ಅತ್ತ ನೋಡಿದರೆ ಅದೆಲ್ಲಿ ನಮ್ಮ ಹೆಸರುಗಳು, ಮಾರ್ಕ್ಸ್‌ಗಳು ತಾರೆ ಜಮೀನ್ ಪರ್ ಸಿನಿಮಾದಲ್ಲಿ ಶಿಕ್ಷಕಿ ಸರ್ಪ್ರೈಸ್ ಮ್ಯಾತ್ಸ್ ಟೆಸ್ಟ್ ಕೊಟ್ಟಾಗ, ಶಿಕ್ಷಕರು ನೌನ್, ಪ್ರನೌನ್ ಎಂದಾಗ ಅಂಕಿ ಸಂಖ್ಯೆಗಳು, ಅಕ್ಷರಗಳೆಲ್ಲಾ ಹುಡುಗನೆದುರು ಜೀವ ತಳೆದು ಕುಣಿದಾಡುತ್ತವಲ್ಲ.. ಹಾಗೆಯೇ ನಮ್ಮ ಮುಂದೆ ಜೀವ ತಳೆದು “ಕಾಪಾಡಿ ಕಾಪಾಡಿ ನಮ್ಮನ್ನು ಬಿಟ್ಟು ಹೋಗಬೇಡಿ” ಎಂದು ಕಿರುಚಿಕೊಳ್ಳುತ್ತೇವೆಯೋ, “ಕನಿಷ್ಠ ಪಕ್ಷ ಕೆಲ ಗಣ್ಯ ಅಪರಾಧಿಗಳಂತೆ ಮುಖ ಮುಚ್ಚಿಕೊಳ್ಳಲು ಮಾಸ್ಕ್, ಕರ್ಚೀಪ್‌ಗಳನ್ನಾದರೂ ಕೊಟ್ಟು ಹೋಗಿ” ಎಂದು ಕೇಳುತ್ತೇವೆಯೋ ಎನಿಸಲಾರಂಭಿಸಿತ್ತು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಒಂಭತ್ತನೆಯ ಬರಹ

ಹೌದು, ಇದೊಂದು ರೀತಿಯಲ್ಲಿ ಸಮಾಜೋದ್ಧಾರಕ್ಕಾಗಿ ಜೈಲು ಕಟ್ಟಿಸಿ, ಕಟ್ಟಿಸಿದವರೇ ಅದರಲ್ಲಿ ಬಂಧಿಗಳಾದ ಕಥೆ! ಅದೂ ಮೊದಲ ಬಂಧಿಗಳಾದ ಕರುಣಾಜನಕ ಕಥೆ!

ಇನ್ನೂ ಇಂತಹ ಕರುಣಾಜನಕ ಕಥೆಯ ಪಾತ್ರಧಾರಿಗಳಾಗಬೇಕಾದ ದುಸ್ಥಿತಿ ಒದಗಿಬಂದದ್ದು ಮಾತ್ರ ಬೇರಾರಿಗೂ ಅಲ್ಲದೇ ನಮ್ಮಂತಹ ಪುಣ್ಯಾತ್ಮರಿಗೆ!

ನಾವು ನವೋದಯದಲ್ಲಿ ಕಳೆದ ಆರರಿಂದ ಹನ್ನೆರಡನೆಯ ತರಗತಿಯವರೆಗಿನ ಏಳು ವರ್ಷಗಳ ಘಟನಾವಳಿಗಳ ಬಗ್ಗೆ ಕೆದಕಿದಾಗ ಎಲ್ಲವೂ ಈಗ ಕಣ್ಮುಂದೆ ನಡೆಯುತ್ತಿದೆಯೇನೋ ಎಂಬಷ್ಟು ಕರಾರುವಕ್ಕಾಗಿ ವಿವರಗಳನ್ನು ಕಟ್ಟಿಕೊಡುವವರಿದ್ದಾರೆ. ನಿರ್ದಿಷ್ಟ ಘಟನೆ, ಘಟನೆ ನಡೆದ ದಿನ, ದಿನದ ಸಮಯ, ಆ ಸಮಯದಲ್ಲಿನ ವಾತಾವರಣ, ಘಟನೆಯಲ್ಲಿ ಭಾಗಿಯಾಗಿದ್ದವರು, ಭಾಗಿಯಾಗಿದ್ದವರು ಅಕಸ್ಮಾತ್ “ಭಾಗಿಯಾಗಿದ್ದವಳು” ಆಗಿದ್ದರೆ ಆಕೆ ಆ ದಿನ ಧರಿಸಿದ್ದ ದಿರಿಸಿನ ಬಗೆ, ಅದರ ಬಣ್ಣ, ತೊಟ್ಟಿದ್ದಿರಬಹುದಾದ ಕೈ ಬಳೆ, ಕಾಲ್ಗೆಜ್ಜೆ, ಕಾಲ್ಗೆಜ್ಜೆಯ ಸದ್ದು….

ಹೀಗೆ ಎಲ್ಲವನ್ನೂ ಥೇಟು ಕುವೆಂಪುರವರು ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳಲ್ಲಿ ಆ ಕಾಲದ ಮಲೆನಾಡನ್ನು ಪ್ರತಿಯೊಂದು ಸಣ್ಣ ಪುಟ್ಟ ವಿವರಗಳೊಂದಿಗೆ ವರ್ಣಿಸುತ್ತಾ ನಮ್ಮ ಕಣ್ಣ ಮುಂದೆಯೇ ತಂದಂತೆ!

ಆದರೆ, ಆ ಒಂದು ವಿಷಯವನ್ನು ಹೊರತುಪಡಿಸಿ!

ಅದು ನಾವು ಶಾಲೆಯಿಂದ ಹೊರಡುವಾಗ ಶಾಲೆಗೆ ನೀಡಿದ ಉಡುಗೊರೆಯ ಐಡಿಯಾವನ್ನು ಪ್ರಸ್ತಾಪಿಸಿದವರ ಕುರಿತಾದದ್ದು!

ಹೌದು, ಹಿಂದೆಲ್ಲಾ ನವೋದಯದಲ್ಲಿನ ಏಳು ವರ್ಷಗಳ ಶಿಕ್ಷಣ ಮುಗಿಸಿ ಶಾಲೆಯಿಂದ ಹೊರಡಲಿದ್ದವರು ತಮಗಾಗಿ ಏರ್ಪಡಿಸುತ್ತಿದ್ದ ಬೀಳ್ಕೊಡುಗೆ ಸಮಾರಂಭದ ದಿನ ಶಾಲೆಗೆ ಮತ್ತು ಶಾಲಾ ಶಿಕ್ಷಕರುಗಳಿಗೆ ಉಡುಗೊರೆಯನ್ನು ನೀಡುವುದು ಸಂಪ್ರದಾಯವೇ ಆಗಿತ್ತು.

