“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ ಅವರವರ ಗುಣಾವಗುಣಗಳಿಂದ, ವ್ಯಕ್ತಿತ್ವದಿಂದ ನಿರ್ಧಾರವಾಗುವಂತದ್ದು ಎಂಬುದನ್ನು ಮನಗಾಣುತ್ತಾನೆ. “ಇದುವರೆಗೆ ನಿಮ್ಮ ಮೇಲಾದ ವಿವಿಧ ರೀತಿಯ ದೌರ್ಜನ್ಯಗಳಿಗೆ ನಾವು ಹೊಣೆಯಾಗಿದ್ದು, ಇದರಿಂದ ನನಗೆ ನಾಚಿಕೆ ಬರುತ್ತಿದೆ, ನಿಮಗೆ ಮುಂದೆ ನಮ್ಮಿಂದ ಯಾವ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ” ಎಂದು ಹೇಳುತ್ತಾನೆ.
ಈರಣ್ಣ ಬೆಂಗಾಲಿ ಕಾದಂಬರಿ “ಭೂಮಿ”ಯ ಕೆಲವು ಪುಟಗಳು ನಿಮ್ಮ ಓದಿಗೆ
ಬೆಳಗಾಗುತ್ತಲೇ ಹುಣಸೆ ಹಣ್ಣನ್ನು ಕೀಳಿದ ಸಲುವಾಗಿ ಹೊಡೆಸಿಕೊಂಡ ಮಕ್ಕಳಲ್ಲಿ ಒಂದು ಮಗು ಸತ್ತೇ ಹೋಗುತ್ತದೆ! ಉಳಿದ ಮಕ್ಕಳು ಜ್ವರದಿಂದ ಬಳಲುತ್ತಿದ್ದರು. ಮೊದಲೇ ಹೊಟ್ಟೆ ತುಂಬಾ ಅನ್ನ ನೀರಿಲ್ಲದೇ ಬಳಲುವ ಮಕ್ಕಳಿಗೆ, ಯದ್ವಾ ತದ್ವಾ ಬಡಿದರೆ ಅದಕ್ಕೆ ಹೊಡೆತ ತಾಳಿಕೊಳ್ಳುವ, ಸಹಿಸಿಕೊಳ್ಳುವ ಶಕ್ತಿಯಾದರು ಎಲ್ಲಿರುತ್ತದೆ? ಅಳುತ್ತಲೇ “ಮಡಿಲು ಬರಿದಾಯಿತಲ್ಲ” ಎಂದು ಹೆತ್ತ ತಾಯಿ ಒಂದೇ ಸಮನೇ ಗೋಳಾಡುತ್ತಲೇ ಇದ್ದಳು. ಹೆತ್ತ ಮಗು ಕಣ್ಣ ಮುಂದೆಯೇ ಮಣ್ಣಲ್ಲಿ ಮಣ್ಣಾಗುತ್ತಿರುವುದನ್ನು ಕಂಡು ಜೋರಾಗಿ ರೋಧಿಸುತ್ತಿದ್ದಳು, ಆ ತಾಯಿಯ ರೋಧನ ಮುಗಿಲು ಮುಟ್ಟುತ್ತಿತ್ತು. ದೇವರಿಗೆ ಹಿಡಿಶಾಪ ಹಾಕುತ್ತಿದ್ದಳು. ‘ಅಸ್ಪೃಶ್ಯತೆಯು ನನ್ನ ಮಗನನ್ನು ನುಂಗಿಬಿಟ್ಟಿತಲ್ಲ’ ಎಂದು ಮರುಗಿದಳು. ದಿನವೂ ತಮ್ಮ ಮಗನ ನೆನಪಿನಲ್ಲೇ ಕಾಲ ಕಳೆಯುತ್ತಿರುವಾಗಲೇ, ತುಂಬಾ ಪ್ರೀತಿಸುತ್ತಿದ್ದ ಪುಟ್ಟ ಮಗನ ಅಸಹಜ, ಅಕಾಲಿಕ ಮರಣ ತಾಯಿಯನ್ನು ಮಾನಸಿಕ ಅಸ್ವಸ್ಥಳನ್ನಾಗಿ ಮಾಡಿಬಿಡುತ್ತದೆ. ಹುಚ್ಚಿಯಂತೆ ವರ್ತಿಸ ತೊಡಗುತ್ತಾಳೆ. “ನಾವು ಮನುಷ್ಯರಲ್ಲ, ನಮಗೆ ಮಕ್ಕಳು ಬೇಕಾಗಿಲ್ಲ” ಎಂದು ಏನೇನೋ ಒದರುತ್ತಾ, ಕೂಗಾಡುತ್ತಾ ಅಡ್ಡಾಡುತ್ತಿರುತ್ತಾಳೆ. ಇದನ್ನು ಕಂಡ ಮೇಲ್ಜಾತಿಯವರಿಗೆ ಕೊಂಚವೂ ಮನಕಲುಕಲಿಲ್ಲ!!
