ನಾನು ಶಿವಮೊಗ್ಗೆಯಲ್ಲಿದ್ದಾಗ ಆ ಊರು ತುಂಬ ಹಿರಿಯ ತಲೆಮಾರಿನ ಎಷ್ಟೋ ಜನ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು, ಸಮಾಜವಾದಿಗಳು ಇದ್ದುದನ್ನು ನೋಡುತ್ತಿದ್ದೆ. ಹೆಚ್ಚಿನವರು ಗಾಂಧಿ ಇಲ್ಲವೇ ರಾಮಮನೋಹರ ಲೋಹಿಯಾ ಮುಂತಾದವರು ನಾನಾ ಕಾರಣಕ್ಕೆ ಶಿವಮೊಗ್ಗೆಗೆ ಭೇಟಿಕೊಟ್ಟಾಗ, ಅವರ ಪ್ರಭಾವಳಿಗೆ ಸಿಕ್ಕು ಸಾರ್ವಜನಿಕ ಬದುಕಿಗೆ ಬಂದವರು. ಸಮಕಾಲೀನ ಚುನಾವಣಾ ರಾಜಕಾರಣದಲ್ಲಿ ಇವರ ಹೆಸರು ಚಾಲ್ತಿಯಲ್ಲಿರಲಿಲ್ಲ. ಹೀಗಾಗಿ ಮಾಧ್ಯಮಗಳೂ ಇವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಯಾವಾಗಲಾದರೂ ಒಮ್ಮೆ ತಟ್ಟನೆ ಕಾಣಿಸಿಕೊಳ್ಳುವರು. ಇಂತಹವರಲ್ಲಿ ಪೊನ್ನಮ್ಮಾಳ್ ಒಬ್ಬರು.
ಬ್ರಿಟಿಶರ ವಿರುದ್ಧದ ಹೋರಾಟಗಳಲ್ಲಿ ಭಾಗವಹಿಸಿದ ಪೊನ್ನಮ್ಮಾಳ್ ಸೆರೆಮನೆ ಕಂಡವರು; ಆದರೆ ಸ್ವಾತಂತ್ರ್ಯ ಹೋರಾಟಗಾರರ ಪೆನ್‌ಶನ್ ತೆಗೆದುಕೊಳ್ಳಲು ನಿರಾಕರಿಸಿದವರು; ನಾಡಸೇವೆಗಿಂತ ವೈಯಕ್ತಿಕ ಬದುಕು ದೊಡ್ಡದಲ್ಲ ಎಂದು ಮದುವೆಯಾಗದೆ ಉಳಿದವರು; ಖಾದಿಬಿಟ್ಟು ಬೇರೆ ಬಟ್ಟೆ ಮುಟ್ಟದವರು. ಲೋಹಿಯಾ ಅವರ ಅನುಯಾಯಿಯಾಗಿದ್ದ ಪೊನ್ನಮ್ಮಾಳ್, ಸಮಾಜವಾದದ ಮೂಸೆಯಲ್ಲಿಯೂ ರೂಪುಗೊಂಡವರು; ಬಹುಶಃ ಎಲ್ಲ ಆದರ್ಶವಾದಿಗಳೂ ಬಾಗದ ಹಠವಾದಿಗಳು. ನೈತಿಕ ಅಹಂಕಾರಿಗಳು. ತಾವು ನಂಬಿದ ಮೌಲ್ಯಗಳಲ್ಲಿ ಸುಲಭಕ್ಕೆ ರಾಜಿ ಮಾಡಿಕೊಳ್ಳುವವರಲ್ಲ. ತಮಗೆ ಸರಿಬಾರದ್ದನ್ನು ಸಹಿಸುವವರಲ್ಲ. ಅವರ ಹಠಮಾರಿತನ ವಿಚಿತ್ರ ಅನಿಸುವುದುಂಟು. ಕೆಲವೊಮ್ಮೆ ಅದು ದುರಂತಪ್ರಜ್ಞೆಯದೂ ಅನಿಸುತ್ತದೆ.
