ತಿಗಣೆಗಳು ಬೆಳಿಗ್ಗೆ ಹೊತ್ತು ಎಲ್ಲಿಗೆ ಹೋಗ್ತಿದ್ವೋ ಗೊತ್ತಿಲ್ಲ ಆದರೆ ಮಲಗಿದ‌ ನಂತರ ಅವುಗಳ ಉಪಟಳ ಜಾಸ್ತಿ ಆಗ್ತಾ ಇತ್ತು. ಎಷ್ಟೋ ಬಾರಿ ಅವು ನಮಗೆ ಕಚ್ಚಿ ಬೇಗ ಎಬ್ಬಿಸುವ ಮೂಲಕ ಅಲಾರಾಂ ನಂತೆ ಕೆಲಸ ಮಾಡಿದ್ದುಂಟು! ಇವುಗಳ ಕಚ್ಚುವಿಕೆಗೆ ಬೇಸತ್ತ ನಾನು ‘ಸ್ವಲ್ಪ ರಕ್ತ ತೆಗೆದಿಟ್ರೆ ಕುಡಿದುಕೊಂಡು ಹೋಗ್ತವೆ; ನಮಗೆ ತೊಂದರೆ ಕೊಡೋಲ್ಲ’ ಅಂತ ಭಾವಿಸಿದ್ದಿದೆ. ರಜಾಕ್ಕೆ ಊರಿಗೆ ಹೋಗುವ ಸಮಯ ಬಂದಾಗ ನಮ್ಮ‌ ‘ಮನೆಯವರು ನಿನ್ನ ಟ್ರಂಕ್ ಮಾತ್ರ ತರಬೇಡ ಮತ್ತೆ ಮನೇಲೆಲ್ಲಾ ತಿಗಣಿ ಆಗ್ತಾವೆ’ ಎಂಬ ಫರ್ಮಾನು ಹೊರಡಿಸಿ ಬಿಡ್ತಾ ಇದ್ರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ

ಆಗ ನಾನು ಸೇರಿದ ಮಲ್ಲಾಡಿಹಳ್ಳೀಲಿ ಮಕ್ಕಳ ಸಂಖ್ಯೆ ವಿಪರೀತವಾಗಿತ್ತು. ಹೈಸ್ಕೂಲು, ಪಿಯುಸಿ, ಟಿ.ಸಿ.ಹೆಚ್, ಬಿ.ಪಿ.ಎಡ್ ಹೀಗೆ ವಿವಿಧ ಕೋರ್ಸ್‌ಗಳು ಇದ್ದುದರಿಂದ ಅಲ್ಲದೇ ಶಿಸ್ತಿಗೆ ಹೆಸರಾಗಿದ್ದ ಈ ಶಾಲೆಯಲ್ಲಿ ಓದಿದ್ರೆ ಮಕ್ಕಳ ಭವಿಷ್ಯ ಉತ್ತಮವಾಗಿರುತ್ತೆ ಮತ್ತು ಒಳ್ಳೇ ಸಂಸ್ಕಾರವಂತರು ಆಗುತ್ತಾರೆಂಬ ನಂಬಿಕೆ ಇದ್ದುದರಿಂದ ರಾಜ್ಯದ ಎಲ್ಲಾ ಕಡೆಗಳಿಂದಲೂ ಇಲ್ಲಿಗೆ ಸೇರುತ್ತಿದ್ದರು. ನಾನು ಎಂಟನೇ ತರಗತಿಗೆ ಸೇರಿದಾಗ ನಮ್ಮದು ‘ಎ’ ಸೆಕ್ಷನ್. ಇದು ಇಂಗ್ಲೀಷ್ ಮೀಡಿಯಂ ಆಗಿತ್ತು. ನಮ್ಮ‌ ಕ್ಲಾಸಲ್ಲಿ ಒಂದು ನೂರ ಎಂಟು ವಿದ್ಯಾರ್ಥಿಗಳಿದ್ದರು. ನಮ್ಮ‌ ಕ್ಲಾಸು ತುಂಬಿ ತುಳುಕುತ್ತಿತ್ತು. ಮೇಷ್ಟ್ರು ಹೋಂ ವರ್ಕ್ ನೋಡ್ತಾ ಇರಲಿಲ್ಲ. ಒಂದೊಂದು ಬೆಂಚಲ್ಲಿ ಆರು ಮಕ್ಕಳು. ಕನ್ನಡ ಮೀಡಿಯಂನಿಂದ ಸೇರಿದ್ದೆನಾದ್ದರಿಂದ ನನಗೆ ಮೇಷ್ಟ್ರು ಪಾಠ ಮಾಡೋದು ಒಂಚೂರು ಅರ್ಥವಾಗ್ತಾ ಇರಲಿಲ್ಲ. ಕನ್ನಡ, ಸಂಸ್ಕೃತ ಅವಧಿ ಬಂದಾಗ ಖುಷಿ ಎನಿಸುತ್ತಿತ್ತು ಬಿಟ್ರೆ ಉಳಿದ ವಿಷಯಗಳ ಅವಧಿ ಬಂದಾಗ ಮೇಷ್ಟ್ರುಏನೇನೋ ಹೇಳಿದಂತಾಗುತ್ತಿತ್ತು. ಮೊದಲನೇ ಕಿರುಪರೀಕ್ಷೆಯಲ್ಲಿ‌ ಇಪ್ಪತ್ತೈದು ಅಂಕಗಳಿಗೆ ಬರೀ ಎಂಟು ಒಂಬತ್ತು ಅಂಕಗಳು ಬಂದಿದ್ದವು. ಕನ್ನಡ, ಸಂಸ್ಕೃತ ಮಾತ್ರ ಎರಡಂಕಿ ದಾಟಿದ್ದವು.

