‘ಅಡುಗೆಯಾಟದ ಹುಡುಗಿ’ ಬಾಲ್ಯದ ಅಡುಗೆಯಾಟವೇ ಕ್ರಮೇಣ ಆ ಹುಡುಗಿಯ ಜೀವನಶೈಲಿಯಾಗಿ ಬದಲಾಗುವ ಮತ್ತು ವ್ಯಕ್ತಿತ್ವ ವಿಕಸನದ ಅವಕಾಶಗಳು ಮುಚ್ಚಿಹೋಗುವ ಬಗೆಯೊಂದು ಅನಾವರಣಗೊಳ್ಳುತ್ತಾ , ಕಡೆಗೆ ಅಮ್ಮನಿಂದ ಮಗಳಿಗೆ ಹಸ್ತಾಂತರವಾಗುವ “ಚುಚ್ಚುಗ”ವು ಬರಿಯ ಅಡುಗೆಯ ಆಯುಧವಾಗಿ ಉಳಿಯದೆ, ಹೆಣ್ಣಿನ ಪಾಲಿಗೆ ಪುರುಷ ಪ್ರಧಾನ ಸಮಾಜದ “ಚುಚ್ಚುಗ”ವಾಗುವ ರೂಪಕ ಆಗಿಬಿಡುತ್ತದೆ.
ಆಶಾ ಜಗದೀಶ್ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕುರಿತು ಡಾ. ವಿ.ಚಂದ್ರಶೇಖರ ನಂಗಲಿ ಬರಹ
ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಕಡೆಗೆ ಕಣ್ಣು ಹಾಯಿಸದೆ, ಸುಡು ಸುಡುವ ಸೂರ್ಯನ “ನಡು ಮಧ್ಯಾಹ್ನದ ಕಣ್ಣು” ಆಯ್ಕೆ ಮಾಡಿಕೊಂಡಿರುವ ಆಶಾ ಜಗದೀಶ್ ಅವರ ಕವನ ಸಂಕಲನದ ಶೀರ್ಷಿಕೆಯೇ ಅವರ ಕಾವ್ಯದ ವಿಶಿಷ್ಟತೆಯನ್ನು ಸೂಚಿಸುತ್ತದೆ. ಇದು ಆದ್ಯಂತ ರಹಿತವಾದ ಮತ್ತು ವ್ಯಕ್ತಮಧ್ಯದ ವರ್ತಮಾನದ ತೀವ್ರತರ ಬದುಕಿನ ಸಂತಾಪಕ್ಕೂ ಸಂಕೇತವಾಗುತ್ತದೆ.
ಪುರುಷ ಅಹಂಕಾರದಿಂದ ತುಂಬಿ ತುಳುಕುತ್ತಿರುವ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಮನೆಯಾಕೆಯೊಬ್ಬಳು ಸಾಯದೆ ಬದುಕುತ್ತಿರುವ ಮತ್ತು ಬದುಕುತ್ತಾ ಸಾಯುತ್ತಿರುವ ಬಗೆಯನ್ನು ಮಾನಸಿಕ ತೊಳಲಾಟ, ಬಯಕೆ ಬೇಗುದಿಗಳ ಸಹಿತ ಹೇಳುತ್ತಿರುವ ಅನನ್ಯ ಕವಿತೆ ‘ಸಾವು’. ಮನೆಯೊಳಗೆ ಮತ್ತು ಮನೆಯಾಚೆ ಎಂಬ ವಿರುದ್ಧ ಧ್ರುವಗಳಲ್ಲಿ ತನ್ನನ್ನು ಕಳೆದುಕೊಳ್ಳದೆ, ಹೊಸ್ತಿಲ ಮೇಲೆ ನಿಂತ ಅಪ್ಪುಗೆಯಲ್ಲಿ ಗಾಢ ವಿಷಾದ ಮಡುಗಟ್ಟಿದೆ. ಹಿರಣ್ಯ ಕಶಿಪುವಿನ ಹೊಸಿಲ ಸಾವನ್ನು ಹೊದ್ದುಕೊಂಡಿರುವ ಈ ಕವಿತೆಯಲ್ಲಿ ಕೇವಲ ನಿಟ್ಟುಸಿರು ಮತ್ತು ಪಿಸುದನಿ ಮಾತ್ರ ಇದೆಯೆಂದು ಅನಿಸುವುದಿಲ್ಲ.
