ನಾನೆಷ್ಟೇ ಬೇಡವೆಂದುಕೊಂಡರೂ ನಮ್ಮ ಶಾಲೆಯ ಕಡೆಯಿಂದ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಕರೆದೊಯ್ಯುತ್ತಿದ್ದರು. ಸಾಲದ್ದಕ್ಕೆ ಅದು ಬೇರೆ ಚುಚ್ಚುಮದ್ದುಗಳ ಕಾಲ! ಸರ್ಕಾರೀ ಶಾಲೆಯಾದ್ದರಿಂದ, ಸರ್ಕಾರದ್ದೇ ನಿರ್ದೇಶನದ ಮೇರೆಗೆ ಹೇಳದೇ ಕೇಳದೇ ನಮ್ಮನ್ನು ಇದ್ದಕ್ಕಿದ್ದಂತೆ ಆಸ್ಪತ್ರೆಗೆ ನಡೆಸಿಕೊಂಡುಹೋಗಿ ವೈದ್ಯರ ಕೋಣೆಯ ಹೊರಗೆ ಸಾಲಾಗಿ ನಿಲ್ಲಿಸಿಬಿಡುತ್ತಿದ್ದರು. ನನಗಂತೂ ಈ ಇಂಜಕ್ಷನ್ ಎಂದರೆ ಇನ್ನಿಲ್ಲದ ಭಯ. ಎಂದಿನಂತೆ ನಡೆಯುತ್ತಿದ್ದ ತರಗತಿಯ ಮಧ್ಯೆ ಇದ್ದಕ್ಕಿದ್ದಂತೆ ಒಳಪ್ರವೇಶಿಸಿದ ಮುಖ್ಯಶಿಕ್ಷಕರು ‘ಎಲ್ಲರೂ ಸಾಲಾಗಿ ಆಸ್ಪತ್ರೆಯ ಕಡೆ ನಡೆಯಿರಿ. ಯಾರೂ ಗಲಾಟೆ ಮಾಡಬಾರದು’ ಎಂದು ಉಗ್ರ ದನಿಯಲ್ಲಿ ಘೋಷಿಸಿಬಿಟ್ಟರು.
ತಮ್ಮೂರಿನ ಆಸ್ಪತ್ರೆಯ ಕುರಿತು ವಿನಾಯಕ ಅರಳಸುರಳಿ ಬರೆದ ಪ್ರಬಂಧ

 

ನಮ್ಮೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಹೀಗೆ ಸರ್ಕಾರೀ ಆಸ್ಪತ್ರೆಯಿರುವುದು ಹಳ್ಳಿಗಳ ಪಾಲಿಗೆ ಒಂದು ಹೆಮ್ಮೆ. ಏಕೆಂದರೆ ಸಣ್ಣಪುಟ್ಟ ಹಳ್ಳಿಗಳಲ್ಲೆಲ್ಲಾ ಸರ್ಕಾರೀ ಆಸ್ಪತ್ರೆಯಿರುವುದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವಿದೆಯೆಂದರೆ ಅದೊಂದು ಮಟ್ಟಕ್ಕೆ ದೊಡ್ಡ ಹಳ್ಳಿಯೆಂದೇ ಅರ್ಥ!

ಚಿಕ್ಕವನಿದ್ದಾಗಿಂದಲೂ ನಾನಾಗಿ ಈ ಆಸ್ಪತ್ರೆಗೆ ಹೋಗಿದ್ದು ಕಡಿಮೆ. ಸರ್ಕಾರೀ ಆಸ್ಪತ್ರೆಗಳ ಬಗ್ಗೆ ಹಿರಿಯರು ನನ್ನೊಳಗೆ ತುಂಬಿದ ಭಯವೇ ಇದಕ್ಕೆ ಕಾರಣವೆನ್ನಬಹುದು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಶಾಲೆಯ ವತಿಯಿಂದ ನಡೆಯುತ್ತಿದ್ದ ಉಚಿತ ತಪಾಸಣೆಗಳ ಅಂಗವಾಗಿ ಈ ಆಸ್ಪತ್ರೆಯಲ್ಲಿ ಕೊಡುತ್ತಿದ್ದ ಮಾತ್ರೆಗಳನ್ನು ತಿನ್ನಲಿಕ್ಕೆ ನಮ್ಮನೆಯಲ್ಲಿ ನನಗೆ ಬಿಡುತ್ತಲೇ ಇರಲಿಲ್ಲ. ಬಣ್ಣಬಣ್ಣಗಳಿಂದ ಕೂಡಿದ್ದ ಆ ಮಾತ್ರೆಗಳೆಡೆಗೆ ತುಸು ಹೆಚ್ಚಾಗಿ ಆಕರ್ಷಿತನಾಗುತ್ತಿದ್ದ ನಾನು ಅವರ ಮಾತನ್ನೂ ಮೀರಿ ಮಾತ್ರೆ ತಿಂದೇ ಬಿಡುತ್ತೇನೆಂಬ ಭಯದಲ್ಲಿ ಅಮ್ಮ “ನೋಡೂ, ಅಲ್ಲೇ ಪಕ್ಕದಲ್ಲಿ ಜಾನುವಾರು ಆಸ್ಪತ್ರೆಯಿದೆ. ಅಲ್ಲಿ ಎಮ್ಮೆಗೆ ಕೊಡುವ ಮಾತ್ರೆಗಳಿರ್ತಾವೆ. ಅವು ಮಾರಾಟವಾಗ್ದೇ ಇದ್ದಾಗ ಈ ಆಸ್ಪತ್ರೆಗೆ ತಂದು ಹೀಗೆ ನಿಮ್ಗೆಲ್ಲಾ ಕೊಡ್ತಾರೆ. ನೀನು ಅದನ್ನೇನಾದರೂ ತಿಂದ್ರೆ ನಿಂಗೆ ಎಮ್ಮೆಯ ಹಾಗೆ ಉದ್ದ ಮೂತಿ, ಕೋಡು, ಬಾಲ ಎಲ್ಲಾ ಬರತ್ತೆ” ಎಂದು ಹೆದರಿಸಿದ್ದಳು. ಅಲ್ಲಿಗೂ ಬಿಡದೆ “ರತ್ನನ ಮನೆ ಹತ್ರ ಒಬ್ಬ ಹೀಗೇ ಕೋಣಕ್ಕೆ ಕೊಡೋ ಮಾತ್ರೆ ತಿಂದು ಕೋಣದ ಹಾಗೇ ಆಗಿದಾನಂತೆ. ಅಲ್ವನೇ ರತ್ನ?” ಎಂದು ಕೆಲಸದಾಳು ರತ್ನಾಳನ್ನೂ ತನ್ನ ಕಥೆಯೊಳಗೆ ಸೇರಿಸಿಕೊಳ್ಳುತ್ತಿದ್ದಳು. ಅದಕ್ಕವಳು “ಹೌದೌದು. ಅವನನ್ನ ಹಿಡಿದು ಕೊಟ್ಟಿಗೆಯೊಳಗೆ ಕಟ್ಟಿಹಾಕಿ ದಿನಾ ಎಮ್ಮೆಗೆ ಕೊಡುವ ದೊಡ್ಡ ಇಂಜಕ್ಷನ್ ಕೊಡ್ತಿದಾರೆ” ಎಂದು ಸುಳ್ಳುಸಾಕ್ಷಿ ಹೇಳಿಬಿಟ್ಟಿದ್ದಳು. ದೊಡ್ಡದಾಗಿ ಬಾಯಿ ತೆರೆದುಕೊಂಡು ಇವರ ಈ ಎಮ್ಮೆ-ಕೋಣಗಳ ಭಯಾನಕ ಕಥೆಯ ಕೇಳಿಸಿಕೊಳ್ಳುತ್ತಿದ್ದ ನಾನು ಎಮ್ಮೆಯಾಗಿ ಬದಲಾದಂತೆ, ನಮ್ಮೂರಿನ ಎಮ್ಮೆ ಡಾಕ್ಟರು ನನಗೆ ದೊಡ್ಡ ದೊಡ್ಡ ಇಂಜಕ್ಷನ್ ಗಳನ್ನು ಚುಚ್ಚಿದಂತೆ ಕಲ್ಪಿಸಿಕೊಂಡು ಗಡಗಡ ನಡುಗುತ್ತಿದ್ದೆ.

