Advertisement
ತ್ಯಾಗಕ್ಕಿಲ್ಲಿ ಬೆಲೆಯಿದೆಯೇ?: ಜಯಲಕ್ಷ್ಮಿ ಪಾಟೀಲ್ ಅಂಕಣ

ತ್ಯಾಗಕ್ಕಿಲ್ಲಿ ಬೆಲೆಯಿದೆಯೇ?: ಜಯಲಕ್ಷ್ಮಿ ಪಾಟೀಲ್ ಅಂಕಣ

ಸಮಾಜಘಾತುಕ ಕೆಲಸಗಳಿಗಾಗಿ, ಯಾರದೋ ತೇಜೋವಧೆಗಾಗಿ, ಜಾತಿಯನ್ನು ಜರಿಯುವುದಕ್ಕಾಗಿ, ಜಾತಿಯನ್ನಿಟ್ಟುಕೊಂಡು ಮೆರೆಯುವುದಕ್ಕಾಗಿ, ಇನ್ನೊಬ್ಬರ ವಯಕ್ತಿಕ ಬದುಕಿನ ಬಗ್ಗೆ ನಮಗೇನೂ ಗೊತ್ತಿಲ್ಲದಿದ್ದರೂ ಎಲ್ಲ ಬಲ್ಲವರಂತೆ ಆಡಿಕೊಳ್ಳುವುದಕ್ಕಾಗಿ, ಸಂವಿಧಾನವು ದೇಶದ ಸುವ್ಯವಸ್ಥೆಗೊಂದು ರಾಜಮಾರ್ಗ ಎನ್ನುವುದು ತಿಳಿದಿದ್ದರೂ ಅದನ್ನು ವಿಷ’ಯ ಮಾಡಿಕೊಂಡು ಕಿತ್ತಾಡುವುದಕ್ಕಾಗಿ, ರಾಜಕೀಯ ಪಕ್ಷಗಳ ಮೇಲಿನ ಕುರುಡುಮೋಹದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರುಗಳಿಗೆ ಮಸಿ ಬಳಿಯುವುದರ ಮೂಲಕ ಸಾಮಾಜಿಕ ವಾತಾವರಣವನ್ನು ಹದಗೆಡಿಸಿ ದ್ವೇಷವನ್ನು ಹರಡುವುದಕ್ಕಾಗಿ, ಇತಿಹಾಸ ತಿರುಚುವ ಮೂಲಕ ಏನೋ ಮಹತ್ತರವಾದುದನ್ನು ಕಡೆದು ಗುಡ್ಡೆ ಹಾಕಿದೆ ಎಂಬಂತಾಡುವುದು, ಎಂಥಾ ನಾಚಿಗ್ಗೇಡಿತನ ಅನ್ನುವ ಅರಿವಾದರೂ ಇರಬೇಕಲ್ಲವೆ?
ಜಯಲಕ್ಷ್ಮಿ
ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ಎರಡನೆಯ ಬರಹ

“ಹೇಯ್ ನಾನೇನು ಅಂಥ ಮಹಾ ಕೆಲಸ ಮಾಡಿಲ್ಲ ಬಿಡಿ ಆಂಟಿ. ನಾನು ಆ ಸ್ಥಿತಿಯಲ್ಲಿದ್ರೆ ನೀವು ನನ್ನನ್ನು ಹಾಗೇ ಬಿಡ್ತಿದ್ದ್ರಾ? ಖಂಡಿತ ನೀವು ಇವತ್ತು ನಾನು ಮಾಡಿದಂತೆಯೇ ಮಾಡ್ತಿದ್ದ್ರಿ. ಹೌದೋ ಇಲ್ವೋ ಹೇಳಿ? ಉತ್ತರ ಭಾರತವಾದರೇನು, ದಕ್ಷಿಣ ಭಾರತವಾದರೇನು, ಎಲ್ಲಿಯವರಾದರೇನು ನಾವೆಲ್ಲ ಒಂದೇ. ನಾವು ಪರಸ್ಪರ ಸಹಾಯ ಮಾಡದೇ ಹೋದರೆ ಹೇಗೆ ಆಂಟಿ?”