ಸಾಮಾನ್ಯವಾಗಿ ನಮ್ಮ ಸೀನಿಯರ್‌ಗಳು ಶಾಲೆಗೆ ಸ್ಟೀಲ್ ಡ್ರಮ್, ಗೋಡೆ ಗಡಿಯಾರ, ದೊಡ್ಡ ಬೆಲ್, ದೇವರು ದಿಂಡಿರ ಮತ್ತು ರಾಷ್ಟ್ರ ನಾಯಕರುಗಳ ಫೋಟೋ.., ಮತ್ತಿತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿ, ಶಿಕ್ಷಕರುಗಳಿಗೆ ಪುಸ್ತಕ, ಡೈರಿ, ಶಾಲು, ಆಡಿಯೋ ಕ್ಯಾಸೆಟ್, ಇತ್ಯಾದಿ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು.

ಅಲ್ಲದೇ ಬೀಳ್ಕೊಡುಗೆ ಸಮಾರಂಭದ ದಿನವೇ ಸಾಮಾನ್ಯವಾಗಿ ಬೋರ್ಡ್ ಪರೀಕ್ಷೆಯ ಹಾಲ್ ಟಿಕೆಟ್ ವಿತರಣೆಯು ಇರುತ್ತಿದ್ದುದರಿಂದ ಹಾಲ್ ಟಿಕೆಟ್ ಪಡೆದು, ಶಿಕ್ಷಕರುಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ಮತ್ತೊಂದು ಪ್ರಮುಖ ಸಂಪ್ರದಾಯವಾಗಿತ್ತು.

ಇನ್ನೂ ಸಂಪ್ರದಾಯಗಳನ್ನು ಮುರಿಯುವಲ್ಲಿ ನಿಸ್ಸೀಮರಾಗಿದ್ದ ನಾವುಗಳೋ ಈ ಎಲ್ಲಾ ಸಂಪ್ರದಾಯಗಳನ್ನು ಮುರಿಯ ಬಯಸಿದ್ದೆವು. ಅದಕ್ಕೆಂದೇ ವಿಭಿನ್ನವಾಗಿ ನಾವೇನು ಮಾಡಬಹುದೆಂದು ಯೋಚಿಸಲಾರಂಭಿಸಿದೆವು.

ನಮ್ಮಲ್ಲಿ ಅದಾಗಲೇ ಮೊಳಕೆಯೊಡೆಯುತ್ತಿದ್ದ ವಯೋ ಸಹಜ ಬಂಡಾಯ, ಸಮಾಜವಾದಿ, ಸಮತಾವಾದಿ ಧೋರಣೆಗಳ ದೆಸೆಯಿಂದಾಗಿಯೋ, ಕೆಲ ಶಿಕ್ಷಕರೊಡನೆ ಬಿಗಡಾಯಿಸಿದ ನಮ್ಮ ಸಂಬಂಧದ ಸಲುವಾಗಿಯೋ, ಶಿಕ್ಷಕರು ಕೊಡುತ್ತಿದ್ದ ಕಡಿಮೆ ಅಂಕಗಳ ಸಿಟ್ಟಿಗೋ ಅಥವಾ ಅಡುಗೆಯವರು ಬಡಿಸುತ್ತಿದ್ದ ಹೆಚ್ಚು ಊಟದ ಋಣಕ್ಕೋ ಅಂತೂ ಶಿಕ್ಷಕರ ಬದಲಿಗೆ ಅಡುಗೆಯವರಿಗೆ ಉಡುಗೊರೆ ಕೊಟ್ಟು ಸನ್ಮಾನಿಸುವುದೆಂಬ ತೀರ್ಮಾನಕ್ಕೆ ಬಂದೆವು.

“ಶಿಕ್ಷಕರು ಹೇಗೂ ಹೆಚ್ಚು ಸಂಬಳ ಪಡೆಯುತ್ತಾರೆ, ಅವರಿಗೆ ನಮ್ಮ ಉಡುಗೊರೆಗಳು ತೀರಾ ಅತ್ಯಮೂಲ್ಯ ಎನಿಸದಿರಬಹುದು. ಅದೇ ಅಡುಗೆಯವರಿಗೆ, ಅದರಲ್ಲೂ ಖಾಯಂ ಅಲ್ಲದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ನಮ್ಮ ಉಡುಗೊರೆ, ಸನ್ಮಾನಗಳು ವಿಶೇಷ ಎನಿಸಬಹುದು” ಎಂಬುದು ನಮ್ಮ ತೀರ್ಮಾನದ ಹಿಂದಿನ ತರ್ಕ ಮತ್ತು ಸಮರ್ಥನೆಯಾಗಿತ್ತು.

ಸರಿ, ಈ ತೀರ್ಮಾನವನ್ನೇ ಎಲ್ಲರ ಏಕಮುಖ ಸಮ್ಮತಿ ಮತ್ತು ಸಹಮತದೊಂದಿಗೆ ಅಂತಿಮಗೊಳಿಸಿದೆವು.

ಇನ್ನೂ ಶಾಲೆಗೆ ನೀಡಲಿರುವ ಉಡುಗೊರೆಯ ಕುರಿತು ತೀರ್ಮಾನಿಸಬೇಕಾಗಿತ್ತು. ಅದಕ್ಕೆಂದೇ ಈ ನಿಟ್ಟಿನಲ್ಲೂ ಚರ್ಚೆಗಳು ಆರಂಭಗೊಂಡವು.
ಆ ಕಾಲದಲ್ಲಿ ಕುಡಿಯುವ ನೀರನ್ನು ಸ್ಟೀಲ್ ಡ್ರಮ್‌ಗಳಲ್ಲಿ ಇಡುತ್ತಿದ್ದರಾದ್ದರಿಂದ ಆಗಿನ ಕಾಲಕ್ಕೆ ಹೈಟೆಕ್ ಎನಿಸಿದ್ದ ವಾಟರ್ ಫಿಲ್ಟರ್ ಒಂದನ್ನು ನೀಡೋಣವೆಂದು ಕೆಲವರೆಂದರೆ, ಮತ್ತೆ ಕೆಲವರು ಪ್ರತಿ ಪೀರಿಯಡ್ ಆದ ಮೇಲೂ ಸಮಯ ನೋಡಿ ಅಟೆಂಡರ್ ಅಂಕಲ್‌ಗಳು ಗಂಟೆ ಬಾರಿಸಬೇಕಿದ್ದುದರಿಂದ ಸಮಯವನ್ನು ಅಡ್ಜಸ್ಟ್ ಮಾಡಿದರೆ ತನ್ನಷ್ಟಕ್ಕೆ ತಾನೇ ಪೀರಿಯಡ್ ಪೀರಿಯಡ್‌ಗೂ ಬಾರಿಸಿಕೊಳ್ಳುವ ಆಟೋಮೆಟಿಕ್ ಬೆಲ್ ಸಿಸ್ಟಮ್ ಕೊಡೋಣವೆಂದರು.

