ಇನ್ನೊಂದು ಕುತೂಹಲಕರ ವಿಷಯ ಅಂದರೆ, ಆ ಕಾಲದ ಸಾಮಾಜಿಕ ಜೀವನದ ಮೇಲೆ ಬೆಳಕು ಚೆಲ್ಲುವ ಕೃತಿಗಳನ್ನು ರಚಿಸಿರುವ, ತಮ್ಮ ಪ್ರವಾಸದ ಕಥೆ ಹೇಳುತ್ತ ಅಂದಿನ ಜೀವನದ ಬಗ್ಗೆ ತಿಳಿಸುವ ಕಲಣ, ಬಿಲ್ಲಣ ಮುಂತಾದವರ ಕೃತಿಗಳಲ್ಲೂ ಕೂಡ ಯಾವ ಕಾರಣಕ್ಕೆ ದೇವಾಲಯಗಳಲ್ಲಿ ಮಿಥುನ ಶಿಲ್ಪಗಳನ್ನು ಕೆತ್ತುತ್ತಾರೆ ಎನ್ನುವುದರ ಬಗ್ಗೆ ಏನೂ ಮಾಹಿತಿ ಸಿಗುವುದಿಲ್ಲ. ಹಾಗಾಗಿ ಇದು ಅಂದಿನ ಸಾಮಾಜಿಕ ಜೀವನದಲ್ಲಿ ತುಂಬಾ ಸಹಜವಾದ ಭಾಗವಾಗಿರಬಹುದು. ಹಾಗಾಗಿ ಅವರಿಗೆ ಇದನ್ನೊಂದು ವಿಷಯವಾಗಿ ಪ್ರಸ್ತಾಪಿಸುವ ಜರೂರತ್ತು ಕಾಣಿಸದೇ ಇರಬಹುದು.
‘ದೇವಸನ್ನಿಧಿ’ ಅಂಕಣದಲ್ಲಿ ಪುರಾತನ ದೇವಸ್ಥಾನಗಳಲ್ಲಿ ಕಾಣಸಿಗುವ ಮಿಥುನ ಶಿಲ್ಪಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ
ನೀವು ಕುಟುಂಬ ಸಮೇತ ಯಾವುದೋ ದೇವಾಲಯಕ್ಕೆ ಹೋಗಿರುತ್ತೀರಿ. ಅಲ್ಲಿನ ಸುಂದರ ಶಿಲ್ಪಗಳನ್ನು ನೋಡುತ್ತಾ, ಅವುಗಳನ್ನು ಪ್ರಶಂಸಿಸುತ್ತಾ, ದೇವ ದೇವಿಯರ ಮೂರ್ತಿಗಳನ್ನು ಕಂಡು ಭಕ್ತಿಭಾವದೊಡನೆ ಹೆಜ್ಜೆ ಹಾಕುತ್ತಿರುತ್ತೀರ. ಅಷ್ಟರಲ್ಲಿ ಅಲ್ಲಿನ ಯಾವುದೋ ಶಿಲ್ಪ ನಿಮ್ಮ ಗಮನ ಸೆಳೆಯುತ್ತದೆ. ಹೌದೋ ಅಲ್ಲವೋ ಅನ್ನುವ ಅನುಮಾನದಲ್ಲೇ ನೋಡುತ್ತೀರಿ. ಮತ್ತೆ ಜೊತೆಯಲ್ಲಿರುವ ಕುಟುಂಬದವರ ಮುಂದೆ ಮನೆ ಮಂದಿ ಎಲ್ಲಾ ಒಟ್ಟಿಗೆ ಸಿನಿಮಾ ನೋಡುವಾಗ ಬರುವ ಪ್ರಣಯದ ದೃಶ್ಯಗಳನ್ನು ನೋಡಿ ಮುಜುಗರಕ್ಕೆ ಒಳಗಾಗುತ್ತೀರಲ್ಲಾ ಅಂತಹದೇ ಮುಜುಗರಕ್ಕೆ ಒಳಗಾಗುತ್ತೀರಿ. ಮತ್ತೆ ಇನ್ಯಾವುದೋ ದೇವರ ಶಿಲ್ಪವನ್ನು ಹುಡುಕುತ್ತಾ ಮುಂದೆ ಹೋಗುತ್ತೀರಿ.