ಈ ಘಟನೆಯ ನಂತರ ಇಂತಹುದೇ ಒಂದು ಘಟನೆ ಸಂಭವಿಸಿತು. ಊರಾಚೆ ಇರುವ ಆ ತಾಯಿಗೆ ಹಸಿವಿನಿಂದ ತಾಳಲಾರದೇ ಇರುವ ಪುಟ್ಟ ಹಸುಗೂಸಿನ ಹಸಿವನ್ನು ತಣ ಸಲು ಆಗುತ್ತಿರಲಿಲ್ಲ. ಸರಿಯಾಗಿ ಊಟ, ಪೌಷ್ಠಿಕ ಆಹಾರವಿಲ್ಲದೇ ಆ ತಾಯಿಯ ಎದೆಯಲ್ಲಿ ಹಾಲು ಜಿನುಗುತ್ತಿರಲಿಲ್ಲ. ಹೀಗಿರುವಾಗ ಮಗು ಹಸಿವಿನಿಂದ ಒಂದೇ ಸಮನೇ ಅಳುತ್ತಲಿತ್ತು. ಇಂತಹ ಪರಿಸ್ಥಿತಿಯಲ್ಲಿ ಪುಟ್ಟ ಕಂದಮ್ಮನಿಗೆ ಎದೆಹಾಲು ಬೇಕೆ ವಿನಃ, ಆಹಾರ ನೀಡಿದರೆ ಸೂಕ್ತವಲ್ಲವಾದ್ದರಿಂದ ಹಾಲಿಗಾಗಿ ಊರ ಗಡಿಯಲ್ಲಿ ಇರುವ ಮನೆಯ ಮುಂದೆ ದೂರದಿಂದಲೇ ನಿಂತು “ಮಗು ಹಸಿದಿದೆ, ಮಗುವಿಗೆ ಹಾಲುಬೇಕಾಗಿದೆ. ಸ್ವಲ್ಪ ಹಸುವಿನ ಹಾಲು ಕೊಡಮ್ಮ” ಎಂದು ಮನೆಯವರಿಗೆ ಬೇಡಿಕೊಂಡಳು. ಇದನ್ನು ಕೇಳಿದ ಮನೆಯ ಗೌಡತಿ ಹೊರಗೆ ಬಂದು “ಏನು ನಮ್ಮ ಮನೆ ಮುಂದೆ ಬಂದಿಯಲ್ಲ, ಹೋಗ್ ಹೋಗ್, ನಿಂಗಿಲ್ಲಿ ಏನೂ ಸಿಗೊಲ್ಲ, ಹಾಲು ಎರೆಯಲು ಬೇಕಂತೆ ಹಾಲು. ಇವತ್ತು ನಾಗರಪಂಚಮಿ ಹಬ್ಬ ಐತೆ. ಹುತ್ತಕ್ಕೆ ಹಾಲು ಹಾಕಲು ನಮಗೇ ಹಾಲಿಲ್ಲ. ಇನ್ನೂ ನಿನ್ನಗೆಲ್ಲಿಂದ ಕೊಡೋದು? ಆ ಮಗುವಿನ ಕರ್ಕಶ ಅಳು ಕೇಳಕೆ ಆಗ್ತಿಲ್ಲ, ಮೊದಲು ಇಲ್ಲಿಂದ ತೊಲಗು” ಎಂದು ಹೇಳಿ ‘ಧಡ್’ ಅಂತ ಜೋರಾಗಿ ಬಾಗಿಲು ಹಾಕಿಕೊಳ್ಳುತ್ತಾಳೆ, ಆ ಮನೆಯ ಅಂಗಳದಲ್ಲಿದ್ದ ದನದ ಕೊಟ್ಟಿಗೆಯ ಕಡೆ ಆ ತಾಯಿಯ ಗಮನ ಹೋಗುತ್ತದೆ. ಅಲ್ಲಿ ಹಸುವನ್ನು ಕಾಣುತ್ತಾಳೆ. ತಕ್ಷಣ ಆಕೆ ಏನೂ ಯೋಚನೆ ಮಾಡದೇ, ಹಸುವಿನ ತುಂಬಿದ ಕೆಚ್ಚಲಿಗೆ ತನ್ನ ಪುಟ್ಟ ಕಂದಮ್ಮಳನ್ನು ಹಿಡಿಯುತ್ತಾಳೆ. ಮಗು ಹಾಲು ಕುಡಿಯುತ್ತದೆ. ಹೊಟ್ಟೆ ತುಂಬುತ್ತದೆ. ಮಗು ಅಳು ನಿಲ್ಲಿಸುತ್ತದೆ. ಆಗ ತಾನೆ ಹೊರಗಿನಿಂದ ಬಂದ ಆ ಮನೆಯ ಯಜಮಾನ ಬಸಪ್ಪಗೌಡ ಇದನ್ನು ಗಮನಿಸಿದ. “ಹೇ.. ಯಾರು ನೀನು? ಎಷ್ಟು ಧೈರ್ಯ ನಿನಗೆ, ನಮ್ಮ ಹಸುವಿನ ಹಾಲನ್ನು ಮಗುವಿಗೆ ಕೆಚ್ಚಲಿನಿಂದ ನೇರವಾಗಿ ಕುಡಿಸಕತಿದಿಯಲ್ಲ” ಎಂದು ದಬಾಯಿಸುತ್ತಾನೆ. “ಕೂಸಿಗೆ ಹಾಲು ನನ್ನ ಹತ್ರ ಹಾಲು ಇರಲಿಲ್ಲ. ಅದ್ಕೆ ಹಿಂಗ್ ಮಾಡ್ದೆ, ನನ್ನ ಕ್ಷಮಿಸಿ ಬುದ್ಧಿ” ಎಂದು ಕೂಸಿನ ತಾಯಿ ಹೇಳಿದಳು. ಕೋಪಗೊಂಡ ಬಸ್ಸಪ್ಪಗೌಡನು ಇದಕ್ಕೆ ಶಿಕ್ಷೆಯಾಗಿ ಅವಳನ್ನು ಅದೇ ದನದ ಕೊಟ್ಟಿಗೆಯಲ್ಲೇ ಹುಲ್ಲಿನ ಮೇಲೆ ಮಲಗಿಸಿ ಬಲವಂತವಾಗಿ ಬಳಸಿಕೊಳ್ಳುತ್ತಾನೆ. ಇಲ್ಲಿ ಅವಳ ಜಾತಿ ಅಡ್ಡ ಬಂದಿರುವುದಿಲ್ಲ! ಅನುಭವಿಸಿದ ಮೇಲೆ “ಹೇಳಿ ಕಳಿಸಿದಾಗಲೆಲ್ಲಾ ರಾತ್ರಿ ದನದ ಕೊಟ್ಟಿಗೆಗೆ ಬರಬೇಕು” ಎಂದು ಹೇಳಿ ಕಳಿಸುತ್ತಾನೆ. “ಹಾಲಿಲ್ಲ” ಎಂದು ಬೈದು ಕಳಿಸಿದ ಆ ಮನೆಯ ಗೌಡತಿಗೆ ಇದೆಲ್ಲಾ ಕೇಳಿಸುತ್ತಿರುತ್ತದೆ! ಆದರೂ..
