿ?” ಎಂದೆ. ಅಪ್ಪನ ಮನೆಯ ಕಡೆಯಿಂದ ಒಟ್ಟು ಇಪ್ಪತ್ತಾರು ಜನ ಕಸಿನ್ಸ್ ನಾವು. ಅವರಲ್ಲಿ ನಾಲ್ಕೈದು ಇನ್ನೂ ನಡೆಯಲೂ ಬಾರದ ಚಿಳ್ಳೆಗಳು. ಇನ್ನೊಂದೆರೆಡು ಇನ್ನೂ ಭೂಮಿಗೆ ಬಂದಿರಲಿಲ್ಲ. ಅವರನ್ನು ಹೊರತುಪಡಿಸಿ ಎಲ್ಲರೂ ಓಡಿ ಬಂದರು. ಕತೆ ಏನಿತ್ತು ಎನ್ನುವುದು ಈಗ ಸ್ಪಷ್ಟವಾಗಿ ನೆನಪಾಗುತ್ತಿಲ್ಲ. ಒಟ್ಟಿನಲ್ಲಿ ನಮನಮಗೆ ಬೇಕಾದ ಪಾತ್ರಗಳ ಹಂಚಿಕೆಯಾಯಿತು. “ಎಲ್ಲಿ ಒಮ್ಮೆ ಹೇಳ್ ನೋಡೂನು?” ಎಂದು ಎಲ್ಲರಿಗೂ ಕೇಳುತ್ತಾ, ಅವರು ತಮ್ಮ ಡೈಲಾಗ್ ಸರಿಯಾಗಿ ಹೇಳುತ್ತಿದ್ದಾರೆ ಅನ್ನುವುದು ಖಾತ್ರಿ ಆದ ಮೇಲೆ, ಮನೆಯಲ್ಲಿ ದೊಡ್ಡವರು ಉದಾರ ಮನಸಿನಿಂದ ಕೊಟ್ಟ ಟವಲ್, ಸೀರೆ, ರುಂಬಾಲುಗಳನ್ನೆ ನಮ್ಮ ಕಾಸ್ಟ್ಯೂಮ್ ಮಾಡಿಕೊಂಡೆವು. ಪಾಂಡ್ಸ್ ಪೌಡರ್ ಅಲಂಕಾರಕ್ಕೂ, ದಾಡಿ ಮೀಸೆಗೂ ಸಾಧನವಾಗಿತ್ತು. ಮನೆಯ ಎಡಬದಿಗಿದ್ದ ಹುಣಸಿಮರದ ಕೆಳಗಿನ ಕಣಕಿ ತಿಪ್ಪೆಯ ಮೇಲೆ ತಿಣಕಾಡುತ್ತಾ ತಾಡಪತ್ರಿಯನ್ನು ಎಳೆದು ತಂದು ಹಾಸಿ ವೇದಿಕೆ ಮಾಡಿಕೊಂಡೆವು. ಮತ್ತೆ ಹಿಂದೆಯೂ ಪರದೆ ಬೇಕಲ್ಲ? ಪಂಡಿತ್ ಕಾಕಾನ ಧೋತರವನ್ನ ಹುಣಸೆಮರದಿಂದ ಇನ್ನೊಂದು ಬದಿಗಿದ್ದ ಪೇರು ಗಿಡಕ್ಕೆ ಕಟ್ಟಿದೆವು. ಅಲ್ಲಿಯೇ ಬಾವಿಗೆ ಹೋಗುವ ದಾರಿಯಲ್ಲಿ ಬಲ್ಬ್ ಉರಿಯುತ್ತಿದ್ದರಿಂದ ಅದರ ಬೆಳಕಲ್ಲಿ ನಾಟಕ ಮಾಡಬಹುದು ಎನ್ನುವ ಹಂಚಿಕೆ ನನ್ನದು. ನಮ್ಮ ಚಟುವಟಿಕೆಗಳನ್ನು ಕಂಡು ರಂಗತಂಡದಲ್ಲಿ ಆಳೂಗಳೂ ಭಾಗಿಯಾಗಿ ವೇದಿಕೆ ನಿರ್ಮಾಣವಾಗಲು ನಮಗೆ ನೆರವಾದರು. ಎಲ್ಲ ಕಲಾವಿದರು ಒಬ್ಬರಾದ ಮೇಲೆ ಒಬ್ಬರು ಬಂದು ನೆನಪಿದ್ದಷ್ಟು ಡೈಲಾಗ್ ಹೊಡೆದು, ಮರೆತಿದ್ದನ್ನು ಜ್ಞಾಪಿಸಿಕೊಳ್ಳಲು ತಿಣುಕಾಡುವಾಗ ಪ್ರೇಕ್ಷಕರು ತಮಗೆ ತೋಚಿದ ಮಾತುಗಳನ್ನು ಹೇಳುತ್ತಾ, ‘ಹೂಂ, ಹಿಂಗನ್ನು’ ಅನ್ನುವುದು, ನಾವು ಹಂಗಲ್ಲ, ಅದಲ್ಲ ಬ್ಯಾರೆ ಎನ್ನುತ್ತಾ ನೆನಪಿಸಿಕೊಳ್ಳಲು ಯತ್ನಿಸುವುದು, ಅದನ್ನೋಡಿ ಅವರೆಲ್ಲ ಬಿದ್ದೂ ಬಿದ್ದೂ ನಗುವುದು. ಆ ನಗೆಗಡಲಲ್ಲೇ ಹಾಗೂ ಹೀಗೂ ಹತ್ತು ಹದಿನೈದು ನಿಮಿಷ ನಮ್ಮ ನಾಟಕ ನಡೆದು ಸಂಪನ್ನಗೊಂಡಿತ್ತು. ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿ ಗ್ಯಾದರಿಂಗಿಗಾಗಿ ಕಲಿಸಿದ್ದ ಬಂಗಾರದ ಮನುಷ್ಯ ಸಿನಿಮಾದ ‘ಆಗದು ಎಂದು ಕೈಕಟ್ಟಿ ಕುಳಿತರೆ’ ಮತ್ತು ‘ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು’ ಹಾಡುಗಳನ್ನು ಏದುಸಿರು ಬಿಡುತ್ತಲೇ ಹಾಡಿ ಕುಣಿದಿದ್ದೆ. ನಂತರ ರಜೆ ಮುಗಿಸಿ ನಾವೆಲ್ಲ ನಮ್ಮ ತಂದೆತಾಯಿ ಇದ್ದಲ್ಲಿಗೆ ಮರಳುವವರೆಗೂ ಮನೆಯವರೆಲ್ಲ ನಮ್ಮ ಡೈಲಾಗ್ಸ್ ಹೇಳಿ ಕಾಲೆಳೆದು ಮೋಜು ತೆಗೆದುಕೊಳ್ಳುವುದು ಮಾಮೂಲಿಯಾಗಿಹೋಯಿತು. ಮಕ್ಕಳೇ ವೇದಿಕೆಯಿಂದ ಮೊದಲುಗೊಂಡು ನಾಟಕ ಕಟ್ಟಿ ಆಡುವವರೆಗೆ ಹೀಗೊಂದು ನಿಜ ಅರ್ಥದ ಮಕ್ಕಳ ರಂಗಭೂಮಿ ಅಂದು ನಿರ್ಮಾಣಗೊಂಡು ಬ್ರಹ್ಮ ಕಮಲದಂತೆ ಅಂದೇ ಕರ್ಟನ್ ಎಳೆದಿದ್ದು ಹೊರಪ್ರಪಂಚಕ್ಕೆ ತಿಳಿಯಲೇಯಿಲ್ಲ.
