Advertisement
ಧರ್ಮ ಮತ್ತು ಮೃತ್ಯು: ಸುಮಾವೀಣಾ ಸರಣಿ

ಧರ್ಮ ಮತ್ತು ಮೃತ್ಯು: ಸುಮಾವೀಣಾ ಸರಣಿ

‘ವಾಲ್ಪರೈ ಅಭಿವೃದ್ಧಿ ತಂದ ದುರಂತ’ ಈ ಬರಹವನ್ನು ಓದಿದಾಗ ದಿಗ್ಭ್ರಾಂತವಾಯಿತು. ಸಿಂಹಬಾಲದ ಕೋತಿಗಳನ್ನು ಮೊದಲುಗೊಂಡಂತೆ ಅನೇಕ ಪಕ್ಷಿ ಪ್ರಭೇದಗಳು ಅಳಿವಿನಂಚಿಗೆ ಸರಿದದ್ದು. ತಮ್ಮದಲ್ಲದ ಜೀವನ ಶೈಲಿಗೆ ಹೊಂದಿಕೊಳ್ಳಹೋಗಿ ಸಿಂಹ ಬಾಲದ ಕೋತಿಗಳು ಶಾಶ್ವತ ಅಂಗವಿಕಲತೆಯನ್ನು ಪಡೆದಿದ್ದವು ಎಂದು ಅವುಗಳ ನರಳಾಟ ನೋಡದೆ ದಯಾಮರಣ ನೀಡುವ ಬಗ್ಗೆ ಮಾತನಾಡಿದರೂ ಸರಕಾರ ಅಳಿವಿನಂಚಿನಲ್ಲಿರುವ ಪ್ರಭೇದ ಎನ್ನುವ ಕಾರಣಕ್ಕೆ. ದಯಾಮೃತ್ಯು ಕೋಟಿ ಗಳಿಸಿದರು ಅಳಿದ ಸಿಂಹಬಾಲದ ಕೋತಿ ಸಂತತಿಯನ್ನು ಗಳಿಸಲಾಗುವುದಿಲ್ಲ ಅಲ್ವೆ! ಈ ದಯಾಮರಣಕ್ಕೂ ಕರ್ನಾಟಕಕ್ಕೂ ಬಿಡದ ನಂಟು ಅನ್ನಿಸುತ್ತದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ಮೂರನೆಯ ಬರಹ ನಿಮ್ಮ ಓದಿಗೆ

ಮಗನ ಹುಟ್ಟು ಹಬ್ಬಕ್ಕೆ ಪುಸ್ತಕ ಕೊಡಿಸಬೇಕೆಂಬ ಹಂಬಲ ಹೆಚ್ಚಾಗಿ ಅದೇ ಸಲುವಾಗಿ ತಮ್ಮಣ್ಣ ಬೀಗಾರರ ಪುಸ್ತಕಗಳನ್ನು ನೋಡೋಣ ಎಂದು ಗೂಗಲ್‌ನಲ್ಲಿ ಹೊರಟೆ. ನಾನು ‘ತಮ್ಮಣ್ಣ’ ಎಂದು ಕೇಳಿದರೆ ಅದು ತೋರಿಸಿದ್ದು ‘ತಮನ್ನ’ ಎಂಬ ನಟಿಯನ್ನು. ಕ್ಷಣಕಾಲ ಖುಷಿ, ಬೇಸರ ಸಿಟ್ಟು. ಒಟ್ಟೊಟ್ಟಿಗೆ ಬಂತು. ಸಜೀವ ಕೈಗಳು ಟೈಪಿಸಿದ್ದನ್ನು ನಿರ್ಜೀವಿ ಮಾಹಿತಿಯನ್ನು ಹೇಗೆ ಕಳುಹಿಸುತ್ತಿದೆ! ಭಲೇ ಭೇಶ್ ಎಂದೆ. ಸರಿಯಾದ ಮಾಹಿತಿ ತಿಳಿದಿಲ್ಲದ ಗೂಗಲ್ ಅಕ್ಷರಗಳನ್ನು ತಾಳೆ ನೋಡಿತು ಅಷ್ಟೆ. ನಿತ್ಯವೂ ಹೀಗಾಗುತ್ತದೆ. ಜಿ.