ಈ ಸಿನೆಮಾದ ಎಲ್ಲ ಕತೆಗಳೂ ನಗರದ ಕತೆಗಳು. ಇತ್ತೀಚೆಗೆ ಬರುತ್ತಿರುವ ಭಾರತದ ವಿವಿಧ ಭಾಷೆಗಳ ಹೊಸ ಅಲೆಯ ಸಿನೆಮಾಗಳು ಹಳ್ಳಿಗಳಲ್ಲಿ ನಡೆಯದೇ ನಗರಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಿ. ಇದು ನಿರ್ದೇಶಕರು ನಗರಗಳಲ್ಲಿ ಹುಟ್ಟಿ ಬೆಳೆದುದರ ಪರಿಣಾಮವೂ ಹೌದು ಮತ್ತು ಭಾರತ ನಗರೀಕರಣವಾಗುತ್ತಿರುವ ಪರಿಣಾಮವೂ ಎಂದು ಅನಿಸುತ್ತದೆ. ಈ ಸಿನೆಮಾಗಳು ನಗರಗಳಲ್ಲಿ ಮಾತ್ರವಲ್ಲ, ಐದರಲ್ಲಿ ನಾಲ್ಕು ಕತೆಗಳು ಮೇಲ್ಮಧ್ಯಮ ಅಥವಾ ಶ್ರೀಮಂತ ವರ್ಗಗಳ ಮನೆಗಳಲ್ಲಿ ನಡೆಯುತ್ತವೆ, ಅದೂ ಕೋವಿಡ್ ಲಾಕ್‌ಡೌನ್ ಕಾಲದಲ್ಲಿ.
ಓಟಿಟಿಯಲ್ಲಿ ನೋಡಿದ ತಮಿಳಿನ ಮೂರು ಆ್ಯಂಥಾಲಾಜಿ ಸಿನೆಮಾಗಳ ಬಗ್ಗೆ ‘ಇಂಗ್ಲೆಂಡ್ ಪತ್ರ’ ಬರೆದಿದ್ದಾರೆ ಕೇಶವ ಕುಲಕರ್ಣಿ
ವರ್ಷ ಮುಗಿಯುತ್ತ ಬಂದಿದೆ. ಕೋವಿಡ್-19 ವೈರಸ್ ಜಾಗತಿಕ ಸಾಂಕ್ರಾಮಿಕ ಇನ್ನೂ ಮಾನವ ಜನಾಂಗವನ್ನು ಇನ್ನೂ ಬಿಟ್ಟು ಹೋಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಓಟಿಟಿಗಳ ದೆಸೆಯಿಂದಾಗಿ, ಪೈರೇಟೆಡ್ ಜಾಲತಾಣಗಳಿಂದ ಸಿನೆಮಾ ನೋಡುವ ಚಟದಿಂದ ಕಂಪ್ಯೂಟರುಗಳಿಗೆ ವೈರಸ್ ಬರುವುದಂತೂ ಕಡಿಮೆಯಾಗಿದೆ.
ನೆಟ್‌ಫ್ಲಿಕ್ಸ್ ಮತ್ತು ಅಮೇಜ಼ಾನ್ ಪ್ರೈಮ್‌ಗಳಲ್ಲಿ ಈಗ ಬೇಕಾದಷ್ಟು ಭಾರತೀಯ (ಕನ್ನಡವನ್ನೂ ಸೇರಿಸಿ) ಸಿನೆಮಾಗಳು ನೋಡಲು ಸಿಗುತ್ತಿವೆ. ಈ ವರ್ಷ ಓಟಿಟಿಯಲ್ಲಿ ಬಿಡುಗಡೆಯಾದ `ಕಥಾಗುಚ್ಛ ಸಿನೆಮಾ/ಸೀರೀಸ್ (ಆ್ಯಂಥಾಲಾಜಿ)`ಗಳನ್ನು ವಿವಿಧ ಭಾಷೆಗಳಲ್ಲಿ ನೋಡಿದೆ. ಈಗ ಎಲ್ಲ ಸಿನೆಮಾಗಳೂ ಇಂಗ್ಲೀಷ್ ಸಬ್‍ಟೈಟಲ್ಲುಗಳಲ್ಲಿ ಬರುವುದರಿಂದ ಯಾವ ಭಾಷೆಯ ಸಿನೆಮಾ ಆದರೂ ಪರವಾಗಿಲ್ಲ.
ಸಣ್ಣಕತೆಗಳನ್ನು ಸೇರಿಸಿ ಕಥಾಗುಚ್ಛಗಳ ಸಿನೆಮಾ ಮಾಡುವ ಪ್ರಯೋಗ ಹೊಸದೇನಲ್ಲ. ಕೋವಿಡ್ ಸಾಂಕ್ರಾಮಿಕದಲ್ಲಿ ಇಂಥ ಸಿನೆಮಾಗಳು ಭಾರತೀಯ ಭಾಷೆಗಳಲ್ಲಿ ಹೆಚ್ಚಾದವು ಮತ್ತು ಓಟಿಟಿಯಲ್ಲಿ ಸಬ್‌ಟೈಟಲ್‌ಗಳೊಡನೆ ನೋಡಲು ದೊರೆತವು.
