ಗುಂಡನಿಗೆ ನಿದ್ರೆಯೇ ಬರುತ್ತಿಲ್ಲ. ಆತ ಏನೇನೋ ಯೋಚಿಸುತ್ತಾ ಎಚ್ಚರವಾಗೇ ಇದ್ದಾನೆ. ನಿದ್ದೆ ತಾನೇ ಅವನಿಗೆ ಎಲ್ಲಿಂದ ಬರಬೇಕು? ಅವನ ಮನಸ್ಸಿನ ತುಂಬೆಲ್ಲಾ ಅವನ ಅಪ್ಪ ಅಮ್ಮರೇ ತುಂಬಿಹೋಗಿದ್ದಾರೆ. ಅವನಿಗೆ ಏನನ್ನಿಸಿತೋ ಏನೋ? ಮೆಲ್ಲಗೆ ಎದ್ದು ಮಲಗಿದ್ದ ಅಪ್ಪನನ್ನೇ ಕಣ್ತುಂಬಿಕೊಳ್ಳುತ್ತಾ ಅಪ್ಪನ ಮಟ್ಟಗುಂಜಿನಂತಿದ್ದ ತಲೆಗೂದಲ ಮೇಲೆ ಕೈಯಾಡಿಸುತ್ತಾನೆ. ಅವನ ಚಕ್ಕಳವಾದ ದೇಹ. ಅವನ ನೋವಿನ ಕಾಲು. ಇತ್ತ ತನ್ನ ಮಗ್ಗುಲಲ್ಲೇ ಮಲಗಿದ್ದ ಅವ್ವನನ್ನು ನೋಡುತ್ತಾನೆ. ಅವಳನ್ನು ಕಂಡದ್ದೇ ಅವನ ಕಣ್ಣಿನಿಂದ ನೀರು ದಳದಳನೆ ಹರಿಯಲು ಪ್ರಾರಂಭಿಸಿತು.
ಡಾ. ದಿಲೀಪ್ ಕುಮಾರ್ ಎನ್.ಕೆ. ಬರೆದ ಈ ಭಾನುವಾರದ ಕತೆ “ಸುಟ್ಟಿರದೇ ಮೂರ್ ದ್ವಾಸ…” ನಿಮ್ಮ ಓದಿಗೆ
ಅವ್ವ ಚುಸ್ ಸ್ ಸ್ ಸ್… ಎಂದು ಕಾದ ಕಲ್ಲಿನ ಮೇಲೆ ದೋಸೆ ಉಯ್ಯುವುದನ್ನೇ ಗೋಡೆ ಮರೆಯಲ್ಲಿ ನಿಂತು ಜೊಲ್ಲು ಸುರಿಸುತ್ತಾ ನೋಡುತ್ತಿದ್ದ ಸಿದ್ಧನನ್ನು ಅವನ ಅಕ್ಕ ಸುಮಾನದಲ್ಲಿ –
ನಿನಗ್ಯಾಕವ್ವ ಈ ಆಸ
ಸುಟ್ಟಿರದೇ ಮೂರ್ ದ್ವಾಸ
ನೀ ಸುಮ್ನಿರದು ವಾಸ
ಎಂದು ಅಣಕಿಸತೊಡಗಿದ್ದಳು. ಅವಳು ಹಾಗೆ ಕಿಚಾಯಿಸಿದ್ದೇ- ಅವನು ಆಗಾಗ್ಗೆ ಸುಳ್ಳು ಪಳ್ಳು ಹೇಳಿಕೊಂಡು ಇಸ್ಕೂಲಿಗೆ ಚಕ್ಕರ್ ಹಾಕುತ್ತಿದ್ದ ಇಚಾರ ಇಂದು ಅದು ಹೇಗೋ ಗೊತ್ತಾಗಿ ಹೋಗಿ, ಅವ್ವನಿಂದ ಈಗಾಗಲೇ ಒಂದು ಸುತ್ತಿನ ಮಹಾಮಂಗಳಾರತಿಯನ್ನು ಮಾಡಿಸಿಕೊಂಡು ನಿಪ್ಯಜೋಗಿಯಂತೆ ನಿಂತಿದ್ದ ಅವನ ಮುಖ ಮತ್ತೂ ಚಿಕ್ಕದಾಗಿ ಹೋಯಿತು. ಇಷ್ಟು, ಇಷ್ಟೇ ಇಷ್ಟಗಲ ಆಗಿಹೋಯಿತು. ಇಸ್ಕೂಲಿಗೆ ಚಕ್ಕರ್ ಹಾಕಿ ಕಾಡು ಮೇಡನ್ನು ಅಲೆದು ಟೇಮಿಗೆ ಸರಿಯಾಗಿ ವಿ.ಎಂ.ಎಸ್ ಬಸ್ಸು ಸಂಜೆಯಷ್ಟಕ್ಕೆ ತನ್ನ ಊರನ್ನು ತಲುಪುವಷ್ಟರ ಹೊತ್ತಿಗೆ, ಇಸ್ಕೂಲು ಮುಗಿಸಿ ಬಸ್ಸಿನಲ್ಲೇ ಬಂದಂತೆ ಬಂದು ಮನೆಯನ್ನು ಸೇರಿ ಇಷ್ಟುದಿನ ಸೈ ಎನಿಸಿಕೊಳ್ಳುತ್ತಿದ್ದ ಅವನಿಗೆ ಇಂದು ಯಾಕೋ ಗ್ರಾಚಾರ ನೆಟ್ಟಗಿರಲಿಲ್ಲ.
ಅದು, ಇಸ್ಕೂಲಿಗೆ ಅವನು ಹೋಗಿರಲಿ, ಇಲ್ಲ ಚಕ್ಕರನ್ನೇ ಹಾಕಿರಲಿ; ಮನೆಗೆ ಬಂದದ್ದೇ ಮನೆಯಲ್ಲಿ ಅಪ್ಪ ಅವ್ವ ಇದ್ದರೇ ಒಂದು ರೀತಿಯ ಆಟ, ಇಲ್ಲದಿದ್ದರೆ ಇನ್ನೊಂದು ರೀತಿಯ ಆಟ ಆಡುತ್ತಿದ್ದ ಅವನು ಇಂದೂ ತನ್ನ ಎಂದಿನ ಆಟವನ್ನು ಶುರುಮಾಡಿಕೊಂಡಿದ್ದನು. ಹಾಗೆ ಅವನು ನಿತ್ಯವೂ ಆಡುತ್ತಿದ್ದ ಆಟ ತಿಂಗಳಾನುಗಟ್ಟಳೆ ಅಭ್ಯಾಸ ಮಾಡಿ ಮಾಡಿ ಅಂತಿಮವಾಗಿ ಒಂದು ದಿನ ಸಹಸ್ರಾರು ಜನಗಳ ಎದುರಿಗೆ ರಂಗದ ಮೇಲೆ ನಡೆಯುತ್ತದಲ್ಲಾ ಆ ಆ ಆ ರೇಂಜಿಗೆ ಇರುತ್ತಿತ್ತು.
ಅವ್ವ ಮನೆಯಲ್ಲಿದ್ದಳು. ಆಕೆ ಹೊತ್ತಾರೆ ನಾಲ್ಕೈದು ಗಂಟೆಗೇ ಎದ್ದು ಚಕಚಕಾಂತ ಮಾಡಬೇಕಾದ್ದನ್ನೆಲ್ಲಾ ಮಾಡಿ ಆರುಗಂಟೆಯ ಹೊತ್ತಿಗೆ ಮನೆಯನ್ನು ಬಿಟ್ಟರೆ ಮತ್ತೆ ಅವಳು ಮನೆಯನ್ನು ಸೇರುತ್ತಿದ್ದದ್ದು ಸಂಜೆ ಐದರ ಮೇಲೆಯೇ. ಆಕೆ ಈ ಮಧ್ಯೆದಲ್ಲಿ ಬರೋಬ್ಬರಿ ನಾಲ್ಕು ಮನೆಗಳಲ್ಲಿ ಮನೆಗೆಲಸವನ್ನು ಮಾಡುತ್ತಿದ್ದಳು. ಒಂದು ಮನೆ ಮುಗಿದ ಮೇಲೆ ಇನ್ನೊಂದು, ಇನ್ನೊಂದು ಮನೆ ಮುಗಿದ ಮೇಲೆ ಮತ್ತೊಂದು, ಮತ್ತೊಂದು ಮುಗಿದ ಮೇಲೆ ಮಗದೊಂದು, ಹೀಗೇ…. ಅವಳಿಗೆ ಪುರುಸೊತ್ತು ಎಂಬ ಪದಕ್ಕೆ ಅರ್ಥವೇ ಗೊತ್ತಿಲ್ಲವೇನೋ? ಮನೆಗೆಲಸವೆಂದರೆ ಗೊತ್ತಲ್ಲಾ? ಮನೆಗೆ ತರಕಾರಿ ತರುವುದರಿಂದ ಹಿಡಿದು ಗೂಡಿಸೋದು, ಒರೆಸೋದು, ತೊಳೆಯೋದು, ಬೆಳಗೋದು, ಕುಟ್ಟೋದು, ಕುಸುರೋದು ಎಲ್ಲ ಎ…ಲ್ಲಾ.
ಅಪ್ಪ ಇನ್ನೂ ಮನೆಗೆ ಬಂದಿರಲಿಲ್ಲ. ಸ್ವಾಮಿ ಅಂತ ಅವನ ಹೆಸರು. ಅವನೂ ಅಷ್ಟೇ. ತನ್ನ ಹೆಂಡತಿ ಮಾಡಿಟ್ಟ ಬಿಸಿ ಬಿಸಿ ಹಿಟ್ಟನ್ನು ತಿಂದು ಬೆಳಗ್ಗೆ ಏಳೂವರೆ-ಎಂಟಕ್ಕೆ ಮನೆಯನ್ನು ಬಿಟ್ಟನೆಂದರೆ ಮತ್ತೆ ವಾಪಸ್ಸಾಗುತ್ತಿದ್ದದ್ದು ಸಂಜೆ ಆರಾದರೂ ಆಯಿತು ಏಳಾದರೂ ಆಯಿತು. ಅವನು ಮಾಡುತ್ತಿದ್ದದ್ದು ಗಾರೇಕೆಲಸ, ಕೈಯಾಳು. ಹಾಗೆ ನೋಡುವುದಾದರೆ ಗಾರೆಕೆಲಸವೇನೂ ಅವನಿಗೆ ನಿಚ್ಚವೂ ಸಿಕ್ಕುತ್ತಿರಲಿಲ್ಲ. ಹಾಗೆ ಏನಾದರೂ ಗಾರೆಕೆಲಸ ಇಲ್ಲದೇ ಹೋದರೆ ಅಷ್ಟಕ್ಕೆ ಅವನು ಸುಮ್ಮನಾಗಿಬಿಡುತ್ತಿದ್ದನೇ? ಇಲ್ಲ ಇಲ್ಲ ಖಂಡಿತಕ್ಕೂ ಇಲ್ಲ. ಅವನು ಕೆಲಸ ಇಲ್ಲದೇ ಮನೆಯಲ್ಲಿ ಕೂತುಕೊಳ್ಳುತ್ತಿದ್ದ ದಿನವೇ ಇಲ್ಲವೇನೋ? ಭತ್ತದ ಮಿಲ್ಲಿನಲ್ಲಿ ಮೂಟೆ ಹೊರುತ್ತಿದ್ದ. ಸಿಮೆಂಟಿನ ಲೋಡನ್ನು ಇಳುಕಿಸುತ್ತಿದ್ದ. ರೋಡಿನ ಕೆಲಸ, ಗದ್ದೆ ಕೆಲಸ, ಸುಣ್ಣ-ಬಣ್ಣದ ಕೆಲಸ, ಜಲ್ಲಿ ಹೊಡೆಯುವುದು… ಹೀಗೆ ಯಾವುದು ಸಿಗುತ್ತದೋ ಅದನ್ನು ಕಣ್ಣಿಗೊತ್ತಿಕೊಂಡು ಮಾಡುತ್ತಿದ್ದಂತವನು ಅವನು. ಒಂದು ವೇಳೆ ಈ ಯಾವುದೂ ಇರಲಿಲ್ಲವೆಂದರೆ ಕಾಡಿಗೆ ಹೋಗಿ ಸೌದೆಯನ್ನು ಹೊಡೆದು ಬೇಕು ಬೇಕಾದವರಿಗೆ ಗೋಗರೆದೋ, ಹಿಂಸೆಮಾಡಿಯೋ ಮಾರಿ ಬರುತ್ತಿದ್ದ ವ್ಯಕ್ತಿತ್ವ ಅವನದು.
