ವರ್ತಮಾನದ ಸಂಗತಿಗಳಿಗೆ ಸದಾ ತುಡಿಯುವ ಅವಧಾನಿಯವರು ಸಾಕ್ಷರತಾ ಆಂದೋಲನ, ವಿಜ್ಞಾನ ಚಳುವಳಿಗಳ ಮುಂಚೂಣಿಯಲ್ಲಿದ್ದವರು. ಅನೇಕ ವಾದ, ವಿವಾದಗಳಿಗೆ ಮುಖಾಮುಖಿಯಾಗುತ್ತಲೇ ಮೌಢ್ಯ ಮತ್ತು ಕಂದಾಚಾರಗಳನ್ನು ಸದಾ ತಮ್ಮ ಮೊನಚು ಮಾತುಗಳಿಂದ ಟೀಕಿಸುತ್ತಿದ್ದರು. ಪ್ರಖರ ವೈಚಾರಿಕತೆಯನ್ನು ತಮ್ಮ ಶಿಷ್ಯವರ್ಗದಲ್ಲಿ ಬೆಳೆಸಲು ಅನೇಕ ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದರು. ಪೋಲಂಕಿಯವರು ಸೀತಾಯಣ ಬರೆದು ವಿವಾದಕ್ಕೊಳಗಾದ ಸಂಗತಿಯನ್ನು ಅವರ ಒಂದು ಕವನ ದೈನಂದಿನ ಚಹರೆಗಳ ಮೂಲದ ವಿಡಂಬನೆಗೊಳಪಡಿಸುತ್ತದೆ. ಮನುಷ್ಯನ ಆಚಾರ ಮತ್ತು ವಿಚಾರಗಳಿಗಿರುವ ಕಂದರವನ್ನು ನಮ್ಮೆದುರು ತೆರೆದಿಟ್ಟು ಬೆಚ್ಚಿಬೀಳಿಸುವಂತೆ ಮಾಡುತ್ತದೆ.
ಜಿ. ಎಸ್. ಅವಧಾನಿಯವರ ‘ಗಂಗೋತ್ರಿಯ ಹಕ್ಕಿಗಳು’ ಕವನ ಸಂಕಲನದ ಕುರಿತು ಸುಧಾ ಆಡುಕಳ ಬರೆದ ಲೇಖನ

 

“ನಾನು ಹೊರಟು ಹೋದೆನೆಂದು ಅಳಬೇಡ ನೀ ಗೆಳತಿ
ನೆನಪಿಸಿಕೊ ನೀನೊಮ್ಮೆ ಕಳೆದ ಖುಶಿ ಗಳಿಗೆಗಳ” ಎಂದು ತನ್ನ ಸಖಿಗೆ ಹೇಳುತ್ತಲೇ “ನಾ ಬರೆದ ಸಾಲುಗಳಲಿ ನನ್ನ ಹುಡುಕು” ಎನ್ನುತ್ತಾರೆ ಅವಧಾನಿಯವರು. ಕವಿತೆ ಬರೆಯುವುದಕ್ಕಷ್ಟೇ ಅಲ್ಲ ಬದುಕುವುದಕ್ಕೆ ಎಂಬುದು ಕೂಡ ಅವರ ಕವಿತೆಯ ಸಾಲುಗಳೇ ಆಗಿವೆ. ಉತ್ತರಕನ್ನಡದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದ ಡಾ.ಜಿ.ಎಸ್. ಅವಧಾನಿಯವರು ತಮ್ಮ ಮಾಸ್ತರಿಕೆಯ ವ್ಯಾಪ್ತಿಯನ್ನು ಕಾಲೇಜಿನ ಗೋಡೆಗಳಾಚೆಗೂ ವಿಸ್ತರಿಸಿಕೊಂಡವರು. ತಮ್ಮ ಸಿಲೆಬಸ್ ನ್ನು ಪಠ್ಯಕ್ಕೆ ಸೀಮಿತಗೊಳಿಸಿಕೊಳ್ಳದೇ ಸಮಾಜದವರೆಗೂ ವಿಸ್ತರಿಸಿದವರು. ನಾಟಕ, ಕಾವ್ಯ, ಯಕ್ಷಗಾನ, ಚಳುವಳಿ, ಸಾಕ್ಷರತಾ ಆಂದೋಲನ, ಮೌಢ್ಯವಿರೋಧೀ ಕಾರ್ಯಕ್ರಮಗಳು ಹೀಗೆ ಅನೇಕ ಹುಚ್ಚನ್ನು ಒಟ್ಟಿಗೆ ಹತ್ತಿಸಿಕೊಂಡು ಅದನ್ನು ತಮ್ಮ ಪರಿಧಿಯೊಳಗೆ ಬಂದ ಎಲ್ಲರಿಗೂ ದಾಟಿಸುತ್ತಾ ಸಾಂಕ್ರಾಮಿಕವಾಗಿಸಿದವರು. ಬರವಣಿಗೆಗಿಂತ ಬದುಕಿನ ಧನಾತ್ಮಕ ನಡೆಯನ್ನೇ ಹೆಚ್ಚು ಪ್ರೀತಿಸಿದ ಅವರ ಮೌಲಿಕ ಕವಿತೆಗಳ ಸಂಕಲನ ‘ಗಂಗೋತ್ರಿಯ ಹಕ್ಕಿಗಳು.’