ಕಾಡುವ ಸಂಬಂಧಗಳು ಕಾಡುಪಾಲಾಗಿ, ದಕ್ಕದೆ ಹೋಗುವ ಪರಿಯನ್ನು ‘ಜೀವಂತವಿರಿಸುವ ಸಲುವಾಗಿ’ ಎಂಬ ಕವಿತೆಯು ನಿರೂಪಿಸುತ್ತದೆ. “ಎತ್ತಣಿಂದೆತ್ತ ಸಂಬಂಧವಯ್ಯಾ? ಎಂಬ ಪ್ರಶ್ನೆಗಿಂತಲೂ ಇಂಥ ಸಂಬಂಧಗಳನ್ನು ಜೀವಂತವಿರಿಸುವ ಹೋರಾಟ ಬಹುಮುಖ್ಯ. ಕ್ಷಣ ಮಿಂಚಿ ಮಾಯವಾಗುವ ಸಂಬಂಧಗಳು, ಅರಿವಾಗದಂತೆ ಮುರಿದು ಹೋಗುವ ಪರಿ ಬಾಳಿನ ವಿಸ್ಮಯದ ವಿಷಾದವೇ ಸರಿ. ಯಾರು? ಯಾವಾಗ? ಬ್ಲಾಕ್ ಆಗುತ್ತಾರೋ ಹೇಳಲಾಗದು. ಬಾಳಿನ ಪಥದಲ್ಲಿ ಹೆಜ್ಜೆಗಳು ಅದಲು ಬದಲಾಗುವ ಮತ್ತು ಕಪಟ ಮುಖವಾಡಗಳನ್ನು ತೊಟ್ಟು ಬದುಕುವ ಅನಿವಾರ್ಯತೆ ಈ ಕವನದಲ್ಲಿ ಮೂಡಿ ಬಂದಿದೆ.
‘ಕಲ್ಲಾಗಲು’ ಎಂಬ ಕವನದಲ್ಲಿ ಹೆಣ್ಣಿಗೆ ನಿಗದಿಪಡಿಸಿದ ಅಲಂಕಾರಗಳು ಅವಳ ವ್ಯಕ್ತಿತ್ವ ವಿಕಾಸಕ್ಕೆ ಬದಲು ಹೆಣ್ಣನ್ನು ಕಲ್ಲಾಗಿಸುವುದಕ್ಕೆ (Petrified ) ಬದ್ಧವಾಗಿವೆ ಎಂಬುದನ್ನು ಹೇಳುತ್ತಿದೆ. ಈ ಅಲಂಕಾರಗಳಾವುದೂ ಹೆಣ್ಣಿನ ಆತ್ಮದ ಜರೂರತ್ತು ಎಂದೆನಿಸುವುದಿಲ್ಲ ಎಂಬ ನಿರ್ಣಯದಲ್ಲಿ ಹೆಣ್ಣನ್ನು ಹೆಣ್ಣಾಗಿಸುವ ಮತ್ತು ಹಣ್ಣಾಗಿಸುವ ಕಲ್ಲುತನಕ್ಕೆ ಈ ಸಮಾಜದಲ್ಲಿ ಆದ್ಯತೆಯಿದೆ ಎಂಬ ಕಹಿಸತ್ಯ ಅಡಗಿದೆ.
‘ನೀವಿನ್ನು ಹೊರಡಿ’ ಹೂವು ( ಹೆಣ್ಣು) ಮತ್ತು ದುಂಬಿ (ಗಂಡು) ರೂಪಕದ ಈ ಕವನದಲ್ಲಿ ಹೂವುಗಳ ಸ್ವಯಂವರ ಮಂಟಪದ ಪ್ರಜ್ಞೆಯಿದೆ. ಹೂವುಗಳನ್ನು ಆಯ್ಕೆ ಮಾಡಿಕೊಳ್ಳುವ ದುಂಬಿಗಳಿಗಿಂತಲೂ, ದುಂಬಿಗಳನ್ನೇ ಆಯ್ಕೆ ಮಾಡಿಕೊಳ್ಳುವ ಹೂವುಗಳ ಬಗೆಯನ್ನು ಇಲ್ಲಿ ಮನಗಾಣಬಹುದು. ಮದುವೆ ಎಂಬ ಮಾರುಕಟ್ಟೆಯಲ್ಲಿ ಹೆಣ್ಣನ್ನು ವಿಮರ್ಶೆ ಮಾಡುವಂತೆಯೇ ಈ ಕವನದಲ್ಲಿ ಹೂವುಗಳು ದುಂಬಿ (ಗಂಡು) ಗಳನ್ನು ವಿಮರ್ಶೆ ಮಾಡುವ ಬಗೆಯಿದೆ. ದುಂಬಿಗಳ ನೀತಿ ಸಂಹಿತೆಯಲ್ಲಿರುವ ಪುರುಷ ಪಕ್ಷಪಾತವನ್ನು ಕವನ ವಿಡಂಬನೆ ಮಾಡಿದೆ. ಕವನದ ಕೊನೆಯಲ್ಲಿ ಸ್ವಯಂವರವನ್ನು ಮುಂದೂಡುವ ಪ್ರಸ್ತಾಪ ಇದೆ. ಇದರಲ್ಲಿ ಹೆಣ್ಣಿನ ಹಿತಾಸಕ್ತಿ ಇದೆಯೆಂಬುದು ಸುಸ್ಪಷ್ಟ. ಆದ್ದರಿಂದಲೇ ಈ ಕವನ ದುಂಬಿಗಳಿಗೆ ‘ನೀವಿನ್ನು ಹೊರಡಿ’ ಎಂದು ಅಪ್ಪಣೆ ಕೊಡುತ್ತದೆ. ‘ಅವಳು’ ಎಂಬ ಕವನದಲ್ಲೂ ಹೆಣ್ಣಿನ ಹಿತಾಸಕ್ತಿಯ ನಿರೂಪಣೆ ಇದೆ. ಸ್ವತಂತ್ರವಾಗಿದ್ದ ‘ಅವಳು’ ಪುರುಷ ಜಗತ್ತಿನ ತೆಕ್ಕೆಗೆ ಬಂದಾಗ ಕ್ರಮೇಣ ಅತಂತ್ರವಾಗುವ ಪರಿ ಮತ್ತು ಪೌರುಷದ ಚಕ್ರವ್ಯೂಹಕ್ಕೆ ಸಿಲುಕಿಸಿ, ಅದನ್ನು ಭೇದಿಸಲಾಗದೆ ನರಳುವ ಬಗೆಯನ್ನು ನೋಡುತ್ತೇವೆ. ಜೊತೆಗೆ, ಪುರುಷ ಪ್ರಪಂಚದ ಆಪಾದ ಮಸ್ತಕ ಪರಿಶೀಲನೆಯನ್ನು ವಿಡಂಬನೆ ಮಾಡಿದರೂ, ಅವಳನ್ನು ದೇವತೆಯಾಗಿ ನೋಡಲು ಕರೆ ಕೊಟ್ಟಿದ್ದು ವ್ಯಕ್ತಿತ್ವ ವಧೆಯಾಗಿಯೇ ಕಾಣುತ್ತದೆ.
