Advertisement
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಅದರೊಳಗೇನಿದೆ ಎನ್ನುವುದು ಒಳಹೋದವರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಒಳಗೆ ಹೋದವರು ಎಬ್ಬಿಸುತ್ತಿದ್ದ ನಗು ಹೊರಗೆ ಕೂತ ಹೊಸಬರಲ್ಲಿ ಮೂಡಿಸುತ್ತಿದ್ದದ್ದು ವಿಸ್ಮಯವನ್ನು, ಕುತೂಹಲವನ್ನು. ನಟರಾಜ ಕೊಟ್ಟಿದ್ದ ಐಡಿಯಾ ಫಲ ಕೊಡುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಮಹಾನಗರದ ಮರಿಮೊಮ್ಮಗನಂತಿತ್ತು ಭರತಪುರ. ಅಂಥ ಪುಟ್ಟ ಪಟ್ಟಣದ ಜನರನ್ನಷ್ಟೇ ನಗಿಸಿ, ಇದ್ದ ಸಾಲವನ್ನು ಏಳೆಂಟು ತಿಂಗಳುಗಳಲ್ಲಿಯೇ ತೀರಿಸಿ, ಸ್ಮೈಲು ಬೀರಿದ್ದ ಇಸ್ಮಾಯಿಲ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಇಸ್ಮಾಯಿಲನ ಸ್ಮೈಲಿಂಗು ಮಹಲು” ನಿಮ್ಮ ಈ ಭಾನುವಾರದ ಓದಿಗೆ

ಗಡಿಯಾರದ ಮುಳ್ಳುಗಳು ಸಂಜೆ ಐದರಾಚೆ ಬಿದ್ದಾಗ ಭರತಪುರದ ಪೇಟೆ ಜೀವ ಪಡೆದುಕೊಂಡಿತು. ದಿನದಲ್ಲಿದು ಮೂರನೇ ಸಲ. ಬೆಳಗ್ಗೆ ಎಂಟು ಒಂಭತ್ತಕ್ಕೆಲ್ಲಾ ಮೈಮುರಿದು ಎದ್ದುನಿಲ್ಲುವ ಭರತಪುರ ಹತ್ತು ಗಂಟೆಯ ನಂತರ ಮೈಚಾಚಿ ಬಿದ್ದುಕೊಳ್ಳುತ್ತದೆ. ಮತ್ತೆ ಎಚ್ಚರವಾಗುವುದು ಮಧ್ಯಾಹ್ನ ಒಂದು ಗಂಟೆಗೆ. ಊಟ ಮುಗಿಸಿ ಮಲಗಿದರೆ ಐದು ಗಂಟೆ ದಾಟುತ್ತಿದ್ದಂತೆ ಮತ್ತೆ ಜೀವೋನ್ಮಾದ. ಹೀಗೆ ದಿನದ ಮೂರನೆಯ ಜೀವಕಳೆ ಪ್ರಾಪ್ತಿಯಾದ ಎರಡು ಮೂರು ಗಂಟೆಗಳಲ್ಲಿ ನಿರ್ವಾಣ ಸ್ಥಿತಿಗೆ ಸಾಗಿದಂತೆ ಇದ್ದುಬಿಡುವ ಭರತಪುರ ಮತ್ತೆ ಎದ್ದುನಿಲ್ಲಬೇಕಾದರೆ ಮರುದಿನದ ಬೆಳಗು ಹರಿಯಬೇಕು.

ವಾಹನಗಳ ಓಟ, ಜನರ ನಾಗಾಲೋಟ, ಮನೆಸೇರುವ ಧಾವಂತ, ತಿನ್ನುವ ಚಪಲ, ಕೆಲಸ ಮುಗಿಸಿ ಬಂದವರ ಸಂತೃಪ್ತಿಯ ನಗು, ಕೆಲವರ ಮುಖದ ನಿರಾಸೆ ಇವೆಲ್ಲವನ್ನೂ ಹೊತ್ತುನಿಂತಿತ್ತು ಭರತಪುರ. ಇಂತಹ ಬಹುಬಗೆಯ ಭಾವನರ್ತನದ ಮಧ್ಯೆ ಚಂದದ ನಗುವೊಂದನ್ನು ಹೊತ್ತುಕೊಂಡು ಬಂದ ನಟರಾಜ ಇಸ್ಮಾಯಿಲನ ಸ್ಮೈಲಿಂಗು ಮಹಲಿನ ಮೆತ್ತನೆಯ ಕುರ್ಚಿಯಲ್ಲಿ ಕುಳಿತ. ಮೂಲೆಯಲ್ಲಿ ಎತ್ತರಕ್ಕೆ ಇಡಲಾಗಿದ್ದ ಟಿ.ವಿ. ಏನೋ ಬೊಬ್ಬೆ ಹೊಡೆದುಕೊಳ್ಳುತ್ತಿತ್ತು. ಮುಖಕ್ಕೆ ಪೇಪರ್ ಅಡ್ಡ ಹಿಡಿದುಕೊಂಡು ಓದುತ್ತಿದ್ದ ಇಸ್ಮಾಯಿಲ ಇವನನ್ನು ಕಂಡವನೇ ಮಾಮೂಲಿ ನಗೆ ಬೀರಿದ.

ಅಷ್ಟರಲ್ಲಿ ಮಹಲಿನೊಳಗಿಂದ ಹೊರಬಂದ ಒಬ್ಬ ವ್ಯಕ್ತಿ “ಚೆನ್ನಾಗಿದೆ ಇಸ್ಮಾಯಿಲ ನಿನ್ನ ಮಹಲು. ಭಾರ ಹೊತ್ತುಕೊಂಡು ಬಂದಿದ್ದೆ. ಈಗ ಒಂದಷ್ಟು ಹಗುರಾದೆ ನೋಡು” ಎಂದವನು, “ಎಷ್ಟು?” ಎಂದು ಕೇಳಿ, ಇಸ್ಮಾಯಿಲ ಕೇಳಿದ್ದಕ್ಕಿಂತ ಹತ್ತು ರೂಪಾಯಿ ಹೆಚ್ಚೇ ಕೊಟ್ಟುಹೋದ.

ಮುಗುಳುನಗುತ್ತಾ ಆ ವ್ಯಕ್ತಿಯ ಕಡೆಗೇ ನೋಡುತ್ತಿದ್ದ ನಟರಾಜ “ಇಸ್ಮಾಯಿಲ, ಯಾರೋ ಇವರು? ಈ ಊರಿನಲ್ಲಿ ಇವರನ್ನು ಕಂಡಂತಿಲ್ಲವಲ್ಲ” ಎಂದ.

“ಈ ಊರಿನಲ್ಲಿ ಕಾಣುವುದಕ್ಕೆ ಇವರು ಈ ಊರಿನವರೇ ಅಲ್ಲ” ಎಂದ ಇಸ್ಮಾಯಿಲ, ಅವರ ಪುರಾಣ ಬಿಚ್ಚತೊಡಗಿದ. “ಪಕ್ಕದ ಊರಿನವರು ಕಣೋ ನಟರಾಜ. ಹೈಸ್ಕೂಲ್ ಮೇಷ್ಟರಾಗಿದ್ದವರು. ಈಗ ರಿಟೈರ್ಡ್. ಆಸ್ತಿ ಜಗಳ ಇತ್ತಂತೆ. ಇವರ ತಂಗಿ ಮತ್ತು ಅವಳ ಗಂಡ ಇವರನ್ನೇ ಕೋರ್ಟಿಗೆಳೆದಿದ್ದರಂತೆ. ಅದರಲ್ಲಿ ಸೋಲಾಯಿತಂತೆ. ಕೈಲಿದ್ದ ಕಾಸೂ ಖಾಲಿ. ಕೋರ್ಟಿನಲ್ಲಿಯೂ ಗೆಲುವಿಲ್ಲ. ತಲೆಭಾರ ಇಳಿಸುವುದಕ್ಕೆ ದಾರಿ ಸಿಗದೆ ಇಲ್ಲಿಗೆ ಬಂದಿದ್ದರು. ಈಗ ಖುಷಿಯಲ್ಲಿಯೇ ಹೋದರು ನೋಡು” ಎಂದ.

“ನಿನ್ನ ಸ್ಮೈಲಿಂಗು ಮಹಲಿನಿಂದಾಗಿ ಅವರಿಗೆ ನೆಮ್ಮದಿ ಸಿಕ್ಕಿದಂತಾಯಿತು” ಎಂದ ನಟರಾಜ ಯಾವತ್ತಿನ ಹಾಗೆ ಆಕರ್ಷಕವಾದ ನಗುವನ್ನು ಬೀರಿದ.