1975 ರಿಂದ 1995ರವರೆಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಬರೆದ ಕವಿತೆಗಳು ಈ ಕವನ ಸಂಕಲನದಲ್ಲಿವೆ. ಬದುಕಿನ ಎಲ್ಲ ಮಗ್ಗಲುಗಳನ್ನು ಸ್ಪರ್ಶಿಸುವ ವಿಶಾಲ ವ್ಯಾಪ್ತಿಯನ್ನು ಇಲ್ಲಿನ ಕವನಗಳು ಒಳಗೊಂಡಿವೆ. ಇಲ್ಲಿ
‘ಮೊಟ್ಟಮೊದಲ ಐನೀರಿನಲ್ಲಿ ಮಿಂದ ಹುಡುಗಿಯ’ ನವಿರು ಸ್ಪರ್ಶವಿದೆ.

‘ಮುಚ್ಚಿಟ್ಟ ಹಾಲನ್ನು ಹೆಪ್ಪುಹಾಕುವ ಮೊದಲೇ ಬೆಕ್ಕು ಮುಟ್ಟೀತೆಂದು’ ಒಳಗೆದ್ದು ಹೋಗುವ ಅಬ್ಬೆಯ ಎಚ್ಚರಿಕೆಯ ನಡೆಯಿದೆ.
‘ಮಿದುವೆದೆಯ ಗೂಡಿನಲ್ಲಿ ನಿದ್ದೆ ತೂಗುವ ಮರಿಗೆ
ಬೆಳಕಿನಭ್ಯಂಜನವು ಬರಲೇ ಇಲ್ಲ’
ಎಂಬ ವಿಷಾದದ ಛಾಯೆಯಿದೆ. ಉತ್ತರಕನ್ನಡದ ಜಾನಪದ ಕಥೆಗಳ ಮಾಯಕದ ಸಾಲುಗಳನ್ನು ತಮ್ಮ ಕವನದಲ್ಲಿ ಬಳಸುತ್ತಲೇ ಬಂಧನದ ರೂಪಕವನ್ನು ಕವಿ ನಮಗೆ ದಾಟಿಸುತ್ತಾರೆ.

‘ಒಂದೂರಿನಲ್ಲೊಂದು ಏಳುಕೋಟೆಯ ನಡುವೆ
ಬಂಗಾರದರಮನೆಯ ನೆಲಮಾಳಿಗೆ
ಮಾತನಾಡುವ ಗಿಳಿಯು ವಜ್ರಪಂಜರದಲ್ಲಿ
ಹಾಡು ಹೇಳುವುದಂತೆ ಅರಸಿಯರಿಗೆ’

ಎನ್ನುವ ಬೆರಗಿನ ಸಾಲುಗಳ ಮೂಲಕವೇ ಪಂಜರದೊಳಗಿರುವ ಗಿಳಿ ಹಾಡು ಹೇಳುವ ಸೋಜಿಗವನ್ನು ಚಿತ್ರಿಸುತ್ತಾರೆ. ಭತ್ತದ ಗದ್ದೆಯ ಹಸಿರನ್ನು ಕಣ್ತುಂಬಿಕೊಳ್ಳುವ ಸೊಗದೊಂದಿಗೆ ಅದೇ ಪೈರು ಬೆಳೆದು ಹಣ್ಣಾದಾಗ ಹೊಂದುವ ಚುಂಗಿಗೂ ಎದೆಯೊಡ್ಡುವ ಕಸುವು ಕವಿಗಿರಬೇಕೆಂಬ ವಾಸ್ತವ ಸತ್ಯವನ್ನು ನಮ್ಮೆದುರು ತೆರೆದಿಡುತ್ತಾರೆ.

‘ಹೊಲವ ಒಲವಿಂದ ಉತ್ತಿ, ಬೀಜವ ಬಿತ್ತಿ
ಮಡಿವೊಡಲ ಕೋಶದೊಳಗಿರುವ
ಕೆಂಯ ಕಸುವಿಗೆದೆತೆರೆದು ನಿಲ್ಲುವ
ಗಂಡು ನೀನಾಗಬಲ್ಲೆಯಾ ಹೇಳು ಗೆಳೆಯಾ’

ಬೆಳೆದ ಭತ್ತದ ಹುಲ್ಲನ್ನು ಕೆಂಯ್ಯಿ ಎನ್ನುವುದು ಅಲ್ಲಿಯ ಆಡುಭಾಷೆ. ಕೆಂಯ್ಯನ್ನು ಹೊರುವವನಿಗೆ ಅದರ ಚುಂಗನ್ನು (ಮೈಗೆ ತಾಗಿದಾಗ ತುರಿಸುವ ಪುಡಿಯಂತಿರುವ ವಸ್ತು) ಸಹಿಸಿಕೊಳ್ಳುವ ಎದೆಗಾರಿಕೆಯೂ ಬೇಕೆನ್ನುತ್ತಾರೆ ಅವರು.

