ಸುಕನ್ಯಾಳಿಗೆ ಅರವಿಂದನ ಇಂಥ ಮಾತುಗಳು, ನಿರ್ಲಿಪ್ತ ಸ್ಥಿತಿ ಕೆಲವೊಮ್ಮೆ ಬಹಳ ರೇಜಿಗೆ ತರಿಸಿಬಿಡುತ್ತಿತ್ತು. ಸಮಸ್ಯೆಗಳು ಬರುವಾಗಲೇ ಪರಿಹಾರವನ್ನೂ ತಮ್ಮ ಜತೆಗೇ ತಂದಿರುತ್ತವೆ ಎಂಬುದು ಅವನ ಯಾವತ್ತಿನ ನಂಬಿಕೆ. ಪರಿಹಾರ ಅನ್ನೋದು ಇಲ್ಲದಿದ್ದರೆ ಅದನ್ನು ಸಮಸ್ಯೆಯೇ ಅಲ್ಲ ಅನ್ನುತ್ತಿದ್ದ, ಆತ. ‘ಅನ್ನ ಮಾಡೊಕೆ ಅಕ್ಕಿ ಇಲ್ಲ ಅಂದರೆ ಅಂಗಡೀಗೆ ಹೋಗಿ ಅಕ್ಕಿ ತರಬೇಕು. ಅಕ್ಕಿಯೇ ಸಿಗದೇ ಇರೋ ಸಂದರ್ಭ ಬಂದಲ್ಲಿ ಅನ್ನ ಮಾಡುವ ಯೋಚನೆಯನ್ನೇ ಬಿಟ್ಟುಬಿಡಬೇಕು. ಬೇರೆ ಏನಾದರೂ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು’ ಇದು ಅವನ ತತ್ವ. ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ನಾಲ್ಕನೆಯ ಕಂತು ನಿಮ್ಮ ಓದಿಗಾಗಿ

‘ನಿಮ್ಮಮ್ಮನಿಗೆ ನಮ್ಮ ಪ್ಲಾನು ಇಷ್ಟ ಆಗಲಿಲ್ಲ ಅನಿಸುತ್ತೆ’ ಎಂದಳು, ಅಲಿಶಾ. ಕಾಲಿಂದ ಸಣ್ಣ ಕಲ್ಲೊಂದನ್ನು ಒದೆಯುತ್ತಾ. ಮನೆಯ ಹಿಂದಿನ ಮರಗಳ ನಡುವಿನ ಕಾಲ್ದಾರಿಯಲ್ಲಿ ನಡೆಯುತ್ತಿದ್ದರು, ಇಬ್ಬರೂ. ಕಾಲ್ದಾರಿ ಪೂರ ಹಣ್ಣೆಲೆಗಳು ತುಂಬಿದ್ದವು. ಮಳೆಗೋ ಗಾಳಿಯ ತೇವಕ್ಕೋ ಎಲ್ಲವೂ ಒದ್ದೊದ್ದೆ. ಉಸಿರಾಡುವ ಗಾಳಿಯೂ ಭಾರವೆನಿಸುತ್ತಿತ್ತು. ಹತ್ತು ನಿಮಿಷಕ್ಕೆ ಎದುಸಿರುಬಿಡುತ್ತಿದ್ದಳು. ಎರಡೂ ಕೈಗಳಿಂದ ಸೊಂಟದ ಹಿಂಭಾಗವನ್ನು ಹಿಡಿದು ನಡೆಯುತ್ತಿದ್ದಳು. ಮೂಗು ಬಾಯಿಂದ ಉಸಿರು ಹೊರಬಂದಾಗ ಸಣ್ಣ ಹಬೆ ಕಾಣುತ್ತಿತ್ತು. ವಿನಯನಿಗೆ ಆಕೆಯ ಅವಸ್ಥೆಯನ್ನು ನೋಡಿ ವಾಕಿಂಗ್ ಬರಬಾರದಾಗಿತ್ತು ಎನಿಸಿತ್ತು.

ತಕ್ಷಣ ಏನೂ ಮಾತಾಡಲಿಲ್ಲ, ವಿನಯ. ಒಂದರ ನಂತರ ಒಂದರಂತೆ ಕಡೆಯ ಪಕ್ಷ ಮೂರು ಮಕ್ಕಳನ್ನು ಮಾಡಿಕೊಳ್ಳುವುದು ಅಲಿಶಾಳ ಯೋಚನೆ. ಈ ವಿಷಯವನ್ನು ಏಕದಂ ತಾನು ಅಮ್ಮನಿಗೆ ಹೇಳಿದ್ದು ಸರಿಹೋಗಲಿಲ್ಲವೇನೋ ಅನಿಸಿತು.

ಮದುವೆ ಆದಾಗಲಿಂದ ಆತ ಗಮನಿಸಿದ್ದಾನೆ. ಅಲಿಶಾ, ಅಮ್ಮ ಇಬ್ಬರೂ ಯಾವುದನ್ನೂ ಸರಿ ಎಂದು ಒಂದೇ ಮಾತಿಗೆ ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಇಬ್ಬರನ್ನೂ ಒಂದೇ ಆವರಣದೊಳಗೆ ತಂದಿಡಲಾಗದ್ದು ಏನು ಎಂದು ಬಹಳ ಯೋಚಿಸಿದ್ದಾನೆ. ಅತ್ತೆ, ಸೊಸೆಯ ಇಜ್ಜೊತೆಯೆನ್ನುವುದು ಕಾಲ, ಖಂಡಾಂತರಗಳು ಬದಲಿಸದ ಸಾರ್ವಕಾಲಿಕ ಸತ್ಯವೇ? ಕೀಳರಿಮೆಯೇ, ದೊಡ್ಡಸ್ತಿಕೆಯೇ? ಯಾರಿಗೆ ಕೀಳರಿಮೆ? ಯಾರಿಗೆ ದೊಡ್ಡಸ್ತಿಕೆ? ಅಲಿಶಾ ಬಿಳಿಯ ಹುಡುಗಿ ಎಂಬ ಅಂಶ ಅಮ್ಮನನ್ನು ಬಹಳ ಕಾಲ ಕಾಡಿತ್ತು. ಆಕೆಗೆ ಅರ್ಥವಾಗುವ ಹಾಗೆ ತಾನು ಇಂಗ್ಲಿಷ್ ಮಾತಾಡಬಲ್ಲೆನೇ? ಆಕೆಗೆ ಬೇಕಾದ ಅಡುಗೆ ಮಾಡಿ ಹಾಕಬಲ್ಲೆನೇ? ಎಂಬ ವಿಷಯಗಳು ಯಾವಾಗಲೂ ಆಕೆಯನ್ನು ಕೊರೆಯುತ್ತಿದ್ದವು. ಆದರೆ ಆಕೆ ಅನಾಥೆ, ಫಾಸ್ಟರ್ ಹೋಮಿನಲ್ಲಿ ಬೆಳೆದಾಕೆ, ತನ್ನ ಬಿಟ್ಟರೆ ಆಕೆಯನ್ನು ವಿಚಾರಿಸಲೂ ಯಾರೂ ಇಲ್ಲ ಎಂಬ ಅಂಶ ಒಂದು ಸ್ತರದಲ್ಲಿ ಆಕೆಗೆ ಒಂದು ಕೆಟ್ಟ ಸಮಾಧಾನವನ್ನೂ ತಂದಿತ್ತು. ತಾನು ಈ ಕಾರಣಗಳಿಂದಲಾದರೂ ತನ್ನ ಅತ್ತೆಯ ಸ್ಥಾನದ ಯಜಮಾನಿಕೆ, ಹಕ್ಕು ಸ್ಥಾಪಿಸುವ ಅನುಕೂಲವನ್ನು ಪಡಕೊಳ್ಳಬಹುದು ಎಂದು ನಂಬಿದ್ದಳೇನೋ?

