ಜಿನದತ್ತ ತಿಮ್ಮಪ್ಪನ ಮಾತುಗಳಿಗೆ ಉತ್ತರಿಸಲು ಧೈರ್ಯ ತೋರಲಿಲ್ಲ. ಕಥೆಗಾರನ ಕಲ್ಪನೆ, ಸ್ವಾತಂತ್ರ್ಯವೇನು ಎಂಬುದು ಆ ಪಾತ್ರಕ್ಕೇನು ಗೊತ್ತು? ಒಂದು ಕತೆಯ ಎಲ್ಲ ಪಾತ್ರಗಳು ಕತೆಗಾರ ಹೇಳಿದಂತೆ ಕೇಳಬೇಕು ಅನ್ನುವ ಸತ್ಯ ಆ ತಿಮ್ಮಪ್ಪನಂತವನಿಗೆ ಎಲ್ಲಿ ತಾನೇ ಅರ್ಥವಾಗಬೇಕು. ಅವನಿಗೆ ಇದನ್ನು ಬಿಡಿಸಿ ಹೇಳಿದರೂ ಅರ್ಥ ಮಾಡಿಕೊಳ್ಳುತ್ತಾನೆಯೇ? ಅವನೊಬ್ಬ ಶುದ್ಧ ಶತದಡ್ಡ. ತಾನು ಹುಟ್ಟಿಸಿದ ನನ್ನ ಕಲ್ಪನೆಯ ಕೂಸು ಅಲ್ಲವೇ? ಮಾತನಾಡಲಿ ಬಿಡಿ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಶ್ರೀಧರ ಬನವಾಸಿ ಬರೆದ ಕತೆ `ಜಿನದತ್ತನೆಂಬ ಕಥೆಗಾರನೂ…’ ನಿಮ್ಮ ಈ ಭಾನುವಾರದ ಓದಿಗೆ

ಕಳೆದ ಎರಡು ವರ್ಷಗಳಿಂದ ತಾನೊಂದು ಕಥೆಯನ್ನು ಸಂಪೂರ್ಣವಾಗಿ ಬರೆಯಲಾಗುತ್ತಿಲ್ಲ ಅನ್ನುವ ನೋವು ಜಿನದತ್ತನೆಂಬ ಕಥೆಗಾರನನ್ನು ಕಾಡುತ್ತಿತ್ತು. ಇತ್ತೀಚಿನ ದಿನಗಳಿಂದ ಆತನೊಳಗೆ ನಡೆಯುತ್ತಿದ್ದ ಮಾನಸಿಕ ತುಮುಲಗಳು ಹೇಳಿಕೊಳ್ಳುವಂತಿರಲಿಲ್ಲ. ಅವು ಕಥೆಯಾಗಿಯೇ ಹೊರಬರಬೇಕಿತ್ತಷ್ಟೇ.

ಕಥೆಗಾರನ ಅಂತರಂಗದಲ್ಲಿ ಒಂದು ಕಥೆ ಹುಟ್ಟುವುದು ಅಂದರೆ ಅಷ್ಟು ಸುಲಭವಲ್ಲ. ಅಂತರಂಗದಲ್ಲಿ ಆತ ಅಷ್ಟು ತಪಸ್ಸು ಮಾಡಲೇಬೇಕು. ತಪಸ್ಸು ಅಂದರೆ ಅಂತರಂಗದಲ್ಲಿ ಆತ ಮೌನಿಯಾಗಿದ್ದುಕೊಂಡು ಜಗತ್ತನ್ನು ಕ್ಷಣಕ್ಷಣವೂ ಹೀರುತ್ತಿರಬೇಕು. ಹೀಗೆ ಹೀರಿಕೊಂಡಾಗಲೇ ಕಥೆಗಾರನ ಅಂತರಂಗದೊಳಗೆ ಕತೆಯ ಬೀಜ ಹುಟ್ಟುವುದು, ಅದು ಮುಂದೆ ಚಿಗುರಿ ಒಂದು ರೂಪ ಪಡೆದುಕೊಂಡು ಓದುಗನ ಅಂತರಾಳವನ್ನು ಸೇರುವುದು. ಹೀಗೆಯೇ ಕಥೆ ಒಂದು ಅಂತರಾಳದಲ್ಲಿ ಹುಟ್ಟಿ ಇನ್ನೊಂದು ಅಂತರಾಳವನ್ನು ಸೇರುವುದು. ಕಥೆಗಾರನ ಸಾರ್ಥಕ ಬದುಕು ಅಡಗಿರುವುದು ಕೂಡ ಅಲ್ಲೆ. ಅಂತಹ ಕಥೆಗಾರನಾಗಿ ತಾನು ರೂಪುಗೊಂಡಿರುವುದಕ್ಕೆ ನನಗೆ ಹೆಮ್ಮೆಯಿದೆ- ಅಂತ ಹಿಂದೊಮ್ಮೆ ದಿನಪತ್ರಿಕೆಯ ಸಂದರ್ಶನದಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಾಗ ಜಿನದತ್ತನೇ ಹೇಳಿಕೊಂಡ ಮಾತಿದು.

ಹಾಗಾದರೇ ತಾನೇ ಹೇಳಿಕೊಂಡಂತೆ ತನ್ನೊಳಗೆ ಒಂದು ಕಥೆ ಹುಟ್ಟಬೇಕಾದರೆ, ಅಂತರಂಗದಲ್ಲಿ ತಪಸ್ಸು ಮಾಡಲೇಬೇಕು. ಈಗ ನನ್ನಲ್ಲಿ ಕಥೆ ಹುಟ್ಟುತ್ತಿಲ್ಲ ಅಂದರೆ ನನ್ನಲ್ಲಿನ ತಪಸ್ವಿ ಎಲ್ಲಿ ಹೋದ? ಹೊರಗಿನ ಜಗತ್ತನ್ನು ಹೀರುವ ನನ್ನ ಅಂತರಂಗವೇಕೆ ಇಂದು ಮೌನವಾಗಿದೆ? ತನಗೆ ಕತೆಯನ್ನು ಬರೆಯಲಿಕ್ಕೆ ಆಗುತ್ತಿಲ್ಲ ಅನ್ನುವ ಕಟು ಸತ್ಯವೇ ಎಷ್ಟು ನೋವು ಕೊಡುತ್ತಿದೆಯಲ್ಲ! ಅಯ್ಯೋ ನನ್ನಲ್ಲಿನ ಕಥೆಗಾರ ಸತ್ತು ಹೋದನೆ? ಎಲ್ಲಿಯಾದರೂ ಓಡಿಹೋಗಿಬಿಟ್ಟನೇ? ಅವನೆಲ್ಲಿ ಇಂದು…? ಅವನನ್ನು ಬಿಟ್ಟು ನಾನು ಇರಲಿಕ್ಕೆ ಸಾಧ್ಯವಿಲ್ಲ. ಯಶಸ್ಸು, ಅಭಿಮಾನ, ಗೌರವ ಪ್ರೀತಿಯನ್ನು ನೀಡಿದ್ದ ನನ್ನೊಳಗಿನ ಮಹಾ ತಪಸ್ವಿ ಈಗ ಎಲ್ಲಿ ಅಡಗಿಹನು? ಕಳೆದ ಎರಡು ವರ್ಷಗಳಲ್ಲಿ ಅದೆಷ್ಟು ಜನರು ನನ್ನ ಮುಂದಿನ ಪುಸ್ತಕದ ಬಗ್ಗೆ ವಿಚಾರಿಸಿರಬಹುದು? ಪತ್ರಿಕೆಯವರು ಯಾವಾಗ ನಿಮ್ಮ ಕಥೆಯನ್ನು ಕಳುಹಿಸುವಿರಿ ಅಂತ ಅದೆಷ್ಟು ಬಾರಿ ಫೋನ್ ಮಾಡಿರಬಹುದು. ನನಗೀಗ ಕಥೆ ಬರೆಯಲಿಕ್ಕೆ ಆಗುತ್ತಿಲ್ಲ ಅಂತ ನೇರವಾಗಿ ಹೇಳಲಿಕ್ಕೆ ಮನಸ್ಸಾಗುತ್ತಿಲ್ಲ. ನನ್ನಲ್ಲಿನ ಈ ನ್ಯೂನತೆಯನ್ನು ಅವರ ಹತ್ತಿರ ಹೇಗೆ ಹೇಳಿಕೊಳ್ಳಲಿ? ಕೇಳಿದರೆ ನಗುವುದಿಲ್ಲವೇ? ಇನ್ನೂ ನಲವತ್ತೈದರ ಪ್ರಾಯ. ಸಾಹಿತ್ಯದ ಸೃಜನಶೀಲತೆ ಉಕ್ಕಿ ಹರಿಯುವಂತಹ ವಯಸ್ಸು. ದೊಡ್ಡ ದೊಡ್ಡ ಸಾಹಿತಿಗಳು ನಲವತ್ತರ ಪ್ರಾಯದಲ್ಲೇ ಅತಿ ಶ್ರೇಷ್ಠ ಕೃತಿಗಳನ್ನು ನೀಡಿರುವಾಗ ಥೂ.. ನಿನಗೇನು ದಾಡಿ, ಈ ವಯಸ್ಸಿನಲ್ಲೇ ಕಥೆಗಾರನೆಂಬ ಪಟ್ಟದಿಂದ ನಿವೃತ್ತಿಯಾಗುತ್ತಿಯಾ? ಅಂತ ಕೇಳಿದರೆ ನಾನೇನು ಹೇಳಲಿ… ನನ್ನಲ್ಲಿ ಉತ್ತರವಿಲ್ಲ. ಒಳಗಿನ ನೋವನ್ನು ಹೇಳಿಕೊಂಡರೆ ಆಗುವುದಿಲ್ಲವೇ? ಅಂತ ಮನವೊಲಿಸಿದರೂ ಮನಸ್ಸು ಇನ್ನಷ್ಟು ಕುಬ್ಜವಾಗುತ್ತದೆ. ನನ್ನಲ್ಲಿನ ಕತೆಗಾರ ಓಡಿಹೋಗಿದ್ದಾನೆ ಅಂತ ಹೇಳಿದರೆ ನನ್ನ ಬದುಕು ನಾಯಿ ಮುಟ್ಟಿದ ಮಡಕೆಯಂತಾಗುವುದಿಲ್ಲವೇ? ಬದುಕು ಇಷ್ಟು ಬೇಗ ತನ್ನ ರುಚಿಯನ್ನು ಕಳೆದುಕೊಳ್ಳುತ್ತದೆ ಅಂತ ಅಂದುಕೊಂಡಿರಲಿಲ್ಲ. ಅಂತಹ ಬದುಕನ್ನು ಈಗ ಎದುರಿಸಬೇಕಾಗಿದೆ. ಏನು ಮಾಡುವುದು? ಬರಹಗಾರನಿಗೆ ಬರೆಯದೇ ಬದುಕಿಲ್ಲ. ಕಥೆಯನ್ನು ಹುಟ್ಟಿಸುವುದು ನನ್ನಂತ ಕತೆಗಾರನ ಕರ್ತವ್ಯ. ಈ ಕರ್ತವ್ಯದ ಪಟ್ಟದಿಂದ ವಿಮುಖನಾಗುತ್ತಿದ್ದೇನೆಯೇ?

*****

ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ಕತೆಗಾರನೆಂದು ಗುರುತಿಸಿಕೊಂಡಿದ್ದ ಜಿನದತ್ತ ಉಪಾಧ್ಯಾಯನಿಗೆ ಹೊಸದೊಂದು ಚಿಂತೆ ಕಾಡತೊಡಗಿತ್ತು. ಕಥೆಯನ್ನು ಬರೆಯಲಿಕ್ಕೆ ಪ್ರೇರಣೆ ಹುಟ್ಟಿಸುವಂತಹ ಏಕಾಂಗಿತನವನ್ನು ಆತ ಎಲ್ಲೋ ಒಂದು ಕಡೆ ಕಳೆದುಕೊಂಡುಬಿಟ್ಟಿದ್ದ. ಹಾಗಾದರೆ ಆತನ ಒಳಗಿನ ಏಕಾಂಗಿತನ ಎಲ್ಲಿ ಹೋಯಿತು? ಒಳಗಿನ ಶೂನ್ಯ ಮನಸ್ಥಿತಿ ಬೇಡಿದಾಗಲೆಲ್ಲಾ ಹುಚ್ಚು ಕುದುರೆಯಂತೆ ಓಡುತ್ತಿದ್ದ ಮನಸ್ಸನ್ನು ಆತ ನಿಗ್ರಹಿಸಿ ತನ್ನ ಜೀವನದ ಉದ್ದೇಶದಿಂದ ವಿಮುಖನಾಗಲು ಪ್ರಯತ್ನಿಸುತ್ತಿದ್ದ ಜಿನದತ್ತನ ಸ್ಥಿತಿಯ ಕಥೆಯಂತೂ ಬಲು ವಿಚಿತ್ರವಾಗಿತ್ತು. ಈಗ ತಾನು ಎದುರಿಸುತ್ತಿರುವ ವಿಚಿತ್ರ ಸಮಸ್ಯೆಯಿಂದ ಹೇಗೆ ಪಾರಾಗಬಹುದು? ಓಡಿಹೋಗಿರುವ ನನ್ನೊಳಗಿನ ತಪಸ್ವಿಯನ್ನು ಎಲ್ಲಿ ಅಂತ ಹುಡುಕುವುದು. ಅವನು ಬರದ ಹೊರತು ತನ್ನಲ್ಲಿ ಕಥೆಗಾರ ಹುಟ್ಟಲಿಕ್ಕೆ ಸಾಧ್ಯವಿಲ್ಲ, ಅವನು ಇಲ್ಲದ ನನ್ನನ್ನು ಎಲ್ಲರೂ ಕತೆಗಾರನೆಂದು ಪ್ರೀತಿ, ಗೌರವದಿಂದ ಮಾತನಾಡಿಸಿದಾಗ ಏನೋ ಒಂಥರಾ ವಿಚಿತ್ರ ಹಿಂಸೆಯಂತೆ ತೋರುತ್ತಿತ್ತು. ಅಂದು ಅವನು ಇದ್ದಾಗ ಪ್ರೀತಿ, ಅಭಿಮಾನದ ಮಾತುಗಳನ್ನು ಕೇಳಲಿಕ್ಕೆ ತುಂಬಾ ಖುಷಿಯಾಗುತ್ತಿತ್ತು. ಆದರೆ ಇಂದು ಆ ಮಾತುಗಳನ್ನು ಕೇಳಿದಾಗೆಲ್ಲಾ ಅಪಥ್ಯವೆನಿಸುವ ಮಾನಸಿಕ ಕಿರಿಕಿರಿ ಉಂಟಾಗುತ್ತಿತ್ತು. ಆಗಾಗ ಸ್ನೇಹಿತರು ಕರೆಯುವ ಔತಣಕೂಟಗಳಿಗೆ, ಸಾಹಿತ್ಯಕ ಕಮ್ಮಟ, ಪುಸ್ತಕ ಬಿಡುಗಡೆ, ಪ್ರಶಸ್ತಿ ಸಮಾರಂಭ, ವಿಚಾರ ವಿಮರ್ಶೆಗಳ ಕಾರ್ಯಕ್ರಮಗಳಿಗೆ ಹೋಗಲು ಯಾಕೋ ಮನಸ್ಸಾಗುತ್ತಿಲ್ಲ ಅಂತ ಜಿನದತ್ತ ಒಳಗೊಳಗೆ ಕೊರಗುತ್ತಿದ್ದ. ತನ್ನದಲ್ಲದ ಮಾತುಗಳನ್ನು ಕೇಳಿಸಿಕೊಂಡು ನೋವು ಪಡುವುದಕ್ಕಿಂತ ಮನೆಯಲ್ಲೇ ಕೂತು ಬಾಹ್ಯ ಏಕಾಂಗಿತನವನ್ನು ಅನುಭವಿಸುವುದು ಒಳ್ಳೆಯದು ಅಂತ ಆತನಿಗೆ ಅನಿಸಿಬಿಟ್ಟಿತ್ತು.

ಪ್ರಿಯ ಜಿನದತ್ತನಿಗೆ ಆಶೀರ್ವಾದಗಳು.
ಇತ್ತೀಚಿನ ದಿನಗಳಲ್ಲಿ ನೀನು ಅನುಭವಿಸುತ್ತಿರುವ ಮಾನಸಿಕ ಯಾತನೆಯ ಸಮಸ್ಯೆಯನ್ನು ಪತ್ರದ ಮೂಲಕ ನಮಗೆ ನಿವೇದಿಸಿಕೊಂಡಿದ್ದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನೀನು ಎದುರಿಸುತ್ತಿರುವ ಸಮಸ್ಯೆ ನಮ್ಮಂತಹ ಆಧ್ಯಾತ್ಮಿಕ ಸಾಧಕರಿಗೂ ಕೂಡ ಕಾಡುವಂತಹ ಸಮಸ್ಯೆಯೇ. ಒಬ್ಬ ಕಥೆಗಾರ ಬೇರೆ ಅಲ್ಲ, ನನ್ನಂಥ ಸರ್ವಸಂಗ ಪರಿತ್ಯಾಗಿಯಾದ ಆಧ್ಯಾತ್ಮಿಕ ಗುರು ಬೇರೆಯಲ್ಲ. ಒಳಗೊಳಗೆ ಇಬ್ಬರೂ ತಪಸ್ವಿಗಳೇ. ಇಬ್ಬರ ಹುಡುಕಾಟ ಕೂಡ ಒಂದೇ. ಒಳಗಿನ ತಪಸ್ಸಿನ ಸಾಧನೆಯಲ್ಲಿ ಅನುಭವಿಸಿದ್ದನ್ನ ಮಾತ್ರ ನಾನು ಜನರಿಗೆ ನೀಡಬಲ್ಲೆಯಷ್ಟೇ. ನೀನು ನಿನ್ನೊಳಗಿನ ಪಾತ್ರಗಳ ತೊಳಲಾಟವನ್ನು, ಕಥೆಯ ರೂಪದಲ್ಲಿ ತಂದರೆ, ನಾನು ನನ್ನ ಪ್ರವಚನದ ಮೂಲಕ ಒಳಗಿನ ಅನುಭವವನ್ನು ಹೊರಜಗತ್ತಿಗೆ ನೀಡುತ್ತೇನೆಯಷ್ಟೇ. ಹಾಗಾಗಿ ಈ ದಿನಗಳಲ್ಲಿ ನೀನು ನಿನ್ನೊಳಗಿನ ತಪಸ್ವಿಯನ್ನು ಕಳೆದುಕೊಂಡಿದ್ದೇನೆ ಎಂಬ ಕೊರಗಿನಲ್ಲಿ ಮಾನಸಿಕವಾಗಿ ತುಂಬಾ ನೊಂದಿರುವೆ. ಹೆದರಬೇಡ. ಹಿಮಾಲಯದಲ್ಲಿರುವ ಸಾಧಕರಿಗೂ ಕೂಡ ನಿನಗಿರುವ ಸಮಸ್ಯೆ ತಪ್ಪಿದ್ದಲ್ಲ. ಅವರೂ ಕೂಡ ಇಂತಹ ಕೊರಗಿನಿಂದ ಬಳಲುತ್ತಿರುತ್ತಾರೆ. ಇದು ಕೇವಲ ಬಂದುಹೋಗುವ ಅಶಾಶ್ವತ ಸಮಸ್ಯೆಯಷ್ಟೇ. ಈಗಿನ ನಿನ್ನ ಪರಿಸ್ಥಿತಿಯಿಂದ ಚಿಂತೆಗೆಡಬೇಡ. ನಿನ್ನೊಳಗಿನ ತಪಸ್ವಿ ಈ ಜಗತ್ತಿಗೆ ಇನ್ನೂ ಏನಾದರೂ ಹೊಸತನ್ನು ನೀಡುವ ತುಡಿತದಲ್ಲಿ ಎಲ್ಲೋ ಒಂದು ಕಡೆ ಹೋಗಿರಬಹುದು. ಅದರ ಅನುಭವ ಸಿಕ್ಕ ಮೇಲೆ ನಿನ್ನೊಳಗೆ ಮತ್ತೆ ಬಂದು ಸೇರಿಕೊಂಡು, ನಿನ್ನ ಮೂಲಕ ಶ್ರೇಷ್ಠ ಕಥೆಗಳನ್ನು ಬರೆಸಬಹುದು.