ಈ ಸಂಕಲನದ ಹೆಚ್ಚಿನ ಕವನಗಳು ಮಣ್ಣಿನ ಮಕ್ಕಳ ಎದೆಯಾಳದ ಧ್ವನಿಯಾಗಿಯೇ ಮೂಡಿವೆ. ಪುರಾಣದ ಚೌಕಟ್ಟನ್ನು ಒಡೆಯುತ್ತಲೇ ವಾಸ್ತವದ ಚಿತ್ರಣವನ್ನು ನಮ್ಮೆದುರು ತೆರೆದಿಡುತ್ತವೆ.

‘ಬಾಯ್ತುಂಬ ವೇದಾಂತ ಮುಕ್ಕಳಿಸುವೀ ಜನರ
ಎದೆಯೊಳೆಲ್ಲಿದೆ ಹೇಳಿ ಮಣ್ಣ ಕಣ್ಣು?
ನೆಲದ ಮಕ್ಕಳ ಶೋಕ ಶ್ಲೋಕವಾಗಲೇ ಇಲ್ಲ
ವಲ್ಮೀಕದೊಳಗೆಲ್ಲ ಮರಣದಯನ’

(ಜಿ. ಎಸ್. ಅವಧಾನಿ)

ವಾಲ್ಮೀಕಿಯಾಗದೇ ಹುತ್ತದೊಳಗೆ ಮರಣಹೊಂದಿದ ನಿಜದ ನೆಲದ ಮಕ್ಕಲ ಶೋಕವಿದು.
ಮತ್ತೆ, ಮತ್ತೆ ಪ್ರತ್ಯಕ್ಷವಾಗುತ್ತಲೇ ವರ್ತಮಾನವನ್ನು ಕೆಣಕುವ ಚರಿತ್ರೆಯ ಬಗೆಗೂ ಅವರಿಗೆ ಪ್ರಶ್ನೆಯಿದೆ.

‘ಹರಿದ ನಕಾಶೆಗೆ ಬಣ್ಣಹಚ್ಚದ ತನಕ
ದಕ್ಕದು ಪದಕ
ಚರಿತ್ರೆಗೆಲ್ಲಿದೆ ಹೇಳು ಅಗುಳಿ ಚಿಲಕ?’
ಇದು ಅವರ ಹುಡುಕಾಟವಾಗಿದೆ.

ಸುಧಾರಣೆಗಳು, ಬದಲಾವಣೆಗಳು, ಆಧುನಿಕತೆ ವಿಶ್ವವನ್ನು ಚಿಕ್ಕದಾಗಿಸುವುದೇನೋ ಹೌದು. ಅವು ನಮ್ಮನ್ನು ಬಂಧಿಸುತ್ತಿರುವುದೂ ಅಷ್ಟೇ ಸತ್ಯ ಎನ್ನುತ್ತಾರೆ ಕವಿ ಇಲ್ಲಿ.

ಹಕ್ಕಿ ಹಾಡುವುದಿಲ್ಲ
ಗಾಳಿ ಸುಳಿಯುವುದಿಲ್ಲ
ನೀರು ಹರಿಯುವುದಿಲ್ಲ

******

ಇಲ್ಲಿ ರಸ್ತೆಗಳು ಕೂಡುತ್ತವೆ
ಮಹಲುಗಳು ಬೆಳೆಯುತ್ತವೆ
ಸೇತುವೆಗಳು ದಡಗಳ ಬೆಸೆದು
ಆ ಸೇತು ಹಿಮಾಚಲಕ್ಕೆ ಸರಪಳಿ ಬಿಗಿಯುತ್ತವೆ
ಮತ್ತೆ ಕವಿಗಿಲ್ಲಿ ಎಚ್ಚರವಿದೆ, ಇದು ಕನಸಲ್ಲ ಎಂಬ ಅರಿವೂ ಇದೆ.

ಹೆಣ್ಣಿನ ಸ್ಥಿತಿಗತಿ, ಅವಳ ಶೋಷಣೆ, ಲಿಂಗತಾರತಮ್ಯದ ಪ್ರತಿಫಲನಗಳು ಅವರ ಅನೇಕ ಕವನಗಳು ಪ್ರತಿಫಲಿಸುತ್ತವೆ. ‘ನೆರಳು’ ಎಂಬ ಕವನದಲ್ಲಿ ಅವರು ಹೇಳುತ್ತಾರೆ,

‘ಧೃತರಾಷ್ಟ್ರನಪ್ಪುಗೆಯಲಿ
ನರಳುವ ಗಾಂಧಾರಿ
ಹೊರಹೊರಳಿ ನುಂಗಿದಳು ಕನಸ
ಉರಿವ ಪಲ್ಲಂಗದಲಿ ಹನಿಹನಿಯಾಗಿ ಇಂಗಿದಳು’

ಇದು ಪುರಾಣದ ಪಾತ್ರವೊಂದನ್ನು ಅವರು ಚಿತ್ರಿಸಿದ ಬಗೆಯಾದರೆ ಅವರ ಇನ್ನೊಂದು ಕವನ ‘ಅಜಾತ ಶತ್ರುವಿನ ಅಹವಾಲು’ ದಲ್ಲಿ ಇನ್ನೂ ಹುಟ್ಟದಿರುವ ಮಗುವೊಂದು ತನ್ನ ತಾಯಿಯೊಂದಿಗೆ ಮಾತನಾಡುತ್ತದೆ,

