ಭಾರತದ ಇನಿಂಗ್ಸ್ ಚೆನ್ನಾಗಿಯೇ ಶುರುವಾಯಿತು. ಎಂದಿನಂತೆ ರೋಹಿತ್ ಶರ್ಮ ರಭಸದ ಹೊಡೆತದಿಂದ ಶುರು ಮಾಡಿದರು. ಒಂದು ಸಿಕ್ಸರ್ ಮತ್ತು ಬೌಂಡರಿ ಹೊಡೆದ ಮೇಲೆ ಮತ್ತೆ ಸಿಕ್ಸರ್ ಹೊಡೆಯಲು ಯತ್ನಿಸಿದಾಗ ಬಾಲ್ ಸ್ವಲ್ಪ ಸ್ಪಿನ್ ಆದ ಕಾರಣ ಅದು ಬೌಂಡರಿಗೆ ಹೋಗಲಿಲ್ಲ. ಅದನ್ನು ಬೆನ್ನಟ್ಟಿಕೊಂಡು ಹೋದ ಟ್ರಾವಿಸ್ ಹೆಡ್ ಅತ್ಯಂತ ಕಠಿಣವಾದ ಕ್ಯಾಚನ್ನು ಕೆಳಗೆ ಬೀಳುತ್ತಲೇ ಹಿಡಿದರು. ಆ ಕ್ಯಾಚ್ ಈ ಪಂದ್ಯದ ಮೊದಲ ತಿರುವು ಎಂದು ಹೇಳಬಹುದು. ಗಿಲ್ ಫೈನಲ್ಸ್ ಇದೇ ಮೊದಲ ಬಾರಿ ಆಡುತ್ತಿರುವುದು; ಹಾಗಾಗಿ ಅವರ ಮೇಲೆ ಒತ್ತಡವಿತ್ತು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದ ಕೊನೆಯ ಬರಹ ನಿಮ್ಮ ಓದಿಗೆ

ವಿಶ್ವ ಕಪ್ 2023 ಸುಮಾರು ಒಂದೂವರೆ ತಿಂಗಳು 10 ಪಂಗಡಗಳು ಬೇರೆ ಬೆರೆ ಊರುಗಳಿಗೆ ತಿರುಗಿ ಸೆಣಸಾಡಿ ಕೊನೆಗೆ 4 ಟೀಮ್‌ಗಳು ಪಂದ್ಯದ ಕೊನೆಯ ಹಂತವನ್ನು ತಲುಪಿದವು. ಭಾರತ ಮತ್ತು ನ್ಯೂಝಿಲೆಂಡ್ ಒಂದು ಸೆಮಿ-ಫೈನಲ್ ಆಡಿದರು. ಮತ್ತೊಂದು ಕಡೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕದವರ ಪಂದ್ಯ.

ಭಾರತ ನ್ಯೂಝಿಲೆಂಡ್ ಪಂದ್ಯದಲ್ಲಿ ರನ್ನಿನ ಸುರುಮಳೆಯಾದರೆ, ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕದ ಪಂದ್ಯದಲ್ಲಿ ಕಡಿಮೆ ಸ್ಕೋರಿನ ಹಣಾಹಣಿ ಗುದ್ದಾಟವಾಯಿತು. ಎರಡು ಪಂದ್ಯಗಳೂ ರೋಮಾಂಚಕಾರಿಯಾಗಿದ್ದವು.

ಮೊದಲು ಆಡಿದ ಭಾರತ ವಿರಾಟ್ ಕೊಹ್ಲಿ 117 ( 113) ಮತ್ತು ಶ್ರೇಯಸ್ ಅಯ್ಯರ್ 105 (70) ಅದ್ಭುತವಾಗಿ ಆಡಿ ಶತಕಗಳನ್ನು ಬಾರಿಸಿದರೆ, ಶುಭಮನ್ ಗಿಲ್ 80 ( 66) ಹೊಡೆದು ಭರ್ಜರಿ ಸ್ಕೋರನ್ನು ಕಲೆಹಾಕಿತು. ನ್ಯೂಝಿಲೆಂಡ್‌ನ ಟಿಮ್ ಸೌದಿ 3/100 ತೆಗೆದರು. ಭಾರತ ಪ್ರತಿಮ್ಯಾಚಿನಲ್ಲೂ ಪ್ರಾರಂಭದ ಆಟಗಾರರು ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಭಾರತಕ್ಕೆ ಒಳ್ಳೆಯ ಶುರುಮಾಡಿಕೊಟ್ಟರು. ಅದರಿಂದಲೇ ಮಿಕ್ಕ ಬ್ಯಾಟರ್‌ಗಳ ಮೇಲೆ ಅಷ್ಟು ಒತ್ತಡವಿರಲಿಲ್ಲ. ಸ್ಕೋರ್ 300 ಕ್ಕೂ ಹೆಚ್ಚಿಗೆ ಮಾಡಲು ಅವಕಾಶ ಸಿಕ್ಕಿತು.

