ನ್ಯೂಯಾರ್ಕ್ ಪ್ರಪಂಚದ ಮಹಾನಗರ. ಜಗತ್ತಿನ ಹಣಕಾಸು ವ್ಯವಹಾರಗಳ ಶಕ್ತಿಕೇಂದ್ರ. ಬೃಹತ್  ಗಗನಚುಂಬಿ ಕಟ್ಟಡಗಳ ಸಮುಚ್ಛಯ. ಒಂದು ಮಹಾ ಮಿನಿ ವಿಶ್ವ. ಐದು ಪ್ರದೇಶಗಳನ್ನು ಒಳಗೊಂಡ ಅಟ್ಲಾಂಟಿಕ್ ತೀರದ ನಗರ. ಹಡ್ಸನ್ ನದಿ ಸಮುದ್ರ ಸೇರುವ ತಾಣದಲ್ಲೆ ತಲೆ ಎತ್ತಿರುವ ಬಲು ದ್ವೀಪಗಳ ಸಮೂಹ. ಬ್ರಾಂಕ್ಸ್, ಬ್ರೂಕಲಿನ್, ಕ್ವೀನ್ಸ್, ಸ್ಟಾಟನ್ ಐಲ್ಯಾಂಡ್ ಮತ್ತು ಮ್ಯಾನ್ ಹಟನ್. ಪ್ರಮುಖ ಪಂಚ ಪ್ರದೇಶಗಳಲ್ಲಿ ಮ್ಯಾನಹಟನ್ ಮುಕುಟಮಣಿ.
ಹಂಪಿಯ ಹತ್ತಿರದ ನಿವೃತ್ತ ಪ್ರಾಂಶುಪಾಲ ಅಪ್ಪಾಜಿರಾಯರು ನ್ಯೂಯಾರ್ಕ್ ನಗರಿಯನ್ನು ನಡೆದು ನೋಡಿದ ಗಾಥೆ ಇಲ್ಲಿದೆ.

 

ನಡೆದೇ ನೋಡಿದೆ ನ್ಯೂಯಾರ್ಕ್ ಎಂದರೆ ಅದು ಹೇಗೆ ಸಾಧ್ಯ ಎಂದು ಹುಬ್ಬು ಮೇಲೇರಬಹುದು. ಅದಕ್ಕೆ ವಿವರಣೆ ಬಹಳ ಸರಳ. ವ್ಯವಸ್ಥಿತ ಪ್ರವಾಸಿ ಸೌಲಭ್ಯಗಳನ್ನು ಅವಲಂಬಿಸದೆ ಸಾರ್ವಜನಿಕ ಸಂಚಾರ ಸೌಲಭ್ಯಗಳನ್ನು ಬಳಸಿಕೊಂಡು ಸಾಧ್ಯವಾದ ಕಡೆ ಚಾರಣದಲ್ಲೆ ಒಂಟಿಯಾಗಿ ನೋಡಲು ಮಾಡಿದ ಪ್ರಯತ್ನ ಇದು. ಕಾಲು ನಡಿಗೆಯಲ್ಲಿ ಹೋಗಬೇಕೆಂದಾಗ ಕಾಲ ಮಿತಿ ಹಾಕಿಕೊಂಡರೆ ಅದು ಆಗದ ಮಾತು. ನಡಿಗೆಯ ನೋಟಕ್ಕೆ ನಾನು ೧೫ ದಿನ ಮೀಸಲಿಟ್ಟಿದ್ದೆ. ಕಾರಣ ನಮ್ಮ ಮನೆ ನ್ಯೂಜರ್ಸಿ ರಾಜ್ಯದ ನಾರ್ಥ್ ಬ್ರನ್ಸವಿಕ್ ಪಟ್ಟಣದಲ್ಲಿ. ಅಲ್ಲಿಂದ ರೈಲು ಹಿಡಿದರೆ ನ್ಯೂಯಾರ್ಕಿಗೆ ಒಂದು ಗಂಟೆ ಪ್ರಯಾಣ. ಮೇಲಾಗಿ ಪ್ರತಿ ೧೫ ನಿಮಿಷಗಳಿಗೆ ಒಂದರಂತೆ ಓಡುವ ರೈಲುಗಳು. ಬೆಳಗ್ಗೆ ೩ ಗಂಟೆಯಿಂದ ರಾತ್ರಿ ೧ ಗಂಟೆಯವರೆಗೆ ಸದಾ ಓಡುವ ರೈಲುಗಳು. ಅಲ್ಲದೆ ಮನೆಯ ಹತ್ತಿರವೆ ಮೆಟ್ರೋ ಬಸ್ ಸ್ಟಾಪ್. ರೈಲಿನ ಪಾಸ್ ಇದ್ದವರಿಗೆ ಅದರಲ್ಲಿ ಉಚಿತ ಪ್ರಯಾಣ. ನಮ್ಮ ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿಯಲ್ಲಿ ದೂರ ಪ್ರಯಾಣಕ್ಕೆ ಸ್ಥಳ ಕಾಯ್ದಿರಿಸಿದರೆ ಎರಡು ತಾಸು ಮೊದಲಿನಿಂದ ಸಿಟಿ ಬಸ್ಸಿನಲ್ಲಿ ಉಚಿತ ಪ್ರಯಾಣ ಇದೆಯಲ್ಲ ಹಾಗೆ.

ಅಲ್ಲದೆ ಬೆಂಗಳೂರಿನಲ್ಲಿ ಇದ್ದಂತೆ ಇಲ್ಲಿಯೂ ಮಾಸಿಕ ರೈಲು ಪಾಸಿನ ಸೌಲಭ್ಯವೂ ಇದೆ. ಬೆಂಗಳೂರಿಗೆ ಮೈಸೂರು, ಮಂಡ್ಯ, ತುಮಕೂರು, ಕೆಜಿಎಫ್‌ನಿಂದ ನಿತ್ಯ ಬರುವ ಪ್ರಯಾಣಿಕರಂತೆ ನ್ಯೂಯಾರ್ಕ್‌ನಲ್ಲಿ ಕೆಲಸ ಮಾಡುವ ಲಕ್ಷಾಂತರ ಜನರು ನ್ಯೂಜರ್ಸಿ, ಪೆನ್ಸಿಲ್ವೆನಿಯಾ, ಪ್ರಿನ್ಸ್ಟನ್‌ಗಳಿಂದ  ಹಾಗೂ ನ್ಯೂಯಾರ್ಕಿನ ಹೊರ ವಲಯಗಳಿಂದ ನಿತ್ಯ ಪ್ರಯಾಣ ಮಾಡುತ್ತಾರೆ. ತಮ್ಮದೇ ಕಾರುಗಳಲ್ಲಿ ರೈಲ್ವೇ ನಿಲ್ದಾಣಕ್ಕೆ ಬಂದು, ಬೆಳಿಗ್ಗೆ ಅಲ್ಲಿ ನಿಲ್ಲಿಸಿ ನಂತರ ರೈಲು ಹಿಡಿದು ನ್ಯೂಯಾರ್ಕ್‌ ತಲುಪುತ್ತಾರೆ. ಅವರ ಊರಿನಲ್ಲಿ ರೈಲ್ವೆ ನಿಲ್ದಾಣದ ಹತ್ತಿರ ಪಾರ್ಕಿಂಗ್‌ ಲಾಟ್‌ನಲ್ಲಿ ಸ್ಥಳ ಪಡೆಯಲು ಸ್ಥಳೀಯರಿಗೆ ಆದ್ಯತೆ. ಅದಕ್ಕೂ ಕೂಡ ಮಾಸಿಕ ಪಾಸಿನ ವ್ಯವಸ್ಥೆಯಿದೆ. ರೈಲು ಪಾಸಿನ ಇನ್ನೊಂದು ವಿಶೇಷವೆಂದರೆ ಪಾಸಿನ ಮೇಲೆ ಪ್ರಯಾಣಿಕರ ಫೋಟೊ, ಹೆಸರು ಮತ್ತು ವಿಳಾಸ ಇರುವುದಿಲ್ಲ. ಎಲ್ಲಿಂದ ಎಲ್ಲಿಯವರೆಗೆ ಮತ್ತು ಯಾವ ತಿಂಗಳಿಗೆ ಎಂಬ ವಿವರಗಳು ಮಾತ್ರ ಇರುತ್ತವೆ. ಹಾಗಾಗಿ ಯಾರ ಪಾಸನ್ನು ಯಾರು ಬೇಕಾದರೂ ಉಪಯೋಗಿಸಬಹುದು. ನನ್ನ ಮಗಳು ಮತ್ತು ಅಳಿಯ ಕೆಲಸದ ನಿಮಿತ್ತ ನಿತ್ಯ ನ್ಯೂಯಾರ್ಕ್‌ಗೆ ಪಯಣಿಸುತ್ತಾರೆ. ಅವರಲ್ಲಿ ಯಾರಾದರೊಬ್ಬರು ರಜ ಹಾಕಿದರೆ, ಇಲ್ಲಾ ವರ್ಕ್ ಫ್ರಂ ಹೋಂ ಅಂದರೆ ಮನೆಯಲ್ಲಿ ಕುಳಿತೆ ಕಚೇರಿಯ ಕೆಲಸ ಮಾಡಿದರೆ, ಶನಿವಾರ, ಭಾನುವಾರದ ವಾರಂತ್ಯದಲ್ಲಿ ಅವರ ಪಾಸ್ ಪಡೆದು ಆ ದಿನ ಬೆನ್ಚೀಲ (ಬ್ಯಾಕ್ ಪ್ಯಾಕ್‌) ಏರಿಸಿ ಕಾಸು ಖರ್ಚಿಲ್ಲದೆ ನ್ಯೂಯಾರ್ಕ್‌ ಹೊರಡುತ್ತಿದ್ದೆ. ಅವರದು ಹೇಳೀ ಕೇಳಿ ಕಂಪ್ಯೂಟರಿನಲ್ಲಿ ಕೆಲಸ. ಲ್ಯಾಪ್ ಟಾಪ್ ಇದ್ದರೆ ಮುಗಿಯಿತು. ಸೆಟ್ಟಿ ಇಳಿದಲ್ಲಿ ಪಟ್ಟಣ ಎನ್ನುವರಲ್ಲ ಹಾಗೆ. ವಾರದಲ್ಲಿ ಒಂದೊ ಎರಡೋ ಅಂತಹ ಅವಕಾಶ ನನಗೆ ಸಿಕ್ಕೆ ಸಿಗುತ್ತಿದ್ದವು. ನ್ಯೂಯಾರ್ಕ್‌ನ ಪೆನ್ ನಿಲ್ದಾಣದವರೆಗೆ ಇಬ್ಬರಲ್ಲಿ ಒಬ್ಬರ ಜತೆ ಒಟ್ಟಿಗೆ ಹೋಗುತ್ತಿದ್ದೆ. ಸುಮಾರು ಒಂಭತ್ತು ಗಂಟೆಗೆ ಅವರು ಕಚೇರಿಗೆ ಹೋಗುತ್ತಿದ್ದರು. ನಾನು ನಗರ ಪ್ರದಕ್ಷಿಣೆಗೆ ತೊಡಗುತ್ತಿದ್ದೆ. ಪುನಃ ನಾಲ್ಕು ಗಂಟೆಗೆ ಪೆನ್ ನಿಲ್ದಾಣದಲ್ಲಿ ಸೇರಿ ಒಟ್ಟಿಗೆ ವಾಪಸ್‌ ಬರುತ್ತಿದ್ದೆವು. ಅವರು ಮಧ್ಯ ಮಧ್ಯ ೨ ಗಂಟೆಗೆ ಒಂದು ಸಾರಿ ಫೋನ್‌ ಮಾಡಿ ನಾನು ಎಲ್ಲಿರುವೆ ಎಂಬುದನ್ನು ತಿಳಿಸುವುದನ್ನು ಮಾತ್ರ ಕಡ್ಡಾಯ ಮಾಡಿದ್ದರು. ಇಲ್ಲವೇ ಅವರೇ ಫೋನ್‌ ಮಾಡುತ್ತಿದ್ದರು. ಕಾರಣ ನಾನು ಜನಜಂಗುಳಿಯಲ್ಲಿ ಕಳೆದು ಹೋಗಬಹುದೆಂಬ ಅವರ ಕಳಕಳಿ. ಹೀಗಾಗಿ ನನಗೆ ನ್ಯೂಯಾರ್ಕನ್ನು ಕಾಸು ಖರ್ಚಿಲ್ಲದೆ ತಲುಪಲು ಅನುಕೂಲವಿತ್ತು.