ಹೆದರದಿರು. ನಿನ್ನ ಸಮಸ್ಯೆಗೆ ಕೆಲವು ತಿಂಗಳಲ್ಲಿ ಉತ್ತರ ಸಿಗಲಿದೆ. ಪ್ರತಿನಿತ್ಯ ನಿನ್ನನ್ನು ನೀನು ಪರಾಮರ್ಶಿಸುವುದನ್ನು ಮರೆಯದಿರು. ತಿಳಿದೋ, ತಿಳಿಯದೆಯೋ ಮಾಡಿರುವ ತಪ್ಪುಗಳಿಗೆ ಪಶ್ಚಾತ್ತಾಪವನ್ನು ಪಡು, ನಿನ್ನೊಳಗಿರುವ ಭಗವಂತನನ್ನು ಸದಾ ಬೇಡುತ್ತಿರು. ಕ್ಷಮೆ ಸಿಕ್ಕರೆ, ಮನಸು ಹಗುರವಾದೀತು… ನೆನಪಿನಲ್ಲಿಟ್ಟಿಕೋ.

ನಿನ್ನ ಮುಂದಿನ ಶ್ರೇಷ್ಠ ಕೃತಿಯನ್ನು ನಾನು ಎದುರು ನೋಡುತ್ತಿರುವೆ.
ಇಂತಿ
ಮುನಿಶ್ರೀ ಚರಣಸಾಗರ

ಗುರುಗಳ ಸನ್ನಿಧಾನಕ್ಕೆ ತನ್ನ ಸಮಸ್ಯೆಯ ಕುರಿತು ಬರೆದಿದ್ದ ಪತ್ರಕ್ಕೆ ಉತ್ತರವೂ ಸಿಕ್ಕಿದಂತಾಗಿತ್ತು. ಅವರ ಪತ್ರದಲ್ಲಿದ್ದ ಮಾತುಗಳು ಜಿನದತ್ತನ ಮನಸ್ಸನ್ನು ಸ್ವಲ್ಪ ಹಗುರವಾಗಿಸಿದವು. ಹೌದು. ನನ್ನೊಳಗಿನ ಕಥೆಗಾರ ಯಾವುದೋ ಹೊಸ ವಸ್ತುವಿನ ಹುಡುಕಾಟದಲ್ಲಿರಬಹುದು. ಅದು ಆತನಿಗೆ ಈ ಪ್ರಪಂಚದಲ್ಲಿ ಸಿಗದೇ ಇದ್ದುದಕ್ಕೆ ಇನ್ನೊಂದು ಪ್ರಪಂಚದಲ್ಲಿ ಹುಡುಕುತ್ತಿರಬಹುದು. ಅವನ ಹುಡುಕಾಟವೇನಿರಬಹುದು? ಅವನ ಹುಡುಕಾಟಕ್ಕೆ ಕಾರಣವಾದರೂ ಏನಿರಬಹುದು? ಈ ಹಿಂದೆ ನನಗೆ ಹೇಳದೇ ಎಲ್ಲೂ ಆತ ಹೋದವನಲ್ಲ! ಇಂದು ಹೇಳದೇ ಹೋಗಿದ್ದಾನೆ. ಹಾಗಾದರೆ ಆತ ನನ್ನ ಮೇಲೆ ಮುನಿಸಿಕೊಂಡೇ ಹೋಗಿರಬಹುದೇ? ಅವನಿಗೆ ಸಿಟ್ಟು ಬರುವಂತಹ ರೀತಿಯಲ್ಲಿ ನಾನೇನಾದರೂ ಬದುಕುತ್ತಿದ್ದೇನೆಯೇ? ಗುರುಗಳು ತಿಳಿಸಿದಂತೆ ನನ್ನನ್ನು ನಾನೇ ಏಕೆ ಪರಾಮರ್ಶಿಸಿಕೊಳ್ಳಬಾರದು? ಇಷ್ಟು ವರ್ಷಗಳಲ್ಲಿ ನನ್ನೊಳಗೆ ಕೊಳೆಯುತ್ತಿರುವ ಆ ಮಾಲಿನ್ಯದ ಬಗ್ಗೆ ಎಂದೂ ಯೋಚಿಸಿದವನಲ್ಲ… ಬಾಲ್ಯ, ಯೌವ್ವನ, ಶಿಕ್ಷಣ, ಸ್ನೇಹಿತರು, ಹೆಣ್ಣು, ಸಂಭೋಗ ಮೋಸ, ಸುಳ್ಳು, ವಂಚನೆ, ಅವಮಾನ, ಗೌರವ, ಮದುವೆ, ಮಕ್ಕಳಾಗದಿರುವುದು, ವಿಚ್ಛೇದನ ಒಂದಾ… ಎರಡಾ…!

ಹೌದು… ನೆನಪಾಗುತ್ತಿದ್ದಾಳೆ. ಅವಳ ಮಾತುಗಳು ಈಗ ಅರ್ಥವಾಗುತ್ತಿದೆ. ಅವಳನ್ನು ನಾನು ದೂರಮಾಡಿಕೊಳ್ಳಬಾರದಿತ್ತು. ಅವಳು ಒಂದು ಭ್ರಮೆ ಅಂತ ಭಾವಿಸಿದ್ದೆ. ಇಂದಿಗೂ ಅವಳು ನನ್ನಲ್ಲಿಯ ಭ್ರಮೆಯೋ? ಕಾಡುವ ಮಾಯೆಯೋ? ಈ ದ್ವಂದ್ವ ಪೀಡಿಸುತ್ತಲೇ ಇದೆ. ನನ್ನೊಳಗಿದ್ದ ಕತೆಗಾರನಿಗೆ ಅವಳ ಸನಿಹ ತುಂಬಾ ಇಷ್ಟವಾಗುತ್ತಿತ್ತು. ಪ್ರತಿಕ್ಷಣವೂ ಅವಳಿಗಾಗಿ ಹಾತೊರೆಯುತ್ತಿದ್ದ. ಅವಳ ಅಂತರಂಗದಲ್ಲಿದ್ದವಳನ್ನು ಆತ ಎಷ್ಟು ಪ್ರೀತಿಸುತ್ತಿದ್ದನೋ…! ಅವಳನ್ನು ಅಪ್ಪಿಕೊಂಡು ಮನಸಿನ ಕಾಮದಾಸೆ ಖಾಲಿಯಾಗುವವರೆಗೂ ಮುದ್ದಾಡಿದ ನಂತರವೂ, ಅವಳನ್ನು ಇನ್ನಷ್ಟು ಗಟ್ಟಿಯಾಗಿ ಅಪ್ಪಿಕೋ ಅಂತ ಹೇಳುತ್ತಿದ್ದ. ನನ್ನ ಜಿನದತ್ತನ ಕತೆಗಳು ಸಂಕಲನದ `ನೀ ಮಾಯೆಯೊಳಗೊ’ ಕತೆಯ ಮುಖ್ಯ ಪಾತ್ರಧಾರಿ ಅವಳೇ ಆಗಿದ್ದಳು. ನನಗೆ ಆಕೆ ಬರೀ ದೇಹವನ್ನು ಅನುಭವಿಸುವ ಹೆಣ್ಣಾಗಿದ್ದಳು. ಅದ್ಭುತ ಸೌಂದರ್ಯವತಿ, ನನ್ನಲ್ಲಿನ ಬರವಣಿಗೆಯ ಮೋಡಿಗೆ ನನ್ನ ದಾಸಿಯಾಗಿಬಿಟ್ಟಿದ್ದಳು. ಬೇಡಿದಾಗಲೆಲ್ಲಾ ಇಲ್ಲವೆನ್ನದೇ ಹಾಸಿಗೆ ಹಂಚಿಕೊಳ್ಳುತ್ತಿದ್ದಳು. ಅವಳ ಮುಗ್ಧತೆ, ಸೌಂದರ್ಯವನ್ನು ನಾನು ಬರೀ ದುರುಪಯೋಗಪಡಿಸಿಕೊಳ್ಳುತ್ತಿದ್ದೆ. ನಾನೆಷ್ಟು ಸ್ವಾರ್ಥಿ ಅನ್ನುವುದು ಅವಳು ದೂರವಾದಾಗಲೇ ಅರಿವಾಗಿದ್ದು. ಕಳ್ಳಸಂಬಂಧದಲ್ಲಿ ಕೆಲವು ನಿಮಿಷದ ಸಂಭೋಗದ ನಂತರ ಮೂಡುವ ಪಾಪಪ್ರಜ್ಞೆಯಂತೆ ಅವಳು ಪ್ರಶ್ನಾರ್ಥಕವಾಗಿ ಕಾಡುತ್ತಲೇ ಇದ್ದಳು, ಆದರೆ ನನ್ನೊಳಗಿದ್ದ ಕಥೆಗಾರನಿಗೆ ಆಕೆ ಮಾಯೆಯಂತೆ ಕಾಡುತ್ತಿದ್ದಳು. ಆಕೆಯ ಜೊತೆಗಿನ ಸಂಬಂಧವನ್ನು ಮುಂದುವರಿಸಲೋ, ಮುರಿದುಕೊಳ್ಳಲೋ ಅನ್ನುವ ತೊಳಲಾಟವೇ ಅರ್ಧ ಕಥೆಗಾರನನ್ನು ಜರ್ಜರಿತನನ್ನಾಗಿಸಿತ್ತು.

ಮಧ್ಯರಾತ್ರಿ ಸುಮಾರು ಒಂದು ಗಂಟೆ, ಹುಣ್ಣಿಮೆ ಚಂದ್ರನನ್ನು ನಾನಿನ್ನೂ ಆಸ್ವಾದಿಸುತ್ತಲೇ ಇದ್ದೆ. ಯಾಕೋ ಪೂರ್ಣಚಂದ್ರನನ್ನು ಅಷ್ಟು ದಿಟ್ಟಿಸಿ ನೋಡಿದರೂ ಆತನ ಹಂಸಪ್ರಭೆಯಂತಹ ಬೆಳಕಿನಲ್ಲಿಯೂ ಕೂಡ ಆತ ಹಾಲಿನಂತೆ ತಿಳಿಯಾಗಿ ಕಾಣದೆ, ಗಟ್ಟಿಮೊಸರಂತೆ ಕಾಣುತ್ತಿದ್ದ. ಪೂರ್ಣಚಂದ್ರನ ಮೇಲೆ ಸಣ್ಣ ಹುಸಿಕೋಪ ಹುಟ್ಟಿಕೊಂಡಿತು. ಅವನ ಸೌಂದರ್ಯ ಆ ಕ್ಷಣ ರುಚಿಸಲಿಲ್ಲ. ದೃಷ್ಟಿಯಂತೆ ಸೃಷ್ಟಿ ಎಂಬ ಮಾತು ನೆನಪಾಯಿತು. ಹಾಗಾದರೆ ಚಂದ್ರನ ಸೌಂದರ್ಯದಲ್ಲಿ ನನಗೆ ಒಡಕಲು ಬಿಂಬ ಕಾಣುತ್ತಿದೆಯಂತಾದರೆ ಯಾಕೋ ನನ್ನ ಮನಸ್ಸೇ ಒಡೆದ ಕನ್ನಡಿಯಾಗಿರಬಹುದು ಅಂತ ಅನಿಸಲಿಕ್ಕೆ ಪ್ರಾರಂಭಿಸಿತು. ಹಾಗಾದರೆ ನನ್ನ ಮನಸಿನ ದೌರ್ಬಲ್ಯಕ್ಕೆ ಚಂದ್ರನನ್ನು ದೂರಿದರೆ ತಪ್ಪು ನನ್ನದಾಗುವುದಿಲ್ಲವೇ? ಚಂದ್ರ ಕೂಡ ಸೂರ್ಯಪ್ರಭೆಯಷ್ಟೇ ಶಕ್ತಿಯನ್ನು ನೀಡುವಂತವನು. ಇಷ್ಟು ವರ್ಷ ನನ್ನೊಳಗಿನ ಕತೆಗಾರನಿಗೆ ಪ್ರೇರಕನಾದವನು. ಈಗ ಅವನ ಸಾಮೀಪ್ಯವೂ ಕೂಡ ಬೇಸರ ಹುಟ್ಟಿಸುತ್ತಿದೆ. ನಡಿ ಒಳಗಡೆ ಹಾಸಿಗೆಯೂ ಕೈ ಬೀಸಿ ಕರೆಯುತ್ತಿದೆ. ಅವಳು ನನ್ನನ್ನು ಅಪ್ಪಿಕೊಳ್ಳಲು ಕಾಯುತ್ತಿದ್ದಾಳೆ. ಅವಳ ಮೆತ್ತಗಿನ ಸುಕೋಮಲ ದೇಹವು ನಿನ್ನ ದೇಹ ಸ್ಪರ್ಶದ ಸನಿಹಕ್ಕೆ ಕಾಯುತ್ತಿದೆ. ನಿದ್ದೆ ಬರುತ್ತಿಲ್ಲವೆಂದು ಪೂರ್ಣಚಂದ್ರನನ್ನು ನೋಡುತ್ತಾ ಕುಳಿತರೆ, ಇವಳ ಸಂಗವನ್ನು ನೀನು ವಯಸ್ಸಾದ ಮೇಲೆ ಅನುಭವಿಸುತ್ತೀಯಾ? ಪೂರ್ಣಚಂದ್ರನಿಗೆ ವಯಸ್ಸಾಗುವುದುಂಟೆ…! ಆತ ನಾನು ಸಾಯುವವರೆಗೂ ಇದೇ ಸೌಂದರ್ಯದಲ್ಲಿ ಶೋಭಿಸುವವ. ನಮಗೆಲ್ಲಿ ಆತನಿಗಿರುವ ಭಾಗ್ಯ? ಬೇಡ, ಹಾಸಿಗೆಯ ಅಂಗಳದಲ್ಲಿ ಬೆಟ್ಟದಷ್ಟು ನಿದ್ದೆ ನಿನ್ನ ಆಗಮನಕ್ಕಾಗಿ ಕಾಯುತ್ತಿದೆ, ಅದನ್ನು ನಿರಾಸೆಪಡಿಸಬೇಡ ಅಂತ ಬುದ್ಧಿ ಮಂಚದ ಕಡೆಗೆ ಕೈಬೀಸಿ ತೋರಿಸುತ್ತಿತ್ತು.

ಹೌದೌದು… ನಾನು ಮಾಡುತ್ತಿರುವುದು ತಪ್ಪು. ಅವಳೊಂದಿಗೆ ನಾನು ದೇಹಸುಖ ಅನುಭವಿಸದೇ ಎಷ್ಟೋ ತಿಂಗಳುಗಳಾಗಿವೆ. ದೂರದ ಕೆಲಸ… ದಿನವಿಡೀ ಪ್ರಯಾಣ, ದುಡಿಮೆಯ ಅನಿವಾರ್ಯತೆ ಈಗ ಅಂಟಿಕೊಂಡಿದೆ. ಮೊದಲಾಗಿದ್ದರೆ ನಾನೊಬ್ಬನೇ… ನನ್ನೊಬ್ಬನನ್ನು ಸಾಕಿಕೊಂಡಿದ್ದರೆ ಸಾಕಾಗಿತ್ತು. ಆದರೆ ಈಗ ನನ್ನ ಜೊತೆ ಇನ್ನೊಂದು ಜೀವ ಸೇರಿಕೊಂಡಿದೆ.

