ಸಂಜನಾಳ ಬೆಳಗುಗಳು ನಂತರ ಮನೋಹರನ ಮೆಸೇಜುಗಳಿಲ್ಲದೇ ಆರಂಭವಾಗುತ್ತಿರಲಿಲ್ಲ. ಬೆಳ್ಬೆಳಿಗ್ಗೆ ಗುಲಾಬಿಗಳ ಗುಛ್ಛ ಬಂದರೆ ನಂತರ ಮೆಸೇಜುಗಳ ಸುರಿಮಳೆ. ಇಡೀ ಪುರಾಣ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಿದ್ದ. ಐಐಎಸ್ಸಿಯ ಮೈಕ್ರೋಬಯಾಲಜಿ ವಿಭಾಗದಲ್ಲಿದ್ದ. ಎಂಥ ಸೆಮಿನಾರೇ ಇರಲಿ, ಲೆಕ್ಚರ್ ಡೆಮಾನ್ಸ್ಟ್ರೇಷನ್ ಇರಲಿ. ಮೆಸೇಜು ತಪ್ಪುತ್ತಿರಲಿಲ್ಲ. ಸಂಜನಾಳೇ ಶೂಟಿಂಗ್ ಎಂದೊ ಎಡಿಟಿಂಗ್ ಎಂದೊ ಒಮ್ಮೊಮ್ಮೆ ಬೇಕೂಂತಲೇ ಉತ್ತರಿಸಲು ನಿಧಾನಿಸಿದರೂ ಬೇಸರವಿಲ್ಲದೆ ಇರುತ್ತಿದ್ದ. `ಏನಿಂದು ಬೆಳ್ಳಕ್ಕಿ ಬಿಝಿ ಇರೋ ಹಾಗಿದೆ’ ಎನ್ನುವ ಮೆಸೇಜು ಇರುತ್ತಿತ್ತು. `ಇಷ್ಟು ದಿನ ಆಯ್ತು ಸಂಜು, ಒಂದು ಊಟ ಮಾಡೋಣವೇ ಜೊತೆಯಲ್ಲಿ’ ಎಂದಿದ್ದ.
ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ ‘ಸಂವಾದಿ’

`ಇದೆಯೇ ನಿನಗೆ ಸಮಯ… ಅಲೆದಾಡಲಿಕೆ.. ಜೊತೆ ಹಾಡಲಿಕೆ… ಚಂದ್ರನ ನೋಡಲಿಕೆ……’ ಮಧುರವಾಗಿ ಸೋನು ನಿಗಮ್ ಹಾಡುತ್ತಿದ್ದರೆ ಸಂಜನಾ ಸಣ್ಣಕ್ಕೆ ಜೊತೆಗೇ ಗುನುಗುತ್ತಿದ್ದಳು. ಅಡುಗೆ ಮನೆಯ ಪುಟ್ಟ ಸೋನಿ ರೇಡಿಯೋ ಹಾಡುತ್ತಿದ್ದರಷ್ಟೇ ಅವಳ ಬೆಳಗಿನ ಪ್ರೋಗ್ರಾಂ ಅಡೆತಡೆಯಿಲ್ಲದೇ ನಡೆಯುತ್ತಿದೆ ಎನ್ನುವ ಸುಳ್ಳೇ ಸುಳ್ಳು ಭ್ರಮೆ ಸಂಜನಾಳಿಗೆ. ಹಾಡು ಕೇಳುತ್ತಾ ಹಾಡಿಗೆ ತಕ್ಕಂತೆ ಸ್ವಲ್ಪವೇ ಸ್ವಲ್ಪ ಹೆಜ್ಜೆ ಹಾಕುತ್ತಾ ಅಡುಗೆ ಮಾಡುತ್ತಿದ್ದರೆ ಹಿಂದಿನಿಂದ ಬಂದು ಸಂದೀಪ ಹಾಗೇ ತಬ್ಬಿಕೊಳ್ಳುವುದಿತ್ತು. `ಏನೇ ಸುಂದರಿ, ಬೆಳಗ್ಗೆನೆ ಮೂಡಿನಲ್ಲಿದೀಯಾʼ ಎಂದು. `ಸ್ವಾಮಿರಾಯರೇ, ತಬ್ಬಿಕೊಳ್ಳೋ ಬದ್ಲು ಸ್ವಲ್ಪ ಹೆಲ್ಪ್ ಮಾಡಿ ಪುಣ್ಯ ಕಟ್ಟಿಕೊಳ್ಳಿ, ಹಾಳಾದ್ದು ಪೇಪರಿನಲ್ಲಿ ಮುಳುಗಿ ಬಿಡ್ತೀರಾ. ನಿನ್ನೆ ಬರೆದಿರೋದನ್ನೇ ತಾನೇ ಇವತ್ತು ಓದೋದು?’ ಮಾತು ಮುಗಿಯೋ ಮೊದಲೇ ಸಂದೀಪ ಹೊರ ಹೋಗಿ ಬಿಟ್ಟಿರುತ್ತಾನೆ. ಸಡನ್ನಾಗಿ ಮನೋಹರ ನೆನಪಾದ. ಜೊತೆಯಲ್ಲಿ ಅವ್ನ ಹೆಂಡತಿಯೂ…. ನೆನಪೂ ಬಂದೊಡನೇ ಸಣ್ಣಕ್ಕೆ ಮತ್ಸರವಾಯಿತು. `ಜೊತೆಯಲ್ಲಿ ಅಡುಗೆ ಮಾಡ್ತೀವಿ’ಎನ್ನುವ ಅವ್ನ ಮಾತಿಗೆ… ಎಷ್ಟು ಬೇಡಿದ್ದ ನನ್ನಲ್ಲಿ…. `ಸಂಜೂ….’ ಎಂದು…… ಬೇಗ ಬೇಗನೆ ಅಡುಗೆ ಮುಗಿಸಿ ಆಫೀಸಿನತ್ತ ಓಡದಿದ್ದರೆ ಇಂದೂ ಮ್ಯಾನೇಜರ್ ಕೈಯಲ್ಲಿ ಬೈಗಳು ಎಂದುಕೊಳ್ಳುತ್ತಾ ಚಕಚಕನೇ ನಾಲ್ಕು ಚಪಾತಿ ಲಟ್ಟಿಸಿ ಕಾವಲಿಗೆ ಹಾಕಿ ಸುಡುವಾಗಲೆಲ್ಲ ಮನೋಹರಂದೇ ನೆನಪು. `ಚಪಾತಿ ಪ್ರಿಪರೇಶನ್ನು ಮಾತ್ರ ನಂದಮ್ಮಾ… ನಾನು ಮಾಡೋಥರ ಸವಿಗೂ ಬರಲ್ಲʼ ಅವನನ್ನೂ ಅವನ ಮಾತುಗಳನ್ನೂ ಕಾವಲಿ ಮೇಲೆ ಹಾಕಿ ಆವಿಯಾಗಿಸುತ್ತಾ ಇದ್ದಂತೆ ಆಫೀಸಿನ ನೆನಪು. ಅದೂ ಒಂಭತ್ತುವರೆ ಒಳಗಡೆ ಪಂಚ್ ಮಾಡದೇ ಇದ್ದರೆ ಒಳ ಹೋಗಿ ಮ್ಯಾನೇಜರ್ ಛೇಂಬರಿಗೆ ಹೋಗಿ ಅವನ ಮುಂದೆ ಡ್ಯೂಟಿ ಬುಕ್ಕಿನಲ್ಲಿ ಸೈನ್ ಬೇರೆ ಮಾಡಬೇಕು. ಕೊಳಕ, ಕಣ್ಣಲ್ಲೇ ಬೆತ್ತಲು ಮಾಡೋ ಹಾಗೆ ನೋಡೊ ಅವನೆಂದರೆ ಸಂಜನಾಳಿಗೆ ಮೈಯುರಿ ಬರುತ್ತಿತ್ತು. ಅವಳ ಬೆನ್ನ ಹಿಂದೆ ಆಫೀಸಿನವರಿಟ್ಟ ಹೆಸರು ಕೇಳಿ ಅಂತೂ ಒಮ್ಮೆ ಕೆಂಪಾಗಿದ್ದಳು. ಸಿಟ್ಟೂ ಬಂದಿತ್ತು, `ಕೊಳಕು ಗಂಡಸರಪ್ಪಾ, ಹೆಣ್ಣು ಮಕ್ಕಳನ್ನು ಯಾರಾದ್ರು ಬೆಣ್ಣೆ ಬಿಸ್ಕತ್ತು ಅಂತಾರಾ’ ಎಂದೂ. ತೀರಾ ಪಾಪದವನಂತೇ ಕಾಣುತ್ತಿದ್ದ ಲಕ್ಷ್ಮೀಕಾಂತ ಒಮ್ಮೆ ಎಲ್ಲರೂ ಜೊತೆಯಲ್ಲಿ ಊಟ ಮಾಡುತ್ತಿದ್ದಾಗ ಈ ಮಾತನ್ನು ಹೇಳಿದ್ದ. `ಸಂಜನಾ ಮೇಡಂ, ನಿಮ್ಮನ್ನು ಎಲ್ಲರೂ ಬೆಣ್ಣೆ ಬಿಸ್ಕತ್ತು ಎಂದೇ ಕರಿಯೋದು’ ಎಂದು. ಮುಜುಗರವಾಗಿತ್ತು. ಕೊಳಕ ಮ್ಯಾನೇಜರಂತೂ ಲಾಬಿಯಲ್ಲಿ ಹೋಗುವಾಗ ಹತ್ತಿರದಿಂದ ಹೆಣ್ಣು ಮಕ್ಕಳ ಗುಂಪೇನಾದ್ರೂ ಹೋಗುತ್ತಿದ್ದರೆ ಅವನ ಕೈ ಭುಜಗಳು ಇನ್ನೂ ಅಗಲವಾಗುತ್ತವೆ, `ಅಷ್ಟಾದ್ರೂ ಮುಟ್ಟಿದರೆ ಮುಟ್ಟಲಿ ಎಂದೇ ಇರಬೇಕು’ಎಂದು ಗೆಳತಿ ಜಾಹ್ನವಿ ಹೇಳಿದಾಗ ಎಲ್ಲರೂ ನಕ್ಕಿದ್ದರು.

ಕೊಂಕು ಮಾತು ಬೇರೆ, `ಏನು ಸಂಜನಾ ಮೇಡಂ ಅವರು ಭಾಳಾ ಬೇಗ ಬಂದಿದೀರಾ’ಎಂದು. ಬೇಗ ಬೇಗನೇ ಮಂಗಳೂರು ಸೌತೆಯ ಹುಳಿಗೆ ಒಗ್ಗರಣೆ ಹಾಕಿ ಆಫೀಸಿಗೆ ತಕೊಂಡು ಹೋಗು ಡಬ್ಬಿಗೂ ಹಾಕಿ ಆರಲೆಂದು ಡೈನಿಂಗ್ ಟೇಬಲಿನ ಮೇಲೆ ಇಟ್ಟು ಸರಸರನೇ ರೂಮಿಗೋಡಿದರೆ ಮೊಬೈಲಿನ ಮೆಸೇಜು ಟೋನ್ ಕಿವಿಗೆ ಮೀಟಿತು. ಹೋಗಲಿ ಮತ್ತೆ ನೋಡಿದರಾಯಿತು ಎಂದುಕೊಂಡರೂ ಮನೋಹರನದೇ ಎನ್ನುವ ಕುತೂಹಲಕ್ಕೆ ಓಡಿ ಬಂದು ಮೊಬೈಲು ಕೈಗೆತ್ತಿಕೊಂಡು ನೋಡಿದರೆ `ಗುಡ್ ಮಾರ್ನಿಂಗ್ ಬೆಳ್ಳಕ್ಕಿ..’ ದೊಡ್ಡ ಹಾರ್ಟ್ ಇಮೋಜಿಯೊಂದಿಗೆ ಮನೋಹರನ ಮೆಸೇಜು. ಕಂಪಿಸಿತು ಹೃದಯ. ಸಂದೀಪನ ಕಡೆಗೆ ನೋಡಿದರೆ ಪೇಪರಿನೊಳಗೆ ಹೂತು ಹೋಗಿದ್ದ. ಒಡನೆಯೇ ಡಿಲೀಟ್ ಮಾಡಿದಳು. ಸ್ನಾನಕ್ಕೆ ಓಡಿದಳು.