ಇನ್ನು ಸಿದ್ಧನ ಅಕ್ಕ ಸಿಂಗಾರಿ. ಸಿದ್ಧನಿಗೆ ಅವಳು ಮನೆಯಲ್ಲಿ ಇದ್ದರೂ ಒಂದೆ ಇಲ್ಲದಿದ್ದರೂ ಒಂದೇ. ಸಿದ್ಧ ಅವಳನ್ನು ಲೆಕ್ಕಕ್ಕೆ ತೆಗೆದುಕೊಂಡವನೇ ಅಲ್ಲ. ಬೆಳಗ್ಗೆ ಮನೆಯಿಂದ ಕೊನೆಯಲ್ಲಿ ಹೊರಡುತ್ತಿದ್ದವಳೂ ಅವಳೇ, ಸಂಜೆಯಾಗುತ್ತಿದ್ದಂತೆ ಎಲ್ಲರಿಗಿಂತ ಮೊದಲೇ ಮನೆಯನ್ನು ಸೇರುತ್ತಿದ್ದವಳೂ ಅವಳೇ. ಆಕೆ ಅದೇ ಊರಿನಲ್ಲಿ, ಸರಕಾರೀ ಶಾಲೆಯಲ್ಲಿ, ಏಳನೇ ಕಳಾಸಿನಲ್ಲಿ ಓದುತ್ತಿದ್ದಳು.
ಅವ್ವ ನನಗೆ ಯಾರೋ ಹೇಳಿದ್ರು, ಇವನು ಮದ್ಯಾಹ್ನ ಅಷ್ಟೊತ್ತಲ್ಲಿ ಒಬ್ಬನೇ ದೊಡ್ಡ ಚಾನಲ್ನಲ್ಲಿ ಈಜೊಡೀತಾ ಇದ್ನಂತೆ.
ಮೇಷ್ಟ್ರು ಬಿದಿರು ದೊಣ್ಣೇಲಿ ಸರಿಯಾಗಿ ಕೊಟ್ರಂತೆ ನೋಡು, ಬಿದ್ದು ಕೆಡೆದು ಹೊರಳಾಡೋನಂತೆ.
ಇವತ್ತು ನೀನು ಬಸ್ಸನ್ನೇ ಹತ್ತಲಿಲ್ಲವಂತಲ್ಲಾ
ಹೇಗೆ ಬಂದೆ ಅಂದರೆ –
ಹ್ಞೂಂ ನಮ್ಮ ಭಾವ
ಕಾರಲ್ಲಿ ಕರಕೊಂಡು ಬಂದು ಬುಟ್ಟ ಅಂತಾನೆ!
ಅದು ಎಂಥವರೇ ಆಗಲಿ, ಅದು ಎಂ…ಥಾ ಸನ್ನಿವೇಶವೇ ಆಗಿರಲಿ ನೀರು ಕುಡಿದಷ್ಟೇ ಸಲೀಸಾಗಿ ದೋಸೆಯನ್ನು ಮಗುಚುವಂತೆ ಮಗುಚಿ ಬಿಡುತ್ತಿದ್ದ ಚಾಲಾಕಿ ಸಿದ್ಧನಿಗೆ ಇನ್ನು ಅವನ ಅಕ್ಕ ಇವನ ಬಗ್ಗೆ ತನ್ನ ಅವ್ವನಿಗೆ ಹೇಳುತ್ತಿದ್ದ ದೂರುಗಳು ಇವನಿಗೆ ಒಂದು ಲೆಕ್ಕವೇ?
ಬ್ಯಾಡ ನೋಡು ಅಕ್ಕ
ಸುಮ್ನಿದ್ರ ಉಳ್ಕತದ ನಿನ್ ಪುಕ್ಕ
ಇಲ್ದಿದ್ರ ಗಾಳೀಲ್ ತೂರೋದು ಪಕ್ಕಾ
ಎನ್ನುತ್ತಾ ಅವಳ ದೂರುಗಳಿಗೆಲ್ಲಾ ಸರಿಯಾಗಿ ಪುಂಗಿ ಊದಿ ಮಕಾಡೆ ಮಕಾಡೆ ಮಲುಗಿಸಿಬಿಡುತ್ತಿದ್ದ. ಸಿದ್ಧ ಪಳಾಂಗು ಅಂದರೆ ಅಂತಿಂಥಾ ಪಳಾಂಗಲ್ಲ! ಸದ್ಯಕ್ಕೆ ಸಿಂಗಾರಿ ಅವ್ವನಿಗೆ ಕೆಲಸದಲ್ಲಿ ನೆರವಾಗಿದ್ದಳು.
ಸಿದ್ಧ ಮನೆಗೆ ಬಂದ. ಅವನು ಮನೆಗೆ ಬಂದೊಡನೆಯೇ ಮಾಡುತ್ತಿದ್ದ ಮೊದಲ ಕೆಲಸವೇನೆಂದರೆ ಮನೆಯಲ್ಲಿ ಯಾರ‍್ಯಾರು ಇದ್ದಾರೆ ಎಂಬುದನ್ನು ಪತ್ತೆಮಾಡುವುದು. ಹಾಗೆ ಪತ್ತೆ ಮಾಡಿದ ನಂತರವಷ್ಟೇ ಅವನು ಮುಂದೆ ಯಾವ ಆಟವನ್ನು ಆಡಬೇಕೆಂದು ನಿರ್ಧರಿಸುತ್ತಿದ್ದ. ಈಗ ಮನೆಯಲ್ಲಿರುವುದು ಅಕ್ಕ ಸಿಂಗಾರಿ ಮತ್ತು ಆತನ ಅವ್ವ. ಅವ್ವ ಇರುವ ಕಾರಣದಿಂದಾಗಿ ಆತ ಇನ್ನೊಂದು ರೀತಿಯ ಆಟವನ್ನು ಆಡಲು ಶುರುಹಚ್ಚಿಕೊಂಡ.
ಮನೆಯೊಳಕ್ಕೆ ಕಾಲಿರಿಸಿದ್ದೇ ಇಸ್ಕೂಲಿನ ಚೀಲವನ್ನು ಬಿಚ್ಚಿ ಅದನ್ನು ತನ್ನ ಎರಡೂ ಕೈಗಳ ಹಸ್ತದ ಮೇಲಿಟ್ಟುಕೊಂಡು ಎರಡೂ ಕಣ್ಣಿಗೆ ಭಕ್ತಿಯಿಂದ ಒತ್ತಿಕೊಂಡ. ಅಪ್ಪನು ಜಾಗಟೆಯನ್ನು ನೇತುಹಾಕುವ ಮೊಳೆಗೆ ಅದನ್ನು ನೇತುಹಾಕಿ, ಅದರ ತಳಭಾಗದಲ್ಲಿ ಮಂಡಿಯೂರಿ ಕುಳಿತು ಅದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ ಎದ್ದು ಬಚ್ಚಲು ಮನೆಗೆ ನಡೆದನು. ಬಚ್ಚಲು ಮನೆಯಿಂದ ಕೈ ಕಾಲು ಮುಖವನ್ನು ತೊಳೆದುಕೊಂಡು ಬಂದು ಸೀದ ಅಡುಗೆ ಕೋಣೆಗೆ ನುಗ್ಗಿದವನೇ, ಅಲ್ಲಿದ್ದ ಕುರಿಮರಿಯನ್ನು ತಬ್ಬಿಕೊಂಡಿದ್ದ ಯೇಸುಸ್ವಾಮಿಯ ಪೋಟೋಗೆ ಅಟೆನ್ಷನ್ನಲ್ಲಿ ನಿಂತು, ಶಿಲುಬೆಯ ಗುರುತನ್ನು ತನ್ನ ಎದೆಯ ಮೇಲೆ ಮೂರು ಸಾರಿ ಹಾಕಿ ಘನಗಂಭೀರವಾಗಿ ಅದಕ್ಕೆ ಕೈಮುಗಿದ. ಅವನ ಅವ್ವ ಸಿದ್ಧನ ಈ ಎಲ್ಲಾ ಆಟಗಳನ್ನೂ ಕೆಕ್ಕರಿಸಿಕೊಂಡು ನೋಡುತ್ತಲೇ ಇದ್ದರೆ, ಇತ್ತ ಇವನು, ಅವಳು ನೋಡಲಿ ಎಂದೇ ಇನ್ನಿಲ್ಲದ ಸರ್ಕಸನ್ನು ಮಾಡುತ್ತಲಿದ್ದ.
ಅಕ್ಕ ಸಿಂಗಾರಿಯು ಅಪ್ಪ-ಅವ್ವ ಮನೆಯಲ್ಲಿ ಇಲ್ಲದೇ ಹೋದಾಗ ಅವನು ಆಡುತ್ತಿದ್ದ.
ಥೂ… ಇಸ್ಸಿ ಸ್ಸಿ ಸ್ಸಿ ಸ್ಸೀ…
ಯಾರಪ್ಪ ಈ ಇಸ್ಕೂಲು, ಮೇಷ್ಟ್ರು, ಪುಸ್ಕ
ಇದುನ್ನೆಲ್ಲಾ ಕಂಡಿಡಿದೋನು?
ಅವನಿಗೆ ಕಜ್ಜಿ ಬರಾ
ಅವನಿಗೆ ಹುಳುಕಡ್ಡಿ ಬರಾ
ಅವನ ಹಲ್ಲು ಹುಳುಕಲ್ಲಾಗ
ಅದೆಂತದೋ ಕಿತ್ತೋದ ಪಾಠವಂತ
ಅದುಕ್ಕ ಒಂದು ಪರೀಕ್ಸವಂತ
ಪಾಸು ಪೇಲಂತ.
ಇಷ್ಟಪ್ಪ ಐಕುಳ್ನ ಗೋಳೂಯ್ಕಳದು ಇವ್ರು?
ಇಬರ ಎಡಲೀ
ನಾಮು ನೆಮ್ದಿಯಾಗ ಇರಂಗಿಲ್ಲ ಬುಡಂಗಿಲ್ಲ.
ಯಾರುಗ್ ಬೇಕು ಈ ಕಷ್ಟ?
ಎನ್ನುತ್ತಾ ಹಣೆಯನ್ನು ಚೆಚ್ಚಿಕೊಂಡು ಚೀಲವನ್ನು ಬಾಚಿಕಲ್ಲು ಎಸೆಯುವಂತೆ ಎಸೆಯುತ್ತಿದ್ದ ಅವನ ಆಟಗಳನ್ನು ನೆನಪಿಸಿಕೊಂಡು ಆಕೆ ಒಳಗೊಳಗೇ ನಗುತ್ತಾ ಅವ್ವ ಬೆಳಗಿ ಕೊಟ್ಟ ಪಾತ್ರೆಗಳನ್ನು ತೊಳೆಯುತ್ತಿದ್ದಳು.