ನಿನಗೋ ಹುಟ್ಟಲಿರುವ ನನ್ನ
ಲಿಂಗದ ಚಿಂತೆ ಹತ್ತರ ಕೂಡ ಹನ್ನೊಂದಾಗಿ
ನಿನ್ನಂತೆ ಯಾರ್ಯಾರದೋ ತುರಿಕೆಗೆ
ತೊಗಲಾಗದಿರಲೆಂದೇ ಉಸಿರ ಉಮ್ಮಳ
ಆದ್ದರಿಂದ,
ಮನುಷ್ಯರಿಲ್ಲದ ಈ ಜಗತ್ತಿನಲ್ಲಿ
ನಿನ್ನೀ ಪವಿತ್ರ ಗುಡಿಯ ಸಜೀವ ಪ್ರತಿಮೆಯೆದುರು
ಪ್ರತಿಷ್ಠಾಪಿಸುವ ಹುಚ್ಚುಸಾಹಸ ಬಿಟ್ಟುಬಿಡು
ನಿಶ್ಚಿಂತೆಯಿಂದ ನನ್ನನ್ನಿಲ್ಲೇ ಬೆಳಕಿನರಮನೆಯಲ್ಲಿ
ಊರಿಬಿಡು

ಇನ್ನೂ ಹುಟ್ಟದ ಕಂದನ ಈ ಅಹವಾಲು ಹೆಣ್ಣಿನ ಶೋಷಣೆಯ ಮುಂದಿನ ಪುಟಗಳನ್ನು ನಮ್ಮೆದುರು ತೆರೆದಿಡುತ್ತದೆ. ಹಾಗೆಂದೇ ಇದು ಮುಗಿಯುವ ಕಥೆಯೇ ಅಲ್ಲ ಎಂಬ ಅರಿವು ಕವಿಗಿದೆ. ಅಂದು ಅಕ್ಕನಿಂದ ಶುರುವಾದ ಈ ಧಾರಾವಾಹಿ ಕಥೆ ಇಂದಿಗೂ ಮುಂದುವರೆಯುತ್ತಿದೆ ಎನ್ನುತ್ತದೆ ಅವರ ಸಶೇಷ ಎನ್ನುವ ಕವಿತೆ.

ಅವಳತ್ತರೂ ನೀವು ನಗುತ್ತೀರಿ
ನಿರ್ಲಿಪ್ತ ಜಾರುಬಂಡೆಯಾಟದಲಿ
ಮೈಮನ ಮರೆಯುತ್ತೀರೆ
ಅಕ್ಕ ಬರೆದಿಟ್ಟ ಧಾರಾವಾಹಿ ಕತೆಯನ್ನು
ನಾವು ಮುಂದುವರೆಸಿದ್ದೇವೆ
ಬರೆಯುತ್ತ, ಬರೆಯುತ್ತ ಬರಹವಾಗಿದ್ದೇವೆ ವಾಚ್ಯ
ಖೋ ಖೋ ಮೈದಾನದಲಿ
ಲಕ್ಷ ಲಕ್ಷ ನೀರಜೆಯರ ಕತೆ
ಸಶೇಷ, ಸಧ್ಯ

ಎಷ್ಟು ಸತ್ಯದ ಮಾತಿದು! ಅಂದು ಸಶೇಷವಾದ ಧಾರಾವಾಹಿ ಕಥೆ ಇಂದಿಗೂ ಮತ್ತೆ ಮತ್ತೆ ನಿರ್ಭಯಾ, ಆಸೀಫಾ, ಪ್ರಿಯಾಂಕ…. ಹೀಗೆ ಮುಂದುವರೆಯುತ್ತಲೇ ಇದೆ.

ಕೌಟುಂಬಿಕ ಆವರಣದ ಆಪ್ತತೆ ಮತ್ತು ಪ್ರೀತಿಯ ಕವನಗಳು ಈ ಕವನದಲ್ಲಿ ಸೇರಿವೆ. ‘ಗಂಗೋತ್ರಿಯ ಹಕ್ಕಿಗಳು’ ಎಂಬ ಅವರ ಕವನದಲ್ಲಿ ಬರುವ ಸಾಲುಗಳಿವು.

ಸ್ವಾತಿ ಹನಿ ಮುತ್ತಾಗಿ ಚಿಗುರೊಡೆವ ಗಳಿಗೆ
ನೆಲನೆಲದ ಪುಲಕ ಕರೆ ಗಂಗೋತ್ರಿ ಬಳಿಗೆ

ಸುಧಾರಣೆಗಳು, ಬದಲಾವಣೆಗಳು, ಆಧುನಿಕತೆ ವಿಶ್ವವನ್ನು ಚಿಕ್ಕದಾಗಿಸುವುದೇನೋ ಹೌದು. ಅವು ನಮ್ಮನ್ನು ಬಂಧಿಸುತ್ತಿರುವುದೂ ಅಷ್ಟೇ ಸತ್ಯ ಎನ್ನುತ್ತಾರೆ ಕವಿ ಇಲ್ಲಿ.

