ಸಾರಾ ಅವರ ಕವಿತೆಗಳು ಸರಳ, ಸ್ಪಷ್ಟ, ಹಾಡುವಂಥ ಗೇಯತೆಯನ್ನು ಹೊಂದಿವೆ. ಇವರನ್ನು ಗೇಯ ಕವಿ ಎಂದೇ ಗುರುತಿಸಲಾಗಿದೆ. ಯೌವನದಿಂದ ಖಿನ್ನತೆವರೆಗಿನ ತನ್ನ ಸ್ವಾನುಭವಗಳನ್ನೇ ಕವಿತೆಗಳಾಗಿ ಹಾಡಿದ್ದಾರೆ. ಬಹುತೇಕ ಕವಿತೆಗಳು ಆಧುನಿಕ ಸ್ತ್ರೀ ಸಂವೇದನೆ ಮತ್ತು ಭಾವಪ್ರಧಾನವಾದುವೇ. ಕವಿತೆಯ ದನಿಯು ಪ್ರೇಮವಂಚಿತ, ಸಾವನ್ನು ಹತ್ತಿರದಿಂದ ಕಂಡ ಹೆಣ್ಣಿನದೇ ಆಗಿದೆ. ತಮ್ಮದೇ ನಶ್ವರತೆಯನ್ನು, ಭ್ರಮೆಯನ್ನು ಎದುರಿಸಿದರೂ ಸಿನಿಕತನ ಇರದ ಧ್ವನಿ ಇದೆ. ಆಧ್ಯಾತ್ಮಿಕ ಮತ್ತು ಋಜುತ್ವದ ಚೆಲುವನ್ನು ಪ್ರಕೃತಿಯೊಂದಿಗಿನ ಸಾಮರಸ್ಯದಲ್ಲಿ ಕಂಡುಕೊಂಡಿದ್ದಾರೆ ಈ ಕವಿ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ಸಾರಾ ಟೀಸ್ಡೇಲ್ ಅವರ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

ಸಾರಾ ಟ್ರೆವರ್ ಟೀಸ್ಡೇಲ್ ಅಮೇರಿಕದ ಸೇಂಟ್ ಲೂಯಿಸ್‌ನಲ್ಲಿ ಧಾರ್ಮಿಕ ಕುಟುಂಬವೊಂದರಲ್ಲಿ ಆಗಸ್ಟ್ 8, 1884ರಂದು ಜನಿಸಿದರು. 9 ವರ್ಷದವಳಾಗುವವರೆಗೂ ಮನೆಯಲ್ಲಿಯೇ ಪಾಠಗಳನ್ನು ಕಲಿತ ಸಾರಾಳ ಮೊದಲ ಪದ್ಯ ಪ್ರಕಟವಾಗಿದ್ದು ರೀಡೀಸ್ ಮಿರರ್ ಎನ್ನುವ ಒಂದು ಪ್ರಾದೇಶಿಕ ದಿನಪತ್ರಿಕೆಯಲ್ಲಿ. ಸಾರಾಳ ಮೊದಲ ಕವನ ಸಂಕಲನ Sonnets to Dues and other poems ಪ್ರಕಟವಾಗಿದ್ದು 1907, ನಂತರ ಕ್ರಮವಾಗಿ Helen of Troy and other poems (1911), Rivers to the Sea (1915) ಪ್ರಕಟವಾದವು. ಇವರ Love Songs ಕವನ ಸಂಕಲನಕ್ಕೆ ಪ್ರತಿಷ್ಠಿತ Pulitzer ಕಾವ್ಯ ಪುರಸ್ಕಾರ ದೊರೆತಿದೆ.

