ಅನೇಕ ದಶಕಗಳ ಹಿಂದೆ ಹೀಗೆ ಬಿಸಿಲಲ್ಲಿ ಕುಳಿತು ಮಾತನಾಡಿದ ಬಸುರಿಯರ ಮಕ್ಕಳೀಗ ಸಮಾಜವೆಂಬ ಇರುವೆ ಸಾಲಿನ ಭಾಗವಾಗಿಯೂ, ತಮ್ಮದೇ ಸ್ವಾತಂತ್ರ್ಯದ ಹಾದಿಯನ್ನು ಹುಡುಕಿಕೊಂಡು, ತಾವಿರುವೆಡೆಯಲ್ಲೆಲ್ಲಾ ಪ್ರೀತಿಯ ಧಾರೆಯನ್ನೇ ಹಂಚುತ್ತಾ ಸಾಗಿದ್ದಾರೆ. ಒಡಲೊಳಗೆ ಮಗುವನ್ನು ಹೊತ್ತ ತಾಯಂದಿರ ಬೇಗೆ ಮಾತ್ರ ಎಷ್ಟೇ ಕಾಲ ಸರಿದರೂ ಹೀಗೆಯೇ ಮುಂದುವರೆಯುವುದೇನೋ ಎಂದು ಅನಿಸುತ್ತಲೇ ಇರುತ್ತದೆ. ಹಾಗೆ ನನ್ನ ಮಗುವಿಗೆ ನಾನೇನಾದರೂ ಕಥೆಯನ್ನು ಹೇಳುವಂತಿದ್ದರೆ ಮೇಲೆ ಬರೆದ ಕಥೆಯನ್ನು ಹೇಳುತ್ತಿದ್ದೆ ಮತ್ತು ಕೊನೆಯಲ್ಲಿ ಅವಳಂತೆಯೇ ಒಂದು ವಾಕ್ಯವನ್ನು ಸೇರಿಸುತ್ತಿದ್ದೆ, ಆ ಇಬ್ಬರಲ್ಲಿ ನಾನೂ ಒಬ್ಬಳಾಗಿದ್ದೆ ಎಂದು.
ಸುಧಾ ಆಡುಕಳ ಅನುವಾದಿಸಿದ ಒರಿಯಾನ ಫಲಾಚಿ ಕಾದಂಬರಿ “ಎಂದೂ ಹುಟ್ಟದ ಮಗುವಿಗೆ ಪತ್ರ”ಕ್ಕೆ ಬರೆದ ಅವರ ಮಾತುಗಳು ಇಲ್ಲಿವೆ

ಅದೊಂದು ಬೇಸಿಗೆಯ ನಡುಮಧ್ಯಾಹ್ನ. ಸುಡುಬಿಸಿಲಿನಲ್ಲಿ ನಿಂತ ಉಬ್ಬಿದ ಹೊಟ್ಟೆಯ ಎಳೆವಯಸ್ಸಿನ ಹೆಂಗಳೆಯರಿಬ್ಬರು ಬಸ್ಸಿಗಾಗಿ ಕಾಯುತ್ತಿದ್ದರು. ಮೊದಲೆಲ್ಲೋ ಒಬ್ಬರನ್ನೊಬ್ಬರು ನೋಡಿದ ಗುರುತಿತ್ತಾದರೂ ಮಾತನಾಡುವಷ್ಟು ಸಲಿಗೆಯೇನೂ ಇರಲಿಲ್ಲ. ಬರಬೇಕಾದ ಸಮಯಕ್ಕೆ ಬಾರದ ಬಸ್ಸು ಮತ್ತು ಒಡಲಲ್ಲಿರುವ ಕೂಸಿನಂತೆಯೇ ಬೆಳೆಯುತ್ತಿರುವ ಅಭದ್ರತೆಯ ಭಾವಗಳು ಅವರಿಬ್ಬರನ್ನೂ ಆ ಕ್ಷಣದಲ್ಲಿ ಆತ್ಮೀಯರನ್ನಾಗಿಸಿಬಿಟ್ಟವು. ಬಸ್ಸಿಗೆ ಕಾಯುತ್ತಿರುವ ಬಿರುಬಿಸಿಲಿನ ಮಧ್ಯಾಹ್ನದಲ್ಲಿ ಅವರು ತಮ್ಮ ಮನಸ್ಸಿನ ಬೇಗುದಿಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡರು.