ಮತ್ತೆ ಕೆಲವರು, ನೀರಿನ ಸಿಂಟಾಕ್ಸ್ ತುಂಬಿ ಸ್ವಿಚ್ ಆಫ್ ಮಾಡುವವರಿಲ್ಲದೆ ಯಾವಾಗಲೂ ನೀರು ವ್ಯರ್ಥವಾಗಿ ಹರಿದು ಹೋಗುವುದರಿಂದ ಅದು ತುಂಬಿದೊಡನೆ ಆಟೋಮ್ಯಾಟಿಕ್ ಆಗಿ ಮೋಟರ್ ಆಫ್ ಆಗುವಂತಹ ಆಟೋಮೆಟಿಕ್ ಕಂಟ್ರೋಲರ್ ಸಿಸ್ಟಮ್ ಅಳವಡಿಸೋಣ ಎಂದರು.

ಹೀಗೆ ಒಬ್ಬೊಬ್ಬರೂ ಒಂದೊಂದು ಐಡಿಯಾವನ್ನು ನೀಡುತ್ತಾ ಚರ್ಚೆಯನ್ನು ತುಸು ಹೆಚ್ಚೇ ದೀರ್ಘಗೊಳಿಸಿದರು.

ಅಂತೂ ಇಂತೂ ಈ ಒಂದು ದೀರ್ಘ ಚರ್ಚೆಯ ನಂತರ ನಾವು ಶಾಲೆಗೆ “ನೋಟಿಸ್ ಬೋರ್ಡ್” ಒಂದನ್ನು ಉಡುಗೊರೆಯಾಗಿ ನೀಡುವ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿದ್ದೆವು.

“ಹೇಗಿದ್ದರೂ ನೋಟಿಸ್ ಬೋರ್ಡನ್ನು ಶಾಲಾ ಅಕಾಡೆಮಿಕ್ ಬ್ಲಾಕಿನ ಮುಂಭಾಗದಲ್ಲಿಯೇ ಇರಿಸುತ್ತಾರೆ. ಪ್ರತಿನಿತ್ಯ ಒಂದಿಲ್ಲೊಂದು ನೋಟಿಸ್ ಅಂಟಿಸುವುದು, ಅದನ್ನು ಎಲ್ಲ ವಿದ್ಯಾರ್ಥಿಗಳು ನೋಡುವುದು ಇದ್ದೇ ಇರುತ್ತಿದ್ದುದರಿಂದ ಪ್ರತಿನಿತ್ಯ ನಮ್ಮ ಬ್ಯಾಚನ್ನು ಎಲ್ಲರೂ ದಿನನಿತ್ಯ ನೆನಪಿಸಿಕೊಳ್ಳುತ್ತಾರೆ” ಎಂಬುದು ನಮ್ಮ ಉಡುಗೊರೆ ಆಯ್ಕೆಯ ಹಿಂದಿನ ತರ್ಕವಾಗಿತ್ತು.

ಅದನ್ನು ಮೀರಿ ಕೆಲವರಂತೂ “ರಾಮನಿಲ್ಲದ ಅಯೋಧ್ಯೆಯಲ್ಲಿ ಆತನ ಪಾದುಕೆಯಲ್ಲೇ ಭರತ ರಾಮನ ಇರುವನ್ನು ಕಂಡಂತೆ, ನಾವಿಲ್ಲದ ನವೋದಯದಲ್ಲಿ ನಮ್ಮ ನೋಟಿಸ್ ಬೋರ್ಡ್‌ನಲ್ಲೇ ಜೂನಿಯರ್ ಮನದನ್ನೆಯರು ನಮ್ಮ ಇರುವನ್ನು ಕಾಣಲಿ” ಎಂಬ ಮಹತ್ತರ ಆಶಯವನ್ನು ಹೊಂದಿದ್ದರು!

ಆಶಯವೇ ಹೀಗಿದ್ದ ಮೇಲೆ ನೋಟಿಸ್ ಬೋರ್ಡ್ ಇನ್ಯಾವ ರೇಂಜಿಗೆ ಇರಬೇಡ!

ಸರಿ, ಈ ಬಗ್ಗೆಯೂ ಚರ್ಚೆ ಮುಂದುವರೆಯಿತು.

ಒಳ್ಳೆಯ ಗಟ್ಟಿಮುಟ್ಟಿನ ಬೀಟೆಯ ಮರದ, ಗ್ಲಾಸ್ ಫಿಟ್ಟಿಂಗ್‌ನ, ಲಾಕ್ ಸೌಲಭ್ಯವುಳ್ಳ, ಪೇಪರ್‌ಗಳನ್ನು ಸಲೀಸಾಗಿ ಪಿನ್ ಮಾಡಲು ಅನುಕೂಲವಾಗುವ ಸಾಫ್ಟ್ ಬೋರ್ಡ್‌ವುಳ್ಳ, ಅತ್ಯಾಕರ್ಷಕವಾಗಿ ಕಾಣುವಂತೆ ಮೃದು ವೆಲ್ವೆಟ್ ಹೊದಿಕೆಯುಳ್ಳ, ಅಗತ್ಯ ಬಿದ್ದರೆ ರಾತ್ರಿಯೂ ಕಾಣುವಂತೆ ಬಲ್ಬ್ ಹಾಕಿ ಅಪ್ ಗ್ರೇಡ್‌ಗೂ ಅವಕಾಶವಿರುವ, ಆಗಿನ ಕಾಲಕ್ಕೆ ತುಸು ಹೊಸತು ಮತ್ತು ಹೈಟೆಕ್ ಎನ್ನಬಹುದಾದ ನೋಟಿಸ್ ಬೋರ್ಡ್ ಅದಾಗಿರಬೇಕೆಂದು ಸಲಹೆಗಳು ಬಂದವು.

ಇಷ್ಟೆಲ್ಲಾ ನೆನಪಿದ್ದರೂ “ನೋಟಿಸ್ ಬೋರ್ಡ್ ಹಾಗೆ ಇರಬೇಕು, ಇಲ್ಲ ಹೀಗೆ ಇರಬೇಕು..” ಎಂದು ಅಪ್ ಗ್ರೇಡ್ ಮಾಡುವ ಐಡಿಯಾವನ್ನು ನಾವು ನಾಲ್ಕಾರು ಜನ ಕೊಟ್ಟೆವೆಂಬುದು ಚೆನ್ನಾಗಿ ನೆನಪಿದ್ದರೂ “ಈ ನೋಟಿಸ್ ಬೋರ್ಡ್ ಕೊಡುವ ಐಡಿಯಾವನ್ನು ಮೊದಲು ಪ್ರಸ್ತಾಪಿಸಿದರು ಯಾರು?” ಎಂಬುದರ ಬಗ್ಗೆ ಮಾತ್ರ ನಮಗೆ ಈಗಲೂ ಸ್ಪಷ್ಟತೆ ಇಲ್ಲ.