ಇನ್ನು ಆಸ್ಪತ್ರೆಯೊಳಗಿನ ವಾತಾವರಣವೂ ಇದಕ್ಕೆ ಪೂರಕವಾಗಿ ಭಯಹುಟ್ಟಿಸುವಂತೆಯೇ ಇತ್ತು. ಎಲ್ಲಿ ನೋಡಿದರೂ ಬರೀ ರೋಗಗಳದ್ದೇ ಪೋಸ್ಟರ್ ಗಳು, ರೋಗಿಗಳದ್ದೇ ಫೋಟೋಗಳು! ರಕ್ತಹೀನತೆ, ಹೆಪಟೈಟಿಸ್ ಬಿ, ಗಳಗಂಡ, ಅಯೋಡಿನ್ ಕೊರತೆ, ಮಂಗನ ಖಾಯಿಲೆ, ಕ್ಷಯ, ನಾಯಿಕೆಮ್ಮು, ಗಂಟಲುಮಾರಿ, ಧನುರ್ವಾಯು, ಏಡ್ಸ್! ಪ್ರಪಂಚದಲ್ಲಿ ಇಷ್ಟೊಂದು ಥರದ ಖಾಯಿಲೆಗಳಿವೆ ಎನ್ನುವುದು ನನಗೆ ಗೊತ್ತಾಗಿದ್ದೇ ನಮ್ಮೂರಿನ ಆಸ್ಪತ್ರೆಯನ್ನು ಹೊಕ್ಕಮೇಲೆ. ರಕ್ತಹೀನತೆಯನ್ನು ಕಡೆಗಣಿಸಬೇಡಿ, ಅದು ನಿಮ್ಮ ಪ್ರಾಣವನ್ನು ತೆಗೆಯುತ್ತದೆ ಎಂಬ ಪೋಸ್ಟರ್ ನ ಕೆಳಗೆ ಮೈಯಲ್ಲಿರುವ ರಕ್ತವೆಲ್ಲಾ ಬತ್ತಿಹೋದ ಭಯಾನಕ ವ್ಯಕ್ತಿಯ ಚಿತ್ರ‌; ಅಯೋಡಿನ್ ಕೊರತೆಯಿಂದ ನಿಮಗೆ ಗಳಗಂಡ ಬರಬಹುದು ಎಂಬ ಭಿತ್ತಿಪತ್ರದ ಕೆಳಗೆ ಗಂಟಲಿನಲ್ಲಿ ವಿಕಾರವಾದ ಗುಳ್ಳೆಯಿರುವ ರೋಗಿಯ ಫೋಟೋ; ನಿಮ್ಮ ಮೈಯಲ್ಲಿ ತಾಮ್ರವರ್ಣದ ಮಚ್ಚೆಗಳಿದ್ದು ಅಲ್ಲಿ ಸ್ಪರ್ಷಜ್ಞಾನ ನಷ್ಟವಾಗಿದೆಯೇ? ಹಾಗಾದರೆ ಇದು ಕುಷ್ಟರೋಗದ ಲಕ್ಷಣವಿರಬಹುದು! ಎಂಬ ಹೇಳಿಕೆಯ ಕೆಳಗೆ ಮೈಯೆಲ್ಲಾ ವಿಕಾರ ಮಚ್ಚೆಗಳಿರುವ ವಿಕಾರ ಮನುಷ್ಯನ ಪಟ… ಹೀಗೆ ಇಡೀ ಆಸ್ಪತ್ರೆಯ ಗೋಡೆಯ ಮೇಲೆಲ್ಲಾ ತುಂಬಿ ತುಳುಕುತ್ತಿದ್ದ ಕಂಡುಕೇಳರಿಯದ ಖಾಯಿಲೆಗಳ ನೋಡಿಯೇ ನಾನು ಗಾಬರಿಬೀಳುತ್ತಿದ್ದೆ. ಅದೇನು ಮಾಯವೋ ಗೊತ್ತಿಲ್ಲ, ಇಂಥಹಾ ಎಚ್ಚರಿಕೆಯ ಸಂದೇಶವುಳ್ಳ ಪೋಸ್ಟರುಗಳನ್ನು ನೋಡಿದ ಮರುಕ್ಷಣವೇ ಅದರಲ್ಲಿ ಹೇಳಿದ ಎಲ್ಲಾ ರೋಗದ ಎಲ್ಲಾ ಲಕ್ಷಣಗಳೂ ನನ್ನಲ್ಲಿ ಉದ್ಭವವಾಗಿಬಿಡುತ್ತಿದ್ದವು! ಗಂಟಲು ಮುಟ್ಟಿ ನೋಡಿಕೊಂಡರೆ ಅಲ್ಲಿ ಆ ಚಿತ್ರದಲ್ಲಿನ ಗಳಗಂಡ ರೋಗಿಗಿರುವಂತೆಯೇ ನನಗೂ ಒಂದು ಗುಳ್ಳೆಯಿರುವಂತೆ, ಕಾಲಿನ ಮೇಲೆ ಥೇಟ್ ಕುಷ್ಟ ರೋಗಿಯ ಮೈಮೇಲಿರುವಂಥದೇ ಕಲೆಯಿರುವಂತೆ.. ಹೀಗೆ ನನ್ನ ದೇಹದಲ್ಲಿರುವ ಸಕಲ ಲಕ್ಷಣವೂ ಯಾವುದೋ ಖಾಯಿಲೆಯದೇ ಮುನ್ಸೂಚನೆಯಂತೆ ನನಗೆ ಭ್ರಮೆಯಾಗಿ, ಇಲ್ಲಿ ಹೇಳಿರುವವುಗಳ ಪೈಕಿ ಯಾವ ಖಾಯಿಲೆಯಿಂದ ನಾನು ಸಾಯುತ್ತೇನೋ ಎಂದು ಭಯವಾಗುತ್ತಿತ್ತು.