ಅಲಿಶಾಳನ್ನು ಮೊದಲು ಸುಕನ್ಯಾ ನೋಡಿ ಪರಾಂಬರಿಸಿದಾಗ ‘ಪರವಾಗಿಲ್ಲ, ಒಳ್ಳೆಯ ಹುಡುಗಿ’ ಎಂದು ಮನಸ್ಸಿನಲ್ಲಿಯೇ ಒಪ್ಪಿಕೊಂಡಿದ್ದರೂ ಆಕೆಯ ಎಲ್ಲ ‘ಒಳ್ಳೆ’ ಗುಣಗಳನ್ನೂ ಈ ಹಾಳಾದ ಬಿಳಿಯ ಚರ್ಮ ನಿವಾಳಿಸಿ ತೆಗೆದುಬಿಡುತ್ತದೆ ಎಂದು ಬಹಳ ದಿನ ನಂಬಿದ್ದಳು. ಆಕೆ ಬೆಳಿಗ್ಗೆ ಎದ್ದು ಕುಡಿಯುವ ಕರಿ ಕಾಫಿ, ತಿಂಡಿಗೆ ತಿನ್ನುವ ಮೊಟ್ಟೆ, ಪ್ಯಾನ್‌ಕೇಕು, ಬೇಕನ್ನುಗಳು, ಊಟಕ್ಕೆ ತಯಾರಿಸಿಕೊಳ್ಳುವ ಟೂನ ಸ್ಯಾಂಡ್‌ವಿಚ್-ಇಂಥ ನಿರಪಾಯಕಾರಿ ಚರ್ಯೆಗಳು ಕೂಡ ಸುಕನ್ಯಾಳಿಗೆ ಕ್ರೂರವಾದ ಅಪರಾಧವಾಗಿ ಕಂಡುಬಿಡುತ್ತಿದ್ದವು. ವಿನಯನ ಮದುವೆಯಾದ ಹೊಸತರಲ್ಲಿ ಮನೆಯ ಸಾಮಾನುಗಳನ್ನು ಜೋಡಿಸಿಕೊಡುತ್ತೀನಿ ಎಂದು ಶಿಕಾಗೋಕ್ಕೆ ಆಕೆ ಹೋದಾಗ ಅಲ್ಲಿ ಅರವಿಂದನಿಗೆ ‘ಈಕೆ ನಮ್ಮವಳಾಗಿದ್ದರೆ ಲಕ್ಷಣವಾಗಿ ದೇವರಮನೆ, ಅಡಿಗೆ ಮನೆ ಅಣಿಮಾಡಿಕೊಡಬಹುದಾಗಿತ್ತು. ಆ ಕೂದಲು ನೋಡಿ, ಹೇಗೆ ಬಿಟ್ಟುಕೊಂಡಿರ್ತಾಳೆ. ನನ್ನ ಹತ್ತಿರ ಒಳ್ಳೆ ಜೆಸ್ಸೂರ್ ಹೆಣಿಗೆ ಇದೆ. ಕೂರಿಸಿ ಒಂದು ಪೋನಿಟೈಲಾದರೂ ಕಟ್ಟಣ ಅನಿಸುತ್ತೆ. ಇಲ್ಲಿ ಏನು ಮಾಡಬಹುದು? ಒಂದ್ನಾಲ್ಕು ಪೀಸು ಬ್ರೆಡ್ಡು, ಆ ಸಲಾಡಿನ ಸೊಪ್ಪು ತಂದಿಟ್ಟರೆ ಆಯ್ತು. ಆಕೆಗೆ ಏನಿಷ್ಟ ಅಂತ್ಲೂ ನಮಗೆ ಗೊತ್ತಿಲ್ಲ. ಇನ್ನು ದೇವರ ಫೋಟೋ ಇಟ್ಟು ದೀಪ ಗೀಪಹಚ್ಚೋದಂತೂ ಬಲು ದೂರದ ಮಾತು.’ ಎಂದು ಅಲವತ್ತುಕೊಂಡೇ ‘ಬೆಳಗ್ಗಿನಿಂದ ಕೆಲ್ಸಕ್ಕೆ ಹೋಗಿ ದಣಿವಾಗಿ ಬರ್ತಾವೆ, ಊಟಕ್ಕೆ ಏನೂ ಇಲ್ಲದಿದ್ದರೆ ಹೇಗೆ?’ ಎಂದು ಅಂಗಡಿಯಿಂದ ತಂದ ಧಿಡೀರ್ ಪಾಸ್ತಾ ಸಾಸು ಹಾಕಿ ಪಾಸ್ತಾ ಬೇಯಿಸಿ, ಬೆಳ್ಳುಳ್ಳಿ ಬ್ರೆಡ್ಡು ಹುರಿದು, ಸ್ಟ್ರಾಬೆರಿ ಐಸ್ ಕ್ರೀಮಿನ ಜತೆಗೆ ಬಡಿಸಿದ್ದಳು. ತನಗೆ, ಅರವಿಂದನಿಗೆ ಮಾಡಿಟ್ಟುಕೊಂಡಿದ್ದ ಹುರುಳೀಕಾಯಿ ಹುಳಿಯನ್ನು ಅಲಿಶಾ ಸೂಪಿನ ತರ ಕುಡಿದು ‘ಬಹಳ ಚೆನ್ನಾಗಿದೆ’ ಎಂದು ಹೊಗಳಿದಾಗ ಸುಕನ್ಯಾಳ ಕಣ್ಣಲ್ಲಿ ನೀರೇ ಬಂದುಬಿಟ್ಟಿತ್ತು. ಆಕೆಯ ಮೆಚ್ಚುಗೆ, ಮಾನ್ಯತೆ ಸುಕನ್ಯಾಳಿಗೆ ಒಂದು ರೀತಿ ಹೆಮ್ಮೆಯನ್ನು ತರುತ್ತಿತ್ತು. ಕೆಲವೊಮ್ಮೆ ಆಕೆಗೆ ಇಷ್ಟವಾಗುವ ತಿನಿಸುಗಳನ್ನು ಆಕೆ ಹೊಟ್ಟೆತುಂಬಾ ತಿನ್ನುವಷ್ಟು ರುಚಿಕಟ್ಟಾಗಿ ಮಾಡಲು ತನಗೆ ಬರುವುದಿಲ್ಲವೆಂದು ಕೊರಗಿದ್ದೂ ಇದೆ. ಹಾಗಾಗುವುದಕ್ಕೆ ಆಕೆ ಅಲಿಶಾ ಆಗಿರುವುದೇ ಕಾರಣ ಎಂಬ ಸಣ್ಣ ಸಿಟ್ಟು. ಅಲಿಶಾಳ ದೈನಿಕದ ಪ್ರತಿ ಸಣ್ಣ ಸಣ್ಣ ಕ್ರಿಯೆಗಳು ಆಕೆ ಅಲಿಶಾ ಆಗದೆ ರಾಧಿಕಾಳೋ, ರಮ್ಯಳೋ, ಗಾಯತ್ರಿಯೋ ಆಗಿದ್ದರೆ ಎಷ್ಟು ಬೇರೆಯಾಗಿರಬಹುದಿತ್ತು ಎಂದು ನೆನೆಸಿ ಕೊರಗಿ, ಆಕೆ ಅಲಿಶಾ ಆಗಿರುವುದರಿಂದ ಮತ್ತು ಅದು ಎಂದೆಂದೂ ಬದಲಾಗದೇ ಇರುವುದರಿಂದ ಆ ಸತ್ಯಕ್ಕೆ ತಾನು ಎರವಾಗದೆ ಹೆಗಲುಕೊಡುವುದು ಹೇಗೆ ಎಂದು ಚಿಂತಿಸಿ ಬಸವಳಿದು ಕೊನೆಗೆ ಸ್ಪಿಗೆಟಿ, ಗಾರ್ಲಿಕ್ ಬ್ರೆಡ್ಡು, ಮೆಕ್ಸಿಕನ್ ಅಡುಗೆ ಇತ್ಯಾದಿ, ಇತ್ಯಾದಿಗಳ ಪೂರೈಕೆಯಲ್ಲಿ ಸಾಂತ್ವನ ಪಡೆದುಕೊಳ್ಳುತಿದ್ದಳು. ಊಟ ತಿಂಡಿಯಲ್ಲಿ ಕುಸಬಷ್ಟಿ ಮಾಡದ ಆದರೆ ಸ್ವಾಭಾವಿಕವಾಗಿಯೇ ಭಾರತೀಯ ತಿನಿಸುಗಳ ಬಗ್ಗೆ ಯಾವ ಒಲವೂ ಇಲ್ಲದ ಅಲಿಶಾ ತನ್ನನ್ನು ಮೆಚ್ಚಿಸಲು ಈಕೆ ಯಾಕೆ ಒದ್ದಾಡುತ್ತಾಳೆ ಎಂದು ಗೊತ್ತಾಗದೇ ಸುಮ್ಮನೆ ಮಾಡಿದ್ದನ್ನು ತಿಂದು ಸುಮ್ಮನಾಗುತ್ತಿದ್ದಳು. ಅವರಿಬ್ಬರು ಕಳೆದ ಮೂರು ವರ್ಷಗಳಲ್ಲಿ ಮೂರೋ ನಾಲ್ಕೋ ಬಾರಿ ಮಾತ್ರ ಭೇಟಿ ಆಗಿದ್ದರಿಂದ ಯಾವತ್ತೂ ತೀರ ಗಂಭೀರವಾದ ವಿಷಯಗಳಿಗೆ ಚರ್ಚೆಯೂ ಆಗಿರಲಿಲ್ಲ.

