ಕ್ಷಣ ಮೌನ. ಉರ್ಸುಲಾಳ ಜೊತೆ ಮಾತನಾಡದೆಯೇ ಹಾಯಾಗಿ ಕುಳಿತಿರಬಹುದು. ಅವಳು ಪೆದ್ದುಪೆದ್ದಾಗಿ ಏನೇನೋ ಪ್ರಶ್ನೆಗಳನ್ನು ಕೇಳುವುದಿಲ್ಲ. ತನ್ನ ಮೇಲೆ ಹುಡುಗನೊಬ್ಬ ಬಂದೆರಗಿದ ಘನವಾದ ವಿಷಯವನ್ನು ಹಂಚಿಕೊಳ್ಳಲು ಮಾತ್ರ ಬಾಯಿ ತೆರೆಯುವಳು. ಕೆಲವೊಮ್ಮೆ ನಾವಿಬ್ಬರೂ ಒಂದೇ ಬೆಂಚಿನ ಮೇಲೆ ಪಕ್ಕಪಕ್ಕದಲ್ಲೇ ಸುಮಾರು ಹೊತ್ತು ಕುಳಿತು ಒಂದೇ ಒಂದು ಶಬ್ದವನ್ನೂ ಉಸುರದೆ ಹೋದಂತಹ ದಿನಗಳಿವೆ. ನೀರಿನಿಂದ ಹೊರಬಂದು ಕಣ್ಣುಗಳನ್ನು ಮುಚ್ಚಿಕೊಂಡು ಬಿಸಿಲಿನ ಶಾಖಕ್ಕೆ ಮೌನವಾಗಿ ಮೈಯೊಡ್ಡಿ ಕುಳಿತಂತಹ ದಿನಗಳಿವೆ.
ಜರ್ಮನಿಯ ಕಾರೊಲೀನ ವಾಲ್‌ ಬರೆದ ‘22 ಬಾನೆನ್‌ʼ ಕಾದಂಬರಿಯನ್ನು ಹರ್ಷ ರಘುರಾಮ್‌ ಜರ್ಮನ್‌ ಭಾಷೆಯಿಂದ ನೇರವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಈ ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

‘ನನ್ನ ತಂಗಿ ಈಡಾʼ – ಹೊಸ ಜರ್ಮನ್‌ ಕಾದಂಬರಿ ‘22 ಬಾನೆನ್‌ʼನ ನೇರ ಕನ್ನಡ ಅನುವಾದ. ಕನ್ನಡದ ಮಟ್ಟಿಗೆ ಹೊಸ ಭಾಷೆಯೊಂದರಿಂದ ಸಮಕಾಲೀನ ಕಾದಂಬರಿಯನ್ನು ಅನುವಾದಕ್ಕಾಗಿ ಆಯ್ಕೆ ಮಾಡಿಕೊಳ್ಳುವುದರಲ್ಲೇ ಹಲವಾರು ಸವಾಲುಗಳು ಎದುರಾಗುತ್ತವೆ. ಅದರ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಜರ್ಮನ್‌ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡುವ ಅವಕಾಶ ತಾನಾಗಿಯೇ ಹುಡುಕಿಕೊಂಡು ಬಂದದ್ದು ನನ್ನ ಅದೃಷ್ಟ. ಅನುವಾದಕ್ಕೆ ಸರಿಹೊಂದುವ ಕಾದಂಬರಿಯನ್ನು ಹುಡುಕಲು ಬರೋಬ್ಬರಿ ಎರಡು ತಿಂಗಳ ಕಾಲ ಹಿಡಿಯಿತು. ಸ್ತ್ರೀವಾದಿ ನೆಲೆಯಲ್ಲಿ ರಚಿತವಾದ ಸಮಕಾಲೀನ ಕಾದಂಬರಿಯನ್ನು ಆಯ್ಕೆ ಮಾಡುವುದು ಮೊದಲ ಆದ್ಯತೆಯಾಗಿತ್ತು. ಪ್ರಕಾಶಕರಿಗೆ ಇನ್ನೂರು ಪುಟಗಳನ್ನು ಮೀರದ ಕಾದಂಬರಿ ಬೇಕಿತ್ತು. ವಿಶ್ವಯುದ್ಧ, ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ಹಿನ್ನೆಲೆಯಲ್ಲಿ ಬರೆದ ಹಲವಾರು ಹೊಸ ಕಾದಂಬರಿಗಳು ಇವೆ. ಜರ್ಮನಿಯೆಂದರೆ ಈ ವಿಷಯಗಳೇ ಹೆಚ್ಚು ಪ್ರಚಲಿತದಲ್ಲಿರುವಾಗ ಇಂದಿನ ಜರ್ಮನ್‌ ಜನಜೀವನವನ್ನು ನಿರೂಪಿಸುವ ಒಂದು ಪುಸ್ತಕವನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಿದೆ. ನಾನು ಜರ್ಮನ್‌ ಅಆಇಈ ಮೊದಲಿಗೆ ಕಲಿತದ್ದು ಹತ್ತು ವರ್ಷಗಳ ಹಿಂದೆ, ಸುಮಾರು 3-4 ವರ್ಷಗಳಿಂದೆ ಭಾಷೆಯ ಮೇಲೆ ತಕ್ಕ ಮಟ್ಟಿಗೆ ಹಿಡಿತ ಸಾಧಿಸಲು ಸಾಧ್ಯವಾಗಿದೆಯಾದರೂ, ಸಾಹಿತ್ಯದ ಸಮಗ್ರ ಅವಲೋಕನ ಮಾಡಿ ನಂತರ ಪುಸ್ತಕದ ಆಯ್ಕೆ ಮಾಡುವುದು ಸಾಧ್ಯವಿರಲಿಲ್ಲ. ಜರ್ಮನ್‌ ಸಾಹಿತ್ಯದಲ್ಲಿ ಆಸಕ್ತಿಯಿದ್ದ ಗೆಳೆಯ ಗೆಳತಿಯರನ್ನು ಕೇಳಿದಾಗ ಅವರೊಂದಿಷ್ಟು ಕ್ಲಾಸಿಕ್‌ಗಳ ಪಟ್ಟಿಯನ್ನೇನೋ ಕೊಟ್ಟರು, ಆದರೆ ಜರ್ಮನ್‌ ಓದುಗರಿಗೆ ಕನ್ನಡಕ್ಕೆ ಯಾವ ಪುಸ್ತಕ ಒಗ್ಗಿಕೊಳ್ಳುತ್ತದೆ, ಯಾವುದು ಅಲ್ಲ ಎಂದು ಹೇಗೆ ತಿಳಿಯಬೇಕು?

