ಏನೆಲ್ಲಾ ನಮ್ಮ ಆಕಾಂಕ್ಷೆಗಳನ್ನು ನಮ್ಮ ಮಕ್ಕಳ ತಲೆ ಮೇಲೆ ಹೇರಿ ಬೆಳೆಸುತ್ತಾ ಹೋಗುತ್ತೇವೆ. ಆದರೆ ಮುಖ್ಯವಾಗಿ ಏನನ್ನು ಕಲಿಸಬೇಕಿತ್ತೋ ಅದನ್ನೇ ಕಲಿಸದೆ ಹೋಗುತ್ತೇವೆ. ನಾವು ಕಲಿಸಲೇ ಬೇಕಾದದ್ದು ಎನ್ನುವ ಎಷ್ಟೋ ಇದೆ. ನಮ್ಮನ್ನು ಜೋಪಾನ ಮಾಡುವ ಅದಷ್ಟೋ ಗುಣಗಳಿವೆ. ಒಬ್ಬರನ್ನು ನಿಷ್ಕಲ್ಮಷವಾಗಿ ಇಷ್ಟಪಡುವುದನ್ನು, ಪ್ರೀತಿಸುವುದನ್ನು ಕಲಿಸುವುದೇ ಇಲ್ಲ ಯಾಕೆ… ಹುಟ್ಟಂದಿನಿಂದ ಬಂದ ಮುಗ್ಧತೆಯನ್ನ ಕೊಂದು ಅಲ್ಲಿ ಸ್ವಾರ್ಥ ಮತ್ತು ಲೋಭವನ್ನ ಮಾತ್ರ ತುಂಬಿ ನೀರೆರೆದು ಬೆಳೆಸುತ್ತಾ ಹೋಗುತ್ತೇವೆ ಯಾಕೆ…
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

ಆ ಬಾನು ಭುವಿಯನ್ನು ಮುದ್ದಿಸಲೆಂದು ಈ ಕ್ಷಣ ತೀವ್ರವಾಗಿ ಬಯಸುತ್ತಿರುವೆ. ಅವ ಹಾಗೆ ಮಾಡಲೆಂದು ಅವಳಿಲ್ಲಿ ಮೈಯೆಲ್ಲ ಕಣ್ಣಾಗಿ ಕಾಯುತ್ತ ಕೂತಿದ್ದಾಳೆ. ಬರಡು ಆಕಾಶದ ತುಂಬ ಅದೆಲ್ಲಿಂದ ತೇಲಿ ಬರುತ್ತವೋ ಬಿಳಿ ಬಿಳಿ ಬೆಣ್ಣೆ ಮುದ್ದೆಯಂಥಾ ಮೋಡಗಳು. ಅವನ್ನೆ ಹಿನ್ನೆಲೆಯನ್ನಾಗಿಸಿಕೊಂಡು ದೊಡ್ಡ ಹಸಿವಿಗೆ ಸಣ್ಣದೊಂದು ಚೂರಿನಷ್ಟು ರೊಟ್ಟಿಯ ತುಣುಕೊಂದನ್ನು ಇತ್ತಂತೆ ಮಳೆ, ಮೆಲ್ಲಗೆ ಕೊಳವೆ ಮಾಡಿಕೊಂಡು ಇಳಿಯುತ್ತಿದೆ. ಭುವಿಯ ಹಸಿವು ಮತ್ತಷ್ಟು ಹೆಚ್ಚಾಗುತ್ತಿದೆ. ‘ಬಾನೇ ಬಾ, ಇಳಿದು ಬಾ, ಸುರಿದು ಬಾ, ಹರಿದು ಬಾ… ಸಾವನ್ನೇ ಮುಂದಕ್ಕೆ ತಳ್ಳಿ ಒಂದೇ ಒಂದು ದಿನವನ್ನು ಉಳಿಸಿಕೊಡುವ ಜೀವದ್ರವ್ಯವಾಗಿ ಬಾ…’ ಪುಟ್ಟ ಗುಬ್ಬಿಗಳು, ಮಿಂಚುಳ್ಳಿಗಳು, ಹಾಡುವ ಹಕ್ಕಿಗಳು… ಪುಟ್ಟ ಪುಟ್ಟ ಗಿಡಗಳು, ಅದೇ ತಾನೆ ಮೊಳಕೆ ಹಂತವನ್ನು ದಾಟಿ ಎಳೆಯ ಎರೆಡೆಲೆಯನ್ನು ಹೊರಹಾಗಿ ಜಗತ್ತನ್ನು ಹೊಸಗಣ್ಣಿಂದ, ಹೊಸದೃಷ್ಟಿಯಿಂದ ನೋಡುತ್ತಿರುವ ಹೊಚ್ಚ ಹೊಸ ಸಸಿಗಳು, ಮೊದಲ ಹೂಬಿಟ್ಟು ಬೀಗುತ್ತಿರುವ ಆ ಅಂಗಳದಂಚಿನ ಗಿಡ… ಕಾಯುತ್ತಿವೆ ಬಿಟ್ಟು ಬಿಡದೆ ನಿರಂತರ… ಎಷ್ಟು ಸಂಯಮ ಇವಕ್ಕೆಲ್ಲಾ… ಬಾನೇ ನಿನ್ನ ಮದರಂಗಿಯ ಚಿತ್ತಾರ ಬರೆದ ಪಾದಗಳನ್ನು ಇರಿಸುತ್ತಾ ಇಳಿದು ಬಿಡು…

ಸುತ್ತಲೂ ಕವಿದಿರುವ ವಾತಾವರಣ ಹೊಸ ಅನುಭವವನ್ನು ಹುಟ್ಟಿಸುತ್ತಿದೆ. ಹುಟ್ಟಿದಾರಭ್ಯ ನೋಡಿಕೊಂಡೇ ಬಂದ ಅದೇ ಬಾನು, ಅದೇ ಭುವಿ, ಅದೇ ಮೋಡ ಅದೇ ಅದೇ ಎಲ್ಲವೂ. ಆದರೆ ಪ್ರತಿದಿನವೂ ಹೇಗೆ ಈ ಜ್ಞಾನೇಂದ್ರಿಯಗಳ ಅರಿವಿಗೆ ಹೊಸದೇ ಎನಿಸುವಂತೆ ಮಾಡಿಬಿಡುವ ತಾಕತ್ತು ಸುತ್ತಲಿನ ವಾತಾವರಣದ್ದು?!

ಅದೆಷ್ಟೋ ಕನಸುಗಳನ್ನು, ನಿರೀಕ್ಷೆಗಳನ್ನು, ಭರವಸೆಗಳನ್ನು, ಪ್ರಾರ್ಥನೆಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಟ್ಟುಕೊಳ್ಳುತ್ತಾ ಎದ್ದು ನಿಲ್ಲುತ್ತಿರುವ ಈ ಕಟ್ಟಡ ದಿನೇ ದಿನೇ ಇಷ್ಟಿಷ್ಟೇ ಆ ಭಾವನೆಗಳನ್ನು ತುಂಬಿಸಿಕೊಳ್ಳುತ್ತಾ ಜೀವಂತ ಮನೆಯಾಗುತ್ತಿದೆ ಅನಿಸುತ್ತದೆ ನನಗೆ.