೧೯೫೦ರಲ್ಲಿ ಭಾರತದಲ್ಲಿ ಮಕ್ಕಳ ರಂಗಭೂಮಿ ಆರಂಭವಾಗಿದ್ದು ಜವಹರಲಾಲ್ ನೆಹರುವರ ಒತ್ತಾಸೆಯಿಂದಾಗಿ, ಕೋಲ್ಕತ್ತಾದಲ್ಲಿ. ಕರ್ನಾಟಕದಲ್ಲಿ ಆರಂಭಗೊಂಡಿದ್ದು ಎಪ್ಪತ್ತರ ದಶಕದಲ್ಲಿ. ಲಂಡನ್ನಿನ ಡೆವಿಡ್ ಹಾರ್ಸ್ ಬರ್ಗ್ ದಂಪತಿಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಕ್ಕಳಿಂದಲೇ ‘ಅನ್’ಗ್ರೇಟ್’ಫುಲ್ ಮ್ಯಾನ್’ ನಾಟಕವನ್ನು ಆಡಿಸಿದ್ದು ಕರ್ನಾಟಕದಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿತ್ತಂತೆ. ಇದರಿಂದ ಪ್ರೇರಿತರಾದ ವಿಮಲಾ ರಂಗಾಚಾರ್ ಸರಕಾರದ ಮೇಲೆ ಮಕ್ಕಳ ರಂಗಭೂಮಿ ಸ್ಥಾಪಿಸಬೇಕು ಎಂದು ಒತ್ತಡ ಹೇರಿದ್ದರ ಪರಿಣಾಮವಾಗಿ ೧೯೭೨ರಲ್ಲಿ ಸರಕಾರಿ ಕಚೇರಿಯೊಂದು ‘ಬಾಲಭವನ’ವಾಗಿ ಪರಿವರ್ತನೆಗೊಂಡು ಇಲ್ಲಿ ಮಕ್ಕಳ ರಂಗಭೂಮಿ ಬೆಳೆಯಲು ಅದು ದಾರಿಯಾಯಿತು. ತದನಂತರದಲ್ಲಿ ಬಿ ವಿ ಕಾರಂತರು ‘ಬೆನಕ’ ಮಕ್ಕಳ ನಾಟಕ ಕೇಂದ್ರ ಶುರು ಮಾಡಿದರು. ಪ್ರೇಮಾ ಕಾರಂತ ಅವರು ಅದನ್ನು ತುಂಬಾ ಪ್ರೀತಿಯಿಂದ ಬೆಳೆಸಿದರು.
ಈಗ ಮಕ್ಕಳಿಗಾಗಿ ಸಾಕಷ್ಟು ಬೇಸಿಗೆ ಶಿಬಿರಗಳು ಅಭಿನಯ ಕಲಿಸಲೆಂದೇ ಶುರುವಾಗಿವೆ. ಇದರಿಂದ ವ್ಯಕ್ತಿತ್ವ ವಿಕಸನದ ಸಾಧ್ಯತೆ ಎಷ್ಟು ಎಂದು ಕೇಳಿದರೆ ನನ್ನಲ್ಲಿ ಸರಿಯಾದ ಉತ್ತರವಿಲ್ಲ. ಎಲ್ಲವೂ ಯಾವುದೋ ಮಹತ್ತರ ಉದ್ದೇಶಕ್ಕಾಗಿಯೇ ಇರಬೇಕಾಗಿಲ್ಲ. ಆದರೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಜನರ ನಡುವೆ ಬೆರೆಯಲು ತುಸು ಧೈರ್ಯ, ಒಂದು ಮಟ್ಟಿಗಿನ ಆತ್ಮವಿಶ್ವಾಸ ಚಿಗುರೊಡೆಯುವುದಂತೂ ನಿಜ. ಸ್ಪಷ್ಟ ಉಚ್ಚಾರಣೆ, ಆಂಗಿಕ ಅಭಿನಯದ ಅಭ್ಯಾಸದಿಂದ ಮಕ್ಕಳಲ್ಲಿ ಒಂದಿಷ್ಟು ಚಲನಶೀಲತೆ ಹುಟ್ಟಿಕೊಳ್ಳಬಹುದು. ಶಿಬಿರದಲ್ಲಿ ನಾಟಕ ಕಟ್ಟುವ ಪ್ರಕ್ರಿಯೆಯನ್ನು ಗಮನಿಸುತ್ತ ಒಂದಿಷ್ಟು ಸೃಜನಶೀಲತೆ ಹುಟ್ಟಿಕೊಳ್ಳಬಹುದು. ಆದರೆ ಇವೆಲ್ಲ ಸಾಧ್ಯವಾಗುವುದು ರಂಗಭೂಮಿ ಮಕ್ಕಳ ಅಭಿರುಚಿಯಾದಾಗ. ಹಾಗಾದರೆ ರಂಗಭೂಮಿಯಲ್ಲಿ ಪಾಲ್ಗೊಳ್ಳದ ಮಕ್ಕಳಲ್ಲಿ ಈ ಎಲ್ಲ ಗುಣಗಳು ಇರಲಾರವೇ ಎನ್ನಬೇಡಿ. ನಾನು ಇಲ್ಲಿನ ಸಾಧ್ಯತೆಗಳ ಬಗ್ಗೆ ಮಾತ್ರ ಮಾತಾಡುತ್ತಿದ್ದೇನೆ.