ನಮ್ಮ ಯೂನಿಫಾರಂ ವಿಶೇಷವಾಗಿತ್ತು. ಹೈಸ್ಕೂಲ್ ಆದ್ರೂ ಖಾಕಿ ಚಡ್ಡಿ ಹಾಕಬೇಕಾಗಿತ್ತು. ಇದರ ಜೊತೆಗೆ ಎರಡು ಜೇಬು, ಅಂಗಿಯ ಭುಜದ ಭಾಗದ ಮೇಲೆ ಗುಂಡಿ ಹಾಕುವಂತಿರುವ ಅಡ್ಡ ಪಟ್ಟಿ, ಬೆಲ್ಟ್, ಗಾಂಧಿ ಟೋಪಿ ನಮ್ಮ ಸಮವಸ್ತ್ರಗಳಾಗಿದ್ದವು. ಎಷ್ಟೇ ದೊಡ್ಡವರಾಗಿದ್ರೂ ಚಡ್ಡಿ ಕಂಪಲ್ಸರಿ! ಬಹುತೇಕ ಹುಡುಗರು ಮೂರೂ ವರ್ಷಕ್ಕೆ ಚಡ್ಡಿ ಹಾಕಿಕೊಳ್ಳಲು‌ ಅನುಕೂಲವಾಗಲೆಂದು‌ ತುಸು ಉದ್ದ ಹೊಲಿಸ್ತಾ ಇದ್ರು. ಈ ಸಮವಸ್ತ್ರವನ್ನು ನಾವು ವಾರದಲ್ಲಿ ಐದು ದಿನ ಹಾಕಬೇಕಿತ್ತು. ಶನಿವಾರ ಒಂದು ದಿನ ಮಾತ್ರ ನಾವು ಕಲರ್ ಡ್ರೆಸ್ ಹಾಕಬೇಕಿತ್ತು. ನನ್ನ ಬಳಿ ಕಲರ್ ಡ್ರೆಸ್ ಒಂದೆರಡೇ ಜೊತೆ ಇದ್ದುದ್ದರಿಂದ ನನಗೆ ಇದೊಂಥರ ಚೆಂದ ಎನಿಸಿತ್ತು. ಆದರೆ ಬಿಳಿ ಬಟ್ಟೆ ಕೊಳೆಯಾಗುತ್ತೆ, ಪದೇ ಪದೇ ತೊಳೆಯಬೇಕಾಗುತ್ತೆ ಎಂದು ನಾನು ‘ಉಜಾಲ’ ವನ್ನು ಜಾಸ್ತಿ ಹಾಕಿಬಿಡುತ್ತಿದ್ದೆ! ಇದರಿಂದ ಬಟ್ಟೆ ಮೇಲಿನ‌ ಕೊಳೆ ಕಾಣ್ತಾ ಇರಲಿಲ್ಲ.