ಡುರಂಟೋ ಎಕ್ಸ್ಪ್ರೆಸ್ ರೈಲಿನಲ್ಲಿ ತನ್ನ ಮುರಿದ ಕಾಲಿಗೆ ಪ್ಲಾಸ್ಟರ್ ಹಾಕಿಸಿಕೊಂಡು ಕುಳಿತ ೩೦, ೩೫ರ ಆಸುಪಾಸಿನ ಯುವಕ ಅರಜೀತ್ ಚಕ್ರವರ್ತಿ ಹೀಗೆ ಕೇಳುತ್ತಿದ್ದರೆ ನನ್ನವ್ವನ ಕಣ್ಣು ತುಂಬಿ ಬಂದಿದ್ದವಂತೆ. ಫೋನಲ್ಲಿ ಇದನ್ನು ಹೇಳುತ್ತಿರುವಾಗ ಅವ್ವ ತುಂಬಾ ಭಾವುಕಳಾಗಿದ್ದಳು. “ತಾನ ಆಕ್ಸಿಡೆಂಟ್ ಆಗಿ ಕಾಲುಮುರ್ಕೊಂಡು ಇಷ್ಟು ದಪ್ಪ ಪ್ಲಾಸ್ಟರ್ ಹಾಕ್ಕೊಂಡು ಕುಂತಾನ. ಅಂಥಾದ್ರಾಗ ಹೋಗಿ ನಿಮ್ಮಪ್ಪಾರಿಗೆ ಹೆಲ್ಪ್ ಮಾಡಿದ. ಬ್ಯಾರೆಯವರಾಗಿದ್ರ ನಂದ ನನಗ ರಗಡ್ ಆಗೇತಿ ಊರ ಉಸಾಬಾರಿ ನನಗ್ಯಾಕ ಅಂತ ಸುಮ್ಮ ಕುಂತಿರ್ತಿದ್ದ್ರು. ಆದ್ರ ಈ ಹುಡುಗ… ಹೌದ್ದ್ ತೊಗೊ ಇದ್ದ್ರ ಹಿಂಗಿರಬೇಕ್” ಅವ್ವ ಹೇಳುತ್ತಲೇ ಇದ್ದಳು.

ನಡೆದ ಘಟನೆ ಏನೆಂದರೆ, ಆಯುರ್ವೇದ ವೈದ್ಯಳಾದ ನನ್ನ ತಂಗಿಯ ಕುಟುಂಬದೊಂದಿಗೆ ಅಪ್ಪಾ ಅವ್ವ ಮತ್ತು ನನ್ನ ಸಣ್ಣ ತಂಗಿ ಮೊನ್ನೆಯಷ್ಟೇ ಓರಿಸ್ಸಾ ಪ್ರವಾಸ ಮುಗಿಸಿ ಮರಳಿ ರೈಲಲ್ಲಿ ಬರುವಾಗ, ೮೪ ವರ್ಷದ ನನ್ನಪ್ಪ ಮೂತ್ರ ವಿಸರ್ಜನೆಗೆಂದು ಟಾಯಲೆಟ್ಟಿಗೆ ಹೋಗಿದ್ದಾರೆ. ರೈಲಿನ ಧಡಕಿಗೆ ಜೋಲಿ ತಾಳದೆ ಕಾಲು ಜಾರಿ ಅಲ್ಲೇ ಬಿದ್ದಿದ್ದಾರೆ. ಬಹು ಕಾಲದ ಸೊಂಟದ ಸಮಸ್ಯೆ ಇರುವುದರಿಂದ ಅವರಿಗೆ ಮೇಲೇಳಲು ಸಾಧ್ಯವಾಗದೇ ನೆರವಿಗಾಗಿ ಕೂಗಿದಾಗ ಮನೆಯವರೊಂದಿಗೆ ಒಂಟಿ ಕಾಲಿನ ಅರಿಜೀತ್ ಸಹ ಹೋಗಿ ಅಪ್ಪಾರನ್ನು ಅಲ್ಲಿಂದ ಎಬ್ಬಿಸಿಕೊಂಡು ಬರಲು ಸಹಾಯ ಮಾಡಿದ್ದಾನೆ. ಅರಜೀತನ ತಂದೆ ಆರ್ಮಿಯಲ್ಲಿದ್ದು, ಯುದ್ಧದಲ್ಲಿ ಅವರು ತಮ್ಮ ಕಾಲನ್ನು ಕಳೆದುಕೊಂಡವರು. ಈಗ ವಿಶ್ರಾಂತ ಜೀವನ ನಡೆಸುತ್ತಿರುವವರು. ಅರಜೀತ್ ಯೋಧನಲ್ಲದಿದ್ದರೂ ತನ್ನೊಂದಿಗೆ ತಂದೆಯ ಗೌರವವೂ ಹೆಚ್ಚಾಗುವಂಥ ಕೆಲಸ ಮಾಡಿದ್ದ, ಮಾತಾಡಿದ್ದ. ತನ್ನ ಉದಾತ್ತ ಉನ್ನತ ವಿಚಾರ ಆಚಾರಗಳ ಮೂಲಕ ಅಲ್ಲಿದ್ದ ಎಲ್ಲರ ಕಣ್ಣಲ್ಲಿ ದೊಡ್ಡವನಾದ. ಭೇಟಿ ಕೆಲವೇ ಗಂಟೆಗಳದ್ದಾದರೂ ಶಾಶ್ವತವಾಗಿ ಅಲ್ಲಿದ್ದವರೆಲ್ಲರ ಮನದಲ್ಲಿ ಉಳಿದ. ಅರಜೀತನ ತಂದೆ ಆರ್ಮಿಯಲ್ಲಿದ್ದವರು ಎಂದು ಅವ್ವ ಹೇಳಿದಾಗ ಗಣರಾಜ್ಯೋತ್ಸವ ನೆನಪಾಯಿತು! ಇದು ೭೭ನೇ ಗಣರಾಜ್ಯೋತ್ಸವ.