ಉದಾಹರಣೆಗೆ ಪೊನ್ನಮ್ಮಾಳರ ಸಮಕಾಲೀನರಾದ ಸದಾಶಿವರಾವ್ ಎಂಬುವರು ಇದ್ದರು. ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ ಮುಂತಾದವರ ಸಂಗಾತಿಯಾಗಿದ್ದ ಇವರು ತೀರ್ಥಹಳ್ಳಿ ಕಡೆಯವರು. ೫೦ರ ದಶಕದ ಸಮಾಜವಾದಿ ಚಳುವಳಿಯಲ್ಲಿ ಒಡಮೂಡಿದವರು. ಕಾಗೋಡು ಸತ್ಯಾಗ್ರಹದ ಪ್ರಭಾವದಿಂದ ಉಳುವವರಿಗೇ ನೆಲವನ್ನು ಬಿಟ್ಟುಕೊಡಬೇಕು ಎಂದು ಆದರ್ಶಕ್ಕೆ ಬಿದ್ದು, ತಮ್ಮೆಲ್ಲ ಭೂಮಿಯನ್ನು ರೈತರಿಗೆ ಹಂಚಿದವರು. ತಮಗಾಗಿ ಏನನ್ನೂ ಉಳಿಸಿಕೊಳ್ಳದ ಅವರು ಕೊನೆಯ ದಿನಗಳಲ್ಲಿ ಬಹಳ ಕಷ್ಟದ ಬದುಕನ್ನು ಬದುಕಿದರು. ಯಾರೊಂದಿಗೂ ಕಷ್ಟವನ್ನು ಹೇಳಿಕೊಳ್ಳಲಿಲ್ಲ. ಒಮ್ಮೆ ಯಾರಿಗೂ ಸುದ್ದಿಯಾಗದಂತೆ ತೀರಿಕೊಂಡರು. ಶಿವಮೊಗ್ಗೆಯಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದರು. ಅವರ ಹೆಸರು ನಾಗಪ್ಪಶೆಟ್ಟಿ. ಸಬರಮತಿ ಆಶ್ರಮದಲ್ಲಿ ಇದ್ದವರು. ಒಮ್ಮೆ ಗಾಂಧೀಜಿಯವರಿಗೂ ಕಸ್ತೂರಬಾ ಅವರಿಗೂ ತಾತ್ವಿಕ ಭಿನ್ನಮತ ಬಂದಾಗ, ಕಸ್ತೂರಬಾಯಿಯವರ ಪರವಾಗಿ ನಿಂತು, ಗಾಂಧಿಯವರ ತಪ್ಪನ್ನು ತೋರಿಸಿದವರು ಎಂದು ಅವರ ಬಗ್ಗೆ ದಂತಕತೆಯಿತ್ತು. ನಾವು ಕಂಡಂತೆ ಶೆಟ್ಟರು ಒಂದು ಲಟಾರಿ ಸೈಕಲನ್ನು ಹೊಡೆದುಕೊಂಡು ಶಿವಮೊಗ್ಗವೆಲ್ಲ ತಿರುಗಾಡುತ್ತಿದ್ದರು. ಥೇಟು ಎಚ್. ನರಸಿಂಹಯ್ಯನವರಂತೆ, ತಮ್ಮ ಕೊನೆಯ ದಿನಗಳನ್ನು ಶಿಕ್ಷಣಸಂಸ್ಥೆ ಕಟ್ಟಲು ವ್ಯಯಿಸಿದವರು. ವಿಚಿತ್ರವೆಂದರೆ, ಅಲ್ಲಿ ಬಡವರ ಮಕ್ಕಳ ಬರುತ್ತಿದ್ದುದೇ ಕಡಿಮೆ.