ಈ ನೋಟಿಸ್ ಬೋರ್ಡ್ ಮಾಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಸನ್ನಿಗೆ ವಹಿಸಲಾಗಿತ್ತಾದ್ದರಿಂದ, ಹೇಳಿ ಕೇಳಿ ಸನ್ನಿಯ ತಂದೆ ಕೇರಳ ಮೂಲದ ಟಿಂಬರ್ ಮರ್ಚೆಂಟರಾಗಿದ್ದು, ಹತ್ತು ಹನ್ನೆರಡನೆಯ ತರಗತಿಗೆಲ್ಲಾ ಸನ್ನಿ ಬೀಟೆ, ಹೊನ್ನೆ, ತೇಗ, ಹಲಸು, ನಂದಿ ಎಂದೆಲ್ಲಾ ಮರ ಮುಟ್ಟಿನ ಬಗ್ಗೆ ತಿಳುವಳಿಕೆ ಹೊಂದಿದ್ದನಾದ್ದರಿಂದ ಸನ್ನಿಯೇ ಈ ಬೀಟೆ ಮರದ ನೋಟಿಸ್ ಬೋರ್ಡಿನ ಐಡಿಯಾ ಕೊಟ್ಟಿರಬಹುದೆಂಬುದು ನಮ್ಮ ಬಹುಸಂಖ್ಯಾತರ ಊಹೆ ಅಥವಾ ಅನುಮಾನ!

ಆದರೆ, ಸನ್ನಿ ಮಾತ್ರ ಮರವನ್ನು ಆಯ್ಕೆ ಮಾಡಿ, ಆಚಾರರಿಂದ ಮಾಡಿಸಿ ತರುವ ಜವಾಬ್ದಾರಿಯನ್ನಷ್ಟೇ ತಾನು ಹೊತ್ತುಕೊಂಡಿದ್ದೆಂದೂ ಮೂಲ ಐಡಿಯಾ ನೀಡಿದವನು ತಾನಲ್ಲವೆಂದೂ ಈಗಲೂ ಅಲ್ಲಗಳೆಯುತ್ತಾನೆ.

ಅದಿರಲಿ, ಅಂತೂ ನಮ್ಮ ಬೀಳ್ಕೊಡುಗೆಯ ದಿನದ ವೇಳೆಗಾಗಲೇ ನೋಟಿಸ್ ಬೋರ್ಡ್ ನಮ್ಮ ನಿರೀಕ್ಷೆಯಂತೆಯೇ ರೆಡಿಯಾಗಿತ್ತು. ಮೊದಲ ಬಾರಿಗೆ ಅದನ್ನು ನೋಡುತ್ತಲೇ ಅದರ ರೂಪಕ್ಕೆ ನಾವು ಮಾರು ಹೋದೆವೆಂದೇ ಹೇಳಬೇಕು. ಅದರಲ್ಲೂ ನೋಟಿಸ್ ಬೋರ್ಡಿನ ಕೆಳಗೆ ಹಳದಿ ಬಣ್ಣದ ರೇಡಿಯಮ್ ಸ್ಟಿಕ್ಕರ್ ಕಟ್ ಮಾಡಿ ಅಂಟಿಸಿದ್ದ “Ptd By 12 th 1998-99” ಎಂಬ ಸಾಲಂತೂ ನಮ್ಮನ್ನು ಬೇರೆಯದೇ ಕಲ್ಪನಾ ಲೋಕಕ್ಕೆ ಕೊಂಡೊಯ್ಯುವಂತಿತ್ತು.

ಇದನ್ನು ಮಾಡಿಸಿ ತಂದ ಸನ್ನಿ ಆ ದಿನ ನಮ್ಮೆಲ್ಲರ ಕಣ್ಮಣಿಯಾಗಿದ್ದ!

ಅಂದು ಮಧ್ಯಾಹ್ನ ವಿಶೇಷ ಊಟದ ನಂತರ ನಮ್ಮ ಬೀಳ್ಕೊಡುಗೆ ಕಾರ್ಯಕ್ರಮವಿತ್ತು.

ಪ್ರಾರ್ಥನೆ, ಸ್ವಾಗತ, ಪ್ರಾಸ್ತಾವಿಕ ಮಾತುಗಳು ಎಂದೆಲ್ಲ ಕಾರ್ಯಕ್ರಮ ಮುಂದುವರಿದಂತೆ ನಮಗರಿವಿಲ್ಲದೆಯೇ ಒಂದು ಬಗೆಯ ಭಾವುಕತೆ ನಮ್ಮನ್ನಾವರಿಸಲಾರಂಭಿಸಿತ್ತು.

ಆ ಭಾವುಕತೆಯಲ್ಲೇ ನಮ್ಮ ಬ್ಯಾಚಿನವರ ಕುರಿತು ನಮ್ಮ ಹೌಸ್ ಮಾಸ್ಟರ್ ಮತ್ತು ಒಂದಿಬ್ಬರು ಜೂನಿಯರ್‌ಗಳು ಆಡಿದ ಮಾತುಗಳಿಗೆ ಕಿವಿಯಾದೆವು.
ಅವರ ಮಾತುಗಳಲ್ಲೆಲ್ಲಾ ನಮ್ಮ ವ್ಯಕ್ತಿಗತ ಗುಣಗಾನದ ಜೊತೆಗೆ ನಾವು ಮುಂಬರುವ ಪರೀಕ್ಷೆಯಲ್ಲಿ ಶಾಲೆಯ ಹಿಂದಿನ ದಾಖಲೆಗಳನ್ನೆಲ್ಲಾ ಮೀರುವಂತಹ ಫಲಿತಾಂಶವನ್ನು ಗಳಿಸಿಯೇ ತೀರುತ್ತೇವೆಂಬ ನಿರೀಕ್ಷೆ ಎದ್ದು ಕಾಣುತ್ತಿತ್ತು. ಆ ಭಾವುಕತೆಯಲ್ಲೇ ನಮ್ಮ ಬೋರ್ಡ್ ಪರೀಕ್ಷೆಯ ಹಾಲ್ ಟಿಕೆಟ್‌ಗಳನ್ನೂ ಶಿಕ್ಷಕರಿಂದ ಪಡೆದೆವು.‌ ಹೀಗೆ ಪಡೆಯುವಾಗ ನಮ್ಮ ನಮ್ಮ ಇಷ್ಟದ ಶಿಕ್ಷಕರಗಳ ಪಾದಗಳಿಗೆ ಎರಗದೆ ಇರಲು ನಮಗಾರಿಗೂ ಮನಸೇ ಆಗಲಿಲ್ಲ.

ಅವರೂ ಅಷ್ಟೇ ನಮ್ಮ ಪರೀಕ್ಷೆಗಳಿಗಲ್ಲದೆ ನಮ್ಮ ಮುಂದಿನ ಜೀವನಕ್ಕೂ ಒಳಿತಾಗಲೆಂದು ಆಶೀರ್ವದಿಸಿ, ನಾವೆಲ್ಲರೂ ಎಲ್ಲಾ ವಿಷಯಗಳಲ್ಲೂ ನೂರಕ್ಕೆ ನೂರರಷ್ಟು ಅಂಕ ಗಳಿಸಿ ಬಿಡಲಿದ್ದೇವೆ ಎಂಬಂತೆಯೇ ಭವಿಷ್ಯ ನುಡಿದುಬಿಟ್ಟರು.

ನಮಗೋ “ಅಹಾ! ನಮ್ಮ ಶಿಕ್ಷಕರುಗಳು ಅದೆಷ್ಟು ದಯಾಮಯಿಗಳು!” ಎನಿಸಿತು.