ಹೀಗೆ ಎದುರಾಗುವ ಮಿಥುನ. ಮೈಥುನ, ಕಾಮೋಲ್ಲಸಿತ, ಕಾಮೋತ್ತೇಜಿತ ಕೆತ್ತನೆಗಳು, ಶಿಲ್ಪಗಳನ್ನು ಬಹುಪಾಲು ಯಾವ ದೇವಾಲಯಕ್ಕೆ ಹೋದರೂ ಕಾಣಬಹುದು. ಕೆಲವು ಕಣ್ಣಿಗೆ ರಾಚುವಂತಹ ಜಾಗದಲ್ಲಿ ಕೆತ್ತಿದ್ದರೆ, ಕೆಲವು ಕಂಡೂ ಕಾಣದಂತಹ ಜಾಗದಲ್ಲಿರುತ್ತವೆ. ಅವುಗಳಲ್ಲಿ ಮಿಥುನ ಅಂದರೆ ಗಂಡು ಹೆಣ್ಣಿನ ಆಪ್ತತೆ, ಪೀತಿ, ಸಲಿಗೆ ಕಾಣಿಸುವ ಶಿಲ್ಪಗಳಿವೆ. ಮತ್ತೊಂದು ವಿಭಾಗ ಮೈಥುನದ ಕೆತ್ತನೆಗಳು. ಇಂತಹ ಎರೋಟಿಕ್ ಶಿಲ್ಪಗಳ ಬಗ್ಗೆ ಅಧ್ಯಯನ ನಡೆಸಿರುವ ದೇವಾಂಗನ ದೇಸಾಯಿ ಇವುಗಳನ್ನು ಕಾಮಸೂತ್ರದ ಆಧಾರದ ಮೇಲೆ, ಗಂಡು ಹೆಣ್ಣಿನ ಸಂಭೋಗ, ಕುದುರೆ, ಆನೆ, ಕತ್ತೆಯಂತಹ ಪ್ರಾಣಿಗಳೊಡನೆ ರತಿಕ್ರೀಡೆ, ಹಲವು ಹೆಣ್ಣು ಒಂದು ಗಂಡು.. ಒಂದು ಗಂಡು ಹಲವು ಹೆಣ್ಣುಗಳು, ಸಮೂಹ ಸಂಭೋಗ ಹೀಗೆ ಆರು ವಿಭಾಗಗಳನ್ನಾಗಿ ಮಾಡುತ್ತಾರೆ.
ಮಿಥುನ ಶಿಲ್ಪಗಳು ಎಂದ ಕೂಡಲೇ ಸಾಮಾನ್ಯ ನೆನಪಿಗೆ ಬರುವುದು ಖಜುರಹೋ. ಖಜುರಹೋ ದೇವಾಲಯ ಸಂಕೀರ್ಣವನ್ನು ಚಂಡೇಲ ರಾಜರು ಕಟ್ಟಿಸಿದ್ದಾರೆ. ಖಜುರಹೋದ ಲಕ್ಷ್ಮಣ ದೇವಾಲಯದ ಹೊರ ಭಿತ್ತಿಯಲ್ಲಿ ಪ್ರೇಮ ಕಾಮದ ನಾನಾ ಹಂತಗಳ ಅತಿಸುಂದರವಾದ ಕೆತ್ತನೆಯಿದೆ. ಶಿಲ್ಪಗಳ ಮೈಮಾಟ, ಭಾವ ನಿಜಕ್ಕೂ ಬೇರೆ ಭಾವಲೋಕಕ್ಕೆ ಕರೆದೊಯ್ಯುತ್ತದೆ. ಕಲ್ಲಿನ ಮೂರ್ತಿಗಳಾದರೂ ಮೂರ್ತವೆತ್ತು ನಿಂತಂತೆ ಭಾಸವಾಗುತ್ತದೆ. ದೇವಾಲಯದ ಪ್ರಮುಖ ಭಾಗಗಳಾದ ಜಂಘ, ಅಧಿಷ್ಠಾನ, ಶಿಖರದ ಮೇಲೆ ನೋಡುಗರಿಗೆ ಎದ್ದು ಕಾಣುವ ಹಾಗೆ ಒಂದು ಅಡಿಯಿಂದ 2.5 ಅಡಿಯ ಎತ್ತರದ ಶಿಲ್ಪಗಳನ್ನು ಕೆತ್ತಿದ್ದಾರೆ. ಇವೆಲ್ಲವೂ ಪ್ರೇಮನಿರತ ಚಿತ್ರಗಳು. ಹಾಗೇ ಇಂತಹ ಶಿಲ್ಪಗಳನ್ನು 85 ದೇವಾಲಯಗಳಿರುವ ಸಂಕೀರ್ಣದ ಇಲ್ಲಿಯ ಬೇರೆ ದೇವಾಲಯಗಳಲ್ಲೂ ಕಾಣಬಹುದು. ಜೈನ ತೀರ್ಥಂಕರರ ದೇವಾಲಯದಲ್ಲೂ ಇಂತಹ ಕೆತ್ತನೆಗಳಿದ್ದರೂ ಅಲ್ಲಿ ಸಮೂಹ ಸಂಭೋಗದ ಶಿಲ್ಪಗಳಿದ್ದಂತೆ ಕಂಡುಬರುವುದಿಲ್ಲ. ಒಂದು ಗಂಡು ಹೆಣ್ಣಿನ ಕೆತ್ತನೆಗಳಿವೆ. ಆದರೆ ಇಂತಹ ಶಿಲ್ಪಗಳು ಇರುವುದು ಅಲ್ಲಿ ಮಾತ್ರವೇನಲ್ಲ. ಭಾರತದಾದ್ಯಂತ ಬೇರೆ ಅನೇಕ ದೇವಾಲಯಗಳಲ್ಲಿ ಇಂತಹ ಕೆತ್ತನೆಗಳನ್ನು ಕಾಣಬಹುದು. ಕಲಾತ್ಮಕತೆಯ ದೃಷ್ಟಿಯಿಂದ ಖಜುರಹೋ ಶಿಲ್ಪಗಳು ತುಂಬಾ ಶ್ರೇಷ್ಟವಾಗಿವೆ ಅನ್ನೋದೇನೋ ನಿಜ.
ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರಗಳಾದ ದೇವಾಲಯಗಳಲ್ಲೇಕೆ ಇಂತಹ ಶಿಲ್ಪಗಳು? ನಮಗೆ ಹೇಳಿಕೊಟ್ಟಿರುವಂತೆ ದೇವಾಲಯಗಳಿಗೆ ಹೋಗುವಾಗ ದೇಹ ಮನಸ್ಸುಗಳನ್ನು ಅಂಕೆಯಲ್ಲಿಟ್ಟುಕೊಂಡು ತಾನೆ ಹೋಗಬೇಕು? ಅಂತಹುದರಲ್ಲಿ ಮನಸ್ಸನ್ನು ಚಂಚಲಚಿತ್ತ ಮಾಡುವ ಈ ಶಿಲ್ಪಗಳ ಔಚಿತ್ಯವಾದರೂ ಏನು?
ದೇವಾಲಯಗಳಲ್ಲಿ ಮಿಥುನ ಶಿಲ್ಪಗಳು ಮೊದಲಿಗೆ 2ನೇ ಶತಮಾನದ ಸಾಂಚಿಯಲ್ಲಿ ಕಾಣಸಿಗುತ್ತದೆ. ಅದು ಬೌದ್ಧರ ದೇವಾಲಯವಾದರೂ ಆ ಕಾಲದ ಚಿತ್ರಣವನ್ನು ನೀಡುವಲ್ಲಿ ಶಿಲ್ಪಿಗಳು ಕೆತ್ತಿರಬಹುದು. ಅಂದಿನಿಂದ ಉದ್ದಕ್ಕೂ 16 ನೇ ಶತಮಾನದ ತನಕ ದೇವಾಲಯಗಳಲ್ಲಿ ಮಿಥುನ ಶಿಲ್ಪಗಳನ್ನು ನೋಡಬಹುದು.
ಇದರ ಬಗ್ಗೆ ಅನೇಕ ಥಿಯರಿಗಳು ಚಾಲ್ತಿಯಲ್ಲಿವೆ. ಆದರೆ ಯಾವೊಂದೂ ಪೂರ್ಣ ಒಪ್ಪಿಕೊಳ್ಳುವಂತಹ ವಾದಗಳಲ್ಲ. ಕೆಲವರ ಪ್ರಕಾರ ಧರ್ಮ, ಅರ್ಥ, ಕಾಮ, ಮೋಕ್ಷಗಳು ಚತುರ್ವಿಧ ಪುರುಷಾರ್ಥಗಳಾದ್ದರಿಂದ ಅದನ್ನು ಶಿಲ್ಪಗಳಲ್ಲಿ ತಂದಿದ್ದಾರೆ. ಯಾವುದೋ ಪುಸ್ತಕದಲ್ಲಿ ಓಶೋ ಹೇಳಿದ ನೆನಪು. ದೇವಾಲಯದ ಒಳ ಪ್ರವೇಶಿಸುವ ಮುನ್ನ ಕಾಮದ ಭಾವನೆಗಳನ್ನು ಕಳಚಿ ಇಂದ್ರಿಯದಿಂದ ಇಂದ್ರಿಯಾತೀತ ಜಗತ್ತಿಗೆ ಹೋಗುವುದರ ಸಂಕೇತ ಇಂತಹ ಎರೋಟಿಕ್ ಕೆತ್ತನೆಗಳು. ಹಾಗಾಗೇ ದೇವಾಲಯದ ಹೊರಭಾಗದಲ್ಲಿ ಇಂತಹ ಕೆತ್ತನೆ ಮಾಡುತ್ತಾರೆ ಎಂದು. ಖಜುರಹೋ ಹಾಗೂ ಗುಜರಾತಿನ ಮೊಢೇರ ಸೂರ್ಯ ದೇವಾಲಯವನ್ನು ನೋಡುವ ತನಕ ನಾನೂ ಓಶೋ ಹೇಳಿದ್ದನ್ನೇ ನಂಬಿದ್ದೆ. ದೇವಾಲಯದ ಹೊರ ಭಾಗದಲ್ಲಿ ಅನೇಕ ಮಿಥುನ ಚಿತ್ರಗಳಿವೆ. ಸಾಮಾನ್ಯರಿಂದ ಹಿಡಿದು ಋಷಿ ಮುನಿಗಳ ತನಕದ ಶೃಂಗಾರ ಸನ್ನಿವೇಶಗಳಿವೆ. ಅಷ್ಟೇ ಅಲ್ಲ. ಒಳ ಹೋದಂತೆ ಅಂತಹ ಕೆತ್ತನೆಗಳು ದಟ್ಟವಾಗಿ ಕಡೆಗೆ ಗರ್ಭಗುಡಿಯ ಮುಂದೆಯೇ ಕಂಬಗಳ ಮೇಲೆ ಮೋಹದ, ಪ್ರೇಮದ, ಕಾಮದ ಕಥೆಗಳನ್ನು ಶಿಲ್ಪಿ ಕಡೆದಿಟ್ಟು ಹೋಗಿದ್ದಾನೆ. ಖಜುರಹೋವಿನ ಲಕ್ಷಣ ಮತ್ತು ಕಂಡೇರಿಯ ಮಹಾದೇವ ದೇವಾಲಯಗಳಲ್ಲೂ ದೇವಾಲಯದ ಒಳಭಾಗದಲ್ಲಿ ಅನೇಕ ಕೆತ್ತನೆಗಳಿವೆ. ಅಂದಮೇಲೆ ತೀರಾ ದೇವರ ಮುಂದೆಯೇ ಅಂತಹ ಕಾಮಕೇಳಿಯ ಚಿತ್ರಗಳೇಕೆ?
ಕೆಲಕಡೆ ಶೃಂಗಾರದ ಶಿಲ್ಪಗಳನ್ನು ಒಳ್ಳೆಯ ಅದೃಷ್ಟ ಎಂದು ನಂಬುತ್ತಾರೆ. ಮತ್ತೆ ಕೆಲವೆಡೆ ಸೂರ್ಯದೇವಾಲಯಗಳನ್ನು ಫಲವತ್ತತೆಯ ಸಂಕೇತ ಎಂದು ಭಾವಿಸುತ್ತಾರೆ. ಹಾಗಾಗಿ ಸೂರ್ಯ ದೇವಾಲಯಗಳಲ್ಲಿ ಮಿಥುನ ಶಿಲ್ಪಗಳು ವಿಫುಲವಾಗಿ ಸಿಗುತ್ತವೆ. ಒರಿಸ್ಸಾದ ಕೊನಾರ್ಕಿನ ಸೂರ್ಯ ಮಂದಿರ, ಗುಜರಾತಿನ ಮೊಢೇರ ಇಲ್ಲೆಲ್ಲಾ ದೇವಾಲಯದ ನಾನಾಭಾಗಗಳಲ್ಲಿ ಇಂತಹ ಶಿಲ್ಪಗಳನ್ನು ಕೆತ್ತಿದ್ದಾರೆ.
ಜೈನ ತೀರ್ಥಂಕರರ ದೇವಾಲಯದಲ್ಲೂ ಇಂತಹ ಕೆತ್ತನೆಗಳಿದ್ದರೂ ಅಲ್ಲಿ ಸಮೂಹ ಸಂಭೋಗದ ಶಿಲ್ಪಗಳಿದ್ದಂತೆ ಕಂಡುಬರುವುದಿಲ್ಲ. ಒಂದು ಗಂಡು ಹೆಣ್ಣಿನ ಕೆತ್ತನೆಗಳಿವೆ. ಆದರೆ ಇಂತಹ ಶಿಲ್ಪಗಳು ಇರುವುದು ಅಲ್ಲಿ ಮಾತ್ರವೇನಲ್ಲ. ಭಾರತದಾದ್ಯಂತ ಬೇರೆ ಅನೇಕ ದೇವಾಲಯಗಳಲ್ಲಿ ಇಂತಹ ಕೆತ್ತನೆಗಳನ್ನು ಕಾಣಬಹುದು. ಕಲಾತ್ಮಕತೆಯ ದೃಷ್ಟಿಯಿಂದ ಖಜುರಹೋ ಶಿಲ್ಪಗಳು ತುಂಬಾ ಶ್ರೇಷ್ಟವಾಗಿವೆ ಅನ್ನೋದೇನೋ ನಿಜ.