‘ತಪ್ಪು ಆಯ್ಕೆ’ ಮೇಲ್ಕಂಡ ಕವನಕ್ಕಿಂತಲೂ ಭಿನ್ನವಾಗಿದೆ. ಅಂದರೆ ಹೆಣ್ಣಿನ ಸ್ವಪ್ರಜ್ಞೆ ಹಿಂದೆ ಸರಿದು ಗಂಡಿನ ಪ್ರಜ್ಞೆಯನ್ನು ಒಳಗೊಳ್ಳುವ ಉಭಯ ಪ್ರಜ್ಞೆಯಲ್ಲಿ ಬಾಳಿನ ಸಾಪೇಕ್ಷತಾ ಸಿದ್ಧಾಂತವಿದೆ. ತಪ್ಪು ಆಯ್ಕೆ ಒಬ್ಬರದಾಗಿರದೆ ಇಬ್ಬರದೂ ಆಗಿರಬಹುದೆಂಬ ಗ್ರಹಿಕೆ ಇಲ್ಲಿದೆ. ತಪ್ಪು ಆಯ್ಕೆಗಾಗಿ ಹಳ ಹಳಿಸುತ್ತಾ ಕೂರುವಂತಿಲ್ಲ. ಮಾಡಿದ್ದುಣ್ಣೋ ಮಹರಾಯ ಎಂಬಂತೆ ಆಯ್ಕೆಗೆ ಮೌನದ ಶಿಕ್ಷೆ ಅನುಭವಿಸುತ್ತಿರುವುದೇ ಪರಿಸ್ಥಿತಿಯ ಗತಿಮತಿಯಾಗಿದೆ.
‘ಕೆಂಡದುಂಡೆಗಳು’ ಮತ್ತು ‘ಪೂರ್ಣಗೊಳಿಸುವ ಸಲುವಾಗಿ’ ಇವೆರಡೂ ಭಿನ್ನ ಪಾತಳಿಯ ಕವನಗಳು. ಹೆಣ್ಣಿನ ಉಬ್ಬಿದ ಹೊಟ್ಟೆಯ ಮೇಲೆ ದಿಗ್ವಿಜಯದ ಪತಾಕೆ ನೆಡುವ ಪುರುಷ ಪ್ರಧಾನ ಸಾಮಾಜಿಕ ರಚನೆಯಲ್ಲಿ ಹೆಣ್ಣಿಗೆ ದಕ್ಕುವುದು ಕೆಂಡದುಂಡೆಗಳ ಅನುಭವಗಳೇ. ಮದುವೆ ಎಂಬ ಮೂರಕ್ಷರದ ಅಕ್ಷತೆ ಕಾಳು ಚಿತೆಯಾಗಿಯೂ ಪರಿವರ್ತನೆ ಆಗುವುದನ್ನು ಕವನ ನಿರೂಪಣೆ ಮಾಡುತ್ತಾ ಕಡೆಗೆ ಗರ್ಭಪಾತದ ರೂಪಕದಲ್ಲಿ ಕೊನೆಯಾಗುತ್ತದೆ. ಆದರೆ, ‘ಪೂರ್ಣಗೊಳಿಸುವ ಸಲುವಾಗಿ’ ಎಂಬ ಕವನದಲ್ಲಿ ಗುಬ್ಬಿ ಮರಿಗುಬ್ಬಿಯ ರೂಪಕವಿದೆ. ಮರಿಗುಬ್ಬಿ ಕನಸೊಂದನ್ನು ಹೊದ್ದುಕೊಂಡ ಬಗೆಯಲ್ಲಿ ವಾಸ್ತವವನ್ನು ಅಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳುವ ನಿರೂಪಣೆಯಿದೆ.