(ಒರಿಯಾನ ಫಲಾಚಿ)

ಮೊದಲನೆಯವಳು ಮಾತನ್ನು ಶುರುವಿಟ್ಟುಕೊಂಡಳು, “ಮರಿಯಿಡುವ ಕಾಲಕ್ಕೆ ಮನೆಯಿಂದ ಮನೆಗೆ ಅಲೆಯುವ ಬೆಕ್ಕಿನಂತಾಗಿದೆ ನನ್ನ ಸ್ಥಿತಿ. ಉಬ್ಬಿದ ಹೊಟ್ಟೆಯನ್ನು ನೋಡಿಯೇ ಹೊರಗೋಡಿಸುವವರಂತೆ ಎಲ್ಲರೂ ನನ್ನನ್ನು ದೂರತಳ್ಳುತ್ತಿದ್ದಾರೆ ಅನಿಸುತ್ತಿದೆ. ಮನೆಯೊಳಗೆ ಬೇಕಷ್ಟು ಸ್ಥಳವಿದ್ದರೂ ಸುಮ್ಮನೆ ಈ ಬೆಕ್ಕಿಗೆ ಹೆರಲು ಜಾಗ ಕೊಟ್ಟು ಹೊಲಸು ಮಾಡಿಕೊಳ್ಳಲು ಅವರ‍್ಯಾರೂ ತಯಾರಿದ್ದಂತಿಲ್ಲ. ಸೆರಗು ಹಾಸುವಷ್ಟೇ ಜಾಗವಿದ್ದರೂ ಅದರಲ್ಲಿಯೇ ತನ್ನ ಮಕ್ಕಳನ್ನು ಜೋಪಾನ ಮಾಡುವ ತಾಯಿಯ ಆಸರೆಯೂ ಇಲ್ಲ. ಬೆಕ್ಕಿಗಾದರೆ ಯಾರು ಏನೆಂದಾರೆಂಬ ಜಗದ ಗೊಡವೆಯಿರುವುದಿಲ್ಲ. ಆದರೆ ಮನುಷ್ಯ ಲೋಕದ ಕಟ್ಟುಪಾಡುಗಳ ಬಿಗಿ ನನ್ನನ್ನು ಉಸಿರುಗಟ್ಟಿಸುತ್ತಿದೆ. ಮಗುವನ್ನು ಹೆರುವ ಭಯವೇನೂ ನನ್ನನ್ನು ಕಾಡುತ್ತಿಲ್ಲ. ಮೊದಲ ಹೆರಿಗೆ ಇಲ್ಲೇ ಆಗಬೇಕು, ಅಲ್ಲೇ ಆಗಬೇಕು ಎಂಬ ಕಟ್ಟುಪಾಡುಗಳಿಗೆ ಉತ್ತರಗಳನ್ನು ಹೇಗೆ ಕಂಡುಕೊಳ್ಳುವುದು? ಈ ಮಗು, ಈ ಜೀವನ, ಈ ನರಕ ಎಲ್ಲವೂ ಈ ಕ್ಷಣಕ್ಕೇ ಮುಗಿದುಹೋಗಬಾರದೆ ಎಂದೆನಿಸುತ್ತದೆ.”

ಕಣ್ಣೀರಾದವಳ ಅಂಗೈಯ್ಯನ್ನು ಮೆಲ್ಲನೆ ಒತ್ತುತ್ತಾ ಎರಡನೆಯವಳು ತನ್ನ ಮಾತನ್ನು ಪ್ರಾರಂಭಿಸಿದಳು, “ಹೆರಿಗೆಗೇನೋ ಒಂದು ನೆಲೆಯನ್ನು ಕಂಡುಕೊಂಡಾಗಿದೆ. ಅದಕ್ಕೆಂದೇ ದೂರದ ನಗರದಿಂದ ಇಲ್ಲಿಗೆ ಬಂದಿರುವೆ. ಈಗ ಇನ್ನೊಂದು ಕಟ್ಟುಪಾಡಿನ ಚಿಂತೆ. ಚೊಚ್ಚಲ ಬಸುರಿಗೆ ಸೀಮಂತವಿಲ್ಲದೇ ಇರಬಾರದೆಂದು ಗಂಡನ ಮನೆಯವರು ಪಟ್ಟು ಹಿಡಿದಿದ್ದಾರೆ. ಕಷ್ಟದಲ್ಲಿ ಬಾಣಂತನ ಮಾಡಲು ಒಪ್ಪಿದವರೆದುರು ಇನ್ನೊಂದು ಅಹವಾಲನ್ನು ಹೇಗೆ ಮಂಡಿಸುವುದು? ವ್ಯಸ್ತಗೊಂಡ ಕುಟುಂಬದಲ್ಲಿ ಮಗುವೆಂಬುದೊಂದು ಯಾಕಾದರೂ ಹುಟ್ಟುತ್ತದೆಯೋ? ಅನಿಸುತ್ತದೆ. ಯೋಚಿಸಿದಷ್ಟು ತಲೆ ಚಿಟ್ಟು ಹಿಡಿದು ಹೋಗುತ್ತಿದೆ. ನಿನ್ನೆ ಇಲ್ಲಿಗೆ ಬರುವಾಗ ನಾನು ಹತ್ತಿದ ವಾಹನ ಅಪಘಾತಕ್ಕೀಡಾಯಿತು. ನನಗಂತೂ ಆ ಕ್ಷಣದಲ್ಲಿ ಅದೆಷ್ಟು ಸಂತೋಷವಾಯಿತೆಂದರೆ ಖಂಡಿತವಾಗಿಯೂ ನಾನು ಸತ್ತುಬಿಡುತ್ತೇನೆಂದು ನೆಮ್ಮದಿಯಿಂದ ಕಣ್ಮುಚ್ಚಿ ಕುಳಿತೆ. ಮೂರು ಪಲ್ಟಿ ಹೊಡೆದು ಗಾಡಿ ಬಿದ್ದರೂ ತರಚು ಗಾಯವೂ ಆಗದೇ ಪಾರಾಗಿ ಉಳಿದೆ. ನನಗೆ ಸಾವೇ ಇಲ್ಲವೇನೋ ಅನಿಸುತ್ತಿದೆ.”

