ಒಂದು ಲೆಕ್ಕಾಚಾರದ ಪ್ರಕಾರ ವರ್ಷದ ಪ್ರತೀ ದಿನವೂ ಯಾವುದಾದರೂ ಒಂದು ದೇಶದಲ್ಲಿ ವಿಶೇಷ ದಿನವಾಗಿ ಆಚರಣೆಗೆ ಸಿದ್ಧವಾಗಿರುತ್ತದೆ. ನವೆಂಬರ್ ಹದಿನಾಲ್ಕು ಭಾರತದಲ್ಲಿ ಮಕ್ಕಳ ದಿನಾಚರಣೆ. ಎಲ್ಲಾ ಮಕ್ಕಳಿಗೂ ವಿಧವಿಧವಾದ ಉಡುಗೆಗಳನ್ನು ತೊಡಿಸಿ ಪ್ರಪಂಚದಾದ್ಯಂತ ಎಲ್ಲಾ ಭಾರತೀಯರು ಮಕ್ಕಳ ದಿನಾಚರಣೆಯನ್ನು ಆಚರಿಸಿ ಅವರವರ ಮಕ್ಕಳ ಛಾಯಾಚಿತ್ರವನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದರು. ಪಾಶ್ಚಿಮಾತ್ಯ ದೇಶದಲ್ಲಿದ್ದ ಅನೇಕರಿಗೆ ಮಕ್ಕಳ ದಿನಾಚರಣೆ ಮರೆತುಹೋಗಿತ್ತು. ಭಾರತದಲ್ಲಿದ್ದ ಅವರ ಸಂಬಂಧಿಕರು ಅವರವರ ಮಕ್ಕಳ ಛಾಯಚಿತ್ರವನ್ನು ಹರಿಬಿಟ್ಟಿದ್ದರು. ಅದರೆ ಇದರೊಂದಿಗೆ ಆಯಾ ದಿನಾಚರಣೆಗಳ ಹಿಂದಿನ ಆಶಯಗಳನ್ನೂ ತಿಳಿಯುವಂತಾದರೆ ಉತ್ತಮ ಅಲ್ಲವೇ.
ಪ್ರಶಾಂತ್ ಬೀಚಿ ಅಂಕಣ
ಗಾಂಧಿ ಜಯಂತಿ, ಕನಕ ಜಯಂತಿ, ಬಸವ ಜಯಂತಿ, ಹೀಗೆ ಜಯಂತಿಗಳ ಸಾಲುಗಳು ಭಾರತದಲ್ಲಿ ಸಾಲು ಸಾಲಾಗಿ ಸಿಗುತ್ತವೆ. ಹಾಗಾಗಿ ನಮಗೆಲ್ಲ ಜಯಂತಿಯ ಹಿಂದಿನ ಹೆಸರಿನ ಮೇಲೆ ಯಾರು ಹುಟ್ಟಿದ ದಿನ ಎಂದು ನಿಖರವಾಗಿ ತಿಳಿದುಬಿಡುತ್ತದೆ. ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರ ಹುಟ್ಟಿದ ದಿನವೆ ಲಾಲ್ ಬಹದ್ಧೂರ್ ಶಾಸ್ತ್ರಿಯವರ ಜನ್ಮದಿನವಾಗಿದ್ದೂ, ಅವರಿಬ್ಬರ ಜಯಂತಿಯನ್ನು ಒಂದೇ ದಿನ ಆಚರಿಸಿದರೂ ಅಕ್ಟೋಬರ್ ಎರಡನೆ ದಿನವನ್ನು ಗಾಂಧಿ ಜಯಂತಿ ಎಂದೇ ಆಚರಿಸುವುದು ಪ್ರತೀತಿ. ಹಾಗೆ ಇತ್ತೀಚಿಗೆ ಸರ್ಕಾರಿ ಔಪಚಾರಿಕವಾಗಿ ಕನಕದಾಸರ ಜನ್ಮದಿನವನ್ನು ಕನಕ ಜಯಂತಿಯಾಗಿ ಆಚರಿಸುತ್ತೇವೆ. ಅವರನ್ನು ಹಾಡಿ ಹೊಗಳಿ ಆ ದಿನ ಎಲ್ಲರೂ ನೆನಪಿಸಿಕೊಳ್ಳುತ್ತೇವೆ. ಇನ್ನು ಬಸವ ಜಯಂತಿಯನ್ನು ಪ್ರಪಂಚ ಕಂಡ ಮಹಾನ್ ಕ್ರಾಂತಿಕಾರಿ ಬಸವಣ್ಣನ ಜನ್ಮದಿನವಾಗಿ ಆಚರಿಸಿದರೂ ಕೆಲವು ಬದಲಾವಣೆಯಂತೆ ಹಸುವನ್ನು ಪೂಜಿಸುವ ಪ್ರತೀತಿ ಬೆಳೆಸಿಕೊಂಡಿದ್ದಾರೆ. ಜಯಂತಿ ಎನ್ನುವುದು ನಮಗೆ ಹುಟ್ಟಿದ ದಿನಕ್ಕೆ ಪರ್ಯಾಯವಾಗಿದೆ.