ಪಿ.ಎಸ್ ಹೇಳುತ್ತದೆ ಎಂದು ಮುಂದೆ ಹೋಗುವುದಲ್ಲ ದೇವರು ನಮಗೆ ಇನ್ಬಿಲ್ಟ್ ಎಂಬಂತೆ ನೀಡಿರುವ ಸಾಫ್ಟ್‌ವೇರನ್ನು ಬಳಸಿಕೊಳ್ಳಬೇಕಷ್ಟೆ. ಗೂಗಲ್‌ನಂಥ ಎಐಗಳು ಮಾಹಿತಿ ಕೊಡಬಹುದೆ ವಿನಃ ಭಾವನಾ ಸಂವೇದನೆಯನ್ನು ನೀಡುವುದು ಮನುಷ್ಯನ ಮನಸ್ಸು ಮಾತ್ರ ಅನ್ನಿಸಿತು. ಮನುಷ್ಯ ಕೂಡ ಆಭಾಸಗಳಿಂದ ಹೊರತಾಗಿಲ್ಲ. ಮಹಾನಗರದ ಮಧ್ಯೆ ಇರುವ ಮನೆಯನ್ನು ಹಳ್ಳಿ ಮನೆ ಎನ್ನುವುದಿಲ್ವೆ? ನಾಯಿಗೆ ಟೈಗರ್ ಎನ್ನುವುದಿಲ್ಲವೆ ಹಾಗೆ! ಈ ಇಂಗ್ಲಿಷ್ ಒಮ್ಮೊಮ್ಮೆ ‘ರಮ’, ‘ಕಲ,’ ‘ಮಾಲ’ ಎನ್ನುವುದನ್ನು ‘ರಾಮ’, ‘ಕಾಳ’, ‘ಮಲ’ ಎಂದೋದುವುದಕ್ಕೆ ಬಹಳ ಬೇಸರವಿತ್ತು. ಆದರೆ ಎಐ ಮಾಡಿದ್ದೇನು? ಅದನ್ನೆ!

ಇವೆಲ್ಲಾ ಭಾಷಾ ವಿಚಾರಗಳು ಎಂದು ಎಂದುಕೊಳ್ಳುವಾಗಲೆ ನೆನಪಾಗಿದ್ದು ಗುರುಪೂರ್ಣಮಿಯ ಗುರು ವಂದನಾ ಕಾರ್ಯಕ್ರಮ. ಆ ಸಂದರ್ಭದಲ್ಲಿ ಉದ್ಘೋಷಕನಾಗಿದ್ದ ತಮಿಳಿಗ ತನ್ನೆಲ್ಲಾ ‘ಕುರು’ಗಳಿಗೆ (ಕರು ಎಂದರೆ ಕನ್ನಡದಲ್ಲಿ ದೇಹದಲ್ಲಿ ಕಶ್ಮಲಗಳು ಹೆಚ್ಚಾದಾಗ ಆಗುವ ಕಜ್ಜಿಗಳು ಎನ್ನುವ ಅರ್ಥವಿದೆ ಇಂಗ್ಲಿಷಿನ abcess) ವಂದನೆಗಳು ಎಂದುಬಿಟ್ಟದ್ದನ್ನು ಕೇಳಿ ಸುಧಾರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ‘ಕುರು ಪರಂಪರೆ’ ಬಹಳ ಉನ್ನತವಾದದ್ದು ನಾವೆಲ್ಲ ‘ಕುರುವಂದ್ಯ’ರಾಗಬೇಕು ನಮ್ಮೆಲ್ಲಾ ‘ಕುರು’ಗಳ ಮಹಿಮೆ ಅಪಾರ ನಮ್ಮ ಎಲ್ಲಾ ‘ಕುರು’ವೃಂದಕ್ಕೆ… ಎನ್ನುವಷ್ಟರಲ್ಲಿ ಆಯೋಜಕರು ನೀನು ಭಾಷಣ ನಿಲ್ಲಿಸಬೇಕಂತೆ ಎನ್ನುವ ಸಂದೇಶವನ್ನು ಕೊಟ್ಟರಂತೆ.

