ದಿವಾಕರ್‌ಗೆ ಸಾಹಿತ್ಯದ ಬಗ್ಗೆ ಇರುವ ಆಳವಾದ ಒಳನೋಟಗಳು, ಸಂಗೀತ ಮತ್ತು ಸಿನಿಮಾಗಳ ಬಗ್ಗೆಯೂ ಇದೆ. ಬೇಂದ್ರೆಯವರ ಅನೇಕ ಕವಿತೆಗಳಿಗೆ ದಿವಾಕರ್ ರಾಗಸಂಯೋಜನೆ ಮಾಡಿದ್ದಾರೆ. ‘ಮಲ್ಲಿಗೆ’ಯಲ್ಲಿದ್ದಾಗ ಅನೇಕ ಪುಸ್ತಕಗಳ ಮುಖಪುಟಗಳನ್ನೂ ವಿನ್ಯಾಸ ಮಾಡಿದ್ದರು. ನಮ್ಮ ನಡುವೆ ಓಡಾಡುತ್ತಿರುವ ಜೀನಿಯಸ್‌ಗಳಲ್ಲಿ ದಿವಾಕರ್ ನಿಜಕ್ಕೂ ಪ್ರಮುಖರು ಎನ್ನುವುದರಲ್ಲಿ ಅನುಮಾನವಿಲ್ಲ.
ಎಂಭತ್ತರ ಹೊಸ್ತಿನಲ್ಲಿರುವ ಹಿರಿಯ ಕಥೆಗಾರ ಎಸ್. ದಿವಾಕರ್ ಅವರ ಸಾಹಿತ್ಯ ಸಂಭ್ರಮದ ಕೃತಿ “ಪರಿಮಳದ ಪಡಸಾಲೆ”ಗೆ ಎಂ.ಎಸ್. ಶ್ರೀರಾಮ್ ಬರೆದ ಬರಹ ನಿಮ್ಮ ಓದಿಗೆ
ನಾನು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದ ದಿನಗಳಲ್ಲಿ ಎಸ್. ದಿವಾಕರ್ ಅವರ ಪರಿಚಯವಾಯಿತು. ನಾನಾಗಿಯೇ ಪತ್ರಿಕೆಯ ಕಾರ್ಯಾಲಯಗಳಿಗೆ ಹೋಗಿ ಸಂಪಾದಕರನ್ನು ಭೇಟಿ ಮಾಡುತ್ತಿದ್ದೆ. ಇದಕ್ಕೆ ಕಾರಣವಿತ್ತು. ನನ್ನ ಬರವಣಿಗೆಯ ಬಹುತೇಕ ಭಾಗ ಪ್ರಕಟವಾಗುತ್ತಿರಲಿಲ್ಲ. ಹೀಗಾಗಿ ಸಂಪಾದಕ ವರ್ಗದವರನ್ನು ಭೇಟಿ ಮಾಡಿ, ನನ್ನ ಬರವಣಿಗೆಯನ್ನು ಹೇಗೆ ಉತ್ತಮಪಡಿಸಿಕೊಳ್ಳಬಹುದು ಎಂದು ತಿಳಿವ ಕಾತರ ನನ್ನಲ್ಲಿತ್ತು. ಆದರೆ ಹಾಗೆ ನೇರವಾಗಿ ‘ನನ್ನ ಬರವಣಿಗೆಯನ್ನು ನೀವೇಕೆ ಪ್ರಕಟಿಸುತ್ತಿಲ್ಲ?’ ಎಂದು ಕೇಳುವುದಕ್ಕೆ ಸಂಕೋಚವೂ ಮುಜುಗರವೂ ಆಗುತ್ತಿತ್ತು. ನೇರವಾಗಿ ಕೇಳದೇ, ಅವರುಗಳೊಂದಿಗೆ ಸಂವಾದ ನಡೆಸುವ ಪ್ರಕ್ರಿಯೆಯಿಂದಾಗಿ ಕೆಲವು ಒಳನೋಟಗಳು ಬರಬಹುದು ಎನ್ನುವ ಗಟ್ಟಿ ನಂಬಿಕೆಯಿತ್ತು. ನಾನು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಔಪಚಾರಿಕವಾಗಿ ಓದಿದವನಲ್ಲ. ಆದರೂ ಬರೆಯುವ, ಮತ್ತು ಬರವಣಿಗೆಗೆ ಮನ್ನಣೆ ಬೇಕು ಎನ್ನುವ ತವಕ. ಹೀಗಾಗಿ ಆಗಿನ ದಿನಗಳಲ್ಲಿ ಅನೇಕ ದಿಗ್ಗಜ ಬರಹಗಾರರ ಸಂಗಡ ಸಮಯ ಕಳೆಯುವುದು ಮಾತನಾಡುವುದು ನನ್ನ ಪ್ರಿಯ ಚಟುವಟಿಕೆಯಾಗಿತ್ತು. ಹೀಗೆ ನನಗೆ ಪರಿಚಯವಾದವರು ದಿವಾಕರ್. ‘ಪ್ರಜಾವಾಣಿ’ ಕಾರ್ಯಾಲಯದ ಮೂರನೆಯ ಮಹಡಿಯಲ್ಲಿ, ಒಂದು ಕ್ಯೂಬಿಕಲ್‌ನಲ್ಲಿ ಮಿತಭಾಷಿಗಳಾದ ಜಿ.ಎಸ್. ಸದಾಶಿವ ಕೂರುತ್ತಿದ್ದರು. ಅವರು ಆಗ ‘ಮಯೂರ’ ಪತ್ರಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಪಕ್ಕದಲ್ಲಿ ಸಾಲಾಗಿ ಇದ್ದ ಮೇಜುಗಳಲ್ಲಿ ಎಚ್.ಎನ್. ಆನಂದ, ನಾಗೇಶ ಹೆಗಡೆ ಮತ್ತು ದಿವಾಕರ್ ಕೂತಿರುತ್ತಿದ್ದರು. ನಂತರದ ದಿನಗಳಲ್ಲಿ ಅಲ್ಲಿಗೆ ಶರತ್ ಕಲ್ಕೋಡ್ ಕೂಡಾ ಸೇರಿದರೆಂದು ನೆನಪು.