ಎಲ್ಲಾ ಶಾಲೆಗಳಂತೆಯೇ ನಮ್ಮ ಶಾಲೆಯ ಶಾಲಾವಧಿ ಇತ್ತಾದರೂ ನಮ್ಮ ಹಾಸ್ಟೆಲ್ಲಿನ ವಾತಾವರಣವು ನಮಗೆ ಪ್ರಾರಂಭದಲ್ಲಿ ಕಠಿಣ ಎನಿಸುತ್ತಿತ್ತು. ಬೆಳಿಗ್ಗೆ ನಮ್ಮ ಹಾಸ್ಟೆಲ್ ವಾರ್ಡನ್ ಮಲ್ಲಪ್ಪ‌ ಸರ್ ಬೆಳಗ್ಗೆ ಐದು ಘಂಟೆಗೆ ವಿಷಲ್ ಹೊಡೆಯುವ ಮೂಲಕ ಏಳಲು ಸೂಚನೆ ಕೊಡುತ್ತಿದ್ದರು. ಅವರ ವಿಷಲ್ ಶಬ್ದದಲ್ಲೇ ನಾವು ಇದನ್ನು ಅವರೇ ಹೊಡೆದದ್ದು ಎಂದು ಕಂಡುಹಿಡಿಯುತ್ತಿದ್ದೆವು. ಅದನ್ನು ಪದಗಳಲ್ಲಿ ಬರೆಯಲು ಸಾಧ್ಯವಾಗದೇ ಹೋದರೂ ಅದೊಂಥರ ವಿಶೇಷ ರೀತಿಯಲ್ಲಿ ಇತ್ತು. ನಾವು ಆ ಶಬ್ದ ಕೇಳಿದ ತಕ್ಷಣ ಎದ್ದು ಮುಖ ತೊಳೆಯದೇ ಓದಲು ಕೂರುತ್ತಿದ್ದೆವು. ಕೆಲವರು‌ ಏಳದೇ ಇನ್ನೂ ಮಲಗಿದ್ದಾಗ ಮಲ್ಲಪ್ಪ ವಾರ್ಡನ್ ಕುಂಡೆ ಮೇಲೆ ಬಾರಿಸುತ್ತಾ ಬಂದಾಗ ಹಲವರು ತಕ್ಷಣವೇ ಏಳುತ್ತಿದ್ದರು. ಹಲವರು ಕಾಟಾಚಾರಕ್ಕೆ ಎದ್ದು‌ ತೂಕಡಿಸುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನೂ ಕೆಲವರು‌ ಮೇಣದ ಬತ್ತಿ ಹಚ್ಚಿಕೊಂಡು ಅಲ್ಲೇ ಗೋಡೆಯ ಪಕ್ಕದಲ್ಲಿ ಹರಿದಾಡುತ್ತಿದ್ದ ತಿಗಣೆಗಳ ಮೇಲೆ ಮೇಣದ ಹನಿಯನ್ನು‌ ಹಾಕಿ ಸಾಯಿಸುವ ಕೆಲಸ ಮಾಡುತ್ತಿದ್ದರು! ಇಂದಿನ ಅನೇಕ ಮಕ್ಕಳಿಗೆ ಬಹುಷಃ ತಿಗಣೆ ಅಂದ್ರೆನೂ ಅಂತಾ ಗೊತ್ತಿಲ್ಲವೇನೋ! ಮಕ್ಕಳಿಗೇಕೆ? ಸ್ವಚ್ಛತೆಯಿಂದ ಮನೆಯಲ್ಲಿ ಬೆಳೆದವರು ಇದನ್ನು ನೋಡಿರಲಿಕ್ಕಲ್ಲವೇನೋ! ಆದರೆ ‘ತಿಗಣೆ ರಕ್ತ ಹೀರಿದಂಗೆ ಅವ ಬಡವರ ರಕ್ತ ಹೀರ್ತಾನೆ’ ಅಂತಾ ವಾಕ್ಯ ಹೇಳ್ದಾಗ ಮಾತ್ರ ತಿಗಣೆ ಪದ ಕೇಳಿರಬಹುದು. ನಾನೂ ಸಹ ಹಾಸ್ಟೆಲ್‌ಗೆ ಹೋಗುವ ಮುನ್ನ ತಿಗಣೆಯನ್ನು ನೋಡಿಯೇ ಇರಲಿಲ್ಲ. ಆದರೆ ಹಾಸ್ಟೆಲ್ಲಿನ‌ಲ್ಲಿ‌ ಇವುಗಳ ದರ್ಶನದ ಜೊತೆಗೆ ಅವುಗಳಿಂದ ರಕ್ತ ಹೀರಿಸಿಕೊಳ್ಳುವ ಭಾಗ್ಯವೂ ಒದಗಿಬಂತು ಎಂದರೆ ತಪ್ಪಿಲ್ಲ. ಹಲವರು ‘ನಾವು ರಕ್ತದಾನ ಮಾಡೋಕೆ ಹೋಗೋದೇ ಬೇಡ ಇಲ್ಲೇ ತಿಗಣೆಗಳು ಹೀರಿಕೊಳ್ತಾವಲ್ಲ’ ಎಂದು ತಮಾಷೆ ಮಾಡುತ್ತಿದ್ದರು. ತಿಗಣೆಗಳನ್ನು ನಾವು ನೆಲಕ್ಕೆ ಅದುಮಿ ಸಾಯಿಸ್ತಾ ಇರಲಿಲ್ಲ. ಅದ್ಯಾರೋ ‘ತಿಗಣೆ ರಕ್ತ ನೆಲಕ್ಕೆ ಬಿದ್ದರೆ ರಕ್ತ ಬಿದ್ದ ಜಾಗದಲ್ಲು ಹೊಸ ತಿಗಣೆಗಳು ಬೆಳೆಯುತ್ತವೆ’ ಎಂದು ಹೇಳಿದ್ದರಿಂದ ಮೇಣದ ಬತ್ತಿಯ ಹನಿಯನ್ನು ಹಾಕಿ ತಿಗಣೆ ಸಾಯಿಸೋದೆ ಮೇಲು ಎಂಬ ಉಪಾಯವನ್ನು ಕಂಡುಕೊಂಡಿದ್ವಿ.