ಸಾರಾ ಅವರ ಕವಿತೆಗಳು ಸರಳ, ಸ್ಪಷ್ಟ, ಹಾಡುವಂಥ ಗೇಯತೆಯನ್ನು ಹೊಂದಿವೆ. ಇವರನ್ನು ಗೇಯ ಕವಿ ಎಂದೇ ಗುರುತಿಸಲಾಗಿದೆ. ಯೌವನದಿಂದ ಖಿನ್ನತೆವರೆಗಿನ ತನ್ನ ಸ್ವಾನುಭವಗಳನ್ನೇ ಕವಿತೆಗಳಾಗಿ ಹಾಡಿದ್ದಾರೆ. ಬಹುತೇಕ ಕವಿತೆಗಳು ಆಧುನಿಕ ಸ್ತ್ರೀ ಸಂವೇದನೆ ಮತ್ತು ಭಾವಪ್ರಧಾನವಾದುವೇ. ಕವಿತೆಯ ದನಿಯು ಪ್ರೇಮವಂಚಿತ, ಸಾವನ್ನು ಹತ್ತಿರದಿಂದ ಕಂಡ ಹೆಣ್ಣಿನದೇ ಆಗಿದೆ. ತಮ್ಮದೇ ನಶ್ವರತೆಯನ್ನು, ಭ್ರಮೆಯನ್ನು ಎದುರಿಸಿದರೂ ಸಿನಿಕತನ ಇರದ ಧ್ವನಿ ಇದೆ. ಆಧ್ಯಾತ್ಮಿಕ ಮತ್ತು ಋಜುತ್ವದ ಚೆಲುವನ್ನು ಪ್ರಕೃತಿಯೊಂದಿಗಿನ ಸಾಮರಸ್ಯದಲ್ಲಿ ಕಂಡುಕೊಂಡಿದ್ದಾರೆ ಈ ಕವಿ.

ಸಾರಾ ಅವರ ಕವಿತೆಗಳು ಅಮೇರಿಕಾದ ಕಾವ್ಯ ಪರಂಪರೆಯಲ್ಲಿ ಮುಖ್ಯ ಎಂದೆನಿಸಿವೆ. ಗೇಯತೆಯೊಂದಿಗೇ ಭಾವ ಬುದ್ಧಿಗಳನ್ನ ಬಡಿದೆಬ್ಬಿಸುವ ಹೃದಯಸ್ಪರ್ಶಿ ಕವಿತೆಗಳು. ಸಾರಾ ಬರೆದ ಯುದ್ಧ ವಿರೋಧಿ ಪದ್ಯಗಳಲ್ಲಿ ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಬರೆದ “There will come soft rains” ಇತ್ತೀಚೆಗೆ ಹೆಚ್ಚು ಚರ್ಚಿತವಾದದ್ದು. ಯುದ್ಧ ಆದರೆಷ್ಟು ಬಿಟ್ಟರೆಷ್ಟು, ಕೊನೆಗೆ ಇಡೀ ಮನುಕುಲ ಸರ್ವನಾಶ ಆದರೂ ಮಿಗ-ಖಗ, ಮರ-ಗಿಡಗಳಿಗೆ ಯಾವುದೇ ರೀತಿಯ ವ್ಯತ್ಯಾಸವೂ ಆಗುವುದಿಲ್ಲವೆಂದು ತಣ್ಣಗೆ ಎದೆಗೆ ನಾಟುವಂಥ ಪದ್ಯ. “I shall not care”, “Advice to a girl” ತೀವ್ರ ಪ್ರಕ್ಷುಬ್ಧತೆಯ ಪದ್ಯಗಳಾದರೆ The Shrine ಒಂದಿಷ್ಟು ಒಳಗನ್ನು ಚಿಂತನೆಗೆ ಹಚ್ಚುವ ಪದ್ಯ. ಯಾವುದು ಗುಡಿ‌? ದೇವರು ಖರೆಯೆಂದರೆ ಯಾವಾಗ ಸಾಕ್ಷಾತ್ಕಾರವಾಗ್ತಾನೆ? ಎಂದು ನೇರವಾಗಿ ಸರಳವಾಗಿ ತಿಳಿಸುವ ಪದ್ಯ. ಸಹಜ ಕವಿಯೆಂದೇ ಗುರುತಿಸಲ್ಪಟ್ಟ ಸಾರಾಳನ್ನು ಮುಖ್ಯವಾಹಿನಿಯಲ್ಲಿ ಗುರುತಿಸದೇ ಹೋದರು ಸಾವು-ಬದುಕಿನ ಕಾಡುವ ಆಧ್ಯಾತ್ಮವನ್ನು ಅರ್ಥೈಸುವ ರೀತಿ ಇಂದಿಗೂ ಸಮಂಜಸ. ಇದಕ್ಕೆ ಪೂರಕವೆಂಬಂತೆ ಈ ಕೆಳಗಿನ ಸಾಲುಗಳು.

ನನ್ನ ಬುದ್ಧಿ ಭಾವದ ಕನಸುಗಳು
ಬಹುಕಾಲ ನನ್ನೊಂದಿಗೆ ಉಳಿಯುವುದಿಲ್ಲ
ಮಗುವಿನಿಂದಲೂ ನನ್ನೊಳಗೊಂದು
ತೀವ್ರ ಏಕಾಂತದ ಹಾಡಿದೆ

ಆ ಹಾಡು ನನ್ನೊಳಗೆ
ಮರೆವೆಯಾಗುವುದೇ ಆದರೆ
ಸಾವನರಸಿ ಹೊರಟುಬಿಡುವೆ
ನಿನ್ನೆ ಸುರಿದ ಮಳೆಯಂತೆ ಮರೆತು ಹೋಗುವ
ಯಾರೋ ನುಡಿಸುವ ಯಾವುದೋ ರಾಗದೊಂದಿಗೆ

Helen of Troy and other poems ಸಂಕಲನವು ಅವರ ಕಾವ್ಯ ಪಯಣಕ್ಕೆ ಒಂದು ತಿರುವನ್ನು ತಂದುಕೊಟ್ಟಿತು. ಕಾವ್ಯ ಲೋಕ ಅವರನ್ನು ಗುರುತಿಸಿ ಸ್ವಾಗತಿಸಿತು. ಸಾರಾಳ ಕಾವ್ಯದ ಹಿಂದೆ ತೀವ್ರ ಯಾತನಾಮಯ ಬದುಕು ಇತ್ತು.

ಪತಿಯಿಂದ ವಿಚ್ಛೇದನ, ಸತತವಾದ ಒಂಟಿತನ, ಖಿನ್ನತೆಗೆ ಒಳಗಾಗುತ್ತಿದ್ದ ಸಾರಾ ತಮ್ಮ 49ನೇ ವಯಸ್ಸಿನಲ್ಲಿ ಬದುಕನ್ನು ಅಂತ್ಯಗೊಳಿಸಿಕೊಳ್ಳುತ್ತಾರೆ. “I shall not care” ಪದ್ಯವನ್ನು ಒಂದು ರೀತಿ ಅವರ ಆತ್ಮಹತ್ಯೆ ಪತ್ರವೇ ಇರಬೇಕೆಂಬ ಗುಮಾನಿಯೂ ಓಡಾಡುವುದು. ಆದರೆ ನಿಜವೆಂದರೆ ಆ ಪದ್ಯವೂ ಸಾಯುವ ಕೆಲವು ವರ್ಷಗಳ ಹಿಂದೆ ಪ್ರಕಟವಾದ “Rivers to the Sea” ಸಂಕಲನದಲ್ಲಿ ಪ್ರಕಟವಾಗಿತ್ತು. ಸಾರಾಳ ಮರಣಾನಂತರ, ಅವರ ಕೊನೆಯ ಸಂಕಲನ “Strange Victory” ಪ್ರಕಟವಾಗಿತ್ತು.

ಸಾರಾಳೊಂದಿಗೆ ಜೀವಿಸುತ್ತಾ ಅವಳ ಅನೇಕ ಪದ್ಯಗಳನ್ನು ಎದೆಗಿಳಿಸಿಕೊಂಡೆ. ಇಲ್ಲಿ ಕೆಲವನ್ನು ನಿಮ್ಮ ಓದಿಗೆ ನೀಡುತ್ತಿರುವೆ.

1. ಸುರಿಯುವುದು ಸೋನೆ ಮಳೆ
(There Will Come Soft Rains)

ಸುರಿಯುವುದು ಸೋನೆ ಮಳೆ ಮಣ್ಣ ಮೃದ್ಗಂಧವೂ
ಚಿಟುಗುಡುವ ಚಿಟಗುಬ್ಬಿಗಳ‌ ಕಲರವದ ಹಾಡು

ರಾತ್ರಿಗೆ ಕಚೇರಿ ನಡೆಸುವ ಕೊಳದ ವಟಗುಡುವ ಕಪ್ಪೆ
ಕಾಡು ಪ್ಲಮ್ ಮರ ಹೊದ್ದಿವೆ ಅಚ್ಚಬಿಳಿ ಹೊದಿಕೆ

ಬೆಂಕಿಯ ಕಡುಗೆಂಪು ಪುಕ್ಕ ತೊಟ್ಟ ರಾಬಿನ್ ಹಕ್ಕಿ
ಬೇಲಿ ಮೇಲೆ ಕುಂತು ತನ್ನಷ್ಟಕ್ಕೆ ಸಿಳ್ಳೆ ಹಾಕಿದೆ

