ಮಲೆನಾಡು, ಕರಾವಳಿ ಭಾಗದಲ್ಲಿ ಕೊಸಗಾಯಿ ಅಥವಾ ಕುಚ್ಚುಮಾವಿನಕಾಯಿ ಎನ್ನುವುದು ಮಳೆಗಾಲದಲ್ಲಿ ಅಡಿಗೆಗೆ ಸಹಾಯಕ. ಕುದಿಯುವ ಹಂತದಲ್ಲಿದ್ದ ನೀರಿಗೆ ತೊಳೆದು ಶುದ್ಧಗೊಳಿಸಿದ ಮಾವಿನಕಾಯಿಗಳನ್ನು ಹಾಕಿ ಒಂದು ಕ್ಷಣಬಿಟ್ಟು ಅದನ್ನು ಅಲ್ಲಿಂದ ತೆಗೆದು ಆರಿದ ಮೇಲೆ ಉಪ್ಪುನೀರಿನಲ್ಲಿ ಹಾಕಿಡಬೇಕು. ಇದರಿಂದಲೂ ಹಸಿಮಾವಿನಕಾಯಿಯಲ್ಲಿ ಮಾಡುವ ವ್ಯಂಜನಗಳನ್ನೆಲ್ಲ ಮಾಡಬಹುದು. ಇದಕ್ಕೂ ಅಷ್ಟೆ, ಎಲ್ಲ ಮಾವಿನಕಾಯಿಯೂ ಬಾರದು. ಸಿಪ್ಪೆ ದಪ್ಪವಿದ್ದು ಉಪ್ಪಿನಲ್ಲಿ ಕರಗಬಾರದು. ಜೋಓಓ ಎಂದು ಹೊಯ್ಯುವ ಮಳೆಯಲ್ಲಿ ಕಮ್ಮಗೆ ಉಂಡು, ಬೆಚ್ಚನೆ ಹೊದ್ದು ಮಲಗಿದರೆ ʻಸ್ವರ್ಗಕ್ಕೆ ಕಿಚ್ಚು ಹಚ್ಚೆಂದ….ʼ
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ನಾಲ್ಕನೆ ಕಂತಿನಲ್ಲಿ ಮಾವಿನ ಹಣ್ಣು ಮತ್ತದರ ಅಡುಗೆಗಳ ಕುರಿತ ಬರಹ

ಗಾಳಿ ಗಾಳಿ ತಂಗಾಳಿ ಯಂಗೊಂದ್ಹಣ್ಣು ನಿಂಗೊಂದ್ಹಣ್ಣು
ಸೂರ್ಯದೇವ್ರಿಗೆ ಇಪ್ಪತ್ಹಣ್ಣು ಅಲ್ಲಾಡೆ ಅಲ್ಲಾಡೆ
ಇದು ನಾವು ಚಿಕ್ಕವರಿರುವಾಗ ಬೇಸಿಗೆಯಲ್ಲಿ ಮಾವಿನಮರದ ಕೆಳಗೆ ನಿಂತು ಹೇಳುತ್ತಿದ್ದ ಸಾಲುಗಳು. ಹೀಗೆ ಹೇಳಿದರೆ ಗಾಳಿ ಜೋರಾಗಿ ಬೀಸಿ ಮರದಿಂದ ಮಾವಿನಹಣ್ಣು ಉದುರುತ್ತದೆ ಎನ್ನುವುದು ನಮ್ಮ ನಂಬಿಕೆಯಾಗಿತ್ತು. ಒಮ್ಮೆ ಗಾಳಿಗೆ ಬೀಳದಿದ್ದರೆ ಬಡ್ತಿಗೆ ಹೊಡೆದು ಬೀಳಿಸುವ ಕಲೆ ನಮಗೆ ತಿಳಿದಿತ್ತು. ಶಾಲೆಗೆ ಬೇಸಿಗೆ ರಜ ಇದ್ದಾಗ ಮಾವಿನಹಣ್ಣು ಆಗುವ ಶ್ರಾಯ. ಒಂದೆರಡು ಮಳೆ ಬಿದ್ದರಂತು ಮಾವಿನಹಣ್ಣು ತಿನ್ನಲು ಸಿಕ್ಕೇಸಿಗುತ್ತದೆ ಎನ್ನವುದನ್ನು ನಾವು ಕಂಡುಕೊಂಡಿದ್ದೆವು. ಹಣ್ಣು ಆಮೇಲಾಯ್ತು, ಮಾವಿನಕಾಯಿ ಎಂದರೆ ಯಾರ ಬಾಯಲ್ಲಿ ನೀರೂರುವುದಿಲ್ಲ ಹೇಳಿ. ಮಾವು ಹೀಚುಕಾಯಿಯಿಂದ ಹಣ್ಣಿನವರೆಗೆ ಎಲ್ಲರಿಗೂ ಪ್ರಿಯವೇ. ಅದರಲ್ಲಿಯೂ ಬಸುರಿಯರಿಗೆ ಇದು ಅತ್ಯಂತ ಪ್ರಿಯ. ಅದಕ್ಕೆ ಇರಬಹುದು ʻಅವಳಿಗೆ ಮಾವಿನಕಾಯಿ ತಿನ್ನುವ ಆಸೆಯಾಗಿದೆಯಂತೆʼ ಎಂದು ಹೇಳುವ ಮೂಲಕ ಆಕೆ ಬಸುರಿ ಎನ್ನುವುದನ್ನು ಸೂಚ್ಯವಾಗಿ ಹೇಳುವ ರೂಢಿಯಿತ್ತು.
ಮಾವಿನಕಾಯಿ ಸಣ್ಣದಿರುವಾಗ ಅದಕ್ಕೆ ಉಪ್ಪುಹಚ್ಚಿಕೊಂಡು ತಿನ್ನುವುದರ ಮಜವೇಮಜ. ʻಅಷ್ಟೊಂದು ಮಾವಿನಕಾಯ್ನ ಉಪ್ಪುಹಚ್ಗಂಡು ತಿನ್ನಡಿ, ಪಿತ್ತಜಾಸ್ತಿಯಾಗಿ ವಾಂತಿ ಆಗ್ತುʼ ಅಂತ   ಹಿರಿಯರು ಬೈಯ್ಯುತ್ತಿದ್ದರು. ಮಾವಿನಕಾಯಿ ತುಸು ಬೆಳೆಯುತ್ತಲೇ ಅದನ್ನು ಕೊಯ್ದು ಉಪ್ಪಿಗೆ ಹಾಕಿ ಉಪ್ಪಿನಕಾಯಿ ಮಾಡಬಹುದೆನ್ನುವ ಲೆಕ್ಕಾಚಾರ ಅಮ್ಮ, ಅಜ್ಜಿಯರದು. ಹಾಗಂತ ಎಲ್ಲ ಮಾವಿನಕಾಯಿಯು ಉಪ್ಪಿನಕಾಯಿಗೆ ಬರುವುದಿಲ್ಲ, ಒಮ್ಮೆ ಮಾಡಿದರೂ ಅದು ಅಷ್ಟೊಂದು  ರುಚಿಯಾಗದಿಲ್ಲ ಅಂತ ಅವರಿಗೂ ಗೊತ್ತಿತ್ತು. ಹಾಗಾಗಿ ʻಈ ಬಾರಿ ಜೀರಿಗೆ ವಾಸನೆ ಮಿಡಿ ಎಲ್ಲು ಸಿಕ್ಕಿದ್ದಿಲ್ಲೆ, ನಿಂಗೆ ಸಿಕ್ತಾ?ʼ ಅಂತಲೋ ʻಅವ್ರಮನೆ ಅಪ್ಪೆಮರಕ್ಕೆ ಈ ಬಾರಿ ಒಳ್ಳೆಕಾಯಿ. ಯಂಗೂ ಸ್ವಲ್ಪ ಮಿಡಿ ಕೊಡು ಅಂತ ಕೇಳಕ್ಕಾತುʼ ಅಂತಲೋ ಲೆಕ್ಕಹಾಕುವುದಿತ್ತು. ʻಊಟಕ್ಕೆ ಮೊದಲು ಉಪ್ಪಿನಕಾಯಿʼ, ʻಊಟಕ್ಕಿಲ್ಲದ ಉಪ್ಪಿನಕಾಯಿ ಯಾತಕ್ಕೂ ಬೇಡʼ ಎನ್ನುವ ಮಾತುಗಳು ಹುಟ್ಟಿಕೊಂಡಿದ್ದೆ ಹೀಗೆ ಅನಿಸುತ್ತದೆ. ಹುಳಿ ಇರುವ ಎಲ್ಲ ಕಾಯಿಗಳೂ ಉಪ್ಪಿನಕಾಯಿಗೆ ಸೂಕ್ತ ಎನ್ನುವಂತಿಲ್ಲ. ನಿಂಬೆಹಣ್ಣು, ನೆಲ್ಲಿಕಾಯಿ, ಹುಣಸೆಕಾಯಿಗಳಲ್ಲಿ ಉಪ್ಪಿನಕಾಯಿ ಮಾಡುವುದಿದೆ. ಆದಾಗ್ಯು, ಮಾವಿನಕಾಯಿ ಉಪ್ಪಿನಕಾಯಿಗೆ ಮತ್ಯಾವುದೂ ಸರಿದೂಗಲಾರವು. ಯಾಕೆಂದರೆ ಇದರಲ್ಲಿ ಮಿಡಿ ಉಪ್ಪಿನಕಾಯಿ, ಕಡಿಗಾಯಿ ಉಪ್ಪಿನಕಾಯಿ, ತೊಕ್ಕು, ಆಂಧ್ರದ ಉಪ್ಪಿನಕಾಯಿ, ಮಾರ್ವಾಡಿ ಉಪ್ಪಿನಕಾಯಿ ಹೀಗೆ ಹಲವು ಬಗೆ. ಇವತ್ತಿಗೂ ಮಿಡಿ ಉಪ್ಪಿನಕಾಯಿಗೆ ಒಂದು ತೂಕ ಹೆಚ್ಚು. ಇತ್ತೀಚೆಗೆ ನಗರಗಳಲ್ಲಿ ಕೂಡ ಮಾವಿನಮಿಡಿ ಸಿಗುತ್ತದೆ, ಮಿಡಿ ಉಪ್ಪಿನಕಾಯಿ ದೊರೆಯುತ್ತದೆ ಎನ್ನುವ ಸಂಗತಿ ಜಾಲತಾಣಗಳಲ್ಲಿ ಕಾಣಸಿಗುತ್ತದೆ. ಈ ಅಪ್ಪೆಮಿಡಿಗೆ ತನ್ನದೇ ಆದ ಒಂದು ಇತಿಹಾಸ ಸೃಷ್ಟಿಯಾಗಿದೆ. ಅನಂತನ ಅಪ್ಪೆ, ಹಾಳ್ಹಿತ್ತಲ ಅಪ್ಪೆ, ಅರಸಾಪುರದ ಅಪ್ಪೆ ಹೀಗೆ. ಕೆಲವು ಪ್ರದೇಶಗಳಲ್ಲಿ ಆಗುವ ಮಾವಿನಮಿಡಿಯ ಉಪ್ಪಿನಕಾಯಿಗೆ ವಿಶೇಷ ಬೇಡಿಕೆ. ರಿಪ್ಪನ್‌ಪೇಟೆ ಮಿಡಿ ಎಂದರೆ ಎಲ್ಲರ ಬಾಯಲ್ಲೂ ನೀರು. ಕರ್ನಾಟಕದ ಅಪ್ಪೆಮಿಡಿಗೆ ಭೌಗೋಳಿಕ ಚಿಹ್ನೆಯ ಮಾನ್ಯತೆ (ಜಿಐ ಟ್ಯಾಗ್‌) ದೊರೆತಿದೆ.