ಇಂಥ ಸಿನೆಮಾಗಳು ಒಂದು ‘ಕಥಾಸಂಕಲನʼವನ್ನು ಓದಿದ ಅನುಭವವನ್ನು ಕೊಡುತ್ತವೆ. ಸಿನೆಮಾದ ವಸ್ತು ಮತ್ತು ತಂತ್ರಗಳಲ್ಲಿ ಆಸಕ್ತಿಯಿರುವವರಿಗೆ ಹೊಸ ಹೊಸ ವಿಷಯಗಳನ್ನು ಕಲಿಸುತ್ತವೆ. ಈ ವರ್ಷ ಇಂಥ ಸಿನೆಮಾಗಳು ವಿವಿಧ ಭಾರತೀಯ ಭಾಷೆಗಳಲ್ಲಿ ಬೆಳಕುಕಂಡವು. ಕೋವಿಡ್ ದೆಸೆಯಿಂದಾಗಿ ಕಡಿಮೆ ಬಡ್ಜೆಟ್ಟಿನಲ್ಲಿ ತಮ್ಮ ಸೃಜನಶೀಲತೆಯನ್ನು ಕಂಡುಕೊಳ್ಳುವ ಉಪಾಯಕ್ಕೆ ನಿರ್ದೇಶಕರು ತಮ್ಮನ್ನು ಒಡ್ಡಿಕೊಂಡರು ಎನಿಸುತ್ತದೆ. ಕೆಲವು ಸಿನೆಮಾದ ತರಹ ಇದ್ದರೆ, ಕೆಲವು ಎಪಿಸೋಡುಗಳ ತರಹ ಇವೆ. ಈ ಕೋವಿಡ್ ಸಮಯದಲ್ಲಿ ತಮಿಳಿನಲ್ಲಿ (ನನಗೆ ತಮಿಳು ಬರುವುದೂ ಇಲ್ಲ) ನಾನು ನೋಡಿದ ಇಂಥ ಮೂರು ಚಿತ್ರಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ನವರಸ:
ಒಂಭತ್ತು ರಸಗಳ ಕಥಾಗುಚ್ಛವಿದು. ಒಂದೊಂದು ರಸಕ್ಕೆ ಒಂದು ಕತೆ. ಇಂಥದೊಂದು ಕಲ್ಪನೆಯೇ ಅದ್ಭುತ. ಇಂಥದೊಂದು ಕಲ್ಪನೆಯಲ್ಲಿ ವಿವಿಧ ಪರಿಣಿತರನ್ನು ಸೇರಿಸಿ ಮಾಡುವ ಕೆಲಸ ಸುಲಭದ್ದಲ್ಲ. ಹಾಗೆಯೇ ಎಲ್ಲ ಕಿರುಚಿತ್ರಗಳೂ ಒಂದೇ ರೀತಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗುವುದಿಲ್ಲ.
ಕರುಣ ರಸದ ಮೊದಲ ಕತೆಯಲ್ಲಿ ಕೊಲೆಯ ಕ್ರೌರ್ಯವಿದೆ, ಕ್ರೌರ್ಯಯ ಕ್ರಿಯೆ ಮುಗಿದಾದ ಮೇಲೆ ಉಳಿಯುವುದು `ಕರುಣ` ಮಾತ್ರವೇ ಎಂದು ಪ್ರಶ್ನಿಸುವಂತಿದೆ ಈ ಚಿತ್ರ.
ಎರಡನೇ ಕತೆಯ ಮುಖ್ಯ ಎಳೆ ಹಾಸ್ಯರಸ. ಪ್ರಸಿದ್ಧ ಹಾಸ್ಯನಟನೊಬ್ಬ ತಾನು ಓದಿದ ಪ್ರಾಥಮಿಕ ಶಾಲೆಗೆ ಮುಖ್ಯ ಅತಿಥಿಯಾಗಿ ಬರುವ ಕಥೆ. ಆ ಹಾಸ್ಯನಟ ಚಿಕ್ಕವನಿದ್ದಾಗ ನಡೆದ ಘಟನೆ ನೋಡುಗರಿಗೆ ನಗುತರಿಸುವಂತಿದ್ದರೂ ನಿಜಜೀವನದಲ್ಲಿ ನಡೆದರೆ ಜಿಗುಪ್ಸೆಯನ್ನು, ಹೇಸಿಗೆಯನ್ನು (ಬೀಭತ್ಸ) ಹುಟ್ಟಿಸುವಂತಿದೆ. ಕತೆ ಕೊನೆಯಲ್ಲಿ `ಕರುಣ`ದಲ್ಲಿ ಮುಕ್ತಾಯವಾಗುತ್ತದೆ.
`ಅದ್ಭುತ`ರಸದ ಕತೆಯಲ್ಲಿ ಅತಿರಂಜಕ/ಅದ್ಭುತರಮ್ಯ (ಫ್ಯಾಂಟಸಿ – ಸೈಫೈ) ಕತೆಯಿದೆ. ವಿಜ್ಞಾನ ಮತ್ತು ತತ್ವಶಾಸ್ತ್ರಗಳ ನಡುವಿನ ಜಿಜ್ಞಾಸೆಗಳನ್ನು ಕತೆಗಳನ್ನಾಗಿಸಿ ಹೇಳುವ ರೀತಿಯಲ್ಲಿ ನಿಗೂಢತೆಯಿದೆ, ಜೊತೆಗೆ ಅಂತ್ಯದಲ್ಲಿ ಊಹಿಸಲಾಗದ ತಿರುವಿನಲ್ಲಿ `ಭಯಾನಕ`ದ ರಸದಲ್ಲಿ ಮುಕ್ತಾಯವಾಗುತ್ತದೆ.