ಗಮ್ಮತ್ತಿನ ವಿಷಯವೆಂದರೆ, ‘ವಾರೆನೋಟ’ ಎನ್ನುವ ಕಾಲಂ ಬರೆಯುತ್ತಿದ್ದ ಆನಂದ, ವಿಜ್ಞಾನದ ಬಗ್ಗೆ ಬರೆಯುತ್ತಿದ್ದ ನಾಗೇಶ ಹೆಗಡೆಯವರೊಂದಿಗೆ ಮಾತನಾಡುವುದು ಸರಳವಾದರೂ, ಗೆಳೆತನ ಬೆಳೆದದ್ದು ದಿವಾಕರ್ ಜೊತೆ. ದಿವಾಕರ್ ಜೊತೆ ಮಾತುಕತೆಯಾಗುತ್ತಿತ್ತು ನಿಜ, ಆದರೆ ಅದು ಸರಳ ವ್ಯವಹಾರವಲ್ಲ. ಹರಟೆಯ ಮೂಡಿನಲ್ಲಿ ಆಗಾಗ ದಿವಾಕರ್ ಇರುತ್ತಿದ್ದರಾದರೂ, ಅವರಿಂದ ಮೆಚ್ಚುಗೆಯ ಮಾತು ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಜೊತೆಗೆ ದಿವಾಕರ್ ಯಾವ ಹಿಂಜರಿಕೆಯೂ ಇಲ್ಲದೇ, ಕುಹಕ, ವ್ಯಂಗ್ಯ ಎಲ್ಲವನ್ನೂ ಬಳಸಿ ನಮ್ಮನ್ನು ಸ್ತಬ್ಥಗೊಳಿಸುತ್ತಿದ್ದರು. ಆದರೂ ದಿವಾಕರ್ ಗೆಳೆತನ ಬೆಳೆಯಲು ಕಾರಣ, ಸಾಹಿತ್ಯದ ಬಗೆಗೆ ಅವರಿಗಿದ್ದ ಪ್ಯಾಷನ್ ಮತ್ತು ಅವರ ಓದಿನ ವಿಸ್ತಾರವೆಂದೇ ಹೇಳಬೇಕು. ಈ ಗೆಳೆತನ ಬೆಳೆದಂತೆ, ಎಂ.ಜಿ. ರಸ್ತೆಯ ಅವರ ಕಾರ್ಯಾಲಯಕ್ಕೆ ಹೋಗುವುದು, ದಿನದ ಸಮಯವಾದರೆ ಪಕ್ಕದ ಕಾಫಿಹೌಸಿನಲ್ಲಿ ಕಾಫಿ, ಮಧ್ಯಾಹ್ನದ ಊಟ ಅಥವಾ ಸಂಜೆಯ ಆಫೀಸು ಮುಗಿಯುವ ಸಮಯಕ್ಕೆ ಹೋದರೆ ಅಲ್ಲಿಂದ ನೇರವಾಗಿ ಕೆ.ಕೆ.ಎಸ್. ಮೂರ್ತಿಯವರ ಸೆಲೆಕ್ಟ್ ಬುಕ್ ಷಾಪಿಗೆ ನಡಿಗೆ. ಅಲ್ಲೊಂದಿಷ್ಟು ಹೊತ್ತು ಪುಸ್ತಕಗಳ ಮಾತುಕತೆ. ಕಾಫಿ.
ದಿವಾಕರ್ ನನ್ನ ರಚನೆಗಳ ಬಗ್ಗೆ ನೇರವಾಗಿ ಎಂದಾದರೂ ಟಿಪ್ಪಣಿ ಮಾಡಿದ್ದರೇ ಎಂದು ನಾನು ನೆನಪು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಮಾಡಿದ್ದಿರಬಹುದು, ಆದರೆ ಅದು ನನಗೆ ನೆನಪಿಗೆ ಬರುತ್ತಿಲ್ಲ. ಆದರೂ ದಿವಾಕರ್ ನನ್ನ ಸಾಹಿತ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಪ್ರತಿ ಸಂದರ್ಭಕ್ಕೂ ಒಬ್ಬ ಬರಹಗಾರ, ಆತ ಅಥವಾ ಆಕೆಯ ಬರವಣಿಗೆ, ಶೈಲಿ, ಮಹತ್ವ, ಎಲ್ಲದರ ಬಗ್ಗೆ ಸಹಜ ಸಂಭಾಷಣೆಯಲ್ಲಿ ಹೇಳುತ್ತಿದ್ದರು. ಒಂದು ಅರ್ಧ ಗಂಟೆಯ ಮಾತುಕತೆಯಾದರೆ – ಹತ್ತಿಪ್ಪತ್ತು ಪುಸ್ತಕಗಳ ಬಿಬ್ಲಿಯೋಗ್ರಫಿ ನಮಗೆ ಸಿಗುತ್ತಿತ್ತು. ಅದರ ಜೊತೆಗೆ ದಿವಾಕರ್ ಬರೆಯಲು ಅಂದುಕೊಂಡ, ಬರೆಯಬಹುದು ಅನ್ನಿಸುವ ಅನೇಕ ಕಥೆಗಳನ್ನು ವಿವರಿಸುತ್ತಿದ್ದರು. ಎಲ್ಲದರಲ್ಲೂ ಒಂದು ರೀತಿಯ ಪ್ರಯೋಗಶೀಲತೆ ಮತ್ತು ಹೊಸತನ.
ಅವರು ಏನನ್ನೂ ಮರೆಯುತ್ತಿರಲಿಲ್ಲ ಎಂದು ಹೇಳಿದರೆ ಏನೂ ಹೇಳಿದಂತಾಗುವುದಿಲ್ಲ. ಸಾಮಾನ್ಯವಾಗಿ ನಾವುಗಳು ಓದಿದ್ದರಲ್ಲಿ ಉತ್ತಮವಾದದ್ದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಅದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯಕವಾಗುವುದು, ಉತ್ತಮ ಸಾಹಿತ್ಯದ ಬಗ್ಗೆ ಮತ್ತೆ ಮತ್ತೆ ಮಾತಾಡಿ ನಮ್ಮ ಮನಸ್ಸಿನಲ್ಲಿ ಅದರ ಮರು ಓದು, ಮತ್ತು ಮರುಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿರುತ್ತೇವೆ. ಸಂಭಾಷಣೆಗಳಲ್ಲಿ ಅವುಗಳ ಉಲ್ಲೇಖವಿರುತ್ತದೆ. ಬರವಣಿಗೆಯಲ್ಲಿ ಅದನ್ನು ಉಲ್ಲೇಖಿಸಲು ಪ್ರಯತ್ನಿಸುತ್ತೇವೆ. ಆದರೆ ಕೆಟ್ಟ ಅಥವಾ ಇಷ್ಟವಾಗದ ಸಾಹಿತ್ಯದ ವಿವರಗಳು ನೆನಪಿರುವುದಿಲ್ಲ. ಒಂದು ಕಥೆ ಅಥವಾ ಕಾದಂಬರಿ ಕೆಟ್ಟದ್ದೆಂದು ಹೇಳಿ ಅಲ್ಲಿಗೆ ಅದನ್ನು ನಮ್ಮ ಸ್ಮೃತಿಪಟಲದಿಂದ ದೂರ ತಳ್ಳುತ್ತೇವೆ. ಆದರೆ ದಿವಾಕರ್ ಹಾಗಲ್ಲ. ಅವರು ಓದಿದ, ಅವರಿಗಿಷ್ಟವಾಗದ ಸಾಹಿತ್ಯವನ್ನೂ ಎಲ್ಲ ವಿವರಗಳೊಂದಿಗೆ ತಮ್ಮ ನೆನಪಿನಲ್ಲಿಟ್ಟುಕೊಳ್ಳುವ ಅಗಾಧ ಶಕ್ತಿ ಅವರಿಗೆ ದಕ್ಕಿದೆ. ಇದು ವರವೋ ಶಾಪವೋ ತಿಳಿಯದಾದರೂ, ನಮ್ಮಂತಹವರಿಗಂತೂ ಇದು ಎಂಬರಾಸಿಂಗ್ ಆಗಬಹುದಾದ ವಿಷಯ. ನಾನು ಆರಂಭದ ದಿನಗಳಲ್ಲಿ ಬರೆದಿರಬಹುದಾದ ಬಾಲಿಶ ಬರಹಗಳನ್ನು ನಾನೇ ಮರೆತು ಮುಂದುವರೆಯುವ ಯೋಚನೆಯಲ್ಲಿದ್ದರೆ, ಅಕಸ್ಮಾತ್ ಆಗಿ ದಿವಾಕರ್ ಅದನ್ನು ನೆನಪಿಸಿ ಮುಜುಗರಕ್ಕೆ ಒಡ್ಡುವುದು ಉಂಟು. ಹೀಗಾಗಿಯೇ ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಓದಿ ಅರಗಿಸಿಕೊಂಡ ದಿವಾಕರ್, ಎಚ್.ಕೆ. ಅನಂತರಾಯರ ಪತ್ತೇದಾರಿ ಕಾದಂಬರಿಗಳೊಂದಿಗೂ ಎಂಗೇಜ್ ಆಗಲು ಸಾಧ್ಯವಿತ್ತು.