ಮತ್ತೆ ಆಕೆ ಒಳಗಿಂದ ನನ್ನನ್ನು ಕರೆದಂತೆ ಕೇಳಿಸಿತು. ಅನೇಕ ದಿನಗಳಿಂದ ರಾತ್ರಿ ಒಬ್ಬಳೇ ಮಲಗಿದ್ದು ಬೇಸರವಾಗಿರುವ ನನ್ನಾಕೆ ನನ್ನ ಸಾಮೀಪ್ಯವನ್ನು ಬಯಸುತ್ತಿದ್ದಳು. `ಹೇ ಬಂದೇ ಕಣೇ…’ ಒಳಗಡೆ ಹೋದಾಗ ಆಗಲೇ ಆಕೆ ಅರೆನಿದ್ರೆಗೆ ಶರಣಾಗಿದ್ದಳು. ನಾನು ಬರುವೆನು. ಅವಳ ದೇಹವನ್ನು ಅಪ್ಪಿಕೊಳ್ಳುವೆನು… ಅನೇಕ ದಿನಗಳ ಕಾಲ ಬಾಕಿ ಇದ್ದ ದೇಹದ ಹಸಿವನು ತೀರಿಸುವನು… ಅನ್ನುವ ಕನವರಿಕೆಯಲ್ಲೇ ಕಣ್ಣು ಮುಚ್ಚಿದ್ದಿರಬೇಕು. ಹೌದು, ನನ್ನನ್ನು ಇವಳು ಬಿಟ್ಟರೆ ಇಷ್ಟು ಯಾರು ತಾನೆ ಪ್ರೀತಿಸುತ್ತಾರೆ? ನನ್ನ ದೇಹ ಆಕೆ ಮಲಗಿದ್ದ ಕೋಣೆಯನ್ನು ತಲುಪದೇ ಇದ್ದರೂ, ಮನಸ್ಸು ಆಗಲೇ ಅವಳ ಹಾಸಿಗೆಯನ್ನು ತಲುಪಿ ಆಕೆಯ ಬೆತ್ತಲೆಯ ದೇಹದ ಪಕ್ಕ ಮಲಗಿಕೊಂಡಿತ್ತು. `ಥೂ…ಎಂತಹ ಲಜ್ಜೆಗೆಟ್ಟವನೇ! ನಾನಿನ್ನೂ ಇಲ್ಲೇ ಇದ್ದೇನೆ, ಸ್ವಲ್ಪವೂ ನಿನಗೆ ತಾಳ್ಮೆ ಎಂಬುದೇ ಇಲ್ಲ. ನನ್ನನ್ನು ಬಿಟ್ಟು ನೀನು ಓಡಿಹೋಗುತ್ತೀಯಾ… ನಿನ್ನಿಂದಾಗಿಯೇ ಆ ಕಥೆಗಾರ ಓಡಿಹೋಗಿದ್ದಾನೆʼ ಅಂತ ಬುದ್ಧಿ ಮನಸ್ಸಿಗೆ ಆ ಕ್ಷಣದ ಒಂದು ಹುಸಿಕೋಪವನ್ನು ತೋರಿಸಿತು. `ಏನು ಮಾಡಲಿ ಗೆಳೆಯ ಕಾಮದ ವಿಷಯಕ್ಕೆ ಬಂದರೆ ನನ್ನನ್ನು ನಿಯಂತ್ರಿಸುವುದು ಸ್ವಲ್ಪ ಕಷ್ಟ.. ನನ್ನ ಆತುರವನ್ನು ತಪ್ಪು ತಿಳಿಯಬೇಡ..’ ಅಂತ ಮನಸ್ಸು ತನ್ನ ನ್ಯೂನತೆಯನ್ನು ಹೇಳಿಕೊಂಡಿತ್ತು.

ಹಾಸಿಗೆಯ ಕೆಳಗಡೆ ಬಿದ್ದ ಆಕೆಯ ಸೀರೆ, ಲಂಗ, ಬ್ಲೌಸ್ ಕಾಲಿಗೆ ಸಿಕ್ಕಾಗ, ಅವುಗಳನ್ನು ಎತ್ತಿ ಮುಖಕ್ಕೆ ಹಿಡಿದಾಗ ಅವಳ ದೇಹದ ವಾಸನೆಯನ್ನು ಇಡೀಯಾಗಿ ಹೀರಿಕೊಂಡಂತೆ ಭಾಸವಾಗಿ ಅರ್ಧ ಸಂಭೋಗವನ್ನು ಆಗಲೇ ಅನುಭವಿಸಿದಂತಾಗಿತ್ತು. ತನ್ನ ಬಟ್ಟೆಯನ್ನು ಮುಖಕ್ಕೆ ಹಿಡಿದುಕೊಂಡಿದ್ದ ನನ್ನನ್ನು ನೋಡಿ ಆಕೆ ಕಿಸಕ್ಕನೆ ನಕ್ಕಳು. ಅವಳ ನಗುವಿನಲ್ಲಿಯೂ ಎಂತಹ ಪ್ರೀತಿ… `ನೀನು ನಿದ್ದೆ ಮಾಡುತ್ತಿಲ್ಲವೇ?’ ಅಂತ ನಾಚಿಕೆಯಿಂದ ಅವಳ ಸೀರೆಯನ್ನು ಪಕ್ಕಕ್ಕಿಟ್ಟು ಕೇಳಿದೆ. ಆಕೆ ಉತ್ತರಿಸಲಿಲ್ಲ. ನನ್ನನ್ನೇ ನೋಡುತ್ತಿದ್ದಳು. ಅವಳ ಕಣ್ಣುಗಳು ನನ್ನಲ್ಲೇನೋ ಹುಡುಕುತ್ತಿದ್ದವು. ನನ್ನ ಕಣ್ಣಿಗೆ ಅವಳ ಕಣ್ಣುಗಳು ಆಕರ್ಷಕವಾಗಿ ಹೊಳೆಯುತ್ತಿದ್ದವು. ಅವಳನ್ನು ನೋಡುತ್ತಲೇ ನನ್ನೊಳಗೆ ಉನ್ಮಾದದ ಚಿಲುಮೆ ಕಾರಂಜಿಯಂತೆ ಪುಟಿಯಲಾರಂಭಿಸಿತು. ಹೊದ್ದುಕೊಂಡಿದ್ದ ಬೆಡ್‌ಶೀಟನ್ನು ಆಕೆ ತೆರೆದಿಟ್ಟಾಗ ಆಕೆಯ ಬೆತ್ತಲೆಯ ದೇಹ ಒಂದು ಕ್ಷಣ ನನ್ನನ್ನು ಮೂಕನನ್ನಾಗಿಸಿತು. ಮಾತುಗಳು ಹೊರಡಲಿಲ್ಲ ಆ ಕ್ಷಣ ಕಣ್ಣುಗಳು ಮಂಜಾದವು. ಈವರೆಗೂ ಆಕೆಯ ದೇಹವನ್ನು ನನ್ನ ಕಣ್ಣುಗಳು ಅದೆಷ್ಟು ಬಾರಿ ನೋಡಿರುವೆಯೋ…? ಅವಳ ದೇಹದ ವಾಸನೆಯನ್ನು ನನ್ನ ಮೂಗು ಅದೆಷ್ಟೋ ಬಾರಿ ಆಗ್ರಾಣಿಸಿದಿಯೋ…? ಇನ್ನೂ ಅದರ ತುಡಿತ ಹೊಸತಿನಂತೆಯೇ ಇದೆ. ಅದು ಕ್ಷಣಕ್ಷಣಕ್ಕೂ ಬೇಡುತ್ತಿದೆ. ತಾನು ಹೆಣ್ಣೆಂಬ ಮಾಯೆಯೊಳಗೆ ಸಿಲುಕಿಹಾಕಿಕೊಂಡಿದ್ದೆನಲ್ಲ…! ಇದು ಯಾಕೋ ತುಂಬಾ ಅಪಾಯಕಾರಿಯಂತೆ ಮುಂದಿನ ದಿನಗಳಲ್ಲಿ ಕಾಣಬಹುದು ಅಂತ ತೋರುತ್ತದೆ ಅಂತ ಒಳಗೊಳಗೆ ಅನಿಸಿದೆಯಾದರೂ, ಅದರ ನಿರ್ದಿಷ್ಟ ಕಲ್ಪನೆ ಯಾಕೋ ರುಚಿಸುತ್ತಲೇ ಇಲ್ಲ. ಹಾಗಾಗಿ ಅವಳ ಆಕರ್ಷಕ ಕಣ್ಣುಗಳು ನನ್ನೊಳಗೆ ಒಂದು ಭ್ರಾಂತಿಯನ್ನು ಸೃಷ್ಟಿಸಿ ಅದರೊಳಗೆ ನನ್ನತನವನ್ನು ಕಳೆದುಕೊಂಡು ಅನಾಮಿಕನಂತೆ ಬಂದ ಉದ್ದೇಶವನ್ನು ಮರೆತು ಬದುಕುತ್ತಿರುವಂತೆ ಭಾಸವಾಗುತ್ತಿತ್ತು. ಅವಳ ಸನಿಹದಲ್ಲಿ ನನ್ನೊಳಗಿನ ಇನ್ನೊಂದು ಜಗತ್ತು ತನ್ನ ಮುಂದಿನ ದಿನಗಳ ಬಗ್ಗೆ ಯೋಚಿಸುತ್ತಾ ಕೂತಿದೆ. ಮನಸ್ಸು ಅವಳ ದೇಹ ಮತ್ತು ತನ್ನ ಸೌಖ್ಯವನ್ನು ಬಯಸುತ್ತಲೇ ಇತ್ತು. ಯಾಕೋ ಅವಳ ಮನಸ್ಸೆಂಬ ಮಾಯೆಯನ್ನು ನನ್ನೊಳಗಿನ ಮನಸಿನ ಗಂಡು ಅತಿಯಾಗಿ ಹಚ್ಚಿಕೊಂಡಿದ್ದ. ಅವಳ ಜೊತೆ ಸನಿಹವನ್ನು ಪ್ರತಿಕ್ಷಣವೂ ಬೇಡುತ್ತಿದ್ದ. ಆತ ಆಕೆಯಿಂದ ದೂರವಿದ್ದಾಗಲೂ ನನ್ನನ್ನು ಕೆಟ್ಟ ಬಲಿಪಶು ಮಾಡಿ ಸ್ವಾಸ್ಥ್ಯವನ್ನು ಹಾಳುಮಾಡಿಕೊಂಡುಬಿಟ್ಟಿದ್ದ. ಮನಸ್ಸು ಸೌಖ್ಯವಿಲ್ಲದಿದ್ದರೆ ಬುದ್ಧಿ ಹೇಗೆ ತಾನೇ ಚುರುಕಾದೀತು? ಆ ರಾತ್ರಿ ಅದೇ ಭ್ರಮೆಯಲ್ಲೇ ಅವಳ ದೇಹವನ್ನು ಅನುಭವಿಸುತ್ತಾ ನಿದ್ದೆಗೆ ಶರಣಾದರೂ ನನ್ನೊಳಗೆ ನಡೆಯುತ್ತಿದ್ದ ಆಂತರಿಕ ಹೋರಾಟ, ಕಥೆಗಾರನಿಲ್ಲದ ಮೇಲೆ ತನ್ನ ಬರವಣಿಗೆ ನಿಂತ ನೀರಾಯಿತು ಅನ್ನುವ ಕೊರಗು ಕ್ಷಣಕ್ಷಣವೂ ದೇಹವನ್ನು ಹಿಂಸಿಸುತ್ತಲೇ ಇತ್ತು.

ರಾತ್ರಿಯ ಕ್ಷಣಗಳು ಓಡುತ್ತಲೇ ಇದ್ದವು, ಕತ್ತಲು ಕವಿಯಿತು. ಪೂರ್ಣಚಂದ್ರನ ಒಡಕಲು ಬಿಂಬ ನನ್ನ ಒಡೆದ ಮನಸ್ಸಿನ ರೂಪಕವೆಂಬಂತೆ ಇತ್ತು. ಮುಂಜಾನೆ ಎದ್ದಾಗ ಸೂರ್ಯ ಮನೆಯ ಕಿಟಕಿಯನ್ನು ತೂರಿಬಂದು ಎಚ್ಚರಿಸಿಬಿಟ್ಟಿದ್ದ. ಕಣ್ಣುಗಳು ಇನ್ನೂ ಆಕೆಯ ಸೌಂದರ್ಯವನ್ನು ತುಂಬಿಕೊಂಡಿದ್ದವು. ತೆರೆಯಲಿಕ್ಕೆ ಮನಸ್ಸು ಮಾಡುತ್ತಿರಲಿಲ್ಲ. ಸೂರ್ಯನಿಗೆ ನನ್ನ ಕಣ್ಣುಗಳನ್ನು ತೆಗೆಸಬೇಕೆಂಬ ಹಠ. ತನ್ನ ಕಿರಣಗಳನ್ನು ಇನ್ನಷ್ಟು ಜೋರಾಗಿ ಬಿಟ್ಟು ಕಣ್ಣುಗಳನ್ನು ಮಿಡಿಯುವಂತೆ ಬೀರುತ್ತಲೇ ಇದ್ದ. ಒಳಗೆ ರಾತ್ರಿಯ ಸೌಂದರ್ಯದ ಅವಗಾಹನೆ ನಡೆಯುತ್ತಿದ್ದರೆ, ಸೂರ್ಯನ ಕಿರಣಗಳು ಮುಂದಿನ ಕ್ಷಣಗಳ ಸೌಂದರ್ಯವನ್ನು ತೋರಿಸುವ ಉತ್ಸಾಹದಲ್ಲಿದ್ದವು. ನನ್ನೊಳಗಿದ್ದ ವ್ಯಕ್ತಿ ಯಾಕೋ ಗೊಂದಲದಲ್ಲಿ ಸಿಲುಕಿದ್ದ. ರಾತ್ರಿಯ ಚಂದ್ರನ ಒಡಕಲು ಬಿಂಬ ಮುಂಜಾನೆಯ ಸೂರ್ಯನ ಸ್ಫೂರ್ತಿಯ ಬಿಂಬ ಬದುಕನ್ನು ಇಲ್ಲಿಯವರೆಗೆ ಜೀವಂತವಾಗಿಸಿವೆ ಅಂತ ಅನಿಸಿತ್ತು. ಎಚ್ಚರವಾಗಿ ಪಕ್ಕಕ್ಕೆ ಮಲಗಿದ್ದವಳ ಕಡೆಗೆ ಗಮನ ಹರಿಯಿತು. ಯಾರೂ ಮಲಗಿರಲಿಲ್ಲ. ಎಲ್ಲಿಯಾದರೂ ಹೋಗಿರುವಳೇ ಅಂತ ಇಡೀ ಕೋಣೆಯನ್ನು ಮತ್ತೆ ಮತ್ತೆ ಹುಡುಕಿನೋಡಿದೆ. ಅವಳ ಸುಳಿವಿಲ್ಲ. ನನ್ನ ಮೂಗು ಅವಳ ದಿಂಬನ್ನು ಮೂಸಿದರೂ, ಯಾಕೋ ನಿರಾಸೆಯಿಂದ ದೂರ ಸರಿಯಿತು. ರಾತ್ರಿಯ ಪೂರ್ಣಚಂದ್ರನ ಬೆಳಕಿನಲ್ಲಿ ತಾನು ಸಿಲುಕಿಹಾಕಿಕೊಂಡಿದ್ದ ಮಾಯೆ ಯಾವುದು? ಅನಾಮಿಕನಂತೆ ಬಂದು ಹುಚ್ಚು ಕಲ್ಪನೆಯನ್ನು ಕೊಡುವ ಆಕೆಯನ್ನು ಮರೆಯಲಿಕ್ಕೆ ಸಾಧ್ಯವಾಗುತ್ತಿಲ್ಲ. ನನ್ನನ್ನೇಕೆ ಈ ರೀತಿ ಕಾಡುತ್ತಿದ್ದಾಳೆ. ಅವಳಿಂದ ನನ್ನೊಳಗಿರುವವರು ತುಂಬಾ ನೊಂದಿದ್ದಾರೆ. ಅವಳು ಇರುವುದು ನೂರಕ್ಕೆ ನೂರರಷ್ಟು ಸತ್ಯ. ಅವಳ ಇರುವಿಕೆ ಹತ್ತಿರವೆಲ್ಲೋ ಇದೆ, ಅವಳ ಸನಿಹದಿಂದ ದೂರವಾಗಿದ್ದ ಮನಸ್ಸು ವಿಚಿತ್ರವೆಂಬಂತೆ ವರ್ತಿಸುತ್ತಿತ್ತು. ಅವನನ್ನು ಸಮಾಧಾನ ಮಾಡಲು ಸಾಧ್ಯವಾಗಲೇ ಇಲ್ಲ. ಕಿಟಕಿಯ ಬಾಗಿಲು ತೆಗೆದು ಸೂರ್ಯನನ್ನು ಮತ್ತೊಮ್ಮೆ ನೋಡಿದೆ. ಆತನ ಪ್ರಬಲ ಬೆಳಕಿನಲ್ಲಿಯೂ ಕಪ್ಪು ಕಪ್ಪು ಕಲೆಗಳು ಕಾಣತೊಡಗಿದವು. ಅಯ್ಯೋ… ಹಾಲಿನಂತಹ ಚಂದ್ರನಲ್ಲಿಯೂ ಒಡಕಲು ಬಿಂಬ ಕಂಡಹಾಗೆ, ಈಗ ಸ್ಫೂರ್ತಿಯ ಸೂರ್ಯನಲ್ಲೂ ಕಪ್ಪು ಕಪ್ಪು ಕಲೆಗಳು… ನನಗೇನಾಗಿದೆ? ನಾನೊಬ್ಬ ಕವಿ, ಕಥೆಗಾರ, ಪ್ರಕೃತಿಯನ್ನು ಆಸ್ವಾದಿಸುವವ, ಆರಾಧಿಸುವವ… ನನಗೇಕೆ ಈ ರೀತಿ ಭಾಸವಾಗುತ್ತಿದೆ? ಹೆಣ್ಣಿನ ಮಾಯೆಯ ಒಳಗೆ ಸಿಲುಕಿ ನನ್ನೊಳಗಿದ್ದ ಸೃಜನಶೀಲತೆಯ ವ್ಯಕ್ತಿಯನ್ನು ಕಳೆದುಕೊಳ್ಳುತ್ತಿರುವೇನೇ? ಹೆಣ್ಣು ಸೌಂದರ್ಯದ ಪ್ರತೀಕವಲ್ಲವೇ? ಆಕೆ ಕೂಡ ಪ್ರಕೃತಿಯಲ್ಲವೇ! ಅವಳ ಸೌಂದರ್ಯವು ಕಥೆಗಾರನಿಗೆ ಸ್ಫೂರ್ತಿಯನ್ನು ನೀಡುತ್ತಿತ್ತೇ ಹೊರತು ಆತನನ್ನು ಕೊಲ್ಲುತ್ತಿರಲಿಲ್ಲ. ಹಾಗಾದರೆ ನನಗೇಕೆ ಈ ರೀತಿಯ ಬಂಧನ… ಈ ಬಂಧನದಿಂದ ನಾನು ವಿಮುಖನಾಗಲಾರನೇ? ಯಾಕೋ ನನ್ನಲ್ಲಿನ ಸತ್ವವನ್ನು ಕಳೆದುಕೊಂಡುಬಿಟ್ಟಿದ್ದೇನೆ ಅಂತ ಅನಿಸಲಿಕ್ಕೆ ಪ್ರಾರಂಭಿಸಿದೆ. ಹಗಲು ರಾತ್ರಿಗಳ ಎರಡು ದೆಶೆಗಳ ನಡುವೆ ಬದುಕು ಯಾಕೋ ಎತ್ತಿಂದತ್ತಲೋ ಸಾಗುತ್ತಿದೆ ಅಂತ ಜಿನದತ್ತನಿಗೆ ಅನಿಸಲಿಕ್ಕೆ ಶುರುವಾಗಿತ್ತು.