ಆದರೆ ನಾನೆಷ್ಟೇ ಬೇಡವೆಂದುಕೊಂಡರೂ ನಮ್ಮ ಶಾಲೆಯ ಕಡೆಯಿಂದ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಕರೆದೊಯ್ಯುತ್ತಿದ್ದರು. ಸಾಲದ್ದಕ್ಕೆ ಅದು ಬೇರೆ ಚುಚ್ಚುಮದ್ದುಗಳ ಕಾಲ! ಸರ್ಕಾರೀ ಶಾಲೆಯಾದ್ದರಿಂದ, ಸರ್ಕಾರದ್ದೇ ನಿರ್ದೇಶನದ ಮೇರೆಗೆ ಹೇಳದೇ ಕೇಳದೇ ನಮ್ಮನ್ನು ಇದ್ದಕ್ಕಿದ್ದಂತೆ ಆಸ್ಪತ್ರೆಗೆ ನಡೆಸಿಕೊಂಡುಹೋಗಿ ವೈದ್ಯರ ಕೋಣೆಯ ಹೊರಗೆ ಸಾಲಾಗಿ ನಿಲ್ಲಿಸಿಬಿಡುತ್ತಿದ್ದರು. ನನಗಂತೂ ಈ ಇಂಜಕ್ಷನ್ ಎಂದರೆ ಇನ್ನಿಲ್ಲದ ಭಯ. ಅದೊಂದು ದಿನ ಹಾಗೇ ಆಯಿತು. ಎಂದಿನಂತೆ ನಡೆಯುತ್ತಿದ್ದ ತರಗತಿಯ ಮಧ್ಯೆ ಇದ್ದಕ್ಕಿದ್ದಂತೆ ಒಳಪ್ರವೇಶಿಸಿದ ಮುಖ್ಯಶಿಕ್ಷಕರು ‘ಎಲ್ಲರೂ ಸಾಲಾಗಿ ಆಸ್ಪತ್ರೆಯ ಕಡೆ ನಡೆಯಿರಿ. ಯಾರೂ ಗಲಾಟೆ ಮಾಡಬಾರದು’ ಎಂದು ಉಗ್ರ ದನಿಯಲ್ಲಿ ಘೋಷಿಸಿಬಿಟ್ಟರು. ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೇ ನಾನು ಆಸ್ಪತ್ರೆಯತ್ತ‌ ಸಾಗುವ ರಸ್ತೆಯ ಮೇಲಿದ್ದೆ.

“ಯಾಕೆ ಕರ್ಕೊಂಡೋಗ್ತಿದಾರೆ?”

“ನಮ್ಮ‌ ದೇಶದಲ್ಲಿ ಹುಚ್ನಾಯಿ ಖಾಯ್ಲೆ ಜಾಸ್ತಿ ಆಗಿದ್ಯಂತೆ. ಅದಕ್ಕೇ ಎಲ್ರನ್ನೂ ಕರ್ಕೊಂಡೋಗಿ ಹೊಕ್ಕಳ ಸುತ್ತ ಹದಿನಾಲಕ್ಕು ಇಂಜಕ್ಷನ್ ಕೊಡ್ತಾರಂತೆ!”

ಮೊದಲೇ ಹೆದರಿ ಪತರಗುಟ್ಟುತ್ತಿದ್ದ ನಾನು ಹಿಂದುಮುಂದಿನಿಂದ ಕೇಳಿಬರುತ್ತಿದ್ದ ಈ ಗುಸುಗುಸು, ಪಿಸುಪಿಸುಗಳಿಗೆ ಗಡಗಡ ನಡುಗಿಹೋದೆ. ಹದಿನಾಲಕ್ಕು ಇಂಜಕ್ಷನ್ ಗಳು!! ಮುಂದಿನ ಏಳೂ ಜನ್ಮಗಳಲ್ಲಿ ಬರಲಿರುವ ಸಾವುಗಳೆಲ್ಲವೂ ಒಮ್ಮೆಗೇ ಧುತ್ತನೆ ಕಣ್ಮುಂದೆ ನಿಂತಂತೆ!

ಅವರಿವರು ಹೇಳಿದ ಊಹಾಪೋಹಗಳ ಕೇಳಿಯೇ ಒಂದಿಬ್ಬರು ಹುಡುಗರು ರಸ್ತೆಯ ಪಕ್ಕದಲ್ಲಿದ್ದ ಗದ್ದೆ, ಪೊದೆಗಳಿಗೆ ಹಾರಿ ಪರಾರಿಯಾದರು. ನನಗೂ ಹಾಗೇ ಓಡಿಹೋಗಬೇಕೆನಿಸಿತಾದರೂ ಧೈರ್ಯ ಸಾಲದ ಕಾರಣ ಬೇರೆ ದಾರಿಯಿಲ್ಲದೆ ಎಲ್ಲರೊಂದಿಗೆ ನಡೆದು ಆಸ್ಪತ್ರೆಯ ಡಾಕ್ಟರ ಕೊಠಡಿಯೆದುರಿನ ಸಾಲಿನಲ್ಲಿ ಒಬ್ಬನಾದೆ.

ನನ್ನ ಎದುರಿಗೆ ನಿಂತಿದ್ದವನು ಶ್ರೀಕಾಂತ. ನನ್ನೊಳಗೆ ಕೆಜಿ ಲೆಕ್ಕದಲ್ಲಿದ್ದ ಭಯ ಅವನೊಳಗೆ ಕ್ವಿಂಟಾಲ್ ತೂಕದಲ್ಲಿತ್ತು. ಸಾಲದ್ದಕ್ಕೆ ನಮ್ಮೆದುರಿದ್ದ ಕೊಠಡಿಯೊಳಗಿನಿಂದ ಬರುತ್ತಿದ್ದ ಅಯ್ಯಯ್ಯೋ.. ಅಪ್ಪಯ್ಯೋ.. ಅಮ್ಮಯ್ಯೋ.. ಬ್ಯಾಡ್ರೋ.. ಎಂಬ ದಾರುಣ ಆರ್ತನಾದಗಳು ಅವನನ್ನು ಮತ್ತಷ್ಟು ಹೆದರಿಸಿದ್ದವೆಂದು ಕಾಣುತ್ತದೆ. ಒಬ್ಬೊಬ್ಬರೇ ಕಳೆಯುತ್ತಾ ತನ್ನ ಸರದಿ ಹತ್ತಿರ ಬಂದಂತೆಲ್ಲಾ ಅವನು ತನ್ನ ಸೊಂಟವನ್ನು ತಿಕ್ಕಿಕೊಳ್ಳುತ್ತಾ, ಕೊಡಲಿರುವ ಇಂಜಕ್ಷನ್ ನ ಭಯಾನಕ ನೋವನ್ನು ಕಲ್ಪಿಸಿಕೊಳ್ಳುತ್ತಾ ಊಂ ಊಂ ಎಂದು ಸಣ್ಣಗೆ ಅಳಲಾರಂಭಿಸಿದ್ದ. ನಿಧಾನವಾಗಿ ಅವನೆದುರಿದ್ದ ಸಾಲು ಕರಗಿ ಕೊನೆಗೂ ಅವನ ಸರದಿ ಬಂದೇ ಬಿಟ್ಟಿತು. ಒಳಹೋದದ್ದೇ ತಡ, ಬಾಗಿಲಿನಂಚಿನಲ್ಲಿ ನಿಂತಿದ್ದ ನನಗೆ ಸಾಯುತ್ತಿರುವ ಕತ್ತೆಯೊಂದರ ಚೀತ್ಕಾರದಂಥಹಾ ಓಯೋಯೋಯೋ ಎಂಬ ಒರಲಾಟವೂ, ಒಳಗಡೆ ಬೆಡ್ ಹೊರಳಾಡುತ್ತಿರುವ ಧಡಧಡ ಶಬ್ದವೂ ಕಿವಿಗೆ ಬಿತ್ತು. ಮರುಕ್ಷಣವೇ ಶ್ರೀಕಾಂತ ಅರ್ಧ ಬಿಚ್ಚಿಹೋದ ಚಡ್ಡಿಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಮಟನ್ ಶಾಪ್ ನಿಂದ ತಪ್ಪಿಸಿಕೊಂಡ ಕುರಿಯಂತೆ ಆರ್ತನಾದ ಮಾಡುತ್ತಾ ಕೋಣೆಯಿಂದ ಹೊರಗೋಡಿ ಬಂದ. ಬಿಟ್ಟಿದ್ದರೆ ತನ್ನ ಮನೆಯ ತನಕ ಹಾಗೇ ಓಡುತ್ತಿದ್ದನೇನೋ? ಆದರೆ ಬಾಗಿಲಿನಲ್ಲೇ ನಿಂತಿದ್ದ ಮೇಷ್ಟರು ಅವನನ್ನು ಲಬಕ್ಕನೆ ಹಿಡಿದು ಕಾಂಪೌಂಡರ್ ನ ಸಹಾಯದಿಂದ ಮತ್ತೆ ಒಳಗಡೆಗೆ ಎಳೆದೊಯ್ದರು. ಈ ಸಲ ಒಳಗಡೆ ಆಪರೇಶನ್ ಗೆ ಸರಿಸಮನವಾದದ್ದೇನೋ ನಡೆಯುತ್ತಿದೆಯೆಂಬಂತೆ ಅವನು ಸೂರೇ ಹಾರಿಹೋಗುವಂತೆ ಬೊಬ್ಬೆ ಹೊಡೆದ.