ಕುರುವಿನ ಮೇಲೆ ಬೊಬ್ಬೆಯಂತೆ ಎಂದು ಅರ್ಥೈಸುವ ‘ಗಂಡಸ್ಯೋಪರಿ ಸ್ಫೋಟಕಂ’ ಎಂಬ ಮಾತು ಕವಿ ರನ್ನನಲ್ಲಿ ಬಂದಿದೆ. ‘ಶಕ್ತಿಕವಿ ರನ್ನ’ನ ‘ಸಾಹಸಭೀಮವಿಜಯಂ’ನ ‘ದುರ್ಯೋಧನ ವಿಲಾಪಂ’ ಭಾಗದ 27 ನೆ ಪದ್ಯದ ನಂತರದ ವಚನದಲ್ಲಿ ಈ ಮಾತು ಬರುತ್ತದೆ. ಮಹಾಭಾರತ ಯುದ್ಧದಲ್ಲಿ ದುರ್ಯೋಧನ ತನ್ನ ಬಂಧು ಭಾಂದವರನ್ನೆಲ್ಲ ಕಳೆದುಕೊಂಡು ಭೀಷ್ಮರನ್ನು ಭೇಟಿಯಾಗಲೆಂದು ಸಂಜಯನ ಸಂಗಡ ನಡೆದುಕೊಂಡು ಬರುತ್ತಿರುತ್ತಾನೆ. ಆ ಸಂದರ್ಭದಲ್ಲಿ ಗುರು ದ್ರೋಣಾಚಾರ್ಯ, ಅಭಿಮನ್ಯು, ಲಕ್ಷಣಕುಮಾರ, ದುಶ್ಯಾಸನ ಮೊದಲಾದವರ ಶವಗಳನ್ನು ಕಂಡು ಮಮ್ಮಲಮರುಗುತ್ತಾನೆ. ಆ ಸಂದರ್ಭವೇ ಆತನಿಗೆ ಸಹಿಸಲಾರದಷ್ಟು ನೋವನ್ನು ಕೊಟ್ಟಿರುತ್ತದೆ. ಅದು ಸಾಲದೆಂಬಂತೆ ತನ್ನ ಪ್ರಾಣ ಸ್ನೇಹಿತ ಕರ್ಣನ ಕಳೇಬರವನ್ನು ನೋಡಬೇಕಾದ ಸಂದರ್ಭ ಎದುರಾದಾಗ ಕವಿ ರನ್ನ “ಗಂಡಸ್ಯೋಪರಿ ಸ್ಫೋಟಕಂ” ಎಂಬ ಮಾತನ್ನು ಹೇಳುತ್ತಾರೆ. “ಗಾಯದ ಮೇಲೆ ಬರೆ”, “ಕುರುವಿನ ಮೇಲೆ ಬೊಕ್ಕೆ” ಮೊದಲಾದ ಮಾತುಗಳನ್ನು ಹೇಳಬಹುದು. ಮೊದಲೆ ನೋವು ಹಿಂಸೆ ಆಗುತ್ತಿರುತ್ತದೆ. ಅದರ ಮೇಲೆ ಮತ್ತೆ ನೋವುಂಟಾದರೆ, ಬರೆ ಎಳೆದರೆ ಇನ್ಯಾವುದೋ ವೃಣವಾದರೆ ಅದನ್ನು ಸಹಿಸಲು ಸಾಧ್ಯವಾಗುತ್ತದೆಯೇ ಖಂಡಿತಾ ಇಲ್ಲ. ಮೊದಲ ಹೊಡೆತದಿಂದ ಏನಾಗುತ್ತಿದೆ ಎಂದು ತಿಳಿಯುವ ಮೊದಲೆ ಇನ್ನೊಂದು ನೋವು ಉಂಟಾದರೆ ಅದನ್ನು ಸಹಿಸಲು ಸಾಧ್ಯವೇ ಆಗುವುದಿಲ್ಲ. ದೈಹಿಕವಾಗಿ ಮಾನಸಿಕವಾಗಿ ಕುಸಿದು ಹೋಗಿ ಬಿಡುತ್ತಾನೆ. ಅಂತಹದ್ದೆ ನೋವು ದುರ್ಯೋಧನನಿಗೂ ಎದುರಾಗುತ್ತದೆ. ವಿದ್ಯೆ ಕಲಿಸಿದ ಗುರು, ತನ್ನ ಮಗ, ಪ್ರಾಣ ಪ್ರಿಯನಾಗಿದ್ದ ದುಶ್ಯಾಸನ ಇವರುಗಳ ಶವವನ್ನು ನೋಡಿಯೇ ‘ಜನಕಂಗೆ ತಿಲಾಂಜಲಿ ಕುಡುವುದುಚಿತ, ಕ್ರಮವಿಪರ್ಯಮಂ’ ಮಾಡುವುದೇ ಇತ್ಯಾದಿಗಳನ್ನು ಹೇಳಿ ಮುನ್ನಡೆಯುವಾಗ ಕರ್ಣನ ಶವ ನೋಡಿ ನೀನಿಲ್ಲದ ಮೇಲೆ ಈ ರಾಜ್ಯ, ಅಧಿಕಾರವಿದ್ದು ಪ್ರಯೋಜನವೇನು ಎನ್ನುತ್ತಾ ದುಃಖಿಸುತ್ತಾನೆ.

ದಿನ ನಿತ್ಯದ ಬದುಕಿನಲ್ಲಿ ಸಾಮಾಜಿಕರ ಮೇಲೂ ಇಂಥ ಘಟನೆಗಳು ಎದುರಾಗುತ್ತಿರುತ್ತವೆ. ಕೊರೊನಾ ಸಾಂಕ್ರಾಮಿಕ ವ್ಯಾಧಿಯಿಂದ ಚೇತರಿಸಿಕೊಂಡ ಹಲವರಲ್ಲಿ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಸೋಂಕು ಕಾಣಿಸಿಕೊಂಡು ಇನ್ನಿಲ್ಲದ ಹಾಗೆ ಕಾಡಿದ್ದು ನಿಜ. ಹಾಗೆ ಕೊರೊನಾದಿಂದ ಕುಟುಂಬದಲ್ಲಿ ತೀರಿಕೊಂಡಿದ್ದಾರೆ ಅನ್ನುವ ಹೊತ್ತಿಗೆ ಧುತ್ತನೆ ಇನ್ನೊಂದು ಸಾವನ್ನು ಅದೇ ಮನೆಯಲ್ಲಿ ನೋಡಬೇಕಾದ ದುಃಖದ ಸನ್ನಿವೇಶಗಳು ಅದೆಷ್ಟೋ ಎದುರಾದದ್ದನ್ನು ಕಂಡಿದ್ದೇವೆ. ಇಂಥ ಸಂದರ್ಭಗಳನ್ನು ನೋಡಿಯೇ “ಬಾಣಲೆಯಿಂದ ಬೆಂಕಿಗೆ”, “ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ”, “ಗಾಯದ ಮೇಲೆ ಉಪ್ಪು ಸವರಿದಂತೆ” ಮೊದಲಾದ ಮಾತುಗಳನ್ನು ಹೇಳಿರುವುದು. ನೋವಿನ ಮೇಲೆ ಮತ್ತೆ ಮತ್ತೆ ನೋವುಗಳು ಬಂದರೆ ಎಂಥ ಗಟ್ಟಿಗರಿಗು ಅದನ್ನು ಸಹಿಸಲಾಗುವುದಿಲ್ಲ. ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾನೆ ಎನ್ನುವ ಸೂಕ್ಷ್ಮವನ್ನು ರನ್ನನ “ಗಂಡಸ್ಯೋಪರಿ ಸ್ಫೋಟಕಂ” ಎಂಬ ಮಾತು ತಿಳಿಸುತ್ತದೆ. ಇನ್ನು ‘ಗುರು’ವನ್ನು ‘ಕುರು’ ಎನ್ನುವ ತಮಿಳು ಹುಡುಗನ ವಿಷಯಕ್ಕೆ ಬಂದಾಗ ತಮಿಳಿಗನ ಸಮಸ್ಯೆ ಇದಲ್ಲ. ತಮಿಳು ಭಾಷೆಯಲ್ಲಿಯ ಒಂದು ರೀತಿ ಎನ್ನಬಹುದು. ಕಾರಣ ಕನ್ನಡದ ಎಲ್ಲಾ ಗ>ಕ ಆಗುತ್ತವೆ. ಗಣಪತಿ, ಶಂಖು ಚಕ್ರ, ತ್ರಿಶಂಕು, ಗಿಳಿಶಾಸ್ತ್ರ ಗುಲಗಂಜಿ, ಇವುಗಳೆಲ್ಲ ಕ>ಗ ಆಗಿ ಗ>ಕ ಆಗಿ ಬದಲಾವಣೆ ಹೊಂದುತ್ತವೆ. ಖ್ಯಾತ ನಟರೊಬ್ಬರು ತಮಿಳು ಭಾಷೆಯೆ ಕನ್ನಡಕ್ಕೇ ಮೂಲ ಎಂದು ಹೇಳಿದ್ದರು. ಆದರೆ ಇದು ಇದು ತಪ್ಪಾದ ಹೇಳಿಕೆ. ಆದರೆ ತಮಿಳಿನ ಕವಿಗಳೆ ಬರೆದಿರುವ ತಿರುಕ್ಕದೇವರ್ ‘ಜೀವಕ ಚಿಂತಾಮಣಿ’ ಮತ್ತು ಶ್ರೀ ವರ್ಧದೇವರ್ ಬರೆದ ‘ಶೂಲಾ ಮಣಿ’ ಕೃತಿಗಳು ಕನ್ನಡ ನಾಡಿನ ಪ್ರಭಾವಗಳನ್ನು ಹೇಳಿದೆ.

ಹಾಲಿ ತಮಿಳಿನಲ್ಲಿರುವ ಕಿಟ್ಟು ಕಿಚ್ಚು ನೀಮ್ ಕಟ್ಉ >ಗಡು ಕುಟ್ಟು>ಗುಟ್ಟು ಕೂಳಿ>ಗೂಳಿ ಎಂಬ ಪದಗಳು ಕನ್ನಡದವು. ಖ್ಯಾತ ನಟರೊಬ್ಬರು ತಮಿಳು ಭಾಷೆಯೆ ಕನ್ನಡಕ್ಕೇ ಮೂಲ ಎಂದು ಹೇಳಿದ್ದರು. ಆದರೆ ಇದು ಇದು ತಪ್ಪಾದ ಹೇಳಿಕೆ. ತಮಿಳೂ ಮತ್ತು ಕನ್ನಡ ಸಮಾನ ಮೂಲದಿಂದ ಮೂಲ ಅಂದರೆ ದ್ರಾವಿಡದಿಂದ ಬಂದ ಭಾಷೆಗಳಾಗಿವೆ. ಕನ್ನಡ ನಮಗೆಲ್ಲ ತಿಳಿದಂತೆ ಶಾಸ್ತ್ರೀಯ ಸ್ಥಾನ ಮಾನ ಹೊಂದಿರುವ ಭಾಷೆ. ಇಲ್ಲಿ ಮಾತು ಬರಹೆಲ್ಲವೂ ತರ್ಕಬದ್ಧ. ಉದಾಹರಣೆಗೆ ಧ್ಯಾನ> ಧಾನ್ಯ, ದಾನ> ನಾದ, ದೀನ> ದಿನ, ನಿಧಾನ> ನಿಧನ ಇವುಗಳು ಬರೆ ಅಕ್ಷರಗಳಲ್ಲ ಅಲ್ಲಿ ಅದಲಿ ಬದಲಿ ಅಕ್ಷರಗಳು ಆದರೂ ಕೊಡುವಂಥ ಅರ್ಥ ಅಪರಿಮಿತ ಎನ್ನಬಹುದು. ಅಂದಹಾಗೆ ದೀನ ಮತ್ತು ನಿಧನ ಮಾತುಗಳನ್ನು ಮನನ ಮಾಡುತ್ತಿದ್ದರೆ ದಯಾಮೃತ್ಯು ಪದವೇ ಹೊಳೆಯುತ್ತದೆ.

(ಅರುಣಾ ಶ್ಯಾನುಭಾಗ್)

‘ವಾಲ್ಪರೈ ಅಭಿವೃದ್ಧಿ ತಂದ ದುರಂತ’ ಈ ಬರಹವನ್ನು ಓದಿದಾಗ ದಿಗ್ಭ್ರಾಂತವಾಯಿತು. ಸಿಂಹಬಾಲದ ಕೋತಿಗಳನ್ನು ಮೊದಲುಗೊಂಡಂತೆ ಅನೇಕ ಪಕ್ಷಿ ಪ್ರಭೇದಗಳು ಅಳಿವಿನಂಚಿಗೆ ಸರಿದದ್ದು. ತಮ್ಮದಲ್ಲದ ಜೀವನ ಶೈಲಿಗೆ ಹೊಂದಿಕೊಳ್ಳಹೋಗಿ ಸಿಂಹ ಬಾಲದ ಕೋತಿಗಳು ಶಾಶ್ವತ ಅಂಗವಿಕಲತೆಯನ್ನು ಪಡೆದಿದ್ದವು ಎಂದು ಅವುಗಳ ನರಳಾಟ ನೋಡದೆ ದಯಾಮರಣ ನೀಡುವ ಬಗ್ಗೆ ಮಾತನಾಡಿದರೂ ಸರಕಾರ ಅಳಿವಿನಂಚಿನಲ್ಲಿರುವ ಪ್ರಭೇದ ಎನ್ನುವ ಕಾರಣಕ್ಕೆ. ದಯಾಮೃತ್ಯು ಕೋಟಿ ಗಳಿಸಿದರು ಅಳಿದ ಸಿಂಹಬಾಲದ ಕೋತಿ ಸಂತತಿಯನ್ನು ಗಳಿಸಲಾಗುವುದಿಲ್ಲ ಅಲ್ವೆ! ಈ ದಯಾಮರಣಕ್ಕೂ ಕರ್ನಾಟಕಕ್ಕೂ ಬಿಡದ ನಂಟು ಅನ್ನಿಸುತ್ತದೆ. ಹುಟ್ಟು- ಸಾವು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು. ವಿರುದ್ಧಪದ, ವಿರುದ್ಧಾರ್ಥವಿರುವ ಜೋಡಿಪದ ಹೀಗೆಲ್ಲಾ ಹೇಳುವುದಿದೆ. ಹುಟ್ಟು ನಮ್ಮ ಆಯ್ಕೆಯಲ್ಲ ಹಾಗೆ ಸಾವೂ ಆಯ್ಕೆಯಲ್ಲ. ಆದರೆ ವೈದ್ಯಕೀಯ ಕಾರಣಗಳಿಗಾಗಿ ಈ ಮರಣದ ಆಯ್ಕೆಯನ್ನು ಇಲ್ಲ ಕರುಣೆಯ ಮರಣವನ್ನು ಪಡೆಯಬಹುದಾದ ಕಾನೂನು ಈಗ ಕರ್ನಾಟಕದಲ್ಲಿ ಜಾರಿಯಾಗಿದೆ. ಇದುವೆ ದಯಾಮರಣದ ಹೆಸರಿನಿಂದ ಕರೆಯಲ್ಪಡುತ್ತಿದೆ.