ಸ್ನಾನ ಮಾಡುತ್ತಿದ್ದಂತೇ ಮೆಸೇಜು ಯಾಕೆ ಡಿಲೀಟ್ ಮಾಡಿದೆ ಎನ್ನುವ ಪ್ರಶ್ನೆ ಅವಳೊಳಗೇ ಮೂಡಿತು. ನೆನಪು ಹಿಂದೆ ಹಾರಿತು…. ಸಂಜನಾಳಿಗಿನ್ನೂ ನೆನಪಿದೆ. ಕಾಲೇಜು ದಿನಗಳಲ್ಲಿ ಅವನೇ ಇಟ್ಟ ಹೆಸರು `ಬೆಳ್ಳಕ್ಕಿ’. ಬೇರೆಯವರ ಮುಂದೆ `ಅಷ್ಟೊಂದು ಬೆಳ್ಳಗೇ ಇರ್ಬಾದಪ್ಪ! ಏನದು ಸ್ವಲ್ಪ ಬಿಸಿಲಿಗೆ ಹೋದ್ರೆ ಕೆಂಪಾಗುತ್ತೆ ಮುಖ. ಗೋಧಿ ಬಣ್ಣ ಇರಬೇಕು ಸಾಕು’ ಎಂದಾಗ ಸಂಜನಾಳೂ ಬಿಡದೇ, `ಹು ಹೌದು. ನಾನೂ ಅಪ್ಲಿಕೇಶನ್ ಹಾಕಿ ಇಂತದೇ ಬಣ್ಣ ಬೇಕು ಅಂತ ಕೇಳಿ ಪಡೆದಿದ್ದಲ್ಲ. ಹೀಗೆ ಹುಟ್ಟಿದೀನಿ ಅಷ್ಟೇ. ನಂಗೂ ಯಾರ ಸರ್ಟಿಫಿಕೇಟ್ ಬೇಕಿಲ್ಲ’ ಎಂದು ಖಾರವಾಗಿಯೇ ಉತ್ತರಿಸಿದ್ದಳು. ಆಮೇಲೆ ಸಂಜೆ ಹೊತ್ತಿಗೆ ಇಷ್ಟುದ್ದದ ಪತ್ರ ಸಂಜನಾಳನ್ನು ಕಾಯುತ್ತಿತ್ತು. `ಎಯ್ ಬೆಳ್ಳಕ್ಕಿ, ಅಷ್ಟೊಂದು ಓವರ್ ರಿಯಾಕ್ಷನ್ ಬೇಡ್ವೇ! ನಿನ್ನ ನಗುವಿನ ಕೆಂಪಿನಲಿ ಮುಗಿ ಬೀಳಬೇಕು ಎಂದೇ ಆಸೆ. ನೋಡು ಯೋಚ್ನೆ ಮಾಡು….. ನೀನು ಮನಸ್ಸು ಮಾಡಿದ್ರೆ ಬದುಕು ಪೂರ್ತಿ ನಿಂಜೊತೆ ಆಕಾಶದಲ್ಲಿ ಹಾರ್ತಿನಿ….

-ಮನು’…..

ಬೇಗ ಬೇಗನೇ ಸ್ನಾನ ಮುಗಿಸಿ ತನ್ನಿಷ್ಟದ ಆಕಾಶ ನೀಲಿ ಬಣ್ಣದ ಚಿಕನ್ ಕಾರಿ ಸಲ್ವಾರ್ ಹಾಕ್ಕೊಂಡು ತಲೆ ಬಾಚಿ ಹೊರಟರೆ ಗಂಟೆ ಒಂಭತ್ತಾಗಿತ್ತು. ಟೇಬಲ್ ನೋಡಿದರೆ ಮಗಳು ಪೂರ್ವಿ ತನ್ನ ಮ್ಯಾತ್ ಬುಕ್ಕನ್ನು ಬಿಟ್ಟು ಹೋಗಿದಾಳೆ. ಟೆಸ್ಟ್ ಎಂದು ಓದುತ್ತಿದ್ದವಳು ಗಡಿಬಿಡಿಯಲ್ಲಿ ಪುಸ್ತಕವನ್ನು ಅಲ್ಲೇ ಬಿಟ್ಟು ಹೋಗಿದಾಳೆ. `ಸಂದೀಪ್, ಪೂರ್ವಿ ನೋಡಿ, ಮ್ಯಾತ್ ಬುಕ್ ಬಿಟ್ಟು ಹೋಗಿದಾಳೆ. ಪ್ಲೀಸ್ ಒಮ್ಮೆ ಸ್ಕೂಲಿಗೆ ಹೋಗಿ ಕೊಟ್ಟು ಬನ್ನಿ, ನೀವು ಹೇಗಿದ್ರೂ ಹನ್ನೊಂದಕ್ಕೆ ತಾನೇ ಆಫೀಸಿಗೆ ಹೋಗೋದು. ಪಾಪ ಇಲ್ಲಾಂದ್ರೆ ಬಂದು ಅಳುತ್ತೆ. ಕೊಟ್ಟು ಬನ್ನಿ’ ಅಂದರೆ ಹರಿಕತೆ ಶುರು ಮಾಡಿದ. `ಡಿಸಿಪ್ಲಿನ್ ಇಲ್ಲ ಅವಳಿಗೆ. ಈಗ್ಲೇ ಇಷ್ಟು ಕೇರ್ಲೆಸ್ ಆದ್ರೆ ದೊಡ್ಡ ಕ್ಲಾಸಿಗೆ ಹೋಗ್ತಾ ಹೇಗೋ. ನೀನಂತೂ ನಿನ್ನ ಗುಂಗಿನಲ್ಲೇ ಇರ್ತಿಯಾ. ಯಾವುದು ಮುಖ್ಯ ಅಂತ ನೋಡ್ಬೇಕು. ನೀನೇ ಹೋಗ್ತಾ ಕೊಟ್ಟು ಹೋಗು’ ಎಂದಾಗ ಸಂಜನಾಳಿಗೆ ಅಳುವುಕ್ಕಿತು.