ಒರಿಸ್ಸಾದ ಕೋನಾರ್ಕ್ ಸೂರ್ಯ ದೇವಾಲಯದಲ್ಲಿ ದೇವರ ಶಿಲ್ಪಗಳಿಗಿಂತ ಹೆಚ್ಚಾಗಿ ಮಿಥುನ, ಮೈಥುನ ಶಿಲ್ಪಗಳೇ ಹೆಚ್ಚಾಗಿ ಕಾಣುತ್ತವೆ. ಹಾಗೂ ಆ ಶಿಲ್ಪಗಳ ಮುಖಭಾವದ ಹರುಷ ಚಿತ್ತ ನೋಡುಗರನ್ನು ತಾಗದೆ ಬಿಡದು. ಶಿಲ್ಪಿಗಳು ಯಾವ ಭಿಡೆ ಇಲ್ಲದೆ ಅದನ್ನೊಂದು ಆನಂದದ ಸಂಕೇತವನ್ನಾಗಿ ಕೆತ್ತಿದ್ದಾರೆ ಅನ್ನಿಸುತ್ತದೆ. ಇಲ್ಲಿ ನಾಗಮಿಥುನಗಳನ್ನು ಹೇರಳವಾಗಿ ನೋಡಬಹುದು. ಅದೂ ಕೂಡ ಫಲವತ್ತತೆಯ ಸಂಕೇತ.
ಇನ್ನೊಂದು ವಾದದ ಪ್ರಕಾರ ಮಿಥುನ ಶಿಲ್ಪಗಳು ತಾಂತ್ರಿಕ ವಿಧಿಗಳನ್ನು ತೋರುತ್ತವೆ. ಹಾಗಾದರೆ ತಾಂತ್ರಿಕ ವಿಧಿಗಳು ಆ ಕಾಲದಲ್ಲಿ ಸಾಮಾಜಿಕ ಜೀವನದ ನಿತ್ಯ ಭಾಗವಾಗಿತ್ತೇ? ಹಾಗಿದ್ದರೆ ಖಜುರಹೋವಿನ ಹತ್ತಿರದ ಮಧ್ಯಪ್ರದೇಶದ ಅಮರಕಂಟಕದ ದೇವಾಲಯಗಳಲ್ಲಿ ಇಂತಹ ಕೆತ್ತನೆಗಳು ಏಕಿಲ್ಲ? ಅವೆಲ್ಲಾ ಮತ್ಸೇಂದರನಾಥನ ತಾಂತ್ರಿಕ ಪಂಥಗಳು ಹೆಚ್ಚು ಸಕ್ರಿಯವಾಗಿದ್ದ ಜಾಗಗಳು. 9 ರಿಂದ 12 ಶತಮಾನದ ದೇವಾಲಯಗಳಲ್ಲಿ ಹೆಚ್ಚು ಅಂತಹ ಕೆತ್ತನೆಗಳನ್ನು ಕಾಣಬಹುದು.
ಕರ್ನಾಟಕದಲ್ಲಿಯೂ ಅನೇಕ ದೇವಾಲಯಗಳಲ್ಲಿ ಕಾಮಲೀನ ಭಂಗಿಗಳಲ್ಲಿರುವ ಅನೇಕ ಕೆತ್ತನೆಗಳನ್ನು ಕಾಣಬಹುದು. ಬಾದಾಮಿಯ ಗುಹೆಗಳಲ್ಲಿ ಕಂಬದ ಮೇಲೆ, ತೊಲೆಯ ಮೇಲೆ, ವಿತಾನದಲ್ಲೂ ನೋಡಬಹುದು. ಬಾದಾಮಿಯಿಂದ ಸ್ವಲ್ಪ ದೂರದಲ್ಲಿರುವ ಮಹಾಕೂಟದಲ್ಲೂ ಇಂತಹ ಕೆತ್ತನೆಗಳಿವೆ. ತುಂಬಾ ಮುಖ್ಯವಾದ ಕಾಣುವಂತಹ ಜಾಗದಲ್ಲಲ್ಲದಿದ್ದರೂ ಪಟ್ಟದಕಲ್ಲಿನಲ್ಲಿ ಕಂಬದ ಮೇಲೆ ಕೆತ್ತನೆಗಳಿವೆ. ಅವುಗಳಲ್ಲಿ ಸಮೂಹ ಸಂಭೋಗದ ಚಿತ್ರಣವಿದೆ. ಇವು 8, 9 ನೇ ಶತಮಾನಕ್ಕೆ ಸೇರಿದ ದೇವಾಲಯಗಳು.