`ಅಸಹ್ಯ (ಬೀಭತ್ಸ)` ತರಿಸುವ `ಪಾಯಸ`ದ ಕತೆಯಿದೆ. ಈ ಚಿತ್ರದಲ್ಲಿ ತುಂಬ ಸೂಕ್ಷ್ಮ ಅವಲೋಕನಗಳಿವೆ. ಪುಟ್ಟ ಪುಟ್ಟ ವಿಷಯಗಳನ್ನೂ ವಿವರವಾಗಿ ಆದರೆ ಗುಪ್ತಗಾಮಿಸಿಯಾಗಿ ಕ್ಯಾಮರದಲ್ಲಿ ಸೆರೆಹಿಡಿಯಲಾಗಿದೆ. ಮುಖ್ಯಪಾತ್ರದ ತಲ್ಲಣಗಳು ವಾಚ್ಯವಾಗದೇ ನಮ್ಮನ್ನು ತಲುಪುವ ನಿಪುಣತೆ ಇದೆ. ಚಿತ್ರದ ಕೊನೆ ಅಸಹ್ಯ ತರಿಸುತ್ತದೆ, ಮಗಳಿಗೆ. ಆದರೆ ನೋಡುಗನಿಗಲ್ಲ ಎನ್ನುವುದು ವಿಶೇಷ ಎನಿಸುತ್ತದೆ. ಚಿತ್ರದ ನಾಯಕ ಮಾಡುವುದು ತಪ್ಪು ಎಂದು ಗೊತ್ತಿದ್ದರೂ ನೋಡುಗನಿಗೆ ಅವನ ಮೇಲೆ ಅಸಹ್ಯ ಅನಿಸುವುದಿಲ್ಲ, ಬದಲು ಆ ಮುದುಕನ ಮೇಲೆ `ಕರುಣೆ` ಮೂಡುತ್ತದೆ.
`ರೌದ್ರ` ಎಂದರೆ ಭಯಂಕರ ಸಿಟ್ಟು. ಈ ಭಯಂಕರ ಸಿಟ್ಟು ಕೊಲೆಯ ಕ್ರೌರ್ಯದಿಂದ ಆರಂಭವಾಗುತ್ತದೆ. ಕೊಲೆ ಮಾಡಿದ ಮೇಲೆ ಕೋಪವೆಲ್ಲ ಇಳಿದು ಹೋಗುತ್ತದೆ. ಆದರೆ ಕೊಲೆ ಮಾಡಿದಾತನ ಸಹೋದರಿಗೆ ತನ್ನ ತಾಯಿಯ ಮೇಲೆ ಕೋಪ (ಕಾರಣವೇನೇ ಇರಲಿ), ಆ ಕೋಪ ತಾಯಿಯು ಸಾವಿನ ಹೊಸ್ತಿಲಲ್ಲಿ ಇದ್ದರೂ ತಾಯಿಯನ್ನು ಕ್ಷಮಿಸಲು ಬಿಡುವುದಿಲ್ಲ, ಅಂಥ ಭಯಂಕರ ಕೋಪ. ಈ ಚಿತ್ರ `ಪಾಯಸ` ಚಿತ್ರದಷ್ಟೇ ಸಶಕ್ತವಾಗಿದೆ.
ಇಂಥ ಸಿನೆಮಾಗಳು ಒಂದು ‘ಕಥಾಸಂಕಲನʼವನ್ನು ಓದಿದ ಅನುಭವವನ್ನು ಕೊಡುತ್ತವೆ. ಸಿನೆಮಾದ ವಸ್ತು ಮತ್ತು ತಂತ್ರಗಳಲ್ಲಿ ಆಸಕ್ತಿಯಿರುವವರಿಗೆ ಹೊಸ ಹೊಸ ವಿಷಯಗಳನ್ನು ಕಲಿಸುತ್ತವೆ. ಈ ವರ್ಷ ಇಂಥ ಸಿನೆಮಾಗಳು ವಿವಿಧ ಭಾರತೀಯ ಭಾಷೆಗಳಲ್ಲಿ ಬೆಳಕುಕಂಡವು.
`ಶಾಂತ`, `ಭಯಾನಕ`, `ವೀರ` ಮತ್ತು `ಶೃಂಗಾರ` ರಸಗಳ ಕತೆಗಳು ತುಂಬ ತೆಳುವಾಗಿವೆ. ಇಲ್ಲಿ ಭಯವೂ ಆಗುವುದಿಲ್ಲ, ವೀರಾವೇಶವೂ ಮೂಡುವುದಿಲ್ಲ, ಶೃಂಗಾರದ ಹೊಂಗೆ ಮರ ಹೂ ಬಿಡುವುದಿಲ್ಲ, ಶಾಂತಿಯೂ ಸಿಗುವುದಿಲ್ಲ, ಏನೂ ಅನಿಸುವುದಿಲ್ಲ. ಈ ನಾಲ್ಕು ಚಿತ್ರಗಳ ಬಗ್ಗೆ ಕಡಿಮೆ ಬರೆದಷ್ಟು ಒಳ್ಳೆಯದು.