ಇನ್ನೂ ನಮ್ಮ ಜೂನಿಯರ್‌ಗಳಂತೂ ನಮ್ಮಂತಹ ಬುದ್ಧಿವಂತ ಪ್ರಾಣಿಗಳೆಲ್ಲಾ ದೇಶ ಬಿಟ್ಟು, ವಿದೇಶ ಸುತ್ತುವುದನ್ನೇ ಕಾಯಕ ಮಾಡಿಕೊಂಡು ಬಿಡುತ್ತೇವೆಂಬ ಭರವಸೆಯೊಂದಿಗೆ “ವಿದೇಶಿ ಎಂಬಸಿ”ಗಳ ಅಡ್ರೆಸ್ ಮತ್ತು ದೂರವಾಣಿ ಸಂಖ್ಯೆಗಳುಳ್ಳ ಪುಸ್ತಕಗಳನ್ನು ಪ್ರಿಂಟ್ ಹಾಕಿಸಿ ನಮ್ಮೆಲ್ಲರಿಗೂ ಉಡುಗೊರೆಯಾಗಿ ನೀಡಿದ್ದರು.

ಈ ಸಂದರ್ಭದಲ್ಲಿ ಮೊದಲೇ ಯೋಜಿಸಿದಂತೆ ಅಡುಗೆಯವರೆಲ್ಲರಿಗೂ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿ, ಶಾಲು ಹೊದಿಸಿ ಸನ್ಮಾನಿಸಿ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸಿದೆವು. ಇದು ಎಲ್ಲರ ಮೆಚ್ಚುಗೆಗೂ ಕಾರಣವಾಗಿತ್ತು.

ಈ ಸಂದರ್ಭದಲ್ಲಿ ನಮ್ಮ ಭಾವುಕತೆ ಮೇರೆ ಮೀರಿತ್ತೆನ್ನಬಹುದು!

ಮೇರೆ ಮೀರಿದ ಈ ಭಾವುಕತೆಯಲ್ಲೇ ನಾನು ನಮ್ಮ ಬ್ಯಾಚಿನ ಪರವಾಗಿ ಅಗಲಿಕೆಯ ಭಾಷಣವನ್ನು ಬಿಗಿದದ್ದೂ ಆಯ್ತು!

ಇನ್ನೂ ಕೊನೆಯದಾಗಿ ನಮ್ಮ ನೆಚ್ಚಿನ ನೋಟಿಸ್ ಬೋರ್ಡನ್ನು ಶಾಲೆಗೆ ಉಡುಗೊರೆಯಾಗಿ ನೀಡುವ ಘಳಿಗೆ ಆಗಮಿಸಿತ್ತು!
ಸನ್ನಿಯ ನೇತೃತ್ವದಲ್ಲಿ ಗೆಳೆಯರೆಲ್ಲಾ ಒಂದಾಗಿ ಟೇಪ್‌ಗಳಿಂದ ಕಟ್ಟಿ ಅಲಂಕರಿಸಿದ್ದ ನೋಟಿಸ್ ಬೋರ್ಡನ್ನು ಒತ್ತು ಎಂ.ಪಿ ಹಾಲ್‌ನ ಸ್ಟೇಜ್ ಮೇಲೆ ಹೋಗುವಾಗ ಅಗಲಿಕೆಯ ಭಾವುಕತೆಗಳೆಲ್ಲಾ ಮರೆಯಾಗಿ, ಮುಖದಲ್ಲಿ ಮಂದಹಾಸ ಮೂಡಲಾರಂಭಿಸಿತ್ತು.

ಕ್ರಿಕೆಟ್‌ನಲ್ಲಿ ಪಂದ್ಯ ಪುರುಷೋತ್ತಮರಿಗೆ ದೊಡ್ಡ ಚೆಕ್ ವಿತರಣೆ ಮಾಡುವ ಪೋಸಿನಲ್ಲಿ ನಾವು ನೋಟಿಸ್ ಬೋರ್ಡನ್ನು ಪ್ರಾಂಶುಪಾಲರ ಎದುರಿಡಿದು, ಅವರಿಂದ ಟೇಪ್‌ಗಳನ್ನು ಎಳೆಸಿ ಅದರ ಸಾಂಕೇತಿಕ ಉದ್ಘಾಟನೆ ಮಾಡುತ್ತಲೇ ಜೂನಿಯರ್‌ಗಳೆಲ್ಲಾ “ವಾವ್” ಎಂದು ಉದ್ಘರಿಸುತ್ತಾ ಜೋರಾದ ಚಪ್ಪಾಳೆ ತಟ್ಟಿದರು. ಶಿಕ್ಷಕರುಗಳೂ ನಮ್ಮ ಉಡುಗೊರೆಯನ್ನು ನೋಡಿ ಬಹುವಾಗಿ ಮೆಚ್ಚಿದರು.

ನಾವುಗಳೋ “ಅಹಾ! ಎಂತಹ ಒಳ್ಳೆ ಉಡುಗೊರೆಯನ್ನು ಶಾಲೆಗೆ ನೀಡಿದೆವು” ಎಂದು ಹೆಮ್ಮೆ ಪಟ್ಟುಕೊಂಡೆವು!

ಈ ಸಂದರ್ಭದಲ್ಲೇ ಕೆಲವರಿಗೆ “ಹೀಗೆ, ಕಟ್ಟಿದ ಟೇಪ್ ಎಳೆಸಿ ನೋಟಿಸ್ ಬೋರ್ಡನ್ನು ಎಂ.ಪಿ. ಹಾಲ್‌ನಲ್ಲಿ ಉದ್ಘಾಟಿಸುವ ಬದಲು ಅದನ್ನು ಅಕಾಡೆಮಿಕ್ ಬ್ಲಾಕಿನ ಮುಂಭಾಗದಲ್ಲಿನ ಗೋಡೆಗೆ ನೇತು ಹಾಕಿಸಿ, ಯಾವುದಾದರೂ ನೋಟಿಸ್ ಅಂಟಿಸಿ ಉದ್ಘಾಟಿಸಬಹುದಿತ್ತಲ್ಲ” ಎನಿಸಿತಾದರೂ “ಇನ್ನೂ ಪರೀಕ್ಷೆ ಬರೆದು, ಲಗೇಜ್ ಪ್ಯಾಕ್ ಮಾಡಿಕೊಂಡು ಹೋಗುವುದಷ್ಟೇ ನಮ್ಮ ಪಾಲಿಗೆ ಇರುವ ಕೆಲಸ ತಾನೇ!” ಎಂಬುದನ್ನು ನೆನೆದು ಹೆಚ್ಚು ಮಾತನಾಡಲು ಹೋಗದೆ ಸುಮ್ಮನಾದೆವು.

“ಹೇಗೂ ಮುಂದೆ ರಿಸಲ್ಟ್ ಪಡೆಯಲು ಬರುವ ವೇಳೆಗೆ ಏನಾದರೂ ನೋಟಿಸ್ ಅಂಟಿಸಿರುತ್ತಾರಲ್ಲ, ಅದನ್ನೇ ನೋಡಿ ಕಣ್ತುಂಬಿ ಕೊಂಡರಾಯಿತು” ಎಂಬ ಆಶಾವಾದವೂ ಹೀಗೆ ನಾವು ಸುಮ್ಮನಾಗಲು ಮತ್ತೊಂದು ಕಾರಣವಾಗಿತ್ತು.