ಅಲಿಶಾಳಿಗೂ ಆಕೆಯ ಓದು, ಕೆಲಸ ಎಲ್ಲವೂ ಸ್ವಾಯತ್ತತೆಯನ್ನು, ಆತ್ಮವಿಶ್ವಾಸವನ್ನು ಕೊಟ್ಟರೂ ಇದ್ದಕ್ಕಿದ್ದ ಹಾಗೆ ಆಕೆಯ ಬಾಲ್ಯ ಮತ್ತು ಅನಾಥಪ್ರಜ್ಞೆ ಗಕ್ಕೆಂದು ಎದ್ದು ನಿಂತುಬಿಡುತ್ತಿತ್ತು. ತಾನು ಯಾರ ಹಂಗಿಲ್ಲದೆಯೂ ತನ್ನ ಜೀವನವನ್ನು ರೂಪಿಸಿಕೊಳ್ಳಬಲ್ಲೆ ಎಂಬ ನಂಬಿಕೆ ಆಕೆಗಿದ್ದರೂ ಮೊಟ್ಟಮೊದಲ ಬಾರಿಗೆ ಒಂದು ಕುಟುಂಬ ಕೊಡುವ ಪ್ರೀತಿಯನ್ನು, ಸಾಂತ್ವನವನ್ನು ಕಣ್ಣಾರೆ ನೋಡಿದ್ದು ವಿನಯನನ್ನು ಮದುವೆ ಆದ ಮೇಲೆಯೇ. ಆ ಕುಟುಂಬದಲ್ಲಿ ತನಗೆ ಒಂದು ಭದ್ರವಾದ ಜಾಗವಿದೆ ಎಂಬ ಭಾವನೆ ಒಂದು ಸುರಕ್ಷೆಯನ್ನು ಕೊಟ್ಟಿತ್ತು. ಹುಟ್ಟಿದಾಗಲಿಂದ ಎಷ್ಟು ಜನರನ್ನು ಅಮ್ಮ, ಅಪ್ಪ ಎಂದು ಕರೆದಿದ್ದಳು, ಆಕೆ. ಈ ಅಮ್ಮ, ಅಪ್ಪ ಎಂಬ ಪದಗಳ ಬಳಕೆ ಫಾಸ್ಟರ್ ಮನೆಗಳಲ್ಲಿ ಒಂದೋ ಎರಡೋ ತಿಂಗಳೋ ಉಳಕೊಳ್ಳಬೇಕಾದುದರ ಅವಶ್ಯಕತೆಯಾಗಿ ಮಾತ್ರ ಕಂಡಿತ್ತು. ಎಂದೂ ಅದಕ್ಕೆ ಮೀರಿದ ಅರ್ಥವನ್ನು ಈ ಪದಗಳು ಹುಟ್ಟಿಸಿರಲಿಲ್ಲ. ಎಷ್ಟೋ ಮನೆಗಳಲ್ಲಿ ಈ ಅಪ್ಪ ಎನ್ನುವವರೇ ಆಸೆಗಣ್ಣುಗಳಲ್ಲಿ ನೋಡಿದಾಗ ರಾತ್ರೋರಾತ್ರಿ ಮನೆ ಬಿಟ್ಟು ಸೋಷಿಯಲ್ ವರ್ಕರುಗಳು ತೋರಿಸಿದ ಶೆಲ್ಟರುಗಳಲ್ಲಿ ತಂಗಿದ್ದು ಮತ್ತೆ ಮಾರನೆಯ ದಿನವೇ ಬೇರೆ ಅಪ್ಪ, ಅಮ್ಮಂದಿರುಗಳು ಧಿಡೀರನೆ ಹುಟ್ಟಿಕೊಂಡಾಗ-ಉಹೂ ಅಪ್ಪ, ಅಮ್ಮ ಯಾವತ್ತೂ ಸಂತೈಸುವ, ಸಾಂತ್ವನಕೊಡುವ, ಕಾಪಾಡುವ ಪದಗಳಾಗಿರಲೇ ಇಲ್ಲ. ಆದರೆ, ಸುಕನ್ಯಾ ಅರವಿಂದರಲ್ಲಿ ನಿಜವಾದ ಅಂತಃಕರಣವನ್ನು ಕಂಡಿದ್ದಳು. ಸುಕನ್ಯಾಳ ಸಣ್ಣ ಕಿರಿಕಿರಿ ಕೆಲವೊಮ್ಮೆ ಕಸಿವಿಸಿಯನ್ನುಂಟುಮಾಡುತ್ತಿದ್ದರೂ ಯಾವತ್ತೂ ಅದು ಅಪಾಯಕಾರಿಯಾಗಿ ಕಂಡಿರಲಿಲ್ಲ. ಕೈಲಾಗದವಳ ಮೈಪರಚುಕೊಳ್ಳುವಿಕೆಯ ರೀತಿ ಕಾಣಿಸಿತ್ತು.

ಅನಾಥಳಾಗಿ ತಾನು ಬೆಳೆದದ್ದಕ್ಕೋ ಏನೋ ಮೊದಲಿನಿಂದಲೂ ಮನೆತುಂಬಾ ಮಕ್ಕಳಿರಬೇಕು ಎನ್ನುವುದು ಅಕೆಯ ಮಹದಾಸೆ. ಆಸೆಗಿಂತ ತನಗೆ ಏನಾದರೂ ಆಗಿಬಿಟ್ಟರೆ ಮನೆತುಂಬಾ ಮಕ್ಕಳಿದ್ದರೆ ಒಬ್ಬರಿಗೊಬ್ಬರು ಆಗುತ್ತಾರೆ ಅನ್ನುವ ಅಬೋಧ ಅಂಜಿಕೆ. ವಿನಯನನ್ನು ಮದುವೆಯಾದ ಮೇಲೆ ಈ ಅಳುಕು ಕೊಂಚ ಮಟ್ಟಿಗೆ ದೂರವಾಗಿದ್ದರೂ ಪೂರ ನಾಶವಾಗಿರಲಿಲ್ಲ. ತನ್ನದು ಅಕಾರಣವಾದ ಹೆದರಿಕೆ ಎನಿಸಿದ್ದರೂ ಆಕೆ ಬೆಳೆದ ಒಂಟಿಮನೆಗಳೋ, ಇಡೀ ಬಾಲ್ಯವನ್ನು ಕವಿದ ಕತ್ತಲೆಯೋ ಒಟ್ಟು ವಿನಯ, ಮನೆ, ವಿದ್ಯೆ, ಸುಭದ್ರವಾದ ಭವಿಷ್ಯ ಯಾವುದೂ ಆಕೆಯ ಒಂಟಿತನವನ್ನು ಕಳೆದಿರಲಿಲ್ಲ. ತನಗೆ ಅಕ್ಕ, ತಂಗಿಯರಿರಬೇಕಿತ್ತು ಎಂಬ ಭಾವನೆ ಆಕೆಯನ್ನು ಶಾಶ್ವತವಾಗಿ ಕಾಡುತ್ತಿತ್ತು.

ವಿನಯನಿಗೆ ಅಮ್ಮ ಎಂದರೆ ಗೃಹಲಕ್ಷ್ಮಿ. ಆಕೆಯಷ್ಟು ನಿಗವಾಗಿ ಮನೆಯನ್ನು ನಿಭಾಯಿಸಲು ಈ ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಅಲಿಶಾ ನಾಲ್ಕು ಮಕ್ಕಳು ಬೇಕು ಎಂದು ಹೇಳಿದಾಗ ‘ಅಮ್ಮ ಮನೆಗೆ ಬಂದು ಇದ್ದು ಮಕ್ಕಳನ್ನು ದೊಡ್ಡವು ಮಾಡಿಕೊಟ್ಟರೆ ಮಾತ್ರ.’ ಎಂಬ ಕರಾರನ್ನು ಹಾಕಿದ್ದ. ಯಾವ ಡೇಕೇರನ್ನೂ, ಬೇಬಿಸಿಟ್ಟರುಗಳನ್ನೂ ನಂಬದ ಜಿಗುಟು ಆಸಾಮಿ ಆತ. ಅಲಿಶಾಳಿಗೆ ಕುಟುಂಬ ಅನ್ನುವ ವ್ಯವಸ್ಥೆಯ ಪರಿಚಯವೇ ಇಲ್ಲ. ಆದರೂ, ಅತ್ತೆ ತನ್ನ ಪ್ರತೀ ಹೆರಿಗೆಗೆ ಸಹಾಯಕ್ಕೆ ಬಂದಿರುವುದು, ಮಕ್ಕಳನ್ನು ಮೂರೋ ನಾಲ್ಕೋ ವರ್ಷ ಆಗುವತನಕ ಬೆಳೆಸಿಕೊಡುವುದು ಇವೆಲ್ಲ ಯಾವುದೇ ಕುಟುಂಬದ ರೂಢಿ ಎಂದು ಒಪ್ಪಿಕೊಳ್ಳುವಷ್ಟು ಭೋಳೇ ಆಗಿರಲಿಲ್ಲ. ಆದರೆ ವಿನಯ ಮಾತ್ರ ಅಲಿಶಾಳ ಜತೆ ರಾತ್ರಿ ಮಲಗುವ ಮುನ್ನ ‘ಸರಿಯಾಗಿ ಲೆಕ್ಕ ಹಾಕಿ ನೋಡಿಕೋ. ಅಮ್ಮನಿಗೆ ನಾನು ಇಲ್ಲಿಗೆ ಬರೋದಕ್ಕೆ ರೆಡಿ ಮಾಡಿಕೊಳ್ಳೋಕೆ ಹೇಳ್ಬೇಕು’ ಎಂದು ಹೇಳಿ ತಾನೇ ಆಕೆಯ ಋತುಚಕ್ರವನ್ನು ಗುರುತು ಹಾಕಿರುವ ಕ್ಯಾಲೆಂಡರಿನಲ್ಲಿ ಸೇಫ್ಟಿ ಪಿರಿಯಡನ್ನು ಹುಡುಕುತ್ತಿದ್ದಾಗ ಅಲಿಶಾಳಿಗೆ ಮೈಯುರಿದು ಹೋಗುತ್ತಿತ್ತು. ವಿನಯ ಯಾವ ರಿಸ್ಕನ್ನೂ ತೆಗೆದುಕೊಳ್ಳಲೂ ತಯಾರಿರಲಿಲ್ಲ. ತಾನು ಬೆಳೆಯುತ್ತಿದ್ದಾಗ ಶಾರದತ್ತೆ ಬಂದು ತನ್ನನ್ನು, ವಿಶೂ ಅನ್ನು ಹತ್ತು ವರ್ಷದ ತನಕ ನೋಡಿಕೊಂಡದ್ದು ಆತನಿಗೆ ಬಹಳ ಚೆನ್ನಾಗಿ ನೆನಪಿತ್ತು. ಪ್ರತಿ ದಿನ ತಾಜಾ ಅಡುಗೆ, ದಿನಾ ಸಂಜೆ ಥರಥರಾವರಿ ತಿಂಡಿಗಳು, ಸಂಜೆ ಚೆನ್ನಮಣೆ, ಚೌಕಾಬಾರ ಆಟ, ರಾತ್ರಿ ಮಲಗುವ ಮುನ್ನ ಕಥೆಗಳು- ಅವನಿಗೆ ತನ್ನ ಸಮೃದ್ಧಬಾಲ್ಯದ ಬಗ್ಗೆ ಹೆಮ್ಮೆಯಿತ್ತು. ತನ್ನ ಮಕ್ಕಳನ್ನೂ ಅಮ್ಮ ಬೆಳೆಸಿದರೆ ಬಹಳ ಚೆನ್ನಾಗಿರುತ್ತದೆ ಎನ್ನುವುದು ಆತನ ಯೋಚನೆ.