ಈಗ ನನ್ನೊಂದಿಗಿರುವ ಶೂನ್ಯ ಮನಸ್ಸು ಒಳಗೆ ಏಕಾಂಗಿತನವನ್ನು ಸೃಷ್ಟಿಸಿ ಕಥೆಯನ್ನು ಬರೆಯಲಿಕ್ಕೆ ಪ್ರೇರಣೆಯನ್ನು ನೀಡಿದರೆ ಮಾತ್ರ ಈಗ ಅಂಟಿಕೊಂಡಿರುವ ಬದುಕಿನಿಂದ ವಿಮುಖನಾಗುವಂತೆ ಪ್ರೇರಣೆ ನೀಡುತ್ತದೆ ಅಂತ ಅನಿಸತೊಡಗಿತ್ತು. ಆಧ್ಯಾತ್ಮಿಕ ಲೋಕದಲ್ಲಿ ಕರ್ಮಫಲದ ಬಗ್ಗೆ ಹೆಚ್ಚಿನ ಮಹತ್ವವಿದೆ. ಕರ್ಮಫಲಗಳ ಬಗ್ಗೆ ವಿಸ್ಕೃತವಾಗಿ ಓದಿಕೊಂಡಿದ್ದ ಜಿನದತ್ತನಿಗೆ ತನಗಂಟಿರುವ ಈ ನೋವಿನ ಹಿಂದೆ ಈ ಜನ್ಮದ ಇಲ್ಲವೇ ಹಿಂದಿನ ಜನ್ಮದ ಕರ್ಮಫಲವೂ ಕಾರಣವಾಗಿರಬಹುದೆ? ಅಪ್ಪಮ್ಮನ ಕರ್ಮಫಲದಲ್ಲಿ ಮಕ್ಕಳಿಗೂ ಪಾಲಿದೆಯಂತೆ, ಹಾಗಾದರೆ ಹೆತ್ತವರ ಜನ್ಮದ ಕರ್ಮಫಲಗಳು ಇತ್ತೀಚಿನ ದಿನಗಳಲ್ಲಿ ಅಂಟಿಕೊಂಡಿರಬಹುದೇ? ಕರ್ಮಫಲದ ಬಗ್ಗೆ ಪ್ರಶ್ನೆಗಳು ಕಾಡಿದ್ದರಿಂದಲೇ ತನ್ನ ಆಧ್ಯಾತ್ಮಿಕ ಗುರು ಮುನಿಶ್ರೀ ಚರಣಸಾಗರರ ಹತ್ತಿರ ಪತ್ರಮುಖೇನ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದ. ಅವರ ಪ್ರತ್ಯುತ್ತರದಲ್ಲಿ ಕರ್ಮಫಲದ ಬಗ್ಗೆ ಒಂದಕ್ಷರ ಕೂಡ ಕಾಣಲಿಲ್ಲ. ಮತ್ತೆ ಮನಸಿಗೆ ದಿಕ್ಕು ತೋಚದಂತಾಯಿತು. ಬುದ್ಧಿ ಎಂದಿನಂತೆ ಮೌನಕ್ಕೆ ಶರಣಾಯಿತು. ಆ ಕ್ಷಣ ದೇಹದೊಳಗೆ ಎಂದೂ ಅನುಭವಿಸದ ನಿರ್ಲಿಪ್ತ ಭಾವನೆ ಮೂಡತೊಡಗಿತ್ತು. ಈ ಭಾವನೆಗಳು ನನ್ನೊಳಗಿನ ಕತೆಗಾರನನ್ನು ನಿರ್ಜೀವವಾಗಿಸಿದ್ದವು. ಆಗಲೇ ಆತ ನನ್ನ ನೋವುಗಳಿಗೆ ಕಾರಣಗಳನ್ನು ಹುಡುಕಿಕೊಂಡು ದೂರ ಹೋಗಿದ್ದು. ಮುನಿಶ್ರೀ ಚರಣಸಾಗರರು ತಮ್ಮ ಪತ್ರದಲ್ಲಿ ಅದನ್ನೇ ಒತ್ತಿ ಹೇಳಿದ್ದರು. ನಿನ್ನೊಳಗಿದ್ದ ಕತೆಗಾರ ಏನೋ ಹೊಸತನ್ನು ಹುಡುಕಿಕೊಂಡು ಕಾಣದ ಪ್ರಪಂಚಕ್ಕೆ ಹೋಗಿದ್ದಾನೆ. ಆ ಪ್ರಪಂಚವನ್ನು ಅನುಭವಿಸಿ ಮತ್ತೆ ನಿನ್ನ ದೇಹವನ್ನು ಸೇರಲಿದ್ದಾನೆ. ಆತ ನಿನ್ನನ್ನು ಬಿಟ್ಟು ಹೋದ ಗೊಂದಲದಲ್ಲಿ ನಿನ್ನಲ್ಲಿ ಅನೇಕ ಮಾನಸಿಕ ತುಮುಲಗಳನ್ನು ಸೃಷ್ಟಿಸಿ ಹೋಗಿದ್ದಾನೆ. ನಿನ್ನೊಳಗಿನ ಕಥೆಗಾರ ಮತ್ತೆ ಹೊಸ ಅನುಭವದೊಂದಿಗೆ ಬರುತ್ತಾನೆ. ಶ್ರೇಷ್ಠವಾದ ಕಥೆ ನಿನ್ನಿಂದ ಬರಲಿದೆಯಷ್ಟೇ. ಗೊಂದಲಬೇಡ, ತಾಳ್ಮೆಯಿಂದಿರು… ಮತ್ತೆ ನಿನ್ನನ್ನು ನೀನು ಪರಾಮರ್ಶಿಸಿಕೊ… ಮತ್ತೆ ಮತ್ತೆ ಸೂರ್ಯ ಚಂದ್ರನನ್ನು ನೋಡುತ್ತಿರು… ಕವಿ, ಕಥೆಗಾರನಿಗೆ ಇವರಿಬ್ಬರೂ ಸದಾ ಪ್ರೇರೇಪಿಸುತ್ತಲೇ ಇರುತ್ತಾರೆ, ಮರೆಯದಿರು. ಪತ್ರದ ಹೊರತಾಗಿ ಹಿಂದೊಮ್ಮೆ ಹೇಳಿದ ಗುರುಗಳ ಮಾತುಗಳು ನೆನಪಾದವು.

*****

ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಬದುಕು ಕೆಲವೊಮ್ಮೆ ಸಾಕು ಸಾಕೆನಿಸಿಬಿಟ್ಟಿತ್ತು. ಇನ್ನೂ ಓಡಾಟ ಸಾಕು, ಒಂದು ಕಡೆ ನೆಲೆ ನಿಲ್ಲೋಣ ಅಂತ ಜಿನದತ್ತ ಮಾನಸಿಕವಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರೂ, ಆತ ಕೆಲಸ ಮಾಡುತ್ತಿದ್ದ ಎನ್‌ಜಿಓ ಸಂಸ್ಥೆ ಮಾತ್ರ ಇದಕ್ಕೆ ಒಪ್ಪಿದಂತೆ ಕಂಡಿರಲಿಲ್ಲ. ಒಳ್ಳೆಯ ಹುದ್ದೆಯಲ್ಲಿದ್ದು ಯಾಕಿಂತ ನಿರ್ಧಾರ… ಸಂಬಳ ಕಡಿಮೆಯಾಯಿತೆ? ಬೇಕಾದರೆ ಹೇಳಿ… ಈಗಿರುವ ಸಂಬಳಕ್ಕಿಂತ ಇಪ್ಪತ್ತು ಪರ್ಸೆಂಟು ಜಾಸ್ತಿ ಮಾಡುತ್ತೇವೆ, ನೀವು ಓಡಾಡಬೇಕು, ಊರೂರು ಸುತ್ತಬೇಕು. ನಾವು ಕೊಟ್ಟ ಸಮೀಕ್ಷೆಯ ಮಾದರಿಯನ್ನು ಗಟ್ಟಿ ಮಾಡಿಕೊಡಬೇಕು. ಸದ್ಯ ನಿಮ್ಮಂತ ಅನುಭವಿಯನ್ನು ಕಳೆದುಕೊಳ್ಳಲು ಸಂಸ್ಥೆ ತಯಾರಿಲ್ಲವೆಂದು ಹೇಳಿ, ಜಿನದತ್ತನ ಒಂದು ಕಡೆ ನಿಲ್ಲಬೇಕೆಂಬ ಆಸೆಗೆ ತಣ್ಣೀರು ಎರಚಿತ್ತು. ಕೆಲಸ ಮಾಡಲು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ಆತನಿಗಿತ್ತು. ಆ ದಿನ ಚನ್ನರಾಯಪಟ್ಟಣಕ್ಕೆ ಹೋಗುವ ತುರ್ತು ಅನಿವಾರ್ಯತೆ ಒದಗಿದ್ದರಿಂದ ಜಿನದತ್ತ ಮುಂಜಾನೆ ಐದು ಗಂಟೆಗೆ ಎದ್ದು ಬಸ್‌ಸ್ಟ್ಯಾಂಡ್ ತಲುಪಿದ್ದ. ಮನಸ್ಸಿನಲ್ಲಿ ನೂರೆಂಟು ವಿಚಾರಗಳ ಗೊಂದಲ ಕಾಡುತ್ತಿದ್ದರೂ, ಅದನ್ನು ಕೆಲಸದ ವಿಷಯದಲ್ಲಿ ತೋರಿಸಿಕೊಳ್ಳದೇ ತನ್ನ ಮುಖಕ್ಕಂಟಿದ ಮಸಿಯನ್ನು ತಾನೇ ಒರೆಸಿಕೊಂಡು ಬೇರೆಯವರಿಗೆ ಕಂಡರೂ ಕಾಣದಂತೆ ಇರಬೇಕಾದ ಬದುಕು ಆತನದಾಗಿತ್ತು.

ಮುಂಜಾನೆ ಇನ್ನೂ ಮಂದ ಬೆಳಕು… ಸೂರ್ಯೋದಯದ ಕ್ಷಣಗಳು ಎಣಿಕೆಯಲ್ಲಿದ್ದವು. ಬಸ್‌ಸ್ಟ್ಯಾಂಡ್‌ನಲ್ಲಿ ಚನ್ನರಾಯಪಟ್ಟಣಕ್ಕೆ ಹೋಗುತ್ತಿದ್ದ ಬಸ್‌ನಲ್ಲಿ ಇನ್ನೂ ಕತ್ತಲು ಕವಿದಿರಲಿಲ್ಲ. ಹೊರಡಲಿಕ್ಕೆ ಇನ್ನೂ ಹತ್ತು ನಿಮಿಷವೆಂದು ಹೇಳಿ ಡ್ರೈವರ್ ಆ ಕಡೆ ಹೋಟೆಲ್‌ನತ್ತ ಟೀ ಕುಡಿಯಲು ಧಾವಿಸಿದ್ದ.

ಬಸ್‌ಸ್ಟ್ಯಾಂಡ್‌ನಲ್ಲಿ ಸದ್ದು ಗದ್ದಲವಿಲ್ಲ. ನೀರವ ಮೌನಕ್ಕೆ ಸಾಕ್ಷಿಯಂತಿತ್ತು. ಪಕ್ಕದ ಸೀಟಿನಲ್ಲಿ ಯಾವ ಕ್ಷಣವೋ ಬಂದು ಕುಳಿತಿದ್ದ ವ್ಯಕ್ತಿಯನ್ನು ನೋಡಿದಾಗ ಜಿನದತ್ತ ಸಣ್ಣಗೆ ಹೆದರಿದ. ಮುಖವನ್ನು ಹರಕು ಬಟ್ಟೆಯಿಂದ ಮುಚ್ಚಿಕೊಂಡಿದ್ದ ಒಬ್ಬ ವಯಸ್ಸಾದ ವ್ಯಕ್ತಿ, ಸ್ನಾನ ಮಾಡದೇ ಎಷ್ಟೋ ದಿನಗಳಾಗಿದ್ದವೋ…! ಬೀಡಿ ಸೇದುತ್ತಾ ಕಿಟಕಿಯಾಚೆ ಹೊಗೆ ಬಿಡುತ್ತಿದ್ದ. ಮುಖವನ್ನು ಮುಚ್ಚಿಕೊಂಡಿದ್ದರಿಂದ ಅವನ ಮುಖ ಅಸ್ಪಷ್ಟ. ಆ ವ್ಯಕ್ತಿಯನ್ನು ಮತ್ತೊಮ್ಮೆ ನೋಡಬೇಕು ಅಂತ ಜಿನದತ್ತನ ಮನಸ್ಸು ಹೇಳುತ್ತಲೇ ಇತ್ತು. ವಾರೆಗಣ್ಣಿನಿಂದ ನೋಡಿ ಆತನ ದೇಹಾಕಾರವನ್ನು ಮನಸ್ಸಿಗೆ ತುಂಬಿಕೊಂಡಾಗ ಸಹಜವಾಗಿ ಆ ವ್ಯಕ್ತಿ ಎಲ್ಲೋ ಒಂದು ಕಡೆ ಆಪ್ತನಂತೆ ಕಂಡಿದ್ದ. ಕಡುನೀಲಿ ಬಣ್ಣದ ರಗ್ಗು, ಕೈಯಲ್ಲಿ ಬೀಡಿ, ಸುಕ್ಕಾದ ಚರ್ಮ, ದಪ್ಪಮೀಸೆ, ಇಳಿದು ಬೆಳೆದಿದ್ದ ಗಡ್ಡ… ಹೌದು ಈ ವ್ಯಕ್ತಿಯನ್ನು ನಾನು ನೋಡಿದ್ದೇನೆ. ಛೇ… ಛೇ… ಯಾಕೆ ನೆನಪಾಗುತ್ತಿಲ್ಲ. ಮರೆವು ಕೂಡ ನನ್ನನ್ನು ಬಾಧಿಸುತ್ತಿದೆಯೇ? ಅಯ್ಯೋ, ಜಿನದತ್ತನೇ ನಿನಗೇನಾಯಿತು…? ಅಂತ ತನ್ನನ್ನು ಕುರಿತು ತಾನೆ ಗೊಣಗತೊಡಗಿದ. ಪಾತ್ರ ನೆನಪಾಯಿತು. ಕಥೆ ನೆನಪಿಗೆ ಬಂದಿತು. `ಹಾಳೂರಿನಲ್ಲಿ ಬುದ್ಧನೊಬ್ಬ’ ಕಥೆಯ ವಡ್ಡರ ತಿಮ್ಮಪ್ಪನ ಪಾತ್ರದಂತೆ ಈತ ಕಾಣುತ್ತಿಲ್ಲವೇ? ಮತ್ತೊಮ್ಮೆ ಕಣ್ಣುಗಳು ಅವನ ಕಡೆಗೆ ವಾಲಿದವು. ನೋಡಲಿಕ್ಕೆ ತಾನು ಸೃಷ್ಟಿಸಿದ ತಿಮ್ಮಪ್ಪನಂತೆಯೇ ಇದ್ದಾನೆ. ಕಥೆಯಲ್ಲಿ ಆತನನ್ನು ಬಣ್ಣಿಸಿದಂತೆಯೇ ನೋಡಲಿಕ್ಕೆ ಕಾಣುತ್ತಿದ್ದಾನೆ. ಇದ್ಯಾವ ಮಾಯೆಯೋ…! ಜಿನದತ್ತ ತಾನು ಬರೆದ ಹಾಳೂರಿನಲ್ಲಿ ಬುದ್ಧನೊಬ್ಬ ಕಥೆಯಲ್ಲಿ ವಡ್ಡರ ತಿಮ್ಮಪ್ಪನನ್ನು ಊರ ಜನರು ಸೇರಿ ಕಲ್ಲು ಹೊಡೆದು ಸಾಯಿಸುವ ಘಟನೆಯೊಂದಿಗೆ ಕತೆ ಅಂತ್ಯವಾಗುತ್ತದೆ. ಹಾಗಾದರೆ ತಿಮ್ಮಪ್ಪ ಹಾಳೂರಿನಲ್ಲಿ ಮಾಡಿದ್ದಾದರೂ ಎಂತಹದ್ದು? ಆತನ ಕಥೆಯನ್ನ ಮತ್ತೊಮ್ಮೆ ನೆನಪು ಮಾಡಿಕೊಳ್ಳಲೇಬೇಕಾಯಿತು.