ಅಪ್ಪಾ… ಇಸ್ಕೂಲು ಮುಗಿಸಿ ಆ ಉಸಿರುಗಟ್ಟಿಸುವ ಬಸ್ಸಲ್ಲಿ ಮಿಳ್ಳಾಡಿಕೊಂಡು, ತಳ್ಳಾಡಿಕೊಂಡು, ವಾಲಾಡಿಕೊಂಡು, ನೇತಾಡಿಕೊಂಡು ಬಂದು ಊರನ್ನು ತಲುಪುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತಪ್ಪಾ. ಆ ರೋಡೋ ಅದರ ಚಂದನೋ! ಅದಕ್ಕೆ ತಕ್ಕ ಹಾಗೆ ಆ ಲಡಕಾಸಿ ಬಸ್ಸು. ಅದು ಕುಲುಕೋದೇನು, ಎತ್ತಿ ಎತ್ತಿ ಕುಸುರೋದೇನು? ದೇಹದ ಪಾರ್ಟುಗಳೆಲ್ಲಾ ಚಿತ್ರಾನ್ನ ಚಿತ್ರನ್ನ ಆಗೋಯ್ತದ. ಸಿಂಗಾರಿಯನ್ನು ನೋಡುತ್ತಾ (ಎದೆಯ ಮೇಲೆ ಕೈ ಇಟ್ಟುಕೊಂಡು) ಇಲ್ಲಿರೋ ಕಿಡ್ನಿ (ಹೊಟ್ಟೆಯನ್ನು ತೋರಿಸಿ) ಇಲ್ಲಿಗೆ ಬಂದುಬುಟ್ಟಿದೆ. ಎಂದಿದ್ದಕ್ಕೆ ಸಿಂಗಾರಿ ಕಿಡ್ನಿ ಎದೇಲಲ್ಲ ಇರೋದು ಹೊಟ್ಟೇಲಿ ಎಂದಳು. ಅದಕ್ಕವನು ಒಂದು ಕ್ಷಣ ಹೌಹಾರಿ! ನಿನಗೆ ಗೊತ್ತಿದೆಯೋ ಇಲ್ವೊ ಅಂತ ಟೇಸ್ಟ್ ಮಾಡೋಣ ಅಂತ ಹಾಗಂದೆ. ನಾನು ಓದುತ್ತಿರೋದು ಇಂಗ್ಲೀಷ್ ಮೀಡಿಯಮ್ಮು ಅನ್ನದು ನಿನಗೆ ನೆನಪಿರಲಿ. ಎಂದು ತನ್ನ ಆಟವನ್ನು ಮುಂದುವರಿಸಿದ.
ಇದರ ಮಧ್ಯೆದಲ್ಲಿ ಆವಯ್ಯ ಕಂಡಕ್ಟರ್‌ದು ಬೇರೆ ಒಂದು ದೊಡ್ಡ ಗೋಳು. ನಾಳೆಯಿಂದ ಏಳು ರೂಪಾಯಿ ಕೊಟ್ಟರೆ ಬಸ್ ಹತ್ತು. ಇಲ್ಲದಿದ್ದರೆ ನೀನು ಬಸ್ ಹತ್ತಿದರೆ ಒಂದು ಇಲ್ಲದಿದ್ದರೆ ಇನ್ನೊಂದು ಅನ್ನುತ್ತಾನೆ! ಎಷ್ಟಿರಬೇಡ ಸೊಕ್ಕು ಅವನಿಗೆ? ಎಲ್ಲೋ ಹೋಗಿ ನನ್ನ, ಈ ಸಿದ್ದುನ್ನ ಹಂಗನ್ನಬೋದ ಅವನು? ಅಪ್‌ಟ್ರಾಲ್ ಅವನೊಬ್ಬ ಕಂಡಕ್ರು. ಈ ಇಂಗ್ಲೀಷ್ ಮೀಡಿಯಂ ಓದ್ತಿರೋ ನನ್ನ ಜೊತೆಗೆ ಹೇಗೆ ಮಾತಾಡ್ಬೇಕು ಅನ್ನೋ ಕಾಮನ್‌ಚೆಂಜ್ ಬೇಡ್ವ ಅವನಿಗೆ? ನಾಚೆಂಚ್ ಬೆಡಿಪೂಲ್! ನನಗೂ ಪಿತ್ತ ನೆತ್ತಿಗೇರಿ ನೆತ್ತಿ ಮೇಲುಕ್ಕೇ ಬಂದು ಉಕ್ಕಿ ಹರೀತಿತ್ತು. ಇನ್ನೇನಿಲ್ಲ, ಒಂದು ಗುಡ್ದಾ ಒಂದು ಪಂಚು, ಒಂದು ಮಾಂಜಾ ಅಷ್ಟಕ್ಕೇ ಅವನ ಕತೆ ಏನೇನಾಗುತ್ತಿತ್ತೋ? ನಾನೆ ಸುಮ್ಮನೆ ಯಾಕೆ ಅಂತ ಹಲ್ಲು ಕಚ್ಚಿಕೊಂಡು ಬಂದೆ.
ಉಸ್ಸೋ ಸ್ವಾಮಿ ಶಿವಾ ಎಂದು ಗೋಡೆಗೆ ಒರಗಿ ಕಾಲುಗಳನ್ನು ಮುಂದಕ್ಕೆ ಚಾಚಿ ನೆಲದ ಮೇಲೆ ಕುಳಿತುಕೊಂಡ. ಸುಮ್ಮನೆ ಜಗಳ ಯಾಕೆ? ಅವನ ಜೊತೆ ಆಡಿದರೆ ನನ್ನ ಮರ್ಯಾದೇನೇ ಕಮ್ಮಿ ಆಗೋದು. ನಾಳೆಯಿಂದ ಅಪ್ಪನ ಹತ್ರ ಏಳು ರೂಪಾಯಿ ಈಸ್ಕೊಂಡು ಅವನ ಎದೆ ಮೇಲೆ ಹಾಕಿ ಬಿಡುತ್ತೇನೆ.
ಇನ್ನು ಆ ಇಸ್ಕೂಲಿನದ್ದು! ಅದು ಇದಕ್ಕಿಂತಲೂ ಒಂದು ದೊ ದೊ ದೊ ದೊ…ಡ್ಡ ಕತೆ. ನಾನು ಆ ಲಡಕಾಸಿ ಬಸ್ಸಿಳಿದು ಇಸ್ಕೂಲು ಗೇಟನ್ನು ಮುಟ್ಟುವುದೇ ತಡ. ಆ ಪ್ಯಾಕೋಳಿ ಮೇಷ್ಟ್ರು –
ಸಿದ್ಧಾ… ಆ ಐದನೇ ಕಳಾಸಿನವರಿಗೆ
ಒಂಭತ್ತನೇ ಮಗ್ಗಿ ಕಲ್ಸೋ.
ಸಿದ್ಧಾ… ಉತ್ತರಗಳನ್ನು ಬೋರ್ಡಿನ ಮೇಲೆ ಬರೆಯೋ ಅವರು ಬರೆದುಕೊಳ್ಳಲಿ.
ಸಿದ್ಧಾ… ಪೊಯಂ ಒಪ್ಪಿಸಿಕೊಳ್ಳೋ
ಸಿದ್ಧಾ… ಅವರನ್ನು ಆಟಕ್ಕೆ ಬಿಡೋ
ಸಿದ್ಧಾ… ಯಾರಾದರೂ ತುಟಿಕ್ ಪಿಟಿಕ್ ಅಂದರೆ ಸರಿಯಾಗಿ ಬರ‍್ಸೋ ತಲೆಕೊಡಿಸಿಕೊಳ್ಳಬೇಡ.
ಸಿದ್ಧ ಸಿದ್ಧ ಸಿದ್ಧ. ಈ ಸಿದ್ಧ ಅಂತ ನನಗೆ ಯಾರು ಹೆಸರಿಟ್ಟರೋ? ನನ್ನ ಕೈಗೆ ಸಿಗಬೇಕು ಅವರು ಅವರಿಗೆ ಇದೆ ಮಾರಿಹಬ್ಬ. ಅವ್ವ ಈಗ ನುಂಗಿಕೊಳ್ಳುವಂತೆ ಅವನನ್ನೇ ನೋಡ ತೊಡಗಿದಳು. ಆ ಮೇಷ್ಟ್ರು ಮೇಷ್ಟ್ರುಗಿರಿನ ನನಗೇ ವಹಿಸಿ ತಾವು ಆರಾಮಾಗಿ ಗೊರಕೆ ಹೊಡೀತಾ ಮಲಗಿರುತ್ತಾರೆ. ಹೇಗಿದ್ದು ನೋಡು ನ್ಯಾಯ? ಮೇಷ್ಟ್ರು ಕೆಲಸ ಮಾಡೋದು ನಾನು ಸಂಬಳ ಎಣಿಸಿಕೊಳ್ಳೋದು ಅವರು.
ಅಷ್ಟು ಹೊತ್ತಿನಿಂದಲೂ ಸಿದ್ಧನ ಮಾತು ಕತೇನಾ ಕೇಳಿ ಕೇಳಿ ಬಿ.ಪಿ ರೈಜ್ ಮಾಡಿಕೊಂಡಿದ್ದ ಅವನ ಅವ್ವ ಈಗ ತಡೆದೂ ತಡೆದೂ ತಡೆಯೋದಕ್ಕೆ ಆಗದೇ, ಇನ್ನೂ ಅದೂ ಇದೂ ವಟಗುಟ್ಟುತ್ತಲೇ ಇದ್ದ ಸಿದ್ಧನ ಮುಸುಡಿಗೆ ಸರಿಯಾಗಿ ಒಂದು ತಿವಿದಾ ನೋಡಿ! ಆಕೆ ತಿವಿದದ್ದೇ ಹೀಗೆ ಆಗುತ್ತದೆಂದು ಕನಸಿನಲ್ಲಿಯೂ ಎಣಿಸಿಲ್ಲದ ಸಿದ್ಧ, ಕಣ್ಣು ಬಾಯಿ ಬಿಟ್ಟುಕೊಂಡು ದಂಗಾಗಿ ಹೋದನು.
ಅದ್ಯಾವತ್ತು ಅದ್ಯಾವ್ ಮಾಯುದ್ ನಿದ್ದಲಿ
ಅದ್ಯಾವ್ ನಾಟುಗ್ಗಾರುನ್ನ ನಾನು ಮಡಿಕಂದಿದ್ನೋ ಏನೋ?
ಅದುಕ್ತಾನ ಇಂಥಾ ನಾಟುಗ್ಗಾರ ನನ್ನೊಟ್ಟಲಿ ಹುಟ್ಕಂದಿದ್ದಯಿ.
ನಾನುವ ಬಸವ ಜಯ, ರಾಜ ವಿಕ್ರಮ, ಕುರುಕ್ಷೇತ್ರ, ಶನಿ ಪ್ರಭಾವ, ರಕ್ತಸಂಬಂಧ…
ಇನ್ನೂ ಎಂತೆಂಥದೋ ನಾಟುಗ್ಗಳ್ನ
ನನ್ನುದ್ದ ನೋಡಿಲ್ಲ?
