ಅವಳ ಅಮೇರಿಕೆಗೆ ಬರುವ ಹಿಂದೆ ಒಂದು ಕಥೆ ಇದೆ. ಅಮೇರಿಕಾಗೆ ತುಂಬಾ ಹಿಂದೆ ಬಂದು ಈಗ ನಾಗರೀಕನಾಗಿರುವ ಹುಡುಗ ಮೆಕ್ಸಿಕೋಗೆ ಬಂದು ಅಕ್ಕನನ್ನು ಮದುವೆಯಾಗಿ ಅಮೇರಿಕಾಗೆ ಕರೆತರುತ್ತಾನೆ. ಅಕ್ಕನಿಗೆ ಅವನ ಮೂಲಕ ಒಂದು ವರುಷದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಸಿಗುತ್ತದೆ . ಅದಾದನಂತರ ಅವ ಅಕ್ಕನಿಗೆ ವಿಚ್ಚೇದನ ನೀಡುತ್ತಾನೆ. ಮತ್ತೆ ಮೆಕ್ಸಿಕೋಗೆ ಹಿಂತಿರುಗಿ ತಂಗಿಯನ್ನು ಮದುವೆಯಾಗಿ ಕರೆತರುತ್ತಾನೆ. ತಂಗಿಗೆ ಗ್ರೀನ್ ಕಾರ್ಡ್ ಸಿಕ್ಕಿದಮೇಲೆ, ಅವಳಿಗೆ ವಿಚ್ಚೇದನ ಕೊಟ್ಟು ಮತ್ತೆ ಅಕ್ಕನನ್ನು ಮದುವೆ ಆಗುತ್ತಾನೆ.
ಎಂ.ವಿ. ಶಶಿಭೂಷಣ ರಾಜು ಬರೆಯುವ “ಅನೇಕ ಅಮೆರಿಕಾ” ಅಂಕಣ

ವಲಸೆ ಎನ್ನುವುದು ಒಂದು ಭಾವನಾತ್ಮಕ ಸಂಗತಿಯೂ ಹೌದು. ಯಾರಿಗೂ ತಮ್ಮ ಹುಟ್ಟಿದ ಸ್ಥಳ, ತಮ್ಮವರನ್ನು ಬಿಟ್ಟು ಹೊರಡಲು ಅಷ್ಟಾಗಿ ಇಷ್ಟವಿರುವುದಿಲ್ಲ. ಕೆಲವರು ತಮ್ಮವರ ಒಡನಾಟ ಒಂದು ಬಂಧನದಂತೆ ಭಾಸವಾಗಿ, ಅಮೇರಿಕಾದಂತಹ ದೇಶಕ್ಕೆ ವಲಸೆ ಹೋಗುವುದು ಒಂದು ಹೆಮ್ಮೆಯ ಸಂಗತಿಯಾಗಿ, ತಾವು ಬೇರೆಯವರಿಗಿಂತ ಭಿನ್ನ ಎಂದು ತೋರಿಸಿಕೊಳ್ಳುವುದಕ್ಕಾಗಿ, ಹೊರದೇಶಕ್ಕೆ ಹೋದರೆ ಹೆಚ್ಚಿನ ಹಣ ಸಿಗುವುದೆಂದೂ, ಹಣದಿಂದ ತಮ್ಮವರಿಗೆ ಸಹಾಯ ಮಾಡಬಹುದೆಂದೂ, ಇದಲ್ಲದೆ ತಮ್ಮ ದೇಶಗಳ ರಾಜಕೀಯ ಅನಿಶ್ಚಿತತೆ, ರಾಜಕಾರಣ, ಯುದ್ಧದ ಸ್ಥಿತಿ, ಉಳ್ಳವರಿಗೆ ಒಂದು ನ್ಯಾಯ, ಉಳ್ಳದಿರುವವರಿಗೆ ಒಂದು ನ್ಯಾಯ ಎಂದು ಬಗೆದು ದೇಶ ತೊರೆಯುತ್ತಾರೆ.