ಸರಿ, ಇಲ್ಲಿಗೆ ನಮ್ಮ ನೋಟೀಸ್ ಬೋರ್ಡ್ ಉಡುಗೊರೆಯ ಎಪಿಸೋಡ್ ಮುಗಿಯಿತೆಂದುಕೊಂಡೆವು!

ಆದರೆ, ನಮ್ಮ ಈ ನೋಟಿಸ್ ಬೋರ್ಡಿನ ಕಥೆಯ ಕ್ಲೈಮ್ಯಾಕ್ಸಿನಲ್ಲಿ ಟ್ವಿಸ್ಟ್ ಬಂದು ಮತ್ತೊಂದು ಎಪಿಸೋಡ್ ಆರಂಭವಾಗಲು ಕಾರಣವಾಗಿದ್ದು ಮಾತ್ರ ನಮ್ಮದೇ ರಿಸಲ್ಟ್!

ಹೌದು, ನಮ್ಮ ಹನ್ನೆರಡನೇ ತರಗತಿಯ ರಿಸಲ್ಟ್ ಬಂದಿತ್ತು ಮತ್ತು ನಮ್ಮದೇ ರಿಸಲ್ಟ್ ಶೀಟನ್ನು ನೋಟೀಸ್ ಬೋರ್ಡ್‌ಗೆ ಹಾಕಿ ಅದರ ಅಧಿಕೃತ ಉದ್ಘಾಟನೆ ಮಾಡಲಾಗಿತ್ತು.

ಸಾಲದ್ದಕ್ಕೆ, ರಕ್ಷಣೆಗಾಗಿ ನಾವೇ ಉಡುಗೊರೆ ಕೊಟ್ಟಿದ್ದ ಬೀಗವನ್ನೂ ಜಡಿಯಲಾಗಿತ್ತು!

ಹೀಗೆಂದ ಕೂಡಲೇ ನಾವು ಫೇಲ್ ಗಿಲ್ ಆಗಿದ್ದೆವೆಂದು ಯೋಚಿಸಹೋಗಬೇಡಿ.

ನಾವು ಎಲ್ಲರೂ ಪಾಸಾಗುವುದರೊಂದಿಗೆ ನಮ್ಮದು ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಆಗಿತ್ತು ಮತ್ತು ನಾವೆಲ್ಲರೂ ಪ್ರಥಮ ದರ್ಜೆಯಲ್ಲೇ ಪಾಸ್ ಆಗಿದ್ದೆವು ಕೂಡಾ!

ಅಲ್ಲದೇ ಹತ್ತನೇ ತರಗತಿಯಲ್ಲೂ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಪಡೆದಿದ್ದ ನಾವು ಹತ್ತು ಮತ್ತು ಹನ್ನೆರಡನೆಯ ತರಗತಿಗಳೆರಡರಲ್ಲೂ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಪಡೆದ ಶಾಲೆಯ ಮೊದಲ ಬ್ಯಾಚ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದೆವು. ಹೇಳಿ ಕೇಳಿ “ಹಂಡ್ರೆಡ್ ಪರ್ಸೆಂಟ್ ರಿಸಲ್ಟ್” ಎಂಬುದೇ ಆಗಿನ ಕಾಲಕ್ಕೆ ವಿಶೇಷ ಹೆಗ್ಗಳಿಕೆಯಾಗಿತ್ತು.

ಆದರೆ, ಡಿಸ್ಟಿಂಕ್ಷನ್ ಎಂಬುವವನ್ನು ಮಾತ್ರ ಯಾರಾದರೂ ದುರ್ಬೀನು ಹಾಕಿ ಹುಡುಕಬೇಕಿತ್ತು, ಅದರಲ್ಲೂ ನಾವು ಹುಡುಗರು ಅದೆಷ್ಟು ಸಮತಾವಾದಿಗಳಾಗಿದ್ದೆವೆಂದರೆ “ಒಬ್ಬ ಡಿಸ್ಟಿಂಕ್ಷನ್ ಬಂದು ಮತ್ತೊಬ್ಬರು ಡಿಸ್ಟಿಂಕ್ಷನ್ ಬರದೇ ಹೋದರೆ, ಬರದವರು ಬೇಸರಿಸಿಕೊಳ್ಳಬಹುದೆಂದು ಯಾರೂ ಡಿಸ್ಟಿಂಕ್ಷನ್ ತೆಗೆಯುವ ಗೋಜಿಗೇ ಹೋಗಿರಲಿಲ್ಲ” ಎನಿಸುತ್ತೆ!

ಶಿಕ್ಷಕರು, ಜೂನಿಯರ್‌ಗಳ ನಿರೀಕ್ಷೆಯಂತಿರಲಿ ನಮ್ಮ ನಿರೀಕ್ಷೆಯ ಹತ್ತಿರಕ್ಕೂ ಅಂಕಗಳಿರಲಿಲ್ಲ! ನಮ್ಮ ನಿರೀಕ್ಷೆ ಎನ್ನುವುದಕ್ಕಿಂತ ನಾವು ಕೊಡುತ್ತಿದ್ದ “ಬಿಲ್ಡಪ್” ನ ರೇಂಜಿನ ಹತ್ತಿರವೂ ನಮ್ಮ ಅಂಕಗಳಿರಲಿಲ್ಲ ಎನ್ನಬೇಕು!

ಒಂದು ರೀತಿಯಲ್ಲಿ ರಜನೀಕಾಂತನ ಸಿನಿಮಾವೊಂದು ರಿಲೀಸ್‌ಗೂ ಮುನ್ನ ಅಭಿಮಾನಿಗಳ ನಡುವೆ ಹೀನಾಮಾನ ಹೈಪ್ ಕ್ರಿಯೇಟ್ ಮಾಡಿ ಕೊನೆಗೆ “ಅವರೇಜ್” ಎನಿಸಿಕೊಂಡಂತೆ!

ಹಾಗೆಂದು ಹತ್ತನೆಯ ತರಗತಿಯಲ್ಲಿದ್ದಾಗ ನಾವು ಭಾರಿ ಅಂಕಗಳನ್ನು ತೆಗೆದಿದ್ದೆವೆಂದಲ್ಲ. ಆಗಲೂ ಹೀಗೆಯೇ….