ಸ್ವಲ್ಪನೂ ಮೈ ಅದುರಬಾರದು ಈ ಮನುಷ್ಯನಿಗೆ! ಎಷ್ಟು ಸಹಜವಾಗಿ ಇರ್ತಾನೆ, ಯಾವುದಾದರೂ ಜವಾಬ್ದಾರಿ ಹೇಳಿದ ತಕ್ಷಣ ಅದ್ಹೇಗೆ ಬದಲಾಗುತ್ತಾನೋ, ಒಂದು ಸ್ವಲ್ಪ ಆಚೀಚೆ ಆಗಬಾರದು, ಎಲ್ಲದಕ್ಕಿಂತಲೂ ತನ್ನ ಆರಾಮಕ್ಕೆ ಭಂಗವಾಗಬಾರದು, ಎಂದುಕೊಂಡು ಪೂರ್ವಿ ಬುಕ್ಕನ್ನು ಬ್ಯಾಗಿಗೇರಿಸಿಕೊಂಡು ತನ್ನ ಗಾಡಿಯ ಬೀಗ ತೆಗೆದುಕೊಂಡು ಓಡಿದಳು. `ಥತ್ ಪೆಟ್ರೋಲ್ ಕಮ್ಮಿಯಿದೆ’, ಸಿಟ್ಟು ನೆತ್ತಿಗೇರಿತು. `ಸಂದೀಪ್ ಅಲ್ಲಿಇಲ್ಲಿ ಓಡಾಡಕ್ಕೆ ನನ್ನ ಗಾಡಿ ತೆಗೀತಿಯಾ. ಹಾಗೇ ಪೆಟ್ರೋಲ್ ಹಾಕೋದನ್ನೂ ಮರೀಬಾರದು’ಎಂದೂ ಹೇಳಿ ಸಂದೀಪನ ಉತ್ತರಕ್ಕೂ ಕಾಯದೇ ಗಾಡಿ ಸ್ಟಾರ್ಟ್ ಮಾಡಿ ಸ್ಕೂಲಿನೆಡೆಗೆ ಓಡಿದಳು. ಸಿಟ್ಟು ಬಂದಾಗ ಅವಳಿಗರಿವಿಲ್ಲದೆಯೇ ಮನಸ್ಸು ಏಕವಚನಕ್ಕೆ ಇಳಿದುಬಿಡುತ್ತಿತ್ತು.

ರಿಸೆಪ್ಷನಲ್ಲಿ ಪೂರ್ವಿಯ ಕ್ಲಾಸ್, ಸೆಕ್ಷನ್ ಎಲ್ಲವನ್ನೂ ಹೇಳಿ ಬುಕ್ ಕೊಟ್ಟುಆಫೀಸ್ ತಲುಪುವಾಗ ಸರಿಯಾಗಿ ಒಂಭತ್ತುವರೆ. ಪಂಚ್ ಮಾಡಿ ಒಳಗೆ ಬಂದು ತನ್ನ ಸೀಟಿನಲ್ಲಿ ಕೂತಾಗ ಅಂದಿನ ಯುದ್ಧ ಗೆದ್ದಂತೇ ಅನಿಸೋದು ಸಂಜನಾಳಿಗೆ. ಪಕ್ಕದಲ್ಲಿ ಕೂತ ಸಾವಿತ್ರಿಯೂ ನೋಡಿ ಮುಗುಳ್ನಕ್ಕಳು. ತಾನು ಉಸಿರು ಬಿಡುತ್ತಿದ್ದ ರೀತಿ ನೋಡಿ, `ಎಷ್ಟೋ ಸಾರಿ ಆಫೀಸಿಗೆ ಬಂದು ರಿಲ್ಯಾಕ್ಸ್ ಆಗೋದಿದೆ ಅಲ್ವ’ ಎಂದಾಗ ಹೌದೆನ್ನುವಂತೆ ತಲೆಯಾಡಿಸಿದಳು ಸಂಜನಾ. ಮೊಬೈಲು ಕೈಗೆತ್ತಿಕೊಂಡು ಸೈಲೆಂಟ್ ಮೋಡಿಗೆ ಹಾಕೋ ಮುನ್ನ ವಾಟ್ಸಾಪನ್ನು ಚೆಕ್ ಮಾಡಿದರೆ, ಕಾಲೇಜು ಗ್ರೂಪಿನಲ್ಲಿ ಒಂದ್ರಾಶಿ ಮೆಸೇಜುಗಳು. ಸ್ಕ್ರೋಲ್ ಡೌನ್ ಮಾಡುತ್ತಿದ್ದಂತೇ ಮನೋಹರ ಮೆಸೇಜು ನೋಡಿ ಏನಿರಬಹುದೆಂದು ಇಣುಕಿದಳು. ರೂಮಿಯ ಸಾಲುಗಳು “ವಿಶ್ವವೇ ಸಲ್ಲದೊಂದು ಸಂಚು ಹೂಡಿ ನಿನ್ನ ಭೇಟಿಗೆ ನನಗನುವು ಮಾಡಿಕೊಟ್ಟಿತು; ಇದೋ ನಾನೀಗ ನಿನ್ನ ಪ್ರೀತಿಸಿದ್ದೇನೆ, ಗುಡ್ ಮಾರ್ನಿಂಗ್ ಫ್ರೆಂಡ್ಸ್” ನಸು ನಗು ಮೂಡಿತು ಸಂಜನಾಳ ಮುಖದಲ್ಲಿ! ಈ ಜೀವಕ್ಕೇ ಅದೆಷ್ಟು ಚೈತನ್ಯವಪ್ಪಾ!