ಅಮ್ಮನೂ  ಮಾಡುತ್ತಿದ್ದರು ಉಪ್ಪಿನಕಾಯಿಯ. ಹಾಗೆಯೇ ಹೆಚ್ಚುದಿನ ಬಾಳಿಕೆ ಬರುವ ಮಾವಿನಕಾಯಿ ಕೆಂಪು ಚಟ್ನಿಯನ್ನು. ಇದಕ್ಕೂ ಕೂಡ ಎಲ್ಲ ಮಾವಿನಕಾಯಿಯೂ ಬರಲ್ಲ. ಮಧ್ಯಮ ರೀತಿಯ ಹುಳಿ ಇರುವ ಮಾವಿನಕಾಯಿಯೇ ಆಗಬೇಕು. ಅದರ ಸಿಪ್ಪೆಭಾಗ ಬಿಟ್ಟು ಒಳಭಾಗವನ್ನು ತುರಿದು ಅದಕ್ಕೆ ಉಪ್ಪನ್ನು ಹಾಕಿ ಕಲಸಿಟ್ಟಾಗ ಅದು ರಸ ಒಡೆಯುತ್ತದೆ. ನೀರು ತಾಗಿಸದೆ ಉಪ್ಪಿನಕಾಯಿ ಮಸಾಲೆಯನ್ನು ತುಸು ಪ್ರಮಾಣದಲ್ಲಿ ಸೇರಿಸಿ ಇಂಗಿನ ಪರಿಮಳ ಬರುವಂತೆ ಅದನ್ನು ತಯಾರಿಸುತ್ತಿದ್ದರು. ಗಂಜಿಯೂಟಕ್ಕೆ ನೆಕ್ಕಲು, ಬಿಸಿ ಅನ್ನಕ್ಕೆ ತುಪ್ಪದೊಂದಿಗೆ, ದೋಸೆ, ಚಪಾತಿಯ ಜೊತೆಗೆ ಎಣ್ಣೆಯೊಂದಿಗೆ ಸವಿಯಲು ನಮಗೆ ಖುಶಿಯೋಖುಶಿ. ಬೆಳೆದ ಹಲಸಿನ ಸೊಳೆಯ ಜೊತೆಗೆ ಈ ಚಟ್ನಿಯನ್ನು ಎಣ್ಣೆಹಾಕಿ ತಿನ್ನುವ ಗಮ್ಮತ್ತೇ ಗಮ್ಮತ್ತು. ಮಾವಿನಕಾಯಿಯಲ್ಲಿ ಎಷ್ಟೊಂದು ಬಗೆಯ ಅಡಿಗೆಯನ್ನು ಮಾಡಬಹುದು. ಚಟ್ನಿ, ತಂಬುಳಿ, ಅಪ್ಪೆಹುಳಿ, ಗೊಜ್ಜು, ಕಾಯಿರಸ ಇತ್ಯಾದಿಯಾಗಿ.

