Advertisement
ದರ್ಶನ್‌ ಜಯಣ್ಣ ಹೊಸ ಸರಣಿ “ಸೌದಿ ಡೇಟ್ಸ್” ಇಂದಿನಿಂದ….

ದರ್ಶನ್‌ ಜಯಣ್ಣ ಹೊಸ ಸರಣಿ “ಸೌದಿ ಡೇಟ್ಸ್” ಇಂದಿನಿಂದ….

ನಾನಿಲ್ಲಿ ಇಲ್ಲಿಯತನಕ ಆರು ವರ್ಷ ನಾಲ್ಕು ತಿಂಗಳುಗಳನ್ನ ಕಳೆದಿದ್ದೇನೆ. ನನ್ನ ಕುಟುಂಬದ ಜೊತೆ, ಗೆಳೆಯರ ಜೊತೆ ಈ ದೇಶ ಸುತ್ತಾಡಿದ್ದೇನೆ. ಇಲ್ಲಿನ ಬೃಹತ್ ಕಾರ್ಖಾನೆಗಳನ್ನು ಸ್ವತಃ ನೋಡಿದ್ದೇನೆ. ಇಲ್ಲಿನ ರಣ ಬಿಸಿಲಿನ ಜೊತೆಗೆ ತಂಪಾದ ಹವೆಯನ್ನೂ ಅನುಭವಿಸಿದ್ದೇನೆ. ಮರಳ ಮಳೆ, ನಿಜದ ಮಳೆ ಎರಡಕ್ಕೂ ಸಾಕ್ಷಿಯಾಗಿದ್ದೇನೆ. ಅರಬ್ಬರ ಜೊತೆ ಕೆಲಸ ಮಾಡಿ, ಓಡಾಡಿ ಚರ್ಚಿಸಿದ್ದೇನೆ. ಅವರ ಕನಸು, ವಿಚಾರ, ಜೀವನ ಕ್ರಮ, ಸ್ನೇಹವನ್ನು ಅನುಭವಿಸಿದ್ದೇನೆ.
ಸೌದಿ ಅರೇಬಿಯಾದ ವಾಸಿಯಾದ ದರ್ಶನ್‌ ಜಯಣ್ಣ ಅಲ್ಲಿನ ವಾಸದ ಹಾಗೂ ಆ ದೇಶದ ಕುರಿತು ತಮ್ಮ ಅನುಭವಗಳನ್ನು “ಸೌದಿ ಡೇಟ್ಸ್”‌ ಹೆಸರಿನಲ್ಲಿ ಶನಿವಾರಗಳಂದು, ಹದಿನೈದು ದಿನಗಳಿಗೊಮ್ಮೆ ಬರೆಯಲಿದ್ದಾರೆ

ನಮಸ್ಕಾರ
ಇದು ದರ್ಶನ್ ಜಯಣ್ಣ. ವೃತ್ತಿಯಿಂದ ಕೆಮಿಕಲ್ ಎಂಜಿನಿಯರ್. ತುಮಕೂರು, ಬೆಂಗಳೂರುಗಳಲ್ಲಿ ತಲಾ 15 ವರ್ಷಗಳ ವಾಸ, ಓದು, ಕೆಲಸದ ಮಧ್ಯದಲ್ಲಿ ಮೂರು ವರ್ಷಗಳು ಮಂಗಳೂರಿನ ನಿವಾಸಿಯಾಗಿ, ಹಲವು ತಿಂಗಳುಗಳು ಚೆನ್ನೈನಲ್ಲಿದ್ದು, ಈಗ್ಗೆ ಆರು ವರ್ಷಗಳಿಂದ ಸೌದಿ ಅರೇಬಿಯಾದ ಜುಬೈಲ್ ನಗರ ವಾಸಿ.

ನಾನು ಇಲ್ಲಿನ ಪೆಟ್ರೋ ಕೆಮಿಕಲ್ ಕಂಪನಿ ಒಂದರಲ್ಲಿ ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಇಲ್ಲಿಯವರೆಗೆ ಹತ್ತಾರು ದೇಶಗಳು ಸುತ್ತಿದ್ದರೂ ಅದರ ಬಗ್ಗೆ ಎಂದೂ ಬರೆದಿಲ್ಲ ಮತ್ತದಕ್ಕೆ ಕಾರಣ ಯಾತ್ರಿಗೆ ಯಾವತ್ತೂ ಒಂದು ಊರಿನ ದೇಶದ ಜನಗಳ, ಸಂಸ್ಕೃತಿಯ ಸರಿಯಾದ ‘ಸತ್ವ’ ತಿಳಿಯದೇ ಹೋಗಬಹುದೆಂಬ ನಂಬಿಕೆ ಮತ್ತು ತಪ್ಪಿ ಏನೇನನ್ನೋ ಬರೆದುಬಿಟ್ಟು ಅಪಚಾರ ಆದೀತೆಂಬ ಸಣ್ಣ ಕಾಳಜಿ.