‘ಅಸ್ಪೃಶ್ಯರು ಮುಟ್ಟಿದ ಹಸು ಮೈಲಿಗೆ ಆಗಿದೆ’ ಎಂದು ಆ ಹಸುವನ್ನು ಮರುದಿನ ಬೆಳಿಗ್ಗೆಯೇ ಮಾರಿ ಬೇರೊಂದು ಹಸುವನ್ನು ಕೊಂಡು ತರುತ್ತಾನೆ ಬಸಪ್ಪಗೌಡ. ಹೀಗೆ ಊರಿನ ಮೇಲ್ಜಾತಿಯವರು ಊರಾಚೆ ಇರುವ ಕೆಳಜಾತಿಯ ಜನರನ್ನೆಲ್ಲಾ ಕೀಳಾಗಿ, ಯಾವುದೋ ಅನ್ಯಗ್ರಹದಿಂದ ಬಂದ ಜೀವಿಗಳಂತೆ, ವಿಚಿತ್ರ ಪ್ರಾಣಿಗಳಂತೆ ಕಾಣುತ್ತಿದ್ದರು. ಆದರೆ ತಮ್ಮ ಉಪಯೋಗಕ್ಕಾಗಿ ಅದೇ ಜನರನ್ನು ಬಳಸಿಕೊಳ್ಳುತ್ತಿದ್ದರು. ದೇವದಾಸಿ ಹೆಸರಿನಲ್ಲಿ ತಮ್ಮ ತೆವಲನ್ನು ತೀರಿಸಿಕೊಂಡು, ದೌರ್ಜನ್ಯ ಎಸಗುತ್ತಿದ್ದರು.
ಮಹಪುರದ ಹಳ್ಳಿಯ ಅಸ್ಪೃಶ್ಯರು ತಮ್ಮ ಪರಿವರ್ತನೆಯ ಸಮಯಕ್ಕಾಗಿ ಕಾಯುತ್ತಲೇ ಇರುತ್ತಾರೆ. ಕನಸು ಕಾಣುತ್ತಿರುತ್ತಾರೆ. ಅದೇ ಹಳ್ಳಿಯ ದಲಿತ ಜಾತಿಯ ಊರಾಚೆ ಇರಬೇಕಾದ ಈರಣ್ಣ ಎಂಬ ಯುವಕನು ಮೇಲ್ಜಾತಿಯ ಯುವತಿ ಚೈತ್ರಾಳೊಂದಿಗೆ ಸಂಜೆ ಊರಿನಲ್ಲಿ ಕಂಡನು. ಈ ವಿಷಯ ತಿಳಿದ ಮೇಲ್ಜಾತಿಯವರು ಮತ್ತು ಆ ಊರಿನವರೆಲ್ಲಾ ಸೇರಿ ಆ ಯುವಕ ಈರಣ್ಣನನ್ನು ಹಿಡಿದು ತಂದು, ಅವನನ್ನು ಮರಕ್ಕೆ ಕಟ್ಟಿ, ಹೊಡೆದು ಹೊಡೆದು ಜೀವಂತ ಶವದಂತೆ ಮಾಡಿ ಬಿಟ್ಟಿದ್ದರು. ಈರಣ್ಣನು ಹೆಚ್ಚು ಓದಿರದ, ಅರ್ಧಕ್ಕೆ ಶಾಲೆ ಬಿಟ್ಟವನಾಗಿದ್ದನು. ‘ಮನುಷ್ಯರಲ್ಲಿ ಮೇಲು-ಕೀಳು ಎಂಬುದು ಇಲ್ಲ. ಇದೆಲ್ಲಾ ಮನುಷ್ಯರು ತಮ್ಮ ಸ್ವಾರ್ಥಕ್ಕೆ ಮಾಡಿಕೊಂಡ ವ್ಯವಸ್ಥೆ’ ಎಂದುಕೊಂಡಿದ್ದನು.
ಬಡತನದ ಬೇಗುದಿಯಲ್ಲಿ ಬೆಂದಿದ್ದ ಈರಣ್ಣನು ವೈಚಾರಿಕ ಮನೋಭಾವವನ್ನು ಹೊಂದಿದವನಾಗಿದ್ದನು. ಚಿಕ್ಕ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡವನಾಗಿದ್ದು, ಊರಲ್ಲಿನ ಜಾತಿ ವ್ಯವಸ್ಥೆಯಿಂದ ರೋಸಿ ಹೋಗಿದ್ದ. ಅವರಿವರ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಮನುಷ್ಯತ್ವದಲ್ಲಿ ನಂಬಿಕೆ ಇಟ್ಟ ಹೃದಯವಂತನಾಗಿದ್ದ.
ಕೆಲ ವರ್ಷಗಳ ಹಿಂದೆ ಈರಣ್ಣನಿಗೂ ಮತ್ತು ಆ ಊರಿನ ಮೇಲ್ಜಾತಿಯ ಹಿರಿಯ ಮುಖಂಡ ರುದ್ರಪ್ಪನಿಗೂ ಘರ್ಷಣೆಯಾಗಿತ್ತು. ಅಂದು ಈರಣ್ಣ ರುದ್ರಪ್ಪನಿಗೆ ಊರಾಚೆ ಎದುರಿಗೆ ಬಂದದ್ದು ತಪ್ಪಾಗಿತ್ತು. ಈ ಕಾರಣಕ್ಕಾಗಿ ರುದ್ರಪ್ಪನು ಈರಣ್ಣನಿಗೆ “ನನ್ನ ಎದುರಿಗೆ ಅಸ್ಪೃಶ್ಯ ಬಂದ ಎಂದು, ನನ್ನ ದಿನವೆಲ್ಲಾ ಕೆಟ್ಟದ್ದಾಗಿ ಕಳೆಯುತ್ತದೆ” ಎಂದು ಏನು ತಪ್ಪು ಮಾಡದ ಈರಣ್ಣನನ್ನು ಹಿಗ್ಗಾ ಮುಗ್ಗಾ ಬಾರಿಸಿಬಿಟ್ಟಿದ್ದ. ಹಾಗೆ ಬಾರಿಸುವಾಗ “ನಾನೆಲ್ಲಿ ಎದುರಿಗೆ ಬಂದದ್ದು, ನೀವೇ ಊರಾಚೆ ಬಂದು ನನ್ನ ಎದುರಿಗೆ ಬಂದದ್ದು, ಇಷ್ಟಕ್ಕೂ ಎದುರಿಗೆ ಬಂದದ್ದು ತಪ್ಪಾದ್ರು ಏನು?” ಎಂದು ಸಿಟ್ಟಿನಿಂದಲೇ ಕೇಳಿದ್ದ, ಈಗ ಈರಣ್ಣ ಚೈತ್ರಾಳೊಂದಿಗೆ ಕಾಣಿಸಿಕೊಂಡನಲ್ಲ ಆ ಚೈತ್ರಾಳ ಅಪ್ಪನೇ ರುದ್ರಪ್ಪ. “ಏನೋ ಅಂದು ನಿನ್ನ ಹೊಡೆದಿದ್ದಕ್ಕೆ ಇಂದು ನನ್ನ ಮಗಳನ್ನೇ ಹಾರಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಿಯೆನೋ, ಬದ್ಮಾಶ್” ಎಂದು ಗುಡುಗುತ್ತಾನೆ. “ಎಷ್ಟು ಧೈರ್ಯ ನಿನಗೆ ಸೂಳೆಮಗನೆ” ಅಂತ ಬೈದ.
