Advertisement
ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಗ್ಯೋರ್ಗಿ ಗೊಸ್ಪೊಡಿನೊವ್ ಅನೇಕ ವಿಧಗಳಲ್ಲಿ ಒಬ್ಬ ವಿಶಿಷ್ಟ ಬರಹಗಾರ. ನಾನು ಅವರ ಬರಹಗಳನ್ನು ಮೊದಲಿನಿಂದಲೂ ಓದುತ್ತಿದ್ದೇನೆ ಹಾಗೂ ಕುತೂಹಲಕಾರಿ ಪರಿಕಲ್ಪನೆ, ಅದ್ಭುತ ಕಲ್ಪನೆ ಮತ್ತು ನಿಖರವಾದ ಬರವಣಿಗೆಯ ತಂತ್ರವನ್ನು ಅವರ ಹಾಗೆ ಬೇರೆ ಯಾರಿಂದಲೂ ಸಂಯೋಜಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್-ರವರ  (Michael Krüger) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಕವಿ ಮತ್ತು ಕಾದಂಬರಿಕಾರ ಮೈಕೆಲ್ ಕ್ರೂಗರ್, 1943-ರಲ್ಲಿ ಸ್ಯಾಕ್ಸೋನಿ-ಅನ್ಹಾಲ್ಟ್‌-ನ (Saxony-Anhalt) ವಿಟ್‌ಗೆಂಡಾರ್ಫ್‌ನಲ್ಲಿ (Wittgendorf) ಜನಿಸಿದರು ಹಾಗೂ ಬರ್ಲಿನ್‌ ನಗರದಲ್ಲಿ ಬೆಳೆದರು. ಕ್ರೂಗರ್ ಒಬ್ಬ ಸಂಪಾದಕ ಮತ್ತು ಪ್ರಕಾಶನ ನಿರ್ದೇಶಕರಾಗಿ ದೀರ್ಘ ವೃತ್ತಿಜೀವನವನ್ನು ಅನುಭವಿಸಿದ್ದಾರೆ. ಪುಸ್ತಕ ಮಾರಾಟಗಾರರಾಗಿ ಶಿಷ್ಯವೃತ್ತಿಯ ನಂತರ, ಅವರು 1962-ರಿಂದ 1965-ರವರೆಗೆ ಲಂಡನ್‌ನಲ್ಲಿ ಪುಸ್ತಕ ಮಾರಾಟಗಾರರಾಗಿ ಕೆಲಸ ಮಾಡಿದರು. ಹಲವು ವರ್ಷಗಳ ಕಾಲ ಅವರು ಜರ್ಮನಿಯ ಅತ್ಯಂತ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಕಾರ್ಲ್ ಹ್ಯಾನ್ಸರ್ ವರ್ಲಾಗ್-ನ (Carl Hanser Verlag) ಆತ್ಮವಾಗಿದ್ದರು. 1968-ರಲ್ಲಿ ಅವರು ಈ ಪ್ರಕಾಶನ ಸಂಸ್ಥೆಯಲ್ಲಿ ‘ರೀಡರ್’ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು 1986-ರಲ್ಲಿ ಅದರ ಸಾಹಿತ್ಯ ನಿರ್ದೇಶಕರೂ ಆದರು. ಅವರ ನೇತೃತ್ವದಲ್ಲಿ ಈ ಪ್ರಕಾಶನ ಸಂಸ್ಥೆಯು ಜೋಸೆಫ್ ಬ್ರಾಡ್ಸ್ಕಿ, ಡೆರೆಕ್ ವಾಲ್ಕಾಟ್ ಮತ್ತು ಟೊಮಾಸ್ ಟ್ರಾನ್ಸ್‌ಟ್ರೋಮರ್ ಸೇರಿದಂತೆ ಹದಿನಾಲ್ಕು ನೊಬೆಲ್ ಪ್ರಶಸ್ತಿ ವಿಜೇತ ಬರಹಗಾರರ ಕೃತಿಗಳನ್ನು ಪ್ರಕಟಿಸಿತು. ಈ ತರಹದ ಅದ್ಭುತ ವೃತ್ತಿಜೀವನದ ನಂತರ ಅವರು ಇತ್ತೀಚೆಗೆ ಈ ಸ್ಥಾನವನ್ನು ತೊರೆದರು.