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ಸ್ನಾನ ಮಾಡುತ್ತಿದ್ದಂತೇ ಮೆಸೇಜು ಯಾಕೆ ಡಿಲೀಟ್ ಮಾಡಿದೆ ಎನ್ನುವ ಪ್ರಶ್ನೆ ಅವಳೊಳಗೇ ಮೂಡಿತು. ನೆನಪು ಹಿಂದೆ ಹಾರಿತು…. ಸಂಜನಾಳಿಗಿನ್ನೂ ನೆನಪಿದೆ. ಕಾಲೇಜು ದಿನಗಳಲ್ಲಿ ಅವನೇ ಇಟ್ಟ ಹೆಸರು `ಬೆಳ್ಳಕ್ಕಿ’.

ಹನ್ನೆರಡು ವರ್ಷಗಳೇ ಸರಿದವು ಕಾಲೇಜು ಬಿಟ್ಟು. ಮತ್ತೆ ಇವರೆಲ್ಲರೂ ಸಿಕ್ತಾರೊಇಲ್ವೋ ಅನ್ನೋದರ ಬಗ್ಗೆಯೇ ಅನುಮಾನ ಇದ್ದ ಹೊತ್ತಿನಲ್ಲಿ ಹೈಸ್ಕೂಲಿನಿಂದ ಕಾಲೇಜು ತನಕವೂ ಜೊತೆಯಲ್ಲಿ ಓದಿದ್ದ ಸಂಜಯ್ ಅದ್ಹೇಗೆ ಎಲ್ಲರನ್ನೂ ಒಟ್ಟು ಮಾಡಿದ್ದ ಎಂದರೆ ನಂಬಲು ಅಸಾಧ್ಯವಾಗಿತ್ತು. ದೇಶ-ವಿದೇಶಗಳಲ್ಲಿ ಚದುರಿ ಹೋಗಿದ್ದವರು ಕಾಲೇಜು ಗ್ರೂಪಿನಲ್ಲಿ ಒಬ್ಬೊಬ್ಬರಾಗಿ ಆಡ್ ಆಗುತ್ತಿದ್ದಂತೇ ಅಚ್ಚರಿಯ ಮೇಲೆ ಅಚ್ಚರಿ. ಹತ್ತು ವರ್ಷಗಳಲ್ಲಾದ ಎಲ್ಲಾ ಬದಲಾವಣೆಗಳ ಜೊತೆಯಲ್ಲಿ ಸ್ನೇಹದ ಅಂಟು ಉಳಿಸಿಕೊಂಡ ರೀತಿಗೇ ಮನಸ್ಸು ಬೆರಗಾಗಿತ್ತು. ಸಂಜನಾ ಅಂದು ಬೇಗಬೇಗನೇ ಕಾರ್ಯಕ್ರಮವೊಂದರ ಶೂಟಿಂಗ್ ಮುಗಿಸಿ ಎಡಿಟಿಂಗನ್ನೂ ಮುಗಿಸಿ ಲೈಬ್ರೇರಿಗೆ ಟೇಪ್ ಕೊಟ್ಟು ಉಸ್ಸಪ್ಪ ಎಂದು ಸೀಟಿಗೊರಗಿದಾಗ ಮೆಸೇಜು ಸೌಂಡಾಯಿತು. ಯಾರಪ್ಪಾ ಎಂದು ನೋಡಿದರೆ `ಹಲೋ ಬೆಳ್ಳಕ್ಕಿ….. ಹಾಗೇ ಇದೀಯಲ್ವೇ’ ಮೆಸೇಜಿಗೆ ಅವಾಕ್ಕಾದಳು. ಮನೋಹರ! ಕೂಡಲೇ ನಂಬರ್ ನೋಡಿ ಕಾಲೇಜು ಗ್ರೂಪಿನಲ್ಲೂ ಚೆಕ್ ಮಾಡಿ ಸೇವ್ ಮಾಡಿದೊಡನೇ ಡೀಪಿ ಕಾಣಿಸಿಕೊಂಡಿತು. ಮನೋಹರ!!! ಖುಷಿ, ಮುಜುಗರ ಎಲ್ಲವೂ ಸಂಜನಾಳ ಮನದಲ್ಲಿ. `ಹಾಯ್’ ಎಂದು ಟೈಪಿಸಿ ಕಳಿಸುವ ಕ್ಷಣದಲ್ಲಿ ಉತ್ತರ ಬಂದಿತ್ತು. `ಈ ಮುಜುಗರ, ಸಂಕೋಚ, ಫಾರ್ರ್ಮಾಲಿಟೀಸ್ ಎಲ್ಲ ಬೇಡ ಬೆಳ್ಳಕ್ಕಿ. ಬದುಕು ಮತ್ತೆ ನಮ್ಮನ್ನು ಈ ಮೂಲಕ ಭೇಟಿಯಾಗಿಸಿದೆ. ನೀನು ನಿನ್ನ ಬದುಕಲ್ಲಿ ಹಾಗೇ ನಾನೂ ಬದುಕಲ್ಲಿ ಸೆಟಲ್ ಆಗಿದಿನಿ. ಸವಿ, ಸವಿತಾ ನನ್ನ ವೈಫ್. ಒಬ್ಬ ಮಗಳು ಇನ್ನೂ ಮೂರು ವರ್ಷ. ನಿನ್ನ ಇಡೀ ಕುಟುಂಬದ ಬಗ್ಗೆ ಸಂಜು ಹೇಳಿದಾನೆ. ಖುಷಿಯಾಯ್ತು. ನೀನು ಟಿವಿಯಲ್ಲಿ ಇದಿಯಂತೇ. ಯೂ ಡಿಸರ್ವ್ ಇಟ್ ಡಿಯರ್. ಬಿ ಹ್ಯಾಪಿ, ಕ್ಯಾಚ್ ಯೂ ಲೇಟರ್’ ಅಬ್ಬಾ ಮಳೆ ಸುರಿದಂತೇ ಮಾತಾಡುತ್ತಿದ್ದ ಮನು ಹಾಗೇ ಇದಾನೆ ಅನಿಸಿತು. ಪ್ರಸನ್ನವಾಯಿತು ಮನಸ್ಸು ಸಂಜನಾಳದು. ಎಷ್ಟೊಳ್ಳೆ ಜೀವವಿದು. ಇವನ ಮನದಲ್ಲಿ ಸ್ವಲ್ಪನೂ ಸಿಕ್ಕುಗಳಿಲ್ಲ. ಅದೇ ಪ್ರೀತಿ, ಅದೇ ಮಾರ್ದವತೆ! ನಾನು ನಿರಾಕರಿಸಿದ ಬಗ್ಗೆ ಒಂಚೂರೂ ಬೇಸರವಿಲ್ಲದಂತೇ ಮಾತಿನಲ್ಲಿ ಮೊದಲಿನದೇ ಪ್ರಾಮಾಣಿಕತೆ. ಓಹ್ ಸಂಜನಾಳ ಮನಸ್ಸು ಆದ್ರವಾಯಿತು. ಇವನನ್ನು ನಾನು ನಿರಾಕರಿಸಲು ಕಾರಣವೇ ಇರಲಿಲ್ಲ… ಹ್ಮ… ಯಾಕೆ ನಿರಾಕರಿಸಿದೆ!…. ಋಣವಿರಲಿಲ್ಲ ಅಷ್ಟೆ…. ಕಣ್ಣುತುಂಬಿ ಬಂತು. ಮನು, ತುಂಬಾ ತುಂಬಾ ಚೆನ್ನಾಗಿರು ಗೆಳೆಯಾ…… ಮನ ಹಾರೈಸಿತು.