(ಹರ್ಷ ರಘುರಾಮ್‌)

ತೀರಾ ಇತ್ತೀಚಿನ ಪುಸ್ತಕವೊಂದನ್ನು ನಾನೇ ಹುಡುಕಬೇಕೆಂದು ನಿರ್ಧರಿಸಿ ಪುಸ್ತಕದಂಗಡಿಗಳಿಗೆ ಭೇಟಿ ಕೊಟ್ಟೆ, ಯಾವುದೂ ಸರಿ ಹೋಗಲಿಲ್ಲ. ಕೊನೆಗೆ ನಾನು ಮೊರೆಹೊಕ್ಕಿದ್ದು ‘ನ್ಯೂ ಬುಕ್ಸ್‌ ಇನ್‌ ಜರ್ಮನ್‌ʼ ಎಂಬ ವೆಬ್‌ಸೈಟನ್ನು. ಇದರಲ್ಲಿ ಇತ್ತೀಚೆಗೆ ಬಿಡುಗಡೆಯಾದ ಅಥವಾ ಇನ್ನೇನು ಬಿಡುಗಡೆಯಾಗಲಿರುವ ಜರ್ಮನ್‌ ಪುಸ್ತಕಗಳನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಮಾಡುತ್ತಾರೆ. ಪುಸ್ತಕದ ಮೊದಲ ಕೆಲವು ಪುಟಗಳು ಓದಲು ಸಿಗುತ್ತವೆ, ಜೊತೆಗೆ ಆಯ್ದ ಭಾಗವನ್ನು ಮತ್ತು ಪ್ರಕಾಶಕರಿಗೆ ಬೇಕಾದ ಮಾಹಿತಿಯನ್ನು ಇಂಗ್ಲೀಷಿನಲ್ಲಿ ಕೊಡುತ್ತಾರೆ. (ಕನ್ನಡಕ್ಕೂ ಈ ರೀತಿಯ ವೆಬ್‌ಸೈಟ್ ಇದ್ದರೆ ಕನ್ನಡದಿಂದ ಅನುವಾದ ಮಾಡುವವರಿಗೆ ಅನುಕೂಲವಾಗುತ್ತದೆ. ಆಸಕ್ತಿ ಹಾಗೂ ಸಮಯ ಇದ್ದವರು ಸುಲಭವಾಗಿ ಮಾಡಬಹುದು). ಆಗ ಸಿಕ್ಕಿದ್ದು ಕಾರೊಲೀನ ವಾಲ್‌ ಬರೆದ ‘22 ಬಾನೆನ್‌ʼ. ಈ ಪುಸ್ತಕ ನನಗೆ ಮೊದಲಿಗೆ ಕಣ್ಣಿಗೆ ಬಿದ್ದದ್ದು 2023ರ ಮಾರ್ಚ್‌ನ ಕೊನೆಯಲ್ಲಿ, ಪುಸ್ತಕದ ಬಿಡುಗಡೆ ದಿನಾಂಕ ಏಪ್ರಿಲ್‌ 10ಕ್ಕೆ ನಿಗದಿಯಾಗಿತ್ತು. ಅಷ್ಟರಲ್ಲೇ ಮೂಲ ಪುಸ್ತಕದ ಪ್ರಕಾಶಕರು ಮೊದಲ 20 ಪುಟಗಳನ್ನು ತಮ್ಮ ವೆಬ್‌ಸೈಟಿನಲ್ಲಿ ಬಿಡುಗಡೆ ಮಾಡಿದ್ದರು. ಅದನ್ನು ಓದಿ ನನಗೆ ಇದೇ ಪುಸ್ತಕ ಅನುವಾದಕ್ಕೆ ಸೂಕ್ತ ಎಂದು ಖಾತ್ರಿಯಾಯಿತು. ಛಂದ ಪುಸ್ತಕದ ವಸುಧೇಂದ್ರರಿಗೆ ಇವಿಷ್ಟನ್ನು ವಿವರಿಸಿದೆ, ನನ್ನ ಮೇಲೆ ನಂಬಿಕೆಯಿಟ್ಟು ಅವರೂ ಹೂಂ ಎಂದರು. ಇನ್ನೊಂದು ವಾರ ಕಳೆದು ಪುಸ್ತಕ ಬಿಡುಗಡೆಯಾಯಿತು, ತಕ್ಷಣವೇ ಕೊಂಡು 3 ದಿನಗಳಲ್ಲೇ ಓದಿ ಮುಗಿಸಿದೆ, ನನ್ನ ಆಯ್ಕೆಯ ಬಗೆಗಿನ ನಂಬಿಕೆ ಮತ್ತಷ್ಟು ಬಲವಾಯಿತು. ಕೆಲವೇ ಕೆಲವು ವಾರಗಳಲ್ಲಿ ‘22 ಬಾನೆನ್’ ಪುಸ್ತಕವು‌ ಬೆಸ್ಟ್‌ಸೆಲ್ಲರ್‌ ಪಟ್ಟಿ ಏರಿ, ಮೊದಲನೆಯ ಸ್ಥಾನದಲ್ಲಿ ವಾರಗಟ್ಟಲೆ ರಾರಾಜಿಸಿ, ಲೇಖಕಿಗೆ ಬಹಳಷ್ಟು ಹೆಸರು ಹಾಗೂ ಪ್ರಶಸ್ತಿಗಳನ್ನು ತಂದುಕೊಡುತ್ತದೆ ಎಂಬ ಯಾವ ಕಲ್ಪನೆಯೂ ನಮಗೆ ಇರಲಿಲ್ಲ. ಈ ಕಾದಂಬರಿಯ ಇಂಗ್ಲೀಷ್‌ ಅನುವಾದ ಇನ್ನೂ ಹೊರಬಂದಿಲ್ಲ, ಅಷ್ಟರಲ್ಲೇ ಕನ್ನಡಕ್ಕೆ ಬಂದಿದೆ ಎಂಬುದು ನಮ್ಮ ಹೆಗ್ಗಳಿಕೆ.