ನ್ಯೂಯಾರ್ಕ್‌ ತಲುಪಲು ಹಲವು ಹನ್ನೊಂದು ವಿಧಾನಗಳಿವೆ. ವಿದೇಶಗಳಿಂದ ದೂರದ ಪ್ರದೇಶಗಳಿಂದ ಬರಲು ನ್ಯೂಯಾರ್ಕ್‌ನಲ್ಲಿ ಜೆಎಫ್‌ಕೆ ವಿಮಾನ ನಿಲ್ದಾಣವಿದೆ. ಅಮೆರಿಕದ ಅತಿ ಪ್ರಖ್ಯಾತರಾಗಿದ್ದ, ಅಧ್ಯಕ್ಷ ಪದವಿಯಲ್ಲಿದ್ದಾಗಲೇ ಹಂತಕನ ಗುಂಡಿಗೆ ಬಲಿಯಾದ ಯುವ ಅಧ್ಯಕ್ಷ ಜಾನ್‌ ಎಫ್‌. ಕೆನಡಿ ಅವರ ನೆನಪಿನಲ್ಲಿ ಇದನ್ನು ನಿರ್ಮಿಸಲಾಗಿದೆ. ಸದಾ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ವಿಮಾನಗಳು ಹಗಲಿರುಳೆನ್ನದೆ ಹಾರಾಟ ನಡೆಸುತ್ತವೆ. ಹಗಲಿಗಿಂತ ರಾತ್ರಿಯೇ ಅವುಗಳ ಆಗಮನ ಮತ್ತು ನಿರ್ಗಮನದ ದಟ್ಟಣೆ ಹೆಚ್ಚು. ಕಾರಣ ನಗರ ಸಂಚಾರದಲ್ಲಿ ವಾಹನ ದಟ್ಟಣೆಯು ರಾತ್ರಿ ಸ್ವಲ್ಪ ಕಡಿಮೆಯಿರುವುದರಿಂದ ನ್ಯೂಯಾರ್ಕ್‌ ತಲುಪಿದ ಮೇಲೆ ಕಾರಿನಲ್ಲಿ ಮನೆಗಳನ್ನು ತಲುಪುವುದು ಅಷ್ಟು ಕಷ್ಟವಾಗದು. ನ್ಯೂಯಾರ್ಕ್‌ ನಗರದ ಜೆಕೆಎಫ್‌ನ ಸಂಚಾರ ದಟ್ಟಣೆ ತಗ್ಗಿಸಲು ಇನ್ನೊಂದು ಬೃಹತ್‌ ವಾಯು ನಿಲ್ದಾಣವಿದೆ. ಅದು ನ್ಯೂಜೆರ್ಸಿ ರಾಜ್ಯದಲ್ಲಿದ್ದರೂ ಹೆಚ್ಚು ದೂರವೇನೂ ಆಗುವುದಿಲ್ಲ. ಕೇವಲ ಒಂದು ಗಂಟೆಯ ಡ್ರೈವ್‌ ಮಾತ್ರ. ಅದೇ ನ್ಯೂಯಾರ್ಕ್. ಜಗತ್ತಿನಲ್ಲಿರುವ ವಾಯುಯಾನ ಕಂಪನಿಗಳ ಬಗೆಗಿನ ಕುತೂಹಲ ತಣಿಯಬೇಕೆಂದರೆ ಇಲ್ಲಿ ಬಂದರೆ ಸಾಕು. ಬೆಂಗಳೂರು ಬಸ್‌ ನಿಲ್ದಾಣದಲ್ಲಿನ ಬಸ್‌ ದಟ್ಟಣೆ ಇದರ ಮುಂದೆ ಏನೇನೂ ಅಲ್ಲ. ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಹೋಗಿ ಬರುವ ಒಟ್ಟು ವಾಹನಗಳ ಸಂಖ್ಯೆಗೆ ಇಲ್ಲಿನ ವಿಮಾನಗಳ ಸಂಖ್ಯೆಗಳಿಗೆ ಸರಿದೂಗಬಹುದೇನೋ. ಇನ್ನು ಇಲ್ಲಿನ ವಾಯುಯಾನ ಕಂಪನಿಗಳಿಗೆ ಬಂದರೆ, ಒಂದೇ ಎರಡೇ ಹತ್ತಾರು. ಹಾಗೆಯೇ ಸ್ಥಳೀಯ ಕಂಪನಿಗಳು. ಪ್ರತಿ ಸಂಸ್ಥೆಗೂ ತನ್ನದೇ ಆದ ಚೆಕ್ ಇನ್ ಕೌಂಟರ್ ಗಳು ಟಿಕೆಟ್‌ ಮತ್ತು ಲಗೇಜ್‌ ಪರಿಶೀಲನೆಯಾದ ಮೇಲೆ ಇಮಿಗ್ರೇಶನ್‌ ಮತ್ತು ಭದ್ರತಾ ತಪಾಸಣೆ ಮಾತ್ರ ಸಾಮಾನ್ಯ. ಸ್ಥಳೀಯ ಪ್ರಯಾಣವಾದರೆ ಅಂತಹ ಕಟ್ಟುನಿಟ್ಟೇನೂ ಇಲ್ಲ. ಭದ್ರತಾ ತಪಾಸಣೆಗೆ ಮೊದಲು ಬ್ಯಾಗೇಜ್‌ ಪರಿಶೀಲಿಸಿ ಕಳುಹಿಸಿಕೊಡಲು ಬಂದವರ ಜತೆ ಕಾಲ ಕಳೆಯಲು ಇಲ್ಲಿ ಅವಕಾಶವಿದೆ. ಬೀಳ್ಕೊಡಲು ಬಂದವರು ವಿಶಾಲವಾದ ಲಾಂಜ್‌ನಲ್ಲಿ ಜತೆಯಲ್ಲಿರಬಹುದು. ಅವರಿಗೆ ಮನರಂಜನೆಗಾಗಿ ತಿಂಡಿ, ತಿನಿಸು, ದೂರವಾಣಿ, ಅಂತರ್ಜಾಲ ಪುಸ್ತಕ ಎಲ್ಲವೂ ಲಭ್ಯ. ತಿಂಡಿ ತೀರ್ಥಗಳು ತರಹೇವಾರಿ. ಯಾವ ದೇಶದ್ದು ಬೇಕೊ ಅದು. ಚೀನಾ, ಥೈಲ್ಯಾಂಡ್‌, ಮೆಕ್ಸಿಕನ್‌ ಹೆಸರು ಹೇಳಿದರೆ ಸಾಕು ಅದು ಅಲ್ಲಿ ದೊರೆಯುತ್ತದೆ. ಆದರೆ ಶಾಖಾಹಾರಿಗಳಿಗೆ ಮಾತ್ರ ತುಸು ತೊಂದರೆ. ಅವರಿಗೆ ಹಣ್ಣು ಹಂಪಲೇ ಗತಿ. ಹಣ್ಣಿನ ರಸಕ್ಕಂತೂ ಕೊರತೆಯೇ ಇಲ್ಲ. ಮಕ್ಕಳಿಗೆ ಕಿಡ್ಸ್‌ ಕಾರ್ನರ್, ಎಲ್ಲರಿಗೆ ರೆಸ್ಟ್‌ ರೂಮುಗಳು, ಹೀಗೆ ನಾವು ಯಾವುದೇ ಪ್ರಖ್ಯಾತ ಮಾಲ್ ನಲ್ಲಿ ಇರುವ ಅನುಭವವನ್ನು ನೀಡುತ್ತವೆ.

ವಿಮಾನಯಾನ ಬೇಡವೆನ್ನಿಸಿದರೆ ಅಮೆರಿಕದ ಮೂಲೆ ಮೂಲೆಯಿಂದ ಬರಲು ಗ್ರೇಹೌಂಡ್‌ ಮತ್ತು ಗ್ರೇಲೈನ್‌ ಬಸ್ ಗಳು ತೆರಪಿಲ್ಲದೆ ಸಂಚರಿಸುತ್ತವೆ. ಅವುಗಳಲ್ಲಿ ಎಲ್ಲ ಸೌಲಭ್ಯವೂ ಉಂಟು. ರೆಸ್ಟ್ ರೂಂ ಕೂಡ ಇದೆ. ಆದರೆ ಪ್ರಯಾಣವೆಚ್ಚ ಮಾತ್ರ ಕಡಿಮೆಯೇನಲ್ಲ. ಇನ್ನು ರೈಲು ಪ್ರಯಾಣ ಬಯಸಿದರೆ ಆಮ್ ಟ್ರಾಕ್‌ ಇವೆ. ನ್ಯೂಜರ್ಸಿ ಟ್ರಾನ್ಸಿಟ್ ಇದೆ. ಅಲ್ಲಿಯೂ ಪಂಚತಾರಾ ಸೌಲಭ್ಯಗಳೇ ಇವೆ. ಅದರೆ ಟಿಕೆಟಿನ ದರವು ಹೆಚ್ಚುಕಡಿಮೆ ವಿಮಾನ ವೆಚ್ಚಕ್ಕೆ ಸರಿಸಾಟಿಯಾಗಿರುತ್ತದೆ. ಹೀಗಾಗಿ ಎಲ್ಲಿಂದ ಬೇಕಾದರೂ ನ್ಯೂಯಾರ್ಕ್‌ ತಲುಪುವುದು ಸುಲಭ.

ಇನ್ನು ನ್ಯೂಯಾರ್ಕ್‌ ನಗರದಲ್ಲಿನ ಸಂಚಾರ ಸೌಲಭ್ಯ. ಕಾರಿನಲ್ಲಿ ನ್ಯೂಯಾರ್ಕ್‌ ನಗರಕ್ಕೆ ಬರುವುದು, ಬಂದು ಸುತ್ತುವುದು ಕನಸಿನ ಮಾತು. ನ್ಯೂಯಾರ್ಕ್‌ನಲ್ಲಿ ಅಪಾರ ಸಂಚಾರ ದಟ್ಟಣೆ. ಕಾರಿನಲ್ಲೆ ಬಂದರೂ ಬೇಕೆಂದಲ್ಲಿ ಕಾರ್ ಪಾರ್ಕಿಂಗ್‌ ಮಾಡುವುದು ಸಾಧ್ಯವೇ ಇಲ್ಲ. ಅನೇಕ ಕಡೆ ಏಕ ಮುಖ ಸಂಚಾರ. ಅವೆನ್ಯುಗಳಲ್ಲಿ ಕಾರಿನಲ್ಲಿ ಹೋಗಬಹುದಾದರೂ ಸ್ಟ್ರೀಟ್‌ಗಳಲ್ಲಿ ಬಹು ಕಷ್ಟ. ಇನ್ನು ಕಾರ್ ಪಾರ್ಕಿಂಗ್ ದರ ಬಲು ದುಬಾರಿ. ಆದ್ದರಿಂದ ನಾನು ಎನ್ನುವಂತಹ ಶ್ರೀಮಂತರು ಸಹಾ ಮನೆಯಿಂದ ಸೀದಾ ಕಚೇರಿಗೆ ಕಾರಿನಲ್ಲಿ ಹೋಗುವೆ ಎನ್ನುವುದು ಆಗದ ಮಾತು. ಹಾಗಾಗಿ ನ್ಯೂಯಾರ್ಕ್‌ನ ಜನನಿಬಿಡ ಬೀದಿಗಳಲ್ಲಿ ಕಾರಿಗಿಂತ ಕಾಲ್ನಡಿಗೆಯ ಸಂಚಾರ ಸುಲಭ. ಇಲ್ಲಿ ಯೆಲ್ಲೊ ಟ್ಯಾಕ್ಸಿ ಅಥವಾ ಕ್ಯಾಬ್‌ಗಳೂ ಇವೆ; ಕನಿಷ್ಠ  ದರ ಹತ್ತು ಡಾಲರ್. ಆನಂತರ ಪ್ರತೀ ಮೈಲಿಗೂ ಒಂದು ಡಾಲರ್. ಟ್ಯಾಕ್ಸಿ ಓಡಿದರೂ ಸರಿ ಓಡದಿದ್ದರೂ ಸರಿ. ಪ್ರತಿ ನಿಮಿಷಕ್ಕೂ ಒಂದು ಡಾಲರ್, ಟ್ರಾಫಿಕ್ ನಲ್ಲಿ ಎರಡು ನಿಮಿಷ ನಿಂತರೂ ಅದಕ್ಕೂ ಪ್ರಯಾಣಿಕರೇ ಹಣ ತೆರಬೇಕು. ಒಂದು ನಿಗದಿತ ಸ್ಥಳದಿಂದ ಇನ್ನೊಂದು ನಿಗದಿತ ಸ್ಥಳಕ್ಕೆ ಹೋಗಲು ಮಾತ್ರ ಕ್ಯಾಬ್ ಬಳಸಬಹುದು. ಪ್ರವಾಸಿ ತಾಣಗಳನ್ನು ನೋಡಲು ಟ್ಯಾಕ್ಸಿಯಲ್ಲಿ ಹೋಗುವುದು ನೀಗದ ಮಾತು. ನಾಲ್ಕು ಜನ ಇದ್ದರೆ ಸರಿ. ಒಬ್ಬರಾದರಂತೂ ಅಲ್ಲಿ ಕ್ಯಾಬ್ ಉಪಯೋಗವೇ ಇಲ್ಲ. ಮೇಲಾಗಿ ಟ್ಯಾಕ್ಸಿ ಚಾಲಕರು ಹೆಚ್ಚಾಗಿ ಮೆಕ್ಸಿಕನ್ನರು, ಹೆಸ್ಪಾನಿಯರು ಇಲ್ಲವೆ ಆಫ್ರಿಕನ್ ಅಮೇರಿಕನ್ನರು. ಅವರ ಇಂಗ್ಲಿಷ್ ನಮಗೆ ತಿಳಿಯದು. ನಮ್ಮ ಇಂಗ್ಲಿಷ್ ಅಲ್ಲಿ ಯಾವ ಕೆಲಸಕ್ಕೂ ಬಾರದು. ಕೈಸನ್ನೆ ಬಾಯಿ ಸನ್ನೆಯಲ್ಲೇ ಸಂವಹನ. ಇನ್ನು ಮೆಟ್ರೋ ಬಸ್ ಗಳು ಸಾಕಷ್ಟಿವೆ. ಅದರದು ಒಂದೇ ಒಂದು ಸಮಸ್ಯೆ. ಎಲ್ಲಿಗೆ ಹೋಗಬೇಕೆಂದರೂ ಕನಿಷ್ಠ ಎರಡು ಡಾಲರ್. ಅದೂ ಚಿಲ್ಲರೆಯೇ ಇರಬೇಕು. ಬಾಗಿಲಲ್ಲೇ ಇರುವ ಯಂತ್ರದ ಬಾಯಿಗೆ ಸರಿಯಾಗಿ ಎರಡು ಡಾಲರ್ ಹಾಕಿದರೆ ಮಾತ್ರ ಪ್ರವೇಶದ ಅವಕಾಶ. ಮೇಲಾಗಿ ಹೊಸಬರಿಗೆ ಎಲ್ಲಿ ಹತ್ತಬೇಕು, ಇಳಿಯುವುದು ಎಲ್ಲಿ ಎಂಬುದೇ ಅಯೋಮಯ. ಅಲ್ಲದೇ ಅನೇಕ ಕಡೆ ಏಕಮುಖ ಸಂಚಾರ. ಹಾಗಾಗಿ ನಮಗೆ ಬೇಕಾದ ತಾಣವನ್ನು ನೇರವಾಗಿ ತಲುಪುವುದು ಕಷ್ಟ. ಅಕಸ್ಮಾತ್‌ ನಮಗೆ ಬೇಕಾದ ಸ್ಥಳದ ಹತ್ತಿರಹೋದರೂ ಅವು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.