ನಾವು ಚಿಕ್ಕವರಿದ್ದಾಗ ಮಕ್ಕಳ ದಿನಾಚರಣೆ ಬಂದರೆ, ನಮಗೆಲ್ಲಾ ಅದರ ಕಥೆಯನ್ನು ಹಾಗು ಮಕ್ಕಳ ದಿನಾಚರಣೆ ಯಾವ ಕಾರಣಕ್ಕೆ ಆಚರಣೆಗೆ ಬಂತು ಎಂದು ತಿಳಿಸುತ್ತಿದ್ದರು. ಹಾಗೆಯೆ ಶಿಕ್ಷಕರ ದಿನವೂ ಇತ್ತು, ಅದು ಏಕೆ ಶಿಕ್ಷಕರ ದಿನವಾಗಿ ಆಚರಣೆಗೆ ಬಂತು ಎಂದು ನಮಗೆಲ್ಲಾ ತಿಳಿದಿತ್ತು.
ಆಗಿನ ಕಾಲದಲ್ಲಿ ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ ಇತ್ತೇ ವಿನಃ ಮತ್ಯಾವುದೇ ದಿನಗಳು ಇರಲಿಲ್ಲ. ನಂತರ ಪ್ರತಿಯೊಬ್ಬರಿಗೂ ದಿನಗಳು ಹುಟ್ಟಿಕೊಂಡವು. ಕೆಲವನ್ನು ಪಾಶ್ಚಿಮಾತ್ಯರಿಂದ ಎರವಲು ಪಡೆದುಕೊಂಡೆವು ಮತ್ತೂ ಕೆಲವನ್ನು ನಮ್ಮ ತೆವಲುಗಳಿಗೆ ಕಟ್ಟಿಕೊಂಡೆವು. ಹಾಗೆ ಬಂದ ದಿನಗಳೆ ಪ್ರೇಮಿಗಳ ದಿನ, ತಂದೆಯ ದಿನ, ಅಮ್ಮನ ದಿನ, ಮಗನ ದಿನ, ಮಗಳ ದಿನ, ಚಿಕ್ಕಪ್ಪ/ದೊಡ್ಡಪ್ಪನ ದಿನ, ಚಿಕ್ಕಮ್ಮ / ದೊಡ್ಡಮ್ಮನ ದಿನ… ಹೀಗೆ ಸಂಭದದ ಮೇಲೆ ದಿನಗಳು ಹುಟ್ಟಿಕೊಂಡವು. ಭಾರತದವರು ಅಂತರಾಷ್ಟ್ರೀಯ ಯೋಗ ದಿನ ಮಾಡುವ ಮೊದಲೆ ಅಂತರಾಷ್ಟ್ರೀಯ ಮಹಿಳಾ ದಿನ, ಕೆಲಸಗಾರರ ದಿನ, ವಿದ್ಯಾದಿನಗಳು ಚಾಲ್ತಿಯಲ್ಲಿದ್ದವು. ಇನ್ನೂ ವಿಶ್ವಮಟ್ಟದ ದಿನಗಳಿಗೇನು ಕಡಿಮೆ ಇಲ್ಲ, ವಿಶ್ವ ಗ್ರಾಹಕರ ದಿನ, ಪರ್ಯಾವರಣ ದಿನ, ಜನಸಂಖ್ಯಾ ದಿನ, ಮನುಷತ್ವದ ದಿನ, ಪ್ರವಾಸಿಗರ ದಿನ, ಆಹಾರದಿನ… ಹೀಗೆ ಇನ್ನೂ ಅನೇಕ ದಿನಗಳು ಕಾಣ ಸಿಗುತ್ತವೆ. ರಾಷ್ಟ್ರಮಟ್ಟದ ಮತ್ತು ತಮ್ಮ ತಮ್ಮ ದೇಶದ ನೇರಕ್ಕೆ ನೂರಾರು ದಿನಗಳು ಹುಟ್ಟಿಕೊಂಡಿವೆ.