ಇಷ್ಟೆಲ್ಲ ಮುಂಜಾಗರೂಕತೆ ವಹಿಸುವಾತ ಅಮ್ಮನಿಗೆ ತಮ್ಮ ಮನೆತುಂಬ ಮಕ್ಕಳ ಯೋಜನೆಯ ಬಗ್ಗೆ ಏನೂ ಸುಳಿವನ್ನೂ ಕೊಡದೇ ಇರುವುದು ಅಲಿಶಾಳಿಗೆ ಕೊಂಚ ಆಶ್ಚರ್ಯವನ್ನು ತಂದಿತ್ತು. ಸುಕನ್ಯಾಳ ಜತೆ ಒಂದೇ ಮನೆಯಲ್ಲಿ ದೀರ್ಘ ಕಾಲ ಏಗುವುದು ಹೇಗೆ ಎಂಬ ಯೋಚನೆ ಆಕೆಯನ್ನು ಕಾಡುತ್ತಿದ್ದುದರಿಂದ ತಾನಾಗಿಯೇ ಈ ವಿಷಯವನ್ನು ಯಾವತ್ತೂ ಪ್ರಸ್ತಾಪ ಮಾಡಲಿಕ್ಕೆ ಹೋಗಿರಲಿಲ್ಲ. ಆದರೆ, ಇಂದು ಮನೆಗೆ ಬಂದ ತಕ್ಷಣ ವಿನಯ ಅಮ್ಮನ ಬಳಿ ಈ ಬಗ್ಗೆ ಮಾತಾಡಿದ್ದು ಆಕೆಗೆ ಈ ಸಂಭಾಷಣೆಯನ್ನು ಮತ್ತೆ ಆರಂಭಿಸಲು ಅನುಕೂಲ ಮಾಡಿಕೊಟ್ಟಿತ್ತು.

‘ನಿಮ್ಮಮ್ಮನಿಗೆ ನಮ್ಮ ಪ್ಲಾನು ಇಷ್ಟವಾಗಲಿಲ್ಲ, ಅನಿಸುತ್ತೆ’ ಮತ್ತೊಮ್ಮೆ ಹೇಳಿದಳು, ಅಲಿಶಾ. ‘ಹಾಗ್ಯಾಕಂತೀಯ, ಅಲಿಶಾ. ಆಕೆ ಸ್ವಲ್ಪ ಹಳೆಯ ಕಾಲದವಳು. ಸ್ವಲ್ಪ ಸಮಾಧಾನದಿಂದಿರು.’

‘ನನಗೆ ಆ ವಿಷಯ ಅರ್ಥ ಆಗುತ್ತೆ. ಆದರೆ, ನೀನು ಅಮ್ಮನಿಗೆ ಈಗಲೇ ನಮ್ಮೆಲ್ಲ ಪ್ಲಾನುಗಳನ್ನೂ ಯಾಕೆ ಹೇಳಬೇಕು? ಅದೂ ನಮಗೆಷ್ಟು ಮಕ್ಕಳಾಗಬೇಕು, ಯಾವಾಗ ಆಗಬೇಕು ಅನ್ನೋದನ್ನು ಅಮ್ಮನ ಹತ್ತಿರ ಯಾರು ಹೇಳ್ತಾರೆ?’

‘ಅಲಿಶಾ, ನಾವು ಈ ವಿಷಯದ ಬಗ್ಗೆ ಮಾತಾಡಿ ಆಗಿದೆ.’

‘ನಾನೊಂದು ಮಾತು ಹೇಳ್ಲಾ, ನಿಂಗೆ?’

‘ಹೇಳು’ ಎಂದ.

‘ನಾನು ಬೇಕಾದರೆ ಕೆಲಸ ಬಿಟ್ಟು ಮನೇಲಿರ್ತೀನಿ, ಇನ್ನು ಮೂರು ವರ್ಷ. ಅಮ್ಮ ಬಂದು ನಮಗೆ ಆಗಾಗ ಸಹಾಯ ಮಾಡಲಿ. ಯಾವಾಗಲೂ ನಮ್ಮನೇಲೇ ಇರೋದು ಎಲ್ಲರಿಗೂ ಮುಜುಗರದ ವಿಷಯ ಅಲ್ಲವಾ?’

‘ಯಾರಿಗೆ ಮುಜುಗರ, ಅಲಿಶಾ? ಅಮ್ಮಂಗೆ ಮಕ್ಕಳು ಅಂದ್ರೆ ಬಹಳ ಇಷ್ಟ. ನಿನಗೆ ಅನುಮಾನವಿದ್ದರೆ ಆಕೆ ಒಂದು ಮಗೂನ ಬೆಳ್ಸೋ ರೀತಿ ನೋಡೋಣ. ನೀನೇ ಮತ್ತೆ ಮುಂದಿನ ಮಕ್ಕಳಿಗೆ ಅಮ್ಮನ್ನ ಕರೆಸೋಣ ಎಂದು ಹಠ ಮಾಡ್ತೀಯ’

‘ನನಗೆ ಮಕ್ಕಳನ್ನು ನೋಡ್ಕೊಳೋಕೆ ಬರೋಲ್ಲ ಅಂತ ಹೇಳುತ್ತಾ ಇದೀಯಾ?’

‘ಹಾಗಲ್ಲ…’

‘ಹಾಗಲ್ಲ, ಹೀಗಲ್ಲ ಎಂದರೇನು ವಿನಯ್. ನಾನು ಫಾಸ್ಟರ್ ಕೇರಲ್ಲಿ ಬೆಳೆದವಳು. ನಿಮ್ಮಗಳ ಹಾಗೆ ಪ್ರೀತಿ, ಅಕ್ಕರೇಲಿ ಬೆಳೆದವಳಲ್ಲ. ಹಾಗಾಗಿ ನನಗೆ ಅಮ್ಮ ಆಗೋ ಹಕ್ಕಿಲ್ಲ ಎಂದು ತಾನೇ ನೀನು ಹೇಳ್ತಾ ಇರೋದು.’

‘ಮೈ ಗಾಡ್, ಅಲೀಶ. ನಾನು ಯಾವಾಗ ಹಾಗೆ ಹೇಳಿದೆ? ನನ್ನ ಪ್ರತಿ ಮಾತಿಗೂ ಅಡಿಟಿಪ್ಪಣಿಗಳನ್ನು ಹುಡುಕೋಕೆ ಹೋಗ್ತೀಯಾ.’ ಉಗುಳು ನುಂಗಿದ, ವಿನಯ.

‘ಯಾಕಂದ್ರೆ ನೀನು ಮಾತಾಡೋದೇ ಹಾಗೆ. ನೀನು ನನ್ನನ್ನು ಮದುವೆ ಮಾಡಿಕೊಂಡಿದ್ದು ಯಾಕೆ? ಹಾಸಿಗೆಗೆ ಬಿಳೀ ಚರ್ಮ ಬೇಕು. ಮಕ್ಕಳನ್ನು ಬೆಳೆಸೋಕೆ ಮದರ್ ಇಂಡಿಯಾನೇ ಆಗಬೇಕಾ? ಅವು ನನ್ನ ಮಕ್ಕಳು, ನಾನ್ಯಾಕೆ ಬೆಳೆಸಬಾರದು.’

‘ಓ ದೇವರೇ. ನಾನು ಇಲ್ಲಿಯೇ ಹುಟ್ಟಿ ಬೆಳೆದದ್ದು, ಅಲಿಶಾ. ನನಗೆ ಈ ಮದರ್ ಇಂಡಿಯಾ, ಗಿಂಡಿಯಾ ಗೊತ್ತಿಲ್ಲ. ಅಮ್ಮ ಶಾರದಜ್ಜಿ ತರಾನೇ ಮಕ್ಕಳನ್ನು ಚೆನ್ನಾಗಿ ನೋಡ್ಕೋತಾಳೆ. ನಮ್ಮಿಬ್ಬರ ಸದ್ಯದ ಪರಿಸ್ಥಿತಿಯಲ್ಲಿ ಡೇಕೇರಿನಲ್ಲಿ ಬಿಡೋದಕ್ಕಿಂತ ಅದು ಒಳ್ಳೇದು ಅಂತಷ್ಟೇ ನಾನು ಹೇಳಿದ್ದು. ಜೀವಮಾನ ಪೂರ್ತಿ ಬೆಳೆಸೋಕೆ ನೀನಿರ್ತೀಯಲ್ಲ. ಮಕ್ಕಳು ಕೊಂಚ ದೊಡ್ಡವಾಗುವ ತನಕ, ಮಾತ್ರ ಅಮ್ಮ ನಮಗೆ ಸಹಾಯ ಮಾಡ್ತಾಳಷ್ಟೇ’

‘ನಾನು ಶಿಕಾಗೋದಲ್ಲಿರಬೇಕಾದರೆ ಫಾಗ್ರ್ಯುಸನ್ ಮತ್ತು ಮರಿಯಾ ಅನ್ನೋವರ ಮನೇಲಿ ಇದ್ದೆ. ಅಲ್ಲಿ ನನ್ನಹಾಗೆ ದಿಶಾನ್ ಅಂತ ಒಬ್ಬ ಹುಡುಗ ಇದ್ದ. ಆತ ನನಗಿಂತ ನಾಲ್ಕು ವರ್ಷ ದೊಡ್ಡವನು. ಆತ ಬಲುದೊಡ್ಡ ಮಾದಕ ವ್ಯಸನಿ. ಅಲ್ಲಿಗೆ ಬರೋಕೆ ಮೊದಲು ಯಾವುದೋ ರೀಹ್ಯಾಬಲ್ಲಿದ್ದು ಬಂದಿದ್ದ. ಆತ ಅಲ್ಲಿಗೆ ಬಂದ ತಕ್ಷಣ ಮತ್ತೆ ತನ್ನ ಬಾಲ ಬಿಚ್ಚಿದ್ದ. ಅಲ್ಲಿರೋ ಬೇರೆ ಹುಡುಗೀರನ್ನು ಗಾಂಜಾದ ಚಟಕ್ಕೆ ಹಚ್ಚಲು ನೋಡಿದ. ನಾನು ಧೈರ್ಯ ಮಾಡಿ ಶಿಕಾಗೋ ಅಪ್ಪ, ಅಮ್ಮನಿಗೆ ಹೇಳಿ ಅವನನ್ನು ಮನೆಯಿಂದ ಹೊರಗೆ ಹಾಕೋ ಹಾಗೆ ಮಾಡಿದೆ.’