“ಇಲ್ಲಿಗೆ ಬರುವಾಗ ಹೇಗಿದ್ದರು ಗೊತ್ತಿದೆಯಾ? ನೋಡಬೇಕಿತ್ತು ನೀನು. ಇಲ್ಲಿಗೇನಾದರೂ ಬರದೇ ಹೋಗಿದ್ದರೆ ಕೆರೆಯೋ ಬಾವಿಯೋ ನೋಡಿಕೊಳ್ಳಬೇಕಿತ್ತು. ಹಾಗಿದ್ದರು” ಎಂದ ಇಸ್ಮಾಯಿಲ.

ಅವನು ಹಾಗೆ ಹೇಳುತ್ತಿದ್ದಂತೆ ನಟರಾಜ “ಹಾಗಿದ್ದರೆ ನಿನ್ನಿಂದಾಗಿ ರಿಟೈರ್ಡ್ ಜೀವವೊಂದು ಉಳಿಯಿತು ನೋಡು” ಎಂದು ಹೇಳಿ ನಗಾಡಿದ.

ನನ್ನಿಂದಾಗಿ ಅಲ್ಲವೋ ನಟರಾಜ. ಎಲ್ಲವೂ ಈ ನನ್ನ ಮಹಲಿನಿಂದಾಗಿ. ಸ್ಮೈಲಿಂಗು ಮಹಲಿನಿಂದಾಗಿ” ಎಂದ ಇಸ್ಮಾಯಿಲ ತನ್ನ ಎದುರಿನ ಟೇಬಲ್ ಮೇಲೆ ಬಲವಾಗಿ ಎರಡು ಸಲ ಬಡಿದ.

“ಏನೇ ಹೇಳು ನಟರಾಜ, ನನ್ನಿಂದಾಗಿ ಒಂದಷ್ಟು ಜನರಿಗೆ ಅವರು ಕಳೆದುಕೊಂಡ ನಗು ಸಿಗುತ್ತಿದೆ ಎಂಬ ಖುಷಿ ನನಗಿದೆ. ಬೇಸರದ ಮೋರೆ ಹೊತ್ತು ಇಲ್ಲಿಗೆ ಬಂದವರು ಗೆಲುವಿನ ಮುಖ ಹೊತ್ತು ಹೋಗುತ್ತಾರಲ್ಲಾ, ಅದೇ ನನಗೆ ಖುಷಿ. ಈಗ ಹೋದರಲ್ಲ ರಿಟೈರ್ಡ್ ಮಾಸ್ಟ್ರು, ನಾನು ಕೇಳದೇ ಹತ್ತು ರೂಪಾಯಿ ಹೆಚ್ಚೇ ಕೊಟ್ಟರು. ಅದೆಷ್ಟು ಖುಷಿಯಾಗಿರಬೇಕು ಅವರಿಗೆ, ನೀನೇ ಅಂದಾಜು ಮಾಡು. ಆನಂದವನ್ನು ಹಂಚುವ ಕಾಯಕ ಕಣೋ ನನ್ನದು. ದಿನಕ್ಕೆ ಕೋಟಿ ಕೋಟಿ ದುಡಿಯುತ್ತಿದ್ದರೂ ನನಗೆ ಇಷ್ಟು ಖುಷಿ ಸಿಗುತ್ತಿರಲಿಲ್ಲಎಂದವನ ಮುಖದಲ್ಲಿ ಸಂತೃಪ್ತಿಯ ನಗುವಿತ್ತು.

ಅಷ್ಟಕ್ಕೂ ನಿನಗೆ ಈ ಸ್ಮೈಲಿಂಗು ಮಹಲಿನ ಐಡಿಯಾ ಕೊಟ್ಟವನು ಯಾರು ಹೇಳು” ಎಂದ ನಟರಾಜ, ಎರಡೆರಡು ಸಲ ಹುಬ್ಬುಗಳನ್ನು ಮೇಲಕ್ಕೆ ಹಾರಿ ಕುಣಿಸುತ್ತಾ. ಅವನನ್ನೇ ನೋಡುತ್ತಿದ್ದ ಇಸ್ಮಾಯಿಲನ ನಗುವ ಕಣ್ಣುಗಳಲ್ಲಿ ಐಡಿಯಾ ಕೊಟ್ಟವನು ನೀನೇ ಗೆಳೆಯಾ ಎಂಬ ಉತ್ತರ ನರ್ತನವಾಡುತ್ತಿತ್ತು.

***

ನಟರಾಜ, ಭರತಪುರದ ಗೋಪಾಲ ಮೇಷ್ಟ್ರು ಇಬ್ಬರು ಗಂಡುಮಕ್ಕಳಲ್ಲಿ ಸಣ್ಣವನು. ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ. ಬುದ್ಧಿವಂತ ಎಂದು ಹೆಸರು ಗಳಿಸಿದ್ದ ಈತ ಸದಾ ಹಸನ್ಮುಖಿ. ಮುಂದೆ ಪಿಎಚ್.ಡಿ. ಮಾಡಬೇಕು, ಯಾವುದಾದರೊಂದು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎನಿಸಿಕೊಳ್ಳಬೇಕು ಎಂಬೆಲ್ಲಾ ಕನಸುಗಳನ್ನು ಹೊತ್ತುಕೊಂಡಿರುವವನು. ಸಾವಿರ ಯೋಚನೆ ಮನಸ್ಸಲ್ಲಿದ್ದರೂ ನಗುನಗುತ್ತಲೇ ಇರುವುದು ಈತನ ಜಾಯಮಾನ. ಒಳ್ಳೆಯತನವನ್ನೂ ಮೀರಿದ ಮುಗ್ಧತೆ ಅವನಲ್ಲಿತ್ತು. ಯಾರ ಬಗೆಗೂ ಅಸೂಯೆ ಇಲ್ಲದ ಸ್ವಭಾವ ಅವನದ್ದು. ಗಳಿಗೆಗೊಮ್ಮೆ ನಗುತ್ತಾ ಪಾಠ ಮಾಡುವ ಇವನೆಂದರೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು; ಒಂದಷ್ಟು ಸಲುಗೆ. ನಟರಾಜ ಮೈಲುಗಳಿಗೊಂದರಂತೆ ಜೋಕುಗಳನ್ನು ಹಾರಿಸಿಬಿಡುವ ಸುಮಧುರ ಸಮಯಕ್ಕಾಗಿಯೇ ಕಾದುಕುಳಿತಿರುತ್ತಿದ್ದರು ಅವನ ವಿದ್ಯಾರ್ಥಿಗಳು. ಸಕ್ಕರೆಯ ಸುಳಿವರಿತ ಇರುವೆಗಳಂತೆ ಸ್ಟಾಫ್‌ರೂಮಿನಲ್ಲಿ ಇವನ ಸುತ್ತ ನಿಂತುಕೊಂಡು, ಇವನ ಆಕರ್ಷಕ ಮಾತುಗಳಿಗೆ ಆಗಾಗ ಕಿವಿಗೊಡುತ್ತಿದ್ದರು. ವಿದ್ಯಾರ್ಥಿಗಳ ಬಗೆಗೆ ನಿಜವಾದ ಕಾಳಜಿಯನ್ನಿಟ್ಟುಕೊಂಡಿದ್ದ ಈತ ಆ ವಿಚಾರದಲ್ಲಿ ತನ್ನ ಕಾಲೇಜಿನ ಉಳಿದ ಅತಿಥಿ ಉಪನ್ಯಾಸಕರುಗಳಿಗಿಂತ ಅರ್ಧ ಕ್ವಿಂಟಾಲ್ ಹೆಚ್ಚೇ ತೂಗುತ್ತಿದ್ದ.