ಆದರೆ ಸೌದಿಯ ಬಗ್ಗೆ ಹಾಗಾಗದು ಎಂಬ ನಂಬಿಕೆಯಿದೆ. ಅದಕ್ಕೆ ಕಾರಣ ನಾನಿಲ್ಲಿ ಇಲ್ಲಿಯತನಕ ಆರು ವರ್ಷ ನಾಲ್ಕು ತಿಂಗಳುಗಳನ್ನ ಕಳೆದಿದ್ದೇನೆ. ನನ್ನ ಕುಟುಂಬದ ಜೊತೆ, ಗೆಳೆಯರ ಜೊತೆ ಈ ದೇಶ ಸುತ್ತಾಡಿದ್ದೇನೆ. ಇಲ್ಲಿನ ಬೃಹತ್ ಕಾರ್ಖಾನೆಗಳನ್ನು ಸ್ವತಃ ನೋಡಿದ್ದೇನೆ. ಇಲ್ಲಿನ ರಣ ಬಿಸಿಲಿನ ಜೊತೆಗೆ ತಂಪಾದ ಹವೆಯನ್ನೂ ಅನುಭವಿಸಿದ್ದೇನೆ. ಮರಳ ಮಳೆ, ನಿಜದ ಮಳೆ ಎರಡಕ್ಕೂ ಸಾಕ್ಷಿಯಾಗಿದ್ದೇನೆ. ಅರಬ್ಬರ ಜೊತೆ ಕೆಲಸ ಮಾಡಿ, ಓಡಾಡಿ ಚರ್ಚಿಸಿದ್ದೇನೆ. ಅವರ ಕನಸು, ವಿಚಾರ, ಜೀವನ ಕ್ರಮ, ಸ್ನೇಹವನ್ನು ಅನುಭವಿಸಿದ್ದೇನೆ. ಹೊರಜಗತ್ತಿಗೆ ಸೌದಿ ಅರೇಬಿಯಾ ಅಥವಾ ಇತರೆ ಕೊಲ್ಲಿ ರಾಷ್ಟ್ರಗಳೆಂದರೆ ಮೊದಲಿಗೆ ಸ್ಮೃತಿಗೆ ಬರುವುದು ತೈಲ ನಿಕ್ಷೇಪ (black gold!), ಬಹುಷಃ ಅದರ ಜೊತೆಗೆ ಪವಿತ್ರ ಸ್ಥಳಗಳಾದ ಮಕ್ಕ- ಮದೀನಾ, ಪಾಪದ ಒಂಟೆ, ಅದನ್ನು ಕೊಂಡೊಯ್ಯುತ್ತಿರುವ ಅರಬೀ, ಖರ್ಜೂರದ ಮರ, ಅಭಯಾ (ಬುರ್ಕಾ, ಹಿಜಾಬ್) ತೊಟ್ಟ ಹೆಂಗಸರು, ಮರಳು ಗಾಡು ಇತ್ಯಾದಿ. ಇವೆಲ್ಲವೂ ಇಲ್ಲಿನ ಬಗ್ಗೆ stereotype ಅಂತ ಹೇಳಿ ಕೈತೊಳೆದುಕೊಳ್ಳ ಬಹುದಾದರೂ ಅದು ಅದನ್ನು ಒಳಗೊಂಡ ಮತ್ತದನ್ನೂ ಮೀರಿದ ಒಂದು ವಿಪ್ಲವ!

ಸೌದಿ ಅರೇಬಿಯಾ ಎಂಬ ಹೆಸರು ಅಲ್ ಸೌದ್ ಎಂಬ ಇಲ್ಲಿನ ಹಲವು ಪ್ರಾಂತ್ಯವನ್ನು 1700 ರ ರಿಂದಲೂ ಆಳುತ್ತಿದ್ದ- ಪ್ರಸ್ತುತ ಕೂಡಾ ಆಳುತ್ತಿರುವ ಕುಟುಂಬದಿಂದ ಬಂದದ್ದು. ಪ್ರಪಂಚದ ಒಂದೇ ದೇಶಕ್ಕೆ ಹೀಗೆ ಕುಟುಂಬ ಒಂದರ ಹೆಸರಿದೆ. ಈ ಮುಂಚೆ ಜೋರ್ಡಾನ್ಗೆ “ಹ್ಯಾಶ್ಮೈಟ್ ಕಿಂಗ್ಡಮ್ ಆಫ್ ಜೋರ್ಡಾನ್” ಎಂಬ ಹೆಸರಿದ್ದುದ್ದು ಬಿಟ್ಟರೆ ಈಗ ಎಲ್ಲೂ ಇದು ಕಾಣುವುದಿಲ್ಲ!