ನ್ಯೂಯಾರ್ಕ್‌ ನಗರದಲ್ಲಿ ಅತಿ ಉಳಿತಾಯದ ಹಾಗು ಅತೀ ವೇಗದ ಸಂಚಾರಿ ಸಾಧನ ಎಂದರೆ ಸಬ್ ವೇ ನಗರದ ಭೂಮಿಯ ಕೆಳಗೆ ನೂರಾರು ಅಡಿ ಆಳದಲ್ಲಿ ಸಬ್ ವೆಗಳು ನರಮಂಡಲದಂತೆ ಪಸರಿಸಿವೆ. ನ್ಯೂಯಾರ್ಕ್‌ನ ಪೆನ್ ನಿಲ್ದಾಣವಿರುವುದೇ ನೆಲದಡಿಯಲ್ಲಿ. ಭೂಮಿಯ ಮೇಲೆ ಕಾಣುವುದು ಪ್ರವೇಶ ದ್ವಾರ ಮಾತ್ರ. ನೆಲದಾಳದಲ್ಲಿ ಬುಲೆಟ್ ನಂತೆ ಸಾಗುವ ಸಬ್ ವೇಗಳ ಸಮೂಹವಿದೆ. ಎಬಿಸಿ ಎಂಬ ಇಂಗ್ಲಿಷ್ ಅಕ್ಷರ ಮಾಲೆಗಳಲ್ಲದೆ, ೧,೨,೩ ಎಂಬ ಸಂಖ್ಯಾ ಫಲಕಗಳನ್ನು ಹೊತ್ತ ಮಿಲಿಯನ್ ಗಟ್ಟಳೆ ಜನರನ್ನು ಸಾಗಿಸುವ ಈ ಸಂಚಾರಿ ಸಾಧನವು ಜಗತ್ತಿನಲ್ಲೇ ವಿರಳ ಎನ್ನಬಹುದು. ಒಂದು ಸವಾರಿಗೆ ಇದಕ್ಕೆ ಎರಡು ಡಾಲರ್ ಮಾತ್ರ. ಎಲ್ಲಿಂದ ಎಲ್ಲಿಗೆ ಹೋದರೂ ಇಲ್ಲಿ ಒಂದೇ ದರ. ದೂರ ಸನಿಹ ಎಂಬ ಮಾತೇ ಇಲ್ಲ. ಯಾವ ಸಬ್ ವೆಯನ್ನಾದರು ಹಿಡಿದು, ಎಲ್ಲಿಗೋ ಹೋಗಿ ಮತ್ತೆ ಅಲ್ಲಿಂದ ಇನ್ನೆಲ್ಲಿಗೊ ಚಲಿಸಿ ಪುನಃ ವಾಪಸ್‌ ಬರುವೆ ಎಂದರೂ ಸರಿ ಎರಡೆ ಡಾಲರ್. ಆದರೆ ಹೊರಗೆ ಬಂದರೆ ಮುಗಿಯಿತು ಆ ಟಿಕೆಟ್ ಗೆ ಬೆಲೆಯಿಲ್ಲ. ದಿನಕ್ಕೆ ಏಳು ಡಾಲರ್ ಮೆಟ್ರೊ ಕಾರ್ಡ್‌ ಪಡೆದರೆ ದಿನಪೂರ್ತಿ ಎಲ್ಲೆಂದರಲ್ಲಿ ಬರಬಹುದು ಹೋಗಬಹುದು. ಎಲ್ಲಾ ಕೆಲಸಗಳು ಕಂಪ್ಯೂಟರ್ ಚಾಲಿತ. ಸಬ್ ವೇ ಸ್ಟೇಷನ್ ಗೆ ಹೋಗಲು ಬಾಗಿಲಲ್ಲೇ ಇರುವ ಸಾಧನದಲ್ಲಿ ಮೆಟ್ರೊ ಕಾರ್ಡ್‌ ಉಜ್ಜಿದಾಗ ಮಾತ್ರ ಒಳಹೋಗಲು ಬಿಡುತ್ತವೆ. ಒಮ್ಮೆ ಒಬ್ಬರಿಗೆ ಮಾತ್ರ ಪ್ರವೇಶ. ಒಳ ಹೋದನಂತರ ಎಲ್ಲಿ ಬೇಕಾದರೂ ಹೊಗಬಹುದು. ಯಾವ ಟ್ರೇನ್  ಬೇಕಾದರು ಹತ್ತಬಹುದು. ಎಲ್ಲಾ  ಟ್ರೇನ್ ಗಳಿಗೂ ಸ್ವಯಂಚಾಲಿತ ಬಾಗಿಲು. ನಿಲ್ದಾಣ ಬಂದ ತಕ್ಷಣ ತಮಗೆ ತಾವೇ ತೆಗೆದುಕೊಳ್ಳುತ್ತವೆ. ಒಂದು ನಿಮಿಷದ ನಂತರ ಮುಚ್ಚಿಕೊಳ್ಳುತ್ತವೆ. ಬಾಗಿಲು ಮುಚ್ಚಲು ತಡೆಯಾದರೆ ಎಚ್ಚರಿಕೆ ಗಂಟೆ ಬಾರಿಸುತ್ತದೆ, ರೈಲು ಹೊರಡುವುದೇ ಇಲ್ಲ. ಜನ ಸಾಮಾನು ಸರಂಜಾಮು ಬೆಕ್ಕು, ನಾಯಿ, ಸೈಕಲ್‌ ಸಮೇತ ಪ್ರಯಾಣಿಸಬಹುದು. ಇಲ್ಲಿ ಟಿಕೆಟ್ ತಪಾಸಣೆಯ ತರಲೆ ಇಲ್ಲ. ಟಿಕೆಟ್ ಇಲ್ಲದವರು ಒಳಗೆ ಬರುವ ಅವಕಾಶವೆ ಇಲ್ಲ. ಹಾಗಾಗಿ ಟಿಕೆಟ್ ರಹಿತ ಪ್ರಯಾಣಿಕರು ಇರುವುದೆ ಇಲ್ಲ. ಪ್ರತಿ ನಿಲ್ದಾಣದಲ್ಲು ಅಪ್ ಟೌನ್ ಮತ್ತು ಡೌನ್ ಟೌನ್ ಎಂಬ ಬೇರೆ ಬೇರೆ ಅಂಕಣಗಳಿರುತ್ತವೆ. ಪೆನ್ನ್ ನಿಲ್ದಾಣವಿರುವುದು ೩೪ನೇ ರಸ್ತೆಯಲ್ಲಿ, ೩೪ಕ್ಕಿಂತ ಹೆಚ್ಚಿನ ಸಂಖ್ಯೆಯ ರಸ್ತೆಯ ಕಡೆಗೆ ಹೋಗುವ ರೈಲುಗಳಿಗೆ ಅಪ್ ಟೌನ್‌ ಎಂದು ಕಡಿಮೆ ಸಂಖ್ಯೆಯ ನಿಲ್ದಾಣಗಳ ಕಡೆ ಹೋಗುವವುಗಳನ್ನು ಡೌನ್ ಟೌನ್ ಎಂದು ಕರೆಯುವರು. ಮೊದಮೊದಲು ನಾನು ಗಡಿ ಬಿಡಿಯಲ್ಲಿ ಗೊತ್ತಾಗದೆ ಅಪ್ ಟೌನ್ ಗಾಡಿಯ ಬದಲು ಡೌನ್ ಟೌನ್ ಗಾಡಿ ಹತ್ತಿ ನಾನು ಹೋಗಬೇಕಾದ ಜಾಗದ ವಿರುದ್ಧ ದಿಕ್ಕಿನಲ್ಲಿ ಹತ್ತಾರು ಮೈಲು ಹೋದದ್ದು ಉಂಟು. ಮಧ್ಯದಲ್ಲಿ ಬರುವ ನಿಲ್ದಾಣಗಳ ಹೆಸರು ನೋಡಿಕೊಂಡು ಮುಂದಿನ ನಿಲ್ದಾಣದಲ್ಲಿ ಇಳಿದು ವಿರುದ್ಧ ದಿಕ್ಕಿನ ಕಡೆ ಹೋಗುವ ಟ್ರೇನ್ ಹಿಡಿದು ಹೊರಟಲ್ಲಿಗೆ ಪುನಃ ವಾಪಸಾಗತ್ತಿದ್ದೆ. ಸಮಯ ಹಾಳಾಗುತ್ತಿತ್ತು ನಿಜ. ಆದರೆ ಹೊಸ ಜಾಗ ನೋಡಿದ, ಹೊಸ ಅನುಭವ ಆಗುತ್ತಿತ್ತು. ಹೇಗಿದ್ದರೂ ನಾನು ಅಲೆಮಾರಿ. ಸಾಧಾರಣವಾಗಿ ಪ್ರಯಾಣ ಬೆಳಸುವ ಹಿಂದಿನ ದಿನವೇ ನಾನು ಹೊಗಬೇಕೆಂದು ಕೊಂಡಿರುವ ಜಾಗ, ನೋಡಬೇಕಾದ ಸ್ಥಳಗಳ ಬಗೆಗೆ ಅಂತರ್ಜಾಲದಲ್ಲಿ ಮಾಹಿತಿ ಪಡೆದಿರುತ್ತಿದ್ದೆ. ಆದುದರಿಂದ ಅಂತಹ ಗಾಬರಿ ಏನೂ ಆಗುತ್ತಿರಲಿಲ್ಲ. ಸಬ್ ವೇ ನಲ್ಲಿ ಮೆಟ್ರೊ ಕಾರ್ಡ್ ಪಡೆದರೆ ಒಂದು ಅನುಕೂಲ. ಮೆಟ್ರೋ ರೈಲು, ಬಸ್ಸು, ಪಾಥ್ ವೇ ಹಾಗೂ ಎಲ್ಎಲ್ಆರ್ ಗಳಲ್ಲೂ ಅದೇ ಕಾರ್ಡ ಬಳಸಬಹುದು. ಮೆಟ್ರೋ ಅಥವಾ ಸಬ್ ವೇಗಳು ಪೂರ್ಣ ನೆಲದಡಿಯಲ್ಲಿಯೇ ಚಲಿಸುತ್ತವೆ. ಪಾಥವೇ ನೆಲದಡಿ ಮತ್ತು ನೆಲದ ಮೇಲೆ ಓಡಾಡುತ್ತವೆ. ಎಲ್ಎಲ್ಆರ್ ಗಳು ನಮ್ಮ ಟ್ರಾಮಿನಂತ ನೆಲದ ಮೇಲೆಮಾತ್ರ.

ಸಬ್ ವೇ ಕಾರ್ಡ್ ಪಡೆಯುವುದು ಸರಳ. ನಿಲ್ದಾಣದ ಮುಂಭಾಗದಲ್ಲೇ ವೆಂಡಿಂಗ್ ಯಂತ್ರ ಇರುತ್ತವೆ. ಎಷ್ಟು ಮೊತ್ತದ ಕಾರ್ಡ್ ಬೇಕಾದರೆ ಅಷ್ಟು ಹಣ ಹಾಕಿದರೆ ಆಯಿತು ಕೈಗೆ ಕಾರ್ಡ್ ದೊರೆಯುವುದು. ಇಲ್ಲವಾದರೆ ಅಲ್ಲಿಯೇ ಅದನ್ನು ಮಾರಲು ಕೌಂಟರ್ ನಲ್ಲಿ ಸಿಬ್ಬಂದಿ ಕುಳಿತಿರುತ್ತಾರೆ. ಕಾರ್ಡ್ ಗಳು ನಮ್ಮ ಮೊಬೈಲಿನ ಕರೆನ್ಸಿ ಇದ್ದಂತೆ. ಮುಗಿಯಿತೆಂದರೆ ಎಷ್ಟು ಬೇಕೋ ಅಷ್ಟು ಮೊತ್ತವನ್ನು ರಿಫಿಲ್ ಮಾಡಿಸಬಹುದು. ನಿರಾತಂಕವಾಗಿ ಓಡಾಡಬಹುದು. ಅದು ನಗರದಾದ್ಯಂತ ಚಲನಶೀಲತೆ ಕೊಡುತ್ತದೆ.