1976-ರಲ್ಲಿ, ಮೈಕಲ್ ಕ್ರೂಗರ್ Reginapoly ಎಂಬ ಕವನ ಸಂಕಲನದೊಂದಿಗೆ ಕಾವ್ಯಲೋಕಕ್ಕೆ ಪ್ರವೇಶ ಮಾಡಿದರು. ಇಲ್ಲಿಯವರೆಗೆ ಅವರು ಕವನ ಸಂಕಲನಗಳು, ಕಥೆಗಳು, ಕಾದಂಬರಿಗಳು ಮತ್ತು ಕಿರುಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಕ್ರೂಗರ್ ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ Nachts unter Bäumen (1996) ಹಾಗೂ Einmal einfach (2018) ಹೆಸರಿನ ಕವನಸಂಕಲನಗಳು, ಮತ್ತು Die Cellospielerin (2000) ಎಂಬ ಕಾದಂಬರಿ ಸೇರಿವೆ. ಪ್ರಕಾಶಕ ಮತ್ತು ಬರಹಗಾರರಾಗಿ ತಮ್ಮ ಕೆಲಸದ ಜೊತೆಗೆ, ಕ್ರೂಗರ್ ಅವರು ಪೆನ್ ಸೆಂಟರ್ ಜರ್ಮನಿ ಮತ್ತು ಬವೇರಿಯನ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌-ನ ಸದಸ್ಯರಾಗಿದ್ದಾರೆ. ಮೈಕಲ್ ಕ್ರೂಗರ್ ತಮ್ಮ ಸಾಹಿತ್ಯಿಕ ಕೆಲಸಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2004-ರಲ್ಲಿ, ಅವರಿಗೆ ಬವೇರಿಯನ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌-ನ (Bavarian Academy of Fine Arts) ಗ್ರ್ಯಾಂಡ್ ಲಿಟರೇಚರ್ ಪ್ರಶಸ್ತಿಯನ್ನು ನೀಡಲಾಯಿತು. 2013-ರಲ್ಲಿ, ಅವರ ಜೀವಮಾನದ ಸಾಹಿತ್ಯ ಕಾರ್ಯಕ್ಕಾಗಿ ಅವರಿಗೆ ಲಂಡನ್ ಬುಕ್ ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು (The London Book Fair Lifetime Achievement Award) ನೀಡಲಾಯಿತು. 2017-ರಲ್ಲಿ ಅವರು ಐಖೆಂಡಾರ್ಫ್ ಸಾಹಿತ್ಯ ಪ್ರಶಸ್ತಿಯನ್ನು (Eichendorff Literature Prize) ಪಡೆದರು.