 ಮಲೆನಾಡಿನಲ್ಲಿ ಮದುವೆಯಂಥ ಶುಭಕಾರ್ಯಗಳಿರಲಿ, ಇನ್ಯಾವುದೇ ವಿಶೇಷ ದಿನಗಳಿರಲಿ ಮಾವಿನ ಕಾಲದಲ್ಲಿ ಅಪ್ಪೆಹುಳಿ (ಕೆಲವು ಕಡೆ ಇದಕ್ಕೆ ನೀರುಗೊಜ್ಜು ಎನ್ನುತ್ತಾರೆ) ಇರಲೇಬೇಕು. ಅಪ್ಪೆಹುಳಿ ಬಂತು ಅಂದರೆ ಎಲ್ಲ ವ್ಯಂಜನಗಳೂ ಮುಗಿದವು, ಇನ್ನು ಮಜ್ಜಿಗೆಯೊಂದೇ ಬಾಕಿ ಎಂದರ್ಥ. ಇತ್ತೀಚೆಗೆ ನಗರಪ್ರದೇಶದವರಿಗೂ ಅಪ್ಪೆಹುಳಿ ರುಚಿಯನ್ನು ತೋರಿಸಿದ್ದಾರೆ ಮಲೆನಾಡಿಗರು. ಮಾವಿನಕಾಯಿ ಬೆಳೆಯುವ ಕಾಲದಲ್ಲಿ ಬಳಸಿದರೆ ಸಾಲದು ಅದನ್ನು ರಕ್ಷಿಸಿಡುವ ವಿಧಾನವನ್ನು ಹಿಂದಿನವರು ಕಂಡುಕೊಂಡಿದ್ದರು. ಮಲೆನಾಡು, ಕರಾವಳಿ ಭಾಗದಲ್ಲಿ ಕೊಸಗಾಯಿ ಅಥವಾ ಕುಚ್ಚುಮಾವಿನಕಾಯಿ ಎನ್ನುವುದು ಮಳೆಗಾಲದಲ್ಲಿ ಅಡಿಗೆಗೆ ಸಹಾಯಕ. ಕುದಿಯುವ ಹಂತದಲ್ಲಿದ್ದ ನೀರಿಗೆ ತೊಳೆದು ಶುದ್ಧಗೊಳಿಸಿದ ಮಾವಿನಕಾಯಿಗಳನ್ನು ಹಾಕಿ ಒಂದು ಕ್ಷಣಬಿಟ್ಟು ಅದನ್ನು ಅಲ್ಲಿಂದ ತೆಗೆದು ಆರಿದ ಮೇಲೆ ಉಪ್ಪುನೀರಿನಲ್ಲಿ ಹಾಕಿಡಬೇಕು. ಅಧಿಕ ಪ್ರಮಾಣದ ಹುಳಿಯಾದ್ದರಿಂದ ಜಾಡಿ ಅಥವಾ ಮಣ್ಣಿನ ಪಾತ್ರೆಯಾದರೆ ಒಳ್ಳೆಯದು. ಇದು ದೀಪಾವಳಿಯವರೆಗೂ ತಾಳಿಕೆ ಬರುತ್ತದೆ. ಇದರಿಂದಲೂ ಹಸಿಮಾವಿನಕಾಯಿಯಲ್ಲಿ ಮಾಡುವ ವ್ಯಂಜನಗಳನ್ನೆಲ್ಲ ಮಾಡಬಹುದು. ಇದಕ್ಕೂ ಅಷ್ಟೆ, ಎಲ್ಲ ಮಾವಿನಕಾಯಿಯೂ ಬಾರದು. ಸಿಪ್ಪೆ ದಪ್ಪವಿದ್ದು ಉಪ್ಪಿನಲ್ಲಿ ಕರಗಬಾರದು. ಜೋಓಓ ಎಂದು ಹೊಯ್ಯುವ ಮಳೆಯಲ್ಲಿ ಕಮ್ಮಗೆ ಉಂಡು, ಬೆಚ್ಚನೆ ಹೊದ್ದು ಮಲಗಿದರೆ ʻಸ್ವರ್ಗಕ್ಕೆ ಕಿಚ್ಚು ಹಚ್ಚೆಂದ….ʼ
ಮಾವಿನಹಣ್ಣು ಎಲ್ಲರಿಗೂ ಪ್ರಿಯವೇ. ಹಣ್ಣಿನಿಂದಲೂ ಅನ್ನದೊಂದಿಗೆ ಸವಿಯುವ ಹಲವು ಬಗೆಯ ವ್ಯಂಜನಗಳನ್ನು ಮಾಡುವುದಿದೆ. ಮಾವಿನಹಣ್ಣಿನ ಸಾಸ್ಮೆ, ಹಣ್ಣಿನ ಗೊಜ್ಜು. ಮಲೆನಾಡಿನಲ್ಲಿ ಮಾವಿನಹಣ್ಣಿನ ಕಾಲದಲ್ಲಿ ಮಾವಿನಹಣ್ಣು ದಿನನಿತ್ಯದ ಅಡುಗೆಯ ಒಂದು ಭಾಗ. ಹುಳಿ ಇರುವ ಕಾಡುಮಾವಿನಹಣ್ಣೇ ಆಗಬೇಕು. ಹಾಗಂತ ಎಲ್ಲವೂ ಇದಕ್ಕೆ ಯೋಗ್ಯವಲ್ಲ. ಅದಕ್ಕೇ ಆದ ಒಂದು ವಿಶಿಷ್ಟ ರುಚಿ, ಪರಿಮಳ ಇರುತ್ತದೆ. ಸಾಸ್ಮೆಹಣ್ಣಿನ ಮರಕ್ಕೆ ಈ ಬಾರಿ ಕಾಯಿ ಬಂದಿದೆ ಎಂದರೆ ಅದರ ವೈಭೋಗವೇ ಬೇರೆ. ಒಂದೂರಿನಿಂದ ಇನ್ನೊಂದು ಊರಿಗೂ ಇದು ಪಯಣಬೆಳೆಸುತ್ತದೆ. ʻಸಾಸ್ಮೆಹಣ್ಣು ಹೆಕ್ಕಿ ಇಟ್ಟಿದ್ದಿ, ಬಂದು ತಗಂಡು ಹೋಗುʼ ಎಂದರೆ ಸಾಕು ಇರುವ ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಹೋಗಿ ಅದನ್ನು ತರಲು ಸಿದ್ಧವಿರುತ್ತಾರೆ.