ಸಂಪಾದಕ ದಿವಾಕರ್
ಇದು ಸಾಲದೆಂಬಂದೆ ಪತ್ರಿಕೆಯಲ್ಲಿ ಅದರಲ್ಲೂ ಸೃಜನಶೀಲ ಬರವಣಿಗೆಯನ್ನು ಪರಿಶೀಲಿಸಿ ಪ್ರಕಟಿಸುವ ವಿಭಾಗದಲ್ಲಿ ದಿವಾಕರ್ ಅನೇಕ ವರ್ಷಗಳ ಕಾಲ ಇದ್ದದ್ದರಿಂದ, ಅವರಿಗೆ ಅನೇಕ ಲೇಖಕರ ಅಪ್ರಕಟಿತ ಹಸ್ತಪ್ರತಿಗಳನ್ನು ಓದುವ ಸೌಲಭ್ಯವೂ ಇತ್ತು. ಹೀಗಾಗಿ ನಾವುಗಳು ದಿವಾಕರ್ ಮುಂದೆ ಒಂದು ರೀತಿಯ ವಿಚಿತ್ರ ನಗ್ನಾವಸ್ಥೆಯಲ್ಲಿ ನಮ್ಮೆಲ್ಲರ ತುರಿಕೆ ಹುಣ್ಣುಗಳನ್ನು ತೋರಿಸಿಕೊಂಡು ಅವರ ನೆನಪಿನ ಶಾಪಕ್ಕೆ ಒಳಗಾಗುವುದು ಸಹಜ ಮಾತಾಗಿತ್ತು.
ದಿವಾಕರ್ ಅವರಲ್ಲಿ ಮತ್ತೊಂದು ಅದ್ಭುತ ಗುಣವಿದೆ. ಸಂಭಾಷಣೆಯಲ್ಲಿ ಯಾವುದೇ ವ್ಯಕ್ತಿಯನ್ನು ಒಳ್ಳೆಯವರು–ಕೆಟ್ಟವರು ಎನ್ನುವ ಬೈನರಿಯಲ್ಲಿ ಅವರು ಸುಲಭವಾಗಿ ವಿಂಗಡಿಸಿ, ಜನರ ವ್ಯಕ್ತಿತ್ವದ ಬಗ್ಗೆ ಖಾಸಗಿ ಸಂಭಾಷಣೆಗಳಲ್ಲಿ ನಮ್ಮೆಲ್ಲರಂತೆ ಅವರೂ ಟಿಪ್ಪಣಿ ಮಾಡುತ್ತಾರೆ. ಹೀಗೆ ನಾವು ಇಷ್ಟಪಡದ ವ್ಯಕ್ತಿಯ ಸಾಹಿತ್ಯ, ಅಥವಾ ಮೀಡಿಯೋಕರ್ ಎಂದು ಈಗಾಗಲೇ ತೀರ್ಮಾನಿಸಿರುವವರ ಸಾಹಿತ್ಯವನ್ನು ಕಡೆಗಣಿಸುವುದು ಸಹಜ ಮಾನವ ಪ್ರವೃತ್ತಿ. ಆದರೆ ದಿವಾಕರ್, ತೀವ್ರವಾಗಿ ರಾಜಿಯಾದ, ಪ್ರಾಮಾಣಿಕರಲ್ಲದವರ ಬರವಣಿಗೆಯಲ್ಲೂ ಯಾವುದಾದರೂ ಬ್ರಿಲಿಯೆನ್ಸ್ ಕಂಡರೆ ಅದನ್ನು ಹೆಕ್ಕಿ ಆ ಬಗ್ಗೆ ವಸ್ತುನಿಷ್ಠವಾಗಿ ತಮ್ಮ ಪ್ರಾಮಾಣಿಕ ಮೆಚ್ಚುಗೆಯನ್ನು ಸೂಚಿಸುತ್ತಾರೆ. ಲೇಖಕ ಬೇರೆ, ಆತ ಅಥವಾ ಆಕೆ ಬರೆದ ಸಾಹಿತ್ಯ ಬೇರೆ. ಬರವಣಿಗೆಯ ನಂತರ ಆ ಸಾಹಿತ್ಯ ಜನರಿಗೆ ಸಂದದ್ದೇ ಹೊರತು ಲೇಖಕರಿಗಲ್ಲ ಎನ್ನುವ ರೀತಿಯಲ್ಲಿ ಸಾಹಿತ್ಯವನ್ನು ಲೇಖಕರ ಹೆಸರಿನ ಹಂಗಿನಿಂದ ಬೇರ್ಪಡಿಸಿ ಹಂಸಕ್ಷೀರ ನ್ಯಾಯ ಒದಗಿಸುವ ಗುಣ ಅವರಿಗಿದೆ. ಬಹುಶಃ ಅವರು ಸಾಹಿತ್ಯವನ್ನು ಓದುವಾಗ ಎಲ್ಲವನ್ನೂ ಮರೆತು ಪಠ್ಯಕ್ಕೇ ಬದ್ಧರಾಗಿರುತ್ತಾರೇನೋ. ಈ ರೀತಿಯ ವಸ್ತುನಿಷ್ಠತೆಯಿಂದಾಗಿಯೇ ಅವರು ಮೊದಲಿಗೆ ’ಮಲ್ಲಿಗೆ’ ಮತ್ತು ನಂತರ ‘ಸುಧಾ’ ಪತ್ರಿಕೆಯಲ್ಲಿ ಅನೇಕ ಹೊಸ ಬರಹಗಾರಗನ್ನು ಯಾವುದೇ ಎಗ್ಗಿಲ್ಲದೇ ಪ್ರಕಟಿಸಿ ಪ್ರೋತ್ಸಾಹಿಸಿದರು.
‘ಮಲ್ಲಿಗೆ’ಯಲ್ಲಿ ಚಿತ್ತಾಲರಿಂದ ಬರೆಸಿದ ‘ಸಾಹಿತ್ಯ, ಸೃಜನಶೀಲತೆ ಮತ್ತು ನಾನು’ ಎನ್ನುವ ಸರಣಿ ಚಿತ್ತಾಲರ ಬೇರೊಂದೇ ಆಯಾಮವನ್ನು ನಮಗೆ ಪರಿಚಯಿಸಿತ್ತು. ಅದು ಚಿತ್ತಾಲರ ಸ್ನೇಹದತ್ತಲೂ ದಿವಾಕರ್ ಆವರನ್ನು ಒಯ್ದಿತ್ತು. ಚಿತ್ತಾಲರು ಬೆಂಗಳೂರಿನ ಜನರ ಬಗ್ಗೆ ಆಪ್ಯಾಯತೆಯಿಂದ, ಪ್ರೀತಿಯಿಂದ ನೆನಪು ಮಾಡಿಕೊಳ್ಳುತ್ತಿದ್ದ ಹೆಸರುಗಳಲ್ಲಿ ದಿವಾಕರ್ ಹೆಸರು ಪ್ರಮುಖವಾದದ್ದು.
