ಅಂತೂ ಅಂಗಡಿಯ ಬಾಗಿಲು ತೆರೆದುಕೊಂಡಿತು. ಸ್ವರ್ಗದ ಬಾಗಿಲೆ ತೆರೆಯಿತೋ ಏನೋ ಎಂಬಂತೆ ಜನರ ಕಣ್ಣುಗಳು ಅರಳಿದವು! ಸರ ಸರ ಅಂತ ಚಟುವಟಿಕೆಗಳು ಗರಿಗೆದರಿದವು. ಕುರಿ ದೊಡ್ಡಿ ಬಾಗಿಲು ತೆಗೆದಾಗ ಹೇಗೆ ಕುರಿಗಳು ನುಗ್ಗುತ್ತವೋ ಹಾಗೆಯೇ ಎಲ್ಲರೂ ಒಳ ನುಗ್ಗಿದರು. ನಾವೂ ಬ್ಯಾ ಅನ್ನುತ್ತ ನುಗ್ಗೆ ಬಿಟ್ಟೆವು. ಎಲ್ಲಿ ನೋಡಲಿ ಎಲ್ಲಿ ಬಿಡಲಿ ಎಂಬಂತಹ ಪರಿಸ್ಥಿತಿ. ಕೆಲವೇ ನಿಮಿಷಗಳಲ್ಲಿ ಹಲವಾರು ಜನರ ಕೈಯಲ್ಲಿ ಏನೇನೋ ವಸ್ತುಗಳು. ಇವತ್ತು ಬಿಟ್ಟರೆ ಇನ್ನೆಂದೂ ಸಿಗಲಿಕ್ಕಿಲ್ಲ ಎಂಬಂತೆ ಖರೀದಿ ಮಾಡುತ್ತಿದ್ದ ಜನಗಳನ್ನು ನೋಡಿ ನಗು ಬಂತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೊಂಭತ್ತನೆಯ ಬರಹ

ಅಮೆರಿಕನ್ನರು ಆಚರಿಸುವುದು ಕೆಲವೇ ಕೆಲವು ಹಬ್ಬಗಳು. ಅವೆಲ್ಲವೂ ಬರುವುದು ವರ್ಷದ ಕೊನೆಗೆ. ಅಕ್ಟೋಬರ್‌ನಲ್ಲಿ ಹ್ಯಾಲೊವೀನ್‌ನಿಂದ ಶುರು ಆಗುತ್ತೆ. ಅದು ನಮ್ಮ ಪಿತೃಪಕ್ಷ ಇದ್ದಂತೆ ಅಂತ ಚಂದ್ರು ಹೇಳೋನು. ಯಾಕೆಂದರೆ ಅದು ಕೂಡ ಸತ್ತವರನ್ನು ನೆನೆಸಿಕೊಳ್ಳುವ ಹಬ್ಬ ತಾನೇ! ಆದರೆ ಅವರು ಅದನ್ನು ಆಚರಿಸುವ ಬಗೆ ಮಾತ್ರ ತುಂಬಾ ತಮಾಷೆಯಾಗಿ ಇರುತ್ತೆ, ಥೇಟು ಹಾಲಿವುಡ್‌ನ ಹಾರರ್ ಚಲನಚಿತ್ರಗಳು ಇದ್ದಂತೆಯೇ! ಅವರ ಎಷ್ಟೋ ಅಂತಹ ಭೂತದ ಚಿತ್ರಗಳು ಭಯ ಹುಟ್ಟಿಸುವುದಕ್ಕಿಂತ ನಗು ತರಿಸುವುದೇ ಜಾಸ್ತಿ ಅಂತ ನನ್ನ ಅನುಭವ. ಕುಂಬಳಕಾಯಿಯನ್ನು ಕತ್ತರಿಸಿ, ಅದರಲ್ಲಿ ಮನುಷ್ಯನ ಮುಖದ ಆಕೃತಿ ಮಾಡಿ, ಒಳಗೆ ದೀಪ ಹಚ್ಚಿ ಮನೆಯ ಮುಂದೆ ಪ್ರದರ್ಶಿಸುತ್ತಾರೆ. ಅದರ ಜೊತೆಗೆ ಆ ಸಮಯದಲ್ಲಿ ತುಂಬಾ ಭೂತದ ಚಿತ್ರಗಳನ್ನು