ಹುಳಿಮಿಶ್ರಿತ ಹಣ್ಣಿನ ವ್ಯಂಜನಗಳನ್ನು ಸವಿಯಲು ನಾಲಿಗೆ ಕಾತರಿಸುತ್ತದೆ. ಅಮ್ಮಂದಿರು ಹಣ್ಣನ್ನು ಹೆಕ್ಕಿತರಲು ಬೆಳ್ಳಂಬೆಳಗ್ಗೆ ಎಬ್ಬಿಸಿದರೂ ಕಣ್ಣುಜ್ಜುತ್ತ ಸಾಸ್ಮೆಹಣ್ಣು ಹೆಕ್ಕಲು ಓಡುತ್ತಿದ್ದೆವು. ಈಗಂತು ಎಲ್ಲರ  ಅಡುಗೆಮನೆಯಲ್ಲೂ ತಂಗಳುಪೆಟ್ಟಿಗೆ ಜಾಗಪಡೆದಿರುತ್ತದೆ. ಹಣ್ಣಿನ ರಸವನ್ನು ಚೆನ್ನಾಗಿ ಕಾಯಿಸಿ ಅದರಲ್ಲಿ ಇಟ್ಟರೆ ಮೂರ್ನಾಕು ತಿಂಗಳವರೆಗೆ ಸವಿಯಬಹುದು. ಹಿಂದೆಯೂ ಬೇಸಿಗೆಕಾಲದಲ್ಲಿ ಹಣ್ಣಿನ ರಸವನ್ನು ಹಪ್ಪಳದ ರೂಪದಲ್ಲಿ ಕಾಪಿಡುತ್ತಿದ್ದರು. ನಮ್ಮ ಅಜ್ಜಿ ಇಂಥ ಹುಳಿಹಣ್ಣು ಕಂಡರೆ ಊಟಕ್ಕೆ ಕೂರುವಾಗಲೇ ಪಕ್ಕದಲ್ಲಿ ಒಂದು ಹಣ್ಣನ್ನು ಇಟ್ಟುಕೊಳ್ಳುತ್ತಿದ್ದರು. ಅದನ್ನು ಅನ್ನಕ್ಕೆ ಕಿವುಚಿ ತುಸು ಉಪ್ಪಿನೊಂದಿಗೆ ಒಂದು ಹಸಿಮೆಣಸಿನಕಾಯಿಯನ್ನು ಕಿವುಚಿ ಸ್ವಲ್ಪ ಬೆಲ್ಲ, ಎರಡು ಚಮಚ ಎಣ್ಣೆಯೊಂದಿಗೆ ಸವಿಯುತ್ತಿದ್ದರು. ನಮಗೂ ಆಸೆಯಾಗುತ್ತಿತ್ತು. ಮುಂದಿನ ಹೊತ್ತಿಗೆ ಎಲ್ಲರಿಗೂ ಇಂಥ ತಯಾರಿ ಮಾಡಿ ಅದರ ಸಮಾರಾಧನೆ ಆಗುತ್ತಿತ್ತು. ಇಂಥ ಹುಳಿ ಮಾವಿನಹಣ್ಣಿನ ರಸದಿಂದ ಮಾವಿನಹುಳಿ ಎನ್ನುವ ವ್ಯಂಜನವನ್ನು ಚಿಕ್ಕವಳಿರುವಾಗ ಅನ್ನದೊಂದಿಗೆ ಕಲಸಿ ತಿಂದಿರುವ ನೆನಪಿದೆ. ಮಾವಿನಹಣ್ಣಿನ ರಸ ತೆಗೆದು ಅದನ್ನು ಕಲ್ಲುಮರಿಗೆಯಲ್ಲಿ ಕುದಿಸಲು ಇಡುತ್ತಿದ್ದರು. ಅದಕ್ಕೆ ಸೂಜಿಮೆಣಸನ್ನು ಚೆನ್ನಾಗಿ ಅರೆದು, ಉಪ್ಪು ಮತ್ತು ತುಸು ಬೆಲ್ಲ ಸೇರಿಸಿ ಇಡ್ಲಿಹಿಟ್ಟಿನ ಹದಕ್ಕೆ ಬರುವಂತೆ ಕುದಿಸಿ ಅದಕ್ಕೆ ಇಂಗಿನ ಒಗ್ಗರಣೆ ಹಾಕಿ ಆರಿದ ಮೇಲೆ ಜಾಡಿಯಲ್ಲಿ ತುಂಬಿಟ್ಟರೆ, ಅಮ್ಮನ ಕೆಲಸ ಮುಗಿಯುತ್ತಿತ್ತು. ಒಂದೆರಡು ತಿಂಗಳವರೆಗೆ ನಾವೆಲ್ಲ ಅದರ ಬಳಕೆದಾರರು.