ನಾನು  ನ್ಯೂಯಾರ್ಕ್ ನಗರಿಯನ್ನು ಯಾವುದೆ ಖಾಸಗಿ ಅಥವ ಸ್ವಂತ ವಾಹನ ಬಳಸದೆ ಸಾರ್ವಜನಿಕ ಸಂಚಾರಿ ಸೌಲಭ್ಯವನ್ನು ಬಳಸಿಕೊಂಡು ಕಾಸಿನ ಖರ್ಚು ಹೆಚ್ಚಿಲ್ಲದೆ ಎಲ್ಲ ಕಡೆ ವಿನೋಬ ಭಾವೆಯರನ್ನು ನೆನೆದು ಕಾಲ ಕಾಲೇಶ್ವರ ಮೋಟಾರು ಸರ್ವೀಸನ್ನೆ ನೆಚ್ಚಿಸುತ್ತಿದೆ. ಕಾಲು ನೊಂದ ಕಡೆ ಕುಳಿತು, ಕಣ್ಣಿಗೆ ಖುಷಿಯಾದಲ್ಲಿ ನಿಂತು ಹೊತ್ತು ಗೊತ್ತಿನ ಪರಿವೆ ಇಲ್ಲದೆ, ಅರಸನ ಅಂಕೆ ಇಲ್ಲ ದೆವ್ವದ ಕಾಟ ಇಲ್ಲದೆ, ಬೇಕಾದಾಗ ಭೂಗರ್ಭ ಪ್ರವೇಶಮಾಡಿ, ಅಂದರೆ ಸಬ್ ವೇನಲ್ಲಿ ಪಯಣಿಸಿ, ಸಾಕಾದಾಗ ಹೊರಬಂದು ಕಾಲಿಗೆ ಕೆಲಸ ಕೊಡುತ್ತಿದ್ದೆ. ಅನೇಕ ಸಲ ನನ್ನ ನ್ಯೂಯಾರ್ಕ್ ನಗರದ ವೆಚ್ಚ ೫-೬ ಡಾಲರುಗಳು ಮಾತ್ರ. ಇನ್ನು ಪ್ರವಾಸಿಸ್ಥಳಗಳ ಪ್ರವೇಶ ಶುಲ್ಕ ತೆರಲೇಬೇಕಿತ್ತು. ಅದಕ್ಕೆ ನಾನು ಜತೆಗೆ ತೆಗೆದುಕೊಂಡುಹೋಗಿದ್ದ  ಆಕ್ಸಿಸ್ ಬ್ಯಾಂಕ್ ಇಂಟರ್ ನ್ಯಾಷನಲ್ ವೀಸಾ ಡೆಬಿಟ್ ಕಾರ್ಡ್ ಉಪಯೋಗಿಸುತ್ತಿದ್ದೆ. ಮಗಳೇನೋ ಖರ್ಚಿಗಿರಲಿ ಎಂದು ಸಾಕಷ್ಟು ಡಾಲರ್ ಪರ್ಸಿನಲ್ಲಿ ಇಟ್ಟು ಕಳುಹಿಸುತ್ತಿದ್ದಳು. ಅದರಲ್ಲಿ ೧೦೦, ೨೦, ೧೦. ೫, ೧ ಡಾಲರು ಬೆಲೆಯ ನೋಟುಗಳು ಇದ್ದವು. ಜತೆಗೆ ಸಾಕಷ್ಟು ಡೈಮು, ಸೆಂಟುಗಳ ಚಿಲ್ಲರೆ ಇರುತ್ತಿದ್ದವು. ನಾನು ಚಿಕ್ಕವನಿದ್ದಾಗ “ಅರೌಂಡ್ ದ ವರ್ಲ್ಡ್ ಇನ್ ಫಾರ್ಟಿ ಡೇಸ್” ಎಂಬ ಸಿನೆಮಾ ನೋಡಿದ್ದೆ. ಈಗ ನಾನು ಒಂದು ದಿನಕ್ಕೆ  “ಅರೌಂಡ್ ನ್ಯೂಯಾರ್ಕ್ ಇನ್ ಟೆನ್ ಡಾಲರ್ಸ್” ಎಂಬ ಗುರಿಯನ್ನು ಇಟ್ಟುಕೊಂಡು ಹೊರಟಿದ್ದೆ. ಅಕ್ಷರಶಃ ಅದು ಸಾಧ್ಯವಾಗಲಿಲ್ಲ. ಅಂದರೆ ನನ್ನದು ಉಳಿತಾಯದ ದೃಷ್ಟಿ ಮಾತ್ರ ಅಲ್ಲ. ಆದರೆ ನ್ಯೂಯಾರ್ಕನ್ನು ಹೀಗೂ ನೋಡಬಹುದಲ್ಲ ಎಂಬ ಹೊಸ ದೃಷ್ಟಿಕೋನ ನನ್ನದಾಗಿತ್ತು. ಅಷ್ಟಲ್ಲದೆ ಅಮೆರಿಕಾದಲ್ಲಿ ಹಲವಾರು ವರ್ಷ ಇದ್ದವರೂ ಸಹಾ ನೋಡಲಾಗದ ತಾಣಗಳನ್ನು ನಾನು ನೋಡಬಹುದಾಗಿತ್ತು. ಇದು ಒಂದು ರೀತಿಯ ಪ್ರಯೋಗ. ಆದರೆ ಖುಷಿ. ಆಗದಿದ್ದರೆ ಅನುಭವ. ಬಿಲಿಯನರುಗಳ ಊರಿನಲ್ಲಿ ಬಿಲ್ಲಿಯನ್ನು ಖರ್ಚು ಮಾಡಿ ಓಡಾಡುವುದು ನೋಡುವದು ಎಂದರೆ ಸಾಮಾನ್ಯದ ಮಾತೆ? ಅದೊಂದು ರೀತಿಯಲ್ಲಿ ಸಂತೆಯಲ್ಲಿ ನಿಂತ ಸಂತನಂತಿತ್ತು ನನ್ನ ಸ್ಥಿತಿ. ಕೋಟಿ ಕೋಟಿ ಖರ್ಚುಮಾಡಿ ಕಟ್ಟಿಸಿದವನ್ನು ನೋಡಿ ನಲಿಯಲು ನನಗೇನು ಗುನುಗು? ಬೆನ್ನಿಗೆ ಬ್ಯಾಗು ಏರಿಸಿ, ಕೊರಳಿಗೆ ಕ್ಯಾಮರಾ ಹಾಕಿ, ತಲೆಗೆ ಟೋಪಿ ಧರಿಸಿ ಅನುವಾದಾಗಲೆಲ್ಲ ಹೊರಡುತ್ತಿದ್ದೆ. ಒಂದು ರೀತಿಯಲ್ಲಿ ಅರ್ಧ ಶತಮಾನದ ಹಿಂದೆ ಬೆಂಗಳೂರಿಗೆ ಬಂದ ಬೊರೇಗೌಡ ನಂತೆ ನಾನು “ನ್ಯೂಯಾರ್ಕನ್ನು ನಡೆದೇ ನೋಡಲು ಹೊರಟೆ.” ಒಂದೆ ವ್ಯತ್ಯಾಸ, ನಾನು ಯಾವುದೆ ಕೆಲಸಕ್ಕಾಗಿ ಅಲೆಯುತ್ತಿರಲಿಲ್ಲ. ಒಂದು ವಿಧದಲ್ಲಿ ಪ್ರಯಾಸ ಪಡದ ಪ್ರವಾಸಿ.

ಬೆನ್ನಲ್ಲಿ ಬುತ್ತಿ ಹೊತ್ತು ನಾನು ನೋಡಿದ ನ್ಯೂಯಾರ್ಕ್ ನಗರಿ

ನ್ಯೂಯಾರ್ಕ್ ಗೆ ಹೊರಡುವ ಮೊದಲು ಸ್ವಲ್ಪ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೆ. ನಾನು ಕಟ್ಟಾ ಸಸ್ಯಾಹಾರಿ. ಮೇಲಾಗಿ ನಾನು ಸೇವಿಸುವ ದ್ರವ ಎಂದರೆ ಹಾಲು ಮತ್ತು ನೀರು ಮಾತ್ರ. ಚಾ. ಕಾಫಿನೂ ಇಲ್ಲ. ಬೇರೆಯವುಗಳ ಬಗ್ಗೆ  ಹೇಳಬೇಕಿಲ್ಲ. ನನ್ನ ಮಾತು ಅಷ್ಟೇನೂ ಸಿಹಿಯಲ್ಲ ಎಂದು ಹಲವರ ಅಭಿಪ್ರಾಯ, ಆದರೆ ನನ್ನ ರಕ್ತ ಮಾತ್ರ ಎರಡು ದಶಕಗಳಿಂದ ಸಿಹಿಯೇ ಸಿಹಿ. ನಾನು ಬೆಲ್ಲ ಸಕ್ಕರೆ ತಿನ್ನುವ ಮಾತೆ ಇಲ್ಲ. ಯಾವುದೆ ಸಿಹಿ ತಿಂಡಿಯೂ ನನಗೆ ದೂರ. ದೇವರ ದಯೆ ಸಿಹಿ ನೀರು ಮಾತ್ರ ಧಾರಾಳವಾಗಿ ಕುಡಿಯಲು ವೈದ್ಯರ ಅನುಮೋದನೆ ಇದೆ. ನನ್ನ ದೇಹ ಒಂದು ಪುಟ್ಟ ಸಕ್ಕರೆ ಕಾರ್ಖಾನೆಯಾಗಿದೆ ಏನೋ ಎನ್ನುವಂತೆ ಆಹಾರ ಪಾನೀಯಗಳಲ್ಲಿ ತುಸು ಏಮಾರಿದರೂ ಸಾಕು ರಕ್ತದಲ್ಲಿನ ಸಕ್ಕರೆ ಮಟ್ಟ ದ್ವಿಶತಕ ದಾಟುತಿತ್ತು. ಹಾಗಿರುವಾಗ ತಂಪು ಪಾನೀಯಗಳಾದ ಕೋಕ್, ಥಂಪ್ಸ್ ಅಪ್ ಇತ್ಯಾದಿಗಳ ಸೇವನೆ ಸಾಧ್ಯವೇ ಇರಲಿಲ್ಲ. ಇಲ್ಲಿ ಪಾನೀಯಗಳ ಮಾರಾಟ ಬಹುತೇಕ  ವೆಂಡಿಂಗ್ ಮಿಷಿನ್ ಗಳ ಮೂಲಕ. ಅನೇಕ ಕಡೆ ಒಂದು ಡಾಲರ್ ನೀಡಿದರೆ ಬಿಲ್ ಜತೆ ಗೇಣು ಉದ್ದದ ಪ್ಲಾಸ್ಟಿಕ್ ಗ್ಲಾಸ್ ನೀಡುತ್ತಾರೆ. ಮೆಷಿನಿನ ನಲ್ಲಿಯ ಕೆಳಗೆ ಅದನ್ನು ಹಿಡಿದರೆ ಸಾಕು ತನ್ನಷ್ಟಕ್ಕೆ ತಾನೆ ಪಾನಿಯ ತುಂಬಿಕೊಳ್ಳುತ್ತದೆ. ಅಲ್ಲಿ ಆಯ್ಕೆಗೆ ಮೂರು ನಾಲ್ಕು ಬಣ್ಣ ಬಣ್ಣದ ರುಚಿ ರುಚಿಯ ಪಾನೀಯಗಳನ್ನು ಕುಡಿಯಲು ಅವಕಾಶವಿದೆ. ಯಾವುದು ಬೇಕಾದರೆ ಅದನ್ನು ಕುಡಿಯಬಹುದು. ಇನ್ನೊಂದು ವಿಶೇಷವೆಂದರೆ ಅನೇಕ ಕಡೆ ಪೂರ್ತಿ ಕುಡಿದಾದ ಮೇಲೆ ಇನ್ನೂ ಬೇಕೆನಿಸಿದರೆ ಹೆಚ್ಚಿನ ಹಣ ನೀಡಬೇಕಿಲ್ಲ. ಮತ್ತೆ ತುಂಬಿಸಿಕೊಂಡು ಕುಡಿಯಬಹುದು. ಸಾಧಾರಣವಾಗಿ ಒಂದು ಗ್ಲಾಸ್ ಖಾಲಿ ಮಾಡುವುದರಲ್ಲಿ ನಮಗೆ ಒಗೆದಾಡಿ ಹೋಗುತ್ತದೆ. ಆದರೆ ಅಲ್ಲಿನವರು ಆರಾಮಾಗಿ ಎರಡನೆ ಸಲ ಕುಡಿಯುವರು. ದೇಹಕ್ಕೆ ತಕ್ಕ ದಾಹ. ನಮಗೋ ಹಳಹಳಿ. ಕಾಸಿಗೆ ತಕ್ಕಷ್ಟು ಕುಡಿಯಲಾಗಲಿಲ್ಲ ಎಂದು. ಕೆಲವು ಯುವಕರು ತುಂಬ ಚಾಲಾಕಿ. ಒಂದೆ ಗ್ಲಾಸು ಇದ್ದರೂ ಒಬ್ಬರಾದ ಮೇಲೆ ಇನ್ನೊಬ್ಬರು ಸರತಿಯಲ್ಲಿ ತುಂಬಿಸಿ ಕುಡಿಯುವರು. ಜೋಡಿ ಹಕ್ಕಿಗಳಾದರೆ ಮದುವೆ ದಿನ ಕುಶಾಲಿಗಾಗಿ ಮಾಡುವರಲ್ಲ ಅದರ ಪುನರಾವರ್ತನೆ ಮಾಡುವರು. ಒಂದೆ ಗ್ಲಾಸು ಎರಡು ಸ್ಟ್ರಾ. ಆಗ ನಾಚಿಕೆ ನಟಿಸುತ್ತಾ ಫೋಟೋಗೆ ಫೋಸ್ ನೀಡಲು ಒಟ್ಟಿಗೆ ಕುಡಿದರೆ, ಈಗ ಖುಷಿ ಖು಼ಷಿಯಾಗಿ ಕೋಕ್ ಹೀರುವರು. ಜೊತೆಗೆ ಕಾಸಿಗೂ ಮೋಸವಿಲ್ಲ. ಅನುರಾಗದ ಅನುರಣ ಬೇರೆ. ತುಸು ವಯಸ್ಸಾದವರಾದರೆ ಕಾರಿನಲ್ಲಿ ಕೊಂಡು ಹೋಗಿ ಕುಡಿಯುವುದೂ ಉಂಟು. ಆದರೆ ಅಂಥವರ ಸಂಖ್ಯೆ ಬಹು ಕಡಿಮೆ.