ಹಾಗೆ ಪೊನ್ನಮ್ಮಾಳ್ ಭೋಳೆಯಲ್ಲ. ಸಂಸ್ಥೆಗಳಿಗೆ ತಮ್ಮ ವ್ಯಕ್ತಿತ್ವ ಬಳಕೆಗೊಳ್ಳಲು ಬಿಡಲಿಲ್ಲ. ಬದಲಿಗೆ ರಾಜಕೀಯ ಅಧಿಕಾರಕ್ಕೆ ದೂರವಾದ, ಜನಪರ ಚಳುವಳಿಗಳಲ್ಲೇ ಗುರುತಿಸಿಕೊಂಡು ಬಂದರು. ಪೊನ್ಮಮ್ಮಾಳ್ ಹರಿತವಾದ ಚಾಕುವಿನಿಂದ ಚರ್ಮದ ಮೇಲೆ ಕಚ್ಚು ಗೀರಿದಂತೆ ಕಟುವಾಗಿ ಮಾತಾಡುತ್ತಿದ್ದರು. ಇದಕಂಡು ಸ್ಥಳೀಯ ರಾಜಕಾರಣಿಗಳು ಇವರ ಬಗ್ಗೆ ವೈಯಕ್ತಿಕವಾಗಿ ಗೌರವವಿದ್ದರೂ, ಸಹವಾಸ ಬೇಡ ಎಂದು ದೂರ ಇರುತ್ತಿದ್ದರು. ಜೆ.ಎಚ್. ಪಟೇಲ್, ಬಂಗಾರಪ್ಪ ಮುಂತಾದವರನ್ನೆಲ್ಲ ಏಕವಚನದಲ್ಲಿ ಮಾತಾಡಿಸುತ್ತಿದ್ದ ಪೊನ್ನಮ್ಮಾಳ್, ಅವರು ಮುಖ್ಯಮಂತ್ರಿಗಳಾಗಿದ್ದಾರೆ ಎಂಬುದನ್ನೂ ಲೆಕ್ಕಕ್ಕಿಟ್ಟಿರಲಿಲ್ಲ. ಪಟೇಲರನ್ನು ಕರೆದು ಅವರ ಕುಡಿತ ಶೋಕಿಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ಕುಡಿಯದ, ದಿನನಿತ್ಯ ವ್ಯಾಯಾಮ ಮಾಡಿ ದೇಹವನ್ನು ಶಿಸ್ತಾಗಿ ಇಟ್ಟುಕೊಂಡಿದ್ದ ಬಂಗಾರಪ್ಪ ಅವರ ಪ್ರಕಾರ ಗುಡ್‌ಬಾಯ್. ಮುಗ್ಧ ಪೊನ್ನಮ್ಮಾಳ್! ಬಂಗಾರಪ್ಪನವರೂ ಅಷ್ಟೇ. ಎಲ್ಲಾದರೂ ಪೊನ್ನಮ್ಮಾಳ್ ನಡೆದುಹೋಗುತ್ತಿರುವುದನ್ನು ಕಂಡರೆ, ಕಾರು ನಿಲ್ಲಿಸಿ ರಸ್ತೆಬದಿಯಲ್ಲೇ ನಮಸ್ಕರಿಸಿ ಮಾತಾಡುತ್ತಿದ್ದರು. ಮಾತು ಮುಗಿದ ಬಳಿಕ, ಪೊನ್ನಮ್ಮಾಳ್, ಮತ್ತೆ ತಮ್ಮ ನಡಿಗೆ ಮುಂದುವರೆಸುತ್ತಿದ್ದರು.
ಅಧಿಕಾರಸ್ಥರ ಜತೆ ದೂರ ಕಾದುಕೊಂಡಿರುತ್ತಿದ್ದ ಈ ಅಜ್ಜಿ, ಸಾಮಾನ್ಯರ ಕಷ್ಟಗಳಿಗೆ ಸಂಬಂಧಪಟ್ಟ ಯಾವುದೇ ಚಳುವಳಿ ಸತ್ಯಾಗ್ರಹ ಇದ್ದರೂ, ಅಲ್ಲಿಗೆ ಬಂದು ಇಡೀ ದಿನ ಟೆಂಟಿನಲ್ಲಿ ಕೂರುತ್ತಿತ್ತು. ತಮಿಳು ಮನೆಮಾತಿನ ಯೌವನದಲ್ಲಿ ಬಹಳ ಸುಂದರಿ ಆಗಿದ್ದಿರಬಹುದಾದ ಈ ಅಜ್ಜಿ, ಹೊಸತಲೆಮಾರಿನ ಚಳುವಳಿಗಾರ ತರುಣ ತರುಣಿಯರನ್ನು ಸುತ್ತ ಕೂರಿಸಿಕೊಂಡು ಮಾತುಕತೆ ಮಾಡುತ್ತಿತ್ತು. ಟೈಟಾನಿಕ್ ಸಿನಿಮಾದಲ್ಲಿ ಸುಂದರಿಯಾದ ಅಜ್ಜಿ ತನ್ನ ಯೌವನದಲ್ಲಿ ಹಡಗು ಮುಳುಗುವಾಗ ಜೀವ ಉಳಿಸಿಕೊಳ್ಳಲು ಹೋರಾಡಿದ ಕತೆ ಹೇಳುವುದನ್ನು ಇದು ನೆನಪಿಸುತ್ತಿತ್ತು.
