ಯಾಕೆ ಹೀಗೆ ಮಾಡುತ್ತೇವೆ ನಾವು ಮನುಷ್ಯರು? ನಮ್ಮ ಬದುಕಿನ ನೆಮ್ಮದಿ, ಸಂತೃಪ್ತಿಗಳನ್ನು ದುಬಾರಿ ವಸ್ತುಗಳಲ್ಲಿ, ಅಥವಾ ನಾವು ಅವುಗಳನ್ನು ಕೊಂಡೆವೆಂದು ನಮಗೆ ಮಾನ್ಯತೆ ಕೊಡುವ ಜನರ ಸ್ಪಂದನೆಗಳಲ್ಲಿ, ಮೌಲ್ಯೀಕರಣಗಳಲ್ಲಿ ಯಾಕೆ ಹುಡುಕುತ್ತೇವೆ? ಸೂಫಿ ಕಥೆಯೊಂದರಲ್ಲಿ ಬರುವ ಮುದುಕಿಯಂತೆ ಮನೆಯಲ್ಲಿ ಕಳೆದುಹೋಗಿರುವ ಬೀಗದ ಕೈಯನ್ನು ರಸ್ತೆಯಲ್ಲಿ ಬೆಳಕಿದೆ ಎಂದು ಅಲ್ಲಿ ಹುಡುಕುತ್ತಿದ್ದೇವಾ?
ಡಾ. ಎಲ್.ಜಿ. ಮೀರಾ ಹೊಸ ಅಂಕಣ “ಮೀರಕ್ಕರ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಭೋಗದಲೆಗಳ ಮೇಲೆ ತೇಲುತ್ತ, ವಾಲುತ್ತ ಹೊರಟ ದೋಣಿಯೇ… ಮುಳುಗದಿರು, ಮುಳುಗದಿರು …

ನಾವೆಲ್ಲರೂ ಆಗಾಗ ಕೆಲವಾರು ಸೂಕ್ತಿ, ಸುಭಾಷಿತ, ದಿನಚಿಂತನ(ಥಾಟ್ ಫಾರ್ ದ ಡೇ)ಗಳಿಗೆ ಮುಖಾಮುಖಿಯಾಗ್ತಾನೇ ಇರ‍್ತೀವಿ ಅಲ್ವಾ…. ಅವುಗಳಲ್ಲಿ ಹಲವನ್ನು ಓದಿದಾಗ `ಅಹ ಎಷ್ಟು ಚೆನ್ನ’ ಅನ್ನಿಸಿದರೂ ಮನದಲ್ಲಿ ಅವು ಬಹಳ ಕಾಲ ಉಳಿಯಲ್ಲ. ಆದ್ರೆ ಕೆಲವು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ. ಹಾಗೆ ನನ್ನ ಮನಸ್ಸಿನಲ್ಲಿ ಉಳಿದು ಮತ್ತೆ ಮತ್ತೆ ಕಾಡಿದ ಉಕ್ತಿ ಒಂದಿದೆ. ಯಾರೋ ಅನಾಮಿಕ ವಿವೇಕಿಯೊಬ್ಬ ಇಂಗ್ಲಿಷ್‌ನಲ್ಲಿ ಹೇಳಿದ ಮಾತದು. “ವಿ ಬೈ ದ ಥಿಂಗ್ಸ್ ವಿ ಡೋಂಟ್ ನೀಡ್, ವಿದ್ ದ ಮನಿ ವಿ ಡೋಂಟ್ ಹ್ಯಾವ್, ಟು ಇಂಪ್ರೆಸ್ ದ ಪೀಪಲ್ ವಿ ಡೋಂಟ್ ಲೈಕ್”. ಕನ್ನಡಕ್ಕೆ ಅನುವಾದಿಸಿಕೊಂಡರೆ ಹೀಗಿರುತ್ತೆ ನೋಡಿ – “ನಮಗೆ ಅಗತ್ಯ ಇಲ್ಲದ ವಸ್ತುಗಳನ್ನು ನಮ್ಮ ಹತ್ತಿರ ಇಲ್ಲದ ದುಡ್ಡಿನಿಂದ, ನಾವು ಇಷ್ಟ ಪಡದ ವ್ಯಕ್ತಿಗಳನ್ನು ಮೆಚ್ಚಿಸಲು ಕೊಳ್ಳುತ್ತೇವೆ”. ಅರೆ ಹೌದಲ್ಲ! ಕೊಳ್ಳುಬಾಕ ಸಂಸ್ಕೃತಿಯ ಕೂಗುಮಾರಿಯ ಅಬ್ಬರದಲ್ಲಿ, `ಬೇಕಾ ಬೇಡವಾ’ ಎಂಬ ಔಚಿತ್ಯ ಪ್ರಜ್ಞೆಯ ಒಳದನಿಗೆ ನಮ್ಮ ಕಿವಿಗಳು ಕಿವುಡಾಗಿಹೋಗಿ, ಕೊಳ್ಳುವ ಯಂತ್ರಗಳಾಗಿಬಿಟ್ಟಿದ್ದೇವಲ್ಲ ನಾವು! ಕಳೆದ ಮೂರು-ನಾಲ್ಕು ದಶಕಗಳಿಂದ ಜಗತ್ತಿನಲ್ಲಿ ವಿಜೃಂಭಿಸುತ್ತಿರುವ ಭೋಗಯುಗವು ಹುಲುಮಾನವರಾದ ನಮ್ಮಲ್ಲಿ ಸೃಷ್ಟಿಸಿರುವ ಮನಸ್ಥಿತಿಯನ್ನು ಈ ಉಕ್ತಿ ತುಂಬ ಅಡಕವಾಗಿ ಹೇಳಿದೆ ಅನ್ನಿಸಿತು.