ದಿವಾಕರ್ ಪರಿಚಯದ ನಂತರ ಹೈದರಾಬಾದಿನಲ್ಲಿ ಪರಿಚಯವಾದವರು ಎಚ್.ಕೆ.ಅನಂತರಾವ್. ಅನಂತರಾವ್ ಸ್ನೇಹ ನಿಭಾಯಿಸುವುದು ಸುಲಭದ ಮಾತಲ್ಲ. ಹೆಚ್ಚು ಮಾತನಾಡುವ, ಆತ್ಮಲೋಲುಪತೆಯಿಂದ ಕೂಡಿದ, ಎಚ್.ಕೆ. ಅವರ ಮನಸ್ಸಿನಲ್ಲಿ ಅದ್ಭುತ ಕಥೆಗಳಿರುತ್ತಿದ್ದುವಾದರೂ, ಅದನ್ನು ಬರೆಯುವ ವೇಳೆಗೆ ದೊಡ್ಡ ದುಃಸ್ವಪ್ನವಾಗುತ್ತಿತ್ತು. ಅನಂತರಾವ್ ಅವರ ಕೈಬರಹ ಎಷ್ಟು ಪ್ರತ್ಯೇಕವಾಗಿತ್ತೆಂದರೆ, ಅವರು ಬರೆದದ್ದನ್ನು ಓದಲು ಅವರಿಗೇ ಸಾಧ್ಯವಾಗುತ್ತಿರಲಿಲ್ಲ. ಕನ್ನಡನಾಡಿನಿಂದ ದೂರವಿದ್ದ ಎಚ್.ಕೆ. ಮೊದಲಿಗೆ ತಮ್ಮ ಬರಹದ ಕರಡನ್ನು ತಯಾರಿಸಿ, ಅದನ್ನು ಯಾರಿಗಾದರೂ ಡಿಕ್ಟೇಟ್ ಮಾಡಿ ಹಸ್ತಪ್ರತಿಯನ್ನು ತಯಾರಿಸುತ್ತಿದ್ದರು. ಹೈದರಾಬಾದಿನಲ್ಲಿ ಅನಂತರಾಯರ ಡಿಕ್ಟೇಷನ್ ಕೇಳಿ ಕಾಗದಕ್ಕಿಳಿಸಬಹುದಾದ ವ್ಯಕ್ತಿಯ ಕನ್ನಡ ಹೇಗಿದ್ದಿರಬಹುದು? ಅ ಅಂಥ ಹಸ್ತಪ್ರತಿಯನ್ನು ಹಿಡಿದು, ತಿದ್ದಿ, ಓದುಗರು ಮೆಚ್ಚುವಂತೆ ಮಾಡುವ ಕೆಲಸದ ಚಡಪಡಿಕೆಯನ್ನು ನಾನು ಕೇವಲ ಊಹಿಸಬಲ್ಲೆನಷ್ಟೇ. ಆದರೆ ಅನಂತರಾಯರನ್ನೇ ಪ್ರಮೇಯವಾಗಿಟ್ಟುಕೊಂಡು ಮಿಕ್ಕ ಪತ್ತೇದಾರಿ ಕಾದಂಬರಿಗಳ ಬಗ್ಗೆ, ಉತ್ತಮ ಲೇಖಕರ ಬಗ್ಗೆ ಮಾತನ್ನು ತಿರುಗಿಸುತ್ತಿದ್ದರು. ದಿವಾಕರ್‌ಗೆ ಪತ್ತೇದಾರಿ ಪ್ರಕಾರದಲ್ಲೂ ತೀವ್ರ ಆಸಕ್ತಿಯಿತ್ತು. ಓದು ಮತ್ತು ಸಣ್ಣ ವಿಚಾರಗಳ ನೆನಪಿನ ಆಧಾರದಿಂದಲೇ, ಒಮ್ಮೆ ದೀಪಾವಳಿ ಅಥವಾ ಯುಗಾದಿ ವಿಶೇಷಾಂಕದಲ್ಲಿ ಕನ್ನಡದ ದಿಗ್ಗಜರಿಂದ ಪತ್ತೇದಾರಿ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯಿಸಿದ್ದರು. ಶಿವರಾಮ ಕಾರಂತರು ಎರಡು ಪತ್ತೇದಾರಿ ಕಾದಂಬರಿಗಳನ್ನು ಬರೆದಿದ್ದರು ಎನ್ನುವ ವಿಷಯವನ್ನು ಪತ್ತೆ ಹಚ್ಚಿ, ಅವರ ಕೈಲೂ ಒಂದು ಲೇಖನ ಬರೆಯಿಸಿದ್ದು ನೆನಪಿದೆ. ಅದಕ್ಕೆ ಕಾರಂತರು ಕೊಟ್ಟಿದ್ದ ಹೆಸರು: ಪತ್ತೆಯ ದಾರ – ಪೋಣಿಸುವುದು ಏನನ್ನು?
‘ಮಾಯಾದರ್ಪಣ’ದ ಕಥೆ
ನನ್ನ ಓದನ್ನು ರೂಪಿಸುವಲ್ಲಿ ದಿವಾಕರ್ ಅವರ ಪಾತ್ರ ಹಿರಿದಾದದ್ದು. ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್, ಐಸಾಕ್ ಬಾಷೆವಿಸ್ ಸಿಂಗರ್, ಹಾರ್ಹೆ ಲೂಯಿ ಬೋರ್ಹೇಸ್ – ಈ ಎಲ್ಲ ಮಹನೀಯರ ಸಾಹಿತ್ಯವನ್ನು ನನಗೆ ಪರಿಚಯಿಸಿ ಓದಿಸಿದವರೇ ದಿವಾಕರ್. ಒಂದು ರೀತಿಯಲ್ಲಿ ನನ್ನೊಳಗೇ ಒಂದು ಪಂದ್ಯದಲ್ಲಿ ನಾನು ತೊಡಗಿದ್ದೆ. ಸೆಲೆಕ್ಟ್ ಬುಕ್ ಷಾಪಿನ ಮೂರ್ತಿ, ಅಥವಾ ಪ್ರೀಮಿಯರ್ ಶಾನಭಾಗರಲ್ಲಿ ಹೋಗಿ ಗಂಟೆಗಟ್ಟಲೆ ಸಮಯ ಕಳೆದು, ಬಗೆಬಗೆದು ಪುಸ್ತಕಗಳನ್ನು ಹೆಕ್ಕಿ, ಓದಿ, ಬಿಮ್ಮಿನಿಂದ ದಿವಾಕರ್ ಬಳಿಗೆ ಹೋದರೆ ಆ ಪುಸ್ತಕ, ಅದರ ಲೇಖಕ, ಆತನ ಬಗ್ಗೆ ಇರಬಹುದಾದ ವಿಮರ್ಶೆ, ವಿವಾದ, ಎಲ್ಲವೂ ಅವರಿಗೆ ಮೊದಲೇ ಗೊತ್ತಿರುತ್ತಿತ್ತು. ಅನೇಕ ಬಾರಿ ಪ್ರಯತ್ನಿಸಿದರೂ ನಾನು ದಿವಾಕರ್ ಜೊತೆ ಈ ವಿಷಯದಲ್ಲಿ ಸೋಲು ಕಾಣದ ಸಂದರ್ಭವಿಲ್ಲ. ಅನೇಕ ಬಾರಿ ದಿವಾಕರ್ ‘ನನಗೆ ಆಸಕ್ತಿ ಕಮ್ಮಿಯಾಗುತ್ತಿದೆ. ನನ್ನ ಹತ್ತಿರ ಇರುವ ಪುಸ್ತಕಗಳನ್ನು ಕೊಟ್ಟುಬಿಡುತ್ತಿದ್ದೇನೆ. ಹೆಚ್ಚು ಓದುತ್ತಿಲ್ಲ’ ಎಂದು ಹೇಳಿದರೂ ಅವರ ವಿಸ್ತಾರ ಕಮ್ಮಿಯಾಗಿಲ್ಲ.