ಅಷ್ಟೇ! ಅಷ್ಟು ಹೊತ್ತು ಇದ್ದ ಅಲ್ಪಸ್ವಲ್ಪ ಧೈರ್ಯವೂ ನನ್ನ ಗುಂಡಿಗೆಯನ್ನು ಬಿಟ್ಟು ಹಾರಿಹೋಯಿತು. ನನಗೇ ಗೊತ್ತಿಲ್ಲದೆ ವ್ಯಾ.. ಎಂಬ ಅಳು ಗಂಟಲಿನಿಂದ ಹೊರಬಂತು. ಆಗಲೇ ವೈದ್ಯರ ಕೊಠಡಿಯಿಂದ ಹೊರಬಂದ ಕಾಂಪೌಂಡರ್ ನನ್ನನ್ನು ಒಳಗೆ ಕರೆದುಕೊಂಡು ಹೋದರು!

ಒಳಗಡೆಯ ದೃಶ್ಯ ಅತ್ಯಂತ ಭಯಾನಕವಾಗಿತ್ತು. ಅಲ್ಲಿದ್ದ ಮಂಚ ಈಗಷ್ಟೇ ಇಲ್ಲಿ ಎಮ್ಮೆಯೊಂದನ್ನು ಒತ್ತಿ ಹಿಡಿದುಕೊಂಡು ಬಲವಂತವಾಗಿ ಅದರ ಹೊಟ್ಟೆಯಿಂದ ಕರುವನ್ನೆಳೆದು ಆಚೆತೆಗೆದಿರುವಂತೆ ಅಸ್ತವ್ಯಸ್ತವಾಗಿತ್ತು. ಅದರ ಎದುರು ನಿಂತಿದ್ದ ಡಾಕ್ಟರು ಇಂಜಕ್ಷನ್ನನ್ನು ಹಿಡಿದು ‘ಹೂಂ’ ಎಂದರು. ನಾನಾದರೋ ಶ್ರೀಕಾಂತನ ಹತ್ತು ಪಟ್ಟು ಜೋರಾಗಿ ಬೊಬ್ಬೆ ಹೊಡೆದು, ಎಗರಾಡುತ್ತಾ ಹಾರಿಬಿದ್ದು ಓಡಲು ಪ್ರಯತ್ನಿಸಿದೆನಾದರೂ ಮೊದಲೇ ಇದರ ಅರಿವಿದ್ದ ಡಾಕ್ಟರ್, ಕಾಂಪೌಂಡರ್ ಹಾಗೂ ಮಾಷ್ಟರು ಒಟ್ಟಾಗಿ ನನ್ನನ್ನು ಮಂಚಕ್ಕೊತ್ತಿಹಿಡಿದು ಮಲಗಿಸಿ ಇಂಜಕ್ಷನ್ ಕೊಟ್ಟೇಬಿಟ್ಟರು.

ಶ್ರೀಕಾಂತ ಹಾಗೂ ನಾನು ಡಾಕ್ಟರ ಕೊಠಡಿಯೊಳಗಡೆ ಹಾವು ಹಿಡಿದ ಕಪ್ಪೆಗಳಂತೆ ಲಬೋಲಬೋ ಎಂದು ಒರಲಾಡಿದ ಈ ಕಥೆಯು ದಂತ ಕಥೆಯಾಗಿ ಮುಂದಿನ ಹಲವು ದಿನಗಳ ತನಕ ನಮ್ಮ ಶಾಲೆಯ ತುಂಬಾ ಸುಳಿದಾಡಿಕೊಂಡಿತ್ತು.

*****

ನೆನಪಿನೇಣಿಯ ಇಳಿತಯಾನದಲ್ಲಿ ಯಾವುದು ಮೊದಲೋ, ಯಾವುದು ನಂತರವೋ ಗೊತ್ತಿಲ್ಲ. ನಮ್ಮೂರ ಆಸ್ಪತ್ರೆಗೆ ಸಂಬಂಧಿಸಿದ ಇನ್ನೊಂದು ತಮಾಷೆಯ ಸಂಗತಿಯಿದೆ. ಅದೊಂದು ವರ್ಷ ನಮ್ಮ ಶಾಲೆ ಕ್ರೀಡಾಂಗಣದಲ್ಲಿ ಜರುಗಬೇಕಾಗಿದ್ದ ಕ್ರೀಡೋತ್ಸವವನ್ನು ಅದ್ಯಾವುದೋ ಕಾರಣಕ್ಕೆ ಆಸ್ಪತ್ರೆಯ ಪಕ್ಕದಲ್ಲಿರುವ ಖಾಲಿ ಬಯಲಿನಲ್ಲಿ ನಡೆಸಲು ನಿರ್ಧರಿಸಿದರು. ಸರಿ, ಆ ಬಯಲಿನಿಂದ ಕಲ್ಲು, ಕೊಕ್ಕರುಗಳನ್ನೆಲ್ಲಾ ತೆಗೆದು ಸ್ವಚ್ಛಗೊಳಿಸಿ, ಸುಣ್ಣದಲ್ಲಿ ವಿವಿಧ ಕೋರ್ಟ್ ಗಳ ಗೆರೆಗಳನ್ನೆಳೆದು ಸಿದ್ಧಗೊಳಿಸುವ ಕೆಲಸ ನಮ್ಮದಾಯಿತು. ಹೀಗೇ ಕೆಲಸ ಮಾಡುತ್ತಾ ಸಂಜೆಯ ವೇಳೆಗೆ ನಾನು ಆಸ್ಪತ್ರೆಯ ಆವರಣಕ್ಕೆ ತಾಗಿಕೊಂಡಿದ್ದ ಬಯಲಿನ ಮೂಲೆಯಲ್ಲಿ ಏನೋ ಮಾಡುತ್ತಿದ್ದೆ‌. ನಾನು ನಿಂತಲ್ಲಿಂದ ಆಚೆ ಸಮೀಪದಲ್ಲೇ ಆಸ್ಪತ್ರೆಯ ಹಿಂದುಗಡೆ ಶೀಟು ಮಾಡಿನ ಶೆಡ್ ಒಂದಿತ್ತು. ಆಗ ನನ್ನೊಟ್ಟಿಗೇ ಅಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯನೊಬ್ಬ ಅದನ್ನು ತೋರಿಸುತ್ತಾ ನನಗೆ,  ‘ಅದು ಯಾವ ಜಾಗ ಗೊತ್ತಾ?’ ಎಂದು ಕೇಳಿದ. ನಾನು ಇಲ್ಲ ಎಂದೆ. ಅದಕ್ಕವನು ‘ಅದು ಪೋಸ್ಟ್ ಮಾರ್ಟಂ’ ಮಾಡೋ ಜಾಗ ಕಣೋ! ಮೊನ್ನೆ ಸುಕಡ್ಯಾ ಬಾವಿಗೆ ಬಿದ್ದು ಸತ್ನಲ್ಲ? ಅವನ ಪೋಸ್ಟ್ ಮಾರ್ಟಂಮನ್ನ ಅಲ್ಲೇ ಮಾಡಿದ್ದು. ನಾನು ಕಣ್ಣಾರೆ ನೋಡಿದ್ದೇನೆ. ಹೆಣವನ್ನ ಆ ಶೆಡ್ ನೊಳಗೆ ಮಲಗಿಸಿ ತಲೆಗೆ ಪಟ್ಟಂತ ಹೊಡೆದು ಓಪನ್ ಮಾಡಿ ಪೋಸ್ಟ್ ಮಾರ್ಟಂ ಮಾಡಿದರು ಎಂದುಬಿಟ್ಟ.