ಜನ ವೀಕ್ಷಿಸುತ್ತಾರೆ. ಚಿತ್ರ ವಿಚಿತ್ರ ಬಟ್ಟೆ ತೊಟ್ಟುಕೊಳ್ಳುತ್ತಾರೆ. ಮಕ್ಕಳು, ಮನೆ ಮನೆಗೆ ಹೋಗಿ candy ಗಳನ್ನು ಸಂಗ್ರಹಿಸುತ್ತಾರೆ. ಅದಕ್ಕೆ ಟ್ರಿಕ್ ಆರ್‌ ಟ್ರೀಟ್ (trick or treat) ಅಂತ ಕರೆಯುತ್ತಾರೆ. ನನ್ನ ಮಗಳ ಶಾಲೆಯಲ್ಲೂ ಹ್ಯಾಲೊವೀನ್ ಆಚರಣೆಯ ಕಾರ್ಯಕ್ರಮಕ್ಕೆ ಹೋಗಿದ್ದೆವು; ಅದು ಒಟ್ಟಾರೆ ಮಜವಾಗಿತ್ತು!

ಇದಾದ ಮೇಲೆ ನವೆಂಬರ್‌ನಲ್ಲಿ ಥ್ಯಾಂಕ್ಸ್ ಗಿವಿಂಗ್ ಹಾಗೂ ಬ್ಲಾಕ್ ಫ್ರೈಡೆ. ನಂತರ ಕ್ರಿಸ್ಮಸ್, ಹೊಸ ವರ್ಷಾಚರಣೆ. ಅಮೆರಿಕೆಯಲ್ಲಿ ಇವೆಲ್ಲ ಹಬ್ಬಗಳು, ಸಂಭ್ರಮಗಳು ಒಂದರ ಹಿಂದೆ ಒಂದು ಇದ್ದಾಗ ಭಾರತದಲ್ಲಿ ಇರುವ ಸಾಫ್ಟವೇರ್ ಇಂಜಿನಿಯರ್‌ಗಳು, ಮ್ಯಾನೇಜರ್‌ಗಳಿಗೂ ಹಬ್ಬವೇ. ಯಾಕೆಂದರೆ ಅಮೆರಿಕೆಯಲ್ಲಿ ಆಗ ಯಾರೂ ಕೆಲಸ ಮಾಡುವ ಇರಾದೆಯಲ್ಲಿ ಇರೋದಿಲ್ಲ. ಅಷ್ಟರೊಳಗೆ ಎಲ್ಲ ಕೆಲಸಗಳನ್ನು ಮುಗಿಸಿ ನಿರಾಳರಾಗಿ ಇರುತ್ತಾರೆ. ಕೆಲವು ಗ್ರಾಹಕ ಸೇವೆಗಳು/ ಕಾಲ್ ಸೆಂಟರ್‌ಗಳು ಭಾರತದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತಾದರೂ ದೊಡ್ಡ ಮಟ್ಟದಲ್ಲಿ ಕೆಲಸದ ಒತ್ತಡ ಅಷ್ಟಾಗಿ ಇರುವುದಿಲ್ಲ. ಹೀಗಾಗಿ ಭಾರತದ ಯಾವುದೇ ಸಾಫ್ಟವೇರ್ ಉದ್ದಿಮೆಯಲ್ಲಿ ಕೆಲಸ ಮಾಡುವವರೂ ಕೂಡ ಸುಲಭವಾಗಿ ಕೈಗೆ ಸಿಗುತ್ತಾರೆ, ಅಲ್ಲಿ ಇಲ್ಲಿ ಪ್ರವಾಸಕ್ಕೆ ಹೋಗುತ್ತಾರೆ. ಒಟ್ಟಿನಲ್ಲಿ ಅವರ ಕುಟುಂಬದ ಸದಸ್ಯರೂ ತುಂಬಾ ಖುಷಿಯಾಗಿ ಇರುತ್ತಾರೆ. ಯಾಕೆಂದರೆ ವರ್ಷವಿಡೀ ಹಗಲು ರಾತ್ರಿಯ ಲೆಕ್ಕವಿಲ್ಲದೆ ಕೆಲಸದಲ್ಲೇ ಮುಳುಗಿರುವ ಆ ಜೀವಿ ಸುಲಭವಾಗಿ, ನಿರಂಬಳವಾಗಿ ಇರುತ್ತಲ್ಲ ಎಂಬ ಸಮಾಧಾನ ಅವರಿಗೆ!