ವಿಶೇಷವೆಂದರೆ, ಗತಕಾಲದ ಆದರ್ಶಗಳಲ್ಲೇ ಮುಳುಗಿ ವರ್ತಮಾನವೆಲ್ಲ ಪತನವಾಗಿದೆ ಎಂದು ಪೊನ್ನಮ್ಮಾಳ್ ಸಿನಿಕವಾಗಿರಲಿಲ್ಲ. ಇದಕ್ಕೆ ಕಾರಣ, ಸಮಕಾಲೀನವಾದ ಹೋರಾಟಗಳಲ್ಲಿ ತೊಡಗಿಕೊಂಡಿರುವ ತರುಣರಲ್ಲಿ ಬೆರೆಯುತ್ತ, ಅವರಿಗೆ ನೈತಿಕ ಬೆಂಬಲ ತುಂಬುತ್ತ, ತಮ್ಮನ್ನು ನವೀಕರಿಸಿಕೊಳ್ಳುತ್ತಿದ್ದುದು; ಮುದುಕರು, ತಮ್ಮ ಚೈತನ್ಯ ಚಿಕ್ಕವರಲ್ಲಿ ಮುಂದುವರೆಯುತ್ತಿದೆಯೊ ಎಂಬಂತೆ, ಮೊಮ್ಮಕ್ಕಳನ್ನು ಇಷ್ಟಪಡುತ್ತಾರೆ. ಹಾಗೆ ಆದರ್ಶ ತುಂಬಿಕೊಂಡ ಹೊಸತಲೆಮಾರಿನ ಜತೆ ಪೊನ್ನಮ್ಮಾಳ್ ಕಲಿಯುತ್ತ, ತಮ್ಮ ಮನಸ್ಸಿನ ಸಿದ್ಧಾಂತದ ಆದರ್ಶದ ಯೌವನ ಉಳಿಸಿಕೊಂಡಿದ್ದರು.
ಶಿವಮೊಗ್ಗೆಯಲ್ಲಿದ್ದ ಕೊನೆಯ ತನಕ ವ್ಯವಸ್ಥೆಯ ವಿರೋಧವಾಗಿದ್ದ, ಹಿರಿಯ ತಲೆಮಾರಿನ ಹೋರಾಟಗಾರರು ಒಬ್ಬೊಬ್ಬರೇ ನಿರ್ಗಮಿಸಿದರು. ಆ ಸರಣಿಯಲ್ಲಿ ಬಹುಶಃ ಕೊನೆಯ ಕೊಂಡಿಯೆಂಬಂತೆ ಪೊನ್ನಮ್ಮಾಳ್ ಇದ್ದರು. ಈಗ ಅವರೂ ಹೋದರು.
ಕಾಗೋಡು ಸತ್ಯಾಗ್ರಹಕ್ಕೆಂದು ಶಿವಮೊಗ್ಗೆಗೆ ಲೋಹಿಯಾ ಅವರು ಬಂದಾಗ ತೆಗೆದ ಒಂದು ಪ್ರಸಿದ್ಧ ಫೋಟೊಇದೆ. ಅದರಲ್ಲಿ ಸೈನಿಕಳಂತೆ ಪೊನ್ನಮ್ಮಾಳ್ ಲೋಹಿಯಾರ ಜತೆ ನಡೆಯುತ್ತಿದ್ದಾರೆ. ಜೀವಮಾನವಿಡೀ ಯಾರಿಗೂ ಬಾಗದೆ ಸೆಟೆದುಕೊಂಡೇ ಬದುಕಿದವರು ಪೊನ್ನಮ್ಮಾಳ್.