ಕ್ರೂಗರ್ ಅವರು ಜೀವನಪ್ರೀತಿಯ ಖಾಸಗಿ ದುಃಖ ಮತ್ತು ಅಸಾಧ್ಯತೆಗಳ ಹಾಡುಗಳನ್ನು ರಚಿಸುವ ಕವಿ. ಈ ಕವಿಯು ವಿವಿಧ ಸಂಸ್ಕೃತಿಗಳ ಒಬ್ಬ ಸ್ವಯಂ ನಿರ್ಮಿತ ದೈವವಾಣಿಯಂತೆ. ಅವರ ಕಾವ್ಯ ಒಂದು ಗಂಭೀರ ಆಲೂಗಡ್ಡೆ ಕೃಷಿಯ ಹಾಗೆ. ರಾತ್ರಿಯಲ್ಲಿ ಹೇಗೆ ನಡೆಯಬೇಕು, ಕತ್ತಲೆಯಲ್ಲಿ ನಾವು ತಲುಪುವ ಯಾವುದೇ ಗಮ್ಯಸ್ಥಾನವನ್ನು ಹೇಗೆ ಹೊಂದಬೇಕು, ನಾವು ನಂಬಬಹುದಾದ ಅಥವಾ ನಂಬದಿರುವ ಬೆಳಕಿಗೆ ಅಂತಿಮವಾಗಿ ನಮ್ಮನ್ನು ಒಪ್ಪಿಸಿಕೊಳ್ಳುವುದು ಹೇಗೆ ಎಂದು ಕ್ರೂಗರ್ ನಮಗೆ ಕಲಿಸುತ್ತಾರೆ. ನೆನಪುಗಳಿಂದ ಸ್ಫೋಟಗೊಳ್ಳುವ ಒಂದು ಜಗತ್ತನ್ನು, ಒಂದು ಪ್ರವಾಹವನ್ನು, ಬೈಬಲ್-ನಲ್ಲಿ ಕಂಡುಬರುವ ನೋವಾ-ನ ಆರ್ಕ್-ನಂತಹ ಒಂದು ಬೃಹತ್ ಹಡಗನ್ನು ಅವರು ನಮಗೆ ನೀಡುತ್ತಾರೆ,” ಎಂದು ಅಮೇರಿಕಾ ದೇಶದ ಖ್ಯಾತ ಕವಿ ಸ್ಟಾನ್ಲಿ ಮೊಸ್ (Stanley Moss) ಅವರು ಕ್ರೂಗರ್ ಅವರ ಕಾವ್ಯದ ಬಗ್ಗೆ ಅಭಿಪ್ರಾಯಪಡುತ್ತಾರೆ.

ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಮೈಕಲ್ ಕ್ರೂಗರ್-ರ ಆರು ಕವನಗಳಲ್ಲಿ ಮೊದಲ ಕವನವನ್ನು ಪೀಟರ್ ಲಾಕ್-ನ್ಯೂವಿನಸ್ಕಿ (Peter Lach-Newinsky), ಎರಡನೆಯ ಕವನವನ್ನು ಬ್ರ್ಯಾಡ್ಲಿ ಶ್ಮಿಟ್ (Bradley Schmidt), ಹಾಗೂ ಉಳಿದ ನಾಲ್ಕು ಕವನಗಳನ್ನು ಕ್ಯಾರೆನ್ ಲಿಡರ್ (Karen Leeder) ಅವರು ಮೂಲ ಜರ್ಮನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.