ಯೋಧರು ಎಂದಾಗಲೆಲ್ಲ, ಗಡಿ, ರಕ್ಷಣೆಯ ಜೊತೆ ಜೊತೆಗೆ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಎನ್ನುವ ಪದಗಳು ಮನದಲ್ಲಿ ಹಾದುಹೋಗುತ್ತವೆ. ದೇಶ, ಸ್ವಾತಂತ್ರ್ಯ, ಹೋರಾಟ, ಹುತಾತ್ಮರು, ಸಂವಿಧಾನ, ಐಕ್ಯತೆ, ಹೀಗೆ ಸಾಲಾಗಿ ಎಲ್ಲ ವಿಷಯಗಳೂ ನೆನಪಿಗೆ ಬಂದು ಮನಸು ಭಾವುಕವಾಗುತ್ತದೆ. ನಮಗಾಗಿ ಹೋರಾಡಿದವರ ನೆನೆದು ಹೆಮ್ಮೆಯಿಂದ ಬೀಗುತ್ತದೆ. ಯೋಚಿಸುತ್ತ ಯೋಚಿಸುತ್ತ ಹೆಮ್ಮೆಯ ಜಾಗದಲ್ಲಿ ವಿಷಾದ ಮಡುಗಟ್ಟುತ್ತದೆ.

ಯಾವುದಕ್ಕಾಗಿ ಅವರೆಲ್ಲ ಹೋರಾಡಿದರು? ಯಾರಿಗಾಗಿ? ಯಾಕಾಗಿ ಲಕ್ಷಾಂತರ ಜನ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದರು? ಪ್ರಾಣ ತೆತ್ತರು? ಅವರು ಬಯಸಿದ್ದೇನು? ಈಗ ನಾವು ಮಾಡುತ್ತಿರುವುದೇನು? ಸ್ವಾತಂತ್ರ್ಯ ಸಿಕ್ಕು ೭೮ವರೆ ವರ್ಷ ಕಳೆದಿವೆ. ಇಂದು ೭೭ನೇ ಗಣರಾಜ್ಯೋತ್ಸವ. ಇಷ್ಟು ವರ್ಷಗಳಲ್ಲಿ ನಾವು ಎಷ್ಟು ಬೆಳೆದಿದ್ದೇವೆ ಸಾಮಾಜಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಬೌದ್ಧಿಕವಾಗಿ…? ಸಾಕಷ್ಟು ಸುಧಾರಣೆಗಳು, ಬೆಳವಣಿಗೆಗಳು, ಬದಲಾವಣೆಗಳು ಆಗಿರುವುದು ನಿಜ. ಆದರೆ ರಸದೊಡನೆ ಕಸ ತುಸು ಹೆಚ್ಚೇ ಕಾಣುತ್ತಿದೆ ಅನಿಸುತ್ತಿಲ್ಲವೇ ನಿಮಗೆ?