‘ಹಕ್ಕಿಹಾಡು’ ಎಂಬ ಕವನ ನಿಸರ್ಗನಿರ್ಮಿತ ಸೆಲೆ (=ಹಮ್ಮಿಂಗ್ ಬರ್ಡ್) ಮತ್ತು ಮಾನವನಿರ್ಮಿತ ನೆಲೆ (=ಆಧುನಿಕ ಬೇಟೆಗಾರ) ಇವೆರಡರ ವೈರುಧ್ಯಗಳನ್ನು ಅನಾವರಣ ಮಾಡಿದೆ. “ಪ್ರಸಾಧನವಿಲ್ಲದೆ ಹೊಳೆವ ಹಕ್ಕಿ” ನಿಸರ್ಗದ ಪ್ರತೀಕವಾದರೆ, “ಎ.ಸಿ.ರೂಮಿನಲ್ಲೂ ಬೆವರುವ ಬೆದರುಗೊಂಬೆ” ನಾಗರಿಕತೆಯ ಪ್ರತೀಕವಾಗಿದೆ. ನಿಸರ್ಗದಿಂದ ದೂರ ಸಿಡಿದ ಆಧುನಿಕ ಮಾನವರ ದುರಂತ ಜೀವನದ ವಿವರಗಳು ಸ್ವಯಂಕೃತಾಪರಾಧವಾಗಿರುತ್ತದೆ.
“ಬೇರಿಲ್ಲದ ಬಿಸಿಲು ಮತ್ತು ನೆಳಲು, ಹಿಮ್ಮುಖ ಹರಿಯುವ ನದಿಗಳ ಜಾಡು ಹಿಡಿದು, ದಾರಿ ತೋರುವ ಆಧುನಿಕ ಬೇಟೆಗಾರ” ಎಂಬ ನುಡಿಗಳಲ್ಲಿ ಆಧುನಿಕ ನಾಗರಿಕತೆಯ ಮತಿ ವಿಕಾರಗಳೇ ಎದ್ದು ಕಾಣುತ್ತದೆ. ಯಾವ ನದಿಯೂ ಹಿಂದಕ್ಕೆ ಹರಿಯುವುದಿಲ್ಲ ಎಂಬುದು ನೈಸರ್ಗಿಕ ವಿವೇಕ. ಆದರೆ ಇದಕ್ಕೆ ತದ್ವಿರುದ್ಧವಾಗಿ ಹಿಂದಕ್ಕೆ ಹಾಯುವ ಮತ್ತು ಚರಿತ್ರೆಯನ್ನು ಬದಲಾಯಿಸಿ ಬಿಡುವ ಹುಂಬತನವನ್ನು ಆಧುನಿಕ ಬೇಟೆಗಾರ ತೋರುತ್ತಿದ್ದಾನೆಂಬುದು ಇಲ್ಲಿರುವ ಮತಿವಿಕಾರವಾಗಿದೆ. ಆದರೆ ತನ್ನ ಪಾಡಿಗೆ ತಾನಿರುವ ನಿಸರ್ಗದ ಪ್ರತೀಕವಾಗಿ ಹಮ್ಮಿಂಗ್ ಬರ್ಡ್ ಮತ್ತೆ ಮತ್ತೆ ಹಾಡುತ್ತಲೇ ಇದೆ.
‘ಗಮನಿಸಿ’ ಎಂಬ ಕವನ ಹಚ್ಚೆ ಹಾಕಿಸಿಕೊಳ್ಳುವ ರೂಪಕದ ಅಭಿವ್ಯಕ್ತಿಯಾಗಿದೆ. ಪ್ರೀತಿಪಾತ್ರರ ಗುರುತುಗಳು ಅಥವಾ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವುದುಂಟು. ಸೂಜಿ ಮೊನೆಯಲ್ಲಿ ಚರ್ಮಕ್ಕೆ ಚುಚ್ಚುತ್ತಾ ಹಸಿರನ್ನು ಹಾಯಿಸುವ ಪ್ರಕ್ರಿಯೆಯಲ್ಲಿ ನೋವು ಮತ್ತು ನಲಿವು ಎರಡೂ ಇದೆ. ಮುಂದೆ ಕಾರಣಾಂತರಗಳಿಂದ ಸಂಬಂಧಗಳು ಶಿಥಿಲವಾಗಿ ಮುರಿದು ಬಿದ್ದರೂ ಹಚ್ಚೆಯನ್ನು ಅಳಿಸಲಾಗುವುದಿಲ್ಲ. ಅಚ್ಚೊತ್ತುವ ಕಲೆಯಾದ ಹಚ್ಚೆಯು ನೋಡಲು ಹಸಿರಾಗಿದ್ದರೂ ಎಂದೆಂದಿಗೂ ಬಾಳಿನಲ್ಲಿ ಹಸಿರಾಗಿಯೇ ಉಳಿಯುವುದಿಲ್ಲ ಎಂಬ ದುರಂತವ್ಯಂಗ್ಯ ಮನಸ್ಸಿಗೆ ನಾಟುತ್ತದೆ.
‘ವಿಶ್ವರೂಪಿ’ ಎಂಬ ಕವನವು ವಿಶ್ವಾತ್ಮಕ ಚೈತನ್ಯದಿಂದ (=ನಿಸರ್ಗದಿಂದ) ದೂರ ಸಿಡಿದ ಮಾನವರ ಅಲ್ಪಮತಿ ಮತ್ತು ಅಧ್ಯಾತ್ಮವನ್ನು ಸರಕು ಮಾಡಿಕೊಳ್ಳುವ ಲಾಭದ ಮನಃಸ್ಥಿತಿಯನ್ನು ನಿರೂಪಿಸುತ್ತಿದೆ. ವ್ಯಾಪಾರೀಕರಣದ ವಿರಾಟ್ ಸ್ವರೂಪದ ಎದುರು ತಾನೊಂದು ಸಣ್ಣಚುಕ್ಕಿ ಎಂಬ ಅರಿವಿನಲ್ಲಿ ಸಲ್ಲುವ ಈ ಕವನ ವಿರುದ್ಧ ಧ್ರುವಗಳ ನಿರೂಪಣೆಯಾಗಿದೆ.