ರೈಲು ಪ್ರಯಾಣ

ಮೂಲ: Train Journey

ಅಂತೂ ಎಲ್ಲರಿಗೂ ಸೀಟು ಸಿಕ್ಕಿತು,
ಎಲ್ಲರೂ ಮೌನವಾಗಿದ್ದಾರೆ.
ಬೆಂಕಿಪೊಟ್ಟಣದೊಳಗೆ ಇದ್ದಹಾಗೆ ಇಕ್ಕಟ್ಟಾಗಿದೆ ಇಲ್ಲಿ,
ಕಾಲುಗಳು ಒಂದರ ಜತೆ ಒಂದು ಎಚ್ಚರಿಕೆಯಿಂದ ಉಜ್ಜುತ್ತಿವೆ
ಎಲ್ಲಿ ಹೊತ್ತಿಕೊಂಡು ಉರಿವುದೋ ಎಂಬ ಭಯದಿಂದ.
ನನ್ನ ಎದುರು ಕುಳಿತಿರುವ ಹೆಂಗಸು,
ಹಳೇ ಆನೆದಂತದಂತೆ ತಣ್ಣಗೆ, ಬಿಳಿಚಿದ್ದಾಳೆ,
ಒಳಗೊಳಗೇ ಅಳುತ್ತಿರುವಂತೆ ಕಾಣುತ್ತದೆ,
ಅವಳ ಕೋಟುಗಳ ತೋಳುಗಳೊಳಗೆ ಇಲಿಗಳು ವಾಸಿಸುತ್ತವೆ.
ಅವಳು ಒಂದು ಕಾದಂಬರಿಯನ್ನು ಓದುತ್ತಿದ್ದಾಳೆ,
ಅದು ಅವಳ ಕಣ್ಣೆವೆಗಳನ್ನು ಜ್ವರವೇರಿದಂತೆ ಕೆಂಪಾಗಿಸುತ್ತಿದೆ,
ಒಂದೊಂದು ಸಾಲೂ ಒಂದೊಂದು ನೋವಿನ ಇರಿತದಂತೆ.
ಮೊದಲ ಸುರಂಗದೊಳಗೇನೇ ಆ ಪುಸ್ತಕ
ಹೊತ್ತಿಕೊಂಡು ಉರಿಯಹತ್ತಿತು,
ಅವಳ ಆಚೀಚೆ ಕುಳಿತ ಇಬ್ಬರು ಗಂಡಸರು
ಅವಳಿಂದ ತಿರುಗಿ ದೂರ ಸರಿದರು.
ಒಬ್ಬನೇನೋ ತನ್ನ ಮೂಳೆಗಳ ಕೀಲುಗಳಿಂದ
ಮೇಲೆ ಎತ್ತಲಾದವನಂತೆ ಕಂಡನು,
ಕಟ್ಟಿದ ಕೈಗಳಿಂದ ತಡೆಯಲಾದ ಕೈಸನ್ನೆಗಾರನಂತೆ,
ಮತ್ತೊಬ್ಬನ ನಕಲಿ ಹಲ್ಲುಗಳು ಕಟಕಟಿಸಲಾರಂಭಿಸುತ್ತದೆ.
ಅವನ ಕೈಯಲ್ಲೊಂದು ಡಿಕ್ಟಾಫೋನ್ ಇದೆ,
ಆದರೆ ಅವನಿಗೆ ನಿಖರವಾದ ಪದಗಳು ದೊರಕುತ್ತಿಲ್ಲ.
ಇಬ್ಬರಲ್ಲಿ ಯಾರು ಹೆಚ್ಚು ವೇಗವಾಗಿ ಸರಿದು ದೂರ ಹೋದವರು?
ಒಂದು ಚಿಕ್ಕ ಚಂದಿರ ನಮ್ಮ ಜತೆ ಪಯಣಿಸುತ್ತಿದೆ,
ತಿರುವುಗಳಲ್ಲಿ ಚಿಟ್ಟೆಯ ಹಾಗೆ ರೆಕ್ಕೆಗಳ
ಪಟಪಟಿಸುತ್ತಿದೆ ಬಾಯಿಂದ ಬಾಯಿಗೆ.
ಆವಾಗಾವಾಗ ಒಂದು ಹಳದಿ ಬೆಳಕಿನ ಕಿರಣ
ನಮ್ಮ ಸಣ್ಣ ಕೋಣೆಯೊಳಗೆ ಬರುತ್ತದೆ
ನಾವು ಬದುಕಿದ್ದೇವಾ ಎಂದು ನೋಡಲಿಕ್ಕೆ.
ಹೌದು, ನಾವು ಬದುಕ್ಕಿದ್ದೇವೆ, ನನ್ನ ಪಕ್ಕದಲ್ಲಿರುವವನು
ನಿದ್ದೆಯಲ್ಲಿ ಚೀರುತ್ತಾನೆ ಮತ್ತೆ ನಿದ್ದೆಯಿಂದೆದ್ದು ಕ್ಷಮೆ ಕೇಳುತ್ತಾನೆ.
ನಡುರಾತ್ರಿಯ ನಂತರ ನಾವೊಂದು ದೊಡ್ಡ, ಖಾಲಿಯಾದ,
ದುಃಖಿತ ಶಹರವನ್ನು ತಲುಪುತ್ತೇವೆ.
ಯಾರೂ ಕುಳಿತಲ್ಲಿಂದ ಏಳುವುದಿಲ್ಲ.
ಕಂಡಕ್ಟರ್ ಬಂದು ಬಾಗಿಲನ್ನು ತೆರೆದು ಬಿಟ್ಟಾಗಲೇ
ನಿದ್ದೆಯಿಂದೆಬ್ಬಿಸಿದ ಪತಂಗಗಳ ಹಾಗೆ
ನಾವು ಬೆಳಕಿನೆಡೆಗೆ ರೆಕ್ಕೆಬಡಿಯುತ್ತ ಹಾರುವೆವು.
ನಾವು ಎಲ್ಲಿದ್ದೇವೆಂದು ಯಾರಿಗೂ ಸುಳಿವಿಲ್ಲದಂತಿದೆ.


