ರಂಜಾನ್ ಹಬ್ಬದ ದಿನ ಅಮ್ಮ ನನ್ನನ್ನು ಬೆಳಿಗ್ಗೆಯೇ ಎಬ್ಬಿಸಿ ಗುಡಿಸಲಿನ ನೆರಕೆಯ ಪುಟ್ಟ ಬಚ್ಚಲಲ್ಲಿ ಎಂಟಾಣೆ ಕ್ಲಿನಿಕ್ ಪ್ಲಸ್ ಶಾಂಪೂ ಎಂಬ ಲಕ್ಷುರಿ ಬೆರೆಸಿ ಸ್ನಾನ ಮಾಡಿಸಿ, ಸಕ್ಕರೆ ರೇಟು ಜಾಸ್ತಿ ಎಂದು ಬೆಲ್ಲ ಹಾಕಿದ ಶಾವಿಗೆ ಖೀರು ಮಾಡಿ ಒಂದು ಪುಟ್ಟ ಟಿಫನ್ ಕ್ಯಾರಿಯರಲ್ಲಿ ಇಡೀ ಓಣಿಗೆಲ್ಲಾ ತುಂಬಿಕೊಡುತ್ತಿದ್ದಳು. ಚಿಕನ್ ಕೊಳ್ಳಲು ದುಡ್ಡಿಲ್ಲದೆ ಇದ್ದರೂ ಆಲೂಗಡ್ಡೆ ಸಾರನ್ನೇ ಮಾಡಿ ಅದನ್ನೇ ಚಿಕನ್ ಎಂದು ಅಮ್ಮ ನೂರಿ ನಂಬಿಸಬಲ್ಲವಳಾಗಿದ್ದಳು. ನಮ್ಮ ಓಣಿಯ ಛಲವಾದಿಗಳಾಗಿದ್ದ ರೂಪ, ರೇಖಿ, ಪರುಸ, ಕೆಂಚತ್ತಿ, ಸುಶೀಲತ್ತಿ, ಹಾಲಪ್ಪ ಮಾಮ ಎಲ್ಲರೂ ಶಾವಿಗೆ ಖೀರಿಗಾಗಿ ಕಾಯುತ್ತಿದ್ದರು.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್‌” ಅಂಕಣ

ನಾವಿದ್ದ ಮನೆಯ ಓಣಿಗೆ ಚಲುವಾದಿಗಳ ಓಣಿ ಎಂದೇ ಹೆಸರು. ಓಣಿ ಎಂದರೆ ಸುಮಾರು ಹದಿನೈದು ಗುಡಿಸಲುಗಳು. ನಮ್ಮ ಓಣಿಯಿಂದ ಮುಂದಿನ ಸುಮಾರು ನೂರು ಮೀಟರ್ ದಾಟಿದರೆ ದಲಿತರ ಕೇರಿಯಿತ್ತು. ಆ ದಲಿತರ ಕೇರಿಯ ಆಚೆರಸ್ತೆಯಲ್ಲಿ ಪಾದಗಟ್ಟಿಯಿತ್ತು. ಪ್ರತಿವರ್ಷ ನಮ್ಮೂರು ಕೊಟ್ಟೂರಿನ ಶ್ರೀ ಗುರುಕೊಟ್ಟೂರೇಶ್ವರ ದೇವರು ತೇರನ್ನೇರಿ ಬಂದು ಆ ಪಾದಗಟ್ಟಿಯನ್ನು ಮುಟ್ಟಿ ತಿರುಗಿ ಸಾಗುತ್ತಿದ್ದ. ಪಾದಗಟ್ಟಿಯಿಂದ ಮುಂದೆ ಸುಮಾರು ಅರ್ಧ ಕಿಲೋಮೀಟರು ಮುಂದೆ ಹೋದರೆ ರಂಜಾನ್ ಈದ್ಗಾ. ಅದಕ್ಕೆ ಹತ್ತಿರದಲ್ಲಿಯೇ ಹಿಂದೂಗಳ ರುದ್ರಭೂಮಿ. ಪ್ರತಿವರ್ಷದ ಅಲೈದೇವರ ಹಬ್ಬದಲ್ಲಿ ದೇವರು ಕೂರುತ್ತಿದ್ದ ಜಾಗವೂ ಅದರದ್ದೇ ಆಸುಪಾಸಿನಲ್ಲಿದ್ದ ನೆನಪು. ನನಗಂತೂ ಈಗ ನೆನೆಸಿಕೊಂಡರೆ ಅರೆ ನಾವು ದೇವರು ಓಡಾಡುವ ದಾರಿಯಲ್ಲಿದ್ದೆವಲ್ಲ ಎನಿಸುತ್ತದೆ! ಆದರೆ ಜನರ ಕಣ್ಣಿನಲ್ಲಿ ಮಾತ್ರ ನಾವು ಮುಟ್ಟಿಸಿಕೊಳ್ಳದ ಜನರಾಗಿದ್ದೆವು. ಅದು ನನ್ನ ಅರಿವಿಗೆ ಬಂದಿದ್ದು ತೀರಾ ಇತ್ತೀಚಿಗೆ. ನಮ್ಮೆಲ್ಲಾ ಓಣಿಗಳ ಒಂದುಬದಿಗೆ ಚರಂಡಿಯಿತ್ತು. ಅದು ಗೆರೆಕೊರೆದ ಗಡಿಯಂತೆ ನಮ್ಮನ್ನು ಬೇರೆಯದೇ ಆವರಣದೊಳಗೆ ಇಟ್ಟಿದೆಯೇನೋ ಎನಿಸುತ್ತಿತ್ತು.

ಛಲವಾದಿ ಜನಾಂಗದ ಓಣಿಯಲ್ಲಿದ್ದ ಒಂದೇ ಒಂದು ಪಿಂಜಾರರ ಕುಟುಂಬವೆಂದರೆ ನಮ್ಮದೊಬ್ಬರದೇ. ನಾವಿದ್ದ ಗುಡಿಸಲಿಗೆ ನೆಲಬಾಡಿಗೆ ಕಟ್ಟುತ್ತಿದ್ದೆವು. ಅಮ್ಮ ನೂರಿ ‘ಯಾರೋ ದಯಾ ಇರೋ ಮನುಷ್ಯ ತನ್ನ ಜಾಗವನ್ನು ಬಡವರು ಬದುಕಿಕೊಳ್ಳಲಿ ಅಂತ ನೆಲಬಾಡಿಗೆಗೆ ಬಿಟ್ಟರೆ!’ ಎಂದು ತಂಪೊತ್ತಿನಲ್ಲಿ ನೆನೆಯುತ್ತಿದ್ದಳು. ಈಗ ಬರೆಯುವ ಹೊತ್ತಿಗೆ ದಾಖಲಿಸುವ ಕಾರಣಕ್ಕೆ ಬಗೆದು ನೋಡಿದಾಗ ಅವರು ಲಿಂಗಾಯತರಾಗಿದ್ದರು. ಇವತ್ತಿನ ಅದು ಅಥವಾ ಇದು ಎನ್ನುವ ಪರಿಭಾಷೆಯಲ್ಲಿ ಹೇಳುವುದಾದರೆ ಹಿಂದುಗಳಾಗಿದ್ದರು. ಪ್ರತಿವರ್ಷ ಕೊಟ್ಟೂರೇಶನ ತೇರಿನಲ್ಲಿ ತೇರುಬೀದಿಯನ್ನು ತೇವವಾಗಿಡಲು ಒಂದು ವಾರದಿಂದಲೇ ನೀರು ತುಂಬಿದ ಟ್ಯಾಂಕರುಗಳು ನೀರು ಚೆಲ್ಲೊಡೆಯುತ್ತಿದ್ದವು. ತೇರಿನ ದಿನವಂತೂ ನಮ್ಮ ಓಣಿಯ ಜನರೆಲ್ಲಾ ಧೀ ನಮಸ್ಕಾರದ ಹರಕೆ ಕಟ್ಟಿಕೊಂಡು ಗುಡಿಗೆ ಹೋಗಿಬರುತ್ತಿದ್ದರು. ನಾನು ಆರನೇ ತರಗತಿ ಓದುವ ಹೊತ್ತಿಗೆ ಗುಡಿಯ ಒಳಗೆ ಆ ಜಾತಿ ಈ ಜಾತಿ ಎನ್ನದೆ ಯಾರೂ ಹೋಗಿಬರಬಹುದು ಎನ್ನುವುದಾಗಿತ್ತು. ಅಮ್ಮ ಪ್ರತಿ ಅಮಾವಾಸ್ಯೆಗೆ ಗುಡಿಯಲ್ಲಿ ಪ್ರಸಾದವಿರುತ್ತದೆ ಎನ್ನುವ ನನ್ನ ಹಠಕ್ಕಾಗಿ ಬೆಳ್ಳಂಬೆಳಗ್ಗೆ ಗುಡಿಗೆ ಕರೆದುಕೊಂಡು ಹೋಗಿ ಕೈಮುಗಿಸಿ ಪ್ರಸಾದ ತಿನ್ನಿಸಿಕೊಂಡು ಬರುತ್ತಿದ್ದಳು.