ಎಲ್ಲ ಮುಗಿದ ಮೇಲೆ ಮತ್ತೆ ಅಲ್ಲಿನವರ ಕಿರುಕುಳ ಶುರು! ಹೀಗಾಗಿ ಅಮೆರಿಕನ್ನರು ಒಂದು ತರಹ ಪಾತಾಳ ಲೋಕದ ರಕ್ಕಸರು ಅನಿಸೋರು ನನಗೆ. ನಾವು ಮಲಗಿದ್ದಾಗ ಅವರಿಗೆ ಬೆಳಗಾಗಿರುತ್ತದೆ. ನಾವು ಹಗಲು ರಾತ್ರಿ ಅವರ ಸೇವೆಯಲ್ಲಿ ಇರಲೇಬೇಕಾಗುತ್ತದೆ. ಇದೆ ಕಾರಣಕ್ಕೆ ಭಾರತದಲ್ಲಿ ಎಷ್ಟೋ ಸಂದರ್ಭಗಳಲ್ಲಿ ಶಿಫ್ಟ್‌ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗಂತ ಅವರಿಂದ ನಮಗೆ ಒಳ್ಳೆಯ ಬಿಸಿನೆಸ್ ಸಿಗುತ್ತಿರುವುದೂ ಹೌದು! ಅದಕ್ಕೆ ಕಾರಣ ಭಾರತೀಯರ ಆಂಗ್ಲ ಭಾಷೆಯ ಮೇಲಿನ ಹಿಡಿತ ಅಂತ ಅನಿಸುತ್ತೆ. ಚೀನಾದವರೇನಾದರೂ ನಮಗಿಂತ ಚೆನ್ನಾಗಿ ಆಂಗ್ಲ ಭಾಷೆ ಮಾತಾಡುವವರಾಗಿದ್ದರೆ ಅಮೆರಿಕೆಯ ಸಾಫ್ಟವೇರ್ ಕೆಲಸಗಳನ್ನೂ ಅವರೇ ಕಬಳಿಸಿ ಬಿಡುತ್ತಿದ್ದರೋ ಏನೋ! ಸಧ್ಯ ನಾನೂ ಕೂಡ ಆಗ ಪಾತಾಳ ಲೋಕದಲ್ಲೇ ಇದ್ದೆ, ರಕ್ಕಸನಂತೆ ಕಿರುಕುಳ ಕೊಡುತ್ತಿರಲಿಲ್ಲ ಅಷ್ಟೇ!

