ಕಾಸ್ಟ್ ಆಫ್ ಲಿವಿಂಗ್ ಮತ್ತು ದುಬಾರಿ ಮನೆ ಬಾಡಿಗೆ – ಗಮನದಲ್ಲಿಟ್ಟುಕೊಂಡು ಪ್ರಧಾನಿ ತಮ್ಮ ಮದುವೆಯನ್ನು ಸರಳವಾಗಿ, ಮನೆಯಂಗಳದಲ್ಲೇ ಮಾಡಿಕೊಂಡರು ಎಂದು ಕೆಲವರ ಮಾತು. ಅದು ಪ್ರಧಾನಿಯ ಅಧಿಕೃತ ನಿವಾಸ, ಅವರ ಸ್ವಂತ ಮನೆಯೇನಲ್ಲ, ಅಧಿಕೃತ ನಿವಾಸವನ್ನು ಹೀಗೆ ಬಳಸಿಕೊಂಡಿದ್ದಕ್ಕೆ ಅವರು ಬಾಡಿಗೆ ಕೊಡಬೇಕಾಗಿತ್ತು ಎಂದು ಕೂಡ ಚುಚ್ಚುಮಾತು ಎದ್ದಿದೆ. ಮಾಧ್ಯಮದವರು ಇದೆ ವಿಷಯವನ್ನು ಇಟ್ಟುಕೊಂಡು ವಿರೋಧಪಕ್ಷದ ನಾಯಕಿ ಸೂಸನ್ ಲೇ ಅವರನ್ನು ಪ್ರಶ್ನಿಸಿದ್ದಾರೆ.
ಡಾ.
ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಆಸ್ಟ್ರೇಲಿಯನ್ ಪ್ರಧಾನಿ ಆಂತೊನಿ ಆಲ್ಬಾನೀಸಿ ತಮ್ಮ ಸಂಗಾತಿ ಜೋಡಿ ಹೇಡನ್ ಅವರನ್ನು ಮದುವೆಯಾಗಿದ್ದಾರೆ. ಆಲ್ಬೋ (ಪ್ರಧಾನಿಯ ಕಿರು-ನಾಮ) ಮತ್ತು ಜೋಡಿ (Jodie) ಕಳೆದ ವಾರಾಂತ್ಯದ ಶನಿವಾರ ದೇಶದ ರಾಜಧಾನಿಯಾದ ಕ್ಯಾನ್ಬೆರ್ರಾ ನಗರದಲ್ಲಿ ತಮ್ಮ ಅಧಿಕೃತ ನಿವಾಸವಾದ ದಿ ಲಾಡ್ಜ್ ಅಲ್ಲಿ ಕೇವಲ ಎಂಭತ್ತು ಆಹ್ವಾನಿತ ಅತಿಥಿಗಳೊಡನೆ ತಮ್ಮ ಸಂತೋಷವನ್ನು ಹಂಚಿಕೊಂಡರು. ಕಳೆದ ಐದು ವರ್ಷಗಳಿಂದ ತಮ್ಮ ಗರ್ಲ್ ಫ್ರೆಂಡ್, ಪ್ರಿಯತಮೆ, ಸಂಗಾತಿ ನಂತರ ಫಿಯಾನ್ಸಿ ಆಗಿದ್ದ Jodie ಜೊತೆ ನಿಜವಾಗಿಯೂ ಜೋಡಿಯಾಗಿದ್ದಾರೆ. ಆಲ್ಬಾನೀಸಿ ಅವರ ವಯಸ್ಸು ೬೨ ಮತ್ತು ಅವರ ಹೊಸ ಹೆಂಡತಿ ಜೋಡಿ ಅವರಿಗೆ ೪೭ ವರ್ಷ. ಮದುವೆಯಾದ ವಾರ ಐದು ದಿನಗಳ ಕಾಲ ರಜೆ ಹಾಕಿ ಇಬ್ಬರೂ ಹನಿಮೂನ್‌ಗೆಂದು ಹೋದರು.