ಜೀವ ಎರಡು: ಆರ್.ವಿ.ಭಂಡಾರಿ
೮೦ರ ದಶಕ. ಬಂಡಾಯ ಸಾಹಿತ್ಯ ಚಳುವಳಿಯ ಸಮ್ಮೇಳನಗಳು ನಡೆಯುತ್ತಿದ್ದವು. ಯುವಕರಾಗಿದ್ದ ನಾವು ಹೆಗಲಿಗೊಂದು ಬ್ಯಾಗು ನೇತುಹಾಕಿಕೊಂಡು, ಅದರಲ್ಲಿ ಒಂದು ಜತೆ ಬಟ್ಟೆ ತುರುಕಿಕೊಂಡು, ಕರ್ನಾಟಕದ ಯಾವುದೊ ಒಂದು ಮೂಲೆಯ ಊರಿಗೆ ಹೋಗುತ್ತಿದ್ದೆವು. ಆಗ ತಪ್ಪದೆ ಕಾಣಿಸುತ್ತಿದ್ದ ಮುಖಗಳಲ್ಲಿ ಭಂಡಾರಿಯವರದೂ ಒಂದು. ಸಾಮಾನ್ಯವಾಗಿ ಛತ್ರಗಳಲ್ಲಿ ಸಮ್ಮೇಳನ ನಡೆಯುತ್ತಿತ್ತು. ಅಲ್ಲೇ ವಸತಿ. ಬೆಳಿಗ್ಗೆ ಎದ್ದು, ಕೈಲಿ ಬ್ರಶ್ಶು ಹಿಡಿದು ಟೂತ್‌ಪೇಸ್ಟಿಗಾಗಿ ಭಂಡಾರಿ ಇರುವ ರೂಮಿಗೆ ದಾಳಿ ಇಡುತ್ತಿದ್ದೆವು. ಹೆಸರಿಗೆ ತಕ್ಕಂತೆ ಅವರ ಚೀಲ ಅನೇಕ ವಸ್ತುಗಳ ಭಂಡಾರವೇ. ಸಣ್ಣಗಾತ್ರದ ಸೋಪುಗಳು, ಕರಪತ್ರ, ಪುಸ್ತಕ, ಚಾಕಲೇಟು, ಹೆಚ್ಚಿನ ಪೆನ್ನುಗಳು, ಅಡಕೆ ಇತ್ಯಾದಿ ಬಹೂಪಯೋಗಿ ವಸ್ತುಗಳು ಅದರಲ್ಲಿ ಇರುತ್ತಿದ್ದವು. ಅವರಲ್ಲಿಗೆ ಹೋದರೆ, ಹಿಡಿದವರ ಬ್ರಶ್ಶುಗಳಿಗೆ ತಮ್ಮಲ್ಲಿದ್ದ ಪೇಸ್ಟನ್ನು ಮಕ್ಕಳಿಗೆ ಬೆಲ್ಲಹಂಚುವಂತೆ ಹಂಚುವ ಭಂಡಾರಿಯವರು ಇರುತ್ತಿದ್ದರು. ಪೇಸ್ಟ್ ಕೊಟ್ಟಮೇಲೆ ಮೆಲ್ಲಗೆ ಕೇಳುತ್ತಿದ್ದರು-‘ನಿಮಗೆ ಪೌಡರು ಬೇಕಾದರೂ ಕೇಳಿ. ನನ್ನಲ್ಲಿದೆ’; ರಾತ್ರಿ ಮಲಗಿದಾಗ ಹಾಕಿಕೊಂಡ ಬಟ್ಟೆಯನ್ನು ಬದಲಿಸಿದೆ ಸೋಮಾರಿತನದಿಂದ ಓಡಾಡುವ ನಮ್ಮಲ್ಲಿ ನೀಟಾಗಿ ಶೇವ್ ಮಾಡಿ, ಜಳಕ ಮುಗಿಸಿ, ಶುಭ್ರವಸ್ತ್ರ ಧರಿಸಿ, ಗುಳಿಬಿದ್ದ ಕೆನ್ನೆಗಳಿಗೆ ಸ್ನೋ ಪೌಡರು ಹಚ್ಚಿಕೊಂಡು ಘಮಘಮಿಸುತ್ತ ಭಂಡಾರಿಯವರು ಕೀಳರಿಮೆ ಹುಟ್ಟಿಸುತ್ತಿದ್ದರು. ಅದೇನು ಶೋಕಿಯಲ್ಲ. ಶಾಲಾ ಮಾಸ್ತರರಾಗಿದ್ದ ಅವರ ಶಿಸ್ತೊ, ಚರ್ಮ ಸುಕ್ಕಾಗಿ ಬಿಗಿತ ಮಾಡುತ್ತಿದ್ದುದ್ದಕ್ಕೆ ಹಾಗೆ ಮಾಡುತ್ತಿದ್ದರೊ ಗೊತ್ತಿಲ್ಲ.
ಹೊನ್ನಾವರದಿಂದ ಪೂರ್ವಕ್ಕೆ ಹತ್ತು ಹದಿನೈದು ಮೈಲಿ ಪಶ್ಚಿಮಘಟ್ಟಗಳಲ್ಲಿ ನುಸುಳಿ ಹೋದರೆ, ಅಲ್ಲಿ ಕರೆಕೋಣ ಎಂಬ ಊರು ಸಿಗುತ್ತದೆ. ಅದು ಭಂಡಾರಿಯವರಿದ್ದ ಜಾಗ. ಅಲ್ಲಿಂದ
ನಾಲ್ಕಾರು ಬಸ್ಸು ಬದಲಿಸಿ, ಶಾಲೆಗೆ ರಜೆ ಹಾಕಿ ಭಂಡಾರಿಯವರು ಉತ್ತರಕರ್ನಾಟಕದ ಯಾವುದೊ ಪುಟ್ಟ ಊರಿಗೆ ಸಮ್ಮೇಳನಕ್ಕೆಂದು ಬರುತ್ತಿದ್ದರು. ಅವರದೂ ಹೊನ್ನಾವರದ ಅವಧಾನಿಯವರದೂ ಒಂದು ಜೋಡಿ. ಕೆಂಪಗೆ ಎತ್ತರಕ್ಕೆ ಮಿನುಗುವ ಮುಖದ ಕವಳ ಮೆದ್ದು ಬಾಯೆಲ್ಲ ಕೆಂಪುಮಾಡಿಕೊಂಡ ಅವಧಾನಿಯವರ ಜತೆ, ಒಣಮೀನಿನಂತೆ ಬಾಡಿದ ಬೆಳ್ಳಿಕೂದಲಿನ ಬೊಚ್ಚುಬಾಯಿಯ ಭಂಡಾರಿಯವರು. ಅವಧಾನಿಯವರು ತೀರಿಕೊಂಡ ಬಳಿಕ ಭಂಡಾರಿಯವರು ಒಬ್ಬರೇ ಬರುತ್ತಿದ್ದರು. ಉಬ್ಬಸದ ಸಮಸ್ಯೆಯಿದ್ದ ಭಂಡಾರಿಯವರಿಗೆ ನಮ್ಮ ಬಯಲುಸೀಮೆಯ ಧೂಳು ಬಿಸಿಲು ಸೆಖೆ ಆಗುತ್ತಿರಲಿಲ್ಲ. ಉಸಿರಾಡಲು ಕಷ್ಟಪಡುತ್ತ, ಸಭಾಂಗಣದ ಒಂದು ಮೂಲೆಯಲ್ಲಿ ಕುಳಿತು ವಿದ್ಯಾರ್ಥಿಯಂತೆ ಭಾಷಣಗಳ ನೋಟ್ಸ್ ಮಾಡುತ್ತಿದ್ದರು. ಕಿರಿಯರು ಭಾಷಣ ಮಾಡಿದರೆ, ಚೆಂದವಾಯ್ತು ಮಾತು ಎಂದು ಹೆಗಲಮೇಲೆ ಕೈಹಾಕಿ ಕಣ್ಣಲ್ಲಿ ಹೊಳಪನ್ನು ಹೊಳೆಸುತ್ತಿದ್ದರು.
ನಮ್ಮಂತಹ ಚಿಕ್ಕವರು ಎಲ್ಲಿಯಾದರೂ ಒಂದು ಲೇಖನ ಪ್ರಕಟಿಸಿದರೆ, ಕೂಡಲೇ ತಿಳಿನೀಲಿ ಇಂಕಿನಲ್ಲಿ ಗೀಚುಬಾಚಾಗಿ ಬರೆದ ಅಕ್ಷರಗಳ ನಸುಹಳದಿ ಬಣ್ಣದ ಒಂದು ಪೋಸ್ಟ್ ಕಾರ್ಡು ತಪ್ಪದೆ ಬರುತ್ತಿತ್ತು. ಅದರಲ್ಲಿ ಅವರ ಮೆಚ್ಚಿಕೆಯೊ ಭಿನ್ನಮತವಿದ್ದರೆ ವಿಮರ್ಶೆಯೊ ಇರುತ್ತಿತ್ತು. ತಮ್ಮ ಕಾರ್ಡು ಪ್ರತಿಕ್ರಿಯೆಗಳಿಂದ ನಾಡಿನ ಬಹುತೇಕ ಲೇಖಕರ ಜತೆ ಕಾಡಮೂಲೆಯಲ್ಲಿದ್ದ ಭಂಡಾರಿಯವರು ಸಂಪರ್ಕ ಇರಿಸಿಕೊಂಡಿದ್ದರು.