ಹುಳಿ ಇರುವ ಎಲ್ಲ ಕಾಯಿಗಳೂ ಉಪ್ಪಿನಕಾಯಿಗೆ ಸೂಕ್ತ ಎನ್ನುವಂತಿಲ್ಲ. ನಿಂಬೆಹಣ್ಣು, ನೆಲ್ಲಿಕಾಯಿ, ಹುಣಸೆಕಾಯಿಗಳಲ್ಲಿ ಉಪ್ಪಿನಕಾಯಿ ಮಾಡುವುದಿದೆ. ಆದಾಗ್ಯು, ಮಾವಿನಕಾಯಿ ಉಪ್ಪಿನಕಾಯಿಗೆ ಮತ್ಯಾವುದೂ ಸರಿದೂಗಲಾರವು. ಯಾಕೆಂದರೆ ಇದರಲ್ಲಿ ಮಿಡಿ ಉಪ್ಪಿನಕಾಯಿ, ಕಡಿಗಾಯಿ ಉಪ್ಪಿನಕಾಯಿ, ತೊಕ್ಕು, ಆಂಧ್ರದ ಉಪ್ಪಿನಕಾಯಿ, ಮಾರ್ವಾಡಿ ಉಪ್ಪಿನಕಾಯಿ ಹೀಗೆ ಹಲವು ಬಗೆ. ಇವತ್ತಿಗೂ ಮಿಡಿ ಉಪ್ಪಿನಕಾಯಿಗೆ ಒಂದು ತೂಕ ಹೆಚ್ಚು.

ಮಾವಿನಹಣ್ಣಿನ ಕಾಲದಲ್ಲಿ ಅನೇಕರು ಬೇರೆ ಹಣ್ಣಿನ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ಊಟದ ನಂತರದಲ್ಲಿ ಪ್ರತಿದಿನವೂ ಇದರ ಸೇವನೆಗೆ ಆದ್ಯತೆ. ʻಹಸಿದು ಹಲಸು ಉಂಡು ಮಾವುʼ ಎನ್ನುವುದನ್ನು ಅಕ್ಷರಶಃ ಪಾಲಿಸುತ್ತಾರೆ. ನಮ್ಮ ಸೋದರಮಾವ ಹೇಳುತ್ತಿದ್ದರು: ಹಿಸಿದು (ತುಂಡುಮಾಡಿ) ಹಲಸನ್ನು ತಿನ್ನಬೇಕು; ಉಂಡೆಯಾಗಿ ಅಂದರೆ ಇಡಿಯಾಗಿ ಮಾವು ತಿನ್ನಬೇಕು ಅಂತ. ಮಾವಿನಹಣ್ಣಿನ ರಸಾಯನ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಕೆಲವರಿಗೆ ಮಾವಿನಹಣ್ಣನ್ನು  ತಿನ್ನುವುದಕ್ಕಿಂತ ರಸಾಯನ ಮಾಡಿ ಸವಿಯುವುದು ಇಷ್ಟ. ದಿನದಿನಾ ರಸಾಯನ ಮಾಡುವುದು ಹೆಂಗಸರಿಗೆ ಕೆಲವೊಮ್ಮೆ ಹೆಚ್ಚು ಕೆಲಸ ಎನ್ನಿಸುವುದೂ ಇದೆ. ಆಗ ʻಹುಳಿಹಣ್ಣು ಶುರುವಾದಾಗಿನಿಂದ ಕೊಳೆಹಣ್ಣಿನವರೆಗೆ ನಮ್ಮನೆಯಲ್ಲಿ ದಿನಾ ರಸಾಯನʼ ಎಂದು ತಮಾಶೆಯಾಗಿ ಹೇಳುವುದೂ ಇದೆ. ಬೇಸಿಗೆ ಬಿಸಿಲಿಗೆ ಇದರ ಪಾನಕ ಮಾಡಿ ಕುಡಿಯುವ ರೂಢಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಮಾವಿನಹಣ್ಣಿನಿಂದ ಹಲ್ವ ಮಾಡಿ ಸವಿಯುವುದು ಈಗಲೂ ಮುಂದುವರಿದಿದೆ. ಈಗ ಅದರ ಪಲ್ಪ್‌ ಮಾಡಿ ಕಾಪಿಟ್ಟು ಐಸ್‌ಕ್ರೀಮಿಗೆ ಬಳಸುತ್ತಾರೆ. ಕಾಲಕ್ಕೆ ತಕ್ಕಂತೆ ಮೌಲ್ಯವರ್ಧನೆ ಎಂದು ಹೊಸಹೊಸ ಪ್ರಯೋಗಗಳು ನಡೆಯುತ್ತಿವೆ.
ಮಾವಿನಲ್ಲಿ ಬಹಳ ತಳಿಗಳಿವೆ. ಹಣ್ಣಿನ ವಾಟೆಯಿಂದ (ಬೀಜಪ್ರಸಾರ) ಸಸಿಗಳು ತಯಾರಾಗುವುದರಿಂದ ಸಾವಿರಾರು ರುಚಿಯ ಹಣ್ಣುಗಳಿವೆ. ಪ್ರತಿಯೊಂದು ಊರಿನಲ್ಲಿಯೂ ಹಲವು ರುಚಿಯ ಹಣ್ಣುಗಳಿದ್ದು ವಿಚಿತ್ರ ಹೆಸರುಗಳನ್ನು ಪಡೆದಿರುತ್ತವೆ. ಕೆಂಪಿಕುಂಡೆ, ಗಿಣಿಮೂತಿ, ಗಿಡಗನಮನೆ, ಉದ್ದವರಟೆ, ಕೋಳಿಮೊಟ್ಟೆ, ಮಗೆಮಾವು ಮುಂತಾಗಿ. ಹಣ್ಣಿನ ಆಕಾರ ನೋಡಿ ಹೆಸರಿಡುವುದೂ ಇದೆ. ಮಗೆಮಾವು ಮತ್ತು ಗಿಡುಗನಮನೆ ಹಣ್ಣುಗಳನ್ನು ತಿನ್ನಲು ಎರಡೂ ಕೈಬೇಕು, ಇಲ್ಲವೆ ಕತ್ತರಿಸಿ ತಿನ್ನಬೇಕಾಗುತ್ತದೆ. ಅವುಗಳ ಗಾತ್ರ ಅಷ್ಟು ದೊಡ್ಡದು.
ಬಾದಾಮಿ, ನೀಲಂ, ಬೆನೆಟ್‌, ಆಫೋಸ್‌, ರಸಪುರಿ, ಮಲ್ಲಿಕಾ, ಮಲಗೋವಾ, ಮುಂಡಪ್ಪ ಮುಂತಾದ ತೋಪಿನಲ್ಲಿ ಬೆಳೆಯುವ ಮಾವಿನಹಣ್ಣಿನ ಗಿಡಗಳು ಕೆಲವರ ಮನೆಗಳಲ್ಲಷ್ಟೆ ಇದ್ದವು. ಈ ತಳಿಗಳನ್ನು ಕಸಿ ಮೂಲಕವೇ ಬೆಳೆಸಬೇಕು. ಉತ್ತರ ಕನ್ನಡದಲ್ಲಿ ಬಹಳ ಹೆಸರಾಗಿದ್ದ ತಳಿ ಕರಿಈಸಾಡು. ತಿಂದವನೇ ಬಲ್ಲ ಅದರ ಸವಿಯ. ಈ ರಸಪೂರಿತ ಮಾವಿನಹಣ್ಣು ಪ್ರಪಂಚಾದ್ಯಂತ ಸುತ್ತಿಬಂದು ಈಗದಕ್ಕೆ ಭೌಗೋಳಿಕ ಚಿಹ್ನೆಯ ಮಾನ್ಯತೆ (ಜಿಐ ಇಂಡೆಕ್ಸ್‌) ದೊರೆತಿದೆ. ನಮ್ಮ ಬಂಧುಗಳೊಬ್ಬರು ಸುಮಾರು ನಲವತ್ತು ವರ್ಷಗಳ ಹಿಂದೆಯೇ ಉತ್ತರ ಭಾರತದ ಕೆಲವು ತಳಿಗಳನ್ನು ಬೆಳೆಸಿದ್ದರು. ಇದು ಜಹಂಗೀರ, ಇದು ಬಂಗನಪಲ್ಲಿ, ಇದು ಬಾಂಬೆ ಆಲ್ಫನ್ಸೋ, ಇದು ರತ್ನಗಿರಿ ಆಪೋಸ್‌ ಎಂದು ಮನೆಗೆ ಬರುವ ಅತಿಥಿಗಳಿಗೆ ವಿವಿಧ ರುಚಿಯ ಹಣ್ಣುಗಳನ್ನು ಹೆಚ್ಚಿ ಕೊಡುತ್ತಿದ್ದರು. ಹೀಗೆ ಒಂದೊಂದೇ ಹಣ್ಣಿನ ರುಚಿ ನೋಡುವಷ್ಟರಲ್ಲಿ ನಮ್ಮ ಹೊಟ್ಟೆ ಗುಡಾಣವಾಗುತ್ತಿತ್ತು. ದಾಶರಿ, ಷಹಾಪಸಂದ್‌ ಹಣ್ಣುಗಳನ್ನು ಮೊದಲ ಬಾರಿಗೆ ನಾನು ಸವಿದಿದ್ದು ಅವರ ಮನೆಯಲ್ಲಿಯೇ. ಬೇಸಿಗೆ ರಜೆಯಲ್ಲಿ ಮಕ್ಕಳು ಬೇರೆ ಯಾವ ನೆಂಟರ ಮನೆಗೆ ಹೋಗದಿದ್ದರೂ ಅವರ ಮನೆಗೆ ತಪ್ಪಿಸುತ್ತಿರಲಿಲ್ಲ. ಮಾವಿನಹಣ್ಣು ಎಂದರೆ ಯಾವ ಮಗು ಇಷ್ಟಪಡುವುದಿಲ್ಲ ಹೇಳಿ.  ಒಂದು ಮಕ್ಕಳ ಪದ್ಯ ನೆನಪಾಗುತ್ತಿದೆ.

ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು ತೋಟದಿ ಮಾವಿನ ಮರವಿತ್ತು 
ಮೂವತ್ತು ಹತ್ತು ನಲವತ್ತು ಮಾವಿನ ಮರದಲಿ ಹಣ್ಣಿತ್ತು
ಎನ್ನುವ ಪದ್ಯವು ಮುಂದುವರಿದು ಸಂಪತ್ತು ಕೈಯಲ್ಲಿ ಕಲ್ಲನ್ನು ಹಿಡಿದು ಹಣ್ಣನ್ನು ಉದುರಿಸುವುದು, ಮತ್ತು ಮಾಲಿಯನ್ನು ಕಾಣುತ್ತಲೇ ಮನೆಗೆ ಓಡುವುದಾಗಿ ಈ ಪದ್ಯ ಚಿತ್ರಿಸುತ್ತದೆ.