*****

ಸುಮಾರು ಹತ್ತು-ಹನ್ನೆರಡು ವರ್ಷಗಳ ಹಿಂದೆ `ಮಯೂರ’ ಕನ್ನಡ ಮಾಸಪತ್ರಿಕೆಯಲ್ಲಿ ಓದಿದ ಕಥೆ ನಂಗೆ ನೆನಪಾಗುತ್ತೆ. `ಹೊಟ್ಟೆ ಬಟ್ಟೆಗೆ ನೇರವಪ್ಪ, ಅದಕ್ಕಿಂತ ಹೆಚ್ಚು ಅನುಕೂಲವಿಲ್ಲ’ ಎಂಬ ಹಣಕಾಸು ಸ್ಥಿತಿಯ ಮಧ್ಯಮ ವರ್ಗದ ಮನೆಯೊಂದರ ಕಥೆ ಅದು. ಕನ್ನಡದ ಕಥೆಯಾದರೂ ಭಾರತ ದೇಶದ ಅಥವಾ ಬಂಡವಾಳಶಾಹಿ ಆರ್ಥಿಕತೆ ಇರುವ ಪ್ರಪಂಚದ ಯಾವುದೇ ದೇಶದಲ್ಲಾದರೂ ನಡೆಯಬಹುದಾದ ಕಥೆ. ಗಂಡ, ಹೆಂಡತಿ ಹಾಗೂ ಇಬ್ಬರು ಮಕ್ಕಳು – ಬಾಡಿಗೆ ಮನೆ – ಯಾವುದೋ ಒಂದು ಸರ್ಕಾರಿ ಕಛೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಾ ಸ್ಕೂಟರಿನಲ್ಲಿ ಓಡಾಡುತ್ತಾ ಸಂಸಾರದ ಖ಼಼ರ್ಚುವೆಚ್ಚ ನಿರ್ವಹಣೆ ಮಾಡುವ ಗಂಡ, ಗೃಹಿಣಿಯಾಗಿರುವ ಹೆಂಡತಿ…… ಈ ಸನ್ನಿವೇಶ. ಯಾವುದೋ ಒಂದು ವಿಷ(?)ಗಳಿಗೆಯಲ್ಲಿ ಈ ಗೃಹಿಣಿಗೆ ತಾವು ಒಂದು ಕಾರು ಕೊಳ್ಳಬೇಕು ಅನ್ನಿಸಿಬಿಡುತ್ತೆ. ಸರಿ, ಗಂಡನಿಗೆ ಒಂದೇ ಸಮನೆ `ಒಂದು ಕಾರು ತಗೊಳ್ಳೋಣ, ಕಾರು ತಗೊಳ್ಳೋಣ’ ಎಂದು ದುಂಬಾಲು ಬೀಳುತ್ತಾಳೆ. ಮನೆಬಾಡಿಗೆ, ದಿನಸಿ, ಮಕ್ಕಳ ಶಾಲಾಶುಲ್ಕ, ಸ್ಕೂಟರಿಗೆ ಪೆಟ್ರೋಲು. ಹಬ್ಬ ಹರಿದಿನದ ಹೆಚ್ಚಿನ ಖರ್ಚು ಇದನ್ನೇ ನಿಭಾಯಿಸಲಾಗದೆ ಹೈರಾಣಾಗಿದ್ದ ಗಂಡ ಮೊದಮೊದಲು ಹೆಂಡತಿಯ ಬೇಡಿಕೆಯನ್ನು ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. `ಬೇಡ ಕಣೇ, ನಮ್ಮ ಕೈಲಾಗಲ್ಲ, ನಮ್ಮ ಅಳತೆಗೆ ಮೀರಿದ್ದು ಇದು’ ಎಂದು ಹೇಳುತ್ತ ಅವಳ ಮನಸ್ಸನ್ನು ಬದಲಾಯಿಸಲು ಪ್ರಯತ್ನ ಮಾಡುತ್ತಾನೆ. ಆದರೆ ಊಂಹ್ಙೂ…… ಆಕೆ ಕೇಳುವುದಿಲ್ಲ. `ಬೇಕೇ ಬೇಕು ಕಾರು’ ಎಂದು ವಿಪರೀತ ಹಠ ಮಾಡುತ್ತಾಳೆ. ಕೊನೆಗೆ ಅವನೇ ಅವಳ ಎಡೆಬಿಡದ ವರಾತಕ್ಕೆ ಮಣಿದು ತುಂಬ ಸಾಲಸೋಲ ಮಾಡಿ, ಆವರೆಗೆ ತಾನು ಪಾಲಿಸುತ್ತಿದ್ದ `ಲಂಚಕ್ಕೆ ಕೈಯೊಡ್ಡಬಾರದು’ ಎಂಬ ನಿಯಮವನ್ನು ಸಹ ಮೀರಿ ಅಂತೂ ಇಂತೂ ಒಂದು ಮಾರುತಿ – ಝೆನ್ ಕಾರನ್ನು ಮನೆಗೆ ತಂದೇಬಿಡುತ್ತಾನೆ! ಆ ಹೆಂಡತಿಗೆ ಸಿಕ್ಕಾಪಟ್ಟೆ ಖುಷಿಯಾಗಿ ಹಿಗ್ಗಿ ಹೀರೇಕಾಯಿಯಾಗುತ್ತಾಳೆ.

ಹಾಂ, ಇನ್ನು ಆ ಗೃಹಿಣಿಗೆ ತಮ್ಮ ಹೊಸಕಾರನ್ನು ಮೆರೆಸುವ ಆತುರ. ಯಾವಾಗ ನೆಂಟರ ಮನೆಯ ಮದುವೆ, ಗೃಹಪ್ರವೇಶ ನಡೆಯುತ್ತೋ, ತಾನು ಎಂದಿಗೆ ಅಲ್ಲಿಗೆ ತಮ್ಮ ಹೊಸ ಕಾರಿನಲ್ಲಿ ಹೋಗುವೆನೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಾಳೆ. ತಿಂಗಳು, ಎರಡು ತಿಂಗಳಿನಲ್ಲಿ ಅಂತಹ ಒಂದು ಮದುವೆಯ ಆಹ್ವಾನ ಬಂದೇಬಿಡುತ್ತದೆ. ಸರಿ, ಖುಷಿಯಾಗಿ ಗಂಡ ಮಕ್ಕಳನ್ನು ಹೊರಡಿಸಿಕೊಂಡು ಸಂಭ್ರಮದಿಂದ ಕಾರಿನಲ್ಲಿ ಕುಳಿತು ಆಹ್ವಾನಿತ ಮದುವೆಗೆ ಹೊರಡುತ್ತಾಳೆ. ದಾರಿಯುದ್ದಕ್ಕೂ ಅವಳಿಗೆ ತನ್ನ ನೆಂಟರು ಈ ಕಾರನ್ನು ನೋಡಿದಾಗ ಎಷ್ಟು ಪ್ರಶಂಸೆ ಮಾಡಬಹುದು, ಕೆಲವರು ಎಷ್ಟು ಹೊಟ್ಟೆ ಉರಿದುಕೊಳ್ಳಬಹುದು, ಅದನ್ನು ನೋಡಿ ತಾನೆಷ್ಟು ಬೀಗಬಹುದು….. ಎಂಬೆಲ್ಲ ಯೋಚನೆಗಳು ಮುತ್ತುತ್ತಿರುತ್ತವೆ. ಸರಿ, ಕಲ್ಯಾಣ ಮಂಟಪದ ಬಾಗಿಲಿಗೆ ಬಂದಾಗ ತುಂಬ ಹೆಮ್ಮೆ, ಸಂಭ್ರಮಗಳಿಂದ ಜಂಬದ ನವಿಲಿನ ಭಾವ ಹೊತ್ತು ಕಾರಿನಿಂದ ಇಳಿಯುತ್ತಾಳೆ. ಕಂಡಂತಹ ನೆಂಟರಿಷ್ಟರಿಗೆ `ಕಾರಲ್ಲಿ ಬಂದ್ವಿ, ನೋಡಿ ಹೊಸದಾಗಿ ತಗೊಂಡ್ವಿ’ ಎಂದು ಹೇಳುತ್ತ ಅವರ ಉತ್ಸಾಹದ/ಅಸೂಯೆಯ ಪ್ರತಿಕ್ರಿಯೆಗಾಗಿ ಕಾಯುತ್ತಾಳೆ. ಆದರೆ ಅವಳ ನಿರೀಕ್ಷೆಗೆ ವಿರುದ್ಧವಾಗಿ ಅವರ ಪ್ರತಿಕ್ರಿಯೆಗಳು ತುಂಬ ನೀರಸವಾಗಿರುತ್ತವೆ. ಒಬ್ಬರಂತೂ “ಅಯ್ಯೋ, ಇಷ್ಟು ಪುಟಾಣಿ ಕಾರಾ? ಏನೋ ದೊಡ್ಡ ಕಾರಾದ್ರೆ ಮೆಚ್ಬಬಹುದು. ಇದೇನು ಇಕ್ಕಟ್ಟು, ಕೈಕಾಲೇ ಆಡಲ್ಲ. ಈ ಬೆಂಕಿಪೊಟ್ಟಣಾನ ಯಾಕೆ ತಗೊಂಡ್ರಿ!?” ಅಂದುಬಿಡುತ್ತಾರೆ. ಧಸಕ್ಕನೆ ಕುಸಿಯುತ್ತದೆ ನಮ್ಮ ಕಥಾನಾಯಕಿಯ ಮನಸ್ಸು. ಹೊಸ ಕಾರು ತೆಗೆದುಕೊಂಡ ಅವಳ ಖುಷಿ ಪಾಪ ಒಂದೇ ನಿಮಿಷಕ್ಕೆ ಮಣ್ಣಾಗುತ್ತದೆ.