‘ಬೇಲಿ’ ಎಂಬ ಕವನ ಸ್ವಾರ್ಥಪೂರಿತವಾದ ಮಾನವ ನಿರ್ಮಿತ ಬೇಲಿಯನ್ನು ವರ್ಣಿಸುತ್ತಾ ಅದರಾಚೆಗೂ ವಿಸ್ತರಿಸುವ ಬೇಲಿಯ ಬೇರುಗಳನ್ನು ನಿರೂಪಿಸುತ್ತದೆ. ಹೆಣ್ಣಿನ ವ್ಯಕ್ತಿತ್ವವನ್ನು ಆಕ್ರಮಿಸುತ್ತಾ ಬೆಳೆಯುವ ಬೇಲಿಯ ಜೀವಂತಿಕೆ ಗಮನ ಸೆಳೆಯುತ್ತದೆ. ಈ ಮಾನವನಿರ್ಮಿತ ಬೇಲಿಯು ಹಿಂದೆಸರಿದು, ಜನ್ಮಜಾತವಾದ “ಕರ್ಣನ ಕವಚ ಕುಂಡಲದಂಥ” ಬೇಲಿಯಾಗಿಬಿಡುವ ಪರಿ ಬೆಡಗಿನಿಂದ ಕೂಡಿದೆ.
‘ಸತ್ತ ಎಲೆಗಳ ಮೇಲೆ’ ಎಂಬುದು ಬೆಡಗಿನ ಶೈಲಿಯ ಕವನ. “ಸತ್ತ ಎಲೆಗಳ ಮೇಲೆ ಒಂದೊಂದು ಹೆಸರು” ಎಂದು ಆರಂಭವಾಗುವ ಯಾನ, ಕೊನೆಗೆ “ಉಸಿರಾಡುವ ಹಸಿರೆಲೆಯ ಮೇಲೆ ಹೆಸರೊಂದ ಬರೆದೆ” ಎಂದಾಗುತ್ತದೆ.
“ಸತ್ತ ಎಲೆ” ಕವನ ಬೆಳೆದಂತೆಲ್ಲಾ ಹಿಂದೆ ಸರಿದು “ಹಸಿರೆಲೆ” ಆಗುವುದು ಕವಿಯ ಜೀವನಪ್ರೀತಿಯ ಪ್ರತೀಕವಾಗಿದೆ.
‘ಅಡುಗೆಯಾಟದ ಹುಡುಗಿ’ ಬಾಲ್ಯದ ಅಡುಗೆಯಾಟವೇ ಕ್ರಮೇಣ ಆ ಹುಡುಗಿಯ ಜೀವನಶೈಲಿಯಾಗಿ ಬದಲಾಗುವ ಮತ್ತು ವ್ಯಕ್ತಿತ್ವ ವಿಕಸನದ ಅವಕಾಶಗಳು ಮುಚ್ಚಿಹೋಗುವ ಬಗೆಯೊಂದು ಅನಾವರಣಗೊಳ್ಳುತ್ತಾ , ಕಡೆಗೆ ಅಮ್ಮನಿಂದ ಮಗಳಿಗೆ ಹಸ್ತಾಂತರವಾಗುವ “ಚುಚ್ಚುಗ”ವು ಬರಿಯ ಅಡುಗೆಯ ಆಯುಧವಾಗಿ ಉಳಿಯದೆ, ಹೆಣ್ಣಿನ ಪಾಲಿಗೆ ಪುರುಷ ಪ್ರಧಾನ ಸಮಾಜದ “ಚುಚ್ಚುಗ”ವಾಗುವ ರೂಪಕ ಆಗಿಬಿಡುತ್ತದೆ.
‘ಕತ್ತರಿಸಿದ ಉಗುರಿನ ನಿಟ್ಟುಸಿರಿನಂತೆ’ – ಇದೊಂದು ವಿಶಿಷ್ಟ ರಚನೆ. ಹೆಣ್ಣಾಗಿ ಹುಟ್ಟಿದ್ದಕ್ಕೆ ಅವಕಾಶ ವಂಚಿತಳಾಗುವ ಬಗೆಯನ್ನು ನಿರೂಪಿಸುತ್ತಾ, ಗಂಡಿಗೆ ವಿರುದ್ಧ ಪದವಾಗುವ ನೆಲೆಯನ್ನು ನಿರಾಕರಿಸುವುದು ಗಮನಾರ್ಹ. ತುಂಡರಿಸಿದ ಹಲ್ಲಿಬಾಲದ ಮಿಡುಕಾಟ ಮತ್ತು ಕತ್ತರಿಸಿದ ಉಗುರಿನ ನಿಟ್ಟುಸಿರು ಹೆಣ್ಣಿಗೆ ತಪ್ಪಿದ್ದಲ್ಲ. ಗೆಜ್ಜೆ ಮತ್ತು ಸಂಕೋಲೆಗಳ ನಡುವಿನ ವ್ಯತ್ಯಾಸ ಅಳಿಸಿಹೋಗುವ ಧ್ವನ್ಯಾರ್ಥ ಇಲ್ಲಿದೆ.