ಅವನು ನಿಜ ಹೇಳಿದ್ದನೋ? ಸುಳ್ಳು ಹೇಳಿದ್ದನೋ? ಅವನಿಗೆ ಹಾಗೂ ಸುಕಡ್ಯಾನ ಶವಗಳಿಗೆ ಮಾತ್ರ ಗೊತ್ತು. ಆದರೆ ನಾನು ಮಾತ್ರ ಈ ಸಂಗತಿಯಿಂದ ಸಿಕ್ಕಾಪಟ್ಟೆ ಹೆದರಿಬಿಟ್ಟೆ. ಸಾಲದ್ದಕ್ಕೆ ಆ ಸುಕ್ಕಡ್ಯಾ ಕೆಲವೇ ದಿನಗಳ ಕೆಳಗೆ ನಮ್ಮ ಮನೆಗೆ ಸ್ವಲ್ಪವೇ ದೂರದಲ್ಲಿದ್ದ ಬಾವಿಗೆ ಬಿದ್ದು ಪ್ರಾಣಬಿಟ್ಟಿದ್ದ. ಬಾವಿಯೊಳಗೆ ತಲೆಕೆಳಗಾಗಿ ತೇಲುತ್ತಿದ್ದ ಅವನ ಶರೀರವ ನೋಡಿದವರ ಪೈಕಿ ನಾನೂ ಒಬ್ಬನಾದ್ದರಿಂದ ಗೆಳೆಯನ ಬೆದರಿಕೆ ನನ್ನ ಮೇಲೆ ತುಸು ಹೆಚ್ಚಾಗಿಯೇ ಪರಿಣಾಮ ಬೀರಿತು. ಕ್ರೀಡೋತ್ಸವ ಮುಗಿದು ಮಾರನೆಯ ದಿನ ಮನೆಯಲ್ಲಿದ್ದ ನನ್ನ ತಲೆಯ ತುಂಬಾ ಸುಕಡ್ಯಾನ ಪ್ರೇತದ್ದೇ ಭಯ! ಅದು ಯಾವ ದಿಕ್ಕಿನಿಂದ ಬಂದು ನನ್ನನ್ನೆತ್ತಿಕೊಂಡು ಹೋಗುತ್ತದೋ ಎಂಬ ಆತಂಕದಲ್ಲಿ ಅಂಗಳಕ್ಕಿಳಿಯಲಿಕ್ಕೂ ಹೆದರಿಕೆಯಾಗತೊಡಗಿತ್ತು. ಆದರೆ ಆಡಲಿಕ್ಕೆ ಅಂಗಳಕ್ಕಿಳಿಯಲೇಬೇಕಲ್ಲಾ? ಅದಕ್ಕೇನು ಮಾಡುವುದು?

ಯೋಚಿಸುತ್ತಿದ್ದ ನನಗೆ ಅದ್ಭುತವಾದ ಉಪಾಯವೊಂದು ಹೊಳೆಯಿತು. ಆ ಹೊತ್ತಿಗೆ ನಮ್ಮನೆಯಲ್ಲೇ ಇದ್ದ ಅಜ್ಜಿಯರಾದ ಅಪ್ಪನ ಅಮ್ಮ ಹಾಗೂ ಅಮ್ಮನ ಅಮ್ಮರಿಬ್ಬರನ್ನೂ ಧೈರ್ಯಕ್ಕೆಂದು ಅಂಗಳದಲ್ಲಿ ಕೂರಿಸಿಕೊಂಡೆ! ಹೀಗೆ, ಯಾವ ಕ್ಷಣದಲ್ಲಾದರೂ, ಯಾವ ದಿಕ್ಕಿನಿಂದಲಾದರೂ ಬಂದು ನನ್ನ ಮೇಲೆರಗಬಹುದಾದ ಸುಕಡ್ಯಾನ ಪ್ರೇತದೊಂದಿಗೆ ಗುದ್ದಾಡಿ ನನ್ನನ್ನು ಕಾಪಾಡುವ ಬಾಡಿಗಾರ್ಡ್ ಕೆಲಸಕ್ಕೆ ವಯಸ್ಸು ಎಪ್ಪತೈದು ದಾಟಿ, ಬೆನ್ನು ಬಾಗಿ, ನಡೆಯಲೂ ಕಷ್ಟಪಡುತ್ತಿದ್ದ ಅವರಿಬ್ಬರು ಅಜ್ಜಿಯರನ್ನು ನೇಮಿಸಿಕೊಂಡ ನಾನು ಅಂಗಳದಲ್ಲಿ ಆಡತೊಡಗಿದೆ!

ಬಣ್ಣಬಣ್ಣಗಳಿಂದ ಕೂಡಿದ್ದ ಆ ಮಾತ್ರೆಗಳೆಡೆಗೆ ತುಸು ಹೆಚ್ಚಾಗಿ ಆಕರ್ಷಿತನಾಗುತ್ತಿದ್ದ ನಾನು ಅವರ ಮಾತನ್ನೂ ಮೀರಿ ಮಾತ್ರೆ ತಿಂದೇ ಬಿಡುತ್ತೇನೆಂಬ ಭಯದಲ್ಲಿ ಅಮ್ಮ “ನೋಡೂ, ಅಲ್ಲೇ ಪಕ್ಕದಲ್ಲಿ ಜಾನುವಾರು ಆಸ್ಪತ್ರೆಯಿದೆ. ಅಲ್ಲಿ ಎಮ್ಮೆಗೆ ಕೊಡುವ ಮಾತ್ರೆಗಳಿರ್ತಾವೆ. ಅವು ಮಾರಾಟವಾಗ್ದೇ ಇದ್ದಾಗ ಈ ಆಸ್ಪತ್ರೆಗೆ ತಂದು ಹೀಗೆ ನಿಮ್ಗೆಲ್ಲಾ ಕೊಡ್ತಾರೆ. ನೀನು ಅದನ್ನೇನಾದರೂ ತಿಂದ್ರೆ ನಿಂಗೆ ಎಮ್ಮೆಯ ಹಾಗೆ ಉದ್ದ ಮೂತಿ, ಕೋಡು, ಬಾಲ ಎಲ್ಲಾ ಬರತ್ತೆ” ಎಂದು ಹೆದರಿಸಿದ್ದಳು.