1980ರ ದಶಕದ ಎರಡನೇ ಭಾಗದಲ್ಲಿ ದಿವಾಕರ್ ಅವರ ಪ್ರೋತ್ಸಾಹದ ಮೇರೆಗೆ ನಾವುಗಳೆಲ್ಲ ಸೇರಿ ಕನ್ನಡದಲ್ಲಿ ಸಾಹಿತ್ಯಿಕ ತ್ರೈಮಾಸಿಕವನ್ನು ತರಬೇಕು ಎಂದು ಯೋಚಿಸಿದ್ದೆವು. ಇದಕ್ಕೆ ಮೂಲ ಪ್ರೇರಣೆ ದಿವಾಕರ್ ಮತ್ತು ಅವರ ಮಸ್ತಿಷ್ಕದಲ್ಲಿದ್ದ ಅಸಂಖ್ಯ ಐಡಿಯಾಗಳ ಪರಿಣಾಮ. ಬೆಂಗಳೂರಿಗೆ ಬರುವ ಮೊದಲು ನಾನು ಹೈದರಾಬಾದಿನಲ್ಲಿದ್ದೆ. ಅಲ್ಲಿನ ‘ಕರ್ನಾಟಕ ಸಾಹಿತ್ಯ ಮಂದಿರ’ದ ವಾರ್ತಾಪತ್ರವನ್ನು ನಾವುಗಳು ಒಂದು ಸಾಹಿತ್ಯ ಪತ್ರಿಕೆಯಾಗಿ ನಡೆಸುತ್ತಿದ್ದೆವು. ಆ ಪತ್ರಿಕೆಯನ್ನು ಸಂಪಾದಿಸುತ್ತಿದ್ದವರು ಗೋನವಾರ ಕಿಶನ್ ರಾವ್. ಜೊತೆಗೆ ಗೆಳೆಯರಾದ ಅರವಿಂದ ಸಂಗಂ, ಪ್ರಹ್ಲಾದ ಜೋಶಿ, ಪವನ್ ಕುಮಾರ್ ಮಾನ್ವಿ, ಎಲ್ಲರೂ ಪತ್ರಿಕೆಯ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ರಿಕೆಯನ್ನು ತಿಂಗಳಿಗೊಮ್ಮೆ ಪ್ರಕಟಿಸುವ ಸವಾಲುಗಳ ಬಗ್ಗೆ ನನಗೆ ಸ್ವಲ್ಪ ಅರಿವಿತ್ತು. ಜೊತೆಗೆ ಲೇಖಕರು, ಅವರಿಗೆ ಕೊಡಬೇಕಾದ ಸಮಯ ಮತ್ತು ಡೆಡ್‌ಲೈನುಗಳ ಅರಿವೂ ಇತ್ತು. ಆದರೆ ಇಲ್ಲಿ ನಾವು ಯೋಜಿಸಿದ್ದೇ ಬೇರೆ. ಮೂರು ತಿಂಗಳಿಗೊಮ್ಮೆ ಪತ್ರಿಕೆ ಬರಬೇಕು. ನವ್ಯ ಸಾಹಿತ್ಯಕ್ಕೆ ಪೂರಕವಾಗಿ ಹೇಗೆ ಅಡಿಗರ ‘ಸಾಕ್ಷಿ’ ಪತ್ರಿಕೆಯಿತ್ತೋ ಹಾಗೇ ‘ಮ್ಯಾಜಿಕ್ ರಿಯಲಿಸಂ‘ (ಅದ್ಭುತರಮ್ಯ ಕಥನಕ್ಕೆ) ಈ ನಮ್ಮ ಪತ್ರಿಕೆಯಿರಬೇಕೆಂದು ನಾವು ಯೋಚಿಸಿದ್ದವು. ದಿವಾಕರ್ ಜೊತೆ ಈ ಪ್ಲಾನಿಂಗಿನ ಭಾಗವಾಗಿದ್ದ ಗೆಳೆಯರು ವಿವೇಕ ಶಾನಭಾಗ, ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಎಂ.ಎನ್. ವ್ಯಾಸರಾವ್. ವ್ಯಾಸರಾವ್ ಆಗ ಎಂ.ಜಿ. ರಸ್ತೆಯಲ್ಲಿ ‘ಪ್ರಜಾವಾಣಿ’ ಕಾರ್ಯಾಲಯದಿಂದ ದೂರವೇನೂ ಇಲ್ಲದ ಶೃಂಗಾರ್ ಕಾಂಪ್ಲೆಕ್ಸ್‌ನ ಆದಿ ಭಾಗದಲ್ಲಿದ್ದ ಯೂಕೋ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ವಿವೇಕ, ಯೂನಿಲಿವರ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಾನು ಐಐಎಂನಲ್ಲಿ ನನ್ನ ಡಾಕ್ಟರೇಟ್ ಮಾಡುತ್ತಿದ್ದೆ. ಸಮಯ ಸಿಕ್ಕಾಗಲೆಲ್ಲ ಎಲ್ಲರೂ ಸೇರಿ ಪತ್ರಿಕೆಯ ಬಗ್ಗೆ ಮಾತನಾಡುವುದೇ. ಅದಕ್ಕೆ ‘ಮಾಯಾದರ್ಪಣ’ ಎಂದು ಹೆಸರು ಕೊಟ್ಟಿದ್ದೆವು. ಎಂ.ಜಿ. ರಸ್ತೆಯಲ್ಲಿನ ಬೃಂದಾವನ್ ಹೋಟೆಲು ಮತ್ತು ವಿಕ್ಟೋರಿಯಾಗಳಲ್ಲಿ, ಇಂಡಿಯನ್ ಕಾಫಿಹೌಸಿನಲ್ಲಿ ಅನೇಕ ಬಾರಿ ಸೇರಿ ಚರ್ಚಿಸಿದ್ದೆವು. ಮೊದಲ ಸಂಚಿಕೆಗೆ ಆಗುವಷ್ಟು ಲೇಖನಗಳೂ ಸಂಗ್ರಹಿಸಿದ್ದವು.