ಈ ನಡುವೆ ರುದ್ರಪ್ಪನ ಮಗಳು “ಅಪ್ಪ ಅದು ಹಾಗಲ್ಲ” ಎಂದು ಮಾತಾಡಲು ಪ್ರಯತ್ನಿಸುತ್ತಾಳೆ. ಇದಕ್ಕೆ ಅವರ ಅಪ್ಪ ಅವಕಾಶ ಮಾಡಿಕೊಡುವುದಿಲ್ಲ. ರುದ್ರಪ್ಪ ಗದರಿಸಿ “ನೀ ಸುಮ್ಮನಿರು, ಈ ಕೊಳಕು ಜನರ, ಕೊಳಕು ಯೋಚನೆ ನನಗೆ ಗೊತ್ತು, ನಿನ್ನ ಹೊತ್ತುಕೊಂಡು ಹೋಗಿ, ಬಲವಂತದಿಂದ ಮದುವೆಯಾಗಿ, ನನ್ನ ಅಂತಸ್ತಿಗೆ ಸರಿಸಮಾನವಾಗುವ ಮತ್ತು ಊರಿಂದಾಚೆ ಇರುವ ಈ ಜನ, ಕುತಂತ್ರದಿಂದ ಊರಲ್ಲಿ ಬರಬೇಕು ಎಂಬ ಇವರ ಕೆಟ್ಟ ಬುದ್ದಿ ನನಗೆ ಗೊತ್ತು” ಎನ್ನುತ್ತಾ “ಊರಾಚೆ ಇರುವ ಈ ಜನಗಳನ್ನು ಅಲ್ಲೇ ಸುಟ್ಟು ಬಿಡ್ರಲಾ” ಎಂದು ತಮ್ಮ ಚೇಲಾಗಳಿಗೆ ಆದೇಶಿಸುತ್ತಾನೆ. ಇದಕ್ಕೆ ಬೆಚ್ಚಿಬಿದ್ದ, ಚೈತ್ರಾ “ಅಪ್ಪ ಸ್ವಲ್ಪ ತಾಳು” ಎಂದು ಬಲವಂತವಾಗಿ ಮಧ್ಯೆ ಪ್ರವೇಶಿಸಿ ಮಾತನಾಡುತ್ತಾಳೆ. “ಅಪ್ಪಾ ನೀನು ಊಹಿಸಿಕೊಂಡಂತೆ ಏನು ಆಗಿಲ್ಲ. ನಾನು ಈಗ ಶೀಲವಂತಳಾಗಿ ಇದ್ದೇನೆಂದರೆ ಅದಕ್ಕೆ ಈ ಈರಣ್ಣನೇ ಕಾರಣ. ನಮ್ಮ ಜಾತಿಯವರೇ ಆದ ಪೋಲಿ ಹುಡುಗರು ಹೊಂಚು ಹಾಕಿ, ನಾನು ನನ್ನ ಗೆಳತಿಯ ಮನೆಗೆ ಹೋಗ್ತಿದ್ದಾಗ, ನನ್ನ ಹೊತ್ತುಕೊಂಡು ಊರಾಚೆಯ ಹಾಳು ಮನೆಯಲ್ಲಿ ಬಲತ್ಕಾರ ಮಾಡಲು ಬಂದಾಗ, ನನ್ನ ಚೀರಾಟ ಕೇಳಿ ಈರಣ್ಣ ಬಂದು ಅವರನ್ನು ಹೊಡೆದೋಡಿಸಿದ. ನಾನು ಈರಣ್ಣನಿಗೆ ಧನ್ಯವಾದ ಹೇಳಿದೆ. ಜೊತೆಗೆ ನಾನೇ ಆತನನ್ನು ಊರಲ್ಲಿ ಬಂದು ನನ್ನ ಮನೆವರೆಗೂ ಬಿಡಲು ಕೇಳಿಕೊಂಡೆ, ಆದರೆ ಅದಕ್ಕೆ ಈರಣ್ಣ “ನಾನು ಊರಲ್ಲಿ ಬರೋಲ್ಲ” ಎಂದು ನಿರಾಕರಿಸಿದ್ದ. ನಾನೇ ಒತ್ತಾಯಪೂರ್ವಕವಾಗಿ ಮನೆವರೆಗೂ ಬಿಡು, ನಿನಗೆ ಯಾರು ಏನು ಮಾಡೋಲ್ಲ ಎಂದು ಕೇಳಿಕೊಂಡೆ. ಇದಕ್ಕೆ ಈರಣ್ಣ ಒಪ್ಪಿ, ನನ್ನನ್ನು ಸುರಕ್ಷಿತವಾಗಿ ಮನೆಗೆ ಬಿಡಲು ಬರ್ತಿರುವಾಗ, ನನ್ನ ಜೊತೆ ಈರಣ್ಣನ ಕಂಡ ಸಣ್ಣ ಮನಸ್ಸಿನ ನಮ್ಮವರೇ ತಪ್ಪು ತಿಳಿದು, ಹಿಂದೆ ಮುಂದೆ ವಿಚಾರಿಸದೇ ಹೀಗೆಲ್ಲ ಮಾಡಿದ್ದಾರೆ” ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಹೇಳುತ್ತಾಳೆ.