‘22 ಬಾನೆನ್‌ʼ ಪುಸ್ತಕದ ಕನ್ನಡ ಅನುವಾದ ‘ನನ್ನ ತಂಗಿ ಈಡಾʼ ಮಾರುಕಟ್ಟೆಗೆ ಬಂದು ಈಗ ಮೂರು ತಿಂಗಳಾಗಿವೆ. ನನ್ನ‌ ಚೊಚ್ಚಲ ಕೃತಿಯನ್ನು ಕನ್ನಡದ ಓದುಗರು ಬಹಳ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಇದರಿಂದ ಉತ್ತೇಜನಗೊಂಡು ಮತ್ತೊಂದು ಪುಸ್ತಕವನ್ನು ಅನುವಾದ ಮಾಡಲು ಕೈಗೆತ್ತಿಕೊಂಡಿದ್ದೇನೆ‌. ಇದೂ ಸಹ ಸಮಕಾಲೀನ ಜರ್ಮನ್ ಕಾದಂಬರಿ, ಆದರೆ ಕಥಾವಸ್ತು ‘ಈಡಾ’ಗಿಂತ ಭಿನ್ನ. ಹೆಚ್ಚಿನ ಮಾಹಿತಿಯನ್ನು ಮುಂಬರುವ ದಿನಗಳಲ್ಲಿ ಕೊಡುತ್ತೇನೆ. ಮುಂದೊಂದು ದಿನ ಜರ್ಮನ್‌ ಕಾದಂಬರಿಯೊಂದನ್ನು ಕನ್ನಡಕ್ಕೆ ಅನುವಾದ ಮಾಡುತ್ತೇನೆ, ನನ್ನ ನೆಚ್ಚಿನ ಲೇಖಕರೇ ಅದರ ಪ್ರಕಾಶಕರಾಗುತ್ತಾರೆ, ನಾನು ಹತ್ತು ವರ್ಷದ ಹಿಂದೆ ಜರ್ಮನ್ ಕಲಿತ ಗ್ಯೋಥೆ ಇನ್ಸ್ಟಿಟ್ಯೂಟಿನಲ್ಲಿ ಅವರೊಟ್ಟಿಗೆ ವೇದಿಕೆಯ ಮೇಲೆ ಕೂತು ಚರ್ಚಿಸುವ ಅವಕಾಶ ಸಿಗುತ್ತದೆ ಎಂದು ನಾನು ಎರಡು ವರ್ಷಗಳ ಹಿಂದಿನವರೆಗೆ ಊಹಿಸಿರಲೂ ಇಲ್ಲ‌. ಅವೆಲ್ಲವೂ ಈಗ ನಡೆದಿದೆ, ಆದರೂ ಇವೆಲ್ಲಾ ಕನಸೆಂಬಂತೆ ಭಾಸವಾಗುತ್ತಿದೆ.

*****

ಸೂಪರ್‌ಮಾರ್ಕೆಟ್‌ನ ಕೌಂಟರ್‌ನಲ್ಲಿ ಕುಳಿತಾಗ ನಾನೊಂದು ಆಟವಾಡುತ್ತೇನೆ. ಗ್ರಾಹಕರು ಚಲಿಸುವ ಪಟ್ಟಿಯ ಮೇಲೆ ಇಟ್ಟ ವಸ್ತುಗಳು ಸಾಲಾಗಿ ನನ್ನ ಬಳಿಗೆ ಬಂದಾಗ ಸ್ಕ್ಯಾನ್ ಮಾಡುತ್ತಾ ತಲೆಯನ್ನು ಮೇಲೆತ್ತದೆ ಮುಂದೆ ನಿಂತಿರುವ ವ್ಯಕ್ತಿಯನ್ನು ಮನಸ್ಸಿನಲ್ಲಿಯೇ ವರ್ಣಿಸುತ್ತೇನೆ. ಈ ದಿನ ಪಟ್ಟಿಯ ಮೇಲೆ ಓಟ್ಸ್ ಹಾಲು, ಬಾದಾಮಿ ಬೀಜದ ಹಾಲು, ಗೋಡಂಬಿ ಪೇಸ್ಟ್, ಮಂಜುಗಟ್ಟಿಸಿದ ರಾಸ್ಬೆರಿ ಹಣ್ಣು, ಹುಮ್ಮುಸ್, ದುಬಾರಿ ಓಟ್ಸ್, ಚಿಯಾ ಬೀಜ, ಬಾಳೆಹಣ್ಣು, ಗೋಧಿ ನೂಡಲ್ಸ್, ಅವೋಕಾಡೋ… ಅವೋಕಾಡೋ… ಅವೋಕಾಡೋ… ಬಂದ ತಕ್ಷಣ ಮೂವತ್ತರ ಆಸುಪಾಸಿನ ಸಣಕಲು ಹುಡುಗ ಇರಬಹುದು, ಫ್ರೇಮ್ ಇಲ್ಲದ ಕನ್ನಡಕ, ಲಿವೈಸ್ ಗುರುತಿನ ಶರ್ಟು ಧರಿಸಿದ್ದಾನೆ ಎಂದು ಊಹಿಸಿದೆ. “30 ಯೂರೋ 72 ಸೆಂಟ್” ಎಂದು ಕತ್ತೆತ್ತಿದೊಡನೆ ಲಿವೈಸ್ ಗುರುತು ಕಂಡಿತು. ಏನೋ ದೊಡ್ಡ ಸಾಧನೆ ಮಾಡಿದಷ್ಟು ಹೆಮ್ಮೆಯಾಯಿತು. ಆದರೆ ಅದು ಹುಡುಗನಲ್ಲ, ಹುಡುಗಿಯಾಗಿದ್ದಳು. ಏನೇ ಇರಲಿ, ಕೇವಲ ಖರೀದಿಸಿದ ವಸ್ತುಗಳನ್ನು ನೋಡಿ ಶರ್ಟಿನ ಗುರುತನ್ನು ಸರಿಯಾಗಿ ಊಹಿಸಿದ್ದು ಹೆಮ್ಮೆಪಡುವಂತಹ ವಿಷಯವೇ ಸರಿ. ಇದಾದ ನಾಲ್ಕು ಗಂಟೆಗಳ ನಂತರ ನನ್ನ ಕೆಲಸದ ಶಿಫ್ಟ್ ಮುಗಿಯಿತು. ನಾನು ಆಬೆಂಡ್‌ಬ್ರೋಟ್, ಸಂಜೆಯೂಟಕ್ಕೆ ಬೇಕಾದ ಸಾಮಾನುಗಳನ್ನು ಶಾಪಿಂಗ್ ಬುಟ್ಟಿಗೆ ಹಾಕಿಕೊಂಡೆ. ಮೀರಾಕೋಲಿ ಗುರುತಿನ ಸ್ಪಗೆಟ್ಟಿ ಬಲು ದುಬಾರಿ. ಅದಕ್ಕೆ ಬದಲಾಗಿ ಅದರ ಅಗ್ಗದ ಅವತಾರವಾದ ಚೀಪ್ ಅಂಡ್ ಬೆಸ್ಟ್ ಗುರುತಿನ ಸ್ಪಗೆಟ್ಟಿ, ಚೀಪ್ ಅಂಡ್ ಬೆಸ್ಟ್ ಓಟ್ಸ್, ಅಗ್ಗದ ವೆನಿಲಾ ಸಾಸ್ ಮತ್ತು ಗಟ್ಟಿ ಹಾಲು, ಇವಿಷ್ಟನ್ನು ಕೌಂಟರ್‌ನ ಬಳಿ ಇಟ್ಟೆ. ಕೌಂಟರ್‌ನಲ್ಲಿದ್ದ ಫ಼್ರೌ ಬಾಖ್ “4 ಯೂರೋ 6 ಸೆಂಟ್” ಎಂದರು. ಅವರಿಗೆ ಹಣ ತೆತ್ತು ಕೊಂಡದ್ದನ್ನು ಬ್ಯಾಗಿನಲ್ಲಿ ತುರುಕಿಕೊಂಡು ಟ್ರಾಮ್ ನಿಲ್ದಾಣದ ಕಡೆಗೆ ಓಡಿದೆ.

ನನ್ನ ದಿನದ ವೇಳಾಪಟ್ಟಿಯಲ್ಲಿ ಟ್ರಾಮ್, ಕಾಲೇಜು, ಹೋಮ್‌ವರ್ಕ್, ನೋಟ್ಸ್ ಇವುಗಳಿಗೆ ಇಂತಿಷ್ಟೇ ಸಮಯ ಎಂದು ಮೀಸಲಾಗಿತ್ತು. ನನ್ನ ಈ ಕಟ್ಟುನಿಟ್ಟಾದ ದಿನಚರಿಯಲ್ಲಿ ನಾಲ್ಕರಲ್ಲಿ ಮೂರು ಬಾರಿ ಕೈಕೊಡುತ್ತಿದ್ದ ಜ಼ರಾಕ್ಸ್ ಮಷೀನ್‌ಗೆ ಸಮಯ ಇರಲೇ ಇಲ್ಲ. “ಪೇಪರ್ ಜಾಮ್!” ಮಷೀನಿನ ಪರದೆಯ ಮೇಲೆ ಕಂಡಿತು. ಆಕ್ರೋಶದಿಂದ ಮುಷ್ಟಿಯನ್ನು ಬಿಗಿಮಾಡಿ ಮಷೀನನ್ನು ದುರುಗುಟ್ಟಿ ನೋಡಿದೆ. ಉಪಯೋಗಕ್ಕೆ ಬಾರದ ಬಿಳಿಯ ಬೊಡ್ಡೆಯಂತಹ ಮಷೀನ್‌ ಅನ್ನು ಗುದ್ದಿ ಚೂರುಚೂರು ಮಾಡಿಬಿಡುವಷ್ಟು ಕೋಪ ಉಕ್ಕಿಬಂದಿತು.

ಟ್ರಾಮ್, ಹೋಮ್‌ವರ್ಕ್, ಈಜು, ನನ್ನ ತಂಗಿ ಈಡಾ. ಹೋಮ್‌ವರ್ಕ್ ಲೆಕ್ಕಗಳನ್ನು ಮಾಡುವುದು ನನಗೆ ಸುಲಭವೇ! ಕಾಲೇಜಿನಿಂದ ಈಜುಕೊಳಕ್ಕೆ ಹೋಗಲು ತಗಲುವ 69 ನಿಮಿಷಗಳಲ್ಲಿ, ಟ್ರಾಮಿನಲ್ಲೇ ಕುಳಿತು ಮುಗಿಸಬಲ್ಲೆ ಎಂಬ ವಿಶ್ವಾಸವಿತ್ತು. ಹೊರಾಂಗಣ ಈಜುಕೊಳದ ಹತ್ತಿರ ಬಂದಿದ್ದೇ ಕ್ಲೋರಿನ್‌ನ ವಾಸನೆ ಮೂಗಿಗೆ ಬಡಿಯಿತು. ಒಮ್ಮೆ ನಿಂತು ದೀರ್ಘವಾಗಿ ಉಸಿರೆಳೆದುಕೊಂಡೆ. ನನ್ನ ಬ್ಯಾಗನ್ನು ಬೆಂಚಿನ ಮೇಲೆ ಉರ್ಸುಲಾಳ ಬುಟ್ಟಿಯ ಪಕ್ಕಕ್ಕೆ ಎಸೆದು ಲಗುಬಗೆಯಿಂದ ಈಜುಡುಗೆ ಧರಿಸಿದೆ. ತಲೆ ಮುಂದಾಗಿ ನೀರಿಗೆ ಧುಮುಕಿ ನೀರು ಆಳವಿದ್ದ ಜಾಗದಲ್ಲಿ ನೆಲದವರೆಗೂ ಹೋಗಿ ಕೆಳಗೆ ಕುಳಿತು ಮೇಲೆ ನಡೆಯುತ್ತಿದ್ದುದನ್ನೆಲ್ಲಾ ಗಮನಿಸಿದೆ. ಅಡ್ಡಾದಿಡ್ಡಿ ಬಡಿಯುತ್ತಿದ್ದ ಹಲವಾರು ಎಳೆಯ ಕಾಲುಗಳು, ಲೀಲಾಜಾಲವಾಗಿ ಆಡುತ್ತಿದ್ದ ನುರಿತ ಮುದಿಯ ಕಾಲುಗಳು, ಆಗಾಗ ಮೇಲಿನಿಂದ ನೀರಿನೊಳಗೆ ಧುಮುಕುತ್ತಿದ್ದ ಮಕ್ಕಳ ಶರೀರಗಳು, ಈಜುಕೊಳದ ಅಂಚಿನ ಬಳಿ ಆಡುತ್ತಿದ್ದ ಎಳೆ-ಮುದಿ ಕಾಲುಗಳ ಮಿಶ್ರಿತ ಗುಂಪುಗಳನ್ನು ಕುತೂಹಲದಿಂದ ನೋಡಿದೆ. ಕೊಳದ ತಳದಿಂದ ನೋಡಿದರೆ ಈ ಕಾಲು ಬಡಿಯುವ ಆಟವು ಅಲ್ಲಿದ್ದವರಿಗೆ ಮುದ ನೀಡುವಂತೆ ತೋರುತ್ತಿತ್ತು. ಕಾಲುಗಳನ್ನು ನೆಲಕ್ಕೂರಿ ಮೇಲಕ್ಕೆ ಜಿಗಿದೆ, ರೂಢಿಯಂತೆ ಕೊಳದ ಉದ್ದಕ್ಕೂ 22 ಸುತ್ತುಗಳನ್ನು ಈಜತೊಡಗಿದೆ. ಒಂದಿಪ್ಪತ್ತು ಸುತ್ತುಗಳನ್ನು ಈಜಿದ ಮೇಲೆ ಇಪ್ಪತ್ತೋ ಇಪ್ಪತ್ತೆರಡೋ ಸರಿಯಾಗಿ ಲೆಕ್ಕ ಸಿಗದೇ ತಪ್ಪು ಕಾಣಿಕೆಯಾಗಿ ಐದು ಹೆಚ್ಚುವರಿ ಸುತ್ತುಗಳನ್ನು ಈಜಿದೆ.

ಉರ್ಸುಲಾ: ಸ್ವಲ್ಪ ಹೊತ್ತಿನ ಮುಂಚೆ ನಾನು ಕೊಳದಲ್ಲಿದ್ದಾಗ ಸಣ್ಣ ಹುಡುಗನೊಬ್ಬ ನನ್ನ ಮೇಲೆ ಬಂದೆರಗಿದ.