ಮನೆಯ ಮುಂದಿನ ಖಾಲಿ ನಿವೇಶನ ತನ್ನ ಮಾಲೀಕರಿಗಾಗಿ ಕಾಯುತ್ತಿದೆ ತನ್ನ ಅಸ್ತಿತ್ವಕ್ಕಾಗಿ. ಅಲ್ಲೊಂದು ಸಮಾಧಿಯಿದೆ. ಎಂದೋ ಜೀವಂತವಾಗಿ ಇದೇ ನೆಲವನ್ನು ಉತ್ತು ಬಿತ್ತಿ ಬೆಳೆದು ಉಂಡು ಆಡಿದ ಜೀವವೊಂದು ಅಲ್ಲಿ ಅದರೊಳಗೆ ಚಿರನಿದ್ರೆಗೆ ಜಾರಿದೆ ನಿರ್ಜೀವವಾಗಿ. ವರ್ಷಗಳೆಷ್ಟೋ ಕಳೆದುಹೋಗಿವೆ. ಮಾಂಸ ಮೂಳೆಗಳೆಲ್ಲ ಮಣ್ಣಾಗಿದೆ. ಖಾಲಿ ನಿವೇಶನಕ್ಕೆ ಮತ್ತೂ ಖಾಲಿಯಾದ ಅನುಭವ. ಅದಕ್ಕೆ ತಾನೂ ಗೂಡೊಂದನ್ನು ಹೊರಬೇಕು, ತೋಟವೊಂದರ ಅಷ್ಟೂ ಬೇರುಗಳನ್ನು ಇಳಿಸಿಕೊಳ್ಳಬೇಕು ಎನ್ನುವ ಆಸೆ. ಆದರೆ ಸಧ್ಯಕ್ಕೆ ಅದಕ್ಕೀಗ ಯಾವ ಹೆಸರೂ ಇಲ್ಲ. ಅದೊಂದು ಖಾಲಿ ಜಾಗವಷ್ಟೇ. ಅಲ್ಲಿ ಸಮಾಧಿಯ ಸುತ್ತ ಬೇಡದ ಕಳೆಯ ಹೊರತು ಮತ್ತೇನೂ ಇಲ್ಲ. ಯಾರಾದರೂ ತನ್ನನ್ನು ಸ್ವಚ್ಛಮಾಡಿ ಅಲ್ಲೊಂದು ಪುಟ್ಟ ಮನೆ ಕಟ್ಟಿಕೊಳ್ಳಲಿ, ಆ ಮನೆಯ ಕಲರವವನ್ನು ತಾನು ಕಿವಿಗೊಟ್ಟು ಆಲಿಸುವಂತಾಗಲಿ, ತನ್ನಲ್ಲೂ ಆದೇ ಜೀವಂತಿಕೆಯ ಬಡಿತ ಹರಿಯುವಂತಾಗಲಿ, ತನ್ನ ಹೃದಯದೊಳಗೆ ಬೇರುಗಳ ಕಾಲನ್ನು ಆಡಲು ಇಳಿ ಬಿಟ್ಟ ಹೋದೋಟವೊಂದು ತನ್ನ ಎಲ್ಲ ಸತ್ವವನ್ನೂ ಹೀರಿ ಅರಳುವಂತಾಗಲಿ… ಏನೆಲ್ಲಾ ಬಚ್ಚಿಟ್ಟುಕೊಂಡು ಕಾಯುತ್ತಿರುವೆ ನೀಡಲು… ಹೀಗೇ ಬಡಬಡಿಸುತ್ತದೆ ಆಗಾಗ ಆ ಖಾಲಿ ನಿವೇಶನ. ಹೆಸರಿನ ಹಂಗು ಅದಕ್ಕಿಲ್ಲ. ಹೆಸರಿಲ್ಲದೆಯೂ ಅದು ಅದೆಷ್ಟೋ ಕಣ್ಣಿಗೆ ಕಾಣದ ಜೀವರಾಶಿಗಳಿಗೆ ನೆಲವಾಗಿದೆ, ನೆಲೆಯಾಗಿದೆ. ಜಗವ ಸುತ್ತಿರುವ ಮಾಯೆಯೊಳಗೆ ತಾನೂ ಸುತ್ತುತ್ತಿರುವ ಬಗ್ಗೆ ಅಚ್ಚರಿಯೂ ಇದೆ ಅದಕ್ಕೆ. ಆದರೆ ಅವಸರವಿಲ್ಲ, ದಕ್ಕಿಸಿಕೊಳ್ಳುವ ವಾಮ ಮಾರ್ಗಗಳಲ್ಲಿ ಅದು ಇಲ್ಲ. ಸೃಷ್ಟಿಯಲ್ಲಿ ತಾಳ್ಮೆ ಸಹಜವಾದದ್ದು. ತಾಳ್ಮೆಗೆ ಮಾಗಿಸುವ ಶಕ್ತಿ ಇದೆ. ಹಾಗೆಂದೇ ಸೃಷ್ಟಿಯ ಅಣು ಅಣುವೂ ಕಾಯುತ್ತವೆ. ಆದರೆ ಮನುಷ್ಯ ಮಾತ್ರ ಯಾಕೆ ಹೀಗೆ?! ಅವನೂ ಸಹ ಸೃಷ್ಟಿಯ ಭಾಗವೇ ತಾನೇ… ಅವನ ವ್ಯವಧಾನವೆಲ್ಲಿ ಹೋಯಿತು… ಅವನ ತಾಳ್ಮೆ ಯಾಕೆ ಸತ್ತಿದೆ. ಧಾವಂತ, ಅವಸರವನ್ನೇ ಬದುಕಿನ ರೀತಿಯನ್ನಾಗಿಸಿಕೊಳ್ಳಲು ಕಾರಣವೇನು, ಅದರಿಂದ ಅವನಿಗೆ ಸಿಕ್ಕಿದ್ದೇನು, ದಕ್ಕಿದ್ದೇನು, ದಕ್ಕದೇ ಹೋದದ್ದೇನು…

ನಾವು ಏನೆಲ್ಲಾ ಹೇಳಿಕೊಡುತ್ತೇವೆ ನಮ್ಮ ಮಕ್ಕಳಿಗೆ ಚನ್ನಾಗಿ ಓದಬೇಕು, ಓದಿ ದೊಡ್ಡ ಕೆಲಸಕ್ಕೇ ಸೇರಬೇಕು, ಕೈತುಂಬಾ ಹಣ ಸಂಪಾದಿಸಬೇಕು, ಆ ದೌಲತ್ತನ್ನು ಇತರರ ಮುಂದೆ ತೋರಿಸಿಕೊಂಡು ಮೆರೆಯಬೇಕು… ಹೀಗಾಗಿ ಏನೆಲ್ಲಾ ನಮ್ಮ ಆಕಾಂಕ್ಷೆಗಳನ್ನು ನಮ್ಮ ಮಕ್ಕಳ ತಲೆ ಮೇಲೆ ಹೇರಿ ಬೆಳೆಸುತ್ತಾ ಹೋಗುತ್ತೇವೆ. ಆದರೆ ಮುಖ್ಯವಾಗಿ ಏನನ್ನು ಕಲಿಸಬೇಕಿತ್ತೋ ಅದನ್ನೇ ಕಲಿಸದೆ ಹೋಗುತ್ತೇವೆ. ನಾವು ಕಲಿಸಲೇ ಬೇಕಾದದ್ದು ಎನ್ನುವ ಎಷ್ಟೋ ಇದೆ. ನಮ್ಮನ್ನು ಜೋಪಾನ ಮಾಡುವ ಅದಷ್ಟೋ ಗುಣಗಳಿವೆ. ಒಬ್ಬರನ್ನು ನಿಷ್ಕಲ್ಮಷವಾಗಿ ಇಷ್ಟಪಡುವುದನ್ನು, ಪ್ರೀತಿಸುವುದನ್ನು ಕಲಿಸುವುದೇ ಇಲ್ಲ ಯಾಕೆ… ಹುಟ್ಟಂದಿನಿಂದ ಬಂದ ಮುಗ್ಧತೆಯನ್ನ ಕೊಂದು ಅಲ್ಲಿ ಸ್ವಾರ್ಥ ಮತ್ತು ಲೋಭವನ್ನ ಮಾತ್ರ ತುಂಬಿ ನೀರೆರೆದು ಬೆಳೆಸುತ್ತಾ ಹೋಗುತ್ತೇವೆ ಯಾಕೆ…

ನಾವು ಪ್ರೀತಿಸುತ್ತಿದ್ದೇವೆ ಅಂದುಕೊಳ್ಳುವವರ ಹೃದಯಕ್ಕೇ ಚುಚ್ಚುತ್ತಿದ್ದೇವೆ. ಒಂದಲ್ಲ ಎರೆಡಲ್ಲ ಹದಿನಾಲ್ಕು ಬಾರಿ ಪ್ರೀತಿಸಿದ ಹೃದಯವನ್ನೇ ಚುಚ್ಚಿ ಚುಚ್ಚಿ ಕೊಲ್ಲುತ್ತೇವೆ ಎಂದರೆ ನಾವು ಕೊಡುತ್ತಿರುವ ಸಂಸ್ಕಾರದ ಬಗ್ಗೆಯೇ ಅನುಮಾನ ಮೂಡುತ್ತದೆ. ನನಗೆ ಬಣ್ಣ ಬಣ್ಣದ ಚಿಟ್ಟೆಗಳೆಂದರೆ ಬಹಳ ಇಷ್ಟ. ಆದರೆ ಕೈಗೆಟಕುವಷ್ಟು ಹತ್ತಿರವಿದ್ದರೂ ನಾನದನ್ನು ಮುಟ್ಟುವುದಿಲ್ಲ. ನೋಡುತ್ತೇನಷ್ಟೇ. ಕಾರಣ ಮುಟ್ಟಿದರೆ ಅದು ಬಣ್ಣ ಕಳೆದುಕೊಳ್ಳುತ್ತದೆ, ಅದರ ರೆಕ್ಕೆ ಮುರಿಯುತ್ತದೆ, ಕೊನೆಗದು ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿ ಬರುತ್ತದೆ ಹಾಗಾಗಿ. ಹಾರಲಾರದ ನಿರ್ಜೀವ ಚಿಟ್ಟೆಯನ್ನು ಬಾಟಲಿಯಲ್ಲೋ, ಪುಸ್ತಕದ ನಡುವೆಯೋ ಇಟ್ಟುಕೊಳ್ಳುವ ಬದಲು ಸ್ವಚ್ಛಂದವಾಗಿ ಹಾರಾಡುವ ಚಿಟ್ಟೆಯನ್ನು ಅರೆಕ್ಷಣವಾದರೂ ಸರಿ ನೋಡಿ ಆನಂದಿಸುವುದೇ ನನಗಿಷ್ಟ. ನನಗೆ ಹೂವೆಂದರೆ ಪಂಚಪ್ರಾಣ, ಆದರೆ ಮುಡಿಯಲು ಮನಸು ಬರುವುದಿಲ್ಲ. ಮುಡಿಯುವುದಿರಲಿ, ಗಿಡದಿಂದ ಕೀಳಲಿಕ್ಕೇ ಇಷ್ಟವಾಗುವುದಿಲ್ಲ. ಕಾರಣ ಕಿತ್ತ ಕೂಡಲೇ ಅದು ಬಾಡುತ್ತದೆ. ಒಂದಷ್ಟು ಹೊತ್ತಾದ ಮೇಲೆ ಪ್ರಾಣಬಿಡುತ್ತದೆ. ಅದು ನನಗಿಷ್ಟವಿಲ್ಲ. ಗಿಡದಲ್ಲೇ ಇದ್ದರೆ ಒಂದಷ್ಟು ದಿನವಾದರೂ ಅದು ಅರಳಿ ಸುಗಂಧ ಬೀರುತ್ತದೆ. ಮನಸಿಗೆ ನೆಮ್ಮದಿ ತರುತ್ತದೆ ಎಂದು. ಒಂದು ಸಸಿಯನ್ನು ನೆಟ್ಟು, ಆರೈಕೆ ಮಾಡಿ ಬೆಳೆಸುವುದಿದೆಯಲ್ಲ… ಹಾಗೆ ಬೆಳೆಸಿದ ಯಾರಿಗಾದರೂ ಕೀಳಲು ಕೈಬರುವುದಿಲ್ಲ. ಅಂಥದ್ದರಲ್ಲಿ ಪ್ರೀತಿಸಿದ ಜೀವವನ್ನೇ ಬಲಿ ಪಡೆಯುವಷ್ಟು ಕ್ರೌರ್ಯ ಹೇಗೆ ಸಾಧ್ಯ?! ಅವರೊಂದಿಗೆ ಎಷ್ಟೋ ಮಾತಾಡಿರುತ್ತೇವೆ, ಎಲ್ಲೆಲ್ಲೋ ಓಡಾಡಿರುತ್ತೇವೆ, ಏನೆಲ್ಲಾ ಭಾವನೆಗಳನ್ನು ಹಂಚಿಕೊಂಡಿರುತ್ತೇವೆ, ಆ ನವಿರು ಪ್ರೇಮದ ಸ್ಪರ್ಶ, ಅನುಭೂತಿ… ಓಹ್ ಹೇಗೆ ತಾನೆ ಸಾಧ್ಯ ರಕ್ತದ ಮಡುವಿನಲ್ಲಿ ಮಲಗಿಸಲು?! ಅಷ್ಟೊಂದು ನೋವು ಕೊಡುವ ತಪ್ಪಾದರೂ ಏನಾಯ್ತು?! ನಮ್ಮ ಬದುಕಿಗೆ ಎಷ್ಟೋ ಜನ ಬರುತ್ತಾರೆ, ಎಷ್ಟೆಲ್ಲಾ ಪ್ರೀತಿ ತಂದು ಕೈಯ್ಯಾರೆ ಉಣಿಸಿ ಹೋಗುತ್ತಾರೆ. ನಮಗೆ ಅಂತಹ ಅದೆಷ್ಟು ಪ್ರೀತಿ ಬಂದು ಸಲಹಿದರೂ ಸಾಲದು. ಹಾಗೆ ಪ್ರೀತಿಯನ್ನು ಉಣಿಸಿದ ಎಲ್ಲರಿಗೂ ಕೃತಜ್ಞರಾಗಿರುವುದು ಬೇಡವಾ ನಾವು?! ಯಾರೋ ಬರುತ್ತಾರೆ ಅಲ್ಪ ಕಾಲ ನಮ್ಮೊಂದಿಗಿರುತ್ತಾರೆ. ನಂತರ ಅವರ ದಾರಿ ಬೇರೆಯಾಯಿತು ಎಂದರೆ ಹಾರೈಸಿ ಕಳಿಸುವುದು ನಮ್ಮ ಧರ್ಮ ತಾನೇ. ಅಷ್ಟಕ್ಕೇ ನಮ್ಮ ಬದುಕು ಮುಗಿದುಬಿಡುತ್ತದಾ. ನಮ್ಮ ಬದುಕಿಗೆ ಮತ್ತೆ ಯಾರೋ ಬರುತ್ತಾರೆ. ಹಂಚುವಷ್ಟು ಪ್ರೀತಿಯನ್ನು ಎದೆಯೊಳಗಿಟ್ಟುಕೊಂಡರೆ ಅದು ದುಪ್ಪಟ್ಟು ಪ್ರೀತಿಯನ್ನು ಮರಳಿ ಹೊತ್ತು ತರುತ್ತದೆ ಮತ್ತಾರದೋ ರೂಪದಲ್ಲಿ. ಅದನ್ನು ಗುರುತಿಸುವ, ಒಪ್ಪಿಕೊಳ್ಳುವ ಮನಸ್ಸಿರಬೇಕು ನಮಗೆ.

ನಾವು ಪ್ರೀತಿಸುವುದನ್ನು ಮೊದಲು ಕಲಿಯಬೇಕಿದೆ. ನಮ್ಮ ಮಕ್ಕಳಿಗೆ ಪ್ರೀತಿಯ ಸಂಸ್ಕಾರವನ್ನು ಕೊಡಬೇಕಿದೆ. ನಾವು ನಮ್ಮ ಹೆತ್ತವರನ್ನು, ಒಡಹುಟ್ಟಿದವರನ್ನಾದರೂ ಎಷ್ಟು ಪ್ರೀತಿಸುತ್ತಿದ್ದೇವೆ?! ಅವರನ್ನು ನೋವಿನ ಮಡುವಿಗೆ ದೂಡಬಲ್ಲಷ್ಟು ನಿರ್ದಯಿಗಳಾಗುತ್ತಿದ್ದೇವೆ ಏಕೆ?! ಅವರು ಅದಕ್ಕೆಲ್ಲ ಅರ್ಹರಾ? ನಮ್ಮ ಯಾವ ತಪ್ಪಿನಲ್ಲೂ ಭಾಗಿಯಾಗದ ಅವರೇಕೆ ನಮ್ಮ ತಪ್ಪಿನಿಂದಾಗಿ ಇಷ್ಟೆಲ್ಲಾ ಅನುಭವಿಸಬೇಕು?! ಸ್ವಲ್ಪ ಕಡಿಮೆ ಓದಿದರೂ ಪರವಾಗಿಲ್ಲ, ಕಡಿಮೆ ಸಂಪಾದಿಸಿದರೂ ಪರವಾಗಿಲ್ಲ ಹೆಚ್ಚು ಹೆಚ್ಚು ಪ್ರೀತಿಸುವಂತಾಗಲಿ ನಮ್ಮ ಮಕ್ಕಳು. ಪ್ರೀತಿಯ ಅನುಭೂತಿ ಅವರಿಗೆ ಸಿಗಲಿ. ನಾವೂ ಸಹ ಅಂಕಗಳಿಗಿಂತ, ದುಡ್ಡಿಗಿಂತ, ಓದಿಗಿಂತ ಪ್ರೀತಿಯೇ ದೊಡ್ಡದು ಎಂದು ಕಲಿಸುವುದಷ್ಟೇ ಅಲ್ಲ, ಅವರನ್ನು ಅಷ್ಟೇ ತೀವ್ರವಾಗಿ ಪ್ರೀತಿಸಬೇಕಿದೆ. ಸಹನೆ ಮತ್ತು ತ್ಯಾಗದ ಮಹತ್ವ ಅವರಿಗೆ ತಿಳಿಸಬೇಕು. ಅವರೆಂದರೆ ಅವರಷ್ಟೇ ಅಲ್ಲ, ಅವರ ಸುತ್ತಾ ಬಾಂಧವ್ಯದ ನಾಜೂಕು ಬಳ್ಳಿಗಳಿವೆ, ಅವಕ್ಕೆ ಚೂಪು ಚೂರಿಗಳನ್ನು ತಾಗಿಸಿದರೆ ತುಂಡಾಗುತ್ತವೆ, ನಲುಗುತ್ತವೆ ಎಂದು ತಿಳಿಸಬೇಕಿದೆ. ಅಷ್ಟೇ ಅಲ್ಲ ಅವರ ನೋವಲ್ಲಿ ನಮ್ಮ ನೋವೂ ಇದೆ ಎನ್ನುವುದನ್ನು ಅರ್ಥಮಾಡಿಸಬೇಕಿದೆ. ಇಲ್ಲವಾದರೆ ನಾವು ಮಕ್ಕಳನ್ನು ಹೆರುವ ಬಗ್ಗೆಯೇ ಯೋಚಿಸಬೇಕಾಗಿ ಬರಬಹುದು. ಹೆತ್ತ ಮಕ್ಕಳನ್ನು ಮತ್ತೆ ಗರ್ಭದಲ್ಲೇ ಬಚ್ಚಿಟ್ಟುಕೊಳ್ಳುವ ಬಗ್ಗೆಯೂ ಯೋಚಿಬೇಕಾಗುತ್ತದೇನೋ ಗೊತ್ತಿಲ್ಲ. ಈ ಕ್ಷಣ ನಿಜಕ್ಕೂ ಆತಂಕವಾಗುತ್ತದೆ. ಹೇಗೆ ಬೆಳೆಸುತ್ತಿದ್ದೇವೆ ನಾವು, ಹೇಗೆ ಬೆಳೆಸಬೇಕು ಮುಂದೆ… ಅವರಿಗಾದರೂ ಅಪ್ಪ ಅಮ್ಮಂದಿರ ಕಕ್ಕುಲಾತಿ ಅರ್ಥವಾಗಬಲ್ಲದಾ? ಅರ್ಥ ಮಾಡಿಸುವಲ್ಲಿ ನಾವಾದರೂ ಯಾಕೆ ಸೋಲುತ್ತಿದ್ದೇವೆ…

ಕಣ್ತುಂಬಿಕೊಳ್ಳುತ್ತಿದೆ, ಗಂಟಲು ಬಿಗಿಯುತ್ತಿದೆ, ಮನಸು ಮೂಕವಾಗುತ್ತಿದೆ… ಆ ಚುಚ್ಚಿಸಿಕೊಂಡ ಹೃದಯ ಅದೆಷ್ಟು ನೋವುಂಡಿತೋ… ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೆ, ಅನುಭವಿಸದೆ, ಪ್ರೀತಿಯನ್ನು ಯಾರಿಗೂ ಹಂಚಲಾರೆವು ನಾವು ಎಂಬುದು ಮನದಟ್ಟಾಗದ ಹೊರತು ಬಜಾರಿನಲ್ಲಿ ಚಿಕ್ಕಾಸಿಗೆ ಸಿಗುವ ಚೂರಿಗಳು ಮೆರವಣಿಗೆ ಹೊರಡುವುದನ್ನು ತಪ್ಪಿಸಲಾಗುವುದಿಲ್ಲ. ಮಳೆಗಾಗಿ ಬಾಯ್ಬಿಟ್ಟು ಕಾಯುತ್ತಿದ್ದ ನೆಲ ರಕ್ತ ಕುಡಿಯುತ್ತಿದೆ… ಮುಂದೆ ಏನಾಗಬಹುದೋ ಗೊತ್ತಿಲ್ಲ…