ನ್ಯೂಝಿಲೆಂಡ್ ಕೂಡ ಬಹಳ ಚೆನ್ನಾಗಿ ಆಡಿ ಹೆಜ್ಜೆ ಹೆಜ್ಜೆಗೂ ಭಾರತದ ಸ್ಕೋರನ್ನು ಅಟ್ಟಿಸಿಕೊಂಡು ಬರುತ್ತಲೇ ಇದ್ದರು. ಒಂದು ಸಮಯದಲ್ಲಿ ಭಾರತದ ಸ್ಕೋರನ್ನು ದಾಟುವರೋ ಎಂಬ ಶಂಕೆ ಪ್ರೇಕ್ಷಕರಲ್ಲಿ ಉಂಟಾಗಿತ್ತು. ಡಾರಿಲ್ ಮಿಚ್ಚೆಲ್ 134 (119) ಮತ್ತು ನಾಯಕ ವಿಲಿಯಂಸನ್ ಭಾರತದ ಸ್ಕೋರನ್ನು ಬೆನ್ನಟ್ಟಿಕೊಂಡೇ ಬಂದರು. ಪೆಟ್ಟಾಗಿದ್ದ ಕಾರಣ ವಿಲಿಯಂಸನ್ ಅನೇಕ ಪಂದ್ಯದಲ್ಲಿ ಆಡುವುದಕ್ಕಾಗಲಿಲ್ಲ. ಯಾವಾಗ ನ್ಯೂಝಿಲೆಂಡ್ ಸೆಮಿ ಫೈನಲ್‌ನಲ್ಲಿ ಪ್ರವೇಶಿಸಿತೋ ಅವರು ಆಡುವುದಕ್ಕೆ ಮೈದಾನಕ್ಕೆ ಇಳಿದರು. ಸುಮಾರು ಒಂದು ತಿಂಗಳು ಅವರು ಆಡಿರಲಿಲ್ಲ. ಆದರೂ ರಭಸದಿಂದ ಸ್ಕೋರ್ ಮಾಡುತ್ತಾ ಅವರು ಮತ್ತು ಮಿಚ್ಚೆಲ್ ಭಾರತದ ಸ್ಕೋರನ್ನು ದಾಟಬಹುದು ಅನ್ನಿಸುತ್ತಿತ್ತು. ರನ್ನಿನ ಗತಿ ಏರುತ್ತಿರುವನ್ನು ಕಂಡು ಹೊಡೆದ ಒಂದು ಬಾಲ್ ಸಿಕ್ಸರ್‌ಗೆ ಹೋಗದೆ ಅಲ್ಲಿ ಕ್ಯಾಚ್ ಕೊಟ್ಟು ಔಟಾದರು ವಿಲಿಯಂಸನ್. ಅವರು ಔಟಾದಮೇಲೂ ಮಿಚ್ಚೆಲ್ ರಭಸದಿಂದ ಹೊಡೆಯುತ್ತಲೇ ಹೋದರು. ಮಿಚ್ಚೆಲ್ ಕ್ಯಾಚ್ ಕೊಟ್ಟು ಔಟಾದ ಮೇಲೆ ಭಾರತಕ್ಕೆ ಪುನರ್ಜನ್ಮ ಸಿಕ್ಕಿಂತಾಯಿತು. ಕೊನೆಗೆ ನ್ಯೂಝಿಲೆಂಡ್ 70 ರನ್ ಹಿಂದೆ ಬಿದ್ದು ಎಲ್ಲರೂ ಔಟಾದರು. ಭಾರತ ಕೊನೆಗೂ ಫೈನಲ್ ಪ್ರವೇಶಿಸಿತು. ಆ ಮ್ಯಾಚಿನ ವಿಶೇಷವೆಂದರೆ, ಮಹಮ್ಮದ್ ಶಮಿ 7 ವಿಕೆಟ್ ತೆಗೆದರು. ಭಾರತದ ವಿಶ್ವ ಕಪ್‌ನಲ್ಲಿ ಅತ್ಯಂತ ಶ್ರೇಷ್ಟ ಹೆಚ್ಚು ವಿಕೆಟ್ ತೆಗೆದವರಾದರು.

ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕದ ಪಂದ್ಯದಲ್ಲಿ ಪಿಚ್ ನಿಧಾನಗತಿಗೆ ಉಪಯೋಗವಾಗಿದ್ದು ರನ್ ಮಾಡುವುದು ಅತ್ಯಂತ ಕಠಿಣವಾಗಿತ್ತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕ ತಂಡ ದಾರಿಯಲ್ಲಿ ಮುಗ್ಗರಿಸುತ್ತಾ ಎಲ್ಲರೂ ಔಟಾಗಿ ಕೇವಲ 212 ರನ್ ಮಾಡಿತು. ಅದರಲ್ಲಿ ಡೇವಿಡ್ ಮಿಲ್ಲರ್ ಶತಕ ಬಾರಿಸಿದರು. 101 (116). ಹೆನ್ರಿಕ್ ಕ್ಲಾಸೆನ್ 47(48) ಗಳಿಸಿದರು. ವೇಗದ ಬೋಲರ್‌ಗಳು ಮಿಚೆಲ್ ಸ್ಟಾರ್ಕ್‌ 3/34, ಪ್ಯಾಟ್ ಕಮಿನ್ಸ್ 3/51 ಮತ್ತು ಜೋಷ್ ಹೇಝಲ್‌ವುಡ್ 2/12 ತೆಗೆದು ಅವರ ಬ್ಯಾಟರ್‌ಗಳಿಗೆ ಬಹಳ ಅನುಕೂಲ ಮಾಡಿಕೊಟ್ಟರು.

ಆದರೆ ಆಟದಲ್ಲಿ ತಿರುವು ಬಂದು ವಿಕೆಟ್‌ಗಳು ಬೀಳುತ್ತಾ ಆಸ್ಟ್ರೇಲಿಯಾಗೆ ರನ್ ಹೊಡೆಯುವುದು ಕಷ್ಟವಾಯಿತು. ಟ್ರಾವಿಸ್ ಹೆಡ್ 62(48), ಸ್ಟೀವ್ ಸ್ಮಿತ್ 30(62), ಡೇವಿಡ್ 29(18) ರನ್‌ಗಳೊಂದಿಗೆ ಆಸ್ಟ್ರೇಲಿಯಾ ಹೇಗೋ 215/7 ವಿಕೆಟ್ ನಷ್ಟಕ್ಕೆ ಹೊಡೆದು ಫೈನಲ್ ತಲುಪಿತು. ಇನ್ನು 20-25 ರನ್ ದಕ್ಷಿಣ ಆಫ್ರಿಕ ಹೊಡೆದಿದ್ದರೆ ಆಸ್ಟ್ರೇಲಿಯಾಗೆ ಗೆಲ್ಲಲು ಕಷ್ಟವಾಗಿರಬಹುದು ಎಂದು ತಜ್ಞರ ಅಭಿಪ್ರಾಯವಾಗಿತ್ತು.

ಅಂತೂ ಫೈನಲ್ಸ್ ಆಡಲು ಭಾರತ ಮತ್ತು ಆಸ್ಟ್ರೇಲಿಯಾ ಅಹ್ಮದಾಬಾದಿನ ಮೋದಿ ಸ್ಟೇಡಿಯಂ ತಲುಪಿತು. ಭಾರತ ಒಂದು ಪಂದ್ಯವೂ ಸೋಲದೆ 10/10 ಮ್ಯಾಚ್ ಗೆದ್ದರೆ, ಆಸ್ಟ್ರೇಲಿಯಾ 10ಕ್ಕೆ 2 ಸೋತು ಫೈನಲ್‌ನಲ್ಲಿ ಪ್ರವೇಶಿಸಿತು.

ಇದೇ ಮೊದಲ ಬಾರಿ ವಿಶ್ವ ಕಪ್‌ನ ಫೈನಲ್ಸ್ ಅಹ್ಮದಾಬಾದಿನ ನರೆಂದ್ರ ಮೋದಿಯ ಸ್ಟೇಡಿಯಂನಲ್ಲಿ ಆಡಿಸುತ್ತಿರುವುದು. ಅದರಲ್ಲಿ ಕನಿಷ್ಟ 1.30 ಲಕ್ಷ ಕ್ರಿಕೆಟ್ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಬಹುದು. ಪ್ರಪಂಚದಲ್ಲೇ ಅತ್ಯಂತ ದೊಡ್ಡ ಸ್ಟೇಡಿಯಂ ಇದು.

ಟಾಸ್ ಗೆದ್ದ ನಾಯಕ ಪ್ಯಾಟ್ ಕಮಿಂಗ್ಸ್ ಫೀಲ್ಡಿಂಗ್ ಮಾಡುವುದಾಗಿ ಆಯ್ಕೆ ಮಾಡಿ ಎಲ್ಲರನ್ನೂ ಚಕಿತಗೊಳಿಸಿದರು. ಸಾಧರಣವಾಗಿ ಫೈನಲ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಾರೆ. ರನ್ ಚೆನ್ನಾಗಿ ಮಾಡಿ ಕೂತರೆ, ಎರಡನೇ ಟೀಮಿಗೆ ಸ್ಕೋರ್ ಬೋರ್ಡ್‌ ನೋಡುತ್ತಲೇ ಇರಬೇಕಾದ ಪರಿಸ್ಥಿತಿ ಬರುತ್ತೆ. ಆಟ ಸಾಗಿದಾಗ ಅವಶ್ಯಕವಾದ ರನ್ ಗತಿ ಮಾಡುತ್ತಿದ್ದೇವಾ ಎಂದು ಸ್ಕೋರ್ ಬೋರ್ಡ್‌ ಕಡೆ ನಿಗಾ ಇಡಬೇಕಾಗುತ್ತೆ. ಅದು ಹಿಂದಕ್ಕೆ ಬಿದ್ದರೆ ಅದರ ಒತ್ತಡ ಜಾಸ್ತಿಯಾಗಿ ವಿಕೆಟ್ ಕಳೆದುಕೊಳ್ಳುವ ಭಯ ಇರುತ್ತೆ.

ಭಾರತದ ಇನಿಂಗ್ಸ್ ಚೆನ್ನಾಗಿಯೇ ಶುರುವಾಯಿತು. ಎಂದಿನಂತೆ ರೋಹಿತ್ ಶರ್ಮ ರಭಸದ ಹೊಡೆತದಿಂದ ಶುರು ಮಾಡಿದರು. ಒಂದು ಸಿಕ್ಸರ್ ಮತ್ತು ಬೌಂಡರಿ ಹೊಡೆದ ಮೇಲೆ ಮತ್ತೆ ಸಿಕ್ಸರ್ ಹೊಡೆಯಲು ಯತ್ನಿಸಿದಾಗ ಬಾಲ್ ಸ್ವಲ್ಪ ಸ್ಪಿನ್ ಆದ ಕಾರಣ ಅದು ಬೌಂಡರಿಗೆ ಹೋಗಲಿಲ್ಲ. ಅದನ್ನು ಬೆನ್ನಟ್ಟಿಕೊಂಡು ಹೋದ ಟ್ರಾವಿಸ್ ಹೆಡ್ ಅತ್ಯಂತ ಕಠಿಣವಾದ ಕ್ಯಾಚನ್ನು ಕೆಳಗೆ ಬೀಳುತ್ತಲೇ ಹಿಡಿದರು. ಆ ಕ್ಯಾಚ್ ಈ ಪಂದ್ಯದ ಮೊದಲ ತಿರುವು ಎಂದು ಹೇಳಬಹುದು. ಗಿಲ್ ಫೈನಲ್ಸ್ ಇದೇ ಮೊದಲ ಬಾರಿ ಆಡುತ್ತಿರುವುದು; ಹಾಗಾಗಿ ಅವರ ಮೇಲೆ ಒತ್ತಡವಿತ್ತು. ಅವರು ಹೊಡೆಯಲು ಹೋಗಿ ಬಾಲನ್ನು ಫೀಲ್ಡರ್ ಕೈಗೆ ಕೊಟ್ಟು ಔಟಾದರು.