ಪುತ್ತಂ ಪುದು ಕಾಲೈ:
ಸಿನೆಮಾದ ಶೀರ್ಷಿಕೆಯೇ ಹೇಳುವಂತೆ ಈ ಚಿತ್ರದ ಎಲ್ಲ ಎಲ್ಲ ಕತೆಗಳೂ ಒಂದು ಹೊಸ ಭರವಸೆಯೊಂದಿಗೆ ಮುಗಿಯುತ್ತವೆ. ಈ ಸಿನೆಮಾದ ಎಲ್ಲ ಕತೆಗಳೂ ನಗರದ ಕತೆಗಳು. ಇತ್ತೀಚೆಗೆ ಬರುತ್ತಿರುವ ಭಾರತದ ವಿವಿಧ ಭಾಷೆಗಳ ಹೊಸ ಅಲೆಯ ಸಿನೆಮಾಗಳು ಹಳ್ಳಿಗಳಲ್ಲಿ ನಡೆಯದೇ ನಗರಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಿ. ಇದು ನಿರ್ದೇಶಕರು ನಗರಗಳಲ್ಲಿ ಹುಟ್ಟಿ ಬೆಳೆದುದರ ಪರಿಣಾಮವೂ ಹೌದು ಮತ್ತು ಭಾರತ ನಗರೀಕರಣವಾಗುತ್ತಿರುವ ಪರಿಣಾಮವೂ ಎಂದು ಅನಿಸುತ್ತದೆ. ಈ ಸಿನೆಮಾಗಳು ನಗರಗಳಲ್ಲಿ ಮಾತ್ರವಲ್ಲ, ಐದರಲ್ಲಿ ನಾಲ್ಕು ಕತೆಗಳು ಮೇಲ್ಮಧ್ಯಮ ಅಥವಾ ಶ್ರೀಮಂತ ವರ್ಗಗಳ ಮನೆಗಳಲ್ಲಿ ನಡೆಯುತ್ತವೆ, ಅದೂ ಕೋವಿಡ್ ಲಾಕ್‌ಡೌನ್ ಕಾಲದಲ್ಲಿ.
‘ಪ್ರೀತಿʼ ಎನ್ನುವುದೊಂದು ಮೂಡಿದರೆ, ಎಷ್ಟೇ ವಯಸ್ಸಾಗಿದ್ದರೂ ಹೇಗೆ ಮಾನಸಿಕವಾಗಿ ನಾವೆಲ್ಲ ಯುವಕರಾಗುತ್ತೇವೆ ಎನ್ನುವುದನ್ನು ವಿಭಿನ್ನ ತಂತ್ರದಿಂದ ಇಲ್ಲಿ ಕತೆಯನ್ನು ಹೇಳಿದ್ದಾರೆ. ಇಂಥ ತಂತ್ರವನ್ನು ಉಪಯೋಗಿಸಿ ಮಾಡಿದ ಇನ್ನೊಂದು ಸಿನೆಮಾವನ್ನು ನಾನಂತೂ ನೋಡಿಲ್ಲ. ಅದಕ್ಕೆಂದೇ ಈ ಸಿನೆಮಾ ತಂತ್ರದಿಂದಾಗಿ ತುಂಬ ಖುಷಿಕೊಡುತ್ತದೆ. ಇಂಥದೊಂದು ಕತೆಯನ್ನು ಕತೆಯ ರೂಪದಲ್ಲಿ ಬರೆಯಲು ಸಾಧ್ಯವೇ ಇಲ್ಲ, ದೃಶ್ಯಮಾಧ್ಯಮದಲ್ಲೇ ಮಾಡಬೇಕು, ಹಾಗಿದೆ ಈ ತಂತ್ರ.
ಎರಡು ತಲೆಮಾರುಗಳ ನಡುವಿನ ಕಂದಕವು ಕೋವಿಡ್ ಲಾಕ್‌ಡೌನ್‌ನಿಂದಾಗಿ ಹೇಗೆ ಮುಚ್ಚುತ್ತಾ ಬರುತ್ತದೆ ಎನ್ನುವ ಆಶಯದ ಇನ್ನೊಂದು ಕತೆಯಿದೆ. ಅಜ್ಜ ಮತ್ತು ಮೊಮ್ಮಗಳು ಲಾಕ್‌ಡೌನ್ ನೆಪದಲ್ಲಿ ಒಂದೇ ಮನೆಯಲ್ಲಿ ಇರಬೇಕಾದ ಅನಿವಾರ್ಯತೆಯ ಒದಗುತ್ತದೆ. ಇಲ್ಲಿ ತಾತನೂ ಕೂಡ ತುಂಬ ಓದಿದ ವಿದ್ಯಾವಂತ ಎನ್ನುವುದು ಈ ಚಿತ್ರದ ವಿಶೇಷ, ಏಕೆಂದರೆ ಇಲ್ಲಿಯವರೆಗೂ ‘ತಾತʼ ಎಂದರೆ ಹಳ್ಳಿಯಲ್ಲಿ ಬೆಳೆದ ಅವಿದ್ಯಾವಂತ ಎನ್ನುವಂತೆ ಚಿತ್ರರಂಗ ತೋರಿಸುತ್ತ ಬಂದಿದೆ.
ಇನ್ನೊಂದು ಕತೆ: ಕೋಮಾದಲ್ಲಿರುವ ತಾಯಿಯಿಂದಾಗಿ ತವರುಮನೆಗೆ ಬರುವ ಇಬ್ಬರು ಹೆಣ್ಣುಮಕ್ಕಳ (ಅವರಿಗೂ ವಯಸ್ಸಾಗುತ್ತಿದೆ) ನಡುವಿನ, ಮತ್ತು ಅವರು ಮತ್ತು ಅವರ ತಂದೆಯ ನಡುವಿನ ಭಾವನೆಗಳ ಸುತ್ತ ಕತೆ ಸಾಗಿ ಭರವಸೆಯೊಂದಿಗೆ ಮುಗಿಯುತ್ತದೆ.
ಲಾಕ್‌ಡೌನ್ ದೆಸೆಯಿಂದಾಗಿ ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೇ, ತನ್ನ ಕಾಲೇಜ್‌ಮೇಟ್ ಆಗಿದ್ದ ಯುವಕನ ಮನೆಗೆ (ಈಗ ಆತ ವೈದ್ಯ) ಬರುವ ಡ್ರಗ್-ಅಡಿಕ್ಟ್ ಆದ ಯುವತಿಯೊಬ್ಬಳು ಆ ಮನೆಯಿಂದ ಹೊರಗೆ ಹೋಗುವಷ್ಟರಲ್ಲಿ ಹೇಗೆ ಹೊಸ ಆಸೆಗಳನ್ನು ಅರಳಿಸಿಕೊಂಡು ಹೋಗುತ್ತಾಳೆ ಎನ್ನುವುದು ಇನ್ನೊಂದು ಕತೆ.