ನಮ್ಮ ಒತ್ತಾಯದ ಮೇರೆಗೆ ಆಗ ಮುಂಬೈನಲ್ಲಿದ್ದ ಜಯಂತ ಕಾಯ್ಕಿಣಿ ‘ಧೂಳು’ ಎನ್ನುವ ಅದ್ಭುತ ಶಬ್ದಚಿತ್ರವನ್ನು ಬರೆದುಕೊಟ್ಟಿದ್ದರು. “ಕವಿತೆ ಅಣ್ಣ ಗಂಗಾಧರ ಚಿತ್ತಾಲರಿಗೆ ಸಂದದ್ದು, ನಾನು ಬರೆಯುವುದಿಲ್ಲ” ಎನ್ನುತ್ತಲೇ ಚಿತ್ತಾಲರು ‘ಬ್ಯಾಂಡ್‌ಸ್ಟಾಂಡಿನ ಬಂಡೆಗಳು’ ಎನ್ನುವ ಕವಿತೆಯನ್ನ ಬರೆದು ಕೊಟ್ಟರು. ಆದರೆ ಅವರು ಅದನ್ನು ಕವಿತೆ ಎಂದು ಕರೆಯದೇ ‘ಲಬಸಾ’ ಎಂದು ಕರೆದರು (ಲಬಸಾ ಎಂದರ ಲಯಬದ್ಧಸಾಲುಗಳು!). ದಿವಾಕರ್ ಐಡಿಯಾಗಳಲ್ಲಿ ಒಂದು. ಇಡೀ ಸಂಚಿಕೆಯಲ್ಲಿ ಮಹತ್ವದ ಲೇಖಕರ ಬುಕ್‌ಲೆಂಗ್ತ್ ಸಂದರ್ಶನ ಮಾಡಬೇಕು ಎನ್ನುವ ಆಸೆ. ಅದಕ್ಕೆ ಅವರು ಅನೇಕ ವಿದೇಶೀ ಪತ್ರಿಕೆಗಳ ಉದಾಹರಣೆಯನ್ನು ನಮಗೆ ಕೊಡುತ್ತಿದ್ದರು. ‘ಸಲ್ಮಾಗುಂಡಿ’ ಎನ್ನುವ ಪತ್ರಿಕೆಯಲ್ಲಿ ಮಿಲನ್ ಕುಂದೆರಾನ ಸಂದರ್ಶನ ಮತ್ತು ಅನೇಕ ಲೇಖನಗಳೂ ಬಂದಿದ್ದುವು. ಹೀಗೇ ಒಬ್ಬ ಲೇಖಕನಿಗೆ ಮುಡಿಪಾಗಿ ಒಂದು ಇಡೀ ಸಂಚಿಕೆಯನ್ನು ತರಬೇಕು, ಕವಿಗಳ ಕೈಲಿ ಕಥೆ ಬರೆಯಿಸಬೇಕು… ಹೀಗೆಲ್ಲಾ ಹೊಸ ಆಲೋಚನೆಗಳು ಅವರಿಗೆ ಬರುತ್ತಿದ್ದುವು. ಪತ್ರಿಕೆ ಯಾವ ರೂಪುರೇಷೆ ಪಡೆಯಬಹುದು ಎನ್ನುವುದಕ್ಕೆ ನಮ್ಮೆಲ್ಲರಲ್ಲಿ ಐಡಿಯಾಗಳಿದ್ದುವು.
ಆ ಪತ್ರಿಕೆ ಹೊರಬರಲಿಲ್ಲ. ವಿವೇಕ ಶಾನಭಾಗರಿಗೆ ಲಂಡನ್ನಿಗೆ ವರ್ಗವಾಯಿತು. ನನ್ನ ಡಿಸರ್ಟೇಶನ್ನಿನ ಕೆಲಸ ಹೆಚ್ಚಾಯಿತು. ದಿವಾಕರ್ ಬೆಂಗಳೂರಿನಿಂದ ಅಮೆರಿಕನ್ ಕಾನ್ಸುಲೇಟ್‌ನಲ್ಲಿ ಕೆಲಸ ಮಾಡಲು ಚೆನ್ನೈಗೆ ಹೋದರು. ಹೀಗೆ ಅದು ಅಲ್ಲಿಗೇ ನಿಂತುಬಿಟ್ಟಿತು. ಆದರೆ ದಿವಾಕರ್ ಯಾವಾಗಲೂ ಹೇಳುತ್ತಿದ್ದರು – ‘ಒಳ್ಳೆಯ ವಿಚಾರಗಳು ಇರಬೇಕು. ಅಷ್ಟೇ. ಅವುಗಳು ಅಂತರಿಕ್ಷಕ್ಕೆ ಹೋಗಿ, ಮತ್ತೆ ಎಲ್ಲೋ ಕಾರ್ಯರೂಪಕ್ಕಿಳಿಯುತ್ತವೆ ಎಂದು ಬೊರ್ಹೇಸ್ ಹೇಳಿದ್ದಾನೆ’. ಅದು ಹಾಗೇ ಆಯಿತು ಎನ್ನಿಸುತ್ತದೆ. ಆ ಸಮಯಕ್ಕೆ ಬಂದ ನನ್ನ ಮೊದಲ ಕಥಾಸಂಕಲನಕ್ಕೆ ನಾನು ‘ಮಾಯಾದರ್ಪಣ’ ಎಂದು ಹೆಸರು ಕೊಟ್ಟೆ. ಅ ಪುಸ್ತಕವನ್ನು ವಿವೇಕ ಮತ್ತು ದಿವಾಕರ್‌ಗೆ ಅರ್ಪಿಸಿದ್ದೆ. ಅದರ ಬಿಡುಗಡೆಗೆ ಅದ್ಭುತರಮ್ಯ ಸಾಹಿತ್ಯವನ್ನು ಬರೆಯುತ್ತಿದ್ದ ಎಂ.ಎಸ್.ಕೆ. ಪ್ರಭು ಬಂದಿದ್ದರು. ಅನೇಕ ವರ್ಷಗಳ ನಂತರ ವಿವೇಕ ಶಾನಭಾಗರು ‘ದೇಶಕಾಲ’ ಎನ್ನುವ ಸಾಹಿತ್ಯ ಪತ್ರಿಕೆಯನ್ನು ತಂದರು. ಅದು ‘ಮಾಯಾದರ್ಪಣ’ದ ಪರಿಕಲ್ಪನೆಗಿಂತ ಭಿನ್ನವಾಗಿತ್ತಾದರೂ, ಉತ್ತಮ ವಿಚಾರಗಳು, ನಾವು ಯೋಚಿಸಿದ್ದು ಅಂತರಿಕ್ಷಕ್ಕೆ ಹೋಗಿ ವಾಪಸ್ಸಾಗಿತ್ತೇನೋ. ನರಹಳ್ಳಿ ಬಾಲಸುಬ್ರಹ್ಮಣ್ಯ ತಮ್ಮ ಮಹಾಪ್ರಬಂಧಕ್ಕೆ ಕೆ.ಎಸ್. ನರಸಿಂಹಸ್ವಾಮಿ ಅವರ ಕವಿತೆಗಳನ್ನು ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡರು. ಅದರ ಭಾಗವಾಗಿ ನರಸಿಂಹಸ್ವಾಮಿಯವರ ಒಂದು ದೀರ್ಘ ಸಂದರ್ಶನ ಮಾಡಿ, ‘ನುಡಿಮಲ್ಲಿಗೆ’ ಎನ್ನುವ ಬುಕ್ ಲೆಂಗ್ತ್ ಸಂದರ್ಶನವನ್ನು ಪ್ರಕಟಿಸಿದರು.
ಆಗ್ಗೆ ಜಯಂತ ಕಾಯ್ಕಿಣಿಯ ಸಣ್ಣ ಕಥೆಗಳ ಸಂಕಲನ ‘ದಗಡೂ ಪರಬನ ಅಶ್ವಮೇಧ’ ಹಸ್ತಪ್ರತಿಯಲ್ಲಿತ್ತು. ಪ್ರಕಾಶಕರು ಸಿಗುತ್ತಿರಲಿಲ್ಲ. ಆಗ ನಾವೆಲ್ಲರೂ ಸೇರಿ ಹಣ ಹಾಕಿ, ಸಹಕಾರಿ ತತ್ವಾನುಸಾರ ಅದನ್ನು ಪ್ರಕಟಿಸಿದ್ದೆವು! ಅದರಿಂತ ಸ್ವಲ್ಪ ಲಾಭವನ್ನೂ ಆರ್ಜಿಸಿದೆವೆನ್ನಿ. ‘ಮಾಯಾದರ್ಪಣ’ ಪತ್ರಿಕೆಗೆಂದು ಸೇರಿದ ನಾವುಗಳು ಮಾಡಿದ ಒಂದೇ ಪ್ರಕಟಣೆ ಜಯಂತರ ಕಥಾಸಂಕಲನ!