ಮಾಮೂಲಿಯಾಗಿ ನವೆಂಬರ್ ತಿಂಗಳ ಕೊನೆಯ ಗುರುವಾರ ಥ್ಯಾಂಕ್ಸ್ ಗಿವಿಂಗ್ ಇರುತ್ತೆ ಹಾಗೂ ಮರುದಿನ ಬ್ಲ್ಯಾಕ್ ಫ್ರೈಡೆ. ಗುರುವಾರ ಸಂಜೆಯೇ ಎಷ್ಟೋ ಅಂಗಡಿಗಳಲ್ಲಿ ತಹರೆವಾರಿ ಡೀಲ್ ಶುರು ಆಗಿರುತ್ತೆ. ಎಷ್ಟೋ ನೂರು ಡಾಲರ್ ಇರುವ ಕ್ಯಾಮೆರಾ ಕೆಲವೇ ನೂರು ಡಾಲರ್‌ಗೆ ಸಿಗುತ್ತದೆ. ಜೊತೆಗೆ ಮನೆಬಳಕೆಯ ಸಮಾನುಗಳು, ಐಫೋನ್, ಟಿವಿ, ಫ್ರಿಡ್ಜು ಇತ್ಯಾದಿ..

ಗುರುವಾರದ ಹಬ್ಬದ ದಿನ ರಾನ್ ನಮ್ಮನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದ. ಅವನ ಮನೆ ತುಂಬಾ ಸುಂದರವಾಗಿತ್ತು. ಸ್ವಲ್ಪ ಹಳೆಯ ವಾಸ್ತುಶಿಲ್ಪ ಅನಿಸಿತಾದರೂ ಒಳಗಡೆ ಸುಸಜ್ಜಿತವಾಗಿತ್ತು. ಅವನ ಹಲವು ಸಂಬಂಧಿಕರು ಅಲ್ಲಿದ್ದರು. ಗಂಡ ಹೆಂಡತಿ ಇಬ್ಬರೂ ಆದರದಿಂದ ನಮ್ಮನ್ನು ಬರಮಾಡಿಕೊಂಡರು. ತನ್ನ ಮಗ ಹಾಗೂ ಮಗಳನ್ನು ಕೂಡ ನಮಗೆ ಪರಿಚಯಿಸಿದರು. ಅವನ ಮಗಳು ನಮ್ಮ ಜೊತೆ ತುಂಬಾ ಅನ್ಯೋನ್ಯತೆಯಿಂದ ಮಾತನಾಡಿದಳು. ಅದು ನನಗೆ ಆಶ್ಚರ್ಯ ತಂದಿತು. ಹಾಗೂ ಈಗಾಗಲೇ ವಯಸ್ಸಿಗೆ ಬಂದಿದ್ದ ಅವರಿಬ್ಬರೂ ಅಪ್ಪ ಅಮ್ಮನ ಜೊತೆಗೆ ಇರುವುದು ಇನ್ನೂ ಆಶ್ಚರ್ಯ ಉಂಟುಮಾಡಿತ್ತು! ಮಗಳು ದುಡಿಯುತ್ತಿದ್ದಾಳೆ ಹಾಗೂ ನನಗೆ ಸಪೋರ್ಟ್ ಮಾಡುತ್ತಾಳೆ ಅಂತ ರಾನ್ ಹೇಳಿದ್ದು ನೆನಪಾಯ್ತು.