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಆಡುವಾಗ ರನ್ ಗತಿ ಬಹಳ ಕೆಳಗೆ ಬಿತ್ತು. ಮೊದಲು ಬ್ಯಾಟಿಂಗ್ ಸಿಕ್ಕುವ ಅನುಕೂಲ ಭಾರತ ಕಳೆದುಕೊಳ್ಳುತ್ತಾ ಬಂತು. ಇಬ್ಬರೂ ಚೆನ್ನಾಗಿ ಆಡಿ, ವಿಕೆಟ್‌ನ ಭದ್ರತೆಯನ್ನು ಕಾದರು, ಆದರೆ ಒಂದು ಫೈನಲ್‌ಗೆ ಬೇಕಾದ ಮುಖ್ಯವಾದ ರನ್ ಹೊಡೆಯಲಿಲ್ಲ. ಕೆಲವು ಸಲ ಬೌಂಡರಿ, ಸಿಕ್ಸರ್‌ಗಳನ್ನು ಹೊಡೆಯಲಾಗದಿದ್ದರೆ ಪ್ರತಿ ಬಾಲ್‌ಗೂ ಒಂದು ರನ್ ಮಾಡಿ ಓವರ್‌ಗೆ 6 ರನ್‌ ಲಕ್ಷ್ಯವಿಟ್ಟು ಆಡುತ್ತಾರೆ. ಅದನ್ನೂ ಮಾಡದೆ ಭಾರತ ತನ್ನ ಇನಿಂಗ್ಸ್‌ನಲ್ಲಿ ಮುಗ್ಗರಿಸುತ್ತಾ ಹೋಯಿತು. ಒಂದು ಸಲ ಹತ್ತು ಓವರ್ ಅವಧಿಯಲ್ಲಿ ಕೇವಲ 2 ಬೌಂಡರಿಯನ್ನು ಬಾರಿಸಿದ್ದರು! ಹತ್ತು ಮ್ಯಾಚಿನಲ್ಲಿ ಹತ್ತೂ ಗೆದ್ದ ಭಾರತದ ಫೈನಲ್ಸ್‌ನ ಆಟದ ಧೋರಣೆ ವಿಚಿತ್ರವಾಗಿ ಕೊಂಡಿತು. ಅಲ್ಲಿ ನೆರೆದಿದ್ದ ಲಕ್ಷಾಂತರ ಜನಸಾಗರ ತುಟಿಪಿಟಕ್ಕೆನ್ನದೆ ಮೌನವಾಗಿ ನೋಡುತ್ತಿದ್ದರು. ಇದು ಮ್ಯಾಚಿನ ಎರಡನೇ ತಿರುವಾಯಿತು. ಪಿಚ್ ರನ್ ಹೊಡೆಯುವುದಕ್ಕೆ ಅಷ್ಟು ಸಹಾಯಕವಾಗಿರಲಿಲ್ಲ, ನಿಜ. ಆದರೆ ಒಂದೊಂದಾಗಿ ರನ್ ಕೂಡಿಸುವ ಪ್ರಯತ್ನ ಮಾಡದಿದ್ದ ಕಾರಣ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿತು.

ಕೊನೆಗೆ ಇಬ್ಬರೂ ಔಟಾಗಿ, ಮಿಕ್ಕವರೂ ಜಾಸ್ತಿ ರನ್ ಮಾಡದೆ ಭಾರತ ಕುಂಟುತ್ತಲೇ 245 ರನ್ ಮಾಡಿತು. ಫೈನಲ್ಸ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ತನಗೆ ಬಂದಿದ್ದ ಸುವರ್ಣ ಅವಕಾಶ ಭಾರತ ಕಳೆದುಕೊಂಡಿತು. 245 ರನ್ ಅಷ್ಟು ಕಳಪೆ ಸ್ಕೋರ್ ಅಲ್ಲ. ಆ ಸ್ಕೋರ್‌ನಲ್ಲೇ ಗೆದ್ದ ಟೀಮ್‌ಗಳಿವೆ. ಅದಕ್ಕೆ ಬೇಕಾದ ಬೋಲಿಂಗ್ ಅದಕ್ಕಿಂದಲೂ ಬೇಕಾಗಿರುವುದು ಫೀಲ್ಡಿಂಗ್. ಆಸ್ಟ್ರೇಲಿಯಾ ಸೆಮಿ-ಫೈನಲ್ ಮತ್ತು ಫೈನಲ್‌ನಲ್ಲಿ ಅಮೋಘವಾದ ಫೀಲ್ಡಿಂಗ್ ಮಾಡಿ ಎದುರಾಳಿಗಳನ್ನು ಸೋಲಿಸಿತು ಎಂದು ಹೇಳಬಹುದು.