ವಲಸೆ ಎನ್ನುವುದು ಎಷ್ಟೋಸಲ ಒಂದು ಸುಖದಾಯಕ ಕಾರ್ಯವಲ್ಲ. ಅಮೇರಿಕೆಗೆ ಕಾನೂನು ರೀತ್ಯ ಬರುವ ವಲಸಿಗರಿಗೆ ಅಂತಹ ತೊಂದರೆ ಇರುವುದಿಲ್ಲ. ಅವರು ಯಾವುದೇ ಆತಂಕವಿಲ್ಲದೆ ತಮ್ಮ ಕೆಲಸಗಳನ್ನು ಮಾಡಬಹದು. ಅಮೇರಿಕಾ ಒಂದು ವಲಸಿಗರ ದೇಶವಾಗಿರುವುದರಿಂದ ಇನ್ನೊಬ್ಬ ವಲಸಿಗರಿಗೆ ಆಗುವ ತೊಂದರೆ ಕಡಿಮೆ. ಅಮೇರಿಕಾದ ಕೆಲವರಿಗೆ ಒಳಗೊಳಗೆ ಅಸಹನೆ ಇದ್ದರೂ ಅವರು ಅಷ್ಟಾಗಿ ಹೊರಗೆ ತೋರ್ಪಡಿಸಿಕೊಳ್ಳುವುದಿಲ್ಲ. ಇಲ್ಲಿ ಕಾನೂನು ಬಿಗಿ ಇರುವುದರಿಂದ ಅಂತಹ ತೊಂದರೆಯೇನೂ ಆಗುವುದಿಲ್ಲ. ಕೆಲವು ಅಸಹನೆ ವ್ಯಕ್ತಪಡಿಸುವ ಘಟನೆಗಳು ಸಂಭವಿಸಿವೆ, ಆದರೆ ಅವು ಕಡಿಮೆ. ಒಂದು ಘಟನೆಯಾದರೂ ಇಂದಿನ ಯುಗದಲ್ಲಿ ಬೇಗ ಹರಡುವುದರಿಂದ ಅದರ ತೀಕ್ಷ್ಣತೆ ಹೆಚ್ಚು ಇರುವುದರಿಂದ ನಡೆದ ಪ್ರತಿ ಘಟನೆಯೂ ದೊಡ್ಡದಾಗಿ ಬಿಂಬಿತವಾಗುತ್ತದೆ. ಅಸಹನೆ ಇರುವ ಮಂದಿ ಕಡಿಮೆ, ಇದ್ದ ಜನ ಮೌನವಾಗಿದ್ದು ಹೆಚ್ಚು ಮಾತನಾಡುವುದಿಲ್ಲ. ಸಾಮಾನ್ಯವಾಗಿ ಇಲ್ಲಿಯ ಜನ ಎಲ್ಲರಿಗೂ ಗೌರವ ಕೊಡುತ್ತಾರೆ. ದಾರಿಯಲ್ಲಿ ಕಂಡಾಗ ಪರಿಚಯ ಇರಲಿ ಇಲ್ಲದಿರಲಿ ನಗು ಬೀರುತ್ತಾರೆ, ಹೇಗಿದ್ದೀರಿ ಎನ್ನುತ್ತಾರೆ. ಸಹಾಯಕ್ಕೆ ಧಾವಿಸುತ್ತಾರೆ. ಹಾಸ್ಯ ಚಟಾಕಿ ಹಾರಿಸಿ ನಗಿಸುತ್ತಾರೆ. ಇಲ್ಲಿಯ ಜನ ತುಂಬಾ ಮಾತನಾಡುತ್ತಾರೆ. ಹಾಡು, ಹಾಡುಗಾರರು, ಕ್ರೀಡೆ, ಸಿನಿಮಾ ಮುಖ್ಯವಾಗಿ ಎಲ್ಲರೂ ಮಾತನಾಡುವುದು ಹವಾಮಾನದ ಬಗ್ಗೆ. ಎಲ್ಲರ ಹತ್ತಿರ ಸೆಲ್ ಫೋನ್ ಇರುವುದರಿಂದ ದಿನಕ್ಕೆ ಹತ್ತು ಸಾರಿ ಹವಾಮಾನ ವರದಿ ನೋಡುತ್ತಾರೆ. ಟಿವಿ ಗಳಲ್ಲಿ ಕೂಡ ತುಂಬಾ ನಾಟಕೀಯವಾಗಿ ಹವಾಮಾನದ ವರದಿ ಓದುತ್ತಾರೆ. ಮಾತನಾಡಲು ಯಾವ ವಿಷಯವೂ ಇಲ್ಲದಿದ್ದಾಗ ಹವಾಮಾನದ ವಿಷಯ ಎತ್ತಿ ಮಾತನಾಡಬಹದು. ಇಲ್ಲಿಯ ಜನ ಇತರರ ವೈಯಕ್ತಿಕ ಜೀವನದ ಬಗ್ಗೆ ತಾವಾಗಿಯೇ ಕೇಳುವುದು ಕಮ್ಮಿ. ತುಂಬಾ ಸಲ ಯಾವುದನ್ನೂ ಮುಚ್ಚಿಟ್ಟುಕೊಳ್ಳುವುದೂ ಕಮ್ಮಿ, ಆದರೆ ಪ್ರಖ್ಯಾತರ ವೈಯಕ್ತಿಕ ವಿಷಯಗಳನ್ನು ಬಹುತೇಕ ಪತ್ರಿಕೆಗಳು ಪ್ರಕಟಿಸುತ್ತವೆ, ಇಂತಹ ಗಾಸಿಪ್‌ಗಳನ್ನು ಜನ ಓದುತ್ತಾರೆ. ಇದೊಂದು ವಿಪರ್ಯಾಸ ಅನಿಸುತ್ತದೆ. ಇಲ್ಲಿಯ ಮಕ್ಕಳು ಮುಕ್ತವಾಗಿ ಎಲ್ಲಾ ವಿಷಯಗಳನ್ನೂ ತಂದೆ – ತಾಯಿಯ ಜೊತೆ ಮಾತನಾಡುತ್ತಾರೆ. ಇಲ್ಲಿನ ಮಕ್ಕಳ ಬಗ್ಗೆ ಮುಂದೆ ಸವಿಸ್ತಾರವವಾಗಿ ತಿಳಿಯೋಣ.

ಅಮೇರಿಕ ಶ್ರೀಮಂತ ದೇಶವಾಗಿರುವುದರಿಂದ ಪ್ರಪಂಚದ ಎಲ್ಲಾ ದೇಶಗಳ ಜನ ಇಲ್ಲಿ ಬರಲು ಹವಣಿಸುತ್ತಾರೆ. ಇಲ್ಲಿ ಉದ್ಯೋಗ ಅವಕಾಶಗಳೂ ಹೆಚ್ಚು, ಆದರೆ ವಲಸೆ ಕಾನೂನುಗಳು ಕ್ಲಿಷ್ಟ ಹಾಗು ಸಂಕೀರ್ಣವಾಗಿರುವುದರಿಂದ ಅಷ್ಟು ಸುಲಭವಾಗಿ ಇಲ್ಲಿ ಬರಲು ಆಗುವುದಿಲ್ಲ. ಆದರೂ ಕೆಲ ಬಡ ದೇಶಗಳಿಂದ ಜನ ಹೇಗಾದರೂ ಮಾಡಿ ದೇಶದ ಒಳಗೆ ನುಸಿಯಲು ಪ್ರಯತ್ನ ಪಡುವುದುಂಟು. ಹಾಗೆ ಬರುವ ಎಷ್ಟೋ ಜನ ಮಾರ್ಗ ಮಧ್ಯದಲ್ಲೇ ಕೊನೆ ಉಸಿರು ಎಳೆಯುವುದೂ ಉಂಟು. ಇದರಲ್ಲಿ ಮಕ್ಕಳು, ಹೆಂಗಸರೂ ಇರುತ್ತಾರೆ. ಎಷ್ಟೋ ಸಲ ಗಡಿ ದಾಟಿದರೂ, ಗಡಿಯ ಸೇನೆಗೆ ಸಿಕ್ಕಿ ಗಡಿಪಾರು ಆಗುವುದೂ ಉಂಟು. ಮೆಕ್ಸಿಕೋ ದೇಶದ ಜನ ರಿಯೋ ಗ್ರಾಂಡೆ ನದಿಯನ್ನು ಈಜಿ ದೇಶಕ್ಕೆ ನುಸುಳಿ ಬರುವುದೂ ಉಂಟು. ಕೆಲವು ಸಲ ನದಿಯಲ್ಲಿ ಈಜಲಾರದೆ ಅಸುನೀಗುವುದು ಉಂಟು. ಕೆಲಜನ ಹೇಗೋ ಯಶಸ್ಸು ಕಂಡು ದೇಶದೊಳಗೆ ಬಂದು ಅಲ್ಲಿ ಇಲ್ಲಿ ತಿರುಗಾಡುತ್ತಾ, ಹಲವಾರು ಕೆಲಸಗಳನ್ನು ಮಾಡುತ್ತಾ, ತಮ್ಮ ಜನಾಂಗದವರ ಸಹಾಯದಿಂದ ಕ್ರಮೇಣ ಒಂದು ನೆಲೆ ಕಂಡುಕೊಳ್ಳುತ್ತಾರೆ. ಇವರು ಅಕ್ರಮ ವಲಸಿಗರಾದ್ದರಿಂದ ಕಾನೂನಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವುದಿಲ್ಲ. ಒಂದು ವೇಳೆ ಮಾಡಿ ಸಿಕ್ಕಿಹಾಕಿಕೊಂಡರೆ ಸ್ವದೇಶಕ್ಕೆ ರವಾನೆಯಾಗುವುದು ಖಂಡಿತ ಎಂದು ಅವರಿಗೆ ತಿಳಿದಿರುತ್ತದೆ.