ಒಮ್ಮೆ ಶಿರಸಿಯ ಬಳಿಯಿರುವ ಹಿರಿಯ ಗೆಳತಿಯ ಊರಿಗೆ ಹೋಗಿದ್ದಾಗ ಅವರು ಬಳ್ಳಿಗಾವಿಯ ಬಳಿ ತ್ರಿಪುರಾಂತಕೇಶ್ವರನ ದೇವಾಲಯವೊಂದಕ್ಕೆ ಕೆರೆದುಕೊಂಡು ಹೋಗಿದ್ದರು. ಬಳ್ಳಿಗಾವಿಯ ದೇವಾಲಯದಿಂದ ಒಂದು ಫರ್ಲಾಂಗ್ ದೂರದಲ್ಲಿದೆ ಅದು. ಅಲ್ಲಿಯ ಚಾಲುಕ್ಯ-ಹೊಯ್ಸಳರ ಕಾಲದ ದೇವಾಲಯದಲ್ಲಿ ಅನೇಕ ಮಿಥುನ ಶಿಲ್ಪಗಳು. ನನ್ನ ಗೆಳತಿಯ ಪ್ರಕಾರ ಅವರು ಚಿಕ್ಕವರಿದ್ದಾಗ ಮನುಷ್ಯರ ಅಳತೆಯ ಮಿಥುನ ಶಿಲ್ಪಗಳನ್ನು ನೋಡಿದ್ದಾರಂತೆ. ಇವತ್ತಿಗೆ ಅವೆಲ್ಲಾ ಕಳುವಾಗಿ ಬರೀ ಉಬ್ಬು ಶಿಲ್ಪಗಳು ಮಾತ್ರ ಉಳಿದಿವೆ. ಅಲ್ಲಿಯೇ ಹತ್ತಿರದ ನಾಡಕಲಸಿಯಲ್ಲಿ ರಾಮೇಶ್ವರ ಮತ್ತು ಮಲ್ಲಿಕಾರ್ಜುನರ ಹೊಯ್ಸಳರ ಕಾಲದ ಎರಡು ದೇವಾಲಯಗಳಿವೆ. ಇಲ್ಲಿ ಕೂಡ ದೇವಾಲಯದ ಹೊರಭಿತ್ತಿಯಲ್ಲಿ ಕಣ್ಣಿಗೆ ಕಾಣುವ ಎತ್ತರದಲ್ಲೇ ಅನೇಕ ಕಾಮೋತ್ತೇಜಿತ ಉಬ್ಬು ಶಿಲ್ಪಗಳನ್ನು ಕಾಣಬಹುದು. ಚಾಲುಕ್ಯರ ಬಾಗಲಿ, ಹಾನಗಲ್ ದೇವಾಲಯಗಳಲ್ಲೂ ಬೇಕಾದಷ್ಟು ಅಂತಹ ಕೆತ್ತನೆಗಳಿವೆ. ಅವೆಲ್ಲಾ ಬಹುಪಾಲು ಕಕ್ಷಾಸನ (ಮೇಲಿನ)ಸಾಲಿನಲ್ಲಿ ಕಾಣುತ್ತವೆ. ಅಂದರೆ ಥಟ್ ಅಂತ ಕಣ್ಣಿಗೆ ಬೀಳುವ ಮುಖ್ಯ ಸಾಲುಗಳಲ್ಲಿ ಇಲ್ಲ.
ಇನ್ನು ನಮ್ಮ ಬೇಲೂರು ಹಳೇಬೀಡಿನ ದಟ್ಟ ಕೆತ್ತನೆಗಳ ನಡುವೆ ಕೆಲವು ಭಾಗಗಳಲ್ಲಿ ಮಿಥುನ ಕೆತ್ತನೆಗಳಿವೆ. ಇಲ್ಲಿನ ಶಿಲ್ಪಿ ತನ್ನ ಕಾಮಸೂತ್ರದ ಜ್ಞಾನವನ್ನು ತನ್ನ ಶಿಲ್ಪಗಳ ಮೂಲಕ ಹೇಳಿದ್ದರೂ ಮೊಢೇರ, ಖಜುರಹೋ ಹಾಗೆ ಅವುಗಳನ್ನು ಮುಖ್ಯ ಭಾಗಗಳಲ್ಲಿ ಕೆತ್ತಿಲ್ಲ. ಕೆಲವು ತುಸು ಎತ್ತರದ ಸಾಲಿನಲ್ಲಿ ಇವೆ. ಹಾಗಾಗಿ ನೋಡದಿರುವ ಸಾಧ್ಯತೆಗಳೂ ಇವೆ. ಬಹುಶಃ ಅದೇ ಶಿಲ್ಪಿಯ ಉದ್ದೇಶವೂ ಆಗಿತ್ತೇನೋ!