ಕೊನೆಯ ಕತೆ, ಈ ಸಿನೆಮಾಗಳ ಬಾಲಂಗಸಿಯಂತೆ ಉಳಿಯುತ್ತದೆ, ಆದರೆ ಆ ಕತೆಯ ಅಂತ್ಯದ ತಿರುವು ಸೊಗಸಾಗಿದೆ. ಈ ಕಥಾಗುಚ್ಛದ ಮೂಲ ಉದ್ದೇಶ `ಭರವಸೆʼಇದ್ದರೂ, ಕೊನೆಯ ಕತೆ ಇಲ್ಲಿ ಸಲ್ಲದ, ಆದರೆ ಸ್ವತಂತ್ರವಾಗಿ ಒಂದು ಉತ್ತಮ ಕಿರುಚಿತ್ರವಾಗಿದೆ.
ಪಾವ ಕದೈಗಳ್:
ಈ ಕಿರುಚಿತ್ರಗಳ ಸಾಮಾನ್ಯ ಅಂಶ ಎಂದರೆ `ಪಾಪʼ – ಸಮಾಜದ ಅಥವಾ ಕುಟುಂಬದ ಕಣ್ಣಿನಲ್ಲಿ ಯಾವುದು ಪಾಪವೋ, ಅಂಥ ಪಾಪಗಳ ಕತೆಗಳಿವೆ. ಈ ಸಿನೆಮಾದ ಕತೆಗಳು ಹಳ್ಳಿ ಮತ್ತು ಪಟ್ಟಣಗಳ ನಡುವೆ ತುಯ್ದಾಡುತ್ತವೆ ಎನ್ನುವುದು ವಿಶೇಷ. ಈ ಕಥಾಗುಚ್ಛ ದುರ್ಬಲ ಹೃದಯದವರಿಗೆ ಅಲ್ಲ.
ಇದೊಂದು ವಿಚಿತ್ರ ತ್ರಿಕೋನ ಪ್ರೇಮದ ಕತೆ. ಹಳ್ಳಿಯೊಂದರಲ್ಲಿ ನಡೆಯುವ ಈ ಪ್ರೇಮದಲ್ಲಿ ಅಂತರಧರ್ಮಪ್ರೇಮ ಮತ್ತು ಸಲಿಂಗಪ್ರೇಮ ಎನ್ನುವ ಎರಡು ಸಂಘರ್ಷಗಳನ್ನು ಒಟ್ಟಿಗೇ ಇಟ್ಟು ನೋಡುವ ಕಥೆಯನ್ನು ಹೆಣೆದಿದ್ದಾರೆ. ಇಸ್ಲಾಂ ಹುಡುಗಿಯ ಮೇಲೆ ಹಿಂದೂ ಹುಡುಗನಿಗೆ ಪ್ರೇಮ ಅಂಕುರಿಸುತ್ತದೆ. ಆ ಹುಡುಗಿಯ ಅಣ್ಣನಿಗೆ ಈ ಹಿಂದೂ ಹುಡುಗನ ಮೇಲೆ ಪ್ರೇಮ ಮೂಡುತ್ತದೆ. ಈ ಎರಡು `ಪಾಪʼಗಳ ಪ್ರೇಮಕತೆಯೇ ಇಲ್ಲಿನ ವಸ್ತು.
ಇಲ್ಲಿರುವ ಎರಡನೇ ಕತೆ ಅಂತರಜಾತಿ ಪ್ರೇಮದ ಪಾಪದ ಕತೆ. ಮನೆತನದ ಮರ್ಯಾದೆಯನ್ನು ಕಾಪಾಡಲು ಕೊಲೆ ಮಾಡಿಸಲೂ (ಆನರ್ ಕಿಲ್ಲಿಂಗ್) ಹೇಸದ ಅಪ್ಪನ ಕಥೆಯಿದೆ, ಅದು ಆತನಿಗೆ ಪಾಪ ಎಂದು ಕೂಡ ಅನ್ನಿಸುವುದಿಲ್ಲ. ಆ ಕತೆಯಲ್ಲಿ ಕೂಡ ಸಲಿಂಗಕಾಮದ `ಪಾಪʼ ಬರುತ್ತದೆ.
ಮೂರನೇ ಕತೆಯಲ್ಲಿ ಅಪ್ರಾಪ್ತ ಹುಡುಗಿಯ ಮೇಲಿನ ಬಲಾತ್ಕಾರವಾಗುತ್ತದೆ; ಅದು ಪಾಪ. ಆದರೆ, ಬಲಾತ್ಕಾರ ಮಾಡಿದಾತನಿಗ ಯಾವ ಪಾಪದ ಭಯವೂ ಇಲ್ಲ. ಯಾವ ಪಾಪವನ್ನೂ ಮಾಡಿರದ ಬಲಾತ್ಕಾರಕ್ಕೆ ಒಳಗಾದ ಅಪ್ರಾಪ್ತ ಹುಡುಗಿ ಸಮಾಜದ ಕಣ್ಣಲ್ಲಿ `ಪಾಪʼ ಮಾಡಿದವಳು. ಇಂಥ ಸಮಾಜವನ್ನು ಎದುರಿಸುವ ಧೈರ್ಯ ಸಾಲದೇ ಮಗಳನ್ನೇ ಕೊಲ್ಲುವ `ಪಾಪʼದ ಕಲ್ಪನೆಯಿದೆ.