ಇಂಥ ನಟರಾಜನ ಬಾಲ್ಯದ ಗೆಳೆಯ ಇಸ್ಮಾಯಿಲ. ಅವನ ಅಪ್ಪ ಕಾಸಿಂ. ಮೀನಿನ ವಾಸನೆಯನ್ನು ಮತ್ತು ರುಚಿಯನ್ನು ಭರತಪುರದ ಎರಡು ತಲೆಮಾರಿನವರಿಗೆ ಹಂಚಿದವನು. ಮತ್ಸ್ಯ ಸಹವಾಸದಲ್ಲಿಯೇ ಸೊಗ ಕಂಡುಕೊಂಡಿದ್ದ ಕಾಸಿಂ ಅವರಿಗೆ ನಾಲ್ಕು ಹೆಣ್ಣುಮಕ್ಕಳ ನಂತರ ಹುಟ್ಟಿದ ಕೊಂಡಾಟದ ಮಗ ಇಸ್ಮಾಯಿಲ. ಮಗ ಆಫೀಸರ್ ಆಗಬೇಕೆಂಬ ಇಚ್ಛೆಯಿತ್ತು ತಂದೆಗೆ. ಭರತಪುರದ ಪ್ರಾಥಮಿಕ ಶಾಲೆಗೆ ಸೇರಿಸಿದರು. ಮಗ ಏಳನೇ ಮೆಟ್ಟಿಲು ಹತ್ತುತ್ತಿದ್ದಂತೆ ಹೈಸ್ಕೂಲ್ ದಾಟುತ್ತಾನೆ ಎಂದುಕೊಂಡು ಸಂತಸಪಟ್ಟರು. ಆದರೆ ಮೂರು ಮೂರು ಸಲ ಪ್ರಯತ್ನಪಟ್ಟರೂ ಹತ್ತನೇ ತರಗತಿಯನ್ನು ಹಾರಲಾರದ ಇಸ್ಮಾಯಿಲ ತಂದೆಯ ಮುನಿಸಿಗೆ ಕಾರಣನಾದ.

ನಾಯಿಂಡೆ ಮೋಣೆ. ಅಕ್ಷರವಂತೂ ತಲೆಗೆ ಹತ್ತಲಿಲ್ಲ. ನಾಳೆಯಿಂದ ನನ್ನ ಜೊತೆ ಮೀನು ವ್ಯಾಪಾರಕ್ಕೆ ಬಾ. ಅದನ್ನಾದರೂ ಕಲಿತುಕೋ. ಗಂಜಿ ಕುಡಿದು ಬದುಕಬಹುದು” ಎಂದು ಅಪ್ಪ ಬೈದದ್ದು ಇಸ್ಮಾಯಿಲನನ್ನು ಕೆರಳಿಸಿತು. ತೆಗಳಿದವನ ತಲೆನೆರಳಿನಡಿಯಲ್ಲಿ ಕುಳಿತು ಕೆಲಸ ಮಾಡಲಾಗದ ಸ್ವಾಭಿಮಾನ ಇದ್ದದ್ದು ಇಸ್ಮಾಯಿಲನ ಎದೆಯಲ್ಲಿ.

“ಬದುಕುವುದು ಹೇಗೆ ಅಂತ ನನಗೆ ಗೊತ್ತಿದೆ. ನೀವೇನೂ ತಲೆ ಕೆಡಿಸಿಕೊಳ್ಳುವುದು ಬೇಡ” ಎಂದು ದಿಟ್ಟವಾಗಿ ನುಡಿದವನು, ತನ್ನ ಸೋದರ ಮಾವನಿಂದ ಹಣ ಸಾಲ ಪಡೆದ. ಆ ಹಣ ಸಾಲದೆಂದು ಅರಿವಾದಾಗ, ತನ್ನಂತೆಯೇ ಕಲಿತೂ ಕಲಿತೂ ಖಾಲಿ ಕುಳಿತಿದ್ದ ಇಬ್ಬರನ್ನು ಜೊತೆ ಸೇರಿಸಿಕೊಂಡು, ಅವರಿಗಿಂತ ಒಂದು ರೂಪಾಯಿ ಹೆಚ್ಚೇ ಬಂಡವಾಳವನ್ನು ತಾನು ಹಾಕಿ, ಒಂದು ಅಂಗಡಿಯನ್ನಿಟ್ಟ. ಅಂಗಡಿಗೆ ಅಪ್ಪನ ಹೆಸರೇ ಇಟ್ಟರಾದೀತು ಎಂಬ ಯೋಚನೆ ಬಂತು. ಬೈದವನ ಹೆಸರನ್ನಿಡುವುದು ಸರಿಯಲ್ಲ ಎಂದುಕೊಂಡವನು, ತನ್ನ ಅಮ್ಮನ ಹೆಸರಿನಲ್ಲಿ ಮುಮ್ತಾಜ್ ಜನರಲ್ ಸ್ಟೋರ್ ಆರಂಭಿಸಿಯೇ ಬಿಟ್ಟ.

ಊಟ ನಿದ್ರೆ ಬಿಟ್ಟು ದುಡಿಯುವ ಹುರುಪು ಇದ್ದವ ಇಸ್ಮಾಯಿಲ. ಆದರೆ, ಅವನ ಜೊತೆಗಿದ್ದ ಹುಡುಗರು ಕಂಡಕಂಡಲ್ಲಿ ಹಾಸಿಗೆ ಮೂಸುವ ಕೆಲಸಗಳ್ಳರು. ಯಾವಾಗಲೂ ಅಮಲು ಹತ್ತಿಸಿಕೊಂಡವರಂತಿದ್ದ ಅವರಿಗೆ ಜನರು ಬಂದು ಏನು ಕೇಳುತ್ತಿದ್ದಾರೆ ಎನ್ನುವುದೇ ತಲೆಗೆ ಹತ್ತುತ್ತಿರಲಿಲ್ಲ. ಮನೆಯಲ್ಲಿ ಉರ್ದು ಮಾತನಾಡುತ್ತಿದ್ದವರಿಗೆ ಕಿವಿಹೊಕ್ಕ ಕನ್ನಡದ ಪದಗಳು ತಲೆಗೇರದೆ ಅರ್ಧ ದಾರಿಯಲ್ಲಿಯೇ ನೇಣು ಹಾಕಿಕೊಳ್ಳುತ್ತಿದ್ದವು. ಇದರಿಂದಾಗಿ ಗಡಿಬಿಡಿಯಲ್ಲಿ ಅಂಗಡಿ ಹೊಕ್ಕವರು ಬಯಸಿದ್ದನ್ನು ಬೇಗ ಪಡೆಯದೆ, ಅತ್ತ ಇತ್ತ ಮೇಲೆ ಕೆಳಗೆ ನೋಡುವಂತಾಗುತ್ತಿತ್ತು. ಕೊನೆಗೆ ಕ್ಯಾಶ್ ಕೌಂಟರಿನಲ್ಲಿ ನಿರಾಳನಾಗಿರುವ ಮನಸ್ಸು ಮಾಡಿದ್ದ ಇಸ್ಮಾಯಿಲ ತಾನೇ ಓಡಾಡಿ ಜನರು ಕೇಳಿದ್ದನ್ನು ಕೊಡಬೇಕಾಗುತ್ತಿತ್ತು. ಬರುಬರುತ್ತಾ ಜನರು ಅಂಗಡಿಗೆ ಬರಲು ಹಿಂದೆಮುಂದೆ ನೋಡತೊಡಗಿದರು. ಈ ಬಗೆಯ ಒದ್ದಾಟದಿಂದಾಗಿ ಇಸ್ಮಾಯಿಲನ ಅಂಗಡಿ ಏಳು ತಿಂಗಳುಗಳಲ್ಲಿ ಇನ್ನಿಲ್ಲವಾಯಿತು.

ಹೀಗೆ ಸಾಲವನ್ನು ಕೈಗೆ ಮೆತ್ತಿಕೊಂಡು, ಚಿಂತೆಯನ್ನು ತಲೆಯ ಮೇಲೆ ಹೊತ್ತುಕೊಂಡು ಇಸ್ಮಾಯಿಲ ಒದ್ದಾಡುತ್ತಿದ್ದಾಗಲೇ ನಟರಾಜ ಅವನಿಗೆ ಸ್ಮೈಲಿಂಗು ಮಹಲಿನ ಐಡಿಯಾ ಕೊಟ್ಟದ್ದು.

“ನೋಡು ಇಸ್ಮಾಯಿಲ, ಈಗಿನ ಈ ಒತ್ತಡದ ಬದುಕಿನಲ್ಲಿ ಯಾರಿಗೂ ನೆಮ್ಮದಿ ಇಲ್ಲ. ಹೊರಗೆ ನಗುತ್ತಾ ಇರುತ್ತಾರೆ ಅಷ್ಟೇ. ಮನಸ್ಸಿನ ಖುಷಿಯಿಲ್ಲ. ನೀನು ಅದನ್ನು ಜನರಿಗೆ ಕೊಡುವ ಅಂಗಡಿಯೊಂದನ್ನು ತೆರೆದರೆ ಖಂಡಿತಾ ಜೀವನದಲ್ಲಿ ಮುಂದೆ ಬರುತ್ತೀಯಎಂದಿದ್ದ ನಟರಾಜ. ಇಸ್ಮಾಯಿಲನಿಗೆ ಅರ್ಥವಾಗಲಿಲ್ಲ. ನಟರಾಜ ಮತ್ತೆ ಮತ್ತೆ ಹೇಳಿದ ಮೇಲೆ ವಿಷಯ ತಲೆಯೊಳಗೆ ಕುಳಿತಿತು.