ಮುಂದೆ ವಿಜಯನಗರ ಕಾಲಕ್ಕೆ ಬರುವ ಹೊತ್ತಿಗೆ ಅಂತಹ ಕೆತ್ತನೆಗಳು ಕಡಿಮೆಯಾಗಿ ಅವುಗಳನ್ನು ಕೆತ್ತುವ ಜಾಗಗಳೂ ಒಳಸರಿಯುವುದನ್ನು ಕಾಣಬಹುದು. ಹಂಪಿಯಲ್ಲಿ ಇಂತಹ ಕೆತ್ತನೆಗಳು ಹೆಚ್ಚು ನೋಡದ ಕತ್ತಲ ಮೂಲೆಗಳಲ್ಲಿ, ಶಿಖರದ ತುದಿಯಲ್ಲಿ ಸೇರಿಕೊಂಡಿವೆ. ಹೀಗೆ ಕಾಲದಿಂದ ಕಾಲಕ್ಕೆ ಮಿಥುನ ಕೆತ್ತನೆಗಳ ಪ್ರಮಾಣ, ಕಲಾತ್ಮಕತೆ, ಅವು ಅಲಂಕರಿಸುವ ಜಾಗ ಎಲ್ಲವೂ ಬದಲಾಗುತ್ತಾ ಹೋಗಿರುವುದನ್ನು ಗಮನಿಸಬಹುದು. ಜೊತೆಗೆ ಬಿಂದಾಸ್ ಆಗಿ ಕೆತ್ತುತ್ತಿದ್ದ ಮಧ್ಯಕಾಲದಿಂದ ಈಚೆಗೆ ಅದರ ಬಗ್ಗೆ ಸಂಕೋಚವೂ ಬೆಳೆದಿರುವುದನ್ನು ಕಾಣಬಹುದು.
ಒಂದು ವಾದದ ಪ್ರಕಾರ ಬೌದ್ಧಧರ್ಮದ ಪ್ರಭಾವ ಹೆಚ್ಚಾಗಿದ್ದ ಕಾಲ. ಜನ ಸಂಸಾರದಲ್ಲಿ ಆಸಕ್ತಿ ಕಳೆದುಕೊಂಡು ಸಂತಾನಾಭಿವೃದ್ಧಿ ಕಡಿಮೆ ಮಾಡಿದ್ದರೆಂದು ಅವರನ್ನು ಮತ್ತೆ ಸಂಸಾರದ ಕಡೆ ಉತ್ತೇಜಿಸಲು ಇಂತಹ ಶಂಗಾರೋದ್ದೀಪ್ತ ಶಿಲ್ಪಗಳನ್ನು ಕಡೆಯುತ್ತಿದ್ದರು. ಇದೇ ರೀತಿ ಕೆಲವರು ಶೈವ ಪಂಥ ಹೆಚ್ಚಾಗಿದ್ದ ಕಾಲದಲ್ಲಿ ಜನ ಭಕ್ತಿ, ಪೂಜೆಯಲ್ಲಿ ಕಳೆದು ಕಾಮದ ವಿಷಯಕ್ಕೆ ಹೆಚ್ಚು ಮಹತ್ವ ಕೊಡುತ್ತಿರಲಿಲ್ಲ ಎಂದು ಇಂತಹ ಕೆತ್ತನೆಗಳನ್ನು ಮಾಡುತ್ತಿದ್ದರು ಎನ್ನುತ್ತಾರೆ.