ನಾಲ್ಕನೇ ಕತೆಯಲ್ಲಿ ಅಂತರಜಾತೀಯ ವಿವಾಹವಾಗಿ ನಗರವನ್ನು ಸೇರಿದ ಹಿರಿಯ ಮಗಳ ಕಾರಣದಿಂದಾಗಿ, ಉಳಿದ ಹೆಣ್ಣುಮಕ್ಕಳ ಮದುವೆ ಮಾಡಲಾಗದೇ, ತನ್ನ ಜಾತಿಯಲ್ಲಿ ತಲೆ ತಗ್ಗಿಸಿ ನಡೆಯುವವನಿಗೆ ತನ್ನ ಹಿರಿಯ ಮಗಳು ಮಾಡಿದ್ದು `ಪಾಪʼ. ಆ `ಪಾಪʼಕ್ಕೆ ತಂದೆ ಮಾಡುವ ಪ್ರತಿಕಾರ ಈ ಕಥಾಗುಚ್ಛದ ಅತ್ಯುತ್ತಮ ಸಿನೆಮಾ ಆಗಿಸುತ್ತದೆ. ಈ ಚಿತ್ರದಲ್ಲಿ ಪ್ರಕಾಶ್ ರೈ ತಂದೆಯ ಪಾತ್ರವನ್ನು ಮಾಡುವ ರೀತಿ ಅನನ್ಯವಾಗಿದೆ..
ಈ ನಾಲ್ಕೂ ಕತೆಗಳನ್ನು ವಾಸ್ತವಕ್ಕೆ ಹತ್ತಿರವಾಗಿರುವಂತೆ ಬರೆಯಲಾಗಿದೆ ಮತ್ತು ಚಿತ್ರೀಕರಿಸಲಾಗಿದೆ. `ನವರಸʼ ಮತ್ತು `ಪುತ್ತಂ ಪುದು ಕಾಲೈʼಗಳಿಗೆ ಹೋಲಿಸಿದರೆ, ಈ ಕಥಾಗುಚ್ಛ `ಪಾಪʼದ ವಿಷಯಕ್ಕೆ ಬದ್ಧವಾಗಿದೆ. ತುಂಬ ದಿನ ನೆನಪಿನಲ್ಲಿ ಉಳಿಯುವಂಥ ಕಥಾಗುಚ್ಛವಿದು..
ಕನ್ನಡದಲ್ಲಿ ಕಥಾಗುಚ್ಛಗಳ ಸಿನೆಮಾಗಳು:
ಈ ಮೂರೂ ಕಥಾಗುಚ್ಛಗಳು ವಿನೂತನವಾಗಿವೆ. ನಮ್ಮ ಸಮಯವನ್ನು ತಿನ್ನದೇ, ನಮ್ಮ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡದೇ, ವಿಭಿನ್ನ ರೀತಿಯ ಕತೆಗಳನ್ನು ಹೇಳುವ ಇಂಥ ಕಥಾಗುಚ್ಛಗಳು ನನಗೆ ತುಂಬ ಇಷ್ಟವಾದವು. ಲಾಕ್‌ಡೌನ್ ಸಮಯದಲ್ಲಿ ತಮಿಳು ಚಿತ್ರರಂಗ ತಂದ ಇಂಥ ವಿಭಿನ್ನ ಪ್ರಯತ್ನವನ್ನು ಮಲಯಾಳಂದಲ್ಲೂ ಮಾಡಿದ್ದಾರೆ, ತೆಲುಗಿನಲ್ಲೂ ಬಂತು, ಹಿಂದಿಯಲ್ಲೂ ಬಂದವು. ಆದರೆ ಕನ್ನಡದಲ್ಲಿ ಮಾತ್ರ ಬರಲಿಲ್ಲ. ಲಾಕ್-ಡೌನ್ ಕತೆಯ `ಇಕ್ಕಟ್` ಸಿನೆಮಾ ಮಾತ್ರ ಬಂತು.
ಕಿರುತೆರೆಯಲ್ಲಿ ಬಹಳ ಹಿಂದೆ ಶ್ಯಾಮ್ ಬೆನಗಲ್ ‘ಅಮರಾವತೀ ಕಿ ಕಹಾನಿʼ ಎನ್ನುವ ಸುಂದರ ಕಥಾಗುಚ್ಛವನ್ನು ದೂರದರ್ಶನಕ್ಕೆ ಮಾಡಿದ್ದರು. ಪುಟ್ಟಣ್ಣ ಕಣಗಾಲ್ ಅವರು `ಕಥಾಸಂಗಮʼವನ್ನು ದಶಕಗಳ ಹಿಂದೆಯೇ ಮಾಡಿದ್ದರು. ಅದೇ ಹೆಸರನ್ನು ಇಟ್ಟುಕೊಂಡು ರಿಷಭ್ ಶೆಟ್ಟಿಯವರು ಕೋವಿಡ್ ಬರುವ ಮೊದಲು ಮಾಡಿದ್ದರು. ಅಚ್ಚಕನ್ನಡದ ಮೈಸೂರಿನಲ್ಲಿ ಬದುಕಿದ್ದ ತಮಿಳಿನ ಆರ್.ಕೆ.ನಾರಾಯಣ್ ಅವರು ಇಂಗ್ಲೀಷಿನಲ್ಲಿ ಬರೆದ ಕತೆಗಳನ್ನು ಹಿಂದಿಯಲ್ಲಿ ತೆರೆಗೆ ತಂದವರು ಮನೆಮಾತು ಕೊಂಕಣಿಯಾಗಿದ್ದ ಶಂಕರನಾಗ್ ಅವರು (ಕಥೆ ಬರೆಯುವವರಿಗೆ ಸಿನೆಮಾ ಮಾಡುವವರಿಗೆ ಭಾಷೆಯ ಹಂಗಿಲ್ಲ, ಅಲ್ಲವೇ?) ಅಂದಿನ ಕಾಲದ ತಂತ್ರಜ್ಞಾನದಲ್ಲಿ, ಇರುವ ಕಡಿಮೆ ಬಡ್ಜೆಟ್ಟಿನಲ್ಲಿ, ಆರ್ ಕೆ ನಾರಾಯಣ್ ಅವರ ಕತೆಗಳನ್ನು ಕಿರುತೆರೆಗೆ ತಂದು `ಸ್ವಾಮಿʼಯನ್ನು ಭಾರತದ ಮನೆ ಮಾತಾಗಿಸಿದ್ದು ಕನ್ನಡ ಚಿತ್ರರಂಗದ ಶಂಕರನಾಗ್.