ಅದಕ್ಕೆ ಗೌಡ ಅಚ್ಚರಿ ಚಕಿತನಾಗಿ, ತಕ್ಷಣ ಈರಣ್ಣನ ಕೈಗಳ ಕಟ್ಟು ಬಿಚ್ಚಿ, “ಕ್ಷಮಿಸಿ ಬಿಡು, ನನ್ನಿಂದ ತಿಳಿಯದೇ ದೊಡ್ಡ ತಪ್ಪಾಗಿದೆ ಈರಣ್ಣ, ನಿನ್ನ ಜಾತಿ ಮೇಲೆ ನಿನ್ನ ಬಡಿದುಬಿಟ್ಟೆವು. ಇದಕ್ಕೆ ನೀನು ನನಗೆ ಏನಾದರೂ ಶಿಕ್ಷೆ ಕೊಡಬಹುದು ಎನ್ನುತ್ತಾನೆ”. ಆಗ ಈರಣ್ಣ ಮೆಲು ಧ್ವನಿಯಲ್ಲಿ ಮಾತನಾಡುತ್ತಾನೆ. “ನಿಮಗೆ ಶಿಕ್ಷೆ ಕೊಡೋದಕ್ಕೆ ನಾನ್ಯಾರು ಗೌಡ್ರೇ? ಆದರೂ ನನ್ನ ಒಂದು ಮಾತು ನೀವು ನಡೆಸಿಕೊಡಿ” ಎಂದು ರಕ್ತ ಸುರಿಯುತ್ತಿದ್ದ ಬಾಯಿಯಿಂದ ವಿನಮ್ರವಾಗಿ ಹೀಗೆ ಕೇಳುತ್ತಾನೆ.
“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ ಅವರವರ ಗುಣಾವಗುಣಗಳಿಂದ, ವ್ಯಕ್ತಿತ್ವದಿಂದ ನಿರ್ಧಾರವಾಗುವಂತದ್ದು ಎಂಬುದನ್ನು ಮನಗಾಣುತ್ತಾನೆ. “ಇದುವರೆಗೆ ನಿಮ್ಮ ಮೇಲಾದ ವಿವಿಧ ರೀತಿಯ ದೌರ್ಜನ್ಯಗಳಿಗೆ ನಾವು ಹೊಣೆಯಾಗಿದ್ದು, ಇದರಿಂದ ನನಗೆ ನಾಚಿಕೆ ಬರುತ್ತಿದೆ, ನಿಮಗೆ ಮುಂದೆ ನಮ್ಮಿಂದ ಯಾವ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ” ಎಂದು ಹೇಳುತ್ತಾನೆ. ಅಲ್ಲದೆ “ಆ ದೇವರ ಸೃಷ್ಠಿಯಲ್ಲಿ ನಾವೆಲ್ಲ ಸಮಾನರು, ನಾವು ಯಾರು ನಿಮ್ಮನ್ನು ಕೀಳು ಎನ್ನುವುದಕ್ಕೆ? ಈ ಜನರನ್ನು ಊರ ಹೊರಗೆ ಇಟ್ಟಿದ್ದು ತಪ್ಪು” ಎಂದು ಅರಿವಾಗುತ್ತದೆ. “ಹೌದು, ನೀವೂ ಮನುಷ್ಯರೇ, ನಾವೆಲ್ಲಾ ಕೂಡಿ ಬಾಳೋಣ” ಎಂದು ರುದ್ರಪ್ಪ ನಿರ್ಧರಿಸುತ್ತಾನೆ. “ಊರಾಚೆ ಇರುವವರು ನಮ್ಮವರೇ, ಅವರೂ ಕೂಡ ಊರಲ್ಲಿ ಬರಲಿ, ಇಲ್ಲಿ ಎಲ್ಲಾ ಜಾತಿಯವರು ಕೂಡಿ ಬಾಳಬೇಕು, ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಊರಲ್ಲಿ ಮೇಲ್ಜಾತಿ-ಕೀಳುಜಾತಿ ಎಂದು ಭೇದ-ಭಾವ ಇಲ್ಲದೇ, ಪರಸ್ಪರ ಸಹಕಾರದಿಂದ ಎಲ್ಲಾರೂ ಅನ್ಯೋನ್ಯವಾಗಿ ಕೂಡಿ ಬಾಳಬೇಕು” ಎಂದು ರುದ್ರಪ್ಪ ಡಂಗೂರ ಹೊಡೆಸುತ್ತಾನೆ. ಇದರಂತೆ ಊರಾಚೆ ಇದ್ದವರು ಊರಲ್ಲಿ ಬಂದು ವಾಸ ಮಾಡಲು ತೊಡಗುವರು. ಆದರೆ ಊರ ಒಳಕ್ಕೆ ಬಂದ ಜನರೊಂದಿಗೆ ಮೇಲ್ಜಾತಿಯವರು ಬೆರೆಯುತ್ತಿರಲಿಲ್ಲ. ಅಂತರವನ್ನು ಕಾಪಾಡುತ್ತಿದ್ದರು.
ಈರಣ್ಣ ಕಾಪಾಡಿದ ಯುವತಿ ಚೈತ್ರಾಳನ್ನು ಮದುವೆಯನ್ನು ಮಾಡಲು ಊರಿನ ಮುಖಂಡ ರುದ್ರಪ್ಪ ತಮ್ಮ ಬಳಗದ ಶ್ರೀಮಂತ ವರನಿಗಾಗಿ ಹುಡುಕುವನು. ಸಂಜೀವ ಮತ್ತು ಚೈತ್ರಾ ಚಿಕ್ಕವರಿರುವಾಗಲೇ ಅವರ ತಾಯಿಯು ವ್ಯಾಧಿಯೊಂದಕ್ಕೆ ಬಲಿಯಾಗಿರುತ್ತಾಳೆ. ರುದ್ರಪ್ಪ ಹೆಂಡತಿಯ ನೆನಪಲ್ಲೇ ಇರುತ್ತಾನೆ. ಆದರೆ ಎರಡನೇ ಮದುವೆ ಬಗ್ಗೆ ಆಲೋಚನೆಯೂ ಮಾಡಿರುವುದಿಲ್ಲ. ಅಂದು ರುದ್ರಪ್ಪನ ಬಂಧು ಬಳಗದವರು ಎರಡನೇ ಮದುವೆಗೆ ಒತ್ತಾಯ ಮಾಡಿದರೂ ಅದಕ್ಕೆ ಒಪ್ಪಿರುವುದಿಲ್ಲ. ಅನೇಕರು ತಮ್ಮ ಮಗಳ ಜೊತೆ ಬಂದು “ಇವಳನ್ನು ಮದುವೆಯಾಗು ರುದ್ರಪ್ಪ” ಎಂದು ಹೇಳಿದರೂ ಅದಕ್ಕೆ ಕ್ಯಾರೇ ಅಂದಿರಲಿಲ್ಲ. “ಎರಡನೇ ಮದುವೆ ಬಗ್ಗೆ ನನಗೆ ಆಸಕ್ತಿ ಇಲ್ಲ. ನನಗೆ ಈಗಲೂ ಸಾವಿತ್ರಿಯೇ ಎಲ್ಲ, ಅವಳು ನನ್ನೊಂದಿಗೆ ದೈಹಿಕವಾಗಿ ಇಲ್ಲ. ಆದರೆ ಅವಳು ನನ್ನ ಮನಸ್ಸಿನಲ್ಲಿ ನನ್ನ ಕೊನೆ ಉಸಿರು ಇರುವವರೆಗೆ ಇರುತ್ತಾಳೆ” ಎಂದು ನಯವಾಗಿ ಹೇಳಿ ನಿರಾಕರಿಸಿರುತ್ತಾನೆ.