ಇದೇನು ಮಹಾ ದೊಡ್ಡ ಸುದ್ದಿಯೆ ಎಂದು ಮೂಗೆಳೆಯುವ ಜನರಿಗೆ ಮತ್ತೊಂದು ವಿಶೇಷವಾದ ವಿಷಯ. ಪ್ರಸ್ತುತ ಸರಕಾರದ ನಾಯಕತ್ವ ವಹಿಸಿರುವ, ಅಧಿಕಾರದಲ್ಲಿದ್ದುಕೊಂಡು ಮದುವೆಯಾದ ಮೊಟ್ಟ ಮೊದಲನೆ ಪ್ರಧಾನ ಮಂತ್ರಿ ಆಂತೊನಿ ಆಲ್ಬಾನೀಸಿ. ಈ ಮಟ್ಟಿಗೆ ಅವರೊಂದು ದಾಖಲೆ ನಿರ್ಮಿಸಿದ್ದಾರೆ. ಆಲ್ಬಾನೀಸಿ ಅವರಿಗೆ ಇದು ಎರಡನೆ ಮದುವೆ. ಅವರು ಮೊದಲಿಗೆ ಮದುವೆಯಾಗಿದ್ದಿದ್ದು ಕಾರ್ಮೆಲ್ ಟೇಬ್ಬುಟ್ ಅವರೊಡನೆ. ಆ ಕಾಲದಲ್ಲಿ ಈಕೆ ಕೂಡ ರಾಜ್ಯಮಟ್ಟದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದರು. ಇವರಿಬ್ಬರೂ ೨೦೧೯ ರಲ್ಲಿ ಬೇರೆಯಾದರು. ಕಾರ್ಮೆಲ್ ಮತ್ತು ಆಂತೋನಿ ದಂಪತಿಗೆ ನೇತನ್ ಎಂಬ ಮಗನಿದ್ದಾನೆ. ಅಪ್ಪನ ಎರಡೂ ಚುನಾವಣೆಗಳ ಗೆಲುವುಗಳ ಸಂದರ್ಭಗಳಲ್ಲಿ ನೇತನ್ ವೇದಿಕೆಯ ಮೇಲಿದ್ದು ಅಪ್ಪನ ಸಂತೋಷವನ್ನು ಹಂಚಿಕೊಂಡಿದ್ದ. ಅದೇ ರೀತಿ ಈ ಮದುವೆ ಸಂದರ್ಭದಲ್ಲಿ ಕೂಡ ಖುಷಿಖುಷಿಯಾಗಿ ಕಾಣಿಸಿದ್ದಾನೆ.

ಆಂತೊನಿ ಆಲ್ಬಾನೀಸಿ – ಜೋಡಿ ಹೇಡನ್ ತಾವು ಮದುವೆಯಾಗುವ ದಿನಾಂಕವನ್ನು ಅತ್ಯಂತ ಗೌಪ್ಯವಾಗಿರಿಸಿದ್ದರು. ಕೆಲವೇ ಮಂದಿ ಆಮಂತ್ರಿತರು. ಹೆಚ್ಚಿನ ಮಂದಿ ಕುಟುಂಬದವರು ಮತ್ತು ಸ್ನೇಹಿತರು. ಬೆರಳೆಣಿಕೆ ಆಹ್ವಾನಿತ ಕೇಂದ್ರ ಸರಕಾರದ ಹಿರಿಯ ಕ್ಯಾಬಿನೆಟ್ ಮಂತ್ರಿಗಳಿಗೆ ತಮ್ಮ ಖಾಸಗಿ ಕಾರಿನಲ್ಲಿ ಬರುವಂತೆ ಸೂಚಿಸಲಾಗಿತ್ತಂತೆ. ತಮ್ಮ ಮದುವೆಯ ಪೂರ್ತಿ ಖರ್ಚನ್ನು ವಧು-ವರರೇ ಭರಿಸಿದ್ದಾರೆ ಎಂದು ಸುದ್ದಿಮಾಧ್ಯಮಗಳು ಹೇಳಿವೆ.