ಸಂಜನಾಳ ಬೆಳಗುಗಳು ನಂತರ ಮನೋಹರನ ಮೆಸೇಜುಗಳಿಲ್ಲದೇ ಆರಂಭವಾಗುತ್ತಿರಲಿಲ್ಲ. ಬೆಳ್ಬೆಳಿಗ್ಗೆ ಗುಲಾಬಿಗಳ ಗುಛ್ಛ ಬಂದರೆ ನಂತರ ಮೆಸೇಜುಗಳ ಸುರಿಮಳೆ. ಇಡೀ ಪುರಾಣ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಿದ್ದ. ಐಐಎಸ್ಸಿಯ ಮೈಕ್ರೋಬಯಾಲಜಿ ವಿಭಾಗದಲ್ಲಿದ್ದ. ಎಂಥ ಸೆಮಿನಾರೇ ಇರಲಿ, ಲೆಕ್ಚರ್ ಡೆಮಾನ್ಸ್ಟ್ರೇಷನ್ ಇರಲಿ. ಮೆಸೇಜು ತಪ್ಪುತ್ತಿರಲಿಲ್ಲ. ಸಂಜನಾಳೇ ಶೂಟಿಂಗ್ ಎಂದೊ ಎಡಿಟಿಂಗ್ ಎಂದೊ ಒಮ್ಮೊಮ್ಮೆ ಬೇಕೂಂತಲೇ ಉತ್ತರಿಸಲು ನಿಧಾನಿಸಿದರೂ ಬೇಸರವಿಲ್ಲದೆ ಇರುತ್ತಿದ್ದ. `ಏನಿಂದು ಬೆಳ್ಳಕ್ಕಿ ಬಿಝಿ ಇರೋ ಹಾಗಿದೆ’ ಎನ್ನುವ ಮೆಸೇಜು ಇರುತ್ತಿತ್ತು. `ಇಷ್ಟು ದಿನ ಆಯ್ತು ಸಂಜು, ಒಂದು ಊಟ ಮಾಡೋಣವೇ ಜೊತೆಯಲ್ಲಿ’ ಎಂದಿದ್ದ. ಸಿಕ್ಕಿದಾಗ ಹಗುರವಾಗಿ ತಬ್ಬಿ `ಬೆಳ್ಳಕ್ಕಿ ಸ್ವಲ್ಪ ದುಂಡಗಾಗಿದೆ ಅಷ್ಟೆ, ಬಿಟ್ರೆ ಮುಗ್ಧತೆ ಹಾಗೇ ಇದೆ ಕಣ್ಣುಗಳಲ್ಲಿ’ ಎಂದಾಗ ನಾಚಿದ್ದಳು ಸಂಜನಾ. ಮಾತು, ಕಣ್ಣುಗಳ ಪ್ರಾಮಾಣಿಕತೆ ಹುಡುಕಿದರೂ ಎಳ್ಳಷ್ಟೂ ಸಿಟ್ಟು ಕಾಣುತ್ತಿಲ್ಲ. `ಯಾಕೋ ಯಾಕೋ ಹೀಗಿದ್ದಿ, ಮಾಮೂಲಿ ಮನುಷ್ಯರಥರ ಸ್ವಲ್ಪವಾದರು ಕೊಂಕು ತೋರ್ಸು ಪರ್ವಾಗಿಲ್ಲ’ ಎಂದರೆ `ಸಂಜು, ಯಾಕೆ ತೋರಬೇಕೇ, ನಾವು ಒಟ್ಟಿಗಿಲ್ಲ ಅಷ್ಟೇ. ನಿನ್ನ ಒಂದು ದಿನವೂ ನೆನಪಿಸದೇಇಲ್ಲ. ಹಾ ಹೌದು. ನಾವು ಮದ್ವೆಯಾಗಿಲ್ಲ, ನಿಜ. ಆದರೆ ನಿನ್ನ ಪ್ರೀತಿ ಮಾಡಿದ್ದು ಸುಳ್ಳಲ್ಲ ಕಣೇ, ಅದರ ನೆನಪಿಗಾದರೂ ನಾನು ನಿನ್ನ ದ್ವೇಷ ಮಾಡದೇ ಕೊಂಕು ಮಾತಾಡದೇ ಇರಬೇಕಲ್ವ. ನೋಡು, ಮತ್ತೆ ಸಿಕ್ಕಿದೀವಿ. ಖುಷಿಯಲ್ಲಿ ದಿನಗಳು ಹೋಗ್ತಿರಬೇಕು ಅಷ್ಟೇ. ಜಾಸ್ತಿ ಯೋಚನೆ ಮಾಡಬೇಡ. ಯೋಚನೆ ಮಾಡುವಷ್ಟು ಈ ವಿಷ್ಯ ನಾಟ್ ವರ್ದೀ’.