ಉರ್ಸುಲಾ ಹೇಳಿದ್ದು ನನಗೆ ಒಮ್ಮೆಗೇ ಅರ್ಥವಾಗಲಿಲ್ಲ.

ಉರ್ಸುಲಾ: ನನ್ನ ಪಾಡಿಗೆ ನಾನು ಕೊಳದ ಒಂದು ಬದಿಯಿಂದ ಇನ್ನೊಂದು ಬದಿಗೆ ಸುತ್ತುಗಳನ್ನು ಈಜುತ್ತಿದ್ದೆ. ನೋಡನೋಡುತ್ತಿದಂತೆಯೇ ಕೆಂಗೂದಲಿನ ತುಂಟನೊಬ್ಬ ನಿಧಾನವಾಗಿ ಮೂರು ಹೆಜ್ಜೆ ಹಿಂದಕ್ಕಿಟ್ಟವನೇ ಓಡಿಬಂದು ನನ್ನ ಮೇಲೆಯೇ ಜಿಗಿದುಬಿಟ್ಟ.

ನಾನು: ಛಿ!

ಉರ್ಸುಲಾ: ಅಷ್ಟೂ ಹೊತ್ತು ನಮ್ಮ ಕಣ್ಣುಗಳು ಸಂಧಿಸಿಯೇ ಇದ್ದವು. ಅವನು ಮೂರು ಹೆಜ್ಜೆ ಹಿಂದಕ್ಕೆ ಇಡುವಾಗಲೂ ನನ್ನನ್ನೇ ನೋಡುತ್ತಿದ್ದ. ಅವನು ಬೇಕಂತಲೇ ಮಾಡಿದ್ದು.

ನಾನು ಹೌದೆಂದು ತಲೆದೂಗಿದೆ.

ನಾನು: ನಿನ್ನ ಮೇಲೆ ಜಿಗಿಯಬೇಕೆಂಬ ಆಸೆಯಿತ್ತೇನೋ ಅವನಿಗೆ.

ಉರ್ಸುಲಾ: ಹೂಂ.

ಕ್ಷಣ ಮೌನ.

ನಾನು: ಯಾರವನು? ನನಗೆ ತೋರಿಸು.

ಉರ್ಸುಲಾ ಸರಿಯೆಂದು ತಲೆದೂಗಿದಳು.

ನಾನು: ನಾನು ಅವನ ಮೇಲೆ ಜಿಗಿಯುವೆ.

ಉರ್ಸುಲಾ ಸರಿಯೆಂದು ತಲೆದೂಗಿದಳು.

ಕ್ಷಣ ಮೌನ. ಉರ್ಸುಲಾಳ ಜೊತೆ ಮಾತನಾಡದೆಯೇ ಹಾಯಾಗಿ ಕುಳಿತಿರಬಹುದು. ಅವಳು ಪೆದ್ದುಪೆದ್ದಾಗಿ ಏನೇನೋ ಪ್ರಶ್ನೆಗಳನ್ನು ಕೇಳುವುದಿಲ್ಲ. ತನ್ನ ಮೇಲೆ ಹುಡುಗನೊಬ್ಬ ಬಂದೆರಗಿದ ಘನವಾದ ವಿಷಯವನ್ನು ಹಂಚಿಕೊಳ್ಳಲು ಮಾತ್ರ ಬಾಯಿ ತೆರೆಯುವಳು. ಕೆಲವೊಮ್ಮೆ ನಾವಿಬ್ಬರೂ ಒಂದೇ ಬೆಂಚಿನ ಮೇಲೆ ಪಕ್ಕಪಕ್ಕದಲ್ಲೇ ಸುಮಾರು ಹೊತ್ತು ಕುಳಿತು ಒಂದೇ ಒಂದು ಶಬ್ದವನ್ನೂ ಉಸುರದೆ ಹೋದಂತಹ ದಿನಗಳಿವೆ. ನೀರಿನಿಂದ ಹೊರಬಂದು ಕಣ್ಣುಗಳನ್ನು ಮುಚ್ಚಿಕೊಂಡು ಬಿಸಿಲಿನ ಶಾಖಕ್ಕೆ ಮೌನವಾಗಿ ಮೈಯೊಡ್ಡಿ ಕುಳಿತಂತಹ ದಿನಗಳಿವೆ. ಹೊರಡುವಾಗ ಕೇವಲ ತಲೆದೂಗಿ ವಿದಾಯ ಹೇಳಿದಂತಹ ದಿನಗಳೂ ಇವೆ.

ಉರ್ಸುಲಾ: ನಿನ್ನ ತಂಗಿ ಈಗ ಯಾವ ಕ್ಲಾಸಿನಲ್ಲಿ ಓದುತ್ತಿದ್ದಾಳೆ?

ನಾನು: ನಾಲ್ಕನೇ ಕ್ಲಾಸು.

ಉರ್ಸುಲಾ: ಅವಳು ಈಜಲು ಬರಲಿಲ್ಲವೇ?

ನಾನು: ಮಳೆ ಬಂದಾಗ ಮಾತ್ರ ಈಡಾ ಈಜಲು ಬರುತ್ತಾಳೆ.

ಉರ್ಸುಲಾ ತಲೆದೂಗಿದಳು.

(ಕಾರೊಲೀನ ವಾಲ್‌)