ಹೀಗೆ ನಾನಾ ವಾದಗಳಿವೆ. ಇನ್ನೊಂದು ಕುತೂಹಲಕರ ವಿಷಯ ಅಂದರೆ, ಆ ಕಾಲದ ಸಾಮಾಜಿಕ ಜೀವನದ ಮೇಲೆ ಬೆಳಕು ಚೆಲ್ಲುವ ಕೃತಿಗಳನ್ನು ರಚಿಸಿರುವ, ತಮ್ಮ ಪ್ರವಾಸದ ಕಥೆ ಹೇಳುತ್ತ ಅಂದಿನ ಜೀವನದ ಬಗ್ಗೆ ತಿಳಿಸುವ ಕಲಣ, ಬಿಲ್ಲಣ ಮುಂತಾದವರ ಕೃತಿಗಳಲ್ಲೂ ಕೂಡ ಯಾವ ಕಾರಣಕ್ಕೆ ದೇವಾಲಯಗಳಲ್ಲಿ ಮಿಥುನ ಶಿಲ್ಪಗಳನ್ನು ಕೆತ್ತುತ್ತಾರೆ ಎನ್ನುವುದರ ಬಗ್ಗೆ ಏನೂ ಮಾಹಿತಿ ಸಿಗುವುದಿಲ್ಲ. ಹಾಗಾಗಿ ಇದು ಅಂದಿನ ಸಾಮಾಜಿಕ ಜೀವನದಲ್ಲಿ ತುಂಬಾ ಸಹಜವಾದ ಭಾಗವಾಗಿರಬಹುದು. ಹಾಗಾಗಿ ಅವರಿಗೆ ಇದನ್ನೊಂದು ವಿಷಯವಾಗಿ ಪ್ರಸ್ತಾಪಿಸುವ ಜರೂರತ್ತು ಕಾಣಿಸದೇ ಇರಬಹುದು. ದೇವಾಲಯ ಆ ಕಾಲದಲ್ಲಿ ಬರೀ ಧಾರ್ಮಿಕ ಸ್ಥಳವಾಗಿರಲಿಲ್ಲ. ಬದಲಿಗೆ ಸಾಮಾಜಿಕ, ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಲ್ಲಿಗೆ ಎಲ್ಲ ತರಹದ ಜನರೂ ಬರುತ್ತಿದ್ದರು. ಅಂತಹ ಕೇಂದ್ರ ಸ್ಥಳದಲ್ಲಿ ಇಂತಹ ಕೆತ್ತನೆಗಳನ್ನು ಮಾಡುತ್ತಿದ್ದರು ಮತ್ತು ಅದು ಎಲ್ಲಿಯೂ ಉಲ್ಲೇಖ ಆಗಿರಲಿಲ್ಲಾ ಎಂದರೆ ಅಂದು ಇದೆಲ್ಲಾ ಚಾಲ್ತಿಯಲ್ಲಿತ್ತೇ?
ಇದು ಯಾವುದೂ ಇಂದು ನಡೆಯದ ಘಟನೆಗಳೂ ಅಲ್ಲ. ಹಾಗಾಗಿ ಇಂತಹ ಕೆತ್ತನೆಗಳು ಮನುಷ್ಯನ ಸಾಧ್ಯತೆಗಳ ಚಿತ್ರಣವೂ ಆಗಿರಬಹುದು. ಹಿಂದೆಯೂ ಇತ್ತು, ಇಂದೂ ಇದೆ. ಮುಂದೆಯೂ ಇರುತ್ತದೆ. ನಮ್ಮ ಶಿಲ್ಪಗಳು ಅಂತಹ ಒಂದು ಸಾಧ್ಯತೆಗಳನ್ನು ಕಲೆಯ ಮೂಲಕ ಅಭಿವ್ಯಕ್ತಿಸಿವೆ. ಕಾಮಕ್ಕೆ ಕಣ್ಣಿಲ್ಲ. ಆದರೆ ಶಿಲ್ಪಿಗಳು ಅದನ್ನು ಕಣ್ಣಿಗೆ ಕಟ್ಟುವಂತೆ ಅದಕ್ಕೆ ರೂಪ ಕೊಟ್ಟಿದ್ದಾರೆ. ಅನಂಗ ಕಾಮನಿಗೆ ರೂಪವನ್ನು ಕೊಟ್ಟಿದ್ದಾರೆ ನಮ್ಮ ಅಗಾಧ ಪ್ರತಿಭಾವಂತರಾದ ಶಿಲ್ಪಿಗಳು.
ಗಿರಿಜಾ ರೈಕ್ವ ವೃತ್ತಿಯಲ್ಲಿ ಕಾರ್ಪೋರೇಟ್ ರಿಯಲ್ ಎಸ್ಟೇಟ್ ಮತ್ತು ಫೆಸಿಲಿಟಿಸ್ ಉದ್ಯೋಗಿ. ಅಲೆದಾಟ, ತಿರುಗಾಟ, ಹುಡುಕಾಟ ಆಸಕ್ತಿ ಮತ್ತು ರಂಗಭೂಮಿಯಲ್ಲಿ ಒಲವು ಹೊಂದಿದ್ದಾರೆ.