ಕರ್ನಾಟಕಕ್ಕೂ ಈ ದಯಾಮರಣದ ಹೋರಾಟಕ್ಕೂ ಸಂಬಂಧವಿದೆ. ಅರುಣಾ ಶ್ಯಾನುಭಾಗ್ ಅವರನ್ನು ನೆನಪಿಸಿಕೊಂಡಾಗ ಇಂದಿಗೂ ಛೇ… ಹೀಗಾಗಬಾರದಿತ್ತು. ಅತ್ಯಾಚಾರಿಗಳಿಗೆ ಇಷ್ಟೇನಾ ಶಿಕ್ಷೆ? ಎಂದೆನಿಸುತ್ತದೆ. ಇನ್ನು ಕೆಲವು ಮಹಿಳೆಯರು ಅತ್ಯಾಚಾರಕ್ಕೆ ಒಳಗಾದಾಗ ಆ ಮಾನಸಿಕ ಹಿಂಸೆಯನ್ನು ಅನುಭವಿಸಲಾರದೆ ದಯಾಮರಣವನ್ನು ಕೊಡಿ ಎಂದು ಕೇಳಿದ್ದಿದೆ. ಇನ್ನೊಂದು ಪ್ರಕರಣದಲ್ಲಿ ಭಾರತದಲ್ಲಿ ದಯಾಮರಣಕ್ಕೆ ಅವಕಾಶ ಇಲ್ಲವೆಂದು ದಯಾಮರಣಕ್ಕಾಗಿ ವಿದೇಶಕ್ಕೆ ತೆರಳಿದ ಉದಾಹರಣೆಯಿದೆ. ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿರುವ ರೋಗಿಗಳಿಗೆ ದಯಾಮರಣವನ್ನು ನೀಡುವ ಹಕ್ಕನ್ನು ದಯಪಾಲಿಸುವ ಕುರಿತ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲೇಖಿಸಿ ಕೋರ್ಟ್ ತೀರ್ಮಾನ ನೀಡಿದೆ. ರೋಗಿಗಳು ಉಸಿರಾಟಕ್ಕೆ ಅಳವಡಿಸಿದ ಜೀವರಕ್ಷಕಗಳನ್ನು ತೆಗೆಯುವುದೆ ಈ ದಯಾಮರಣ ಎನ್ನಬಹುದು. ಚೇತರಿಕೆ ಕಾಣುವ ಭರವಸೆ ಇಲ್ಲದ ರೋಗಿಗಳು ನಿರಂತರ ಕೋಮಾದಲ್ಲಿರುವವರಿಗೆ ಸಂವಿಧಾನದಲ್ಲಿ ಅಡಕವಾಗಿರುವ ಜೀವಿಸುವ ಹಕ್ಕಿನ ಕಲಂ 21 ರ ಅನ್ವಯ ಘನತೆಯಿಂದ ಮರಣ ಹೊಂದುವ ಹಕ್ಕು ನೀಡಿದೆ. ಜೊತೆಗೆ ರೋಗಿಯು ಭವಿಷ್ಯದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಅಥವಾ ಬದುಕುವ ಇಚ್ಛೆ ಉಯಿಲು ದಾಖಲಿಸುವುದಕ್ಕೂ ಅವಕಾಶ ನೀಡಿದೆ. ಇಂದಿಗಂತು ಪ್ರತಿ ನಿತ್ಯ ಸಾಯುತ್ತೇವೆ ಶಾಶ್ವತ ಸಾವು ಸಾವು ಎಂದರೆ ಚಿಲ್ಲರೆ ಎನ್ನುವ ಹಾಗಿದೆ.