ಸೂರ್ಯನ ಶಾಖಕ್ಕೆ ಬಿಸಿಯಾಗಿದ್ದ ಬೆನ್ನೊರಗಿಗೆ ಒರಗಿಕೊಂಡು ಕಣ್ಣು ಮುಚ್ಚಿದೆ. ಆಹ್ಲಾದಕರವಾಗಿತ್ತು. ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಆರಂಭವಾಗುವ ಬೇಸಿಗೆ ಕಾಲ ಆ ವರ್ಷ ಇನ್ನೂ ಶುರುವಾಗಿರಲಿಲ್ಲ. ಸರಿಯಾಗಿ ಬಿಸಿಲು ಬರಲು ಇನ್ನೂ ಒಂದು ತಿಂಗಳಾದರೂ ಬೇಕೆನ್ನಿಸುತ್ತಿತ್ತು. ಜೂನ್ ತಿಂಗಳಾದರೂ ಹವಾಮಾನವು ಏಪ್ರಿಲ್-ಮೇಗಳಲ್ಲಿ ಇರುವ ರೀತಿ ಇನ್ನೂ ತಣ್ಣಗೆ ಇತ್ತು. ಬೇಸಿಗೆಯ ಮೊದಲ ದಿನಗಳ ಹವೆಯನ್ನು ದೀರ್ಘವಾಗಿ ಒಳಗೆಳೆದುಕೊಂಡೆ. ಸನ್‌ಸ್ಕ್ರೀನ್, ಕ್ಲೋರಿನ್, ಫ್ರೆಂಚ್‌ ಫ಼್ರೈಗಳನ್ನು ಎಣ್ಣೆಯಲ್ಲಿ ಕರಿಯುತ್ತಿರುವ ವಾಸನೆಗಳ ಜೊತೆ ಉರ್ಸುಲಾಳ ಗಾಢವಾದ ಸೆಂಟಿನ ಪರಿಮಳವೂ ನನ್ನ ಶ್ವಾಸಕೋಶಗಳನ್ನು ತುಂಬಿತು. ಕಣ್ಣು ತೆರೆದಾಗ ಕಂಡದ್ದು ಸೂರ್ಯಾಸ್ತದ ವೇಳೆಯ ರಂಗುರಂಗಿನ ಆಕಾಶ. ಕಣ್ಣುಗಳು ಆ ದೃಶ್ಯವನ್ನು ತುಂಬಿಕೊಳ್ಳುತ್ತಿದ್ದ ಹಾಗೇ ಮೈ ಹಗುರಾಯಿತು. ಈಜುಕೊಳವನ್ನು ಒಮ್ಮೆ ಕೂತಲ್ಲಿನಿಂದಲೇ ಅವಲೋಕಿಸಿದೆ. ಕೊಳದ ಒಂದು ಬದಿಯಲ್ಲಿ ಈಜಲು ಬಾರದ ಹುಡುಗರ ಗುಂಪೊಂದು ನಿಂತಿತ್ತು. ಅವರೆಲ್ಲರೂ ಸುಮಾರು ಈಡಾಳ ವಯಸ್ಸಿನವರೇ ಇದ್ದಿರಬಹುದು. ನೀರಿನ ಆಳ ಕಡಿಮೆಯಿದ್ದ ಕಡೆ ಮಷೀನ್ ಗನ್ನಿನಿಂದ ಹೊರಟ ಗುಂಡುಗಳಂತೆ ಒಬ್ಬರ ನಂತರ ಒಬ್ಬರು ಅತ್ಯುತ್ಸಾಹದಿಂದ ಧುಮುಕುತ್ತಿದ್ದರು. ಅದೇ ಬದಿಯ ಇನ್ನೊಂದು ಮೂಲೆಯಲ್ಲಿ ಕೈಗೂಸುಗಳನ್ನು ಎತ್ತಿಕೊಂಡಿದ್ದ ಅಮ್ಮಂದಿರಿಬ್ಬರು ನೀರಿನಲ್ಲಿ ನಿಂತು ಹರಟುತ್ತಿದ್ದರು. ಈಜು ಬಾರದವರು ನೀರಿನ ಆಳ ಹೆಚ್ಚಿರುವ ಕಡೆಗೆ ಹೋಗುವುದನ್ನು ತಡೆಯಲು ಹಗ್ಗವೊಂದನ್ನು ಕೊಳಕ್ಕೆ ಅಡ್ಡವಾಗಿ ಬಿಗಿಯಲಾಗಿತ್ತು. ಈ ಹಗ್ಗದ ಬಳಿ ಸಣ್ಣ ಹುಡುಗ ಹುಡುಗಿಯರಿಬ್ಬರು ವ್ಯಕ್ತಿಯೊಬ್ಬನ ಜೊತೆ ಚೆಂಡಾಟ ನೀರಾಟಗಳನ್ನು ಆಡುತ್ತಿದ್ದರು. ಮಕ್ಕಳು ಸಂತೋಷದಿಂದ ಕೇಕೆ ಹಾಕುತ್ತಾ ಆಟವಾಡುತ್ತಿದ್ದುದನ್ನು ಕಂಡು ನಾನು ಆ ವ್ಯಕ್ತಿ ಅವರ ತಂದೆಯಿರಬಹುದೆಂದು ಊಹಿಸಿದೆ. ಆ ಮಕ್ಕಳು ಆತನ ಜೊತೆ ಆಗಾಗ ನೀರಾಟವಾಡುತ್ತಾರೋ ಅಥವಾ ಅದು ಅಪರೂಪದ ಅವಕಾಶವಾದ್ದರಿಂದ ಇಷ್ಟೊಂದು ಸಂತೋಷಕ್ಕೆ ಕಾರಣವೋ ಎಂಬ ಪ್ರಶ್ನೆಯೊಂದು ತಲೆಯಲ್ಲಿ ಸುಳಿಯಿತು. ಕೊಳದ ಇನ್ನೊಂದು ಬದಿಯ ಅಂಚಿನಲ್ಲಿ ಕುಳಿತಿದ್ದ ಹದಿವಯಸ್ಸಿನ ಹುಡುಗಿಯರ ಗುಂಪಿನಲ್ಲಿ ನನ್ನ ಪ್ರೈಮರಿ ಶಾಲೆಯ ಸಹಪಾಠಿಗಳ ಮುಖಗಳು ಕಂಡವು. ಆಂಜೆಲೀನಾ, ಲೇನಾ ಮತ್ತು ಯಾನಾ ಬಿಸಿಲಿನ ಝಳದಿಂದಾಗಿ ಕ್ರಮೇಣ ಕಂದುಬಣ್ಣಕ್ಕೆ ತಿರುಗುತ್ತಿದ್ದರು. ನಾನು ಅವರೆಡೆ ಕೈಬೀಸಿದ್ದನ್ನು ಕಂಡ ಆಂಜೆಲೀನಾ ಅಲ್ಲಿಂದಲೇ ಬಲವಂತದ ಮುಗುಳ್ನಗೆಯನ್ನು ಬೀರಿ ನಮ್ಮಿಬ್ಬರ ಸಂಬಂಧ ಅಷ್ಟಕ್ಕಷ್ಟೇ ಎಂದು ನೆನಪಿಸಿದಳು.

ಅಷ್ಟರಲ್ಲಿ ಒಬ್ಬ ವ್ಯಕ್ತಿ ಕಂಡ. ನನ್ನ ಎದೆ ಧಸಕ್ಕೆಂದಿತು. ಬಿಸಿಲಿನಿಂದ ಬೆಚ್ಚಗಾಗಿದ್ದ ಮೈ ಸಣ್ಣಗೆ ನಡುಗಲಾರಂಭಿಸಿತು. ಅವನನ್ನು ನೋಡುತ್ತಲೇ ಈವಾನ್ ನನ್ನ ಮನಸ್ಸನ್ನು ಆವರಿಸಿದ. ಕಪ್ಪು ಬಣ್ಣದ ಈಜುಡುಗೆ ಧರಿಸಿದ್ದ ಆಜಾನುಬಾಹು ಶರೀರ, ತಿಳಿ ಹೊಂಗೂದಲು, ಕಣ್ಣು ಕುಕ್ಕುವಂತಹ ಕೊಬ್ಬಿದ ನೋಟ. ಆತಂಕದಿಂದ ಉಗುಳು ನುಂಗಿದೆ. ಬಿಸಿಲಿನಿಂದಾಗಿ ಹದವಾಗಿ ಸುಟ್ಟಿದ್ದ ಈವಾನ್‌ನ ಆಕರ್ಷಕ ಕೋಲುಮುಖ, ಅವನ ಮಂಜಿನಂತಹ ನೀಲಿ ಕಣ್ಣುಗಳು, ತೀಡಿದಂತಿದ್ದ ದಪ್ಪನಾದ ಹುಬ್ಬಗಳು, ಹುಬ್ಬುಗಳ ನಡುವೆ ಮೂಡಿದ್ದ ಸುಕ್ಕು, ನೇರ ಗೆರೆ ಎಳೆದಂತೆ ಕಾಣುತ್ತಿದ್ದ ಸಪೂರ ತುಟಿಗಳು ಇವೆಲ್ಲವೂ ಒಮ್ಮೆಗೇ ಕಣ್ಣೆದುರು ಸುಳಿದಾಡಿದವು. ಈಡಾಳನ್ನು ಹೊರತುಪಡಿಸಿದರೆ ಅತ್ಯಂತ ಸುಂದರ ಮುಖ ಈವಾನ್‌ನದ್ದೇ. ಅದೊಂದು ಮುಗಿದ ಅಧ್ಯಾಯ. ಆದರೆ ಇವನು ಯಾರು? ನನಗೆ ಹೊಟ್ಟೆಯೆಲ್ಲಾ ತೊಳಸಿ ವಾಕರಿಕೆ ಬಂದಂತಾಯಿತು. ಹಗ್ಗದ ಕುಣಿಕೆಯೊಂದು ನನ್ನ ಕುತ್ತಿಗೆಯ ಸುತ್ತ ಬಿಗಿದಂತಾಯಿತು. ಹಲವಾರು ಬಾರಿ ಉಗುಳು ನುಂಗಿ ಬಿಸಿ ಹವೆಯನ್ನು ದೀರ್ಘವಾಗಿ ಒಳಗೆಳೆದುಕೊಂಡು ಕುತ್ತಿಗೆಯನ್ನು ಸಡಿಲ ಮಾಡಿಕೊಳ್ಳಲು ಪ್ರಯತ್ನಿಸಿದೆ. ಬಿಸಿಲಿನಿಂದಾಗಿ ಅವನು ಸರಿಯಾಗಿ ಕಾಣಲಿಲ್ಲ, ಕಣ್ಣು ಅರ್ಧ ಮುಚ್ಚಿಕೊಂಡು ರೆಪ್ಪೆಯ ಸಂದುಗಳಿಂದ ಅವನನ್ನು ದಿಟ್ಟಿಸಿ ನೋಡಿದೆ. ಅವನು ಈವಾನ್‌ನ ಅಣ್ಣನಿರಬೇಕು, ಏಕೆಂದರೆ ಅದು ಈವಾನ್‌ ಆಗಿರಲು ಸಾಧ್ಯವೇ ಇರಲಿಲ್ಲ. ಅವನ ಅಣ್ಣನ ಹೆಸರನ್ನು ನೆನಪಿನ ಮೂಲೆಮೂಲೆಗಳಲ್ಲಿ ಹುಡುಕಿದೆ. ಕೇವಲ ಕೋಪವಷ್ಟೇ ಒತ್ತರಿಸಿ ಬಂದಿತು. ಇನ್ನೂ ಅವನ ಹೆಸರಿಗಾಗಿ ತಡಕಾಡುತ್ತಲೇ ಇವನ ಮುಖವನ್ನು ಸರಿಯಾಗಿ ನೋಡುವ ಪ್ರಯತ್ನ ಮಾಡಿದೆ. ಕೊಂಚ ದೂರದಿಂದ ಸರಿಯಾಗಿ ಗಮನಿಸಲು ಕಷ್ಟವಾದರೂ ಇವನ ಮುಖ ಈವಾನ್‌ನ ಮುಖಕ್ಕಿಂತ ಭಿನ್ನವಾಗಿರುವುದು ತಿಳಿಯುತ್ತಿತ್ತು. ಇವನ ಗಂಭೀರ ನೋಟ ಈವಾನ್‌ನ ನೋಟಕ್ಕಿಂತಲೂ ತೀಕ್ಷ್ಣವಾಗಿತ್ತು. ಇವನ ಹುಬ್ಬುಗಳು ಒಂದಕ್ಕೊಂದು ತಗುಲಿಕೊಂಡಿದ್ದ ಹಾಗೆ ಇನ್ನಷ್ಟು ಹತ್ತಿರವಾಗಿದ್ದವು. ಹುಬ್ಬುಗಳ ನಡುವೆ ಇದ್ದ ಸುಕ್ಕು ಇನ್ನಷ್ಟು ಗಾಢವಾಗಿ ಮೂಡಿತ್ತು. ಇವನ ತುಟಿಗಳು ನೇರಾತಿನೇರ ಗೆರೆ ಎಳೆದಂತೆ ಇದ್ದವು. ಇವನೇನು ಮಾಡುತ್ತಿದ್ದಾನೆ ಇಲ್ಲಿ? ಇವನು ಇರುವುದು ಲಂಡನ್ನಿನಲ್ಲೋ ಅಥವಾ ಬೇರೆ ದೇಶದಲ್ಲೋ?
ಈವಾನ್‌ನ ಅಣ್ಣ ಈಜುಗನ್ನಡಕ ಧರಿಸಿ ನೀರಿಗೆ ಧುಮುಕಿ, ಮೀನಿನಂತೆ ಲೀಲಾಜಾಲವಾಗಿ ಕೊಂಚ ದೂರದವರೆಗೂ ತೆವಳಿದ. ಅವನ ಈಜುವ ವೇಗ ಮತ್ತು ಶೈಲಿಗಳು ಅವನು ನುರಿತ ಈಜುಗಾರನೆಂಬುದನ್ನು ಸಾರಿ ಹೇಳುತ್ತಿದ್ದವು. ಒಂದೊಂದು ಹೊಡೆತದಲ್ಲಿದ್ದ ಅವನ ತೋಳ್ಬಲ ಈಜುಕೊಳದಲ್ಲಿ ಇದ್ದ ಇತರೆ ಅಡ್ಡಾದಿಡ್ಡಿ ಈಜುಗಾರರ ನಡುವೆ ಅವನನ್ನು ಎದ್ದು ಕಾಣುವ ಹಾಗೆ ಮಾಡಿದವು. ಕೊಳದ ಒಂದು ಬದಿಯ ಗೋಡೆಯನ್ನು ಮುಟ್ಟಿ ಹಿಂದಿರುಗುವಾಗ ಅವನು ಸುಮಾರು 30 ಅಡಿ ಆಳದವರೆಗೂ ಮುಳುಗಿ, ಕೆಲವು ಸೆಕೆಂಡುಗಳು ಆಳದಲ್ಲಿ ಈಜಿದ ನಂತರವಷ್ಟೇ ನೀರಿನಿಂದ ಹೊರಗೆ ತಲೆ ಹಾಕಿ, ಅರ್ಧ ನಿಮಿಷದ ಒಳಗೆ ಕೊಳದ ಇನ್ನೊಂದು ಬದಿಯನ್ನು ತಲುಪುತ್ತಿದ್ದ. ಆ ಇನ್ನೊಂದು ಬದಿಯ ಗೋಡೆಯನ್ನು ಮುಟ್ಟುವಷ್ಟರಲ್ಲಿ ಮತ್ತೆ ಅವನು ನೀರಿನಲ್ಲಿ ಮುಳುಗಿ, ಒಳಗಿದ್ದುಕೊಂಡೇ ಪಲ್ಟಿ ಹೊಡೆದು ದಿಕ್ಕು ಬದಲಿಸುತ್ತಿದ್ದ. ನನ್ನ ಕಣ್ಣುಗಳು ಅವನ ಪ್ರತೀ ಚಲನೆಯನ್ನು ಹಿಂಬಾಲಿಸುತ್ತಿದ್ದವು. ನನಗೆ ಅವನ ತಮ್ಮನ ನೆನಪು ಒತ್ತರಿಸಿ ಬರುತ್ತಿತ್ತು. ಅವನು ಮೆಲ್ಲಗೆ ಮುಸಿಮುಸಿ ನಗುತ್ತಿದ್ದ ರೀತಿ, ಅವನ ಗೊಗ್ಗರು ಧ್ವನಿಗಳು ನೆನಪಾದವು. ಈವಾನ್‌ನ ಅಣ್ಣನನ್ನೂ ಎಲ್ಲಿ ಕಳೆದುಕೊಂಡು ಬಿಡುವೆನೋ ಎಂಬ ಭಯದಿಂದ ಅವನನ್ನು ನನ್ನ ನೋಟದ ಪರಿವೆಯಿಂದಾಚೆಗೆ ಹೋಗಲು ಬಿಡಲೇ ಇಲ್ಲ. ಮೇಲಾಗಿ ಅಂತಹ ನುರಿತ ಈಜುಶೈಲಿ ಈ ಊರಿನಲ್ಲಿ ಕಾಣಸಿಗುವುದೇ ವಿರಳ.