ಈ ಯಾರಿಗೂ ಯುದ್ಧವೆಂದರೇ ತಿಳಿಯದು
ಇದೆಲ್ಲದರ ಅಂತ್ಯ ಯಾವಾಗಲಾದರೂ ಆಗಲಿ, ಲೆಕ್ಕಕ್ಕಿಲ್ಲ ಇವರಿಗೆ

ಮನುಕುಲ ನಶಿಸಿಯೇ ಹೋದರೂ ಫರಕು ಬೀಳದು
ಗಿಡಕ್ಕೋ ಹಕ್ಕಿಗೋ ಊಹೂಂ ಯಾರಿಗೂ ಸಹಿತ

ನಸುಕಿಗೆ ನಿದ್ರೆ ಮುಗಿಸಿ ಏಳುವ ವಸಂತಳಿಗಂತೂ
ಅರಿವಿಗೂ ಬರುವುದಿಲ್ಲ ನಾವು ಇಲ್ಲವಾಗಿದ್ದು

2. ದುಃಖಿಸುವುದಿಲ್ಲ ನಾನು
(I shall not care)

ನಾನು ಸತ್ತಾಗ
ಬಿಸಿಲುಕಾಯುವ ಬೇಸಿಗೆ
ಮಳೆ ಮಿಂದ ಕೂದಲು ಕೊಡವಿದಾಗ
ಎದೆಯೊಡೆದ ನೀನು ನನ್ನ ಮೇಲೊರಗಿದರೆ
ದುಃಖಿಸುವುದಿಲ್ಲ ನಾನು

ಮಳೆಗೆ ರೆಂಬೆಗಳು ನೆಲತಾಕುವಾಗ
ಎಲೆಯುಳ್ಳ ಮರಕಿರುವ ಶಾಂತಿ ನನ್ನದೀಗ
ಹ್ಮ್, ನಾನೀಗ ಮತ್ತಷ್ಟು ತಣ್ಣಗಾಗಿರುವೆ
ನೀನು ಈಗಿರುವುದಕ್ಕಿಂತಲೂ.

3. ಗುಡಿ
(The Shrine)

ನನ್ನೆದೆಯೊಳಗೆ ದೇವರಿಲ್ಲ
ಪಾಳು ಬಿದ್ದ ಗುಡಿಯಂತೆ ಬಿಕೋ ಅನ್ನುತ್ತಿದೆ
ಅಲ್ಲಿ ನಿತ್ಯ ಪುಷ್ಪ, ಗುಲಾಬಿ ಹೂಕಂಟಿ
ಹಬ್ಬಿವೆ ಬೆಸೆದುಕೊಂಡು

ಮೆಚ್ಚಿ ಕಣ್ತುಂಬಿಕೊಳ್ಳಲು
ಕಲ್ಲಿನಲಿ ಕಡೆದ ದೇವರಿಲ್ಲ ಅಲ್ಲಿ
ಒಂದೇ ಅಳತೆ ಮೇಲೇರುವ
ಧೂಪದ ಹೊಗೆಯಂತೆ ಚಿತ್ತ
ಹಂಬಲಿಸಿ ಬಿಕ್ಕುವೆ ಒಂಟಿಯಾಗಿ
ಒಂದು ವೇಳೆ ಈ ಗುಡಿಯನ್ನು
ಶುಚಿಯಾಗಿ ಇಟ್ಟುಕೊಳ್ಳುವುದೇ ನಿಜವಾದರೆ
ಮುಂದೊಂದು ದಿನ
ಒತ್ತಾಗಿ ಪೋಣಿಸಿದ ಗುಲಾಬಿ ಹೂ ಮಾಲೆ
ಧರಿಸಿದ ಕೊರಳೆತ್ತುವೆ
ದೇವರ ಸಾಕ್ಷಾತ್ಕಾರಕೆ

4. ಒಂದು ಚಳಿಗಾಲದ ರಾತ್ರಿ
(A Winter night)

ಮಂಜಿನ ಮುಸುಕೆಳೆದ
ನನ್ನ ಕಿಟಕಿಯ ಗಾಜು ಮಬ್ಬು ಮಬ್ಬು
ಈ ರಾತ್ರಿ ಪರಪಂಚಕ್ಕೆ
ಮೈ ಕೊರೆವ ಚಳಿ

ಕಡುಕ್ರೂರಿ ಚಂದಿರ
ಎರಡಂಚಿನ ಚೂರಿಯಂಗೆ
ಇರಿಯುವ ಶೀತಗಾಳಿ
ಸೂರು ಇಲ್ಲದವರ ಮೇಲೆ
ದಯಾಮಯಿ ಭಗವಂತ ದಯೆ ತೋರಲಿ
ಮಂಜು ಹೊದ್ದ ಬೀದಿಗಳಲಿ
ಲೈಟು ಕಂಬಗಳ ನಡುವೆ
ತಿರಿಯುತ್ತ ತಿರುಗುವ ತಿರುಕರು