ಅಸಹನೆ ಇರುವ ಮಂದಿ ಕಡಿಮೆ, ಇದ್ದ ಜನ ಮೌನವಾಗಿದ್ದು ಹೆಚ್ಚು ಮಾತನಾಡುವುದಿಲ್ಲ. ಸಾಮಾನ್ಯವಾಗಿ ಇಲ್ಲಿಯ ಜನ ಎಲ್ಲರಿಗೂ ಗೌರವ ಕೊಡುತ್ತಾರೆ. ದಾರಿಯಲ್ಲಿ ಕಂಡಾಗ ಪರಿಚಯ ಇರಲಿ ಇಲ್ಲದಿರಲಿ ನಗು ಬೀರುತ್ತಾರೆ, ಹೇಗಿದ್ದೀರಿ ಎನ್ನುತ್ತಾರೆ. ಸಹಾಯಕ್ಕೆ ಧಾವಿಸುತ್ತಾರೆ. ಹಾಸ್ಯ ಚಟಾಕಿ ಹಾರಿಸಿ ನಗಿಸುತ್ತಾರೆ. ಇಲ್ಲಿಯ ಜನ ತುಂಬಾ ಮಾತನಾಡುತ್ತಾರೆ. ಹಾಡು, ಹಾಡುಗಾರರು, ಕ್ರೀಡೆ, ಸಿನಿಮಾ ಮುಖ್ಯವಾಗಿ ಎಲ್ಲರೂ ಮಾತನಾಡುವುದು ಹವಾಮಾನದ ಬಗ್ಗೆ.

ಎಷ್ಟೋ ಸಲ ಪೋಲೀಸಿನವರಿಗೆ ಅಕ್ರಮ ವಲಸೆಗಾರ ಬಗ್ಗೆ ತಿಳಿದಿರುತ್ತದೆ. ಪೋಲಿಸಿನವರು ಸುಮ್ಮನೆ ಕೆಲಸದ ಸ್ಥಳಕ್ಕೋ, ಮನೆಗಳಿಗೂ ನುಗ್ಗಿ ವಿಚಾರಿಸುವುದಿಲ್ಲ. ಯಾವುದಾದರೂ ದೂರು ಬಂದಾಗ ಮಾತ್ರ ತಕ್ಷಣ ಬಂದು ವಿಚಾರಿಸುತ್ತಾರೆ ಹಾಗು ಕ್ರಮ ಕೈಗೊಳ್ಳುತ್ತಾರೆ. ಪೋಲೀಸಿನವರಿಂದ ಹಿಂಸೆ ಆಗುವುದಿಲ್ಲ, ಆದರೆ ತಮ್ಮ ಜೀವಕ್ಕೆ ಅಪಾಯ ಎಂದು ಅರಿತಾಗ ಗುಂಡು ಹಾರಿಸಿರುವುದೂ ಉಂಟು, ಒಂದೊಂದು ಸಲ ಅದು ತಪ್ಪಾಗಿ ನಡೆದಿರುವುದೂ ಉಂಟು. ಕೆಟ್ಟ ಮನುಷ್ಯರಿರುವಂತೆ, ಕೆಟ್ಟ ಪೋಲೀಸಿನವರೂ ಇದ್ದಾರೆ, ಆದರೆ ಆ ಸಂಖ್ಯೆ ಕಡಿಮೆ. ಸಾಮಾನ್ಯವಾಗಿ ಪೋಲಿಸಿನವರು ಸಹಾಯ ಮಾಡುತ್ತಾರೆ. ಅಮೇರಿಕಾದ ಪೋಲೀಸಿನವರ ಬಗ್ಗೆ ಮುಂದಿನ ಬರಹಗಳಲ್ಲಿ ಹೆಚ್ಚು ತಿಳಿಸುತ್ತೇನೆ.