ಈ ಕಥೆ ಓದುತ್ತಿದ್ದಂತೆ ರಷ್ಯಾದ ಮಹಾನ್ ಲೇಖಕ ಟಾಲ್‌ಸ್ಟಾಯ್ ಬರೆದ `ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು’ ಕಥೆ ತುಂಬ ನೆನಪಾಯಿತು. ಅದರ ನಾಯಕ ಪಾಹಂ ಹಳ್ಳಿಯ ತನ್ನ ಪುಟ್ಟ ಹೊಲದಲ್ಲಿ ಕೆಲಸ ಮಾಡುತ್ತಾ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಿಂದ ಜೀವಿಸುತ್ತಿರುತ್ತಾನೆ, ಆದರೆ ತನ್ನ ಹೆಂಡತಿಯ ಅಕ್ಕನು ಹಳ್ಳಿಯ ಜೀವನದ ಬಗ್ಗೆ ಮಾಡಿದ ಕಟುಟೀಕೆಯಿಂದ ನೊಂದು ತಾನು ತುಂಬ ದೊಡ್ಡ ಜಾಗ ಕೊಂಡು ಶ್ರೀಮಂತನಾಗಬೇಕೆಂದು ಬಯಸುತ್ತಾನೆ. ದಿನದ ಲೆಕ್ಕದಲ್ಲಿ ನೆಲ ಮಾರುತ್ತಿದ್ದ ಬಾಷ್ಕೀರರ (ಸೈತಾನನ ರೂಪವೇ ಅವರು) ಬಳಿ ಭೂಮಿ ಕೊಳ್ಳಲು ಹೋಗಿ ಅತಿ ದೊಡ್ಡ ಅಳತೆಯ ಭೂಮಿ ಕೊಳ್ಳುವ ಆಸೆಯಿಂದ, ಬೆಳಗಿನಿಂದ ಸಾಯಂಕಾಲದ ತನಕ ನಡೆದು ನಡೆದು ಅಯ್ಯೋ ನಡೆದು ಕೊನೆಗೆ ಆಯಾಸ ತಾಳಲಾರದೆ ಸತ್ತು ಹೋಗುತ್ತಾನೆ. ಆಗ ಅವನನ್ನು ಆರಡಿ ಮೂರಡಿ ಗುಂಡಿಯಲ್ಲಿ ಹೂಳಿದ ಬಾಷ್ಕೀರರು `ಇವನಿಗೆ ಬೇಕಾದ್ದು ಇಷ್ಟೇ ಭೂಮಿ’ ಅನ್ನುತ್ತಾರೆ! ಓದುಗರು ಒಮ್ಮೆ ಮುಟ್ಟಿ ನೋಡಿಕೊಳ್ಳುವಂತೆ ಮಾಡುವ ಕಥೆ ಇದು.