ಆಗೆಲ್ಲಾ ಖಾಯಿಲೆಗಳು ಮನುಷ್ಯನಿಂದ ಮನುಷ್ಯನಿಗೆ ಹರಡುವುದಕ್ಕಿಂತ ಹೆಚ್ಚಾಗಿ ಬಾಯಿಂದ ಬಾಯಿಗೆ ಹರಡುತ್ತಿದ್ದವು. ಅದರಲ್ಲೂ ಚಿಕ್ಕಮಕ್ಕಳಾದ ನಮ್ಮ ನಡುವೆ ಖಾಯಿಲೆಗಳ ಬಗ್ಗೆ ತಲೆಬುಡವಿಲ್ಲದ ಊಹಾಪೋಹಗಳೇ ಹೆಚ್ಚಾಗಿದ್ದವು.

ಆ ಹೊತ್ತಿಗೆ ಭಾರತದಲ್ಲಿ ಎಚ್‌ಐವಿ ಏಡ್ಸ್ ಉತ್ತುಂಗ ಸ್ಥಾನದಲ್ಲಿತ್ತೆಂದು ಕಾಣುತ್ತದೆ, ಟೀವಿಯಲ್ಲಿ, ರೇಡಿಯೋದಲ್ಲಿ ಪ್ರತಿದಿನ ಅದೆಷ್ಟೋ ಸಲ ಬರೀ ಎಚ್‌ಐವಿ ಏಡ್ಸ್ ನದೇ ಜಾಹೀರಾತು ಪ್ರಸಾರವಾಗುತ್ತಿತ್ತು. ಇಡೀ ಮನುಕುಲವನ್ನೇ ಬೆದರಿಸುತ್ತಿದ್ದ ಈ ಮಹಾಮಾರಿಯ ಹೆಸರೊಂದರ ಹೊರತಾಗಿ ಮತ್ಯಾವ ಮಾಹಿತಿಯನ್ನೂ ತಿಳಿಯದ ನಮ್ಮ ಬಾಯಿಗಳಲ್ಲಿ ಏಡ್ಸ್ ಬಗ್ಗೆ ನಮ್ಮದೇ ಆದ ಊಹಾಪೋಹಗಳಿದ್ದವು. ಅವುಗಳ ಪೈಕಿ ಒಂದು – ತುಕ್ಕು ಹಿಡಿದ ಕಬ್ಬಿಣ ಚುಚ್ಚಿದರೆ ಏಡ್ಸ್ ಬರುತ್ತದೆ ಎನ್ನುವುದು!

ಇದನ್ನು ಯಾರ್ಯಾರು ಎಷ್ಟೆಷ್ಟು ನಂಬಿದ್ದರೋ ಗೊತ್ತಿಲ್ಲ, ನಾನು ಮಾತ್ರ ಅತ್ಯಂತ ಬಲವಾಗಿ ನಂಬಿದ್ದೆ. ಜಗತ್ತಿನಲ್ಲಿ ಏಡ್ಸ್ ನಿಂದುಂಟಾದ ಸಾವುಗಳೆಲ್ಲವಕ್ಕೂ ತುಕ್ಕು ಹಿಡಿದ ಕಬ್ಬಿಣವನ್ನೇ ಹೊಣೆಗಾರನನ್ನಾಗಿ ಮಾಡಿಬಿಟ್ಟಿದ್ದೆ. ಸಾಲದ್ದಕ್ಕೆ ಡಿಡಿ ಒಂದರಲ್ಲಿ ಬಿತ್ತರವಾಗಿದ್ದ ಕೆಲ ಎಚ್ಚರಿಕೆಯ ಸಾಕ್ಷ್ಯ ಚಿತ್ರಗಳು ಏಡ್ಸ್ ಬಗೆಗಿನ ನನ್ನ ಭಯವನ್ನು ದುಪ್ಪಟ್ಟುಗೊಳಿಸಿದ್ದವು. ಹೀಗಾಗಿ ನಾನು ತುಕ್ಕು ಹಿಡಿದ ಕಬ್ಬಿಣದಿಂದ ಆದಷ್ಟು ದೂರವೇ ಉಳಿದಿದ್ದೆ‌.

ಆದರೆ ಎಷ್ಟೇ ಎಚ್ಚರಿಕೆಯಿಂದಿದ್ದರೂ ಒಂದು ದಿನ ತುಕ್ಕು ಹಿಡಿದ ಕಬ್ಬಿಣ ನನ್ನನ್ನು ಕಚ್ಚಿಯೇಬಿಟ್ಟಿತು. ಅದೊಂದು ದಿನ ನಾನು ರಸ್ತೆಯಲ್ಲಿ ಮೇಲಕ್ಕೆ ಚಿಮ್ಮುವ ಗಿರಗಿಟ್ಲೆಯೊಂದಿಗೆ ಆಡುತ್ತಾ ಹೋಗುತ್ತಿದ್ದಾಗ ನನ್ನ ಕೈಯಿಂದ ಚಿಮ್ಮಿದ ಅದು ಪಕ್ಕದಲ್ಲಿ ಪೊದೆಗಳಿಂದಾವೃತವಾಗಿದ್ದ ಜಾಗದೊಳಕ್ಕೆ ಹೋಗಿ ಬಿದ್ದುಬಿಟ್ಟಿತು. ಅದನ್ನು ಹುಡುಕಲೆಂದು ರಸ್ತೆ ಬದಿಯ ಮೋರಿಯನ್ನಿಳಿದು ಬಗ್ಗಿ ನೀಕಿ ಪೊದೆಯತ್ತ ಕೈ ತೂರಿಸಿದೆ..

ಕಚಕ್! ಯಾರದೋ ಸೈಟಾಗಿದ್ದ ಆ ಜಾಗಕ್ಕೆ ಹಾಕಿದ್ದ ತಂತಿಬೇಲಿಯ ಮುಳ್ಳೊಂದು ನನ್ನ ಕೈಗೆ ಚುಚ್ಚಿಬಿಟ್ಟಿತು. ಗಾಬರಿಗೊಂಡ ನಾನು ಮತ್ತೊಮ್ಮೆ ಪರೀಕ್ಷಿಸಿ ನೋಡಿದೆ: ಹೌದು.. ಅದೇ! ಪ್ರಪಂಚದಲ್ಲಿ ಸಾವಿರಾರು ಜನರಿಗೆ ಏಡ್ಸ್ ಬರಿಸಿ ಕೊಂದಿರುವ ತುಕ್ಕು ಹಿಡಿದ ಕಬ್ಬಿಣ!