ಅಲ್ಲಿ ಊಟದ ವ್ಯವಸ್ಥೆ ಕೂಡ ಇತ್ತು. ಆದರೆ ನಮಗೆ ಬೇಕಾದ ಅಥವಾ ಇಷ್ಟವಾಗುವ ಕೆಲವೇ ಕೆಲವು ಪದಾರ್ಥಗಳು ಇದ್ದವು. ಟರ್ಕಿ ಕೋಳಿಯನ್ನು ಬೇಯಿಸಿ ಮಾಡಿದ ಅಡುಗೆ ಕೂಡ ಇತ್ತು. ಆಶಾ ಕೂಡ ಪಲಾವ್ ಮಾಡಿಕೊಂಡು ಬಂದಿದ್ದಳು. ಏನೂ ಸೇರಿಲ್ಲ ಅಂದರೆ ಅದನ್ನಾದರೂ ತಿನ್ನಬಹುದು ಅಂತ. ಆದರೆ ಅದನ್ನು ತಿಂದು ಅಲ್ಲಿನವರು ತುಂಬಾ ಇಷ್ಟಪಟ್ಟರು. ಅವರ ಕೈಯಿಂದ ಮಾಡಿದ ಬ್ರೆಡ್ ನನಗೆ ತುಂಬಾ ಇಷ್ಟವಾಯ್ತು. ಅದನ್ನು ತಿಳಿದು ರಾನ್ ನಮಗೆ ಅಂತ ಒಂದಿಷ್ಟು ಬ್ರೆಡ್‌ಗಳನ್ನು ಪಾರ್ಸಲ್ ಮಾಡಿಟ್ಟ. ಅವರ ಒಟ್ಟಾರೆ ಉಪಚಾರ ನಮಗೆ ತುಂಬಾ ಇಷ್ಟವಾಯ್ತು. ಹಾಗೆಲ್ಲಾ ಬೇರೆಯವರನ್ನು ಊಟಕ್ಕೆ ಕರೆಯುವ ಸಂಸ್ಕೃತಿ ಇರದ ಅಮೆರಿಕನ್ ಒಬ್ಬರ ಮನೆಗೆ ಊಟಕ್ಕೆ ಹೋಗಿದ್ದ ಖುಷಿ ನಮ್ಮದಾಗಿತ್ತು. “ಉಂಡೂ ಹೋದ ಕೊಂಡೂ ಹೋದ” ಎಂಬಂತೆ ಅವರ ಮನೆಯಿಂದ ಹೊರಡುವಾಗ ನಾನು ಮರೆಯದೆ ನನ್ನ ಪಾರ್ಸಲ್ ಕೈಗೆತ್ತಿಕೊಂಡೆ! ಬೇಕರಿಯಲ್ಲಿ ತಿಂದ ಬ್ರೆಡ್‌ಗಿಂತ ಎಷ್ಟೋ ಪಟ್ಟು ರುಚಿಯಾಗಿದ್ದ ಅದನ್ನು ಹಾಗೆಲ್ಲಾ ಮರೆಯುವುದುಂಟೇ?!

ಅವರ ಮನೆಯಿಂದ ಹೊರಬಿದ್ದಾಗ ಸಂಜೆಯಾಗಿತ್ತು. ಸಿಕ್ಕಾಪಟ್ಟೆ ಚಳಿ ಇತ್ತು. ಅವರ ಈ ಎಲ್ಲ ಹಬ್ಬಗಳು ಬರುವುದು ಚಳಿಯಲ್ಲಿಯೇ. ಅವತ್ತು ಹಿಮ ಬೀಳುವ ಮುನ್ಸೂಚನೆ ಕೂಡ ಇತ್ತು. ಆದರೂ ನಮಗೆ ಬ್ಲಾಕ್ ಫ್ರೈಡೆ ಡೀಲ್ ನೋಡಲೇಬೇಕಿತ್ತು! ಹೀಗಾಗಿ ನಮ್ಮ ಮನೆಗೆ ಹೋಗದೆ ಅಲ್ಲಿದ್ದ ದೊಡ್ಡ ಅಂಗಡಿ Kohls ಹೋದೆವು. ಅಲ್ಲಿದ್ದ ಸರತಿಯನ್ನು ನೋಡಿ ಬೆರಗಾದೆವು. ನಾವು ದೇವಸ್ಥಾನದ ಮುಂದೆ ದರ್ಶನಕ್ಕೆ ನಿಂತಿರುವಂತೆಯೇ ಅಲ್ಲಿನ ಜನ ಆ ಅಂಗಡಿಯ ಮುಂದೆ ಭಕ್ತಿಯಿಂದ ಕೊರೆಯುವ ಚಳಿಯಲ್ಲಿ ನಿಂತಿದ್ದರು. ಒಂದು ನಿರ್ದಿಷ್ಟ ಸಮಯದಲ್ಲಿ ಆ ಅಂಗಡಿಯ ಬಾಗಿಲು ತೆರೆದುಕೊಳ್ಳುವುದಿತ್ತು. ಒಳಗೆ ಹೋದಾಗ ಅಲ್ಲಿ ಏನೇನು ಸಿಗುತ್ತವೆಯೋ ಅದನ್ನು ಬಾಚಿಕೊಳ್ಳಲು ಜನರು ತಾಳ್ಮೆಯಿಂದ ಕಾಯುತ್ತಿದ್ದರು. ಚಳಿ ಇದ್ದುದರಿಂದ ಎಲ್ಲರೂ ಸ್ನೋ ಪ್ರೂಫ್ ಜಾಕೆಟ್, ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ನಿಂತಿದ್ದರು. ನಾವೂ ಕೂಡ ಅವರ ಜೊತೆಗೆ ನಿಂತೆವು. ನನಗೆ ಅಷ್ಟು ಡೀಲ್‌ಗಳ ಹುಚ್ಚು ಇಲ್ಲವಾದರೂ ಈ ಒಂದು ಪ್ರಕ್ರಿಯೆಯನ್ನು ಅನುಭವಿಸಬೇಕಿತ್ತು. ಅಮೆರಿಕೆಗೆ ಹೋಗಿ ಬ್ಲಾಕ್ ಫ್ರೈಡೆ ಗದ್ದಲ, ಕಾಲ್ತುಳಿತ ಅನುಭವಿಸಿಲ್ಲ ಅಂದರೆ ಹೇಗೆ! ಅಮೆರಿಕೆಯ ಎಷ್ಟೋ ಕಡೆಗಳಲ್ಲಿ ಈ ಸಮಯದಲ್ಲಿ ಹೊಡೆದಾಟಗಳೂ ಆಗುತ್ತವೆ ಅಂತೆ. ಆಗೆಲ್ಲ website ಗಳಲ್ಲಿ ಕೂಡ ಅಂತಹ ಡೀಲ್‌ಗಳನ್ನು ಹಾಕಲು ಶುರು ಮಾಡಿದ್ದರು. ಆಗಂತೂ ಕೊಳ್ಳುವವರ ಹೊಡೆತ ತಾಳದೆ ಸರ್ವರ್‌ಗಳು ಕೂಡ ಕೈ ಚೆಲ್ಲಿ ಮಲಗಿದ ನಿದರ್ಶನಗಳೂ ಇವೆ.

ನನಗೆ ಅಲ್ಲಿ ಬಂದಾಗಿನಿಂದಲೂ ಒಂದು ಒಳ್ಳೆಯ ಎಸ್ಎಲ್ಆರ್ ಕ್ಯಾಮೆರಾ ತೆಗೆದುಕೊಳ್ಳಬೇಕು ಎಂಬ ಬಯಕೆ ಇತ್ತು. ಬ್ಲಾಕ್ ಫ್ರೈಡೆ ಬಂದಾಗ ಒಳ್ಳೆ ಡೀಲ್ ಸಿಗತಾವ ಲಾ.. ತಡಕೋ ಅಂತ ಚಂದ್ರು ಹೇಳಿದ್ದ. ಹೀಗಾಗಿ ಇವತ್ತು ಸಿಕ್ಕರೆ ಅದನ್ನು