ರುದ್ರಪ್ಪ ತಮ್ಮದೇ ಬಳಗದ ಶ್ರೀಮಂತ ಯುವಕ ಒಳ್ಳೆಯ ವರ ಎಂದು ತಿಳಿಯುತ್ತದೆ. ಆತನೊಂದಿಗೆ ತನ್ನ ಮಗಳನ್ನು ಮದುವೆ ಮಾಡಲು ನಿರ್ಣಯಿಸಿದ. ಬೆಂಗಳೂರಿನಲ್ಲಿ ಆರು ಕಾರ್ಖಾನೆಗಳನ್ನು ಹೊಂದಿದ ಯುವಕನಾದ ಸಕಲೇಶ ಎಂಬ ವರ ಇರುವುದು ತಿಳಿಯುತ್ತದೆ. ರುದ್ರಪ್ಪನು ಸಕಲೇಶನ ವಿಳಾಸ ತಿಳಿದುಕೊಂಡು ಅವರ ತಂದೆ-ತಾಯಿಯನ್ನು ಭೇಟಿಯಾದ. ಮದುವೆ ಪ್ರಸ್ತಾಪ ಮಾಡಿದ. ಸಕಲೇಶನ ತಂದೆ ತಾಯಿ ಕನ್ಯೆಯ ಹುಡುಕಾಟದಲ್ಲಿದ್ದರು. ಕನ್ಯೆಯ ತಂದೆಯ ವಿನಯವನ್ನು ನೋಡಿ, ಅವರ ಮಗಳನ್ನು ನೋಡಲು ಒಪ್ಪಿದರು. “ಮುಂದಿನ ಗುರುವಾರ ನಿಮ್ಮ ಮಗಳನ್ನು ಕರೆದುಕೊಂಡು ನಮ್ಮ ಮನೆಗೇ ಬನ್ನಿ, ಇಲ್ಲಿಯೇ ಕನ್ಯೆ ನೋಡುವ ಕಾರ್ಯಕ್ರಮ ಮಾಡಿದರಾಯಿತು” ಎಂದು ಹೇಳಿದರು.
ಗುರುವಾರದಂದು ತನ್ನ ಮಗಳಾದ ಚೈತ್ರಾಳನ್ನು, ತೀರ ಹತ್ತಿರದ ಸಂಬಂಧಿಕರನ್ನು ಕರೆದುಕೊಂಡು ಹುಡುಗನ ಮನೆಗೆ ರುದ್ರಪ್ಪ ಹೋದನು. ಹುಡುಗನ ತಂದೆ ತಾಯಿ ಬಾಗಿಲಲ್ಲಿ ನಿಂತು “ಒಳಗೆ ಬನ್ನಿ” ಎಂದು ಸ್ವಾಗತಿಸಿದರು. “ಪ್ರಯಾಣ ಎಲ್ಲಾ ಸುಖಕರವಾಗಿತ್ತೆ” ಎಂದು ವಿಚಾರಿಸಿದರು. ಮೊದಲು ಕುಡಿಯಲು ನೀರು ಕೊಟ್ಟು, ನಂತರ ತಿಂಡಿ-ಕಾಫಿಯನ್ನು ಚೈತ್ರಾಗೆ ಮತ್ತು ರುದ್ರಪ್ಪನಿಗೆ, ಉಳಿದವರಿಗೂ ನೀಡಿದರು. ಸಕಲೇಶ ಅಲ್ಲೆ ಸೋಫಾದ ಮೇಲೆ ಇದ್ದು, ಚೈತ್ರಾಳನ್ನು ವಾರೆಗಣ್ಣಿನಿಂದ ನೋಡುತ್ತಿದ್ದ! ಉಭಯಕುಶಲೋಪರಿಯ ನಂತರ “ನಮ್ಮ ಹುಡುಗಿ ನಿಮಗೆ ಒಪ್ಪಿಗೆಯೇ” ಎಂದು ರುದ್ರಪ್ಪನು ಹುಡುಗನ ತಂದೆ, ತಾಯಿಗೆ ಕೇಳಿದನು. ಆಗ ಹುಡುಗನ ತಂದೆ, ತಾಯಿ ತಮ್ಮ ಮಗನ ಕಡೆ ನೋಡಿದರು. ಸಕಲೇಶ “ನನಗೆ ಒಕೆ” ಎಂದು ಮುಕ್ತವಾಗಿ ಹೇಳಿದ. “ನಮ್ಮ ಹುಡುಗ ನಿಮ್ಮ ಮಗಳಿಗೆ ಇಷ್ಟವಾಗಿದ್ದಾನೆಯಾ?” ಎಂದು ಯುವತಿಯ ತಂದೆ, ತಾಯಿಗೆ ಕೇಳಿದರು. ಇದಕ್ಕೆ ರುದ್ರಪ್ಪ ತಮ್ಮ ಮಗಳ ಕಡೆ ತಿರುಗಿ ನೋಡಿದ. ಚೈತ್ರಾಳು ತಲೆ ಕೆಳಗೆ ಮಾಡಿ ಮುಗುಳು ನಕ್ಕು, ಮೆಲುದನಿಯಲ್ಲಿ “ಹುಂ” ಅಂದಳು.