ಕಟ್ಟಡವೊಂದು ಬಾಡಿಗೆ ರೂಪದಲ್ಲಿ ಇಸ್ಮಾಯಿಲನ ಬೊಗಸೆ ಸೇರಿತು. ಅದನ್ನು ತನಗೆ ಬೇಕಾದಂತೆ ಬದಲಾಯಿಸಿದ. ಹೊರಗಿನಿಂದ ನೋಡಿದರೆ ಪುರಾತನ ಕೋಟೆಯ ತಲೆಮೇಲೆ ಎರಡು ಕಬ್ಬಿಣದ ಶೀಟ್‌ಗಳನ್ನಿಟ್ಟಂತೆ ತೋರುತ್ತಿತ್ತು. ಇಂತಹ ಕಟ್ಟಡಕ್ಕೆ ಎರಡು ಭಾಗ. ಒಂದರಲ್ಲಿ ಇಸ್ಮಾಯಿಲ ಕುಳಿತುಕೊಳ್ಳುತ್ತಿದ್ದ. ಅಲ್ಲೇ ಒಂದು ಮೂಲೆಯಲ್ಲಿ ಟಿ.ವಿ. ಎದುರಿನ ಟೇಬಲ್ ಮೇಲೆ ಎರಡು ದಿನಪತ್ರಿಕೆಗಳು. ಅಲ್ಲೇ ಮುಂದುಗಡೆ ನಾಲ್ಕೈದು ಕುರ್ಚಿಗಳು, ಬಂದವರು ಕೂರುವುದಕ್ಕೆ. ಇನ್ನೊಂದು ಭಾಗದಲ್ಲಿ ಪೂರ್ತಿ ಕತ್ತಲು. ಅಲ್ಲಿಯ ರಹಸ್ಯವನ್ನು ಕಾಯ್ದುಕೊಳ್ಳುವಂತೆ ನೆಲಕ್ಕೆ ಇಳಿಬಿಟ್ಟಿದ್ದ ನೀಲಿ ಪರದೆ.

ಅದರೊಳಗೇನಿದೆ ಎನ್ನುವುದು ಒಳಹೋದವರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಒಳಗೆ ಹೋದವರು ಎಬ್ಬಿಸುತ್ತಿದ್ದ ನಗು ಹೊರಗೆ ಕೂತ ಹೊಸಬರಲ್ಲಿ ಮೂಡಿಸುತ್ತಿದ್ದದ್ದು ವಿಸ್ಮಯವನ್ನು, ಕುತೂಹಲವನ್ನು. ನಟರಾಜ ಕೊಟ್ಟಿದ್ದ ಐಡಿಯಾ ಫಲ ಕೊಡುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಮಹಾನಗರದ ಮರಿಮೊಮ್ಮಗನಂತಿತ್ತು ಭರತಪುರ. ಅಂಥ ಪುಟ್ಟ ಪಟ್ಟಣದ ಜನರನ್ನಷ್ಟೇ ನಗಿಸಿ, ಇದ್ದ ಸಾಲವನ್ನು ಏಳೆಂಟು ತಿಂಗಳುಗಳಲ್ಲಿಯೇ ತೀರಿಸಿ, ಸ್ಮೈಲು ಬೀರಿದ್ದ ಇಸ್ಮಾಯಿಲ.

ನೋಡೋ ಇಸ್ಮಾಯಿಲ, ನಿನ್ನ ಈ ಮಹಲಿನ ಬಗ್ಗೆ ಫೇಸ್‌ಬುಕ್‌ನಲ್ಲಿ, ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದೇನೆ. ನಿಮಗೆ ಖುಷಿ ಬೇಕಿದ್ದರೆ ಇಲ್ಲಿಗೆ ಬನ್ನಿ ಅಂತ ಬರೆದಿದ್ದೇನೆ. ಇನ್ನು ನಿನ್ನ ಮಹಲಿನ ನಸೀಬು ಇನ್ನೂ ಹೆಚ್ಚುತ್ತದೆ ನೋಡು” ಮರುದಿನ ಸಂಜೆ ಇಸ್ಮಾಯಿಲನ ಮಹಲಿಗೆ ಬಂದ ನಟರಾಜ ಹೀಗೆ ಹೇಳಿ ನಗೆಯಾಡಿದ್ದ.

ಹೀಗೆ ನಟರಾಜ ಹೇಳಿ ಮೂರು ದಿನ ಕಳೆದಿತ್ತಷ್ಟೇ, ಬೇರೆ ಬೇರೆ ಊರುಗಳ ಜನರು ಭರತಪುರದೆಡೆ ಮುಖ ಮಾಡಿದರು. ಸಂಜೆ ಕಾಲೇಜು ಮುಗಿಸಿ ಬಂದ ನಟರಾಜನಿಗೆ ಮಹಲಿನ ಒಳಹೋಗುವುದಕ್ಕೆ ಎಡೆಯೇ ಇರಲಿಲ್ಲ. ಸೇರಿದ್ದ ಜನರು ಮಹಲಿನ ಬಾಗಿಲನ್ನೂ ಆಕ್ರಮಿಸಿ ನಿಂತಿದ್ದರು.

ಚಿಂತೆಯಲ್ಲಿ ನರಳುತ್ತಿದ್ದವನೊಬ್ಬ, “ಅಯ್ಯೋ ಹೀಗ್ಯಾಕೆ ಗಡಿಬಿಡಿ ಮಾಡ್ತೀಯ. ಕ್ಯೂನಲ್ಲಿ ಬಾರಯ್ಯ” ಎಂದು ನಟರಾಜನನ್ನೇ ದಬಾಯಿಸತೊಡಗಿದ್ದ.

“ನೀನೀಗ ನಿಂತ ಮಹಲಿಗೆ ಐಡಿಯಾ ಕೊಟ್ಟವನೇ ನಾನು” ಎಂದು ಹೇಳಬೇಕೆನಿಸಿತು ನಟರಾಜನಿಗೆ. ಹೇಳಲಿಲ್ಲ. ಇಸ್ಮಾಯಿಲ ಎಲ್ಲಿದ್ದಾನೆಂದು ಕಣ್ಣಾಡಿಸಿದ. ಹೊರಬಂದಿದ್ದವನಿಂದ ಕಾಸು ತೆಗೆದುಕೊಂಡು, ಚಿಲ್ಲರೆ ಕೊಡುತ್ತಿದ್ದ. ಉಳಿದವರನ್ನು ಸಾಲಿನಲ್ಲಿ ನಿಲ್ಲಲು ಹೇಳುತ್ತಿದ್ದ.

“ಲೋ ಇಸ್ಮಾಯಿಲ, ನಾನು ಆಮೇಲೆ ಬರುತ್ತೇನೆ” ಎಂದು ನಟರಾಜ ಜೋರಾಗಿ ಬೊಬ್ಬೆ ಹೊಡೆದವನು, ಇಸ್ಮಾಯಿಲನತ್ತ ಕೈಬೀಸಿ ಅಲ್ಲಿಂದ ಹೊರಟುಹೋದ.

ಎರಡು ಮೂರು ಗಂಟೆ ಕಳೆದ ಮೇಲೆ ನಟರಾಜ ಬಂದಾಗ ಮಹಲು ಹಗುರಾಗಿತ್ತು. ಇದ್ದದ್ದು ನಾಲ್ಕೈದು ಜನರು ಮಾತ್ರ. ನಟರಾಜನ ತಲೆ ಕಂಡವನೇ ಇಸ್ಮಾಯಿಲ ಓಡೋಡಿಬಂದು ಇವನನ್ನು ತಬ್ಬಿಕೊಂಡ.

“ಒಂದು ವಾರದಲ್ಲಿ ಆಗುವ ಸಂಪಾದನೆಯನ್ನು ಒಂದೇ ದಿನ ಆಗುವಂತೆ ಮಾಡಿದೆಯಲ್ಲೋ ನಟರಾಜ” ಎಂದ. ನಟರಾಜ ನಗುತ್ತಾ ಆತ್ಮೀಯತೆಯಿಂದ ಸ್ನೇಹಿತನನ್ನು ನೋಡಿದ.

