Advertisement
ಡಾ. ಗೀತಾ ವಸಂತ ಬರೆದ ಕವಿತೆ: ತೊಟ್ಟು ಕಳಚಿದ ಹೂವು

ಡಾ. ಗೀತಾ ವಸಂತ ಬರೆದ ಕವಿತೆ: ತೊಟ್ಟು ಕಳಚಿದ ಹೂವು

ತೊಟ್ಟು ಕಳಚಿದ ಹೂವು

ಅಪ್ಪನಿಗೊಂದು ಹೂವಿರಿಸಿ ಬಂದೆ
ಅವನೇ ನಟ್ಟ ಗಿಡದಿಂದಾಯ್ದ ಅಚ್ಚ ಬಿಳಿಯ ಹೂವು.

ಕಡುಗಪ್ಪು ರಾತ್ರಿಯ ಶೂನ್ಯದಲಿ
ಕನಸಿನ ಸುರಂಗಗಳ ಸುತ್ತಿ ಸುಳಿದು
ಅವನ ರೂಹು ಹುಡುಕಿ ಸೋತೆ
ಬೆಳ್ಳಂಬೆಳಿಗ್ಗೆ ಅಂಗಳದ ತುದಿಗೆ
ಈ ಹೂವರಳಿ ನಕ್ಕದ್ದು ಕಂಡೆ
ಹೂವ ಹೊಟ್ಟೆಯಲ್ಲಿ ಅವ ಜೀವ ನೆಟ್ಟಿರಬೇಕೆಂದು
ಅದನ್ನೇ ಆಯ್ದುಕೊಂಡೆ.

ಅಪ್ಪ ಎಲೆಮರೆಯ ಹೂವಿನಂತಿದ್ದ
ದಟ್ಟ ಹಸಿರು ಎಲೆಗಳ ನಡುವೆ
ಕಾಣದಂತಿರುವ ಕಾಡುಮಲ್ಲಿಗೆ
ಕನಸಲ್ಲೂ ಆವರಿಸುವ ಕಡುಗಂಧವಾಗಿ
ಸ್ಪರ್ಷದಾಚೆಗೆ ಉಳಿದುಹೋದ.

ದೇವರ ಪೂಜೆಗೆ ಹೂಕೊಯ್ಯುತ್ತ
ಬೆಳಗಿನ ಕಣ್ಣಿಗೆ ಬಣ್ಣವಾಗಿದ್ದ
ಕಾಬಾಳೆ ಕರವೀರ ನಂದಬಟ್ಟಲು ದಾಸವಾಳ
ಹೂಗಿಡಗಳೆದೆಯ ಹನಿಯಂತಿದ್ದ
ಸಾವೆಂಬ ಹಾವು ಹರಿದು ಹೋದುದ
ಅರಿಯದ ಮಗುವಿನಂತಿದ್ದ.

ನೆರಳು ಬೆಳಕಿನ ಆಟದಲಿ ನಿರತ
ಮುಂಜಾವಿನ ಈ ಮಾಯಕ ಪ್ರಕೃತಿ
ಅಲ್ಲೇ ಎಲ್ಲೋ ಕರಗಿ ಇರುವವನ
ಕರೆದೂ ಕರೆದೂ
ಶಬ್ದ ಸೋತು ಕಣ್ಣಂಚು ಹನಿಯಿತು.
ಪೊರೆಕಳಚಿ ಅವ ನಿರಾಳ ಹೊರಟಿದ್ದ.