ತಿಗಣೆಗಳು ಬೆಳಿಗ್ಗೆ ಹೊತ್ತು ಎಲ್ಲಿಗೆ ಹೋಗ್ತಿದ್ವೋ ಗೊತ್ತಿಲ್ಲ ಆದರೆ ಮಲಗಿದ‌ ನಂತರ ಅವುಗಳ ಉಪಟಳ ಜಾಸ್ತಿ ಆಗ್ತಾ ಇತ್ತು. ಎಷ್ಟೋ ಬಾರಿ ಅವು ನಮಗೆ ಕಚ್ಚಿ ಬೇಗ ಎಬ್ಬಿಸುವ ಮೂಲಕ ಅಲಾರಾಂ ನಂತೆ ಕೆಲಸ ಮಾಡಿದ್ದುಂಟು! ಇವುಗಳ ಕಚ್ಚುವಿಕೆಗೆ ಬೇಸತ್ತ ನಾನು ‘ಸ್ವಲ್ಪ ರಕ್ತ ತೆಗೆದಿಟ್ರೆ ಕುಡಿದುಕೊಂಡು ಹೋಗ್ತವೆ; ನಮಗೆ ತೊಂದರೆ ಕೊಡೋಲ್ಲ’ ಅಂತ ಭಾವಿಸಿದ್ದಿದೆ. ರಜಾಕ್ಕೆ ಊರಿಗೆ ಹೋಗುವ ಸಮಯ ಬಂದಾಗ ನಮ್ಮ‌ ‘ಮನೆಯವರು ನಿನ್ನ ಟ್ರಂಕ್ ಮಾತ್ರ ತರಬೇಡ ಮತ್ತೆ ಮನೇಲೆಲ್ಲಾ ತಿಗಣಿ ಆಗ್ತಾವೆ’ ಎಂಬ ಫರ್ಮಾನು ಹೊರಡಿಸಿ ಬಿಡ್ತಾ ಇದ್ರು. ದಸರಾ ರಜೆ ಬಂದಾಗ ಟ್ರಂಕ್ ಹಾಸ್ಟೆಲ್ಲಿನಲ್ಲಿಯೇ ಬಿಟ್ಟು ಹೋಗುತ್ತಿದ್ದೆನಾದರೂ ಬೇಸಿಗೆ ರಜಾ ಬಂದಾಗ ತೆಗೆದುಕೊಂಡು ಹೋಗಲೇಬೇಕಾಗಿತ್ತು. ಹಾಗಾಗಿ ತಿಗಣೆಗಳಿಗೆ ಒಂದು ಗತಿ ಕಾಣಿಸಲೆಂದು ನಾವು ಒಂದು ಮಾರ್ಗ ಕಂಡುಹಿಡಿದುಕೊಂಡಿದ್ವಿ. ಅದೇನು ಅಂದ್ರೆ ಟ್ರಂಕನ್ನು ಬಿಸಿಲಲ್ಲಿ ಇಟ್ಟು ಅದರಲ್ಲಿರುವ ಬಟ್ಟೆ ಪುಸ್ತಕಗಳನ್ನು ಚಾಪೆ ಮೇಲೆ ಹಾಕಿ ಅವನ್ನೂ ಬಿಸಿಲಲ್ಲಿಡುತ್ತಿದ್ದೆವು. ಎಷ್ಟೇ ಹೊತ್ತಾದರೂ ಟ್ರಂಕಿನ ಸಂದುಗೊಂದುಗಳಲ್ಲಿ ಹೇಡಿಗಳಂತೆ ಅಡಗಿರುವ ತಿಗಣೆಗಳು ಹೊರಗಡೆ ಬರುತ್ತಿರಲಿಲ್ಲ. ಇದಕ್ಕಾಗಿ ನಾವು ಖಾಲಿ ಟ್ರಂಕಿನ ಒಳಗೆ ಪೇಪರ್‌ಗಳನ್ನು ಹಾಕಿ ಅವಕ್ಕೆ ಬೆಂಕಿ ಹಚ್ಚಿ ಟ್ರಂಕ್ ಮುಚ್ಚಿಬಿಡುತ್ತಿದ್ದೆವು! ನಂತರ ಒಳಗಿನ ಬೂದಿಯನ್ನೆಸೆದು ಕ್ಲೀನ್ ಮಾಡಿ ಟ್ರಂಕನ್ನು ತಿಗಣೆಗಳಿಂದ ಮುಕ್ತರಾಗಿಸಿ ಮತ್ತೆ ಹಾಸ್ಟೆಲ್ ಒಳಗೆ ಒಯ್ಯದೇ ಪುಸ್ತಕ ಬಟ್ಟೆ ತುಂಬಿಕೊಂಡು ಊರಿಗೆ ಹೋಗಿಬಿಡುತ್ತಿದ್ದೆವು. ಈ ಕಾರ್ಯ ನಡೆಯುತ್ತಿದ್ದುದು ಪರೀಕ್ಷೆಯ ಕಡೇ ದಿನ! ಬಹುತೇಕ ಹುಡುಗರು ಇದೇ ತಂತ್ರಕ್ಕೆ ಮೊರೆ ಹೋಗಿದ್ದರು!