ತೇರಿನ ದಿನ ಒಂದು ತಿಂಗಳಿಂದ ದುಡ್ಡು ಕೂಡಿಟ್ಟು ಹಬ್ಬಕ್ಕೆ ಬೇಳೆ ಬೆಲ್ಲ ತಂದು ಒರಳಿನಲ್ಲಿ ಹೂರಣ ರುಬ್ಬಿ ಹೋಳಿಗೆ ಮಾಡಿ ಕಟ್ಟಿನ ಸಾರು ಅನ್ನ ಸಂಡಿಗೆ ಹಪ್ಪಳ ಎಲ್ಲವನ್ನೂ ಮಾಡಿಕೊಡುತ್ತಿದ್ದಳು. ಆ ವರ್ಷದ ರಂಜಾನಿಗೆ ಹಾಕಿಕೊಂಡಿದ್ದ ಬಟ್ಟೆಯನ್ನು ತೊಟ್ಟುಕೊಂಡೇ ತೇರನ್ನು ಕಣ್ಣುತುಂಬಿಕೊಂಡು ಬಾಳೆಹಣ್ಣು ಎಸೆಯುತ್ತಿದ್ದೆವು. ಈ ಎಲ್ಲವನ್ನೂ ಹೇಳುವುದಕ್ಕೆ ಒಂದು ಮುಖ್ಯ ಕಾರಣವೆಂದರೆ ಹಬ್ಬಗಳು ನಮ್ಮ ಒಳಗನ್ನು ಬೆಳಗುವ ಸಂದರ್ಭಗಳೇ ಆಗಿರುತ್ತಿದ್ದವು. ಇಡೀ ಓಣಿಗರೆಲ್ಲ ಇಡೀ ಊರವರನ್ನೆಲ್ಲಾ ತಾನೇ ಖುದ್ದಾಗಿ ನೋಡಬರುವ ದೇವರನ್ನು ನೋಡಿ ಕೈಮುಗಿದು ಭಕ್ತಿಪರವಶತೆ ಮೆರೆಯುತ್ತಿದ್ದರು. ಆ ಇಡೀ ದೃಶ್ಯವೇ ನಯನಮನೋಹರವಾಗಿ ನನಗೆ ಕಾಣುತ್ತಿತ್ತು.

ಊರ ತೇರಿಗೂ ಒಂದು ಪ್ರತೀತಿ ಇದೆ. ಕೊಟ್ಟೂರೇಶನ ತೇರು ಸಾಗಬೇಕೆಂದರೆ ಮೂಲಾ ನಕ್ಷತ್ರ ಕೂಡಬೇಕು. ಒಂದು ಕರು ಈಯಬೇಕು. ದಲಿತರ ಕೇರಿಯ ಹೆಣ್ಣುಮಗಳಿಂದಲೇ ಗಿಣ್ಣದ ನೈವೇದ್ಯವಾಗಬೇಕು. ಇದಿಲ್ಲವಾದರೆ ತೇರು ಒಂದು ಹೆಜ್ಜೆಯೂ ಮುಂದೆ ಹೋಗಲಾರದು. ಇದಿಷ್ಟನ್ನು ಈಗ ಕೂತು ಯೋಚಿಸಿದಾಗ ಶ್ರೀ ಗುರುಕೊಟ್ಟೂರೇಶ್ವರರಂತಹ ಸಮಾಜ ಸುಧಾರಕ ಮಹಾ ಯೋಗಪುರುಷ ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸಲೆಂದೇ ಈ ಎಲ್ಲವನ್ನೂ ಮಾಡಿರಬೇಕೆಂದು ನನಗನಿಸುತ್ತದೆ.

