ವರ್ಷದ ಮೊದಲ ಮಳೆ ಎಂದರೆ…

ವರ್ಷದ ಮೊದಲ ಮಳೆ ಎಂದರೆ…
ಅಟ್ಟ ಸೇರಿರುವ ಅಡಕೆ ಗೋಣಿ
ಬೆಲೆಯ ಏರು ಇಳಿವು
ಕೊಂಬೆ ತುದಿಯಲ್ಲಿ ನಗುವ ಮಾವಿನಕಾಯಿ
ನಡುನಡುವೆ ಇಣುಕುವ ಹಣ್ಣು ಹಣ್ಣಿನ ಕಣ್ಣು
ತಾಳಮದ್ದಲೆಯ ನೆನಹು
ತಲೆಹಣ್ಣಾದ ಅಜ್ಜನಿಗೆ

ಅಜ್ಜಿಗಂತೂ ಕೌದಿಯ ಧ್ಯಾನ
ಸುತ್ತಮುತ್ತ ಹರಡಿಕೊಂಡ
ತುಂಡು ತುಂಡು ಬಟ್ಟೆಗಳು
ಹರಿದು ಚೆಲ್ಲಾಪಿಲ್ಲಿಯಾದ ಬಟ್ಟೆ
ಚೂರು ಚೂರುಗಳಲ್ಲಿ
ಮಗ ಮಗಳು ಮೊಮ್ಮಕ್ಕಳ
ಮಮಕಾರದ ಸಮಗ್ರತೆ
ಹರಿದ ಬಟ್ಟೆಯ ಬಾಲ್ಯ
ತಡಕಾಡಲ್ಪಡುತ್ತದೆ ಒದ್ದೆಗಣ್ಣಿನಲಿ

ಬಿಸಿ ಬಿಸಿ ಬಜ್ಜಿ
ಗುಟುಕು ಚಹಾ
ಐವತ್ತಾರನೇ ನಂಬರಿನ
ಬಸ್ಸು ಹಿಡಿದು
ಆಫೀಸಿನಿಂದ ಮನೆ ತಲುಪಿದ
ಮಗನ ಪಾಲಿಗೆ

ಸೊಸೆಗೆ ಅಡುಗೆಕೋಣೆ
ಹಪ್ಪಳ ಸಂಡಿಗೆಗಳ
ಕುರುಕುರು ಕಿರಿಕಿರಿ
ಮಾವಿನಮಿಡಿ ಉಪ್ಪಿನಕಾಯಿಯ ನೆಪದಲ್ಲಿ
ಭರಣಿಯೊಳತುಂಬಿಸಿಡುತ್ತಾಳೆ
ಮುಂದಿನೊಂದು ವರ್ಷದ ದೂರಾಲೋಚನೆಯನ್ನು

ಚಳಿ ಮತ್ತು ಬಿಸಿ
ಒಳಕೋಣೆಯಲ್ಲಿರುವ ವಿರಹಿ ಮಂಚ
ಗೋಡೆ ಪಟದಲ್ಲಿ ನಗುವ ರಾಧೆ ಮತ್ತು ಕೃಷ್ಣ
ಹದಿಹರೆಯ ಕಳೆಯದ
ಎಳೆಯ ಮೊಮ್ಮಗಳಿಗೆ