ಇಲ್ಲಿನವರಿಗೆ ಡಯಟಿಂಗ್ ಪ್ರಜ್ಞೆ ಸದಾ ಜಾಗೃತ. ಕೆಜಿಗಟ್ಟಲೆ ತಿಂದರೂ, ಲೀಟರ್ ಗಟ್ಟಲೇ ಕುಡಿದರೂ ಕ್ವಿಂಟಲ್ ಲೆಕ್ಕದಲ್ಲಿ ತೂಕವಿದ್ದರೂ ಸೇವಿಸುವ ಪ್ರತಿಯೊಂದರ ಕ್ಯಾಲರಿ ಮೌಲ್ಯದ ಬಗ್ಗೆ ಖಚಿತವಾಗಿ ತಿಳಿಯಲೇಬೇಕು. ಪ್ರತಿ ಆಹಾರದ ಪೊಟ್ಟಣದ ಮೇಲೂ ಅದರ ಕ್ಯಾಲರಿ ಮೌಲ್ಯ, ಕಾರ್ಬೋ, ಪ್ರೋಟೀನ್, ಸೋಡಿಯಂ, ಪೊಟಾಸಿಯಂ ಹಾಗು ಇತರೆ ಲವಣಾಂಶಗಳ ಪ್ರಮಾಣವನ್ನು ಶೇಕಡವಾರು ನಮೂದಿಸಿರುವರು. ನನಗೆ ಅಚ್ಚರಿ ತರಿಸಿದ ಅಂಶ ಎಂದರೆ ನೀರಿನ ಬಾಟಲಿಯ ಮೇಲೂ ಈ ಎಲ್ಲ ಅಂಶಗಳು ನಮೂದಿತವಾಗಿವೆ. ಅದು ಬೀರಾಗಿದ್ದರೇನು, ನೀರಾಗಿದ್ದರೇನು ಸರ್ಕಾರಿ ಆದೇಶ ಜಾರಿ ಮಾಡುವಾಗ ವಿವೇಚನೆಗೆ ಅವಕಾಶವೆಲ್ಲಿ. ಸೀಲಾದ ಆಹಾರ ಪಾನೀಯಗಳ ಎಲ್ಲದರ ಮೇಲೂ ಕ್ಯಾಲರಿ ಮೌಲ್ಯ ಹಾಗೂ ಅದರಲ್ಲಿ ಇರುವ ವಸ್ತುಗಳ ವಿವರ ಇರಬೇಕು. ಅಷ್ಟೆ. ನೀರಾದರೆ ಏನು, ಅದಕ್ಕೆ  ಕ್ಯಾಲೊರಿ ಮೌಲ್ಯ ಇಲ್ಲದಿದ್ದರೆ? ಅದರ ಮುಂದೆ ಸೊನ್ನೆ ಎಂದು ಬರೆಯುವರು. ಸೊನ್ನೆಯೂ ಒಂದು ಸಂಖ್ಯೆ ತಾನೆ.

ಅಲ್ಲಿ ಹದಿ ವಯಸ್ಸಿನಲ್ಲಿ ಲಂಗು ಲಗಾಮಿಲ್ಲದ ಜೀವನ ನಡೆಸುವರು. ತಿನ್ನುವುದರಲ್ಲಿ, ಕುಡಿಯುವುದರಲ್ಲಿ, ಯಾವುದರಲ್ಲೂ ಹಿತ ಮಿತ ಇಲ್ಲ. ಮೂವತ್ತು ಮುಟ್ಟಿದ ನಂತರ ಜಿಮ್ ನಲ್ಲಿ ಸ್ಲಿಮ್, ಟ್ರಿಮ್ ಎಂದು ಬೆವರು ಬಸಿಯುವರು. ಟ್ರೆಡ್ ಮಿಲ್ ಮೇಲೆ ಗಂಟೆಗಟ್ಟಲೆ ಓಡುವರು. ಏರುತ್ತಿರುವ ಮೈಭಾರ ಇಳಸಿ, ಜಾರುತ್ತಿರುವ ಯೌವನವನ್ನು ಉಳಿಸಿಕೊಳ್ಳಲು ಹಂಬಲಿಸುವರು. ಅದಕ್ಕಾಗಿ ಸಾವಿರಾರು ಡಾಲರ್ ವೆಚ್ಚ ಮಾಡುವರು. ಆಹಾರ ಪಾನೀಯಗಳಲ್ಲೂ ಎಚ್ಚರಿಕೆಯ ಆಯ್ಕೆ. ಡಯಟ್ ಪಾನೀಯಗಳು, ಶುಗರ್ ಫ್ರೀ ಐಸ್ ಕ್ರೀಮ್, ಸಿಹಿ ತಿನಿಸುಗಳು, ಝಿರೋ ಕೊಲೆಸ್ಟ್ರಾಲ್ ಆಹಾರ ಇತ್ಯಾದಿ. ಆದರೆ ಬೆಳೆದ ಮೈ ಇಳಿಯದು, ಹೆಚ್ಚಿದ ಗಾತ್ರ ಕುಗ್ಗದು. ಮಕ್ಕಳಲ್ಲಿ ಹದಿ ಹರೆಯದವರಲ್ಲಿ ಬೊಜ್ಜು ಒಂದು ಬಗೆಹರಿಯದ ಸಮಸ್ಯೆಯಾಗಿದೆ. ತೂಕ ಇಳಿಸುವದು ಅಲ್ಲಿ ಬಿಲಿಯನ್ ಡಾಲರ್ ಉದ್ಯಮ.

ನಾನು ಇಲ್ಲಿ ನಮ್ಮ ಅಜ್ಜಿಯ ಕಾಲದ ರೂಢಿಯನ್ನು ಅಳವಡಿಸಿಕೊಂಡೆ. ಆಗ ಬಹುತೇಕ ದೂರದ ಊರಿಗೆ ರೈಲಿನಲ್ಲಿಯೇ ಪಯಣ. ತಿನ್ನಲು ಅವಲಕ್ಕಿ, ಅರಳ ಹಿಟ್ಟು, ಚಕ್ಕಲಿ ಕೋಡುಬಳೆ ಇತ್ಯಾದಿಗಳಿರುತ್ತಿದ್ದವು. ಕುಡಿಯಲು ನೀರನ್ನೂ ಒಯ್ಯಬೇಕಿತ್ತು. ಅದಕ್ಕಾಗಿ ವಿಶೇಷ ಕಂಚಿನ ಪಾತ್ರೆ. ಅದನ್ನು ರೈಲು ಚೊಂಬು ಎಂದೇ ಕೆಲವರು ಕರೆದರೆ ಇನ್ನು ಅನೇಕರು ಅದನ್ನು ತಿರುಪಿನ ತಂಬಿಗೆ ಎನ್ನುತ್ತಿದ್ದರು. ಕಾರಣ ಅದಕ್ಕೆ ತಿರುಪಿರುವ ಮುಚ್ಚಳ ಇರುತ್ತಿತ್ತು ಅದರಲ್ಲೆ ಹಿತ್ತಾಳೆಯ ಚಿಕ್ಕ ಲೋಟ ಸಹ ಇರುತ್ತಿತ್ತು. ಮೇಲೆ ಹಿಡಿಕೆಯೂ ಇರುತ್ತಿತ್ತು. ಈಗಿನ ವಾಟರ್ ಬಾಟಲಿನ, ಥರ್ಮಾಸ್ ನ ಮುತ್ತಜ್ಜಿ ಅದೇ ಇರಬೇಕು. ಆಗ ಉಗಿಬಂಡಿಗಳ ಕಾಲ. ದೂರ ಪ್ರಯಾಣದ ರೈಲುಗಳಾದರೆ ಸಾಧಾರಣವಾಗಿ ನದಿ ದಡದಲ್ಲಿನ ಊರಿನಲ್ಲಿ ನೀರಿನ ನಿಲ್ದಾಣಗಳು ಇರುತ್ತಿದ್ದವು. ಅಲ್ಲಿ ರೈಲು ತುಸು ಹೊತ್ತು ಜಾಸ್ತಿ  ನಿಲ್ಲುತಿತ್ತು, ನಿಂತು ಇಂಜನ್ ನೀರು ತುಂಬಿಸಿಕೊಳ್ಳುತ್ತಿತ್ತು. ಆಗ ಪ್ರಯಾಣಿಕರಿಗೂ ನೀರು ತುಂಬಿಸಿಕೊಳ್ಳಲು ಅವಕಾಶ. ರೈಲು ನಿಲ್ಲುತ್ತಿದ್ದಂತೆಯೇ ಯುವಕರು ಟಣ್ ಎಂದು ಜಿಗಿದು ನಳದ ಕಡೆಗೆ ಓಡುತ್ತಿದ್ದರು. ಇಲ್ಲಿ ಪೌರುಷ ಪ್ರದರ್ಶನದ ಅವಕಾಶ. ಹೆಚ್ಚು ಸಲ ನೀರು ತಂದವನೇ ಹೀರೋ. ನಾನೂ ನೀರಿನ ವಿಷಯದಲ್ಲಿ! ಅನೇಕ ದಶಕ ಹಿಂದೆ ಹೋದೆ. ನೀರಿನ ಬಾಟಲಿಯನ್ನು ಬೆನ್ನಿಗೆ ಇಟ್ಟು ಕೊಂಡೆ ಹೊರಡುತ್ತಿದ್ದೆ. ಜತೆಗೆ ಅಳಿಯನ ಒತ್ತಾಯದ ಮೇರೆಗೆ ಡಯಟ್ ಕೋಕ್ ಇರುತ್ತಿತ್ತು. ಇನ್ನು ಆಹಾರದ ವಿಷಯಕ್ಕೆ ಬಂದರೆ ನ್ಯೂಯಾರ್ಕ್ ನಲ್ಲಿ ಸಿಗಲಾರದ ಆಹಾರವೇ ಇಲ್ಲ. ಸಪ್ತ ತಾರಾ ಹೋಟೆಲಿನಿಂದ ಹಿಡಿದು ಬೀದಿ ಬದಿಯ ಗೂಡಂಗಡಿಗಳು ಅಕ್ಕಪಕ್ಕದಲ್ಲಿಯೇ ಇವೆ. ವೈವಿಧ್ಯಮಯ ತಿಂಡಿ ತಿನಿಸು ಒದಗಿಸುತ್ತವೆ. ಸಸ್ಯಾಹಾರಿಗಳಿಗೆ ಮಾತ್ರ ಕಷ್ಟ. ಸಾಧಾರಣವಾಗಿ ನಮ್ಮಂತಹವರು ಎಗ್ಗಿಲ್ಲದೆ ತಿನ್ನಬಹುದಾದುದು ಸಲಾಡ್ ಮಾತ್ರ. ಅವುಗಳಲ್ಲಿ ಎಷ್ಟು ವೈವಿಧ್ಯ.  ಕಣ್ಣಿಗೆ ತಂಪು ಬಾಯಿಗೆ ಸೊಂಪು. ಒಂದೆ ತೊಂದರೆ ಎಂದರೆ ಅವುಗಳ ಬೆಲೆ. ಎಲ್ಲವೂ ೧೦ ಡಾಲರ್ ಆಚೆ ಈಚೆ, ಕಡಿಮೆ ಇಲ್ಲ. ಜತೆಗೆ ಅವರು ನೀಡುವ ಪ್ರಮಾಣ ನಮ್ಮಲ್ಲಿನ ಒಂದು ಮೇಕೆ ಮರಿಗೆ ಸಾಕಾಗುವಷ್ಟು. ಹಾಗಾಗಿ ನಾನು ಕೊಂಡು ತಿನ್ನುವ ಗೋಜಿಗೆ ಹೋಗುತ್ತಿರಲಿಲ್ಲ.