ಒಂದು ಲೆಕ್ಕಾಚಾರದ ಪ್ರಕಾರ ವರ್ಷದ ಪ್ರತೀ ದಿನವೂ ಯಾವುದಾದರೂ ಒಂದು ದೇಶದಲ್ಲಿ ವಿಶೇಷ ದಿನವಾಗಿ ಆಚರಣೆಗೆ ಸಿದ್ಧವಾಗಿರುತ್ತದೆ. ನವೆಂಬರ್ ಹದಿನಾಲ್ಕು ಭಾರತದಲ್ಲಿ ಮಕ್ಕಳ ದಿನಾಚರಣೆ. ಎಲ್ಲಾ ಮಕ್ಕಳಿಗೂ ವಿಧವಿಧವಾದ ಉಡುಗೆಗಳನ್ನು ಧರಿಸಿ ಪ್ರಪಂಚದಾದ್ಯಂತ ಎಲ್ಲಾ ಭಾರತೀಯರು ಮಕ್ಕಳ ದಿನಾಚರಣೆಯನ್ನು ಆಚರಿಸಿ ಅವರವರ ಮಕ್ಕಳ ಛಾಯಾಚಿತ್ರವನ್ನು ತಮಗೆ ತೋಚಿದ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದರು. ಪಾಶ್ಚಿಮಾತ್ಯ ದೇಶದಲ್ಲಿದ್ದ ಅನೇಕರಿಗೆ ಮಕ್ಕಳ ದಿನಾಚರಣೆ ಮರೆತುಹೋಗಿತ್ತು. ಭಾರತದಲ್ಲಿದ್ದ ಅವರ ಸಂಬಂಧಿಕರು ಅವರವರ ಮಕ್ಕಳ ಛಾಯಚಿತ್ರವನ್ನು ಹರಿಬಿಟ್ಟಿದ್ದರು, ಮಕ್ಕಳ ದಿನಾಚರಣೆ ಎಂದು ಅಡಿ ಬರಹ ಬೆಳಗ್ಗೆ ಎದ್ದ ತಕ್ಷಣ ನೋಡಿ ಇವರೂ ಆಚರಿಸಿದರು. ಮಕ್ಕಳಿಗೆ ಒಳ್ಳೆ ಬಟ್ಟೆ ಹಾಕಿ ಸಂಭ್ರಮಿಸಿ, ಅದರ ಫೋಟೋ ಎಲ್ಲಾ ಕಡೆ ಹರಿಯಬಿಟ್ಟು ಮಿಕ್ಕೆಲ್ಲಾ ವಿಶೇಷ ದಿನದಂತೆ ಮಕ್ಕಳ ದಿನವೂ ಮುಗಿದು ಹೋಯಿತು.
ವಿದೇಶದಲ್ಲಿರುವ ಇತ್ತೀಚಿನ ತಾಯಿಯರಿಗೆ ಮತ್ತು ಭಾರತದಲ್ಲಿರುವ ಅನೇಕ ಹೊಸ ತಲೆಮಾರಿನ ತಾಯಿಯರಿಗೆ ಮಕ್ಕಳ ದಿನಾಚರಣೆಯ ಹಿನ್ನೆಲೆ ತಿಳಿದಿದೆ ಎನ್ನುವಂತಿಲ್ಲ. ಅವರ ಪ್ರಕಾರ ಪ್ರೇಮಿಗಳ ದಿನವಿದ್ದ ಹಾಗೆ, ಅಪ್ಪ – ಅಮ್ಮಂದಿರ ದಿನವಿದ್ದ ಹಾಗೆ ಈ ಮಕ್ಕಳ ದಿನ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಬ್ಬರು ಹೇಳಿದ್ದು ಹೀಗೆ, “ಫೆಬ್ರವರಿ ಹದಿನಾಲ್ಕು ಪ್ರೇಮಿಗಳ ದಿನ, ಅಲ್ಲಿಗೆ ಒಂಬತ್ತು ತಿಂಗಳಿಗೆ ಸರಿಯಾಗಿ ಬರುವ ನವೆಂಬರ್ ಹದಿನಾಲ್ಕು ಮಕ್ಕಳ ದಿನವಾಗಿದೆ.” ಅವರಿಗೂ ಯಾರೊ ಒಬ್ಬರು ಈ ವಿಷಯವನ್ನು ಹೇಳಿದ್ದರಂತೆ. ಭಾರತದ ಮೊದಲ ಪ್ರಧಾನಮಂತ್ರಿಯ ಆತ್ಮ ಇದನ್ನು ಕೇಳಿ ಎಷ್ಟು ಸಂಭ್ರಮಿಸುತ್ತಿರಬೇಕು!