ನಾನು ಆರನೇ ತರಗತಿ ಓದುವ ಹೊತ್ತಿಗೆ ಗುಡಿಯ ಒಳಗೆ ಆ ಜಾತಿ ಈ ಜಾತಿ ಎನ್ನದೆ ಯಾರೂ ಹೋಗಿಬರಬಹುದು ಎನ್ನುವುದಾಗಿತ್ತು. ಅಮ್ಮ ಪ್ರತಿ ಅಮಾವಾಸ್ಯೆಗೆ ಗುಡಿಯಲ್ಲಿ ಪ್ರಸಾದವಿರುತ್ತದೆ ಎನ್ನುವ ನನ್ನ ಹಠಕ್ಕಾಗಿ ಬೆಳ್ಳಂಬೆಳಗ್ಗೆ ಗುಡಿಗೆ ಕರೆದುಕೊಂಡು ಹೋಗಿ ಕೈಮುಗಿಸಿ ಪ್ರಸಾದ ತಿನ್ನಿಸಿಕೊಂಡು ಬರುತ್ತಿದ್ದಳು.

ಪಿಂಜಾರ ಸಮುದಾಯದಲ್ಲಿ ಎಲ್ಲಾ ಧರ್ಮಗಳನ್ನು ಒಳಗು ಮಾಡಿಕೊಳ್ಳುವುದು ರೂಢಿ. ಕಟ್ಟಾ ಮುಸ್ಲಿಂ ಸಮುದಾಯದ ಕರ್ಮಠರ ನಿರಾಕಾರ ಏಕದೇವ ಕಲ್ಪನೆಯ ನಂಬಿಕೆ ಅದೆಷ್ಟೇ ಅತೀವವಾಗಿದ್ದರೂ ಕೂಡ ತಮ್ಮ ತಮ್ಮ ಮನೆಗಳ ಮುಂದೆ ನಿಂತು, ಮಕ್ಕಳು ತಮ್ಮ ಮಾಳಿಗೆಗಳನ್ನು ಹತ್ತಿ ಒಂದು ಬಾಳೆಹಣ್ಣನ್ನು ಎಸೆಯದೆ ಬಿಡುತ್ತಿರಲಿಲ್ಲ. ಇದಿಷ್ಟು ದೇವರು ಸಾಗುವ ಹಾದಿಯದ್ದಾಯ್ತು. ಕೊಟ್ಟೂರ ಜಾತ್ರೆಯ ಟೆಂಟು ಪಾದಗಟ್ಟಿಯ ಪಕ್ಕದಲ್ಲಿನ ಬಯಲಿನಲ್ಲೇ ಬೀಡು ಬಿಡುತ್ತಿತ್ತು. ದೊಡ್ಡ ಝೇಂಟು ವೀಲು, ಪುಟಾಣಿ ರೈಲು, ನಕ್ಷತ್ರಗಳಿಗೊಂದೊಂದರಂತೆ ಬೀಸಿ ಬೀಸಿ ಎಸೆಯುವ ತಟ್ಟೆ ಇವೆಲ್ಲವನ್ನೂ ಆಸೆಗಣ್ಣಿನಿಂದ ನೋಡುವ ನಾವು. ಇಡೀ ತೇರುಬೀದಿ ಮುಂದಿನ ಒಂದು ವಾರ ಬಳೆ, ಆಟದ ಸಾಮಾನುಗಳ ಪರಿಷೆಯಾಗಿ ಮಾರ್ಪಾಟಾಗುತ್ತಿತ್ತು. ನಾನು ಜಾತ್ರೆಯನ್ನು ಹಾದುಕೊಂಡೆ ನನ್ನ ಶಾಲೆಗೆ ಹೋಗಬೇಕಾದ್ದರಿಂದ ಝಗಮಗಿಸುವ ಜಾತ್ರೆಯ ಬೆಳಕಿನ ಬೀದಿಯನ್ನೇ ನಾನು ತಟಾದುಕೊಂಡು ಹೋಗುತ್ತಿದ್ದೇನೆ ಎನಿಸುತ್ತಿತ್ತು. ಅಲ್ಲೆಲ್ಲಾ ನನಗೆ ಸಾಬರ ಓಣಿಯ ಮಮ್ತಾಜಕ್ಕ, ಹಸೀನಾ ಆಪಾ ಅವರ ಇಡೀ ಕುಟುಂಬದೊಂದಿಗೆ ಬಳೆ ಕೊಳ್ಳುತ್ತಲೋ, ಆಟದ ಸಾಮಾನು ಕೊಳ್ಳುತ್ತಲೋ, ಮಕ್ಕಳಿಗೆ ಐಸ್ ಕ್ರೀಮ್ ಕೊಡಿಸುತ್ತಲೋ ಕಾಣಸಿಗುತ್ತಿದ್ದರು.

ಈ ವಿದ್ಯಮಾನ ಎಲ್ಲ ಕಡೆ ಕಾಣಸಿಗುವ ಸರ್ವೇ ಸಾಧಾರಣ ವಿದ್ಯಮಾನವಾಗಿ ಕಾಣಬಹುದು. ಆದರೆ ಇದು ಧರ್ಮವನ್ನು ಅದರ ಆಚರಣೆಯನ್ನು ಅದರ ಪಾಡಿಗೆ ಅದನ್ನು ಆಚರಿಸುವವರ ಪಾಲಿಗೆ ಬಿಟ್ಟು ಹಬ್ಬ ತರುವ ಸಂಭ್ರಮವನ್ನು ಎಲ್ಲರೂ ತುಂಬು ಹೃದಯದಿಂದ ಒಳಗುಮಾಡಿಕೊಳ್ಳುವ ಅಪ್ಪಟ ಮನುಷ್ಯ ಸ್ವಭಾವವಾಗಿ ನನಗೆ ಕಾಣುತ್ತದೆ. ಇದೇ ನಾವೆಲ್ಲರೂ ಕಾಪಾಡಿಕೊಂಡು ಬಂದಿರುವ ಕೋಮು ಸೌಹಾರ್ದತೆ ಎನ್ನಬಹುದು.

ರಂಜಾನ್ ಹಬ್ಬದ ದಿನ ಅಮ್ಮ ನನ್ನನ್ನು ಬೆಳಿಗ್ಗೆಯೇ ಎಬ್ಬಿಸಿ ಗುಡಿಸಲಿನ ನೆರಕೆಯ ಪುಟ್ಟ ಬಚ್ಚಲಲ್ಲಿ ಎಂಟಾಣೆ ಕ್ಲಿನಿಕ್ ಪ್ಲಸ್ ಶಾಂಪೂ ಎಂಬ ಲಕ್ಷುರಿ ಬೆರೆಸಿ ಸ್ನಾನ ಮಾಡಿಸಿ, ಸಕ್ಕರೆ ರೇಟು ಜಾಸ್ತಿ ಎಂದು ಬೆಲ್ಲ ಹಾಕಿದ ಶಾವಿಗೆ ಖೀರು ಮಾಡಿ ಒಂದು ಪುಟ್ಟ ಟಿಫನ್ ಕ್ಯಾರಿಯರಲ್ಲಿ ಇಡೀ ಓಣಿಗೆಲ್ಲಾ ತುಂಬಿಕೊಡುತ್ತಿದ್ದಳು. ಚಿಕನ್ ಕೊಳ್ಳಲು ದುಡ್ಡಿಲ್ಲದೆ ಇದ್ದರೂ ಆಲೂಗಡ್ಡೆ ಸಾರನ್ನೇ ಮಾಡಿ ಅದನ್ನೇ ಚಿಕನ್ ಎಂದು ಅಮ್ಮ ನೂರಿ ನಂಬಿಸಬಲ್ಲವಳಾಗಿದ್ದಳು. ನಮ್ಮ ಓಣಿಯ ಛಲವಾದಿಗಳಾಗಿದ್ದ ರೂಪ, ರೇಖಿ, ಪರುಸ, ಕೆಂಚತ್ತಿ, ಸುಶೀಲತ್ತಿ, ಹಾಲಪ್ಪ ಮಾಮ ಎಲ್ಲರೂ ಶಾವಿಗೆ ಖೀರಿಗಾಗಿ ಕಾಯುತ್ತಿದ್ದರು. ಧರ್ಮದ ಆಚರಣೆಗಳು ಅದೆಷ್ಟೇ ಅಸ್ಪಷ್ಟ ಮುಚ್ಚಟೆಗಳನ್ನು ನಮ್ಮ ಎದೆಯ ಮೇಲೆ ಮುಚ್ಚುತ್ತಿದ್ದರೂ ಅನ್ನವೆಂಬುದು ಎಲ್ಲವನ್ನೂ ಮೀರಿ ನಿಂತು ಹೇಗೆ ಎಲ್ಲವನ್ನೂ ಒಂದು ಮಾಡುತ್ತದೆಂಬುದು ಎಲ್ಲಾ ಕಾಲದ ಸೋಜಿಗ ಮತ್ತು ಸತ್ಯವೆಂದು ನನಗೆ ಮತ್ತೆ ಮತ್ತೆ ಅನಿಸುತ್ತಲಿರುತ್ತದೆ.