“ನನಗೂ ಶೇರ್ ಸಿಗಬೇಕು ನೋಡು” ಎಂದ ನಟರಾಜ ತುಂಟತನ ತೋರುತ್ತಾ. “ಕೊಡುತ್ತೇನೆ ಖಂಡಿತಾ” ಎಂದು ಇಸ್ಮಾಯಿಲ ಹೇಳಿದ ತಕ್ಷಣವೇ “ಅಯ್ಯೋ ಸುಮ್ಮನೆ ಹೇಳಿದ್ದು ನಾನು” ಎಂದು ಹೇಳಿ ಅವನ ಬೆನ್ನ ಮೇಲೊಂದು ಏಟು ಕೊಟ್ಟ. “ಎಷ್ಟೋ ಜನರಿಗೆ ನಗು ಹಂಚಿದ ಪುಣ್ಯ ನಿನ್ನದಾಯಿತು” ಎಂದ.

ಇವರ ಮಾತನ್ನು ಕೇಳುತ್ತಾ ಅಲ್ಲೇ ಕುಳಿತಿದ್ದ ಯುವಕನೊಬ್ಬಎಂ.ಬಿ.ಎ. ಓದಿದ್ದೇನಣ್ಣ. ಜಾಬ್ ಸಿಕ್ಕಿಲ್ಲ. ಅಪ್ಪ ಮಾಡಿದ ಸಾಲ ಇದೆ. ಮನೆ ಬಾಡಿಗೆ ಕಟ್ಟಬೇಕು. ಅದೇ ಟೆನ್ಶನ್. ಒಳಗೆ ಹೋದರೆ ಈ ಚಿಂತೆಯೆಲ್ಲಾ ಕಡಿಮೆ ಆಗುತ್ತದಾ?” ಎಂದು ನಟರಾಜನನ್ನು ನೋಡುತ್ತಾ ಕೇಳಿದ. ತೀರಾ ಸೋತವನಂತೆ ಅವನ ಮುಖಭಾವ ಇತ್ತು.

“ಖಂಡಿತವಾಗಿಯೂ ಕಡಿಮೆ ಆಗುತ್ತದೆ. ಇಲ್ಲಿ ನಿನಗೆ ಸಿಗುವ ನಗು ಮತ್ತೆ ಬದುಕನ್ನು ನಡೆಸುವ ಉತ್ಸಾಹ ಕೊಡುತ್ತದೆ. ಅದಕ್ಕಿಂತ ಇನ್ನೇನು ಬೇಕು ಗೆಲುವು ಪಡೆಯುವುದಕ್ಕೆ” ಎಂದ ನಟರಾಜ. ಇಸ್ಮಾಯಿಲನೂ ತಲೆ ಆಡಿಸಿದ.

ಆ ಯುವಕನ ಪಕ್ಕದಲ್ಲಿಯೇ ಕುಳಿತಿದ್ದ ಯುವತಿಯ ಕಡೆಗೆ ಇವರಿಬ್ಬರ ಕಣ್ಣುಗಳು ಹರಿಯುತ್ತಿದ್ದಂತೆ ಅವಳು ನಗುತ್ತಾ, “ಅಯ್ಯೋ ನಾನೇನೂ ದುಃಖದಿಂದ ಇಲ್ಲಿಗೆ ಬಂದದ್ದಲ್ಲ. ನನಗ್ಯಾವ ಕಷ್ಟವೂ ಇಲ್ಲ. ಹೀಗೆ ಊರೂರು ಸುತ್ತುವುದು, ಅಲ್ಲಿ ಏನೇನು ವಿಶೇಷ ಇದೆ ತಿಳಿದುಕೊಳ್ಳುವುದು, ಅದನ್ನು ನನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆಯುವುದು ನನ್ನ ಹವ್ಯಾಸ. ಅದಕ್ಕೆ ಬಂದಿದ್ದೇನೆ ಅಷ್ಟೇ” ಎಂದಳು.

“ಇಲ್ಲಿ ಹೀಗೊಂದು ಮಹಲು ಇದೆ, ಅದು ಜನರಿಗೆ ಖುಷಿ ಕೊಡುತ್ತದೆ ಅಂತಷ್ಟೇ ಬರೆಯಿರಿ. ಒಳಗೆ ನೋಡಿದ್ದನ್ನೆಲ್ಲಾ ಬರೆಯಬೇಡಿ. ನಮ್ಮ ವ್ಯಾಪಾರದ ರಹಸ್ಯವೇ ಇಲ್ಲದಂತಾಗುತ್ತದೆ” ಎಂದ ಇಸ್ಮಾಯಿಲ. ಆ ಯುವತಿ ಸರಿ ಎನ್ನುವಂತೆ ತಲೆಯಾಡಿಸಿದಳು.

“ಇವಳು ಬಂದದ್ದು ದುಃಖ ಕಳೆದುಕೊಳ್ಳಲಿಕ್ಕಲ್ಲವೋ ನಟರಾಜ. ಸಂತಸವನ್ನು ಇನ್ನೂ ಹೆಚ್ಚು ಮಾಡಿಕೊಳ್ಳುವುದಕ್ಕೆ” ಎಂದು ಇಸ್ಮಾಯಿಲ ನಟರಾಜನ ಕಿವಿಯಲ್ಲಿ ಪಿಸುಗುಟ್ಟಿದ.

ಅಷ್ಟರಲ್ಲಿ ಒಳಹೋಗಿದ್ದವನೊಬ್ಬ ಹೊರಬಂದು ಕಿಸೆಗೆ ಕೈಹಾಕಿದ. ಹಣ ತೆಗೆದುಕೊಳ್ಳುತ್ತಿದ್ದ ಇಸ್ಮಾಯಿಲ ಅವನ ನಗೆಮೋರೆ ನೋಡುತ್ತಾ, “ಏನ್ಸಾರ್, ಇಲ್ಲಿಗೆ ಬಂದು ನಿಮಗೆ ಖುಷಿಯಾಗಿದೆ ತಾನೇ?” ಎಂದ. “ಇವತ್ತೇನೋ ಖುಷಿಯಾಗಿದೆ. ಈ ಮದುವೆಯಾದವರ ಗೋಳು ದಿನಾ ಇದ್ದದ್ದೇ ಬಿಡಿ. ನಾಳೆಯೂ ಬರುತ್ತೇನೆ. ಆವಾಗಾವಾಗ ಬರುತ್ತಿರುತ್ತೇನೆ” ಎಂದ ಅವನು ಚಿಲ್ಲರೆ ಎಣಿಸುತ್ತಾ ಹೊರಹೋದ.

“ಹೀಗೆ ಮದುವೆಯಾಗಿ ನೆಮ್ಮದಿ ಕಳೆದುಕೊಂಡ ನಾಲ್ಕೈದು ಜನರನ್ನು ಹಿಡಿದುಹಾಕಿದರೆ ನಿನ್ನ ಸ್ಮೈಲಿಂಗು ಮಹಲು ಬೇರೆ ಯಾವುದೋ ಲೆವೆಲ್ಲಿಗೆ ಹೋಗುತ್ತದೆ ಇಸ್ಮಾಯಿಲ” ಎಂದು ಜೋರಾಗಿ ನಗುತ್ತಾ ನಟರಾಜ ಹೇಳಿದ್ದಕ್ಕೆ ಪ್ರತಿಯಾಗಿ “ಮದುವೆಯಾಗಿ ನೆಮ್ಮದಿ ಕಳೆದುಕೊಂಡವರು ನಾಲ್ಕು ಜನ ಅಲ್ಲ, ನಾನ್ನೂರು ಜನ ಇದ್ದಾರೆ” ಎಂದು ಇಸ್ಮಾಯಿಲ ಹೇಳಿದ ತಕ್ಷಣವೇ ನಗು ಕಳೆದುಕೊಂಡು ಕುಳಿತಿದ್ದ ಅಲ್ಲಿದ್ದ ಎಲ್ಲರ ಮುಖದಲ್ಲಿಯೂ ನಗು ಮೂಡಿತು.

“ಲೋ ನಟರಾಜ, ಇದೇ ಖುಷಿಯಲ್ಲಿ ನೀನೊಮ್ಮೆ ಮಹಲಿನ ಒಳಹೋಗಿ ಬಾ” ಎಂದ ಇಸ್ಮಾಯಿಲ. “ನನಗೆ ದೇವರು ಚಂದದ ನಗುವನ್ನು ಕೊಟ್ಟಿದ್ದಾನೆ. ನಿನ್ನ ಈ ಸ್ಮೈಲಿಂಗು ಮಹಲಿನ ಅಗತ್ಯವೇ ನನಗಿಲ್ಲ” ಎಂದ ನಟರಾಜ ಚಂದದ ನಗು ಬೀರುತ್ತಾ.