ಬಸವಾ, ಬಿಜ್ಜಳ, ಕೃಷ್ಣ, ಶಕುನಿ, ದೃತರಾಷ್ಟ್ರ…
ಎಂತೆಂಥಾ ಪಾರ್ಟುಗಳನ್ನ ಮಾಡಿ
ಸೈ ಅನ್ನಿಸಿಕೊಂಡವರನ್ನ
ನನ್ನ ಕಣ್ಣಾರ ಕಂಡಿಲ್ಲ?
ಆದರ ಆ ಎಲ್ಲ ನಾಟುಗ್ಗಳುವ
ನಿನ್ನ ನಾಟುಕುದ್ ಮುಂದ ಕಳೆ ಸೆತ್ತೆ
ಇದ್ದಂಗ ಕಣಾ ಬುಡು
ಆ ಎಲ್ರುವ ನಿನ್ನ ಮುಂದ ಏನೇನೂ ಅಲ್ಲವೇ ಅಲ್ಲ ಬುಡು.
ಅಪ್ಪಪ್ಪಪ್ಪಪ್ಪೋಯ್ ಹೆಣ್ಣಾಗಿದ್ರ ಅದೆಷ್ಟ್ ಮನ ಮರ‍್ದು ನಾನಲ್ಲ ಅಂತ ಮಡುಗ್ಬುಡಯಾ?
ಯಾನ್ಯಾನ್ ಕತ್ ಕತಾ ಮಾಡ್ಬುಡಯಾ?
ಇವತ್ತಿಂದ ಇಸ್ಕೂಲ್ಗ ಹೋಯ್ತಿನಿ ಅಂತ ಹೋಗದು. ಅಲ್ಲಿ ನನಗೆ ಹೊಟ್ಟನೋವು, ಗೂದನೋವು, ಅಪ್ಪುನ್ಗ ಹುಷಾರಿಲ್ಲ, ಅವ್ವುನ್ಗ ಸೂಲು ಹೋಯ್ತೋ ಬಂತೋ ಅನ್ನಂಗದ… ಅಂತ ಸುಳ್ಳು ತಟವಟ ಹೇಳಿ ಇಸ್ಕೂಲ್ಗ ತಪ್ಪುಸ್ಕಳದು. ತಪ್ಪುಸ್ಕಂದು ಕಾಡುಮೇಡು ಅಲಿಯೋದು. ಸಂದ ಆಯ್ತಿದಂಗೇ ಸರಿಯಾದ್ ಟೇಮ್ಗ ಗರತಿ ಕಣಂಗ ಬಂದು ಮನ ಸರ‍್ಕಂದು ಇಂಥಾ ಸುಪ್ನಾತಿ ಆಟ್ವ ಆಡಿ ಆಡಿ ನಮ್ಗಳ್ ಕಿಮಿಗ ಹೂ ಮುಡಿಸದು.
ನಾ ನೋಡುದ್ರ ಸಿಕ್ ಸಿಕ್ದೊರ‍್ಗೆಲ್ಲಾ ನನ್ನ ಮಗ ಚಿನ್ನ, ಬೆಳ್ಳಿ, ವಜ್ರ, ವೈಡರ‍್ಯ ಅಂತ ಹೇಳ್ಕಂದು ಹೇಳ್ಕಂದು ತರ‍್ಗಾಡ್ತಾ ಕೂತಿನಿ. ನೀ ನೋಡುದ್ರ ಇಂಥಾ ಹಲಾಲ್ ಟೋಪಿ. ಇವತ್ತು ಮೇಷ್ಟ್ರು ಸಿಕ್ಕಿ ನಿನ್ನ ಗುಣಗಾನ ಮಾಡಿದ್ದುಕ್ಕ ನಿನ್ ಬಣ್ಣೆಲ್ಲಾ ಬಯಲಾಯ್ತು. ಇಲ್ದೆ ಹೋಗಿದ್ರ ನೀನು ಆಡುದ್ದೇ ಆಟ ಮಾಡುದ್ದೇ ಮಾಟ ಆಗೋಗದು. ಎಲ್ರುವ ಬಣ್ಣ ಹಚ್ಕಂದು ನಾಟ್ಕ ಮಾಡುದ್ರ ನೀನು ಶೂರಪುಲಿ ಬಣ್ಣ ಹಚ್ಚದೇ ನವರಂಗಿ ಆಟ್ವ ಆಡ್ತಾ ಕೂತಿದಿಯಿ.
ಆಡುದ್ರ ಹಲ್ಕ
ನೋಡುದ್ರ ನುಲ್ಕ
ನಾ ತಂದ ಪಲ್ಕ…
ಎಂದು, ಇನ್ನೊಂದು ಕಿತಾ ಸಿದ್ಧನ ಮುಸುಡಿಗೆ ತಿವಿದು ತಾನು ಮನೆಕೆಲಸಕ್ಕೆ ಹೋಗುವ ಮನೆಯವರು ಕೊಟ್ಟಿದ್ದ ಒಂದಿಷ್ಟು ಸಂಪಣದಲ್ಲಿ ದೋಸೆ ಹುಯ್ಯುತ್ತಾ ಕೂತಿದ್ದ ಅವ್ವ ಚೆಲುವಮ್ಮ ಮಗಳ ಸುಮಾನದ ಮಾತುಗಳನ್ನು ಕೇಳಿಸಿಕೊಂಡು ದುಃಖ ತಡೀಲಾರದೇ –
ನಮ್ ಮಕ್ಕ ನಮ್ಮಂಗ ಆಗ್ಬರ‍್ದು
ನಮ್ಮಂಗ ಆಗ್ಬರ‍್ದು ಅಂತ
ಇಬ್ರುವ ಅಲ್ಲಿ ಇಲ್ಲಿ ಸಾತು-ಸೋತು
ಜೀ ಮ ನೇ ತೇ ಯ್ತಾ ಕೂತಿಮಿ.
ನಾಮಾದ್ರೂ ಇಲ್ಲ. ನಮ್ ಮಕ್ಕಳಾದ್ರುವ
ನಾಕು ಜನರ ಸಮುಕ್ಕ
ಬದುಕ್ಲಿ,
ಇರೋನು ಒಬ್ಬ ಗಂಡು ದಿಕ್ಕು
ಇಂಗ್ಲೀಸ್ಲೇ ಉ ದ್ದು ಕ್ಕ ಉಚ್ಚೆ ಉಯ್ಲಿ ಅಂತ.
ನಮ್ ಕಷ್ಟ ನಿಮಗ ಎಲ್ಲಿ ಬರ‍್ವಾದ್ದು ಬಾ
ರ‍್ವಾಗಗಿದ್ರ ಯಾಕ ಇಷ್ಟು ಹೊಟ್ಟೆ ಉರುಸ್ತಾ ಇದ್ದ.
ಎಂದು ಹರಿಯುತ್ತಿದ್ದ ಕಣ್ಣೀರನ್ನು ಸೀರೆ ಸೆರಗಿನಿಂದ ಒರೆಸಿಕೊಳ್ಳುತ್ತಾ ಆಕೆ ಕಲ್ಲಿನ ಮೇಲೆ ಸಂಪಣ ಉಯ್ದಳು. ಒಲೆಯಲ್ಲಿನ ಬೆಂಕಿ ರಗ ರಗಾ ಅಂತ ಉರೀತಾ ಇದ್ದರೆ, ಇತ್ತ ಸಿದ್ಧನೂ ಒಳಗೊಳಗೇ ಇನ್ನಿಲ್ಲದಂತೆ ಉರಿಯುತ್ತಾ ಇದ್ದನು. ಹಾಗೆ ಉರಿಯುತ್ತಿದ್ದ ಪರಿಣಾಮವಾಗಿ ಅವನ ಮನಸ್ಸಿನೊಳಗೆ ಆ ಪ್ಯಾಕೊಳಿ ಮೇಷ್ಟ್ರು ಕಿವಿ ಹಿಡಿದು ಮಂಡಿಗಾಲಾಕಿ ನಿಂತುಕೊಂಡು, ಸಿದ್ಧನು ಅವರ ಬೆನ್ನ ಮೇಲೆ ಪೈಡು ಪೈಡನೆ ಹೊಡೆಯುತ್ತಿದ್ದುದನ್ನು ತಡೀಲಾರದೆ ಒದ್ದಾಡುತ್ತಾ ಇದ್ದರು.
*****
… ಈಗ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವಂತಹ ಸನ್ಮಾನ್ಯ ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ. ಇವರಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವವರಿದ್ದಾರೆ. ಅವರನ್ನು ನಾವೆಲ್ಲರೂ ಚಪ್ಪಾಳೆಗಳ ಮೂಲಕ ಬರಮಾಡಿಕೊಳ್ಳೋಣ.
(ಜೋರಾದ ಚಪ್ಪಾಳೆ)
ಹಲೋ ಹಲೋ…… ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ರಾಜ್ಯ ಮಟ್ಟದ ‘ಪ್ರತಿಭೆಗೆ ಪುರಸ್ಕಾರ’ ಎಂಬ ಈ ಅರ್ಥಪೂರ್ಣ ಕಾರ್ಯಕ್ರಮದ ಹಿಂದಿರುವ ಪ್ರತಿಯೊಬ್ಬ ಪ್ರತಿಯೊಬ್ಬೊಬ್ಬರನ್ನೂ ನಾನು ಅಭಿನಂದಿಸುತ್ತಾ ನೇರವಾಗಿ ನಾನು ಮಾತಿಗೆ ಬರುತ್ತೇನೆ.
ಒಂದು ಊರಿನಲ್ಲಿ ಒಬ್ಬ ಹುಡುಗನಿದ್ದನು. ಅವನ ಹೆಸರನ್ನು ನಾನು ಕೊನೆಯಲ್ಲಿ ಹೇಳುತ್ತೇನೆ. ಸದ್ಯಕ್ಕೆ ಅವನ ಹೆಸರು ಗುಂಡ ಅಂತ ಇಟ್ಟುಕೊಳ್ಳೋಣ. ಗುಂಡ ಎಂಥ ತುಂಟ ಅಂದರೆ ಅಂ…ಥಾ ತುಂಟ. ಹುಡುಕುಬುದ್ಧಿಯವನು ಅಂದರೆ ಅಂಥಾ ಹುಡುಕುಬುದ್ಧಿಯವನು. ಅವನು ಅಷ್ಟೇ ಬುದ್ಧಿವಂತ ಹಾಗೂ ಚಾಣಾಕ್ಷ. ಅವನಿಗೆ ಶಾಲೆ ಅಂದರೆ, ಪುಸ್ತಕ ಅಂದರೆ, ಮೇಷ್ಟ್ರು, ಪಾಠ, ಪರೀಕ್ಷೆ ಅಂದರೆ ಎಳ್ಳಷ್ಟೂ ಆಗ್ತಾ ಇರಲಿಲ್ಲ. ಅವುಗಳು ಅಂದರೆ ಅವನಿಗೆ ಒಂದು ಚೂ……ರೂ ಇಷ್ಟ ಆಗ್ತಾ ಇರಲಿಲ್ಲ. ಹೇಗೆ ಆಯಸ್ಕಾಂತದ ಸಜಾತೀಯ ದೃವಗಳು ಒಂದಕ್ಕೊಂದು ಪರಸ್ಪರ ಆಕರ್ಷಿಸುವುದಿಲ್ಲವೋ ಹಾಗೆ. ಆ ಕಾರಣದಿಂದಾಗಿ ಅವನು ಅಂದರೆ ಗುಂಡ ಏನಾದರೊಂದು ಇಲ್ಲಸಲ್ಲದ ಕತೆಯನ್ನು ಕಟ್ಟಿ ಆಗಿಂದಾಗ್ಗೆ ಶಾಲೆಗೆ ತಪ್ಪಿಸಿಕೊಳ್ಳುತ್ತಲೇ ಇದ್ದ. ಹೀಗೆ ಅವನು ಆಗಿಂದಾಗ್ಗೆ ಶಾಲೆಗೆ ತಪ್ಪಿಸಿಕೊಳ್ಳುತ್ತಿದ್ದ ವಿಚಾರ ಅವನ ಅಪ್ಪ-ಅವ್ವ-ಅಕ್ಕರ ಗಮನಕ್ಕೆ ಎಂದೂ ಬಂದದ್ದೇ ಇಲ್ಲ. ಅಷ್ಟರ ಮಟ್ಟಿಗೆ ಅವನು ಯಾರ ಗಮನಕ್ಕೂ ಬಾರದ ಹಾಗೆ ತನ್ನ ಬುದ್ಧಿವಂತಿಕೆಯಿಂದ ಅದನ್ನು ನಿಭಾಯಿಸಿಕೊಂಡು ಬರುತ್ತಾ ಇದ್ದ. ಒಂದು ವೇಳೆ ಸಣ್ಣದಾಗಿ ಯಾರ ಗಮನಕ್ಕೆ ಬಂದರೂ ಅದಕ್ಕೆ ಹೇಗೆ ಶಾಸ್ತಿ ಮಾಡಬೇಕು ಅನ್ನೋ ಕಲೆಗಾರತನ ಆತನಲ್ಲಿತ್ತು. ಆದರೆ ಒಂದು ದಿನ ಈ ವಿಚಾರ ಶಾಲೆಯ ಮಾಸ್ತರರಿಂದಾಗಿ ಗುಂಡನ ಅವ್ವನಿಗೆ ತಿಳಿದು ಹೋಯಿತು! ತಿಳಿದು, ಮನೆಯಲ್ಲಿ ರಾದ್ಧಾಂತವೇ.