ಇಷ್ಟೆಲ್ಲಾ ಕ್ಲೀನ್ ಮಾಡಿಕೊಂಡರೂ ಮತ್ತೆ ಹಾಸ್ಟೆಲ್ ಶುರುವಾದ ಮೇಲೆ ಮತ್ತೆ ತಿಗಣೆ ಕಾಟ. ಅಲ್ಲಿ ಮೂರು ವರ್ಷ ಹಾಸ್ಟೆಲ್ಲಿನಲ್ಲಿ ಇರೋವರೆಗೂ ತಿಗಣೆಗಳೊಂದಿನ ನಮ್ಮ ನಂಟು ಮುಂದುವರೆದಿತ್ತು. ಈಗಿನಂತೆ ಆಗ ಆ್ಯಂಡ್ರಾಯಿಡ್ ಇರಲಿಲ್ಲ. ಒಂದೊಮ್ಮೆ ಇದ್ದಿದ್ರೆ ಯೂಟ್ಯೂಬ್ ನೋಡ್ಕೊಂಡು ಅವುಗಳ ಅಂತ್ಯಕ್ಕೆ ದಾರಿ ಹುಡುಕುತ್ತಿದ್ದೆವೇನೋ! ಕೆಲವು ಸಲ ‘ನಮ್ಮ ಹಾಸ್ಟೆಲ್ ಊಟಕ್ಕೆ ಎಷ್ಟು ರಕ್ತ ಉತ್ಪತ್ತಿಯಾಗುತ್ತೋ; ಈ ರೀತಿ ಹಿಂಗೆ ದಿನಾ ದಿನಾ ನಮ್ಮ‌ಮೈಯಿಂದ ರಕ್ತವನ್ನು ಹೀರ್ತಾ ಇದ್ರೆ ನಮ್ಮ ಬೆಳವಣಿಗೆ ಮೇಲೆ ಇದು ಎಲ್ಲಿ‌ ತೊಂದರೆ ಕೊಡುತ್ತೋ ಅಂತಾ ಮನಸ್ಸಲ್ಲಿ ನಾನು ಅಂದುಕೊಂಡಿದ್ದಿದೆ’! ಅದಕ್ಕೆ ನಮ್ಮ ಸೀನಿಯರ್‌ಗಳು ಒಂದು ಐಡಿಯಾ ಮಾಡಿದ್ದರು. ಮಳೆಗಾಲ ಮುಗಿದ ನಂತರ ಹಾಸ್ಟೆಲ್ ರೂಮೊಳಗೆ ಮಲಗೋ ಬದಲು ಹಾಸ್ಟೆಲ್ಲಿನ‌ ಮಧ್ಯಭಾಗದಲ್ಲಿದ್ದ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗ್ತಾ ಇದ್ರು. ಅವರಿಗೆ ಇದರ ಬಗ್ಗೆ ಪ್ರಶ್ನಿಸಿದಾಗ ‘ತಿಗಣೆ ಕಾಟದಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ಬೆಳಗಿನ ಜಾವ ಕಡ್ಡಿ ಚಾಪೆಗೆ ಚಳಿ ಮೆತ್ತಿಕೊಂಡು ಬೆಳಗ್ಗೆ ಬೇಗ ಏಳಲು ಸಹಾಯವಾಗುತ್ತೆ’ ಎಂದು ಹೇಳಿದ್ದರು.. ನಾನೂ ಸಹ ಇದೇ ರೀತಿ ಐಡಿಯಾ ಮಾಡಿ ಇದರಿಂದ ಯಶಸ್ವಿಯೂ ಆದೆ!