ಫೋಟೋಗಳನ್ನು ಮದುವೆಯಾದ ದಿನವೇ ಸುದ್ದಿಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿತ್ತು. ಅವುಗಳಲ್ಲಿ ಎರಡು ಫೋಟೋಗಳು ಬಹಳ ಗಮನ ಸೆಳೆದಿವೆ. ಒಂದು, ಆಹ್ವಾನಿತ ಅತಿಥಿಗಳಿಗೆ ಕೊಟ್ಟ ಬಿಯರ್ ಕ್ಯಾನ್. ಕ್ಯಾನ್ ಮೇಲೆ Albo & Jodie ಹೆಸರುಗಳ ಜೊತೆ ಅವರಿಬ್ಬರ ನಗುಮುಖಗಳೂ ಮುದ್ರಿತವಾಗಿವೆ. ಎರಡನೆ ಫೋಟೋ ಐದು ವರ್ಷದ ಪುಟಾಣಿ ಹುಡುಗಿ Ella ತಾನು ಪ್ರಧಾನ ಮಂತ್ರಿಯ ನಾಯಿ Toto ಜೊತೆ ಹೆಜ್ಜೆ ಹಾಕುತ್ತಿರುವುದು. ಮದುವೆಯಲ್ಲಿ Ella ‘ಹೂ-ಹುಡುಗಿ’ ಯಾಗಿದ್ದು, Toto ವಧು-ವರರ ಮದುವೆ ಉಂಗುರಗಳನ್ನು ಒಯ್ಯುವ ಗಮ್ಮತ್ತಿನ ಜವಾಬ್ದಾರಿ ವಹಿಸಿತ್ತು. ಇಬ್ಬರೂ ಬಹು ಮುದ್ದಾಗಿರುವ ಬಿಳಿ ಉಡುಪುಗಳಲ್ಲಿ ನಡೆಯುತ್ತಿರುವ ಚಿತ್ರ ಎಲ್ಲರ ಮನಸೂರೆಗೊಂಡಿದೆ.

ಇದೇನೂ ಫೇರಿಟೇಲ್ ಮದುವೆಯಲ್ಲ. ಆದರೂವೆ ಪ್ರಧಾನಿಯ ಸರಳ ಮದುವೆ ಶೈಲಿ, ತಾವಿಬ್ಬರೆ ಅದರ ಖರ್ಚನ್ನು ಭರಿಸಿದ್ದು, ತಮ್ಮ ಅಧಿಕೃತ ನಿವಾಸದ ಅಂಗಳದಲ್ಲಿ ಮದುವೆಯಾಗಿದ್ದು ಮಾಧ್ಯಮಗಳ ವಿಶ್ಲೇಷಣೆಗೆ ಗುರಿಯಾಗಿದೆ. ಈ ವರ್ಷ ನಡೆದ ಕೇಂದ್ರ ಚುನಾವಣೆಯಲ್ಲಿ ಎರಡನೆ ಬಾರಿ ಸ್ಪರ್ಧಿಸಿದ್ದಾಗ ಆಲ್ಬಾನೀಸಿ ಮತ್ತು ಅವರ ಲೇಬರ್ ಪಕ್ಷ ಆಸ್ಟ್ರೇಲಿಯಾದ ಅತ್ಯಂತ ದೊಡ್ಡ ಸಮಸ್ಯೆಯಾಗಿರುವ ಕಾಸ್ಟ್ ಆಫ್ ಲಿವಿಂಗ್ – ನಿತ್ಯಜೀವನದ ಖರ್ಚನ್ನು ಕಡಿಮೆ ಮಾಡುವುದಾಗಿ ಹೇಳಿದ್ದರು. ಮತ್ತು ಇನ್ನೊಂದು ಸಮಸ್ಯೆಯಾಗಿರುವ ವಸತಿ ಖರ್ಚನ್ನೂ ಕೂಡ ಇಳಿಸುವುದಾಗಿ ಮಾತು ಕೊಟ್ಟಿದ್ದರು. ಆಸ್ಟ್ರೇಲಿಯಾದ ಮುಖ್ಯ ನಗರಗಳಲ್ಲಿ ವಾಸಿಸುವವರಿಗೆ ಮನೆ ಬಾಡಿಗೆ ಮತ್ತು ಮನೆ ಕೊಳ್ಳುವುದು ಎರಡೂ ಅತೀವ ದುಬಾರಿಯಾಗಿದೆ. ಉದಾಹರಣೆಗೆ, ಮೂರು ಬೆಡ್ ರೂಮ್, ಎರಡು ಬಾತ್ ರೂಮ್, ಎರಡು ಕಾರ್ ಪಾರ್ಕ್ ಮಾಡಲು ಬೇಕಾದ ಗ್ಯಾರೇಜ್, ಮನೆ ಸುತ್ತಲೂ ಒಂದಷ್ಟು ಜಾಗ ಇರುವ ಒಂದು ಮನೆಗೆ ಈಗ ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್. ಅಥವಾ, ಮನೆಬಾಡಿಗೆ ವಾರಕ್ಕೆ ಸುಮಾರು ೬೦೦ ಡಾಲರ್. ಇದನ್ನು ನಿಭಾಯಿಸಲಾಗದೆ ಅನೇಕ ಕುಟುಂಬಗಳು ಹತಾಶರಾಗಿದ್ದಾರೆ.