ಅವರ ಒಲುಮೆ ಎನ್ನುವ ಕವನ ತವರಿಗೆ ಹೆರಿಗೆಗೆಂದು ತವರಿಗೆ ಹೋದ ಮಡದಿಯನ್ನು ನೆನಪಿಸಿಕೊಂಡು ಅವಳನ್ನು ನೋಡುವ ಉತ್ಕಟ ಆಸೆಯನ್ನು ತೆರೆದಿಡುತ್ತದೆ.

ಮೊನ್ನೆ ದೀಪಾವಳಿಗೆ ತಿಂಗಳೊಪ್ಪತ್ತಾತು
ಕೆಕ್ಕಾರಿನಿಂದೀವರೆಗೆ ಸುದ್ಧಿಯಿಲ್ಲ
ತೆರೆದ ಬಟ್ಟಲುಗಣ್ಣ ಹಾದಿಯುದ್ದಕೂ ಚೆಲ್ಲಿ
ಕುಂತಿರುವೆ ಕಾತರವ ಕಡೆಯುತಿಲ್ಲಿ
ಕಪ್ಪು ಕಣ್ಣಿನ ತುಂಬ ಕಂಬನಿಯ ತುಂಬುತ್ತ
‘ಬರುವೆ’ ನೆಂದಾವತ್ತು ಭಾರದಲ್ಲಿ
ಹಸಿರ ತೇರಿನ ಹಾಗೆ ಅಬ್ಬೆ ಸಂಗ್ತಿಗೆ ನೀನು
ಹೊಸ್ತಿಲು ಹೊರಳಿದೆ ತಾಪದಲ್ಲಿ
ದೀಪ ಹಚ್ಚುವ ಹೊತ್ತು
ಕಾಡುತಿರೆ ದೆಂಪಾಗಿ
ಇರುಳು ಕಳೆಯಲಿ ಬರುವೆ ಹಾರಿ ಅಲ್ಲಿ

ವರ್ತಮಾನದ ಸಂಗತಿಗಳಿಗೆ ಸದಾ ತುಡಿಯುವ ಅವಧಾನಿಯವರು ಸಾಕ್ಷರತಾ ಆಂದೋಲನ, ವಿಜ್ಞಾನ ಚಳುವಳಿಗಳ ಮುಂಚೂಣಿಯಲ್ಲಿದ್ದವರು. ಅನೇಕ ವಾದ, ವಿವಾದಗಳಿಗೆ ಮುಖಾಮುಖಿಯಾಗುತ್ತಲೇ ಮೌಢ್ಯ ಮತ್ತು ಕಂದಾಚಾರಗಳನ್ನು ಸದಾ ತಮ್ಮ ಮೊನಚು ಮಾತುಗಳಿಂದ ಟೀಕಿಸುತ್ತಿದ್ದರು. ಪ್ರಖರ ವೈಚಾರಿಕತೆಯನ್ನು ತಮ್ಮ ಶಿಷ್ಯವರ್ಗದಲ್ಲಿ ಬೆಳೆಸಲು ಅನೇಕ ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದರು. ಪೋಲಂಕಿಯವರು ಸೀತಾಯಣ ಬರೆದು ವಿವಾದಕ್ಕೊಳಗಾದ ಸಂಗತಿಯನ್ನು ಅವರ ಒಂದು ಕವನ ದೈನಂದಿನ ಚಹರೆಗಳ ಮೂಲದ ವಿಡಂಬನೆಗೊಳಪಡಿಸುತ್ತದೆ. ಮನುಷ್ಯನ ಆಚಾರ ಮತ್ತು ವಿಚಾರಗಳಿಗಿರುವ ಕಂದರವನ್ನು ನಮ್ಮೆದುರು ತೆರೆದಿಟ್ಟು ಬೆಚ್ಚಿಬೀಳಿಸುವಂತೆ ಮಾಡುತ್ತದೆ. ‘ಗೋಪಿ ಮತ್ತು ಸೀತಾಯಣ’ ಅಂಥದೊಂದು ಕವನವಾಗಿದೆ.

ಕೃಷ್ಣಭಟ್ಟರ ಮಗ ಗೋಪಿ ಬೆಳಗ್ಗೆ ಎದ್ದವನೇ ‘ಕರಾಗ್ರೇ ವಸತೇ…’ ಎಂಬ ಶ್ಲೋಕ ಹೇಳುತ್ತಲೇ ಕೆರೆಗೆ ಹೋಗಿ ತಣ್ಣೀರಿನಲ್ಲಿ ‘ಉಹೂಹೂ …’ ಎಂದು ಮುಳುಕು ಹೊಡೆದು ಬಂದು