ಏನೋ ಹೇಳಲು ಹೋಗಿ ಇಡೀ ಲೇಖನವನ್ನೇ ತಿಗಣೆಯೇ ಆವರಿಸಿಕೊಂಡು ಬಿಡ್ತು. ತಿಗಣೆಯೇ ಹಾಗೆ ಅಲ್ವಾ. ಇರಲಿ.. ನಮ್ಮ ಹಾಸ್ಟೆಲ್ಲಿನಲ್ಲಿ ಬೆಳಗ್ಗೆ ಆರರಿಂದ ಆರೂವರೆವರೆಗೂ ಸೂರ್ಯ ನಮಸ್ಕಾರ ಯೋಗ ಮಾಡಿಸುತ್ತಿದ್ದರು. ಇದಕ್ಕಾಗಿ ನಾವು ಬಿಳಿ ಬನಿಯನ್ನು, ನೀಲಿ ನಿಕ್ಕರ್, ಒಂದು ಟವೆಲ್ಲನ್ನು‌ ತೆಗೆದುಕೊಂಡು ಹೋಗಬೇಕಾಗಿತ್ತು. ಮೊದಲಿಗೆ ನಮ್ಮ ಆಶ್ರಮದ ಸ್ವಾಮೀಜಿಯವರಾಗಿದ್ದ ಸೂರ್ ದಾಸ್ ಜೀ ಯವರು ‘ಮನೋಜವಂ ಮಾರುತ ತುಲ್ಯ ವೇಗಂ…’ ಶ್ಲೋಕ ಹೇಳಿಕೊಡುತ್ತಿದ್ದರು. ನಂತರ ಮಲ್ಲಪ್ಪ‌ ವಾರ್ಡನ್ ಕಾಷನ್ ಕೊಡುವ ಮೂಲಕ ಯೋಗಾಸನ ಮಾಡಿಸುತ್ತಿದ್ದರು. ಹಾಸ್ಟೆಲ್ ಹುಡುಗಿಯರೂ ಈ ಚಟುವಟಿಕೆಯಲ್ಲಿ‌ ಪಾಲ್ಗೊಳ್ಳಬೇಕಾಗಿತ್ತು‌. ಇದು ಮುಗಿದ ನಂತರ ರೂಮುವಾರು ಹಾಜರಾತಿ ತೆಗೆದುಕೊಳ್ಳುತ್ತಿದ್ದರು. ನಂತರ ನಾವು ಓದಿಕೊಳ್ಳಲು ಶಾಲೆಗೆ ಹೋಗಬೇಕಾಗಿತ್ತು. ಎಂಟು ಘಂಟೆಯಿಂದ ಎಂಟೂವರೆಯವರೆಗೂ ಸಂಸ್ಕೃತ ಮೇಷ್ಟ್ರೊಬ್ಬರು ಸಂಸ್ಕೃತ ಪಾಠಶಾಲೆ ಮಾಡುತ್ತಿದ್ದರು. ಅದು ಮುಗಿದ ನಂತರ ನಾವು ಹಾಸ್ಟೆಲ್ಲಿಗೆ ತೆರಳಿ ಬಿಳಿ ಪಂಚೆ, ಬಿಳಿ ಬನಿಯನ್, ಬಿಳಿ ಟವೆಲ್ಲಿನೊಂದಿಗೆ ಊಟಕ್ಕೆ ಹೋಗಬೇಕಾಗಿತ್ತು. ಬೆಳ್ಳಂಬೆಳಗ್ಗೆಯೇ ರಾಗಿ‌ಮುದ್ದೆ ಕೊಡುತ್ತಿದ್ದರು. ಆ ಮುದ್ದೆಗಳೋ ಕಾರ್ಕ್ ಬಾಲ್ ಇದ್ದಂಗೆ ಇರ್ತಿದ್ವು. ಹೊಟ್ಟೆ ತುಂಬಾ ಮುದ್ದೆ ಚೂರೇ ಚೂರು ಅನ್ನ ಹಾಕುತ್ತಿದ್ದರು. ನಂತರ ನಾವು ಶಾಲೆಗೆ ತೆರಳಬೇಕಾಗಿತ್ತು.