ಶಿವನೇ!!
ಈ ಇರುಳು
ಆ ಬಿಕ್ಕೆಯವರ ಮೇಲೆ
ದೇವರು ಕರುಣೆಯ ಕಣ್ಹಾಯಿಸಲಿ
ನನ್ನ ಖೋಲಿಯಂತೂ ಪದರು ಪದರು
ಕರ್ಟನ್ ಹೊದ್ದು ವೈಶಾಖದ
ನಡುಮಧ್ಯಾಹ್ನದಂತೆ ಬೆಚ್ಚಗಿದೆ

ನಾನು ಮಾತ್ರ
ಅಲ್ಲೆಲ್ಲೋ ದೂರದ ಥಂಡಿಯಲ್ಲಿ
ಅನಾಥ ಕೂಸಿನ ಹಾಗೆ
ಬಿಕ್ಕಿ ಬಿಕ್ಕಿ ಅಳುತ್ತಿದ್ದೇನೆ

5. ಅಗೋಚರ
(The Unseen)

ಅಗೋಚರವಾದ ಸಾವು
ಅಂಗಳದಲ್ಲಿ ನಡೆದು ಹೋದ
ಮುಸ್ಸಂಜೆಯ ಸೆರಗನು ನೆಲಕೆಳೆಯುತ
ದಾಟಿ ನಡೆದ ನನ್* ಮತ್ತು ದಾದಿಯರನ್ನು

ಸಾವಿಗೆ ಎಷ್ಟು ಹತ್ತಿರ ಇದ್ದೀವಿ
ಎನ್ನುವ ಪರಿವೆಯೇ ಇಲ್ಲದವರ
ಉಸಿರಾಟವನ್ನು ಆಲಿಸುತ್ತ
ಒಂದೊಂದೂ ಬಾಗಿಲ ಬಳಿ ನಿಂತು ನಿಂತು ಸಾಗಿದ

ಸಾವು ಅಂಗಳದಲ್ಲಿ ನಡೆದು ಹೋದ
ನನ್ ದಾದಿಯರ ಕಣ್ತಪ್ಪಿಸಿ
ಅದೆಷ್ಟೋ ಬಾಗಿಲನು ದಾಟಿ ನಡೆದ
ಆದರೆ,
ಒಂದನ್ನು ಮಾತ್ರ ಪ್ರವೇಶಿಸಿಯೇ ಬಿಟ್ಟ!

ನನ್ : ಕ್ರೈಸ್ತ ಸಂನ್ಯಾಸಿನಿ

6. ಪ್ರೀತಿ ಇಲ್ಲವಾದ ಮೇಲೆ
(After Love)

ಈಗ ಆ ಮೋಡಿ ಉಳಿದಿಲ್ಲ
ಎಲ್ಲರಂತೆ ನಾವೂ ಭೇಟಿಯಾಗುತ್ತೇವೆ
ಈಗ ನೀನು ನನಗೊಂದು ಅದ್ಭುತವಲ್ಲ
ನಿನಗೆ ನಾನೂ ಕೂಡ

ನೀನು ಬೀಸುವ ಗಾಳಿಯಾದರೆ ನಾನು ಕಡಲಾಗಿದ್ದೆ
ಈಗ ಯಾವ ಸೊಗಸೂ ಉಳಿದಿಲ್ಲ
ನಾನೀಗ
ಕಡಲ ಕಿನಾರೆಯಲಿ ಅರ್ಥವಿಲ್ಲದ ಒಂದು ಕೊಳ

ಕೊಳವೇನೋ ಬಿರುಗಾಳಿಯಿಂದ ಸುರಕ್ಷಿತವೇ
ಅಲೆಯುಬ್ಬರಗಳಿಂದಲೂ ವಿಮುಕ್ತ
ಆದರೇನು ಮಾಡೋದು
ತನ್ನೊಳಗಿನ ಈ ಕದನವಿರಾಮದಿಂದಲೇ ಅಲ್ವೇ
ಕಡಲಿಗಿಂತಲೂ ಇನ್ನಷ್ಟು ಮತ್ತಷ್ಟು ಕಹಿಯಾಗಿರುವುದು