ಬೀಗದಕೈಗಳು
ಮೂಲ: The Keys

ಶೆಡ್ಡನ್ನು ಸ್ವಚ್ಛಮಾಡುತ್ತಿರುವಾಗ
ಹಳೇ ಬೀಗದಕೈಗಳ ಒಂದು ಸಣ್ಣ ಡಬ್ಬಿ ಸಿಕ್ಕಿತ್ತು,
ಅಸ್ಸಿರಿಯನರ ಸುಂದರ ಗಡ್ಡದಂತಿರುವ
ಗುಚ್ಛದಲ್ಲಿ ಒಂದು ಬೀಗದಕೈ, ಭಾರಿ ಸಾಧನವದು.
ಎಲ್ಲರೂ ಕನಸು ಕಾಣುತ್ತಾರೆ
ಬೇರೊಂದು ಶತಮಾನದಲ್ಲಿ ಬೇರೊಂದು ಬಾಗಿಲ ಬಗ್ಗೆ,
ದ್ವಂದ್ವ ಯುದ್ಧಗಳ ಬಗ್ಗೆ,
ದಪ್ಪ ದಪ್ಪ ಸಾಸೇಜುಗಳ ಬಗ್ಗೆ.
ಪ್ರೇಮದಿಂದ ಬೇಸತ್ತ ಹೃದಯದೊಳಗೆ
ಸರಿಯಾಗಿ ಕೂರುತ್ತದೆ ಒಂದು ಬೀಗದಕೈ.
ಬೀಗದಕೈಗೆ ಬಿಸ್ಮಾರ್ಕ್‌ ಅಥವಾ ಫೋಂಟೇಯ್ನ್‌*-ರ
ಅಥವಾ ಖುಷಿಯಲ್ಲಿ ಕೊನೆಗೊಳ್ಳದ
ಕಾದಂಬರಿಯೊಂದರಲ್ಲಿ ಬರುವ ತರುಣಿಯ
ಪರಿಚಯವಿದ್ದಿರಬಹುದು.
ಬೀಗದಕೈಗೆ ಇನ್ನು ಯಾವುದೇ ಬೀಗಗಳ
ಅಗತ್ಯವಿರದ ಕಾರಣ
ನಾನದನ್ನು ಜಾಗ್ರತೆಯಿಂದ ಮತ್ತೆ ಡಬ್ಬಿಗೆ ಮರಳಿಸಿದೆ.
ಆಗ ಮನೆ ನಿರಾಳವಾದ ನಿಟ್ಟುಸಿರು ಬಿಟ್ಟಿತ್ತು.

*Theodor Fontane (1819-1898), German novelist and poet, regarded by many as the most important 19th-century German-language realist author.