ತೆಗೆದುಕೋಬೇಕು ಅಂತ ಅಂದುಕೊಂಡಿದ್ದೆ. ಅಂಗಡಿಯ ಒಳಗಡೆ ಹೋದ ಮೇಲೆಯೇ ಅದು ಗೊತ್ತಾಗುವ ಸಾಧ್ಯತೆ ಇತ್ತು. ಇಡೀ ಅಂಗಡಿಯಲ್ಲಿ ಸುತ್ತಾಡಿದಾಗ ಎಲ್ಲೆಲ್ಲಿ ಏನೇನು ಇಟ್ಟಿರುತ್ತಾರೆ ಎಂಬುದನ್ನು ಕೂಲಂಕುಶವಾಗಿ ನೋಡುವುದಕ್ಕೆ ಸಮಯ ಕೂಡ ಇರುವುದಿಲ್ಲ. ಅದು ಹೇಗಿರುತ್ತೆ ಅಂದರೆ, ಉದಾಹರಣೆಗೆ ಒಳ್ಳೆಯ ಡಿಸ್ಕೌಂಟ್‌ನಲ್ಲಿ ಎರಡು ಕ್ಯಾಮೆರಾಗಳನ್ನು ಇಟ್ಟಿದ್ದರು ಅಂತಾದರೆ, ನಾಲ್ಕು ಜನರು ಅದನ್ನು ಗಮನಿಸಿದರೆ ಯಾರು ಮೊದಲು ಕೈ ಹಾಕುತ್ತಾರೋ ಅವರಿಗೆ ಅದು ಸಿಗುತ್ತಿತ್ತು. ನೋಡೋಣ ನಮ್ಮ ಅದೃಷ್ಟ ಇದ್ದರೆ ಸಿಕ್ಕಿದ್ದೆ ಶಿವ, ಅಂತ ಅಂದುಕೊಂಡಿದ್ದೆವು. ಕೊಳ್ಳಲೇಬೇಕು ಎಂಬ ಹಪಹಪಿ ನಮಗೆ ಇರಲಿಲ್ಲ.

ಅಂತೂ ಅಂಗಡಿಯ ಬಾಗಿಲು ತೆರೆದುಕೊಂಡಿತು. ಸ್ವರ್ಗದ ಬಾಗಿಲೆ ತೆರೆಯಿತೋ ಏನೋ ಎಂಬಂತೆ ಜನರ ಕಣ್ಣುಗಳು ಅರಳಿದವು! ಸರ ಸರ ಅಂತ ಚಟುವಟಿಕೆಗಳು ಗರಿಗೆದರಿದವು. ಕುರಿ ದೊಡ್ಡಿ ಬಾಗಿಲು ತೆಗೆದಾಗ ಹೇಗೆ ಕುರಿಗಳು ನುಗ್ಗುತ್ತವೋ ಹಾಗೆಯೇ ಎಲ್ಲರೂ ಒಳ ನುಗ್ಗಿದರು. ನಾವೂ ಬ್ಯಾ ಅನ್ನುತ್ತ ನುಗ್ಗೆ ಬಿಟ್ಟೆವು. ಎಲ್ಲಿ ನೋಡಲಿ ಎಲ್ಲಿ ಬಿಡಲಿ ಎಂಬಂತಹ ಪರಿಸ್ಥಿತಿ. ಕೆಲವೇ ನಿಮಿಷಗಳಲ್ಲಿ ಹಲವಾರು ಜನರ ಕೈಯಲ್ಲಿ ಏನೇನೋ ವಸ್ತುಗಳು. ಇವತ್ತು ಬಿಟ್ಟರೆ ಇನ್ನೆಂದೂ ಸಿಗಲಿಕ್ಕಿಲ್ಲ ಎಂಬಂತೆ ಖರೀದಿ ಮಾಡುತ್ತಿದ್ದ ಜನಗಳನ್ನು ನೋಡಿ ನಗು ಬಂತು. ಅವಶ್ಯಕತೆ ಇರುವುದಕ್ಕಿಂತ, ಬೇಡವಾಗಿದ್ದನ್ನೆ ಡಿಸ್ಕೌಂಟ್ ಇದೆ ಎಂಬ ಕಾರಣಕ್ಕೆ ಕೈಗೆತ್ತಿಕೊಳ್ಳುತ್ತಿರುವುದನ್ನು ನೋಡಿದಾಗ, ಶ್ರೀ. ನಿಸಾರ್ ಅಹಮದ್ ಅವರ ಕುರಿಗಳು ಸರ್ ಕುರಿಗಳು ಪದ್ಯ ನೆನಪಾಯ್ತು. ನಮಗೆ ಹಾಗೆಲ್ಲಾ ಸಿಕ್ಕಿದ್ದನ್ನು ತೆಗೆದುಕೊಳ್ಳುವ ಮನಸ್ಸಿರಲಿಲ್ಲ. ಕ್ಯಾಮೆರಾಗೋಸ್ಕರವೆ ಹುಡುಕಾಟ ನಡೆಸಿದ್ದೆವು. ಅಷ್ಟೊತ್ತಿಗೆ ಅದೆಲ್ಲಿ ಇತ್ತೋ ಒಂದು Nikon ಕ್ಯಾಮೆರಾ ಆಶಾಳ ಕಣ್ಣಿಗೆ ಬಿದ್ದೆ ಹೋಯ್ತು! ಅವಳು ತಡ ಮಾಡದೆ ಆ ಕ್ಯಾಮೆರಾವನ್ನು ಕೈಗೆ ಎತ್ತಿಕೊಂಡಳು. ನಾನು ಅಭಿಮಾನದಿಂದ ಅವಳ ಕಡೆ ನೋಡಿದೆ. ಅವಳ ಕಣ್ಣು ತುಂಬಾ ಚುರುಕು ಹಾಗೂ ಅವಳ ಆಯ್ಕೆ ಕೂಡ. ಎಷ್ಟೋ ವರ್ಷಗಳ ಹಿಂದೆ ನಾನೂ ಹಾಗೆಯೇ ಅಲ್ಲವೇ ಅವಳ ಕಣ್ಣಿಗೆ ಬಿದ್ದಿದ್ದು!

ಅಂತೂ ನಮಗೆ ಬೇಕಾಗಿದ್ದು ಸಿಕ್ಕಿತ್ತು. ಇನ್ನೂ ಏನಾದರೂ ಸಿಕ್ಕರೆ ನೋಡೋಣ ಅಂತ ಅಂಗಡಿಯ ಒಳಗೆ ಅಲ್ಲಿ ಇಲ್ಲಿ ಸುತ್ತುತ್ತಿದ್ದೆವು. ಆಗ ನಮ್ಮಿಬ್ಬರಿಗೆ ಅಲ್ಲಿ ಕಂಡ ಒಂದು ಇಲೆಕ್ಟ್ರಾನಿಕ್ ವಸ್ತುವನ್ನು ನೋಡಿ ನನ್ನ ಕಣ್ಣುಗಳು ಹೊಳೆದವು! ನಾನು ಆಶಾ ಒಬ್ಬರನ್ನೊಬ್ಬರು ನೋಡಿದೆವು. ಯಾಕೆ ಅಷ್ಟೊಂದು ಯೋಚಿಸುತ್ತಿರುವೆ ಎತ್ತಿಕೋ ಎಂಬ ಆಶಾಳ ಕಣ್ಣು ಸನ್ನೆಯನ್ನು ಅರ್ಥೈಸಿಕೊಂಡು ಕೂಡಲೇ ಗಬಕ್ಕಂತ ಅದನ್ನ ಎತ್ತಿ ನನ್ನ ಕೈಯಲ್ಲಿ ಹಿಡಿದುಕೊಂಡೆ. ಆ ಒಂದು ವಸ್ತು ನನ್ನನ್ನು ನನ್ನ ಬಾಲ್ಯಕ್ಕೆ ಕರೆದುಕೊಂಡು ಹೋಯ್ತು, ಭಾರತದಲ್ಲಿದ್ದ ಅಪ್ಪ ನೆನಪಾದರು..

(ಮುಂದುವರಿಯುವುದು…)

(ಹಿಂದಿನ ಕಂತು: ಅಮೆರಿಕದಲ್ಲಿ ಭಾರತೀಯ ಮಕ್ಕಳು)