ಯಾವ ಹುಡುಗರೂ ಡಿಸ್ಟಿಂಕ್ಷನ್ ಸಹವಾಸಕ್ಕೆ ಹೋಗದೆ ಎಲ್ಲರೂ ಪ್ರಥಮ ದರ್ಜೆಯಲ್ಲೇ ಪಾಸಾಗಿ ಸಮತಾವಾದವನ್ನು ಸಾರಿದ್ದೆವು. ಆದರೆ, ರಜೆಯಲ್ಲಿದ್ದವರಿಗೆ ರಿಸಲ್ಟ್ ಬಂದು ನೋಟೀಸ್ ಬೋರ್ಡ್‌ಗೆ ಅಂಟಿಸಿದ ಸುದ್ದಿ ತಿಳಿಯುತ್ತಲೇ ಮೊದಲು ಶಾಲೆಗೆ ಬಂದವರು ರಿಸಲ್ಟ್ ಶೀಟನ್ನು ಸಲೀಸಾಗಿ ಕಿತ್ತು ಹಾಕಿ, ನಮ್ಮ ಜೂನಿಯರ್‌ಗಳು ರಜೆ ಮುಗಿಸಿ ಶಾಲೆಗೆ ಬರುವ ವೇಳೆವಾಗಲೇ ರಿಸಲ್ಟಿನ ಯಾವೊಂದು ಕುರುಹೂ ಇರದಂತೆ ಮಾಡಿ ನಮ್ಮ “ಬಿಲ್ಡಪ್”ಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡಿದ್ದೆವು.

ಆದರೆ, ಈಗಲಾದರೋ ಒಂದೆಡೆ ನಾವು ಶಾಲೆಯನ್ನು ಬಿಟ್ಟು ಶಾಲೆಗೇ ಹೊರಗಿನವರಾಗಿದ್ದೆವು. ಮತ್ತೊಂದೆಡೆ, ಶಾಲೆಗೆ ಹೋದರೂ ಕಿತ್ತು ಹಾಕಲಾಗದಂತಹ ನೋಟಿಸ್ ಬೋರ್ಡನ್ನು ನಾವೇ ಉಡುಗೊರೆಯಾಗಿ ನೀಡಿದ್ದೆವು.

ಹಾಗಾಗಿಯೇ, ರಿಸಲ್ಟ್ ಪಡೆಯಲೆಂದು ಒಬ್ಬೊಬ್ಬರೇ ಶಾಲೆಗೆ ಬಂದಾಗ ನಮ್ಮ ‘ಇಷ್ಟದ ನೋಟೀಸ್ ಬೋರ್ಡ್’ ಎದುರಾದರೂ ಅದರತ್ತ ಕಣ್ಣೆತ್ತಿ ನೋಡಲೂ ಮನಸ್ಸಾಗಲಿಲ್ಲ ಅಥವಾ ನಾವೇ ಉಡುಗೊರೆ ನೀಡಿದ್ದ ನೋಟಿಸ್ ಬೋರ್ಡಿನಲ್ಲಿ ನಮ್ಮದೇ ಅಂಕಗಳು, ನಮ್ಮದೇ ಹೆಸರುಗಳು ಅಕ್ಷರಶಃ ಬಂಧಿಗಳಾಗಿ ಬಿಟ್ಟಿರುವುದನ್ನು ನೋಡಲು ಧೈರ್ಯ ಸಾಲಲಿಲ್ಲ.

ಅತ್ತ ನೋಡಿದರೆ ಅದೆಲ್ಲಿ ನಮ್ಮ ಹೆಸರುಗಳು, ಮಾರ್ಕ್ಸ್‌ಗಳು ತಾರೆ ಜಮೀನ್ ಪರ್ ಸಿನಿಮಾದಲ್ಲಿ ಶಿಕ್ಷಕಿ ಸರ್ಪ್ರೈಸ್ ಮ್ಯಾತ್ಸ್ ಟೆಸ್ಟ್ ಕೊಟ್ಟಾಗ, ಶಿಕ್ಷಕರು ನೌನ್, ಪ್ರನೌನ್ ಎಂದಾಗ ಅಂಕಿ ಸಂಖ್ಯೆಗಳು, ಅಕ್ಷರಗಳೆಲ್ಲಾ ಹುಡುಗನೆದುರು ಜೀವ ತಳೆದು ಕುಣಿದಾಡುತ್ತವಲ್ಲ.. ಹಾಗೆಯೇ ನಮ್ಮ ಮುಂದೆ ಜೀವ ತಳೆದು “ಕಾಪಾಡಿ ಕಾಪಾಡಿ ನಮ್ಮನ್ನು ಬಿಟ್ಟು ಹೋಗಬೇಡಿ” ಎಂದು ಕಿರುಚಿಕೊಳ್ಳುತ್ತೇವೆಯೋ, “ಕನಿಷ್ಠ ಪಕ್ಷ ಕೆಲ ಗಣ್ಯ ಅಪರಾಧಿಗಳಂತೆ ಮುಖ ಮುಚ್ಚಿಕೊಳ್ಳಲು ಮಾಸ್ಕ್, ಕರ್ಚೀಪ್‌ಗಳನ್ನಾದರೂ ಕೊಟ್ಟು ಹೋಗಿ” ಎಂದು ಕೇಳುತ್ತೇವೆಯೋ ಎನಿಸಲಾರಂಭಿಸಿತ್ತು.
ಒಮ್ಮೆ ನಮಗೆ ನಮ್ಮ ಹೆಸರುಗಳು, ಮಾರ್ಕ್ಸ್‌ಗಳು ನಾವು ಬೆಂಕಿ ಪೊಟ್ಟಣದಲ್ಲಿ ಮಿಂಚು ಹುಳುವೊಂದನ್ನು ಕೂಡಿ ಹಾಕಿದಾಗ ಅದು ಗಾಳಿ, ನೀರಿಗಾಗಿ ಪರಿತಪಿಸುವಂತೆ, ಸಕ್ಕರೆ ತಿನ್ನಲು ಹೋಗಿ ಜಾರಿನೊಳಗೆ ಸಿಲುಕಿದ ಇರುವೆ ಹೊರಬರಲು ಪಡುವ ಪಡಿಪಾಟಲಿನಂತೆ ಯಾತನೆ ಅನುಭವಿಸುತ್ತಿರುವಂತೆ ತೋರಿ ಅವುಗಳ ಬಗ್ಗೆ ಕನಿಕರ ಮೂಡುತ್ತಿತ್ತು.

ಮತ್ತೊಮ್ಮೆ ಅವು ರೊಚ್ಚಿಗೆದ್ದು “ಸ್ವಾತಂತ್ರ್ಯ ನಮ್ಮ ಹಕ್ಕು, ಬಿಡುಗಡೆಗೊಳಿಸಿ, ಇಲ್ಲವೇ ಗಾಜು ಒಡೆದು ಹೊರ ಬರುತ್ತೇವೆ” ಎಂದು ಧಮಕಿ ಹಾಕುತ್ತಿವೆಯೆಂದೂ,

“ನಿಮ್ಮಂಥವರೆಲ್ಲ ನಮ್ಮ ಹೆಸರು ಇಟ್ಟುಕೊಂಡು ಹೆಸರಿನ ಮಾರ್ಕೆಟ್ ತೆಗೆದುಬಿಟ್ರಲ್ಲಾ… ಈ ಅವಮಾನ ಅನುಭವಿಸುವ ಬದಲು ಹಾಳು ಬಾವಿಗಾದರೂ ನಮ್ಮನ್ನು ದೂಡಬಾರದಾ..” ಎಂದು ರೋಧಿಸುತ್ತಿವೆಯೆಂದೂ ಭಾಸವಾಗುತ್ತಿತ್ತು.