ಆ ಪುಟ್ಟಹಳ್ಳಿಯಲ್ಲಿದ್ದ ಭಂಡಾರಿಯವರು, ಜ್ಞಾನದಾಹಿ. ಎಲ್ಲೆಲ್ಲಿಂದಲೋ ಪುಸ್ತಕ ತರಿಸಿ ಓದುತ್ತಿದ್ದರು. ಅಲ್ಲಿದ್ದೇ ಪಿಎಚ್‌ಡಿ, ಮಾಡಿದರು. ನಿರಂಜನ ಅವರ ಪ್ರಿಯ ಲೇಖಕ. ವರ್ಗಸಂಘರ್ಷ ಅವರಿಗೆ ಪ್ರಿಯವಾದ ಪರಿಕಲ್ಪನೆ. ಕ್ಷೌರಿಕವೃತ್ತಿಯಿಂದ ಬಂದಿದ್ದ ಭಂಡಾರಿಯವರು, ಜಾತಿವ್ಯವಸ್ಥೆಯ ಅಪಮಾನ ಉಂಡವರು. ಹೀಗಾಗಿ ಯಾರಾದರೂ ಅಸಮಾನತೆ ಪ್ರತಿಪಾದಿಸುವ ಚಿಂತನೆಗಳನ್ನು ರೊಮ್ಯಾಂಟಿಸೈಜ್ ಮಾಡಿದರೆ, ಗತಕಾಲವನ್ನು ವೈಭವೀಕರಿಸಿದರೆ, ಅವರಿಗೆ ರುಮ್ಮನೆ ಕೋಪ ಬರುತ್ತಿತ್ತು. ‘ಹೌದು ಸ್ವಾಮಿ, ನಿಮ್ಮ ಭವ್ಯ ಸಂಸ್ಕೃತಿಯಲ್ಲಿ ನನ್ನಪ್ಪನೂ ನಾನೂ ಪೊಂಯ್ಞ್ ಎಂದು ವಾಲಗ ಊದಿಕೊಂಡು ಇದ್ದೆವು’ ಎಂದು ಜಗಳಕ್ಕೆ ಹೋಗುತ್ತಿದ್ದರು. ತಮಗೆ ಒಪ್ಪಿಗೆಯಾಗದ ವಿಚಾರವಿದ್ದರೆ ಅವರ ಭಿನ್ನಮತದ ಪ್ರತಿಕ್ರಿಯೆ ಪ್ರಕಟವಾಗುತ್ತಿತ್ತು. ಅಂಕೋಲೆಯ ವಿಷ್ಣುನಾಯಕರು ಕೆಲವು ವರ್ಷಗಳ ಹಿಂದೆ ‘ಸಕಾಲ’ ಎಂಬ ಪತ್ರಿಕೆ ಹೊರಡಿಸುತ್ತಿದ್ದರು. ಅದರಲ್ಲಿ ಭಂಡಾರಿಯವರು ಸ್ಥಳೀಯರ ಜತೆ ತಾತ್ವಿಕವಾಗಿ ಜಗಳ ಮಾಡುವ ಇಂತಹ ಪತ್ರಗಳು ಲೇಖನಗಳು ಇರುತ್ತಿದ್ದವು. ಎರಡು ಮೂರು ತಿಂಗಳ ಕದನ. ಒಮ್ಮೆ ಭಂಡಾರಿಯವರಿಗೆ ಕೇಳಿದೆ. ‘ನಿಮಗೆ ಸುಸ್ತಾಗೋಲ್ಲವೇ?’ ಎಂದು. ‘ಅಲ್ಲ, ಮಾರಾಯರೆ ಅಂವ್ಞ ಹೀಗೆ ಬರೆಯುವುದಾ? ಅವನು ನನ್ನ ಗೆಳೆಯನೇ. ಒಳ್ಳೆಯ ವ್ಯಕ್ತಿ. ಆದರೆ ಅವನ ಚಿಂತನೆ ಸರಿಯಿಲ್ಲ. ಅದಕ್ಕೆ ವಾದ ಮಾಡುವೆ’ ಎನ್ನುವರು. ತಾಳಮದ್ದಲೆಯ ಕಲಾವಿದರಾಗಿದ್ದ ಭಂಡಾರಿಯವರಲ್ಲಿ ವಿಚಿತ್ರ ಜಿಗುಟುತನವಿತ್ತು. ಯಾವುದನ್ನೂ ಸುಲಭಕ್ಕೆ ಬಿಟ್ಟುಕೊಡುವ ಜಾಯಮಾನವಿರಲಿಲ್ಲ. ಇಂತಹ ಭಂಡಾರಿಯವರ ಉಬ್ಬಸದ ದಾಳಿಗೆ ಸೋತುಹೋದರು. ಕಳೆದ ಒಂದು ವರ್ಷದಿಂದ ನೋವುಣ್ಣುತ್ತಿದ್ದ ಅವರು, ಜೀವ ಸಾಕಾಗಿ, ಕಳೆದ ತಿಂಗಳು ಕಣ್ಮುಚ್ಚಿದರು. ಸದಾ ವರ್ಗಸಂಘರ್ಷದ ಬಗ್ಗೆ ಮಾತಾಡುತ್ತಿದ್ದ ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಕಣ್ಮುಚ್ಚಿದುದು ಒಂದು ವ್ಯಂಗ್ಯವೊ ಏನೊ?