ಬಾಲನ್ನು ಬೆನ್ನಟ್ಟಿ ಓಡಿ, ಕೆಳಗೆ ಬಿದ್ದು, ಮೈಯನ್ನೇ ಕೊಟ್ಟು ಅದನ್ನು ಬೌಂಡರಿಗೆ ಬಿಡದೆ ತಡೆದರು. ಎಲ್ಲಿ ಬೌಂಡರಿಗೆ ಹೋಗಿ 4 ರನ್ ಬರುತ್ತಿತ್ತೋ ಅಲ್ಲಿ ಕೇವಲ ಒಂದು ರನ್ ಕೊಡುತ್ತಿದ್ದರು! ಇದು ಆಟದ ಮೂರನೇ ತಿರುವು. ಕ್ರಿಕೆಟ್‌ನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಫೀಲ್ಡಿಂಗ್‌ನಲ್ಲೇ. ಅದು ಚೆನ್ನಾಗಿದ್ದರೆ ಎಂತಹ ಟೀಮನ್ನೂ ಸೋಲಿಸಬಹುದು. ಬಹಳ ಕಷ್ಟ ಪಟ್ಟು ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ ಅದನ್ನು ಅಂದು ಸಾಬೀತುಪಡಿಸಿತು.

ರನ್ ಚೆನ್ನಾಗಿ ಮಾಡಿ ಕೂತರೆ, ಎರಡನೇ ಟೀಮಿಗೆ ಸ್ಕೋರ್ ಬೋರ್ಡ್‌ ನೋಡುತ್ತಲೇ ಇರಬೇಕಾದ ಪರಿಸ್ಥಿತಿ ಬರುತ್ತೆ. ಆಟ ಸಾಗಿದಾಗ ಅವಶ್ಯಕವಾದ ರನ್ ಗತಿ ಮಾಡುತ್ತಿದ್ದೇವಾ ಎಂದು ಸ್ಕೋರ್ ಬೋರ್ಡ್‌ ಕಡೆ ನಿಗಾ ಇಡಬೇಕಾಗುತ್ತೆ. ಅದು ಹಿಂದಕ್ಕೆ ಬಿದ್ದರೆ ಅದರ ಒತ್ತಡ ಜಾಸ್ತಿಯಾಗಿ ವಿಕೆಟ್ ಕಳೆದುಕೊಳ್ಳುವ ಭಯ ಇರುತ್ತೆ.

ಆಸ್ಟ್ರೇಲಿಯಾ ತನ್ನ ಮೂರು ವಿಕೆಟ್‌ಗಳನ್ನು 47 ರನ್‌ಗೆ ಕಳೆದುಕೊಂಡಿತು. ಆದರೆ ಆಮೇಲೆ ಜೊತೆಯಾಗಿ ಆಡಿದ ಟ್ರಾವಿಸ್ ಹೆಡ್ ಮತ್ತು ಮಾನಸ್ ಲಾಬೂಸ್‌ಚೇನ್ ಭಾರತಕ್ಕೆ ಅವಕಾಶವನ್ನು ಮೂಸಲೂ ಬಿಡಲಿಲ್ಲ. ಹೆಡ್ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಮಾಡಿದರೆ, ಲಾಬುಚೇನ್ ಸಂಯಮದಿಂದ ಆಡುತ್ತಿದ್ದರು. ಒಟ್ಟಿನಲ್ಲಿ ಒಂದು ಕಡೆಯಿಂದ ರನ್ ಬರುತ್ತಿತ್ತು; ವಿಕೆಟ್ ಕಳೆದುಕೊಳ್ಳಲಿಲ್ಲ ಆಸ್ಟ್ರೇಲಿಯಾ.

1.3 ಲಕ್ಷ ಜನಸಾಗರ ದಿಗ್ಭ್ರಮೆಯಿಂದ ಆಟವನ್ನು ನೋಡುತ್ತಿತ್ತು. ಭಾರತ ಗೆಲ್ಲುತ್ತದೆ ಎಂಬ ಬೆಟ್ಟದಾಸೆ ತಮ್ಮ ಮುಂದೆಯೇ ಕರಗಿಹೋಯಿತು. ಆದರೆ ತನಗಾದ ನಿರಾಶೆಯನ್ನು ಅಭಿಮಾನಿಗಳು ತೋರಿಸಲಿಲ್ಲ. ಯಾಕೆಂದರೆ ಇಲ್ಲಿಯ ತನಕ ಬಹಳ ಚೆನ್ನಾಗಿ ಆಡಿ ಫೈನಲ್‌ಗೆ ಬಂದಿತ್ತು. 10ಕ್ಕೆ ಹತ್ತೂ ಗೆದ್ದ ಟೀಮಿಗೆ ಆಗುತ್ತಿರುವ ಪರಿಸ್ಥಿತಿಯನ್ನು ನೋಡಿ ಹೇಗಾಗಿರಬೇಡ? ಆ ದಿನ ಏನು ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಭಾರತದ ತಂಡಕ್ಕೆ. ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ ಬೇಕಾದ ರನ್ ಹೊಡೆದು ವಿಶ್ವ ಕಪ್ ಮತ್ತೊಮ್ಮೆ ಗೆದ್ದರು.