‘ಈ ವಿಷಯಾನ ಈಗ್ಯಾಕೆ ಹೇಳ್ತಾ ಇದ್ಯಾ?’

‘ದಿಶಾನ್‌ನಿಂದ ಅನೇಕ ಹುಡ್ಗೀರನ್ನು ನಾನು ಕಾಪಾಡಿದೆ, ಗೊತ್ತಾ ವಿನಯ.’

‘ವಾಟ್ ಈಸ್ ಯುವರ್ ಪಾಯಿಂಟ್?’

‘ನಾನು ಒಳ್ಳೇ ಹುಡುಗಿ. ನಾನು ಕೇರ್ ಮಾಡ್ತೀನಿ ಅಂತ ಇನ್ನು ಹೇಗೆ ನಾನು ನಿನಗೆ ಸಾಕ್ಷಿ ಕೊಟ್ಟು ತೋರಿಸಲಿ. ಐ ಕೆನ್ ಬಿ ಅ ಗುಡ್ ಮಾಮ್. ಐ ಕೇರ್’

‘ಅದರ ಬಗ್ಗೆ ನನಗೆ ಅನುಮಾನ ಇಲ್ಲ ಡಾರ್ಲಿಂಗ್. ನೀನು ನನಗೆ ಅದನ್ನು ಪ್ರೂವ್ ಮಾಡಬೇಕಿಲ್ಲ. ಆದರೆ, ಮಕ್ಕಳನ್ನು ಬೆಳೆಸೋದು ಒಂದು ದಿನದ ಹೀರೋಗಿರಿ ಅಲ್ಲ. ಅದೊಂದು ಕಲೆ.’

‘ನನ್ನಲ್ಲಿ ಆ ಕಲೆ ಇಲ್ಲ. ನಿಮ್ಮಮ್ಮನಿಂದ ಕಲ್ತುಕೋಬೇಕು ಅಂತಲಾ, ನೀ ಹೇಳ್ತಾ ಇರೋದು.’

‘ಓ ಮೈ ಗಾಡ್. ನನ್ನ ಪ್ರತಿಯೊಂದು ಮಾತಿಗೂ ಏನೇನೋ ಅರ್ಥಗಳನ್ನು ಕಟ್ಟಿದರೆ ನಾ ಏನು ಮಾಡಲಿ? ಒಬ್ಬ ಮಾದಕವ್ಯಸನಿಯಿಂದ ಚಿಕ್ಕ ಹುಡ್ಗೀರನ್ನು ಕಾಪಾಡೋಕೂ, ಸರಿರಾತ್ರಿಯಲ್ಲಿ ಮಕ್ಕಳ ಡಯಾಪರ್ ಬದಲಾಯಿಸಿ, ನಿದ್ರೆಗೆಟ್ಟು ಮಾರನೆಯ ದಿನ ಕೆಲಸಕ್ಕೆ ಹೋಗೋಕೂ ಬಹಳ ವ್ಯತ್ಯಾಸ ಇದೆ. ನಮ್ಮ ಮಕ್ಕಳಿಗೆ ಯಾವುದು ಒಳ್ಳೇದೋ ಅದನ್ನು ಮಾಡಬೇಕು ಅಂತ ನಿನಗನಿಸೋಲ್ವಾ? ನಾವಿನ್ನೂ ರೆಸಿಡೆನ್ಸಿ ಮಾಡ್ತಾ ಇದೀವಿ. ಅದೂ ನೀನು ಕೆಲತಿಂಗಳು ಬ್ರೇಕ್ ಬೇರೆ ತಗೋತೀಯ. ಡೇಕೇರಿಗೆ ದುಡ್ಡು ಹೊಂದಿಸಕ್ಕಾಗಲ್ಲ.’

‘ವಿನಯ್. ಇದು ನಿಜವಾಗಿಯೂ ದುಡ್ಡಿನ ವಿಷಯಾನಾ? ನಿನ್ನ ಜೀವನ ಶೈಲಿ ಒಮ್ಮೆ ನೋಡಿಕೋ? ಯಾವ ಕಾರ್ಡಿಯಾಲಜಿ ರೆಸಿಡೆಂಟು ಬೀಎಮ್‌ಡಬ್ಲ್ಯು ಕಾರಲ್ಲಿ ಆಸ್ಪತ್ರೆಗೆ ಬರ್ತಾನೆ. ನೀನು ಶಿಕಾಗೋ ಲೋಕಲ್ ಟ್ರೈನನ್ನು ಯಾವಾಗಲಾದರೂ ಹತ್ತಿದ್ದೀಯಾ? ನಿನ್ನ ವಾರ್ಡ್ ರೋಬ್ ನೋಡಿಕೋ. ನಿನ್ನ ಕಳೆದ ಹುಟ್ಟುಹಬ್ಬಕ್ಕೆ ನಿಮ್ಮಪ್ಪ, ಅಮ್ಮ ನಿಂಗೆ ಕೊಡಿಸಿದ ಗಿಫ್ಟೇನು? ಒಂದು ಬೀಎಮ್‌ಡಬ್ಲ್ಯೂ ಸಾಲದು ಅಂತ ಇನ್ನೊಂದು ಮಸ್ಟಾಂಗು. ನನ್ನ ಎಂಗೇಜ್‌ಮೆಂಟ್ ರಿಂಗಿಗೆ ಎಷ್ಟು ದುಡ್ಡು ಖರ್ಚು ಮಾಡಿದ್ದು ನೀನು, ನಲವತ್ತು ಸಾವಿರ ಡಾಲರ್ರು. ಇದರಲ್ಲಿ ಯಾವುದಾದರೂ ಒಂದನ್ನು ನೀನು ನಿಮ್ಮಪ್ಪ, ಅಮ್ಮಂಗೆ ಬೇಡ ಅಂದಿದ್ದರೂ ಮೂರು ವರ್ಷ ಬೇಬಿಸಿಟ್ಟರಿಗೆ ದುಡ್ಡನ್ನು ಆರಾಮಾಗಿ ಹೊಂದಿಸಬಹುದಾಗಿತ್ತು.’

ವಿನಯ ಅವಾಕ್ಕಾದ. ತನ್ನ ಜೀವನ ಶೈಲಿ ಅಲಿಶಾಳಿಗೆ ಇಷ್ಟು ಅಸಹ್ಯವನ್ನು, ರೇಜಿಗೆಯನ್ನು ಉಂಟು ಮಾಡುತ್ತಿದೆಯಾ? ಮಾತಾಡಲಿಕ್ಕೆ ಗೊತ್ತಾಗಲಿಲ್ಲ. ‘ಅಯಾಮ್ ಸಾರಿ, ಮೈ ಲೈಫ್‌ಸ್ಟೈಲ್ ಡಿಸ್‍ಗಸ್ಟ್ಸ್ ಯು. ಅಪ್ಪ, ಅಮ್ಮ ಪ್ರೀತಿಯಿಂದ ಕೊಡೋದನ್ನು ಬೇಡ ಅಂತ ಹೇಳೋಕೆ ನನಗಾಗಲ್ಲ. ಅಬ್ಬ.. ಎಷ್ಟು ಎಲ್ಲ ಲೆಕ್ಕ ಇಟಕೊಂಡಿದ್ದೀಯಲ್ಲ, ನೀನು. ಎಂಗೇಜ್‌ಮೆಂಟ್ ರಿಂಗ್ ನಿನಗೆ ಇಷ್ಟ ಆಯ್ತು ಅಂತ ಅಂದುಕೊಂಡಿದ್ದೆ. ಮಸ್ಟಾಂಗನ್ನು ಕೊಟ್ಟಿದ್ದು ನನಗಲ್ಲ, ನಿನಗೆ. ಬೇಡವಾದರೆ, ನಾಳೆಯೇ ವಾಪಸ್ ಕಳಿಸೋಣ.’

‘ವಿನಯ್, ಹನಿ. ನನ್ನ ಮಾತನ್ನು ತಿರುಚಬೇಡ, ಪ್ಲೀಸ್. ನಾನು ಯಾವ ಸ್ಪಿರಿಟ್ಟಲ್ಲಿ ಮಾತಾಡ್ತೀನೋ ಅದರಲ್ಲಿಯೇ ನೀನು ಅದರರ್ಥ ಹುಡುಕು. ನಾವಿಬ್ಬರೂ ಅಷ್ಟು ಬುದ್ಧಿವಂತರು ಅಂದುಕೊಂಡಿದ್ದೀನಿ.’

‘ನೋಡು, ಅಲಿಶಾ. ಅಮ್ಮ ಒಳ್ಳೇ ಅಜ್ಜಿ ಆಗ್ತಾಳೆ. ಆಕೆಗೆ ಜೀವನದಲ್ಲಿ ಎದುರುನೋಡೋಕೆ ಏನೇನೂ ಇಲ್ಲ. ಇದಕ್ಕೆ ನಿಜವಾಗಿಯೂ ಕಾದಿದಾಳೆ. ಸುಮ್ಮನೆ ಈಗ ಬೇಡ ಎನ್ನುವುದು ತಪ್ಪು. ನಿಮ್ಮಿಬ್ಬರ ನಡುವಿನ ಪ್ರೀತಿ, ದ್ವೇಷಾನ ಅರ್ಥ ಮಾಡಿಕೊಳ್ಳಲಾಗದಷ್ಟು ದಡ್ಡನಲ್ಲ, ನಾನು. ಈ ಮಗೂ ಆಗಲಿ, ಸರಿ ಹೋಗಲಿಲ್ಲ ಅಂದರೆ ಆಮೇಲೆ ನೋಡೋಣ’ ಎಂದು ಆ ಸಂಭಾಷಣೆಯನ್ನುಮುಗಿಸಿದ.