ಅಮೇರಿಕಕ್ಕೆ ವಲಸೆ ಬಂದ ಭಾರತೀಯರೆಲ್ಲರೂ, ಮೊದಲ ಎರಡು ಮೂರು ವರುಷಗಳ ಕಾಲ ಕಷ್ಟಪಟ್ಟರೆ, ಒಂದು ಒಳ್ಳೆಯ ಕೆಲಸ ಸಿಕ್ಕೊಡನೆ ಒಳ್ಳೆಯ ಜೀವನ ನಡೆಸುತ್ತಾರೆ. ನೇರವಾಗಿ ಕೆಲಸಕ್ಕೆ ಬಂದರಂತೂ ಯಾವುದೇ ತೊಂದರೆ ಇರುವುದಿಲ್ಲ. ತಿಂಗಳು ತಿಂಗಳು ಹಣ ಸಿಗುತ್ತದೆ, ಮೊದಲು ಉಳಿಯಲು ಹಣಕ್ಕೆ ತಕ್ಕ ಹೋಟೆಲ್ ಸಿಗುತ್ತದೆ. ಇಲ್ಲವೆಂದರೆ, ಪೇಯಿಂಗ್ ಗೆಸ್ಟ್ ಆಗಿ ಇರಲು ಬೇಕಾದ ಭಾರತೀಯರ ಮನೆಗಳು ಸಿಗುತ್ತವೆ. ಸ್ವಲ್ಪ ಹಣ ಉಳಿಸಿ ಸ್ವಂತದೊಂದು ಮನೆ ಬಾಡಿಗೆಗೆ ಹಿಡಿಯಬಹುದು. ಬುದ್ಧಿವಂತರಾದರೆ ಒಳ್ಳೆಯ ಬೇರೆ ಬೇರೆ ಕೆಲಸಕ್ಕೆ ಅಥವಾ ಒಳ್ಳೆಯ ಸ್ಥಾನಕ್ಕೆ ಏರಬಹುದು. ಭಾರತದ ಜನ ಕಷ್ಟಪಟ್ಟು ಕೆಲಸ ಮಾಡುವುದರಿಂದ ಇದು ಸ್ವಲ್ಪ ಸುಲಭ ಅನಿಸುತ್ತದೆ. ಓದುವುದಕ್ಕೆ ಬಂದಾಗ ಮನೆಯರಿಗೆ ಹಣ ಉಳಿಸಲು ಸ್ವಲ್ಪ ಕಷ್ಟಪಟ್ಟು ಸಿಕ್ಕಿದ ಕಡೆಯಲ್ಲಿ, ಸಿಕ್ಕ ಕೆಲಸ ಮಾಡಬೇಕಾಗುತ್ತದೆ. ಕೆಲವು ಸಲ ಇದೆಲ್ಲಾ ಭಾರತದಲ್ಲಿ ಇರುವವರಿಗೆ ಅರ್ಥವಾಗದ್ದರಿಂದ ಹೋಟೆನಲ್ಲಿ ತಟ್ಟೆ ಎತ್ತುವ ಕೆಲಸಮಾಡಿದರೂ ಒಳ್ಳೆಯ ಕೆಲಸ ಎಂದು ಸುಳ್ಳು ಹೇಳಬೇಕಾಗುತ್ತದೆ. ಬೇರೆಯವರ ಜೀವನದ ಬಗ್ಗೆ ತಿಳಿಯಲು ಭಾರತೀಯರು ಅತೀ ಉತ್ಸಾಹ ತೋರಿಸುವುದರಿಂದ ಮತ್ತು ಕಷ್ಟಕ್ಕೆ ಸಿಲುಕಿದವರ ಕುರಿತು ಆಡಿಕೊಂಡು ನಗಾಡುವುದರಿಂದ ಸತ್ಯ ಹೇಳದೆ ಇದ್ದರೇನೇ ಚನ್ನ, ಏಕೆಂದರೆ ಮುಂದೆ ಒಂದೊಳ್ಳೆ ಕೆಲಸ, ಹಣ ಸಿಕ್ಕೇ ಸಿಗುತ್ತದೆ. ಅಮೇರಿಕಾದಲ್ಲಿ ಬೆಳೆಯಲು ಅವಕಾಶಗಳು ಹೆಚ್ಚಿರುವುದರಿಂದ, ಕಷ್ಟ ಪಟ್ಟು ಕೆಲಸ ಮಾಡುವವರಿಗೆ ಉದ್ಯೋಗದ ಅವಕಾಶಗಳು ಹೆಚ್ಚಿರುವುದರಿಂದ, ಸೋಮಾರಿಗಳಾಗದಿದ್ದರೆ ಒಳ್ಳೆಯ ಜೀವನ ನಡೆಸಬಹದು.

