ನಾನು ಮಂಗಳಾಪುರಕ್ಕೆ ಹೋಗಬೇಕೆಂದು ಬಹುದಿನಗಳಿಂದ ಯತ್ನಿಸುತ್ತಿದ್ದೆ. ಇದಕ್ಕೆ ಹಲವು ಕಾರಣಗಳಿದ್ದವು. ೧. ಅಲ್ಲಿ ‘ಖಲಂದರರು’ ಎಂಬ ಕರಡಿ ಆಡಿಸುವ ಸಮುದಾಯವಿದ್ದು, ಪ್ರಾಣಿರಕ್ಷಣಾ ಸಂಘದವರು ಅವರ ಕರಡಿಗಳನ್ನು ಕಿತ್ತುಕೊಂಡು ಹೊಸ ಸಮಸ್ಯೆ ಸೃಷ್ಟಿಸಿದ್ದರು. ಮಕ್ಕಳಂತೆ ಸಾಕಿದ ಕರಡಿಗಳನ್ನು ಕಳೆದುಕೊಂಡಿದ್ದ ಖಲಂದರರು ಪರ್ಯಾಯ ಜೀವನೋಪಾಯ ಕಲ್ಪಿಸಿ ಎಂದು ಧರಣಿ ಮಾಡುತ್ತಿದ್ದರು. ಈ ವಿಚಿತ್ರ ಸಮಸ್ಯೆಯನ್ನು ತಿಳಿಯಬೇಕಿತ್ತು. ೨. ‘ಖಲಂದರ್’ ಎನ್ನುವುದು ಸೂಫಿಗಳಲ್ಲಿ ಒಂದು ಶಾಖೆಯ ಹೆಸರು. ದರವೇಶಿ ಫಕೀರರಿಗೂ ಇದನ್ನು ಬಳಸುತ್ತಾರೆ. ಈ ಹೆಸರು ಇವರಿಗೆ ಹೇಗೆ ಬಂತು? ತಿರುಗಾಡುವುದರಿಂದಲೇ? ೩. ಮುಸ್ಲಿಮರಾದ ಈ ಕರಡಿ ಆಟಗಾರರು ಕರಡಿ ಆಡಿಸುವ ಕಸುಬನ್ನು ಚರಿತ್ರೆಯ ಯಾವ ಸಂದರ್ಭದಲ್ಲಿ ಅವಲಂಬಿಸಿದರು? ಇದನ್ನರಿಯುವ ಕುತೂಹಲವಿತ್ತು. ೪. ಬುದ್ಧನ ಅವತಾರವಾದ ಅವಲೋಕಿತೇಶ್ವರನ ಯಕ್ಷಿ ತಾರಾಭಗವತಿಗೆ ಮಂಗಳಾ ಎಂಬ ಹೆಸರಿದ್ದು, ಕರ್ನಾಟಕದ ಬಹುತೇಕ ಮಂಗಳೂರು ಮಂಗಳಾಪುರಗಳು ಈಕೆಯ ಕಾರಣದಿಂದ ಬಂದವು. ಮಂಗಳಾಪುರದ ಸಮೀಪವಿರುವ ಲಕ್ಕುಂದ ಮತ್ತು ಡಂಬಳಗಳು ತಾರಾರಾಧನೆಯ ಹಳೆಯ ತಾಣಗಳು. ಈ ಹಿನ್ನೆಲೆಯಲ್ಲಿ ಮಂಗಳಾಪುರದ ಬೌದ್ಧಸಂಬಂಧವನ್ನು ಪರಿಶೀಲಿಸಬೇಕಿತ್ತು.
ಕರ್ನಾಟಕದ ಪ್ರಾಚೀನ ಪಟ್ಟಣಗಳಲ್ಲಿ ಒಂದಾದ ಕೊಪ್ಪಳದಿಂದ ೩ ಕಿಮಿ. ದೂರದಲ್ಲಿ ಕಲ್ಲುಗುಡ್ಡದ ಸಂದಿಯೊಳಗೆ ಮಂಗಳಾಪುರ ಅಡಗಿಕೊಂಡಿದೆ. ಊರಸುತ್ತ ಕೆಂಪುಕಾರುವ ಮಸಾರಿ ಹೊಲಗಳು. ಅವುಗಳಲ್ಲಿ ಸೊಕ್ಕಿನಿಂತ ಶೇಂಗಾ, ಗೋವಿನಜೋಳ, ಸುರೇಪಾನದ ಬೆಳೆಗಳು. ಊರ ಪೂರ್ವಕ್ಕೆ ಅಣೆ ಕಟ್ಟಿದಂತೆ ಕಲ್ಲಿನ ಬೆಟ್ಟಗಳು. ಪಶ್ಚಿಮಕ್ಕೆ ಬಟಾಬಯಲು. ಉತ್ತರಕ್ಕಿರುವ ಕಲ್ಲುಗುಡ್ಡದಲ್ಲಿ ಅಶೋಕನ ಶಾಸನವಿದೆ. ಊರು ಪ್ರಾಚೀನತೆಯ ಕುರುಹುಗಳಿಂದ ತುಂಬಿದೆ. ಊರೊಳಗೆ ಗವಿಸಿದ್ಧೇಶ್ವರನ ಗುಡಿಯಿದೆ. ಮಹಬೂಬ ಸುಭಾನಿಯ ದರ್ಗಾಯಿದೆ. ದರ್ಗಾ ಪಕ್ಕದಲ್ಲಿ ಚೌಡಮ್ಮನ ಸಣ್ಣಗುಡಿ. ಖಲಂದರರು ಸುಭಾನಿಕಟ್ಟೆಗೆ ದೀಪ ಹಚ್ಚುವಾಗ ಅದಕ್ಕೂ ಮುಡಿಸುವುದುಂಟು. ಆಕೆ ಇವರು ಕರಡಿಯಾಡಿಸಲು