ನಾಯಕ ಕಮಿಂಗ್ಸ್‌ನ ಧೃಡತೆ, ಚಾಣಾಕ್ಷತನ ಆಸ್ಟ್ರೇಲಿಯ ಗೆಲ್ಲುವುದಕ್ಕೆ ಮುಖ್ಯ ಕಾರಣವಾಯಿತು. ಆಸ್ಟ್ರೇಲಿಯಾ ವೇಗದ ಬೋಲರ್‌ಗಳು ಕೊನೆಯ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಬೋಲಿಂಗ್ ಮಾಡಿದರೆ, ನಾಯಕ ಕಮಿಂಗ್ಸ್ ನಿರ್ಣಾಯಕ ಪಂದ್ಯಗಳಲ್ಲಿ ಒಳ್ಳೆಯ ಬ್ಯಾಟಿಂಗ್ ಮಾಡಿ ತನ್ನ ತಂಡವನ್ನು ಗೆಲ್ಲಿಸಿಕೊಟ್ಟನು.

ಪ್ರಧಾನಿ ಮೋದಿಯವರು ಸ್ವತಹ ಭಾರತದ ತಂಡದ ರೂಮಿಗೆ ಹೋಗಿ ಪ್ರತಿಯೊಬ್ಬ ಆಟಗಾರನನ್ನು ತಬ್ಬಿ ಹಿಡಿದು, ಬೆನ್ನ ಮೇಲೆ ತಟ್ಟಿ ಸಾಂತ್ವನವನ್ನು ಹೇಳಿದರು. ಅವರನ್ನು ಶ್ಲಾಘಿಸಿದರು. ಅಷ್ಟು ಚೆನ್ನಾಗಿ ಆಡಿ ಬಂದದ್ದಕ್ಕೆ ಅವರನ್ನು ಹಾಡಿಹೊಗಳಿದರು.

ಕೊನೆಗೆ ಆಸ್ಟ್ರೇಲಿಯಾ ಒಂದನ್ನು ಖಚಿತವಾಗಿ ಸಾಬೀತು ಪಡಿಸಿದರು. ಯಾವುದೇ ಸಂಘದಲ್ಲಿ ಆಡುವ ಆಟದಲ್ಲಿ ಹೀರೋಗಳು ಇರುವುದಿಲ್ಲ, ಅದು ಬೇಕಿಲ್ಲ. ಎಲ್ಲರೂ ಸಮ. ಒಟ್ಟಿನಲ್ಲಿ ತಮ್ಮ ಟೀಮು ಗೆಲ್ಲಬೇಕು ಎನ್ನುವ ಮಹದಾಸೆ, ಆಕಾಂಕ್ಷೆ ಉತ್ಕಟವಾಗಿರುತ್ತೆ. ಅದರ ಬಲದ ಮುಂದೆ ಬೇರೆ ಯಾವುದೂ ನಿಲ್ಲಲ್ಲ. ಗ್ಲೆನ್ ಮ್ಯಾಕಸ್ವೆಲ್ ತಮ್ಮ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವ ಪರಿಸ್ಥಿತಿಯಲ್ಲಿ ಒಮ್ಮೆ ಗೆಲ್ಲಿಸಿದರು, ಆದರೆ ಅವರನ್ನು ಹೀರೊ ಆಗಿ ಅವರನ್ನು ಆಸ್ಟ್ರೇಲಿಯಾ ಎಂದೂ ನೊಡುವುದಿಲ್ಲ, ಪರಿಗಣಿಸುವುದಿಲ್ಲ, ಹೆಡ್ ಫೈನಲ್‌ನಲ್ಲಿ ಅಮೋಘವಾಗಿ ಆಡಿ ಅವರ ಟೀಮನ್ನು ಗೆಲ್ಲಿಸಿದರು. ಆದರೆ ಅವರನ್ನು ತಲೆಯ ಮೇಲೆ ಎತ್ತಿ ಕಟ್ಟಿ ಕೂರಿಸುವುದಿಲ್ಲ! ಅವರಿಗೆ ಟೀಮ್ ಹೀರೊ, ಒಬ್ಬ ಆಟಗಾರನಲ್ಲ! ಇದನ್ನು ಎತ್ತಿತೋರಿಸಿತು ಆಸ್ಟ್ರೇಲಿಯಾ. ಇದನ್ನು ಭಾರತ ಕಲಿಯಬೇಕು. ಎಷ್ಟೇ ರನ್ ಹೊಡೆಯಲಿ, ಎಷ್ಟೇ ವಿಕೆಟ್ ತೆಗೆಯಲಿ, ಅವರು ಟೀಮ್‌ಗಿಂತ ಎತ್ತರವಾಗುವುದಿಲ್ಲ. ಬರೀ ವೈಯುಕ್ತಿಕ ದಾಖಲೆಗಳಿಂದ ಟೀಮ್ ಕಪ್‌ಗಳನ್ನು ಗೆಲ್ಲುವುದಿಲ್ಲ. ಅದನ್ನು/ಅವರನ್ನು ತಲೆಯ ಮೇಲೆ ಎತ್ತಿ ಕೂಡಿಸಬಾರದು. ಟೀಮಿನ ಮುಖ್ಯ, ಅತಿಮುಖ್ಯ ಹೀರೊ ಟೀಮ್! ಅದನ್ನು ಕಂಡುಕೊಂಡವರಲ್ಲಿ ಟೀಮ್ ವರ್ಕ, ಟೀಮ್ ಸ್ಪಿರಿಟ್ ಜಾಸ್ತಿ ಇರುತ್ತೆ. ಗೆಲುವು ಅವರನ್ನು ಬೆನ್ನಟ್ಟಿ ಬರುತ್ತೆ.

