Advertisement
ಜೇಲಿನೊಳಗೂ ಒಂದು ಅಮೃತವಾಹಿನಿ:ದತ್ತಾತ್ರಿ ಲಹರಿ

ಜೇಲಿನೊಳಗೂ ಒಂದು ಅಮೃತವಾಹಿನಿ:ದತ್ತಾತ್ರಿ ಲಹರಿ

ರಾತ್ರಿಯ ನೀರವತೆಯನ್ನು ಬೇಧಿಸುವಂತೆ ಕಾವಲುಗಾರನ ಬೂಟುಗಾಲುಗಳು. ಬೂಟುಗಾಲಿನ ಶಬ್ದ ಕರಗುವ ಜೊತೆಯಲ್ಲೇ ಮತ್ತೆ ಗಪ್ಪನೆ ಅಪ್ಪಳಿಸುವ ಗಾಢ ಮೌನ. ಹುಣ್ಣಿಮೆಯಾದರೂ ಸರಿ ಅಮಾವಾಸ್ಯೆಯಾದರೂ ಸರಿ, ಕಿಟಕಿರಹಿತವಾದ ಆ ಗೂಡಿಗೆ ರಾತ್ರಿಯ ದಟ್ಟ ಕತ್ತಲೆಯಷ್ಟೇ ಗೊತ್ತು. ಗೋಡೆಯ ಮೇಲೊಂದು ಧ್ಯಾನಮಗ್ನ ಹಲ್ಲಿ; ನೆಲದ ಮೇಲೊಂದು ಸೂರು ದಿಟ್ಟಿಸುವ ಜೀವ. ಹಸಿವಾಗಬಲ್ಲ, ರೋಗಬೀಳಬಲ್ಲ, ಗಡ್ಡಬೆಳೆಸಬಲ್ಲ, ತೀರಾ ಮನಸ್ಸು ಬಂದರೆ ಮಾತನಾಡಬಲ್ಲ ಜೀವ.

ಕತ್ತಲೆಯೊಂದಿಗೆ ಕತ್ತಲೆಯಾಗಿ ಕರಗಿರುವವನು ಅವನು. ಒಬ್ಬ ಕೈದಿ. ಜೀವಾವಧಿ ಶಿಕ್ಷೆಯ ಕೈದಿ.

ಧಾರಾಕಾರವಾಗಿ ಮಳೆ ಹೊಡೆದು ನಿಂತ ಒಂದು ದಿನ ಖಾಕಿಬಟ್ಟೆಯ ಕಾವಲುಗಾರನೊಬ್ಬ ಇವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ‘ಬರೀ ರೊಟ್ಟಿ ತಿಂದು ನಿದ್ದೆ ಮಾಡಿದಂತಲ್ಲ. ಇಲ್ಲೊಂದು ಚರಂಡಿ ಅಗಿಯಿರೋ, ಬೋಳಿಮಕ್ಕಳಾ’ ಎಂದು ಪಿಕಾಸಿಗಳನ್ನು ಎಸೆದಾಗ ಕೆಸರಿನ ನೆಲದಲ್ಲಿ ಕಳೆದುಕೊಂಡದ್ದನ್ನೇನೋ ಅರಸುತ್ತಿರುವವನಂತೆ ಬಗೆದವನು ಇವನು. ಅಗೆಯಲಾರದೇ ಕೊಸರಾಡುತ್ತಿದ್ದ ಪಕ್ಕದ ಮುದುಕ ಇವನನ್ನು ಎರಡು ಕ್ಷಣ ದೃಷ್ಟಿಸಿ ‘ಏಸ್ಟ್ ವರ್ಸ ಆಯ್ತಯ್ಯೊ ಇಲ್ಲಿಗ್‍ಬಂದು’ ಎಂದು ಲೊಚಗುಟ್ಟಿದಾಗ ವರ್ಷಗಳ ಎಣಿಕೆಗೆ ಕೈಹಾಕಿ ತಡಬಡಾಯಿಸಿ ಹೋಗಿದ್ದ. ಪಂಜರದ ಕಂಬಿಗಳಿಗೆ ಒಂದೊಂದು ವರ್ಷವೂ ಏನಾದರೂ ಗುರುತು ಮಾಡಿದ್ದರೆ ಲೆಕ್ಕ ಸಿಗುತ್ತಿತ್ತೇನೋ? ಅಸಲಿಗೆ, ವರ್ಷವೊಂದು ಮುಗಿದು ಹೊಸವರ್ಷ ಪ್ರಾರಂಭವಾದದ್ದು ತಿಳಿಯುವುದಾದರೂ ಹೇಗೆ? ಇಬ್ಬರನ್ನು ಕೊಚ್ಚಿ ಜೈಲು ಸೇರಿದವನಿಗೆ ಹೇಳುವವರಾದರೂ ಯಾರು? ಮೊಣಕೈನಷ್ಟುದ್ದವಿದ್ದ ಗೇಟಿನ ಬಳಿಯ ಹೊಂಗೇಗಿಡ ಈಗ ಆಳೆತ್ತರಕ್ಕೆ ಬೆಳೆದು ನಿಂತಿದೆ, ಪೋಲೀಸ್‍ವ್ಯಾನ್ ಹತ್ತುವ ಮುಂಚೆ ಗಾಬರಿಯಲ್ಲಿ ಕಣ್ಣರಳಿಸಿ ನೋಡುತ್ತಿದ್ದ ಐದುವರ್ಷದ ಮಗನಂತೆ, ಹುಡುಗನಾಗಿದ್ದ ಕಾವಲುಗಾರ ಈಗ ಮಧ್ಯವಯಸ್ಕನಾಗಿ ದಟ್ಟ ಮೀಸೆಯ ಕರೀ ಜಾಡಿನಲ್ಲಿ ಬೆಳ್ಳಿ ಕೂದಲನ್ನೂ ಹೊತ್ತಿದ್ದಾನೆ. ಬೇರೆ ರೀತಿಯಲ್ಲಿ ಹೇಗೆ ಹೇಳುವುದು ಕಾಲ ಉರುಳುತ್ತಿದೆ ಎಂದು?