ನಂತರ ಮಧ್ಯಾಹ್ನ ಹಾಸ್ಟೆಲ್ಲಿನಲ್ಲಿ ತಿಂಡಿ ಕೊಡುತ್ತಿದ್ದರು. ಅದು ತುಂಬಾ ಕಡಿಮೆ! ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಕಮ್ಮಿ ಹಾಕ್ತಾ ಇದ್ದರು. ಅವಲಕ್ಕಿ, ಚಿತ್ರಾನ್ನ, ಉಪ್ಪಿಟ್ಟು, ಗಂಜಿ ಮಾತ್ರ ಮಧ್ಯಾಹ್ನದ ತಿಂಡಿ. ಈಗಿನಂತೆ ಆಗ ಶಾಲೆಯಲ್ಲಿ ಬಿಸಿಯೂಟ ಇರಲಿಲ್ಲ. ನಾವು ತುಂಬಾ ಕಷ್ಟಪಟ್ಟು ತಿಂಡಿ ತಿನ್ನುತ್ತಿದ್ದೆವು. ಸಂಜೆ ನಾಲ್ಕೂವರೆಗೆ ಶಾಲೆ ಬಿಟ್ಟ ಮೇಲೆ ಆರು ಘಂಟೆಯವರೆಗೂ ಆಟವಾಡಿ ನಂತರ ಭಜನೆಗೆ ಹೋಗಬೇಕಾಗಿತ್ತು. ಒಂದೊಮ್ಮೆ ಭಜನೆಗೆ ಶ್ರೀ ರಾಘವೇಂದ್ರ ಸ್ವಾಮೀಜಿಗಳು ಬಂದರೆ ಆರೂವರೆಗೆ ಸರಿಯಾಗಿ ಮುಗಿಯುತ್ತಿತ್ತು. ಸಮಯ ಅಂದ್ರೆ ಸಮಯ. ಸಮಯ ಪಾಲನೆಯ ಬಗ್ಗೆ ಅವರನ್ನು ನೋಡಿ ನಾವು ಕಲಿಯಬಹುದಿತ್ತು. ಅವರ ಬದಲು ಬೇರೆ ಯಾರಾದ್ರೂ ಬಂದ್ರೆ ಭಜನೆ ಏಳು ಘಂಟೆಯವರೆಗೂ ಹೋಗುತ್ತಿತ್ತು. ಸ್ವಾಮೀಜಿ ವಿರಚಿತ ಸುಂದರವಾದ ಭಕ್ತಿ ಗೀತೆಗಳನ್ನು ಹೇಳಿಕೊಡುತ್ತಿದ್ದರಾದರೂ ನಾವು ಓದಲು ಸಮಯ ವ್ಯರ್ಥವಾಗುತ್ತೆ ಎಂದೇ ಭಾವಿಸುತ್ತಿದ್ದೆವು. ಹತ್ತನೇ ತರಗತಿಯವರು‌ ಚಿಕ್ಕ ಚಿಕ್ಕ ನೋಟ್ಸ್‌ಗಳನ್ನು ತಂದು ಕದ್ದು ಮುಚ್ಚಿ ಓದುತ್ತಿದ್ದರು!

ಭಜನೆ ಮುಗಿದ ನಂತರ ಮತ್ತೆ ಓದು, ನಂತರ ರಾತ್ರಿಯೂಟ ರಾಗಿಮುದ್ದೆ! ಊಟದ ನಂತರ ನಾವು ಎಷ್ಟು ಹೊತ್ತು ಬೇಕಾದರೂ ಓದಿಕೊಳ್ಳಬಹುದಿತ್ತು. ಇದಕ್ಕೆ ರಿಸ್ಟ್ರಿಕ್ಷನ್ ಇರಲಿಲ್ಲ. ಕೆಲವರು ಬೇಗ ಮಲಗಿಕೊಂಡರೆ ಕೆಲವರು ತಡವಾಗಿ ಮಲಗುತ್ತಿದ್ದರು. ಆಗ ಇದ್ದ ನೀರಿನ ಸಮಸ್ಯೆ ಹೇಳತೀರದು. ಇದನ್ನು ನೀರಿನ ಸಮಸ್ಯೆ ಅನ್ನುವುದಕ್ಕಿಂತ ನಲ್ಲಿ ಸಮಸ್ಯೆ ಅಂತಾ ಹೇಳಬಹುದು. ಯಾಕೆಂದ್ರೆ ಇದ್ದುದ್ದು ಎಂಟರಿಂದ ಹತ್ತು ನಲ್ಲಿ. ಹುಡುಗರು ಮಾತ್ರ ಸರಿಸುಮಾರು ಇನ್ನೂರರಿಂದ ಇನ್ನೂರೈವತ್ತು. ನಮಗೆ ಮುಖ ತೊಳೆಯುವುದು ಸವಾಲು ಎನಿಸುತ್ತಿತ್ತು. ಮೊದಮೊದಲು ವಾರಕ್ಕೆ ಮೂರು ಸಲ ಮಾಡುತ್ತಿದ್ದ ಸ್ನಾನ ಬರು ಬರುತ್ತ ವಾರಕ್ಕೊಂದು