ಅನೇಕ ದಶಕಗಳ ಹಿಂದೆ ಹೀಗೆ ಬಿಸಿಲಲ್ಲಿ ಕುಳಿತು ಮಾತನಾಡಿದ ಬಸುರಿಯರ ಮಕ್ಕಳೀಗ ಸಮಾಜವೆಂಬ ಇರುವೆ ಸಾಲಿನ ಭಾಗವಾಗಿಯೂ, ತಮ್ಮದೇ ಸ್ವಾತಂತ್ರ್ಯದ ಹಾದಿಯನ್ನು ಹುಡುಕಿಕೊಂಡು, ತಾವಿರುವೆಡೆಯಲ್ಲೆಲ್ಲಾ ಪ್ರೀತಿಯ ಧಾರೆಯನ್ನೇ ಹಂಚುತ್ತಾ ಸಾಗಿದ್ದಾರೆ. ಒಡಲೊಳಗೆ ಮಗುವನ್ನು ಹೊತ್ತ ತಾಯಂದಿರ ಬೇಗೆ ಮಾತ್ರ ಎಷ್ಟೇ ಕಾಲ ಸರಿದರೂ ಹೀಗೆಯೇ ಮುಂದುವರೆಯುವುದೇನೋ ಎಂದು ಅನಿಸುತ್ತಲೇ ಇರುತ್ತದೆ. ಈ ಕಾದಂಬರಿಯಲ್ಲಿ ಬರುವ ತಾಯಿ ತನ್ನ ಹೊಟ್ಟೆಯೊಳಗಿರುವ ಮಗುವಿಗೆ ಅನೇಕ ಕಿನ್ನರ ಕಥೆಗಳನ್ನು ಹೇಳುತ್ತಾಳೆ. ಹಾಗೆ ನನ್ನ ಮಗುವಿಗೆ ನಾನೇನಾದರೂ ಕಥೆಯನ್ನು ಹೇಳುವಂತಿದ್ದರೆ ಮೇಲೆ ಬರೆದ ಕಥೆಯನ್ನು ಹೇಳುತ್ತಿದ್ದೆ ಮತ್ತು ಕೊನೆಯಲ್ಲಿ ಅವಳಂತೆಯೇ ಒಂದು ವಾಕ್ಯವನ್ನು ಸೇರಿಸುತ್ತಿದ್ದೆ, ಆ ಇಬ್ಬರಲ್ಲಿ ನಾನೂ ಒಬ್ಬಳಾಗಿದ್ದೆ ಎಂದು.

(ಸುಧಾ ಆಡುಕಳ)

‘ಎಂದೂ ಹುಟ್ಟದ ಮಗುವಿಗೆ ಪತ್ರ’ ಇದು ಇಟಾಲಿಯನ್ ಕಾದಂಬರಿಗಾರ್ತಿ ಮತ್ತು ಪತ್ರಕರ್ತೆ ಒರಿಯಾನ ಫಲಾಚಿಯವರ ಅದ್ಭುತವಾಧ ಮತ್ತು ಅಷ್ಟೇ ಪ್ರಚೋದನಾಕಾರಿಯಾದ ಕಾದಂಬರಿಯಾಗಿದೆ. ಜೀವವೊಂದನ್ನು ಭೂಮಿಗೆ ತರಬೇಕೆ ಅಥವಾ ಬೇಡವೇ ಎಂಬ ಪ್ರಪಂಚದಷ್ಟೇ ಹಳೆಯದಾದ ಪ್ರಶ್ನೆಯ ಕುರಿತು ಈ ಕಾದಂಬರಿಯು ಚರ್ಚಿಸುತ್ತದೆ. ಕಾದಂಬರಿಯಲ್ಲಿ ಹೆಣ್ಣೊಬ್ಬಳು ತಾನು ಗರ್ಭಿಣಿಯೆಂದು ತಿಳಿದ ಕ್ಷಣದಿಂದ ತನ್ನ ಸ್ವಗತವನ್ನು ಪ್ರಾರಂಭಿಸುತ್ತಾಳೆ. ಅದನ್ನವಳು ತನ್ನೊಡಲಿನಲ್ಲಿ ಬೆಳೆಯುತ್ತಿರುವ ಮಗುವಿಗೆ ಹೇಳುತ್ತಿರುವಂತೆ ನಿರೂಪಿಸುತ್ತಾಳೆ. ಮಗುವನ್ನು ಪಡೆಯಬೇಕೆಂಬ ತಾಯಿಯ ಬಯಕೆಯು ಮಗುವೊಂದನ್ನು ಹುಟ್ಟಿಸುವುದಕ್ಕೆ ಬೇಕಾದ ಸಮರ್ಥನೆಯಾಗುತ್ತದೆಯೇ? ಎಂಬ ನೋವಿನ ಪ್ರಶ್ನೆಯನ್ನು ಅವಳು ತನಗೆ ತಾನೇ ಕೇಳಿಕೊಳ್ಳುತ್ತಾಳೆ. ಉತ್ತರವನ್ನು ಕಂಡುಕೊಳ್ಳುವ ವಿರೋಧಾಭಾಸದ ನಡುವೆಯೇ ಅವಳು ಮಗುವಿಗೆ ಈ ಲೋಕದ ವಾಸ್ತವಗಳನ್ನು ಅರ್ಥಮಾಡಿಸಲು ಪ್ರಯತ್ನಿಸುತ್ತಾಳೆ. ಇಲ್ಲಿ ಬದುಕಬೇಕೆಂದರೆ ಹಿಂಸೆ, ಸ್ವಾತಂತ್ರ್ಯವೆಂದರೆ ಕನಸು, ನ್ಯಾಯವೆಂಬುದು ವಂಚನೆ, ನಾಳೆಯೆಂಬುದು ನಿನ್ನೆ ಮತ್ತು ಪ್ರೀತಿಯೆಂದರೆ ಅಸ್ಪಷ್ಟ ಹುಡುಕಾಟ ಹೀಗೆ ವಿವರಿಸುತ್ತಲೇ ಅವಳೊಂದು ಮುಖ್ಯವಾದ ಸವಾಲಿಗೆ ಮುಖಾಮುಖಿಯಾಗುತ್ತಾಳೆ. ಇನ್ನೂ ಅಸ್ತಿತ್ವದಲ್ಲಿಲ್ಲದ ಜೀವವೊಂದಕ್ಕಾಗಿ ಒಬ್ಬ ವ್ಯಕ್ತಿ ತನ್ನ ಜೀವವನ್ನೇ ತ್ಯಾಗ ಮಾಡಬೇಕೆ?