ಕತ್ತಲಾಗುತ್ತಾ ಬಂದಿತ್ತು. ಛಳಿ ಜಾಸ್ತಿಯಾಗುತ್ತಿತು. ಅಲಿಶಾಳಿಗೂ ಈಗ ಮಾತು ಬೆಳೆಸುವುದು ಬೇಕಿರಲಿಲ್ಲ. ಇದು ಯಾರು ತಪ್ಪಿಸಿಕೊಂಡ ಬೀಸುವ ದೊಣ್ಣೆ ಎಂದು ಇಬ್ಬರೂ ಯೋಚಿಸಲಿಕ್ಕೆ ಹೋಗಲಿಲ್ಲ.

ತಾನು ಬೆಳೆಯುತ್ತಿದ್ದಾಗ ಶಾರದತ್ತೆ ಬಂದು ತನ್ನನ್ನು, ವಿಶೂ ಅನ್ನು ಹತ್ತು ವರ್ಷದ ತನಕ ನೋಡಿಕೊಂಡದ್ದು ಆತನಿಗೆ ಬಹಳ ಚೆನ್ನಾಗಿ ನೆನಪಿತ್ತು. ಪ್ರತಿ ದಿನ ತಾಜಾ ಅಡುಗೆ, ದಿನಾ ಸಂಜೆ ಥರಥರಾವರಿ ತಿಂಡಿಗಳು, ಸಂಜೆ ಚೆನ್ನಮಣೆ, ಚೌಕಾಬಾರ ಆಟ, ರಾತ್ರಿ ಮಲಗುವ ಮುನ್ನ ಕಥೆಗಳು- ಅವನಿಗೆ ತನ್ನ ಸಮೃದ್ಧಬಾಲ್ಯದ ಬಗ್ಗೆ ಹೆಮ್ಮೆಯಿತ್ತು. ತನ್ನ ಮಕ್ಕಳನ್ನೂ ಅಮ್ಮ ಬೆಳೆಸಿದರೆ ಬಹಳ ಚೆನ್ನಾಗಿರುತ್ತದೆ ಎನ್ನುವುದು ಆತನ ಯೋಚನೆ.

ಸನ್‍ರೂಮಿನಲ್ಲಿ ಅರವಿಂದ ಇನ್ನೊಂದು ಸ್ಕಾಚ್ ಬಗ್ಗಿಸಿಕೊಂಡ. ಒಳಗೆ ರತ್ನ ವಿಶೂ ಮತ್ತು ಸುಪ್ರೀತನಿಗೆ ಮಲಗಲಿಕ್ಕೆ ಅಣಿ ಮಾಡುತ್ತಿದ್ದಳು. ವಿಶೂ ಯಾವಾಗ ಮನೆಗೆ ಬಂದರೂ ಅವನ ಹಳೆಯ ರೂಮಿನಲ್ಲಿಯೇ ಮಲಗುತ್ತಿದ್ದ. ಸುಪ್ರೀತನಿಗೆ ಬೇಸ್‌ಮೆಂಟಲ್ಲಿರುವ ಹೊಸಾ ಗೆಸ್ಟ್‌ಬೆಡ್‌ರೂಮಿನಲ್ಲಿ ಹಾಸಿಗೆ ಹಾಕಲು ರತ್ನಳಿಗೆ ಹೇಳಿದ್ದಳು, ಸುಕನ್ಯಾ.

‘ವಿಶೂ ಮತ್ತು ಅವನ ಸ್ನೇಹಿತನಿಗೆ ವಿಶೂ ರೂಮಲ್ಲಿಯೇ ಹಾಸಿಗೆ ಹಾಕಿ ಕೊಡ್ಲಾ? ಕೆಳಗೆ ಬೇಸ್‌ಮೆಂಟಲ್ಲಿ ರಾತ್ರಿ ಒಂದು ಹೊತ್ತಲ್ಲಿ ಚಳಿ ಆಗುತ್ತೆ.’ ಎಂದಳು, ರತ್ನ.

ಯಾವ ಉದ್ದೇಶವೂ ಇಲ್ಲದೇ ಕೇಳಿದ ಈ ಮುಗ್ಧ ಪ್ರಶ್ನೆ ಸುಕನ್ಯಾಳನ್ನು ಒಂದೇ ಕ್ಷಣದಲ್ಲಿ ಅಸ್ವಸ್ಥಳನ್ನಾಗಿ ಮಾಡಿಬಿಟ್ಟಿತ್ತು.

‘ಅಯ್ಯೋ ರಾಮ, ಅದೊಂದು ಕಡಿಮೆಯಾಗಿತ್ತು, ಈ ಮನೇಗೆ. ಸುಮ್ಮನೆ ನೀನು ಏನೇನೋ ತಲೆಹರಟೆ ಮಾಡಬೇಡ, ರತ್ನ. ವಿಶೂ ಅವನ ರೂಮಲ್ಲಿ ಮಲಗಲಿ. ಸುಪ್ರೀತನನ್ನು ಕೆಳಗೆ ಬೇಸ್‌ಮೆಂಟಿಗೆ ಕಳಿಸೋಣ. ಅಪ್ಪಿ ತಪ್ಪಿ ಕೂಡ ಸುಪ್ರೀತನ ಸೂಟ್‌ಕೇಸನ್ನು ತಗಂಡು ಹೋಗಿ ವಿಶೂ ರೂಮಲ್ಲಿಡಬೇಡ. ಬಂದ ತಕ್ಷಣ ಕೈಯಿಂದ ಇಸಕೊಂಡು ಸೀದಾ ಕೆಳಗೇ ಕರಕೊಂಡು ಹೋಗು, ಆಯ್ತಾ.’

ರತ್ನಾಳಿಗೆ ವಿಶೂ, ಸುಪ್ರೀತನ ಬಗ್ಗೆ ಎಷ್ಟು ಗೊತ್ತಿತ್ತೋ, ಒಂದು ಕ್ಷಣ ಬೆಪ್ಪಾದಳು. ಸುಮ್ಮನೆ ತಾನು ಏನು ತಪ್ಪು ಮಾತಾಡಿರಬಹುದು ಎಂದು ಯೋಚಿಸುತ್ತಾ ನಿಂತಿದ್ದಳು. ಸುಕನ್ಯಾ ಸೀದಾ ಹೊರಗೆ ಬಂದು ಅರವಿಂದನ ಬಳಿ ‘ರೀ ಕೇಳಿಸಿಕೊಂಡರಾ ರತ್ನಾ ಹೇಳಿದ್ದನ್ನು?’ ಎಂದು ಕೇಳಿದಳು.

ಅರ್ಧಂಬರ್ಧ ಮತ್ತಿನಲ್ಲಿದ್ದ ಅರವಿಂದ ‘ಇಲ್ಲ, ಏನಂತೆ?’

‘ವಿಶೂನ ರೂಮಲ್ಲೇ ಅವನಿಗೂ ಬೆಡ್ ಮಾಡ್ತೀನಿ ಅಂದಳು, ನಾನು ಕೂಡದೇ ಕೂಡದು ಅಂದೆ.’ ಸುಪ್ರೀತನ ಹೆಸರನ್ನೂ ಆಕೆ ಹೇಳಲಿಲ್ಲ.
ಅರವಿಂದ ಒಂದು ಕ್ಷಣ ಅವಳ ಮುಖ ನೋಡಿ ‘ಅವರಿಬ್ಬರೂ ಒಂದೇ ಅಪಾರ್ಟ್‌ಮೆಂಟಲ್ಲಿ ಒಟ್ಟಿಗೇ ವಾಸವಾಗಿದಾರೆ, ಸುಕನ್ಯಾ’

‘ರೀ.. ಅವರವರ ಮನೇಲಿ ಯಾರು ಏನು ಬೇಕಾದರೂ ಮಾಡಿಕೊಂಡು ಹೋಗಲೀ. ಇದು ನನ್ನ ಮನೆ. ಇಲ್ಲಿ ನನ್ನ ಮಾತೇ ನಡೆಯೋದು.’ ದೃಢವಾಗಿ ಹೇಳಿದಳು. ಅರವಿಂದ ಏನೂ ಮಾತಾಡಲಿಲ್ಲ. ಸುಕನ್ಯಾ ಹೋಗಿ ಒಂದು ಗ್ಲಾಸಿನಲ್ಲಿ ವೈನು ಬಗ್ಗಿಸಿಕೊಂಡು ಕೂತಳು. ಆಕೆ ವೈನು ಕುಡಿಯುವುದು ತೀರ ಅಪರೂಪ. ಇವತ್ತು ಆಕೆಗೆ ಯಾಕೋ ಕುಡಿಯಬೇಕನಿಸಿತ್ತು.

ಐದು ನಿಮಿಷ ಸುಮ್ಮನೆ ಕಣ್ಣು ಮುಚ್ಚಿಕೊಂಡು ಎರಡು ಗುಟುಕು ವೈನು ಕುಡಿದಳು. ಇನ್ನೂ ಐದು ನಿಮಿಷ ಏನೂ ಮಾತಾಡದಿದ್ದುದನ್ನು ನೋಡಿದ ಅರವಿಂದ ‘ಸೂ. ಎಲ್ಲ ನಿನ್ನ ಕಂಟ್ರೋಲಲ್ಲೇ ಇರಬೇಕು ಅಂದರೆ ಹೇಗೆ? ನಮ್ಮ ಕೈಮೀರಿದರ ಬಗ್ಗೆ ನಾವು ಚಿಂತೆ ಮಾಡುವುದರಿಂದ ಏನುಪಯೋಗ ಹೇಳು. ಅವರು ಈಗಿನ ಕಾಲದ ಹುಡುಗರು. ಅವರಿಗೆ ಹೇಗೆ ಬೇಕೋ ಹಾಗಿರ್ತಾರೆ. ನಾವೇ ಅನುಸರಿಸಿಕೊಂಡು ಹೋಗಬೇಕು’ ಎಂದ.