ದೇವರ ಕೋಣೆಯ ಮಂದಾರ ಪೀಠದ ಎದುರು ಪದ್ಮಾಸನದಲ್ಲಿ
ಮೂರು ಬಲಿದು ‘ಕೇಶವಾನಂತ ಗೋವಿಂದಾಯ, ಗಂಟೆ ಬಡಿದ
ಸೀತಾಯಣದ ಪೋಲಂಕಿ ಹಿಂದೂ ಸಂಸ್ಕೃತಿಗಪಮಾನ ಮಾಡಿದನೆಂದು
ತುಂಡ್ಗುಪ್ಪು ಹೊಡೆದ ಸಾಹಸವನ್ನು ಸಾಭಿನಯವಾಗಿ ಅಪ್ಪಂಗೆ ಹೇಳಿ
ಕೆಲಸದ ಲಕ್ಷ್ಮಿ ತೆರಕಿನ ಕಲ್ಲಿ ಹಿಡಿದು ಬೇಣಕ್ಕೆ ಹೊರಟಿದ್ದ್ಉ ಕಂಡು
ನೇವಾಳ ಸಡಿಲಿಸಿ, ತೋಟದ ಸಂಧಿಯಿಳಿಜಾರಿನಲಿ ಮರೆಯಾದ

ಮತ್ತೆ ಹೊತ್ತು ಮಾರುದ್ದ ಬಂದಾಗ ಊಟಕ್ಕೆ ಕುಂತು
ಹುಳಿಗೆ ಖಾರ ಸಾಕಾಯ್ದಿಲ್ಲೆ ಎಂದು ಬಡಿಸಲಿ ಬಂದ
ಹೆಂಡತಿಯ ಮುಡಿ ಹಿಡಿದು ‘ಹಡಬೆ ರಂಡೆ ಹಾಳಾಗಿ ಹೋಗು’
ಎನ್ನತ್ತ ಬಡಿದೇ ಬಡಿದ; ಾಫೋಶನ ತೆಕ್ಕೊಂಡು ಕವಳ ಜಡಿದ

ಇಲ್ಲಿ ಕವಿ ಕೇವಲ ಸಮಾಜವನ್ನು ಮಾತ್ರ ತರಾಟೆಗೆ ತೆಗೆದುಕೊಳ್ಳುವುದಿಲ್ಲ, ಬದಲಾಗಿ ಬರೆಯುವ ತನ್ನನ್ನೂ ವಿಡಂಬನೆಗೊಳಪಡಿಸಿಕೊಳ್ಳುತ್ತಾನೆ. ಹಬ್ಬ ಮುಗಿಸಿ, ಪಂಚಾಂಗ ಶ್ರವಣಗಳೆಲ್ಲ ಮುಗಿಸಿ ಕವಿತೆ ಬರೆಯಲು ಕುಳಿತ ಅಪ್ಪನನ್ನು ಅವನ ಮಗನೇ ತರಾಟೆಗೆ ತೆಗೆದುಕೊಳ್ಳುವುದನ್ನು ‘ಹಬ್ಬ, ಕವಿತೆ, ಹುಡುಗ’ ಎನ್ನುವ ಕವಿತೆ ಹೀಗೆ ಚಿತ್ರಿಸುತ್ತದೆ.

ಅಪ್ಪ, ನೀ ಹೇಗೆಲ್ಲ ಕವಿತೆಯನು ಬರೆಯುತ್ತ
ಬಹುಕಾಲವಾಯ್ತಲ್ಲ ಕುಳಿತು ಕಡೆದು?
ಮಣ್ಣ ಬಳ್ಳಿಯಲೊಡೆದ ಬಣ್ಣ ಬಣ್ಣದ ಹೂವು
ಕರಿಬಿಳಿ ಕೆಂದಾವರೆ ಮೋರೆ, ಗಡಿಯಿಲ್ಲದೆ ಮೇರೆ
ನಾಡು ಕಾಡುಗಳ ಬೇಲಿಯ ಕಳಚಿ
ನೆಲದುದ್ದ ಕೊರೆದ ಕಾಲುವೆಯ ತುಂಬಿದೆ
ನೀವೇನು ಮಾಡಿದಿರಿ ಹೇಳಿ ಅಪ್ಪ?
ಅಂಥ ಕವಿತೆಯ ಬದುಕಿ
ಬರೆಯೋಣ ಮಲೆನಾಡ ಕೊಪ್ಪ

ಕವಿತೆ ಕೇವಲ ಬರೆಯುವುದಕ್ಕಲ್ಲ, ಬದುಕುವುದಕ್ಕೆ ಕೂಡ ಎಂಬ ಎಚ್ಚರವನ್ನು ಕಾಪಿಟ್ಟುಕೊಂಡೇ ಕವಿತೆ ಬರೆದವರು ಅವಧಾನಿಯವರು. ಜೊತೆಗೆ ಇಲ್ಲದ್ದನ್ನು ಅರಸುವುದಕ್ಕೆ ಮಾತ್ರವಲ್ಲ, ಇದ್ದ ದುಗುಡಗಳನ್ನು ಮರೆಯುವ ಮುಲಾಮು ಕವಿತೆ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸುವುದು ಹೀಗೆ…
ಕವಿತೆ ಬರೆಯುತ್ತೇನೆ,
ಮಹಾಭಾರತದ ಮೊಮ್ಮಗಳ ಮನೆಯಲ್ಲಿ
ಉತ್ತರಕನ್ನಡದ ಕಾಶ್ಮೀರದಲ್ಲಿ ಮತ್ತು ಶರಾವತಿಯ ಗಡಿಯಲ್ಲಿ
ಕಣ್ಣಿತ್ತು ನನಗೆ ನಾನೇ ರೋಮ್ಯಾಂಟಿಸೈಸ್ ಮಾಡಿಕೊಳ್ಳುತ್ತ…
ಯಾಕೆಂದರೆ ಇಲ್ಲದ್ದ ಅರಸುವುದಕ್ಕಲ್ಲ,
ಇದ್ದದ್ದ ಮರೆಯಲಿಕ್ಕೆ.

