ಸಮುದ್ರ ಮತ್ತು ಅವನು
ತೀರದಲ್ಲಿ ಒಬ್ಬ ಮನುಷ್ಯ ನಿಂತಿದ್ದಾನೆ
ಅವನ ಮುಂದಿದೆ ವಿಶಾಲವಾದ ಸಮುದ್ರ
ಅದರ ಭವ್ಯತೆಯೇ
ಅವನ ದರ್ಶನವಾಗಿ
ಕಾಣುತ್ತಿದೆ; ಕಾಡುತ್ತಿದೆ
ಮನದೊಳಗೆ ಭೋರ್ಗರೆಯುತ್ತಿರುವ
ಸವಾಲಿನ ಅಲೆಗಳು
ಉಪ್ಪು ತಂಗಾಳಿಯನ್ನೂ ಸಿಹಿಯಾಗಿಸಿದ
ಮೃದು ಮಧುರ ರೂಪಾಂತರ
ತೀರದಲ್ಲಿ ಹರಹಿಕೊಂಡ
ಮರಳಿನ ಕಣಗಳು
ಅವನಲ್ಲಿ ಅಗಾಧತೆಯ
ಅರಿವನ್ನು ಮೂಡಿಸುತ್ತವೆ
ಎನಗಿಂತ ಕಿರಿಯರಿನ್ನಿಲ್ಲ
ಎನ್ನುವಂತೆ ಮಾಡುತ್ತವೆ
ನಿರಂತರ ಚಲನಶೀಲತೆಯ
ನಂತರದ ದೀರ್ಘ ವಿರಾಮವಾಗಿ
ಸಮುದ್ರ ಬೆಳೆಯುತ್ತಲೇ ಇದೆ
ಅವನೊಳಗೆ
ಅವನು ಹಾರುತ್ತಾನೆ
ಸಮುದ್ರದ ಅಂತರಂಗದೊಳಕ್ಕೆ
ತನ್ನಂತರಂಗದೊಳಗಿನ ಸಮುದ್ರವನ್ನು
ಕಂಡುಕೊಳ್ಳುವ ಪ್ರಯತ್ನದಲ್ಲಿ
ನೀಲಿ ಸಮುದ್ರದ ಮೇಗಣ
ಅವನ ಪಯಣ
ಬಿರುಗಾಳಿಗೆ ಅಭಿಮುಖವಾಗಿಯಂತೂ ಅಲ್ಲ
ಸಮುದ್ರದ ಮಹಾಶಾಂತತೆಗೆ ಎದುರಾಗಿ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.