ಲೀಗಲ್ ಆಗಿ ದಯಾಮರಣ ಕೇಳಿದಾಗ ‘ನ’ಕಾರ ಸೂಚಿಸುವ ನಮ್ಮ ಕಾನೂನು ಆತ್ಮಹತ್ಯೆ ವಿಫಲ ಎಂದಾಗ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ನಮ್ಮ ಕಾನೂನು ಗರ್ಭಸ್ಥ ಶಿಶುಗಳನ್ನು ಕೊಲ್ಲುವವರತ್ತ ಪ್ರಕರವಾದ ದೃಷ್ಟಿಯನ್ನು ಬೀರಬೇಕಿದೆ. ಕಾನೂನು ಇಷ್ಟು ಬಿಗಿಯಾಗಿದ್ದರೂ ಪರೋಕ್ಷವಾಗಿ ಭ್ರೂಣಹತ್ಯೆಗಳು ಗಮನಕ್ಕೆ ಬಾರದಂತೆ ಆಗುತ್ತಿವೆ. ಮನುಷ್ಯರಿಗೇನೋ ಮರಣಕೊಡಿ ಎನ್ನುವ ಹಕ್ಕಿದೆ ಕೇಳುವರು ಪ್ರಾಣಿಗಳು ಏನು ಮಾಡಬೇಕು? ದಕ್ಷಿಣ ಕನ್ನಡದ ಉಲ್ಲಾಳದಲ್ಲಿ ಒಂದು ಹಸು ರೇಬಿಸ್‌ಗೆ ತುತ್ತಾಗಿ ಮನಸ್ಸಿಗೆ ಬಂದಂತೆ ವರ್ತಿಸುತ್ತಾ ಇರಬೇಕಾದರೆ ಅದನ್ನು ಕಂಡ ವೈದ್ಯರು ಇದಕ್ಕೆ ದಯಾಮರಣವನ್ನು ಕಲ್ಪಿಸುವುದು ಲೇಸು ಎನ್ನುವ ತೀರ್ಮಾನಕ್ಕೆ ಬಂದರು. ಇನ್ನು ಕೆಲವೊಮ್ಮೆ ರಸ್ತೆ ಬದಿಯ ನಾಯಿಗಳಿಗೆ ರೇಬೀಸ್‌ನಂಥ ಇಲ್ಲವೆ ಮಾರಣಾಂತಿಕ ಸಾಂಕ್ರಾಮಿಕ ಖಾಯಿಲೆಗಳು ಕಂಡು ಬಂದಾಗ ಇತರ ಪ್ರಾಣಿಗಳಿಗೂ ಇದು ಹಬ್ಬುತ್ತದೆ ಎನ್ನುವ ಕಾರಣಕ್ಕೆ ಅಲ್ಲಿಯೂ ದಯಾಮರಣಕ್ಕೆ ಅವಕಾಶ ಕೊಡಬಹುದು. ಒಂದಷ್ಟು ವರ್ಷಗಳ ಹಿಂದೆ ಸೇನಾನಾಯಿಗಳನ್ನು ಅವುಗಳ ನಿವೃತ್ತಿ ನಂತರ ದಯಾಮರಣ ಕಲ್ಪಿಸುತ್ತಿದ್ದರು ಇತ್ತೀಚೆಗೆ ಅವುಗಳನ್ನು ದತ್ತು ಕೊಡುವ ಕಾನೂನು ಇದೆ. ದಯಾಮರಣ ಎಂದ ಕೂಡಲೆ ಬಸವಣ್ಣನವರ ‘ದಯೆಬೇಕು ಸಕಲಪ್ರಾಣಿ ಪಕ್ಷಿಗಳಲ್ಲಿ ದಯವೇ ಧರ್ಮದ ಮೂಲವಯ್ಯಾ’. ಎಂದು ಹೇಳಿದ್ದು ನೆನಪಾಗುತ್ತದೆ, ‘ಧರ್ಮ’ವೆಂದರೆ ಬದುಕಲು ಬಿಡುವುದೆ ಧರ್ಮ, ಅನಾಚಾರ ಮಾಡದಿರುವುದೆ ‘ಧರ್ಮ’ ಇತರರ ಮನಸ್ಸನ್ನು ನೋಯಿಸದಿರುವುದೆ ‘ಧರ್ಮ’ ಅಲ್ವೆ! ಇದರ ಮರ್ಮವನ್ನರಿತು ಮುಂದಡಿಯಿಡೋಣ ಏನಂತೀರಿ?

 

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