ಮೇಲಿನ ಎರಡೂ ವಿಷಯಗಳನ್ನು – ಕಾಸ್ಟ್ ಆಫ್ ಲಿವಿಂಗ್ ಮತ್ತು ದುಬಾರಿ ಮನೆ ಬಾಡಿಗೆ – ಗಮನದಲ್ಲಿಟ್ಟುಕೊಂಡು ಪ್ರಧಾನಿ ತಮ್ಮ ಮದುವೆಯನ್ನು ಸರಳವಾಗಿ, ಮನೆಯಂಗಳದಲ್ಲೇ ಮಾಡಿಕೊಂಡರು ಎಂದು ಕೆಲವರ ಮಾತು. ಅದು ಪ್ರಧಾನಿಯ ಅಧಿಕೃತ ನಿವಾಸ, ಅವರ ಸ್ವಂತ ಮನೆಯೇನಲ್ಲ, ಅಧಿಕೃತ ನಿವಾಸವನ್ನು ಹೀಗೆ ಬಳಸಿಕೊಂಡಿದ್ದಕ್ಕೆ ಅವರು ಬಾಡಿಗೆ ಕೊಡಬೇಕಾಗಿತ್ತು ಎಂದು ಕೂಡ ಚುಚ್ಚುಮಾತು ಎದ್ದಿದೆ. ಮಾಧ್ಯಮದವರು ಇದೆ ವಿಷಯವನ್ನು ಇಟ್ಟುಕೊಂಡು ವಿರೋಧಪಕ್ಷದ ನಾಯಕಿ ಸೂಸನ್ ಲೇ ಅವರನ್ನು ಪ್ರಶ್ನಿಸಿದ್ದಾರೆ. ಅವರಿಗೋ ಅವರದ್ದೇ ಪಕ್ಷದ ನೂರಾರು ಸಮಸ್ಯೆಗಳಿವೆ. ಅವರ ನಾಯಕತ್ವದಲ್ಲಿ ವಿರೋಧಪಕ್ಷ ಲಿಬರಲ್ ಪಾರ್ಟಿಯ ಬುಡ ಅಲ್ಲಾಡುತ್ತಿದೆ. ಸದಸ್ಯರು ಮತ್ತು ಬೆಂಬಲಿಗರು ಅಲ್ಲಿಇಲ್ಲಿ ಓಲಾಡುತ್ತಿದ್ದಾರೆ. ಯಾರಲ್ಲೂ ಒಮ್ಮತವಿಲ್ಲ, ಧೃಢತೆಯಿಲ್ಲ. ವಿಶ್ವಾಸವಿಲ್ಲ. ಈ ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸೂಸನ್ ಲೇ ಹೆಣಗಾಡುತ್ತಿದ್ದಾರೆ. ಹೋದ ನವೆಂಬರ್ ತಿಂಗಳಲ್ಲಿ ಎರಡು ಬಾರಿ ಪ್ರಧಾನಿ ಆಲ್ಬಾನೀಸಿ ಅವರ ಬಗ್ಗೆ ಚುಚ್ಚುಮಾತನ್ನಾಡಿ ಗುಲ್ಲೆಬ್ಬಿಸಿದ್ದ ಸೂಸನ್ ಅವರಿಗೆ ಈ ಬಾರಿ, ಅದೂ ಕೂಡ ಎಲ್ಲರೂ ಇಷ್ಟಪಡುವ ಮದುವೆ ಸಂದರ್ಭದ ಬಗ್ಗೆ ಕುಟುಕು ಮಾತು ಹೇಳುವುದು ಸರಿಯಲ್ಲ ಎನಿಸಿತ್ತೇನೊ. ಪ್ರಧಾನಿ ಮತ್ತವರ ಹೆಂಡತಿಗೆ ಶುಭಕೋರಿದ್ದಾರೆ.

ಒಳ್ಳೆ ಮಾತನ್ನಾಡಿ, ಯಾರಿಗೂ ಅಹಿತ ತರದೆ, ಒಳ್ಳೆಯ ನಡೆನುಡಿ ನಮ್ಮೆಲ್ಲರ ಗುರಿಯಾಗಲಿ. ಆಲ್ಬಾನೀಸಿ ಮತ್ತು ಅವರ ಹೆಂಡತಿ ಜೋಡಿ ಅವರ ದಾಂಪತ್ಯ ಜೀವನ ಸುಗಮವಾಗಿದ್ದು, ಅವರು ಸಂತೋಷವಾಗಿರಲಿ.