ಹಾಳೂರಿನ ಕುಮಾರೇಶ್ವರ ದೇವಸ್ಥಾನದ ಆವರಣವೇ ತಿಮ್ಮಪ್ಪನ ವಾಸಸ್ಥಾನವಾಗಿತ್ತು. ದೇಗುಲದ ಹಿಂಭಾಗದಲ್ಲಿ ಕಟ್ಟಿಕೊಂಡಿದ್ದ ಗುಡಿಸಲಿನಲ್ಲಿ ಬೇಡಿ ತಂದ ಭಿಕ್ಷೆ ಊಟವಾದರೆ, ರಾತ್ರಿ ಮಲಗುವುದು ಕುಮಾರೇಶ್ವರನ ದೇಗುಲದ ಕಟ್ಟೆಯ ಅಂಗಳದಲ್ಲೇ…! ಹಾಳೂರಿನ ಆ ಗುಡಿಯಲ್ಲೇ ಜೀವನದ ಬಹುಭಾಗವನ್ನು ಕಳೆದಿದ್ದ ಆತ ಪ್ರತಿ ರಾತ್ರಿ ಶಿವನಾಮ ಪಠಿಸದೇ ಮಲಗುತ್ತಿರಲಿಲ್ಲ. ಇವನ ಭಕ್ತಿಗೋ, ಮುಗ್ಧತೆಗೋ, ಆತನ ಒಳ್ಳೆಯತನಕ್ಕೋ ಏನೋ ಕುಮಾರೇಶ್ವರ ಸ್ವಾಮಿ ತಿಮ್ಮಪ್ಪನ ಕನಸಿನಲ್ಲಿ ಪ್ರತಿದಿನ ಬರತೊಡಗಿದ. ಬರುಬರುತ್ತಾ ಮಾತನಾಡತೊಡಗಿದ. ತಿಮ್ಮಪ್ಪನಿಗೂ ಮೊದಮೊದಲು ತಾನು ಶಿವನೊಂದಿಗೆ ಮಾತನಾಡುತ್ತಿದ್ದೇನೆಯೇ ಅನ್ನುವ ಅನುಮಾನ ಕಾಡಿದರೂ, ಕೊನೆಗೆ ಹೌದು… ತಾನು ನಿಜವಾಗಿಯೂ ಶಿವನೊಂದಿಗೆ ಮಾತನಾಡುತ್ತಿದ್ದೇನೆ ಅನ್ನುವುದನ್ನು ಗಟ್ಟಿಮಾಡಿಕೊಂಡಿದ್ದ. ಈ ಸತ್ಯ ಅನೇಕ ವರ್ಷಗಳವರೆಗೆ ಅವನಲ್ಲೇ ಇತ್ತು. ತಾನು ದಿನನಿತ್ಯ ಶಿವನೊಂದಿಗೆ ಮಾತನಾಡುತ್ತಿದ್ದೇನೆ ಅಂತ ಊರವರ ಮುಂದೆ ಹೇಳಿದರೂ ಯಾರೂ ನಂಬಲಿಲ್ಲ. ಅವನ ಮುಖ ನೋಡಿ ಕಿಸಿಕಿಸಿ ನಕ್ಕರು. ದೇವಸ್ಥಾನದ ಪೂಜಾರಪ್ಪನಿಗೆ ಹೇಳಿದರೂ ಆತ ಕೂಡ ನಂಬಲಿಲ್ಲ. ‘ಇಷ್ಟು ವರ್ಸದಿಂದ ಶಿವಪ್ಪನಿಗೆ ಪೂಜೆ ಮಾಡ್ತಾ ಇದೀನಿ… ನನ್ನೊಂದಿಗೆ ಮಾತನಾಡದ ಆ ಶಿವ ನಿನ್ನಂತಹ ಜಾತಿಯವನೊಂದಿಗೆ ಮಾತನಾಡುತ್ತಾನೋ! ಹೋಗ್ .. ಹೋಗಲೇ ಹುಚ್ಚಾ…’ ಅಂತ ಕೂಗಾಡಿ- `ಶಿವ ಶಿವ… ಎಂತಾ ಕಾಲ ಬಂತೋ… ದೇವ್ರ ಬಗ್ಗೆನೂ ಹಗುರವಾಗಿ ಮಾತಾಡೋ ಹಂಗಾಯ್ತಲ್ಲೊ?’ ಅಂತ ಪೂಜಾರಪ್ಪ ಗೊಣಗುತ್ತಾ ಹೋದ. ತಿಮ್ಮಪ್ಪನ ಹುಚ್ಚು ಜಾಸ್ತಿಯಾಗಿದೆ ಅಂತ ಹಾಳೂರಿನ ಜನರು ಮಾತನಾಡತೊಡಗಿದರು. ಹೀಗಿದ್ದರೂ ಶಿವಪ್ಪನಿಗೆ ಮಾತ್ರ ತಾನು ದಿನಾ ರಾತ್ರಿ ಶಿವನೊಂದಿಗೆ ಮಾತನಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಒಮ್ಮೆ ಶಿವನಿಗೂ ಈ ಪ್ರಶ್ನೆಯನ್ನು ಕೇಳಿಯೇಬಿಟ್ಟ. ‘ನಾನು ನಿನ್ ಜೊತಿ ದಿನನಿತ್ಯ ಮಾತಾಡ್ತೀನಿ, ಹರ‍್ಟೆ ಹೊಡೆತೀನಿ, ಇದನ್ನಾ ಊರ್ ಜನ್ರಿಗೆ ಹೇಳಿದ್ರೆ ಯಾರೂ ನಂಬ್ತಿಲ್ಲ. ನೀನು ಮಾತನಾಡೋದೇ ಇಲ್ವಂತೆ, ನೀನು ಮೂಕನಂತೆ, ಹೀಗೆ ಅಂತೆ ಕಂತೆಯಂತೆ ನಿನ್ನ ಬಗ್ಗೆ ಹೇಳ್ತಾರಲ್ಲಾ…!’ – ಅಂತ ಶಿವನಿಗೂ ಪ್ರಶ್ನೆ ಮಾಡಿದ್ದ ತಿಮ್ಮಪ್ಪನಿಗೆ ಹಾಳೂರಿನ ಕುಮಾರೇಶ್ವರ ಹೇಳಿದ್ದಿಷ್ಟೇ. `ನೋಡೋ ತಿಮ್ಮಪ್ಪ… ಅವರವರ ಕರ್ಮಕ್ಕೆ ತಕ್ಕ ಹಾಗೆ ಬೆಳಕು ಜೀವನದಲ್ಲಿ ಮೂಡುತ್ತೆ. ಹಾಳೂರಿನ ಜನರ ಕತ್ತಲು ಇನ್ನೂ ಕಡಿಮೆಯಾಗಿಲ್ಲ… ಕತ್ತಲು ಕವಿಯುವವರೆಗೂ ಅವರಿಗೆ ದಕ್ಕುವುದಷ್ಟು ದಕ್ಕುತ್ತಲೇ ಇರುತ್ತದೆ’

ಶಿವನ ಮಾತಿನ ಒಳಾರ್ಥ ತಿಮ್ಮಪ್ಪನೆಂಬ ಮುಗ್ಧನಿಗೆ ಅಲ್ಪಸ್ವಲ್ಪ ಅರ್ಥವಾಗಿತ್ತಷ್ಟೇ. ಅವನ ಮಾತನ್ನು ಮರುಪ್ರಶ್ನಿಸಲಿಲ್ಲ. ಹೀಗಿದ್ದರೂ ಆತ ಪ್ರತಿನಿತ್ಯ ಕುಮಾರೇಶ್ವರನೊಂದಿಗೆ ಮಾತನಾಡುವುದನ್ನು ಮಾತ್ರ ಜನರಿಗೆ ಹೇಳುವುದನ್ನು ನಿಲ್ಲಿಸಲಿಲ್ಲ. ಜನರು ಅವನ ಮಾತನ್ನೂ ಗೇಲಿ ಮಾಡತೊಡಗಿದರು. `ಹೌದಾ.. ಶಿವಪ್ಪ ಇವತ್ತು ಏನ್ ಹೇಳ್ದ? ಈಗ್ ಶಿವಪ್ಪ ಏನ್ ಮಾಡ್ತಿದಾನೆ? ನಿನ್ ಶಿವ ಟೈಮ್ ಟೈಮಿಗೆ ಸರಿಯಾಗಿ ಊಟ ಮಾಡ್ತಾನೊ…! ನನ್ನ ಹೆಂಡ್ತಿ ಚಿನ್ನದ ಸರ ಕಳ್ವಾಗಿದೆ. ಯಾರ್ ಕದ್ದಿದ್ದಾರೆ ಅಂತ ನಿನ್ ಶಿವನಲ್ಲಿ ಕೇಳ್ತಿಯಾ? ಶಿವನ ಜೊತೆ ಪಾರ್ವತಮ್ಮನೂ ಕೂಡ ಕನ್ಸಲ್ಲಿ ಬರ್ತಾಳಾ? ಅಮ್ಮ ಯಾವ ತರದ್ ಸೀರೆ ಉಟ್ಟಿದ್ಳು… ಎಷ್ಟು ಬಂಗಾರ ಮೈಮೇಲೆ ಹಾಕ್ಕೊಂಡಿದ್ಲು?’ ಜನರು ಶಿವನ ಬಗ್ಗೆ ಅಂತೆ ಕಂತೆಯ ರೂಪದಲ್ಲಿ ತರಲೆ ಪ್ರಶ್ನೆಗಳನ್ನು ಕೇಳತೊಡಗಿದರು. ಹೀಗಿದ್ದರೂ ತಿಮ್ಮಪ್ಪ ಮಾತ್ರ ತಾನು ಹೇಳುತ್ತಿರುವುದು ಅಕ್ಷರಶಃ ಶಿವನಾಮದಷ್ಟೇ ಸತ್ಯವೆಂದು ವಾದಿಸುತ್ತಿದ್ದ.

*****

ಹೀಗೊಮ್ಮೆ ಶಿವರಾತ್ರಿಯ ಮಹಾಪೂಜೆಯಂದು ಕುಮಾರೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಅಭಿಷೇಕದಿಂದ ಶುರುವಾಗಿ ಹತ್ತಾರು ಪೂಜೆ ಹವನಗಳು ಗುಡಿಯಲ್ಲಿ ನಡೆಯುತ್ತಿದ್ದವು. ಅಂದು ಸರ್ವಾಲಂಕಾರ ಭೂಷಿತನಾದ ಕುಮಾರೇಶ್ವರನನ್ನು ನೋಡಿದಾಗ ಆತನ ಕಣ್ಣೀರು ತುಂಬಿ ಹರಿದಿತ್ತು. `ಹೇ ಶಿವಪ್ಪಾ… ಎಷ್ಟು ಚೆಂದಾ ಕಾಣ್ತಿದಿಯಪ್ಪೋ…! ನನ್ ದೃಷ್ಟಿನೇ ನಿನ್ ಮ್ಯಾಲ ಬೀಳಂಗೈತಿ’ ಅಂತ ಹೇಳುತ್ತಲೇ ಹೊರಗಡೆ ನಿಂತಿದ್ದವನು ಗರ್ಭಗುಡಿಯತ್ತ ಓಡತೊಡಗಿದ. `ಯಪ್ಪಾ.. ಈ ಜೀವಾನ ನಿನ್ನ ಪಾದಕ್ಕ ಇವತ್ತಾ ಸೇರಸ್ಕೋ… ನಿನ್ ಕೈಲಾಸವನ್ನ ನೋಡೋಕೆ ಇಂದೆ ಓಡೋಡಿ ಬರ್ತೀನಿ…’ ಅಂತ ಹೇಳುತ್ತಲೇ ಜೋರಾಗಿ ಹೆಜ್ಜೆ ಹಾಕುತ್ತಿದ್ದ. ಸುತ್ತಲಿದ್ದ ಜನರು ಕಣ್ಣುಮುಚ್ಚಿ ಕೈಮುಗಿದು ಮಹಾಮಂಗಳಾರತಿಗೆ ಕಾಯುತ್ತಿದ್ದರು. ತಿಮ್ಮಪ್ಪ ತನ್ನ ಪಾಡಿಗೆ ಜನರನ್ನು ಸರಿಸಿಕೊಳ್ಳುತ್ತಾ ಗುಡಿಯ ಒಳಹೊಕ್ಕುವುದನ್ನೆ ಅವಕ್ಕಾಗಿ ನೋಡುತ್ತಿದ್ದರು. `ಶಿವ ಶಿವ… ಹರಹರ ಮಹಾದೇವ್… ಕುಮಾರೇಶ್ವರ ಮಹಾರಾಜ್ ಕೀ ಜೈ…’ ಅಂತ ಕೂಗುತ್ತಲೇ ಇದ್ದರು. ಘಂಟಾನಾದ ಹಾಳೂರನ್ನು ಮುಟ್ಟುವಂತಿತ್ತು. ಇದೆಲ್ಲದರ ನಡುವೆಯೂ ಗರ್ಭಗುಡಿಗೆ ನುಗ್ಗಿದ ತಿಮ್ಮಪ್ಪ, ಮಾರ್ಕಂಡೇಯ ಶಿವಲಿಂಗವನ್ನು ಅಪ್ಪಿಕೊಂಡಂತೆ, ಈ ಕುಮಾರೇಶ್ವರನನ್ನು ಗಟ್ಟಿಯಾಗಿ ಅಪ್ಪಿಕೊಂಡುಬಿಟ್ಟ. `ಯಪ್ಪಾ, ಶಿವಪ್ಪಾ… ಈ ಜನ್ಮ ಸಾಕಿನ್ನು. ನನ್ನನ್ನ ನಿನ್ ಪಾದಕ್ಕ ಸೇರಸ್ಕೋ… ನೀ ದಿನಾನೂ ನನ್ನ ಜೊತಿ ಮಾತಾಡ್ತಿ… ಹರ್ಟೆ ಹೊಡೆಯುತ್ತಿ… ಆದ್ರೆ ಈ ಹಾಳೂರಿನ ಜನ್ರು ನೀ ಮಾತನಾಡುತ್ತಿ ಅಂತ ಹೇಳಿದ್ರೂ ಕೇಳೊದಿಲ್ಲ. ನನ್ನನ್ನ ಹುಚ್ಚಾ… ಅಂತ ಕರೀತಾರ. ಸಾಕು ಶಿವನೇ. ಈ ಜೀವ್ನ ಸಾಕಾಗಿದೆ. ನಿನ್ನ ಪಾದಕ್ಕ ಸೇರಿಸ್ಕೋ ನನ್ನನ್ನ…’ -ಅಂತ ಬೇಡುತ್ತಲೇ ಕುಮಾರೇಶ್ವರನನ್ನು ಅಪ್ಪಿಕೊಂಡಿದ್ದ. ತಿಮ್ಮಪ್ಪ ಗರ್ಭಗುಡಿಯೊಳಗೆ ನುಗ್ಗಿದ್ದನ್ನು ಅವಕ್ಕಾಗಿ ನೋಡಿದ ಭಕ್ತರ ರಕ್ತ ಕುದಿಯತೊಡಗಿತು. ಬಾಯಲ್ಲಿದ್ದ ಶಿವನಾಮ ನಿಂತಿತು. ಹೆಂಗಸರು ಶಿವಲಿಂಗವನ್ನು ಅಪ್ಪಿಕೊಂಡ ತಿಮ್ಮಪ್ಪನನ್ನು ನೋಡಿ ಬಾಯಿಗೆ ಕೈಇಟ್ಟು ಶಿವ ಶಿವಾ… ಅಂತ ಗೊಣಗಿದರು. ಗುಂಪಿನಲ್ಲಿ ಕೂಗಾಟ ಆಗಲೇ ಶುರುವಾಗಿತ್ತು.

`ಥೂ.. ಆ ಕೆಳ ಜಾತಿಯ ತಿಮ್ಮಪ್ಪ ಗರ್ಭಗುಡಿ ಒಳಗ ಹೊಕ್ಕಾನ ನೋಡ್ರಲೇ…’
`ಎಳಿರೋ ಅವ್ನನ್ನ… ಅವ್ನ ಹುಚ್ಚು ಜಾಸ್ತಿಯಾದಂಗಿದೆ…!’
`ಈ ಸೂಳೆಮಗ ಯಾವಾಗ ಗುಡೀನಾ ಹೊಕ್ನೋ…?’
ಭಕ್ತರು ಮಾತನಾಡುತ್ತಲೇ ಇದ್ದರು.

ಗರ್ಭಗುಡಿಗೆ ಮಡಿ ಮೈಲಿಗೆ ಮಾಡೋರು ಮತ್ತು ಪೂಜಾರಪ್ಪನನ್ನು ಬಿಟ್ಟು ಯಾರೂ ಹೋಗುವಂತಿರಲಿಲ್ಲ. ತಿಮ್ಮಪ್ಪನಿಗೆ ಇದ್ದ ಧೈರ್ಯ ಆ ಭಕ್ತರಿಗಿರಲಿಲ್ಲ.

`ಅಯ್ಯೋ, ಶಿವಪ್ಪನ ಪೂಜೆ ಹಾಳಾಯಿತು. ಮಡಿ ಮೈಲಿಗೆ ಇಲ್ಲದ ಇವನನ್ನು ಎಳೆದು ಹೊರಗೆ ಹಾಕ್ರೋ…’ ಅಂತ ಪೂಜಾರಪ್ಪ ಗರ್ಭಗುಡಿಯಿಂದ ಹೊರಗೆ ಬಂದು ಕೂಗು ಹಾಕಿದ.

ಪೂಜಾರಪ್ಪ ಹೇಳುವುದನ್ನೇ ಕಾಯುತ್ತಿದ್ದ ಭಕ್ತರಲ್ಲಿ ಮೂರ್ನಾಲ್ಕು ಜನರು ಒಳಗೆ ನುಗ್ಗಿ ಶಿವಲಿಂಗವನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದ ತಿಮ್ಮಪ್ಪನ ರಟ್ಟೆಗಳನ್ನು ಎಳೆಯತೊಡಗಿದರು. ಕೈಗಳು ಸಡಿಲವಾಗಲಿಲ್ಲ. ಇನ್ನಷ್ಟು ಬಿಗಿಯಾಗಿ ಎಳೆದರು, ಜಗ್ಗಲಿಲ್ಲ. `ಶಿವ ಶಿವ… ಹರಹರ ಮಹಾದೇವ್’ ಅಂತ ಕೂಗುತ್ತಾ ಇನ್ನಷ್ಟು ಗಟ್ಟಿಯಾಗಿ ಎಳೆದರು. ತಿಮ್ಮಪ್ಪ ಶಿವಲಿಂಗವನ್ನು ಬಿಟ್ಟಂತೆ ಕಾಣಲಿಲ್ಲ.

`ಶಿವನೇ ನೀನೇ ನಂಗ ಗತಿ… ನಿನ್ ಪಾದಕ್ಕೆ ನನ್ನನ್ನ ಸೇರಸ್ಕಳೋಪ್ಪಾ…’ -ತಿಮ್ಮಪ್ಪ ಈ ಮಾತನ್ನ ಪಠಿಸುತ್ತಲೇ ಇದ್ದ.

`ಅಯ್ಯೋ… ಇವತ್ತು ಏನ್ ಆಗ್ಬಾರ್ದು ಅಂತಿದ್ಯೋ ಅದೇ ಆಗ್ತಾ ಇದೆ. ಏನ್ ಕಾದಿದಿಯೋ ಈ ಹಾಳೂರಿಗೆ…! ಇನ್ನೂ ಮೂರ್ನಾಲ್ಕು ಗಂಡಸ್ರು ಬರ‍್ರಪ್ಪೋ… ಮೊದ್ಲು ಈ ಸೂಳೆಮಗನ್ನಾ ಹೊತ್ತು ಹೊರಗ ಹಾಕ್ರಪ್ಪಾ…’ ಅಂತ ಪೂಜಾರಪ್ಪ ಗರ್ಭಗುಡಿಯ ಹೊರಗೆ ನಿಂತುಕೊಂಡೇ ಕೂಗತೊಡಗಿದ. ಹೊರಗಡೆ ಇದ್ದ ಮೂರ್ನಾಲ್ಕು ಜನ್ರು ಹೋಮಕ್ಕೆ ಒಟ್ಟಿದ್ದ ಕಟ್ಟಿಗೆಗಳನ್ನು ಹಿಡಿದು ಗರ್ಭಗುಡಿಗೆ ನುಗ್ಗಿದರು. ತಿಮ್ಮಪ್ಪನ ಅಪ್ಪುಗೆ ಇನ್ನಷ್ಟು ಬಿಗಿಯಾಯಿತು. `ಶಿವ ಶಿವ… ನನ್ನನ್ನು ಬೇಗ ಕರ‍್ಕೋಳೋಪ್ಪಾ…’ ಅನ್ನುತ್ತಲೇ ಆತನ ಶಿವನಾಮ ಇನ್ನಷ್ಟು ಜಾಸ್ತಿಯಾಯಿತು.
ಶಿವರಾತ್ರಿಯಂದು ಹಾಳೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರು ಕುಮಾರೇಶ್ವರನ ಗುಡಿಗೆ ಸೇರುತ್ತಲೇ ಇದ್ದರು. ಭಕ್ತ ಮಾರ್ಕಂಡೇಯನ ಕಥೆಯನ್ನು ಕೇಳಿದ್ದ ಬಂದವರೆಲ್ಲರೂ ಶಿವಲಿಂಗವನ್ನು ಅಪ್ಪಿಕೊಂಡಿದ್ದ ತಿಮ್ಮಪ್ಪನನ್ನು ನೋಡಿ ಹೌಹಾರಿದರು. `ಅಯ್ಯೋ… ಆ ಸೊಳೆಮಗಂಗ ಹುಚ್ಚು ಜಾಸ್ತಿಯಾಯ್ತೇನ್ರೋ…’ ಅಂತೆಲ್ಲಾ ಕೂಗತೊಡಗಿದರು.