ಆದರೆ ದಿನವೊಂದರ ಆಚರಣೆಯ ಹಿಂದಿರುವ ಕತೆಗಳು, ಆಶಯಗಳು ಹೊಸ ತಲೆಮಾರಿಗೂ ಅರಿವಾಗಬೇಕು. ತಾನು ಹುಟ್ಟಿದ ದಿನವನ್ನು ಮಕ್ಕಳಿಗಾಗಿ, ಮಕ್ಕಳ ಮೇಲಿನ ಪ್ರೀತಿಗಾಗಿ ಸಮರ್ಪಿಸಿದ ಜವಹರಲಾಲ್ ನೆಹರು ಮಕ್ಕಳ ಪ್ರೀತಿಯ ಚಿಕ್ಕಪ್ಪ (ಚಾಚಾ) ಆಗಿದ್ದರು. ಅವರ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವುದರ ಜೊತೆಗೆ ಮಕ್ಕಳ ಸ್ಥಿತಿಗತಿಗಳ ಕುರಿತು ವಿಮರ್ಶಿಸಲು ಈ ದಿನವೊಂದು ಕಾರಣವಾಗಲಿ.
ಭಾರತದಲ್ಲಿ ಮಕ್ಕಳ ಸ್ಥಿತಿಗತಿಯನ್ನು ಪರಿಶೀಲಿಸಲು, ಅಥವಾ ರಾಜಕೀಯ ಕ್ಷೇತ್ರದ ರಚನಾತ್ಮಕ ಚರ್ಚೆಗಳನ್ನು ನಡೆಸಲು ಈ ದಿನಾಚರಣೆಯೊಂದು ಕಾರಣವಾಗಬಹುದು. ಅದಿಲ್ಲವಾದರೂ, ನೆಹರು ಅವರ ಹೊಸ ದೃಷ್ಟಿಕೋನಗಳನ್ನು ನೆನಪಿಸಿಕೊಳ್ಳಲು ಈ ಅವಕಾಶ ಸದುಪಯೋಗವಾಗಬಹುದು.
ಭಾರತದ ಎರಡನೆ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣ ಶಿಕ್ಷಕರಿಗಾಗಿ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗುವಂತೆ ಕೇಳಿಕೊಂಡರು. ಅವರುಗಳ ನೆನಪಿನಲ್ಲಿ ಆ ದಿನಗಳನ್ನು ಆಚರಿಸಿದರೆ ಅವರ ಆಸೆ ಪೂರೈಸಿದಂತೆ. ಪ್ರಜ್ಞಾನವಂತ ಶಿಕ್ಷಕರು, ಶಿಕ್ಷಕ ದಿನಾಚರಣೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣರನ್ನು ನೆನೆಯುತ್ತಾರೆ.
ಮಕ್ಕಳನ್ನು ಕೇವಲ ಛಾಯಾಚಿತ್ರಕ್ಕಾಗಿ ಸಿಂಗರಿಸಿ, ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಭರಾಟೆಯಲ್ಲಿ ಮಕ್ಕಳ ದಿನಾಚರಣೆಯ ನಿಜವಾದ ಕಾರಣಕರ್ತನನ್ನೆ ಮರೆತರೆ ಹೇಗೆ?
ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆ ಶುಭಾಷಯಗಳು. ಜವಹರಲಾಲ್ ನೆಹರೂರವರಿಗೆ ಈ ದಿನವನ್ನು ನೀಡಿದ್ದಕ್ಕೆ ಅಭಿನಂದನೆಗಳು.
ಪ್ರಶಾಂತ್ ಬೀಚಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ತಾಂಜಾನಿಯಾ (ಪೂರ್ವ ಆಫ್ರಿಕಾ), ಯೂಕೆ ಯಲ್ಲಿ ಕೆಲವು ವರುಷ ಇದ್ದು ಸದ್ಯಕ್ಕೆ ಕೆನಡಾದಲ್ಲಿ ನೆಲೆಸಿದ್ದಾರೆ. ‘ಲೇರಿಯೊಂಕ’ (ಅನುವಾದಿತ ಕಾದಂಬರಿ) ಮತ್ತು ‘ಕಿಲಿಮಂಜಾರೋ’ ಪ್ರಕಟಿತ ಪುಸ್ತಕಗಳು. ವಸುದೇವ ಭೂಪಾಲಂ ದತ್ತಿ, ದ ರಾ ಬೇಂದ್ರೆ ಮತ್ತು ಪರಮೇಶ್ವರ ಭಟ್ಟ್ ಪ್ರಶಸ್ತಿಗಳು ದೊರೆತಿವೆ.
ದಿನಕಳೆದಂತೆ ಜಯಂತಿ ಆಚರಣೆಗಳ ಮಹತ್ವ ,ವಿಶೇಷತೆ ಮತ್ತು ಆ ವ್ಯಕ್ತಿಯನ್ನೇ ಮರೆತುಆ ಉದ್ದೇಶವೇ ಬೇರೆಯಾಗುವಂತ ಈ ದಿನಗಳಲ್ಲಿ ನೈಜ್ಯತಯನ್ನು ಎತ್ತಿ ಹಿಡಿದಿದೆ ಈ ಲೇಖನ .