ಒಳಗಣ್ಣಿನ ಎಚ್ಚರದೊಂದಿಗೆ, ಬಾಳಿನ ಕಡೆಗೋಲನ್ನು ಮಥಿಸುವ ಹಸ್ತಗಳೆರಡೂ ಒಂದಾಗಿರಲೆಂಬ ಆಶಯದಲ್ಲಿ
ಹೆಣ್ಣು ಗಂಡಿನ ಸಮರಸ ಜೀವನ ಎದ್ದು ಕಾಣುತ್ತದೆ.
“ನಿಷ್ಣಾತ ವೇಷಗಳಲ್ಲಿ + ಬಲಿ + ಕೆಂಪನ್ನೇ ಅರಸುತ್ತಾ + ಇಷ್ಟೆಲ್ಲಾ ಅರುಹಿಕೊಳ್ಳುವಾಗ” – ಈ ನಾಲ್ಕೂ ಕವನಗಳೂ ಹೆಣ್ಣಿನ ಬವಣೆ ಬೇಗುದಿಗಳನ್ನು ಹಲವು ದಿಕ್ಕುಗಳಿಂದ ಚಿತ್ರಿಸುವ ಸಂವಾದಿ ರಚನೆಗಳು. ಈ ಲೋಕಕ್ಕೆ ಬೇಕಾದ್ದು ಕುರಿಗಳು ಮಾತ್ರ ಎಂಬ ನುಡಿಯಲ್ಲಿರುವ ವಿಷಾದ ಮನ ಕಲಕುತ್ತದೆ. ಹೆಣ್ಣಿನ ವಿಷಯದಲ್ಲಿ ಇದು ಸತ್ಯ ಕೂಡಾ.
‘ಸನಾದಿಯವನು’ ಕಲೆಯ ಅವನತಿ ಅಥವಾ ದೈನ್ಯಾವಸ್ಥೆ ಈ ಕವನದ ಆಶಯ. ಭೋಗಪ್ರಧಾನವಾದ ಸಮಾಜದಲ್ಲಿ ಕಲೆಗೆ ಬೆಲೆಯಿಲ್ಲ. ಇಲ್ಲಿ ಕಲೆ ಬೀದಿಯ ಸರಕಾಗುತ್ತದೆ. ಕಲಾವಿದ ಅನ್ನಕ್ಕಾಗಿ ಅಂಗಲಾಚುವ ಬಗೆಯಲ್ಲಿ ಬಡತನ, ಹಸಿವು ಮುಖಕ್ಕೆ ರಪ್ಪನೆ ರಾಚುತ್ತದೆ.
‘ಪ್ರೇಮದ ವಿನಃ’ – ಪರಾಧೀನತೆ ಮತ್ತು ಪ್ರೇಮ ಒಟ್ಟೊಟ್ಟಿಗೆ ಚಲಿಸುವುದಿಲ್ಲ. ಹೆಣ್ಣನ್ನು ಸ್ವಾಧೀನಕ್ಕೆ ತಂದುಕೊಳ್ಳುವ ಮಂದಿಗೆ ಪ್ರೇಮದ ಅರಿವು ಇರಲು ಸಾಧ್ಯವಿಲ್ಲ. ಬಹು ದೀರ್ಘಕಾಲ ಉಳಿಯುವುದು ಪ್ರೇಮವೇ ವಿನಃ ಪರಾಧೀನತೆಯಲ್ಲ!
‘ನಿತ್ಯತೆಯ ನಿಯಮ’ – ಇದು ಶಕ್ತಿ ( ಎನೆರ್ಜಿ ) ಮತ್ತು ಸ್ತ್ರೀಶಕ್ತಿಯ ಅಭೇದಕಲ್ಪನೆಯ ಕವನ. ರಕ್ತಮಾಂಸದ ದೇಹ ಯಂತ್ರವಾಗುವ ಬಗೆಯಲ್ಲಿ ಪುರುಷಪ್ರಧಾನ ಸಮಾಜದ ಖೆಡ್ಡಾರಚನೆಯಿದೆ. ವ್ಯಕ್ತಿತ್ವ ವಿಕಸನಕ್ಕೆ ಅವಕಾಶವಿಲ್ಲದ ಚೌಕಟ್ಟಿನಲ್ಲಿ ಪಕ್ವವಾಗುವ, ಹದವಾಗುವ ಕಲೆಯೇ ಒಂದು ಸವಾಲ್ ಜವಾಬ್. ಯಾರು ಯಾರನ್ನೂ ನಾಶಪಡಿಸಲು ಸಾಧ್ಯವಿಲ್ಲ. ಸೀಮಿತ ಜಗತ್ತಿನಲ್ಲಿದ್ದುಕೊಂಡೇ ನಿಸ್ಸೀಮವಾಗಿ ಬದಲಾಗಬೇಕಾದ ಅನಿವಾರ್ಯತೆಯೇ ಜೀವನ ಪಥದ ನಿತ್ಯತೆಯ ನಿಯಮವಾಗಿದೆ. ‘ಕೊನೆಯದಾಗಿ’ ಕವನವೂ ಇದೇ ಆಶಯದ ಆವರ್ತನೆ. “ಅಗೇವಿನೊಳಗೆ ಬಂಧಿಯಾದ ಕಾಳುಗಳು ಮೊಳಕೆಯ ಕನಸುತ್ತಿವೆ” ಎಂಬ ನುಡಿಮುತ್ತು ಯಾರೂ ಬಂಧಿಸಲಾಗದ ಶಕ್ತಿಯ ಪ್ರತೀಕ. ‘ನಾನು ಹೆಣ್ಣು’ ಮತ್ತು ‘ಸೋತ ಕಾಲುಗಳ ಜೀವಾಳ’ ಎಂಬ ಕವಿತೆಗಳೂ ಇದೇ ಆಶಯದ ಆವರ್ತನೆ.