ಕ್ಯಾರೋಲಿನ್ ಅಂತೊಬ್ಬ ಹೆಣ್ಣುಮಗಳು ನಮ್ಮ ಕಚೇರಿಯಲ್ಲಿ ಕೆಲಸಮಾಡುತ್ತಾಳೆ. ಪ್ರತಿದಿನದ ಸ್ವಚ್ಛಕಾರ್ಯ ಅವಳದು. ಅವಳು ಮೆಕ್ಸಿಕೋ ದೇಶದ ಹುಡುಗಿ. ಇಂಗ್ಲಿಷ್ ಬರುವುದಿಲ್ಲ. ಫೋನಿನ ಗೂಗಲ್ ಟ್ರಾನ್ಸ್ಲೇಷನ್‌ನಲ್ಲಿ ನಮ್ಮ ಜೊತೆ ಸಂಭಾಷಣೆ ನಡೆಸುತ್ತಾಳೆ. ಅಚ್ಚು ಕಟ್ಟಾಗಿ ಕೆಲಸಮಾಡುತ್ತಾಳೆ, ಯಾವುದೇ ಕೆಲಸ ಹೇಳಿದರೂ ಇಲ್ಲ ಎನ್ನುವುದಿಲ್ಲ. ಅಮೇರಿಕೆಗೆ ಬಂದು ಎರಡು ವರ್ಷವಾಗಿದೆ. ಅವಳ ಅಮೇರಿಕೆಗೆ ಬರುವ ಹಿಂದೆ ಒಂದು ಕಥೆ ಇದೆ. ಅಮೇರಿಕಾಗೆ ತುಂಬಾ ಹಿಂದೆ ಬಂದು ಈಗ ನಾಗರೀಕನಾಗಿರುವ ಹುಡುಗ ಮೆಕ್ಸಿಕೋಗೆ ಬಂದು ಅಕ್ಕನನ್ನು ಮದುವೆಯಾಗಿ ಅಮೇರಿಕಾಗೆ ಕರೆತರುತ್ತಾನೆ. ಅಕ್ಕನಿಗೆ ಅವನ ಮೂಲಕ ಒಂದು ವರುಷದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಸಿಗುತ್ತದೆ . ಅದಾದನಂತರ ಅವ ಅಕ್ಕನಿಗೆ ವಿಚ್ಚೇದನ ನೀಡುತ್ತಾನೆ. ಮತ್ತೆ ಮೆಕ್ಸಿಕೋಗೆ ಹಿಂತಿರುಗಿ ತಂಗಿಯನ್ನು ಮದುವೆಯಾಗಿ ಕರೆತರುತ್ತಾನೆ. ತಂಗಿಗೆ ಗ್ರೀನ್ ಕಾರ್ಡ್ ಸಿಕ್ಕಿದಮೇಲೆ, ಅವಳಿಗೆ ವಿಚ್ಚೇದನ ಕೊಟ್ಟು ಮತ್ತೆ ಅಕ್ಕನನ್ನು ಮದುವೆ ಆಗುತ್ತಾನೆ. ಇದೆಲ್ಲಾ ಬರೀ ಕಾಗದದ ಮೇಲೆ ಆಗುತ್ತದೆ. ಅದಕ್ಕೆ “ಪೇಪರ್ ಮ್ಯಾರೇಜ್” ಎಂದೂ ಕರೆಯುತ್ತಾರೆ, ಇದು ಕಾನೂನು ಬಾಹಿರ. ಎಷ್ಟೋಸಲ ಅಧಿಕಾರಿಗಳು ಇಂತಹ ಸಂಚನ್ನು ಭೇದಿಸಿ ಶಿಕ್ಷೆ ನೀಡಿರುವುದೂ ಉಂಟು. ಆದರೂ ಇದು ನಡೆಯುತ್ತಿರುತ್ತದೆ.