ಹುಡುಗ, ಹುಡುಗಿಯ ತಂದೆ ತಾಯಿಗೆ ಖುಷಿಯೋ ಖುಷಿ. ಎರಡು ಮನಸ್ಸು, ಎರಡು ಕುಟುಂಬಗಳು ಬೆಸೆಯುವ ಮದುವೆಗೆ ಎರಡೂ ಪರಿವಾರದವರು ಸಂತೋಷದಲ್ಲಿದ್ದವು. ಹುಡುಗನ ಕಡೆಯವರು ವರದಕ್ಷಿಣೆ ಬಗ್ಗೆ ಕೇಳುವ ಮುಂಚೆಯೇ ಹುಡುಗಿಯ ತಂದೆ ರುದ್ರಪ್ಪ “ನೋಡಿ.. ನನಗೆ ಇರೋಳು ಒಬ್ಬಳೇ ಮಗಳು, ಸಾಕಷ್ಟು ವರದಕ್ಷಿಣೆ ಕೊಡುವೆ, ನೀವು ಬೇಡ ಅನ್ನಬಾರದು, ವರೋಪಚಾರಕ್ಕೆ ಏನೂ ಕಡಿಮೆ ಮಾಡೋಲ್ಲಾ, ಮಗಳ ಮೈ ತುಂಬಾ ಬಂಗಾರ ಹಾಕಿ ಕಳಿಸುವೆ, ನನ್ನ ಆಸ್ತಿ ಎಲ್ಲಾ ಅವಳದೆ. ಮದುವೆಯನ್ನು ಇಡೀ ಊರು ಹೊಗಳುವ ಹಾಗೆ ಅದ್ಧೂರಿಯಾಗಿ ಮಾಡಿ ಕೊಡುವೆ” ಎಂದು ಭಾವುಕನಾಗಿ ಹೇಳುತ್ತಾನೆ. ಊರಿಗೆ ಹೋಗಿ ಒಂದು ಒಳ್ಳೆಯ ಮುಹೂರ್ತವನ್ನು ಶಾಸ್ತ್ರಿಗಳಿಂದ ತೆಗೆಸುವನು. ಮದುವೆಯ ದಿನ ನಿಶ್ಚಯವಾಗುವುದು.
ಮದುವೆ ನಿಶ್ಚಯವಾದ ಕೂಡಲೇ ಚೈತ್ರಾಳು ತನ್ನ ಮನೆಯಲ್ಲಿ ಅಮ್ಮನ ಫೋಟೋಗೆ ಬಂದು ನಮಸ್ಕರಿಸಿ ಆರ್ಶೀವಾದ ಪಡೆದಳು. ಅದೆ ರೀತಿ ಮನಸ್ಸಲ್ಲೇ ತನ್ನ ಅಣ್ಣನನ್ನು ಸ್ಮರಿಸಿಕೊಳ್ಳುವಳು. ಚೈತ್ರಾಳು ಹತ್ತನೇ ತರಗತಿ ಓದಿ ಶಾಲೆ ಬಿಟ್ಟಿರುತ್ತಾಳೆ. ಆದರೆ ಚೈತ್ರಾಳ ಅಣ್ಣ ಸಂಜೀವನು ಚೆನ್ನಾಗಿ ಓದಿಕೊಂಡು ಅಮೆರಿಕಾದಲ್ಲಿ ನೌಕರಿ ಮಾಡುತ್ತಿರುತ್ತಾನೆ. ಹಿರಿಯರ ಆಸ್ತಿ ಇದ್ದರೂ ಸಂಜೀವನನ್ನು ಓದಿಸಲು ರುದ್ರಪ್ಪ ಬಹಳ ಕಷ್ಟಪಟ್ಟಿರುತ್ತಾನೆ. ಬಂಗಾರದಂತಹ ಹತ್ತು ಎಕರೆ ಹೊಲವನ್ನು ಸಂಜೀವನ ಓದಿಗಾಗಿ ಮಾರಿರುತ್ತಾನೆ. ತಾಯಿಯ ಪ್ರೀತಿಯ ಕೊರತೆ ಕಾಡದೇ ಹಾಗೆ ಸಂಜೀವ ಮತ್ತು ಚೈತ್ರಾಳನ್ನು ಬಹಳ ಮುದ್ದಾಗಿ ಸಲುಹಿದ್ದ. ಅಡುಗೆ ಮಾಡುವುದು, ಮಕ್ಕಳಿಗೆ ಊಟ ಮಾಡಿಸುವುದು, ಅವರನ್ನು ಶಾಲೆ ಸಿದ್ಧಮಾಡಿ ಕಳಿಸುವುದು ಮಾಡುತ್ತಿದ್ದ ರುದ್ರಪ್ಪ. ಸಂಜೀವನು “ನಾನು ವಿದೇಶಕ್ಕೆ ಹೋಗಿ ಓದುವೆ” ಎಂದು ಅಪ್ಪನಲ್ಲಿ ಕೇಳಿದಾಗ ಮಗನ ಇಚ್ಛೆಯಂತೆ ವಿದೇಶದಲ್ಲಿ ಓದಿಸಲು ಮುಂದಾಗಿ, ಸಾಕಷ್ಟು ಹಣ ಖರ್ಚು ಮಾಡಿ, ಸಂಜೀವನನ್ನು ಅಮೆರಿಕಾದಲ್ಲಿಯೇ ಓದಿಸಿದ. ಸಂಜೀವ ಅಮೆರಿಕದಲ್ಲಿಯೇ ಕೆಲಸ ಗಿಟ್ಟಿಸಿಕೊಂಡ. ಆದರೆ ಅಮೆರಿಕಾಕ್ಕೆ ಹೋದ ಸಂಜೀವನು ಭಾರತಕ್ಕೆ ಹಿಂದಿರುಗಲೇ ಇಲ್ಲ. ಆತನಿಂದ ಒಂದು ಸಲವೂ ಫೋನೂ ಬರಲಿಲ್ಲ. ‘ಸಂಜೀವನು ಬಹುಶಃ ಅಮೆರಿಕಾದ ಬಿಳಿ ಹುಡುಗಿಯನ್ನು ಮದುವೆಯಾಗಿ ಅಲ್ಲೇ ಉಳಿದುಕೊಂಡಿರಬಹುದು. ಎಂದಾದರೂ ಮಗ ಬರ್ತಾನೆ’ ಅಂತ ರುದ್ರಪ್ಪ ಕಾಯುತ್ತಲೇ ಇದ್ದ. ಕಣ್ಣ ಮುಂದೆ ಇರುವ ಮಗಳು ಚೈತ್ರಾಳನ್ನು ಬಹಳ ಹಚ್ಚಿಕ್ಕೊಂಡು, ಮುದ್ದಾಗಿ ಬೆಳೆಸಿದ್ದ.