ಇಲ್ಲಿ ತಾಯಿಯ ಸ್ವಗತವು ಅವಳಿಗೆ ಅವಳೇ ಮಾಡಿಕೊಳ್ಳುವ ನಿವೇದನೆಯಂತಿದೆ. ಕಾದಂಬರಿಯ ಬಹಳ ಮುಖ್ಯ ಭಾಗವೆಂದರೆ ತಾಯಿಯ ವಿಚಾರಣೆ. ಅವಳ ಜೀವನದಲ್ಲಿ ಬರುವ ಏಳು ಜನರು ಒಟ್ಟಾಗಿ ಇಲ್ಲಿ ತಾಯಿಯಾಗಬೇಕಿದ್ದ ಮಹಿಳೆಯನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ನಡೆಸುತ್ತಾರೆ. ಅರಿವಿಗೆ ಬರದ ಅಸಾಧ್ಯ ಸಂಬಂಧಗಳ ನಡುವಿನ ಪ್ರೀತಿ-ದ್ವೇಷ, ಮೃದುತ್ವ-ಕಾಠಿಣ್ಯಗಳ ನಡುವೆ ಹೊಯ್ದಾಡುತ್ತ ಮಹತ್ವದ ತೀರ್ಮಾನವೊಂದಕ್ಕೆ ಬರುತ್ತಾರೆ. ತಾಯ್ತನದ ಅನನ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಅದರಿಂದ ತಾಯಿಯೊಬ್ಬಳು ವಂಚಿತವಾಗುವ ತಿರುವೊಂದನ್ನು ಕಾದಂಬರಿ ಪಡೆದುಕೊಳ್ಳುತ್ತದೆ.

ಚೊಚ್ಚಲ ಬಸುರಿಗೆ ಸೀಮಂತವಿಲ್ಲದೇ ಇರಬಾರದೆಂದು ಗಂಡನ ಮನೆಯವರು ಪಟ್ಟು ಹಿಡಿದಿದ್ದಾರೆ. ಕಷ್ಟದಲ್ಲಿ ಬಾಣಂತನ ಮಾಡಲು ಒಪ್ಪಿದವರೆದುರು ಇನ್ನೊಂದು ಅಹವಾಲನ್ನು ಹೇಗೆ ಮಂಡಿಸುವುದು? ವ್ಯಸ್ತಗೊಂಡ ಕುಟುಂಬದಲ್ಲಿ ಮಗುವೆಂಬುದೊಂದು ಯಾಕಾದರೂ ಹುಟ್ಟುತ್ತದೆಯೋ? ಅನಿಸುತ್ತದೆ. ಯೋಚಿಸಿದಷ್ಟು ತಲೆ ಚಿಟ್ಟು ಹಿಡಿದು ಹೋಗುತ್ತಿದೆ.