ಏನಾದರೇನು? ‘ಕಲಿತ ಕೈ ಕದಿಯುವುದನ್ನು ಬಿಡದು’ ಎನ್ನುವ ಗಾದೆಯ ಮಾತಿನಂತೆ ಅವನು ಹಾಗೆ, ಈ ಹಿಂದಿನಂತೆಯೇ, ಅವನು ಹೇಗೆ ಬದುಕುತ್ತಿದ್ದನೋ ಹಾಗೆಯೇ ಬದುಕುತ್ತಾ ಹೋದನು.
ಒಂದು ದಿನ ಬೆಳಿಗ್ಗೆ ಶಾಲೆಯ ಬೆಲ್ಲಾಯಿತು. ಅವನು ಆ ದಿನ ಶಾಲೆಗೆ ಹೊರಡುವಾಗಿನಿಂದ ಹಿಡಿದು ಶಾಲೆಯ ಗೇಟನ್ನು ಮುಟ್ಟುವ ತನಕ ಒಂದೇ ಯೋಚನೆಯಲ್ಲಿ ಮುಳುಗಿ ಹೋಗಿದ್ದನು. ಆ ಯೋಚನೆ ಏನು ಅಂದರೆ- ಇವತ್ತು ಏನಾದರೂ ಆಗಲಿ. ಮಾಸ್ತರರಿಗೆ ಏನಾದರೊಂದು ಸರಿಯಾದ ಕತೆಯನ್ನು ಕಟ್ಟಿ ಶಾಲೆಯಿಂದ ತಪ್ಪಿಸಿಕೊಂಡು ಬರಲೇಬೇಕು ಎಂದು. ಹೀಗೇ ಲೆಕ್ಕಾಚಾರ ಮಾಡಿ ಮಾಡಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದೇ ಅವನು ತರಗತಿಯೊಳಕ್ಕೆ ಹೋಗಿ ಕೂತುಕೊಂಡಿದ್ದನು. ನಾಲ್ಕನೇ ತರಗತಿ.
ದಿನದ ಮೊದಲನೇ ತರಗತಿ ಇಂಗ್ಲೀಷ್ ಇತ್ತು. ಅದು ಮುಗಿಯಿತು. ಆ ತರಗತಿ ಮುಗಿದದ್ದೇ ಗುಂಡ ಮುಖ್ಯೋಪಾಧ್ಯಾಯರ ಕೊಠಡಿಗೆ ಹೊಟ್ಟೆಯನ್ನು ಹಿಡಿದುಕೊಂಡು ಸುಸ್ತಾದವರಂತೆ ನಡೆಯುತ್ತಾ ಬಂದ.
ಒಳಗೆ ಬರಬೋದ ಸಾ?
(ಅವನನ್ನು ಕಂಡೊಡನೆ ಮೇಷ್ಟ್ರು ಗದರಿಕೊಂಡು)
ನೀನು ಒಳಗಡೇಗೆ ಬರೋದೂ ಬೇಡ ಸುಮ್ಮನೆ ಅದು ಇದು ಹೇಳಿ ಮನೆಗೆ ಹೋಗ್ತೀನಿ ಅನ್ನೋದೂ ಬೇಡ, ನಾನು ನಿನ್ನ ಮಾತು ಕತೆಗೆ ಮರುಳಾಗಿ ಅನುಕಂಪದಿಂದ ಹೋಗು ಅನ್ನೋದೂ ಬೇಡ. ಸುಮ್ನೆ ಹೋಗಿ ಕ್ಲಾಸಲ್ಲಿ ಕೂತ್ಕೊಂಡ್ರೆ ಗೆದ್ದೆ…. ಎಂದು ಮಾಸ್ತರರು ಕಣ್ಣನ್ನು ಕೆಂಪಗೆ ಮಾಡಿಕೊಂಡು ಗಡುಸಾಗಿ ಹೇಳಿದ್ದೇ, ಗುಂಡ ಮುಖವನ್ನು ಸಪ್ಪಗೆ ಮಾಡಿಕೊಂಡು ಬಂದು ತರಗತಿಯಲ್ಲಿ ತೆಪ್ಪಗೆ ಕುಕ್ಕರುಬಡಿದ. ಎರಡನೇ ತರಗತಿ ಗಣಿತವೂ ಮುಗೀತಾ ಬಂದಿತ್ತು. ಗುಂಡ ಯೋಚನೆ ಮಾಡಿ ಮಾಡಿ ಮೆಲ್ಲಗೆ ಮೇಡಮ್ಮು ಬೋರ್ಡಿನ ಕಡೆಗೆ ತಿರುಗಿಕೊಂಡದ್ದೇ ಕಿಟಕಿಯಿಂದ ತನ್ನ ಬ್ಯಾಗನ್ನು ಆಚೆ ಕಡೆಗೆ ಎಸೆದ. ತರಗತಿಯ ಬೆಲ್ಲಾಯಿತು. ಈಗ ಬ್ರೇಕ್‌ನ ಸಮಯ. ಶಾಲೆಯ ಕಟ್ಟಡದ ಹಿಂದಕ್ಕೆ ಬ್ರೇಕ್‌ಗೆ ಹೋಗುವವರಂತೆ ಹೋಗಿ ಕ್ಷಣದಲ್ಲಿ ತನ್ನ ಬ್ಯಾಗನ್ನು ಎತ್ತಿಕೊಂಡು ಬೇಲಿಯೊಳಕ್ಕೆ ನುಗ್ಗಿ ಒಂದೇ ಉಸುರಿಗೆ ಓಡಿದ ನೋಡಿ! ಓಡಿ ಓಡಿ ಓಡಿ ಕೊನೆಗೆ ಅವನು ತನ್ನೂರಿಗೆ ಹೋಗುವ ಚಾನೆಲ್ ರೋಡಿನಲ್ಲಿ ಏದುಸಿರು ಬಿಡುತ್ತಾ ನಿಂತುಕೊಂಡಿದ್ದನು.
ದಸ್ಸು ಬುಸ್ಸನೆ ಉಸಿರನ್ನು ಬಿಡುತ್ತಾ ಸುತ್ತಲೂ ನೋಡುತ್ತಾನೆ! ರಸ್ತೆಯ ಎಡಭಾಗಕ್ಕೆ ಸಮೃದ್ಧವಾದ ಹಚ್ಚ ಹಸುರಿನ ಗದ್ದೆ ಬಯಲು. ಬಲಭಾಗಕ್ಕೆ ಬೆಟ್ಟಪ್ಪನ ಬೆಟ್ಟದ ತಪ್ಪಲು. ಅಲ್ಲಿ ಅಲ್ಲಲ್ಲಿ ಹಿಂಡು ಹಿಂಡಾಗಿ ಮಂದಕುರಿಗಳು ಮೇಯುತ್ತಾ ಇದ್ದವು. ಅದನ್ನು ಬಿಟ್ಟರೆ ಅಲ್ಲಿ ಯಾವೊಬ್ಬ ನರಪಿಳ್ಳೆಯೂ ಕಾಣುತ್ತಿಲ್ಲ. ಅವನಿಗೆ ಸಂತಸವೋ ಸಂತಸ. ಸಂಭ್ರಮವೋ ಸಂಭ್ರಮ. ಆತ ಕುಣಿಯುತ್ತಾನೆ, ಕುಪ್ಪಳಿಸುತ್ತಾನೆ. ಹಿಂದಕ್ಕೆ ಮುಂದಕ್ಕೆ ಚಂಗು ಚಂಗನೆ ಹಾರಿ ಹಾರಿ ಅವನು ಜಿಗಿಯುತ್ತಾನೆ. ಹೌದು. ಆತ ಸಂಭ್ರಮದಲ್ಲಿದ್ದಾನೆ ನಿಜ. ಆದರೆ ಅವನು ತನ್ನ ಎಚ್ಚರಿಕೆಯಲ್ಲಿ ತಾನಿದ್ದ. ಯಾರಾದರೂ ನನ್ನನ್ನು ಕಂಡರೆ? ವಿಷಯ ಮನೆಯವರೆಗೂ ಹೋದರೆ? ಅಪ್ಪನಿಗೆ ಗೊತ್ತಾದರೆ ಹೇಗೋ ನಡೆಯುತ್ತದೆ. ಆದರೆ ಅವ್ವನಿಗೆ ಗೊತ್ತಾದರಂತೂ ಮುಗೀತು ಕತೆ. ಆಕೆ ಬಟ್ಟೆಯನ್ನು ಕುಸುರುವಂತೆ ಕುಸುರಿ ಬಿಡುತ್ತಾಳೆ. ಹೀಗಾಗಿ ಅವನು ಬಹಳ ಅಳುಕಿನಿಂದಲೇ ಶಾಲೆಯಿಂದ ತಪ್ಪಿಸಿಕೊಂಡು ಬಂದದ್ದನ್ನು ಸಂಭ್ರಮಿಸುತ್ತಲಿದ್ದನು.
ದೊಡ್ಡ ಚಾನೆಲ್‌ನಲ್ಲಿ ಧುಮುಗುಡುತ್ತಾ ರಭಸವಾಗಿ ಹರಿಯುತ್ತಿದ್ದ ನೀರನ್ನು ನೋಡಿದ್ದೇ ಆತ ಹಿಗ್ಗಿ ಹಿರೇಕಾಯಿ ಆಗಿ… ಬಟ್ಟೆಯನ್ನು ಬಿಚ್ಚಿ ಮೇಲಿನಿಂದ ಪುಳುಕ್ಕನೆ ನೀರಿಗೆ ಬಿದ್ದು ಎಷ್ಟೋ ಹೊತ್ತಿನ ತನಕ ಅವತಾರದ ಈಜುಗಳನ್ನೆಲ್ಲಾ ಈಜಿದ. ಈಜಾಡಿ ಈಜಾಡಿ ನೆತ್ತಿಗೇರಿದ್ದ ಸೂರ್ಯನನ್ನು ಕಂಡು ದಡಬೊಡನೆ ಬಟ್ಟೆ ಸಿಕ್ಕಿಸಿಕೊಂಡು ಮುಂದಕ್ಕೆ ಪ್ರಯಾಣ ಬೆಳೆಸಿದ.