ರುದ್ರಪ್ಪನು ಇಡೀ ಊರಿಗೆ ಹಂಚುವಷ್ಟು ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡಿಸಿ, ಈ ಹಿಂದೆ ಊರಾಚೆ ಇದ್ದವರಿಗೂ ಸೇರಿದಂತೆ ಎಲ್ಲರಿಗೂ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಿಸಿದ. ಯುವತಿಯ ಮಾನ ಕಾಪಾಡಿದ ಈರಣ್ಣನ ಮನೆ ಬಾಗಿಲಿಗೆ ರುದ್ರಪ್ಪ ಹೋಗುತ್ತಾನೆ. “ಈರಣ್ಣ.. ಈರಣ್ಣ..” ಎಂದು ಕೂಗುತ್ತಾನೆ. ಮನೆಯಲ್ಲಿದ್ದ ಈರಣ್ಣ ಬಂದು “ಓ.. ಯಜಮಾನ್ರು, ಒಳಗೆ ಬನ್ನಿ” ಎಂದು ಕರೆದು ಕೂಡಿಸುತ್ತಾನೆ. ಕುಡಿಯಲು ನೀರು ಕೊಡುತ್ತಾನೆ. “ಹೇಳಿ ಕಳಿಸಿದ್ದರೆ ನಾನೇ ಬರುತ್ತಿದ್ದೆ, ನೀವು ಯಾಕೆ ಬರಲು ಹೋದಿರಿ” ಎಂದು ಹೇಳುತ್ತಾನೆ. “ನನ್ನ ಮಗಳ ಮದುವೆ ಇದೆ. ಅದರ ಆಮಂತ್ರಣ ಕೊಡಲು ಬಂದಿರುವೆ” ಎಂದು ಹೇಳುತ್ತಾ.. “ಈರಣ್ಣ ನೀನು ದಯವಿಟ್ಟು ಮದುವೆಗೆ ತಪ್ಪದೇ ಬರಬೇಕು, ಅಂದು ನೀನು ನನ್ನ ಮಗಳನ್ನು ಕಾಪಾಡಿದರಿಂದಲೇ, ಇಂದು ಅವಳ ಮದುವೆಯಾಗುತ್ತಿದೆ” ಎಂದು ಹೇಳಿ, “ಮದುವೆಗೆ ಬರಬೇಕು” ಎಂದು ಮತ್ತೆ ಹೇಳುತ್ತಾನೆ. “ಖಂಡಿತ ಬರುವೆ, ನಾಲ್ಕುದಿನ ಮುಂಚೆಯೇ ಬಂದು ಮದುವೆ ಕೆಲಸ ಎಲ್ಲಾ ಮಾಡುವೆ” ಎಂದನು ಈರಣ್ಣ. “ಬಹಳಷ್ಟು ಜನಕ್ಕೆ ಆಮಂತ್ರಣ ಕೊಡಬೇಕು ನಾ ಹೊರಡುವೆ” ಎಂದು ಹೇಳಿ ರುದ್ರಪ್ಪ ಹೊರಡುವನು. ಮದುವೆಯ ದಿನ ಬರುತ್ತದೆ. ಈರಣ್ಣನು ಮದುವೆಯಲ್ಲಿ ಚಪ್ಪರ ಹಾಕುವುದು, ಅಡುಗೆ ಸಾಮಾನು ತಂದು ಕೊಡುವುದು ಹೀಗೆ ಮದುವೆಗೆ ಏನೇನು ಅವಶ್ಯಕತೆ ಇದೆಯೋ ಅದನ್ನೆಲ್ಲಾ ತಂದು, ತಂದು ಹಾಕುವನು. ಮಾಂಗಲ್ಯ ಕಟ್ಟುವ ಸರಿಯಾದ ಮುಹೂರ್ತಕ್ಕೆ ಸಕಲೇಶ ಮಾಂಗಲ್ಯ ಧಾರಣೆ ಮಾಡುವನು. ಮದುವೆಯು ಸುಸೂತ್ರವಾಗಿ ಆಗುವುದು. ಯುವತಿಯ ತಂದೆಯ ಕಣ್ಣಲ್ಲಿ ಕಣ್ಣೀರು ಅವರಿಗೇ ಗೊತ್ತಾಗದಂತೆ ಹರಿಯುವುದು. ಭಾರವಾದ ಮನಸ್ಸಿನಿಂದ ಮಗಳನ್ನು ಕಳುಹಿಸಿ ಕೊಡಲು ನಿಂತನು. “ನೀವೇನು ಚಿಂತೆ ಮಾಡಬೇಡಿ, ನೀವು ನಿಮ್ಮ ಮಗಳನ್ನು ಹೇಗೆ ನೋಡಿಕೊಂಡಿದ್ದೀರೋ, ನಾವೂ ಹಾಗೆ ನೋಡಿಕೊಳ್ಳುತ್ತೇವೆ” ಎಂದು ಬೀಗರು ಚೈತ್ರಾಳ ತಂದೆಗೆ ಸಮಾಧಾನ ಪಡಿಸಿದರು. ಕಾರ್ನಲ್ಲಿ ಮಗಳು-ಅಳಿಯಂದಿರು, ಬೀಗರು ಹೋದರು. ಕಾರ್ ಹೋಗಿ ಬಹಳ ಹೊತ್ತಾದರೂ ಆ ದಾರಿಯನ್ನೇ ರುದ್ರಪ್ಪನು ನೋಡುತ್ತಾ ನಿಂತ…
(ಕೃತಿ: ಭೂಮಿ (ಕಾದಂಬರಿ), ಲೇಖಕರು: ಈರಣ್ಣ ಬೆಂಗಾಲಿ, ಬೆಲೆ: 200/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