ಹಿಂದಿ ಭಾಷೆಯ ಸಿನಿಮಾ `ಥ್ರೀ ಈಡಿಯೆಟ್ಸ್’ ನಲ್ಲಿ ಒಂದು ಸನ್ನಿವೇಶ ಇದೆ. ಅದರಲ್ಲಿನ ಕಥಾನಾಯಕಿ (ಕರೀನಾ ಕಪೂರ್) ತನ್ನ ಅಕ್ಕನ ಮದುವೆಗೆ ತನ್ನ ಅಮ್ಮನ ನೆನಪಿಗಾಗಿ ತಾನು ಪ್ರೀತಿಯಿಂದ ಕಾಪಾಡಿಕೊಂಡಿರುವ ಹಳೆಯ ಕೈಗಡಿಯಾರವನ್ನು ತನ್ನ ಕೈಗೆ ಕಟ್ಟಿಕೊಂಡಿರುತ್ತಾಳೆ. ಅವಳನ್ನು ಮದುವೆಯಾಗಬೇಕಾದ ಶ್ರೀಮಂತ ಹುಡುಗ – ಪ್ರತಿಯೊಂದು ವಸ್ತುವಿನ ಮೌಲ್ಯವನ್ನೂ ಅದರ ಬೆಲೆಚೀಟಿಯಿಂದ ಅಳೆಯುವ ಸ್ವಭಾವ ಹೊಂದಿದ್ದವನು – ಆ ಕೈಗಡಿಯಾರದ ಬಗ್ಗೆ ತಕರಾರು ತೆಗೆಯುತ್ತಾನೆ. ತನ್ನಂತಹ ಉನ್ನತ ಮಟ್ಟದವನನ್ನು ಮದುವೆಯಾಗಬೇಕಾದ ಹುಡುಗಿ ತನ್ನ ಕೈಗೆ ಇನ್ನೂರು ರೂಪಾಯಿಯ ಗಡಿಯಾರವನ್ನು ಕಟ್ಟಿಕೊಳ್ಳಬಾರದಾಗಿ ಹೇಳುತ್ತಾನೆ. ಆ ಸಿನಿಮಾದ ಕಥಾನಾಯಕ (ಅಮೀರ್ ಖಾನ್) ಆ ಗಡಿಯಾರದ ಬಗೆಗೆ ಹುಡುಗಿಗಿರುವ ಭಾವನಾತ್ಮಕ ಮೌಲ್ಯವನ್ನು ಅರಿತು, `ಪ್ರತಿಯೊಂದಕ್ಕೂ ಬೆಲೆಚೀಟಿ ಅಂಟಿಸುವ ಅವಳ ಭಾವೀಪತಿ ಅವಳನ್ನು ನಿಜವಾಗಿ ಪ್ರೀತಿಸುತ್ತಿಲ್ಲ, ಲಾಭಕ್ಕಾಗಿ ಮದುವೆ ಆಗುತ್ತಿದ್ದಾನೆ’ ಎಂಬ ಕಹಿಸತ್ಯವನ್ನು ಹಾಸ್ಯಮಯವಾಗಿಯೇ ಅವಳಿಗೆ ಮನವರಿಕೆ ಮಾಡಿಕೊಡುತ್ತಾನೆ.

ಮೊನ್ನೆ ಬಟ್ಟೆ ಹೊಲಿಯುವ ದರ್ಜಿಯೊಬ್ಬರ ಅಂಗಡಿಯಲ್ಲಿ ನಡೆದ ಒಂದು ಘಟನೆಗೆ ನಾನು ನಾನು ಸಾಕ್ಷಿಯಾದೆ. ಇಬ್ಬರು ಹೆಂಗಸರು ಆಗ ತಾನೇ ಕೊಂಡಿದ್ದಂತೆ ಕಾಣಿಸುತ್ತಿದ್ದ ರೇಷ್ಮೆ ಸೀರೆಗಳಿಗೆ ರವಿಕೆ ಹೊಲಿಸಲು ಬಂದಿದ್ದರು. ಅವರಲ್ಲಿನ ಹಿರಿಯ ಮಹಿಳೆ (ಬಹುಶಃ ತಾಯಿ) ತನ್ನ ರವಿಕೆಗೆ ಮಾಡಿಸಬೇಕಾದ ಕಸೂತಿಯ ದರದ ಬಗ್ಗೆ ಆ ದರ್ಜಿಯೊಂದಿಗೆ ವಿಪರೀತ ಅಂದರೆ ವಿಪರೀತ ಚೌಕಾಸಿ ಮಾಡುತ್ತಿದ್ದರು. ಅವರಿಗೆ ಉತ್ತರ ಕೊಟ್ಟೂ ಕೊಟ್ಟೂ ಅವನು ಹೈರಾಣಾಗಿ ಹೋಗಿದ್ದ. ಅದನ್ನು ನೋಡುತ್ತಲೇ ಇದ್ದ ಚಿಕ್ಕ ವಯಸ್ಸಿನ ಮಹಿಳೆ (ಬಹುಶಃ ಮಗಳು) “ಅಮ್ಮಾ, ಹೋಗ್ಲಿ ಬಿಡಮ್ಮ. ನೀ ಕೊಂಡ್ಕೊಂಡಿರೋ ಸೀರೆಗಿಂತ ಜಾಸ್ತಿ ದುಡ್ಡು ಈ ಬ್ಲೌಸ್ ಹೊಲಿಸಕ್ಕೇ ಆಗುತ್ತಲ್ಲಮ್ಮ!?” ಅಂದಳು. “ಅಯ್ಯೋ ಬಿಡೇ, ಮೊನ್ನೆ ಮದುವೇಲಿ ಶೋಭಾ ಆಂಟಿ ಹಾಕಿದ್ದ ಬ್ಲೌಸ್ ನೋಡಿದ್ಯಲ್ಲೇ? ಎಷ್ಟು ಜೋರಾಗಿತ್ತು? ಅಂಥದ್ದೊಂದನ್ನ ಹಾಕ್ಕೊಳೋ ಶಕ್ತಿ ನಮ್ಗೂ ಇದೆ ಅಂತ ಜನಕ್ಕೆ ತೋರಿಸಬೇಡ್ವೇನೇ?” ಅಂದರು ಆ ತಾಯಿ. ಆ ದರ್ಜಿಯಂತೂ ಅವರಿಗೆ ವಿನ್ಯಾಸಗಳನ್ನು ತೋರಿಸಿ, ತೋರಿಸಿ ಹೊಲಿಯುವ ಕೂಲಿಯ ಬಗ್ಗೆ ಅವರು ಮಾಡುತ್ತಿದ್ದ ಚೌಕಾಸಿಯಿಂದ ಸುಸ್ತಾಗಿ ಹೋದ. ಅಯ್ಯೋ ಅನ್ನಿಸಿತು ನನಗೆ. ಕೊನೆಗೂ ಆ ಹಿರಿಯ ಮಹಿಳೆ ರವಿಕೆ ತೊಡುತ್ತಿದ್ದದ್ದು ತನ್ನ ಖುಷಿಗಾಗಿಯೋ ಅಥವಾ ತಾನು ತೊಟ್ಟ ರವಿಕೆಯ ಘನಸ್ತಿಕೆ, ಶ್ರೀಮಂತಿಕೆ ಬಗ್ಗೆ ಸರೀಕರಲ್ಲಿ ಮೆಚ್ಚುಗೆ ಪಡೆಯಲಿಕ್ಕಾಗಿಯೋ? ಹೌದು, `ಊಟ ತನ್ನಿಚ್ಛೆ, ನೋಟ ಪರರಿಚ್ಛೆ’ ಅನ್ನುವ ಗಾದೆ ಮಾತಿದೆ ಕನ್ನಡದಲ್ಲಿ. ಆದರೆ ಪರರಿಚ್ಛೆಗೋಸ್ಕರ ನಮ್ಮನ್ನು, ನಮ್ಮ ಹಣಕಾಸಿನ ಪರಿಸ್ಥಿತಿಯನ್ನು ನಾವು ಬಟ್ಟೆ ಹಿಂಡಿದಂತೆ ಹಿಂಡಿಕೊಂಡು ಹಿಂಸೆ ಅನುಭವಿಸಬೇಕೇ?

*****

ಅತ್ಯಂತ ದುಬಾರಿ ಕೈಗಡಿಯಾರ, ಕಾರು, ಸೀರೆ, ಒಡವೆ, ಸೋಫಾಸೆಟ್ಟು, ಮೈಸೂರು ಸಿಲ್ಕು ಸೀರೆ, ಕೋಟಿ ರೂಪಾಯಿ ಅಪಾರ್ಟುಮೆಂಟು, ಮುಂತಾದವನ್ನು ಸಾಲ ಮಾಡಿ ಕೊಂಡು, ಸರೀಕರ ನಡುವೆ ಮೆರೆದು ಮಿಂಚಬೇಕು ಎಂದು ಆಲೋಚಿಸುವ ನಮ್ಮ ಸಹಜೀವಿಗಳ ಮನಸ್ಥಿತಿಯ ಮೂಲದಲ್ಲಿ ಏನಿದೆ ಎಂದು ನಾನು ಯೋಚಿಸುತ್ತಿರುತ್ತೇನೆ. ವೃತ್ತಿಯಿಂದ ಸರ್ಕಾರಿ ಕಾಲೇಜೊಂದರಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿರುವ ನಾನು ಏಳು ಕಿಲೋಮೀಟರ್ ದೂರದಲ್ಲಿರುವ ನಮ್ಮ ಮನೆಯಿಂದ ಕಾಲೇಜಿಗೆ ಹೊಂಡಾ ಆಕ್ಟಿವಾ ಸ್ಕೂಟರಿನಲ್ಲಿ ಪ್ರಯಾಣ ಮಾಡುತ್ತೇನೆ. ನಮ್ಮ ಕಡೆಯ ರಸ್ತೆಗಳ ವಾಹನ ದಟ್ಟಣೆಯಿಂದಾಗಿ ನನಗೆ ನನ್ನ ಎರಡು ಚಕ್ರದ ವಾಹವನೇ ಅತ್ಯುತ್ತಮ ಸಾರಿಗೆ ಅನ್ನಿಸಿ ಹಾಗೇ ಮಾಡುತ್ತಿದ್ದೇನೆ. ಕೆಲಸಕ್ಕೆ ಸೇರಿದಾಗಿನಿಂದಲೂ ನನ್ನ ಸ್ಕೂಟರಮ್ಮನೇ ನನಗೆ ಸರಿಯಾದ ಪ್ರಯಾಣ ಸಂಗಾತಿಯಾಗಿದ್ದಾಳೆ. ಆದರೆ ನನ್ನ ಕೆಲವು ಸಹೋದ್ಯೋಗಿ ಮಿತ್ರರಿಗೆ ನನ್ನ ವಾಹನದ ಆಯ್ಕೆ ಬಗ್ಗೆ ತಕರಾರಿರುವಂತೆ ತೋರುತ್ತದೆ. “ಏನ್ ಮೇಡಂ ನೀವು! ಯುಜಿಸಿ ಪ್ರೊಫೆಸರ್ ಆಗಿ ಸ್ಕೂಟರಿನಲ್ಲಿ ಓಡಾಡ್ತೀರಲ್ಲ? ಕಾರು ತರೋದಲ್ವಾ? ನೀವೇ ಕಾರು ಓಡಾಡ್ಸೋಕೆ ಆಗದಿದ್ರೆ ಒಬ್ಬ ಡ್ರೈವರ್‌ನ ಇಟ್ಕೋಬಹುದಲ್ವಾ? ಜುಮ್ಮಂತ ಕಾರಲ್ಲಿ ಬರೋದು ಬಿಟ್ಟು ಏನ್ ಮೇಡಂ ಇದು ಸ್ಕೂಟರ್‌ನಲ್ಲಿ …..” ಅನ್ನುತ್ತಾರೆ. `ಅಲ್ಲ, ಕಾರಲ್ಲಿ ಬಂದ್ರೂ, ಸ್ಕೂಟರಲ್ಲಿ ಬಂದ್ರೂ, ಬಸ್ಸಲ್ಲಿ ಬಂದ್ರೂ ನಾನು ಮಾಡುವ ಪಾಠ ಅದೇ ಅಲ್ವಾ? ನೀವು ನನ್ನ ಕೇಳ್ಬೇಕಾದ್ದು ಚೆನ್ನಾಗಿ ಪಾಠ ಮಾಡಕ್ಕೆ ಯಾವ ಹೊಸ ವಿಧಾನ ಕಂಡು ಹಿಡ್ಕೊಂಡಿದೀರಾ ಅಂತ ತಾನೇ? ಪಾಠ ಮಾಡಕ್ಕೆ ಕಾರಲ್ಲಿ ಬಂದ್ರೋ, ಸ್ಕೂಟರಲ್ಲಿ ಬಂದ್ರೋ ಅಂತ ಅಲ್ಲ ತಾನೇ?’ ಎಂದು ಕೇಳಬೇಕು ಅನ್ನಿಸುತ್ತೆ. ಮಾತಿಗೆ ಮಾತು ಬೆಳೆದು ವಾದವಿವಾದ ಯಾಕೆ ಮಾಡಬೇಕು ಅನ್ನಿಸಿ ಮುಗುಳ್ನಕ್ಕು ಸುಮ್ಮನಾಗುತ್ತೇನೆ.

ಕೊಳ್ಳುಬಾಕ ಭೂತದ ಈ ಚೇಷ್ಟೆ ಇಷ್ಟಕ್ಕೇ ನಿಂತಿಲ್ಲ, ಇನ್ನೂ ಎಷ್ಟು ಅತಿಗೆ ಹೋಗಿದೆ ಎಂದು ನನಗೆ ಗೊತ್ತಾಗಿದ್ದು ನಮ್ಮ ಕಾಲೇಜಿನ ಬೀಳ್ಕೊಡುಗೆ ಸಮಾರಂಭವೊಂದರಲ್ಲಿ, ಅಂದು ನಿವೃತ್ತರಾದ ಹಿರಿಯ ಸಹೋದ್ಯೋಗಿಯೊಬ್ಬರ ಬಗ್ಗೆ ಮಾತಾಡುವಾಗ ಇನ್ನೊಬ್ಬ ಸಹೋದ್ಯೋಗಿ “ಈ ಮೇಡಂ, ತುಂಬ ಅದೃಷ್ಟವಂತರಪ್ಪ. ಇವಳ ಮನೆಯಲ್ಲಿ ಲಕ್ಷ್ಮೀ ಕಾಲು ಮುರಿದುಕೊಂಡು ಬಿದ್ದಿದ್ದಾಳೆ. ಬಿಎಂಡಬ್ಲಿಯು, ಫೋರ್ಷೆ ಎಂತಂತಹ ಕಾರಲ್ಲಿ ಬರ್ತಾರೆ ಗೊತ್ತಾ ಮೇಡಂ ಅವರು! ದಿನಕ್ಕೊಂದು ಕಾರು!” ಅಂದಾಗಲೇ. ಭಗವಂತಾ, ಮಕ್ಕಳಿಗೆ ಬದುಕಿನ ವಿವೇಕ ಹೇಳಿಕೊಡಬೇಕಾದ ಅಧ್ಯಾಪಕರೇ ಹೀಗೆ ವಸ್ತುಗಳನ್ನು ಪ್ರೀತಿಸುವ ಮಟ್ಟಕ್ಕೆ ಹೋಗಿಬಿಟ್ಟರೆ ನಮ್ಮ ಭವಿಷ್ಯದ ಪೀಳಿಗೆಯ ಗತಿ ಏನು!