***

“ಈ ಸರ್ಕಾರ ಇದ್ದಿದ್ದರೆ ನನ್ನಂಥ ಎಷ್ಟೋ ಜನರಿಗೆ ಪ್ರಯೋಜನ ಸಿಗುತ್ತಿತ್ತು. ದುಡ್ಡು ಕೊಟ್ಟು ಶಾಸಕರನ್ನು ಬುಟ್ಟಿಗೆ ಹಾಕಿಕೊಂಡಿದ್ದಾರಲ್ಲಾ, ಇವರಿಗೆ ನಾಚಿಕೆಯಾಗಬೇಕು” ಎಂದ ನಟರಾಜ ಟಿ.ವಿ. ನೋಡುತ್ತಾ.

ಪಕ್ಕದಲ್ಲಿದ್ದ ಇಸ್ಮಾಯಿಲ ನಟರಾಜನನ್ನೇ ನೋಡುತ್ತಿದ್ದ. ನಟರಾಜನ ಈ ಬಗೆಯ ಮಾತು ಅವನಿಗೆ ಆಶ್ಚರ್ಯ ಮೂಡಿಸಿತ್ತು. ಇಷ್ಟೂ ವರ್ಷಗಳಲ್ಲಿ ನಟರಾಜ ರಾಜಕಾರಣದ ಬಗ್ಗೆ ಮಾತನಾಡಿದ್ದು ತೀರಾ ಕಡಿಮೆ. ಅದೂ ಇಷ್ಟು ಗಂಭೀರವಾಗಿ ಮಾತನಾಡಿದ್ದಂತೂ ಇಲ್ಲವೇ ಇಲ್ಲ. ಇಸ್ಮಾಯಿಲನೇ ಏನಾದರೂ ಮಾತನಾಡಲು ಹೋದಾಗಲೂ “ಅವರದ್ದು ಇದ್ದದ್ದೇ ಬಿಡು. ಮಾತನಾಡಿ ಪ್ರಯೋಜನ ಇಲ್ಲ” ಎಂದು ಮಾತನ್ನು ಮೂಲೆಪಾಲಾಗಿಸಿಬಿಡುತ್ತಿದ್ದ.

“ನೋಡು ಇಸ್ಮಾಯಿಲ, ಇದೇ ಸರ್ಕಾರ ಇದ್ದಿದ್ದರೆ ನನ್ನಂಥ ಅತಿಥಿ ಉಪನ್ಯಾಸಕರಿಗೆ ಲಾಭ ಇತ್ತು. ಸಂಬಳ ಹೆಚ್ಚಾಗುತ್ತಿತ್ತು. ಇನ್ನೊಂದು ಎರಡು ತಿಂಗಳು ಇದ್ದರೆ ಸಾಕಿತ್ತು. ಅಷ್ಟರಲ್ಲೇ ಈ ಖದೀಮರು ಸರ್ಕಾರ ಬೀಳಿಸಿದ್ದಾರೆ. ಇನ್ನು ಇವರದ್ದೇ ಸರ್ಕಾರ. ಹೇಗೋ ಏನೋ. ಈ ಪಕ್ಷಾಂತರ ಮಾಡುವುದಕ್ಕೆಲ್ಲಾ ಅವಕಾಶವೇ ಇರಬಾರದಿತ್ತು. ಒಂದು ಪಕ್ಷದ ಹೆಸರಲ್ಲಿ ಗೆದ್ದವರು ಅದನ್ನು ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗುವುದೆಂದರೆ ಏನರ್ಥ. ಹೋಗಲಿ, ಇವರಾದರೂ ಸಂಬಳ ಹೆಚ್ಚು ಮಾಡಿದರೆ ನಮಗಷ್ಟೇ ಲಾಭ” ಎಂದು ಕಣ್ಣರಳಿಸಿಕೊಂಡು ನುಡಿದ ನಟರಾಜ.

“ಖಂಡಿತಾ ಸಂಬಳ ಹೆಚ್ಚಾಗುತ್ತದೆ ಬಿಡೋ ಗೆಳೆಯಾ. ನಿನಗೇನೂ ಸಮಸ್ಯೆ ಆಗುವುದಿಲ್ಲ” ಎಂದು ಇಸ್ಮಾಯಿಲ ನುಡಿದಾಗ ನಟರಾಜನ ಮುಖದಲ್ಲಿ ಮಗುವಿನಂತಹ ನಗು.

ಎರಡು ದಿನ ಬಿಟ್ಟು ಬಂದವನ ಮುಖದಲ್ಲಿ ಹೊಳಪಿನ ನಗುವಿತ್ತು. ಯಾವತ್ತಿಗಿಂತಲೂ ಹೆಚ್ಚಿನ ಸಂತಸ ಅವನಲ್ಲಿತ್ತು. ಅದನ್ನು ಸುಲಭವಾಗಿ ಅರಿತ ಇಸ್ಮಾಯಿಲ. ಕಾರಣ ಕೇಳಿದ.

“ನನ್ನ ಎಂಗೇಜ್‌ಮೆಂಟ್ ಫಿಕ್ಸ್ ಆಗಿದೆ ಇಸ್ಮಾಯಿಲ. ಬರುವ ತಿಂಗಳು ಹದಿನೆಂಟಕ್ಕೆ ನಿಶ್ಚಿತಾರ್ಥ. ನೀನು ಬರಲೇಬೇಕು. ಯಾವುದೇ ಕಾರಣ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ನೀನು ಬರದಿದ್ದರೆ ನನ್ನವಳನ್ನು ಕರೆದುಕೊಂಡು ನಿನ್ನ ಈ ಮಹಲಿಗೇ ಬರುತ್ತೇನೆ, ಊಟದ ಹೊತ್ತಿಗೆ” ಎಂದ.

ಇಸ್ಮಾಯಿಲ್‌ನ ಮುಖದಲ್ಲಿ ನಗು ಮೂಡಿತು. “ಅಣ್ಣ ಹೇಳಣ್ಣ. ಅತ್ತಿಗೆ ಏನು ಮಾಡುತ್ತಿದ್ದಾಳಣ್ಣ?” ಎಂದು ಛೇಡಿಸಿದ.

“ಡಿಗ್ರಿ ಆಗಿದೆ. ಕೆಲಸ ಹುಡುಕುತ್ತಿದ್ದಾಳೆ. ಮದುವೆ ಆದಮೇಲೂ ಅವಳು ಕೆಲಸ ಮಾಡಲಿ ಎನ್ನುವುದು ನನ್ನ ಆಸೆ. ಅವಳದ್ದೂ ಅದೇ ಮನಃಸ್ಥಿತಿ. ಇಬ್ಬರು ದುಡಿದರೆ ಮನೆ ಚೆನ್ನಾಗಿ ನಡೆಯುತ್ತದಲ್ಲಾ” ಎಂದ ನಟರಾಜ.

“ಅಂತೂ ಮದುವೆ ಗಂಡು ಎನಿಸಿಕೊಂಡೆಯಲ್ಲೋ ನಟರಾಜ” ಎಂದ ಇಸ್ಮಾಯಿಲ, ನಟರಾಜನ ಮುಖ ನೋಡಿ ನಕ್ಕು, ಅವನ ನಗುವನ್ನು ತನ್ನ ಮುಖದಲ್ಲಿಯೂ ತುಂಬಿಕೊಂಡ.

ನಟರಾಜನ ನಿಶ್ಚಿತಾರ್ಥದ ದಿನ ಇಸ್ಮಾಯಿಲನ ಸ್ಮೈಲಿಂಗು ಮಹಲಿಗೆ ತಾತ್ಕಾಲಿಕವಾದ ಬೀಗ ಬಿತ್ತು. ನಿಶ್ಚಿತಾರ್ಥದ ಗತ್ತಿನಲ್ಲಿ ಬೀಗುತ್ತಿದ್ದ ನಟರಾಜನ ಬಳಿಗೆ ಬಂದ ಇಸ್ಮಾಯಿಲ ಅವನ ಮನದನ್ನೆಯಾಗುವ ಹುಡುಗಿಯ ಕಡೆಗೆ ನೋಡುತ್ತಾ, “ಅತ್ತಿಗೆ ಇನ್ನುಮುಂದೆ ನೀವೇ ಈ ಉಪನ್ಯಾಸಕನಿಗೆ ಪಾಠ ಮಾಡಬೇಕು. ಸರಿಯಾಗಿಯೇ ಪಾಠ ಮಾಡಿ” ಎಂದ. ಸುತ್ತಮುತ್ತ ಇದ್ದವರ ನಗು ಛಾವಣಿ ಮುಟ್ಟಿತು.