`ಹೇ, ಕಲಿಯುಗದ ಮಾರ್ಕಂಡೇಯನ್ನ ಅಲ್ಲಿ ನೋಡ್ರಪ್ಪ’ ಅಂತ ಹೇಳಿದರೆ, `ಥೂ… ಆ ಹುಚ್ಚನ್ನಾ ಮಾರ್ಕಂಡೇಯ ಅಂತೀರಲ್ರೋ…’ ಅಂದಿತು ಗುಂಪಿನಲ್ಲಿದ್ದ ಇನ್ನೊಂದು ದನಿ.

ಈಗ ತಾನು ಎದುರಿಸುತ್ತಿರುವ ವಿಚಿತ್ರ ಸಮಸ್ಯೆಯಿಂದ ಹೇಗೆ ಪಾರಾಗಬಹುದು? ಓಡಿಹೋಗಿರುವ ನನ್ನೊಳಗಿನ ತಪಸ್ವಿಯನ್ನು ಎಲ್ಲಿ ಅಂತ ಹುಡುಕುವುದು. ಅವನು ಬರದ ಹೊರತು ತನ್ನಲ್ಲಿ ಕಥೆಗಾರ ಹುಟ್ಟಲಿಕ್ಕೆ ಸಾಧ್ಯವಿಲ್ಲ, ಅವನು ಇಲ್ಲದ ನನ್ನನ್ನು ಎಲ್ಲರೂ ಕತೆಗಾರನೆಂದು ಪ್ರೀತಿ, ಗೌರವದಿಂದ ಮಾತನಾಡಿಸಿದಾಗ ಏನೋ ಒಂಥರಾ ವಿಚಿತ್ರ ಹಿಂಸೆಯಂತೆ ತೋರುತ್ತಿತ್ತು. ಅಂದು ಅವನು ಇದ್ದಾಗ ಪ್ರೀತಿ, ಅಭಿಮಾನದ ಮಾತುಗಳನ್ನು ಕೇಳಲಿಕ್ಕೆ ತುಂಬಾ ಖುಷಿಯಾಗುತ್ತಿತ್ತು.

ಅಂತೂ ಇಂತೂ ಶಿವಲಿಂಗವನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದ ತಿಮ್ಮಪ್ಪನ ಬಾಹುಬಲವನ್ನು ಇಳಿಸಿ ಅವನನ್ನು ಧರಧರನೇ ಎಳೆದುಕೊಂಡು ಬಂದರು. ತಿಮ್ಮಪ್ಪ, `ಅಯ್ಯೋ… ಅಮ್ಮಾ… ಬಿಡ್ರೊ… ಶಿವಪ್ಪ ಕಾಪಾಡಪ್ಪ…!’- ಅಂತ ಕಣ್ಣೀರಿಡುತ್ತಾ ಕೂಗುತ್ತಲೇ ಇದ್ದ. ಎಳೆದು ತಂದವರಿಗೆ ಅವನ ಕೂಗಾಟ ಕೇಳುತ್ತಿಲ್ಲ. ಜನರ ಗದ್ದಲ ಜಾಸ್ತಿಯಾಗಿತ್ತು. ಹೀಗೆ ಊರ ಗುಂಪಿನ ಜನರ ನಡುವೆ ತಿಮ್ಮಪ್ಪನೆಂಬ ಭಕ್ತನನ್ನು ಎಳೆದುಕೊಂಡು ಬರುವಾಗ ಆತನಿಗೆ ಜನರಿಂದ ಎಷ್ಟು ಏಟುಗಳು ಒಳಗೊಳಗೆ ಬಿದ್ದವೋ ಗೊತ್ತಿಲ್ಲ…! ಹೊರಗೆ ಅವನನ್ನು ನೆಲಕ್ಕಚ್ಚಿ ಎಳೆದುಕೊಂಡು ಬರುವಷ್ಟರಲ್ಲಿ ತಿಮ್ಮಪ್ಪನ ಅರ್ಧ ತಲೆ ಒಡೆದು ರಕ್ತ ಸುರಿಯತೊಡಗಿತ್ತು. ಹೋಮಕ್ಕೆ ಇಟ್ಟಿದ್ದ ಕಟ್ಟಿಗೆಗಳಿಂದ ಹೊಡೆಯತೊಡಗಿದರು. ಹೀಗೆ ಕಟ್ಟಿಗೆಯಿಂದ ಏಟು ಬಿದ್ದಾಗಲೆಲ್ಲಾ ಶಿವ ಶಿವ ಅಂತ ಅರಚುತ್ತಲೇ ಇದ್ದ. ಹೊಡೆಯುತ್ತಿದ್ದವರಿಗೆ ಕರುಣೆ ಇದ್ದಂತೆ ಕಾಣುತ್ತಿಲ್ಲ, ನೋಡುವವರಿಗೂ ತಿಮ್ಮಪ್ಪನ ಮೇಲೆ ಕನಿಕರ ಮೂಡುತ್ತಿಲ್ಲ.. `ಆ ಹುಚ್ಚನ್ನಾ ಸಾಯಿಸ್ರಲೇ… ಬಿಡಬ್ಯಾಡ್ರಲೇ…’ ಅಂತ ಗುಂಪಿನಿಂದ ಒಂದು ದನಿ ಕೂಗಿಬಂದಿತು. `ಪಾಪ ಅವಂಗ ಹೊಡಿಬ್ಯಾಡ್ರಿ… ಆ ಹುಚ್ಚ ಮಗು ಇದ್ದಂಗ್ರಲೇ.. ಅವಂಗ ತಾನ್ ಏನ್ ಮಾಡ್ತೀನಿ, ಏನ್ ಮಾತಾಡ್ತೀನಿ ಅನ್ನೋದಾ ಗೊತ್ತಿಲ್ರೋ.. ಬಿಟ್ಟುಬಿಡ್ರಲೇ… ಹೊಡದದ್ದು ಸಾಕು’ ಅಂತ ತಿಮ್ಮಪ್ಪನ ಪರ ಒಂದು ಮಾತನ್ನು ಹೇಳುವ ದನಿ ಆ ಗುಂಪಿನಿಂದ ಕೇಳಲೇ ಇಲ್ಲ.
ಜನರು ಶಿವಶಿವ ಹರಹರ ಮಹಾದೇವ.. ಅಂತ ಕೂಗುತ್ತಾ ಸರದಿ ಸಾಲಿನಲ್ಲಿ ದರುಶನಕ್ಕೆ ನಿಲ್ಲತೊಡಗಿದ್ದರು.

`ಭಕ್ತಾದಿಗಳು… ಇಲ್ಲಿ ಆಗಮಿಸ್ಬೇಕು, ಈ ಕ್ಷಣದವರ್ಗೂ ಇಲ್ಲಿ ಏನಾಯ್ತು ಅಂತ ನಿಮ್ಗೆ ಗೊತ್ತೆ ಇದೆ. ಆ ತಿಮ್ಮಪ್ಪ ನಮ್ ನಿಮ್ಮೆಲ್ಲರನ್ನು ಕಾಪಾಡೋ ಕುಮಾರೇಶ್ವರ ಸ್ವಾಮಿಯನ್ನ ಮುಟ್ಟಿ ಅಪವಿತ್ರ ಮಾಡ್ಯಾನ… ಇದು ಊರಿಗೂ ಒಳ್ಳೆದಲ್ಲ. ನಮ್ಗೂ ಒಳ್ಳೆದಲ್ಲ. ಶಿವಪ್ಪನಿಗೆ ಮತ್ತ ಅಭಿಷೇಕಾ ಮಾಡಿ ಪೂಜೆ ಮಾಡ್ಬೇಕು. ನಾನು ಸ್ನಾನ ಮಾಡಿ ಮಡಿ ಉಟ್ಟು ಬರೋವರ್ಗೂ ದೇವ್ರನ್ನ ಯಾರೂ ನೋಡಂಗಿಲ್ಲ, ಬಂದೋರು ವಾಪಾಸ್ ಹೋಗ್ರಿ, ಮತ್ತ ಮಧ್ಯಾಹ್ನ ಬರ‍್ರಿ…’ – ಅಂತ ಹೇಳಿದ ಪೂಜಾರಪ್ಪ, ಗರ್ಭಗುಡಿಗೆ ಬೀಗ ಹಾಕಿ ನದಿ ಬಯಲಿನತ್ತ ಜೋರಾಗಿ ಹೆಜ್ಜೆ ಹಾಕಿದ. ಶಿವಪ್ಪನ ದರುಶನ ಮಾಡಲು ದೂರದಿಂದ ಬಂದಿದ್ದ ಜನ್ರಿಗೆ ಹೊಟ್ಟೆಯ ಉರಿ ಇನ್ನಷ್ಟು ಜಾಸ್ತಿಯಾಯಿತು. ಶಿವಪ್ಪನನ್ನು ನೋಡದೇ ಫಳಾರ, ನಾಸ್ಟಾ ಮಾಡುವ ಹಾಗಿಲ್ಲ. ಶಿವರಾತ್ರಿಯ ಉಪವಾಸ ಜಾಗರಣೆ ಬೆಳಗ್ಗೆಯಿಂದಲೇ ಶುರುವಾಯ್ತಲ್ಲ ಅಂತ ಭಕ್ತರು ಒಳಗೊಳಗೆ ಕೊರಗತೊಡಗಿದರು. ಸುದ್ದಿ ಹಾಳೂರನ್ನು ತಲುಪಿತ್ತು.

`ಹಾಳೂರಿಗೆ ಏನು ಕೇಡು ಕಾದಿದಿಯೋ..?’ ಜನರು ಬಾಯಿಗೆ ಬಂದಂತೆ ಮಾತನಾಡತೊಡಗಿದರು. ತಿಮ್ಮಪ್ಪನಿಗೆ ಹಿಡಿಶಾಪ ಹಾಕತೊಡಗಿದರು. `ಇಂಥಾ ಹುಚ್ರನ್ನ ಇಷ್ಟು ದಿನ ಹಾಳೂರಲ್ಲಿ ಇಟ್ಕಂಡಿದ್ದೆ ತಪ್ಪಾಯ್ತು… ಊರಿಗೊಬ್ರು ಇಂತ ಹುಚ್ರು ಇದ್ರ ಊರು ಉದ್ಧಾರ ಆದಂಗೇನೆ…?’
ಗುಡಿಯ ಹೊರಗೆ ಅನಾಥವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಿಮ್ಮಪ್ಪನನ್ನು ಯಾರೂ ನೋಡುತ್ತಲೇ ಇಲ್ಲ. ನೋಡಿದವರು ಕಲ್ಲುಗಳನ್ನು ಎಸೆದರು. ಮಣ್ಣನ್ನು ಎರಚಿದರು. ಇದ್ಯಾವದರ ಪರಿವೆ ಇಲ್ಲದ ತಿಮ್ಮಪ್ಪ ಸತ್ತನೋ ಬಿಟ್ಟನೋ? ಅರಿವಿಲ್ಲದೇ ಅಲ್ಲಿಯೇ ನೆಲಕ್ಕಂಟಿದ್ದ. ಕೈಕಾಲುಗಳ ಮಿಸುಗಾಟವಿಲ್ಲ. ಮೈಯ ಅಲುಗಾಟವಿಲ್ಲ. ಅವನ ಸುತ್ತ ಕಲ್ಲುಗಳ ರಾಶಿ ಹರಡಿತ್ತು. ಕಲ್ಲಿಗೆ ಅಂಟಿದ ರಕ್ತ ಇನ್ನೂ ಹಸಿಯಾಗಿತ್ತು. ಆತನೇ ಬೇಡಿಕೊಂಡಂತೆ ಶಿವಪ್ಪನ ಪಾದಸೇರಿಕೊಂಡನೋ…! ಹಾಳೂರಿನಲ್ಲಿ ಬುದ್ಧನಂತಿದ್ದ ತಿಮ್ಮಪ್ಪ ಶಿವನೊಂದಿಗೆ ಮಾತನಾಡುತ್ತಿದ್ದ ಸತ್ಯವನ್ನು ಊರ ಜನರು ಕೊನೆಯವರೆಗೂ ಒಪ್ಪಲೇ ಇಲ್ಲ. ದೇವರನ್ನು ನಂಬಿದವನಿಗೆ ಇಂತಹ ಶಿಕ್ಷೆ?

*****

`ಹಾಳೂರಿನ ಬುದ್ಧನೊಬ್ಬ’ ಕತೆಯ ಪ್ರಮುಖ ಪಾತ್ರಧಾರಿ ತಿಮ್ಮಪ್ಪ ಇಂದು ತಾನೂ ಕೂತಿದ್ದ ಬಸ್‌ನ ಪಕ್ಕದ ಸೀಟಿನಲ್ಲೇ ಕೂತಿದ್ದಾನೆ. ತಾನು ಸೃಷ್ಟಿಸಿದ ಆ ಪಾತ್ರ ಮತ್ತೆ ನನ್ನ ಕಣ್ಣ ಮುಂದೆ. ಅದೇನು ಆಶ್ಚರ್ಯವೋ? ವಾರೆಗಣ್ಣಿನಿಂದ ಮತ್ತೆ ಪಕ್ಕದ ಸೀಟಿನಲ್ಲಿ ಕೂತಿದ್ದ ಆತ ಜಿನದತ್ತನನ್ನೆ ನೋಡುತ್ತಿದ್ದಾನೆ. ಅವನ ಮುಖದಲ್ಲಿ ಸಿಟ್ಟು, ರೋಷ, ಆಕ್ರೋಶ ಒಟ್ಟಿಗೆ ಅಂಟಿಕೊಂಡು ಕೂತಿವೆ. ಜಿನದತ್ತನಿಗೆ ಅವನೊಂದಿಗೆ ಮಾತನಾಡಲು ಹೆದರಿಕೆ ಆಯಿತು. ಖಂಡಿತ ತಿಮ್ಮಪ್ಪ ತನ್ನನ್ನು ಕೊಲ್ಲುವಂತೆಯೇ ನೋಡುತ್ತಿದ್ದಾನೆ. ಅವನ ಕಣ್ಣುಗಳಲ್ಲಿ ಆ ಬೆಂಕಿ ಕಾಣುತ್ತಿದೆ ಅಂತ ಮನಸಿನಲ್ಲಿ ಅಂದುಕೊಂಡ. ಏನು ಮಾಡುವುದು ಬಸ್‌ನಿಂದ ಇಳಿದುಹೋಗಲೇ ಅನ್ನುವ ಗೊಂದಲ… ಇಳಿಯಲು ಧೈರ್ಯ ಸಾಲದೆ ಗುಂಡಿಗೆ ಗಟ್ಟಿಮಾಡಿಕೊಂಡು ಕಿಟಕಿಯತ್ತ ಮುಖ ಮಾಡುತ್ತಾ ವಾಲಿದ. ತಿಮ್ಮಪ್ಪನ ಬಗ್ಗೆ ಯೋಚನೆಗಳು ಬರುತ್ತಲೇ ಇದ್ದವು. ಅವನ ಪಾತ್ರವನ್ನು ತಾನು ಜೀವನದಲ್ಲಿ ಎಲ್ಲಿಯೂ ನೋಡಿಲ್ಲ. ನೋಡಿದ್ದರೆ ಇಷ್ಟೊತ್ತಿಗೆ ನೆನಪಾಗುತ್ತಿದ್ದ. ಅಕಸ್ಮಾತ್ ಆ ಪಾತ್ರ ಇದ್ದು ಅದನ್ನು ಬಳಸಿಕೊಂಡಿದ್ದರೆ ಈ ಹೆದರಿಕೆ ಇರುತ್ತಿರಲಿಲ್ಲ. ಆದರೆ ಈತ ನಾನು ಸೃಷ್ಟಿಸಿದ ಕಥೆಯ ಕಲ್ಪನೆಯ ಕೂಸು. ಇವನೇ ಮತ್ತೆ ನನ್ನೆದುರಿಗೆ ಬಂದಿದ್ದಾನೆಂದರೆ ಆತಂಕವಾಗದೇ ಇರಲಾಗದು.