ಈಗ ಜಾಗತೀಕರಣ ಯುಗದಲ್ಲಿದ್ದೇವೆ. ಬಯಸಿದರೆ ಜಗತ್ತಿನ ಸಮಸ್ತ ವಿಚಾರವೂ ಬೆರಳ ತುದಿಗೆ ನಿಲುಕುವಷ್ಟು ತಂತ್ರಜ್ಞಾನ ನಮ್ಮ ಮುಂದೆ ಆಯ್ಕೆಗಾಗಿ ಸಾವಿರಾರು ವಿಷಯಗಳನ್ನು, ಅವುಗಳ ಮಾಹಿತಿಯನ್ನು ಹರಡಿ ಇಟ್ಟಿದೆ. ಸರಿಯಾಗಿ ಹಿತವಾಗಿ ಬಳಸಿಕೊಂಡಲ್ಲಿ ನಮ್ಮ ಅರಿವಿನ ಜೊತೆಗೆ ಆಸಕ್ತಿಗಳ ವ್ಯಾಪ್ತಿಯೂ ಹಿಗ್ಗೀತು. ಆದರೆ ಜನಸಾಮಾನ್ಯರಾದ ನಾವು ಈ ತಂತ್ರಜ್ಞಾನವನ್ನು, ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುತ್ತಿರುವುದು ಯಾವುದಕ್ಕಾಗಿ?

ಸಮಾಜಘಾತುಕ ಕೆಲಸಗಳಿಗಾಗಿ, ಯಾರದೋ ತೇಜೋವಧೆಗಾಗಿ, ಜಾತಿಯನ್ನು ಜರಿಯುವುದಕ್ಕಾಗಿ, ಜಾತಿಯನ್ನಿಟ್ಟುಕೊಂಡು ಮೆರೆಯುವುದಕ್ಕಾಗಿ, ಇನ್ನೊಬ್ಬರ ವಯಕ್ತಿಕ ಬದುಕಿನ ಬಗ್ಗೆ ನಮಗೇನೂ ಗೊತ್ತಿಲ್ಲದಿದ್ದರೂ ಎಲ್ಲ ಬಲ್ಲವರಂತೆ ಆಡಿಕೊಳ್ಳುವುದಕ್ಕಾಗಿ, ಸಂವಿಧಾನವು ದೇಶದ ಸುವ್ಯವಸ್ಥೆಗೊಂದು ರಾಜಮಾರ್ಗ ಎನ್ನುವುದು ತಿಳಿದಿದ್ದರೂ ಅದನ್ನು ವಿಷ’ಯ ಮಾಡಿಕೊಂಡು ಕಿತ್ತಾಡುವುದಕ್ಕಾಗಿ, ರಾಜಕೀಯ ಪಕ್ಷಗಳ ಮೇಲಿನ ಕುರುಡುಮೋಹದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರುಗಳಿಗೆ ಮಸಿ ಬಳಿಯುವುದರ ಮೂಲಕ ಸಾಮಾಜಿಕ ವಾತಾವರಣವನ್ನು ಹದಗೆಡಿಸಿ ದ್ವೇಷವನ್ನು ಹರಡುವುದಕ್ಕಾಗಿ, ಇತಿಹಾಸ ತಿರುಚುವ ಮೂಲಕ ಏನೋ ಮಹತ್ತರವಾದುದನ್ನು ಕಡೆದು ಗುಡ್ಡೆ ಹಾಕಿದೆ ಎಂಬಂತಾಡುವುದು, ಎಂಥಾ ನಾಚಿಗ್ಗೇಡಿತನ ಅನ್ನುವ ಅರಿವಾದರೂ ಇರಬೇಕಲ್ಲವೆ? ಇದೇ ತಂತ್ರಜ್ಞಾನವನ್ನು ಬಳಸಿಕೊಂಡೋ, ಬಳಸದೆಯೋ, ಈ ದೇಶಕ್ಕಾಗಿ ‘ನನ್ನ ವೈಯಕ್ತಿಕ ಸಕಾರಾತ್ಮಕ ಕೊಡುಗೆ ಏನು ಮತ್ತು ಎಷ್ಟು’ ಎನ್ನುವುದರತ್ತ ನಮ್ಮ ಗಮನ ಹೋಗುವುದು ಯಾವಾಗ? ಎತ್ತ ಸಾಗುತ್ತಿದ್ದೇವೆ ನಾವು? ಸಿದ್ಧಾಂತಗಳ ಮೂಲ ಉದ್ದೇಶಗಳನ್ನೇ ಮರೆತು ಅಥವಾ ಸರಿಯಾಗಿ ಅರ್ಥ ಮಾಡಿಕೊಳ್ಳದೆನೇ ಅವುಗಳನ್ನು ಅಸ್ತ್ರಗಳಂತೆ ಬಳಸುವ ಮನಸ್ಥಿತಿಗೆ ಏನನ್ನಬೇಕು?