ರಸ್ತೆಯಲ್ಲಿ ಯಾರೇ ಆಗಿರಲಿ ಕಣ್ಣಿಗೆ ಬಿದ್ದೊಡನೆಯೇ ಗುಡಕ್ಕನೆ ಹೋಗಿ ಕಂಡ ಕಂಡ ಮರದ ಹಿಂದೆಯೋ, ಪೊದೆಯ ಒಳಗೋ ಇಲ್ಲ, ಸಂದುಗೊಂದುಗಳಲ್ಲಿಯೋ ಬಚ್ಚಿಟ್ಟುಕೊಳ್ಳುತ್ತಲೇ ಆತ ಮೈಯೆಲ್ಲಾ ಕಣ್ಣಾಗಿಸಿ ರಸ್ತೆಯ ಮೇಲೆ ನಡೆಯುತ್ತಿದ್ದನು.
ನಡೀತಾ ಇದ್ದಾನೆ. ಕುಹೂ ಕುಹೂ ಕೂಗುವ ಕೋಗಿಲೆಯ ದನಿಯನ್ನೇ ನಾಚಿಸುವಂತೆ ಅವನು ಕೂಗುತ್ತಾ, ಹೆಂಟೇಗೊದ್ದದ ಜೊತೆ ಕೂತು ಅದರ ಕಷ್ಟ ಸುಖವನ್ನು ಕೇಳುತ್ತಾ, ಆಕಾಶದಲ್ಲಿ ಹಾರುತ್ತಿರುವ ಹಕ್ಕಿಯ ಸಾಲನ್ನು ತಿದ್ದುತ್ತಾ… ಹೀಗೆ.
ರಸ್ತೆಯ ಪಕ್ಕದಲ್ಲೇ ಒಂದಷ್ಟು ಸೈಜುಗಲ್ಲುಗಳ ಗುಡ್ಡೆ ಇತ್ತು. ಆ ಸೈಜುಗಲ್ಲುಗಳನ್ನು ಒಂದು ಮೂರ್ನಾಲ್ಕು ಮಂದಿ ಹೊತ್ತುಕೊಂಡು ಹೋಗಿ ಅಲ್ಲೇ ಸ್ವಲ್ಪ ದೂರದಲ್ಲಿ ತೋಡಿದ್ದ ಪಾಯದ ಹತ್ತಿರ ಹಾಕುತ್ತಾ ಇದ್ದಾರೆ. ಗುಂಡ ಅವರನ್ನು ಕಂಡೊಡನೆಯೇ ಬರ‍್ರನೆ ಹೋಗಿ ಮರದ ಮರೆಯಲ್ಲಿ ನಿಂತುಕೊಂಡ. ನಿಂತು ನೋಡುತ್ತಾನೆ. ತನಗೆ ಗೊತ್ತಿರುವ ಯಾರೊಬ್ಬರೂ ಅಲ್ಲಿದ್ದಂತೆ ಅವನಿಗೆ ಕಾಣಲಿಲ್ಲ. ಹಾಗಿದ್ದರೂ ಆತ, ಏನಕ್ಕೂ ಇಲ್ಲಿಂದ ಬೇಗನೆ ಜಾಗ ಖಾಲಿ ಮಾಡಿದರೆ ಒಳ್ಳೇದು ಎಂದು ಭಾವಿಸಿ ಇನ್ನೇನೋ ಅಲ್ಲಿಂದ ಓಡಬೇಕು. ಅನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆಯೇ ಪಟಕ್ಕನೆ ಮತ್ತೆ ವಾಪಸ್ಸು ಬಂದು ಮರದ ಮರೆಯಲ್ಲಿಯೇ ನಿಂತುಕೊಂಡನು. ಆತ ತನಗೆ ಅರಿವಿಲ್ಲದಂತೇ ನಡುಗುತ್ತಾ ಇದ್ದಾನೆ. ಕಣ್ಣನ್ನು ಅಗಲಿಸಿ ನೋಡುತ್ತಾನೆ! ಸೈಜುಗಲ್ಲನ್ನು ಹೊರುತ್ತಿರುವವರ ಗುಂಪಲ್ಲಿ ಅವನ ಅಪ್ಪ ಸ್ವಾಮಿಯೂ ಇದ್ದಾನೆ! ಗುಂಡ ತ ಬ್ಬಿ ಬ್ಬಾ ಗಿ ಹೋದ.
ಒಂದು ದಿನವೂ ಬಿಡುವಿಲ್ಲದೇ ಗೇದು ಗೇದು ಚಕ್ಕಳವಾಗಿರುವ ಅಪ್ಪನ ದೇಹ. ಮಟ್ಟಗುಂಜಿನಂತೆ ಕಾಣುತ್ತಿರುವ ಅವನ ತಲೆಗೂದಲು. ಮೇಕೆ ಗಡ್ಡದಂತಾ ಆತನ ಗಡ್ಡ. ಬಿಸಿಲಿನ ಹೊಡೆತಕ್ಕೆ ಬೆಂದು ಹೋದ ಅವನ ಕರಕಲು ಮುಖ. ಬರೀ ತೂತುಗಳೇ ಎದ್ದು ಎದ್ದು ಕಾಣುತ್ತಿದ್ದ ಅವನ ಬಲೀನು. ಬಣ್ಣ ಪತ್ತೆಹಚ್ಚಲಾಗದಂತಾ ಬಣ್ಣದ ಆತನ ಚಡ್ಡಿ. ಅವನ ಅಪ್ಪ ಸ್ವಾಮಿ, ಕುಂಟುತ್ತಲೇ ಕುಂಟುತ್ತಲೇ ದಪ್ಪ ದಪ್ಪ ಸೈಜುಗಲ್ಲನ್ನು ಹೊರಲಾರದೇ ಹೊರುತ್ತಾ ಇದ್ದಾನೆ.
ಮೂರ‍್ನಾಲ್ಕು ತಿಂಗಳುಗಳ ಹಿಂದೆ ಭತ್ತದ ಲೋಡನ್ನು ಇಳುಕಿಸುತ್ತಿದ್ದ ಸಂದರ್ಭದಲ್ಲಿ ಲೋಡಿಂಗ್ ಹಲಗೆಯು ಮುರಿದು ಹೋಗಿ ಬಿದ್ದು ಅಪ್ಪನಿಗೆ ಮಂಡಿ ನೋವಾಗಿತ್ತು. ಅಲ್ಲಿ ಬಿದ್ದದ್ದೇ ಬಿದ್ದದ್ದು. ಅಂದಿನಿಂದ ಅವನು ಕುಂಟುತ್ತಲೇ ನಡೆಯುತ್ತಿದ್ದ. ಅವನಿಗೆ ಮಂಡಿಯನ್ನು ಮಡಚಲಿಕ್ಕೇ ಆಗುತ್ತಿರಲಿಲ್ಲ. ಹಾಗಾಗಿ ಅವನು ಊಟಕ್ಕೆ ಕೂತುಕೊಳ್ಳುವಾಗ ತನಗೆ ನೋವಾಗಿದ್ದ ಬಲಗಾಲನ್ನು ಚಾಚಿಕೊಂಡೇ ಕುಳಿತುಕೊಳ್ಳುತ್ತಿದ್ದನು. ದೊಡ್ಡ ನೋವೇ ಆಗಿರಬೇಕೇನೋ? ಆ ಕಷ್ಟದಲ್ಲೂ ಆತ ಒಂದು ದಿನವೂ ಉಳಿದುಕೊಳ್ಳದೇ ಅದು ಇದು ಕೆಲಸಗಳನ್ನು ಮಾಡಿಕೊಂಡೇ ಬರುತ್ತಿದ್ದಾನೆ.
(ಅವ್ವ ಸೀರೆ ಸೆರಗಿನಿಂದ ಕಣ್ಣೀರನ್ನು ಒರಸುತ್ತಲೇ)
ಬನ್ನಿ ಆಸ್ಪತ್ರಗಾರ ತರ‍್ಸಮು.
ನಿಮ್ ಕಷ್ಟನ ನನ್ನಿಂದ ನೋಡಕಾಯ್ತಿಲ್ಲ.
ಅದೆಂತದೋ ಎಕ್ಸ್ರಾ ಅನ್ನದುನ್ನ ಮಾಡ್ಸುದ್ರ ಒಳ್ಗ ಏನಾಗಿದ್ದು ಅಂತ ಗೊತ್ತಾದ್ದಂತ
ಬನ್ನಿ ಹೋಗಮು…
ಬ್ಯಾಡ ಬ್ಯಾಡ
ಆಸ್ಪತ್ರ ಅಂತಂದ್ರ ಸುಮ್ನಾದದ?
ಎಷ್ಟ್ ಕರ್ಚಾದ್ದೋ ಏನೋ?
ಅದೇ ದುಡ್ಡಿದ್ರ ಏನುಕ್ಕಾರ ಆಯ್ತದ.
ಹೆಂಗೋ ನನ್ ಹಣಲಿ ಬರ‍್ದಂಗ ಆಗ್ಲಿ ಬುಡು.
ಅವ್ವನಿಗೆ ಮನೆಯಲ್ಲಿ ದಿನಕ್ಕೆ ಒಂದು ಸಲವಾದರೂ ಆಸ್ಪತ್ರೆಯ ಮಾತನ್ನು ಆಡದೇ ಹೋದರೆ ತಿಂದ ಹಿಟ್ಟು ಜೀರ್ಣವಾಗುತ್ತಿರಲಿಲ್ಲವೇನೋ? ಅಪ್ಪನೋ? ಆಸ್ಪತ್ರೆಯ ಮಾತೆತ್ತಿದರೆ ಸಾಕು ಅದು ಇದು ಹೇಳಿ ಅವಳ ಬಾಯಿಯನ್ನು ಮುಚ್ಚಿಸಿ ಬಿಡುತ್ತಿದ್ದ. ಅವ್ವ ಅದೆಷ್ಟೇ ಕಷ್ಟವಾದರೂ ಸರಿ ದಿನಾ ರಾತ್ರಿ ಕಣ್ಣೀರನ್ನು ಹಾಕುತ್ತಲೇ ಕೇರೇಹಾವಿನ ತುಪ್ಪವನ್ನು ಅಪ್ಪನ ಮಂಡಿಗೆ ಹಚ್ಚುವುದನ್ನು ಮಾತ್ರ ಮರೆಯುತ್ತಿರಲಿಲ್ಲ.
ಏಯ್ ಕುಂಟ
ಹೊತ್ಕೊಂಡ್ ಬಾ ಬೇಗ ಬೇಗ.
ಒಂದೊಂದು ಕಲ್ ತರೋಕೆ ಒಂದೊಂದು ಗಂಟೆ ಮಾಡ್ತಿಯಲ್ಲ ?