***

ಬೆಳಗ್ಗಿನ ಹನ್ನೊಂದೂವರೆ ಗಂಟೆಗೆಲ್ಲಾ ನಟರಾಜ ಸ್ಮೈಲಿಂಗು ಮಹಲಿನಲ್ಲಿ ಹೋಗಿ ಕುಳಿತಿದ್ದ. “ಇವತ್ತು ಕಾಲೇಜು ಇಲ್ಲವೇನೋ ನಟರಾಜ. ಇಷ್ಟು ಬೇಗ ಬಂದಿದ್ದೀಯಲ್ಲಾ” ಎಂದ ಇಸ್ಮಾಯಿಲ.

“ನನಗೆ ಪಾಠ ಮಾಡುವ ಮನಸ್ಸಿದೆ. ನನ್ನ ಜೊತೆಗೆ ಇರುವ ಉಪನ್ಯಾಸಕರಿಗೆ ಇಲ್ಲ. ಆದಕಾರಣಕ್ಕೆ ಇವತ್ತು ಕಾಲೇಜಿಲ್ಲ” ಎಂದು ನಟರಾಜ ಹೇಳಿದ್ದು ಅರ್ಥವಾಗಲಿಲ್ಲ ಇಸ್ಮಾಯಿಲನಿಗೆ.

“ಸಂಬಳ ಹೆಚ್ಚು ಮಾಡಬೇಕು ಅಂತ ಇವತ್ತಿನಿಂದ ಅತಿಥಿ ಉಪನ್ಯಾಸಕರ ಮುಷ್ಕರ ಶುರು ಆಗಿದೆ. ಬೆಂಗಳೂರಿನಲ್ಲಿ ಮುಷ್ಕರ. ಯಾವ ಅತಿಥಿ ಉಪನ್ಯಾಸಕರೂ ಪಾಠ ಹೇಳಬಾರದು ಅಂತ ನಮ್ಮ ಸಂಘದವರು ಸೂಚನೆ ಕೊಟ್ಟಿದ್ದಾರೆ. ಅದಕ್ಕೆ ನಾನು ಕಾಲೇಜಿಗೆ ಹೋದೆ. ಮುಷ್ಕರದಲ್ಲಿ ಭಾಗವಹಿಸುವ ಕಾರಣಕ್ಕೆ ತರಗತಿ ತೆಗೆದುಕೊಳ್ಳುತ್ತಿಲ್ಲ ಅಂತ ಪ್ರಾಂಶುಪಾಲರಿಗೆ ಬರೆದುಕೊಟ್ಟು ಬಂದೆ. ಕಾಲೇಜಿಗೆ ಹೋಗಿಯೂ ಪಾಠ ಮಾಡದೇ ಬಂದದ್ದು ನನ್ನ ಜೀವನದಲ್ಲಿ ಇದೇ ಮೊದಲು. ಉಪನ್ಯಾಸಕರಿಲ್ಲದ ತರಗತಿಯನ್ನು ಕಾಣುವುದು ನನ್ನಂಥವನಿಗೆ ಕಷ್ಟ” ಎಂದು ನಗಾಡಿದ.

“ಹಾಗಾದರೆ ಈ ಸಲ ಸರ್ಕಾರಕ್ಕೆ ಸರಿಯಾಗಿಯೇ ಬಿಸಿ ಮುಟ್ಟುತ್ತದೆ ಬಿಡು” ಎಂದ ಇಸ್ಮಾಯಿಲ. “ಸರ್ಕಾರಕ್ಕೆ ಬಿಸಿ ಮುಟ್ಟುವ ಲಕ್ಷಣ ಕಾಣುತ್ತಿದೆ. ಈ ಸಲ ಏನೆಂದರೂ ಬೇಡಿಕೆ ಈಡೇರದೆ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ ನಮ್ಮ ಸಂಘದವರು. ಮಕ್ಕಳಿಗೆ ಪಾಠವೇ ಆಗುತ್ತಿಲ್ಲ ಎಂದಾಗ ಸರ್ಕಾರ ಬಗ್ಗಲೇಬೇಕಲ್ಲ. ಹಾಗೇನಾದರೂ ಆದರೆ ನನ್ನ ಸಂಬಳ ಹೆಚ್ಚಾಗುತ್ತದೆ. ಮದುವೆ ಅಂತ ಬಹಳ ಖರ್ಚಿದೆಯೋ ಇಸ್ಮಾಯಿಲ. ಈಗ ಸಂಬಳ ಹೆಚ್ಚಾದರೆ ನನಗೆ ಲಾಭ” ಎಂದ ನಟರಾಜನ ಮುಖದಲ್ಲಿ ನಗುವಿತ್ತು.

***

ಸಪ್ಪೆಮುಖ ಹೊತ್ತು, ಸೋತುಹೋದವನಂತೆ ಮಹಲಿಗೆ ಬಂದುಕುಳಿತ ನಟರಾಜನ ಬಗೆ ಇಸ್ಮಾಯಿಲನಿಗೆ ಹೊಸದೆನಿಸಿತು. ಮಹಲಿನ ಒಳಹೋಗಿ ಬಂದವರಿಂದ ಕಾಸು ತೆಗೆದುಕೊಳ್ಳುತ್ತಿದ್ದವನು ಅವರಲ್ಲಿ ನಗುವುದನ್ನೂ ಮರೆತು ಇವನ ಬಳಿಗೆ ಬಂದ. ಯಾವತ್ತೂ ನಗುತ್ತಲೇ ಇರುವ ನಟರಾಜನ ಮುಖದಲ್ಲಿ ಇಂದು ನಗು ಇಲ್ಲದೇ ಇರುವುದರಿಂದ ಅವನ ಮನಸ್ಸಿಗಾಗಿರುವ ಬೇಸರವನ್ನು ಸರಿಯಾಗಿಯೇ ಗುರುತಿಸಬಹುದಿತ್ತು.

“ಏನಾಯಿತೋ ನಟರಾಜ?” ಎಂದ ಇಸ್ಮಾಯಿಲನ ಧ್ವನಿಯಲ್ಲಿ ಆತಂಕ.

“ನನ್ನ ಕೆಲಸ ಹೋಗಿದೆಯೋ ಇಸ್ಮಾಯಿಲ. ಏನು ಮಾಡಬೇಕೋ ತೋಚುತ್ತಿಲ್ಲ” ಎಂದ ನಟರಾಜ, ಮುಖವನ್ನು ಕೆಳಗೆ ಮಾಡುತ್ತಾ.

“ಕೆಲಸ ಹೋದದ್ದು ಹೇಗೋ? ಸಂಬಳ ಹೆಚ್ಚಾಗುತ್ತದೆ ಎನ್ನುತ್ತಿದ್ದೆಯಲ್ಲ!” ಕುತೂಹಲದಿಂದ ಕೇಳಿದ ಇಸ್ಮಾಯಿಲ.

“ಸುಮಾರು ವರ್ಷದಿಂದ ಕೆಲಸ ಮಾಡುತ್ತಿದ್ದವರನ್ನು ಉಳಿಸಿಕೊಂಡಿದ್ದಾರೆ. ನಾನು ನಿನ್ನೆ ಮೊನ್ನೆ ಕೆಲಸಕ್ಕೆ ಸೇರಿದವನು. ನನಗೆ ಹೆಚ್ಚು ಕೆಲಸದ ಅನುಭವ ಇಲ್ಲ. ಅದಕ್ಕೆ ಕೆಲಸ ಹೋಗಿದೆ. ನನ್ನ ಹಾಗೆಯೇ ಸುಮಾರು ಏಳೂವರೆ ಸಾವಿರ ಜನರ ಕೆಲಸ ಹೋಗಿದೆ” ಎಂದು ನಟರಾಜ ಅಳುಮೋರೆ ಮಾಡಿದ.

ಇಸ್ಮಾಯಿಲನಿಗೆ ಏನು ಹೇಳಬೇಕೆಂದೇ ತೋಚಲಿಲ್ಲ. “ಹೋಗಲಿ ಬಿಡೋ. ಇದಕ್ಕಿಂತ ಒಳ್ಳೆಯ ಕೆಲಸ ನಿನಗೆ ಸಿಗುತ್ತದೆ” ಎಂದು ಅವನನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ.