ಇತ್ತೀಚೆ ಬಂದ `ಅನ್-ಕಹೀ ಕಹಾನಿಯಾಂʼ ಎನ್ನುವ ಕಥಾಗುಚ್ಛದಲ್ಲಿ ಜಯಂತ್ ಕಾಯ್ಕಿಣಿಯವರು ಬರೆದ ಕತೆಯೊಂದನ್ನು ಎತ್ತಿಕೊಂಡು ಒಂದು ಕತೆ ಹೇಳಿದ್ದಾರೆ. ಕನ್ನಡ ಸಾಹಿತ್ಯ ಸಣ್ಣಕತೆಗಳ ಗಣಿ ಎಂದರೆ ತಪ್ಪಿಲ್ಲ. ಮಾಸ್ತಿಯವರಿಂದ ಹಿಡಿದು ಜೋಗಿಯವರು ಬರೆದಿರುವ ಸಣ್ಣಕತೆಗಳಲ್ಲಿ ಇಂಥ ಒಂದಲ್ಲ ಹತ್ತು ಆ್ಯಂಥಾಲಾಜಿಗಳನ್ನು ತರಬಹುದು. ಓಟಿಟಿಯಲ್ಲಿ ಕನ್ನಡದ ಕಂಪನ್ನು ಹರಡಲು ಇದಕ್ಕಿಂತ ಓಳ್ಳೆಯ ವಸ್ತುಗಳು ಮತ್ತು ತಂತ್ರಗಳು ಸಿಗುವುದಿಲ್ಲ. ಇದರತ್ತ ಕನ್ನಡದ ನಿರ್ದೇಶಕರು ಮತ್ತು ನಿರ್ಮಾಪಕರು ಗಮನ ಹರಿಸಲಿ ಎನ್ನುವುದು ನನ್ನ ಆಶಯ.
ಹುಟ್ಟಿ ಬೆಳೆದು ಓದಿದ್ದು ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ ಮತ್ತು ಮೈಸೂರು. ವೃತ್ತಿಯಿಂದ ವೈದ್ಯ – ರೇಡಿಯಾಲಾಜಿ. ಸಾಹಿತ್ಯ, ಸಂಗೀತ ಮತ್ತು ಸಿನೆಮಾಗಳಲ್ಲಿ ಆಸಕ್ತಿ. ೨೦೦೪ರಿಂದ ಇಂಗ್ಲೆಂಡ್ ನಿವಾಸಿ, ವಾಸ ಇಂಗ್ಲೆಂಡಿನ ಬರ್ಮಿಂಗ್-ಹ್ಯಾಮ್ ನಗರ. ಕೆಲವು ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಂಗ್ಲೆಂಡ್ ಕನ್ನಡಿಗರ `ಅನಿವಾಸಿ` ಎಂಬ ಜಾಲತಾಣದಲ್ಲಿ ಸಕ್ರಿಯ.
ಸೊಗಸಾದ ಬರಹ ??
ನಮಸ್ತೆ ಸರ್.ಹೇಗಿದ್ದೀರಿ ? ನನಗೊಂದು ಹೊಸ ಅನುಭವ ನಿನ್ನ ಬರಹಗಳನ್ನು ಏದಿದೆ ಮೇಲೆ ಆಗುತ್ತಿದೆ.ನಮ್ಮ ಜೀವನವೇ ಒಂದು ಕಥೆ ಅನಿಸಲಾರಂಭಿಸುತ್ತದೆ.ಹಿರಿಯ ನಾಗರಿಕರಾಗುತ್ತಿದ್ದಂತೆ,ನಾವು ಮಾಡಿದ ತಪ್ಪುಗಳು ನಮ್ಮನ್ನು ಚುಚ್ಚಲಾರಂಭಿಸುತ್ತವೆ.ಆದರೆ ಒಡೆದ ಕನ್ನಡಿಯನ್ನು ಹೇಗೆ ಜೋಡಿಸಲಾಗುವುದಿಲ್ಲವೋ,ಮನಸ್ಸುಗಳು ಸೇರಲು ಒಪ್ಪುವುದಿಲ್ಲ.ಸಣ್ಣ ಪ್ರಯತ್ನ ಮಾಡಿದರೂ ನಮ್ಮವರೇ ನಮಗೆ ಗೋಡೆ ಆಗಿ ನಿಂತು ಬಿಡುತ್ತಾರೆ.ಹೌದೋ,ಅಲ್ಲವೋ ? ನಿನ್ನ ಮನದಾಳದ ಬರಹಗಳು ಮತ್ತಷ್ಟು ಬರಲಿ.