ಮಾವಿನ ಫಲಕ್ಕೆ ಮಾತ್ರವಲ್ಲ, ಅದರ ಚಿಗುರಿಗೂ ಮನುಷ್ಯನೊಂದಿಗೆ ಸಂಬಂಧ ಬೆಸೆದಿದೆ. ಹಬ್ಬ-ಹರಿದಿನಗಳಿರಲಿ, ಮದುವೆ ಮುಂಜಿಗಳಿರಲಿ, ಯಾವುದೇ ಶುಭಕಾರ್ಯಗಳಿರಲಿ ಮನೆಯ ಬಾಗಿಲಿಗೆ ಮಾವಿನತೋರಣ ಬೇಕೇಬೇಕು. ದೊಡ್ಡಹಂದರ ಹಾಕಿದರೂ ಅದರ ಬಾಗಿಲಿಗೆ ಬಾಳೆಮರ ನೆಟ್ಟು ಅದಕ್ಕೆ ಮಾವಿನತೋರಣ ಕಟ್ಟುವ ರೂಢಿ ಹಳ್ಳಿನಗರಗಳೆನ್ನದೆ ಇವತ್ತಿಗೂ ಮುಂದುವರಿದಿದೆ. ತೋರಣ ಎಂದರೆ ಮಾವಿನೆಲೆಯ ತೋರಣ ಎಂದೇ ಅರ್ಥ. ಮದುವೆಯ ಕಲಶಕ್ಕೂ ಮಾವಿನ ಚಿಗುರು ಬೇಕು. ಇನ್ನು ಯುಗಾದಿ ಹಬ್ಬದಲ್ಲಂತೂ ಮಾವು-ಬೇವು ಜೋಡಿಪದಗಳಾಗಿ ಬಳಕೆ. ಮಾವು ಹಣ್ಣಾಗುವುದೇ ವಸಂತ ಋತುವಿನಲ್ಲಿ. ಇತರ ಯಾವುದೇ ಮರಗಳಿಗಿಲ್ಲದ ಹಿರಿಮೆ ಮಾವಿನದು. ಮಾವು ಚಿಗುರುತ್ತಲೇ ಕೋಗಿಲೆ ಉಲಿಯುತ್ತದೆ ಎನ್ನುವ ಮಾತು ಬಹಳ ಪ್ರಚಲಿತ. ಕುವೆಂಪು ಅವರು ಕುಹು ಕುಹೂ ಎಂದು ಹಾಡುವ ಕಿನ್ನರಕಂಠದ ಕೋಗಿಲೆಯನ್ನು ಕೇಳುತ್ತಾರೆ; ʻಮಾಮರ ತಳಿರೊಳು ದೇವತೆಯಂದದಿ ನೀನಡಗೇನನು ಹಾಡುತಿಹೆ?ʼ ಎಂದು. ಎಲ್ಲ ಕಾಲಕ್ಕು ಮಾವಿನ ಮರ, ಚಿಗುರು ಪ್ರಿಯವೇ.
ತಳಿರೊಳ್‌ ನೀನೆ ಬೆಡಂಗನಯ್‌ ನನೆಗಳೋಳ್‌ ನೀಂ ನೀರನಯ್‌ ಪುಷ್ಪಸಂ
ಕುಳದೊಳ್‌ ನೀನೆ ವಿಳಾಸಿಯಯ್‌ ಮಿಡಿಗಳೊಳ್‌ ನೀಂ ಚೆಲ್ವನಯ್‌ ಪಣ್ತ ಪಣ್ಗ
ಳೊಳೋವೋ ಪೆರತೇನೋ ನೀನೆ ಭುವನಕ್ಕಾರಾಧ್ಯನಯ್‌ ಭೃಂಗಕೋ

ಕಿಳಕೀರಪ್ರಿಯ ಚೂತರಾಜ ತರುಗಳ್‌ ನಿನ್ನಂತೆ ಚೆನ್ನಂಗಳೇ

ಆದಿಕವಿ ಪಂಪ ಆದಿಪುರಾಣದಲ್ಲಿ ಮಾವಿನ ಚಿಗುರಿನ ಬೆಡಗನ್ನ, ಮೊಗ್ಗಿನ ಸೊಬಗನ್ನು, ಹೂವಿನ ವಿಲಾಸವನ್ನು, ಮಿಡಿಯ ಚೆಲುವನ್ನು, ಮಾವಿನಹಣ್ಣಿಗಂತು ಮತ್ಯಾವುದೂ ಸಮನಲ್ಲ; ಹಾಗಾಗಿ ಲೋಕದ ಜನ ನಿನ್ನನ್ನು ಆರಾಧಿಸುತ್ತಾರೆ ಎಂದು ಮಾವನ್ನು ಹೊಗಳುವ ಕವಿ, ದುಂಬಿ, ಗಿಳಿ, ಕೋಗಿಲೆಗಳಿಗೆ ಪ್ರೀತಿಪಾತ್ರನಾದ ಚೂತರಾಜ ಇನ್ನಾವ ಮರಗಳು ನಿನಗೆ ಸಮಾನವಲ್ಲ, ಅವು ನಿನ್ನಷ್ಟು ಚೆಲುವನ್ನು ಹೊಂದಿಲ್ಲ ಎನ್ನುತ್ತಾನೆ.