ಆಗಮನ
ಮೂಲ: Arrival

ಈ ನಗರ ಬಹುತೇಕ ನಿರ್ಜನವಾಗಿದೆ
ಪೇಟೆಯಲ್ಲಿರುವ ಪೆಟ್ರೋಲ್ ಬಂಕುಗಳು
ಕೇವಲ ದ್ವೇಷವನ್ನು ವಿತರಿಸುತ್ತವೆ,
ಅಜ್ಞಾತ ನೋಟುಗಳನ್ನು ಸ್ವೀಕರಿಸುತ್ತವೆ.
ಹುಲ್ಲು ಹಾಗೂ ಚುಚ್ಚುವ ಕಳ್ಳಿಗಿಡಗಳು
ಪೆಟ್ರೋಲ್ ಪಂಪುಗಳನ್ನು ಮುತ್ತಿವೆ,
ಇಲ್ಲಿ ಯಾರಿಗೂ ಅರ್ಥವಾಗದ ಭಾಷೆಯಲ್ಲಿ
ದುಡ್ಡಿನ ಕೌಂಟರಗಳು ಸಂವಾದಿಸುತ್ತಿವೆ.
ಅಲ್ಲಿನ ಕೆಲಸದಾಳು ಮೌನದ ಪಾಠವೊಂದನ್ನು
ಕಲಿಸಲು ಬಯಸುತ್ತಾನೆ.
ಅವನು ಆಕಾಶವನ್ನು ಏಕಾಗ್ರತೆಯಿಂದ ದಿಟ್ಟಿಸಿ
ನೋಡುತ್ತಾನೆ, ಅಲ್ಲಿ ಏನನ್ನೋ
ಓದಲು ಪ್ರಯತ್ನಿಸುತ್ತಿರುವವನಂತೆ.
ಮಧ್ಯಾಹ್ನದ ಸೂರ್ಯನ ಕೆಳಗೆ
ನನ್ನ ನೆರಳುಗಳು ಸಣ್ಣದಾಗಿ ಕಾಣುತ್ತವೆ.


ಹೊತ್ತು ಮೀರಿದೆ
ಮೂಲ: Too Late

ಆಗಲೇ ಮಧ್ಯರಾತ್ರಿ ದಾಟಿದೆ,
ಗಡಿಯಾರದ ಕೈಗಳು ಸ್ವಲ್ಪ ವಿರಮಿಸಿ
ಮತ್ತೆ ಉಸಿರಾಡಲು ತೊಡಗುತ್ತವೆ.
ಒಂದು ಬಸವನಹುಳು ಎದ್ದು ನಡೆಯುತ್ತಾ
ಬಣ್ಣ ಕಳಕೊಂಡ ಎಲ್ಲ ಪದಗಳನ್ನು ಎತ್ತಿಕೊಂಡು ಹೋಗುತ್ತೆ
ಕಾಗದದ ಹಾಳೆ ಮತ್ತೆ ಬೆಳ್ಳಗಾಗುವವರೆಗೂ,
ಶೂನ್ಯತೆಯ ನಕಾಶೆಪುಸ್ತಕವೊಂದನ್ನು ಬಿಟ್ಟುಹೋಗುತ್ತೆ.
ಹೆಚ್ಚು ಸಮಯವಿಲ್ಲ ನನ್ನಲ್ಲಿ.
ವಸಂತಮಾಸದಲ್ಲಿ ಕಲ್ಲಿನಿಂದ ನೀರು ಒಸರುವ ಹಾಗೆ,
ಮೆಲ್ಲನೆ ಜಿನುಗುತ್ತಾ ಬರುತ್ತದೆ ನಸುಕು.
ಮಲಗಲು ಹೋಗುವೆ ನಾನು ಕಣ್ತೆರೆದ ಎಚ್ಚರದಲ್ಲಿ.