ಎಣಿಸಲಿಕ್ಕೆ ಕಷ್ಟವಾದರೂ ಹುಚ್ಚುಹೊಳೆಯಂತೆ ಹರಿದಿದ್ದರ ಕುರುಹಾಗಿ ಕಾಲ ಮಾಸುತ್ತದೆ ನೆನಪುಗಳನ್ನು. ಅಳಿದುಳಿದ ನೆನಪುಗಳು ನೀರಿಗೆ ಬಿದ್ದ ಬಣ್ಣದ ಚಿತ್ರಗಳು. ಶೀರ್ಷಿಕೆಯನ್ನಷ್ಟೇ ಉಳಿಸಿ ನೀರಿನಲ್ಲಿ ಕರಗಿದ ಕವಿತೆಯ ಸಾಲುಗಳು. ಮಸುಕು ಮಸುಕಾದರೂ, ಪಂಜು ಹಿಡಿದು ಮೆರವಣಿಗೆಯಲ್ಲಿ ಬರುತ್ತವೆ ರಾತ್ರಿ ಹೊತ್ತು. ಬರಲೇನೋ ಬಂದು ದೂರಕ್ಕೆ ತ್ರಾಣಸಾಲದೆ ಏದುಸಿರು ಬಿಡುತ್ತಾ ಇವನೊಬ್ಬನನ್ನೇ ಉಳಿಸಿ ಬಂದಂತೆಯೇ ಕರಗಿ ಹೋಗುತ್ತವೆ ತಮ್ಮ ಪಂಜಿನೊಡನೆಯೇ. ದಟ್ಟ ಕತ್ತಲಿನಲ್ಲಿ ಇವನೊಬ್ಬನೇ.

ಹೊರಗೆ, ಅಮೃತವಾಹಿನಿಯೊಂದು ಎದೆಯಿಂದ ಎದೆಗೆ ಹರಿದು ಬಯಲಿನಲ್ಲಿ ಹಾಲುಕ್ಕಿ ಚಿಗುರುಗಳ ಜೀವಜಾತ್ರೆ. ಗಗನದಲ್ಲೊಂದು ಕಾಮನಬಿಲ್ಲು. ಮಗುವಿನ ಕಣ್ಗಳಲ್ಲಿ ಹೊಳಪು. ಅಪ್ಪುಗೆಯಲ್ಲೊಂದು ಕೋಲ್ಮಿಂಚು; ಬೆಸುಗೆಯಲ್ಲಿ ಕಾಡ್ಗಿಚ್ಚು. ಮಿಂಚುಹುಳಗಳ ಮಿಣುಕು, ನಗರ ದೀಪಗಳ ಥಳುಕು. ಬೆಳಕಿನ ರೂಪದಲ್ಲಿ ಜೀವ ಸಂಚಯ. ಹುಟ್ಟಿಗೆ ಕೇಕೆ, ಪ್ರೀತಿಗೆ ವೀಣೆ, ಕೋಪಕ್ಕೆ ಮೃದಂಗ, ಮರಣಕ್ಕೊಂದು ಆಕ್ರಂದನ. ಶಬ್ದದೊಂದಿಗೆ ಜೀವ ಪರಿಣಯ.

ಒಳಗೆ, ಕಡುಗತ್ತಲೆ. ಮಧ್ಯರಾತ್ರಿಯಲ್ಲಿ ಹೊಕ್ಕ ಪಾಳು ಮನೆಯಂತೆ ಬರೀ ಅಂಧಕಾರ. ಜೀವ ಸಂಚಾರವೇ ಇರದ ಶವದೆದೆಯ ಮೌನ.

About The Author

ಎಂ.ಆರ್. ದತ್ತಾತ್ರಿ

ಎಂ.ಆರ್. ದತ್ತಾತ್ರಿ ಮೂಲತಃ ಚಿಕ್ಕಮಗಳೂರಿನವರು. ಹಲವಾರು ವರ್ಷ ಅಮೇರಿಕಾದಲ್ಲಿ ಕೆಲಸ ಮಾಡಿ ಈಗ ಬೆಂಗಳೂರಿಗೆ ವಾಪಾಸಾಗಿದ್ದಾರೆ. `ಮಸುಕು ಬೆಟ್ಟದ ದಾರಿ' ಇವರ ಇತ್ತೀಚಿನ ಕಾದಂಬರಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