`ಸ್ವಾಮಿ ಕಥೆಗಾರರೇ… ದಯವಿಟ್ಟು ನಿಮ್ ಮುಖಾನ ನಮ್ ಕಡೆ ಸ್ವಲ್ಪ ತರ‍್ಸಿ. ನಾನು ನಿಮ್ಮ ಕಲ್ಪನೆಯ ಪಾತ್ರ. ತಿಮ್ಮಪ್ಪ ಅಂತ ನನ್ನನ್ನ ಕರಿತಾರೆ’ ಅಂತ ಆ ಕಡೆಯಿಂದ ಒಡಕಲು ದನಿಯಂತೆ ಕೇಳಿತು ಅವನ ಮಾತು. ಜಿನದತ್ತ, ಹೆದರಿಕೆಯಿಂದ ತನ್ನನ್ನೇ ಕರೆಯುತ್ತಿದ್ದಾನೆ ಅಂತ ಅವನ ಕಡೆ ತಿರುಗಿದ. ತನ್ನ ಬಗ್ಗೆ ಸಿಟ್ಟಿದೆ, ಕೋಪವಿದೆ ಅನ್ನುವುದು ಆಗಲೇ ಅರಿವಾಗಿತ್ತು. `ಅಲ್ಲಾ ಸ್ವಾಮಿ, ನನ್ನ ಪಾತ್ರಕ್ಕೆ ಆ ದ್ಯಾವ್ರು ಶಿವಪ್ಪಾನೇ ನನ್ನೊಂದಿಗೆ ಮಾತನಾಡುವ ಸುಯೋಗವನ್ನು ಕೊಟ್ಟು, ಕೊನೆಗ ನನ್ನನ್ನ ಊರ ಜನ್ರಿಂದಾನೇ ಸಾಯಿಸಿದ್ರಲ್ಲ… ಇದ್ಯಾವ ನ್ಯಾಯ…? ನೀವು ಮಾಡಿದ್ದನ್ನ ಆ ದ್ಯಾವ್ರು ಶಿವಾ ಕೂಡ ಮೆಚ್ಚಂಗಿಲ್ಲ. ನನ್ನೊಂದಿಗೆ ಮಾತನಾಡುವ ಶಿವ ಊರಜನ್ರ ಮುಂದೆ ಯಾಕೆ ಮಾತಾಡೊಂಗೆ ಮಾಡ್ಲಿಲ್ಲ…? ಕೊನೆಗೂ ಆ ಶಿವನನ್ನ ಕಲ್ಲು ದೇವ್ರಂಗ ಮಾಡಿ, ನನ್ನೂ ಪ್ರಾಣಿಯಂಗ ಮಾಡಿ, ಜನ್ರಿಂದ ಹೊಡ್ದು ಸಾಯ್ಸಿ ಅದ್ರ ಪಾಪಾನ ನೀವ ಅಂಟ್ಸಿಕೊಂಡ್ರಲ್ಲ ಸ್ವಾಮೇರಾ… ಇದು ನಿಮ್ಗೆ ಸರಿ ಕಾಣ್ತಾದಾ…? ನನ್ನನ್ನ ಕತೆಯ ಕೊನೆಯಾಗ ಊರ ಜನ್ರು ಕಲ್ಲು ದೊಣ್ಣಿಂದ ಹೆಂಗ ಹೊಡ್ದು ಸಾಯ್ಸಿದ್ರೋ, ನಿಮ್ಮನ್ನೂ ಹಂಗ ಅದೇ ರೀತಿ ಹೊಡ್ದು ಸಾಯ್ಸಿದ್ರ ನನ್ನ ನೋವಿನ ವ್ಯಥೆ ನಿಮ್ಗ ಅರ್ತ ಆಗ್ತದ.. ಬಾಳ ಅನ್ಯಾಯ ಮಾಡಿದ್ರಿ. ನನ್ನ ಪಾತ್ರವನ್ನ ಕೊಂದ್ರಲ್ಲ..? ಖಂಡಿತ ಶಿವಪ್ಪ ನಿಮ್ಮನ್ನ ಮೆಚ್ಚಂಗಿಲ್ಲ…’

ತಿಮ್ಮಪ್ಪ ಜಿನದತ್ತನನ್ನು ನೋಡುತ್ತಲೇ ತನ್ನೊಳಗಿದ್ದ ನೋವನ್ನು ಹೇಳುತ್ತಲೇ ಇದ್ದ.

`ಹಂಗಲ್ಲ ತಿಮ್ಮಪ್ಪ… ನೀನು ಶಿವಪ್ಪನೊಂದ್ಗೆ ಮಾತಾಡ್ತಿಯಂತ ನಿನಗೆ ಮಾತ್ರ ಗೊತ್ತು. ಇದನ್ನ ಜನ ನಂಬ್ಲಿಕ್ಕೆ ಆಗುತ್ತಾ? ಅದ್ರಲ್ಲೂ ಈ ಕಲಿಯುಗ್ದಲ್ಲಿ ದೇವ್ರು ಮಾತಾಡ್ತಾನೆ ಅಂತ ಹೇಳಿದ್ರ ಯಾರಾದ್ರೂ ನಂಬ್ತಾರಾ? ಜನ್ರ ಅಜ್ಞಾನಕ್ಕೆ ನಾನು ಏನ್ ಹೇಳಲಿ… ಹಂಗಾಗಿ ನಿನ್ನಲ್ಲಿರೋ ಶಕ್ತಿ ಅವ್ರಿಗೆ ನೀ ಸತ್ತೋದ್ಮೇಲೂ ಕೂಡ ಗೊತ್ತಾಗ್ಲೆ ಇಲ್ಲ. ನೀನೊಬ್ಬ ಹುಚ್ಚನೆಂದು ತಿಳಿದು ಜನ್ರು ನಿನ್ನನ್ನು ಹೊಡೆದು ಸಾಯಿಸಿದರು. ನಿನ್ನ ಪಾತ್ರಕ್ಕೆ ನಾನು ನ್ಯಾಯ ಕೊಟ್ಟಿರದೇ ಇರಬಹುದು. ಅದು ನಿನ್ನ ದೃಷ್ಟಿಯಲ್ಲಿ ಮಾತ್ರ. ನನ್ನ ದೃಷ್ಟಿಯಲ್ಲಿ ನೀನು ದೇವರೊಂದಿಗೆ ಮಾತನಾಡುವುದೇ ಒಂದು ಭ್ರಮೆ. ನೀನು ಸೃಷ್ಟಿಸಿಕೊಂಡ ಭ್ರಮಾಲೋಕದಲ್ಲಿ ನೀನು ಶಿವನೊಂದಿಗೆ ಮಾತನಾಡುತ್ತಿದ್ದಿ ಅಂತ ಕಲ್ಪನೆ ಮಾಡಿಕೊಳ್ಳುತ್ತಿದ್ದೆಯಷ್ಟೇ..! ನೀನು ಅಂದುಕೊಂಡ ಹಾಗೆ ನಿನ್ನ ಪಾತ್ರವಿಲ್ಲ ತಿಮ್ಮಪ್ಪ… ನೀನು ಮಾತನಾಡುತ್ತಿದ್ದ ಶಿವಪರಮಾತ್ಮನೂ ಕೂಡ ನನ್ನ ಕಲ್ಪನೆಯ ಕೂಸೇ…!’ ಹಂಗಾಗಿ ನಿನ್ನ ಪಾತ್ರಕ್ಕೆ ನಾನೇನು ಅನ್ಯಾಯ ಮಾಡಿಲ್ಲವೆಂದು ಜಿನದತ್ತ ತಿಮ್ಮಪ್ಪನಿಗೆ ಹೇಳಿದ.

`ಇಲ್ಲಿಲ್ಲ… ಇದನ್ನ ನಾ ಒಪ್ಪಂಗಿಲ್ಲ. ನಿಮ್ಮ ಕಲ್ಪನೆಯಂತೆ ಪಾತ್ರಗಳನ್ನ ನೀವ್ ಹೆಂಗ ಬೇಕಾದ್ರೂ ಸೃಷ್ಟಿಸ್ಬೋದು. ಸಾಯ್ಸಬೋದು ಅಂತ ಅನ್ಕೊಂಡ್ರೆ ಆ ಪಾತ್ರಗಳು ಅನುಭವಿಸೋ ನೋವಿನ ಶಾಪ ನಿಮ್ಗೆ ತಟ್ಟದೇ ಇರದು. ನೋಡ್ತಿರು… ನನ್ನನ್ನು ಕತೇಲಿ ಅತ್ಯಂತ ಹೀನಾಯವಾಗಿ ಸಾಯ್ಸಿದ್ದಿ… ನಂಗೆ ಗೊತ್ತಿಲ್ಲ ನೀ ಬರೆದ ಬೇರೆ ಬೇರೆ ಕತೆಗಳಲ್ಲಿ ಯಾವ್ಯಾವ ಪಾತ್ರಗಳನ್ನು ಹುಟ್ಸಿ, ಅವುಗಳ ಮೂಲ್ಕ ಅವುಗಳಿಗೆ ಇಷ್ಟವಿಲ್ದನ್ನ ಅದೆಷ್ಟೋ ಮಾಡ್ಸಿರುವಿಯೋ… ಅವೆಲ್ಲಾ ಪಾತ್ರಗಳು ನಿನ್ನನ್ನು ಕಾಡ್ದೆ ಇರವು. ನಿನ್ ಮಾತಿಂದ ನಾನ್ ಸಮಾಧಾನ ಆಗಿಲ್ಲ. ಈಗ ನಾನ್ ಹೋಗ್ಬೋದು. ನಾ ಮತ್ತೆ ಬರ‍್ತೀನಿ. ನಿನ್ನನ್ನು ಪ್ರಶ್ನೆ ಮಾಡ್ತಾನೇ ಬರ‍್ತೀನಿ… ನನ್ನ ನೆಮ್ಮದಿಯನ್ನ ಕಸಿದುಕೊಂಡ ನಿನ್ನನ್ನು ಮಾತ್ರ ನಾನ್ ಸುಮ್ನೆ ಬಿಡೋದಿಲ್ಲ. ನೋಡ್ತಿರು… ನನ್ನನ್ನ ಸಾಯ್ಸಿದಂತೆ ನಿನ್ನ ಮನಸ್ಸನ್ನ ಕೂಡ ಹಿಡಿಹಿಡಿಯಾಗಿ ಹಿಂಸಿಸಿ ಸಾಯಿಸ್ತೀನಿ, ನೋಡ್ತಿರು’- ಅಂತ ತಿಮ್ಮಪ್ಪ ಜಿನದತ್ತನನ್ನು ನೋಡುತ್ತಾ ಶಪಿಸುತ್ತಲೇ ಇದ್ದ.

ಜಿನದತ್ತ ತಿಮ್ಮಪ್ಪನ ಮಾತುಗಳಿಗೆ ಉತ್ತರಿಸಲು ಧೈರ್ಯ ತೋರಲಿಲ್ಲ. ಕಥೆಗಾರನ ಕಲ್ಪನೆ, ಸ್ವಾತಂತ್ರ್ಯವೇನು ಎಂಬುದು ಆ ಪಾತ್ರಕ್ಕೇನು ಗೊತ್ತು? ಒಂದು ಕತೆಯ ಎಲ್ಲ ಪಾತ್ರಗಳು ಕತೆಗಾರ ಹೇಳಿದಂತೆ ಕೇಳಬೇಕು ಅನ್ನುವ ಸತ್ಯ ಆ ತಿಮ್ಮಪ್ಪನಂತವನಿಗೆ ಎಲ್ಲಿ ತಾನೇ ಅರ್ಥವಾಗಬೇಕು. ಅವನಿಗೆ ಇದನ್ನು ಬಿಡಿಸಿ ಹೇಳಿದರೂ ಅರ್ಥ ಮಾಡಿಕೊಳ್ಳುತ್ತಾನೆಯೇ? ಅವನೊಬ್ಬ ಶುದ್ಧ ಶತದಡ್ಡ. ತಾನು ಹುಟ್ಟಿಸಿದ ನನ್ನ ಕಲ್ಪನೆಯ ಕೂಸು ಅಲ್ಲವೇ? ಮಾತನಾಡಲಿ ಬಿಡಿ. ಸಿಟ್ಟು, ಆಕ್ರೋಶ, ತಳಮಳ ಜಿಗುಪ್ಸೆ, ಅಸೂಹೆ ಇವೇ ತಾನೇ ಪ್ರತಿಪಾತ್ರದ ಹಿಂದಿನ ಶಕ್ತಿಗಳು. ಆ ದಿನ ಬಂದು ತನ್ನ ಪಾತ್ರವನ್ನು ಪ್ರಶ್ನಿಸಿದ್ದ ತಿಮ್ಮಪ್ಪನನ್ನು ಜಿನದತ್ತ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ನಿನ್ನೊಂದಿಗೆ ನಾನು ಮಾತನಾಡಲಾರೆ ಅಂತ ಹೇಳಿ ಜಿನದತ್ತ ಕಿಟಕಿಯತ್ತ ಮುಖಮಾಡಿ ನಿಧಾನವಾಗಿ ಕಣ್ಣುಮುಚ್ಚಿದ. ತಿಮ್ಮಪ್ಪ ಮಾತ್ರ ನಿಸ್ಸಾಯಕತೆಯಿಂದ ಜಿನದತ್ತನನ್ನು ನೋಡುತ್ತಲೇ ಇದ್ದ. ತನ್ನ ನೋವನ್ನು ಕತೆಗಾರನೂ ಕೂಡ ಅರ್ಥ ಮಾಡಿಕೊಳ್ಳಲಿಲ್ಲವೆಂದು ಆ ಪಾತ್ರವೂ ವ್ಯಥೆ ಪಡುತ್ತಲೇ ಇತ್ತು.

*****

ಮುಂಜಾನೆ ಏಳರ ಸಮಯ. ಆಗಷ್ಟೇ ಸೂರ್ಯನ ಬೆಳಕು ಆಗಸವನ್ನು ಏರುತ್ತಿತ್ತು. ಮುಂಜಾನೆ ಬೇಗ ಎದ್ದಿದ್ದ ಜಿನದತ್ತನಿಗೆ ಸಣ್ಣಗೆ ನಿದ್ದೆ ಏರಿತ್ತು. ಬಸ್ ಆಗಲೇ ಪ್ರಯಾಣದ ಹಾದಿಯಲ್ಲಿತ್ತು. ಕಂಡಕ್ಟರ್ ಬಂದು ಎಬ್ಬಿಸಿದಾಗಲೇ ತಾನು ಹೋಗುತ್ತಿರುವ ಕೆಲಸ ನೆನಪಾಯಿತು. ಬಸ್‌ನ ತುಂಬಾ ಆಗಲೇ ಜನರು ತುಂಬಿದ್ದರು. ಎದ್ದವನೇ ಮೊದಲು ಪಕ್ಕದ ಸೀಟಿನಲ್ಲಿ ಕೂತಿದ್ದ ವ್ಯಕ್ತಿಯ ಕಡೆಗೆ ಕಣ್ಣುಗಳು ಮೊದಲು ಜಾರಿದವು. ಗಂಟೆಯ ಹಿಂದೆ ತನ್ನನ್ನು ಪ್ರಶ್ನಿಸಿದ್ದ ತಿಮ್ಮಪ್ಪ ಅಲ್ಲಿ ಕೂತಿರಲಿಲ್ಲ. ಹೊಸದಾಗಿ ಮದುವೆಯಾದಂತಿದ್ದ ಒಂದು ಜೋಡಿ ಪಕ್ಕದ ಸೀಟಿನಲ್ಲಿ ಕೂತು ತಮ್ಮದೇ ಮಾತಿನ ಲೋಕದಲ್ಲಿ ಮುಳುಗಿದ್ದರು. ಜಿನದತ್ತನಿಗೆ ತಿಮ್ಮಪ್ಪ ಇದೇ ಬಸ್‌ನಲ್ಲಿ ಎಲ್ಲಿಯಾದರೂ ಕೂತಿದ್ದಾನೆಯೇ ಅಂತ ಅನುಮಾನ ಹುಟ್ಟಿ, ಎದ್ದು ನಿಂತು ಬಸ್‌ನಲ್ಲಿ ಕೂತಿದ್ದವರ ಮೇಲೆ ಕಣ್ಣಾಡಿಸಿದ. ಎಲ್ಲಿಯೂ ತಿಮ್ಮಪ್ಪ ಕಾಣಲಿಲ್ಲ. ಅವನ ಚಿಂತೆ ಅಲ್ಲಿಗೆ ಮುಗಿಯಿತು ಅಂತ ಅಂದುಕೊಳ್ಳುವ ಹಾಗಿರಲಿಲ್ಲ. ಜಿನದತ್ತನಿಗೆ ತನ್ನ ಕಥೆಗಳಲ್ಲಿ ವಡ್ಡರ ತಿಮ್ಮಪ್ಪನಿಗೆ ಮಾಡಿದ ಅನ್ಯಾಯದಂತೆ ಇನ್ನೂ ಯಾವ ಯಾವ ಪಾತ್ರಗಳು ಬಂದು ತನ್ನನ್ನು ಕಾಡಬಹುದು ಅನ್ನುವ ಅಳುಕು ಶುರುವಾಗತೊಡಗಿತು.

ತನ್ನ ಮಗನೊಂದಿಗೆ ದೇಹಸಂಬಂಧವನ್ನು ಹೊಂದುವ ಲಲಿತಾದೇವಿ ನನ್ನನ್ನು ಕಾಡದೇ ಇರಲಾರಳು. ಅವಳಿಗೆ ತನ್ನ ಮಗನೆಂದು ಗೊತ್ತಿದ್ದರೂ, ಕಾಮದ ಹಸಿವನ್ನು ನಿಯಂತ್ರಿಸಲಾಗದೇ ಸೋತುಹೋಗುವ ಮಗನ ಜೊತೆ ಸುಖವನ್ನು ಅನುಭವಿಸುವ ಲಲಿತಾದೇವಿಯ ಪಾತ್ರ ನನ್ನ ಮಾನಸಿಕ ವಿಕಾರತೆಯಂತೆ ಕಂಡರೂ ಅವಳ ನಿಸ್ಸಾಹಯಕತೆಯನ್ನು ಕತೆಯುದ್ದಕ್ಕೂ ಚಿತ್ರಿಸಿ, ಸಿಕ್ಕ ಸಿಕ್ಕ ಹೆಣ್ಣುಗಳನ್ನು ಅನುಭವಿಸುವ ವಿಕೃತಕಾಮಿಯಂತಿದ್ದ ಮಗನ ಪರಿವರ್ತನೆಯನ್ನು ಮಾಡಲಿಕ್ಕೆ ತನ್ನ ದೇಹತ್ಯಾಗಕ್ಕಿಂತ ಬೇರೆ ದಾರಿ ಕಾಣದೇ ಕೊರಗುವ ಮನಸ್ಸು ಆಕೆಯದ್ದು. ಅವಳು ಮಾಡಿದ ತಪ್ಪನ್ನು ಮರೆಮಾಚುವಂತೆ ಕಥೆಯಲ್ಲಿ ಮಾಡಿದ್ದೇನೆ. ಆದರೆ ಆಕೆಗೆ ತನ್ನ ಮಗನೊಂದಿಗೆ ಸಂಬಂಧವನ್ನು ಕಟ್ಟಿಕೊಂಡ ಅಪವಾದ ಅಂಟಿತಲ್ಲ, ಓದುಗರು ತನ್ನನ್ನು ಎಷ್ಟು ದೂಷಿಸಬಹುದು ಅನ್ನುವುದು ಕಾಡದೇ ಇರದು. ಅವಳು ಎಂದು ಬರುವಳೋ, ನನ್ನನ್ನು ಪ್ರಶ್ನಿಸುವಳೋ…?