ಓಹ್ ಮೈ ಗಾಡ್! ನಾನು ಬೆವರಿಹೋದೆ. ಈಗೇನು ಮಾಡುವುದು? ಹೊಳೆಯಲಿಲ್ಲ. ಹಾಗಂತ ಯಾರಿಗಾದರೂ ಹೇಳಲಿಕ್ಕೆ ಭಯವಾಗಿ ಒಳಗೊಳಗೇ ನಡುಗುತ್ತಾ ಸುಮ್ಮನಿದ್ದೆ. ಟೀವಿಯಲ್ಲಿ ಏಡ್ಸ್ ನ ಜಾಹೀರಾತು ಬಂದಾಗೆಲ್ಲಾ ತುಕ್ಕು ತಂತಿಯ ಚೂಪ ಮೂತಿ ನೆನಪಾಗಿ ನಡುಕ ಮೂಡುತ್ತಿತ್ತು.

ಹೀಗಿದ್ದಾಗಲೇ ಅದೊಂದು ದಿನ ಯಾವುದೋ ಲಸಿಕೆಗೆಂದು ನಮ್ಮನ್ನು ಶಾಲೆಯಿಂದ ಆಸ್ಪತ್ರೆಗೆ ಕರೆದುಕೊಂಡುಹೋದರು. ಅಲ್ಲಿ ನನ್ನ ಸರದಿಗಾಗಿ ಬೆಂಚಿನ ಮೇಲೆ ಕುಳಿತು ಕಾಯುತ್ತಿದ್ದ ನನ್ನ ಕಣ್ಣಿಗೆ ಅದು ಬಿತ್ತು – ‘ನನ್ನನ್ನು ಬಳಸಿ, ಎಚ್‌ಐವಿ ಏಡ್ಸನ್ನು ದೂರವಿಡಿ’ ಎಂದು ಬರೆದುಕೊಂಡಿದ್ದ, ಗೋಡೆಗೆ ತೂಗುಹಾಕಿದ್ದ ಪೆಟ್ಟಿಗೆ! ಖಾಯಿಲೆ ಬಂದವನ ಕಾಲಿಗೆ ಸಾಕ್ಷಾತ್ ಅಮೃತಬಳ್ಳಿಯೇ ಸುತ್ತಿಕೊಂಡಂತೆ!

ನನಗೆ ಅರ್ಥವಾಯಿತು: ಈ ಪೆಟ್ಟಿಗೆಯೊಳಗೆ ಮಾತ್ರೆಗಳಿವೆ. ಅದನ್ನು ತಿಂದರೆ ಏಡ್ಸ್ ಹೋಗುತ್ತದೆ! ಇಲ್ಲೇ ಯಾರಾದರೂ ಡಾಕ್ಟರಿಗೋ, ನರ್ಸಿಗೋ ನನಗೆ ತುಕ್ಕು ಹಿಡಿದ ಕಬ್ಬಿಣ ಚುಚ್ಚಿರುವ ಸಂಗತಿ ಹೇಳಿ ಆ ಮಾತ್ರೆಯನ್ನು ಕೊಡುವಂತೆ ಕೇಳಬೇಕು!

ಎರಡು/ಮೂರನೇ ತರಗತಿಯ ಹುಡುಗನೊಬ್ಬ ಸರ್ಕಾರೀ ಆಸ್ಪತ್ರೆಗೆ ಹೋಗಿ ‘ನನಗೆ ಏಡ್ಸ್ ಬರದಂತೆ ತಡೆಗಟ್ಟುವ ಮಾತ್ರೆ ಕೊಡಿ’ ಎಂದು ಕೇಳಿದ್ದು ಪ್ರಪಂಚದ ಇತಿಹಾಸದ ಪುಟಗಳಲ್ಲಿ ಹೇಗೆಲ್ಲಾ ದಾಖಲಾಗುತ್ತಿತ್ತೋ ನನಗಂತೂ ಗೊತ್ತಿಲ್ಲ‌, ಪುಣ್ಯಕ್ಕೆ ಹಾಗಾಗಲಿಲ್ಲ. ಏಡ್ಸ್ ಬಗ್ಗೆ ಎಷ್ಟೇ ಭಯವಿದ್ದರೂ ಡಾಕ್ಟರುಗಳ ಬಗ್ಗೆ ಅದಕ್ಕಿಂತ ಭಯವಿದ್ದುದರಿಂದಲೋ ಏನೋ, ನಾನು ಅವರ ಬಳಿ ಹೋಗಿ ಮಾತ್ರೆ ಕೊಡುವಂತೆ ಕೇಳುವ ಧೈರ್ಯ ಮಾಡಲಿಲ್ಲ.

ಇತಿಹಾಸ ರಚನೆಯಾಗುವುದು ಸ್ವಲ್ಪದರಲ್ಲಿ ತಪ್ಪಿಹೋಯಿತು.

ಆಗ ಏಕೆ ಹಾಗೆಲ್ಲಾ ತಮಾಷೆಗಳಾಗುತ್ತಿದ್ದವು ಎಂದು ಈಗ ಕುಳಿತು ಯೋಚಿಸಿದರೆ ಹೊಳೆಯುವ ಕಾರಣ- ಭಯ! ಸಾವಿನ ಭಯ! ಖಾಯಿಲೆಗಳ ಭಯ! ಖಾಯಿಲೆಗಳದ್ದೊಂದಾದರೆ ಅವು ವಾಸಿಯಾಗಲಿಕ್ಕೆ ಕೊಡುವ ಇಂಜಕ್ಷನ್ ಅದಕ್ಕಿಂತಲೂ ಭಯ! ತೀರ್ಥಹಳ್ಳಿ ಪೇಟೆಯಲ್ಲೊಬ್ಬ ವ್ಯಕ್ತಿ ಓಡಾಡಿಕೊಂಡಿದ್ದ. ಅವನ ಕಣ್ಣುಗಳು ಉಳಿದೆಲ್ಲರ ಕಣ್ಣಿನಂತಿರದೆ ಗುಡ್ಡೆಗಳು ಆಚೆ ಬಂದು ವಿಕಾರವಾಗಿ ಕಾಣುತ್ತಿದ್ದವು. ಅವನ ಬಗ್ಗೆ ನಮ್ಮ ‘ಭಯ’ದ ಲೋಕದಲ್ಲಿ ನಮ್ಮದೇ ಆದ ಕಥೆಯೊಂದಿತ್ತು. ಸೀನು ಬರುವಾಗ ಕಣ್ಣನ್ನ ಮುಚ್ಚಿಕೊಳ್ಳಲೇಬೇಕಂತೆ, ಆದರೆ ಇವನು ಒಂದು ಸಲ ಸೀನು ಬಂದಾಗ ಕಣ್ಣನ್ನು ಮುಚ್ಚಿಕೊಳ್ಳಲೇ ಇಲ್ಲವಂತೆ, ಆಗ ಅವನ ಕಣ್ಣುಗುಡ್ಡೆಗಳು ಹೀಗೆ ಹೊರಬಂದವಂತೆ ಎಂದು ನನಗ್ಯಾರೋ ಹೇಳಿದ್ದರು. ಇದನ್ನು ಕೇಳಿದ ನಾನು ನನಗೆಂದಾದರೂ ಸೀನು ಬಂದಾಗ ಕಣ್ಣು ಮುಚ್ಚಿಕೊಳ್ಳಕ್ಕೆ ಮರೆತುಹೋದರೆ ಏನಪ್ಪಾ ಗತಿ? ಎಂದು ಕಲ್ಪಿಸಿಕೊಂಡು ಒಳಗೇ ಗಡಗಡ ನಡುಗಿದ್ದೆ.