ಈ ಹಂತದಲ್ಲಿ ತಾಯಿಯು ತನ್ನ ಅಂತಿಮ ಸವಾಲನ್ನು ಮಗುವಿನ ಮುಂದಿಡುತ್ತಾಳೆ. ಮಗುವಿನ ಷರತ್ತಿಗೆ ಒಪ್ಪದೇ ಇರುವ ಹಕ್ಕು ತಾಯಿಗಿದೆಯೆ? ಮತ್ತು ತಾನು ಅಸ್ತಿತ್ವದಲ್ಲಿರಬೇಕೆ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಹಕ್ಕು ಮಗುವಿಗಿದೆಯೆ? ಎಂದು. ಅಂತಿಮವಾಗಿ ಮಗುವೇ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಮತ್ತು ಆ ತೀರ್ಮಾನವು ಅದು ತನಗಾಗಿ ಮಾತ್ರ ತೆಗೆದುಕೊಂಡ ತೀರ್ಮಾನವಾಗಿರುವುದಿಲ್ಲ. ತನ್ನ ಪ್ರತಿ ಕೃತಿಯಲ್ಲಿಯೂ ಓದುಗರನ್ನು ಚಿಂತನೆಗೆ ಉದ್ದೀಪಿಸುವ ಫಲಾಚಿಯವರು ಈ ಜಗತ್ತು ಹುಟ್ಟಿದಾಗಿನಿಂದಲೂ ಪರಂಪರೆಯ ನೆಪದಲ್ಲಿ ಬೆಳೆದು ಬಂದಿರುವ ಅನೇಕ ನಂಬಿಕೆಗಳನ್ನು ಈ ಕಾದಂಬರಿಯಲ್ಲಿ ದಿಟ್ಟವಾಗಿ ಪ್ರಶ್ನಿಸುತ್ತಾರೆ. ತಾಯಿಯೊಬ್ಬಳ ಒಡಲಾಳದ ಸಂದಿಗ್ಧಗಳನ್ನು ಪರಿಣಾಮಕಾರಿಯಾಗಿ ಓದುಗರ ಎದೆಗೆ ದಾಟಿಸುತ್ತಾರೆ. ಈ ಕಾದಂಬರಿಯು ತಾಯ್ತನವನ್ನು ಧಾರ್ಮಿಕ, ತಾತ್ವಿಕ, ಭಾವಪ್ರಧಾನ, ರಾಜಕೀಯ, ವೈಯಕ್ತಿಕ ಮತ್ತು ಪಾವಿತ್ರ್ಯದ ನೆಲೆಯಲ್ಲಿ ಚರ್ಚಿಸುತ್ತದೆ. ವಿಚಾರಪ್ರಚೋದಕವಾದ ಇನ್ನೂ ಅನೇಕ ಆಯಾಮಗಳು ಈ ಕಾದಂಬರಿಗಿವೆ.

ನಿಜವಾಗಿ ನೋಡಿದರೆ ನಾಗರಿಕತೆಯ ಓಟ ನಮ್ಮ ನಾಳೆಗಳನ್ನು ಇನ್ನಷ್ಟು ಭರವಸೆಯ ಕಡೆಗೆ ಕೊಂಡೊಯ್ಯಬೇಕಿತ್ತು. ಆದರೆ ಅದರ ಚಕ್ರವು ಹಿಂಸೆ, ಮೌಢ್ಯ, ಮೂಲಭೂತವಾದದ ಕೆಸರಿನಲ್ಲಿ ಸಿಕ್ಕಿ ಹಿಮ್ಮರಳುವಂತಿದೆ. ಈ ಎಲ್ಲ ಹಿಮ್ಮರಳುವಿಕೆಯ ಮೊದಲ ಬಲಿಪಶುಗಳು ಹೆಣ್ಣುಗಳು ಮತ್ತು ಇತ್ತೀಚೆಗೆ ಇವೆಲ್ಲವುಗಳ ವಿರುದ್ಧ ಮುಂಚೂಣಿಯಲ್ಲಿ ನಿಂತು ಸೆಣಸುತ್ತಿರುವವರು ಕೂಡ ಅವರೆ. ಹಿಂಸೆ ಮತ್ತು ಕ್ರೌರ್ಯದ ವಿರುದ್ಧ ಹೋರಾಡಿ ಗೆಲ್ಲುವುದು ತಾಯ್ತನದ ಮೃದುತ್ವಕ್ಕೆ ಮಾತ್ರವೇ ಸಾಧ್ಯ ಎಂಬುದು ಅನುಗಾಲದ ನಂಬಿಕೆ. ಇಂದು ಇಡಿಯ ಜಗತ್ತು ಹೆಣ್ತನದ ಮೃದುತ್ವಕ್ಕಾಗಿ ಮತ್ತು ತಾಯ್ತನದ ಮಮತೆಗಾಗಿ ಕಾಯುತ್ತಿದೆ ಎಂಬುದು ಸುಳ್ಳಲ್ಲ. ಕಳೆದ ಐದು ವರ್ಷಗಳಿಂದ ವ್ರತಕ್ಕೆ ಬಿದ್ದವರಂತೆ ಹೆಣ್ಣಿನ ಗಾಥೆಯನ್ನು ಒಂದರ ಮೇಲೊಂದರಂತೆ ರಂಗದ ಮೇಲೆ ಹಾಡುತ್ತಿರುವ ಡಾ|ಶ್ರೀಪಾದ ಭಟ್ಟರ ಹುಡುಕಾಟದಲ್ಲಿ ಆಕಸ್ಮಿಕವಾಗಿ ಕೈಗೆಟುಕಿದ ಪುಸ್ತಕವಿದು. ಓದುತ್ತ ಹೋದಂತೆ ಪ್ರತಿಮೆಗಳ ರಾಶಿಯನ್ನೇ ತನ್ನೊಡಲಿನಲ್ಲಿ ಬಚ್ಚಿಟ್ಟುಕೊಂಡಿರುವ ಇದರೊಳಗಿನ ಉಪಕತೆಗಳೆಲ್ಲವೂ ರಂಗನಾಟಕವೊಂದಕ್ಕೆ ಹೇಳಿಮಾಡಿಸಿದಂತಿವೆಯೆಂದು ಸರಸರನೆ ಕನ್ನಡದಲ್ಲಿ ಬರೆದಾಯಿತು. ಮನಸೆಳೆದ ಕೆಲವು ವಾಕ್ಯಗಳನ್ನು ಮುಖಹೊತ್ತಿಗೆಯಲ್ಲಿ ತೇಲಿಬಿಟ್ಟಾಗ ಇದನ್ನು ಪ್ರಕಟಿಸುವ ಭರವಸೆಯನ್ನು ವ್ಯಕ್ತಪಡಿಸಿದವರು ಲಡಾಯಿ ಪ್ರಕಾಶನದ ಬಸೂ ಅವರು. ಅವರ ಈ ಒತ್ತಾಸೆಯಿಂದ ಇಡಿಯ ಪುಸ್ತಕವನ್ನು ಕನ್ನಡಕ್ಕೆ ತರಲು ಸಾಧ್ಯವಾಯಿತು. ಇಲ್ಲವಾದಲ್ಲಿ ರಂಗಪ್ರಯೋಗಕ್ಕೆ ಬೇಕಾದ್ದನ್ನಷ್ಟೇ ಸಂಗ್ರಹಿಸಿ, ಪುಸ್ತಕದ ಪುಟಗಳನ್ನು ಮುಚ್ಚಿಬಿಡುತ್ತಿದ್ದೆನೇನೋ? ಅದಕ್ಕಾಗಿ ಲಡಾಯಿ ಪ್ರಕಾಶನ ಮತ್ತು ಅವರ ಎಲ್ಲ ಬಳಗಕ್ಕೆ ಮೊದಲ ಶರಣು.

ಈ ಕಾದಂಬರಿಯಲ್ಲಿ ಬರುವ ವೈಜ್ಞಾನಿಕ ವಿವರಣೆಗಳು, ದುಡಿಯುವ ಮಹಿಳೆಯ ಕಷ್ಟಗಳು, ಬಾಡಿಗೆ ತಾಯ್ತನದ ಪ್ರಸ್ತಾಪಗಳು ಎಲ್ಲವೂ ಇದು ಇತ್ತೀಚೆಗಷ್ಟೇ ರಚನೆಯಾದ ಕಾದಂಬರಿಯಿರಬಹುದೆಂಬ ಭಾವನೆಯನ್ನು ಹುಟ್ಟಿಸಿದ್ದವು. ಭಾಷಾಂತರಕ್ಕೆಂದು ಕಾದಂಬರಿಕಾರ್ತಿಯ ಪರಿಚಯವನ್ನು ಓದುವಾಗ ಇದನ್ನು ಅವರು 1974ರಲ್ಲಿ ಬರೆದದ್ದು ಎಂಬ ವಿಷಯ ನನ್ನನ್ನು ಅಚ್ಚರಿಯ ಕಡಲಿನಲ್ಲಿ ಮುಳುಗಿಸಿತು. ಈಗ್ಗೆ ಅರ್ಧಶತಮಾನದಷ್ಟು ಹಿಂದೆಯೇ ಇಷ್ಟೊಂದು ಆಧುನಿಕವಾಗಿ ಯೋಚಿಸಲು ಸಾಧ್ಯವೆ? ಎಂಬ ಬೆರಗು ನನ್ನನ್ನು ಆವರಿಸಿತು ಅಥವಾ ನಾವಿನ್ನೂ ಅರ್ಧ ಶತಮಾನದಷ್ಟು ಹಿಂದಿದ್ದೇವೆಯೆ? ಭಾರತ ಮತ್ತು ಫಲಾಚಿಯವರಿಗೆ ಒಂದು ವಿಶೇಷವಾದ ನಂಟು ಇದೆ. ಇಂಡೋ-ಪಾಕಿಸ್ತಾನ ಯುದ್ಧದ ವರದಿಗಾಗಿ ಭಾರತಕ್ಕೆ ಅನೇಕ ಸಲ ಭೇಟಿಯಿತ್ತ ಫಲಾಚಿಯವರು ಬಾಂಗ್ಲಾ ವಿಮೋಚನೆಯ ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಸುದೀರ್ಘವಾದ ಸಂದರ್ಶನವನ್ನೂ ನಡೆಸಿದ್ದರು. ಮುರಾರ್ಜಿ ದೇಸಾಯಿಯವರನ್ನೂ ಅವರು ಸಂದರ್ಶಿಸಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದಾಗಿದೆ. ಅವರ ಭಾರತ ಭೇಟಿಯ ಕುರುಹೋ ಎಂಬಂತೆ ಈ ಕಾದಂಬರಿಯಲ್ಲಿ ತಾಯಿಯು ತನ್ನ ಮಗುವಿಗೆ ಭಾರತೀಯ ಶೈಲಿಯ ತೊಟ್ಟಿಲನ್ನು ಕೊಳ್ಳುವ ಪ್ರಸ್ತಾಪವು ಬರುತ್ತದೆ.