ಹೋದಾಗ ಜತೆಯಲ್ಲಿ ಬಂದವಳಂತೆ! ಚಕ್ರವ್ಯೂಹದಂತಹ ಗಲ್ಲಿಗಳ ಊರಲ್ಲಿ ಮುಸ್ಲಿಮರು ಲಿಂಗಾಯತರು ಕುರುಬರು, ದಲಿತರು ಹಾಗೂ ಬ್ರಾಹ್ಮಣರು ಇದ್ದಾರೆ. ಊರಹೊರಗೆ ಖಲಂದರರು ಇದ್ದಾರೆ. ಕರ್ನಾಟಕದಲ್ಲಿ ಕರಡಿ ಹಾವು ಆನೆ ಮುಂತಾದ ಪ್ರಾಣಿಗಳನ್ನು ಪಳಗಿಸುವ ಮತ್ತು ಆಡಿಸುವವರು ಸಾಮಾನ್ಯವಾಗಿ ಮುಸ್ಲಿಮರು. ಬಹುತೇಕ ಮಾವುತರು ಕೂಡ ಮುಸ್ಲಿಮರು. ಖಲಂದರರು ಕರಡಿಯಾಡಿಸುವ ಆಟಕ್ಕೆ ಯಾವಾಗ ಇಳಿದರೊ ಅಥವಾ ಕರಡಿಯಾಟಗಾರರು ಯಾವಾಗ ಮುಸ್ಲಿಮರಾದರೊ ಸ್ಪಷ್ಟವಿಲ್ಲ. ಕೊಪ್ಪಳದ ಭಾಗದಲ್ಲಿ ಅನೇಕ ಲಿಂಗಾಯತರ ಹೆಸರಿಗೂ ಕರಡಿಯ ಸರ್‌ನೇಮಿದೆ. ಖಲಂದರರ ಹೆಸರ ತುದಿಗೂ ಅವರು ವಾಸಿಸುವ ಊರುಗಳಿಗೂ ಕರಡಿ ಎಂಬ ವಿಶೇಷಣ ಲಗತ್ತಾಗಿದೆ. ಹೂವಿನ ಹಡಗಲಿ ತಾಲೂಕಿನ ಕರಡಿ ಐನಳ್ಳಿಯ ಖಲಂದರರು ಕರಡಿಯಾಟ ಕೈಬಿಟ್ಟಿದ್ದರೂ ಅವರಿಗೂ ಊರಿಗೂ ಕರಡಿಯ ಹೆಸರು ಹೋಗಿಲ್ಲ. ಐನಳ್ಳಿ ಖಲಂದರರಿಗೆ ಬಳೆಗಾರ ಎಂಬ ಅಡ್ಡಹೆಸರಿದೆ. ಅವರು ಕೈಗೆ ಕಬ್ಬಿಣದ ಬಳೆ ಹಾಕಿಕೊಂಡು ಗಗ್ಗರದಂತೆ ಶಬ್ದಮಾಡುತ್ತ ಊರಾಡುತ್ತಿದ್ದರಂತೆ. “ಕಬ್ಬಿಣ ಕೈಕಡಗ ಕುಣಗೋಲು ಕೂದಲು ಕಂಬಳಿ ಹೊದ್ದಾಂವ ಬಂದಾನ” ಎಂದು ಆರಂಭವಾಗುವ ಬೇಂದ್ರೆಯವರ ಪದ್ಯವು ಇವರ ವೇಷಗಳನ್ನು ವರ್ಣಿಸುತ್ತದೆ. ಬಹುಶಃ ಕರಡಿಯಾಟ ಬಹಳ ಪ್ರಾಚೀನವಾದುದು. ಹಂಪಿ ಸುತ್ತಮುತ್ತಲ ಮಂಗಳಾಪುರ (ಕೊಪ್ಪಳ) ಹಂಪಿನಕಟ್ಟೆ, ವೆಂಕಟಾಪುರ (ಹೊಸಪೇಟೆ) ಹುಲಿಹೈದರ (ಗಂಗಾವತಿ)ಗಳಲ್ಲಿ ಕರಡಿ ಆಡಿಸುವವರು ಇದ್ದಾರೆ. ಇದಕ್ಕೆ ತಕ್ಕಂತೆ ಈ ಭಾಗದಲ್ಲಿ ಕರಡಿಗಳೂ ಹೆಚ್ಚಿವೆ. ಬಳ್ಳಾರಿ ಜಿಲ್ಲೆಯ ದರೋಜಿ ಭಾರತದ ಪ್ರಸಿದ್ಧ ಕರಡಿಧಾಮಗಳಲ್ಲಿ ಒಂದು. ಮಲೆನಾಡಿನಲ್ಲಿ ಚಿರತೆ ಆನೆಗಳ ಕಾಟವಿದ್ದ ಹಾಗೆ ಇಲ್ಲಿ ಕರಡಿಕಾಟದ ಸುದ್ದಿಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ. ನಾನು ಕನ್ನಡ ವಿವಿಗೆ ಬಂದ ಹೊಸತರಲ್ಲಿ(೧೯೯೨) ಒಂದು ಹೆಣ್ಣು ಕರಡಿಯು ಒಬ್ಬ ತರುಣನನ್ನು ಅಪಹರಿಸಿ ಗುಹೆಯಲ್ಲಿಟ್ಟುಕೊಂಡಿದೆಯೆಂದೂ ಅವನಿಗೆ ದಿನಾ ಜೇನುತುಪ್ಪ ಹಣ್ಣುಹಂಪಲು ತಿನಿಸುತ್ತ ಸಾಕಿಕೊಂಡಿದೆಯೆಂದೂ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಪ್ರಕಟವಾಗಿತ್ತು. ಈ ಕತೆಗಳ ಬಗ್ಗೆ ಖಲಂದದರಿಗೆ ಕೇಳಲು, ‘ಇಲ್ಲ ಸಾರ್, ಮನೆಬಿಟ್ಟು ಓಡಿಹೋದ ಪ್ರೇಮಿಗಳು ಕಟ್ಟಿದ ಕತೆಗಳಿವು’ ಎಂದು ಹೇಳುತ್ತಾರೆ. ಕರ್ನಾಟಕ ಕೋಲಾರ, ಬೆಳಗಾವಿ ಧಾರವಾಡ ಜಿಲ್ಲೆಗಳಲ್ಲೂ ಖಲಂದರರು ಇದ್ದಾರಂತೆ. ಇವರ ಗಣತಿ ಆಗಿಲ್ಲ. ಗಣತಿ ಮಾಡಲು ಇವರು ಸಿಗುವುದೂ ಇಲ್ಲ. ಮೂಲತಃ ಸಂಚಾರಿಗಳಾದ ಇವರು ಹಬ್ಬಗಳಲ್ಲಿ ಊರಿಗೆ ಮುಖ ತೋರಿಸುವವರು. ಒಂದೇ ಸ್ಥಳಕ್ಕೆ ಅಂಟಿಕೊಂಡು ಇರುವುದಿಲ್ಲವಾಗಿ ಇವರಿಗೆ ಜಮೀನು ಸಂಬಂಧವಿಲ್ಲ. ಖಲಂದರರ ಪೂರ್ವಜರು ಹಿಂದೆ ಹೈದರಾಬಾದ್ ನಿಜಾಮರಲ್ಲಿ ಸೇವೆ ಮಾಡುವಾಗ ಏನೋ ಶೌರ್ಯ ತೋರಿದರಂತೆ. ಅದಕ್ಕೆ ಬಹುಮಾನವಾಗಿ ನಿಜಾಮರು ಏನು ಬೇಕೆಂದು ಕೇಳಲು ಖಲಂದರರು ‘ಕರಡಿ ಆಡಿಸಿದರೆ ಪ್ರತಿಮನೆಯವರು ಒಂದಾಣೆ ಕೊಡುವಂತೆ ಫರ್ಮಾನು ಹೊರಡಿಸಬೇಕು’ ಎಂದು ಬೇಡಿಕೊಂಡರಂತೆ. (ಇದಕ್ಕೆ ಸಂಬಂಧಿಸಿದ ತಾಮ್ರಶಾಸನವೊಂದು ಹುಲಿಹೈದರಿನ ಕರಡಿ ಆಟಗಾರರಲ್ಲಿದೆಯಂತೆ.) ‘ನಮ್ಮ ಪೂರ್ವಜರು ಭೂಮಿಯನ್ನಾದರೂ ಕೇಳಿದ್ದರೆ ನಮಗೀ ಸ್ಥಿತಿ ಬರುತ್ತಿರಲಿಲ್ಲ’ ಎಂಬ ಪರಿತಾಪದಲ್ಲಿ ಖಲಂದರರು ಇದನ್ನು ಹೇಳುತ್ತಾರೆ. ಚರಿತ್ರೆಯು ಖಲಂದರರ ಊಹೆಗಳನ್ನು ಮೀರಿ ಚಲಿಸಿಬಿಟ್ಟಿದೆ. ಸದ್ಯ ಖಲಂದರರಿಗೆ ಬಂದಿರುವ ಕಷ್ಟವೆಂದರೆ, ಕೈಲಿದ್ದ ಕರಡಿಯನ್ನು ಅರಣ್ಯ ಇಲಾಖೆಯವರು ಕಿತ್ತುಕೊಂಡಿರುವುದು. ಊರಾಡಲು ಕರಡಿಯಿಲ್ಲ. ಊರಲ್ಲಿರೋಣವೆಂದರೆ ಜಮೀನಿಲ್ಲ. ‘ಹೆಣಮಕ್ಕಳು’ ಹೊಲಗದ್ದೆಗಳಿಗೆ ಕೂಲಿ ಹೋಗುತ್ತಾರೆ. ಐಟಿ ಹುಡುಗರು ನಂಬದೆ ಹೋಗಬಹುದು-ಮಂಗಳಾಪುರದಲ್ಲಿ ಹೆಣ್ಣುಕೂಲಿಗೆ ದಿನಕ್ಕೆ ೨೦ರಿಂದ ೨೫ ರೂಪಾಯಿ. ಖಲಂದರರನ್ನು ಉಳಿದ ಮುಸ್ಲಿಮರು ‘ಗುರು ವಂಶದವರು’ ಎಂದು ಗೌರವದಿಂದ ರಕ್ತಸಂಬಂಧ ಏರ್ಪಡಿಸಿಕೊಳ್ಳುವುದಿಲ್ಲ. ಈಗೀಗ ಕೊಡುಕೊಳು ಶುರುವಾಗಿದ್ದರೂ ಉಳಿದ ಮುಸ್ಲಿಮರು ಇವರನ್ನು ದಲಿತರಂತೆ ನೋಡುತ್ತಾರೆಂದೇ ನನಗನಿಸಿತು. ಮುಸ್ಲಿಮರನ್ನು ಏಕರೂಪಿಯಾಗಿ ಗ್ರಹಿಸುವವರು ಅವರಲ್ಲಿರುವ ಸಾಂಸ್ಕೃತಿಕ ಬಹುತ್ವ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ಗಮನಿಸುವುದಿಲ್ಲ. ಅವರ ಕೆಲವು ಹೆಸರುಗಳು ಹೀಗಿವೆ: ಚಿಲುಮೆ ಮಾಬುಸಾಬ್, ಮೀಸೆ ಹುಸೇನ್‌ಸಾಬ್, ಮೂಲಿಮನಿ ಖಾಸಿಂಸಾಬ್, ಜಂಗ್ಲಿಸಾಬ್, ದೊಡ್ಡಬಡೇಸಾಬ್, ಬ್ರಾಂಡಿ ಹುಸೇನ್‌ಸಾಬ್, ಬಳಿಗಾರ ಸಾಮಿದ್‌ಸಾಬ್, ವಕೀಲ ಕಾಸಿಂಸಾಬ್, ಫಕೀರ್‌ಸಾಬ್, ಗೂಡುಸಾಬ್, ಸಣ್ಣಬಡೇಸಾಬ್, ಮುಂಗ್ಲಿ ಮಹಮ್ಮದ್‌ಸಾಬ್, ಕೆಂಪು ಇಮಾಂಸಾಬ್, ಕನಕ ಇಮಾಂಸಾಬ್, ಹೊನ್ನೂರ್‌ಸಾಬ್, ಆಂಧ್ರ ಕಾಸಿಂಸಾಬ್, ರೊಡ್ಡ ಶಾಮಿದ್‌ಸಾಬ್, ಪತನ್‌ಸಾಬ್, ಪೀಲೂ ಖಾಸಿಂಸಾಬ್, ಗಿಡ್ಡಶಾಮೀದ್, ಮುದುಗಲ್ ಹುಸೇನಸಾಬ್, ಲಾಲ್‌ಮುಖ ಕಾಸಿಂಸಾಬ್, ರಾಜಾ ಹುಸೇನ್‌ಸಾಬ್, ಕಲ್ಯಾಸಾಬ್, ಮದಾರಸಾಬ್, ಮಾಬೂಸಾಬ್. ಇವುಗಳಲ್ಲಿ ಹೊನ್ನೂರು, ಫಕೀರ್, ದಾದಾಪೀರ್, ರಾಜಾಸಾಬ್, ಮಾಬೂಸಾಬ್- ಇವು ಸೂಫಿ ಸಂಪ್ರದಾಯದ ಹೆಸರುಗಳು. ಖಾಸಿಂ, ಹುಸೇನ್, ಹಸನ, ಫಾತಿಮಾ, ಮುದುಗಲ್-ಇವು ಮೊಹರಂ ಸಂಪ್ರದಾಯದ ಹೆಸರುಗಳು. ಇದಕ್ಕೆ ತಕ್ಕಂತೆ ಖಲಂದರರು ಸೂಫಿಗಳ ಉರುಸನ್ನೂ ಮೊಹರಂ ಹಬ್ಬವನ್ನೂ ವಿಶೇಷವಾಗಿ ಆಚರಿಸುತ್ತಾರೆ. ಮಂಗಳಾಪುರದಲ್ಲಿ ಮೊಹರಂ ಪದಗಳನ್ನು ಅದ್ಭುತವಾಗಿ ಹಾಡುವ ಕಲಾವಿದರಿದ್ದಾರೆ. ಕರಡಿ ಆಟಗಾರರ ಸಂಘದ ಅಧ್ಯಕ್ಷರಾದ ರಾಜಹುಸೇನ ಒಳ್ಳೆಯ ಹಾಡುಗಾರರು. ಖಲಂದರರ ಹೆಸರಲ್ಲಿರುವ ಕೆಂಪು, ಸಣ್ಣ, ದೊಡ್ಡ, ರೊಡ್ಡ, ಚಿಲುಮಿ, ಮೂಲಿಮನಿ, ಬಳಿಗಾರ, ಮುಂಗ್ಲಿ-ಇವು ಕನ್ನಡ ಶಬ್ದಗಳು. ಭಾರತದಲ್ಲಿ ಅರಬ್ ಇಸ್ಲಾಮಿನ ಚೌಕಟ್ಟಿನೊಳಗೆ ಸಲೀಸಾಗಿ ಹೋಗದ ನೂರಾರು ಮುಸ್ಲಿಂ ಸಮುದಾಯಗಳಿವೆ. ಅವರದೊಂದು ಸಂಕರ ಸಂಸ್ಕೃತಿ. ಅಲೆಮಾರಿ ಸಮುದಾಯಗಳಿಗೆ ಎಂದೂ ಕ್ಲಾಸಿಕಲ್ ಧರ್ಮದ ಲಕ್ಷಣಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಖಲಂದರರ ಕರಡಿಯಾಟ, ಅಲೆಮಾರಿತನ ಮತ್ತು ಜಾಂಬವಂತನ ಕಲ್ಪನೆಗಳು ಅವರನ್ನು ಜಾತ್ಯತೀತ ಪರಂಪರೆಯ ಮುಸ್ಲಿಮರನ್ನಾಗಿಸಿದೆ. ಮಂಗಳಾಪುರದಲ್ಲಿ ಕರಡಿಗಳ ಮೇಲೆ ಜೀವನ ಅವಲಂಬಿತ ಆಗಿರುವ ೩೦ರಷ್ಟು ಕುಟುಂಬಗಳಿದ್ದು, ಜನಸಂಖ್ಯೆ ೧೩೦. ಖಲಂದರರು ಕರಡಿಯ ಜತೆ ಮಹಾರಾಷ್ಟ್ರ ತಮಿಳುನಾಡು, ಆಂಧ್ರ ಹಾಗೂ ಕೇರಳದ ತನಕ ಹೋಗುತ್ತಾರಂತೆ; ತಮಿಳುನಾಡು ಆಂಧ್ರ ಕರ್ನಾಟಕಗಳಲ್ಲಿ ಜಾಂಬವಂತನ ಆರಾಧನೆಯಿರುವ ಕಾರಣ ಜನ ಭಕ್ತಿ ತೋರುತ್ತಾರಂತೆ. ಸಾಮಾನ್ಯವಾಗಿ ಇಬ್ಬರು ಮೂವರು ಆಟಗಾರರು ಗುಂಪುಗೂಡಿ ಹೋಗುತ್ತಾರೆ. ಊರಹೊರಗೆ ಗುಡಾರ ಹಾಕಿ, ಅದರಲ್ಲಿ ಕುಟುಂಬವನ್ನು ಬಿಟ್ಟು ಊರಾಡಲು ಹೋಗುತ್ತಾರೆ. ಕಾಲ್ನಡಿಗೆ ಮಾಡುವ ಖಲಂದರರಿಗೆ ಕರ್ನಾಟಕದ ಭೂಪಟವು ಸಣ್ಣಗಲ್ಲಿಗಳ ಸಮೇತ ಪರಿಚಿತವಿದೆ. ಅವರಿಗೆ ಹಲವು ಭಾಷೆ ಬರುತ್ತವೆ. ಪ್ರತಿದಿನ ಕಾಲ್ದಣಿಯುವಷ್ಟು ತಿರುಗುತ್ತಾರೆ. ದೂರದ ಊರಾದರೆ ಲಾರಿಯಲ್ಲಿ ಕರಡಿ ಏರಿಸಿಕೊಂಡು ಹೋಗುತ್ತಾರೆ. ಕರಡಿಗೆ ಮರಿಯಿರುವಾಗಲೇ ಆಟ ಕಲಿಸಲಾಗುತ್ತದೆ. ಮುಸುಡಿಗೆ ಕಬ್ಬಿಣದ ನತ್ತನ್ನು ಎತ್ತಿಗೆ ಮೂಗುದಾರ ಹಾಕುವಂತೆ ಹಾಕುತ್ತಾರೆ. ರಾಜು ಅರ್ಜುನ ಬಾಬು ಎಂಬ ಹೆಸರುಗಳನ್ನು ಇಡುತ್ತಾರೆ. ಅವಕ್ಕೆ ಪ್ರಿಯ ಆಹಾರ ಮುದ್ದೆ ಹಾಲು. ಕರಡಿ ಆಟಗಾರರ ಜತೆ ಗುಡಾರದಲ್ಲಿ ಮಲಗುತ್ತದೆ. ರಾತ್ರಿಹೊತ್ತು ಮಕ್ಕಳಂತೆ ಧಣಿಯ ಮೇಲೆ ಕೈಕಾಲು ಹಾಕಿ ಮಲಗುತ್ತದೆಯಂತೆ. ಪ್ರತಿದಿನ ಒಬ್ಬ ಆಟಗಾರ ೨೦೦ರಿಂದ ೫೦೦ ರವರೆಗೆ ಗಳಿಸುತ್ತಾನೆ. ಮಕ್ಕಳನ್ನು ಕರಡಿ ಸವಾರಿ ಮಾಡಿಸುವುದರಿಂದ ಇನಾಮು ಸಿಗುತ್ತದೆ. ಕರಡಿ ಕೂದಲು ತುಂಬಿದ ತಾಯಿತ ಮಾರಾಟದಿಂದ ಆದಾಯ ಬರುತ್ತದೆ. ಮಂಗಳಾಪುರದಲ್ಲಿ ನನ್ನನ್ನು ಇಳಿಸಿದ್ದ ಮನೆ ಇಟ್ಟಿಗೆಗೋಡೆ, ಸೀಮೆಂಟ್ ಪ್ಲಾಸ್ಟರ್ ಹಾಗೂ ಕಡಪಕಲ್ಲಿನ ಛಾವಣಿಯಿಂದ ಕೂಡಿದ್ದು ಪಕ್ಕಾಕಟ್ಟಡವಾಗಿತ್ತು. ಅದರ ಮಾಲೀಕ ‘ಸಾರ್, ಈ ಮನೆ ಕರಡಿಯ ಕೂದಲು ಮಾರಿ ಕಟ್ಟಿದ್ದು’ ಎಂದು ನುಡಿದನು. ಹೈದರಾಬಾದಿನ ನಿಜಾಮರು, ಮೈಸೂರ ಅರಸರು, ಬ್ರಿಟಿಷರು ಖಲಂದರರನ್ನು ಅವರ ಪಾಡಿಗೆ ಬಿಟ್ಟಿದ್ದರು. ನಂತರ ಬಂದ ಸ್ವತಂತ್ರ ಸರ್ಕಾರಗಳು ಕೂಡ ಹೆಚ್ಚಿನ ಅಡ್ಡಿ ಮಾಡಲಿಲ್ಲ. ಇದಕ್ಕೆ ಕಾರಣ, ಖಲಂದರರು ಕರಡಿಯನ್ನು ಕಾಡಿನಿಂದ ಕರಡಿ ಹಿಡಿದು ತರದೆ, ನಾಯಿ ಹಸು ಒಂಟೆಗಳ ಹಾಗೆ ತಮ್ಮ ಕರಡಿಗಳ ಮೂಲಕವೇ ಸಂತಾನ ಬೆಳೆಸಿಕೊಳ್ಳುತ್ತ ಬರುವುದು. ಅರಣ್ಯ ಇಲಾಖೆಯ ವನ್ಯಜೀವಿ ರಕ್ಷಣಾಕಾಯ್ದೆ (೧೯೭೮) ಇದ್ದರೂ ಕರಡಿಯಾಡಿಸಲು ಲಿಖಿತ ಪರವಾನಗಿ ಕೂಡ ಕೊಟ್ಟಿತ್ತು. ಆದರೆ ದೇಶದ ತುಂಬ ಪ್ರಾಣಿದಯಾ ಸಂಘಟನೆಗಳ ಒತ್ತಾಯದಿಂದ ಅದನ್ನು ರದ್ದುಮಾಡಿತು. ಖಲಂದರರ ಜೀವನ ಲಯ ಭಗ್ನವಾಗಿದ್ದು ಇಲ್ಲಿಂದ. ಪ್ರಾಣಿದಯಾ ಸಂಘಗಳ ಪ್ರಕಾರ, ಖಲಂದರರು ಎಳೆಯ ಕರಡಿಗಳಿಗೆ ಬಡಿದು ನಟನೆಯನ್ನು ಕಲಿಸುತ್ತಾರೆ. ಅವುಗಳ ಮೃದುಲವಾದ ಮುಸುಡಿಗೆ ರಂಧ್ರಕೊರೆದು ಕಬ್ಬಿಣದ ನತ್ತು ಹಾಕಿ ಹಿಂಸೆಯಾಗುತ್ತದೆ. ಎಳೆದಾಡಿ ಆ ಭಾಗ ಕೊಳೆತು ಹೋಗುತ್ತದೆ. ಆಟವಾಡಿಸುವಾಗಲೂ ಅವುಗಳ ಮೇಲೆ ಒತ್ತಾಡ ಹಾಕಲಾಗುತ್ತದೆ-ಇತ್ಯಾದಿ. ಇದೆಲ್ಲ ನಿಜ. ಸಮಸ್ಯೆಯೆಂದರೆ, ಈ ಪರಿಸರವಾದಿಗಳು ಕಾಡು, ಹಕ್ಕಿ, ಪ್ರಾಣಿಗಳ ಭಾಗವಾಗಿ ಹೋಗಿರುವ ಜನರ ಬದುಕನ್ನು ಗಮನಿಸುವುದಿಲ್ಲ. ಈಗಲೂ ಪಟ್ಟಣಗಳಲ್ಲಿ ಬೆಳಿಗ್ಗೆಯೇ ಕಾಲ್ನಡಿಗೆಯಲ್ಲಿ ಬಂದು ಪಾರಿವಾಳಗಳಿಗೆ ನುಚ್ಚುಹಾಕಿ ಹೋಗುವ ಬಹುತೇಕರು ದೊಡ್ಡ ವ್ಯಾಪಾರಸ್ಥರು. ಯೂರೋಪಿನ ಅನೇಕ ಪರಿಸರವಾದಿಗಳು ಕೂಡ ಆಫ್ರಿಕೆಯ ವನ್ಯಮೃಗಳಿಗಾಗಿ ಮಾಡುವ ಕಳವಳದ ಒಂದಂಶವನ್ನೂ ಆಫ್ರಿಕನ್ನರ ಹಸಿವಿನ ಬಗ್ಗೆ ತೋರುವುದಿಲ್ಲ. ಕಾಡಲ್ಲಿ ಸ್ವತಂತ್ರವಾಗಿರಬೇಕಾದ ಪ್ರಾಣಿಯನ್ನು ನೀವು ಬಂಧಿಸಿ ಹಿಂಸೆ ಕೊಡುವುದು ನಿಜವಲ್ಲವೇ ಎಂದು ಖಲಂದರರಿಗೆ ಕೇಳಿದರೆ ‘ಹೌದು. ಆದರೆ ಗುಡಿಗಳಲ್ಲೂ ಮಠಗಳಲ್ಲೂ ಆನೆ ಸಾಕಲಾಗಿದೆ. ಜೂಗಳಲ್ಲಿ ಪ್ರಾಣಿಗಳನ್ನು ಬಳಸುತ್ತಾರೆ. ಅದು ಪ್ರಾಣಿಹಿಂಸೆ ಅಲ್ಲವಾದರೆ ತಮ್ಮದು ಹೇಗೆ? ನಾವು ಕರಡಿ ಬಿಟ್ಟುಕೊಡಲು ಸಿದ್ಧ; ನಮಗೊಂದು ವ್ಯವಸ್ಥೆ ಮಾಡದೆ ಕಿತ್ತುಕೊಳ್ಳುವುದು ಸರಿಯೇ?’ ಎಂದು ಪ್ರತಿಪ್ರಶ್ನೆ ಹಾಕುತ್ತಾರೆ. ಪ್ರಾಣಿದಯಾ ಸಂಘಗಳು ಖಲಂದರರಲ್ಲಿದ್ದ ಕರಡಿಗಳ ಮಾಹಿತಿ ಸಂಗ್ರಹಿಸಿ ಅವಕ್ಕೆ ಮೈಕ್ರೊಚಿಪ್ಸ್ ಅಳವಡಿಸಿದವು. ನಂತರ ಕೆಲವು ಖಲಂದರರಿಗೆ ಪರಿಹಾರ ಕೊಟ್ಟವು. ಆದರೆ ಎಲ್ಲರಿಗೂ ಪರಿಹಾರ ವಿತರಣೆಯಾಗುವ ಮುನ್ನವೇ ಕರಡಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲು ಶುರುಮಾಡಿದವು. ‘ಎನ್‌ಜಿಓಗಳು ದೊಡ್ಡದೇಶಗಳಿಂದ ಹಣ ತರುತ್ತಾರೆ. ಅದನ್ನು ತಮಗೆ ತಲುಪುತ್ತಿಲ್ಲ’ ಎಂಬುದು ಖಲಂದರರ ದೂರು. ಒಂದೆಡೆ ಪ್ರೀತಿಯಿಂದ ಸಾಕಿದ ಕರಡಿ ಬಿಟ್ಟುಕೊಡುವ ನೋವು; ಇನ್ನೊಂದೆಡೆ ಕರಡಿಯ ಬದಲಿಗೆ ಬರುವ ದೊಡ್ಡಮೊತ್ತದ ಹಣದ ಸೆಳೆತ-ಇವು ಅವರಲ್ಲಿ ಗೊಂದಲ ಹುಟ್ಟಿಸಿದಂತಿವೆ. ಈ ಪ್ರಾಣಿದಯಾವಾದಿಗಳಿಂದ ಖಲಂದರರಿಗೆ ಮಾತ್ರವಲ್ಲ, ಅರಣ್ಯ ಇಲಾಖೆಗೂ ಕಷ್ಟ ಶುರುವಾಯಿತು. ಕಾನೂನು ಪ್ರಕಾರ ಸೀಜ್ ಮಾಡಿದ ಕರಡಿಗಳನ್ನು ವಶಪಡಿಸಿಕೊಂಡು ಅವನ್ನು ಕಾಡಿನಲ್ಲೊ ಮೃಗಾಲಯದಲ್ಲೊ ಬಿಡಬೇಕು. ಆದರೆ ಅವನ್ನು ಇಟ್ಟುಕೊಳ್ಳಲು ಜೂಗಳಲ್ಲಿ ಜಾಗವಿಲ್ಲ. ಕಾಡಿಗೆ ಬಿಡೋಣವೆಂದರೆ ಮನುಷ್ಯರ ಸಂಗದಲ್ಲಿ ಬೆಳೆದ ಕರಡಿಗಳು ಊರುಬಿಟ್ಟು ಹೋಗಲು ಒಪ್ಪುತ್ತಿಲ್ಲ. ಒಂದೊಮ್ಮೆ ಬಿಟ್ಟರೆ ಕಾಡುಕರಡಿಗಳು ಇವನ್ನು ಸೇರಿಸಿಕೊಳ್ಳುವುದಿಲ್ಲ. ಒಂದು ಸಲ ಕರಡಿಗಳನ್ನು ಅಭಯಾರಣ್ಯಗಳಿಗೆ ಒಯ್ದು ಬಿಡಲಾಯಿತು. ಆದರೆ ಸ್ವತಂತ್ರವಾಗಿ ಮೇವನ್ನು ಹಡುಕಿ ತಿನ್ನುವುದನ್ನೇ ಮರೆತಿದ್ದ ಸಾಕು ಕರಡಿಗಳು ಸೊರಗಿ ಸಾಯುವಂತಾದವು. ಇಲಾಖೆಯವರು ಅಹಾರ ಕೊಟ್ಟರೆ ನಿರಾಕರಿಸಿ ಸಾಕಿದವರು ಬೇಕೆಂದು ಹಠಮಾಡಿದವು. ಕಡೆಗೆ ಅವಕ್ಕೆ ಉಣಿಸಲು ಖಲಂದರರನ್ನೂ ಮೃಗಾಲಯಗಳಲ್ಲಿ ಇಟ್ಟುಕೊಳ್ಳಲಾಯಿತು. ನಾನು ಮಂಗಳಾಪುರದಲ್ಲಿದ್ದ ದಿನ ಮೃಗಾಲಯದಲ್ಲಿದ್ದ ಕರಡಿಯಾಡಿಸುವ ಹುಡುಗರು ತಮಗೆ ಪ್ರಾಣಿಧಾಮದಲ್ಲಿ ಇರುವುದು ಬೇಸರವಾಗುತ್ತಿದೆಯೆಂದೂ, ಅಲ್ಲಿನ ಊಟ ಹಿಡಿಸುತ್ತಿಲ್ಲವೆಂದೂ, ಊರಿಗೆ ಹೋಗುತ್ತೇವೆಂದರೆ ಅಧಿಕಾರಿಗಳು ಹೋಗಲು ಕೊಡುತ್ತಿಲ್ಲವೆಂದೂ ಫೋನು ಮಾಡುತ್ತಿದ್ದರು. ಎಲ್ಲವೂ ರಗಳೆಗಿಟ್ಟುಕೊಂಡಿದೆ. ಖಲಂದರರು ತಮಗೆದುರಾದ ಇಕ್ಕಟ್ಟನ್ನು ಎದುರಿಸಲು ಒಂದು ಸಂಘಟನೆ ಮಾಡಿಕೊಂಡು ಕೋರ್ಟಿಗೆ ಹೋದರು. ಮೇನಕಾ ಗಾಂಧಿಗೆ ಫ್ಯಾಕ್ಸ್ ಕಳಿಸಿದರು. ಅಹೋರಾತ್ರಿ ಧರಣಿ ಮಾಡಿದರು. ಗ್ರಾಮವಾಸ್ತವ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಂದಾಗ ಮನವಿ ಅರ್ಪಿಸಿದರು. ಅರಣ್ಯ ಮಂತ್ರಿ ಚೆನ್ನಿಗಪ್ಪನವರಿಗೆ ಅಹವಾಲು ಕೊಟ್ಟರು. ಅವರಿಗೆ ‘ತಾವು ಕರಡಿಯ ವಿರೋಧಿಗಳಲ್ಲ, ಅದು ತಮ್ಮ ಮಗುವಿನಂತೆ, ತಮ್ಮ ಆಟ ಪರಂಪರಾಗತವಾಗಿ ಬಂದಿದ್ದು’ ಎಂದು ಕೋರ್ಟು ಕಛೇರಿಗಳಿಗೆ ಸಾಬೀತು ಪಡಿಸುವುದೇ ಕಷ್ಟದ ಕೆಲಸವಾಗಿದೆ. ವಿಶೇಷವೆಂದರೆ ಅವರು ತಮ್ಮ ಆಟವು ಪ್ರಾಚೀನಕಾಲದ್ದು ಬಂದಿದೆ ಎಂದು ಸಾಬೀತು ಪಡಿಸಲು ಕೋರ್ಟಿಗೆ ಬೇಂದ್ರೆಯವರ ಪದ್ಯವನ್ನು ಬಳಸುತ್ತಿರುವುದು. ನಾನು ಮಂಗಳಾಪುರಕ್ಕೆ ಹೋದಾಗ ಇವನಿಂದ ಏನು ಒಳಿತೊ ಕೆಡುಕೊ ಎಂಬ ಕುತೂಹಲದಿಂದ ಖಲಂದರರು ನನ್ನಸುತ್ತ ನೆರೆದರು. ಎನ್‌ಜಿಓನವರನ್ನು ಹಗೆಗಳಂತೆ ಭಾವಿಸುವ ಅವರು ನಾನು ವಿಶ್ವವಿದ್ಯಾಲಯದವನು ಎಂದು ಗೊತ್ತಾಗಿ ಪೀತಿಯಿಂದ ಚಹ ತರಿಸಿಕೊಟ್ಟರು. ಏನಾದರೂ ಒಳ್ಳೆಯದಾಗಬಹುದು ಎಂಬಾಸೆಯಿಂದ ತಮ್ಮ ದುಮ್ಮಾನಗಳನ್ನು ಹೇಳಿಕೊಳ್ಳತೊಡಗಿದರು. ಸಂಶೋಧನೆಗೆಂದು ಹೋದ ದೊಡ್ಡ ಪಗಾರ ಪಡೆಯುವ ನಾನು, ಅವರ ನಡುವೆ ವಿಚಿತ್ರವಾದ ಲಜ್ಜೆ, ಅಸಹಾಯಕತೆ, ಮುಜುಗರಗಳಿಂದ ಕುಗ್ಗಿ ಕುಳಿತಿದ್ದೆ. ಅವರ ಕಷ್ಟಗಳನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಬರೆದು ಇದನ್ನು ತಿಳಿಸುವೆನೆಂದು ಹೇಳಿ ಮಾಹಿತಿ ಪಡೆದುಕೊಂಡು ಬಂದೆ. ಆದರೆ ಹಿಂದುಳಿದ ವರ್ಗಗಳ ಆಯೋಗಕ್ಕೆ ನನ್ನ ವರದಿಯನ್ನು ಸಿದ್ಧಪಡಿಸುತ್ತಿರುವಾಗಲೇ ನನ್ನ ಪರಿಮಿತಿಯನ್ನು ತಿಳಿಯಪಡಿಸುವ ಘಟನೆ ಜರುಗಿತು. ಒಂದು ದಿನ ಮಧ್ಯಾಹ್ನ ತರಗತಿಯಲ್ಲಿರುವಾಗ ನನಗೊಂದು ಫೋನು ಕರೆ ಬಂತು. “ಸಾರ್, ಮರಿಯಮ್ಮನಹಳ್ಳಿಯಲ್ಲಿ ನಮ್ಮ ಕರಡಿಗಳನ್ನು ಅರಣ್ಯ ಇಲಾಖೆಯವರು ಹಿಡಿದಿದ್ದಾರೆ. ದಯವಿಟ್ಟು ಬನ್ನಿ. ಬಿಡಿಸಿಕೊಂಡು ಬರೋಣ?” ಎಂದು ರಾಜಾಹುಸೇನ್ ಕರಡಿ ಆಕಡೆಯಿಂದ ಕರೆಯುತ್ತಿದ್ದರು. ಅದಕ್ಕೆ ನಾನು “ವಿಶ್ವವಿದ್ಯಾಲಯದಲ್ಲಿದ್ದೇನೆ. ಸದ್ಯ ನಿಮ್ಮ ಜತೆ ಬರುವುದು ಸಾಧ್ಯವಾಗುತ್ತಿಲ್ಲ. ನೀವು ಹೋಗಿಬನ್ನಿ. ಬಂದ ಮೇಲೆ ನನಗೆ ವರದಿ ಕೊಡಿ” ಎಂದೆ; ಅವರೇನು ವರದಿ ಕೊಡಲಿಲ್ಲ. ಬೆಳಿಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ತಾನಾಗಿಯೇ ಬಂದಿತ್ತು- ‘ಖಲಂದರರ ಕರಡಿಗಳನ್ನು ಅರಣ್ಯ ಇಲಾಖೆಯವರು ಹಿಡಿದು ತೆಗೆದುಕೊಂಡು ಹೋಗಿದ್ದಾರೆ; ಖಲಂದರರು ಹೊಸಪೇಟೆಯ ಅರಣ್ಯ ಇಲಾಖೆಯ ಎದುರು ಮಕ್ಕಳುಮರಿ ಸಮೇತ ಧರಣಿ ಕೂತಿದ್ದಾರೆ’ ಎಂದು. |
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.