*****

ಸರ್ಕಾರೀ ಆಸ್ಪತ್ರೆಗಳಿಗೆ ಹೋಗಬಾರದು, ಅಲ್ಲಿ ಸರಿಯಾದ ಚಿಕಿತ್ಸೆ ದೊರೆಯುವುದಿಲ್ಲ ಎಂಬ ನನ್ನ ಅತಿದೊಡ್ಡ ಮೂರ್ಖ ನಂಬಿಕೆಯನ್ನು ಸುಳ್ಳಾಗಿಸಿದ್ದು ನನ್ನ ತಂದೆಯ ಬ್ರೈನ್ ಹೆಮರೇಜ್ ಘಟನೆ. ನಡುರಾತ್ರೆಯ ವೇಳೆಗೆ ಇದ್ದಕ್ಕಿದ್ದಂತೆ ತಲೆಯೊಳಗಿನ ನರವೊಂದರಲ್ಲಿ ರಕ್ತಸ್ರಾವವಾಗಿ ಹೆಮರೇಜಿಕ್ ಸ್ಟ್ರೋಕ್ ನಿಂದ ಬಳಲತೊಡಗಿದ ಅಪ್ಪನನ್ನು ನೇರ ತೀರ್ಥಹಳ್ಳಿಯ ಖಾಸಗೀ ಆಸ್ಪತ್ರೆಯೊಂದಕ್ಕೆ ದಾಖಲಿಸಿದೆವು‌. ಹಣದ ಆಸೆಗೋ, ಒಂದಿಡೀ ದಿನದ ಬಿಲ್ ಮಾಡಲಿಕ್ಕೋ, ನಿರ್ಲಕ್ಷಕ್ಕೋ ಅಥವಾ ಇನ್ಯಾವ ಕಾರಣಕ್ಕೋ ಏನೋ, ಆ ಆಸ್ಪತ್ರೆಯ ವೈದ್ಯರು ಮೂರು ಗಂಟೆಯೊಳಗೆ ಶಸ್ತ್ರಚಿಕಿತ್ಸೆಗೊಳಪಡಿಸಬೇಕಾದ ಸ್ಥಿತಿಯಲ್ಲಿದ್ದ ಅಪ್ಪನನ್ನು ಸರಿಯಾಗಿ ಗಮನಿಸದೇ ಒಂದಿಡೀ ದಿನ ಆಸ್ಪತ್ರೆಯಲ್ಲಿಟ್ಟುಕೊಂಡಿದ್ದು, ದಿನದ ಕೊನೆಯಲ್ಲಿ ‘ಇದಕ್ಕೆ ಆಪರೇಶನ್ ಮಾಡಬೇಕು, ನಮ್ಮ ಕೈಲಾಗುವುದಿಲ್ಲ’ ಎಂದು ಕಳಿಸಿಬಿಟ್ಟರು. ಹೆಪ್ಪುಗಟ್ಟಿದ ರಕ್ತವನ್ನು ಒಂದಿಡೀ ದಿನ ತನ್ನ ಮೆದುಳಿನೊಳಕ್ಕಿಟ್ಟುಕೊಂಡಿದ್ದ ಕಾರಣಕ್ಕೆ ಅಪ್ಪನ ಪ್ರಾಯಶಃ ಕೈ, ಕಾಲು, ಮಾತುಗಳು ಶಾಶ್ವತವಾಗಿ ನಷ್ಟವಾದವು. ಒಂದೂವರೆ ತಿಂಗಳ ಸತತ ಹೋರಾಟದ ಬಳಿಕ ಅರ್ಧ ಜೀವದಂತಾಗಿದ್ದ ಅಪ್ಪನನ್ನು ಕರೆದುಕೊಂಡು ಊರಿಗೆ ಮರಳಿದ ನನಗೆ ತಿಳಿದ ಸತ್ಯವೇನೆಂದರೆ, ನಮ್ಮೂರಿನಲ್ಲಿ ಇಂಥಹಾ ಅನೇಕ ಘಟನೆಗಳು ನಡೆದಿದ್ದು ಅವರಲ್ಲಿ ಹಲವರು ತಕ್ಷಣ ತೀರ್ಥಹಳ್ಳಿಯ ಸರ್ಕಾರೀ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿದ್ದ ನುರಿತ ವೈದ್ಯರು ರೋಗದ ಗಂಭೀರತೆ, ತೀವ್ರತೆಯನ್ನು ಸರಿಯಾಗಿ ಗುರುತಿಸಿ ತಕ್ಷಣವೇ ಮಣಿಪಾಲ್ ಅಥವಾ ಇನ್ಯಾವುದೋ ದೊಡ್ಡ ಆಸ್ಪತ್ರೆಗೆ ಹೋಗುವಂತೆ ಸರಿಯಾದ ಮಾರ್ಗದರ್ಶನ ಮಾಡಿದ್ದದರಿಂದ ಬಹುಪಾಲು ರೋಗಿಗಳು ಜೀವಂತವಾಗಿ ಮನೆಗೆ ಮರಳಿದ್ದರು. ಅವರಲ್ಲಿ ಹಲವರು ಈಗ ಮೊದಲಿನಂತಾಗಿದ್ದಾರೆ ಕೂಡಾ. ಅಪ್ಪ ಉಳಿದನಾದರೂ ಹೆಮರೇಜ್ ಗೊಳಗಾದ ನಂತರದ ಅಮೂಲ್ಯವಾದ ಸಮಯ ಆ ಖಾಸಗೀ ಆಸ್ಪತ್ರೆಯವರ ಕಪಟತನದಿಂದಾಗಿ ವ್ಯರ್ಥವಾಗಿ, ಶಸ್ತ್ರಚಿಕಿತ್ಸೆ ದೊರೆಯದೇ ಹೋದದ್ದರಿಂದಾಗಿ ತನ್ನ ಕೈ, ಕಾಲು, ಮಾತುಗಳನ್ನು ಹೆಚ್ಚೂ ಕಡಿಮೆ ಶಾಶ್ವತವಾಗಿಯೇ ಕಳೆದುಕೊಂಡುಬಿಟ್ಟ.

ಈಗಲೂ ತೀರ್ಥಹಳ್ಳಿಯ ಸರ್ಕಾರೀ ಆಸ್ಪತ್ರೆಯನ್ನು ನೋಡಿದಾಗೆಲ್ಲಾ ಆ ದಿನ ಒಂದೇ ಒಂದು ಸಲ ಯೋಚಿಸಿ ಅಪ್ಪನನ್ನು ಇಲ್ಲಿಗೆ ಕರೆದುಕೊಂಡು ಹೋಗಬಾರದಿತ್ತೇ ಎಂದೆನಿಸಿ ದುಃಖವಾಗುತ್ತದೆ. ಹೀಗೆ ಸರ್ಕಾರೀ ಆಸ್ಪತ್ರೆಗಳ ಕುರಿತು ನನಗಿದ್ದ ಅಜ್ಞಾನವು ಕೊನೆಗೂ ಜೀವಮಾನದ ಪಶ್ಚಾತ್ತಾಪವೊಂದಕ್ಕೆ ಕಾರಣವಾಯಿತು.