ಮಗುವನ್ನು ಹುಟ್ಟಿಸಬೇಕೊ, ಬೇಡವೋ? ಮಗುವನ್ನು ಬೆಳೆಸುವ ಜವಾಬ್ದಾರಿಯಲ್ಲಿ ಅಪ್ಪನ ಪಾಲೆಷ್ಟು, ಅಮ್ಮನ ಪಾಲೆಷ್ಟು? ಮದುವೆಯಾಗುವುದು ಮಗುವನ್ನು ಪಡೆಯಲೋ ಅಥವಾ ಸಾಂಗತ್ಯಕ್ಕೋ? ಮಗು ಹೆಣ್ಣಾದರೆ ಒಳಿತೋ ಅಥವಾ ಗಂಡಾಗಬೇಕೋ? ದುಡಿಯುವ ಮಹಿಳೆಯ ಮೊದಲ ಪ್ರಾಶಸ್ತ್ಯ ಅವಳ ಕುಟುಂಬವೋ ಅಥವಾ ಕೆಲಸವೋ? ಹೀಗೆ ಪ್ರಪಂಚ ಹುಟ್ಟಿದಾಗಿನಿಂದಲೇ ನಮ್ಮನ್ನು ಹಿಂಬಾಲಿಸಿಕೊಂಡು ಬಂದಿರುವ ಅನೇಕ ಪ್ರಶ್ನೆಗಳು ಇಂದಿಗೂ ಪ್ರಶ್ನೆಗಳಾಗಿಯೇ ಉಳಿದುಕೊಂಡಿವೆ. ಅವುಗಳಿಗೆಲ್ಲ ಉತ್ತರವನ್ನು ಕಂಡುಕೊಳ್ಳುವ ಜಿಜ್ಞಾಸೆಯು ಕಾದಂಬರಿಯುದ್ದಕ್ಕೂ ಕಥೆಯಾಗಿ ಹರಿದಿದೆ. ಪ್ರತಿವಾಕ್ಯವನ್ನು ಓದುವಾಗಲೂ ಹಳೆಯ ನೋವೊಂದು ಮತ್ತೆ ಮರುಕಳಿಸಿದಂತಹ ತಲ್ಲಣವನ್ನು ನಾನಂತೂ ಅನುಭವಿಸಿರುವೆ, ಏಕೆಂದರೆ ಈ ಜಗತ್ತಿನಲ್ಲಿ ಕೆಲವರಿಗೆ ಬಸುರಿತನವೆಂದರೆ ಒಂದು ಬೆರಗು ಮತ್ತು ಮೆರಗು, ಆದರೆ ಅನೇಕರಿಗೆ ಅದೊಂದು ಭರಿಸಲಾರದ ಕೊರಗು. ಒಡಲಿನಲ್ಲಿ ಮಗುವೊಂದನ್ನು ಹೊತ್ತು, ಕಂಕುಳಲ್ಲಿ ಕೂಸೊಂದನ್ನು ಎತ್ತಿಕೊಂಡು, ಕೈಯ್ಯಲ್ಲಿ ಬುತ್ತಿಯ ಗಂಟನ್ನು ಇಟ್ಟು ಕೂಲಿಗಾಗಿ ಕಾಯುತ್ತಿರುವ ಅಮ್ಮಂದಿರ ದೃಶ್ಯ ಪ್ರತಿದಿನವೂ ಕಣ್ಮುಂದೆ ಗೋಚರಿಸುತ್ತಲೇ ಇರುತ್ತದೆ. ಮತ್ತದು ಇನ್ನೂ ಎಷ್ಟೋ ವರ್ಷಗಳ ಕಾಲ ಮುಂದುವರೆಯುತ್ತದೆ. ‘ಹ್ಯಾಪಿ ಕಪಲ್ ವಿತ್ ನೋ ಚೈಲ್ಡ್’ ಎಂಬ ಹೊಸ ಮಾದರಿಯ ದಾಂಪತ್ಯವೂ ಜಾರಿಗೆ ಬರುತ್ತಿದ್ದು ಮುಂದೆ ಯಾವ ತಿರುವನ್ನು ಪಡೆಯುವುದೋ ಕಾದು ನೋಡಬೇಕಿದೆ. ತಾಯ್ತನವೆಂದರೆ ಹೆಣ್ಣೊಬ್ಬಳು ನಿರ್ವಹಿಸಬೇಕಾದ ಕರ್ತವ್ಯವಲ್ಲ, ಜೈವಿಕ ಜವಾಬ್ದಾರಿಯೂ ಅಲ್ಲ, ಅದು ಹೆಣ್ಣೊಬ್ಬಳ ವೈಯಕ್ತಿಕವಾದ ಮತ್ತು ಪ್ರಜ್ಞಾಪೂರ್ವಕವಾದ ಆಯ್ಕೆ ಎಂಬ ದೃಢವಾದ ನಿಲುವೊಂದನ್ನು ಈ ಕಾದಂಬರಿ ಪ್ರತಿಪಾದಿಸುತ್ತದೆ.