ಸೌದಿ ಇಡೀ ಅರೇಬಿಯಾದ ಮುಕ್ಕಾಲು ಭೂ ಪ್ರದೇಶವನ್ನು ಆವರಿಸಿಕೊಂಡರೂ, ಭಾರತದ 55 ಪ್ರತಿಶತದಷ್ಟು ದೊಡ್ಡದಿದ್ದರೂ ಇಲ್ಲಿರುವ ಜನಸಂಖ್ಯೆ (ಹೊರಗಿನವರನ್ನು ಸೇರಿಸಿ) ಮೂರೂವರೆ ಕೋಟಿ ಮಾತ್ರ ಮತ್ತದಕ್ಕೆ ಕಾರಣ ಇಲ್ಲಿನ ಮರುಭೂಮಿ ಮತ್ತು ಪ್ರತಿಕೂಲ ವಾತಾವರಣ. ಮಧ್ಯಪ್ರಾಚ್ಯದ “ಎಂಪ್ಟಿ ಕ್ವಾರ್ಟರ್ ಅಥವಾ ರುಬ್ ಅಲ್ ಖಾಲಿ” ಎಂಬ ಸಾವಿರಾರು ಮೈಲಿ ಉದ್ದಗಲದ ಮರುಭೂಮಿ ಮುಕ್ಕಾಲು ವಾಸಿ ಇರುವುದು ಇಲ್ಲಿಯೇ. ಇದು ಸೌದಿ, ಯುಎಇ, ಒಮಾನ್, ಯೆಮೆನ್ ದೇಶಗಳಲ್ಲಿ ಹಂಚಿಹೋಗಿದೆ! ಆದರೆ ಇಲ್ಲಿನ ಪಶ್ಚಿಮದ ಮತ್ತು ದಕ್ಷಿಣಗಳಲ್ಲಿ ಚಿಕ್ಕಮಗಳೂರಿನಂತಹ ಬೆಟ್ಟಗಳು, ಕಾಫಿ ಬೆಳೆ, ಹೂ ಹಣ್ಣು ಬೆಳೆವ ಭೂಮಿ ಇದೆಯೆಂದರೆ, ಇಲ್ಲೂ ಆಲಿ ಕಲ್ಲು ಮಳೆ ಬೀಳುತ್ತದೆ ಎಂದರೆ ಒಮ್ಮೊಮ್ಮೆ ನನಗೇ ಆಶ್ಚರ್ಯವಾಗುತ್ತದೆ. ಅದ್ರಲ್ಲೂ ಜೆದ್ದಾ ನಾಡಿನಲ್ಲಿ ಪವಿತ್ರ ಮಕ್ಕಾದ ಹತ್ತಿರ ನಿರಂತರ ಒಸರುವ ನೀರಿನ ಬುಗ್ಗೆಯಿದೆ ಮತ್ತದು ಅಕ್ಷಯವಾಗಿದೆ ಅದನ್ನು “ಜಮ್ ಜಮ್” ನೀರೆಂದು ಕರೆಯಲಾಗುತ್ತದೆ. ಇಲ್ಲಿಗೆ ಬಂದ ಯಾತ್ರಿಗಳೆಲ್ಲಾ ಅದನ್ನು ತಮ್ಮೊಡನೆ ಒಯ್ಯುತ್ತಾರೆ ಕೂಡಾ…..

ತೈಲ ನಿಕ್ಷೇಪದಿಂದ ಅಪಾರ ಯಶಸ್ಸನ್ನು ಕಂಡ ಮಧ್ಯ ಪ್ರಾಚ್ಯ ಇವತ್ತು ಆ ವರಮಾನದಿಂದ ಇತರೆ ಲಾಭದಾಯಕ ಮತ್ತು ನೌಕರಿಗಳನ್ನು ಸೃಷ್ಟಿಸಬಲ್ಲ, ನಿಕ್ಷೇಪಗಳು ಬರಿದಾದಮೇಲೆ ತಮ್ಮನ್ನು ಕೈಹಿಡಿಯಬಲ್ಲ ಪ್ರವಾಸಿ ಆರ್ಥಿಕತೆ, ಇತರೆ ಮನೋರಂಜನಾ ಸಾಧ್ಯತೆಗಳು, ಕ್ರೀಡಾ ಆರ್ಥಿಕತೆ, renewable ಶಕ್ತಿ, ಇನ್ನೂ ಮುಂತಾದ ಹೊಸ ರೂಹುಗಳಿಗೆ ದಾಂಗುಡಿಯಿಡುತ್ತಿವೆ.