*****

ಯಾಕೆ ಹೀಗೆ ಮಾಡುತ್ತೇವೆ ನಾವು ಮನುಷ್ಯರು? ನಮ್ಮ ಬದುಕಿನ ನೆಮ್ಮದಿ, ಸಂತೃಪ್ತಿಗಳನ್ನು ದುಬಾರಿ ವಸ್ತುಗಳಲ್ಲಿ, ಅಥವಾ ನಾವು ಅವುಗಳನ್ನು ಕೊಂಡೆವೆಂದು ನಮಗೆ ಮಾನ್ಯತೆ ಕೊಡುವ ಜನರ ಸ್ಪಂದನೆಗಳಲ್ಲಿ, ಮೌಲ್ಯೀಕರಣಗಳಲ್ಲಿ ಯಾಕೆ ಹುಡುಕುತ್ತೇವೆ? ಸೂಫಿ ಕಥೆಯೊಂದರಲ್ಲಿ ಬರುವ ಮುದುಕಿಯಂತೆ ಮನೆಯಲ್ಲಿ ಕಳೆದುಹೋಗಿರುವ ಬೀಗದ ಕೈಯನ್ನು ರಸ್ತೆಯಲ್ಲಿ ಬೆಳಕಿದೆ ಎಂದು ಅಲ್ಲಿ ಹುಡುಕುತ್ತಿದ್ದೇವಾ? ಇಡೀ ಪ್ರಪಂಚದ ಎಲ್ಲ ಮಾರುಕಟ್ಟೆಗಳು ನಮ್ಮ ಪಕ್ಕದ ಬೀದಿಗಳಿಗೇ ಬಂದು ಕುಂತ ನಮ್ಮ ಕಾಲಮಾನದಲ್ಲಿ (ಅರ್ಥಶಾಸ್ತ್ರಜ್ಞರ ಭಾಷೆಯಲ್ಲಿ ಜಾಗತೀಕರಣದ ಕಾಲಮಾನ) ವಸ್ತುಗಳನ್ನು ಪ್ರೀತಿಸುವ ಮತ್ತು ವ್ಯಕ್ತಿಗಳನ್ನು ಬಳಸುವ ದುಷ್ಟಬುದ್ಧಿ ಕಲಿತುಬಿಟ್ಟೆವಾ? ಕಾಂಚಾಣದ ಝಣಝಣಝಣ ರಿಂಗಣ ನಮ್ಮ ವಿವೇಕದ ದನಿಯನ್ನು ಮೂಕವಾಗಿಸಿಬಿಟ್ಟಿತಾ?

ಇಡೀ ಜೀವನದಲ್ಲಿ ಒಂದೇ ಒಂದು ರೂಪಾಯಿಯನ್ನೂ ಕೈಯಲ್ಲಿ ಮುಟ್ಟದೆ ಇಡೀ ಲೋಕಕ್ಕೆ ಬೆಳಕಾದ ರಾಮಕೃಷ್ಣ ಪರಮಹಂಸರು, ಸಿದ್ಧೇಶ್ವರ ಸ್ವಾಮಿಗಳಂತಹ ಸಂತರು, ಮತ್ತು ಬಡತನವನ್ನು ಇಷ್ಟಪಟ್ಟು ಸ್ವೀಕರಿಸಿದ ಗಾಂಧೀಜಿ ಹುಟ್ಟಿದ ನಾಡು ಇದು. ಅವರು ಕಲಿಸಿದ ಪಾಠಗಳು ನಮ್ಮನ್ನು ಕಾಯಲಿ, ಕೊಳ್ಳುಬಾಕತನದ ಬಿರುಗಾಳಿಯಲ್ಲಿ ನಮ್ಮ ವಿವೇಕವು ತರಗೆಲೆಯಾಗದಿರಲಿ ಎಂದು ಮನಸ್ಸು ಹಾರೈಸುತ್ತದೆ.