ಒಂಥರಾ ತೇಲಿ ಹೋದಂತೇ ದಿನಗಳೂ ಹೋಗುತ್ತಿದ್ದವು. ಮನುವಿನ ಮೆಸೇಜು, ಪೋಲಿ ಮಾತುಗಳು ಒಮ್ಮೊಮ್ಮೆ ಮುಜುಗರ ತರುತ್ತಿತ್ತು. `ಯೇಯ್ ಹೀಗೆಲ್ಲ ಬರೀಬೇಡ ಮನು, ಸರಿ ಹೋಗಲ್ಲ ಮನಸ್ಸಿಗೆ’ ಅಂದ್ರೆ ಥಟ್ಟಂಥ ಉತ್ರ ಬರ್ತಿತ್ತು. `ಅದ್ನ ಓದಿ ಅಲ್ಲೇ ಡಿಲೀಟ್ ಮಾಡು. ತಲೆ ತುಂಬಿಕೊಂಡು ಅದೇ ಲೋಕದಲ್ಲಿ ಇರ್ಬೇಡ` ಅಬ್ಬಾಅದೆಷ್ಟು ಸುಲಭ ಇವ್ನಿಗೆ. ಸಂಜನಾಳಿಗೆ ಇರಿಸುಮುರಿಸಾಗುತ್ತಿತ್ತು. ಅವ್ನು ಅದನ್ನು ಮರೆತು ಸಂಜೆಯಾಗುವಾಗ ರೂಮಿಯ ಇನ್ನೊಂದು ಮಾತು ಕಳಿಸಿ ಮುಕ್ತವಾಗುತ್ತಿದ್ದ. ಇವ್ನು ಫ್ಲರ್ಟ್ ಮಾಡ್ತಿದಾನಾ ತನ್ನೊಂದಿಗೆ ಅನಿಸುತ್ತಿತ್ತು ಸಂಜನಾಳಿಗೆ. ಕೇಳಿದ್ದಕ್ಕೆ, `ಹು ಕಣೇ, ಲೈಟಾಗಿ ಫ್ಲರ್ಟ್ ಮಾಡೋದು ಹೆಲ್ದಿ’ ಎಂದಿದ್ದ. ಸಂಜನಾಳಿಗೆ ಮನುವಿನ ಮೆಸೇಜುಗಳು ಅವನು ಅವ್ನ ಬಿಝಿ ಲೋಕದಿಂದ ಬಿಡುಗಡೆ ಪಡೆಯಲು ಹಾತೊರೆಯುವ ತಂಗಾಳಿಯಂತೆ ಇರಬೇಕು ಅನಿಸುತ್ತಿತ್ತು. ನಾನೊಂದು ಸ್ವಾರಸ್ಯವೇ ಮನುವಿಗೆ! ಇಷ್ಟೆಲ್ಲಗಳ ನಡುವೆ ಮನುವಿನ ಮೆಸೇಜು ಬರದೇ ಇದ್ದಾಗ ಕಾಡುವ ತಳಮಳ ದೇವರೇ ಬಲ್ಲ.

ರಾತ್ರಿ ತಬ್ಬುವ ಸಂದೀಪನ ಮುಖದಲ್ಲಿ ಮನುವಿನ ರೂಹನ್ನು ಹುಡುಕಲು ಮನಸ್ಸು ತೊಡಗಿದಾಗ ಸಂಜನಾ ಗಾಬರಿಯಾದಳು. ಅಲಂಕಾರ ಮಾಡಿಸಿಕೊಳ್ಳುವ ಕಲ್ಲಿನ ದೇವಿಯ ವಿಗ್ರಹದಂತೇ ಒಪ್ಪಿಸಿಕೊಳ್ಳುತ್ತಿದ್ದಳು. ನಾಳೆ ಮನುವಿನ ಬಳಿ ಮಾತಾಡಬೇಕೆಂದುಕೊಂಡಳು. ಬೇಗ ಬೇಗನೆ ಆಫೀಸಿಗೆ ಹೋಗಿ ಮುಖತಾ ಮಾತಾಡುವಾಗ ಎಲ್ಲಿ ತನ್ನ ದನಿ ಅಳುಕಬಹುದೋ ಎಂದು ಮೆಸೇಜು ಟೈಪಿಸತೊಡಗಿದಳು. `ಮನು, ನೀನು ಮತ್ತೆ ಸಿಕ್ಕಿದ್ದು ತುಂಬಾತುಂಬಾ ಸಂತಸಾನೇ. ಮತ್ತೆ ಶ್ರಾವಣ ಬಂದ ಹಾಗೆ ಚಿಗುರಿದ್ದೆ. ಹಾಗೇ ನೋಡಿದರೆ ನಾನು ಬಾಡೇ ಇರಲಿಲ್ಲ. ದಾಂಪತ್ಯದ ಅಮೃತ ಉಣ್ಣುತ್ತಲೇ ಇದ್ದೆ. ನೀನು ಬಂದೆ, ಅದರ ಸವಿ ಹೆಚ್ಚಾಯಿತು. ನಾನು ಮತ್ತಷ್ಟು ಚಿಗುರುತ್ತಿದ್ದೇನೆ. ಆದರೆ ಸಾಕೊ, ಯಾಕೋ ನಿನ್ನ ಮೆಸೇಜುಗಳ ಆದ್ರತೆ ಹೆಚಾಗುತ್ತಿದೆ ಮನು. ಸಂದೀಪನಿಗೆ ಮೋಸ ಮಾಡ್ತಾ ಇದಿನೇನೋ ಅನಿಸಲಾರಂಭಿಸಿದೆ. ನಿನ್ನ ವಾಟ್ಸಾಪಿನ ಇಮೋಜಿಗಳ ಭಾರ ತಡೆಯಲಾರೆ ಗೆಳೆಯಾ.. ಯಾಕೆ ನಾವು ಉಳಿದ ಸ್ನೇಹಿತರಂತೇ ಇರಬಾರದು…….’ ಕಳಿಸಿ ಕೂತಾಗ ಮನ ಭಾರ.