ಅಲ್ಲಿ ಹಣ್ಣಿಗೆ ಮಾತ್ರ ಬರವೇ ಇಲ್ಲ. ನ್ಯೂಯಾರ್ಕ್‌ ನಗರಕ್ಕೆ ಬಿಗ್ ಆ್ಯಪಲ್ ಎಂಬ ಹೆಸರೇ ಇದೆ. ಅಲ್ಲಿ ಸೇಬಿನ ಮಾರಾಟ ಬಹು ಜೋರು. ಡಾಲರ್ ಗೆ ಒಂದು ಸೇಬು. ನಮ್ಮಲ್ಲಿ ಅದೆ ದುಡ್ಡಿಗೆ ಒಂದು ಕೆ.ಜಿ ಸೇಬು ಸಿಗುವುದು. ಅಂದರೆ ಅಲ್ಲಿ ಒಂದು ಸೇಬು ತಿಂದರೆ ಒಂದು ಡಾಲರ್ ನುಂಗಿದಂತೆ. ಪೀಚ್, ಚೆರ್ರಿ, ಬೆರ್ರಿ, ಏಪ್ರಿಕಾಟ್ ಎಲ್ಲವೂ ದೊರೆಯುವುದು. ಎಲ್ಲ ಆಕರ್ಷಕ ಪ್ಯಾಕ್ ಗಳಲ್ಲಿ ಬಿಡಿ ಬಿಡಿಯಾಗಿ ಅಲ್ಲ. ಒಂದೋ ಎರಡೋ ತಿನ್ನುವ ನನಗೆ ಅದು ಠೋಕ ವ್ಯಾಪಾರ ಎನಿಸಿತು. ಅದರ ಗೊಡವೆಯೇ ಬೇಡ ಎಂದುಕೊಂಡೆ. ವೈದ್ಯರು ನನಗೆ ಹೇಳಿದಂತೆ “ಬರೀ ಹೊಟ್ಟೆ ಬೇಡ, ಅದರಂತೆ ಭೂರಿಭೋಜನ ಕೂಡಾ” ಎಂಬ ಸಲಹೆಯ ಅಕ್ಷರ ಮತ್ತು ಅರ್ಥ ಎರಡನ್ನೂ ನಾನು ಮೀರುತ್ತಿರಲಿಲ್ಲ. ಮೂರು ತಾಸಿಗೊಮ್ಮೆ ಏನಾದರೂ ತಿನ್ನಲೇಬೇಕಿತ್ತು. ಮೆಲುಕಾಡುವ ಪ್ರಾಣಿಯಂತೆ. ಮನೆಯಿಂದ ಹೊರಡುವಾಗಲೇ ೪-೫ ಚಪಾತಿಗಳನ್ನು ಒಯ್ಯುತ್ತಿದ್ದೆ. ನನ್ನ ಶ್ರೀಮತಿ ಈ ವಿಷಯದಲ್ಲಿ ಬಹಳ ಪರಿಣಿತಳು. ಪ್ರತಿ ಚಪಾತಿಗೂ ಚಟ್ನಿಪುಡಿ ಎಣ್ಣೆ ಹದವಾಗಿ ಸವರಿ ಜತೆಗೆ ಪಲ್ಯವನ್ನೂ ಇಟ್ಟು ಸುರುಳಿ ಮಾಡಿ ಅದನ್ನು ಸಿಲದವರ್ ಫಾಯಲ್ ನಲ್ಲಿ ಸುತ್ತಿ ಇಡುತ್ತಿದ್ದಳು. ಎಲ್ಲಿ ಬೇಕಾದರೆ ಅಲ್ಲಿ ಯಾವಾಗ ಬೇಕಾದರೆ ಆವಾಗ ಒಂದನ್ನು ತೆಗೆದು ಮೇಲಿನ ಹೊದಿಕೆ ಬಿಡಿಸಿ ತಿನ್ನಲು ಹೆಚ್ಚು ಸಮಯ ಹಿಡಿಯುತ್ತಿರಲಿಲ್ಲ. ಜತೆಯಲ್ಲಿ ಒಯ್ದಿದ್ದ ಕಾಗದದ ನ್ಯಾಪ್ಕಿನ್ ನಿಂದ ಕೈ ಬಾಯಿ ಒರಸಿಕೊಂಡು ಹತ್ತಿರದಲ್ಲೆ ಇರುವ ಗಾರ್ಬೇಜ್ ಬಿನ್ ಗೆ ಹಾಕಿದರೆ ಆಯಿತು. ಇಲ್ಲವಾದರೆ ಅದನ್ನೂ ಮಡಿಚಿ ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ಸೇರಿಸಿ ಬೆನ್ನಿನ ಬ್ಯಾಗಿಗೆ ಹಾಕಿ ಹೊರಡಬೇಕು. ಅಲ್ಲಿ ಎಲ್ಲೆಂದರೆ ಅಲ್ಲಿ ಕಸ ಬಿಸಾಡಬಾರದು ಎಂಬ ಪಾಠವನ್ನು ಮಗಳು ಮನದಟ್ಟು ಮಾಡಿಸಿದ್ದಳು. ಐದು ಹತ್ತು ನಿಮಿಷದಲ್ಲಿ ಬೆನ್ನಿನ ಭಾರ ತುಸು ಹಗುರ. ಹೊಟ್ಟೆಯ ಚಿಂತೆಯೂ ಪರಿಹಾರ.

ಇಲ್ಲಿನ ಜನಕ್ಕೆ ಹರಟೆ ಹೊಡೆಯುತ್ತಾ ಸಾವಕಾಶವಾಗಿ ತಿನ್ನಲು ಎಲ್ಲಿದೆ ಸಮಯ. ಬಂಕಿನಲ್ಲಿ ಗಾಡಿಗೆ ಪೆಟ್ರೋಲ್ ತುಂಬಿಸಿದ ಹಾಗೆ ಇಲ್ಲಿನ ವರ್ಕಿಂಗ್ ಲಂಚ್ ಕೂಡಾ. ಫಟಾ ಪಟ್ ಮುಗಿಯುವುದು. ಈ ನಗರದ ಇನ್ನೊಂದು ವಿಶೇಷತೆ ಎಂದರೆ ಇದರ ಜನ ಸ್ನೇಹಿ ವಿನ್ಯಾಸ. ಊಟ ಒಂದಕ್ಕೆ ನೂರು ಡಾಲರಿನಿಂದ ಹಿಡಿದು ಬೀದಿ ಬದಿಯ ತಿಂಡಿ ತಿನ್ನುವವರಿಗೂ, ಮನೆಯಿಂದ ಡಬ್ಬಿ ತಂದವರಿಗೂ ಅನುಕೂಲಕರವಾದ ವ್ಯವಸ್ಥೆ ಇದೆ. ಹೆಚ್ಚು ಜನ ಕೆಲಸ ಮಾಡುವ ತಾಣಗಳ ಹತ್ತಿರ, ಬಹು ಅಂತಸ್ತಿನ ಕಟ್ಟಡಗಳ ಬದಿಯಲ್ಲಿ ತುಸು ಬಯಲು ಪ್ರದೇಶ ಇರುವುದು. ಅಲ್ಲಿ ಹತ್ತಾರು ಊಟದ ಮೇಜುಗಳು ಕುರ್ಚಿಗಳು. ಲಂಚ್ ಬಾಕ್ಸ್ ಅಥವಾ ಟೇಕ್ ಔಟ್ ಯಾವುದೆ ಇದ್ದರೂ ಅಲ್ಲಿ ಕುಳಿತು ಆಹಾರ ಸೇವಿಸಲು ಯಾವುದೆ ಅಡ್ಡಿ ಇಲ್ಲ. ಅಲ್ಲಿ ತೊಳೆಯುವ ಬಳಿಯುವ ಪ್ರಶ್ನೆ ಇಲ್ಲ. ನೀರಿನ ಗೋಜು ಗಲೀಜು ಇಲ್ಲ. ತಿಂಡಿ ತಿಂದು ಕೋಕ್ ಕುಡಿದು ಹೊರಟು ಬಿಡುವರು. ಪ್ರತಿ ಕಛೇರಿಯಲ್ಲೂ ತಂಪು ಪೆಟ್ಟಿಗೆ ಮತ್ತು ಮೈಕ್ರೋ ಓವನ್ ಇದ್ದೆ ಇರುವುದು. ಒಯ್ದ ತಿಂಡಿಯನ್ನು ಫ್ರಿಜ್ ನಲ್ಲಿ ಇಡುವರು. ತಿನ್ನುವಾಗ ಓವನ್ ನಲ್ಲಿ ೧೦ ಸೆಕೆಂಡ್ ಇಟ್ಟರೆ ಬಿಸಿ ಬಿಸಿ ಲಂಚ್ ಸಿದ್ದ. ಒಂದು ಹೊತ್ತಿನ ರಿಫಿಲ್ ಮುಗಿದಂತೆ. ನಾನೂ ಸಹಾ ಇವರ ಕಾಯಕ ಸಂಸ್ಕೃತಿಯ ಭಾಗವಾಗಿ ಹೋದೆ. ಶಕ್ತಿ ಪೂರಣಕ್ಕೆ ಅಗತ್ಯವಾದ ಉರವಲನ್ನು ಬೆನ್ನಿನ ಚೀಲದಲ್ಲೇ ಒಯ್ಯುತ್ತಿದ್ದೆ. ಹಿಂದೆ ನಮ್ಮ ಹಿರಿಯರು ಹೇಳುತ್ತಿದ್ದ ನಮ್ಮ ಬುತ್ತಿ ನಮ್ಮ ಕೈನಲ್ಲಿರಬೇಕು ಎಂಬ ಮಾತನ್ನು ಪಾಲಿಸಿದೆ. ಒಂದೆ ಮಾರ್ಪಾಟು. ಬುತ್ತಿ ಕೈನಲ್ಲಿ ಹಿಡಿದಿರಲಿಲ್ಲ ಬೆನ್ನಲ್ಲಿ ಹೊತ್ತಿದ್ದೆ. ಇದರಿಂದ ನನಗೂ ನಮ್ಮ ಮನೆಯವರಿಗೂ ನೆಮ್ಮದಿ. ಸಿಹಿ ರಕ್ತದ ಪ್ರಾಣಿಯಾದ ನನಗೆ ಹೊತ್ತಿಗೆ ಸರಿಯಾಗಿ ಆಹಾರ ಅಗತ್ಯ. ಇನ್ಸುಲಿನ್ ಕೊರತೆಯ ನನ್ನ ಎರಡೂವರೆ ದಶಕದ ಸುಗಮ ಸಹ ಜೀವನದ ರಹಸ್ಯ. ಕ್ರಮ ತಪ್ಪದ ಆಹಾರ ಸೇವನೆ. ಅದೂ ಅಲ್ಲದೆ ಸಮಯದ ಉಳಿತಾಯವೂ ಆಗುತ್ತಿತ್ತು. ಹೋಟೆಲ್ ಹುಡುಕುವ ಗೋಜಿಲ್ಲ. ತಿನಿಸು ಆರಿಸುವ, ಆರ್ಡರ್ ಮಾಡುವ ಚಿಂತೆ ಇಲ್ಲ. ಕಾಯುತ್ತಾ ಕೂಡುವ ಕೆಲಸವಿಲ್ಲ. ಹಸಿವೆಯಾದಾಗ ಹಸಿಬೆ ಬಿಚ್ಚಬಹುದಿತ್ತು. ತೋಟ ಕಂಡಲ್ಲಿ ತಳ ಊರಿ ವನ ಭೋಜನದ ಮೋಜು ಅನುಭವಿಸಬಹುದಿತ್ತು. ಹತ್ತು ನಿಮಿಷದಲ್ಲಿ ಊಟದ ಆಟ ಮುಗಿದು ಹೊಸ ನೋಟಕ್ಕೆ ಹುರುಪು ಮೂಡುತ್ತಿತ್ತು. ನನ್ನ ಈ ಬಗೆಯ ಭೋಜನ ವ್ಯವಸ್ಥೆಯು ಸುತ್ತಲಿನ ಜನರು ಬೆರಗಿನಿಂದ ಕಣ್ಣರಳಿಸುವಂತೆ ಮಾಡುತ್ತಿತ್ತು. ಒಬ್ಬ ಕುತೂಹಲ ತಡೆಯಲಾರದೆ ಕೇಳಿದ. ನಾನು ತಿನ್ನುತ್ತಿರುವದು ಏನು ಎಂದು? ನಾನು ಅವರ ಸ್ಪ್ರಿಂಗ್ ರೋಲ್ ನೋಡಿದ್ದೆ. ಅವರಿಗೆ ಅರ್ಥವಾಗಲಿ ಎಂದು ಚಪಾತಿ ಸುರಳಿಗೆ spiced  vegetable roll ಎಂದು ನಾಮಕರಣ ಮಾಡಿದೆ. ಅವನಿಗೆ ರುಚಿ ನೋಡಲು ಒಂದನ್ನು ಕೊಡಲು ಮುಂದಾದೆ. ಸಂಕೋಚವೋ, ಹಿಂಜರಿಕೆಯೋ ಅಥವ ಭಯವೋ ನಿರಾಕರಿಸಿದ. ಬಾಯ್ತುಂಬ thanks ಮಾತ್ರ ಹೇಳಿದ.