ಗದ್ದೆ ನಾಟಿಯ ಹೆಂಗಸರ ಕಿಲಕಿಲ
ನೀರು ಕಟ್ಟಿದ ಗದ್ದೆಬದುವಿನ ಕಲಕಲ
ದನಕರುಗಳ ಕೊರಳಗಂಟೆಯ ಕಿಣಿಕಿಣಿ
ಕಾಣದ ಹಕ್ಕಿಗಳ ತೆರಪಿಲ್ಲದ ಕಲರವ
ಕರಗಿ ಮಾನಸಸರೋವರದಲ್ಲಿ
ಬಯಲಾಯಿತು ಕಿವಿ

ಕೆರೆಯಂಚಿನ ಹಾದಿಯಲಿ ಅಪ್ಪನ ಅರಲುಮೆತ್ತಿದ ಹೆಜ್ಜೆ
ಕಾಲದಾಚೆಗೆ ನಡೆದುಹೋದಂತಿದೆ
ನೀರಿಗೆ ಗಾಳಿಸೋಕಿ ಅಲೆಯ ಉಂಗುರವೆದ್ದು
ಅಂತಪಾರವಿಲ್ಲದೆ ವಿಸ್ತರಿಸಿದೆ
ಕ್ಷಣಭಂಗುರದೀ ನಾಟ್ಯಕ್ಕೆ ಮನಕಲಕಿ
ಮಣ್ಣಕಣ್ಣಿಗೆ ಕತ್ತಲೆ ಕವಿದಾಗ ಅವ
ಆಕಾಶವೆ ಕಣ್ಣಾಗಿ ನೋಡುತಿದ್ದ.

ರೂಪ ರಸ ಗಂಧಗಳ ಹಂಗು ಹರಿದು
ಕಾಲದೇಶಗಳ ದಣಪೆ ದಾಟಿ
ನಡೆದವನ ಹೇಗೆ ಕರೆಯುವುದು
ಹಾರುಹೊಡೆದಿದೆ ಮನೆಬಾಗಿಲು
ಅಲ್ಲೇ ಇದೆ ಗಂಧಬಟ್ಟಲು ಹೂವಿನ ಚೊಬ್ಬೆ
ಒಳಗಿಲ್ಲ ಹೊರಗಿಲ್ಲ ಎಂಬಂತೆ ಇರುವವನ
ಹೇಗೆ ತಡೆಯುವುದು, ಎಲ್ಲಿ ತಲುಪುವುದು?

ಅದಕ್ಕೆಂದೇ ಉತ್ತರರಗಳ ಗೊಡವೆಬಿಟ್ಟು
ಅವನೇ ನೆಟ್ಟ ಗಿಡದಿಂದ
ತೊಟ್ಟುಕಳಚಿದ ಹೂವೊಂದ
ಅವನಿಗಿರಿಸಿ ಬಂದೆ.

About The Author

ಡಾ. ಗೀತಾ ವಸಂತ

ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ.

3 Comments

  1. Basavaraj donur

    ಗೀತಾ ವಸಂತ ಅವರ ತೊಟ್ಟು ಕಳಚಿದ ಹೂವು ಕವನ ಓದಿದೆ. ಅಗಲಿದ ತಂದೆಯ ವ್ಯಕ್ತಿತ್ವ ಕಣ್ಣಿಗೆ ಕಟ್ಟುತ್ತದೆ, ನೊಂದ ಮನಸ್ಸಿನ ತಲ್ಲಣ, sense of loss ಪ್ರಬಾವಿಯಾಗಿ ವ್ಯಕ್ತಗೊಂಡಿದೆ. ವಿಷಾದ, ದುಃಖ ಮತ್ತು ಅಗಲಿಕೆಕೆ ಸಮರ್ಥ ಅಭಿವ್ಯಕ್ತಿ ಸಿಕ್ಕಿದೆ.

    ಇದನ್ನು ಓದಿದಾಗ ಅವರ ತಂದೆಯವರನ್ನು ನಾನೂ ಒಮ್ಮೆ ನೋಡಬೇಕಿತ್ತು ಎಂದೆನ್ನಿಸಿತು.

    Reply
  2. Bhageerathi

    Mam too nice, it motivates us to write even like u.✨

    Reply
  3. ಕೊಟ್ರೇಶ್ ಅರಸೀಕೆರೆ ಮಾಡಿ

    ಮಸ್ತ್ ಕವಿತೆ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