ಪ್ರಜಾಸತ್ತಾತ್ಮಕ ದೇಶ ನಮ್ಮದು. ಚುನಾವಣೆಯಲ್ಲಿ ಗೆದ್ದು ಆಡಳಿತದ ಚುಕ್ಕಾಣೆಯನ್ನು ಹಿಡಿದವರು ಪ್ರಜೆಗಳಿಗಾಗಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ತಮ್ಮ ಗದ್ದುಗೆಯನ್ನು, ಪಕ್ಷವನ್ನು ಗಮನದಲ್ಲಿಟ್ಟುಕೊಂಡು ಕೆಸರೆರಚಾಟದಲ್ಲಿ ತೊಡಗಿಕೊಂಡಿರುವ ಸುದ್ದಿಯೇ ಹೆಚ್ಚು ಮಧ್ಯಮದಲ್ಲಿ ಗೋಚರಿಸುತ್ತಿರುವುದು. ಜನಸಮೂಹವೂ ಹುಚ್ಚರ ಸಂತೆಯೇ ಸೈ! ಯಾವ ಪಕ್ಷದ ಸರಕಾರವೇ ಆಡಳಿತ ನಡೆಸಲಿ, ಅದು ಪ್ರಜಾಹಿತ ಬಯಸಿ ರಚನಾತ್ಮಕ ಕೆಲಸಗಳನ್ನು ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರಜೆಗಳದು. ಆದರೆ ನಾವೇನು ಮಾಡುತ್ತಿದ್ದೇವೆ? ಪಕ್ಷಗಳ ಪರ/ವಿರೋಧಿಗಳಾಗಿ ಪರಸ್ಪರ ಆಡಿಕೊಳ್ಳುವುದರಲ್ಲೇ ದಿನ ಕಳೆಯುತ್ತಿದ್ದೇವೆ. ಪ್ರೀತಿಯ ಜಾಗದಲ್ಲಿ ದ್ವೇಷವನ್ನು ಬಿತ್ತಿ ಬೆಳೆಯುತ್ತಿದ್ದೇವೆ. ಏನನ್ನಾದರು ವಿರೋಧಿಸುವುದು ತಪ್ಪಲ್ಲ. ಆದರೆ ಆ ವಿರೋಧ ವಿವೇಚನೆಯುಳ್ಳ ಆರೋಗ್ಯಕರ ವಿರೋಧವಾಗಿರಬೇಕು. ಸಮಾಜದ ಹಿತ ಬಯಸುವ ವಿರೋಧವಾಗಿರಬೇಕು.

ಇದನ್ನೆಲ್ಲ ಹೇಳುತ್ತಿರುವ ಹೊತ್ತಲ್ಲೇ ನಮ್ಮ ಜೊತೆಜೊತೆಗೇ ಇನ್ನೊಂದು ಮಗ್ಗುಲಲ್ಲಿ ಹಿತವಾದ ಆರೋಗ್ಯಕರ ಸಮಾಜ ತನ್ನ ಪಾಡಿಗೆ ತಾನು ನೆಮ್ಮದಿಯಿಂದ ಮುನ್ನಡೆದಿದೆ. ನಾವು ನಮ್ಮ ಸಮಾಜದ ಬಗ್ಗೆ ತೀರಾ ಅಷ್ಟು ನಿರಾಶರಾಗಬೇಕಿಲ್ಲ ಎನ್ನುವುದನ್ನದು ಹೇಳುತ್ತದೆ.

ನಾನು ಬಸುರಿಯಾಗಿದ್ದಾಗಿನ ಆರಂಭದ ದಿನಗಳಲ್ಲಿ ನನ್ನನ್ನು ನೋಡಿಕೊಂಡವರು ಪುಣೆಯಲ್ಲಿನ ನಮ್ಮ ನೆರೆಹೊರೆಯಲ್ಲಿದ್ದ ಮಹರಾಷ್ಟ್ರದವರಾದ ಉಜ್ವಲಾ ಆಂಟಿ ಮತ್ತು ಸಿಂಧಿಯವರಾದ ಲೀಲಾ ಆಂಟಿ.

ನನ್ನ ಅವಳಿ ಮಕ್ಕಳು ಎರಡು ಮೂರು ವರ್ಷದವರಿದ್ದಾಗ ನಮ್ಮನೆಯಲ್ಲಿ ಉಂಡಿದ್ದಕ್ಕಿಂತ ಪಕ್ಕದ ಫ್ಲಾಟಲ್ಲಿದ್ದ ಶಿಂಗಾರೆ ಭಾಭಿಯ ಮನೆಯಲ್ಲಿ ಉಂಡಿದ್ದೇ ಹೆಚ್ಚು.

ಇದೇ ಜನವರಿ ೧೧ರಂದು ನಮ್ಮತ್ತೆ ಬಾಗಲಕೋಟೆಯಲ್ಲಿ ನಿಧನರಾದರು. ಆಗ ಸತತ ಮೂರು ದಿನ ಓಣಿಯ ಜನ, ಸಂಬಂಧಿಕರು ತಮ್ಮ ಮನೆಯಿಂದ ಬೆಳಗಿನ ಚಹಾ, ನಾಷ್ಟಾ, ಮಧ್ಯಾಹ್ನ ಮತ್ತು ರಾತ್ರಿಯ ಊಟ ತಂದೂ ತಂದೂ ಕೊಟ್ಟರು. ಅಲ್ಲಿ ಆ ಜಾತಿ, ಈ ಭಾಷೆ, ಆ ಊರು ಎಂಬ ಅಂಶ ಗೌಣವಾಗಿತ್ತು. ಸಣ್ಣ ನಗರ, ಹಳ್ಳಿಗಳಲ್ಲಿ ಈ ಥರದ್ದೊಂದು ಸೌಹಾರ್ದತೆ ಇನ್ನೂ ಜೀವಂತವಾಗಿದೆ.

ಹೀಗೆ ನೂರಾರು ಸೌಹಾರ್ದಯುತ ಬದುಕಿನ ಉದಾಹರಣೆಗಳು ಎಲ್ಲರ ಬಳಿ ಇದ್ದೇ ಇರುತ್ತವೆ.