ನಾಕು ಜನರ ಸಮುಕ್ಕೆ ಗೇಯೋಕೆ ಆಗದಿದ್ದ ಮೇಲೆ
ತೆಪ್ಪಗೆ ಮನೇಲರ‍್ಬೇಕು…
ಎಂದು ಯಾರೋ ಅಪ್ಪನಿಗೆ ಗದರುತ್ತಿದ್ದುದನ್ನು ಕಣ್ಣಾರೆ ಕಂಡ ಗುಂಡನಿಗೆ ಹೃದಯ ತುಂಬಿ ಬಂತು. ಆತ ಅಪ್ಪನನ್ನು ನೋಡುವ ಧೈರ್ಯಸಾಲದೇ ತಲೆ ಬಗ್ಗಿಸಿಕೊಂಡ. ಆತ ಅಪ್ಪನನ್ನು ಯಾರೋ ಬಾಯಿಗೆ ಬಂದಂತೆ ಬಯ್ಯುತ್ತಿರುವುದನ್ನು ಕೇಳಲಾಗದೇ ತನ್ನ ಎರಡೂ ಕಿವಿಗಳಿಗೆ ಬೆರಳುಗಳನ್ನು ಒತ್ತಿ ಹಿಡಿದುಕೊಂಡ. ಆತನಿಂದ ಎಷ್ಟೋ ಹೊತ್ತಿನ ತನಕ ಕಣ್ಣೀರು ಹರಿದು ತೊಟ್ಟಿಕುತ್ತಿತ್ತು. ಮತ್ತೆ ಸ್ವಲ್ಪ ಹೊತ್ತು ಬಿಟ್ಟು ನೋಡುತ್ತಾನೆ! ಅಪ್ಪ ಹೊರಲಾರದೇ ಸೈಜುಗಲ್ಲನ್ನು ಹೊರುತ್ತಲೇ ಇದ್ದಾನೆ. ದೂರದಲ್ಲಿ ಎಲ್ಲೋ ಆದ ಬಸ್ಸಿನ ಹಾರನ್ನನ್ನು ಕೇಳಿದ ಗುಂಡ ಎಚ್ಚೆತ್ತುಕೊಂಡು ಅದರಿಂದ ಹೊರಬಂದ. ಸಮಯ ಆಗುತ್ತಿದೆ. ವಿ.ಎಂ.ಎಸ್ ಬಸ್ಸು ಸಂಜೆ ಊರನ್ನು ತಲುಪುವಷ್ಟರ ಹೊತ್ತಿಗೆ ಸರಿಯಾಗಿ ನಾನು ಊರಿನ ಛತ್ರೀ ಮರವನ್ನು ತಲುಪಬೇಕು. ಎಂದುಕೊಳ್ಳುತ್ತಾ ಅಪ್ಪ ಮತ್ತು ಆ ಕೆಲಸದಾಳುಗಳು ಕಲ್ಲನ್ನು ಎತ್ತಿಕೊಂಡು ಇವನಿಗೆ ಬೆನ್ನುಮಾಡಿದ್ದೇ ತಡ, ಅಲ್ಲಿಂದ ಓಡಿ ಮುಂದಕ್ಕೆ ನಡೆದನು.
ನಡೆಯುತ್ತಾ ಇದ್ದಾನೆ ನಡೀತಾ ಇದ್ದಾನೆ. ಈ ಹಿಂದಿನ ಹಾಗೆಯೇ ರಸ್ತೆಯಲ್ಲಿ ಯಾರನ್ನಾದರೂ ಕಂಡೊಡನೆಯೇ ಅಲ್ಲಿ ಇಲ್ಲಿ ಅವಿತುಕೊಳ್ಳುತ್ತಾ, ಅವರು ಮರೆಯಾದರೆ ಸಾಕು ಮತ್ತೆ ನಡೆಯುತ್ತಾ, ಓಡುತ್ತಾ ಹೀಗೆ. ಆದರೆ ಅವನ ಕಾಲುಗಳಲ್ಲಿ ಈ ಮುಂಚಿನ ಗೆಲುವಿರಲಿಲ್ಲ. ಅವನ ಕಣ್ಣುಗಳಲ್ಲಿ ಈ ಮುಂಚಿನ ಉತ್ಸಾಹವಿರಲಿಲ್ಲ. ಅವನ ದೇಹ-ಮನಸ್ಸುಗಳಲ್ಲಿ ಈ ಮುಂಚಿನ ಹುರುಪಾಗಲೀ ಯಾವ ಸಂಭ್ರಮವಾಗಲೀ ಇಲ್ಲವೇ ಇರಲಿಲ್ಲ. ಅವನ ಮನಸ್ಸಿನ ತುಂಬೆಲ್ಲಾ ಕುಂಟುತ್ತಾ ಕುಂಟುತ್ತಾ ಸೈಜುಗಲ್ಲನ್ನು ಹೊರಲಾರದೇ ಹೊರುತ್ತಿದ್ದ ಅವನ ಅಪ್ಪನೇ ತುಂಬಿ ಹೋಗಿದ್ದನು. ಯಾರೋ ಒಬ್ಬ ಅವನ ಅಪ್ಪನನ್ನು ಬೈಯ್ಯುತ್ತಿದ್ದ ಮಾತುಗಳು ಅವನ ತಲೆಯೊಳಗೆ ಪ್ರತಿಧ್ವನಿಸುತ್ತಲೇ ಇದ್ದವು.
ಸೂರ್ಯ ತಣ್ಣಗಾಗುತ್ತಿದ್ದಾನೆ. ವಾತಾವರಣ ತಂಪಾಗುತ್ತಿದೆ. ಊರು-ಮನೆ ಹತ್ತಿರ ಹತ್ತಿರವಾಗುತ್ತಿದೆ. ಗುಂಡ ಚಾನೆಲ್ ರಸ್ತೆಯ ಏರಿಯನ್ನು ಇಳಿದು ತನ್ನೂರಿನ ಅಲ್ಲೊಂದು ಇಲ್ಲೊಂದು ಮನೆಗಳಾಗಿದ್ದ ಹೊಸ ಬಡಾವಣೆಗೆ ಪ್ರವೇಶಿಸಿದನು. ಇದು ಅವನ ಊರು, ಸಹಜವಾಗಿ ಅಲ್ಲಿನ ಎಲ್ಲರೂ ಅವನಿಗೆ ಹೆಚ್ಚೂ ಕಡಿಮೆ ಪರಿಚಯವಿದ್ದವರೇ ಆಗಿದ್ದ ಕಾರಣ ಇನ್ನೂ ಎಚ್ಚರಿಕೆಯಿಂದ ಆತ ನಡೆಯುತ್ತಾ ಹೋಗುತ್ತಿದ್ದಾನೆ.
ಅಲ್ಲಿ ಇಲ್ಲಿ ನಾಕುಮನೇಲಿ
ಮುಸುರೆ ತಿಕ್ಕೋಳು ನೀನು
ಗೇದರೆ ಉಂಟು ಇಲ್ಲದಿದ್ದರೆ ಇಲ್ಲ.
ಅಂತದ್ದರಲ್ಲಿ ಮಗನನ್ನು ಸ್ಕೂಲಿಗೆ ಹಾಕಿದ್ದೀಯಾ
ಅದೂ ಇಂಗ್ಲೀಷು ಮೀಡಿಯಂಗೆ
ನಿನಗೆ ಕುಡುಜಂಭ ಎಷ್ಟಿರಬೇಡ?
ಮಕ್ಕಳನ್ನ ಅದೂ ಈ ಕಾಲ್ದಲ್ಲಿ ಇಂಗ್ಲೀಷು ಮೀಡಿಯಂಲಿ ಓದ್ಸೋದು
ಅಂದ್ರ, ಬಟ್ಟನ ಜಾಲುಸ್ದಂಗ ಅನ್ಕಂಡಿದಯಾ?
ಹೀಗಾಡ ಮುದ್ಕ ಎಂದಿದ್ರೂ ಬದ್ಕ
ಅನ್ನೋ ಹಾಗೆ
ನಾನೂ ನೋಡ್ತಿನಿ ನಿನ್ನ,
ಅದೆಷ್ಟು ವರ್ಷ ಓದುಸ್ದಯಿ ಅಂತ
ಅವನೂ ಓದಿ ಏನ್ ಹಾರಾಕ್ದನು ಅಂತಾ.
ಒಂದು ದೊಡ್ಡ ಭರ್ಜರಿಯಾದ ಮನೆ. ಅದಕ್ಕೆ ತಕ್ಕನಾದ ದೊಡ್ಡ ಕಾಪೌಂಡು, ದೊಡ್ಡ ಗೇಟು. ಆ ಕಾಪೌಂಡಿನ ಒಳಗಡೆ ಗೇಟಿನ ಪಕ್ಕದಲ್ಲೇ ಯಾರೋ ಯಾರನ್ನೋ ಗಟ್ಟಿಯಾಗಿ ರೇಗುತ್ತಿರುವ ಸದ್ದು ಗುಂಡನ ಕಿವಿಗೆ ಬಿತ್ತು. ಮುಸುರೆ ತಿಕ್ಕೋಳು, ಇಂಗ್ಲೀಷ್ ಮೀಡಿಯಮ್ಮು ಅನ್ನೋ ಮಾತುಗಳು ಅವನ ಕಿವಿಗೆ ಬಿದ್ದದ್ದೇ ಆತ ಜಾಗರೂಕನಾಗಿ ಗೇಟಿನ ಕಿಂಡಿಯಲ್ಲಿ ಕಾಪೌಂಡಿನ ಒಳಗಡೆಗೆ ಇಣುಕಿ ನೋಡುತ್ತಾನೆ! ಯಾರೋ ಒಬ್ಬಾಕೆ ನಾಜೂಕಿನವಳು ತೂಗುವ ಕುರ್ಚಿಯ ಮೇಲೆ ದಿನಪತ್ರಿಕೆಯನ್ನು ಹಿಡಿದುಕೊಂಡು ಯಾರನ್ನೋ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾಳೆ.
ಮಗನನ್ನು ಸ್ಕೂಲಿಗೆ ಸೇರಿಸಬೇಕು
ಅಂತ ಸಾಲ ಕೇಳ್ದೆ
ಕೇಳೋವಾಗ ಏನಂದೆ ನೀನು?
ತಿಂಗಳೂ ತಿಂಗಳೂ
ಒಂದೊಂದಷ್ಟು ಹಿಡಿಸಿ ಹಿಡಿಸಿ ಸಾಲ ತೀರುಸ್ತೀನಿ ಅಂದೆ
ಹೌದೋ ಅಲ್ವೋ ?
ಹೌದು ಅಮ್ಮೋರೆ.
ಹ್ಞಾಂ ಈಗ ನೋಡುದ್ರೆ ತಿಂಗಳಿಗೆ ಒಂದೊಂದು ಪುರಾಣ ಹೊಡೀತಿದೀಯ.
ಹೋದ ತಿಂಗಳು ಮಗಳು ಮೈನೆರೆದಾವ್ಳೆ ಖರ್ಚಿದೆ ಹಿಡ್ಕೋಬೇಡಿ ಅಂದೆ.
ಈಗ ನನ್ನ ಗಂಡನನ್ನು ಆಸ್ಪತ್ರೆಗೆ
ತೋರುಸ್ಬೇಕು ಅಂತಿದಿಯಾ
ನಾಲ್ಗೆನಾ ಎಕ್ಡನಾ ನಿಂದು?
ನನ್ನ ಸಾಲ ತೀರೋರ‍್ಗೆ ಮಾತ್ರ ನಿಂಗೆ ನಮ್ಮನೇಲಿ ಕೆಲ್ಸ
ಆ ಮೇಲೆ ನೀನು ಕೆಲಸಕ್ಕೆ ಬರೋದು ಬೇಡ.