ಗೆಳೆಯರ ಗುಂಪು
‘ಮಾಯಾದರ್ಪಣ’ದ ಗುಂಪು ದಿವಾಕರ್ ಗೆಳೆಯರ ಗುಂಪಿನ 2.0 ಎನ್ನಬಹುದೇನೋ. ಅವರ ಮೊದಲ ಗುಂಪು ಗಾಂಧಿಬಜಾರಿನ ಗುಂಪಿರಬಹುದು. ಹಾಗೆಂದು ನಮಗೆ ಆಗಾಗ ಅವರ ಒಡನಾಟದಿಂದ ಅನ್ನಿಸುತ್ತಿತ್ತು. ಗಾಂಧಿಬಜಾರಿನಲ್ಲಿ ಸುಮತೀಂದ್ರ ನಾಡಿಗರ ಪುಸ್ತಕದಂಗಡಿಯಿತ್ತು. ಗೋಪಾಲಕೃಷ್ಣ ಅಡಿಗರು, ಗೋಪಾಲಕೃಷ್ಣ ಪೈ, ನಿಸಾರ್ ಅಹಮದ್ ಮತ್ತು ‘ಲಿಪಿ ಮುದ್ರಣ’ದ ಬಾಕಿನ ಭಿನ್ನ ಸಮಯಗಳಲ್ಲಿ ಅಲ್ಲಿ ಸೇರುತ್ತಿದ್ದರು ಅನ್ನಿಸುತ್ತದೆ. ಆ ಗುಂಪಿನ ಸ್ವರೂಪ ಹೇಗಿತ್ತೆನ್ನುವುದು ಗೊತ್ತಿಲ್ಲವಾದರೂ, ದಿವಾಕರ್ ಆ ಬಗ್ಗೆ ಅನೇಕ ಘಟನೆಗಳನ್ನು ವಿವರಿಸುತ್ತಿದ್ದರು. ಆ ದಿನಗಳಲ್ಲಿ ದಿವಾಕರ್ ‘ಇತಿಹಾಸ’ ಎನ್ನುವ ಸಿನಿಮಾವನ್ನು ನಿರ್ದೇಶಿಸಿ ಆರ್ಥಿಕ ಮುಗ್ಗಟ್ಟಿನಲ್ಲಿದ್ದರು. ಅವರು ಆ ಬಗ್ಗೆ ಎಂದೂ ಏನೂ ಮಾತಾಡಿರಲಿಲ್ಲವಾದರೂ, ‘ಇತಿಹಾಸ’ ಚಿತ್ರಕ್ಕೆ ಸೆನ್ಸರ್ ಸರ್ಟಿಫಿಕೇಟ್ ಸಿಕ್ಕಾಗ ತಮ್ಮ ಖುಷಿಯನ್ನು ತೋರಿಸಿಕೊಂಡಿದ್ದರು. ಅದು ಬಿಟ್ಟರೆ ಅವರು ಆ ಬಗ್ಗೆ ಹೆಚ್ಚು ಮಾತಾಡಿದ್ದು ಇಲ್ಲ. ಬಹುಶಃ ಒಂದು ತಲೆಮಾರಿನ ನಂತರದ ನಾವುಗಳು ಹಳೆಯ ಬ್ಯಾಗೇಜ್ ಇಲ್ಲದ ಗೆಳೆಯರಾಗಿ ದಿವಾಕರ್ ಅವರಿಗೆ ಸಿಕ್ಕಿರಲಿಕ್ಕೆ ಸಾಕು.
ಅಷ್ಟು ನಿಕಟವಾಗಿ ದಿವಾಕರ್ ಜೊತೆ ಓಡಾಡಿದ್ದರೂ, ಸಾಹಿತ್ಯವನ್ನು ಮೀರಿ ದಿವಾಕರ ಅವರ ಇಷ್ಟಾಇಷ್ಟಗಳೇನಿರಬಹುದು ಎನ್ನುವುದು ನಮಗೆ ಗೊತ್ತೇ ಇಲ್ಲ. ಉದಾಹರಣೆಗೆ, ನಾವು ಹೋಟೆಲಿಗೆ ಹೋದಾಗ ಅವರ ಇಷ್ಟದ ತಿಂಡಿ ಯಾವುದು, ಅವರಿಗೆ ಸಿಹಿ ಪದಾರ್ಥಗಳು ಇಷ್ಟವೋ ಇಲ್ಲವೋ ಎನ್ನುವ ಯಾವುದೇ ವಿವರಗಳು ನಮಗೆ ಗೊತ್ತಿಲ್ಲ. ಅದನ್ನು ಗಮನಿಸುವುದಕ್ಕೆ ಅವಕಾಶವಿಲ್ಲದಂತೆ ತೀವ್ರವಾಗಿ ಸಾಹಿತ್ಯದ ಚರ್ಚೆಗೆ ದಿವಾಕರ್ ಇಳಿಯುತ್ತಿದ್ದುದರಿಂದ ಮಿಕ್ಕವೆಲ್ಲವೂ ಗೌಣವಾಗಿಬಿಡುತ್ತಿದ್ದುವು. ಆದರೆ ಅವರಿಡೀ ಏರಿಳಿತದಲ್ಲಿ ಅವರ ಜೊತೆಗೆ ನಿಂತು ಸಂಭಾಳಿಸಿದವರು ಜಯಶ್ರೀ. ದಿವಾಕರ್‌ಗೆ ಸಾಹಿತ್ಯದ ಬಗ್ಗೆ ಇರುವ ಆಳವಾದ ಒಳನೋಟಗಳು, ಸಂಗೀತ ಮತ್ತು ಸಿನಿಮಾಗಳ ಬಗ್ಗೆಯೂ ಇದೆ. ಬೇಂದ್ರೆಯವರ ಅನೇಕ ಕವಿತೆಗಳಿಗೆ ದಿವಾಕರ್ ರಾಗಸಂಯೋಜನೆ ಮಾಡಿದ್ದಾರೆ. ‘ಮಲ್ಲಿಗೆ’ಯಲ್ಲಿದ್ದಾಗ ಅನೇಕ ಪುಸ್ತಕಗಳ ಮುಖಪುಟಗಳನ್ನೂ ವಿನ್ಯಾಸ ಮಾಡಿದ್ದರು. ನಮ್ಮ ನಡುವೆ ಓಡಾಡುತ್ತಿರುವ ಜೀನಿಯಸ್‌ಗಳಲ್ಲಿ ದಿವಾಕರ್ ನಿಜಕ್ಕೂ ಪ್ರಮುಖರು ಎನ್ನುವುದರಲ್ಲಿ ಅನುಮಾನವಿಲ್ಲ.