ನಾಟಕ ಕಟ್ಟುವ ನೆವದಲ್ಲಿ ಹೊಸ ಓದಿಗೆ ನನ್ನನ್ನು ಸದಾ ಪ್ರೇರೇಪಿಸುವ ಗೆಳೆಯ, ಗುರು ಡಾ|ಶ್ರೀಪಾದ ಭಟ್ ನನ್ನೆಲ್ಲ ಬರವಣಿಗೆಯ ಹಿಂದಿರುವ ಪ್ರೇರಕ ಶಕ್ತಿ. ಬರವಣಿಗೆಯಲ್ಲಿ ಮುಳುಗಿದ್ದಾಗ ಲೌಕಿಕದ ಹತ್ತಾರು ವಿಷಯಗಳನ್ನು ನನ್ನೆದುರು ಹರಡಿ ವಾಸ್ತವಲೋಕಕ್ಕೆ ನನ್ನನ್ನು ಎಳೆಯುತ್ತಾ, ಬರೆಯದೇ ಕುಳಿತಾಗಲೆಲ್ಲ ಏನೋ ಕಳೆದುಹೋಗುತ್ತಿದೆಯೆಂಬಂತೆ ಕಳವಳಿಸುತ್ತಾ ಸದಾ ನನ್ನೊಳಗೊಂದು ತಲ್ಲಣವನ್ನು ಜೀವಂತವಿಡುವ ಸಂಗಾತಿ ಗಣಪತಿ, ನನ್ನ ಅರಿವಿನ ಲೋಕವನ್ನು ತಮ್ಮೊಂದಿಗಿನ ಪ್ರತಿ ಮಾತುಕತೆಯಲ್ಲಿಯೂ ವಿಸ್ತರಿಸುತ್ತ ಸಾಗುವ ನನ್ನೆರಡು ಕಣ್ಣಗೊಂಬೆಗಳಂತಿರುವ ತುಷಾರ್-ಪ್ರೀತಂ, ಪುಸ್ತಕ ಪ್ರಕಟಿಸುವ ಮೂಲಕ ಬರೆಯುವ ಆಸೆಯನ್ನು ಜೀವಂತವಾಗಿಡುವ ಲಡಾಯಿ ಪ್ರಕಾಶನದ ಬಸೂ, ಮತ್ತವರ ಬಳಗ ಎಲ್ಲರಿಗೂ ಋಣಿಯಾಗಿರುವೆ ಎಂದಷ್ಟೇ ಹೇಳಲು ಸಾಧ್ಯ. ಕನ್ನಡ ಪುಸ್ತಕಗಳನ್ನು ಓದುವವರಿಲ್ಲ ಎಂಬ ಕೊರಗಿನ ನಡುವೆಯೂ ಪುಸ್ತಕವನ್ನು ಕೊಂಡು ಓದಿ, ಆಗಾಗ ಪ್ರತಿಕ್ರಿಯಿಸುವುದರ ಮೂಲಕ ಬರಹಕ್ಕೆ ಪ್ರೇರಣೆಯನ್ನು ತುಂಬುವ ಓದುಗ ಬಳಗಕ್ಕೆ ಶರಣು. ಅಕ್ಷರಗಳ ಮೂಲಕ ಪರಿಚಿತರಾದ ಸಾಹಿತ್ಯ ಲೋಕದ ಸ್ನೇಹವಲಯಕ್ಕೂ, ನನ್ನೊಳಗಿನ ಯೌವ್ವನವನ್ನು ಸದಾ ಕಾಪಿಡುವ ನನ್ನೆಲ್ಲ ವಿದ್ಯಾರ್ಥಿ ಸಮೂಹಕ್ಕೂ, ನನ್ನ ದಿನದ ದಂದುಗದಲ್ಲಿ ಜತೆಯಾಗುವ ಸುತ್ತಮುತ್ತಲ ಎಲ್ಲ ಜೀವರಾಶಿಗಳಿಗೂ ನನ್ನ ನಮನಗಳು.

(ಕೃತಿ: ಎಂದೂ ಹುಟ್ಟದ ಮಗುವಿಗೆ ಪತ್ರ (ಕಾದಂಬರಿ), ಮೂಲ: ಒರಿಯಾನ ಫಲಾಚಿ, ಕನ್ನಡಕ್ಕೆ: ಸುಧಾ ಆಡುಕಳ, ಪ್ರಕಾಶಕರು: ಲಡಾಯಿ ಪ್ರಕಾಶನ, ಬೆಲೆ: 110/-)