ಸ್ನೇಹಿತರ ಕಷ್ಟಕ್ಕಾಗಿ ತಮ್ಮ ಹೊಲ ಮನೆಯನ್ನೇ ಅಡ ಇಟ್ಟವರಿದ್ದಾರೆ. ಚಿನ್ನ ಕೊಟ್ಟವರಿದ್ದಾರೆ. ಊರವರೆಲ್ಲ ಸೇರಿ ಅನಾಥ ಮಕ್ಕಳ ಮದುವೆ ಮಾಡಿ ನೆಲೆ ಮಾಡಿಕೊಟ್ಟವರಿದ್ದಾರೆ. ಊರ ಮಕ್ಕಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಹಾಕಿ ನಡೆಸುವವರಿದ್ದಾರೆ. ಉಚಿತ ವೈದ್ಯಕೀಯ ನೆರವು ನೀಡುವವರಿದ್ದಾರೆ. ಬಡ ಮಕ್ಕಳ ಓದಿಗಾಗಿ ಉಚಿತ ವಸತಿಶಾಲೆಗಳನ್ನು ನಿರ್ಮಿಸಿದವರಿದ್ದಾರೆ. ಮಹಿಳೆಯರ ಏಳಿಗೆಗಾಗಿ, ಅವರ ಮೇಲೆ ನಡೆಯುವ ಕೌಟುಂಬಿಕ, ಸಾಮಾಜಿಕ ಅನ್ಯಾಯ, ಅತ್ಯಾಚಾರಗಳ ವಿರುದ್ಧ ನಿಸ್ವಾರ್ಥದಿಂದ ಹೋರಾಡುವವರಿದ್ದಾರೆ. ರೈತರ ಪರವಾಗಿ ಹೋರಾಡುವವರಿದ್ದಾರೆ, ಪ್ರಾಣಿ ಪಕ್ಷಿಗಳ ಸಂರಕ್ಷಣೆ, ಪರಿಸರ ಸಂರಕ್ಷಣೆಗಾಗಿ ಟೊಂಕಕಟ್ಟಿ ನಿಂತವರಿದ್ದಾರೆ, ಪ್ರಕೃತಿಯ ವಿಕೋಪದ ಸಮಯದಲ್ಲಿ ತಾವು ನೂರಾರು ಮೈಲಿ ದೂರವಿದ್ದರೂ, ಸಂತ್ರಸ್ತರಿಗೆ ನಾನಾ ರೀತಿಯಲ್ಲಿ ನೆರವಾಗುವ ಲಕ್ಷಾಂತರ ಜನರಿದ್ದಾರೆ.

ಗಡಿ, ಭಾಷೆ, ಜಾತಿ, ಎಲ್ಲ ಮೀರಿದ ಇಂಥ ಭಾವನಾತ್ಮಕ ಭದ್ರ ಬೆಸುಗೆಗಳು ಹೆಚ್ಚಾಬೇಕು. ನಾವೆಲ್ಲ ಒಂದು ಎಂಬ ಭಾವ ಬಲಗೊಳ್ಳಬೇಕು. ಆಗ ಗಣರಾಜ್ಯೋತ್ಸವಕ್ಕೊಂದು ಸಹಜ ಮೆರಗು. ಅದಕ್ಕಾಗಿ ಶ್ರಮಿಸಿದವರ ಶ್ರಮದ ಸಾರ್ಥಕ್ಯ. ಯಾವುದೇ ಸ್ವಾತಂತ್ರ್ಯ ದುರುಪಯೋಗವಾಗದಿರಲಿ.

ಎಲ್ಲರಿಗೂ ೭೭ನೇ ಗಣರಾಜ್ಯೋತ್ಸವದ ಶುಭಾಶಯಗಳು.

About The Author

ಜಯಲಕ್ಷ್ಮಿ ಪಾಟೀಲ್

ಲೇಖಕಿ, ರಂಗ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರು. ನೀಲ ಕಡಲ ಭಾನು' (ಕವನ ಸಂಕಲನ) ‘ಹೇಳತೇವ ಕೇಳ' (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ‘ಮುಕ್ಕು ಚಿಕ್ಕಿಯ (ಕಾದಂಬರಿ) ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ 'ಬೇಬಿ' (ಅನುವಾದಿತ ನಾಟಕ) ಇವರ ಪ್ರಕಟಿತ ಕೃತಿಗಳು. 'ಜನದನಿ' (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಸಂಸ್ಥೆ) ಸಂಸ್ಥಾಪಕಿ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ  ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

1 Comment

  1. Lata Wali

    ಹೌದು ಮೇಡಮ್ ಇಂಥ ಸೌಹಾರ್ದತೆ ಈಗಲೂ ಇದೆ ಆದರೆ ಕಡಿಮೆಯಾಗುತ್ತಿದೆ. ಇವತ್ತಿನ ಪೀಳಿಗೆಗೆ ಅದನ್ನು ತಲುಪಿಸುವುದೇ ಒಂದು ಸವಾಲು

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