ಗುಂಡನಿಗೆ ಗೇಟಿನ ಕಿಂಡಿಯಿಂದ ಕಾಣುತ್ತಿದ್ದದ್ದು ಕೇವಲ ಆ ನಾಜೂಕಿನವಳು ಮಾತ್ರ. ಆಕೆ ಯಾರನ್ನೋ ಬಯ್ಯುತ್ತಿದ್ದಾಳೆ ಎಂದರೆ ಅಲ್ಲೇ ಅವಳ ಪಕ್ಕದಲ್ಲೇ ಮತ್ತಾರೋ ಇದ್ದಿರಲೇಬೇಕು. ಗುಂಡ ಈಗ ತಾನು ನಿಂತಿದ್ದ ಜಾಗವನ್ನು ಬದಲಾಯಿಸಿ ಒಳಗೆ ನೋಡುತ್ತಾನೆ. ರಾಶಿ ರಾಶಿ ಬಟ್ಟೆಗಳ ಮಧ್ಯೆದಲ್ಲಿ ಯಾರೋ ಒಬ್ಬರು ಬಟ್ಟೆ ಒಗೆಯುತ್ತಾ ಕೂತಿದ್ದಾರೆ! ಸರಿಯಾಗಿ ನೋಡುತ್ತಾನೆ. ರಾಶಿ ರಾಶಿ ಬಟ್ಟೆಗಳ ಮಧ್ಯೆದಲ್ಲಿ ಕೂತುಕೊಂಡು ಬಟ್ಟೆ ಒಗೆಯುತ್ತಾ ಕೂತಿರುವುದು ಬೇರೆ ಯಾರೂ ಅಲ್ಲ ಅವನ ಅವ್ವ, ಚೆಲುವಮ್ಮ!
ಅವ್ವ ಕಣ್ಣಿಗೆ ಬಿದ್ದದ್ದೇ ಗುಂಡನ ಎದೆಯೊಳಗೆ ಎಂದೂ ಇಲ್ಲದ ಸಂಕಟ ಅನ್ನೋದು ಆಗಿ ಆತ ಮೂರ್ಛೆ ಹೋದವರಂತೆ ಕುಸಿದು ನೆಲದ ಮೇಲೆ ಗುಕ್ಕನೆ ಕುಳಿತುಕೊಂಡ.
ಅಯ್ಯಯ್ಯಯ್ಯೋ ಹಾಗನ್ಬೇಡಿ ಅಮ್ಮೋರೆ
ನಿಮ್ಮ ದಮ್ಮಯ್ಯ ಅಂತಿನಿ
ನಿಮ್ಮ ಪಾದ ನನ್ನ ತಲೇ ಮೇಲೆ.
ನಿಮ್ಮ ಕಾಲು ಹಿಡ್ಕೋತೀನಿ
ಕೆಲಸಕ್ಕೆ ಬರಬೇಡ ಅಂತ ಮಾತ್ರ ಯೋಳ್ಬೇಡಿ.
ನಿಮ್ಮಂತೋರುನ್ನ ನಂಬಿನೇ ನಾಮು ಜೀವ್ನ ಮಾಡ್ತಾ ಆಮಿ
ನೀವೆ ಹೀಗಂದ್ರ ನಮ್ಮ ಬದ್ಕು ನಿಂತೋಗ್ಬುಡುತ್ತಾ…
ಅವ್ವ ಬಟ್ಟೆ ಒಗೆಯುವುದನ್ನು ಬಿಟ್ಟು ಆ ನಾಜೂಕಿನವಳ ಕಾಲನ್ನು ಹಿಡಿದುಕೊಳ್ಳಲು ಹೋಗುತ್ತಿದ್ದ ದೃಶ್ಯವನ್ನು ಗುಂಡ ಕಾಣಲಿಲ್ಲವಷ್ಟೇ. ಅದನ್ನು ಕಂಡಿದ್ದರೆ ಅವನಿಗೆ ಇನ್ನೂ ಏನೇನು ಆಗುತ್ತಿತ್ತೋ ಏನೋ?
ಮನೆಯ ನಾಯಿ ಒಂದೇ ಸಮನೆ ಬೊಗಳಲು ಶುರುಮಾಡಿಕೊಂಡಿತು. ಗುಂಡ ಎದ್ದು ನಡೆಯಲಾಗದೇ ನಡೆಯತೊಡಗಿದ. ವಿ.ಎಂ.ಎಸ್ ಬಸ್ಸು ತನ್ನ ಊರಿನ ಛತ್ರೀ ಮರದ ಸ್ಟಾಪನ್ನು ತಲುಪುವುದನ್ನೇ ಯಾರಿಗೂ ಕಾಣದಂತೆ ಅಲ್ಲಿ ಇಲ್ಲಿ ಕಾದು ಕುಳಿತು, ಅದು ಬಂದದ್ದೇ ಎಂದಿನಂತೆ ಬಸ್ಸಿನಲ್ಲಿ ಬಂದಂತೇ ಬಂದು ಮನೆಯನ್ನು ತಲುಪಿದನು.
ಮನೆಗೆ ಬಂದು ತಲುಪುತ್ತಾನೆ ಅವನಿಂದ ಏನೊಂದೂ ಮಾತಿಲ್ಲ ಕತೆಯಿಲ್ಲ. ಅವನ ಮುಖದಲ್ಲಿ ಒಂದು ಚೂರಾದರೂ ಲವಲವಿಕೆ ಅನ್ನೋದೇ ಕಾಣುತ್ತಿಲ್ಲ. ಮನೆಗೆ ತಲುಪಿದ್ದೇ ಅಪ್ಪ ಅವ್ವ ಇದ್ದರೇ ಒಂದು ತರನಾದ ಆಟ, ಅವರು ಇಲ್ಲದೇ ಹೋದಾಗ ಇನ್ನೊಂದು ತರದ ಆಟ ಆಡುತ್ತಿದ್ದ ಗುಂಡ ಇಂದು ಅಕ್ಕ ಕೆಣಕಿ ಕೆಣಕಿ ಮಾತನಾಡಿಸಿದರೂ ಕ್ಯಾರೇ ಅನ್ನದೆ ಸಪ್ಪೆಯಾಗಿ ಇದ್ದಾನೆ. ಅವನನ್ನು ನೋಡಿದ ಅವ್ವ ಚೆಲುವಮ್ಮ ಇದು ಅವನ ಎಷ್ಟನೇ ಅವತಾರವೋ ಏನೋ ಎಂದುಕೊಂಡು ತನ್ನಷ್ಟಕ್ಕೆ ತಾನು ಕೆಲಸದಲ್ಲಿ ತೊಡಗಿದ್ದಳು.
ಎಲ್ಲರೂ ಊಟ ಮಾಡಿ ಮಲಗಿದರು.
ಗುಂಡನಿಗೆ ನಿದ್ರೆಯೇ ಬರುತ್ತಿಲ್ಲ. ಆತ ಏನೇನೋ ಯೋಚಿಸುತ್ತಾ ಎಚ್ಚರವಾಗೇ ಇದ್ದಾನೆ. ನಿದ್ದೆ ತಾನೇ ಅವನಿಗೆ ಎಲ್ಲಿಂದ ಬರಬೇಕು? ಅವನ ಮನಸ್ಸಿನ ತುಂಬೆಲ್ಲಾ ಅವನ ಅಪ್ಪ ಅಮ್ಮರೇ ತುಂಬಿಹೋಗಿದ್ದಾರೆ. ಅವನಿಗೆ ಏನನ್ನಿಸಿತೋ ಏನೋ? ಮೆಲ್ಲಗೆ ಎದ್ದು ಮಲಗಿದ್ದ ಅಪ್ಪನನ್ನೇ ಕಣ್ತುಂಬಿಕೊಳ್ಳುತ್ತಾ ಅಪ್ಪನ ಮಟ್ಟಗುಂಜಿನಂತಿದ್ದ ತಲೆಗೂದಲ ಮೇಲೆ ಕೈಯಾಡಿಸುತ್ತಾನೆ. ಅವನ ಚಕ್ಕಳವಾದ ದೇಹ. ಅವನ ನೋವಿನ ಕಾಲು. ಇತ್ತ ತನ್ನ ಮಗ್ಗುಲಲ್ಲೇ ಮಲಗಿದ್ದ ಅವ್ವನನ್ನು ನೋಡುತ್ತಾನೆ. ಅವಳನ್ನು ಕಂಡದ್ದೇ ಅವನ ಕಣ್ಣಿನಿಂದ ನೀರು ದಳದಳನೆ ಹರಿಯಲು ಪ್ರಾರಂಭಿಸಿತು.
ಏಯ್ ಕುಂಟಾ
ನಾಕು ಜನರ ಸಮುಕ್ಕೆ ಗೇಯೋಕೆ ಆಗದಿದ್ದ ಮೇಲೆ ತೆಪ್ಪಗೆ ಮನೇಲಿರಬೇಕು.
ಹಾಗನ್ಬೇಡಿ ಅಮ್ಮೋರೆ
ನಿಮ್ಮ ಪಾದ ನನ್ನ ತಲೇ ಮೇಲೆ
ನಿಮ್ಮ ಕಾಲು ಹಿಡ್ಕೋತೀನಿ
ಆತನ ತಲೆಯೊಳಗೊ ಬರೀ ಇದೇ ತುಂಬಿ ಹೋಗಿದ್ದವು. ಗುಂಡ ಎದ್ದು ಕತ್ತಲಲ್ಲಿ ತಡವರಿಸುತ್ತಾ ಅಡುಗೆ ಕೋಣೆಗೆ ಹೋದ. ಅಲ್ಲಿ ಇಲ್ಲಿ ಮೆಲ್ಲಗೆ ತಡಕಾಡಿ ಒಲೆಯ ಮೇಲಿದ್ದ ಬೆಂಕಿ ಪೊಟ್ಟಣವನ್ನು ಎತ್ತಿಕೊಂಡು ಕಡ್ಡಿ ಕೀರಿದ. ದೀಪ ಅಲ್ಲೇ ಒಂದು ಮೂಲೆಯಲ್ಲಿತ್ತು. ಅದಕ್ಕೆ ಬೆಂಕಿಯನ್ನು ಹತ್ತಿಸಿದ. ಮನೆಯೊಳಗೆ ಸಣ್ಣಗೆ ಬೆಳಕಾಯಿತು. ಅಪ್ಪನ ಜಾಗಟೆಯನ್ನು ನೇತು ಹಾಕುವ ಮೊಳೆಯಲ್ಲಿ ನೇತುಹಾಕಿದ್ದ ಇಸ್ಕೂಲಿನ ಚೀಲವನ್ನು ರೆಪ್ಪೆ ಮಿಟುಕಿಸದೇ ನೋಡುತ್ತಾ, ಹೋಗಿ ಅದನ್ನು ಎತ್ತಿಕೊಂಡು ಬಂದ. ಬಂದು ದೀಪದ ಬೆಳಕಿನಲ್ಲಿ ಪುಸ್ತಕವನ್ನು ಹಿಡಿದು ತಲೆಬಗ್ಗಿಸಿ ಕೂತುಕೊಂಡ.
ಆ ಗುಂಡ ಬೇರೆ ಯಾರೂ ಅಲ್ಲ, ಅದು ನಾನೇ.
ಎಲ್ಲರಿಗೂ ಧನ್ಯವಾದಗಳು.
(ಚಪ್ಪಾಳೆಯ ಸದ್ದು ಆ ಬಯಲು ರಂಗಮಂದಿರದಲ್ಲೆಲ್ಲಾ ತುಂಬಿಕೊಂಡಿತು.)
ಡಾ. ದಿಲೀಪ್ ಎನ್ಕೆ ಚಾಮರಾಜನಗರದ ಕೊಳ್ಳೇಗಾಲದವರು. ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾ ಸಂಕಲನ), ಚೆಗ್ಗಿ- ಮಾರಿಕುಣಿತದ ಸೊಲು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. “ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು” ಇವರ ಪಿ.ಎಚ್.ಡಿ ಮಹಾಪ್ರಬಂಧ