ಎಲ್ಲಾ ಜೀವಗಳು ಈಗ ಇರುವುದಕ್ಕಿಂತ ಒಳ್ಳೆಯ ಜೀವನ ನಡೆಸಲು ಹಾತೊರೆಯುತ್ತವೆ. ಮನಸು ಒಂದು, ಮತ್ತೊಂದು, ಮಗುದೊಂದು ಎಂದು ಕೇಳುವುದು ಸಹಜ. ಸಾಮಾನ್ಯವಾಗಿ ಯಾರಿಗೂ ಯಾವುದಕ್ಕೂ ಮಿತಿ ಇರುವುದಿಲ್ಲ. ಇಡೀ ಭೂಮಂಡಲದ ಒಡೆಯನಾಗಿ ಮಾಡಿದರೂ, ಸೂರ್ಯ ಚಂದ್ರ, ಬೇರೆ ಗ್ರಹ ನಕ್ಷತ್ರಗಳ ನೋಡುವುದು ಮನುಷ್ಯನ ಸ್ವಭಾವ. ಯಾರ ಹತ್ತಿರವೂ ಸಾಕಷ್ಟು ಇರುವುದಿಲ್ಲ (ಪ್ರಪಂಚದ ಅತೀ ಹೆಚ್ಚಿನ ಶ್ರೀಮಂತರ ಹತ್ತಿರವೂ ಸಹ). ನಮಗೆ ಇಷ್ಟು ಹಣ ಇದ್ದರೆ ಸಾಕು ಎನ್ನುವವರು ಅಷ್ಟು ಸಿಕ್ಕಿದಮೇಲೆ ಅದು ಸಾಕಾಗುವುದಿಲ್ಲ. ಹಣ ಹೆಚ್ಚು ಬಂದಹಾಗೆ ಅದಕ್ಕೆ ತಕ್ಕ ಹಾಗೆ ಜೀವನ ಸ್ಥಿತಿ ಬದಲಾಗುತ್ತದೆ. ಮದುವೆ, ಮನೆ, ಇನ್ನು ಮಕ್ಕಳಾದರೆ ಇನ್ನು ಖರ್ಚು ಹೆಚ್ಚು. ಭಾರತೀಯರು ಹೆಚ್ಚು ಇರುವ ಪ್ರದೇಶಗಳಲ್ಲಿ ಭಾರತದಂತೆಯೇ ಶ್ರೀಮಂತಿಕೆ ತೋರಿಸಿಕೊಳ್ಳುವ ಜನ ಇರುತ್ತಾರೆ. ಅಂತವರು ದೊಡ್ಡಮನೆ, ಬ್ರಾಂಡ್ ಕಾರು, ಆಭರಣಗಳು ಹೀಗೆ ಎಲ್ಲೆಲ್ಲಿ ಹೇಗೆ ತೋರಿಸಿಕೊಳ್ಳಬೇಕೋ ತೋರಿಸಿಕೊಳ್ಳುತ್ತಾರೆ. ಇದರಿಂದ ಸಾಮಾಜಿಕ ಒತ್ತಡ ಹೆಚ್ಚಾಗಿ ಬೇರೆಯವರೂ ಸಾಲ ಮಾಡಿಯಾದರೂ ಮನೆ, ಕಾರು ಕೊಳ್ಳಲು ಯತ್ನಿಸುತ್ತಾರೆ. ಕೆಲಜನ ಇಷ್ಟು ಲಕ್ಷ ಮಾಡಿಕೊಂಡು ಭಾರತಕ್ಕೆ ಹಿಂತಿರುಗುತ್ತೇವೆ ಎಂದು ಹೇಳುತ್ತಾರೆ, ಅಷ್ಟು ಸಿಕ್ಕಿದಮೇಲೆ ಅದು ಸಾಕಾಗುವುದಿಲ್ಲ, ಮತ್ತಷ್ಟು ಬೇಕಾಗುತ್ತದೆ, ಹೀಗೆ ಮತ್ತಷ್ಟು, ಮಗದಷ್ಟು ಎಂದುಕೊಂಡು ಇಡೀ ಜೀವನ ಹೊರದೇಶಗಳಲ್ಲೇ ಕಳೆಯುತ್ತಾರೆ. ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವವರು ಯಾರು?