ಇನ್ನೂ ಅದಾಗಲೇ ರಜೆ ಮುಗಿಸಿ ಬರಲಾರಂಭಿಸಿದ್ದ ನಮ್ಮ ಜೂನಿಯರ್‌ಗಳು “ರಿಸಲ್ಟ್” ಎಂದೊಡನೆ ನೋಟಿಸ್ ಬೋರ್ಡಿನಲ್ಲಿನ ನಮ್ಮ ಮಾರ್ಕ್ಸ್‌ಗಳನ್ನು ಮುಗಿಬಿದ್ದು ನೋಡುತ್ತಿದ್ದರೆ, ಅವೋ ಫೋಕಸ್ ಲೈಟಿನ ಮುಂದೆ ಅಲ್ಲಾಡದೆ, ಬಿಟ್ಟ ಕಣ್ಣು ಬಿಟ್ಟಂತೆ ಕುಳಿತ ಪಾಪದ ಮೊಲಗಳಂತೆ ಕಾಣುತ್ತಿದ್ದವು.

ಅಷ್ಟಕ್ಕೇ ಸುಮ್ಮನಾಗದ ಜೂನಿಯರ್‌ಗಳು‌ ಅಪ್ಪಿ ತಪ್ಪಿ ಎದುರಾದ ನಮ್ಮನ್ನು ಕುರಿತು “ಅಣ್ಣ, ನೀವು ಕೆಮಿಸ್ಟ್ರಿಲಿ ಔಟ್ ಆಫ್ ಔಟ್ ತೆಗೀತೀರ ಅಂದ್ಕೊಂಡಿದ್ವು…..

ಆ ಅಣ್ಣ ಗಣಿತದಲ್ಲಿ ಬೋರ್ಡ್ ಟಾಪರ್ ಆಗ್ತಾರೆ ಅಂದ್ಕೊಂಡಿದ್ವು ….

ಈ ಅಣ್ಣ ಫಿಸಿಕ್ಸಲ್ಲಿ‌ ಏಕೆ ಅಷ್ಟು ಕಡಿಮೆ ತೆಗ್ದಿದ್ದಾರೆ…..”

ಎಂದೆಲ್ಲಾ ಕನಿಕರ ತೋರಿಸುತ್ತಿದ್ದರೆ ನಾವು ಅಷ್ಟೂ ವರ್ಷಗಳ ಕಾಲ ಮೇಂಟೈನ್ ಮಾಡಿದ್ದ “ಬಿಲ್ಡಪ್” ಕಳಚಿ ಬಿದ್ದಂತಾಗುತ್ತಿತ್ತು!

ಜಗತ್ತಿನ ಅಪ್ರತಿಮ ನಾಯಕನೆನಿಸಿಕೊಂಡಿದ್ದ, ಜನರ ಕಣ್ಮಣಿಯಾಗಿದ್ದ ಅಮೆರಿಕದ ಅಧ್ಯಕ್ಷ ನಿಕ್ಸನ್ ಗೂಢಚಾರಿಕೆ ಮಾಡಿಸಲು ಹೋಗಿ “ವಾಟರ್ ಗೇಟ್ ಹಗರಣ”ದಲ್ಲಿ ತಗಲಾಕಿಕೊಂಡು ಜನರ ಹೀಯಾಳಿಕೆಗೆ ಗುರಿಯಾದಾಗ “ಅಯ್ಯೋ! ನಾನೇನು ಮಾಡಿಬಿಟ್ಟೆ, ಇದೆಂತಹ ಮಹಾನ್ ಪ್ರಮಾದವಾಯಿತು..!” ಎಂದೆಲ್ಲಾ ಒರಲುತ್ತಾ ನೆಲದಲ್ಲಿ ಬಿದ್ದು ಹೊರಳಾಡಿದಂತಹ ಸ್ಥಿತಿ ನಮ್ಮದೂ ಆಗಿತ್ತು..
ಎಲ್ಲಾ ನಾವೇ ‘ಉಡುಗೊರೆ’ ನೀಡಿದ ಈ‌ ‘ಹಾಳಾದ’ ನೋಟಿಸ್ ಬೋರ್ಡ್ ದೆಸೆಯಿಂದಾಗಿ!

ಆದರೇನು ಮಾಡುವುದು ನಾವು ನಿಸ್ಸಹಾಯಕರಾಗಿದ್ದೆವು.

“ನಾವು ದಯಾಮಯಿಗಳೆಂದೆಣಿಸಿದ್ದ ಶಿಕ್ಷಕರು ನಮ್ಮ ಪಾಲಿಗೆ ಇಷ್ಟು ಕಟುಕರಾಗಿಬಿಟ್ಟರಾ.. ಹೆಸರಿನ ಬದಲು ರೋಲ್ ನಂಬರ್ ಆದರೂ ಹಾಕಿದ್ದರೆ ಸಾಲದಿತ್ತಾ..” ಎಂದು ಪರಿತಪಿಸಿದೆವು.

“ಅದೂ ಸರಿ, ಈ ನೋಟಿಸ್ ಬೋರ್ಡ್ ಕೊಡುವ ಐಡಿಯಾವನ್ನು ಮೊದಲು ನೀಡಿದವನಾದರೂ ಯಾರು?” ಎಂಬ ತನಿಖೆಗೆ ನಿಂತೆವು.
“ತನ್ನ ಮನೆಯ ಟಿಂಬರ್ ಸದ್ಬಳಕೆಯಾಗಲೆಂದು ಯೋಚಿಸಿ ಸನ್ನಿಯೇ ಈ ಐಡಿಯಾವನ್ನು ಮುನ್ನೆಲೆಗೆ ತಂದನಾ ಅಥವಾ ಬೆಲೆ ಬಾಳುವ ಮರ ಮುಟ್ಟೊಂದು ಕಡಿಮೆ ಬೆಲೆಯಲ್ಲಿ ಸಿಗುತ್ತದೆಂದು ನಾವೇ ಆಸೆಗೆ ಬಿದ್ದೆವಾ..”

“ಹೋಗಲಿ, ಉಡುಗೊರೆಯಾಗಿ ಬೀಗ ಕೊಡುವ ಮುನ್ನ ಒಂದು ಕೀಯನ್ನಾದರೂ ನಾವು ಇಟ್ಟುಕೊಳ್ಳಬಾರದಿತ್ತಾ..” ಎಂದೆಲ್ಲಾ ಯೋಚಿಸಿದೆವು.
ಆದರೇನು ಮಾಡುವುದು! ಕಾಲ ಮೀರಿತ್ತು.

ನಾವೇ ಕಟ್ಟಿಸಿದ ಜೈಲಿನಲ್ಲಿ ನಾವೇ ಬಂಧಿಗಳಾದ, ಅದೂ ಮೊದಲ ಬಂಧಿಗಳಾದ ಸ್ಥಿತಿ ನಮ್ಮದಾಗಿತ್ತು!