ಅವನು ಇಪ್ಪತ್ತೆರಡು ಸುತ್ತುಗಳು ಈಜಿದ ನಂತರ ಮತ್ತೆ ನೀರಿನಲ್ಲಿ ಮುಳುಗದೇ ಕೊಳದ ಅಂಚಿನ ಮೇಲೆ ತೋಳು ಹಾಕಿ ತೇಲಲಾರಂಭಿಸಿದ. ಅವನು ಈಜುಗನ್ನಡಕವನ್ನು ತೆಗೆದು ನನ್ನ ಕಡೆ ತಿರುಗಿದಾಗ ನಮ್ಮಿಬ್ಬರ ಕಣ್ಣುಗಳು ಸಂಧಿಸಿದವು. ಒಬ್ಬರನ್ನೊಬ್ಬರು 51 ಮೀಟರ್ ಅಂತರದಿಂದ ನೋಡಿದೆವು. ಎಲ್ಲವೂ ಮಬ್ಬುಮಬ್ಬಾಗಿತ್ತು. ನನ್ನ ಕಡೆಗೆ ನೋಡುತ್ತಲೇ ಅವನು ಕುತೂಹಲದಿಂದ ಹುಬ್ಬೇರಿಸತೊಡಗಿದ. ನನಗೆ ಆ ಕ್ಷಣದಲ್ಲಿ ಏನು ಮಾಡಬೇಕೋ ಹೊಳೆಯಲಿಲ್ಲ. ಏರಿದ್ದ ನನ್ನ ಹುಬ್ಬುಗಳನ್ನೂ ಛಕ್ಕನೆ ಕೆಳಗಿಳಿಸಿ, ಇನ್ನೂ ಒದ್ದೆಯಾಗಿದ್ದ ಈಜುಡುಗೆಯ ಮೇಲೆಯೇ ಡ್ರೆಸ್ ಧರಿಸಿ ಬ್ಯಾಗನ್ನು ಒಮ್ಮೆಲೇ ಹೆಗಲ ಮೇಲೆ ಏರಿಸಿಕೊಂಡೆ. ಉರ್ಸುಲಾಳಿಗೆ ಎಂದಿನಂತೆ ಮಾತಿಲ್ಲದೆ ತಲೆದೂಗಿ ವಿದಾಯ ಹೇಳಿ ಮನೆಯ ಕಡೆಗೆ ತುರಾತುರಿಯಲ್ಲಿ ಓಡಿದೆ. ಮನೆಗೆ ಹೋಗುವಾಗ ನನಗೆ ಸುತ್ತಮುತ್ತಲ ಪರಿವೆಯೇ ಇರಲಿಲ್ಲ. ಏನೋ ಮೈಮೇಲೆ ಬಂದವರ ಹಾಗೆ, ನೆನಪಿಗೆ ಬಾರದ ಈವಾನ್‌ನ ಅಣ್ಣನ ಹೆಸರನ್ನೇ ಹುಡುಕುತ್ತಿದ್ದೆ. ಮಾರ್ಲೇನಳಿಗೆ ಅವನ ಹೆಸರು ಗೊತ್ತೇ ಇರುತ್ತದೆ, ಅವಳನ್ನೇ ಕೇಳಬೇಕು. ಹೇಗಿದ್ದರೂ ಮಾರ್ಲೇನ ವೀಕೆಂಡಿಗೆ ಊರಿಗೆ ಬರುತ್ತಿದ್ದಾಳೆ. ಯಾವುದೋ ಪಾರ್ಟಿ ಇದೆಯಂತೆ. ನಾಳೆಯಿಂದ ನಾನು 23 ಸುತ್ತುಗಳು ಈಜುವೆ. 23ರ ಸಂಖ್ಯೆ 22ರಷ್ಟು ಚೆನ್ನಾಗಿಲ್ಲ, ಆದರೂ ಪರವಾಗಿಲ್ಲ.

(ಕೃತಿ: ನನ್ನ ತಂಗಿ ಈಡಾ (ಅನುವಾದಿತ ಕಾದಂಬರಿ), ಜರ್ಮನ್ ಮೂಲ: ಕಾರೊಲೀನ ವಾಲ್ (22 Bahnen), ಕನ್ನಡಕ್ಕೆ: ಹರ್ಷ ರಘುರಾಮ್, ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು, ಬೆಲೆ: 260/-)