ಉಳಿದ ವಿಷಯಗಳು
ಮೂಲ: Last Things

ನನ್ನ ಮನೆಗೆ ಆರು ಬಾಗಿಲುಗಳಿವೆ,
ಗಟ್ಟಿ ಮರದಿಂದ ಕೆತ್ತಲಾದ ಬಾಗಿಲುಗಳು.
ತಾನು ಎಲ್ಲಿ ನಿಲ್ಲಬೇಕೆಂದು
ಮೇಸ್ತ್ರಿಯ ಜತೆ ಬಹಳ ಹೊತ್ತು ವಾದಿಸಿದ್ದರಿಂದ
ಮೊದಲ ಬಾಗಿಲನ್ನು ಮುಚ್ಚಲಾಯಿತು
ಅದರಿಂದ ಬೆಳಕನ್ನು ಸಹಿಸಲಸಾಧ್ಯವಾದುದರಿಂದ
ಎರಡನೆಯ ಬಾಗಿಲು ಹಗಲಿನಲ್ಲಿ ತೆರೆಯುವುದಿಲ್ಲ.
ತನ್ನ ಕೆಲಸದಲ್ಲಿ ಮಗ್ನನಾಗಿರುವ
ಒಬ್ಬ ಪುರಾತನ ಗಡ್ಡಧಾರಿ ದೇವಸೇವಕನನ್ನು
ಕನಸುಗಳಲ್ಲಿ ಮಾತ್ರ ತೆರೆಯುವ
ಮೂರನೆಯ ಬಾಗಿಲು ತೋರಿಸುತ್ತೆ.
ಆದರ್ಶ ಲೋಕವೊಂದಕ್ಕೆ ಕೊಂಡೊಯ್ಯುತ್ತದೆ
ನಾಲ್ಕನೆಯ ಬಾಗಿಲು, ಆದ್ದರಿಂದ ಅದೀಗ ಬಳಕೆಯಲ್ಲಿಲ್ಲ.
ಸಾಧ್ಯತೆಗಳ ಹಳೆಯ ಅಳತೆಗಳ ಮಾನಗಳಲ್ಲಿ
ಐದನೆಯ ಬಾಗಿಲು ತನ್ನ ಸ್ವರೂಪವನ್ನು ಹುಡುಕುತ್ತಿದ್ದೆ.
ಆರನೆಯ ಬಾಗಿಲು ಕಣ್ಣಿಗೆ ಕಾಣಿಸಲ್ಲ.
ಹಲವು ವರ್ಷಗಳಿಂದ ನಾನು ಗೋಡೆಗಳನ್ನು
ತಡಕಾಡುತ್ತಿರುವೆ, ಅದನ್ನು ಹುಡುಕುತ್ತಿರುವೆ.
ಅದರ ಅಸ್ತಿತ್ವದ ಬಗ್ಗೆ ನನಗೆ ಯಾವ ಸಂಶಯವೂ ಇಲ್ಲ.
ನನ್ನ ಗೆಳೆಯರೆಲ್ಲರ ಸಲಹೆಯ ಪ್ರಕಾರ ಈ ಮನೆಗೆ
ಇನ್ನೊಂದು ಬಾಗಿಲನ್ನು ಖಂಡಿತವಾಗಿಯೂ ಕೊಡಬಹುದು.
ಆದರೆ, ಅದರ ಬದಲಿಗೆ ನಾನು ಮನೆಯನ್ನೇ ಕೆಡವಿ
ಅದರ ಅವಶೇಷಗಳಲ್ಲಿ ಪ್ರವೇಶದ್ವಾರವನ್ನು ಹುಡುಕಲು ಬಯಸುವೆ.


ಕವಿಯೊಬ್ಬನಿಗೆ ಒಂದು ಸಮಾಧಿಲೇಖ
ಮೂಲ: Epitaph for a Poet

ನಮ್ಮ ಕಣ್ಣೆದುರಲ್ಲೆ ಅವನು
ತನ್ನ ಮರಣಶಯ್ಯೆಯಿಂದ ಎದ್ದು
ಕೊನೆಯ ಅಲ್ಪವಿರಾಮವೊಂದನ್ನು ಹಾಕಿದ,
ಅದರ ನಂತರವೇ ಅವನಿಂದ ನಿದ್ರಿಸಲಾಯಿತು.
ಅವನ ಕಾವ್ಯ ಯಾರಿಗೂ ನೆನಪಿಲ್ಲ ಈಗ.

*****

 

 

About The Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