ಅಲ್ಲಿ ನಾನು ಗಮನಿಸಿದ ವಿಶೇಷವೆಂದರೆ ತಿನ್ನುವ ಆ ಜಾಗದಲ್ಲಿ ಮಾತು ಕಥೆ ಇಲ್ಲ. ಎಲ್ಲರೂ ಯಾಂತ್ರಿಕವಾಗಿ ಶಿಸ್ತಿನಿಂದ ತಿಂದು ಹೊರಡುತ್ತಿದ್ದರು. ಕಡಲೆ ತಿಂದು ಕೈತೊಳೆದಕೊಂಡ ಹಾಗೆ. ಎಲ್ಲಕ್ಕಿಂತ ಹೆಚ್ಚಾಗಿ ಶುಭ್ರತೆಗೆ ಅವರು ನೀಡುತ್ತಿದ್ದ ಗಮನ. ಯಾವುದೇ ಪಂಚತಾರಾ ಹೋಟೆಲು ಕಲಿಯುವಂತೆ ಇತ್ತು.

ಪೆನ್ ಸ್ಟೇಷನ್
ನ್ಯೂಯಾರ್ಕಿಗೆ ಹೊರಡುವ ಯೋಜನೆ ಹಾಕುವಾಗ ಮೊದಲು ಎಲ್ಲಿಗೆ ಹೋಗಬೇಕು ಎಂದು ನಿರ್ಧರಿಸಬೇಕಾಯಿತು. ಪೆನ್ ನಿಲ್ದಾಣದಿಂದ ಪ್ರಾರಂಭಿಸಿ ಹತ್ತಿರವಿರುವವನ್ನು ನೋಡತ್ತಾ ಹಾಗೆಯೇ ಡೌನ್ ಟೌನ್ ವರೆಗೆ ನೋಡಬಹುದಾದ ತಾಣಗಳಿಗೆ ಭೇಟಿ ನೀಡುವುದು ಅನುಕೂಲ ಎನಿಸಿತು. ಸಬ್ ವೇನಲ್ಲಿ ಸಾಧ್ಯವಾದಷ್ಟು ದೂರ ಪಯಣಿಸಿ ನಂತರ ನಡೆದೇ ನೋಡಬೇಕೆಂದು ನಿರ್ಧರಿಸಿದೆ.

ಮೊದಲು ನ್ಯೂಯಾರ್ಕಿನಲ್ಲಿ ರೈಲ್ವೆ ಸ್ಟೇಷನ್ ನೋಡಿದಾಗ ಪೆನ್ ಸ್ಟೇಷನ್ ಎಂಬ ಹೆಸರು ನೋಡಿ ನನಗೆ ಭದ್ರಾವತಿಯ ಪೇಪರ್ ಟೌನ್ ನೆನಪಿಗೆ ಬಂತು. ಕಾಗದ ತಯಾರಿಸವ ಕಾರ್ಖಾನೆಯಿಂದಾಗಿ ಅದಕ್ಕೆ ಆ ಹೆಸರು. ಅದರಂತೆಯೇ ಇಲ್ಲಿಯೂ ಪೆನ್ ತಯಾರಿಕೆ ಪ್ರಖ್ಯಾತವಾಗಿದೆಯೇನೋ ಅಂದುಕೊಂಡೆ. ಇಲ್ಲವಾದರೆ ಬರಹದ ಹಿರಿಮೆ ಮೆರೆಯಲು, ಲೇಖನಿಯ ಮಹತ್ವ ಎತ್ತಿ ಹಿಡಿಯಲು ಈ ಹೆಸರಿರಬಹುದು ಎನಿಸಿತು. ನನ್ನ ಊಹೆ ಸರಿ ಇರಲಿಲ್ಲ. ಇದು ಅಮೇರಿಕಾದಲ್ಲಿ ಮೊಟ್ಟಮೊದಲು ರೈಲು ಮಾರ್ಗ ಪ್ರಾರಂಭಿಸಿದ ಕಂಪನಿಯ ಹೆಸರಿನ ಸಂಕ್ಷಿಪ್ತ ರೂಪವಾಗಿತ್ತು. ರೈಲು ಮೊದಲು ಓಡಿದುದೇ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ. ಅಲ್ಲಿನ ಅದಿರು ಹಾಗು ಕಲ್ಲಿದ್ದಲನ್ನು ಸಾಗಣಿಕೆಗೆ ರೈಲು ಮಾರ್ಗ ಅಗತ್ಯವಾಯಿತು. ಆ ಕಂಪನಿಯ ಹೆಸರು ಪೆನ್ಸಿಲ್ವೇನಿಯಾ ರೈಲ್ ರೋಡ್. ಅದರ ಸಂಕ್ಷಿಪ್ತ ರೂಪವೆ Penn.

ಈ ಹೆಸರು ನ್ಯೂಯಾರ್ಕ್ ಮಾತ್ರವಲ್ಲದೆ ಇನ್ನೂ ಒಂದೆರಡು ಕಡೆ ಇದೆ. ಪೆನ್ಸಿಲ್ವೇನಿಯಾ ರೈಲ್ ರೋಡ್ (PRR) ಅಮೇರಿಕಾದ ರೈಲು ಮಾರ್ಗಗಳ ರಾಜ. ನ್ಯೂಯಾರ್ಕಿನ ಏಳು ಮತ್ತು ಎಂಟನೆ ಅವೆನ್ಯೂ ನಡುವೆ ಮೆಡಸನ್ ಸ್ಕೊಯರ್ ನ ಅಡಿಯಲ್ಲಿ ಎಂಟು ಎಕರೆ ಜಾಗದಲ್ಲಿ ಹಲವು ಹಂತದಲ್ಲಿ ಹರಡಿದೆ. ೩೧ ರಿಂದ ೩೪ನೇ ರಸ್ತೆಯವರೆಗೆ ಇದೆ. ಪ್ರತಿನಿತ್ಯ ೬ ಲಕ್ಷ ಜನ ಇಲ್ಲಿ ಪಯಣಿಸುವರು. ಬರುವವರಿಗೆ ಮತ್ತು ಹೋಗುವವರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದ ಮೊದಲ ನಿಲ್ದಾಣ ಇದು. ಇದಕ್ಕೆ ಅಂಟಿದಂತೆ ಸಬ್ ವೇ ಇದೆ. ಹೀಗಾಗಿ ದೂರದ ಊರಿನಿಂದ ಬಂದವರೂ ನೆಲದಡಿಯಲ್ಲಿಯೇ ಚಲಿಸಿ ನ್ಯೂಯಾರ್ಕಿನಲ್ಲಿ ತಮಗೆ ಬೇಕಾದ ಕಡೆ ಮೇಲೆ ಬರಬಹುದು.

ನ್ಯೂಯಾರ್ಕಿನ ವಿನ್ಯಾಸದಲ್ಲಿ ಅವೆನ್ಯೂಗಳದ್ದು ಪ್ರಧಾನ ಪಾತ್ರ. ಅವೆನ್ಯೂ ಅಂದರೆ ನಮ್ಮಲ್ಲಿನ ಮುಖ್ಯ ರಸ್ತೆ ಇದ್ದಂತೆ. ಅವು ಪರಸ್ಪರ ಸಮಾನಾಂತರವಾಗಿ ೫೦೦ರಿಂದ ೧೦೦೦ ಅಡಿ ಅಂತರದಲ್ಲಿವೆ. ಆದರೆ ನೇರವಾಗಿವೆ ಎಂದೇನೂ ಇಲ್ಲ. ಬಹುತೇಕ ನೇರವಾಗಿ ಸಾಗಿವೆ. ಬ್ರಾಡ್ ವೇ ಮಾತ್ರ ಹಾಗಿಲ್ಲ. ಕೆಲವಕ್ಕೆ ನಿರ್ದಿಷ್ಟ ಭಾಗದಲ್ಲಿ ಒಂದೊಂದು ಹೆಸರು. ಅಮೇರಿಕನ್ ಅವೆನ್ಯೂ, ಫ್ಯಾಷನ್ ಅವೆನ್ಯೂ, ಲಕ್ಸಂಬರ್ಗ್ ಅವೆನ್ಯೂ ಇತ್ಯಾದಿ. ಎಣಿಸಲು ಪ್ರಾರಂಭಿಸಿದರೆ ಅವುಗಳ ಸಂಖ್ಯೆ ಹತ್ತನ್ನೂ ದಾಟುವುದಿಲ್ಲ.. ಅವು ಅಗಲವಾಗಿವೆ. ಎಲ್ಲಿಯೂ ಏಕಮುಖ ಸಂಚಾರವಿಲ್ಲ. ಎಲ್ಲ ವಾಹನಗಳಿಗೂ ಮುಕ್ತ.

ಸ್ಟ್ರೀಟ್ ಗಳು ಮಾತ್ರ ಶಿಸ್ತುಬದ್ದ, ನಮ್ಮಲ್ಲಿನ ಅಡ್ಡರಸ್ತೆಗಳಂತೆ. ಅವು ಗೆರೆ ಹೊಡೆದಂತೆ ಅವೆನ್ಯೂಗಳಿಗೆ ಅಡ್ಡ ಅಡ್ಡಲಾಗಿವೆ. ಅಗಲ ಮಾತ್ರ ಕಿರಿದು. ಅದಕ್ಕಾಗಿ ಅವುಗಳಲ್ಲಿ ಬಹುತೇಕ ಏಕಮುಖ ಸಂಚಾರ. ನಮ್ಮ ಬೆಂಗಳೂರಿನ ಮಲ್ಲೇಶ್ವರದಂತೆ. ಆದರೆ ಒಂದೆ ವ್ಯತ್ಯಾಸ ಇಲ್ಲಿ ಹದಿನೆಂಟು ಅಡ್ಡ ರಸ್ತೆಗಳಾದರೆ ಅಲ್ಲಿ ನೂರಾ ಹದಿನೆಂಟಕ್ಕೂ ಹೆಚ್ಚು. ಒಂದು ರಸ್ತೆಗೆ ಇನ್ನೊಂದಕ್ಕೂ ಅಂತರ ಹೆಚ್ಚೇನೂ ಇಲ್ಲ. ೧೦೦-೨೦೦ ಅಡಿ ಇರಬಹುದು. ಆದರೆ ಉದ್ದ ಮಾತ್ರ ಮೈಲುಗಟ್ಟಲೆ. ಇಲ್ಲಿ ವಿಳಾಸ ಹುಡುಕುವುದು ಬಹಳ ಸುಲಭದ ಕೆಲಸ. ಅವೆನ್ಯೂ ಮತ್ತು ರಸ್ತೆಯ ಸಂಖ್ಯೆ ಇದ್ದರೆ ಸಾಕು. ಅನೇಕ ದೊಡ್ಡ ಕಟ್ಟಡಗಳು ೨-೩ ರಸ್ತೆ ಪೂರ್ತಿ ಆವರಿಸಿರುತ್ತವೆ. ಪೆನ್ ಸ್ಟೇಷನ್, ಪಬ್ಲಿಕ್ ಲೈಬ್ರರಿ, ನ್ಯಾಚುರಲ್ ಹಿಸ್ಟರಿ ಮ್ಯೂಜಿಯಂಗಳ ಒಂದು ತುದಿಯಿಂದ ಇನ್ನೊಂದು ತುದಿಗೆ ೨-೩ ಸ್ಟ್ರೀಟ್ ಗಳಾಗಬಹುದು.

ಸಬ್ ವೇಗಳು ತಲುಪುವುದು ಸ್ಟ್ರೀಟಗಳನ್ನೇ. ಬಹುತೇಕ ನಿಲ್ದಾಣಗಳನ್ನು ಸ್ಟ್ರೀಟ್ ಗಳ ಸಂಖ್ಯೆಯಿಂದಲೇ ಗುರುತಿಸುವರು. ಲೋಕಲ್ ಟ್ರೇನ್ ಗಳು ೪-೬ ಸ್ಟ್ರೀಟಿಗೆ ಒಂದು ನಿಲುಗಡೆ ಹೊಂದಿದ್ದರೆ ಎಕ್ಸ್ ಪ್ರೆಸ್‌ ಗಳು ೧೦-೧೨ ಸ್ಟ್ರೀಟಿಗೆ ಒಂದು ನಿಲುಗಡೆ ಹೊಂದಿವೆ. ಪ್ರಮುಖ ಸ್ಥಳಗಳಲ್ಲಿ ಮಾತ್ರ ಹೆಸರು ಇರುವುದು. ಟೈಮ್ ಸ್ಕೊಯರ್, ಕೊಲಂಬಸ್ ಸರ್ಕಲ್, ಮ್ಯುಜಿಯಂ ಇತ್ಯಾದಿ.