ಸುಕನ್ಯಾಳಿಗೆ ಅರವಿಂದನ ಇಂಥ ಮಾತುಗಳು, ನಿರ್ಲಿಪ್ತ ಸ್ಥಿತಿ ಕೆಲವೊಮ್ಮೆ ಬಹಳ ರೇಜಿಗೆ ತರಿಸಿಬಿಡುತ್ತಿತ್ತು. ಸಮಸ್ಯೆಗಳು ಬರುವಾಗಲೇ ಪರಿಹಾರವನ್ನೂ ತಮ್ಮ ಜತೆಗೇ ತಂದಿರುತ್ತವೆ ಎಂಬುದು ಅವನ ಯಾವತ್ತಿನ ನಂಬಿಕೆ. ಪರಿಹಾರ ಅನ್ನೋದು ಇಲ್ಲದಿದ್ದರೆ ಅದನ್ನು ಸಮಸ್ಯೆಯೇ ಅಲ್ಲ ಅನ್ನುತ್ತಿದ್ದ, ಆತ. ‘ಅನ್ನ ಮಾಡೊಕೆ ಅಕ್ಕಿ ಇಲ್ಲ ಅಂದರೆ ಅಂಗಡೀಗೆ ಹೋಗಿ ಅಕ್ಕಿ ತರಬೇಕು. ಅಕ್ಕಿಯೇ ಸಿಗದೇ ಇರೋ ಸಂದರ್ಭ ಬಂದಲ್ಲಿ ಅನ್ನ ಮಾಡುವ ಯೋಚನೆಯನ್ನೇ ಬಿಟ್ಟುಬಿಡಬೇಕು. ಬೇರೆ ಏನಾದರೂ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು’ ಇದು ಅವನ ತತ್ವ. ಜೀವನ ಅನ್ನುವುದು ಅಕ್ಕಿ ನೆನೆಸಿ, ತೊಳೆದು ಕುಕ್ಕರಲ್ಲಿ ಇಟ್ಟಷ್ಟು ಸುಲಭವಲ್ಲ ಎಂದು ಸುಕನ್ಯಾಳ ವಾದ.

‘ನೋಡಿ, ಹುಡುಗರು ಈಗಿನ ಕಾಲದವರಾದ್ರೆ ನಾನು ಆಗಿನ ಕಾಲದವಳು, ಸರೀನಾ? ಈ ಮನೇಗೆ ಬರೋವ್ರು ಒಂದನ್ನಂತೂ ಅರ್ಥ ಮಾಡಿಕೊಳ್ಳಬೇಕು. ದಿನಾ ಬೆಳಿಗ್ಗೆ ಸಂಜೆ ದೇವರ ದೀಪ ಹಚ್ಚೋ ಮನೆ ಇದು. ಥ್ಯಾಂಕ್ಸ್‌ಗಿವಿಂಗು, ಕ್ರಿಸ್‌ಮಸ್ಸುಗಳ ಜತೆ ನಮ್ಮ ವರ್ಷಾವಧಿ ಹಬ್ಬಗಳೂ ನಡೀತವೆ. ನನ್ನ ಸೊಸೆ ನನ್ನ ಹತ್ತಿರ ಬಾಣಂತನ ಮಾಡಿಸಿಕೋಬೇಕು ಅಂದರೆ ಚ್ಯವನಪ್ರಾಶ್ ತಿನ್ನಲೇಬೇಕು. ಹಾಗೇ ವಿಶೂ ನಾಲ್ಕು ಗೋಡೆಯ ನಡುವೆ ಏನು ಮಾಡ್ತಾನೆ ಅನ್ನೋದನ್ನು ನಾನು ಕಂಟ್ರೋಲು ಮಾಡದೇ ಇರಬಹುದು. ಆದರೆ, ಅವನಿಗೆ ಆ ಗೋಡೆಗಳು ದೇವರ ಪೂಜೆ ಮಾಡೋ ಅವನಮ್ಮನ ಮನೇಲಿ ಇದೆ ಅಂತ ಗೊತ್ತಿರಬೇಕ್ರೀ. ನಾನೇನು ಅವನ ಜೀವನ ಹೀಗೇ ಇರಬೇಕು ಅಂತ ಹೇಳ್ತಾ ಇಲ್ಲ. ನನ್ನ ಮನೇಗೆ ಬಂದಾಗ ನನ್ನ ಮನಸ್ಸಿಗೆ ಹಿಂಸೆ ಹಾಗೋ ಹಾಗೆ ಇರಬೇಡ ಅಂತ ಮಾತ್ರ ಕೇಳ್ಕೋತೀನಿ. ಅದು ತಪ್ಪಾ?’ ಧ್ವನಿಯ ಜತೆ ವೈನು ಹಿಡಿದ ಕೈ ಕೂಡ ನಡುಗುತ್ತಿತ್ತು.

ಅರವಿಂದನಿಗೆ ಏನು ಮಾತಾಡಬೇಕೆಂದು ಗೊತ್ತಾಗಲಿಲ್ಲ. ಹತ್ತಿರ ಬಂದು ಇನ್ನೊಂದು ಸ್ವಲ್ಪ ವೈನು ಬಗ್ಗಿಸಿ ‘ದಿನಾ ದೇವರ ಪೂಜೆ ಮಾಡೋ ಅಮ್ಮ ಆಗಾಗ್ಗೆ ವೈನೂ ಕುಡೀತಾಳೆ.’ ಎಂದು ಆಕೆಯ ಮೂಗು ಹಿಂಡಿ ‘ವೈ ಡು ಯು ಡಿಟೆಸ್ಟ್ ದಟ್ ಲೈಫ್‍ಸ್ಟೈಲ್ ಸೊ ಮಚ್’ ಎಂದ.

‘ಡಿಟೆಸ್ಟ್ ಅಲ್ಲರೀ. ಒಂದು ರೀತಿ ಕಸಿವಿಸಿ, ಅನ್‌ಕಂಫರ್ಟಬಲ್. ನಾನು ನಿಮಗೆ ಒಂದು ಪ್ರಶ್ನೆ ಕೇಳ್ತೀನಿ. ಮುಜುಗರಪಟ್ಟುಕೊಳ್ಳದೇ ಗೇ ಪೋರ್ನ್ ನೋಡಕ್ಕಾಗುತ್ತಾ ನಿಮಗೆ?’

‘ಏನು ಮಾತಾಡ್ತಾ ಇದ್ದೀ ನೀನು? ನಾನ್ಯಾಕೆ ನೋಡಬೇಕು, ಅದೂ ಈ ವಯಸ್ಸಲ್ಲಿ?’

‘ನಾನು ನೋಡಿದೇರೀ. ವಿಶೂ ಈತರ ಅಂತ ಗೊತ್ತಾದಾಗ ಕಂಪ್ಯೂಟರಿನಲ್ಲಿ ಒಬ್ಬಳೇ ನೋಡಲು ಪ್ರಯತ್ನಿಸಿದೆ. ಒಂದು ನಿಮಿಷಕ್ಕೆ ವಾಕರಿಕೆ ಬಂತು.’ ಬಿಕ್ಕಿದಳು.

‘ಯಾವುದೇ ಪೋರ್ನ್ ಆದರೂ ವಾಕರಿಕೆ ಬರಲ್ಲವೇನೇ?’

‘ಪ್ಲೀಸ್, ನನ್ನ ಮಾತು ಕೇಳಿ. ನನ್ನ ಆಷಾಡಭೂತಿ ಅಂತ ಕರೀರಿ, ಬೇಕಾದ್ರೆ. ನಾನು ಮಾಮೂಲಿ ಪೋರ್ನನ್ನೂ ನೋಡಿದೆ. ಎರಡಕ್ಕೂ ಬಹಳ ವ್ಯತ್ಯಾಸ ಇದೇರಿ. ವಿಶೂ, ಸುಪ್ರೀತ ನಮ್ಮನೇ ರೂಮಲ್ಲಿ ಒಟ್ಟಿಗೇ ಮಲಗಿದ್ರೆ ನನಗೆ ನನ್ನ ಮಗ ಪೋರ್ನ್ ಆ್ಯಕ್ಟರ್ ಅಂತ ಅನ್ನಿಸೋಕೆ ಶುರು ಆಗಿಬಿಡುತ್ತೇರಿ. ಅವರಿಬ್ಬರ ನಡುವೆ ಸೆಕ್ಷುಯಲ್ ಅಲ್ಲದ ಯಾವ ಸಂಬಂಧವನ್ನೂ ಕಲ್ಪಿಸಿಕೊಳ್ಳೋಕೆ ಈ ಘಟ್ಟದಲ್ಲಿ ನನ್ನಿಂದ ಆಗ್ತಾ ಇಲ್ಲ. ಮುಂದೊಂದು ದಿನ ಎಲ್ಲ ಸರಿಹೋಗಬಹುದು. ಪ್ಲೀಸ್, ಪ್ಲೀಸ್. ಅದೊಂದು ನನಗೆ ತಡಕೊಳ್ಳೋಕೆ ಆಗಲ್ಲ. ನಾನು ಬಲು ಕೆಟ್ಟ ಅಮ್ಮಾರೀ.’ ಎಂದು ಅರವಿಂದನ ತೆಕ್ಕೆಗೆ ಬಿದ್ದು ಅಳತೊಡಗಿದಳು. ಕೈ ಇನ್ನೂ ಜೋರಾಗಿ ನಡುಗುತ್ತಿತ್ತು, ವೈನು ಕೆಳಗೆ ತುಳುಕಿದಾಗ ಗ್ಲಾಸನ್ನು ಆಕೆಯ ಕೈಯಿಂದ ತೆಗೆದುಕೊಂಡು ಪಕ್ಕಕ್ಕಿರಿಸಿದ.