ದಿವಾಕರ್ ಚೆನ್ನೈಗೆ ಹೋದ ನಂತರ ಅವರ ಸಂಪರ್ಕ ಕಡಿಮೆಯಾಯಿತು. ನಾನೂ ಒಂದು ರೀತಿಯಲ್ಲಿ ಹೊರನಾಡಿಗನಾಗಿಬಿಟ್ಟೆ. ಆಣಂದ, ಹೈದರಾಬಾದು, ಅಹಮದಾಬಾದುಗಳೆಂದು ಅನೇಕ ವರ್ಷಕಾಲ ಕರ್ನಾಟಕದಿಂದ ಹೊರಗೇ ಉಳಿದುಬಿಟ್ಟಿದ್ದೆ. ಆದರೆ ದಿವಾಕರ್ ಜೊತೆಗೆ ಆಗಾಗ ಮಾತುಕತೆ, ಭೇಟಿ ಆಗುತ್ತಲೇ ಇತ್ತು. ಅವರು ಎಷ್ಟೇ ಕಷ್ಟದಲ್ಲಿರಲಿ, ಯಾವುದೇ ತೊಂದರೆಯಲ್ಲಿರಲಿ, ಮಾತುಕತೆ ಕಡೆಗೂ ಸಾಹಿತ್ಯದತ್ತಲೇ ತಿರುಗುತ್ತಿತ್ತು.
ಇಂದಿಗೂ ದಿವಾಕರ್ ತಮ್ಮಲ್ಲಿರುವ ಉತ್ಸಾಹವನ್ನು ಲವಲೇಶವೂ ಕಳೆದುಕೊಂಡಿಲ್ಲ. ಅವರು ಪ್ರಕಟಿಸಿರುವ ಪುಸ್ತಕಗಳ ಪಟ್ಟಿಯನ್ನು ಮತ್ತು ಅವರ ಮನಮಸ್ತಿಷ್ಕದಲ್ಲಿರುವ ಐಡಿಯಾಗಳನ್ನು ಬೆರಗಿನಿಂದ ನೋಡಬಹುದಷ್ಟೇ. ಅದರಲ್ಲಿರುವ ವೈವಿಧ್ಯ, ಆಳ, ಮತ್ತು ಅಗಲ ಅಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಅವರ ಕುಹಕ ಮತ್ತು ವ್ಯಂಗ್ಯದ ಮೊನಚನ್ನು ತುಸು ಕಡಿಮೆ ಮಾಡಿದ್ದಾರೆನ್ನಿಸುವುದಕ್ಕೆ ನಾನೂ ಹಿರಿಯ ನಾಗರಿಕನಾಗಿರುವುದು ಕಾರಣವೋ, ನನ್ನ ಸಾಹಿತ್ಯ ಅವರ ಮಾಪನದಲ್ಲಿ ತುಸು ಉತ್ತಮವಾಗಿರುವುದು ಕಾರಣವೋ ತಿಳಿಯದು. ಆದರೂ ಯಾವುದಾದರೂ ಬರವಣಿಗೆಯನ್ನು ದಿವಾಕರ್ ಕೈಗೆ ನೀಡಬೇಕಾದರೆ ಅವರು ಅದನ್ನು ಒಪ್ಪುತ್ತಾರೋ ಇಲ್ಲವೋ ಎನ್ನುವ ಹಿಂಜರಿಕೆ ಇದ್ದೇ ಇರುತ್ತದೆ.
ಔಪಚಾರಿಕವಾಗಿ ನನಗೆ ಗುರುಗಳಾಗಿರದಿದ್ದರೂ, ನನ್ನ ಓದು–ಬರವಣಿಗೆಯನ್ನು ರೂಪಿಸಿದ ಗುರುಗಳು ಅವರು ಎಂದು ಹೇಳುವುದಕ್ಕೆ ನನಗೆ ನಿಜಕ್ಕೂ ಹೆಮ್ಮೆಯಾಗುತ್ತದೆ. ಈ ಗುರುಗಳಿಗೆ ಸ್ಕೂಟರ್ ಓಡಿಸುವುದನ್ನು ಕಲಿಸಿ ಗುರುದಕ್ಷಿಣೆಯ ಅಲ್ಪಭಾಗವನ್ನು ಸಲ್ಲಿಸಿದೆನೇನೋ. ಈ ಎಲ್ಲ ಒಡನಾಟಗಳಲ್ಲಿ ದಿವಾಕರ್ ಜೊತೆಜೊತೆಗೇ ನಿಂತು ತಮ್ಮ ಮುಕ್ತ ಮಾತು, ಸಾಹಿತ್ಯದ ಅರಿವಿನಿಂದ ನಮ್ಮನ್ನು ಪ್ರೀತಿಯಿಂದ ನೋಡಿದವರು ಜಯಶ್ರೀ. ಇಬ್ಬರೂ ಆರೋಗ್ಯದಿಂದ ನೂರ್ಕಾಲ ನಮ್ಮೊಂದಿಗಿರಲಿ, ನಮ್ಮ ಬದುಕನ್ನು ಸಮೃದ್ಧಗೊಳಿಸಲಿ, ಸಾಹಿತ್ಯ ರಚನೆಯೊಂದಿಗೆ ಸಂವಾದವನ್ನೂ ಮುಂದುವರೆಸಲಿ ಎಂದು ಹಾರೈಸುತ್ತೇನೆ.
(ಎಸ್. ದಿವಾಕರ್ ಫೋಟೋ ಕೃಪೆ: ದಿನೇಶ್ ಮಾನೀರ್)
ಶ್ರೀರಾಂ, ಎಂ. ಎಸ್. ಆಂಧ್ರಪ್ರದೇಶದ ನೆಲ್ಲೂರಿನವರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್, ತಮಿಳು ಭಾಷೆಗಳನ್ನು ಬಲ್ಲವರು. ಗ್ರಾಮೀಣ ಅಭಿವೃದ್ಧಿ ಇವರ ಪರಿಣತಿಯ ವಿಷಯ. ಸಮಕಾಲೀನ ಸಾಹಿತ್ಯ, ರಂಗಭೂಮಿ, ಸಿನಿಮಾ ಇವರ ಆಸಕ್ತಿಯ ವಿಷಯಗಳು. ಮಾಯಾದರ್ಪಣ, ಅವರವರ ಸತ್ಯ, ತೇಲ್ ಮಾಲಿಶ್, ಸಲ್ಮಾನ್ ಖಾನನ ಡಿಫಿಕಲ್ಟೀಸು ಮತ್ತು ನಡೆಯಲಾರದ ದೂರ – ಹಿಡಿಯಲಾರದ ಬಸ್ಸು (ಕಥಾ ಸಂಕಲನಗಳು), ಕನಸು ಕಟ್ಟುವ ಕಾಲ, ಶನಿವಾರ ಸಂತೆ, ಅರ್ಥಾರ್ಥ, ಕಥನ ಕುತೂಹಲ (ಪ್ರಬಂಧ ಸಂಕಲನಗಳು) ಜೊತೆ ಇನ್ನೂ ಹಲವು ಕೃತಿಗಳು ಪ್ರಕಟವಾಗಿವೆ.
ತುಂಬಾ ಚೆನ್ನಾದ ಲೇಖನ…
ಚೆಂದದ ಲೇಖನ ಶ್ರೀ ರಾಮ್ ಅವ್ರೆ .
ನಿಮ್ಮ ಅಕ್ಷರಗಳ ಹಿಂದಿರುವ ಆತ್ಮ, ಪರಮಾತ್ಮ ಯಾವುದು ಎನ್ನುವುದು ತಿಳಿಯಿತು, ಹಲವು ಸಂಗತಿಗಳನ್ನು ಚಂದದಿಂದ ನೇಯ್ದ ರೀತಿ ಖುಷಿ ಕೊಟ್ಟಿತು🙏