ನ್ಯೂಯಾರ್ಕ್ ನೋಡಹೊರಟರೆ ಕೈನಲ್ಲಿ ನಕ್ಷೆ ಇದ್ದರೆ ಅನುಕೂಲ. ಮುಂದಿನ ಮಾರ್ಗ ಸಲೀಸು. ಸ್ಟ್ರೀಟ್ ಗಳಲ್ಲಿ ಬಿಸಿಲು ಬೀಳುವುದೆ ಕಷ್ಟ, ಅಲ್ಲಿ ನಡು ಹಗಲಲ್ಲೂ ನೆರಳೆ. ಇಲ್ಲಿ ನಡೆಯುವಾಗ ಆಗುಂಬೆಯ ದೊಡ್ಡ ಕಾಡಿನ ನಡುವೆ ನಡೆದ ಅನುಭವ. ಅಲ್ಲಿ ನೆಲ ಮುಗಿಲು ಎರಡೂ ಕಾಣದು. ಕೆಳಗೆ ಮಣ್ಣೆ ಕಾಣದಂತೆ ಹರಡಿದ ಹುಲ್ಲು ತರಗೆಲೆಗಳು, ತಲೆ ಎತ್ತಿ ನೋಡಿದರೆ ಮುಗಿಲೇ  ಹಸಿರಾಗಿದೆ ಎನಿಸುವ ದಟ್ಟ  ಕೊಂಬೆ ರೆಂಬೆಗಳ ಹಸಿರು. ಇಲ್ಲಿ ಮಣ್ಣು ನೋಡಲು ಕಣ್ಣು ಪುಣ್ಯ ಮಾಡಿರಬೇಕು. ಎಲ್ಲೆಲ್ಲು ಸಿಮೆಂಟು ಕಾಂಕ್ರೀಟು. ಮುಗಿಲು ನೋಡಬೇಕೆಂದರೆ ಗೋಣು ನೋಯುವಷ್ಟು ಕತ್ತು ಮೇಲೆತ್ತಿದರೂ ಕಾಣುವುದಿಲ್ಲ; ಗಗನಚುಂಬಿ ಕಟ್ಟಡದ ತುದಿ. ಆಕಾಶ ನೋಡಲು ನೂಕು ನುಗ್ಗಲು ಏಕೆ? ಎಂಬ ಮಾತು ಇಲ್ಲಿ ಸತ್ಯಕ್ಕೆ ಸಮೀಪವಲ್ಲ ಎನಿಸಿದರೂ ಅಚ್ಚರಿ ಇಲ್ಲ. ಇಲ್ಲಿನ ನೂಕುನುಗ್ಗಲಿನ ರಸ್ತೆಯಲ್ಲಿ ಮುಗಿಲು ನೋಡಲು ಹರಸಾಹಸ ಪಡಬೇಕು. ನೂರಾರು ಕಡ್ಡಿ ಪೊಟ್ಟಣಗಳನ್ನು ಜೋಡಿಸಿ ಮಾಡಿದಂತೆ ಕಾಣುವ ಬಹು ಅಂತಸ್ತಿನ ಕಟ್ಟಡಗಳ ನಡುವೆ ಓಡಾಡುವ ಜನ ಇರುವೆಗಳಿಗಿಂತ ಕನಿಷ್ಟವಾಗಿ ಕಾಣುವರು. ನಾನು ನಾನು ಎನ್ನುವವರು ಸಹ ಚಂದ್ರನ ಎದುರಿನ ಲಾಂದ್ರದಂತೆ ನಗಣ್ಯವಾಗುವರು. ನ್ಯೂಯಾರ್ಕ್ ನಗರದಲ್ಲಿ ಜನಪ್ರಿಯ ಹಾಗೂ ಉಪಯುಕ್ತ ವಾಹನ ಯಾವುದು ಎನ್ನುವಿರಾ? ಕಾರು ಅಂತು ಖಂಡಿತ ಅಲ್ಲ. ಪ್ರಪಂಚದಲ್ಲೆ ಅತಿ ಹೆಚ್ಚು ಕಾರು ಹೊಂದಿದ ದೇಶ ಇದು. ತಲೆಗೊಂದು ಕಾರ್ ಇರುವುದು ಸಾಮಾನ್ಯವಾದರೂ ಮನೆಗೊಂದು ಕಾರ್ ಅಂತೂ ಕಡ್ಡಾಯ. ಅನೇಕ ಜನರಿಗೆ ಮನೆ ಇರಲಿಕ್ಕಿಲ್ಲ, ಕಾರ್ ಅಂತೂ ಇರಲೇಬೇಕು. ಮನೆ ಇಲ್ಲದೆ ಆರ್.ವಿ.ಗಳಲ್ಲೇ ವಾಸಿಸುವರೂ ಇದ್ದಾರೆ. ಆರ್ವಿ ಎಂದರೆ ರಿಕ್ರಿಯೇಷನ್ ವೆಹಿಕಲ್. ಅದನ್ನು ರೆಸಿಡೆನ್ಷಿಯಲ್ ವೆಹಿಕಲ್ ಎಂದರೂ ಎನ್ನಬಹುದು. ಒಂದು ರೀತಿಯಲ್ಲಿ ಚಲಿಸುವ ಮನೆ. ಇಲ್ಲವೆ ಗಾಲಿಯ ಮೇಲಿನ ಮನೆ. ಅಡುಗೆ, ಊಟ, ಕೆಲಸ, ನಿದ್ದೆ, ವಿಸರ್ಜನೆ ಎಲ್ಲ ಅದರಲ್ಲಿಯೇ. ಅದಕ್ಕೆ ಅನುಕೂಲವಾಗುವಂತೆ ಫ್ರಿಜ್, ಮೈಕ್ರೊವೇವ್, ಬೆಡ್ ರೂಮ್, ರೆಸ್ಟ್ ರೂಮ್, ಕಂಪ್ಯೂಟರ್, ಟಿ.ವಿ, ಸ್ಟಡಿ ರೂಂ ಎಲ್ಲ ಇರುವುದು. ಅದನ್ನು ಎಲ್ಲೆಂದರೆ ಅಲ್ಲಿ ನಿಲ್ಲಿಸುವ ಹಾಗಿಲ್ಲ. ಅದಕ್ಕೆಂದೆ ನಿಗದಿಯಾದ ಸ್ಥಳದಲ್ಲೆ ನಿಲ್ಲಿಸಬೇಕು. ಅಲ್ಲಿಯೇ ನೀರು, ಗ್ಯಾಸು, ವಿದ್ಯುತ್ತನ್ನು ಮತ್ತು ಆಹಾರವಸ್ತುಗಳನ್ನು ಪಡೆದು ಕಸ ಕಡ್ಡಿ ವಿಸರ್ಜನೆಗಳನ್ನು ಹೊರಹಾಕಲು ವ್ಯವಸ್ಥೆ ಇರುವುದು. ಇದನ್ನು ಬಹುತೇಕ ದೂರ ಪ್ರವಾಸಕ್ಕೆ ಬಳಸುವರು.

ಅತ್ಯಂತ ಹೆಚ್ಚು ಕಾರು ಉತ್ಪಾದಿಸುವ ಬಳಕೆ ಮಾಡುವ ಅಮೇರಿಕಾದಲ್ಲೇ ಆದರೂ ನ್ಯೂಯಾರ್ಕ್ ನಲ್ಲಿ ಮಾತ್ರ ಬೇಸಗೆಯಲ್ಲಿ ಬಹು ಜನಪ್ರಿಯ ಹಾಗೂ ಅನುಕೂಲಕರವಾಗಿರುವುದು ಸೈಕಲ್ ಎನ್ನವುದು ವಿಪರ್ಯಾಸ. ಯುವ ಜನರಲ್ಲಿ ಅದರಲ್ಲೂ ಪ್ರವಾಸಿಗರಿಗೆ ಅಚ್ಚುಮೆಚ್ಚು. ಇ-ಬೇ ಎಂಬ ಕಂಪನಿ ಪಯಣಿಗರಿಗೆ ಸೈಕಲ್ ಸೌಕರ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಯಾವುದೆ ಪ್ರವಾಸಿ ತಾಣದಲ್ಲಿ ಸೈಕಲ್ ಬೇಕೆಂದರೆ ಆನ್ ಲೈನ್ ನಲ್ಲಿಯೇ ಮಾಹಿತಿ ಪಡೆದು ಸದಸ್ಯರಾದರೆ ಬಿ-ಕಾರ್ಡ್ ನೀಡುವರು. ಕ್ರೆಡಿಟ್ ಕಾರ್ಡ್ ಬಳಸಿದಂತೆ ಅದನ್ನು ಉಪಯೋಗಿಸಬಹುದು. ಆದು ಸೈಕಲ್ ಪಡೆಯಲು ಮಾತ್ರ. ಅಲ್ಲಿರುವ ಕಿಯೋಸ್ಕ್ ಗಳಲ್ಲಿ ಉಜ್ಜಿದರೆ ಸರಿ ಸೈಕಲ್ ಸಿಕ್ಕುವುದು. ಅದನ್ನು ಹತ್ತಿ ಹೊತ್ತು ಗೊತ್ತಿನ ಗಣನೆ ಮಾಡದೆ ಎಲ್ಲಿಗೆ ಬೇಕಾದರೆ ಅಲ್ಲಿಗೆ ಹೋಗಬಹುದು. ನೂರಾರು ಮೈಲು ದೂರ ಹೋದರೂ ಪರವಾಯಿಲ್ಲ. ಪುನಃ ಪಡೆದಲ್ಲಿಯೇ ಅದನ್ನು ಹಿಂತಿರುಗಿಸಬೇಕೆಂದೇನೂ ಇಲ್ಲ, ಹತ್ತಿರದ ಕಿಯೋಸ್ಕ್ ದಲ್ಲಿ ನಿಗದಿತ ಜಾಗದಲ್ಲಿ ಇಟ್ಟು ಕಾರ್ಡ್ ಉಜ್ಜಿದರೆ ಆಯಿತು. ಅಲ್ಲಿ ಸೈಕಲ್ ಒಳಗೆ ಹೋಗಿ ಹಸಿರು ದೀಪ ಹತ್ತಿದರೆ ನಮ್ಮ ಲೆಕ್ಕ ಚುಕ್ತಾ ಆದಂತೆ. ನಮ್ಮಲ್ಲಿ ಕೆಲ ಬ್ಯಾಂಕ್ ಗಳಲ್ಲಿ ಚೆಕ್ ಡೆಪಾಸಿಟ್ ಮಾಡಿದಂತೆ. ಸುಲಭ. ಸರಳ. ಆ ಕಂಪನಿಯ ಸದಸ್ಯನಾಗುವುದು ಬೇಡ ಎಂದರೆ ಒಂದು ದಿನದ ಮಟ್ಟಿಗೆ ಸದಸ್ಯರಾಗಿ ಆ ಸೌಲಭ್ಯ ಪಡೆಯಬಹದು. ಅದೂ ಸ್ಥಳದಲ್ಲಿಯೇ.

ಕಂಪೆನಿ ಸಹವಾಸ ಬೇಡ ಎಂದರೆ ಖಾಸಗಿಯಾಗಿ ಬಾಡಿಗೆಗೆ ಸಿಗುತ್ತವೆ. ಆದರೆ ಅಲ್ಲಿ ದಾಖಲೆ ಮುಂಗಡ ಹಣ ಕೇಳುತ್ತಾರೆ. ವಿದೇಶಿಯರಾದರೆ ಪಾಸ್ ಪೋರ್ಟ್ ವೀಸಾ ಪರಿಶೀಲನೆಯಾಗಬಹುದು. ಇದರ ಬಳಕೆ ಬಹು ಉಪಯುಕ್ತ. ಬಸ್ಸು ಬಾರದ ಕಡೆಯಲ್ಲಿ, ಸಂದಿ ಗೊಂದಿಗಳಲ್ಲಿ ನುಸಳುತ್ತಾ ಸಾಗಬಹುದು. ಅನೇಕ ಕಡೆ ಸೈಕಲ್ ಸವಾರಿಗೆ ಪ್ರತ್ಯೇಕ ಪಥ ಇದೆ. ಏಕಮುಖ ಸಂಚಾರದ ತೊಡಕಿಲ್ಲ. ಎಲ್ಲ ಕಡೆ ಮುಕ್ತ ಪರವಾನಿಗೆ. ಯಾವುದೇ ಜಾಗದಲ್ಲಿ ಗಂಟೆ ಎರಡು ಗಂಟೆ ನಿಂತು ನೋಡಬೇಕೆಂದರೆ ನಿಶ್ಚಿಂತೆ. ಪಾರ್ಕಿಂಗ್ ಪ್ರಶ್ನೆಯೇ ಏಳದು. ಹತ್ತಿರದ ದೀಪದ ಕಂಬ ಇಲ್ಲವೇ ರಸ್ತೆ ಬದಿಯ ಕಬ್ಬಿಣದ ಸರಳಿಗೆ ಸರಪಳಿ ಸೇರಿಸಿ ನಿಲ್ಲಿಸಿದರೆ ಮುಗಿಯಿತು. ಯಾರೂ ಅದನ್ನು ಮುಟ್ಟುವುದಿಲ್ಲ. ಹಕ್ಕಿಯ ಹಾಗೆ ಎಲ್ಲೆಂದರಲ್ಲಿ ಸುತ್ತಬಹುದು. ಹಣದ ಉಳಿತಾಯ ಜತೆಗೆ ವ್ಯಾಯಾಮವೂ ಆಯಿತು. ಜತೆಗಾರರಿದ್ದರೆ ಆ ಮಜವೇ ಬೇರೆ. ಹರಟೆ ಹೊಡೆಯತ್ತಾ, ಹಾಡು ಹೇಳುತ್ತಾ, ಕೇಳುತ್ತಾ. ನಿಧಾನವಾಗಿ ಎಲ್ಲವನ್ನು ನೋಡತ್ತಾ ಬೇಕೆಂದಲ್ಲಿ ಬೀಡುಬಿಡುತ್ತಾ, ಬಿಡು ಬೀಸಾಗಿ ಅನುಭವಿಸುವ ಆ ಮೋಜು ಮಜಾ ಎಲ್ಲರಿಗೂ ದಕ್ಕುವುದಲ್ಲ. ದೇಹದಲ್ಲಿ ದಮ್ ಮನಸ್ಸಲ್ಲಿ ಘಮ್‌ ಇದ್ದರೆ ದಕ್ಕುವ ಸೈಕಲ್ ಸವಾರಿಯ ಸುಖ ಅನುಭವಿಸಿಯೇ ಪಡೆಯಬೇಕು.