“ಏನು ಒಳ್ಳೆಯ ಕೆಲಸವೋ ಇಸ್ಮಾಯಿಲ, ಇದ್ದ ಕೆಲಸವೂ ಹೋಯಿತು. ನಿಶ್ಚಿತಾರ್ಥವಾಗಿದ್ದ ಹುಡುಗಿಯೂ ನನ್ನನ್ನು ಬಿಟ್ಟುಹೋಗುವ ಲಕ್ಷಣ ಕಾಣಿಸುತ್ತಿದೆ” ಎಂದು ನಟರಾಜ ಹೇಳಿದಾಗ ಇಸ್ಮಾಯಿಲನ ಕಣ್ಣರಳಿತು.

“ನನ್ನ ಕೆಲಸ ಹೋಗಿರುವ ವಿಚಾರ ಅವಳ ಮನೆಯವರಿಗೆ ತಿಳಿದಿದೆ. ಕೆಲಸ ಇಲ್ಲದ ಹುಡುಗನ ಜೊತೆ ಮದುವೆ ಬೇಡ ಎಂದಿದ್ದಾರಂತೆ ಅವಳ ಸೋದರ ಮಾವ. ಅವರಿನ್ನೂ ನಮ್ಮಲ್ಲಿ ವಿಷಯ ತಿಳಿಸಿಲ್ಲ. ತಿಳಿಸುವ ಸಾಧ್ಯತೆಯೇ ಹೆಚ್ಚು” ಎಂದ. ಈಗ ಇಸ್ಮಾಯಿಲನ ಬಾಯಿ ಕಟ್ಟಿದಂತಾಯಿತು. ಹೋಗಿ ತನ್ನ ಕುರ್ಚಿ ಮೇಲೆ ಮೌನವಾಗಿ ಕುಳಿತ.

ಇಡೀ ಮಹಲಿನಲ್ಲಿ ಇವರಿಬ್ಬರೇ. ನಟರಾಜ ಆಗಾಗ ಮಾತು ಹೊರಡಿಸುತ್ತಿದ್ದ. “ನನ್ನ ಬಗ್ಗೆ ನಿನಗೆ ಗೊತ್ತಿದೆಯಲ್ಲಾ ಇಸ್ಮಾಯಿಲ? ಒಬ್ಬರನ್ನು ಇಷ್ಟಪಟ್ಟರೆ ಅವರನ್ನು ಮನಸ್ಸಿನಿಂದ ಇಷ್ಟಪಟ್ಟಿರುತ್ತೇನೆ. ಅವಳನ್ನೂ ಹಾಗೆಯೇ ಹಚ್ಚಿಕೊಂಡಿದ್ದೆ. ಈಗ ಒಂದೇ ಸಲಕ್ಕೆ ಬಿಡುವುದೆಂದರೆ ಅದು ಹೇಗೋ? ನನ್ನಿಂದಂತೂ ಸಾಧ್ಯವಿಲ್ಲ” ಎಂದ.

ಹಾಗೆ ಹೇಳಿ ಐದು ನಿಮಿಷ ಕಳೆದಿರಲಿಲ್ಲ. “ಬಿಡದೇ ಹೋದರೆ ನನ್ನ ಬದುಕು ಸಾಗುವುದಿಲ್ಲ. ನಡೆದದ್ದನ್ನು ಮರೆತು ಮುಂದೆ ಸಾಗಬೇಕು ಅಷ್ಟೇ” ಎಂದ.

ಇಸ್ಮಾಯಿಲನಿಗೆ ಏನೋ ಹೇಳಬೇಕೆನಿಸಿತು. ಹೇಳಲಿಲ್ಲ. ನಟರಾಜ ಅವನಾಗಿಯೇ ಸಮಾಧಾನ ಮಾಡಿಕೊಳ್ಳಲಿ. ಅದೇ ಒಳ್ಳೆಯದು ಎಂದು ಸುಮ್ಮನೆ ಕುಳಿತ.

“ಇದೆಲ್ಲಾ ಆದಮೇಲೆ ನನ್ನ ಜೊತೆಗಿರುವವರು ಯಾರೂ ನನ್ನವರಲ್ಲ ಎನಿಸತೊಡಗಿದೆಯೋ ಇಸ್ಮಾಯಿಲ. ಮನೆಯವರೆಲ್ಲ ಜೊತೆಗಿದ್ದರೂ ಅವರು ನನ್ನವರಲ್ಲ ಎನಿಸುತ್ತಿದೆ. ಪಾಠ ಮಾಡುವ ಅವಕಾಶವಾದರೂ ಇದ್ದಿದ್ದರೆ ಇದೆಲ್ಲವನ್ನೂ ಮರೆತುಬಿಡುತ್ತಿದ್ದೆ. ಆ ಮಕ್ಕಳ ಸಂಗದಲ್ಲಿ ಜಗತ್ತನ್ನೇ ಮರೆಯುವ ಶಕ್ತಿಯಿತ್ತು ನನಗೆ. ಆ ನಾಲ್ಕು ಗೋಡೆಗಳೊಳಗಿನ ಲೋಕ ಹೊರಪ್ರಪಂಚವನ್ನೇ ಮರೆಸಿಬಿಡುತ್ತಿತ್ತು. ಆದರೆ ಈಗ ಆ ಸುಖವೂ ಇಲ್ಲ. ನಾನು ಬದುಕುವುದಾದರೂ ಹೇಗೋ?” ಎಂದವನು ತೀರಾ ಅಸಹಾಯಕ ಭಾವದಿಂದ ಇಸ್ಮಾಯಿಲನನ್ನು ನೋಡಿದ.

“ತೀರಾ ಬಡತನವೇನೂ ಇಲ್ಲ ನನಗೆ ನಿಜ. ಆದರೆ ದುಡಿಯುವ ವಯಸ್ಸಿನಲ್ಲಿ ಕುಳಿತು ತಿನ್ನುವುದು ನನ್ನಿಂದಾಗುವ ಕೆಲಸವಲ್ಲ. ದುಡಿದೇ ತಿನ್ನಬೇಕು ಅಂತ ಮಕ್ಕಳಿಗೆ ಪಾಠ ಹೇಳಿದವನು ನಾನು. ಈಗ ನಾನೇ ದುಡಿದು ತಿನ್ನದ ಸ್ಥಿತಿಗೆ ಬಂದಿದ್ದೇನೆ. ನನ್ನ ಸ್ವಾಭಿಮಾನಕ್ಕೇ ಬಿದ್ದ ಏಟಿದುಕುಗ್ಗಿಹೋಗಿರುವ ಅವನ ಕಣ್ಣುಗಳು ಅವನು ಖಿನ್ನತೆಗೆ ಜಾರಿರುವುದನ್ನು ಸೂಚಿಸುತ್ತಿದ್ದವು. ಇಸ್ಮಾಯಿಲ ಮೆದುವಾಗಿ ಅವನ ಕೈಯ್ಯನ್ನು ಅಮುಕಿದ. ಅದೆಷ್ಟೋ ಹೊತ್ತು ಗಾಢಮೌನ ನೆಲೆಸಿತ್ತು.

ಇದ್ದಕ್ಕಿದ್ದಂತೆಯೇ ಎದ್ದುನಿಂತ ನಟರಾಜ ನೋಟೊಂದನ್ನು ಕಿಸೆಯಿಂದ ತರಾತುರಿಯಲ್ಲಿ ತೆಗೆದು, “ನಾನೊಮ್ಮೆ ಒಳಹೋಗಿಬರುತ್ತೇನೆ” ಎಂದು ಹೇಳಿ, ನೋಟನ್ನು ಇಸ್ಮಾಯಿಲನ ಕಡೆಗೆ ತಳ್ಳಿದ.

‘ಇದನ್ನು ಕೊಡಬೇಕಾದ ಅಗತ್ಯವೇನಿದೆ? ನೀನು ನನ್ನನ್ನೂ ಪರಕೀಯ ಎಂದುಕೊಂಡೆಯೋ ಹೇಗೆ!’ ಎಂಬ ರೀತಿಯಲ್ಲಿ ಇಸ್ಮಾಯಿಲ ನೋಡುತ್ತಿದ್ದಂತೆಯೇ ನಟರಾಜ ಮಹಲಿನ ಕತ್ತಲ ಕೋಣೆ ಸೇರಿಕೊಂಡ. ನಗುವಿನ ಧ್ವನಿ ಕೇಳಿಸತೊಡಗಿತು. ಲಘುವಾಗಿ ಇಸ್ಮಾಯಿಲನ ಮುಖದಲ್ಲಿ ಕಾಣಿಸಿಕೊಂಡ ಸ್ಮೈಲು ನಿಧಾನಕ್ಕೆ ಇನ್ನಿಲ್ಲವಾಯಿತು.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