ಕೇವಲ ಕೆಲ ಬೇಸಿಗೆ ಶಿಬಿರಗಳು, ಅರೆ ವಾರ್ಷಿಕ ಕೋರ್ಸುಗಳು, ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳು ಆಡುವ ನಾಟಕಗಳು ಮಾತ್ರವಿದ್ದರೆ ಸಾಲದು. ಇದನ್ನೂ ಮೀರಿ ಮಕ್ಕಳ ರಂಗಭೂಮಿ ಬೆಳೆಯಬೇಕಿದೆ. ಕೇವಲ ಕಲೆಯ ದೃಷ್ಟಿಯಿಂದ ಮಾತ್ರವಲ್ಲ, ಮಕ್ಕಳೊಳಗಿನ ಆತ್ಮವಿಶ್ವಾಸ ಹೆಚ್ಚಾಗಲು, ಭಾಷಾ ಕಲಿಕೆಗೆ, ಸ್ಪಷ್ಟ ಉಚ್ಚಾರಣೆಗೆ, ಪಾತ್ರಗಳ ಮೂಲಕ ಭಿನ್ನ ವ್ಯಕ್ತಿತ್ವಗಳನ್ನು ಅರಿಯುವುದಕ್ಕೆ, ನಾಲ್ಕು ಜನರೊಂದಿಗೆ ಬೆರೆಯುವುದಕ್ಕೆ, ಆರೋಗ್ಯಕರ ಮನಸ್ಥಿತಿ ಬೆಳೆಸಿಕೊಳ್ಳುವುದಕ್ಕೆ ಮಕ್ಕಳ ರಂಗಭೂಮಿ ಪೂರಕವಾಗಬಲ್ಲದು. ಬಣ್ಣ ಮತ್ತು ಬೆಳಕಿನ ಜೋಡಿಯ ಮೋಡಿ ಸಮಸ್ತ ಪ್ರಜೆಗಳ ಮೇಲಾಗಲಿ. ರಂಗಭೂಮಿಗೆ ಜಯವಾಗಲಿ.
(ಫೋಟೋ: ಲೇಖಕಿ ನಿರ್ದೇಶಿಸಿದ್ದ ಮಕ್ಕಳ ನಾಟಕ ‘ಡಾಣಾ ಡಂಗುರ’ ನಾಟಕದ ದೃಶ್ಯ. ರಚನೆ: ವೈದೇಹಿ)

ಲೇಖಕಿ, ರಂಗ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರು. ನೀಲ ಕಡಲ ಭಾನು’ (ಕವನ ಸಂಕಲನ) ‘ಹೇಳತೇವ ಕೇಳ’ (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ‘ಮುಕ್ಕು ಚಿಕ್ಕಿಯ (ಕಾದಂಬರಿ) ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ ‘ಬೇಬಿ’ (ಅನುವಾದಿತ ನಾಟಕ) ಇವರ ಪ್ರಕಟಿತ ಕೃತಿಗಳು. ‘ಜನದನಿ’ (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಸಂಸ್ಥೆ) ಸಂಸ್ಥಾಪಕಿ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