ಅರವಿಂದ ಸುಮ್ಮನೇ ಆಕೆಯ ಬೆನ್ನನ್ನು ನೀವುತ್ತಿದ್ದ. ನಾವುಗಳು ಹೇಗೆ ನಮ್ಮದೇ ಪುಟ್ಟ ಪುಟ್ಟ ಪ್ರಪಂಚಗಳನ್ನು ಕಟ್ಟಿಕೊಂಡುಬಿಡುತ್ತೇವೆ. ಮಕ್ಕಳು ಬೆಳೆಯುತ್ತಾ ಹೋದಂತೆ ಈ ಪ್ರಪಂಚಗಳು ಹೇಗೆ ದೂರದೂರವಾಗುತ್ತಾ ಹೋಗುತ್ತಿವೆ. ಈ ಪ್ರಪಂಚಗಳನ್ನು ಒಂದು ಮಾಡುವುದು ಯಾವುದು ಪ್ರೀತಿಯೇ, ರಕ್ತಸಂಬಂಧವೇ? ಮಕ್ಕಳಿಗಾಗಿ ಮನೆಗಾಗಿ ಏನೆಲ್ಲ ಮಾಡಿದ್ದಾಳೆ ಈಕೆ. ಆದರೆ ಈಗ ಅದೇ ಮಗನ ಜೀವನಶೈಲಿ ಆಕೆಗೆ ಅಸಹ್ಯಬರುವಷ್ಟು ಕಸಿವಿಸಿ ತರುತ್ತಿದೆ. ವಿಶೂ ಕೇಳಿದರೆ ತನ್ನ ದೇಹದ ಅಂಗವನ್ನೇ ಕಿತ್ತುಕೊಟ್ಟಾಳು. ಆದರೆ ಆತ ಆತನ ಪ್ರಿಯತಮನ ಜತೆ ತನ್ನ ಮನೆಯ ಒಂದು ರೂಮಿನಲ್ಲಿ ಮಲಗುವುದನ್ನು ಈಕೆ ಸಹಿಸಲಾರಳು.

‘ಅಲ್ಲಾರೀ. ಸುಪ್ರೀತ್‍ಸಿಂಗ್ ಅಂದರೆ ಗಡ್ಡ, ಮೀಸೆ, ಕತ್ತಿ, ಟರ್ಬನ್ ಇಟ್ಕೊಳೋ ಸರದಾರ್ ಅಲ್ವಾ?’ ಸುಕನ್ಯಾ ಅರವಿಂದನ ಮುಂಗೈನ ನರಗಳನ್ನು ನೀವುತ್ತಾ ಕೇಳಿದಳು.

‘ನನಗೆ ಗೊತ್ತಿಲ್ಲ. ಇನ್ನೇನು ಬರ್ತಾನಲ್ಲ, ನೀನೇ ನೋಡುವಿಯಂತೆ.’

‘ಸರ್ದಾರ್ಜಿಗಳು ಮಿಲಿಟರಿಲಲ್ಲಿರ್ತಾರಲ್ವ. ಅವರಲ್ಲಿ ಟೆಸ್ಟೋಸ್ಟೀರೋನ್ ಹರೀತಿರುತ್ತೆ. ಅವರು ಹಿಂಗೆಲ್ಲಾ ಇರೋದು ಸಾಧ್ಯಾನಾ?’

‘ನಿನ್ನ ತಲೆ, ಹುಚ್ಚುಚ್ಚಾಗಿ ಮಾತಾಡಬೇಡ. ಅವ ಹೇಗಿರಬೇಕು ಅನ್ನೋದು ಅವನು ಸರದಾರ ಹೌದೋ ಅಲ್ಲವೋ ಅನ್ನೋದರ ಮೇಲೆ ನಿಂತಿದೆಯಾ? ಯಾರಾದರೂ ಕೇಳಿದರೆ ನಕ್ಕುಬಿಡ್ತಾರಷ್ಟೇ?’

‘ಸುಮ್ಮನೆ ಏನೋ ಹಿಂಗೇ ಯೋಚನೆ ಬಂತಷ್ಟೇ’ ಎಂದು ಕಣ್ಣು ಹೊಡೆದಳು, ಸುಕನ್ಯಾ ನಗುತ್ತಾ ‘ಆ ಸಿಂಗಣ್ಣ ಎಂಥಾವ್ನಾರಾ ಆಗಿರ್ಬಹುದು. ಆದರೆ, ನಂ ವಿಶೂ ಹಂಗಲ್ಲ. ಆತ ಮಹಾಗಂಡು ಅಂದುಕೊಂಡಿದ್ದೆ. ಹೈಸ್ಕೂಲಲ್ಲೇ ಆತನ ಹಿಂದೆ ಎಷ್ಟು ಹುಡ್ಗೀರು ಬಿದ್ದಿದ್ದರು, ಗೊತ್ತಾ?’
‘ಆಗ ಅದಕ್ಕೆ ಅಳ್ತಾ ಇದ್ದೀ’

‘ಒಮ್ಮೆ ಸಂಕಟಪಟ್ಟ, ದುಃಖಪಟ್ಟ ಸಂಗತಿ ಮತ್ತೊಮ್ಮೆ ಎಷ್ಟು ಸಂತೋಷ ಕೊಡಬಹುದು ನೋಡಿ. ಆಗ ಬೇಡವಾದದ್ದು ಈಗ ಬೇಕಾಗಿದೆ’ ಎಂದು ಮತ್ತೊಮ್ಮೆ ನಕ್ಕಳು.

‘ಅಮ್ಮ ತಾಯಿ, ನೀನು ಯಾವಾಗ ನಗ್ತೀಯೋ, ಯಾವಾಗ ಅಳ್ತೀಯೋ ಒಂದೂ ಗೊತ್ತಾಗಲ್ಲ. ಬೇಕಾದರೆ, ಇನ್ನೊಂದು ಗ್ಲಾಸು ವೈನು ಕುಡಿ. ಒಟ್ಟು ನಗ್ತಾ ಇರು. ಅಷ್ಟೇ’ ಎಂದ.

ಹಿಂಬಾಗಿಲು ಶಬ್ದವಾಯಿತು. ವಿನಯ, ಅಲಿಶಾ ಇಬ್ಬರೂ ಮಾತಿಲ್ಲದೆ ಮನೆಯ ಹಿಂಬಾಗಿಲಿನಿಂದ ಬಂದದ್ದನ್ನು ನೋಡಿ ಇಬ್ಬರೂ ಮಾತು ನಿಲ್ಲಿಸಿದರು. ಸುಕನ್ಯಾ ಅರವಿಂದನ ತೆಕ್ಕೆ ಬಿಟ್ಟೆದ್ದಳು. ತಾನು ಅತ್ತಿದ್ದು ಗೊತ್ತಾಗಬಾರದೆಂದು ಕಣ್ಣೊರೆಸಿಕೊಳ್ಳಲು ಹೋದ ಆಕೆ ಅಲಿಶಾಳ ಕಣ್ಣು ದಪ್ಪವಾಗಿದ್ದನ್ನು ಗಮನಿಸಿದಳು. ಇಬ್ಬರ ನಡುವೆ ಏನೋ ಜಟಾಪಟಿ ನಡೆದಿದೆ ಎಂದುಕೊಂಡು ವಿನಯನಿಗೆ ‘ನಿನಗೇನು ಬೇಕೋ, ಕುಡಿಯೋಕೆ. ವೈನೋ, ಸ್ಕಾಚೋ ಏನಾದರೂ ಕುಡಿಯೋ ಹಾಗಿದ್ರೆ ಬೇಗ ಬೇಗ ಕುಡಿದು ಮುಗಿಸೋ, ವಿನಯ. ಊಟಕ್ಕೆ ರೆಡಿ ಮಾಡ್ತೀನಿ’ ಎಂದಳು, ಸುಕನ್ಯಾ.

ವಿನಯ ಸುಕನ್ಯಾಳ ಗ್ಲಾಸಿನಿಂದಲೇ ಒಂದು ಗುಟುಕು ಇಸಕೊಂಡು ಕುಡಿದು ‘ಆಹಾ, ಬಲು ರುಚಿಯಾಗಿದೆ. ಎಷ್ಟಾದರೂ ನಿನ್ನ ಆಯ್ಕೆ ಅಲ್ವಾ, ಅಮ್ಮ. ರತ್ನಾ ನನಗೊಂದು ಖಾಲಿ ವೈನ್ ಗ್ಲಾಸ್ ಕೊಡ್ತೀರಾ.’ ಎಂದು ಅಮ್ಮನ ಪಕ್ಕದಲ್ಲಿಯೇ ಕೂತ.

ಯಾವತ್ತೂ ಸ್ಕಾಚ್ ಬಿಟ್ಟರೆ ಬೇರೆ ಏನನ್ನೂ ಕುಡಿಯದ ವಿನಯ ಅಂದು ಅಮ್ಮನ ಗ್ಲಾಸಿನಿಂದಲೇ ವೈನು ಕುಡಿಯುವುದನ್ನು ನೋಡಿದ ಅಲಿಶಾ ಆತನನ್ನು ಒಮ್ಮೆ ದಿಟ್ಟಿಸಿ ನೋಡಿ ‘ನೈಸ್, ಈಡಿಪಸ್’ ಎಂದಳು. ವಿನಯ ಪ್ರತಿಕ್ರಿಯಿಸಲಿಲ್ಲ.

(ಮುಂದುವರೆಯುವುದು…)