ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ  ಆರಂಭಿಸಲಾದ ಟೊಟೊ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ನಿಯಮಗಳನ್ನು ಹಾಗೂ ಷರತ್ತುಗಳನ್ನು ಇಲ್ಲಿ ನೀಡಲಾಗಿದೆ. 18 ರಿಂದ 29 ವರ್ಷ ವಯಸ್ಸಿನವರು ಈ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಅರ್ಹರು.  ಪ್ರವೇಶಗಳನ್ನು ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಕಳಿಸಬಹುದು. 

 

ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಹದಿನೆಂಟು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುತ್ತಾ ಬಂದಿದೆ. ಕಳೆದ ಹನ್ನೊಂದು ವರ್ಷಗಳಿಂದ ಕನ್ನಡಕ್ಕೂ ವಿಸ್ತೃತಗೊಂಡಿದ್ದು, ಹನ್ನೆರಡನೆಯ ವರ್ಷಕ್ಕೆ ಕಾಲಿಡುತ್ತಿದೆ. ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2022 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಸೆ. 30ಕ್ಕೆ ವಿಸ್ತರಿಸಲಾಗಿದೆ.

ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು (ಓವರ್ಸೀಸ್ ಸಿಟಿಜೆನ್ ಆಫ್ ಇಂಡಿಯಾ – OCI – ಚೀಟಿ ಉಳ್ಳವರು ಪ್ರವೇಶಕ್ಕೆ ಅರ್ಹರಾಗಿರುವುದಿಲ್ಲ). ಹಾಗೂ 18 ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಅಂದರೆ, ಜನವರಿ 1, 1992 ರ ನಂತರ ಮತ್ತು ಜನವರಿ 1 , 2004 ನಡುವೆ ಹುಟ್ಟಿದವರಾಗಿದ್ದವರು  ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು.

ಪ್ರವೇಶಗಳನ್ನು ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಕಳಿಸಬಹುದು.
ಈ/ಮೂರು/ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಕನ್ನಡದ ಹಿರಿಯ ಬರಹಗಾರರ ಸಮಿತಿಯು ಪ್ರತಿ ವರ್ಷದಂತೆ ಮಾಡಲಿದೆ. ಟೊಟೊ ಪುರಸ್ಕಾರವು 50,000 ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರವೇಶಗಳನ್ನು ಕಳುಹಿಸಬೇಕಾದ ಇಮೇಲ್:  totokannada@gmail.com. ಸಲ್ಲಿಸುವ ಪ್ರತಿ ಪ್ರವೇಶದ ಜೊತೆಗೆ ಪ್ರತ್ಯೇಕ ಅರ್ಜಿಯನ್ನು ಲಗತ್ತಿಸಬೇಕು. ಈ ಅರ್ಜಿಯನ್ನು http://totofundsthearts.blogspot.com ಇಲ್ಲಿಂದ ಪಡೆಯಬಹುದು.  ಈ ಅರ್ಜಿ ಇಲ್ಲದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ.

ನಿಯಮಗಳು:
• ಅರ್ಜಿ ಸಲ್ಲಿಸುವವರು 1ನೇ ಜನವರಿ 1992 ರ ನಂತರ ಮತ್ತು ಜನವರಿ 1, 2004 ನಡುವೆ ಹುಟ್ಟಿದವರಾಗಿದ್ದಲ್ಲಿ ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರಾಗಿರುತ್ತಾರೆ.
• ಪ್ರವೇಶಗಳನ್ನು MS Word ನಲ್ಲಿ ನುಡಿ, ಬರಹ ಅಥವಾ ಯೂನಿಕೋಡ್ ನಲ್ಲಿ ಮಾತ್ರ ಕಳಿಸಬೇಕು. ಮುದ್ರಿತ ಅಥವಾ ಹಸ್ತಪ್ರತಿಗಳನ್ನು ಸ್ವೀಕರಿಸುವುದಿಲ್ಲ. MS Word ಅಲ್ಲದೇ ಬೇರೆ ಯಾವ ಸಾಫ್ಟವೇರ್ ನಲ್ಲಿಯೂ ಪ್ರವೇಶಗಳನ್ನು ಸ್ವೀಕರಿಸುವುದಿಲ್ಲ.
• ಅರ್ಜಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ದಾಖಲಾದ ಹೆಸರನ್ನು ನಮೂದಿಸಬೇಕು. ಕಾವ್ಯನಾಮ ಇದ್ದಲ್ಲಿ, ಅಸಲಿ ಹೆಸರನ್ನು ಕೂಡ ಅರ್ಜಿಯಲ್ಲಿ ಸೂಚಿಸಬೇಕು.
• ಪ್ರವೇಶಕ್ಕಾಗಿ ಕಳಿಸುವ ಕತೆ, ಕವಿತೆ, ನಾಟಕಗಳ ಮೇಲೆ ಎಲ್ಲಿಯೂ ಅರ್ಜಿದಾರರ  ಹೆಸರು ಬರೆದಿರಬಾರದು. ಇದನ್ನು ಅರ್ಜಿಯಲ್ಲೇ ಬರೆದು, ಪ್ರವೇಶದ ಜೊತೆ ಕಳಿಸಬೇಕು.
•ಅರ್ಜಿಯನ್ನು ಪಡೆಯುವಲ್ಲಿ ಅಥವಾ ಇತರ ತೊಂದರೆಗಳಿದ್ದಲ್ಲಿ totokannada@gmail.com ಗೆ ಬರೆದು ಸಹಾಯ ಕೇಳಬಹುದು.
• ಕವಿತೆಗಳನ್ನು ಕಳುಹಿಸುವವರು 8 ರಿಂದ 12 ಕವಿತೆಗಳನ್ನು ಕಳಿಸಬಹುದು. ಕತೆಗಳನ್ನು ಕಳುಹಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಬಹುದು, ಆದರೆ ಎಲ್ಲ ಕತೆಗಳೂ ಸೇರಿ 7500 ಶಬ್ದಗಳನ್ನು ಮೀರಬಾರದು. ನಾಟಕಗಳ ಶಬ್ದಮಿತಿ 10,000 ಶಬ್ದಗಳು.
• ಅರ್ಜಿದಾರರು ಎಲ್ಲ ಮೂರು ಪ್ರಕಾರಗಳಲ್ಲಿಯೂ ಪ್ರವೇಶಗಳನ್ನು ಕಳಿಸಬಹುದು. ಆದರೆ ಪ್ರತಿಯೊಂದು ಪ್ರಕಾರಕ್ಕೂ ಪ್ರತ್ಯೇಕವಾದ ಪ್ರವೇಶಗಳನ್ನು ಕಳಿಸಬೇಕು. ಉದಾಹರಣೆಗೆ ಮೂರೂ ಪ್ರಕಾರಗಳಿಗೆ ಪ್ರವೇಶಗಳನ್ನು ಕಳಿಸಬಯಸಿದರೆ, ನಿಮ್ಮ ಕವಿತೆಗಳನ್ನು ಮೊದಲ ಪ್ರವೇಶವಾಗಿಯೂ, ಕತೆಗಳನ್ನು ಎರಡನೆಯ ಪ್ರವೇಶವಾಗಿಯೂ, ನಾಟಕವನ್ನು ಮೂರನೆಯ ಪ್ರವೇಶವಾಗಿಯೂ ಕಳಿಸಬೇಕು. ಪ್ರತಿಯೊಂದು ಪ್ರವೇಶದ ಮಿತಿ 7500 ಶಬ್ದಗಳು. ಒಂದಕ್ಕಿಂತ ಹೆಚ್ಚು ನಾಟಕಗಳಿದ್ದಲ್ಲಿ ಎಲ್ಲ ನಾಟಕಗಳ ಒಟ್ಟೂ ಶಬ್ದಗಳು 10,000 ಮೀರಬಾರದು. ಪ್ರತಿ ಪ್ರತ್ಯೇಕ ಪ್ರವೇಶಕ್ಕೂ ಪ್ರತ್ಯೇಕ ಅರ್ಜಿ ಕಳಿಸಬೇಕು.

• ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಿಡಿ ಕತೆ, ಕವಿತೆ, ನಾಟಕಗಳನ್ನು ಕಳಿಸಬಹುದು. ಆದರೆ ಎಲ್ಲವೂ ಈಗಾಗಲೇ ಹೇಳಿದಂತೆ ಈಮೇಲ್ ಮೂಲಕ ಮಾತ್ರ ಕಳಿಸಬೇಕು.
• ಈಮೇಲ್ Subject ನಲ್ಲಿ ಕೃತಿಯ ಪ್ರಕಾರವನ್ನು ಸೂಚಿಸಬೇಕು. ಉದಾಹರಣೆಗೆ: ‘ಕನ್ನಡ ಸೃಜನಶೀಲ ಸಾಹಿತ್ಯ – ಕವಿತೆ’, ‘ಕನ್ನಡ ಸೃಜನಶೀಲ ಸಾಹಿತ್ಯ – ನಾಟಕ’ ಅಥವ ‘ಕನ್ನಡ ಸೃಜನಶೀಲ ಸಾಹಿತ್ಯ – ಕತೆ’.

ಷರತ್ತುಗಳು:
ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಗತ್ಯವಾದಲ್ಲಿ ಸಲ್ಲಿಸಿದ ಬರಹಗಳ ಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವ ಸಂಸ್ಥೆಯ ಬ್ಲಾಗ್’ನಲ್ಲಿ/ಪುರಸ್ಕಾರದ ಪ್ರಚಾರಕ್ಕೆ ಬಳಸಿಕೊಳ್ಳುವ ಹಕ್ಕು ಟಿ.ಎಫ್.ಎ.ಗೆ ಇದೆ. ಉಳಿದಂತೆ ಕೃತಿಯ ಪೂರ್ತಿ ಹಕ್ಕುಸ್ವಾಮ್ಯವು ಬರಹಗಾರರದ್ದೇ ಆಗಿರುತ್ತದೆ.

ಈ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ. ಪುರಸ್ಕಾರದ ಕುರಿತು ಟಿ.ಎಫ್.ಎ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾದುದು.

ಈ ಪುರಸ್ಕಾರಕ್ಕೆ ಭೂಮಿಜಾ ಟ್ರಸ್ಟ್ ನೆರವು ನೀಡುತ್ತಿದೆ. ಇದು ಪ್ರದರ್ಶನಕಲೆಗಳ ಕಾರ್ಯಕ್ರಮಗಳನ್ನು ಬೆಂಗಳೂರು ಸೇರಿದಂತೆ ವಿಶ್ವಾದ್ಯಂತ ಹಮ್ಮಿಕೊಳ್ಳುವ ಸಂಸ್ಥೆ.

ಟಿ.ಎಫ್.ಎ. ಸಂಸ್ಥೆಯು ಆಂಗಿರಸ ‘ಟೊಟೊ’ ವೆಲ್ಲಾನಿಯ ಸ್ಮರಣಾರ್ಥ 2004 ರಲ್ಲಿ ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ತರುಣ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. ಈ ಮೂಲಕ ಯುವ ಪ್ರತಿಭೆಗಳು ತಮ್ಮ ಕಲಾತ್ಮಕ
ಅಭಿವ್ಯಕ್ತಿಯನ್ನು ಕಂಡುಕೊಳ್ಳುವಲ್ಲಿ ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.