ಎಲ್ಲ ಕಟ್ಟೆಳೆಗಳಿಂದ ಬಿಡುಗಡೆಗೊಳ್ಳಬೇಕೆಂಬುದು ಸಮಾನತೆಯನ್ನು ಕನಸುವವರೆಲ್ಲರ ಕಾಯುವಿಕೆಯಾಗಿರುತ್ತದೆ. ಇಲ್ಲಿಯೂ ಕವಿ ಅಂಥದೊಂದು ಕ್ಷಣಗಳಿಗಾಗಿ ಕಾಯುತ್ತಾರೆ.

ಕಾಯುವುದು ಎಂದರೆ ಬೇಯುವುದು
ಕುದ್ದು ಕೂಳಾಗುವುದು ಸಕ್ಕೋಟು ಸಮಾರಾಧನೆಗೆ
ಸಹಪಂಕ್ತಿ, ಸಹಭುಕ್ತಿ ಬೆಳೆದಲ್ಲೆಲ್ಲ
ಕ್ರಿಯೆನೊಕ್ಕೊಕ್ಕಿ ಹೊಸ ಬದುಕಿನೊಕ್ಕಲಾಗುವುದಕ್ಕೆ

ಇಂಥದೊಂದು ಹೊಸಬದುಕಿನೊಕ್ಕಲಾಗುವುದಕ್ಕೆ ಕಾಯುವ ಪ್ರತಿಯೊಬ್ಬರ ಹೆಜ್ಜೆಯೂ ನೆಲದ ಮೇಲಿರಬೇಕೆಂಬುದು ಅವಧಾನಿಯವರ ಆಶಯವಾಗಿತ್ತು. ಬದುಕನ್ನು, ಅದರ ಸವಿಯನ್ನು ಕ್ಷಣಬಿಡದೇ ಆಸ್ವಾದಿಸುತ್ತಲೇ ನರನರದಲ್ಲೂ ಪ್ರೀತಿ ಹೆಜ್ಜೆಯ ಬರೆವ ಕಲೆಯ ಕಲಿಯಬೇಕೆಂದು ಕನವರಿಸಿದವರು ಅವಧಾನಿಯವರು ಮತ್ತು ಅಂತಹ ಕನಸನ್ನು ತಮ್ಮ ಪರಿಧಿಗೆ ಬಂದ ಎಲ್ಲರಿಗೂ ಅದನ್ನು ದಾಟಿಸಿದರೆಂಬುದು ಇನ್ನೂ ವಿಶೇಷ ಸಂಗತಿಯಾಗಿದೆ. ಅವರ ‘ಒಪ್ಪುವಿಕೆ’ ಕವನ ನೆಲವ ಅಪ್ಪುವ ಅವರ ಕನಸನ್ನು ಹೀಗೆ ಸೆರೆಹಿಡಿಯುತ್ತದೆ.

ಅಪ್ಪಿಕೋ ಅಪ್ಪಿಕೋ
ಮೊದಲೊಪ್ಪಿಕೋ ಈ ನೆಲವ
ಆಕಾಶದೊಡಲಲ್ಲಿ ಗರಿಬಿಚ್ಚಿದರೂನೂ
ಬೇರಿಳಿದ ಕರಿಮಣ್ಣಿನ ಕಸುವ
ಜಾತಿ ಧರ್ಮಗಳ, ಭಾಷೆಗೀಷೆಗಳ, ಕಾವಿಕೋವಿಗಳ
ತಲೆತಿರುಕ ಬಿಂದ್ರನ್ ವಾಲೆಗಳನ್ನೆಲ್ಲ ಸಾಲಾಗಿ
ಕಚ ಕಚ ಕುತ್ತಿರುವ ನೈತಿಕ ನೆಲವನ್ನು
ನರನರದಲ್ಲೂ ಪ್ರೀತಿ ಹೆಜ್ಜೆಯ ಬರೆವ ಕಲೆಯ