ಆಸ್ಟ್ರೇಲಿಯಾ 6 ನೇ ಬಾರಿ ವಿಶ್ವ ಕಪ್ ಗೆದ್ದು ಬೀಗಿತು. ಭಾರತ ಬಹಳ ಚೆನ್ನಾಗಿ ಆಡಿ ಕೊನೆಯ ಹಂತದಲ್ಲಿ ಮುಗ್ಗರಿಸಿತು. ಆಟದಲ್ಲಿ ಹಾಗಾಗುತ್ತೆ ಕೆಲವು ಸಲ. ಆದರೆ ಅದರಿಂದ ಕಲಿಯುವ ಪಾಠವೇನೆಂದರೆ, ಟೀಮ್ ಸ್ಪಿರಿಟ್. ಅದು ಬಲವಾಗಿದ್ದರೆ ಎಂತಹ ಪರಿಸ್ಥಿತಿಯಲ್ಲೂ ಅದನ್ನು ಎದುರಿಸುವ ಬಲ ತಾನಾಗಿಯೇ ಬರುತ್ತೆ. ಹಾಗಾದಾಗ ವಿಜಯಮಾಲೆ ಕೊರಳಿಗೆ ಬರುವ ಸಾಧ್ಯತೆ ಹೆಚ್ಚು. ಅದಕ್ಕೇ 6 ಬಾರಿ ಆಸ್ಟ್ರೇಲಿಯಾ ವಿಶ್ ಕಪ್ ಗೆದ್ದಿದೆ.

ಇದರ ಪಾಠ ಆಸ್ಟ್ರೇಲಿಯಾ ಅಂದು ಭಾರತಕ್ಕೆ ಕಲಿಸಿತು.

*****

ಸುಮಾರು ಒಂದು ವರ್ಷದ ಮೇಲೆ ಕ್ರಿಕೆಟ್ ಮೇಲೆ ‘ಕ್ರಿಕೆಟಾಯ ನಮಃ’ ಎನ್ನುವ ಶೀರ್ಷಿಕೆಯಲ್ಲಿ ಪ್ರತಿ ಪಕ್ಷದಲ್ಲಿ ಬರೆಯುವ ಸೌಭಾಗ್ಯ ನನ್ನದಾಗಿತ್ತು. ಇದನ್ನು ಕಲ್ಪಿಸಿಕೊಟ್ಟ ಕೆಂಡಸಂಪಿಗೆಯ ಸಂಪಾದಕರಿಗೆ, ಸಂಪಾದಕ ಮಂಡಳಿಗೆ ಹಾಗೂ ಆಡಳಿತ ವರ್ಗದವರಿಗೆ ಮತ್ತು ಓದುಗರಿಗೆ ನನ್ನ ಹುತ್ಪೂರ್ವಕವಾದ ಧನ್ಯವಾದಗಳು. ನಮಸ್ಕಾರ.