ಮಧ್ಯಾಹ್ನ ಊಟದ ಹೊತ್ತಿನಲ್ಲಿ ಮನುವಿನ ಮೆಸೇಜು, `ಬೆಳ್ಳಕ್ಕಿ, ಹು.. ನೀನು ಸಿಕ್ಕಿದಿ ಅನ್ನುವ ಖುಷಿಯಲ್ಲಿ ನಾನೂ ಸ್ವಲ್ಪ ಹೆಚ್ಚೇ ತೊಡಗಿಕೊಂಡೆ. ಆದರೆ ಅಲ್ಲಿ ಯಾವ ಕಲ್ಮಶವೂ ಇಲ್ಲವೇ. ಯಾಕೆ ಇಲ್ಲದ ಭಾರ ಹೊರುತಿರುವೆ. ಬದುಕಿನ ಅನಿವಾರ್ಯತೆಯೇ ಇದು. ನಮ್ಮೊಂದಿಗೆ ಇರುವವರನ್ನು ಸಹಿಸಬೇಕು. ಕಾಳಜಿಯಿಂದ ನೋಡಿಕೊಳ್ಳಬೇಕು. ಅವರಿಗೆ ಸಲ್ಲಬೇಕಾದುದನ್ನು ಸಲ್ಲಿಸಬೇಕು. ಹಾಗೆಂದು ಮನಸ್ಸನ್ನು ಕೊಂದುಕೊಳ್ಳಬೇಕಿಲ್ಲ. ಅವರವರ ಕಂಪಾರ್ಟ್ಮೆಂಟಿನಲ್ಲಿ ಅವರವರು ಭದ್ರವಾಗಿರುತ್ತಾರೆ ಅಲ್ವೇನೇ! ಅಷ್ಟಕ್ಕೂ ನಿನ್ನ ಯಾವತ್ತೂ ಯಾವುದಕ್ಕೂ ಒತ್ತಾಯ ಮಾಡಿಲ್ಲ ನಾನು. ನಾಲ್ಕು ಚೆಂದನೆಯ ಮಾತುಗಳು, ನಾಲ್ಕು ತಮಾಷೆಯ ಮಾತುಗಳು ಒಂದಷ್ಟು ಕಾಳಜಿ, ಅಷ್ಟೇ ಅಷ್ಟೇ. ಆದರೂ ನಿನ್ನ ಮಾತುಗಳಿಗೆ ಗೌರವ ನೀಡುತ್ತೇನೆ. ಖುಷಿ ಖುಷಿಯಾಗಿರು ನನ್ನ ಬೆಳ್ಳಕ್ಕಿ’ದುಃಖ ಉಮ್ಮಳಿಸಿತು ಸಂಜನಾಳಿಗೆ.

ಆಫೀಸಿನಿಂದ ಬಂದಂತೇ ತಲೆ ನೋವೆಂದು ಮಲಗಿದ್ದಾಗಲೂ ಅನಿಸುತ್ತಿತ್ತು, ಒಂದೊಳ್ಳೆಯ ಸ್ನೇಹವನ್ನು ಕಳಕೊಂಡೆನೆನೋ ಎಂದು. ಸಂದೀಪನೂ ಬೇಗ ಬಂದಿದ್ದ. ಕಾಫಿ ಮಾಡೋಣವೆಂದು ಎದ್ದವಳಿಗೆ ನೆನಪಾಯಿತು. ಗ್ಯಾಸ್ ನಿನ್ನೆಯೇ ಮುಗಿದಿದೆ, ಆನ್ಲೈನ್ ಬುಕ್ ಮಾಡಬೇಕು ಎಂದು. ಕಾಫಿ ಮೇಕರಿಗೆ ಕಾಫಿ ಪುಡಿ ಹಾಕಿ ನೀರನ್ನೂ ಹಾಕಿ ಸ್ವಿಚ್ ಆನ್ ಮಾಡಿ ಗ್ಯಾಸ್ ಬುಕ್ ಮಾಡಲು ಸಂದೀಪನ ಫೋನೆತ್ತಿಕೊಂಡಳು. ಆನ್ಲೈನ್ ಬುಕಿಂಗ್ ನಂಬರಿಗೆ ಕರೆ ಮಾಡಬೇಕು ಅನ್ನುವಷ್ಟರಲ್ಲಿ ವಾಟ್ಸಾಪಿನ ನೋಟಿಫಿಕೇಶನ್ ಫ್ಲಾಶ್ ಆಯಿತು. ಅರಿಯದೇ ಕಣ್ಣು ಓದಿದಾಗ ಕುಟುಕಿದಂತಾಯಿತು, ಸಂದೀಪನ ಕೊಲಿಗ್ ಕವಿತಾ, `ದೀಪು, ನಾಳೆ ಲಂಚ್ ಜೊತೆಯಲ್ಲಿ. ತುಂಬಾ ದಿನವಾಯ್ತು. ಕೈಗೆ ಸಿಕ್ತಿಲ್ಲ ನೀನು. ಹಗ್ಸ್…ʼ ಒಮ್ಮೆ ಉಸಿರು ನಿಂತಂತಾಯಿತು. ಜೊತೆಯಲ್ಲಿ ಸಣ್ಣ ಬಿಡುಗಡೆಯೂ…. ಸಂಜನಾಳಿಗೆ. ಹಾ… ನಿರಾಳ….. ಅನವಶ್ಯಕ ಗಂಟು ಹೊತ್ತುಕೊಂಡಿದ್ದೆ. ಸಣ್ಣ ಸಮಾಧಾನ….. ಸಣ್ಣ ಸಿಟ್ಟು… ಎಲ್ಲದರ ಕಲಸುಮೇಲೋಗರ. `ಸಂದೀಪ್.. ಗ್ಯಾಸ್ ಬುಕ್ ಮಾಡು….’ ಫೋನನ್ನು ಸೋಫಾದ ಮೇಲೆಸೆದು ಕಿರುಚಿದಳು. ಅಡುಗೆ ಮನೆ ಒಳ ಬಂದರೆ ಕಾಫಿ ಮೇಕರ್ ಬಿಸಿನೀರಿನ ಕುದಿಗೆ `ಗುರುಗುರು’ ಸದ್ದು ಮಾಡುತ್ತಿತ್ತು.