ಇದನ್ನು ದುಬೈ- ಅಬುಧಾಬಿ ಮುಂತಾದ UAE ದೇಶದ ನಗರಗಳು ಆಗಲೇ ಮಾಡಿವೆಯಾದರೂ ಸೌದಿ ಅರೇಬಿಯಾ ಇದನ್ನು ಹತ್ತು ಪಟ್ಟು ಹೆಚ್ಚಿನ ಹೂಡಿಕೆ ಮಾಡಿ ಸಾಕಾರಗೊಳಿಸಲು ಪ್ರಯತ್ನ ಪಡುತ್ತಿದೆ.

ಹೆಚ್ಚುತ್ತಿರುವ ಸ್ಥಳೀಯ ಜನಸಂಖ್ಯೆ, ಅಭಿಲಾಷೆಗಳು, ತಾವೂ ಪಶ್ಚಿಮದವರಂತೆ ಬದುಕಬೇಕೆಂಬ ತುಮುಲ ಮತ್ತು ಬದುಕಲಾಗದ ಕಟ್ಟಲೆಗಳು ಅದನ್ನು ಮೀರುವ ಇರಾದೆ ಅದಕ್ಕೆ ಪೂರಕವಾದ ತಂತ್ರಜ್ಞಾನ ಮತ್ತು ಆಡಳಿತದಲ್ಲಿನ ಬದಲಾವಣೆಗಳು, ಇರಾನ್‌ನ ಎಂದಿನ ಪೈಪೋಟಿ, ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳೊಟ್ಟಿಗೆ ಜೊತೆಗೆ ನಡೆಯಬೇಕಾದ ಅನಿವಾರ್ಯತೆ, ಇತರೇ GCC ದೇಶಗಳ ಸಾಂಗತ್ಯ, ಇಲ್ಲಿಯವರೆವಿಗೆ ಕ್ರೋಡೀಕರಿಸಿದ ಅಪಾರ ಸಂಪತ್ತು ಮತ್ತದರ ಉಪಯುಕ್ತ ವಿಲೇವಾರಿ, ಸೌದಿಯನ್ನು ಈ ಶತಮಾನದ ಅತ್ಯಂತ ಆಸಕ್ತಿಕರ ದೇಶವನ್ನಾಗಿ ಪರಿವರ್ತಿಸುತ್ತಿದೆ.

ಇದನ್ನೆಲ್ಲ ಅತ್ಯಂತ ಹತ್ತಿರದಿಂದ ನೋಡುವ ಅವಕಾಶವಿರುವುದರಿಂದ ಮತ್ತು ಇದು ಮುಸ್ಲಿಂ ದೇಶ ಒಂದರ ಅದರಲ್ಲೂ ಧಾರ್ಮಿಕವಾಗಿ ಇಸ್ಲಾಂ ದೇಶಗಳ ನಾಯಕನಾದ ಸೌದಿಯ ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಸಾಂಪ್ರದಾಯಿಕ, ಸಾಮಾಜಿಕ ಪಲ್ಲಟದ ಮುಖ್ಯ ಘಟ್ಟ ಎಂದು ಅನ್ನಿಸಿ ಈ ಬರವಣಿಗೆಯನ್ನು ಆರಂಭಿಸ ಹೊರಟಿದ್ದೇನೆ. ಇದು ಅಕ್ಷರಗಳ ಜೊತೆಗೆ ಬಹುಷಃ ನಾನು ಹೊರಟಿರುವ ಅತ್ಯಂತ ಮಹತ್ವದ ಪ್ರವಾಸ ಎಂದು ನಂಬಿದ್ದೇನೆ. ನಿಮ್ಮ ಬಿಡುವಿನಲ್ಲಿ ಓದಿ ಈ ಮಹಾಪಲ್ಲಟಕ್ಕೆ ನೀವೂ ಸಾಕ್ಷಿಯಾಗಿ ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ.

About The Author

ದರ್ಶನ್ ಜಯಣ್ಣ

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್‌ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