ಪ್ರೀತಿಯ ಹೆಜ್ಜೆಯ ಬರೆಯುವ ಕಲೆಯನ್ನು ಅವರು ಸಂಘಟನೆ, ಸಾಹಿತ್ಯಕ ಕಾರ್ಯಕ್ರಮಗಳು, ಹೋರಾಟಗಳು, ಚಳುವಳಿಗಳು, ಕಾವ್ಯ, ನಾಟಕ, ಯಕ್ಷಗಾನವೇ ಮೊದಲಾದ ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ಬದುಕಿನುದ್ದಕ್ಕೂ ಕಾಪಿಡುತ್ತಲೇ ಹೋದರು. ಹಾಗೆಂದೇ ಅವರು ಗತಿಸಿದ ಇಪ್ಪತ್ತು ವರ್ಷಗಳ ನಂತರವೂ ಅವರ ವಿದ್ಯಾರ್ಥಿ ಸಮೂಹ ಅವರನ್ನು ಗೌರವ ಮತ್ತು ಪ್ರೀತಿಯಿಂದ ನೆನಪಿಸಿಕೊಳ್ಳುತ್ತದೆ. ವಿಮರ್ಶಕರಾದ ಎಂ.ಜಿ.ಹೆಗಡೆಯವರು ಹೇಳುತ್ತಾರೆ, ಉತ್ತರಕನ್ನಡದ ಸಾಕ್ಷಿಪ್ರಜ್ಞೆಯಂತೆ ಬದುಕಿದಅವಧಾನಿ ಮತ್ತು ಆರ್.ವಿ. ಭಂಡಾರಿಯವರ ಉತ್ಕೃಷ್ಟ ಕೃತಿಗಳೆಂದರೆ ಅವರ ಕನಸುಗಳನ್ನು ತಮ್ಮ ಹೆಗಲಿಗೇರಿಸಿಕೊಂಡು ತಿರುಗುವ ಅವರು ಬೆಳೆಸಿದ ಯುವಮನಸ್ಸುಗಳು ಎನ್ನುತ್ತಾರೆ. ತೀರ ಬೇಗನೆ ಅಂದರೆ ಕೇವಲ 52ನೇ ವಯಸ್ಸಿಗೆ ಅವಸರದಿಂದ ಎದ್ದು ನಡೆದ ಅವಧಾನಿಯವರು ತಮ್ಮನ್ನು ಸಾವಿನ ನಂತರ ಹೇಗೆ ನೆನಪಿಸಿಕೊಳ್ಳಬೇಕು ಎಂಬುದನ್ನೂ ಬರೆದಿಟ್ಟೇ ಹೋಗಿದ್ದಾರೆ. ‘ನಾ ಹೊರಟು ಹೋದಾಗ’ ಎಂಬ ಕವಿತೆ ಅವರ ಸಾವಿಗೆ ಅವರೇ ಬರೆದ ಮುನ್ನುಡಿಯಂತಿದೆ.

ನಾನು ಹೊರಟು ಹೋದೆನೆಂದು ಅಳಬೇಡ ನೀ ಗೆಳತಿ
ನೆನಪಿಸಿಕೋ ನೀನೊಮ್ಮೆ ಕಳೆದ ಖುಶಿಗಳಿಗೆಗಳ

ಹಕ್ಕಿ ಗಿಡಗಂಟಿ ಕೊರಳಲ್ಲಿ ನನ್ನ ಕಾಣು
ಕಡಲಹಕ್ಕಿಯ ಸ್ವರದಿ ನನ್ನ ಮಾತನೆ ಕೇಳು
ನಾ ಬರೆದ ಸಾಲುಗಳಲ್ಲಿ ನನ್ನ ಹುಡುಕು
ಉದುರುವೆಲೆಗಳಲ್ಲಿ ನಿಟ್ಟುಸಿರ ಕೇಳು
ನಿನ್ನ ಸುತ್ತಲೂ ನಾನು ಅವುಚಿಕೊಂಡೇ ಇರುವೆ
ಸಾಯುವುದು ಸುಳ್ಳು ಕಣೇ, ಹಳೆಯ ಟಾರ್ಚಿನ ಶೆಲ್ಲು

ಹೀಗೆ ಪ್ರಕೃತಿಯ ಎಲ್ಲ ಮಾತುಗಳನ್ನು ಕೇಳಿಸಿಕೊಳ್ಳುವ ಸೂಕ್ಷ್ಮತೆಯನ್ನು ತನ್ನ ಮುಂದಿನ ಪೀಳಿಗೆಗೆ ದಾಟಿಸಿದ ಅವಧಾನಿಯೆಂಬ ಅದ್ಭುತ ಗುರುವನ್ನು ಈ ಕವನ ಸಂಕಲನವೋದುತ್ತಲೇ ಇನ್ನೊಮ್ಮೆ ಕಣ್ಣೆದುರು ತಂದುಕೊಂಡೆ. ಮೂಲತಃ ವಿಜ್ಞಾನದ ವಿದ್ಯಾರ್ಥಿಯಾದ ನಾನು ತರಗತಿಗಳನ್ನು ತಪ್ಪಿಸಿ ಅವರ ಕಾವ್ಯದ ಕೋಣೆಯೊಳಗೆ ಕುಳಿತುಕೊಳ್ಳುತ್ತಿದ್ದ ಉದ್ವೇಗವನ್ನೇ ಅವರ ಕವನದ ಬಗ್ಗೆ ನಾಲ್ಕು ಸಾಲು ಬರೆಯುವಾಗಲೂ ಅನುಭವಿಸುತ್ತಿದ್ದೇನೆ. ಅವರ ಕಾವ್ಯದ ಓದು ನನ್ನ ಬಿಡುಗಡೆಯ ಕ್ಷಣವಾಗಿ ಒದಗಿ ಬಂದಿದೆ.