‘ತಿಳಿ ಹೇಳಿ ಆ ಮಗುವಿಗೆ’ ಮತ್ತು ‘ಬಾ ಮಗುವೇ’ ಇವೆರಡೂ ಪರಸ್ಪರ ಹೋಲಿಸಬಹುದಾದ ರಚನೆಗಳು. ಮಾನವ ನಿರ್ಮಿತ ಶಿಕ್ಷಣ ವ್ಯವಸ್ಥೆಯೇ ಅಂತಿಮವಾದ ನಿರ್ಣಾಯಕ ಶಕ್ತಿಯಲ್ಲ! ಇದು ಮಗು ಮನಸ್ಸಿಗೆ ಅರಿವಾಗಿ ನೈಸರ್ಗಿಕ ವಿವೇಕದ ಉದಯವಾಗಬೇಕು. ಮಗುವಿನ ಪುಟ್ಟಪಾದ ಅಹಮ್ಮಿನ ಹೆಡೆಯನ್ನು ತುಳಿಯಬೇಕು ಎಂಬ ಪ್ರತಿಪಾದನೆ ಇಲ್ಲಿದೆ. ‘ಕವಿತೆಯೆಂಬ ಕೂಸು’ ಕವಿತೆ ಮತ್ತು ಮಗುವಿನ ಅಭೇದ ಕಲ್ಪನೆಯ ರಚನೆ. ಭುಜದ ಮೇಲೆ ಕತ್ತು ನಿಲ್ಲದ ಮೂರುದಿನದ ಕೂಸು ಮತ್ತು ಗೋಣು ನಿಲ್ಲಿಸಿಕೊಳ್ಳಲು ಹೆಣಗಾಡುತ್ತಿರುವ ಕವಿತೆಯ ಅದ್ವಯತೆ ಇಲ್ಲಿ ಸೊಗಸಾಗಿ ಮೂಡಿ ಬಂದಿದೆ.
‘ಮಾಸದ ಕಲೆ ಉಳಿಸಿ’ + ಅಲ್ಲದ ಕಾಯಿಲೆಗೆ ವಲ್ಲದ ಮದ್ದು’ ಇವೆರಡೂ ಕವನಗಳು ಗಾಯದ ಪ್ರೀತಿಯ ಪರಿಣಾಮ ಫಲಗಳು. ಗಾಯ, ಕೀವು, ಕಲೆ ಇವುಗಳೇ ಗುರುವಾಗಿ ವ್ಯಕ್ತಿತ್ವವನ್ನು ಕಡೆಯುವ ಹತ್ಯಾರುಗಳು. ಸಮಕಾಲೀನತೆ ಕಾವ್ಯಕ್ಕೆ ಲಾಯಖ್ಖಾದ ವಸ್ತುವಲ್ಲ. ‘ಅಸೀಫಾ’ ಕವಿತೆಯು ಸಮಕಾಲೀನ ದುರ್ಘಟನೆಯನ್ನು ಕಾವ್ಯವಾಗಿಸಿದ ರಚನೆ. ಹೆಣ್ಣು ಮಗುವಿನ ಮೇಲಾದ ಅತ್ಯಾಚಾರಕ್ಕೆ ಸ್ಪಂದಿಸುತ್ತಾ ಕವಿಯು ತನ್ನ ಗರ್ಭವನ್ನು ಬಂಜರಾಗಿಸೆಂದು ಕೇಳಿಕೊಳ್ಳುವ ಬಗೆ ಮನಕಲಕುತ್ತದೆ.