This time Keshav has brought a different subject. Well analysed. Interesting to read that shares new knowledge
ಕೇಶವರ ಸಿನಿಮಾ ಮತ್ತು ಪುಸ್ತಕಗಳ ಮೇಲಿನ ಪ್ರೀತಿ ಅವರನ್ನು ಬಲ್ಲವರಿಗೆ ಚೆನ್ನಾಗಿ ತಿಳಿದ ವಿಚಾರ. ಅಂದಮೇಲೆ ಸಾಮ್ಯವಿರುವ ಎರಡರ ಬಗೆಯೂ ಬರೆದ ಈ ಕಂತು ಚೆನ್ನಾಗಿದೆ.
ಕಥಾಸಂಕಲನದಂತಹ ಕಿರುಚಿತ್ರಗಳ ಆಕರಗಳು ಹೊಸವಲ್ಲದಿದ್ದರೂ ವಿರಳವವೇ. ಭಾಷೆಯ ತಡೆಯನ್ನು ನಿರ್ನಾಮ ಮಾಡಿರುವ ಖಾಸಗೀ ಚಾನೆಲ್ ಗಳು ಒಂದು ಉತ್ತಮ ಚಿತ್ರಕ್ಕೆ ಇದ್ದ ತೊಡಕನ್ನು ನಿವಾರಿಸಿ ಉಪಶೀರ್ಷಿಕೆಗಳ ಮೂಲಕ ಎಲ್ಲ ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ. ಆದರೆ, ಯಾವ ಭಾಷೆಯಲ್ಲಿ ಯಾವ ಉತ್ತಮ ಚಿತ್ರವಿದೆ ಎನ್ನುವುದನ್ನು ನಾವೇ ನಮ್ಮ ಅಭಿರುಚಿಗಳಿಗೆ ತಕ್ಕಂತೆ ಕಂಡುಕೊಳ್ಳಬೇಕಿದೆ.
ಸಿನಿಮಾಗಳನ್ನು ನೋಡಲು ಸಮಯ ವ್ಯಯಿಸುವ ಜನರು ಇತರರಿಗೆ ಈ ಬಗೆಯ ವಿಮರ್ಷೆಗಳ ಮೂಲಕ ಮಾರ್ಗದರ್ಶನ ನೀಡಿದರೆ ಉತ್ತಮ. ಅದಕ್ಕೆಂದೇ ಒಂದು ಅಂಕಣವನ್ನು ಮೀಸಲಿಡಬಹುದು. ಮೇಲಿನ ಮೂರೂ ಚಿತ್ರಗಳನ್ನು ಬಿಡುವಾದಾಗ ನೋಡುವ ಹಂಬಲವಿದೆ. ನಂತರ ಮತ್ತೊಮ್ಮೆ ಈ ವಿಮರ್ಶೆಯನ್ನು ಪರಾಮರ್ಶಿಸಬಹುದು.
ಕೇಶವ ಕುಲಕರ್ಣಿಯವರ ಕ್ರಿಸ್ಮಸ್ ದಿನದಂದು ಬರೆದ ಅಂಕಣ ತಮಿಳಿನ ಮೂರು ಆಂಥಾಲಜಿ ಸಿನಿಮಾಗಳು ಲೇಖನವನ್ನು ಆಸಕ್ತಿಯಿಂದ ಓದಿದೆ. ಕುಲಕರ್ಣಿಯವರು ಎಂದಿನಂತೆ ವಿಮರ್ಶಾತ್ಮಕವಾಗಿ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಕಥೆಗಳನ್ನು ಸಣ್ಣ ಸಿನಿಮಾವನ್ನು ನಾಗಿಸುವುದು ಬಹು ಕಷ್ಟಕರವಾದುದು.
ಅವರು ಹೇಳಿದಂತೆ ನವರಸ ಕಿರುಚಿತ್ರದ ಟೈಟಲ್ಗಳು ಕಥೆಯಲ್ಲಿನ ರಸಕ್ಕೂ ಕೆಲವೊಮ್ಮೆ ಸಂಬಂಧವಿಲ್ಲ.
ದೂರದರ್ಶನದಲ್ಲಿ ಗುಲ್ಜಾರ್ ಅವರು ನಿರ್ದೇಶಿಸಿದ Kirdaar ಸರಣಿ ಹಾಗೂ ಸರಣಿಯ ಟೈಟಲ್ ಸಾಂಗ್ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ನಾನು ಈ ಸರಣಿಯನ್ನು ನೋಡಲು ನಿಮ್ಮೆಲ್ಲರಿಗೂ ಶಿಫಾರಸು ಮಾಡುತ್ತೇನೆ. ಇದು ಯೂಟ್ಯೂಬಿನಲ್ಲಿ ಲಭ್ಯವಿದೆ.
ಇದಲ್ಲದೆ, ಸುಧಾ ವಾರಪತ್ರಿಕೆಯಲ್ಲಿ ಪ್ರತಿವಾರ ಕಿರು ಚಿತ್ರವೊಂದಕ್ಕೆ ಸಂಬಂಧಿಸಿದ ಲೇಖನ ಮತ್ತು ಅದನ್ನು ನೋಡಲು ಬೇಕಾದ ಕ್ಯೂಆರ್ ಕೋಡ್ ಪ್ರಕಟಗೊಳ್ಳುತ್ತಿದೆ. ಕೆಲವೊಂದು ತುಂಬಾ ಸುಂದರವಾದ ಕಿರು ಚಿತ್ರಗಳು.
ಕಿರು ಚಿತ್ರಗಳ ಬಗ್ಗೆ ನನ್ನ ನೆನಪನ್ನು ಕೆದಕಿದ ಕೇಶವ ಕುಲಕರ್ಣಿಯವರಿಗೆ ಮತ್ತು ಲೇಖನ ಪ್ರಕಟಿಸಿದ ಕೆಂಡಸಂಪಿಗೆಗೆ ಧನ್ಯವಾದಗಳು.