ಮೊಹರಂ ಹಬ್ಬವನ್ನು ನಮ್ಮ ಹಳ್ಳಿಕಡೆ ಅಲಾಯಿ ಹಬ್ಬ ಎಂದೇ ಕರೆಯುತ್ತಾರೆ. ಐದು ಕಡೆ ದೇವರನ್ನು ಕೂರಿಸುತ್ತಾರೆ. ಐದರಲ್ಲಿ ಒಂದು ಕಡೆ ಇದೆ ಪಾದಗಟ್ಟಿಯ ಮುಂದಕ್ಕೆಲ್ಲೋ ಒಂದು ಜಾಗದಲ್ಲಿ ಕೂರಿಸುತ್ತಿದ್ದ ನೆನಪು. ಕೊಟ್ಟೂರು ಮಹಾಜನತೆ ಸಕ್ಕರೆ ಓದಿಸಿಕೊಂಡು ಬರಲು ತಂಡ ತಂಡವಾಗಿ ದೇವರು ಕೂರಿಸಿದ ಜಾಗಕ್ಕೆ ಬರುತ್ತಿದ್ದರು. ಹರಕೆ ಕಟ್ಟಿಕೊಂಡವರು ಕತ್ತಲರಾತ್ರಿಯಲ್ಲಿ ಕೆಂಡ ಹಾಯುತ್ತಿದ್ದರು. ತೇರುಬೀದಿಯಲ್ಲಿ ಮುಸಲರಿಗಿಂತ ಹಿಂದುಗಳೇ ಹೆಚ್ಚಿನಸಂಖ್ಯೆಯಲ್ಲಿ ಅಲೈ ದೇವರಿಗೆ ನಡೆದುಕೊಳ್ಳುತ್ತಿದ್ದರು. ಖೀರು ಹಂಚಿದಂತೆ ಅಮ್ಮ ಕೆಲವು ಹತ್ತಿರದ ಮನೆಗಳಿಗಾದರೂ ಚವಂಗಿ ಕೊಟ್ಟುಬರಲು ಕಳಿಸುತ್ತಿದ್ದಳು. ಚವಂಗಿ ಕೊಟ್ಟಿರದ ಮನೆಯವರು ಅಲೈ ಹಬ್ಬ ಮುಗಿದ ಎರಡು ಮೂರು ದಿನ ಆದ ನಂತರ ಚವಂಗಿ ಮೈಗೆ ಚಿತ್ತಾರ ಮೂಡಿಸುವ ಅಚ್ಚುಕಲ್ಲನ್ನು ಇಸಿದುಕೊಳ್ಳಲು ಅವರೇ ಮುಂದಾಗಿ ಬಂದು ‘ಏನ್ ನೂರಕ್ಕ, ಈ ವರ್ಷ ಚವಂಗಿ ಬರ್ಲೆ ಇಲ್ಲ?! ನಮ್ಮುಡುಗ್ರು ಕಾದಿದ್ದೆ ಬಂತು ನೋಡವ್ವ. ಕಡಿಮಿ ಆಕಿದ್ದ್ಯೇನ ಬುಡು. ಇರ್ಲಿಬಿಡು, ಚವಂಗಿ ಕಲ್ಲಾದ್ರು ಕೊಡಬೆ. ನಾನಾರ ಒಷ್ಟು ಚವಂಗಿ ಉದ್ದಿ ಕೊಡ್ತೀನಿ ಹುಡುಗ್ರಿಗೆ.’ ಎಂದು ಚುಚ್ಚುವಲ್ಲಿ ಚುಚ್ಚಿ ನಮ್ಮೆಲ್ಲರಿಗೊದಗಿದ ಬಡತನದ ಸೆರಗನ್ನೊಮ್ಮೆ ಕೊಡವಿ ಅದರೊಳಗೆ ಎಲ್ಲದನ್ನೂ ಸಪಾಟು ಮಾಡಿ ಚವಂಗಿ ಕಲ್ಲನ್ನು ಒಯ್ಯುತ್ತಿದ್ದಳು. ಅಮ್ಮ ನೂರಿ ಕಲ್ಲನ್ನು ನಗುತ್ತಲೇ ಕೊಟ್ಟು ಅವಳು ಹೋದ ನಂತರ ‘ಅದೇನ್ ಯಂಗ್ಯ ಮಾಡ್ತಳ್ ನೋಡು ಬೋಸುಡಿ.’ ಎಂದು ಅಜ್ಜಿ ಮುಂದೆ ಪಿರಾದಿ ಊದಿ ನಗಾಡುತ್ತಿದ್ದಳು.

ತೇರುಬೀದಿಯಲ್ಲಿ ಜನ ಸೌಹಾರ್ದವನ್ನೇ ಉಸಿರಾಡಿದರು. ಈ ತೇರುಬೀದಿ ಯಾವುದೇ ಊರಿನ ತೇರುಬೀದಿಯೂ ಆಗಿರಬಹುದು. ಅಲ್ಲೆಲ್ಲಾ ಜನರು ಸೌಹಾರ್ದವನ್ನೇ ಉಸಿರಾಡುತ್ತಿದ್ದಾರೆಂದು ನನಗನಿಸುತ್ತದೆ. ನಮಗ್ಯಾರಿಗೂ ಸೌಹಾರ್ದವನ್ನು ಹೇಳಿಕೊಡುವುದು ಬೇಕಿಲ್ಲ ಎಂದು ನಂಬಿಕೊಂಡವರು ನಾವು. ಇತ್ತೀಚಿನ ದಿನಗಳು ಆ ನಂಬಿಕೆಯನ್ನು ಅಲುಗಾಡಿಸುತ್ತಿವೆ ಎನ್ನುವುದು ನಿಜವಾದರೂ ಬದುಕು ಕೊಡುವಂತಹ ಸಂಭ್ರಮಗಳನ್ನು, ಅನ್ನದೇವರು, ಮನುಷ್ಯತ್ವ ದೇವರನ್ನೇ ಮೂಲದಲ್ಲಿ ನಂಬಿರುವ ಹುಲುಮಾನವರಾದ ನಾವು ಈ ಕ್ಷುಲ್ಲಕ ರಾಜಕೀಯ ಪ್ರೇರಿತ ಆಟಗಳನ್ನೆಲ್ಲಾ ಎಡಗಾಲಲ್ಲಿ ಒದ್ದು ಎಂದಿನಂತೆ ಒಂದಾಗಿ ಬದುಕಿಯೇ ಬದುಕುತ್ತೇವೆ ಎನ್ನುವುದು ಎದೆಯೊಳಗೆ ಅನುರಣಿಸುತ್ತಲೇ ಇರುವ ಸಮಾಧಾನದ ಮಾತು. ಹಾಗೆಯೇ ಆಗಲಿ ಎನ್ನುವುದು ಎಲ್ಲಾ ಹೊತ್ತಿನ ಪ್ರಾರ್ಥನೆ.