ಒಬ್ಬ ಕಥೆಗಾರನಾಗಿ ನನ್ನ ಪಾತ್ರಗಳನ್ನು ಹೇಗೆ ಬೇಕಾದರೂ ಸಂದರ್ಭಕ್ಕೆ ತಕ್ಕ ಹಾಗೆ ಬಳಸಿಕೊಂಡು ಓದುಗರ ಅಂತರಾಳವನ್ನು ಸೇರುವ ಪ್ರಯತ್ನವನ್ನು ನಾನು ಮಾಡಲಿಕ್ಕೆ ಶ್ರಮಿಸಿದ್ದನೇ ಹೊರತೂ, ನನ್ನ ಸ್ವಾರ್ಥವನ್ನು, ಆಕ್ರೋಶವನ್ನ, ಒಳಗಿನ ಕೊಳಕನ್ನು ಪಾತ್ರಗಳ ಮೂಲಕ ಹೇಳುತ್ತಾ ಓದುಗರ ಮೇಲೆ ಪ್ರಯತ್ನವನ್ನು ಹೇರಿ ಕತೆಗಳನ್ನು ಮೆಚ್ಚುವಂತೆ ಮಾಡಿದರೂ, ಕತೆಗಾರನ ಜವಾಬ್ದಾರಿಯನ್ನು ನಾನು ಮರೆತಿಲ್ಲ ಅನ್ನುವುದು ಜಿನದತ್ತನ ಆಂತರ್ಯದ ವಾದವಾಗಿತ್ತು. ಪ್ರತಿ ಕತೆಯ ಮೂಲಕವೂ ಕಥನ ಸಂವಿಧಾನವನ್ನು ಮುರಿಯುವಂತಹ ಪ್ರಯತ್ನವನ್ನು ನಾನು ಮಾಡಿದ್ದರೂ, ಇದನ್ನು ಇನ್ನೊಬ್ಬ ಕಥೆಗಾರ ಮಾತ್ರ ನನ್ನ ಕಥನಕಲೆಯನ್ನು ಅರ್ಥ ಮಾಡಿಕೊಳ್ಳಬೇಕಿತ್ತಷ್ಟೇ. ಹಾಗಾಗಿಯೇ ನನ್ನ ಪಾತ್ರಗಳು ಜನರಿಗೆ ಇಷ್ಟವಾಗುತ್ತವೆ, ಚಿಂತೆಗೆ ಈಡು ಮಾಡುತ್ತವೆ, ಕಣ್ಣೀರು ಹಾಕುತ್ತವೆ, ತಮ್ಮ ನಿಸ್ಸಾಹಯಕತೆಯನ್ನು ತೋರ್ಪಡಿಸುತ್ತವೆ. ಇದನ್ನೇ ತಾನೇ ವಿಮರ್ಶಕರು ನನ್ನ ಕತೆಗಳಲ್ಲಿನ ವೈಶಿಷ್ಟ್ಯತೆಯನ್ನು ಗುರುತಿಸುತ್ತಿದ್ದುದು.

*****

ಚನ್ನರಾಯಪಟ್ಟಣದಲ್ಲಿ ಸಾಧ್ಯವಾದಷ್ಟು ಬೇಗ ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ರಾತ್ರಿ ಶ್ರವಣಬೆಳಗೊಳಕ್ಕೆ ಸೇರಬೇಕು ಅನ್ನುವುದು ಜಿನದತ್ತನ ಯೋಜನೆಯಾಗಿತ್ತು. ಅದರಂತೆಯೇ ಚನ್ನರಾಯಪಟ್ಟಣದ ಸುತ್ತಲಿನ ಐದಾರು ಹಳ್ಳಿಗಳನ್ನು ಸುತ್ತುವರೆದು ರಾತ್ರಿ ಶ್ರವಣಬೆಳಗೊಳಕ್ಕೆ ಬಂದು ಸೇರಿದಾಗ ಹನ್ನೊಂದು ಗಂಟೆಯಾಗಿತ್ತು. ಹಗಲಲ್ಲಿ ಬಂದು ಕಾಡಿದ್ದ ಪಾತ್ರವೇನಾದರೂ ರಾತ್ರಿ ಮತ್ತೆ ಬರಬಹುದು ಅನ್ನುವ ನಿರೀಕ್ಷೆಯಲ್ಲಿದ್ದ ಜಿನದತ್ತನಿಗೆ ಆ ರಾತ್ರಿ ಯಾರೂ ಬಂದು ತನ್ನನ್ನು ಪ್ರಶ್ನಿಸಲಿಲ್ಲ, ಮಾತನಾಡಿಸಲಿಲ್ಲ. ಆ ರಾತ್ರಿ ಗಾಢ ನಿದ್ದೆಗೆ ಶರಣಾಗಿದ್ದ ಆತ ಮುಂಜಾನೆಯ ಬೆಳಕನ್ನ ಎದ್ದು ನೋಡುವಷ್ಟರಲ್ಲಿ ಸುಮಾರು ಹನ್ನೊಂದು ಗಂಟೆಯಾಗಿತ್ತು. ಕಿಟಕಿ ತೆರೆದು ಸೂರ್ಯನನ್ನು ನೋಡಿದಾಗಲೂ ತನ್ನೊಳಗೆ ಕಾಡುತ್ತಿದ್ದ ಆ ಚಿಂತೆಗಳು ಮಾತ್ರ ಮತ್ತೆ ಮತ್ತೆ ನೆನಪಾಗುತ್ತಲೇ ಇದ್ದವು. ತನ್ನೊಳಗಿದ್ದ ಕಥೆಗಾರ ಇದ್ದಿದ್ದರೆ ತಾನು ಸೃಷ್ಟಿಸಿದ ಪಾತ್ರಗಳಿಗೆ ಇನ್ನಷ್ಟು ಗಟ್ಟಿಯಾಗಿ ಉತ್ತರ ಕೊಡುತ್ತಿದ್ದನೋ ಏನೋ? ಆದರೆ ಇಂದು ಅವನಿರದೆ, ಅವನಿದ್ದಾನೆ ಎಂಬ ಹುಸಿ ನಂಬಿಕೆಯಲ್ಲಿ ಉತ್ತರ ಕೊಟ್ಟರೂ, ಸಮಂಜಸವೆನಿಸುತ್ತಿಲ್ಲ. ಉತ್ತರವನ್ನು ಒಪ್ಪಿಕೊಳ್ಳುವಂತಿಲ್ಲ. ಏನು ಮಾಡುವುದು, ಅವನು ಬರುವವರೆಗೂ ಈ ದಿನಗಳನ್ನು ನೂಕಲೇಬೇಕು, ತೇಲಿಸಿಕೊಂಡು ಹೋಗಲೇಬೇಕು. ಕಥೆಗಾರನಾಗಿ ಬದುಕಿದ ಮೇಲೆ ಈ ರೀತಿಯ ಬದುಕನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕು ಅನ್ನುವುದು ಅವನು ಕಂಡುಕೊಂಡ ಸತ್ಯವಾಗಿತ್ತು.

ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಜಿನದತ್ತ ಬೆಟ್ಟವನ್ನು ತಲುಪಿ ಅಲ್ಲಿದ್ದ ಮುನಿಗಳಿಗೆ ಹಣ್ಣುಹಂಪಲು ನೀಡಿ ಆಶೀರ್ವಾದ ಪಡೆದು ಎಂದಿನಂತೆ ತನಗೆ ಸದಾ ಪ್ರೇರಣೆ ನೀಡುತ್ತಿದ್ದ ಬಾಹುಬಲಿಯ ಮಂದಹಾಸವನ್ನು ನೋಡುತ್ತಾ ಕುಳಿತುಬಿಟ್ಟ. ಬಾಹುಬಲಿಯ ಮುಖದಲ್ಲಿನ ಮಂದಹಾಸ ತನ್ನ ಬದುಕಿಗೊಂದು ಭರವಸೆಯನ್ನು ನೀಡುತ್ತದೆ ಅಂತಲೇ ಪ್ರತಿ ತಿಂಗಳೂ ಆತನ ಮುಂದೆ ಗಂಟೆಗಟ್ಟಲೇ ಕೂತು ಅವನನ್ನು ನೋಡುತ್ತಾ ಬದುಕಿನ ಉತ್ಸಾಹವನ್ನು ತುಂಬಿಕೊಳ್ಳುತ್ತಿದ್ದ.

ಆ ದಿನ ಬಾಹುಬಲಿಯ ಕಣ್ಣುಗಳು ಆಕರ್ಷಕವಾಗಿ ಹೊಳೆಯುತ್ತಿದ್ದವು. ಮುಖದಲ್ಲಿನ ಮಂದಹಾಸ ನೂರ್ಮಡಿಯಾಗಿತ್ತು. ಗುಡುಗು ಸಿಡಿಲು ಮಳೆ ಗಾಳಿಗೆ ಅಂಜದೇ ಗಟ್ಟಿಯಾಗಿ ಹೆಬ್ಬಂಡೆಯಂತೆ ನಿಂತಿದ್ದ ಬಾಹುಬಲಿಯ ಹಿಂದಿನ ಕತೆ ಮತ್ತು ಜೈನ ಪುರಾಣಗಳ ಕತೆಗಳನ್ನು ಆಳವಾಗಿ ಓದಿಕೊಂಡಿದ್ದ ಜಿನದತ್ತ, ಪ್ರತಿ ಕತೆಯ ಪಾತ್ರಗಳ ಕಲ್ಪನೆಯನ್ನು ಬಾಹುಬಲಿಯನ್ನು ನೋಡುತ್ತಲೇ ಸೃಷ್ಟಿಸುತ್ತಿದ್ದ. ಅಂದು ಕೂಡ ಅದೇ ದೃಷ್ಟಿಯನ್ನಿಟ್ಟುಕೊಂಡು ಶ್ರವಣಬೆಳಗೊಳಕ್ಕೆ ಬಂದಿದ್ದ ಆತ ಬಾಹುಬಲಿಯನ್ನು ಆರ್ತನಾಗಿ, ಆಪ್ತತೆಯಿಂದ ನೋಡುತ್ತಾ ತನ್ನೊಳಗಿದ್ದ ಕತೆಗಾರನನ್ನು ಪುನಃ ಬಂದು ಸೇರುವಂತೆ ಮಾಡು ಎಂದು ನಿರ್ಲಿಪ್ತವಾಗಿ ಬೇಡುತ್ತಿದ್ದ. ಬಾಹುಬಲಿಯ ದೃಷ್ಟಿ ಎಂದಿನಂತೆ ಲೋಕದ ಜನರ ಮೇಲಿದ್ದಂತೆ ತೋರುತ್ತಿತ್ತು. ಅವನ ಅಂತರಾಳ ಬಾಹುಬಲಿಯ ಮಂದಹಾಸವನ್ನು ಆಸ್ವಾದಿಸುತ್ತಲೇ ಇತ್ತು.

*****

`ಜಿನದತ್ತನ ಕಥೆಗಳು’ ಸಂಕಲನ ಆಗಲೇ ಹತ್ತು ಮುದ್ರಣಗಳನ್ನು ಕಂಡಿತ್ತು. ಹೊಸಪ್ರಕಾಶಕರ ಜೊತೆ ಮಾತುಕತೆ, ದೆಹಲಿಯಲ್ಲಿ ನಡೆಯಲಿದ್ದ ರಾಷ್ಟ್ರೀಯ ಸಾಹಿತ್ಯ ಸಮ್ಮೇಳನಕ್ಕೆ ಹೋಗುವುದು, ತನ್ನ ಗುರುಗಳಾದ, ಹಿರಿಯ ಸಾಹಿತಿ ಬೆಳವಲು ಸತ್ಯನಾರಾಯಣ ಶೆಣೈಯವರ ಅಭಿನಂದನಾ ಗ್ರಂಥಕ್ಕೆ ಮುನ್ನುಡಿ ಬರೆಯುವುದು, `ನೀ ಮಾಯೆಯೊಳಗೋ’ ಕತೆಯ ಹಕ್ಕನ್ನು ಪಡೆದು ಸಿನಿಮಾ ಮಾಡಲು ಅನುಮತಿಗಾಗಿ ಕಾಯುತ್ತಿದ್ದ ಮಾಲ್ಗಾಡಿ ಫಿಲಂ ಪ್ರೊಡಕ್ಷನ್ ಹೌಸ್ ಅವರ ಜೊತೆ ಮಾತುಕತೆ ಮಾಡುವುದು, ಹೀಗೆ ಇನ್ನು ಹಲವು ಕೆಲಸಗಳು ಸಾಲುಸಾಲಾಗಿ ಜಿನದತ್ತನಿಗೆ ಕಾಯುತ್ತಿದ್ದವು.

ಜಿನದತ್ತನಿಗೆ ತನ್ನ ಸಮಸ್ಯೆ ಅರಿವಾಗಿತ್ತು. ಮತ್ತೆ ತಾನು ಕಥೆಗಾರನಾಗುತ್ತೇನೆ ಎಂಬ ಸ್ಫೂರ್ತಿ ಬದುಕುವ ಧೈರ್ಯ ನೀಡಿತು. ಕಥೆಗಾರನ ಆಗಮನಕ್ಕಾಗಿ ಜಿನದತ್ತ ಉಸಿರುಹಿಡಿದುಕೊಂಡು ಮತ್ತೆ ಬರುವನು ಎಂಬ ನಿರೀಕ್ಷೆಯಲ್ಲಿ ಕಾಯತೊಡಗಿದ್ದ. ಆತ ಎಲ್ಲಿರುವನೋ ಯಾವ ಅನುಭವವನ್ನು ಇಟ್ಟುಕೊಂಡು ಮತ್ತೆ ಬರುವನೋ..! ಅನ್ನುವ ಪ್ರಶ್ನೆಗಳು ಸದಾ…
ಪ್ರಸಿದ್ಧ ಕತೆಗಾರ ಜಿನದತ್ತ ಉಪಾಧ್ಯಾಯನ ಮುಂದಿನ ಕಥೆ ಇನ್ನೂ ಬರಬೇಕಿದೆ.

*****

ಒಬ್ಬ ಕತೆಗಾರನ ಮನಸ್ಸನ್ನು ಇನ್ನೊಬ್ಬ ಕತೆಗಾರ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಒಂದು ಕತೆಯನ್ನು ಬರೆಯುವಾಗಿನ ಆತನ ಮನಸು ಶೂನ್ಯಸ್ಥಿತಿಯನ್ನು ಅನುಭವಿಸಿ, ಬರೆಯುವಾಗ ಧ್ಯಾನಸ್ಥ ಸ್ಥಿತಿಯನ್ನು ಹೊಂದುತ್ತದೆ. ಪ್ರತಿ ಕತೆಯ ಹಿಂದೆ ಆತ ನೋವು, ಸಂತಸ, ಹತಾಶೆ ಇನ್ನು ಹಲವು ತುಮುಲಗಳನ್ನು ಅನುಭವಿಸಿ ಒಂದು ಕತೆಯನ್ನು ಬರೆಯಲಿಕ್ಕೆ ಸಿದ್ಧತೆ ಮಾಡಿಕೊಂಡಿರುತ್ತಾನೆ. ಪ್ರತಿ ಕತೆಗಾರನ ಒಳಗೆ ಒಬ್ಬ ಕತೆ ಹೇಳುವವನು ಇದ್ದೇ ಇರುತ್ತಾನೆ, ಕೆಲಮೊಮ್ಮೆ ಆ ಕತೆ ಹೇಳುವವನೇ ಶೂನ್ಯನಾಗಿಬಿಟ್ಟರೆ ಕತೆಯನ್ನು ಹೆಣೆಯಲಾದೀತೆ? ಹೇಳಲಾದೀತೇ? ಹೀಗೆ ಒಬ್ಬ ಕತೆಗಾರನೊಬ್ಬನ ಕಥೆಯನ್ನು ಹೇಳಬೇಕೆಂದುಕೊಂಡ ನನ್ನ ಪ್ರಯತ್ನವೇ `ಜಿನದತ್ತನೆಂಬ ಕತೆಗಾರನೂ…’
ಜಿನದತ್ತನೆಂಬ ಕಥೆಗಾರನೊಳಗೆ ಇರುವ ಕಥೆ ಹೇಳುವವನು ಕಾಣೆಯಾದಾಗಿನ ಘಟನೆಯನ್ನು ಇಟ್ಟುಕೊಂಡು, ಕಥೆಯೊಳಗೆ ಕಥೆಯನ್ನು ಹೆಣೆಯುವ ಪ್ರಯತ್ನ ಇದಾಗಿದೆ. ಇದುವರೆಗೆ ಓದಿದ ಕಥೆಗಳ ಪರಿಧಿಯನ್ನು ಬಿಟ್ಟು ಹೊಸದಾಗಿ ನಾವು ಯೋಚನೆ ಮಾಡಲು ಈ ಕಥೆ ನಮಗೆ ಉದಾಹರಣೆಯಾಗುತ್ತದೆ ಅಂತ ಅನೇಕ ಓದುಗರು ತಿಳಿಸಿದ್ದನ್ನು ಈ ಕ್ಷಣ ನೆನಪಿಸಿಕೊಳ್ಳುತ್ತೇನೆ. ಹಾಗಾಗಿ ನನ್ನ ಅಚ್ಚುಮೆಚ್ಚಿನ ಕತೆಗಳಲ್ಲಿ `ಜಿನದತ್ತನೆಂಬ ಕಥೆಗಾರನೂ…’ ಮೊದಲ ಸ್ಥಾನದಲ್ಲಿದೆ. ಈ ಕಥೆಯನ್ನು ನನ್ನ ಆತ್ಮೀಯ ಕಥೆಗಾರ ಮಿತ್ರರೂ ಕೂಡ ಓದಿ ಇಷ್ಟಪಟ್ಟು ಇದರ ಬಗ್ಗೆ ಮಾತನಾಡಿದ್ದರು. ಜಿನದತ್ತನೆಂಬ ಕಥೆಗಾರನ ಮೂಲಕ ಒಬ್ಬ ಲೇಖಕನ ಅಂತರಾಳವನ್ನು ತೆರೆದಿಡುವ ವಿನೂತನ ಪ್ರಯತ್ನ ಇದಾಗಿದೆ. ಎಲ್ಲರ ಅಚ್ಚುಮೆಚ್ಚಿನ ಕಥೆ ನನ್ನ ಮೂರನೇ ಸಂಕಲನ `ಬ್ರಿಟಿಷ್ ಬಂಗ್ಲೆ’ ಸಂಕಲನದಲ್ಲಿ ಪ್ರಕಟವಾಗಿದೆ.