ಉತ್ತರಕನ್ನಡ ಜಿಲ್ಲೆಯ ಬಹುತೇಕ ಬರೆಹಗಾರರು-ಗೌರೀಶಕಾಯ್ಕಿಣಿ, ವಿಷ್ಣುನಾಯಕ, ಸು.ರಂ.ಎಕ್ಕುಂಡಿ ಮುಂತಾದವರು ಶಿಕ್ಷಕರು. ಇವರೆಲ್ಲ ಬರೆಹಗಾರರು ಮಾತ್ರವಲ್ಲ, ತಮ್ಮ ಭಾಗದ ವೈಚಾರಿಕ ಚಳುವಳಿಗಳಲ್ಲಿ ಭಾಗವಹಿಸಿದವರು. ದಿನಕರ ದೇಸಾಯಿಯವರ ಸಂಗಾತಿಯಾಗಿದ್ದ, ಅಂಕೋಲೆಯ ಪ್ರಸಿದ್ಧ ಭೂಹೋರಾಟಗಳ ಹೀರೋ ಆಗಿದ್ದ ಪಿಕಳೆಯವರೂ ಒಬ್ಬ ಮಾಸ್ತರರು. ಇಂತಹ ಪರಂಪರೆಯಲ್ಲಿ ಬಂದ ಭಂಡಾರಿಯವರು ಬರೆದಿದ್ದು ಬಹಳವಿಲ್ಲ. ಅದು ಕನ್ನಡದ ದೊಡ್ಡ ಬರೆಹ ಹೌದೊ ಅಲ್ಲವೊ ಬೇರೆ ಪ್ರಶ್ನೆ. ಆದರೆ ಅವುಗಳಲ್ಲಿ ಮಿಡಿದ ಮನಸ್ಸು ಮಾತ್ರ ಮಾನವೀಯತೆಯದು. ತಾಯ್ತನದ್ದು.
ಕೆರೆಕೋಣಕ್ಕೆ ಹೋಗುತ್ತಿದ್ದ ಗೆಳೆಯರನ್ನು ಭಂಡಾರಿಯವರು, ಹತ್ತಿರದ ಕರಿಕಾಲಮ್ಮನ ಗುಡ್ಡಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿಂದ ಸೂರ್ಯ ಕೆಂಪಗೆ ಕಡಲಲ್ಲಿ ಮುಳುಗುವುದು ಕಾಣುವುದು. ಸಮುದ್ರ ಕಾದಗಾಜಿನ ರಸದಂತೆ ಥಳಥಳ ಹೊಳೆಯುತ್ತಿರುವ ಅರಬ್ಬಿ ಕಡಲಿಗೆ, ಘಟ್ಟಗಳಲ್ಲಿ ಎಲ್ಲೋ ಹುಟ್ಟಿ ಯಕ್ಷಗಾನದ ಬಣ್ಣವೇಷದವರಂತೆ ಕುಣಿದು ಕುಪ್ಪಳಿಸಿದ ನದಿಯು ದಣಿದುಬಂದು ಅಸಹಾಯಕವಾಗಿ ಮಿಂಚಿನ ಬಾಲದಂತೆ ಸೇರುವುದು. ಅದನ್ನು ಭಂಡಾರಿಯವರು ‘ಕಾಣಿ, ನದಿ ಕಡಲನ್ನು ಸೇರುವದು’ ಎಂದು ಮಕ್ಕಳಂತೆ ಉತ್ಸಾಹದಿಂದ ತೋರುವರು. ನನಗೆ ಅವರು ಮಕ್ಕಳಿಗಾಗಿ ಬರೆದ ಸಾಹಿತ್ಯವೇ ಇಷ್ಟ. ಅದರಲ್ಲಿ ಅವರ ಮಗುವಿನಿಂತಹ ಮನಸ್ಸು ಇದೆ. ಸಮಾಜವನ್ನು ಬರೆಹದಿಂದಲೂ ನೈತಿಕವಾಗಿ ತಿದ್ದಬಹುದು ಎಂಬ ಕನಸು ಇದೆ.
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.