‘ಅಜ್ಜನ ಮನೆ + ಪಯಣ + ಬೂಟು ತೊಟ್ಟು ಬರುತ್ತಿದ್ದಾರೆ + ಅಮ್ಮ ಬೆಳೆದಿದ್ದಾಳೆ = ಈ ಕವಿತೆಗಳಲ್ಲಿ ಬಾಳಿನ ಚಲನ ಶೀಲತೆ, ಉಭಯ ವೈರುಧ್ಯ, ಪರಿವರ್ತನೆಯ ಲಯಗಳನ್ನು ಮನಗಾಣಬಹುದು. ‘ಅಮ್ಮ ಮತ್ತು ಹೊಲಿಗೆ’ ಬಾಳಿನ ಪಥದಲ್ಲಿ ಕಾಣುವುದು ಮತ್ತು ಕಾಣದ್ದು ಇವೆರಡರ ಹೊಲಿಗೆ ಇರುವುದನ್ನು ಹೊಲಿಗೆ ಯಂತ್ರದ ರೂಪಕದಲ್ಲಿ ನಿರೂಪಣೆ ಮಾಡಲಾಗಿದೆ. ‘ದೂರವಿದ್ದಾಗ’ ಕವನದಲ್ಲಿ ಹತ್ತಿರ ಮತ್ತು ದೂರಗಳ ಕಾವ್ಯಾತ್ಮಕ ಗ್ರಹಿಕೆಯಿದೆ. ಹತ್ತಿರವು ಹತ್ತಿರ ಎನಿಸದ ಮತ್ತು ದೂರವು ದೂರವೆನಿಸದ ಬಗೆಯನ್ನು ಇಲ್ಲಿ ಕಾಣುತ್ತೇವೆ.
ಆಶಾ ಜಗದೀಶ್ ಅವರ ಕವನಗಳು ಒಂದೇ ಒಂದು ಓದಿಗೆ ದಕ್ಕುವ ರಚನೆಗಳಲ್ಲ! ನಾನು ಇವರ ಕವನಗಳನ್ನು ಮತ್ತೆ ಮತ್ತೆ ಓದಿದ್ದೇನೆ. ಎಷ್ಟು ಸರ್ತಿ ಓದಿದರೂ ಕಾಣಲಾಗದ್ದು ಇನ್ನೂ ಇದೆ ಎನಿಸುತ್ತದೆ. ಮೇಲ್ಕಂಡ ನನ್ನ ಸಿಂಥೆಸಿಸ್ ಕೇವಲ ಒಂದು ಓದಿನ ಗ್ರಹಿಕೆಯಲ್ಲ ಎಂದು ಹೇಳುತ್ತಲೇ ನನ್ನ ನುಡಿಯಾಗಿ “ಯದ್ಭಾವಂ *” ಎಂದಷ್ಟೇ ಹೇಳಿ ವಿರಮಿಸುತ್ತೇನೆ. ಆಶಾ ಜಗದೀಶ್ ಅವರಿಗೆ ಶುಭವಾಗಲಿ.
ಡಾ. ವಿ. ಚಂದ್ರಶೇಖರ ನಂಗಲಿ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯವರು. ಬೆಳೆದದ್ದು ಕೋಲಾರ ಜಿಲ್ಲೆಯ ಮುಳುಬಾಗಲ್ ತಾಲೂಕಿನ ಗಡಿಗ್ರಾಮ ನಂಗಲಿ/ ನಂಗ್ಲಿಯಲ್ಲಿ. ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಅಧ್ಯಾಪಕರಾಗಿ ಚಿಕ್ಕಬಳ್ಳಾಪುರ, ಯರಗಟ್ಟಿ, ಹಾನಗಲ್, ಗುಬ್ಬಿ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮಾರ್ಕ್ಸ್‌ವಾದಿ ವಿಮರ್ಶೆ, ನಾ ನಿಲ್ಲುವಳಲ್ಲ, ನಿರ್ ಬೀಜೀಕರಣದ ವಿರಾಟ್ ಸ್ವರೂಪ, ಕಾಡು ಮತ್ತು ತೋಪು, ನಾ ನಿಮ್ಮೊಳಗು, ತಿಟ್ಹತ್ತಿ ತಿರುಗಿ, ನಡೆದುದೆ ದಾರಿ, ಆಲಿಸಯ್ಯ ಮಲೆಯಕವಿ ಹಸಿರು ಪಿರಮಿಡ್, ಗಂಗನ ಶಿರಸ್ಸು, ನೆಲ ಮುಟ್ಟುವ ಪ್ರೀತಿ, ಕುವೆಂಪು ವಿರಚಿತ ಕನ್ನಡ ಭಾಷಾ ಸಂವಿಧಾನ ಡಿ.ಆರ್.ನಾಗರಾಜ (2007): ಕೀರ್ತಿಶೇಷ ಡಿ.ಆರ್.ನಾಗರಾಜ ಅವರ ಬದುಕು – ಬರಹ, ಅಲ್ಲಮಪ್ರಭು (ಅಲ್ಲಮಪ್ರಭು ವಚನಗಳನ್ನು ಕುರಿತು ಕನ್ನಡದಲ್ಲಿರುವ ಪ್ರಮುಖ ಬರಹಗಾರರ ವಿಚಾರಪೂರ್ಣ ಲೇಖನಗಳ ಸಂಕಲನ), ತೇಪೆಗಳು (ವಿದ್ಯಾರ್ಥಿ ದೆಸೆಯಿಂದ ಹಿಡಿದು ಪ್ರಿನ್ಸಿಪಾಲ್ ವರೆಗೆ ಬರೆದ ಕವನಗಳ ಸಂಕಲನ) ಚಿನ್ನಿ ಮತ್ತು ಮುತ್ತು (ಕಾಲ್ಪನಿಕ ಪಾತ್ರಗಳ ಸಂವಾದಕಾವ್ಯ ಸಂಕಲನ) ಇವರ ಪ್ರಕಟಿತ ಕೃತಿಗಳು.