ದಿನ ಆಯ್ತು! ಸ್ನಾನಕ್ಕೆ ಹೋದರೆ ಓದೋಕೆ ಸಮಯ ವ್ಯರ್ಥ ಆಗುತ್ತೆ ಅಂತಾ ನಾನು ಹೋಗ್ತಾ ಇರಲಿಲ್ಲ! ನಮ್ಮ ಹಾಸ್ಟೆಲ್ಲಿನ‌ ಮಧು ಎಂಬಾತ ಹದಿನೈದು ದಿನವಾದ್ರೂ ಸ್ನಾನ‌ ಮಾಡ್ತಾ ಇರಲಿಲ್ಲ. ಒಂದೊಮ್ಮೆ ಅವನೇನಾದ್ರೂ ಸ್ನಾನ ಮಾಡಿದ ಅಂದ್ರೆ ಅವತ್ತು‌ ಮಧು ಸ್ನಾನ ಮಾಡಿದನೆಂಬ ಸುದ್ದಿ ಕಾಡ್ಗಿಚ್ಚಿನಂತೆ ನಮ್ಮ ಕ್ಲಾಸಿನವರಿಗೆ ಹಬ್ಬುತ್ತಿತ್ತು! ಹೀಗೆ ಒಮ್ಮೆ ಅವನು ಸ್ನಾನ ಮಾಡ್ತಾ ಇರಬೇಕಾದ್ರೆ ‘ಮಧು ಇವತ್ತು ಸ್ನಾನ ಮಾಡ್ತಾ ಇದಾನೆ; ಇವತ್ತು ಮಳೆ ಬರುತ್ತೆ ಕಣ್ರೊ’ ಅಂದುಬಿಟ್ಟೆ. ಮಳೆಗಾಲದ ಕಾರಣಕ್ಕೋ, ಮಾನ್ಸೂನ್ ಕಾರಣಕ್ಕೋ ಮಳೆ ಅಂದು ಬಂದೇಬಿಡ್ತು. ಎಲ್ರೂ ‘ಮಧು ಸ್ನಾನ ಮಾಡಿದ್ಕೆ ಮಳೆ ಬಂತು’ ಎಂದು ತಮಾಷೆ ಮಾಡುತ್ತಿದ್ದರು. ಕುಳ್ಳಗಿದ್ದ ಅವನಿಗೆ ಹುಡುಗರೆಲ್ಲಾ ಸೇರಿ ನಲವತ್ತೇಳು ಅಡ್ಡ ಹೆಸರು ಇಟ್ಟಿದ್ರು!! ಆ ಹೆಸರುಗಳ ಚೀಟಿ ನಮ್ಮ ಸಂಸ್ಕೃತ ಮೇಷ್ಟ್ರಾಗಿದ್ದ ಜಿ.ಎಂ.ಜಿ‌ ಕೈಲಿ ಸಿಕ್ಕು ನಾವೆಲ್ಲಾ ಬೈಸಿಕೊಂಡಿದ್ವಿ.


ಹಿಂದಿನಂತೆ ಈಗಿನ ನಾವು ಇದ್ದ ಹಾಸ್ಟೆಲ್ ಸ್ಥಿತಿಯಿಲ್ಲ.. ಎಲ್ಲಾ ಬದಲಾಗಿದೆ. ಒಂದೊಮ್ಮೆ ಇದ್ದಿದ್ರೂ ಹಿಂದಿನಂತೆ ಕಷ್ಟ ಸಹಿಸುವ ಗುಣ ಈಗಿನ‌ ಮಕ್ಕಳಲ್ಲಿಲ್ಲದ ಕಾರಣ ಒಂದೊಮ್ಮೆ ಹಾಗೇ ಇದ್ದಿದ್ರೆ ಹಾಸ್ಟೆಲ್ಲಿನಲ್ಲಿ ಯಾರೂ ಉಳಿದುಕೊಳ್ಳುತ್ತಿರಲಿಲ್ಲ. ಆಗ ನಮಗೆ ತೆಗೆದುಕೊಳ್ತಿದ್ದುದು ತುಂಬಾ ಕಡಿಮೆ ಶುಲ್ಕ. ಕೊಡಬೇಕಾದ ಗರಿಷ್ಟ ಸೌಲಭ್ಯ ನಮಗೆ ಕೊಟ್ಟಿದ್ರು. ಅಲ್ಲದೇ ತುಂಬಾ ಹೋರಾಟ ಮಾಡಿಕೊಂಡು ಅಲ್ಲಿ ಬೆಳೆದ ಕಾರಣ ನಮಗಿವತ್ತು ಎಂಥಾದ್ದೇ ಕಷ್ಷ ಬಂದ್ರೂ ಅದನ್ನು ಎದುರಿಸುವ ಗುಣ ಇದೆ. ಇಂದು ಏನೇ ಸೌಲಭ್ಯ ನಮಗಿರಬಹುದು. ಅದೆಲ್ಲಾ ಆ ರೀತಿ ಕಷ್ಟಪಟ್ಟು ಓದಿದ್ಕೆ ಸಿಕ್ಕಿದ್ದು ಅಂತಾ ನಾನಾದ್ರೂ ಭಾವಿಸ್ತೇನೆ. ಅಷ್ಟೇ ಅಲ್ಲದೇ ನೀರು ಹಾಗೂ ಆಹಾರದ ಬಗ್ಗೆ ಹೆಚ್ಚು ಗೌರವ ಕೊಡುವುದನ್ನು ಅಲ್ಲಿ ಇದ್ದಿದ್ದಕ್ಕೆ ಕಲಿತೆ ಎಂದು ಹೇಳಲು ಬಯಸುತ್ತೇನೆ.